Tag: found

  • ಬೆಂಗಳೂರಿಂದ ನಾಪತ್ತೆಯಾಗಿದ್ದ ನಾಲ್ವರು ಮಕ್ಕಳು ಮಂಗಳೂರಿನಲ್ಲಿ ಪತ್ತೆ!

    ಬೆಂಗಳೂರಿಂದ ನಾಪತ್ತೆಯಾಗಿದ್ದ ನಾಲ್ವರು ಮಕ್ಕಳು ಮಂಗಳೂರಿನಲ್ಲಿ ಪತ್ತೆ!

    ಮಂಗಳೂರು: ಸಿಲಿಕಾನ್ ಸಿಟಿಯ 7 ಮಂದಿ ನಾಪತ್ತೆ ಪ್ರಕರಣ ಸಂಬಂದ ಈಗಾಗಲೇ ಮೂವರು ನಿನ್ನೆಯೇ ಬೆಂಗಳೂರಿನಲ್ಲಿ ಪತ್ತೆಯಾಗಿದ್ದು, ಇದೀಗ ಇಂದು ಉಳಿದ ನಾಲ್ವರು ಮಂಗಳೂರಿನಲ್ಲಿ ಪತ್ತೆಯಾಗಿದ್ದಾರೆ. ಈ ಮೂಲಕ ಮಕ್ಕಳ ನಾಪತ್ತೆ ಪ್ರಕರಣ ಸುಖಾಂತ್ಯ ಕಂಡಿದೆ.

    21 ವರ್ಷದ ಯುವತಿ ಸೇರಿದಂತೆ ನಾಲ್ವರು ಇಂದು ಮಂಗಳೂರಿನ ಅತ್ತಾವರದಲ್ಲಿ ಪತ್ತೆಯಾಗಿದ್ದಾರೆ. ಸದ್ಯ ಎಲ್ಲರೂ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿದ್ದಾರೆ. ಚಿಂತನ್, ಭೂಮಿ, ಅಮೃತವರ್ಷಿಣಿ ಹಾಗೂ ರಾಯನ್ ಇಂದು ಪತ್ತೆಯಾಗಿರುವ ಮಕ್ಕಳು. ಇವರು ಬೆಂಗಳೂರಿನ ಸೋಲದೇವನಹಳ್ಳಿಯಲ್ಲಿ ಒಂದೇ ಅಪಾರ್ಟ್ ಮೆಂಟ್  ನಿವಾಸಿಗಳು. ಕಳೆದ ಎರಡು ದಿನಗಳಿಂದ ನಾಪತ್ತೆಯಾಗಿದ್ದರು. ಇದನ್ನೂ ಓದಿ: ಚಿಂದಿ ಆಯುವ ವ್ಯಕ್ತಿ ಮಾಹಿತಿ – ಬಾಗಲಗುಂಟೆಯಿಂದ ನಾಪತ್ತೆಯಾಗಿದ್ದ ಮೂವರು ಮಕ್ಕಳು ಪತ್ತೆ

    ಈ ನಾಲ್ವರು ರೈಲಿನ ಮೂಲಕ ಮಂಗಳೂರಿಗೆ ತಲುಪಿದ್ದಾರೆ. ರೈಲು ನಿಲ್ದಾಣ ಸುತ್ತಮುತ್ತ ತಿರುಗಾಟುತ್ತಿದ್ದ ವರನ್ನು ನೋಡಿ ಅನುಮಾಗೊಂಡ ಆಟೋ ಚಾಲಕ, ವಿಶ್ವಾಸಕ್ಕೆ ತಗೆದುಕೊಂಡಿದ್ದಾರೆ. ನಂತರ ಆಟೋದಲ್ಲಿ ಪಾಂಡೇಶ್ವರ ಪೊಲೀಸ್ ಠಾಣೆಗೆ ತಲುಪಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

    ಸದ್ಯ ಯುವತಿ ಹಾಗೂ ಮಕ್ಕಳು ಎಲ್ಲರೂ ಸುರಕ್ಷಿತವಾಗಿದ್ದು, ಡಿಸಿಪಿ ಹರಿರಾಮ ಶಂಕರ್ ನೇತೃತ್ವದಲ್ಲಿ ವಿಚಾರಣೆ ನಡೆಯುತ್ತಿದೆ.

  • ಸಿದ್ದರಾಮಯ್ಯ ದೇಶನಿಷ್ಠೆಯ ಬಗ್ಗೆ ನಮಗೆ ಸಂದೇಹವಿದೆ: ಪೇಜಾವರ ಶ್ರೀ

    ಸಿದ್ದರಾಮಯ್ಯ ದೇಶನಿಷ್ಠೆಯ ಬಗ್ಗೆ ನಮಗೆ ಸಂದೇಹವಿದೆ: ಪೇಜಾವರ ಶ್ರೀ

    – ಹೆಚ್‍ಡಿಕೆ ವಿರುದ್ಧವೂ ಸ್ವಾಮೀಜಿ ಕಿಡಿ

    ಉಡುಪಿ: ರಾಮಮಂದಿರಕ್ಕೆ ನಾನು ದೇಣಿಗೆ ನೀಡುವುದಿಲ್ಲ. ಮಂದಿರ ನಿರ್ಮಾಣವಾಗುವ ಜಮೀನು ವಿವಾದಿತ ಸ್ಥಳ ಎಂದು ಹೇಳುವ ಮೂಲಕ ರಾಜ್ಯವ್ಯಾಪಿ ಚರ್ಚೆಗೆ ಕಾರಣವಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ನಿಮ್ಮ ದೇಶನಿಷ್ಠೆಯ ಬಗ್ಗ ಸಂದೇಹವಿದೆ ಎನ್ನುವ ಮೂಲಕ ಪೇಜಾವರ ಸ್ವಾಮೀಜಿ ಖಾರವಾದ ಪ್ರತಿಕ್ರಿಯೆ ನೀಡಿದ್ದಾರೆ.

    ಉಡುಪಿಯಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿರುವ ಅವರು, ನಾವು ಯಾರಿಗೂ ಯಾವತ್ತೂ ದೇಣಿಗೆಗೆ ಒತ್ತಾಯ ಮಾಡಿಲ್ಲ. ವಿಶ್ವದಾದ್ಯಂತ ದೇಣಿಗೆ ಕೊಡುವವರು ಸಂತೋಷದಿಂದ ಕೊಡುತ್ತಿದ್ದಾರೆ. ವಿವಾದಿತ ಎಂದು ಹೇಳುತ್ತೀರಿ, ನೀವು ಸರ್ವೋಚ್ಚ ನ್ಯಾಯಾಲಯ ನೀಡಿದ ತೀರ್ಪನ್ನು ಮಾನ್ಯ ಮಾಡುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

    ಇದೇ ವೇಳೆ ಮಾಜಿ ಮುಖ್ಯಮಂತ್ರಿ ಕುಮಾಸ್ವಾಮಿ ಆರೋಪದ ಕುರಿತು ಮಾತನಾಡಿದ ಪೇಜಾವರ ಶ್ರೀ, ನಿಧಿ ಸಂಗ್ರಹ ಕುರಿತು ಮಾಡಿರುವ ಆರೋಪಕ್ಕೆ ಕುಮಾರಸ್ವಾಮಿ ಅವರು ಒಂದು ಸಣ್ಣ ದಾಖಲೆಯನ್ನು ಕೊಟ್ರು ಆರೋಪಕ್ಕೆ ಬೆಲೆ ಬರುತ್ತದೆ. ನೀವು ಯಾರೋ ದಾರಿಯಲ್ಲಿ ಅಡ್ಡಾಡುವ ಸಾಮಾನ್ಯ ವ್ಯಕ್ತಿಯಲ್ಲ. ನೀವು ಈ ರಾಜ್ಯದ ಪ್ರತಿಷ್ಠಿತ ವ್ಯಕ್ತಿ. ಒಂದು ರಾಜಕೀಯ ಪಕ್ಷದ ಮುಖಂಡ. ನೀವು ಮಾತನಾಡುವ ಮೊದಲು ಅದಕ್ಕೆ ಸೂಕ್ತ ಸಾಕ್ಷಾಧಾರಗಳನ್ನು ಕೊಡಬೇಕು. ಒಂದು ಕಾಲದಲ್ಲಿ ಇಡೀ ರಾಜ್ಯವನ್ನು ಸರ್ಕಾರವನ್ನು ಮುನ್ನಡೆಸಿದವರು, ನೀವು ಆರೋಪ ಮಾಡುವ ಸಂದರ್ಭದಲ್ಲಿ ಯೋಚನೆಯನ್ನು ಮಾಡಬೇಕಾಗುತ್ತದೆ ಎಂದರು.

    ತೀರ್ಥಕ್ಷೇತ್ರ ಟ್ರಸ್ಟ್ ಈ ತರದ ಗುರುತು ಮಾಡುವ ಯಾವುದೇ ಸೂಚನೆಗಳನ್ನು ನಮ್ಮ ಕಾರ್ಯಕರ್ತರಿಗೆ ನೀಡಿಲ್ಲ. ನಿರೀಕ್ಷೆ ಮೀರಿ ಭಕ್ತರು ರಾಮಮಂದಿರಕ್ಕೆ ದೇಣಿಗೆಯನ್ನು ಕೊಡುತ್ತಿದ್ದಾರೆ. ಇಷ್ಟೆಲ್ಲ ಜನ ಮುಂದೆ ಬಂದು ದೇಣಿಗೆ ನೀಡುತ್ತಿರುವಾಗ, ಒತ್ತಾಯಪೂರ್ವಕವಾಗಿ ದೇಣಿಗೆ ಸಂಗ್ರಹಿಸುವ ಪ್ರಶ್ನೆಯ ಬರುವುದಿಲ್ಲ. ಈ ಹೇಳಿಕೆಯಿಂದ ದೇಶದ ಜನಕ್ಕೆ ಕುಮಾರಸ್ವಾಮಿ ಅವರ ವ್ಯಕ್ತಿತ್ವದ ಮೇಲೆ ಸಂಶಯ ಬರುತ್ತದೆ. ಹೊರತು ನಮ್ಮ ಸಂಸ್ಥೆಯ ಮೇಲೆ ಸಂಶಯ ಬರಲಿಕ್ಕಿಲ್ಲ. ಕುಮಾರಸ್ವಾಮಿಯವರ ಒಳಗೆ ಏನಿದೆ ಅದು ಹೊರಗೆ ಬಂದಿದೆ. ಒಳ್ಳೆಯ ಕೆಲಸ ಆಗುವಾಗ ಸಾವಿರಾರು ವಿಘ್ನಗಳು ಎದುರಾಗುತ್ತದೆ. ರಾಮ ಮಂದಿರಕ್ಕೆ ಶಿಲಾನ್ಯಾಸ ಮಾಡಿದ ನಂತರ ಈವರೆಗೆ ಯಾವುದೇ ವಿಘ್ನಗಳು ಬಂದಿಲ್ಲ, ಇದು ಮೊದಲ ಅಡ್ಡಿ. ಆರೋಪಗಳು ಬರುವುದು ಸಹಜ, ಅದಕ್ಕೆ ಸೂಕ್ತವಾದ ಸಾಕ್ಷ್ಯಾಧಾರಗಳನ್ನು ಕೊಡಬೇಕು. ನಾವು ಇದನ್ನೆಲ್ಲ ಧೈರ್ಯವಾಗಿ ಎದುರಿಸಿಕೊಂಡು ಮುಂದೆ ಹೋಗುತ್ತೇವೆ ಎಂದು ಅಭಿಪ್ರಾಯಪಟ್ಟರು.

    ಅಯೋಧ್ಯ ಶ್ರೀ ರಾಮ ಜನ್ಮಭೂಮಿ ಹಿಂದೂಗಳಿಗೆ ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ರಾಮ ಮಂದಿರಕ್ಕೆ ಶಿಲಾನ್ಯಾಸ ನಡೆದು ಉತ್ಕನನದ ಕೆಲಸ ನಡೆಯುತ್ತಿದೆ. ಈ ನಡುವೆ ಮಾಜಿ ಸಿಎಂಗಳಾದ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಚರ್ಚಾಸ್ಪದ ಹೇಳಿಕೆ ನೀಡಿದ್ದಾರೆ.

