Tag: former Prime Minister Deve Gowda

  • ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿಯಾದ ತೆಲಂಗಾಣ ಸಿಎಂ ಚಂದ್ರಶೇಖರ್ ರಾವ್

    ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿಯಾದ ತೆಲಂಗಾಣ ಸಿಎಂ ಚಂದ್ರಶೇಖರ್ ರಾವ್

    ಬೆಂಗಳೂರು: ವಿವಿಧ ರಾಜಕೀಯ ಪಕ್ಷಗಳನ್ನು ಭೇಟಿ ಮಾಡುತ್ತಿರುವ ತೆಲಂಗಾಣ ಮುಖ್ಯಮಂತ್ರಿ ಮತ್ತು ಟಿಆರ್‌ಎಸ್ ಅಧ್ಯಕ್ಷ ಚಂದ್ರಶೇಖರ್ ರಾವ್ ಅವರು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರನ್ನು ಭೇಟಿಯಾಗಿದ್ದಾರೆ.

    ಗುರುವಾರ ಕರ್ನಾಟಕಕ್ಕೆ ಒಂದು ದಿನದ ಮಟ್ಟಿಗೆ ಪ್ರವಾಸ ಕೈಗೊಂಡಿರುವ ಚಂದ್ರಶೇಖರ್ ರಾವ್ ಅವರು, ಹೆಚ್.ಡಿ. ದೇವೇಗೌಡ, ಅವರ ಪುತ್ರ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಬೆಂಗಳೂರಿನ ಪದ್ಮನಾಭನಗರ ನಿವಾಸದಲ್ಲಿ ಭೇಟಿಯಾಗಿದ್ದಾರೆ. ಈ ವೇಳೆ ಪ್ರಸಕ್ತ ರಾಜಕೀಯ ವಿದ್ಯಮಾನಗಳು ಮತ್ತು ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರದಂತೆ ಅನುಸರಿಸಬೇಕಾದ ಕಾರ್ಯತಂತ್ರಗಳ ಕುರಿತಂತೆ ಮಾತುಕತೆ ನಡೆಸಿದ್ದಾರೆ. ಇದನ್ನೂ ಓದಿ: ಗುಲ್ಬರ್ಗಾ ವಿವಿ ಬಿಕಾಂ 5ನೇ ಸೆಮಿಸ್ಟರ್ ಪ್ರಶ್ನೆ ಪತ್ರಿಕೆ ಲೀಕ್ – ಪರೀಕ್ಷೆ ಮುಂದೂಡಿಕೆ

    ರಾಜ್ಯಗಳಲ್ಲಿ ಸಂಖ್ಯಾಬಲ ಇಲ್ಲದಿದ್ದರೂ ಇತರೆ ಪಕ್ಷಗಳ ಸದಸ್ಯರನ್ನು ಬಗ್ಗುಬಡಿಯುವ ಮೂಲಕ ಬಿಜೆಪಿ ಸರ್ಕಾರ ರಚಿಸಲು ಅನೈತಿಕ ಚಟುವಟಿಕೆಗಳನ್ನು ನಡೆಸುವ ಸಾಧ್ಯತೆ ಇದೆ ಎಂದು ತೆಲಂಗಾಣ ರಾಷ್ಟ್ರ ಸಮಿತಿ ಮೂಲಗಳು ತಿಳಿಸಿವೆ  ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ಆರೋಪ – ಡಿಕೆಶಿ ವಿರುದ್ಧ ಇಡಿ ಚಾರ್ಜ್ ಶೀಟ್ ಸಲ್ಲಿಕೆ

    ಬೆಂಗಳೂರು ಪ್ರವಾಸದ ಹಿನ್ನೆಲೆ ದೇವೇಗೌಡರ ನಿವಾಸದ ಬಳಿ ಕೆಸಿಆರ್ ಅವರ ಅಭಿಮಾನಿಗಳು ಬೃಹತ್ ಕಟೌಟ್‍ಗಳನ್ನು ನಿರ್ಮಿಸಿದ್ದರು. ದೇವೇಗೌಡ ಮತ್ತು ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ ನಂತರ ಹೈದರಾಬಾದ್‍ಗೆ ಹಿಂದಿರುಗಿದ ಕೆಸಿಆರ್, ಗುರುವಾರ ಸಂಜೆ ಹೈದರಾಬಾದ್‍ನ ಇಂಟರ್‍ನ್ಯಾಷನಲ್ ಕನ್ವೆನ್ಷನ್ ಸೆಂಟರ್‌ನಲ್ಲಿ ಶ್ರೀನಿವಾಸ್ ಗೌಡ್ ಅವರ ಪುತ್ರಿಯ ವಿವಾಹದಲ್ಲಿ ಪಾಲ್ಗೊಳ್ಳಲಿದ್ದಾರೆ.

  • ಯಾವನ್ರೀ ಅವ್ನು  ಶ್ರೀನಿವಾಸ್ ಪ್ರಸಾದ್ – ಏಕವಚನದಲ್ಲೇ ರೇವಣ್ಣ ವಾಗ್ದಾಳಿ

    ಯಾವನ್ರೀ ಅವ್ನು ಶ್ರೀನಿವಾಸ್ ಪ್ರಸಾದ್ – ಏಕವಚನದಲ್ಲೇ ರೇವಣ್ಣ ವಾಗ್ದಾಳಿ

    ಹಾಸನ: ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ವಿರುದ್ಧ ಟೀಕೆ ಮಾಡಿ ಮಾತನಾಡಿದ್ದ ಬಿಜೆಪಿ ಮುಖಂಡ ಶ್ರೀನಿವಾಸ ಪ್ರಸಾದ್ ಅವರನ್ನು ಲೋಕೋಪಯೋಗಿ ಸಚಿವ ರೇವಣ್ಣ ಅವರು ಏಕವನದಲ್ಲೇ ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ.

    ಹೊಳೆನರಸೀಪುರ ತಾಲೂಕು ಕಳ್ಳಿಕೊಪ್ಪಲು ಗ್ರಾಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಂದೆಯನ್ನ ಟೀಕಿಸಿದ್ದಕ್ಕೆ ಕೆಂಡಾಮಂಡಲವಾಗಿ ತಿರುಗೇಟು ನೀಡಿ, ಯಾವನ್ರೀ ಅವ್ನು ಶ್ರೀನಿವಾಸ್ ಪ್ರಸಾದ್? ಪ್ರಧಾನಿಯಾಗಿ ದೇವೇಗೌಡರು ದೆಹಲಿಗೆ ಓಡಾಡ್ಕೊಂಡು ಇರಲಿಲ್ಲ. ದೇವೇಗೌಡರು ಏನು ಕೆಲಸ ಮಾಡಿದ್ದಾರೆ ಎಂಬುವುದು ಚರ್ಚೆ ಆಗಲಿ ಎಂದು ಸವಾಲು ಎಸೆದರು.

    ರಾಜ್ಯದಲ್ಲಿ ಬಿಜೆಪಿಗೆ 18 ಮಂದಿ ಸಂಸದರನ್ನು ನೀಡಿದರೂ ಕೂಡ ಕಾವೇರಿ ಹಾಗೂ ಮಹದಾಯಿ ಬಗ್ಗೆ ಹೋರಾಟ ಮಾಡಿಲ್ಲ. ಆದರೆ ಈಗ ಟಿವಿ ಮುಂದೆ ಟೀಕೆ ಮಾಡುತ್ತಾರೆ. ಶಿವಮೊಗ್ಗವನ್ನು ಯಡಿಯೂರಪ್ಪ ಅವರ ಮಕ್ಕಳಿಗೆ ಬರೆದುಕೊಟ್ಟಿದ್ದಾರ? ಅಚನಾಕ್ ಆಗಿ ಶಾಸಕನಾದರೆ ಹೀಗೆ ಮಾತನಾಡುತ್ತಾರೆ. ಈ ಬಾರಿ ಬಿಜೆಪಿಗೆ ಜನ ಸರಿಯಾದ ಪಾಠ ಕಲಿಸುತ್ತಾರೆ ಎಂದು ಹೆಸರು ಹೇಳದೆಯೇ ಪ್ರೀತಂಗೌಡ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನು ಓದಿ: ಕರ್ನಾಟಕ ಗೌಡರ ಅಪ್ಪನ ಮನೆ ಆಸ್ತಿನಾ – ಬಿಜೆಪಿ ಶಾಸಕ ಪ್ರೀತಂಗೌಡ ಪ್ರಶ್ನೆ 

    ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಮುಂದುವರಿಯುತ್ತದೆ. ಯಾವುದೇ ಅಪಾಯ ಇಲ್ಲ, ಮಾಧ್ಯಮದವರು ಅಂತಹ ಹೇಳಿಕೆಗಳ ಬಗ್ಗೆ ಹೆಚ್ಚು ಮಹತ್ವ ನೀಡುವುದು ಬೇಡ. ದೇವೇಗೌಡ್ರು, ಸಿಎಂ ಕುಮಾರಸ್ವಾಮಿ ಏನು ಕೆಲಸ ಮಾಡಿದ್ದಾರೆ ಎನ್ನುವುದು ಜನರಿಗೆ ತಿಳಿದಿದೆ. ಜನರಿಗೆ ಕೂಲಿ ನೀಡುವಂತೆ ದಿನಕ್ಕೆ 17 ರೂ. ನೀಡುತ್ತಿದ್ದಾರೆ. ರೈತರ ಸಾಲಮನ್ನಾ ಮಾಡುವ ಕಾರ್ಯ ರಾಜ್ಯ ಸರ್ಕಾರ ಮಾಡಿದೆ. ರಾಜ್ಯದಲ್ಲಿ ಬಿಜೆಪಿ ಪಕ್ಷ ಕೆಲ ದಿನಗಳಲ್ಲೇ ಮೂಲೆಗುಂಪಾಗುತ್ತದೆ. ಜನರಿಗೆ ಎಲ್ಲವೂ ಕೂಡ ತಿಳಿದಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಲೋಕಸಭಾ ಚುನಾವಣೆಯಲ್ಲೂ ಕೂಡ ನಮ್ಮ ಮೈತ್ರಿ ಮುಂದುವರಿಯುತ್ತದೆ. ರಾಜ್ಯದಲ್ಲಿ ಜೆಡಿಎಸ್ ಎಷ್ಟು ಸ್ಥಾನ ಗೆಲ್ಲುವ ಶಕ್ತಿಯನ್ನು ಹೊಂದಿದೆಯೋ ಅಷ್ಟು ಸ್ಥಾನಗಳನ್ನು ದೇವೇಗೌಡರು ರಾಹುಲ್ ಗಾಂಧಿ ಅವರನ್ನು ಕೇಳಿದ್ದಾರೆ. ಶೀಘ್ರವೇ ಈ ಬಗ್ಗೆ ಮಾಹಿತಿ ನೀಡಲಾಗುವುದು ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ – ಎಚ್ ವಿಶ್ವನಾಥ್ ಹೇಳಿದ್ದು ಹೀಗೆ

    ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ – ಎಚ್ ವಿಶ್ವನಾಥ್ ಹೇಳಿದ್ದು ಹೀಗೆ

    ಬೆಂಗಳೂರು: ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾದ ಬಳಿಕ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರ ಚುಕ್ಕಾಣಿ ಪಡೆದಿದ್ದ ಎಚ್ ವಿಶ್ವನಾಥ್ ತಮ್ಮ ರಾಜೀನಾಮೆ ತೀರ್ಮಾನದಿಂದ ಹಿಂದೆ ಸರಿಯುತ್ತಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

    ನಗರದಲ್ಲಿ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇವೇಗೌಡರು ನನ್ನನ್ನ ನಂಬಿ ಅಧ್ಯಕ್ಷ ಸ್ಥಾನ ಕೊಟ್ಟಿದ್ದರು. ಆದರೆ ನನ್ನ ಆರೋಗ್ಯ ಕ್ಷೀಣಿಸುತ್ತಿರುವ ಕಾರಣ ಪಕ್ಷದ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ತಿಳಿಸಿದ್ದೆ. ದೇವೇಗೌಡರು ನನ್ನ ಮನವಿ ತಿರಸ್ಕಾರ ಮಾಡಿದರು. ದೇವೇಗೌಡರ ವಿಶ್ವಾಸದ ಬೇಡಿಯ ಬಂಧನಕ್ಕೆ ಒಳಗಾದ ನಾನು, ನನ್ನ ನಿರ್ಧಾರ ವಾಪಸ್ ಪಡೆದಿದ್ದೇನೆ. ಪಕ್ಷ ಸಂಘಟನೆ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡೋಣ ಎಂದು ತಿಳಿಸಿದರು.

    ಸಮ್ಮಿಶ್ರ ಸರ್ಕಾರ ರಾಜ್ಯದಲ್ಲಿದ್ದು, ಪಕ್ಷಕ್ಕಾಗಿ ಮರ ಹತ್ತಿ ಬಾವುಟ ಕಟ್ಟಿರುವ ಕಾರ್ಯಕರ್ತರು ಇದ್ದಾರೆ. ಅಂತಹ ಕಾರ್ಯಕರ್ತರಿಗೆ ಪಕ್ಷದಲ್ಲಿ ಅಧಿಕಾರ ಕೊಡಬೇಕು. ಶೀಘ್ರದಲ್ಲೇ ಸಿಎಂ ಹಾಗೂ ಪಕ್ಷದ ವರಿಷ್ಠರು ಕಾರ್ಯಕರ್ತರಿಗೆ ಸ್ಥಾನಮಾನ ಕೊಡುತ್ತಾರೆ. ದೇಶ್ಯಾದ್ಯಂತ ಪ್ರಾದೇಶಿಕ ಪಕ್ಷಗಳು ಪ್ರಬಲವಾಗುತ್ತಿದ್ದು, ಮುಂದಿನ ದಿನಗಳಲ್ಲಿ ವಿಶೇಷ ಸ್ಥಾನವನ್ನು ಗಳಿಸಲಿವೆ. ಇಂದು ಹಿಂದಿನ ಜನತಾ ಪರಿವಾರ ಒಂದುಗೂಡಿಸುವ ಅನಿವಾರ್ಯತೆ ಇದೆ. ದೇವೇಗೌಡರು ಕೂಡ ಸಮ್ಮಿಶ್ರ ಸರ್ಕಾರದಲ್ಲೇ ಪ್ರಧಾನಿಯಾಗಿ 10 ತಿಂಗಳು ಅದ್ಭುತ ಕೆಲಸ ಮಾಡಿದರು. ರಾಜ್ಯದಲ್ಲೂ ಸಮ್ಮಿಶ್ರ ಸರ್ಕಾರ ಉತ್ತಮವಾಗಿ ಕೆಲಸ ಮಾಡುತ್ತದೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.

    ಅಂಬರೀಶ್ ಅಂತ್ಯ ಸಂಸ್ಕಾರದ ಕೆಲಸವನ್ನು ಸರ್ಕಾರ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೆರವೇರಿಸಿದೆ. ಮಂಡ್ಯ ಬಸ್ ದುರಂತ, ವಿಷ ಪ್ರಾಷಾಣ ದುರಂತ ಘಟನೆಗಳನ್ನು ಸಮರ್ಥವಾಗಿ ಸರ್ಕಾರ ನಿಭಾಯಿಸಿತು. ಹಿಂದಿನ ಸರ್ಕಾರಗಳು ಸಾಲ ಮಾಡಿ ಹೋಗಿದ್ದರು, ರಾಜ್ಯದ ಆರ್ಥಿಕ ಪರಿಸ್ಥಿತಿ ಕಂಡ ಸಿಎಂ ಕುಮಾರಸ್ವಾಮಿ ಅವರು 43 ಸಾವಿರ ಕೋಟಿ ರೂ. ರೈತರ ಸಾಲಮನ್ನಾ ಮಾಡುವ ಧೈರ್ಯ ಮಾಡಿದ್ದಾರೆ. ಇದೆಲ್ಲವನ್ನ ಕಾರ್ಯಕರ್ತರು ಜನರಿಗೆ ತಿಳಿಸಬೇಕಿದ್ದು, ವಿಭಾಗದ ಮೂಲಕ ಪಕ್ಷ ಕಟ್ಟುವ ಕೆಲಸ ಮಾಡಬೇಕು ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮೋದಿ ಭಯಕ್ಕೆ ಹಾವು ಮುಂಗುಸಿಯಂತಿದ್ದವರು ಒಂದಾಗಿದ್ದಾರೆ: ಸಿಟಿ ರವಿ ವ್ಯಂಗ್ಯ

    ಮೋದಿ ಭಯಕ್ಕೆ ಹಾವು ಮುಂಗುಸಿಯಂತಿದ್ದವರು ಒಂದಾಗಿದ್ದಾರೆ: ಸಿಟಿ ರವಿ ವ್ಯಂಗ್ಯ

    ಬೆಂಗಳೂರು: ಹಾವು ಮುಂಗುಸಿಯಂತೆ ಸದಾ ಕಿತ್ತಾಡುತ್ತಿದ್ದವರು ಈಗ ಮೋದಿ ಭಯಕ್ಕಾಗಿ ಒಂದಾಗಿದ್ದಾರೆ. ಸ್ವಲ್ಪ ದಿನ ಅವರ ಗುಣದಂತೆ ಕಿತ್ತಾಡಿಕೊಂಡೇ ವಾಪಸ್ ಬರುತ್ತಾರೆ ಎಂದು ಶಾಸಕ ಸಿಟಿ ರವಿ ಹೇಳಿದ್ದಾರೆ.

    ನಗರದಲ್ಲಿ ಏರ್ಪಡಿಸಿದ್ದ ಮತ್ತೆ ಮೋದಿ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಟಿ ರವಿ ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡ, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಹಾಲಿ ಸಿಎಂ ಕುಮಾರಸ್ವಾಮಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಬಗ್ಗೆ ವ್ಯಂಗ್ಯ ವಾಡಿದರು.

    ಹಿಂದೆ ದೇವೇಗೌಡರು ಇಂತ ನೀಚ ಮುಖ್ಯಮಂತ್ರಿಯನ್ನ ನೋಡಿಲ್ಲ ಎಂದಿದ್ದರು. ಅಲ್ಲದೇ ಇಂತವರನ್ನ ಬೆಳೆಸಿ ತಪ್ಪು ಮಾಡಿದೆ ಎಂದು ಆರೋಪಿಸಿದ್ದರು. ಆದರೆ ಈಗ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಹಾವು ಮುಂಗುಸಿ ಗುಣ ಸದಾ ಕಿತ್ತಾಡೋದು. ಈಗ ಕಿತ್ತಾಡುವವರು ಮೋದಿ ಭಯಕ್ಕಾಗಿ ಒಂದಾಗಿದ್ದಾರೆ. ಸ್ವಲ್ಪ ದಿನ ಅವರ ಗುಣದಂತೆ ಕಿತ್ತಾಡಿಕೊಂಡೇ ವಾಪಸ್ ಬರ್ತಾರೆ ಎಂದರು. ಇದನ್ನೂ ಓದಿ:  ಒಂದೇ ವೇದಿಕೆಯಲ್ಲಿ ಮಾಧ್ಯಮಗಳ ವಿರುದ್ಧ ಗರಂ ಆದ ಗುರು ಶಿಷ್ಯರು!

