ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಕಲಗುಂಡಿ ಗ್ರಾಮದಲ್ಲಿ ಯುವಕನೊಬ್ಬನಿಗೆ ಚಾಕು ಇರಿದು ಕೊಲೆ ಮಾಡಿದ ವಿಷಯಕ್ಕೆ ಸಂಬಂಧಿಸಿದಂತೆ ಮಾಜಿ ಸೈನಿಕನ ಕೈ ಕಾಲು ಕಟ್ಟಿ ಗ್ರಾಮಸ್ಥರು ಮನಬಂದಂತೆ ಒದೆ ಕೊಟ್ಟಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮಾಜಿ ಸೈನಿಕನಿಗೆ ಕೊಲೆಯಾದ ಯವಕನ ಸಂಬಂಧಿಕರು ಹಾಗೂ ಗ್ರಾಮಸ್ಥರು ಧರ್ಮದೇಟು ನೀಡಿದ್ದಾರೆ. ಮಾಜಿ ಸೈನಿಕ ಗಂಗಾಧರ ನಿಂಗಪ್ಪ ನೂಲ್ವಿ ತಿಪ್ಪೆಗೆ ಕಸ ಹಾಕುವ ವಿಷಯಕ್ಕೆ ಸಂಬಂಧಿಸಿದಂತೆ ಶಾರದಾ ಪಾಟೀಲ್ ಎನ್ನುವ ಮಹಿಳೆಯ ಪ್ರಚೋದನೆಯಿಂದ ಜಗದೀಶ್ ತಾಂಬೆಯನ್ನು ಚಾಕು ಇರಿದು ಕೊಲೆ ಮಾಡಿದ್ದ.
ಚಾಕು ಇರಿತದಿಂದ ಯುವಕ ತೀವ್ರ ರಕ್ತಸಾವ್ರವಾಗಿ ಮೃತಪಟ್ಟಿದ್ದ. ಹೀಗಾಗಿ ರೊಚ್ಚಿಗೆದ್ದ ಗ್ರಾಮಸ್ಥರು ಸೈನಿಕನ ಕೈ ಹಾಗೂ ಕಾಲನ್ನು ಕಟ್ಟಿ ಮನಬಂದಂತೆ ಧರ್ಮದೇಟು ಕೊಟ್ಟಿದ್ದಾರೆ. ಯುವಕನ ಕೊಲೆಗೆ ಸಂಬಂಧಿಸಿದಂತೆ ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈಗಾಗಲೇ ಹಲ್ಲೆಗೆ ಒಳಗಾಗಿರುವ ಸೈನಿಕ ಹಾಗೂ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಚಿಕ್ಕಮಗಳೂರು: ಆಸ್ತಿಗಾಗಿ ಮಗನೇ ಹೆತ್ತ ಅಪ್ಪನನ್ನು ಮನೆಯಿಂದ ಹೊರ ಹಾಕಿರುವಂತಹ ಘಟನೆ ಜಿಲ್ಲೆಯ ಕೊಪ್ಪ ತಾಲೂಕಿನ ಬೊಮ್ಮಲಪುರದಲ್ಲಿ ನಡೆದಿದೆ.
ಭಾರತೀಯ ಸೇನೆಯಲ್ಲಿ 22 ವರ್ಷ ದೇಶಕ್ಕಾಗಿ ಹೋರಾಡಿದ ಮಾಜಿ ಯೋಧನಿಂದು ತಿನ್ನೋಕೆ ಅನ್ನವಿಲ್ಲದೆ, ಮಲಗಲು ಜಾಗವಿಲ್ಲದೆ ಪಾಳುಬಿದ್ದ ಬಸ್ ನಿಲ್ದಾಣದಲ್ಲಿ ಬದುಕುವಂತಾಗಿದೆ. 77 ವರ್ಷದ ಮಾಜಿ ಸೈನಿಕ ರಾಮಪ್ಪ ಇಂದು ಕೊಪ್ಪದ ಬಸ್ ನಿಲ್ದಾಣದಲ್ಲಿ ನಿರ್ಗತಿಕನಂತೆ ಬದುಕುತ್ತಿದ್ದಾರೆ.
ತಾವೇ ಕಟ್ಟಿದ ಮನೆಯಲ್ಲಿ ತನಗೇ ಆಶ್ರಯ ಸಿಗದೇ ಕೊಪ್ಪದ ಮಾಜಿ ಸೈನಿಕರ ಸಂಘದ ಕಛೇರಿಯಲ್ಲಿ ಮಲಗುತ್ತಾ, ಸಮೀಪದ ಮುಸುರೇ ಹಳ್ಳದಲ್ಲಿ ಸ್ನಾನ ಮಾಡಿ ಅಲ್ಲಿ ಇಲ್ಲಿ ಊಟ-ತಿಂಡಿ ಮಾಡಿ ದಿನ ದೂಡುತ್ತಿದ್ದಾರೆ. ಮಾಜಿ ಸೈನಿಕರಾಗಿರುವ ಈ ರಾಮಪ್ಪ, 1965ರ ಪಾಕಿಸ್ತಾನ ಹಾಗೂ 1971ರ ಬಾಂಗ್ಲಾ ವಿರುದ್ಧದ ಯುದ್ಧದಲ್ಲಿ ದೇಶಕ್ಕಾಗಿ ಹೋರಾಡಿದ್ದಾರೆ. 22 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ದೇಶಕ್ಕಾಗಿ ದುಡಿದಿದ್ದಾರೆ.
ಇಂದು ತನ್ನದೇ ಮನೆಯಲ್ಲಿ ಒಪ್ಪೊತ್ತಿನ ಊಟಕ್ಕೂ ಗತಿ ಇಲ್ಲದೆ, ಮತ್ತೊಬ್ಬರ ಬಳಿ ಕೈಚಾಚಿಕೊಂಡು ಬದುಕುತ್ತಿದ್ದಾರೆ. ಮಗ ಮನೆಯಿಂದ ಹೊರಹಾಕಿದ ಮೇಲೆ ರಾಮಪ್ಪ ಹರಿಹರಪುರ ಠಾಣೆಗೆ ದೂರು ನೀಡಿದ್ದಾರೆ. ಆದರೆ ಪೊಲೀಸರಿಂದ ಯಾವುದೇ ನ್ಯಾಯ ಸಿಗಲಿಲ್ಲ. ಬಳಿಕ ಕೊಪ್ಪ ತಹಶೀಲ್ದಾರರಿಗೂ ದೂರು ನೀಡಿದ್ದರೂ ಯಾವುದೇ ಪ್ರಯೋಜವಾಗಿಲ್ಲ.
ನನ್ನ ಮಗ-ಸೊಸೆ ನನ್ನನ್ನ ಮನೆಯಿಂದ ಹೊರಹಾಕಿದ್ದಾರೆ. ನಾನು ಕಟ್ಟಿದ ಮನೆಯಲ್ಲೇ ನನ್ನನ್ನು ಇರಲು ಬಿಡದೆ ಹೊರ ಹಾಕಿದ್ದಾರೆ. ಇಬ್ಬರು ಸೇರಿ ನನ್ನ ಮೇಲೆ ಹಲ್ಲೆ ಮುಂದಾಗುತ್ತಾರೆ. ನನ್ನ ಆರೋಗ್ಯ ಸರಿ ಇಲ್ಲ. ಎರಡು ಬಾರಿ ಹೃದಯದ ಆಪರೇಶನ್ ಆಗಿದೆ. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದೇನೆ. ದಯವಿಟ್ಟು ನನ್ನ ಮನೆಯನ್ನು ನನಗೆ ಕೊಡಿಸಿಕೊಡಬೇಕೆಂದು ತಹಶೀಲ್ದಾರರಿಗೆ ರಾಮಪ್ಪ ದೂರು ನೀಡಿದ್ದಾರೆ.
ಇದು ಸಾಂಸಾರಿಕ ಜಗಳ. ಇಲ್ಲಿ ತಪ್ಪು ನಿವೃತ್ತ ಸೈನಿಕ ರಾಮಪ್ಪರದ್ದೋ ಅಥವಾ ಮಗ ರಾಜಶಂಕರರದ್ದೋ ಗೊತ್ತಿಲ್ಲ. ಆದರೆ ಭಾರತೀಯ ಸೇನೆಯಲ್ಲಿ ದೇಶಕ್ಕಾಗಿ ಹೋರಾಡಿದ ಸೈನಿಕನೋರ್ವ ಹೀಗೆ ಮನೆ-ಮಠ, ಊಟ-ತಿಂಡಿ ಇಲ್ಲದೆ ಮತ್ತೊಬ್ಬರ ಬಳಿ ಕೈಚಾಚಿಕೊಂಡು ಬದುಕುತ್ತಿರೋದು ಮಾತ್ರ ನೋವಿನ ಸಂಗತಿ. ಸಂಬಂಧಪಟ್ಟವರೂ ಇವರಿಗೆ ಸೂಕ್ತ ನ್ಯಾಯ ಕೊಡಿಸಬೇಕಿದೆ ಎಂಬ ಮಾತು ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.
ರಾಯಚೂರು: ಸರ್ಕಾರಿ ನೌಕರಿಯಿಂದ ನಿವೃತ್ತಿಯಾದರೆ ಸಾಕು ಮನೆ ಮಕ್ಕಳು ಮೊಮ್ಮಕ್ಕಳು ಅಂತ ಆರಾಮಾಗಿದ್ದು ಬಿಡೋಣ ಅಂದುಕೊಳ್ಳುವವರೇ ಜಾಸ್ತಿ. ರಾಯಚೂರಿನ ಮಾಜಿ ಸೈನಿಕ ಮೊಹಮದ್ ಸಲೀಂ ಮಾತ್ರ ನಿವೃತ್ತಿ ಬಳಿಕವೂ ದೇಶಸೇವೆಯನ್ನ ಮುಂದುವರಿಸಿದ್ದಾರೆ. ಸೇನೆ ಸೇರಲು ಆಸಕ್ತಿಯಿರುವ ಯುವಕರಿಗೆ ಮಾರ್ಗದರ್ಶಕರಾಗಿ ಉಚಿತವಾಗಿ ತರಬೇತಿ ನೀಡುವ ಮೂಲಕ ಆದರ್ಶವಾಗಿದ್ದಾರೆ.
ಮೊಹಮದ್ ಸಲೀಂ ರಾಯಚೂರಿನ ಲಿಂಗಸುಗೂರು ತಾಲೂಕಿನ ಗುರಗುಂಟಾ ಗ್ರಾಮದ ಮಾಜಿ ಸೈನಿಕ. ಹವಾಲ್ದಾರ್ ಮೇಜರ್ ಆಗಿದ್ದ ಸಲೀಂ ಸೇನಾ ನಿವೃತ್ತಿ ಬಳಿಕ 2017 ರಿಂದ ಹಟ್ಟಿ ಪಟ್ಟಣದ ಸಿಂಡಿಕೇಟ್ ಬ್ಯಾಂಕ್‍ನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದಾರೆ. ಇಷ್ಟೆ ಆಗಿದ್ರೆ ಅಂತಾ ವಿಶೇಷ ಏನ್ ಇರಲಿಲ್ಲ ಬಿಡಿ. ರಾಯಚೂರು ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದಿಂದ ಸೇನೆಯಲ್ಲಿ ಸೇವೆ ಸಲ್ಲಿಸುವವರ ಸಂಖ್ಯೆ ಕಡಿಮೆಯಿದ್ದು, ಅದನ್ನ ಹೆಚ್ಚಿಸಬೇಕು ಅಂತ ಎರಡು ವರ್ಷಗಳಿಂದ ಉಚಿತ ಸೇನಾ ತರಬೇತಿ ನೀಡುತ್ತಿದ್ದಾರೆ.
ಗುರುಗುಂಟಾ ಗ್ರಾಮದಲ್ಲಿ ತರಬೇತಿಗೆ ಸೌಲಭ್ಯಗಳು ಇಲ್ಲದಿದ್ದರೂ ಗ್ರಾಮದ ಹೊರವಲಯದ ಪ್ರದೇಶವೊಂದರಲ್ಲಿ ಸೇನಾರ್ಥಿಗಳಿಗೆ ಅಗತ್ಯ ತರಬೇತಿ ನೀಡುತ್ತಿದ್ದಾರೆ. ಕೇವಲ ಗುರಗುಂಟಾ ಮಾತ್ರವಲ್ಲದೆ ಸುತ್ತಮುತ್ತಲ ಗ್ರಾಮಗಳಾದ ಗೌಡೂರು, ಯಲಗಟ್ಟ, ಮಾಚನೂರು, ಕೋಠಾ, ಹಟ್ಟಿ, ರಾಯದುರ್ಗ, ಅಮರೇಶ್ವರ ಕ್ರಾಸ್ ನಿಂದಲೂ ಯುವಕರು ತರಬೇತಿಗೆ ಬರುತ್ತಿದ್ದಾರೆ. ಅಲ್ಲದೆ ಬೀದರ್ ,ಗೋಕಾಕ್ ನಿಂದಲೂ ಆರು ಯುವಕರು ತರಬೇತಿಗೆ ಬಂದಿದ್ದು, ಅವರಿಗೆಲ್ಲಾ ಸಲೀಂ ಸ್ವಂತ ಖರ್ಚಿನಲ್ಲೇ ಊಟ, ವಸತಿ ವ್ಯವಸ್ಥೆ ಮಾಡಿದ್ದಾರೆ. ಒಟ್ಟು 45 ಜನ ತರಬೇತಿ ಪಡೆಯುತ್ತಿದ್ದಾರೆ.
ಬೆಳಗ್ಗೆ ಐದು ಗಂಟೆಗೆಲ್ಲಾ ತರಬೇತಿ ಆರಂಭಿಸುವ ಸಲೀಂ ಯುವಕರಿಗೆ ಸೇನೆಗೆ ಆಯ್ಕೆಯಾಗಲು ಬೇಕಾಗುವ ಕಠಿಣ ದೈಹಿಕ ತರಬೇತಿಯನ್ನ ನೀಡುತ್ತಿದ್ದಾರೆ. ರನ್ನಿಂಗ್, ಲಾಂಗ್ ಜಂಪ್, ಹೈಜಂಪ್ ಶಾಟ್ ಪುಟ್ ನಿಂದ ಹಿಡಿದು ಪ್ರತಿಯೊಂದಕ್ಕೂ ಅಣಿಗೊಳಿಸುತ್ತಿದ್ದಾರೆ. ಇವರಲ್ಲಿ ತರಬೇತಿ ಪಡೆದ ಯುವಕ ರವಿಕುಮಾರ್ ಈಗಾಗಲೇ ಸೇನೆಗೆ ಆಯ್ಕೆಯಾಗಿದ್ದಾರೆ. ಮೂರು ಜನ ಯುವಕರು ಸ್ಟಾಫ್ ಸೆಲೆಕ್ಷನ್ ಕಮಿಷನ್ ಗೆ ಆಯ್ಕೆಯಾಗಿದ್ದಾರೆ. 26 ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾದ ಎಂ.ಡಿ.ಸಲಿಂ ತಾವು ಕೆಲಸ ಮಾಡುವ ಬ್ಯಾಂಕ್ ನಲ್ಲೂ ಒಳ್ಳೆಯ ಕೆಲಸಗಾರ ಅನ್ನೋ ಹೆಸರನ್ನ ಪಡೆದಿದ್ದು, ಬಡ ಯುವಕರನ್ನ ದೇಶಕಾಯಲು ಸಜ್ಜುಗೊಳಿಸುತ್ತಿದ್ದಾರೆ.
ಪತ್ನಿ ಹಾಗೂ ಇಬ್ಬರು ಮಕ್ಕಳಿರುವ ಸಲೀಂ ಕೆಲಸಕ್ಕೆ ಅವರ ಕುಟುಂಬ ಹಾಗೂ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಯುವಕರು ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಸೇನೆ ಸೇರಬೇಕು. ಆದ್ರೆ ಅವರಿಗೆ ತರಬೇತಿ ತುಂಬಾ ದುಬಾರಿ ಆಗಿರುವುದರಿಂದ ಉಚಿತವಾಗಿ ತರಬೇತಿ ನೀಡುತ್ತಿದ್ದೇನೆ ಅಂತ ಸಲೀಂ ಹೇಳುತ್ತಾರೆ. ಬ್ಯಾನರ್, ವಾಟ್ಸಪ್ ಮೂಲಕ ಪ್ರಚಾರ ಮಾಡಿ ಯುವಕರನ್ನ ತರಬೇತಿಗೆ ಆಹ್ವಾನಿಸುತ್ತಿದ್ದಾರೆ. ಮೊದಲೆಲ್ಲಾ ಕೇವಲ ಬೆರಳೆಣಿಕೆಯಷ್ಟು ಯುವಕರಿಂದ ಆರಂಭವಾದ ತರಬೇತಿಗೆ ಈಗ 45 ಯುವಕರು ಬರುತ್ತಿದ್ದಾರೆ.
ಮೈದಾನ, ವಸತಿ ಹಾಗೂ ತರಬೇತಿ ಸಾಮಗ್ರಿಗಳ ಕೊರತೆಯ ಮಧ್ಯೆಯೂ ಮೊಹಮದ್ ಸಲೀಂ ತಮ್ಮ ಕೈಲಾದ ಮಟ್ಟಿಗೆ ಸ್ವಂತ ಖರ್ಚಿನಲ್ಲೆ ಉಚಿತ ಸೇನಾ ತರಬೇತಿಯನ್ನ ನೀಡುತ್ತಿದ್ದಾರೆ. ನವೆಂಬರ್ 5 ರಿಂದ 16ರ ವರೆಗೆ ಕೊಪ್ಪಳದಲ್ಲಿ ನಡೆಯಲಿರುವ ಸೇನಾ ಭರ್ತಿ ರ್ಯಾಲಿಗೆ ಭರ್ಜರಿ ತಯಾರಿ ನಡೆಸಿದ್ದು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಯುವಕರು ಆಯ್ಕೆಯಾಗುವ ನಿರೀಕ್ಷೆಯಲ್ಲಿ ಸಲೀಂ ಇದ್ದಾರೆ. ಸಲೀಂ ಹಾಗೂ ಅವರಲ್ಲಿ ತರಬೇತಿ ಪಡೆಯುತ್ತಿರುವ ಯುವಕರಿಗೆ ಆಲ್ ದಿ ಬೆಸ್ಟ್ ಹೇಳೋಣ.
ಕಾರವಾರ: ಮದ್ಯ ಅಮಲಿನಲ್ಲಿ ಮಾಜಿ ಯೋಧನೊಬ್ಬ ತಮ್ಮನ ಪತ್ನಿ ಹಾಗೂ ಪುತ್ರನನ್ನು ಗುಂಡಿಕ್ಕಿ ಕೊಲೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ನಡೆದಿದೆ.
ಅಂಕೋಲಾದ ಮಠಾಕೇರಿ ಬಡಾವಣೆಯ ನಿವಾಸಿ ಅಜೀತ್ ಅವರ ಪತ್ನಿ ಮೇಧಾ (40) ಹಾಗೂ ಪುತ್ರ ಅನುಜ್ (09) ಕೊಲೆಯಾದವರು. ಅಜಯ್ ಪ್ರಭು ಕೊಲೆ ಮಾಡಿದ ಮಾಜಿ ಯೋಧ.
ಅಜಯ್ ಪ್ರಭು 2009ರಲ್ಲಿ ಸೇನೆಯಿಂದ ನಿವೃತ್ತಿ ಹೊಂದಿದ್ದ. ಆದರೆ ಕೌಟುಂಬಿಕ ಕಲಹದಿಂದಾಗಿ ಕೆಲ ತಿಂಗಳ ಹಿಂದೆ ಪತ್ನಿ ಆತನನ್ನು ಬಿಟ್ಟು ತವರು ಮನೆ ಹೋಗಿದ್ದಾಳೆ. ಹೀಗಾಗಿ ನಿತ್ಯವೂ ಅಜಯ್ ಪ್ರಭು ಮದ್ಯ ಸೇವನೆ ಮಾಡುತ್ತಿದ್ದ. ಅಷ್ಟೇ ಅಲ್ಲದೆ ಕೆಳಗಿನ ಮನೆಯಲ್ಲಿ ವಾಸವಿದ್ದ ತಮ್ಮ ಅಜೀತ್ ಹಾಗೂ ಆತನ ಪತ್ನಿಯ ಜೊತೆಗೆ ಆಗಾಗ ಜಗಳವಾಡುತ್ತಿದ್ದ.
ಅಜಯ್ ಎಂದಿನಂತೆ ಶನಿವಾರವೂ ಮದ್ಯದ ಸೇವಿಸಿ ಮನೆಗೆ ಬಂದಿದ್ದ. ಈ ವೇಳೆ ತನ್ನ ಬಳಿ ಇದ್ದ ಗನ್‍ನಿಂದ ಅನುಜ್ ಹಾಗೂ ಮೇಧಾ ಮೇಲೆ ಗುಂಡು ಹಾರಿಸಿದ್ದಾನೆ. ಪರಿಣಾಮ ಇಬ್ಬರಿಗೂ ಗುಂಡು ತಗುಲಿ ಅನುಜ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಮೇಧಾ ಗಂಭೀರವಾಗಿ ಗಾಯಗೊಂಡಿದ್ದರು. ಗುಂಡಿನ ಸದ್ದು ಕೇಳಿದ ತಕ್ಷಣವೇ ಸ್ಥಳೀಯರು ಘಟನಾ ಸ್ಥಳಕ್ಕೆ ಬಂದಿದ್ದು, ರಕ್ತಸ್ರಾವದಿಂದ ಬಳಲುತ್ತಿದ್ದ ಮೇಧಾ ಅವರನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೇಧಾ ಅವರನ್ನು ಅಂಕೋಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹೊನ್ನಾವರ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಮೇಧಾ ಸಾವನ್ನಪ್ಪಿದ್ದಾರೆ. ಈ ಸಂಬಂಧ ಅಂಕೋಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಅಜಯ್ ಪ್ರಭುನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ನವದೆಹಲಿ: ವಾರಣಾಸಿ ಕ್ಷೇತ್ರದಿಂದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಣಕ್ಕಿಳಿದು ನಾಮಪತ್ರ ತಿರಸ್ಕೃತಗೊಂಡಿರುವ ಮಾಜಿ ಯೋಧ ತೇಜ್ ಬಹದ್ದೂರ್ ಯಾದವ್ ಅವರದ್ದು ಎನ್ನಲಾದ ವಿವಾದಿತ ವಿಡಿಯೋ ಈಗ ವೈರಲ್ ಆಗಿದೆ.
50 ಕೋಟಿ ಕೊಟ್ಟರೆ ಪ್ರಧಾನಿ ಮೋದಿಯವರನ್ನು ಕೊಲ್ಲುವುದಾಗಿ ತೇಜ್ ಬಹುದ್ದೂರ್ ಗೆಳೆಯನ ಮುಂದೆ ಹೇಳಿಕೊಂಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ.
ಆದರೆ ವಿಡಿಯೋ ಎರಡು ವರ್ಷದ ಹಳೆಯದ್ದಾಗಿದ್ದು, ವಿಡಿಯೋದಲ್ಲಿರುವುದು ನಾನೇ ಎಂದು ತೇಜ್ ಬಹುದ್ದೂರ್ ಒಪ್ಪಿಕೊಂಡಿದ್ದಾರೆ. ಅಲ್ಲದೆ ಈ ವಿಡಿಯೋ ರಿಲೀಸ್ ಹಿಂದೆ ಯಾರದ್ದೋ ಪಿತೂರಿ ಇದೆ ಎಂದು ಆರೋಪಿಸಿದ್ದಾರೆ.
ವಿಡಿಯೋದಲ್ಲೇನಿದೆ?:
ತನ್ನ ಗೆಳೆಯರೊಂದಿಗೆ ಕುಳಿತುಕೊಂಡು ಮದ್ಯಪಾನ ಮಾಡುತ್ತಾ ತನ್ನ ಸ್ನೇಹಿತನೊಬ್ಬನ ಜೊತೆ ತೇಜ್ ಬಹದ್ದೂರ್ ಯಾದವ್ ನಡೆಸಿರುವ ಸಂಭಾಷಣೆ ಈ ರೀತಿ ಇದೆ. ತೇಜ್ ಬಹದ್ದೂರ್: ನನಗೆ ಹಣ ಕೊಟ್ರೆ ಮೋದಿಯನ್ನು ಕೊಲ್ಲುತ್ತೇನೆ. ಸ್ನೇಹಿತ: ಮೋದಿಯನ್ನು ಕೊಲ್ಲಲು ಆಗುತ್ತಾ..? ತೇಜ್ ಬಹದ್ದೂರ್: ನನಗೆ 50 ಕೋಟಿ ಕೊಡು.. ಸ್ನೇಹಿತ: 50 ಕೋಟಿನಾ..? ನಮ್ ದೇಶದಲ್ಲಿ ಅಷ್ಟೊಂದು ಹಣ ಸಿಗೋದು ಬಹಳ ಕಷ್ಟ.. ಅದೇ ಪಾಕಿಸ್ತಾನದಲ್ಲಾದ್ರೆ 50 ಕೋಟಿ ಕೊಡ್ತಾರೆ
ತೇಜ್ ಬಹದ್ದೂರ್: ಇಲ್ಲ, ನಾನು ಅಂತಹ ಕೆಲಸ ಮಾಡಲ್ಲ. ನಾನು ನನ್ನ ದೇಶಕ್ಕೆ ನಿಷ್ಠ.. ಸ್ನೇಹಿತ: ಆದರೆ, ಮೋದಿ ಭಾರತದ ಪ್ರಧಾನಿ.. ತೇಜ್ ಬಹದ್ದೂರ್: ಇಲ್ಲ, ನನ್ನ ದೇಶಕ್ಕೆ ನಾನು ವಿಶ್ವಾಸದ್ರೋಹ ಬಗೆಯಲ್ಲ. ಹಣ ನನಗೆ ಒಂದು ವಿಷಯವೇ ಅಲ್ಲ. ಸ್ನೇಹಿತ: ನಾನು ಇದನ್ನು ಯಾಕೆ ಕೇಳಿದೆ ಅಂದ್ರೆ, 50 ಕೋಟಿ ಕೊಟ್ರೆ ಮೋದಿಯವರನ್ನು ಕೊಲ್ಲುವುದಾಗಿ ನೀನೇ ಹೇಳುತ್ತಾ ಇದ್ದೀಯಲ್ಲ ಅದಕ್ಕೆ. ತೇಜ್ ಬಹದ್ದೂರ್ : ದೇಶದ ಬಗ್ಗೆ ನನಗಿರುವ ನಿಷ್ಠೆ ಅಚಲ. ಹಾಗಾಗಿ ನಾನು ಭಾರತೀಯರು ಹಣ ಕೊಟ್ಟರೆ ಮಾತ್ರ ಕೆಲಸ ಮಾಡುತ್ತೇನೆ.
ಬೆಳಗಾವಿ: ಜಿಲ್ಲೆಯ ಪಂತ ಬಾಳೆಕುಂದ್ರಿಯಲ್ಲಿ ಮಾಜಿ ಸೈನಿಕ ತನ್ನ ಮನೆಯ ಮುಂದೆ ನಾಯಿ, ಬೆಕ್ಕು ಮತ್ತು ಹಂದಿ ಅಷ್ಟೇ ಏಕೆ ಯಾವ ಪ್ರಾಣಿಯು ಬಂದರೂ ಅದಕ್ಕೆ ಗುಂಡು ಹೊಡೆದು ಉರುಳಿಸುತ್ತಾನೆ. ಅದೇ ರೀತಿ ಮಂಗವೊಂದು ಮನೆಯ ಮಂದೆ ಬಂತು ಎಂದು ಗನ್ ಎತ್ತಿಕೊಂಡು ಮಂಗನ ಕುತ್ತಿಗೆಗೆ ಗುಂಡಿಕ್ಕಿದ್ದಾನೆ.
ಪಂತ ಬಾಳೆಕುಂದ್ರಿಯ ನಿವೃತ್ತ ಯೋಧ ಮಹ್ಮದಹುಸೇನ್ ಶೇಖ್ ಮಂಗನಿಗೆ ಗುಂಡು ಹೊಡೆದಿದ್ದಾನೆ. ಶುಕ್ರವಾರ ಮಧ್ಯಾಹ್ನ ಪಂತ ನಗರದಲ್ಲಿರುವ ಆರೋಪಿ ಶೇಖ್ ಮನೆಯ ಮುಂದೆ ಕರಿಮಂಗ ಬಂದು ಪ್ರಾಣ ಕಳೆದುಕೊಂಡಿದೆ. ಇದರಿಂದ ಆಕ್ರೋಶಗೊಂಡ ಸ್ಥಳಿಯರು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.
ಈ ಹಿಂದೆ ನವಿಲು, ನಾಯಿ, ಬೆಕ್ಕು, ಮೊಲ ಬೇಟೆಯಾಡಿದ ಆರೋಪ ಶೇಖ್ ಮೇಲಿದೆ. ಕಾಡುಪ್ರಾಣಿ ಹತ್ಯೆ ನಿಷೇಧ ಕಾಯ್ದೆಯಡಿ ಬೆಳಗಾವಿ ನೆಸರಗಿ ವಲಯದ ಅರಣ್ಯ ಕಚೇರಿಯಲ್ಲಿ ಶೇಖ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಸದ್ಯಕ್ಕೆ ಸಾಂಬ್ರಾ ಗ್ರಾಮದ ಪಶು ಚಿಕಿತ್ಸಾಲಯದಲ್ಲಿ ಮೃತ ಮಂಗನ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಕೋತಿ ಸುತ್ತು ಹೋದ ಮೇಲೆ ಊರಿನ ಜನರೆಲ್ಲಾ ಸೇರಿ ಪೂಜೆ ಮಾಡಿ ಮಣ್ಣು ಮಾಡಿದ್ದಾರೆ. ಇತ್ತ ಅರಣ್ಯ ಅಧಿಕಾರಿಗಳು ಆರೋಪಿ ಶೇಖ್ ಗಾಗಿ ಶೋಧನೆ ಕಾರ್ಯ ನಡೆಸುತ್ತಿದ್ದಾರೆ.
ರಾಯಚೂರು: ಜಿಲ್ಲೆಯ ಮಾಜಿ ಸೈನಿಕರೊಬ್ಬರಿಗೆ ಭೂಮಿ ನೀಡಬೇಕೆಂದು ಕಲಬುರಗಿ ಉಚ್ಚನ್ಯಾಯಾಲಯ ಆದೇಶ ನೀಡಿದ್ದರೂ, ನಿರ್ಲಕ್ಷ್ಯ ತೋರಿದ ಜಿಲ್ಲಾಧಿಕಾರಿ ವಿರುದ್ಧ ನ್ಯಾಯಾಂಗ ನಿಂದನೆ ಕೇಸ್ ದಾಖಲಾಗಿದೆ.
ಮಾಜಿ ಸೈನಿಕ ಪೌಲ್ ಮಿತ್ರ ಅವರಿಗೆ ಭೂಮಿ ನೀಡುವಂತೆ ಕೋರ್ಟ್ ಜಿಲ್ಲಾಧಿಕಾರಿ ಬಗಾದಿ ಗೌತಮ್‍ಗೆ ಆದೇಶ ನೀಡಿತ್ತು. ಆದರೆ ಜಿಲ್ಲೆಯಲ್ಲಿ ಜಮೀನಿನ ಕೊರತೆಯಿದ್ದು, ಪೌಲ್ ಮಿತ್ರ ಅವರಿಗೆ ಭೂಮಿ ನೀಡಲು ಸಾಧ್ಯವಿಲ್ಲ ಅಂತಾ ಬಗಾದಿ ಗೌತಮ್ ಹೇಳಿ, ನ್ಯಾಯಾಲಯದ ಆದೇಶವನ್ನ ಉಲ್ಲಂಘಿಸಿದ್ದರು.
1962 ರಲ್ಲೇ ಭಾರತೀಯ ಸೈನ್ಯದಿಂದ ಪೌಲ್ ಮಿತ್ರ (93) ನಿವೃತ್ತಿಯಾಗಿದ್ದರು. ಸುಮಾರು ವರ್ಷಗಳಿಂದ ಭೂಮಿಗಾಗಿ ಕಚೇರಿಯಿಂದ ಕಚೇರಿಗೆ ಅಲೆದಾಡಿ ಈಗ ನ್ಯಾಯಾಲಯದ ಮೆಟ್ಟಿಲೇರಿದ್ದರು.
ಜಿಲ್ಲಾಧಿಕಾರಿ ವಿರುದ್ಧ ನ್ಯಾಯಾಂಗ ಉಲ್ಲಂಘನೆ ಪ್ರಕರಣ ದಾಖಲಾಗಿದ್ದು, ಆಗಸ್ಟ್ 6 ರಂದು ವಿಚಾರಣೆಗೆ ಹಾಜರಾಗುವಂತೆ ಬಗಾದಿ ಗೌತಮ್ ಅವರಿಗೆ ಉಚ್ಚನ್ಯಾಯಾಲಯ ದ್ವಿಸದಸ್ಯ ಪೀಠ ತಾಕೀತು ಮಾಡಿದೆ.
ರಾಮನಗರ: ಅತ್ತೆಯನ್ನು ಕೊಲೆ ಮಾಡಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಯಾಗಿದ್ದ ಮಾಜಿ ಸೈನಿಕನಿಗೆ ರಾಮನಗರ ಜಿಲ್ಲಾ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ.
ಕಳೆದ ವರ್ಷ ಅತ್ತೆಯನ್ನೇ ಬರ್ಬರವಾಗಿ ಹತ್ಯೆ ಮಾಡಿದ್ದ ಮಾಜಿ ಸೈನಿಕ ನಾಗರಾಜುವನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿತ್ತು. ಮೂರನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯವು ವಿಚಾರಣೆ ನಡೆಸಿ, ಈ ಪ್ರಕರಣ ಕುರಿತಂತೆ ಇಂದು ಶಿಕ್ಷೆಯ ತೀರ್ಪು ನೀಡಿದೆ. ನ್ಯಾಯಧೀಶರಾದ ಗೋಪಾಲಕೃಷ್ಣ ರೈರವರು ಮಾಜಿ ಸೈನಿಕ ನಾಗರಾಜುವಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ.
ಏನಿದು ಪ್ರಕರಣ?
ರಾಮನಗರ ತಾಲೂಕಿನ ದಾಸೇಗೌಡನದೊಡ್ಡಿ ಗ್ರಾಮದವನಾದ ನಾಗರಾಜ್, ಬಿಎಸ್‍ಎಫ್ ನಲ್ಲಿ ಸುಮಾರು 20 ವರ್ಷಗಳ ಕಾಲ ಸೇವೆ ಸಲ್ಲಿಸಿ ಗಡಿಯಲ್ಲಿ ದೇಶ ಸೇವೆ ಮಾಡಿದ್ದ. ಮೂವತ್ತು ವರ್ಷಗಳ ಹಿಂದೆ ಮೃತಳ ಪುತ್ರಿ ಮಂಗಳಾ ಎಂಬುವವರನ್ನ ಮದುವೆಯಾಗಿದ್ದ. ದಂಪತಿಗೆ ಮುದ್ದಾದ ಇಬ್ಬರು ಮಕ್ಕಳು ಇದ್ದಾರೆ. ನಾಗರಾಜ್ ಕಳೆದ ಆರು ವರ್ಷಗಳಿಂದ ಕೆಂಚನಕುಪ್ಪೆ ಗ್ರಾಮದಲ್ಲಿಯೇ ನೆಲೆಸಿದ್ದನು.
ನಾಗರಾಜ್ ಸಂಸಾರದಲ್ಲಿ ಪದೇ ಪದೇ ಜಗಳ ನಡೆಯುತ್ತಿತ್ತು. ಈ ಸಂಬಂಧ ರಾಜಿ ಪಂಚಾಯಿತಿ ಕೂಡ ನಡೆದಿತ್ತು. ಅಲ್ಲದೆ ಕಳೆದ ವರ್ಷದ ಏಪ್ರಿಲ್ ನಲ್ಲಿ ಜಗಳ ನಡೆದು ಮಂಗಲಾ ತನ್ನ ತಾಯಿ ಮನೆ ಸೇರಿದ್ದರು. ಇದೇ ವಿಚಾರವಾಗಿ ಏಪ್ರಿಲ್ 7ರಂದು ಗಲಾಟೆ ಮಾಡುತ್ತಾ, ಮಚ್ಚು ಹಿಡಿದು ಅತ್ತೆ ಮನೆ ಬಳಿ ಬಂದ ನಾಗರಾಜ್, ಪತ್ನಿ ಮಂಗಳರನ್ನ ಹುಡುಕಿದ್ದಾನೆ. ಈ ವೇಳೆ ಕೈಯಲ್ಲಿ ಮಚ್ಚು ಕಂಡ, ಅತ್ತೆ ಚಿಕ್ಕತಿಮ್ಮಮ್ಮ ನಾಗರಾಜ್ ನನ್ನ ಪ್ರಶ್ನಿಸಿದ್ದಾರೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಇದರಿಂದ ಕುಪಿತಗೊಂಡ ನಾಗರಾಜ್ ಮಚ್ಚಿನಿಂದ ಅತ್ತೆಯನ್ನು ಕೊಚ್ಚಿ ಕೊಲೆ ಮಾಡಿದ್ದ.
ಮಾಸ್ಕೋ: ನೀವು ಚಿಕ್ಕವರಿದ್ದಾಗ ಪೊಪಾಯ್ ದಿ ಸೇಲರ್ ಎಂಬ ಕಾರ್ಟೂನ್ ನೋಡೇ ಇರ್ತೀರ. ಆದ್ರೆ ನಿಜಜೀವನದಲ್ಲಿ ಪೊಪಾಯ್ ಥರ ಬೈಸೆಪ್ಸ್ ಇರೋಕೆ ಸಾಧ್ಯನಾ? ಇಲ್ಲೊಬ್ಬ ಮಾಜಿ ಸೈನಿಕ ಪೊಪಾಯ್ ನಂತಹ ಬೈಸೆಪ್ಸ್ ಪ್ರದರ್ಶಿಸಿ ಅಚ್ಚರಿ ಮೂಡಿಸಿದ್ದಾರೆ.