     

  • ರಾಮಮಂದಿರ ನಿಧಿ ಸಂಗ್ರಹ ವಿಚಾರ ಕುಮಾರಸ್ವಾಮಿ ಕ್ಷಮೆಯಾಚನೆಗೆ ಭಜರಂಗದಳ ಒತ್ತಾಯ

    ರಾಮಮಂದಿರ ನಿಧಿ ಸಂಗ್ರಹ ವಿಚಾರ ಕುಮಾರಸ್ವಾಮಿ ಕ್ಷಮೆಯಾಚನೆಗೆ ಭಜರಂಗದಳ ಒತ್ತಾಯ

    ಬೆಂಗಳೂರು: ರಾಮಂದಿರಕ್ಕೆ ನಿಧಿ ಸಂಗ್ರದ ಕುರಿತಾಗಿ ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಬೇಜವಬ್ದಾರಿ ಹೇಳಿಕೆ ನೀಡಿರುವ ಬೆನ್ನಲ್ಲೇ ಬಜರಂಗದಳದ ರಾಷ್ಟ್ರೀಯ ಸಹಸಂಯೋಜಕ ಸೂರ್ಯನಾರಾಯಣ ಬಜರಂಗದಳ ಆಕ್ರೋಶ ಹೊರಹಾಕಿ ಕ್ಷಮೆ ಯಾಚಿಸುವಂತೆ ಒತ್ತಾಯಿಸಿದ್ದಾರೆ.

    ವಿಶ್ವ ಹಿಂದೂ ಪರಿಷದ್ ನ ಸ್ವಯಂ ಸೇವಕರು ಎಲ್ಲಾ ವರ್ಗದ ಜನರನ್ನು ಭೇಟಿಯಾಗಿ ರಾಮಮಂದಿರಕ್ಕೆ ನಿಧಿ ಸಂಗ್ರಹ ಮಾಡುತ್ತಿದ್ದಾರೆ. ಸಮಾಜವು ಅತ್ಯಂತ ಶ್ರದ್ಧೆಯಿಂದ, ಭಕ್ತಿಯಿಂದ, ಉತ್ಸಾಹದಿಂದ ಶ್ರೀರಾಮ ಮಂದಿರಕ್ಕೆ ನಿಧಿ ಸಮರ್ಪಣೆ ಮಾಡುತ್ತಿದ್ದಾರೆ. ನಮ್ಮ ಸ್ವಯಂ ಸೇವಕರು ಯಾರಿಂದಲೂ ಬಲವಂತವಾಗಿ ನಿಧಿ ಪಡೆದಿಲ್ಲ. ದೇಶಾದ್ಯಂತ ಎಲ್ಲರೂ ತಾವಾಗಿಯೇ ಮುಂದೆ ಬಂದು ನಿಧಿ ಸಮರ್ಪಣೆ ಮಾಡುತ್ತಿದ್ದಾರೆ. ಆದರೆ ಕುಮಾರಸ್ವಾಮಿ ಈ ಅಭಿಯಾನದ ಕುರಿತು ಈ ರೀತಿ ಹೇಳಿಕೆ ನೀಡಿರುವುದು ಖಂಡನೀಯ ಎಂದರು.

    ಶ್ರೀರಾಮ ಭಾರತದ ಅಸ್ಮಿತೆ, ಶ್ರೀರಾಮ ಭಾರತದ ಆದರ್ಶ ರಾಷ್ಟ್ರ ಪುರುಷ, ಎಲ್ಲರೂ ಶ್ರೀರಾಮನ ಆದರ್ಶಗಳನ್ನು ಪಾಲಿಸಬೇಕು. ಮಾಜಿ ಮುಖ್ಯಮಂತ್ರಿಗಳು ಹೇಳಿಕೆ ಕೊಡುವ ಮುನ್ನ ಅಭಿಯಾನದ ಬಗ್ಗೆ ತಿಳಿದುಕೊಳ್ಳಬೇಕಿತ್ತು. ಅವರ ಬಳಿ ಯಾವ ಪುರಾವೆಗಳು ಇಲ್ಲದೆ ರಾಷ್ಟ್ರೀಯ ಸ್ವಯಂ ಸೇವಕ(ಆರ್‍ಎಸ್‍ಎಸ್) ಬಗ್ಗೆ ಹಗುರವಾಗಿ ಮಾತನಾಡಿರುವುದನ್ನು ವಿಶ್ವ ಹಿಂದೂ ಪರಿಷದ್ ಗಂಭೀರವಾಗಿ ಪರಿಗಣಿಸಿದ್ದು, ಒಬ್ಬ ಮಾಜಿ ಮುಖ್ಯಮಂತ್ರಿಗಳಿಂದ ಈ ರೀತಿಯ ಬೇಜವಾಬ್ದಾರಿ ಹೇಳಿಕೆಗಳನ್ನು ನಿರೀಕ್ಷಿಸಿರಲಿಲ್ಲ. ಮುಂದೆ ಎಚ್ಚರಿಕೆಯಿಂದ ಹೇಳಿಕೆ ನೀಡಲಿ ಎಂದು ಎಚ್ಚರಿಕೆ ನೀಡಿದರು.

    ಕರ್ನಾಟಕ ದಕ್ಷಿಣ ಪ್ರಾಂತದ ಸಂಘಟನಾ ಕಾರ್ಯದರ್ಶಿ ಬಸವರಾಜ್ ಮಾತನಾಡಿ, ಮಾಜಿ ಮುಖ್ಯಮಂತ್ರಿಗಳು ಆರ್‍ಎಸ್‍ಎಸ್ ಸಂಘಟನೆಯನ್ನು ನಾಝಿ ಸಂಘಟನೆಗೆ ಹೋಳಿಕೆ ಮಾಡಿರುವುದು ಖಂಡನೀಯ. ನಾಝಿ ಸಂಘ ಕೊಲೆ ಹಿಂಸೆಗಳಿಂದ ಏಕಚಕ್ರಾಧಿಪತ್ಯ ಸ್ಥಾಪಿಸಿರುವ ಇತಿಹಾಸವಿದೆ. ಆದರೆ ದೇಶ ಭಕ್ತ ಸಂಘಟನೆಯಾದ ಆರ್‍ಎಸ್‍ಎಸ್ ಸಂಘಟನಾ ಇತಿಹಾಸದಲ್ಲಿ ಲಕ್ಷಾಂತರ ದೇಶ ಭಕ್ತರನ್ನು ದೇಶಕ್ಕಾಗಿ ಕೊಟ್ಟಿದೆ. ಅದನ್ನು ಸರಿಯಾಗಿ ತಿಳಿದುಕೊಂಡು ಕುಮಾರಸ್ವಾಮಿ ಹೇಳಿಕೆ ಕೊಡಬೇಕು ಬೇಕಾಬಿಟ್ಟಿ ಸಂಘಟನೆಯ ಕುರಿತು ಮಾತನಾಡಿರುವುದು ಖಂಡನೀಯ ಎಂದರು.

  • ಕುಮಾರಪರ್ವತದಲ್ಲಿ ನಾಪತ್ತೆ – ತೀರ್ಥದ ಪೈಪ್‍ನಿಂದಾಗಿ ಕುಕ್ಕೆ ಸೇರಿದ ಬೆಂಗ್ಳೂರು ಯುವಕ

    ಕುಮಾರಪರ್ವತದಲ್ಲಿ ನಾಪತ್ತೆ – ತೀರ್ಥದ ಪೈಪ್‍ನಿಂದಾಗಿ ಕುಕ್ಕೆ ಸೇರಿದ ಬೆಂಗ್ಳೂರು ಯುವಕ

    ಮಡಿಕೇರಿ: ಟ್ರೆಕ್ಕಿಂಗ್‍ಗೆ ಬಂದ 12 ಯುವಕರ ತಂಡದಲ್ಲಿ ನಾಪತ್ತೆಯಾಗಿದ್ದ ಬೆಂಗಳೂರಿನ ಗಾಯತ್ರಿ ನಗರದ ಯುವಕ ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ.

    ಕೊಡಗು ಜಿಲ್ಲೆಯ ಪುಷ್ಪಗಿರಿ ಬೆಟ್ಟದಲ್ಲಿ ದಾರಿ ತಪ್ಪಿರುವ 25 ವರ್ಷದ ಸಂತೋಷ್ ಇಂದು ಮಧ್ಯಾಹ್ನ 12.30ರ ಸುಮಾರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಆದಿ ಸುಬ್ರಹ್ಮಣ್ಯದ ಬಳಿಯಿಂದಾಗಿ ಕುಕ್ಕೆ ಸುಬ್ರಹ್ಮಣ್ಯ ತಲುಪಿದ್ದಾರೆ.

    ಕುಕ್ಕೆ ಸೇರಿದ್ದು ಹೇಗೆ?
    ಕುಮಾರಪರ್ವತ ಬಳಿಯ ಗುಡ್ಡದಿಂದ ದೇವಾಲಯಕ್ಕೆ ತೀರ್ಥದ ಉದ್ದೇಶದಿಂದ ಪೈಪ್ ಲೈನ್ ಅಳವಡಿಸಲಾಗಿತ್ತು. ಈ ಪೈಪ್ ಅನ್ನು ದಾರಿ ಸೂಚಕವಾಗಿ ಬಳಸಿ ಮತ್ತೆ ಸುಬ್ರಹ್ಮಣ್ಯ ತಲುಪಿದೆ ಎಂದು ಸಂತೋಷ್ ತಿಳಿಸಿದ್ದಾರೆ. ಸಂತೋಷ್ ವಾಪಸ್ ಬಂದ ಕೂಡಲೇ ಸ್ಥಳೀಯರು ಅವರಿಗೆ ನೀರು, ಹಣ್ಣು ನೀಡಿ ಉಪಚರಿಸಿದ್ದಾರೆ.

    ನಾಪತ್ತೆಯಾಗಿದ್ದು ಹೇಗೆ?
    ಬೆಂಗಳೂರಿನಿಂದ 12 ಮಂದಿ ಯುವಕರ ತಂಡವೊಂದು ಭಾನುವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದಿದೆ. ಹೀಗೆ ಬಂದ ತಂಡ ಸುಬ್ರಮಣ್ಯದ ಗಿರಿಗದ್ದೆಯಿಂದ ಕುಮಾರಪರ್ವತದ ಮೂಲಕ ಸೋಮವಾರಪೇಟೆ ತಾಲೂಕಿನ ಪುಷ್ಪಗಿರಿ ಬೆಟ್ಟಕ್ಕೆ ತೆರಳಿತ್ತು. ಬೆಳಗ್ಗೆ 11 ಗಂಟೆ ಸುಮಾರಿಗೆ ಶೇಷ ಪರ್ವತಕ್ಕೆ ತಲುಪಿದ 12 ಮಂದಿ ಯುವಕರು ಅಲ್ಲಿಂದ ಹಿಂದಿರುಗಿ ಗಿರಿಗದ್ದೆಗೆ ಬಂದಿದ್ದಾರೆ. ಅಲ್ಲಿ ಮಧ್ಯಾಹ್ನದ ಊಟ ಮುಗಿಸಿ ಸುಬ್ರಹ್ಮಣ್ಯ ಕಡೆ ಪ್ರಯಾಣಿಸಿದ್ದಾರೆ. ಈ ವೇಳೆ 12 ಮಂದಿಯ ತಂಡ 6 ಮಂದಿಯಂತೆ 2 ವಿಭಾಗಗಳಾಗಿದೆ. ಇದರಲ್ಲಿ 6 ಜನರ ತಂಡ ಮೊದಲು ಆಗಮಿಸಿತ್ತು. ಸ್ವಲ್ಪ ಸಮಯದ ಬಳಿಕ ಗಿರಿಗದ್ದೆ ಮನೆಯಿಂದ ಉಳಿದ 6 ಜನರ ತಂಡ ಸುಬ್ರಹಣ್ಯಕ್ಕೆ ಬರುತ್ತಿದ್ದ ಸಂದರ್ಭದಲ್ಲಿ ಜೋರಾಗಿ ಮಳೆ ಸುರಿಯಲಾರಂಭಿಸಿದೆ. ಈ ವೇಳೆ ಸಂತೋಷ್ ತನ್ನ ಜಾಕೆಟ್ ತೆಗೆದು ರೈನ್ ಕೋಟ್ ಹಾಕಿಕೊಂಡಿದ್ದಾರೆ. ಅಲ್ಲಿಯವರೆಗೆ ಸ್ನೇಹಿತರ ಜೊತೆಗಿದ್ದ ಸಂತೋಷ್ ಆ ಬಳಿಕದಿಂದ ಕಾಣೆಯಾಗಿದ್ದರು.