    ಈ ಕಾರ್ಯಕ್ರಮದ ಪ್ರಮುಖ ಉದ್ದೇಶ ಮೋದಿ ಅವರ ಬೆಳೆದು ಬಂದ ಹಾದಿ ಕಂಡು ಈ ನಿರ್ಧಾರ ಮಾಡಿದ್ದೇವೆ. ಏಕೆಂದರೆ ಯಾವುದೇ ಕುಟುಂಬ, ಹಣ, ಜಾತಿ ಬೆಂಬಲವಿಲ್ಲದ ವ್ಯಕ್ತಿ ಉನ್ನತ ಉದ್ದೇಶದಿಂದ ಪ್ರಧಾನಿಯಾಗಿದ್ದಾರೆ. ಅದ್ದರಿಂದಲೇ ಕೆಲ ಮಂದಿಗೆ ಅವರ ಮೇಲೆ ಭಾರಿ ಕೋಪವಿದೆ. ಆದರೆ ತಮ್ಮ ಆಡಳಿತವನ್ನೇ ಮಾದರಿಯಾಗಿ ಮಾಡಿ ದೇಶಕ್ಕೂ ಮಾದರಿ ಆಡಳಿತ ನೀಡಿದ್ದಾರೆ. ಅವರು ದೇಶದ ಘಟನೆಯನ್ನು ಎತ್ತಿ ಹಿಡಿದಿದ್ದಾರೆ. ದೇಶದ ಹೆಮ್ಮೆಯ ನಾಯಕತ್ವವನ್ನು ಮುಂದುವರಿಸಬೇಕಿದೆ. ಅದ್ದರಿಂದ ಮತ್ತೊಮ್ಮೆ ಮೋದಿ ಅವರಿಗೆ ಅಧಿಕಾರ ನೀಡೋಣ ಎಂದು ಮನವಿ ಮಾಡಿದರು.

    ಬಳಿಕ ಮಾತನಾಡಿದ ರಂಗಕರ್ಮಿ ಪ್ರಕಾಶ್ ಬೆಳವಾಡಿ, ನೆರೆ ಬಂದಾಗ ಹಾವು ಮುಂಗುಸಿ ಒಂದಾಗುತ್ತವೆ. ಆದರೆ ಪರಸ್ಪರ ಒಬ್ಬರಿಗೊಬ್ಬರು ನೋಡಿಕೊಳ್ಳಲ್ಲ. ಅವರ ಮನೆಯವರನ್ನೇ ನೋಡಿಕೊಳ್ಳೋಕೆ ಅವರಿಗೆ ಸಮಯ ಇಲ್ಲ. ಇನ್ನೂ ರಾಜ್ಯದ ಜನರನ್ನ ಹೇಗೆ ನೋಡಿಕೊಳುತ್ತಾರೆ ಎಂದು ಕುಟುಕಿದರು.  ಇದನ್ನೂ ಓದಿ: 12 ವರ್ಷಗಳ ಬಳಿಕ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಸಿದ್ದು, ಎಚ್‍ಡಿಡಿ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಶೀಘ್ರವೇ ಜೆಡಿಎಸ್ ರಾಜ್ಯಾಧ್ಯಕ್ಷರ ಬದಲಾವಣೆ: ಹೆಚ್‍ಡಿಡಿ

    ಶೀಘ್ರವೇ ಜೆಡಿಎಸ್ ರಾಜ್ಯಾಧ್ಯಕ್ಷರ ಬದಲಾವಣೆ: ಹೆಚ್‍ಡಿಡಿ

    ಬೆಂಗಳೂರು: ಹೆಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿರುವ ಕಾರಣ ರಾಜ್ಯಾಧ್ಯಕ್ಷರಾಗಿ ಜೆಡಿಎಸ್ ಸಂಘಟನೆ ಮಾಡುವುದು ಕಷ್ಟ ಸಾಧ್ಯ. ಅದ್ದರಿಂದ ರಾಜ್ಯಾಧ್ಯಕ್ಷರ ಜೊತೆ ಪದಾಧಿಕಾರಿಗಳ ಬದಲಾವಣೆ ಆಗಬೇಕಿದೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ. ದೇವೇಗೌಡ ಹೇಳಿದ್ದಾರೆ.

    ಇಂದು ಆಯೋಜಿಸಲಾಗಿದ್ದ ಪಕ್ಷದ ಸಭೆ ಮುಕ್ತಾಯದ ಬಳಿಕ ಮಾತನಾಡಿದ ಅವರು, ರಾಜ್ಯಾಧ್ಯಕ್ಷರು ಪದಾಧಿಕಾರಿಗಳ ನೇಮಕಕ್ಕೆ ಸಮಿತಿ ರಚನೆ ಆಗಲಿದೆ. ಪಕ್ಷದ ನಿಯಮಾವಳಿ ಗಮನದಲ್ಲಿಟ್ಟು ಸಮಿತಿ ರಚನೆ ಮಾಡಲಾಗುತ್ತದೆ. ಪದಾಧಿಕಾರಿಗಳ ಆಯ್ಕೆ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ. ಮುಂದಿನ ದಿನಗಳಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪಕ್ಷ ಸಂಘಟನೆಗೆ ತೊಂದರೆಯಾಗಬಾರದು ಎಂದು ಚಿಂತಿಸಲಾಗಿದೆ ಎಂದರು.

    ಸದ್ಯ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದ ರೇಸ್ ನಲ್ಲಿ ಮಧು ಬಂಗಾರಪ್ಪ, ಪಿಜಿಆರ್ ಸಿಂಧ್ಯಾ, ವಿಶ್ವನಾಥ್ ಹೆಸರು ಕೇಳಿ ಬರುತ್ತಿದ್ದು, ಈ ಕುರಿತು ಅಂತಿಮ ತೀರ್ಮಾನ ಹೊರ ಬೀಳಬೇಕಿದೆ. ಇಂದಿನ ಸಭೆಯಲ್ಲಿ ಜಫ್ರುಲ್ಲಾ ಖಾನ್, ಎಂಎಲ್‍ಸಿ ಶರವಣ, ಶಾಸಕ ಗೋಪಾಲಯ್ಯ, ಮನೋಹರ್, ಅಪ್ಪಾಜಿಗೌಡ, ಬೆಂಗಳೂರು ನಗರ ವಕ್ತಾರ ಪ್ರಕಾಶ್, ವಿವಿಧ ಜಿಲ್ಲೆಗಳ ಜಿಲ್ಲಾಧ್ಯಕ್ಷರು ಭಾಗಿಯಾಗಿದ್ದರು.

    ಇದೇ ವೇಳೆ ಲೋಕಸಭೆ ಚುನಾವಣೆಗೆ ಮೈತ್ರಿ ಕುರಿತು ಪ್ರತಿಕ್ರಿಯೆ ನೀಡಿದ ದೇವೇಗೌಡರು, ಚುನಾವಣೆ ಹೊಂದಾಣಿಕೆಗೆ ನಮ್ಮಿಂದ ತೊಂದರೆಯಾಗಬಾರದು. ಮುಂದಿನ ತಿಂಗಳು ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಸಲಾಗುವುದು. ಆದರೆ ಇಂದಿನ ಸಭೆಯಲ್ಲಿ ಲೋಕಸಭೆ ಚುನಾವಣೆಯಲ್ಲಿ ಸೀಟು ಬಿಟ್ಟು ಕೊಡುವ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ಅಲ್ಲದೇ ಕಾಂಗ್ರೆಸ್ ಪಕ್ಷದೊಂದಿಗೂ ಯಾವುದೇ ಚರ್ಚೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.

    ಪಕ್ಷದ ಘಟಕ ಅಧ್ಯಕ್ಷರ ಸಭೆಯ ಕುರಿತು ಪ್ರತಿಕ್ರಿಯೆ ನೀಡಿದ ಸಿಎಂ ಕುಮಾರಸ್ವಾಮಿ ಅವರು, ಮಾಜಿ ಪ್ರಧಾನಿ ದೇವೇಗೌಡ ಅವರಿಗೆ ಪಕ್ಷ ಸಂಘಟನೆ ದೃಷ್ಟಿಯಿಂದ ಹೊಸ ಪದಾದಿಕಾರಿಗಳ ನೇಮಕದ ಬಗ್ಗೆ ನಾನೇ ಸಭೆ ಕರೆಯಲು ಹೇಳಿದ್ದೆ. ನಾನೇ ಸಲಹೆ ಸೂಚನೆ ಕೊಟ್ಟಿದ್ದೇನೆ, ಏಳೆಂಟು ಜನರ ಹೆಸರು ಕೇಳಿಬಂದಿದೆ. ಪಕ್ಷದ ಹಿರಿಯ ಮುಖಂಡರ ಅಭಿಪ್ರಾಯ ಸಂಗ್ರಹಿಸಿದ ಬಳಿಕ ಈ ಕುರಿತು ಒಂದು ವಾರದಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದರು.

  • ಲೋಕಸಭೆಯಲ್ಲಿ ಮೋದಿ ಸೋಲಿಸಲು ತನ್ನ ರಣತಂತ್ರವನ್ನು ಬಿಚ್ಚಿಟ್ಟ ದೇವೇಗೌಡ

    ಲೋಕಸಭೆಯಲ್ಲಿ ಮೋದಿ ಸೋಲಿಸಲು ತನ್ನ ರಣತಂತ್ರವನ್ನು ಬಿಚ್ಚಿಟ್ಟ ದೇವೇಗೌಡ

    ನವದೆಹಲಿ: ರಾಜ್ಯದಲ್ಲಿ ಬಿಜೆಪಿಯನ್ನು ದೂರವಿಟ್ಟು ಸಮ್ಮಿಶ್ರ ಸರ್ಕಾರ ರಚನೆಯಲ್ಲಿ ಮುಖ್ಯ ಪಾತ್ರವಹಿಸಿದ್ದ ಮಾಜಿ ಪ್ರಧಾನಿ ದೇವೇಗೌಡ ಅವರು ಲೋಕಸಭೆಯಲ್ಲೂ ಮೋದಿಯನ್ನು ಸೋಲಿಸಲು ರಣತಂತ್ರ ಹೆಣೆಯುತ್ತಿದ್ದಾರೆ.

