Tag: found

  • ನಾಪತ್ತೆಯಾದ 9 ವರ್ಷದ ಬಳಿಕ ಸಿಕ್ಕಿದ ಮಗ- ತಂದೆಯ ಕಣ್ಣಲ್ಲಿ ಆನಂದಭಾಷ್ಪ!

    ನಾಪತ್ತೆಯಾದ 9 ವರ್ಷದ ಬಳಿಕ ಸಿಕ್ಕಿದ ಮಗ- ತಂದೆಯ ಕಣ್ಣಲ್ಲಿ ಆನಂದಭಾಷ್ಪ!

    ನವದೆಹಲಿ: ಬರೋಬ್ಬರಿ 9 ವರ್ಷದ ಬಳಿಕ ಕಾಣೆಯಾಗಿದ್ದ ಮಗ ಪತ್ತೆಯಾಗಿದ್ದು, ಇದೀಗ ಮಗ ನನ್ನ ಕಣ್ಣ ಮುಂದೆ ನಿಂತಿದ್ದಾನೆ ಅನ್ನೋದನ್ನು ನಂಬಲು ಸಾಧ್ಯವಾಗುತ್ತಿಲ್ಲ ಅಂತ ತಂದೆ ಖುಷಿಯಲ್ಲಿ ಕಣ್ಣೀರು ಹಾಕಿದ್ದಾರೆ.

    ದಕ್ಷಿಣ ದೆಹಲಿಯ ಛತ್ತಾರ್ ಪುರ್ ಪ್ರದೇಶದಿಂದ ಹಸನ್ ಆಲಿ ಎಂಬಾತ 2009ರ ಮಾರ್ಚ್ 2ರಿಂದ ಕಾಣೆಯಾಗಿದ್ದನು. ಇದೀಗ ಮಂಗಳವಾರ ಸಂಜೆ ಗುರುಗ್ರಾಮದಲ್ಲಿ ಪತ್ತೆಯಾಗಿದ್ದಾನೆ. ಮತ್ತೆ ಮನೆ ಸೇರುತ್ತಿರುವುದರಿಂದ ಆಲಿ ಕುಟುಂಬಸ್ಥರ ಸಂತಸ ಮುಗಿಲು ಮುಟ್ಟಿದೆ.

    ಘಟನೆ ವಿವರ?:
    ಹಸನ್ ಆಲಿ ತನ್ನ 6 ವರ್ಷದ ಬಾಲಕನಿದ್ದಾಗ ಕಾಣೆಯಾಗಿದ್ದ. ಆ ಬಳಿಕದಿಂದ ಆತ ಗುರುಗ್ರಾಮದಲ್ಲಿರುವ ಶಿಶು ಪಾಲನಾ ಸಂಸ್ಥೆಯಲ್ಲಿ ಬೆಳೆದಿದ್ದ. ಇದೇ ಜುಲೈ 22ರಂದು ಆಲಿ ಸಂಸ್ಥೆಯ 100 ಜನರೊಂದಿಗೆ ಪ್ರಯಾಣ ಬೆಳೆಸುತ್ತಿದ್ದನು. ಹೀಗೆ ಅಮ್ಯೂಸ್ ಮೆಂಟ್ ಪಾರ್ಕ್ ಬಳಿಯಿಂದಾಗಿ ಸೋನಿಪತ್ ಕಡೆ ಪ್ರಯಾಣಿಸುತ್ತಿದ್ದಾಗ ಆಲಿಗೆ ಅಚಾನಕ್ ಆಗಿ ಇದೇ ದಾರಿಯಲ್ಲಿ ತಾನು ಈ ಹಿಂದೆ ತನ್ನ ಪೋಷಕರೊಂದಿಗೆ ಹೋಗಿರುವ ಬಗ್ಗೆ ನೆನಪಾಗುತ್ತದೆ. ಕೂಡಲೇ ಶಿಶುಪಾಲನಾ ಸಂಸ್ಥೆಯ ಸಂಯೋಜಕ ಆಶಿಕ್ ಆಲಿ ಬಳಿ ಈ ವಿಚಾರ ಹೇಳಿಕೊಂಡಿದ್ದಾನೆ.

    ಆಲಿ ಹೇಳಿದ ಕೂಡಲೇ ಆಶಿಕ್ ಆಲಿ ಆತನನ್ನು ಪೋಷಕರ ಬಳಿಗೆ ವಾಪಸ್ ಮಾಡುವ ನಿರ್ಧಾರ ಮಾಡುತ್ತಾರೆ. ಅಲ್ಲದೇ ಅವರು ಮತ್ತೆ ಛತ್ತರ್ ಪುರದತ್ತ ಹಿಂದಿರುಗುತ್ತಾರೆ. ಆಶಿಕ್ ಹಾಗೂ ಹಸನ್ ಆಲಿ ಛತ್ತರ್ ಪುರಕ್ಕೆ ಬಂದು ಸಾಕಷ್ಟು ಅಲೆದಾಡಿದ್ದಾರೆ. ಆದ್ರೆ ಅವರಿಗೆ ಆಲಿ ಪೋಷಕರ ಬಗ್ಗೆ ಮಾಹಿತಿ ಸಿಗಲಿಲ್ಲ. ಹೀಗಾಗಿ ತಿರುಗಾಡಿದ ಜಾಗದಲ್ಲೇ ಮತ್ತೆ ಮತ್ತೆ ಅವರು ಅಲೆದಾಡಿದ್ದಾರೆ.

    ಛತ್ತರ್ ಪುರಕ್ಕೆ ಆಲಿ ಹಾಗೂ ಆಸಿಕ್ ಆಗಾಗ್ಗೆ ಬರುತ್ತಿದ್ದರು. ಆದ್ರೆ ಆಲಿ ಕುಟುಂಬ ದೆಹಲಿಯಿಂದ 60 ಕಿ.ಮೀ ದೂರದಲ್ಲಿರೋ ಧುರಹೇರಾ ಪ್ರದೇಶದಲ್ಲಿ ನೆಲೆಸಿದ್ದಾರೆ ಎಂಬುದು ತಿಳಿದಿರಲಿಲ್ಲ. ಅಲೆದಾಡುತ್ತಿದ್ದ ಸಂದರ್ಭದಲ್ಲಿ ಸಣ್ಣ ಆಟದ ಮೈದಾನದಲ್ಲಿ ಕೆಲ ಮಕ್ಕಳು ಆಟವಾಡುತ್ತಿದ್ದರು. ಅದರಲ್ಲಿ ಮೊಹಮ್ಮದ್ ಶಂಶೀರ್ ಎಂಬಾತ ಆಶೀಕ್ ಹಾಗೂ ಅಲಿಯನ್ನು ಭೇಟಿಯಾಗಿದ್ದನು. ಶಂಶೀರ್, ಹಸನ್ ಆಲಿಯನ್ ನೋಡಿದ ಕೂಡಲೇ ಪತ್ತೆ ಹಚ್ಚಿ ಅಪ್ಪಿಕೊಂಡಿದ್ದಾನೆ. ಅಲ್ಲದೇ ತನ್ನ ಮೊಬೈಲ್ ತೆಗೆದು ಅದರಲ್ಲಿ ಹಸನ್ ಆಲಿಯ ಅಜ್ಜನ ಮೊಬೈಲ್ ನಂಬರ್ ಹುಡುಕಿ ಕರೆ ಮಾಡಿದ್ದಾನೆ. ನಂತರ ಹಸನ್ ಆಲಿಯನ್ನು ಆತನ ಅಜ್ಜನ ಬಳಿ ಶಂಶೀರ್ ಕಳುಹಿಸಿದ್ದಾನೆ. ಈ ಮೂಲಕ ಆಲಿ ಆತನ ಮನೆಗೆ ಹೋಗಲು ಸಾಧ್ಯವಾಯಿತು ಎಂಬುದಾಗಿ ವರದಿಯಾಗಿದೆ.

    ಇತ್ತ ಅಜ್ಜನ ಮನೆಗೆ ತೆರಳಿದ ಹಸನ್ ಆಲಿ ಇಕ್ಕಟ್ಟಿನಲ್ಲಿ ಸಿಲುಕಿಕೊಂಡಿದ್ದಾನೆ. ಯಾಕಂದ್ರೆ ಕುಟುಂಬದಲ್ಲಾದ ಜಗಳದಿಂದಾಗಿ ಹಸನ್ ಆಲಿಯ ಪೋಷಕರ ಮೊಬೈಲ್ ನಂಬರ್ ಅಜ್ಜನ ಬಳಿ ಇರಲಿಲ್ಲ. ಹಸನ್ ಆಲಿ ಹೀಗೆ ಚಿಂತೆಯಲ್ಲಿದ್ದಾಗ ಮರುದಿನ ಸಂಜೆ ಧುರಹೇರಾದಲ್ಲಿ ಸಂಬಂಧಿಕರೊಬ್ಬರು ಸಿಕ್ಕಿದ್ದಾರೆ. ಸಿಕ್ಕ ವ್ಯಕ್ತಿ ಆಲಿ ಪೋಷಕರ ಬಳಿ ಮಗ ಜೀವಂತವಾಗಿ ಇರುವ ಬಗ್ಗೆ ಹೇಳಿದ್ದಾರೆ.

    ಮಗ ಸಿಕ್ಕಿದ ಸಂತೋಷದಿಂದ ತಂದೆ 40 ವರ್ಷದ ಸಲೀಂ ಮೊಹಮ್ಮದ್ ಕೂಡಲೇ ಹಸನ್ ಆಲಿ ಇದ್ದ ಜಾಗಕ್ಕೆ ಹುಡುಕಿಕೊಂಡು ಬಂದಿದ್ದಾರೆ. ಮಗನನ್ನು ನೋಡಿದ ಅವರು “ಇಂದು ನನ್ನ ಮಗ ತನ್ನೆದುರಿಗೆ ಇದ್ದಾನೆ ಎಂಬುದನ್ನು ನನ್ನ ಕಣ್ಣುಗಳಿಂದ ನಂಬಲು ಸಾಧ್ಯವಾಗುತ್ತಿಲ್ಲ ಅಂತ ಹೇಳಿ ಖುಷಿಯಿಂದ ಮಗನನನ್ನು ಬಿಗಿದಪ್ಪಿಕೊಂಡು ಕಣ್ಣೀರು ಸುರಿಸಿದ್ದಾರೆ. ಅಲ್ಲದೇ ನಾಳೆಯೇ ಶಿಶುಪಾಲನಾ ಸಂಸ್ಥೆಗೆ ತೆರಳಿ ಅಲ್ಲಿದ್ದ ಆತನ ದಾಖಲೆಗಳನ್ನು ತೆಗೆದುಕೊಂಡು ಬರುವುದಾಗಿ” ಮಗನಿಗೆ ತಿಳಿಸಿದರು.

    ಆಲಿ ಮದರಸಾದಲ್ಲಿ ಓದುತ್ತಿದ್ದ ಸಂದರ್ಭದಲ್ಲಿ ಛತ್ತಾಪುರ್ ಆಟದ ಮೈದಾನದಿಂದಲೇ ನಾಪತ್ತೆಯಾಗಿದ್ದನು. ಸದ್ಯ ಆಲಿ ಖಾಸಗಿ ಶಾಲೆಯೊಂದರಲ್ಲಿ 8ನೇ ತರಗತಿ ಓದುತ್ತಿದ್ದು, ವಾರ್ಷಿಕ ಪರೀಕ್ಷೆಯ ಬಳಿಕ ಆತನ ಪೋಷಕರೊಂದಿಗೆ ಕಳುಹಿಸಿಕೊಂಡಲಾಗುವುದು ಅಂತ ಶಿಶುಪಾಲನಾ ಸಂಸ್ಥೆ ತಿಳಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಾಪತ್ತೆಯಾಗಿದ್ದ ಕೆ.ಆರ್.ಪೇಟೆಯ ತಹಶೀಲ್ದಾರ್ ಸಂಜೆ ವೇಳೆ ಪತ್ತೆ!

    ನಾಪತ್ತೆಯಾಗಿದ್ದ ಕೆ.ಆರ್.ಪೇಟೆಯ ತಹಶೀಲ್ದಾರ್ ಸಂಜೆ ವೇಳೆ ಪತ್ತೆ!

    ಮಂಡ್ಯ: ಇಂದು ಬೆಳಗ್ಗೆ ನಿಗೂಢವಾಗಿ ನಾಪತ್ತೆಯಾಗಿ ಅಪಹರಣಕ್ಕೊಳಗಾಗಿದ್ದ ತಹಶೀಲ್ದಾರ್ ರವರು ಕೆ.ಆರ್.ಪೇಟೆಯ ತೆಂಡೇಕೆರೆ ಗ್ರಾಮದ ಬಳಿ ಪತ್ತೆಯಾಗಿದ್ದಾರೆ.

    ತಹಶೀಲ್ದಾರ್ ಮಹೇಶ್ ಚಂದ್ರರವರು ಪತ್ತೆಯಾಗಿರುವ ಕುರಿತು ಖುದ್ದು ಮೈಸೂರು ಜಿಲ್ಲಾ ವರಿಷ್ಠಾಧಿಕಾರಿಗಳಾದ ಅಮಿತ್ ಸಿಂಗ್‍ ರವರು ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ. ಮಹೇಶ್ ಚಂದ್ರರವರು ಸದ್ಯ ಕೆ.ಆರ್.ಪೇಟೆಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿದ್ದಾರೆ ಎಂದು ತಿಳಿಸಿದ್ದಾರೆ.

    ಖುದ್ದು ತಹಶೀಲ್ದಾರರಾದ ಮಹೇಶ್ ಚಂದ್ರರವರು ಕೆ.ಆರ್.ಪೇಟೆ ಪೊಲೀಸರ ಮುಂದೆ ಹಾಜರಾಗಿದ್ದಾರೆ. ಅಲ್ಲದೇ ಸರ್ಕಲ್ ಇನ್ಸ್ ಪೆಕ್ಟರ್ ಹೆಚ್.ಬಿ. ವೆಂಕಟೇಶಯ್ಯ ಅವರಿಂದ ತಹಶೀಲ್ದಾರ್ ಮಹೇಶ್ ಚಂದ್ರರ ವಿಚಾರಣೆ ನಡೆಯುತ್ತಿದ್ದು, ವಿಚಾರಣೆ ವೇಳೆ ಇಂದು ಬೆಳಗ್ಗೆ ಎರಡು ಮೋಟಾರ್ ಬೈಕುಗಳಲ್ಲಿ ಬಂದಿದ್ದ ನಾಲ್ವರು ದುಷ್ಕರ್ಮಿಗಳು ನನ್ನನ್ನು ಅಪಹರಣ ಮಾಡಿ, ತೆಂಡೇಕೆರೆ ಗ್ರಾಮದ ಬಳಿ ಬಿಟ್ಟು ಹೋಗಿದ್ದಾರೆ ಎಂದು ಮಹೇಶ್ ಚಂದ್ರರವರು ಹೇಳಿಕೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಕೆ.ಆರ್.ಪೇಟೆಯ ತಹಶೀಲ್ದಾರ್ ಅಪಹರಣ

    ತಹಶೀಲ್ದಾರ್ ಮಹೇಶ್ ಚಂದ್ರರವರ ಯೋಗಕ್ಷೇಮವನ್ನು ವಿಚಾರಿಸಲು ಶಾಸಕ ಡಾ.ನಾರಾಯಣಗೌಡರವರು ಠಾಣೆಗೆ ಆಗಮಿಸಿದ್ದಾರೆ. ಅಲ್ಲದೇ ನಾಪತ್ತೆಯಾಗಿದ್ದ ತಹಶೀಲ್ದಾರ್ ನೋಡಲು ಗ್ರಾಮಾಂತರ ಪೊಲೀಸ್  ಠಾಣೆಯ ಮುಂದೆ ನೂರಾರು ಸಾರ್ವಜನಿಕರು ಜಮಾಯಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಟಿಪ್ಪು ಸುಲ್ತಾನ್ ಕಾಲದ ಒಂದು ಸಾವಿರಕ್ಕೂ ಹೆಚ್ಚು ರಾಕೆಟ್ ಶಿವಮೊಗ್ಗದಲ್ಲಿ ಪತ್ತೆ

    ಟಿಪ್ಪು ಸುಲ್ತಾನ್ ಕಾಲದ ಒಂದು ಸಾವಿರಕ್ಕೂ ಹೆಚ್ಚು ರಾಕೆಟ್ ಶಿವಮೊಗ್ಗದಲ್ಲಿ ಪತ್ತೆ

    ಶಿವಮೊಗ್ಗ: ಜಗತ್ತಿನಲ್ಲಿ ಇದೂವರೆಗೂ ಆಗಿರುವ ಯುದ್ಧಗಳಲ್ಲಿ ರಾಕೆಟ್ ಬಳಸಿದ ಕೀರ್ತಿ ಮೈಸೂರು ಸಂಸ್ಥಾನಕ್ಕೆ ದೊರಕಿದೆ. 18ನೇ ಶತಮಾನದಲ್ಲಿ ಟಿಪ್ಪು ಮೊದಲ ಬಾರಿಗೆ ಯುದ್ಧದಲ್ಲಿ ರಾಕೆಟ್ ಬಳಸಲಾಗಿತ್ತು ಎಂಬುದಕ್ಕೆ ಸಾಕ್ಷಿಯಾಗಿ ಒಂದು ಸಾವಿರಕ್ಕೂ ಹೆಚ್ಚಿನ ರಾಕೆಟ್‍ಗಳು ಪತ್ತೆಯಾಗಿದೆ.

    ಜಿಲ್ಲೆ ಹೊಸನಗರ ತಾಲೂಕು ನಗರದ ಪುರಾತನ ಬಾವಿಯೊಂದರಲ್ಲಿ ರಾಕೆಟ್‍ಗಳು ಪತ್ತೆಯಾಗಿವೆ. ಕಳೆದ ನಾಲ್ಕು ದಿನಗಳಿಂದ ಬಾವಿಯಲ್ಲಿ ಉತ್ಖನನ ನಡೆಸಲಾಗಿತ್ತು. ಸದ್ಯ ಇಲ್ಲಿ ದೊರೆತ ರಾಕೆಟ್‍ಗಳನ್ನು ಶಿವಮೊಗ್ಗದ ಶಿವಪ್ಪನಾಯಕ ಆರಮನೆಯಲ್ಲಿರುವ ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಸ್ಥಳಾಂತರಿಸಲಾಗಿದೆ.

    ಟಿಪ್ಪು ಯುದ್ಧದಲ್ಲಿ ಬಳಸಿದ್ದ ಎರಡು ರಾಕೆಟ್ ಗಳು ಇಂಗ್ಲೆಂಡ್ ವುಲ್ ವಿಚ್ ವಸ್ತು ಸಂಗ್ರಹಾಲಯದಲ್ಲಿ ಹಾಗೂ 160 ರಾಕೆಟ್ ಗಳು ಬೆಂಗಳೂರಿನ ಸರ್ಕಾರಿ ವಸ್ತು ಸಂಗ್ರಹಾಲಯದಲ್ಲಿ ಸಂಗ್ರಹಿಸಲಾಗಿದೆ. ಇವುಗಳನ್ನು ಹೊರತುಪಡಿಸಿ ಸಾವಿರಕ್ಕೂ ಹೆಚ್ಚು ರಾಕೆಟ್‍ಗಳು ದೊರಕಿರುವುದು ಇದೇ ಮೊದಲು ಎಂದು ಪುರಾತತ್ವ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    18ನೇ ಶತಮಾನದಲ್ಲೇ ನಮ್ಮ ನಾಡು ತಂತ್ರಜ್ಞಾನದಲ್ಲಿ ಎಷ್ಟು ಮುಂದಿತ್ತು ಎಂಬುದಕ್ಕೆ ಈ ರಾಕೆಟ್ ಗಳು ಸಾಕ್ಷಿಯಾಗಿವೆ. ಈ ರಾಕೆಟ್ ಗಳನ್ನು ಶಿವಮೊಗ್ಗದ ಪ್ರಾಚ್ಯವಸ್ತು ಸಂಗ್ರಹಾಲಯದಲ್ಲಿ ಸಂಗ್ರಹಿಸಿಡಲಾಗಿದೆ. ಇವುಗಳ ಬಗ್ಗೆ ಮತ್ತಷ್ಟು ಸಂಶೋಧನೆ ನಡೆಯಬೇಕಿದೆ ಎಂದು ಪುರಾತತ್ವ ಇಲಾಖೆ ಸಹಾಯಕ ನಿರ್ದೇಶಕರಾದ ಶೇಜೇಶ್ವರ್ ತಿಳಿಸಿದ್ದಾರೆ.

    ಈ ಹಿಂದೆ 2002 ರಲ್ಲಿಯೇ ತೀರ್ಥಹಳ್ಳಿಯ ನಿವೃತ್ತ ಪ್ರಾಂಶುಪಾಲ ನಾಗರಾಜ್ ರಾವ್ ಅವರ ತೋಟದ ಬಾವಿಯಲ್ಲಿ ಈ ರಾಕೆಟ್ ಗಳು ಪತ್ತೆಯಾಗಿತ್ತು. ಆದರೆ ಈ ವೇಳೆ ಮಾಹಿತಿ ಕೊರತೆಯಿಂದ ಇವುಗಳನ್ನು ಕೇವಲ ಮದ್ದು ಗುಂಡು ಎಂದು ತಿಳಿಯಲಾಗಿತ್ತು. ಆದರೆ 2007 ರಲ್ಲಿ ಇವುಗಳು ರಾಕೆಟ್ ಎಂದು ಸಂಶೋಧನೆಯಿಂದ ತಿಳಿಯಿತು. ಆ ವೇಳೆಯೇ 120 ರಾಕೆಟ್ ಪತ್ತೆಯಾಗಿತ್ತು, ಇವುಗಳ ಮಾಹಿತಿ ಆಧಾರದ ಮೇಲೆ ಉತ್ಖನನ ನಡೆಸಲಾಯಿತು. ಸತತ ನಾಲ್ಕು ದಿನಗಳ ಉತ್ಖನನ ನಡೆಸಿದ ಬಳಿಕ ಸುಮಾರು 1 ಸಾವಿರಕ್ಕೂ ಹೆಚ್ಚು ರಾಕೆಟ್ ಪತ್ತೆಯಾಗಿದೆ ಎಂದು ತಿಳಿಸಿದರು.

  • ದಾವಣಗೆರೆಯ ಬಾರ್ ಬಳಿ ಪತ್ತೆಯಾದ್ವು ರಾಶಿ ರಾಶಿ ಆಧಾರ್ ಕಾರ್ಡ್!

    ದಾವಣಗೆರೆಯ ಬಾರ್ ಬಳಿ ಪತ್ತೆಯಾದ್ವು ರಾಶಿ ರಾಶಿ ಆಧಾರ್ ಕಾರ್ಡ್!

    ದಾವಣಗೆರೆ: ನಗರದ ಪಿಬಿ ರಸ್ತೆಯ ಬಾರ್ ವೊಂದರ ಬಳಿ ರಾಶಿ ರಾಶಿ ಆಧಾರ್ ಕಾರ್ಡ್ ಗಳು ಪತ್ತೆಯಾಗಿದೆ.

    ನಗರದ ಪಿ.ಬಿ ರಸ್ತೆಯ ಬಳಿ ಇರುವ ಭವಾನಿ ಬಾರ್ ಬಳಿ ವ್ಯಕ್ತಿಯೊಬ್ಬ ಮದ್ಯ ಸೇವನೆ ಮಾಡಿ ಮಲಗಿದ್ದಾನೆ. ಇತನ ಬ್ಯಾಗನಿಂದ ರಾಶಿ ರಾಶಿ ಆಧಾರ್ ಕಾರ್ಡ್ ಗಳು ಬಿದ್ದಿದ್ದವು. ಇದರಿಂದ ಅನುಮಾನಗೊಂಡು ಸಾರ್ವಜನಿಕರು ಕುಡುಕ ವ್ಯಕ್ತಿಯನ್ನು ಮಾತನಾಡಿಸಲು ಪ್ರಯತ್ನಸಿದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ.

    ಸಾರ್ವಜನಿಕರು ಪತ್ತೆಯಾಗಿದ್ದ ಆಧಾರ್ ಕಾರ್ಡ್ ನಲ್ಲಿದ್ದ ಫೋನ್ ನಂಬರಿಗೆ ಕರೆ ಮಾಡಿದಾಗ, ಆಧಾರ್ ಕಾರ್ಡ್ ಗಳು ಗ್ರಾಹಕರ ಕೈ ಸೇರಿಲ್ಲವೆಂದು ತಿಳಿದುಬಂದಿದೆ. ಖುದ್ದು ಸಾರ್ವಜನಿಕರೆ ಆಧಾರ್ ಕಾರ್ಡ್ ನಲ್ಲಿರುವ ಮೊಬೈಲ್ ನಂಬರ್‍ಗಳಿಗೆ ಕರೆ ಮಾಡಿ ಆಧಾರ್ ಕಾರ್ಡ್ ಗಳನ್ನು ಸಂಬಂಧಪಟ್ಟವರಿಗೆ ತಲುಪಿಸಿದ್ದಾರೆ.

    ಅಲ್ಲದೇ ನಕಲಿ ಆಧಾರ್ ಕಾರ್ಡ್ ಗಳ ಜಾಲ ಇರುವ ಬಗ್ಗೆ ಸಾರ್ವಜನಿಕರು ಶಂಕೆ ವ್ಯಕ್ತಪಡಿಸಿದ್ದು, ರಾಶಿಗಟ್ಟಲೇ ಆಧಾರ್ ಕಾರ್ಡ್ ಗಳು ಕುಡುಕನ ಬಳಿಗೆ ಎಲ್ಲಿಂದ ಬಂದವು ಎಂಬ ಬಗ್ಗೆ ಅನುಮಾನಗೊಂಡಿದ್ದಾರೆ. ಪತ್ತೆಯಾದ ಆಧಾರ್ ಕಾರ್ಡ್ ಗಳ ಬಗ್ಗೆ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.

    https://www.youtube.com/watch?v=OtOXXrAb-tM

  • ಸುಖಾಂತ್ಯವಾಗಿ ಪೋಷಕರ ಮಡಿಲು ಸೇರಿದ್ರು ಕಾಣೆಯಾಗಿದ್ದ ನಾಲ್ವರು ಬಾಲಕರು!

    ಸುಖಾಂತ್ಯವಾಗಿ ಪೋಷಕರ ಮಡಿಲು ಸೇರಿದ್ರು ಕಾಣೆಯಾಗಿದ್ದ ನಾಲ್ವರು ಬಾಲಕರು!

    ಬೆಂಗಳೂರು: ಶನಿವಾರ ಸಂಜೆ ಆನೇಕಲ್ ತಾಲೂಕಿನ ಮಂಚನಹಳ್ಳಿ ಗ್ರಾಮದಿಂದ ಕಾಣೆಯಾಗಿದ್ದ ಬಾಲಕರು ಇದೀಗ ಸುಖಾಂತ್ಯವಾಗಿ ಪೋಷಕರ ಮಡಿಲು ಸೇರಿದ್ದಾರೆ.

    ಗ್ರಾಮದ ಚಂದನ್(12), ವಿಕಾಸ್(12), ನಂದನ್(12) ಹಾಗೂ ಕಾರ್ತಿಕ್(14) ಶನಿವಾರ ಸಂಜೆ ಆಟವಾಡಿ ಬಳಿಕ ಪೋಷಕರಿಗೆ ತಿಳಿಸದೆ ಹೊಸೂರು ಬೆಟ್ಟಕ್ಕೆ ತೆರಳಿ ಅಲ್ಲಿ ಇದ್ದ ಹಣವನ್ನು ಖರ್ಚು ಮಾಡಿಕೊಂಡಿದ್ದಾರೆ. ನಂತರ ಮನೆಗೆ ಬರಲು ಹಣವಿಲ್ಲದೆ ಹೊಸೂರು ಬಸ್ ನಿಲ್ದಾಣದಲ್ಲಿ ಕುಳಿತಿದ್ದರು. ಇವರನ್ನು ಗಮನಿಸಿದ ಹೊಸೂರು ಪೊಲೀಸರು ವಿಚಾರಿಸಿದಾಗ ನಡೆದ ಘಟನೆಯನ್ನು ವಿವರಿಸಿದ್ದಾರೆ.

    ನಂತರ ಅತ್ತಿಬೆಲೆ ಪೊಲೀಸರಿಗೆ ಮಾಹಿತಿ ನೀಡಿದ ಹೊಸೂರು ಪೊಲೀಸರು ಕಳೆದ ರಾತ್ರಿ ಒಂದು ಗಂಟೆ ಸುಮಾರಿಗೆ ಮಕ್ಕಳನ್ನು ಅತ್ತಿಬೆಲೆ ಪೊಲೀಸರಿಗೆ ನೀಡಿದ್ದಾರೆ. ಬಳಿಕ ಮಕ್ಕಳು ಪೋಷಕರ ಮಡಿಲು ಸೇರಿದ್ದು, ಈ ಮೂಲಕ ಮಕ್ಕಳ ಕಳ್ಳರ ವದಂತಿಗೆ ಬ್ರೇಕ್ ಬಿದ್ದಂತಾಗಿದೆ.

    ಶನಿವಾರ ಸಂಜೆ 5 ಗಂಟೆವರೆಗೂ ಗ್ರಾಮದಲ್ಲೇ ಬಾಲಕರು ಆಟವಾಡುತ್ತಿದ್ದರು. ಬಳಿಕ ನಾಪತ್ತೆಯಾಗಿದ್ದರಿಂದ ಇತ್ತೀಚೆಗೆ ಮಕ್ಕಳ ಕಳ್ಳರು ಬಂದಿದ್ದಾರೆ ಎಂಬ ವದಂತಿ ಹಿನ್ನೆಲೆಯಲ್ಲಿ ಪೋಷಕರಲ್ಲಿ ಆತಂಕ್ಕಕೀಡಾಗಿ ಅತ್ತಿಬೆಲೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

  • ನೀರುಪಾಲಾದ ಬಾಲೆ ಶವವಾಗಿ ಪತ್ತೆ – ಮುಗಿಲುಮುಟ್ಟಿದ ಹೆತ್ತವರ ಆಕ್ರಂದನ

    ನೀರುಪಾಲಾದ ಬಾಲೆ ಶವವಾಗಿ ಪತ್ತೆ – ಮುಗಿಲುಮುಟ್ಟಿದ ಹೆತ್ತವರ ಆಕ್ರಂದನ

    ಉಡುಪಿ: ಮಂಗಳವಾರ ಸಂಜೆ ಮಳೆಯ ಹೊಡೆತಕ್ಕೆ ನೀರುಪಾಲಾದ ಬಾಲಕಿಯ ಮೃತದೇಹ ಇಂದು ಉಡುಪಿ ಜಿಲ್ಲೆ ಕಾಪು ತಾಲೂಕಿನ ಪಡುಬಿದ್ರೆಯಲ್ಲಿ ಪತ್ತೆಯಾಗಿದೆ.

    ನಿಧಿ ಆಚಾರ್ಯ(9) ನೀರುಪಾಲಾಗಿದ್ದ ಬಾಲಕಿಯಾಗಿದ್ದು, ಘಟನಾ ಸ್ಥಳದಿಂದ 100 ಮೀ ದೂರದಲ್ಲಿ ನಿಧಿ ಮೃತದೇಹ ಪತ್ತೆಯಾಗಿದೆ. 4ನೇ ವಿದ್ಯಾರ್ಥಿನಿ ನಿಧಿ ಆಚಾರ್ಯ ನೀರುಪಾಲಾಗಿದ್ದಳು. ಕಳೆದ ರಾತ್ರಿ ಅಗ್ನಿಶಾಮಕ, ಪೊಲೀಸರು, ಸ್ಥಳೀಯರು ಕಾರ್ಯಾಚರಣೆ ಮಾಡಿದ್ದರು. ಆದರೆ ಬಾಲಕಿ ನಿಧಿ ಪತ್ತೆಯಾಗಿರಲಿಲ್ಲ.

    ಇದೀಗ ಇಂದು ಘಟನಾ ಸ್ಥಳದಿಂದ 100 ಮೀ ದೂರದಲ್ಲಿ ನಿಧಿ ಮೃತದೇಹ ಪತ್ತೆಯಾಗಿದೆ. ಎನ್‍ಡಿಆರ್ ಎಫ್ ಅಧಿಕಾರಿಗಳು ಬಂದು ಶೋಧ ಕಾರ್ಯ ಆರಂಭದಲ್ಲೇ ಮೃತದೇಹ ಸಿಕ್ಕಿದೆ. ಎನ್‍ಡಿಆರ್ ಎಫ್ ಜೊತೆ ಸ್ಥಳೀಯ ಮನೋಹರ್ ಎಂಬವರೂ ಬೋಟ್ ನಲ್ಲಿ ತೆರಳಿದ್ದರು.

    ನಿಧಿ ಮೃತದೇಹವನ್ನು ಮನೋಹರ್ ಮೊದಲು ಪತ್ತೆ ಮಾಡಿದರು. ಘಟನೆ ನಡೆದು ಸುಮಾರು 16 ಗಂಟೆಗಳ ಬಳಿಕ ಮೃತದೇಹ ಪತ್ತೆಯಾಗಿದೆ. ಸ್ಕೂಲ್ ಬ್ಯಾಗ್, ಜಾಕೆಟ್ ಕೂಡಾ ಸ್ಥಳದಲ್ಲೇ ಸಿಕ್ಕಿದೆ. ಕಳೆದ ರಾತ್ರಿ ಸೈಕಲ್ ಪತ್ತೆಯಾಗಿತ್ತು. ಈ ಸಂಬಂಧ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಾಲಕಿ ಮೃತದೇಹವನ್ನು ಪಡುಬಿದ್ರೆ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

    ಮಂಗಳವಾರ ಸಂಜೆ ನಿಧಿ ಕೃತಕ ನೆರೆಗೆ ನೀರು ಪಾಲಾಗಿದ್ದು, ಶಾಲೆ ಬಿಟ್ಟು ಮನೆಗೆ ತೆರಳುವ ವೇಳೆ ಈ ಘಟನೆ ಸಂಭವಿಸಿತ್ತು.

  • ನಾಪತ್ತೆಯಾಗಿದ್ದ ಬೆಂಗ್ಳೂರಿನ ಬಾಲಕ ಪತ್ತೆ

    ನಾಪತ್ತೆಯಾಗಿದ್ದ ಬೆಂಗ್ಳೂರಿನ ಬಾಲಕ ಪತ್ತೆ

    ಬೆಂಗಳೂರು: ನಾಪತ್ತೆಯಾಗಿದ್ದ ನಗರದ ಬಾಲಕ ತಮಿಳುನಾಡಿನಲ್ಲಿ ಪತ್ತೆಯಾಗಿದ್ದಾನೆ.

    ಮೇ 4 ರಂದು ಮಹಾಲಕ್ಷಿಪುರ ನಿವಾಸಿ 15 ವರ್ಷದ ಎಸ್. ಕಾರ್ತಿಕ್ ನಾಪತ್ತೆಯಾಗಿದ್ದನು. ನಂತರ ಆತನ ಪೋಷಕರು ಈ ಬಗ್ಗೆ ಪೊಲೀಸರಿಗೆ ಮತ್ತು ಮಾಧ್ಯಮದವರಿಗೆ ಮಾಹಿತಿ ತಿಳಿಸಿ ಹುಡುಕಾಡುತ್ತಿದ್ದರು. ಮೂರು ದಿನಗಳಾದರೂ ಕಾರ್ತಿಕ್ ಪತ್ತೆಯಾಗಿರಲಿಲ್ಲ. ಆದರೆ ಇಂದು ತಮಿಳುನಾಡಿನಲ್ಲಿ ಬಾಲಕ ಪತ್ತೆಯಾಗಿದ್ದಾನೆ.

    ಏನಿದು ಪ್ರಕರಣ?: ಶುಕ್ರವಾರ ಕಾರ್ತಿಕ್ ಮನೆಯಿಂದ ಸುಮಾರು 10.15 ಕ್ಕೆ ಆಟವಾಡಿಕೊಂಡು ಬರುವುದಾಗಿ ಮನೆಯಲ್ಲಿ ತಿಳಿಸಿ, ಹೊರಗೆ ಹೋದವನು ಹಿಂದಿರುಗಿ ಬಂದಿರಲಿಲ್ಲ. ಆದ್ದರಿಂದ ಕಾಣೆಯಾಗಿರುವ ನಮ್ಮ ಮಗನನ್ನ ಪತ್ತೆ ಮಾಡಿಕೊಡಬೇಕೆಂದು ಮನವಿ ಮಾಡಿಕೊಳ್ಳೂತ್ತಿದ್ದೇವೆ ಎಂದು ಪೋಷಕರು ದೂರಿನಲ್ಲಿ ತಿಳಿಸಿದ್ದರು.

    ಈ ಕುರಿತು ಬಾಲಕ ಅಪ್ರಾಪ್ತನಾಗಿರುವುದರಿಂದ ಐಪಿಸಿ 363 ಅಡಿಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು. ನಂತರ ಬಾಲಕನ ಬಗ್ಗೆ ಏನಾದರೂ ಮಾಹಿತಿ ತಿಳಿದರೆ ಮಹಾಲಕ್ಷಿಪುರ ಪೊಲೀಸ್ ಠಾಣೆಗೆ ಅಥವಾ ನಮಗೆ ಮಾಹಿತಿ ನೀಡಬೇಕೆಂದು ಪೋಷಕರು ಜನರಲ್ಲಿ ಮನವಿ ಮಾಡಿಕೊಂಡಿದ್ದರು.

  • ಟ್ರಂಪ್ ಗೆ ಬೆರಳು ತೋರಿಸಿ ಕೆಲ್ಸ ಕಳ್ಕೊಂಡಿದ್ದ ಮಹಿಳೆಗೆ ದೇಣಿಗೆ ನೀಡಲು ಮುಗಿಬಿದ್ದ ಜನ

    ಟ್ರಂಪ್ ಗೆ ಬೆರಳು ತೋರಿಸಿ ಕೆಲ್ಸ ಕಳ್ಕೊಂಡಿದ್ದ ಮಹಿಳೆಗೆ ದೇಣಿಗೆ ನೀಡಲು ಮುಗಿಬಿದ್ದ ಜನ

    ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‍ಗೆ ಮಧ್ಯದ ಬೆರಳು ತೋರಿಸಿ ಕೆಲಸ ಕಳೆದುಕೊಂಡಿದ್ದ ಮಹಿಳೆಗೆ ಸಹಾಯ ಮಾಡಲು ಆನ್ ಲೈನ್ ಮೂಲಕ ಆರಂಭಗೊಂಡಿರುವ ಧನ ಸಂಗ್ರಹ ಕಾರ್ಯಕ್ಕೆ ಭಾರೀ ಸ್ಪಂದನೆ ದೊರೆತಿದೆ.

    Thank You Juli Briskman ಹೆಸರಿನಲ್ಲಿ ಆನ್ ಲೈನಲ್ಲಿ ನವೆಂಬರ್ 6ರಂದು ಹಣ ಸಂಗ್ರಹಣೆ ಆರಂಭವಾಗಿದೆ. 1 ಲಕ್ಷ ಡಾಲರ್(ಅಂದಾಜು 65 ಲಕ್ಷ ರೂ.) ಸಂಗ್ರಹದ ಗುರಿಯನ್ನು ಹೊಂದಿದ್ದು, ಈಗಾಗಲೇ 99 ಸಾವಿರ ಡಾಲರ್( ಅಂದಾಜು 64 ಲಕ್ಷ ರೂ.) ಸಂಗ್ರಹವಾಗಿದೆ.

    ಜೂಲಿ ಬ್ರಿಸ್ಕ್ ಮ್ಯಾನ್ ಅವರು ನಮಗೆಲ್ಲ ಪ್ರೇರಣೆ ಆಗಿದ್ದಾರೆ. ಹೀಗಾಗಿ ಕೆಲಸ ಕಳೆದುಕೊಂಡಿರುವ ಅವರಿಗೆ ದೇಣಿಗೆ ನೀಡಲು ಈ ಹಣ ಸಂಗ್ರಹಣೆ ಮಾಡುತ್ತಿದ್ದು, ಸಂಗ್ರಹವಾದ ಎಲ್ಲ ಹಣ ಅವರಿಗೆ ನೇರವಾಗಿ ತಲುಪುತ್ತದೆ ಎಂದು ವೆಬ್‍ಸೈಟ್ ನಲ್ಲಿ ಬರೆಯಲಾಗಿದೆ.

     

    ಕೆಲ್ಸ ಹೋಗಿದ್ದು ಯಾಕೆ?
    50 ವರ್ಷದ ಜೂಲಿ ಬ್ರಿಸ್ಕ್ ಮ್ಯಾನ್ ಎಂಬವರು ಅಕ್ಟೋಬರ್ 28 ರಂದು ಸೈಕಲ್ ತುಳಿಯುತ್ತಾ ಹೋಗುತ್ತಿದ್ದರು. ಈ ಸಮಯದಲ್ಲಿ ಟ್ರಂಪ್ ತಮ್ಮ ಬೆಂಗಾವಲು ವಾಹನದ ಜೊತೆ ಗಾಲ್ಫ್ ಆಡಲು ಹೋಗುತ್ತಿದ್ದರು. ಟ್ರಂಪ್ ಹೋಗುವುದನ್ನು ನೋಡಿದ ಬ್ರಿಸ್ಕ್ ಮ್ಯಾನ್ ಮಧ್ಯದ ಬೆರಳನ್ನು ಎತ್ತಿ ಬೆಂಗಾವಲು ವಾಹನ ಪಡೆಗೆ ತೋರಿಸಿದ್ದರು.

    ಈ ವೇಳೆ ಬೆಂಗಾವಲು ಪಡೆಯ ವಾಹನದಲ್ಲಿದ್ದ ಫೋಟೋ ಗ್ರಾಫರ್ ಒಬ್ಬರು ಬ್ರಿಸ್ಕ್ ಮ್ಯಾನ್ ಅವರ ಫೋಟೋವನ್ನು ಕ್ಲಿಕ್ಕಿಸಿದ್ದರು. ನಂತರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಪ್ರಕಟವಾಗಿ ವೈರಲ್ ಆಗಿತ್ತು. ಈ ಫೋಟೋದಿಂದಾಗಿ ಜೂಲಿ ಬ್ರಿಸ್ಕ್ ಮ್ಯಾನ್ ಉದ್ಯೋಗಕ್ಕೆ ಕುತ್ತು ಬಂದಿತ್ತು, ಕೆಲಸ ಮಾಡುತ್ತಿದ್ದ ಸಂಸ್ಥೆ ಆಕೆಯನ್ನು ವಜಾಗೊಳಿಸಿತ್ತು. ವರ್ಜೀನಿಯಾ ಮೂಲದ ಅಕಿಮಾ ಕಂಪೆನಿಯಲ್ಲಿ ಮಾರ್ಕೆಟಿಂಗ್, ಕಮ್ಯುನಿಕೇಷನ್ ಸ್ಪೆಷಲಿಸ್ಟ್ ಆಗಿ ಬ್ರಿಸ್ಕ್ ಮ್ಯಾನ್ 6 ತಿಂಗಳಿನಿಂದ ಕೆಲಸ ಮಾಡುತ್ತಿದ್ದರು. ಅಧ್ಯಕ್ಷರಿಗೆ ಮಧ್ಯದ ಬೆರಳು ತೋರಿಸಿದ್ದಕ್ಕೆ ಕಂಪೆನಿ, ಸಾಮಾಜಿಕ ಮಾಧ್ಯಮದ ನೀತಿಯನ್ನು ಉಲ್ಲಂಘಿಸಿದ ಪರಿಣಾಮ ನಮ್ಮ ನಮಗೆ ಕೆಟ್ಟ ಹೆಸರು ಬಂದಿದೆ ಎಂದು ಕಾರಣ ನೀಡಿ ಕೆಲಸದಿಂದ ತೆಗೆದುಹಾಕಿತ್ತು.

    ಕೆಲಸದಿಂದ ವಜಾಗೊಳಿಸಿದ ಹಿನ್ನೆಲೆಯಲ್ಲಿ ಮಾಧ್ಯಮಗಳ ಜೊತೆ ಪ್ರತಿಕ್ರಿಯಿಸಿದ್ದ ಅವರು, ಈ ಘಟನೆಯಿಂದ ನನಗೆ ಯಾವುದೇ ಬೇಸರವಿಲ್ಲ. ಟ್ರಂಪ್ ಕಾರಿನಲ್ಲಿ ಬರುತ್ತಿದ್ದಂತೆ ನನ್ನ ರಕ್ತ ಕುದಿಯಲು ಆರಂಭವಾಯಿತು. ಟ್ರಂಪ್ ವಿರುದ್ಧ ಈ ರೀತಿ ಪ್ರತಿಭಟಿಸಿದ್ದಕ್ಕೆ ನನಗೆ ಸಂತೋಷವಿದೆ. ನನ್ನ ಈ ಪ್ರತಿಭಟನೆಗೆ ಭಾರೀ ಸಂಖ್ಯೆಯಲ್ಲಿ ಜನರು ಬೆಂಬಲಿಸಿದ್ದು ನನಗೆ ಸಂತೋಷ ನೀಡಿದೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ ತಮ್ಮ ಫೋಟೋವನ್ನು ಫೇಸ್‍ಬುಕ್ ಮತ್ತು ಟ್ಟಿಟ್ಟರ್ ಪ್ರೊಫೈಲ್ ಫೋಟೋವನ್ನಾಗಿ ಬ್ರಿಸ್ಕ್ ಮ್ಯಾನ್ ಬದಲಾಯಿಸಿದ್ದರು.

    ಎರಡು ಮಕ್ಕಳ ತಾಯಿಯಾದ ಬ್ರಿಸ್ಕ್ ಮ್ಯಾನ್ ಸದ್ಯಕ್ಕೆ ಹೊಸ ಉದ್ಯೋಗ ಹುಡುಕುವ ಕೆಲಸದಲ್ಲಿ ನಿರತರಾಗಿದ್ದಾರೆ. ಫೋಟೋ ವೈರಲ್ ಆಗಿದ್ದೆ ತಡ ಸಾಮಾಜಿಕ ಜಾಲತಾಣದಲ್ಲಿ ಬ್ರಿಸ್ಕ್ ಮ್ಯಾನ್ ಸಾಹಸಕ್ಕೆ ಭಾರೀ ಪ್ರಶಂಸೆ ವ್ಯಕ್ತವಾಗಿತ್ತು. ಮುಂದಿನ ಚುನಾವಣೆಗೆ ಸ್ಪರ್ಧಿಸಬೇಕೆಂದು ಜನ ಕಮೆಂಟ್ ಮಾಡಿದ್ದರು.