    ತಮ್ಮ ತಂಡದಲ್ಲಿ ಸಂತೋಷ್ ಇಲ್ಲದಿರುವುದನ್ನು ಗಮನಿಸಿದ ಇತರ ಸ್ನೇಹಿತರು ಕೂಡಲೇ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇತ್ತ ಈ ಕುರಿತು ಮಾಹಿತಿ ಪಡೆದ ಪುಷ್ಪಗಿರಿ ವನ್ಯಜೀವಿ ವಿಭಾಗದ ಸಿಬ್ಬಂದಿ ಭಾನುವಾರ ಸಂಜೆಯಿಂದ ತೀವ್ರ ಶೋಧಕಾರ್ಯ ನಡೆಸಿದ್ದರು.

  • ನಾಪತ್ತೆಯಾಗಿದ್ದ ಕಾರವಾರ ಡಿವೈಎಸ್‍ಪಿ ಪತ್ತೆ

    ನಾಪತ್ತೆಯಾಗಿದ್ದ ಕಾರವಾರ ಡಿವೈಎಸ್‍ಪಿ ಪತ್ತೆ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕೈಗಾದ ಬಾರೆ ಸಮೀಪ ನಾಪತ್ತೆಯಾಗಿದ್ದ ಕಾರವಾರ ಡಿವೈಎಸ್ಪಿ ಶಂಕರ ಮಾರಿಯಾಳ ಹಾಗೂ ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿ ರವಿಚಂದ್ರ ಪತ್ತೆಯಾಗಿದ್ದಾರೆ.

    ಇವರು ಯಲ್ಲಾಪು ತಾಲೂಕಿನ ಅರಬೈಲು ಅರಣ್ಯ ಭಾಗದಲ್ಲಿ ಪತ್ತೆಯಾಗಿದ್ದಾರೆ. ಕೈಗಾ ಅರಣ್ಯ ಪ್ರದೇಶದಲ್ಲಿ ಪೋನ್ ಕಾಲ್ ಒಂದರ ಪತ್ತೆಗಾಗಿ ಕೂಂಬಿಂಗ್ ಕಾರ್ಯಾಚರಣೆ ನಡೆಸಿದ್ದ ಅಧಿಕಾರಿಗಳ ತಂಡ ಮರಳಿ ಕಾರವಾರಕ್ಕೆ ಬರುವಾಗ ಕಾಡಿನಲ್ಲಿ ಡಿವೈಎಸ್‍ಪಿ ಹಾಗೂ ಗುಪ್ತಚರ ಇಲಾಖೆ ಅಧಿಕಾರಿ ರವಿಯವರು ತಂಡದಿಂದ ಹಿಂದೆ ಉಳಿದಿದ್ದಾರೆ.

    ಈ ವೇಳೆ ದಾರಿಯಲ್ಲಿ ಚಿರತೆ ಕಂಡ ಹಿನ್ನೆಲೆಯಲ್ಲಿ ತಪ್ಪಿಸಿಕೊಂಡು ಹೋಗುವ ಭರದಲ್ಲಿ ಕಾಡಿನಲ್ಲಿ ದಾರಿ ತಪ್ಪಿದ್ದು ರಾತ್ರಿಯಿಡಿ ಕಾಡಿನಲ್ಲಿ ಸುತ್ತಿ ಯಲ್ಲಾಪುರ ಬಳಿಯ ಅರಬೈಲು ಗಟ್ಟದ ಅರಣ್ಯ ತಲುಪಿದ್ದಾರೆ. ನಂತರ ಅಲ್ಲಿ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಮಾಹಿತಿ ನೀಡಿ ನಡೆದ ಘಟನೆ ವಿವರಿಸುವ ಮೂಲಕ ಪ್ರಕರಣ ಸುಖಾಂತ್ಯ ಕಂಡಿದೆ.

  • ಪೋಷಕರ ಜೊತೆ ಇದ್ದು ನಾಪತ್ತೆಯಾಗಿದ್ದ ಮಗು ಈಗ ಪತ್ತೆ

    ಪೋಷಕರ ಜೊತೆ ಇದ್ದು ನಾಪತ್ತೆಯಾಗಿದ್ದ ಮಗು ಈಗ ಪತ್ತೆ

    ಮೈಸೂರು: ಪೋಷಕರ ಜೊತೆಯಲ್ಲೇ ಇದ್ದ ಮಗು ನಾಪತ್ತೆ ಆದ ಪ್ರಕರಣ ಈಗ ಸುಖಾಂತ್ಯಗೊಂಡಿದೆ. ಮೈಸೂರಿನ ಹುಣಸೂರು ಪೊಲೀಸರು ಕಾರ್ಯಾರಣೆ ನಡೆಸಿ ಮಗು ಅಪಹರಿಸಿದವನನ್ನು ಬಂಧಿಸಿದ್ದಾರೆ.

    ಅಡಗೂರು ಮಾರಗೌಡನಹಳ್ಳಿ ಪ್ರವೀಣ್ ಬಂಧಿತ ಆರೋಪಿ. ಎರಡು ದಿನಗಳ ಹಿಂದೆ ಮೈಸೂರು ಜಿಲ್ಲೆ ಹುಣಸೂರು ಬಸ್ ನಿಲ್ದಾಣದಲ್ಲಿ ಆರೋಪಿ ಮಗುವನ್ನು ಅಪಹರಿಸಿದ್ದಾನೆ. ಆರೋಪಿ ಪ್ರವೀಣ್ ಸುರೇಶ್-ನೀಲಕಲಾ ದಂಪತಿಯ ಹೆಣ್ಣು ಮಗುವನ್ನು ಪೋಷಕರಿಗೆ ಗೊತ್ತಾಗದಂತೆ ಕರೆದುಕೊಂಡು ಹೋಗಿದ್ದ.

    ಪ್ರವೀಣ್ ಮಗುವನ್ನು ಅಪಹರಿಸಿ ಬಳಿಕ ಆಕೆಯನ್ನು ತನ್ನ ಮನೆಯಲ್ಲಿ ಇರಿಸಿಕೊಂಡಿದ್ದನು. ಮಗು ನಾಪತ್ತೆ ಬಗ್ಗೆ ಮಾಧ್ಯಮದಲ್ಲಿ ವರದಿ ನೋಡಿ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆಗ ಪೊಲೀಸರು ಗ್ರಾಮಕ್ಕೆ ತೆರಳಿ ಮಗುವನ್ನು ರಕ್ಷಿಸಿದ್ದಾರೆ. ಪೊಲೀಸರು ಆರೋಪಿ ಪ್ರವೀಣ್‍ನನ್ನು ವಶಕ್ಕೆ ಪಡೆದಿದ್ದು, ಮತ್ತೊಬ್ಬ ಆರೋಪಿ ಗುರು ಬಸವ ಪರಾರಿ ಆಗಿದ್ದಾನೆ.

    ಏನಿದು ಪ್ರಕರಣ?
    ಶ್ರೇಯಾ(3) ನಾಪತ್ತೆಯಾದ ಮಗು. ಸುರೇಶ್ ಹಾಗೂ ನೀಲಕಲಾ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಕೊಪ್ಪ ಗ್ರಾಮದ ನಿವಾಸಿಗಳಾಗಿದ್ದು, ಸೋಮವಾರ ಮಧ್ಯಾಹ್ನ ಜಿಲ್ಲೆಯ ಹುಣಸೂರು ಬಸ್ ನಿಲ್ದಾಣದಲ್ಲಿ ಹೆಣ್ಣು ಮಗು ನಾಪತ್ತೆ ಆಗಿತ್ತು. ಕೊಪ್ಪದಿಂದ ಮೈಸೂರಿನ ಹೂಟಗಳ್ಳಿಗೆ ಹೋಗುವ ವೇಳೆ ಈ ಘಟನೆ ನಡೆದಿತ್ತು. ಸುರೇಶ್ ಹಾಗೂ ನೀಲಕಲಾ ಮೂವರು ಮಕ್ಕಳ ಜೊತೆ ಹೋಗುತ್ತಿದ್ದರು. ಹುಣಸೂರು ಬಸ್ ನಿಲ್ದಾಣದಿಂದ ಪೋಷಕರಿಗೆ ಗೊತ್ತಾಗದಂತೆ ಯಾರೋ ಮಗುವನ್ನು ಕರೆದುಕೊಂಡು ಹೋಗಿದ್ದರು ಎಂದು ಶಂಕಿಸಲಾಗಿತ್ತು.

    ಈ ಬಗ್ಗೆ ಹುಣಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಒಂದು ತಿಂಗಳ ಶಿಶುವನ್ನು ಕೊಂದು ಮಂಚದ ಕೆಳಗೆ ಬಚ್ಚಿಟ್ಟಿದ್ದಳು ಅಜ್ಜಿ

    ಒಂದು ತಿಂಗಳ ಶಿಶುವನ್ನು ಕೊಂದು ಮಂಚದ ಕೆಳಗೆ ಬಚ್ಚಿಟ್ಟಿದ್ದಳು ಅಜ್ಜಿ

    -ಮೊಮ್ಮಗನನ್ನು ಕೊಂದಿದ್ದು ಯಾಕೆ? ಬೆಚ್ಚಿ ಬೀಳಿಸುತ್ತೆ ರಾಕ್ಷಸಿ ಅಜ್ಜಿಯ ಉತ್ತರ

    ಬೆಂಗಳೂರು: ನಾಪತ್ತೆಯಾಗಿದ್ದ ಒಂದು ತಿಂಗಳ ಹಸುಗೂಸೊಂದು ಮಂಚದ ಕೆಳಗೆ ಶವವಾಗಿ ಪತ್ತೆಯಾಗಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.

    ಡಿಸೆಂಬರ್ 21ರ ರಾತ್ರಿ ನಗರದ ನೀಲಸಂದ್ರದಲ್ಲಿ ಇಡೀ ಮಾನವ ಕುಲವೇ ತಲೆತಗ್ಗಿಸುವ ಹೀನ ಕೃತ್ಯ ನಡೆದುಹೋಗಿತ್ತು. ಕೇವಲ 29 ದಿನಗಳ ಹಸುಗೂಸನ್ನು ನರ ರೂಪದ ರಾಕ್ಷಸರು ಉಸಿರು ಗಟ್ಟಿಸಿ ಕೊಂದು ಹಾಕಿದ್ದರು. ಅಲ್ಲದೇ ಕೊಲೆ ಮಾಡಿ ಟವಲ್ ನಲ್ಲಿ ಆ ಮುದ್ದು ಮಗುವಿನ ಶವ ಸುತ್ತಿ, ಮಂಚದ ಕೆಳಗೆಬಿಟ್ಟು ಹೋಗಿದ್ದರು. ಸದ್ಯ ಈ ಕೇಸ್‍ಗೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಮಗುವಿನ ಪ್ರಾಣ ತೆಗೆದಿದ್ದು ಬೇರೆ ಯಾರು ಅಲ್ಲ ಆ ಮಗುವಿನ ಅಜ್ಜಿಯೇ ಮೊಮ್ಮಗನ ಕೊಂದು ಹಾಕಿರುವ ವಿಷಯ ಬೆಳಕಿಗೆ ಬಂದಿದೆ.

    ಅಜ್ಜಿಯೇ ತನ್ನ ಸ್ವಂತ ಮೊಮ್ಮಗುವಿನ ಕೊಂದು ಹಾಕಿದ್ದಾಳೆ. ಮಗ ಕಾರ್ತಿಕ್ ಪತ್ನಿಗೆ ಎರಡು ಅವಳಿ ಗಂಡು ಮಕ್ಕಳಾಗಿತ್ತು. ಒಂದು ಮಗುವಿಗೆ ಹುಟ್ಟಿದಾಗಿನಿಂದಲೂ ಅನಾರೋಗ್ಯದ ಸಮಸ್ಯೆ ಎದುರಿಸುತ್ತಿತ್ತು. ಕಾರ್ತಿಕ್ ಕೂಡ ಇತ್ತೀಚೆಗೆ ಕೆಲಸಕ್ಕೆ ಹೋಗದೇ ಮನೆಯಲ್ಲೇ ಇದ್ದನು.