    ಬಿಜೆಪಿಯನ್ನು ಸೋಲಿಸಲೇಬೇಕೆಂಬ ಹಠದಲ್ಲಿರುವ ಕಾಂಗ್ರೆಸ್ ನಿರ್ಧಾರಕ್ಕೆ ಬೆಂಬಲವಾಗಿರುವ ದೇವೇಗೌಡರು ಈಗ ರಾಷ್ಟ್ರ ರಾಜಕಾರಣದಲ್ಲಿ ಮುಂದೆ ನಡೆಯಬಹುದಾದ ಮೈತ್ರಿಯ ಬಗ್ಗೆ ಸುಳಿವು ನೀಡಿದ್ದಾರೆ. ದೆಹಲಿಯಲ್ಲಿ ಕರ್ನಾಟಕ ಭವನದಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿದ ವೇಳೆ ಚುನಾವಣೆ ಯಾವ ರೀತಿಯ ಸಿದ್ಧತೆ ನಡೆಸಲಾಗುತ್ತಿದೆ ಎನ್ನುವ ಬಗ್ಗೆ ಕಿರು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

    ಕಾಂಗ್ರೆಸ್ ಸಹಭಾಗಿತ್ವದಲ್ಲಿಯೇ ಲೋಕಸಭೆ ಚುನಾವಣೆಯನ್ನು ಎದುರಿಸುತ್ತೇವೆ. ನಮ್ಮ ಮೈತ್ರಿಯಲ್ಲಿ ಬಿಎಸ್‍ಪಿ ಕೂಡಾ ಇರಲಿದೆ. ಹೀಗಾಗಿ ಜೆಡಿಎಸ್ ಪಾಲಿನ ಸೀಟುಗಳಲ್ಲಿ ಒಂದು ಸ್ಥಾನವನ್ನು ಬಿಎಸ್‍ಪಿಗೆ ಬಿಟ್ಟುಕೊಡುತ್ತೇವೆ. ಅಷ್ಟೇ ಅಲ್ಲದೇ ಉತ್ತರ ಪ್ರದೇಶದಲ್ಲಿ ಬಿಎಸ್‍ಪಿ ತನ್ನ ಕೆಲವು ಕ್ಷೇತ್ರಗಳನ್ನು ಕಾಂಗ್ರೆಸ್ಸಿಗೆ ಬಿಟ್ಟುಕೊಡಲಿದ್ದು, ಈ ಕುರಿತು ಮೈತ್ರಿ ಪಕ್ಷಗಳಲ್ಲಿ ಚಿಂತನೆ ನಡೆದಿವೆ. ಲೋಕಸಭೆ ಚುನಾವಣೆ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಜೊತೆ ಚರ್ಚೆ ಮಾಡಬೇಕಾಗುತ್ತದೆ ಎಂದು ತಮ್ಮ ತಯಾರಿಯನ್ನು ದೇವೇಗೌಡ ಅವರು ತೆರೆದಿಟ್ಟರು.

    ಬಿಹಾರದಲ್ಲಿ ರಾಷ್ಟ್ರೀಯ ಜನತಾ ದಳ (ಆರ್ ಜೆಡಿ) ಹಾಗೂ ಜನತಾ ದಳ ಯುನೈಟೆಡ್ (ಜೆಡಿಯು) ನಾಯಕ ನಿತೀಶ್ ಕುಮಾರ್ ಒಂದಾಗಲಿದ್ದಾರೆ. ಮೈತ್ರಿ ಕೂಟದಲ್ಲಿ ಬಿಎಸ್‍ಪಿಗೂ ಜವಾಬ್ದಾರಿಯುತ ಸ್ಥಾನ ಕೊಡಲಾಗಿದ್ದು, ಕರ್ನಾಟಕದಲ್ಲಿ ಬಿಎಸ್‍ಪಿ ಸ್ಪರ್ಧಿಸುವ ಆಸಕ್ತಿ ತೋರಿದರೆ ಜೆಡಿಎಸ್ ಕೋಟಾದಲ್ಲಿ ಕೆಲವು ಸ್ಥಾನ ನೀಡುವ ಯೋಜನೆ ಇದೆ. ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್‍ಗೆ ಎಷ್ಟು ಸ್ಥಾನ ಅಂತಾ ಇನ್ನು ಚರ್ಚೆಯಾಗಿಲ್ಲ. ನಾನು ಮಂಡ್ಯದಿಂದ ಸ್ವರ್ಧಿಸುವ ಬಗ್ಗೆಯೂ ಚರ್ಚೆಯಾಗಿದೆ. ರಾಜ್ಯದಲ್ಲಿ ಕೆಲವು ಸಣ್ಣಪುಟ್ಟ ಸಮಸ್ಯೆಗಳಿದ್ದು, ಅವುಗಳು ಬಗೆಹರಿದ ಮೇಲೆ ಮಾತುಕತೆ ನಡೆಸಲಾಗುತ್ತೆ ಎಂದು ಎಂದು ತಮ್ಮ ಕಾರ್ಯತಂತ್ರದ ಬಗ್ಗೆ ವಿವರ ನೀಡಿದರು.

    ಲೋಕಸಭೆ ಚುನಾವಣೆ ನವೆಂಬರ್ ಅಥವಾ ಡಿಸೆಂಬರ್ ನಲ್ಲಿ ನಡೆಯುವ ಸಾಧ್ಯತೆ ಇದೆ. ಹೀಗಾಗಿ ಬಿಜೆಪಿ ಭಾರೀ ಸಿದ್ಧತೆ ನಡೆಸುತ್ತಿದೆ. ಆದರೆ ಎನ್‍ಡಿಎ ಪರ್ಯಾಯ ಪಕ್ಷಗಳು ಒಡೆದು ಹೋಗಿವೆ ಎಂದು ಅರ್ಥೈಸಿಕೊಳ್ಳುವ ಅವಶ್ಯಕತೆ ಇಲ್ಲ. ಸಣ್ಣ ರಾಜ್ಯಗಳಲ್ಲಿ ಲೋಕಸಭೆ ಜೊತೆಗೆ ವಿಧಾನಸಭೆ ಚುನಾವಣೆ ನಡೆಸುವ ತಂತ್ರವನ್ನು ಬಿಜೆಪಿ ಹೂಡುತ್ತಿದೆ. ಈಗಾಗಲೇ ಪ್ರತಿಯೊಂದು ರಾಜ್ಯಕ್ಕೂ ಚುನಾವಣೆಯ ಸೂಚನೆಯನ್ನು ಬಿಜೆಪಿ ನೀಡುತ್ತಿದೆ. ಹೀಗಾಗಿ ಮುಂಗಾರು ಅಧಿವೇಶನವೇ ಕೊನೆಯ ಅಧಿವೇಶನ ಆದರೂ ಅಚ್ಚರಿ ಇಲ್ಲ. ಇನ್ನೇನು ಕೆಲವೇ ದಿನಗಳಲ್ಲಿ ನಾನು ಎನ್‍ಡಿಎ ಹೊರತಾದ ಪಕ್ಷಗಳ ನಾಯಕರನ್ನು ಭೇಟಿ ಮಾಡಲಿದ್ದೇನೆ ಎಂದು ಅವರು ತಿಳಿಸಿದರು.

    ಮಾಜಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಭಾವನೆಗಳನ್ನು ಹೇಳಿಕೊಂಡಿದ್ದಾರೆ. ಹೀಗಾಗಿ ಅವರ ಮಾತುಗಳಿಗೆ ನಾನು ಪ್ರತಿಕ್ರಿಯೆ ಕೊಡಲ್ಲ. ಮಾತುಕತೆ ಆಗಿರುವುದು ಕಾಂಗ್ರೆಸ್-ಜೆಡಿಎಸ್ ನಡುವೆ. ಒಪ್ಪಂದ ಪ್ರಕಾರವೇ ಸರ್ಕಾರ ನಡೆಯಲಿದ್ದು, ಈ ಬಗ್ಗೆ ರಾಹುಲ್ ಗಾಂಧಿ- ಮುಖ್ಯಮಂತ್ರಿ ಕುಮಾರಸ್ವಾಮಿ ಚರ್ಚೆ ಮಾಡುತ್ತಾರೆ ಎಂದು ಸಿದ್ದರಾಮಯ್ಯ ಅವರಿಗೆ ಟಾಂಗ್ ಕೊಟ್ಟರು.

    ಸಿದ್ದರಾಮಯ್ಯನವರನ್ನು ಕಡೆಗಣಿಸಿದರೆ ಸರ್ಕಾರ ಉಳಿಯುತ್ತಾ ಎಂದು ಪ್ರಶ್ನಿಸಿದ್ದ ಬಸವ ಕಲ್ಯಾಣ ಶಾಸಕ ನಾರಾಯಣ ರಾವ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ನಾರಾಯಣ ರಾವ್ ನನ್ನ ಸ್ನೇಹಿತ. ಹೀಗಾಗಿ ಮಾಧ್ಯಮದವರು ಆತಂಕ ಪಡುವ ಅವಶ್ಯಕತೆ ಇಲ್ಲ. ಸರ್ಕಾರ ಬೀಳಲ್ಲ ಸುಭದ್ರವಾಗಿರುತ್ತದೆ ಎಂದರು.

    ಪಕ್ಷದಲ್ಲಿ ಕೆಲವರು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಸೇತರ ಮೈತ್ರಿ ಬಗ್ಗೆ ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಂಡಿದ್ದರಿಂದ ಕಾಂಗ್ರೆಸ್ಸೇತರ ಮೈತ್ರಿ ಬಗ್ಗೆ ಯೋಚನೆ ಇಲ್ಲ ಎಂದು ಹೇಳಿದರು.

  • ಪ್ರಾದೇಶಿಕ ಪಕ್ಷದ ಶಕ್ತಿ ಕೇಂದ್ರಕ್ಕೆ ತಿಳಿಸಬೇಕಿದೆ, ನನಗೊಂದು ಅವಕಾಶ ಕೊಡಿ: ಕುಮಾರಸ್ವಾಮಿ

    ಪ್ರಾದೇಶಿಕ ಪಕ್ಷದ ಶಕ್ತಿ ಕೇಂದ್ರಕ್ಕೆ ತಿಳಿಸಬೇಕಿದೆ, ನನಗೊಂದು ಅವಕಾಶ ಕೊಡಿ: ಕುಮಾರಸ್ವಾಮಿ

    ಬೆಂಗಳೂರು: ಕಾಂಗ್ರೆಸ್‍ನ ಜನಾಶೀರ್ವಾದ, ಬಿಜೆಪಿಯ ಪರಿವರ್ತನಾ ಯಾತ್ರೆಗೆ ಸೆಡ್ಡು ಹೊಡೆಯಲು ಜೆಡಿಎಸ್ ಇಂದು ‘ವಿಕಾಸ ಪರ್ವ’ ಸಮಾವೇಶ ಆಯೋಜಿಸಿತ್ತು. ಬೆಂಗಳೂರಿನ ಯಲಹಂಕದ ಬಳಿ ನಡೆದ ಬೃಹತ್ ಶಕ್ತಿ ಪ್ರದರ್ಶನದಲ್ಲಿ ರಾಷ್ಟ್ರೀಯ ಪಕ್ಷಗಳ ವಿರುದ್ಧ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‍ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

    ಸಮಾವೇಶ ಉದ್ಘಾಟಿಸಿ ಮಾತನಾಡಿದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಕುಮಾರಸ್ವಾಮಿ ಸಿಎಂ ಆಗಿದ್ದಾಗ ಸುಪ್ರೀಂಕೋರ್ಟಿಗೆ ಸಲ್ಲಿಸಿದ್ದ ಮೇಲ್ಮನವಿಯ ಫಲವಾಗಿ ಇವತ್ತು ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ ಜಯ ಸಿಕ್ಕಿದೆ. ರಾಜ್ಯದಲ್ಲಿ ಜೆಡಿಎಸ್ ಪಕ್ಷ ನಿರ್ನಾಮವಾಗಿದೆ ಎಂಬ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದರು. ಜೆಡಿಎಸ್ ಪಕ್ಷವನ್ನು ನಾಶಪಡಿಸಲು ಯಾರಿಂದಲೂ ಸಾಧ್ಯವಿಲ್ಲ ಹೇಳಿದರು.

    ಈ ವೇಳೆ ಸಮಾವೇಶದಲ್ಲಿ ನೆರೆದಿದ್ದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಕುಮಾರಸ್ವಾಮಿ ಅವರು, ಕರ್ನಾಟಕಕ್ಕೆ ಆಗಿರುವ ಅನ್ಯಾಯ ತಡೆಯಲು ಪ್ರಾದೇಶಿಕ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದು ಅನಿವಾರ್ಯವಿದೆ. ರಾಜ್ಯದ ಋಣ ತೀರಿಸಲು ನಾನು ಎರಡನೇ ಜನ್ಮ ಎತ್ತಿದ್ದೇನೆ. ನನ್ನ ಜೀವನವನ್ನ ನಿಮ್ಮ ಸೇವೆಗೆ ಸಮರ್ಪಿಸಿಕೊಂಡಿದ್ದೇನೆ. ನನಗೊಂದು ಅವಕಾಶ ನೀಡಿ ಮತದಾರರಲ್ಲಿ ಮನವಿ ಮಾಡಿದರು.

    ಮಾಜಿ ಪ್ರಧಾನಿ ದೇವೇಗೌಡರು ಕನ್ನಡಿಗರು. ಪ್ರಧಾನಿ ಆಗಿ 10 ತಿಂಗಳು ಸೇವೆ ಮಾಡಿದ್ದಾರೆ. ಅವರಿಗಾಗಿ ಪಕ್ಷ ಅಧಿಕಾರ ನೀಡಿ. ನಿಮ್ಮ ಋಣ ತೀರಿಸುತ್ತೇನೆ. ರೈತರು ಎಂದು ಸಾಲ ಮಾಡದ ರೀತಿ ಮಾಡುತ್ತೇನೆ. ಆಟೋ ಚಾಲಕರಿಗೆ ದುಡಿಮೆಯ ಶಕ್ತಿ ನೀಡುತ್ತೇನೆ. ಒಂದು ಬಾರಿ ನನ್ನನ್ನ ಪರೀಕ್ಷೆ ಮಾಡಿ ಎಂದರು.

    ಅಧಿಕಾರ ಆಸೆ ಇಲ್ಲ: ನಾನು ಜೀವನದಲ್ಲಿ ನಾನು ಎಲ್ಲಾ ನೋಡಿದ್ದೇನೆ. ನನಗಾಗಿ ನಾನು ಸಿಎಂ ಆಗಬೇಕು ಎಂಬ ಆಸೆ ನನಗಿಲ್ಲ ಆದರೆ ರಾಜ್ಯದ ಜನತೆಗಾಗಿ, ಬಡವರಿಗಾಗಿ, ನೊಂದವರಿಗಾಗಿ ರೈತರಿಗಾಗಿ ಸಿಎಂ ಆಗಬೇಕು ಎಂಬ ಹಂಬಲವಿದೆ. ರೈತರ ಕುಟುಂಬಗಳು ನೋವು ತಿನ್ನುತ್ತಿವೆ. ನಮ್ಮ ಕುಟುಂಬದ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ನಾವು ಅಧಿಕಾರಕ್ಕಾಗಿ ಯಾವತ್ತು ಆಸೆ ಪಟ್ಟಿಲ್ಲ. ಎಂದು ನಾಟಕ ಮಾಡಿಲ್ಲ. ನಾನು ಭಾವನಾತ್ಮಕ ಜೀವಿ ಎಂದು ವೇದಿಕೆಯಲ್ಲೇ ಭಾವುಕರಾದರು.

    ಮುಂದಿನ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಪಾಠ ಕಲಿಸಲು ಕೇಂದ್ರ ಸರ್ಕಾರಗಳಿಂದ ಅನ್ಯಾಯವಾಗುತ್ತಿರುವುದು ತಡೆಯಲು ಪ್ರಾದೇಶಿಕ ಪಕ್ಷದ ಅವಶ್ಯವಿದೆ. ಇಂದಿನ ಕಾರ್ಯಕ್ರಮದ ಯಶಸ್ಸು ಜನರಿಗೆ ಸಲ್ಲಬೇಕಿದೆ. ದೇವೇಗೌಡ ಅವರು ದೇಶದ ಪ್ರಧಾನಿಯಾಗಿ ಕೆಂಪು ಕೋಟೆಯಲ್ಲಿ ನಾಡ ಧ್ವಜ ಹಾರಿಸಿದ್ದಾರೆ. ನಾನು ಕಾಂಗ್ರೆಸ್, ಬಿಜೆಪಿ ಮನೆ ಬಾಗಿಲಿಗೆ ಹೊಗೊಲ್ಲ. ನಿಮ್ಮ ಮನೆಯ ಬಾಗಿಲಿಗೆ ನಾನು ಬರುತ್ತೇನೆ. ನನಗೆ ಒಂದು ಅವಕಾಶ ಕೊಡಿ. ಶಿಕ್ಷಣಕ್ಕೆ ಆದ್ಯತೆ ನೀಡುತ್ತೇನೆ. ಆರೋಗ್ಯ ಯೋಜನೆಯನ್ನು ನೀಡುತ್ತೇನೆ. ರಾಜ್ಯದ ಅಭಿವೃದ್ಧಿಗೆ ಸಮಗ್ರ ಯೋಜನೆ ಸಿದ್ಧಪಡಿಸಲಾಗಿದೆ. ದೇಶಕ್ಕೆ ಮಾದರಿಯಾಗುವ ರಾಜ್ಯವಾಗಿ ಕರ್ನಾಟಕವನ್ನು ಅಭಿವೃದ್ದಿ ಮಾಡುತ್ತೇನೆ ಎಂದರು.

    ಜಾತಿ ರಾಜಕಾರಣ: ವೀರಶೈವ -ಲಿಂಗಾಯತ ಹೋರಾಟಕ್ಕೆ ಸಿಎಂ ಸಿದ್ದರಾಮಯ್ಯ ಕಾರಣ. ಜಾತಿ, ಹಣದ ವ್ಯಾಮೋಹ ಬಿಡಿ. ನಾನು ಯಾವುದೇ ಜಾತಿಗೆ ಮೀಸಲಿಲ್ಲ. ನ್ಯಾಯ ಕೇಳಿದ ರೈತಗೆ ಜೈಲಿಗೆ ಕಳಿಸಿದ ಸರ್ಕಾರ ಇದು. ರೈತರಿ ವಿರುದ್ಧ ಲಾಟಿ ಚಾರ್ಜ್ ಮಾಡಿದ ಇಂತಹ ಸರ್ಕಾರ ನಿಮಗೆ ಬೇಕಾ?. 6ನೇ ವೇತನ ಆಯೋಗ ಜಾರಿಗೆ ಸಿಎಂ ಸಿದ್ದರಾಮಯ್ಯ ಒದ್ದಾಡುತ್ತಿದ್ದಾರೆ. ಸರ್ಕಾರಿ ನೌಕರರು ಈ ಕುರಿತು ನಿರ್ಧಾರ ಮಾಡಿ. ಜೆಡಿಎಸ್ ಪಕ್ಷ ಎಲ್ಲಿದೆ ಎಂದು ಸಿದ್ದರಾಮಯ್ಯ ಅವರು ಪ್ರಶ್ನಿಸಿಸುತ್ತಾರೆ. ಜೆಡಿಎಸ್ ಇಲ್ಲಿದೆ ಅಂತ ನೀವು ತೋರಿಸಿದ್ದೀರಾ. ಇವತ್ತಿನ ಕಾರ್ಯಕ್ರಮ ನೋಡಿ ಸಿದ್ದರಾಮಯ್ಯ ಅವರೇ ಎಂದು ವಾಗ್ದಾಳಿ ನಡೆಸಿದರು.

  • ಬಿಎಸ್‍ವೈ ಬಿಜೆಪಿಯಲ್ಲಿ ರಬ್ಬರ್ ಸ್ಟಾಂಪ್- ಉತ್ತರ ಕನ್ನಡ ಅಭಿವೃದ್ಧಿಗೆ ಜೆಡಿಎಸ್ ಸೇರ್ಪಡೆ: ಆನಂದ್ ಅಸ್ನೋಟಿಕರ್

    ಬಿಎಸ್‍ವೈ ಬಿಜೆಪಿಯಲ್ಲಿ ರಬ್ಬರ್ ಸ್ಟಾಂಪ್- ಉತ್ತರ ಕನ್ನಡ ಅಭಿವೃದ್ಧಿಗೆ ಜೆಡಿಎಸ್ ಸೇರ್ಪಡೆ: ಆನಂದ್ ಅಸ್ನೋಟಿಕರ್

    ಬೆಂಗಳೂರು: ಯಡಿಯೂರಪ್ಪ ಅವರು ಬಿಜೆಪಿಯಲ್ಲಿ ರಬ್ಬರ್ ಸ್ಟ್ಯಾಂಪ್ ಆಗಿದ್ದಾರೆ ಎಂದು ಆನಂದ್ ಅಸ್ನೋಟಿಕರ್ ಹೇಳಿದ್ದಾರೆ.

    ಮಾಜಿ ಪ್ರಧಾನಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ ದೇವೇಗೌಡ ಹಾಗೂ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಸಮ್ಮುಖದಲ್ಲಿ ನಗರದ ಪದ್ಮನಾಭನಗರ ನಿವಾಸದಲ್ಲಿ ಆನಂದ್ ಅಸ್ನೋಟಿಕರ್ ಜೆಡಿಎಸ್ ಸೇರ್ಪಡೆಯಾದರು.

    ಜೆಡಿಎಸ್‍ಗೆ ಸೇರ್ಪಡೆಯಾದ ಬಳಿಕ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ನಾಯಕರು ಸ್ಥಳೀಯ ಸಮಸ್ಯೆಗಳಿಗೆ ಸ್ಪಂದನೆ ನೀಡುತ್ತಿಲ್ಲ. ಏನೇ ಕೇಳಿದರು ಅಮಿತ್ ಶಾ ಎಂಬುದಾಗಿ ಉತ್ತರ ನೀಡುತ್ತಾರೆ ಎಂದು ಆರೋಪಿಸಿದರು.

    ನಮ್ಮ ಜಿಲ್ಲೆಯಲ್ಲೂ ಐದು ಬಾರಿ ಸಂಸದರಾಗಿ ಆಯ್ಕೆಯಾದ ನಾಯಕರು ಇದ್ದಾರೆ. ಆದರೆ ಅವರಿಂದ ಜಿಲ್ಲೆಗೆ ಯಾವುದೇ ಪ್ರಯೋಜನ ಆಗಿಲ್ಲ. ಸಂಸದ ಅನಂತ್‍ಕುಮಾರ್ ಅವರು ಜಿಲ್ಲೆಯಲ್ಲಿ ಹಿಡಿತ ಸಾಧಿಸಿದ್ದಾರೆ. ಬೇರೆ ಯಾವ ನಾಯಕರು ಬೆಳವಣಿಗೆ ಹೊಂದಲು ಸಾಧ್ಯವಿಲ್ಲ. ರಾಜ್ಯದಲ್ಲೂ ಬಿಎಸ್‍ವೈ ಹಾಗೂ ಶೋಭಾ ಕರಂದ್ಲಾಜೆ, ಅನಂತಕುಮಾರ್ ಮಾತ್ರ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದು ಇತರೇ ನಾಯಕರನ್ನು ಮೂಲೆ ಗುಂಪು ಮಾಡಲಾಗುತ್ತಿದೆ ಎಂದು ದೂರಿದರು.

    ನಮ್ಮದು ಹಿಂದುಳಿದ ಜಿಲ್ಲೆಯಾಗಿದ್ದು, ಪ್ರಸ್ತುತ ಶಾಂತಿ ಪ್ರಿಯ ಜಿಲ್ಲೆಯಲ್ಲಿ ಕೋಮು ಗಲಾಟೆ ನಡೆಯುತ್ತಿದೆ. ನಮ್ಮ ಜಿಲ್ಲೆ ಅಭಿವೃದ್ಧಿಯಾಗಿಲ್ಲ. ಉತ್ತರ ಕನ್ನಡ ಜಿಲ್ಲೆ ಅಭಿವೃದ್ಧಿ ಮಾಡಿಸುವ ಸಲುವಾಗಿ ಈ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದರು.

    2013 ರ ವಿಧಾನಸಭಾ ಚುನಾವಣೆಯಲ್ಲಿ ಸೋಲಿನ ನಂತರ ಅಸ್ನೋಟಿಕರ್ ಕಾಣೆಯಾಗಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಕಾಣೆಯಾಗಿಲ್ಲ ನಿರಂತರವಾಗಿ ಕಳೆದ ಐದು ವರ್ಷ ಕ್ಷೇತ್ರದ ಜನರ ಜೊತೆ ಸಂಪರ್ಕದಲ್ಲಿ ಇದ್ದು, ಜನರ ಸಮಸ್ಯೆಗಳನ್ನು ನೋಡಿದ್ದೇನೆ. ಈ ಹಿಂದಿನಿಂದಲೂ ಸ್ವಾಭಿಮಾನದಿಂದ ರಾಜಕೀಯ ಮಾಡಿಕೊಂಡು ಬಂದಿದ್ದೇವೆ. ಬಿಜೆಪಿಯಲ್ಲಿ ಬಹಳಷ್ಟು ನೋವು ಕೊಟ್ಟರು. ಬಹಳ ನೋವಾಗಿದೆ. ಹೀಗಾಗಿ ನಮ್ಮ ಜನರ ಆಪೇಕ್ಷೆ ಮೇರೆಗೆ ಪ್ರಾದೇಶಿಕ ಪಕ್ಷ ಜೆಡಿಎಸ್ ಪಕ್ಷ ಸೇರ್ಪಡೆಯಾಗುತ್ತಿದ್ದೇನೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷದ ಅಗತ್ಯವಿದ್ದು, ರಾಜ್ಯಕ್ಕೆ ಕುಮಾರಸ್ವಾಮಿ ಅವರ ಕೊಡುಗೆ ಅಪಾರವಿದೆ. ಅವರ ಆಡಳಿತದಲ್ಲಿ ಉತ್ತಮ ಕಾರ್ಯಗಳು ನಡೆಯಲಿದೆ ಎಂದರು.

    ಇದೇ ವೇಳೆ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದ ಅವರು, ಈ ಹಿಂದೆ ಶಾಸಕನಾಗಿ ಆಯ್ಕೆಯಾದ 40 ದಿನಗಳಲ್ಲಿ ರಾಜೀನಾಮೆ ನೀಡಿ ಪಕ್ಷಕ್ಕೆ ಬೆಂಬಲ ನೀಡಿದೆ. ಆದರೆ ನಮ್ಮನ್ನು ಇಂದು ವಿಚಾರ ಮಾಡುವವರು ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಅನಂತ್ ಕುಮಾರ್ ಅವರನ್ನು ಎದುರಿಸಲಾಗದೆ ಪಕ್ಷ ತೊರೆಯುತ್ತಿದ್ದಾರೆ ಎಂಬ ಆರೋಪವನ್ನು ಉತ್ತರಿಸಿದ ಅವರು, ಅನಂತ್ ಕುಮಾರ್ ಅವರನ್ನು ಯಾರು ಎದುರಿಸಲು ಸಾಧ್ಯವಿಲ್ಲ. ಅವರು ವಿರುದ್ಧ ಮಾತಾಡುವುದು ನಮ್ಮ ತಪ್ಪಾಗುತ್ತದೆ. ಈ ಕುರಿತು ಹೆಚ್ಚು ಮಾತನಾಡುವುದಿಲ್ಲ ಎಂದು ತಿಳಿಸಿದರು.

    ದೇವೇಗೌಡರು ಮಾತನಾಡಿ ಸಂಕ್ರಾಂತಿಯ ಶುಭ ದಿನ ಆನಂದ್ ಆಸ್ನೋಟಿಕ್ ಪಕ್ಷ ಸೇರ್ಪಡೆಯಾಗಿದ್ದಾರೆ. ಅವರು ಪಕ್ಷಕ್ಕೆ ಸೇರ್ಪಡೆಯಾಗಿರುವುದು ಉತ್ತರ ಕನ್ನಡ ಭಾಗದಲ್ಲಿ ಪಕ್ಷಕ್ಕೆ ಹೆಚ್ಚು ಶಕ್ತಿ ತುಂಬಿದೆ. ಉತ್ತರ ಕನ್ನಡ ಭಾಗದಲ್ಲಿ 4-5 ಸ್ಥಾನ ಗಳಿಸುವ ವಿಶ್ವಾಸ ಎಂದರು.

    ಕುಮಾರಸ್ವಾಮಿ ಮಾತನಾಡಿ ಆಸ್ನೋಟಿಕರ್ ರಂತಹ ಹಲವು ನಾಯಕರು ಬೇರೆ ಬೇರೆ ಪಕ್ಷದಿಂದ ಮುಂದಿನ ದಿನಗಳಲ್ಲಿ ನಮ್ಮ ಪಕ್ಷ ಸೇರ್ಪಡೆಯಾಗಲಿದ್ದು, ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಜೆಡಿಎಸ್ 113 ಸ್ಥಾನಗಳಿಸಿ ಸರ್ಕಾರ ರಚನೆ ಮಾಡುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  • ಹೊಸ ವರ್ಷಾಚರಣೆಗೆ ಸಿಂಗಾಪುರಕ್ಕೆ ಹಾರಿದ ಹೆಚ್‍ಡಿಕೆ ಕುಟುಂಬ- ಇತ್ತ ಸಿಎಂ ವಿರುದ್ಧ ಎಚ್‍ಡಿಡಿ ವಾಗ್ದಾಳಿ

    ಹೊಸ ವರ್ಷಾಚರಣೆಗೆ ಸಿಂಗಾಪುರಕ್ಕೆ ಹಾರಿದ ಹೆಚ್‍ಡಿಕೆ ಕುಟುಂಬ- ಇತ್ತ ಸಿಎಂ ವಿರುದ್ಧ ಎಚ್‍ಡಿಡಿ ವಾಗ್ದಾಳಿ

    ಬೆಂಗಳೂರು: ಹೊಸ ವರ್ಷದ ಆಚರಣೆ ಮಾಡುವ ಹಿನ್ನೆಲೆಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ ಅವರ ಕುಟುಂಬ ಸಿಂಗಾಪುರಕ್ಕೆ ಪ್ರವಾಸ ಬೆಳೆಸಿದೆ.

    ಕುಮಾರಸ್ವಾಮಿ ಅವರಿಗೆ ಪತ್ನಿ ಅನಿತಾ ಕುಮಾರಸ್ವಾಮಿ, ಪುತ್ರ ನಿಖಿಲ್ ಹಾಗೂ ಶಾಸಕ ಸಾ.ರಾ ಮಹೇಶ್ ಸಾಥ್ ನೀಡಿದ್ದಾರೆ. ಪ್ರತಿ ವರ್ಷದಂತೆ ಕುಮಾರಸ್ವಾಮಿ ಕುಟುಂಬ ಈ ವರ್ಷವೂ ಸಿಂಗಾಪುರಕ್ಕೆ ತೆರಳಿದ್ದು, ಹೊಸ ವರ್ಷ ಆಚರಣೆಯ ನಂತರ ಜನವರಿ 2 ಕ್ಕೆ ಬೆಂಗಳೂರಿಗೆ ಹಿಂದಿರುಗಲಿದ್ದಾರೆ.

    ಇತ್ತ ಬೆಂಗಳೂರಿನ ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿ ನಡೆಸಿದರು. ಅಯ್ಯೋ ಯಾವ ಮುಖ್ಯಮಂತ್ರಿಯೂ ಇವರ ರೀತಿ ಮಾಡಿಲ್ಲ. ಏನ್ ಕಿರೀಟ, ಕತ್ತಿ, ಗುರಾಣಿ ಹಿಡಿದುಕೊಳ್ಳುತ್ತಿದ್ದಾರೆ. ಇವರೊಬ್ಬರೇ ನವ ಕರ್ನಾಟಕ ನಿರ್ಮಾಣ ಮಾಡುವವರು. ಇಷ್ಟು ದಿನ ಎಲ್ಲಿ ಹೋಗಿದ್ದರು ಎಂದು ವ್ಯಂಗ್ಯವಾಡಿದ್ದಾರೆ.

    ಸಿದ್ದರಾಮಯ್ಯ ಅವರು ಅಭಿವೃದ್ಧಿ ಮಾಡಿದ್ದೇನೆ ಎಂದು ಹೇಳುವ ಭರದಲ್ಲಿ, ಹಿಂದಿನವರು ಸಾಧನೆ ಮಾಡಿಲ್ಲ ಎಂದು ಜರಿದಿದ್ದಾರೆ. ಈ ವೇಳೆ ನನ್ನ ಹೆಸರನ್ನೂ ಪ್ರಸ್ತಾಪಿಸಿದ್ದಾರೆ. ಆದರೆ ಸಿದ್ದರಾಮಯ್ಯ ಅವರು ಹಣಕಾಸು ಸಚಿವರಾಗಿ ಎಷ್ಟು ಕೆಲಸ ಮಾಡಿದ್ದಾರೆ ಎನ್ನುವುದು ಗೊತ್ತಿದೆ. ಸರ್ಕಾರಿ ಹಣದಿಂದ ದುಂದುವೆಚ್ಚ ಮಾಡಿ ಪ್ರವಾಸ ಮಾಡುತ್ತಾರೆ. ನವ ಕರ್ನಾಟಕ ನಿರ್ಮಾಣ ಮಾಡುವುದಕ್ಕೆ ಇವರೊಬ್ಬರೇ ಹುಟ್ಟಿದ್ದು, ಎಲ್ಲವು ಜನರಿಗೆ ಗೊತ್ತಾಗುತ್ತದೆ. ಬಿರುಸಿನ ಮಾತು ಸ್ವಲ್ಪ ಕಡಿಮೆ ಮಾಡಬೇಕು, ಇಲ್ಲವಾದರೆ ಅದಕ್ಕೆ ಪ್ರತಿಯಾಗಿ ಬಿರುಸಿನ ಪ್ರತಿಕ್ರಿಯೆ ಕೊಡುವ ಶಕ್ತಿ ನಮಗೂ ಇದೆ ಎಂದರು.

    ಕಾಂಗ್ರೆಸ್ ಭಿನ್ನಾಭಿಪ್ರಾಯ: ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರು ಒಂದು ಪ್ರವಾಸ ಮಾಡಿದರೆ, ಸಿಎಂ ಅವರು ಒಂದು ಪ್ರವಾಸ ಮಾಡುತ್ತಾರೆ. ಆದರೆ ನಮ್ಮದು ಹಾಗಲ್ಲ. ಕುಮಾರಸ್ವಾಮಿ ನಾನು ಇಬ್ಬರು ಪ್ರವಾಸ ಮಾಡುತ್ತೇವೆ. ಕಾಂಗ್ರೆಸ್ ಪ್ರವಾಸ ಸಭೆಗೆ ಎಷ್ಟು ಜನ ಸೇರಿದ್ದಾರೆ ಅಂತಾ ನೋಡಿದ್ದೇನೆ. ಅವರದ್ದು ಸರ್ಕಾರಿ ಕಾರ್ಯಕ್ರಮವೋ, ಪ್ರಚಾರ ಕಾರ್ಯಕ್ರಮವೋ ಗೊತ್ತಾಗುತ್ತಿಲ್ಲ. ಕಳೆದ ಬಾರಿ 120 ಸ್ಥಾನ ಗೆಲ್ಲಲು ಕಾರಣ ಏನು? ಎಂಬುವುದು ತಿಳಿದಿದೆ. ಮುಂದಿನ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರನ್ನೇ ಸಿಎಂ ಎಂದು ಘೋಷಣೆ ಮಾಡಿ ರಾಹುಲ್ ಗಾಂಧಿ ಗೆದ್ದು ಬರಲಿ ನೋಡೋಣ ಎಂದು ಸಿಎಂ ವಿರುದ್ಧ ಕಿಡಿಕಾರಿದರು.

    ಜನವರಿ ಬಳಿಕ ಕುಮಾರಸ್ವಾಮಿ ರಾಜ್ಯ ಪ್ರವಾಸ ಮಾಡುತ್ತಾರೆ. ಇನ್ನೊಂದು ದಿಕ್ಕಿನಲ್ಲಿ ನಾನು ಪ್ರವಾಸ ಮಾಡುತ್ತೇನೆ. ಯಡಿಯೂರಪ್ಪ, ಕುಮಾರಸ್ವಾಮಿ ಸಿಎಂ ಆಗಲ್ಲ ಎಂದು ಅಹಂನಿಂದ ಹೇಳುತ್ತಾರೆ. ಹಾಗಾಂತ ಅವರ ಹಣೆಮೇಲೆ ಬರೆದಿದ್ದಾರಾ? ಸ್ವಲ್ಪ ದಿನ ತಡೆದುಕೊಳ್ಳಿ, ಎಲ್ಲವನ್ನು ಗಮನಿಸುತ್ತಿದ್ದೇನೆ. ತಾಳ್ಮೆ ನನಗೂ ಇದೆ. ತಾಳ್ಮೆ ಮೀರಿದಾಗ ಏನಾಗುತ್ತೆ ನೋಡೋಣ. ಬೇಲ್ ತೆಗೆದುಕೊಂಡವರೆಲ್ಲ ಸಿಎಂ ಆಗೋಕೆ ಸಾಧ್ಯ ಎಂದು ಸಿಎಂ ಪ್ರಶ್ನಿಸುತ್ತಾರೆ. ಆದರೆ ಇದೇ ಸಿದ್ದರಾಮಯ್ಯ ಅವರು ಆಪರೇಷನ್ ಕಮಲದಲ್ಲಿ ಏನು ಮಾಡಿದ್ದರು. ಯಡಿಯೂರಪ್ಪ ಸಿಎಂ ಇದ್ದಾಗ ವಿಪಕ್ಷದಲ್ಲಿ ಕುಳಿತ ಸಿದ್ದರಾಮಯ್ಯ ಏನ್ ಮಾಡಿದ್ದರು ಅಂತಾ ಪ್ರಶ್ನೆ ಮಾಡಿದರು.

    ಯಾರ ಬಗ್ಗೆಯೂ ಲಘುವಾಗಿ ಮಾತನಾಡಲ್ಲ: ನಾನು ಪ್ರಧಾನಿ ಮೋದಿ ಬಗ್ಗೆ ಲಘುವಾಗಿ ಮಾತನಾಡಿಲ್ಲ. ಮುಂದೆಯೂ ಮಾತನಾಡಲ್ಲ. ಹಾಗೆಯೇ ನಾನು ರಾಹುಲ್ ಗಾಂಧಿ, ಸೋನಿಯಾಗಾಂಧಿ ಯಾರ ಬಗ್ಗೆಯೂ ಲಘುವಾಗಿ ಮಾತಾನಾಡಿಲ್ಲ, ಮಾತನಾಡಲ್ಲ ಎಂದರು.

    ನಮ್ಮ ಕೈಯಲ್ಲಿ ಅಧಿಕಾರ ಇಲ್ಲ. ಅದರೂ ರಾಜ್ಯದ ಎಲ್ಲಾ ಕಡೆಯೂ ಪ್ರವಾಸ ಮಾಡುತ್ತೇವೆ. ನಮಗೆ ಹೋರಾಟ ಮಾಡೋ ಕೆಚ್ಚಿದೆ. ಆದರೆ ಪರಮೇಶ್ವರ್ ಅವರಿಗೆ ಅಧಿಕಾರ ಇಲ್ಲದಿರಬಹುದು, ಕಾಂಗ್ರೆಸ್ ಸರ್ಕಾರದ ಬೆಂಬಲ, ಸಿಬಿಐ ಬೆಂಬಲವಿದೆ. ಈ ಹಿಂದೆ ಸಿದ್ದರಾಮಯ್ಯ ಅವರನ್ನ ಕರೆದುಕೊಂಡು ಹೋದ ತಕ್ಷಣ ಜೆಡಿಎಸ್ ಮುಗೀತು ಅಂದುಕೊಂಡಿದ್ದರು. ಆದರೆ ಅಮೇಲೆ ಏನಾಯಿತು ಎಂದು ಪ್ರಶ್ನಿಸಿದರು.

    ಮಹದಾಯಿ ಹೋರಾಟಕ್ಕೆ ಸಿದ್ದ: ರಾಜ್ಯದ ನಾಯಕರ ಜೊತೆ ಪರಸ್ಪರ ದೋಷಾರೋಪದಿಂದ ಮಹದಾಯಿ ಏನಾಯಿತು. ನದಿಗೆ ಕಟ್ಟಿರುವ ತಡೆಗೋಡೆಯ ರಕ್ಷಣೆ ಜವಾಬ್ದಾರಿ ಕರ್ನಾಟಕ ಸರ್ಕಾರದ್ದು ಅದು ಈಗಲೂ ಹಾಗೆ ಮುಂದುವರೆಯುತ್ತೆ ಎಂದು ಭಾವಿಸಿದ್ದೇನೆ. ಅವಶ್ಯಕತೆ ಇದ್ದರೆ ಮಹದಾಯಿ ಹೋರಟಕ್ಕಾಗಿ ನಾನು ಮತ್ತೆ ಪ್ರಧಾನಿ ಅವರನ್ನ ಭೇಟಿ ಮಾಡುತ್ತೇನೆ. ಆದರೆ ಈ ವೇಳೆ ತನಗೆ ಫೋಟೋ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ. ಇದರಲ್ಲಿ ರಾಜಕೀಯ ಇಲ್ಲ ಎಂದು ಸ್ಪಷ್ಟಪಡಿಸಿದರು.

    https://www.youtube.com/watch?v=AGeBU4rObUc

  • ಮೋದಿ ಹಿಂದಿ ಭಾಷಣ ಕೇಳಿ ಮರುಳಾಗಬೇಡಿ, ನನಗೆ ಕೆಲ್ಸ ಮಾಡೋ ಒಂದು ಅವಕಾಶ ನೀಡಿ: ಎಚ್‍ಡಿಕೆ

    ಮೋದಿ ಹಿಂದಿ ಭಾಷಣ ಕೇಳಿ ಮರುಳಾಗಬೇಡಿ, ನನಗೆ ಕೆಲ್ಸ ಮಾಡೋ ಒಂದು ಅವಕಾಶ ನೀಡಿ: ಎಚ್‍ಡಿಕೆ

    ಮೈಸೂರು: ಪ್ರಧಾನಿ ಮೋದಿಯವರ ಹಿಂದಿ ಭಾಷಣ ಕೇಳಿ ಯಾರು ಮರುಳಾಗಬೇಡಿ, ನನಗೆ ಕೆಲಸ ಮಾಡುವ ಒಂದು ಅವಕಾಶವನ್ನು ಕೊಡಿ ಎಂದು ವಿಕಾಸ ಯಾತ್ರೆಯಲ್ಲಿ ಎಚ್.ಡಿ ಕುಮಾರಸ್ವಾಮಿ ಅವರು ಮತದಾರರಲ್ಲಿ ಮನವಿ ಮಾಡಿದ್ದಾರೆ.

    ನಾಡಿನ ಅಭಿವೃದ್ಧಿಗಾಗಿ ಜೆಡಿಎಸ್ ಪಕ್ಷವನ್ನು ಬೆಂಬಲಿಸಿ. ಈ ಹಿಂದಿನ 20 ತಿಂಗಳ ಆಡಳಿತ ಕೇವಲ ಸಿನಿಮಾ ಟ್ರೇಲರ್ ಮಾತ್ರ. ಅಂದು ನಿಮ್ಮ ಪೂರ್ಣ ಅಶೀರ್ವಾದದಿಂದ ನಾನು ಸಿಎಂ ಆಗಿರಲಿಲ್ಲ. ಇಂದು ನಿಮ್ಮ ಆಶೀರ್ವಾದ ಬೇಕಿದೆ ಎಂದು ಹೇಳಿದರು.

    ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆ ಜೆಡಿಎಸ್ ಪಕ್ಷವು ಮತದಾರರನ್ನು ಸೆಳೆಯಲು ಇಂದಿನಿಂದ ಪ್ರಚಾರ ಕಾರ್ಯ ಆರಂಭಿಸಿದೆ. ಸಮಾವೇಶಕ್ಕೂ ಮುನ್ನ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿದ ಮಾಜಿ ಪ್ರಧಾನಿ ದೇವೇಗೌಡ ದಂಪತಿ ಹಾಗೂ ಎಚ್.ಡಿ ಕುಮಾರಸ್ವಾಮಿ ದಂಪತಿ ವಿಶೇಷ ಪೂಜೆ ಸಲ್ಲಿಸಿದರು. ಪೂಜೆಯ ನಂತರ ಎಚ್‍ಡಿಡಿ ವಿಕಾಸ ಯಾತ್ರೆಗೆ ಚಾಲನೆ ನೀಡಿದರು. ವಿಕಾಸ ವಾಹಿನಿ ಬಸ್ ನಲ್ಲಿ ಯಾತ್ರೆ ಆರಂಭಿಸಿದ ಕುಮಾರಸ್ವಾಮಿ ಅವರು ನಂಜನಗೂಡು, ಎಚ್.ಡಿ.ಕೋಟೆ, ದಟ್ಟಗಳ್ಳಿ, ರಾಮಕೃಷ್ಣ ನಗರ ಬೋಗಾದಿ, ಹಿನಕಲ್ ವೃತ್ತಗಳ ಮೂಲಕ ಮೆರವಣಿಗೆ ನಡೆಸಿ ಸಮಾವೇಶ ಪ್ರದೇಶಕ್ಕೆ ತೆರಳಿದರು.

    ಸಮಾವೇಶದಲ್ಲಿ ನೆರೆದಿದ್ದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಕುಮಾರಸ್ವಾಮಿ ಅವರು ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು. ಗುಂಡ್ಲುಪೇಟೆ ಮತ್ತು ನಂಜನಗೂಡು ಚುನಾವಣೆಯಲ್ಲಿ ಸಿದ್ದರಾಮಯ್ಯ ಹೇಗೆ ಚುನಾವಣೆ ಗೆದಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಪೊಲೀಸ್ ಜೀಪ್‍ನಲ್ಲಿ ಹಣ ಸಾಗಿಸಿದ್ದಾರೆ. ಈಗ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಬಂದರೆ ನೂರು ಕೋಟಿ ಬೇಕಾದರು ಖರ್ಚು ಮಾಡುತ್ತಾರೆ. ಈಗ ಅವರಿಗೆ ದುಡ್ಡಿಗೆ ಕಡಿಮೆ ಇಲ್ಲ. ದೇವೆಗೌಡರ ಜೊತೆ ಇದ್ದ ಸಿದ್ದರಾಮಯ್ಯ ಬೇರೆ, ಪ್ರಸ್ತುತ ಸಿದ್ದರಾಮಯ್ಯ ಬೇರೆ ಎಂದು ವಾಗ್ದಾಳಿ ನಡೆಸಿದರು.

    ಸಿದ್ದರಾಮಯ್ಯ ಅವರೊಬ್ಬರು ಮಾತ್ರ ಕುರಿ ಕಾದಿಲ್ಲ. ನಾವು ಗೊಬ್ಬರ ಹೊತ್ತಿದ್ದೇವೆ. ರೈತರ ಕಷ್ಟದ ