ಬೆಂಗಳೂರು: ಹಾಸನ ನಡೆದಿರುವ ಗಲಾಟೆಯ ಬಗ್ಗೆ ಮಾಹಿತಿಯನ್ನು ಪಡೆದಿದ್ದು, ಬಿಜೆಪಿ ಶಾಸಕರ ಅಭಿಮಾನಿಗಳೇ ಪ್ರಚೋದನೆ ನೀಡಿದ್ದಾರೆ. ಆದರೆ ಯಾರು ತಪ್ಪು ಮಾಡಿದ್ದಾರೆ ಅವರ ವಿರುದ್ಧ ಕ್ರಮಕೈಗೊಳ್ಳಲು ಸೂಚನೆ ನೀಡಿದ್ದೇನೆ ಎಂದು ಸಿಎಂ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿ ಸ್ಪಷ್ಟನೆ ನೀಡಿದ ಸಿಎಂ ಎಚ್‍ಡಿಕೆ, ಹಾಸನದಲ್ಲಿ ನಡೆದ ಘಟನೆಯಲ್ಲಿ ಕೆಲ ದೇವೇಗೌಡರ ಬಗ್ಗೆ ಅವಹೇಳನಕಾರಿ ಹೇಳಿಕೆ ಖಂಡಿಸಿ ಅಭಿಮಾನಿಗಳು ಅಥವಾ ಪಕ್ಷದ ಕಾರ್ಯಕರ್ತರೋ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಬಿಜೆಪಿ ಶಾಸಕರ ಬೆಂಬಲಿಗರೇ ಉದ್ರೇಕಕಾರಿಯಾಗಿ ಮಾತನಾಡಿ ಪ್ರಚೋದನೆ ನೀಡಿದ್ದಾರೆ. ಆದರೆ ಜೆಡಿಎಸ್ ಕಾರ್ಯಕರ್ತರೇ ಆದರೂ ಕೂಡ ಕಾನೂನು ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಯಾವುದೇ ಕಾರಣಕ್ಕೂ ಅವರನ್ನು ಕ್ಷಮಿಸಲ್ಲ ಎಂದು ಸಿಎಂ ತಿಳಿಸಿದ್ದಾರೆ. ಇದನ್ನು ಓದಿ: ದೇವೇಗೌಡರ ವಿಕೆಟ್ ಉರುಳುತ್ತೆ ಎಂದ ಪ್ರೀತಮ್ ಗೌಡ ವಿರುದ್ಧ ಪ್ರತಿಭಟನೆ

ಈ ಬಗ್ಗೆ ಮಾಧ್ಯಮಗಳಲ್ಲಿ ಬಂದ ವರದಿಯನ್ನು ಗಮನಿಸಿ ತಕ್ಷಣ ಮೈಸೂರು ವಲಯ ಐಜಿ ಮತ್ತು ಹಾಸನ ಎಸ್‍ಪಿ ಅವರಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ. ಯಾರೇ ತಪ್ಪು ಮಾಡಿದ್ದರೂ ಕೂಡ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ. ಆದರೆ ದೇವೇಗೌಡರ ಬಗ್ಗೆ ಆವಹೇಳನಕಾರಿಯಾಗಿ ಮಾತನಾಡಿದ್ದೇ ಕಾರಣ ಎಂಬುವುದು ನನಗೆ ಮಾಹಿತಿ ಲಭಿಸಿದೆ. ದೇವೇಗೌಡರ ಕುಟುಂಬ ಯಾವತ್ತೂ ಗೂಂಡಾ ಸಂಸ್ಕೃತಿಯನ್ನ ಬೆಂಬಲಿಸಲ್ಲ. ದೇವೇಗೌಡರ ಬಗ್ಗೆ ಇಂತಹ ಹೇಳಿಕೆಗಳು ಇದೇ ಮೊದಲೇನಲ್ಲ. ಈ ಹಿಂದೆ ಇಂತಹ ಅನೇಕ ದಾಳಿಗಳು ದೇವೇಗೌಡರ ಮೇಲೆ ಆಗಿವೆ. ಇದಕ್ಕೆಲ್ಲಾ ತಲೆ ಕೆಡಿಸಿಕೊಳ್ಳುವುದಿಲ್ಲ. ನೀವು ಗಲಾಟೆ ಮಾಡಿಕೊಂಡರೆ ನನಗೆ ಅಪಮಾನ ಮಾಡಿದಂತೆ ಎಂದು ಕಾರ್ಯಕರ್ತರಿಗೆ ಬಿಸಿ ಮುಟ್ಟಿಸಿದ್ದೇನೆ ಎಂದು ಹೇಳಿದ್ದಾಗಿ ವಿವರಿಸಿದರು.
ನಮ್ಮ ಕುಟುಂಬದ ಮೇಲೆ ದೇವರ ಅನುಕಂಪವಿದ್ದು, ಯಾವುದೋ ಒಂದು ಶಕ್ತಿ ನಮ್ಮನ್ನ ಕಾಪಾಡುತ್ತಿದೆ. ಇಲ್ಲದಿದ್ದರೆ ಸರ್ಕಾರ ನಡೆಸಲು ಆಗುತ್ತಿತ್ತಾ? ಇಷ್ಟೆಲ್ಲಾ ಗಂಡಾಂತರಗಳು ಬಂದರೂ ಕೂಡ ಸರ್ಕಾರ ಉತ್ತಮವಾಗಿ ನಡೆಯುತ್ತಿದೆ ಎಂದು ಭರವಸೆ ನೀಡಿದರು.
https://www.youtube.com/watch?v=V2Yszl9rLEg
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv




