    ಪ್ರತಿ ಬಾರಿ ಮಗುವಿನ ಚಿಕಿತ್ಸೆಗೆ ಹೆಚ್ಚಿನದಾಗಿ ಹಣ ಖರ್ಚಾಗುತ್ತಿದೆ. ಹೇಗಿದ್ದರೂ ಒಂದು ಗಂಡು ಮಗು ಇದೆ. ಇನ್ನೊಂದು ಮಗುವಿನ ಅನಾರೋಗ್ಯದಿಂದ ಆರ್ಥಿಕವಾಗಿಯೂ ಸಮಸ್ಯೆ ಉಂಟಾಗುತ್ತದೆ ಎನ್ನುವ ಕಾರಣಕ್ಕೆ ಹಸುಗೂಸಿನ ಅಜ್ಜಿ ವಿಜಯಲಕ್ಷ್ಮಿಯೇ ಉಸಿರುಗಟ್ಟಿಸಿ ಕೊಲೆ ಗೈದಿದ್ದಾಳೆ ಎನ್ನುವುದು ವಿಚಾರಣೆಯ ವೇಳೆಯಲ್ಲಿ ತಿಳಿದು ಬಂದಿದೆ.

    ಸದ್ಯ ಅಶೋಕ್ ನಗರ ಪೊಲೀಸರು ಆರೋಪಿ ಅಜ್ಜಿಯನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹುಲಿ ಕಾರ್ಯಾಚರಣೆಗೆ ಬಂದು ಕಾಡಿನಲ್ಲಿ ನಾಪತ್ತೆಯಾಗಿದ್ದ ಆನೆ ಕೊನೆಗೂ ಪತ್ತೆ!

    ಹುಲಿ ಕಾರ್ಯಾಚರಣೆಗೆ ಬಂದು ಕಾಡಿನಲ್ಲಿ ನಾಪತ್ತೆಯಾಗಿದ್ದ ಆನೆ ಕೊನೆಗೂ ಪತ್ತೆ!

    ಮೈಸೂರು: ಹುಲಿ ಕಾರ್ಯಾಚರಣೆಗೆ ಬಂದು ಕಾಡಿನಲ್ಲಿ ನಾಪತ್ತೆಯಾಗಿದ್ದ ಆನೆ ಕೊನೆಗೂ ಪತ್ತೆಯಾಗಿದೆ.

    ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆ ತಾಲೂಕು ವ್ಯಾಪ್ತಿಯ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ತಾರಕಾ ಬೀಟ್ ನಿಂದ `ಅಶೋಕ’ ಹೆಸರಿನ ಆನೆ ತಪ್ಪಿಸಿಕೊಂಡಿತ್ತು. ಎಚ್.ಡಿ. ಕೋಟೆಯ ಅಂತರ ಸಂತೆ ಬಳಿ ಹುಲಿ ಹಿಡಿಯುವ ಕಾರ್ಯಾಚರಣೆಗೆ ಬಂದಿದ್ದ ಆನೆ ಸಿಡಿಮದ್ದಿನ ಶಬ್ಧಕ್ಕೆ ಹೆದರಿ ಮಾವುತನನ್ನು ಬೀಳಿಸಿ ಕಾಡಿನ ಒಳಗಡೆ ಓಡಿ ಹೋಗಿತ್ತು. ಇದನ್ನೂ ಓದಿ: ಹುಲಿ ಹಿಡಿಯಲು ಕಾರ್ಯಾಚರಣೆಗೆ ಬಂದಿದ್ದ ಆನೆ ಕಾಡಿನೊಳಗೆ ನಾಪತ್ತೆ

    ಓಡಿ ಹೋಗಿದ್ದರಿಂದ ಅರಣ್ಯ ಇಲಾಖೆ ಸಿಬ್ಬಂದಿ ಹುಲಿ ಹಿಡಿಯುವ ಕಾರ್ಯಾಚರಣೆ ನಿಲ್ಲಿಸಿ ನಾಪತ್ತೆಯಾದ ಆನೆ ಹುಡುಕುವ ಕಾರ್ಯಾಚರಣೆ ಆರಂಭಿಸಿದ್ದರು. ಇದೀಗ ಡಿ. ಬಿ ಕುಪ್ಪೆ ಅರಣ್ಯ ವ್ಯಾಪ್ತಿಯಲ್ಲಿ ಅಶೋಕ ಆನೆ ಪತ್ತೆಯಾಗಿದೆ.

    ಅರಣ್ಯ ಇಲಾಖೆ ಸಿಬ್ಬಂದಿಯ ಸತತ ಕಾರ್ಯಚರಣೆಯಿಂದ ಆನೆ ಸಿಕ್ಕಿದೆ. ಇಲಾಖೆಗೆ ಹುಲಿ ಹುಡುಕುವುದಕ್ಕಿಂತ ಆನೆ ಹುಡುಕುವುದೇ ದೊಡ್ಡ ತಲೆನೋವಾಗಿತ್ತು. ಇದೀಗ ಆನೆ ಸಿಕ್ಕ ನಂತರ ಅರಣ್ಯ ಇಲಾಖೆ ನಿಟ್ಟುಸಿರು ಬಿಟ್ಟಿದೆ. ನಾಗರಹೊಳೆ ವ್ಯಾಪ್ತಿಯ ಬಳ್ಳೆ ಆನೆ ಶಿಬಿರದಲ್ಲಿರುವ ಅಶೋಕ ಆನೆಯನ್ನು ಈಗ ಇರಿಸಲಾಗಿದೆ. ಇಂದು ಅಶೋಕ ಆನೆಯನ್ನು ಮತ್ತಿಗೋಡು ಅರಣ್ಯಕ್ಕೆ ವಾಪಸ್ಸು ಕಳುಹಿಸಲಾಗುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕುಷ್ಟಗಿ ಸುತ್ತಮುತ್ತ ಮತ್ತು ಭರಿಸುವ ಔಷಧಿ, ಸಿರಿಂಜ್ ಪತ್ತೆ- ಸಾರ್ವಜನಿಕರಲ್ಲಿ ಆತಂಕ

    ಕುಷ್ಟಗಿ ಸುತ್ತಮುತ್ತ ಮತ್ತು ಭರಿಸುವ ಔಷಧಿ, ಸಿರಿಂಜ್ ಪತ್ತೆ- ಸಾರ್ವಜನಿಕರಲ್ಲಿ ಆತಂಕ

    ಕೊಪ್ಪಳ: ಜಿಲ್ಲೆಯ ಕುಷ್ಟಗಿ ಹೊರವಲಯದ ಸುತ್ತಮುತ್ತ ಮತ್ತು ಭರಿಸುವ ಔಷಧಿಗಳು ಹಾಗೂ ಸಿರಿಂಜ್ ಗಳು ಪತ್ತೆಯಾಗಿದ್ದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

    ಕುಷ್ಟಗಿಯಿಂದ ಶಾಖಾಪುರ್ ಮತ್ತು ಗಜೇಂದ್ರಗಡಕ್ಕೆ ಹೋಗುವ ರಸ್ತೆಯ ಪಕ್ಕದ ಹೊಲಗಳಲ್ಲಿ ಈ ರೀತಿಯ ಮತ್ತು ಭರಿಸುವ ಕೊಮೊಡಾಲ್ 100, ಟ್ರೋಮೊಫಾರ್ ಎಂಬ ಹೆಸರಿನ ಔಷಧಿಗಳು ಸಿಕ್ಕಿವೆ. ಇದನ್ನು ಉಪಯೋಗಿಸಿದವರು ಇಲ್ಲೇ ಬಿಸಾಡಿ ಹೋಗಿದ್ದಾರೆ.

    ಇಲ್ಲಿ ದೊರೆತಿರುವ ಔಷಧಿಗಳು ಆಪರೇಷನ್ ಸಮಯದಲ್ಲಿ ಮತ್ತು ಕ್ಯಾನ್ಸರ್ ನೋವು ನಿವಾರಕವಾಗಿ ನೀಡಲಾಗುತ್ತೆ. ವೈದ್ಯರು ಪ್ರಿಸ್ಕ್ರಿಪ್ಷನ್ ಇಲ್ಲದೆ ಮೆಡಿಕಲ್ ಶಾಪ್ ಗಳಲ್ಲಿ ಕೊಡುವಂತಿಲ್ಲ. ಆದರೆ ಇವೆಲ್ಲ ಬಿದ್ದಿರುವುದು ನೋಡಿದರೆ ಮೆಡಿಕಲ್ ಗಳಲ್ಲಿ ಇವುಗಳನ್ನು ಯಾರು ಕೇಳಿದ್ರೂ ಕೊಡುವಂತೆ ಕಾಣುತ್ತದೆ.

    ಇವುಗಳು ಉಪಯೋಗಿಸುವುದರಿಂದ ಬಹು ಅಂಗಾಂಗ ವೈಫಲ್ಯ ಹೊಂದಿ ಸಾವನ್ನಪ್ಪುತ್ತಾರೆ ಎನ್ನುವುದು ಆತಂಕಕಾರಿ ವಿಷಯವಾಗಿದೆ. ಈ ವಿಷಯ ಪಾಲಕರಲ್ಲಿ ಭಯದ ವಾತಾವರಣ ಸೃಷ್ಟಿ ಮಾಡಿದೆ. ನಮ್ಮ ಮಕ್ಕಳು ಎಲ್ಲಿ ಗೊತ್ತಿಲ್ಲದೆ ಇದಕ್ಕೆ ಬಲಿಯಾಗ್ತಾರೋ ಎನ್ನುವ ಆಂತಕ ಮನೆ ಮಾಡಿದೆ. ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗಳು ತೀವ್ರ ತನಿಖೆ ನಡೆಸಿ ಯಾವ ಮೆಡಿಕಲ್ ಶಾಪ್ ಗಳಲ್ಲಿ ಇಂತಹ ಔಷಧಿಗಳನ್ನು ಪ್ರಿಸ್ಕ್ರಿಪ್ಷನ್ ಇಲ್ಲದೆ ಕೊಡಲಾಗುತ್ತಿದೆ ಅಂತಹ ಮೆಡಿಕಲ್ ಶಾಪ್ ಗಳ ಪರವಾನಿಗೆ ರದ್ದತಿಗೆ ಮುಂದಾಗಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನೇಣು ಬಿಗಿದ ಸ್ಥಿತಿಯಲ್ಲಿ ಟೆಕ್ಕಿ ಮೃತದೇಹ ಪತ್ತೆ

    ನೇಣು ಬಿಗಿದ ಸ್ಥಿತಿಯಲ್ಲಿ ಟೆಕ್ಕಿ ಮೃತದೇಹ ಪತ್ತೆ

    ಬೆಂಗಳೂರು: ಅನುಮಾನಸ್ಪದವಾಗಿ ಪಿಜಿಯ ರೋಮ್‍ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾಗಿದೆ.

    ತಮಿಳುನಾಡು ಮೂಲದ ಸೇಟು ಕುಮಾರ್ ಮೃತ ಯುವಕ ಎಂದು ಗುರುತಿಸಲಾಗಿದೆ. ಸೇಟು ಕುಮಾರ್ ಬೆಂಗಳೂರು ಹೊರವಲಯ ಎಲೆಕ್ಟ್ರಾನಿಕ್ ಸಿಟಿಯ ಖಾಸಗಿ ಕಂಪನಿಯ ಸಾಫ್ಟ್ ವೇರ್ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದರು.

    ಸೇಟು ಕುಮಾರ್ ಕೆಲವು ವರ್ಷಗಳ ಹಿಂದೆ ಎಲೆಕ್ಟ್ರಾನಿಕ್ ಸಿಟಿ ಬಳಿಯ ನಿಲಾದ್ರಿ ನಗರದ ವಿನಾಯಕ ಪಿಜಿಯಲ್ಲಿ ಮೂರು ಜನ ಸ್ನೇಹಿತರ ಜೊತೆ ವಾಸವಿದ್ದರು. ಆದರೆ ಸೋಮವಾರ ತನ್ನ ರೋಮ್ ನಲ್ಲಿ ಅನುಮಾನಸ್ಪದವಾಗಿ ಸಾವಿಗೀಡಾಗಿದ್ದಾರೆ. ಸದ್ಯ ಘಟನಾ ಸ್ಥಳಕ್ಕೆ ಎಲೆಕ್ಟ್ರಾನಿಕ್ ಸಿಟಿ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತದೇಹವನ್ನು ಮರಣೋತ್ತರ ಶವ ಪರೀಕ್ಷೆಗಾಗಿ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv