Tag: Former Speaker

  • ನವ ಭಾರತ ನಿರ್ಮಾಣಕ್ಕೆ ಕಾಂಗ್ರೆಸ್ ಅಡ್ಡಿ: ಡಿ.ಎಚ್ ಶಂಕರಮೂರ್ತಿ

    ನವ ಭಾರತ ನಿರ್ಮಾಣಕ್ಕೆ ಕಾಂಗ್ರೆಸ್ ಅಡ್ಡಿ: ಡಿ.ಎಚ್ ಶಂಕರಮೂರ್ತಿ

    ಶಿವಮೊಗ್ಗ: ಧರ್ಮಾಧಾರಿತವಾಗಿ ಭಾರತವನ್ನು ಒಡೆದವರು ಕಾಂಗ್ರೆಸ್ಸಿಗರು. ಭಾರತ ಕಟ್ಟುವುದಕ್ಕೆ ಕಾಂಗ್ರೆಸ್ ಬಿಡುತ್ತಿಲ್ಲ. ಒಂದೇ ತಾಯಿಯ ಮಕ್ಕಳಾದ ಹಿಂದೂ, ಮುಸ್ಲಿಮರನ್ನು ಬೇರೆ ಮಾಡಿ ಭಾರತಕ್ಕೆ ಕಾಂಗ್ರೆಸ್ ದ್ರೋಹ ಮಾಡುತ್ತಿದೆ. ಪೌರತ್ವ ಕಾಯ್ದೆ ಯಾವ ಹಕ್ಕನ್ನೂ ಕಿತ್ತುಕೊಳ್ಳುವುದಿಲ್ಲ ಎಂದು ವಿಧಾನ ಪರಿಷತ್‍ನ ಮಾಜಿ ಸಭಾಪತಿ ಡಿ.ಎಚ್ ಶಂಕರಮೂರ್ತಿ ಕಾಂಗ್ರೆಸ್ ವಿರುದ್ಧ ಆರೋಪಿಸಿದರು.

    ತೀರ್ಥಹಳ್ಳಿಯ ತಾಲೂಕು ಕಚೇರಿ ಎದುರು ನಡೆದ ಪೌರತ್ವ ಕಾಯ್ದೆ ಬೆಂಬಲಿಸಿ ತಾಲೂಕು ಬಿಜೆಪಿ ಘಟಕ ಹಮ್ಮಿಕೊಂಡಿದ್ದ ಬೃಹತ್ ಜನ ಜಾಗೃತಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಸ್ವಾತಂತ್ರ್ಯ ನಂತರ ಭಾರತ, ಪಾಕಿಸ್ತಾನವನ್ನು ಒಡೆದ ಕಾಂಗ್ರೆಸ್ ಇಂದು ರಾಜಕೀಯ ದುರುದ್ದೇಶದಿಂದ ದೇಶದಲ್ಲಿ ದ್ವೇಷದ ವಿಷ ಬೀಜ ಬಿತ್ತುತ್ತಿದೆ. ಅಖಂಡ ಭಾರತವನ್ನು ಧರ್ಮಾಧಾರಿತವಾಗಿ ಒಡೆಯುವುದು ಬೇಡ ಎಂದು ಮಹಾತ್ಮ ಗಾಂಧಿಜೀ, ಅಂಬೇಡ್ಕರ್ ಹಲವು ಬಾರಿ ಮನವಿ ಮಾಡಿದರೂ ಕಾಂಗ್ರೆಸ್ ಕೇಳಲಿಲ್ಲ. ಕಾಂಗ್ರೆಸ್ ಸುಳ್ಳನ್ನು ಬಂಡವಾಳ ಮಾಡಿಕೊಂಡಿದೆ. ದೇಶ ಕಟ್ಟುವ ಬದಲು ಛಿದ್ರ ಮಾಡುವ ಹುನ್ನಾರ ನಡೆಸುತ್ತಿದೆ. ಇನ್ನೊಮ್ಮೆ ದೇಶವನ್ನು ಒಡೆಯಲು ಧರ್ಮದ ಹೆಸರಿನಲ್ಲಿ ಜನರನ್ನು ಬೀದಿಗೆ ತಂದು ನಿಲ್ಲಿಸುತ್ತಿದೆ ಎಂದರು.

    ಪೌರತ್ವ ಕಾಯ್ದೆ ಮುಸ್ಲಿಮರು, ದಲಿತರು, ಹಿಂದುಳಿದ ವರ್ಗದವರಿಗೆ ತೊಂದರೆ ಉಂಟು ಮಾಡುತ್ತದೆ ಎಂದು ಕಾಂಗ್ರೆಸ್ ಹಾಗೂ ಇತರೆ ಪಕ್ಷಗಳು ಅಪ ಪ್ರಚಾರದಲ್ಲಿ ತೊಡಗಿವೆ. ಕೇಂದ್ರ ಸರ್ಕಾರ ಪೌರತ್ವ ಕಾಯ್ದೆ ಜಾರಿಗೆ ತಂದಿದ್ದು, ಎಷ್ಟೇ ಪ್ರತಿರೋಧ ಎದುರಾದರೂ ವಾಪಸ್ ಪಡೆಯುವುದಿಲ್ಲ. ಬಿಜೆಪಿ ಮನೆ ಮನೆಗೆ ತೆರಳಿ ಪೌರತ್ವ ಕಾಯ್ದೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅಸ್ಸಾಂನಲ್ಲಿ ಎನ್‍ಆರ್ ಸಿ ನಿಯಮ ಜಾರಿಗೆ ತಂದರು. 1950ರಲ್ಲಿ ಪೌರತ್ವ ಪರ ಕಾಂಗ್ರೆಸ್ ನಿರ್ಣಯ ಕೈಗೊಂಡಿದೆ. ಈಗಿನ ಪ್ರಸ್ತುತ ಕಾಂಗ್ರೆಸ್ ಪೌರತ್ವ ವಿರೋಧಿಸಿ ನಿರ್ಣಯ ತೆಗೆದುಕೊಂಡಿದ್ದು ಇಂತಹ ದ್ವಂದ್ವ ನಿಲುವು ಏಕೆ ಎಂದು ಶಂಕರಮೂರ್ತಿ ಪ್ರಶ್ನಿಸಿದರು.

  • ಜೆ.ಕೆ.ವೆಂಕಟಶಿವಾರೆಡ್ಡಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ರಮೇಶ್ ಕುಮಾರ್

    ಜೆ.ಕೆ.ವೆಂಕಟಶಿವಾರೆಡ್ಡಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ರಮೇಶ್ ಕುಮಾರ್

    ಕೋಲಾರ: ರಾಯಲಸೀಮ ಶ್ರೀನಿವಾಸಪುರದಲ್ಲಿ ಮತ್ತೆ ಸಂಪ್ರದಾಯ ಬದ್ಧ ವೈರಿಗಳ ಕಾಳಗ ಶುರುವಾಗಿದೆ. ಜೆಡಿಎಸ್‍ನ ಮಾಜಿ ಶಾಸಕ ಜೆ.ಕೆ.ವೆಂಕಟಶಿವಾರೆಡ್ಡಿ ವಿರುದ್ಧ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮಾನನಷ್ಟ ಮೊಕದ್ದಮೆ ದೂರು ದಾಖಲಿಸಿದ್ದಾರೆ.

    ವಿಧಾನಸೌಧದಲ್ಲಿ ಒಂದು ತಿಂಗಳ ಹಿಂದಯೆ ಸುದ್ದಿಗೋಷ್ಠಿ ನಡೆಸಿದ್ದ ಜೆ.ಕೆ.ವೆಂಕಟಶಿವಾರೆಡ್ಡಿ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿದ್ದ ರಮೇಶ್ ಕುಮಾರ್ ಅಕ್ರಮ ಎಸಗಿದ್ದಾರೆ ಎಂದು ಆರೋಪಿಸಿದ್ದರು. ಹೀಗಾಗಿ ರಮೇಶ್ ಕುಮಾರ್ ಅವರು ಶ್ರೀನಿವಾಸಪುರದ ಜೆಎಂಎಫ್‍ಸಿ ಕೋರ್ಟಿನಲ್ಲಿ ಮಾನನಷ್ಟ ಮೊಕದ್ದಮೆ ದೂರು ದಾಖಲಿಸಿದ್ದಾರೆ.

    ವಕೀಲರಾದ ಶಂಕರಪ್ಪ ಹಾಗೂ ಸುಂದರ್ ಅವರೊಂದಿಗೆ ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಶ್ರೀನಿವಾಸಪುರದ ಜೆಎಂಎಫ್‍ಸಿ ಕೋರ್ಟ್ ಗೆ  ಆಗಮಿಸಿದ ರಮೇಶ್ ಕುಮಾರ್ ಅವರು ಮಾನನಷ್ಟ ಮೊಕದ್ದಮೆ ದಾಖಲು ಮಾಡಿದ್ದಾರೆ. ವಿಶೇಷವೆಂದರೆ ಜೆಡಿಎಸ್‍ನ ಮಾಜಿ ಶಾಸಕ ವೆಂಕಟಶಿವಾರೆಡ್ಡಿ ಹಾಗೂ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕಳೆದ 40 ವರ್ಷಗಳಿಂದ ರಾಜಕೀಯವಾಗಿ ಸಾಂಪ್ರದಾಯಿಕ ಎದುರಾಳಿಗಲಾಗಿದ್ದಾರೆ.

  • ಕುರಿಗಳನ್ನು ಖರೀದಿಸಿದ ರಮೇಶ್ ಕುಮಾರ್

    ಕುರಿಗಳನ್ನು ಖರೀದಿಸಿದ ರಮೇಶ್ ಕುಮಾರ್

    ಚಿಕ್ಕಬಳ್ಳಾಪುರ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಇತ್ತೀಚೆಗಷ್ಟೇ ಆಂಧ್ರದ ಮದನಪಲ್ಲಿಯ ಅಂಗಲಾ ಹಾಗೂ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ರೋಜೇನಹಳ್ಳಿ ಸಂತೆಗಳಿಗೆ ಭೇಟಿ ನೀಡಿ ಕುರಿಗಳನ್ನು ಖರೀದಿಸಿದ್ದರು. ಇದರ ಬೆನ್ನೆಲ್ಲೇ ಅವರು ಇಂದು ಬೆಳಗ್ಗೆ ಚಿಕ್ಕಬಳ್ಳಾಪುರದಲ್ಲಿ ಕುರಿಗಳನ್ನು ಖರೀದಿಸಿದ್ದಾರೆ.

    ರಮೇಶ್ ಕುಮಾರ್ ಅವರು ಇಂದು ಬೆಳ್ಳಂಬೆಳಗ್ಗೆ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಚೇಳೂರು ಸಂತೆಯಲ್ಲಿ ಆಗಮಿಸಿದ್ದರು. ಪ್ರತಿ ಶುಕ್ರವಾರ ಕರ್ನಾಟಕ- ಆಂಧ್ರ ಗಡಿಭಾಗದಲ್ಲಿ ಅಂಚಿನಲ್ಲಿರುವ ಚೇಳೂರಿನಲ್ಲಿ ಕುರಿ-ಮೇಕೆಗಳ ಮಾರಾಟದ ಸಂತೆ ಬಲು ಜೋರಾಗಿ ಸಾಗುತ್ತದೆ. ಇದರಿಂದ ನೆರೆಯ ಆಂಧ್ರದ ರೈತರು ಕುರಿ ಮೇಕೆಗಳ ಜೊತೆಗೆ ಸಂತೆಗೆ ಆಗಮಿಸುತ್ತಾರೆ.

    ಇಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸಹ ಈ ಸಂತೆಗೆ ಭೇಟಿ ನೀಡಿದ್ದು, ಅವರ ಕಡೆಯವರು ಕುರಿಗಳ ಖರೀದಿಯಲ್ಲಿ ತೊಡಗಿದರು. ರಮೇಶ್ ಕುಮಾರ್ ಕಂಡ ರೈತರಿಗೆ ಒಂದು ಕಡೆ ಅಚ್ಚರಿ ಆದರೆ ಮತ್ತೊಂದು ಕಡೆ ಸಂತಸ. ಮಾಜಿ ಸ್ಪೀಕರ್, ಶಾಸಕ, ಮಂತ್ರಿಗಳಾಗಿದ್ದವರು ಕುರಿ ಖರೀದಿಸಲು ಬಂದವರಲ್ಲ ಎಂದು ಅಚ್ಚರಿಪಟ್ಟರು.

    ರಮೇಶ್ ಕುಮಾರ್ ಎಷ್ಟು ಸರಳ ವ್ಯಕ್ತಿ ಎಂದು ರೈತರು ಅವರ ಜೊತೆ ಮಾತಿನಲ್ಲಿ ನಿರತರಾಗಿದರು. ರಾಜಕಾರಣಕ್ಕಿಂತ ಕುರಿ ಸಾಕುವುದು ಲೇಸು ಅಂತಲೋ ಏನೋ ಇತ್ತೀಚೆಗೆ ರಮೇಶ್ ಕುಮಾರ್ ಕುರಿ ಸಂತೆಗಳಲ್ಲಿ ಆಗಮಿಸಿ ಕುರಿ ಕೊಂಡುಕೊಳ್ಳುವ ಕಾಯಕ ಮಾಡುತ್ತಿದ್ದಾರೆ ಎಂದು ಕೆಲ ರೈತರು ಮಾತನಾಡುತ್ತಿದ್ದರು.

  • ಭಾಗಶ: ತೃಪ್ತಿ, ಅನರ್ಹತೆ ಎನ್ನುವುದೇ ಒಂದು ಕಳಂಕ – ರಮೇಶ್ ಕುಮಾರ್

    ಭಾಗಶ: ತೃಪ್ತಿ, ಅನರ್ಹತೆ ಎನ್ನುವುದೇ ಒಂದು ಕಳಂಕ – ರಮೇಶ್ ಕುಮಾರ್

    ಬೆಂಗಳೂರು: ಸುಪ್ರೀಂ ಕೋರ್ಟ್ ತೀರ್ಪಿನಿಂದ ನನಗೆ ಭಾಗಶಃ ಸಂತೋಷವಾಗಿದೆ. ನನ್ನ ಅಭಿಪ್ರಾಯವನ್ನು ಮಾನ್ಯ ಮಾಡಿದ್ದು ತೃಪ್ತಿ ತಂದಿದೆ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ.

    ಅನರ್ಹ ಶಾಸಕರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದು, ಈ ಸಂಬಂಧ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಪಬ್ಲಿಕ್ ಟಿವಿ ಜೊತೆ ಮಾತನಾಡಿದರು.

    ತೀರ್ಪಿನಿಂದ ಭಾಗಶಃ ಸಂತೋಷವಾಗಿದೆ. ಮೇಲ್ಮನವಿ ಸಲ್ಲಿಸಬೇಕೇ ಬೇಡವೇ ಎನ್ನುವ ನಿರ್ಧಾರವನ್ನು ನಾನು ತೆಗೆದುಕೊಳ್ಳಲು ಸಾಧ್ಯವಿಲ್ಲ. ಪಕ್ಷದ ತೀರ್ಮಾನದ ಮೇಲೆ ನಿಂತಿದೆ ಎಂದು ತಿಳಿಸಿದರು.

    ಅನರ್ಹತೆ ಎನ್ನುವುದೇ ಒಂದು ಕಳಂಕ. ನಾನು ನಿಯಮದ ಪ್ರಕಾರವೇ ವಿಧಾನಸಭೆ ಮುಗಿಯುವರೆಗೆ ಅನರ್ಹತೆ ಮಾಡಿ ಮಾಡಿದ್ದೇನೆ ಎಂದು ಹೇಳಿದರು.

    ಸುಪ್ರೀಂ ಕೋರ್ಟಿನಿಂದ ಇಂದು ತೀರ್ಪು ಹೊರಬಿದ್ದಿದ್ದು, 17 ಮಂದಿ ಅನರ್ಹ ಶಾಸಕರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಸ್ಪೀಕರ್ ರಮೇಶ್ ಕುಮಾರ್ ಅನರ್ಹ ಮಾಡಿದ್ದನ್ನು ಪ್ರಶ್ನಿಸಿ ಸಲ್ಲಿಸದ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾ. ಎನ್.ವಿ. ರಮಣ, ನ್ಯಾ. ಸಂಜೀವ್ ಖನ್ನಾ, ನ್ಯಾ. ಕೃಷ್ಣ ಮುರಾರಿ ನೇತೃತ್ವದ ಪೀಠ ಇಂದು ಮಹತ್ವದ ಆದೇಶ ಪ್ರಕಟಿಸಿದ್ದು, ಅನರ್ಹರು ಉಪಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂದು ತೀರ್ಪಿತ್ತಿದೆ.

    17 ಮಂದಿ ಶಾಸಕರನ್ನು ಅನರ್ಹ ಮಾಡಿದ ಸ್ಪೀಕರ್ ನಿರ್ಧಾರ ಸರಿ. ಆದರೆ ವಿಧಾನಸಭೆ ಮುಗಿಯುವವರೆಗೆ ಅನರ್ಹ ಮಾಡಿದ ಸ್ಪೀಕರ್ ನಿರ್ಧಾರ ಸರಿಯಲ್ಲ. ಹೀಗಾಗಿ ಅನರ್ಹ ಶಾಸಕರು ಚುನಾವಣೆಗೆ ಸ್ಪರ್ಧಿಸಬಹುದು ಎಂದು ತೀರ್ಪು ನೀಡಿದೆ.

    ಅಥಣಿ, ಕಾಗವಾಡ, ಗೋಕಾಕ್, ಯಲ್ಲಾಪುರ, ಹಿರೇಕೆರೂರು, ರಾಣಿಬೆನ್ನೂರು, ವಿಜಯನಗರ, ಚಿಕ್ಕಬಳ್ಳಾಪುರ, ಕೆಆರ್ ಪುರ, ಯಶವಂತಪುರ, ಮಹಾಲಕ್ಷ್ಮೀ ಲೇಔಟ್, ಶಿವಾಜಿನಗರ, ಹೊಸಕೋಟೆ, ಕೆಆರ್ ಪೇಟೆ, ಹುಣಸೂರು ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ತೆರವಾದ ಕ್ಷೇತ್ರಗಳಿಗೆ 6 ತಿಂಗಳ ಒಳಗಡೆ ಚುನಾವಣೆ ನಡೆಸಬೇಕಾಗುತ್ತದೆ.

  • ವಿಧಾನಸಭೆಯಿಂದ ಪೀಠೋಪಕರಣ ಮನೆಗೆ ಹೊತ್ತೊಯ್ದ ಮಾಜಿ ಸ್ಪೀಕರ್ ನೇಣಿಗೆ ಶರಣು

    ವಿಧಾನಸಭೆಯಿಂದ ಪೀಠೋಪಕರಣ ಮನೆಗೆ ಹೊತ್ತೊಯ್ದ ಮಾಜಿ ಸ್ಪೀಕರ್ ನೇಣಿಗೆ ಶರಣು

    ಹೈದರಾಬಾದ್: ವಿಧಾನಸಭೆಯಿಂದ ಪೀಠೋಪಕರಣ ಮನೆಗೆ ಹೊತ್ತೊಕೊಂಡು ಹೋಗಿದ್ದಾರೆ ಎಂಬ ಆರೋಪ ಹೊತ್ತಿದ್ದ ಆಂಧ್ರ ಪ್ರದೇಶದ ಮಾಜಿ ವಿಧಾನಸಭೆ ಸ್ಪೀಕರ್ ಕೊಡೆಲ ಶಿವಪ್ರಸಾದ್ ರಾವ್ ಅವರು ತಮ್ಮ ಹೈದರಾಬಾದ್‍ನ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    72 ವರ್ಷದ ಶಿವಪ್ರಸಾದ್ ಬೆಳಗ್ಗೆ ತಿಂಡಿ ತಿಂದು ತಮ್ಮ ರೂಮ್‍ಗೆ ಹೋಗಿದ್ದಾರೆ. ನಂತರ ಅವರ ರೂಮ್ ಬಿಟ್ಟು ಬಾರದೆ ಇರುವುದನ್ನು ಗಮನಿಸಿದ ಅವರ ಮನೆಯವರು ರೂಮ್ ಒಳಗೆ ಹೋಗಿ ನೋಡಿದಾಗ ಅವರು ಅವರ ರೂಮ್‍ನ ಸೀಲಿಂಗ್ ಫ್ಯಾನ್‍ಗೆ ನೇಣು ಹಾಕಿಕೊಂಡಿದ್ದಾರೆ. ತಕ್ಷಣ ಅವರನ್ನು ಹೈದರಾಬಾದ್‍ನ ಬಸವತಾರಕಂ ಆಸ್ಪತ್ರೆಗೆ ಸೇರಿಸಿದರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.

    ವೈ.ಎಸ್‍.ಆರ್‍.ಪಿ ಪಕ್ಷದವರು ಶಿವಪ್ರಸಾದ್ ಅವರ ಕುಟುಂಬದ ಸದಸ್ಯರ ವಿರುದ್ಧ ದೂರು ನೀಡಿದ್ದ ಕಾರಣ ಅವರು ತುಂಬ ಅವಮಾನಕ್ಕೆ ಒಳಗಾಗಿದ್ದರು. ಅವರ ಕುಟುಂಬ ಸದಸ್ಯರಿಗೆ ಕೋರ್ಟ್ ಜಾಮೀನು ನೀಡಿದ್ದರೂ ಶಿವಪ್ರಸಾದ್ ಆ ವಿಚಾರದಲ್ಲಿ ತುಂಬಾ ಖಿನ್ನತೆಗೆ ಒಳಗಾಗಿದ್ದರು. ಈ ವಿಚಾರಕ್ಕೆ ಮನನೊಂದ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ. ಇದನ್ನು ಓದಿ: ವಿಧಾನಸಭೆಯಲ್ಲಿನ ಕಂಪ್ಯೂಟರ್, ಎಸಿ, ಪೀಠೋಪಕರಣಗಳನ್ನು ಮನೆಗೆ ಹೊತ್ತೊಯ್ದ ಮಾಜಿ ಸ್ಪೀಕರ್

    1983 ರಲ್ಲಿ ಎನ್.ಟಿ ರಾಮರಾವ್ ಅವರು ತೆಲುಗು ದೇಶಂ ಪಕ್ಷ (ಟಿಡಿಪಿ) ಪಕ್ಷ ಸ್ಥಾಪನೆ ಮಾಡಿದಾಗ ಶಿವಪ್ರಸಾದ್ ರಾಜಕೀಯಕ್ಕೆ ಕಾಲಿಟ್ಟಿದ್ದರು ಮತ್ತು ಪಕ್ಷದಲ್ಲಿ ಹಿರಿಯ ನಾಯಕ ಎಂದು ಗುರುತಿಸಿಕೊಂಡಿದ್ದರು. ಆರು ಬಾರಿಯ ಶಾಸಕನಾಗಿ ಸೇವೆಸಲ್ಲಿಸಿರುವ ಅವರು ಐದು ಬಾರಿ ನರಸಾರೋಪೇಟೆ ಕ್ಷೇತ್ರದಿಂದ ಮತ್ತು 2014 ರಲ್ಲಿ ಒಂದು ಬಾರಿ ಸಟ್ಟೇನಪಳ್ಳಿಯಿಂದ ಗೆದ್ದಿದ್ದಾರೆ. ಅನೇಕ ಬಾರಿ ಸಚಿವರಾಗಿಯೂ ಸೇವೆ ಸಲ್ಲಿಸಿದ ಶಿವಪ್ರಸಾದ್ 2014 ರ ಅವಧಿಯಲ್ಲಿ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ್ದಾರೆ.

    ಸ್ಪೀಕರ್ ಆಗಿ ತಮ್ಮ ಅವದಿ ಮುಗಿದ ನಂತರ ಅವರು ವಿಧಾನಸಭೆಯಲ್ಲಿರುವ ಕಂಪ್ಯೂಟರ್ ಮತ್ತು ಎಸಿ ಹಾಗೂ ಪೀಠೋಪಕರಣಗಳನ್ನು ಮನೆಗೆ ಹೊತ್ತೊಯ್ದಿದ್ದಾರೆ ಎಂಬ ಆರೋಪವು ಶಿವಪ್ರಸಾದ್ ರಾವ್ ವಿರುದ್ಧ ಕೇಳಿ ಬಂದಿತ್ತು.

  • ವಿಧಾನಸಭೆಯಲ್ಲಿನ ಕಂಪ್ಯೂಟರ್, ಎಸಿ, ಪೀಠೋಪಕರಣಗಳನ್ನು ಮನೆಗೆ ಹೊತ್ತೊಯ್ದ ಮಾಜಿ ಸ್ಪೀಕರ್

    ವಿಧಾನಸಭೆಯಲ್ಲಿನ ಕಂಪ್ಯೂಟರ್, ಎಸಿ, ಪೀಠೋಪಕರಣಗಳನ್ನು ಮನೆಗೆ ಹೊತ್ತೊಯ್ದ ಮಾಜಿ ಸ್ಪೀಕರ್

    ಹೈದರಾಬಾದ್: ವಿಧಾನಸಭೆ ಕಟ್ಟಡದಲ್ಲಿನ ಕಂಪ್ಯೂಟರ್, ಎಸಿ ಹಾಗೂ ಪೀಠೋಪಕರಣಗಳನ್ನು ಆಂಧ್ರ ಪ್ರದೇಶದ ಮಾಜಿ ಸ್ಪೀಕರ್ ತಮ್ಮ ಮನೆಗೆ ಹೊತ್ತೊಯ್ದಿರುವ ಅಪರೂಪದ ಘಟನೆ ನಡೆದಿದೆ.

    ಕಳೆದ ವಾರ ಹೈದರಾಬ್‍ನಿಂದ ಅಮರಾವತಿಗೆ ಸ್ಥಳಾಂತರಿಸುವ ಸಂದರ್ಭದಲ್ಲಿ ವಿಧಾನಸಭೆಯ ಕಟ್ಟಡದಲ್ಲಿನ ಕಂಪ್ಯೂಟರ್, ಎಸಿ ಹಾಗೂ ಪೀಠೋಪಕರಣಗಳು ಕಳೆದು ಹೋಗಿವೆ ಎಂದು ಪೊಲೀಸರು ದೂರು ದಾಖಲಿಸಿಕೊಂಡಿದ್ದರು. ಪೊಲೀಸರು ಈ ಕುರಿತು ತನಿಖೆ ಪ್ರಾರಂಭಿಸಿದ್ದು, ಈ ವೇಳೆ ಪೀಠೋಪಕರಣಗಳನ್ನು ಮಾಜಿ ಸ್ಪೀಕರ್ ಕೊದೆಲಾ ಶಿವಪ್ರಸಾದ್ ಅವರ ಸತ್ತೇನಪಲ್ಲಿ ಮನೆಗೆ ತೆಗೆದುಕೊಂಡು ಹೋದ ವಿಚಾರ ಬೆಳಕಿಗೆ ಬಂದಿದೆ.

    ಈ ಕುರಿತು ವಿಧಾನಸಭೆಯ ಕಾರ್ಯದರ್ಶಿ ಮಾಜಿ ಸ್ಪೀಕರ್ ಕೊದೆಲಾ ಶಿವಪ್ರಸಾದ್ ಅವರಿಗೆ ಪತ್ರ ಬರೆದರೂ ಸಹ ಅವರು ಉತ್ತರಿಸಲಿಲ್ಲ. ಸ್ಥಳಾಂತರದ ಲಾಭವನ್ನೇ ಬಳಸಿಕೊಂಡು ಪೀಠೋಪಕರಣಗಳನ್ನು ಹೊತ್ತೊಯ್ದಿದ್ದಾರೆ. ಈ ಮೂಲಕ ಪ್ರಜಾಪ್ರಭುತ್ವದ ಪವಿತ್ರ ಸಂಸ್ಥೆಯ ಉಪಕರಣಗಳನ್ನು ಕದ್ದಿದ್ದಾರೆ ಎಂದು ಮಾಧ್ಯಮಗಳು ವರದಿ ಬಿತ್ತರಿಸಿವೆ. ಆಡಳಿತಾರೂಢ ವೈಎಸ್‍ಆರ್ ಕಾಂಗ್ರೆಸ್‍ನ ಕಾರ್ಯಕರ್ತರು ಈ ಕೃತ್ಯದ ಕುರಿತು ಟೀಕಿಸಿದ್ದು, ಕಳ್ಳತನ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

    ಇಷ್ಟೆಲ್ಲ ಆರೋಪಗಳು ಕೇಳಿ ಬಂದ ನಂತರ, ಕಡೆಗೂ ಮಾಜಿ ಸ್ಪೀಕರ್ ಶಿವಪ್ರಸಾದ್ ಅವರು ಕೆಲ ಉಪಕರಣಗಳನ್ನು ಸತ್ತೇನಪಲ್ಲಿಯ ಕ್ಯಾಂಪ್ ಆಫೀಸ್‍ಗೆ ಸ್ಥಳಾಂತರಿಸಿರುವುದಾಗಿ ಒಪ್ಪಿಕೊಂಡಿದ್ದಾರೆ. ಆದರೆ, ನಾನು ಕದಿಯುವ ದೃಷ್ಟಿಯಿಂದ ಅವುಗಳನ್ನು ಕೊಂಡೊಯ್ದಿಲ್ಲ. ಪೀಠೋಪಕರಣಗಳು ಹಾಗೂ ಕಂಪ್ಯೂಟರ್ ಗಳು ಹಾಳಾಗುತ್ತಿದ್ದವು. ಹೀಗಾಗಿ ಅವುಗಳನ್ನು ಸಂರಕ್ಷಿಸುವ ಉದ್ದೇಶದಿಂದ ನನ್ನ ಕಚೇರಿಗೆ ಸ್ಥಳಾಂತರಿಸಿದೆ. ನನ್ನ ಕಚೇರಿಗೆ ತಂದಿರುವ ಪೀಠೋಪಕರಣಗಳು ಹಾಗೂ ಅದಕ್ಕಾಗುವ ವೆಚ್ಚವನ್ನು ಭರಿಸಲು ಸಿದ್ಧನಿದ್ದೇನೆ ಎಂದು ಶಿವಪ್ರಸಾದ್ ತಿಳಿಸಿದ್ದಾರೆ.

    ಚುನಾವಣೆಯಲ್ಲಿ ಸೋಲನುಭವಿಸಿದ ನಂತರ ಈ ವಸ್ತುಗಳನ್ನು ವಾಪಸ್ ತೆಗೆದುಕೊಂಡು ಹೋಗುವಂತೆ ಅಧಿಕಾರಿಗಳಿಗೆ ತಿಳಿಸಿದ್ದೆ. ಆದರೆ ಈ ಕುರಿತು ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ ಎಂದು ತಿಳಿಸಿದ್ದಾರೆ.

    ಆಡಳಿತಾರೂಢ ವೈಎಸ್‍ಆರ್ ಕಾಂಗ್ರೆಸ್‍ನ ಹಿರಿಯ ನಾಯಕರು ತೀವ್ರವಾಗಿ ಟೀಕಿಸಿದ್ದು, ನಾವು ಸ್ಪೀಕರ್ ಅವರಿಗೆ ಅವಮಾನ ಮಾಡುತ್ತಿಲ್ಲ. ಬದಲಿಗೆ ಒಬ್ಬ ಸಾಮಾನ್ಯ ವ್ಯಕ್ತಿ ಈ ಕೆಲಸವನ್ನು ಮಾಡಿದ್ದರೆ ನೀವು ಅವನನ್ನು ಏನೆಂದು ಕರೆಯುತ್ತಿದ್ದಿರಿ. ಕಳ್ಳನೆಂದು ಕರೆಯುತ್ತಿದ್ದಿರಲ್ಲವೇ ಎಂದು ಆಂಧ್ರ ಪ್ರದೇಶದ ಕೃಷಿ ಸಚಿವ ಕಣ್ಣಾ ಬಾಬು ಅವರು ಪ್ರಶ್ನಿಸಿದ್ದಾರೆ.

  • ಅಪ್ಪನಾಣೆ, ಅವ್ವನಾಣೆ ಸಂಸ್ಕೃತಿ ಬಿಡಿ: ಸಿದ್ದರಾಮಯ್ಯಗೆ ಕೋಳಿವಾಡ ಟಾಂಗ್

    ಅಪ್ಪನಾಣೆ, ಅವ್ವನಾಣೆ ಸಂಸ್ಕೃತಿ ಬಿಡಿ: ಸಿದ್ದರಾಮಯ್ಯಗೆ ಕೋಳಿವಾಡ ಟಾಂಗ್

    – ಸಿಎಂ ಕುಮಾರಸ್ವಾಮಿ ಅಳುವುದನ್ನು ಬಿಡಲಿ
    – ಸಚಿವ ರೇವಣ್ಣನ ಹೇಳಿಕೆಗೆ ಕೋಳಿವಾಡ ಆಕ್ಷೇಪ

    ಬೆಂಗಳೂರು: ಅಪ್ಪನಾಣೆ, ಅವ್ವನಾಣೆ ಸಂಸ್ಕೃತಿ ಬಿಟ್ಟು, ಅಭಿವೃದ್ಧಿಯ ವಿಚಾರವನ್ನು ಮುಂದಿಟ್ಟುಕೊಂಡು ಹೋಗಬೇಕು ಎಂದು ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ ಅವರು, ಪರೋಕ್ಷವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು, ನಮ್ಮ ಸೊಕ್ಕು ಹಾಗೂ ಭಾವನೆಗಳೇ ನಮಗೆ ಸಮಸ್ಯೆಯಾಗುತ್ತವೆ. ಜೆಡಿಎಸ್ ವಿರುದ್ಧ ಮಾತನಾಡುವುದು ಸರಿಯಲ್ಲ. ಸರ್ಕಾರದ ವಿರುದ್ಧ ತಪ್ಪು ಕಲ್ಪನೆ ಬಂದರೆ ಅದರ ಬಿಸಿ ಕಾಂಗ್ರೆಸ್‍ಗೂ ತಟ್ಟುತ್ತದೆ ಹಾಗೂ ಅನ್ವಯವಾಗುತ್ತದೆ. ಇದರಿಂದಾಗಿ ಮೈತ್ರಿ ಸರ್ಕಾರದಲ್ಲಿ ಉಂಟಾಗುವ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಹೋಗಬೇಕು ಎಂದು ಪಕ್ಷದ ನಾಯಕರ ವಿರುದ್ಧ ಪರೋಕ್ಷವಾಗಿ ಚಾಟಿ ಬೀಸಿದರು.

    ಸಿಎಂ ಕುಮಾರಸ್ವಾಮಿ ಭಿಕ್ಷುಕರ ಹೇಳಿಕೆ ನೀಡಿರುವ ಕುರಿತು ಪ್ರತಿಕ್ರಿಯೆ ನೀಡಿದ ಮಾಜಿ ಸ್ಪೀಕರ್, ಕುಮಾರಸ್ವಾಮಿ ಅವರು ಪದೇ ಪದೇ ಭಿಕ್ಷುಕ ಪದ ಬಳಸುವುದು ತಪ್ಪು. ಅಷ್ಟೇ ಅಲ್ಲದೆ ಅಳುವುದನ್ನು ಬಿಡಬೇಕು. ಎಲ್ಲವನ್ನೂ ಧೈರ್ಯವಾಗಿ ಎದುರಿಸಬೇಕು. ಅದನ್ನು ಬಿಟ್ಟು ಭಾವೋದ್ವೇಗಕ್ಕೊಳಗಾಗಿ ಅಳುವುದು ಯಾಕೆ ಎಂದು ಪ್ರಶ್ನಿಸಿ ಕಿಡಿಕಾರಿದರು.

    ಕೆರೆ ಒತ್ತುವರಿ ಸದನ ಸಮಿತಿ ವರದಿ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ನಾವೇ ಎಲ್ಲವನ್ನೂ ಪರಿಶೀಲಿಸಿ ವರದಿ ನೀಡಿದ್ದೇವೆ. ಕುಮಾರಸ್ವಾಮಿ ಅವರು ಕೂಡ ಸಮಿತಿ ಸದಸ್ಯರಾಗಿದ್ದರು. ಈಗ ಅವರೇ ಸಿಎಂ ಆಗಿದ್ದಾರೆ. ಯಾಕೆ ಕೆರೆ ಒತ್ತುವರಿ ವರದಿಯನ್ನು ಸದನ ಸಮಿತಿ ಯಾಕೆ ಒಪ್ಪಿಕೊಳ್ಳಲಿಲ್ಲ ಎನ್ನುವುದು ನನಗೆ ಗೊತ್ತಿಲ್ಲ. ಆದರೆ ವರದಿಯನ್ನು ಮೂಲೆಗೆ ಸೇರಿಸುವುದು ಸರಿಯಲ್ಲ ಎಂದು ದೂರಿದರು.

    ಕುಮಾರಸ್ವಾಮಿ ಅವರ ಸಲಹೆಯ ಮೇರೆಗೆ ಕೆರೆ ಒತ್ತುವರಿ ಸದನ ಸಮಿತಿ ರಚನೆಯಾಗಿತ್ತು. ಈಗ ಅವರೆ ವರದಿ ಮೂಲೆಗೆ ಇಟ್ಟರೆ ಹೇಗೆ? ಲಕ್ಷಾಂತರ ರೂ. ಖರ್ಚು ಮಾಡಿ ವರದಿ ಮಾಡಿದ್ದು ಯಾಕೆ? ನೈಸ್ ವರದಿಯನ್ನು ನಾವು ಕೊಟ್ಟಿದ್ದೇವೆ. ಅದನ್ನು ಮೂಲೆಗೆ ಇಟ್ಟಿದ್ದಾರೆ. ಹೀಗೆ ಮಾಡಿದರೆ ಜನರ ವಿಶ್ವಾಸ ಕಳೆದುಕೊಳ್ಳಬೇಕಾಗುತ್ತದೆ ಎಂದು ಸರ್ಕಾರದ ವಿರುದ್ಧ ಅಸಮಧಾನ ವ್ಯಕ್ತಪಡಿಸಿದರು.

    ಹಾವೇರಿ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ಕೊಟ್ಟರೆ ಸ್ಪರ್ಧೆ ಮಾಡುತ್ತೇನೆ. ಟಿಕೆಟ್ ಬೇಕೆಂದು ನಾನು ಲಾಬಿ ಮಾಡಲ್ಲ, ಬೇಡುವುದಿಲ್ಲ. ಅವರಾಗಿಯೇ ಕೊಟ್ಟರೆ ನಾನು ಸ್ಪರ್ಧಿಸುತ್ತೇನೆ ಎಂದು ಲೋಕಸಭಾ ಚುನಾವಣೆ ಟಿಕೆಟ್ ಆಕಾಂಕ್ಷೆ ಹೊರಹಾಕಿದರು.

    ಜಾತಿವಾದಿ ಬಿಜೆಪಿ ಅಧಿಕಾರಕ್ಕೆ ಬರಬಾರದು ಎನ್ನುವ ಉದ್ದೇಶದಿಂದ ಮೈತ್ರಿ ಮಾಡಿಕೊಂಡಿದ್ದೇವೆ ಎಂದು ಲೋಕೋಪಯೋಗಿ ಸಚಿವ ರೇವಣ್ಣ ಹೇಳಿದ್ದರು. ಇದನ್ನು ಖಂಡಿಸಿದ ಕೋಳಿವಾಡ ಅವರು, ಕೊಡುವುದು ತೆಗೆದುಕೊಳ್ಳುವುದು ಮಾಡಿಕೊಳ್ಳಬೇಕು. ಅದನ್ನು ಬಿಟ್ಟು ಸಚಿವ ಎಚ್.ಡಿ.ರೇವಣ್ಣ ಅವರು ಇಲ್ಲ ಸಲ್ಲದ ಹೇಳಿಕೆ ನೀಡುವುದು ಸರಿಯಲ್ಲ ಎಂದು ಕಿಡಿಕಾರಿದರು.

    ಕಾಶ್ಮೀರದ ಪುಲ್ವಾಮಾ ದಾಳಿಯಲ್ಲಿ ಕೇಂದ್ರ ಸರ್ಕಾರ ರಾಜಕಾರಣ ಬೆರೆಸಬಾರದು. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ದಾಳಿ ವಿಚಾರವನ್ನು ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಮತ್ತೊಮ್ಮೆ ಪ್ರಧಾನಿಯಾಗುವ ಕನಸು ಕಟ್ಟಿಕೊಂಡಿರುವ ಮೋದಿ ಅವರು ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಹೀಗೆ ಮಾಡುವವರು ಅಯೋಗ್ಯರೆಂದು ಕರೆಸಿಕೊಳ್ಳುತ್ತಾರೆ ಎಂದು ಗುಡುಗಿದರು.

    ಪುಲ್ವಾಮಾ ದಾಳಿಯನ್ನು ತಡೆಯುವಲ್ಲಿ ಗುಪ್ತಚರ ಇಲಾಖೆ ವಿಫಲವಾಗಿದೆ. ಹೀಗಾಗಿ ಸೂಸೈಡ್ ಬಾಂಬ್ ದಾಳಿ ನಡೆಯಿತು. ಅಷ್ಟೊಂದು ಭದ್ರತೆ ನಡುವೆಯೂ ಘಟನೆ ನಡೆಯಿತು ಎಂದ ಅವರು, ಶಾಲಾ ಮಕ್ಕಳ ಕೈಯಲ್ಲಿ ಮೋದಿ, ಮೋದಿ ಅಂತ ಬರೆಸುತ್ತರುವುದು ಖಂಡನೀಯ. ಉಗ್ರರನ್ನು ಸೆದೆಬಡಿದೆರ ಪ್ರಧಾನಿ ಮೋದಿ ಅವರಿಗೆ ಗೌರವ ಸಿಗಲಿದೆ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ ರಾಜಕೀಯ ನಿವೃತ್ತಿ

    ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ ರಾಜಕೀಯ ನಿವೃತ್ತಿ

    ಬೆಂಗಳೂರು: ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ನಾನು ಇನ್ನು ಮುಂದೆ ಯಾವುದೇ ಚುನಾವಣೆಗಳಿಗೆ ಸ್ಪರ್ಧಿಸುವುದಿಲ್ಲವೆಂದು ಕಾಗೋಡು ತಿಮ್ಮಪ್ಪ ತಿಳಿಸಿದ್ದಾರೆ.

    ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ನಾನು ಇನ್ನು ಮುಂದೆ ಯಾವುದೇ ಚುನಾವಣೆಗಳಿಗೆ ಸ್ಪರ್ಧಿಸುವುದಿಲ್ಲ. ಸಂಪೂರ್ಣವಾಗಿ ರಾಜಕೀಯ ನಿವೃತ್ತಿ ತೆಗೆದುಕೊಂಡಿದ್ದೇನೆ ಎಂದು ಹೇಳಿದರು.

    ನಾನು ಇನ್ನು ಮುಂದೆ ಸಕ್ರೀಯವಾಗಿ ರಾಜಕಾರಣದಲ್ಲಿ ಇರುವುದಿಲ್ಲ, ಬೇರೆ ರೂಪದಲ್ಲಿ ಸಮಾಜಸೇವೆ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತೇನೆ. ಮಾಡುವ ಕೆಲಸ ಮಾಡಿ ಆಗಿದೆ, ಮಾಡಿದ ಕೆಲಸದಲ್ಲಿ ತೃಪ್ತಿ ಪಡೆದುಕೊಂಡು ಜೀವನ ಸಾಗಿಸುತ್ತೇನೆ ಎಂದು  ಹೇಳಿಕೆ ನೀಡಿದ್ದಾರೆ.

    ಮೈಸೂರು ಸಂಸ್ಥಾನದ ಸಾಗರದ ಕಾಗೋಡುವಿನಲ್ಲಿ 1932 ರ ಸೆಪ್ಟೆಂಬರ್ 10 ಜನಿಸಿದ್ದ ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸಾಗರದಲ್ಲಿನ ಹೆಣ್ಣೂರಿನಲ್ಲಿ ಮುಗಿಸಿ, ಬಿ.ಕಾಂ. ಹಾಗೂ ಬಿ.ಎಲ್ ಪದವಿಯನ್ನು ಬೆಂಗಳೂರಿನ ವಿಶ್ವವಿದ್ಯಾನಿಲಯದಲ್ಲಿ ಪೂರ್ಣಗೊಳಿಸಿದ್ದರು. ಮೊದಲಿನಿಂದಲೂ ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿದ್ದ ತಿಮ್ಮಪ್ಪನವರು, 1961ರಲ್ಲಿ ಸಾಗರ ತಾಲೂಕು ಪಂಚಾಯತ್ ಅಧ್ಯಕ್ಷರಾಗುವ ಮೂಲಕ ಸಕ್ರೀಯ ರಾಜಕೀಯಕ್ಕೆ ಎಂಟ್ರಿ ಕೊಟ್ಟರು.

    ರಾಜಕೀಯದಲ್ಲಿ ಸಕ್ರೀಯರಾಗಿ 5 ಬಾರಿ ಸಾಗರ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಗೊಂಡು 1999 ರಲ್ಲಿ ಮೊದಲ ಬಾರಿಗೆ ಕಾಗೋಡು ಸಮಾಜ ಕಲ್ಯಾಣ ಇಲಾಖೆ ಮತ್ತು ತೋಟಗಾರಿಕೆ ಇಲಾಖೆಯ ಸಚಿವರಾಗಿದ್ದರು. 2013ರಲ್ಲಿ ನಡೆದ ಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆಗೊಂಡು, ಮಾಜಿ ಸಿಎಂ ಸಿದ್ದರಾಮಯ್ಯನವರ ಅವಧಿಯಲ್ಲಿ ವಿಧಾನಸಭಾ ಅಧ್ಯಕ್ಷರಾಗಿ, ಬಳಿಕ ಕಂದಾಯ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಅವರು ಶಿವಮೊಗ್ಗದಿಂದ ಸ್ಪರ್ಧಿಸಿ ಸೋಲನ್ನು ಅನುಭವಿಸಿದ್ದರು.

  • ಸೋಫಾ ಸೆಟ್ ವಾಪಸ್ ಕೊಡಲು ಸೂಚನೆ: ಕೋಳಿವಾಡ ನಿವಾಸದಲ್ಲಿದ್ದ ವಸ್ತುಗಳು ಯಾವುದು?

    ಸೋಫಾ ಸೆಟ್ ವಾಪಸ್ ಕೊಡಲು ಸೂಚನೆ: ಕೋಳಿವಾಡ ನಿವಾಸದಲ್ಲಿದ್ದ ವಸ್ತುಗಳು ಯಾವುದು?

    ಬೆಂಗಳೂರು: ಮಾಜಿ ಸ್ಪೀಕರ್ ಕೆ.ಬಿ ಕೋಳಿವಾಡ ಅವರ ಮನೆಯಲಿದ್ದ ಪೀಠೋಪಕರಣಗಳನ್ನು ವಾಪಸ್ ನೀಡುವಂತೆ ಸರ್ಕಾರ ಸೂಚನೆ ನೀಡಿದೆ.

    ವಿಧಾನಸೌಧದ ಪಡಸಾಲೆಯಲ್ಲಿರಬೇಕಾದ ಪೀಠೋಪಕರಣಗಳು ಕೋಳಿವಾಡ ಅವರ ಮನೆಯಲ್ಲಿರುವ ಕುರಿತು ಪಬ್ಲಿಕ್ ಟಿವಿಯಲ್ಲಿ ಸುದ್ದಿ ಪ್ರಸಾರವಾಗಿತ್ತು. ಸುದ್ದಿ ಬಿತ್ತರವಾಗುತ್ತಿದ್ದಂತೆಯೇ ಇದೀಗ ಕೋಳಿವಾಡ ಅವರಿಗೆ ವಸ್ತುಗಳನ್ನು ಹಿಂದಿರಿಗಿಸುವಂತೆ ವಿಧಾನಸಭೆ ಕಾರ್ಯದರ್ಶಿ ಮೂತ್ರಿ ಪತ್ರ ಬರೆದು ಸೂಚಿಸಿದ್ದಾರೆ. ಪತ್ರದಲ್ಲಿ ಕಿಂಗ್ ಸೈಜ್ ಮಂಚ, ಇಟಾಲಿಯನ್ ಸೋಫಾ, ಮಸಾಜ್ ಚೇರ್ ಹಾಗೂ ಪೀಜನ್ ಬಾಕ್ಸ್ ಮೊದಲಾದ 7 ವಸ್ತುಗಳನ್ನು ವಾಪಸ್ ಮಾಡುವಂತೆ ಸೂಚನೆ ನೀಡಿದ್ದಾರೆ. ಆದ್ರೆ ಈ ವಸ್ತುಗಳಿಗೆ ಹಣ ಕೊಡುವುದಾಗಿ ಕೋಳಿವಾಡ ಮರುಪತ್ರ ಬರೆದಿದ್ದಾರೆ.

    ಏನಿದು ಪ್ರಕರಣ?:
    ಮಾಜಿ ಸ್ಪೀಕರ್ ಕೆ.ಬಿ ಕೋಳಿವಾಡ ಅವರು ತಾವು ಅಧಿಕಾರದಲ್ಲಿದ್ದಾಗ ಖರೀದಿಸಿದ್ದ ವಸ್ತುಗಳನ್ನು ತಮ್ಮ ನಿವಾಸಕ್ಕೆ ಹೊತ್ತೊಯ್ದಿದ್ದರು. ಖಾಸಗಿ ನಿವಾಸದಲ್ಲಿ ಲಕ್ಷ ಲಕ್ಷ ವೆಚ್ಚದಲ್ಲಿ ಖರೀದಿಸಿದ್ದ ಸೋಫಾ ಸೆಟ್‍ಗಳಿದ್ದು, ಅದರ ಮೇಲೆ ಕೆಎಲ್‍ಎಎಸ್/ಎಲ್‍ಎಚ್/5ಕೆ ಅಂತ ನಮೂದು ಮಾಡಲಾಗಿgತ್ತು. ಈ ಕುರಿತು ಪಬ್ಲಿಕ್ ಟಿವಿ ಇಂದು ಬೆಳಗ್ಗೆ ವರದಿ ಮಾಡಿತ್ತು. ಅಲ್ಲದೇ ಈ ಕುರಿತು ಸ್ವತಃ ಕೋಳಿವಾಡ ಅವರೇ ಪಬ್ಲಿಕ್ ಟಿವಿ ಜೊತೆ ಮಾತನಾಡಿ ಸೋಫಾ ನನ್ನ ಬಳಿಯೇ ಇರಲಿ. ಇದರ ಹಣವನ್ನು ಕೊಡುತ್ತೇನೆ ಅಂತ ಹೇಳಿದ್ದರು.

    ಕೋಳಿವಾಡ ಅವರ ನಿವಾಸದಲ್ಲಿದ್ದ ಪೀಟೋಪಕರಣಗಳು ಯಾವುದು?
    * ಸೌಲಭ್ಯ ಹೊಂದಿರುವ ಮಂಚಗಳು- 2 ಸೆಟ್
    * ಸೌಲಭ್ಯ ಹೊಂದಿರುವ ಕಿಂಗ್ ಸೈಜ್ ಮಂಚ- 1 ಸೆಟ್
    * ಇಟಾಲಿಯನ್ ಸೋಫಾ 3+2+1+3- 1 ಸೆಟ್
    * ಮಸಾಜ್ ಸೋಫಾ- 1 ಸೆಟ್
    * ಪೀಜನ್ ಬಾಕ್ಸ್- 1 ಸೆಟ್

  • ವಿಧಾನಸೌಧದ ಪಡಸಾಲೆಯಲ್ಲಿರಬೇಕಾದ ಪೀಠೋಪಕರಣಗಳು ಮಾಜಿ ಸ್ಪೀಕರ್ ಮನೆಯಲ್ಲಿ!

    ವಿಧಾನಸೌಧದ ಪಡಸಾಲೆಯಲ್ಲಿರಬೇಕಾದ ಪೀಠೋಪಕರಣಗಳು ಮಾಜಿ ಸ್ಪೀಕರ್ ಮನೆಯಲ್ಲಿ!

    ಬೆಂಗಳೂರು: ವಿಧಾನಸೌಧ ಪಡಸಾಲೆ ವಸ್ತುಗಳು ಮಾಜಿ ಸ್ಪೀಕರ್ ಕೋಳಿವಾಡ ನಿವಾಸದಲ್ಲಿರುವುದು ಕಂಡು ಬಂದಿದೆ.

    ಜಾಲಹಳ್ಳಿಯಲ್ಲಿರೋ ಖಾಸಗಿ ನಿವಾಸದಲ್ಲಿ ಲಕ್ಷ ಲಕ್ಷ ವೆಚ್ಚದಲ್ಲಿ ಖರೀದಿಸಿದ್ದ ಸೋಫಾ ಸೆಟ್‍ಗಳು ಇದ್ದು, ಸೋಫಾ ಸೆಟ್ ಮೇಲೆ ಕೆಎಲ್‍ಎಎಸ್/ಎಲ್‍ಎಚ್/5ಕೆ ಅಂತ ನಮೂದು ಮಾಡಲಾಗಿದೆ. ಈ ಮೂಲಕ ಕೋಳಿವಾಡ ಅವರು ಅಧಿಕಾರದಲ್ಲಿದ್ದಾಗ ಖರೀದಿಸಿದ್ದ ವಸ್ತುಗಳನ್ನು ಹೊತ್ತೊದ್ರಾ ಎಂಬ ಪ್ರಶ್ನೆಯೊಂದು ಎದ್ದಿದೆ.

    ವಿಧಾನಸೌಧದಲ್ಲಿರಬೇಕಾದ ವಸ್ತುಗಳು ಕೋಳಿವಾಡ ನಿವಾಸಕ್ಕೆ ಬಂದಿದ್ದೇಗೆ? ಅಧಿಕಾರ ಮುಗಿಯುತ್ತಿದ್ದಂತೆ ಸರ್ಕಾರಿ ವಸ್ತುಗಳನ್ನು ನೀಡಬೇಕೆಂಬ ಪರಿಜ್ಞಾನವೂ ಇಲ್ಲವೇ? ಅಧಿಕಾರ ಇಲ್ಲದಿದ್ದರೂ ಸರ್ಕಾರಿ ಸವಲತ್ತು ಅನುಭವಿಸುತ್ತಿರೋದು ಸರೀನಾ ಅನ್ನೋ ಸಾಕಷ್ಟು ಪ್ರಶ್ನೆಗಳು ಈಗ ಹುಟ್ಟಿಕೊಂಡಿವೆ.

    ಕೋಳಿವಾಡ ಅವರು ಸ್ಪೀಕರ್ ಆಗಿದ್ದಂತಹ ಸಂದರ್ಭದಲ್ಲಿ ಅನೇಕ ವಿವಾದಗಳನ್ನು ಮೈ ಮೇಲೆ ಎಳೆದುಕೊಂಡಿದ್ದರು. ಅದರ ಮುಂದುವರಿದ ಭಾಗವೂ ಇದಾಗಿದೆ ಎನ್ನುವ ಮಾತುಗಳು ಈಗ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.