ರಷ್ಯಾದ 21 ವರ್ಷದ ತೆರೆಶಿನ್ 24 ಇಂಚಿನ ಬೈಸೆಪ್ಸ್ ಹೊಂದಿದ್ದು ಜಗತ್ತಿನಾದ್ಯಂತ ಫೇಮಸ್ ಆಗಿದ್ದಾರೆ. ಈ ರೀತಿ ಬಸೆಪ್ಸ್‍ಗಾಗಿ ಇವರು ಸೈಟ್ ಎನ್‍ಹಾನ್ಸ್‍ಮೆಂಟ್ ಆಯಿಲ್ ಅಥವಾ ಸಿಂಥಾಲ್ ಬಳಸ್ತಾರಂತೆ. ಈ ಎಣ್ಣೆಯನ್ನ ತೋಳುಗಳಿಗೆ ಇಂಜೆಕ್ಟ್ ಮಾಡಿಕೊಳ್ಳೋ ಮೂಲಕ ಇಷ್ಟು ದೊಡ್ಡ ಬೈಸೆಪ್ಸ್ ಬರಿಸಿಕೊಂಡಿದ್ದಾರೆ. ಇದರಿಂದ ಇವರ ಆರೋಗ್ಯಕ್ಕೆ ಹಾನಿಯಾಗಬಹುದು ಎಂದು ವೈದ್ಯರು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ.
ಸೈನ್ಯವನ್ನ ಬಿಟ್ಟ ನಂತರ ಕೇವಲ 10 ದಿನಗಳಲ್ಲಿ ಇವರು 10 ಇಂಚಿನ ಬೈಸೆಪ್ಸ್ ಬರಿಸಿಕೊಂಡಿದ್ದಾರೆ. ವಿಡಿಯೋದಲ್ಲಿ ತೆರೆಶಿನ್ ಹೆಮ್ಮೆಯಿಂದ ತನ್ನ ಬೈಸೆಪ್ಸ್ ಪ್ರದರ್ಶಿಸಿದ್ದಾರೆ.
ಆದ್ರೆ ಈ ರೀತಿಯ ಬಾಡಿ ಬಿಲ್ಡಿಂಗ್‍ನಿಂದ ಅನಹುತವಾಗಬಹುದು ಎಂದು ವೈದ್ಯರಾದ ಯುರೀ ಸೆರೆಬ್ರಿಯಾನ್‍ಸ್ಕಿನಿ ಹೇಳಿದ್ದಾರೆ. ಅವರ ತೋಳುಗಳ ಚಲನೆಯೇ ನಿಂತುಬಿಡಬಹುದು. ಅವರ ತೋಳುಗಳು ತುಂಬಾ ಗಟ್ಟಿಯಾಗಿ ಮೇಲೆತ್ತಲು ಕೂಡ ಸಾಧ್ಯವಾಗದಂತೆ ಆಗಬಹುದು. ಅವರು ವಿಕಲಾಂಗರಂತೆ ಆಗಬಹುದು ಎಂದಿದ್ದಾರೆ.
ಅಲ್ಲದೆ ವೃತ್ತಿಪರ ಪವರ್ ಲಿಫ್ಟರ್ ಆದ ಕಿರಿಲ್ ಸಿಚೆವ್ ಕೂಡ ಇದು ನಿಜವೆಂದು ಹೇಳಿದ್ದಾರೆ. ಅವರ ಮುಖದಲ್ಲೇ ನೋಡಬಹುದು. ಏನೋ ಅನಾರೋಗ್ಯವಿರುವಂತೆ ಕಾಣುತ್ತದೆ ಎಂದು ಅವರು ಹೇಳಿದ್ದಾರೆ. ಇವರಿಗೆ ವೈದ್ಯಕೀಯ ನೆರವಿನ ಅಗತ್ಯವಿದೆ. ಕೇವಲ ಅವರ ತೋಳುಗಳನ್ನ ಸರಿಪಡಿಸಿ ರಕ್ತವನ್ನ ಶುದ್ಧಿಗೊಳಿಸುವುದಷ್ಟೇ ಅಲ್ಲ. ಮನೋವೈಜ್ಞಾನಿಕ ಸಹಾಯ ಕೂಡ ಅಗತ್ಯವಿದೆ ಎಂದು ಹೇಳಿದ್ದಾರೆ.
ಆದ್ರೆ ತೆರೆಶಿನ್ ಮಾತ್ರ ತನ್ನ ಈ ಕ್ರಮವನ್ನ ಮುಂದುವರಿಸೋದಾಗಿ ಹೇಳಿದ್ದಾರೆ. ವರ್ಕೌಟ್ ಮಾಡುವುದರ ಜೊತೆಗೆ ಒಂದು ದಿನ ಬಾಡಿ ಬಿಲ್ಡಿಂಗ್ ದಾಖಲೆ ಮುರಿಯೋ ಕನಸು ಹೊಂದಿದ್ದಾರೆ. ಇಷ್ಟು ದೊಡ್ಡ ಬೈಸೆಪ್ಸ್‍ಗಾಗಿ ಲೀಟರ್‍ಗಟ್ಟಲೆ ಎಣ್ಣೆಯನ್ನ ತೋಳಿಗೆ ಇಂಜೆಕ್ಟ್ ಮಾಡಿಕೊಳ್ಳಬಹುದು ಎಂದು ತೆರೆಶಿನ್ ಹೇಳಿದ್ದಾರೆ.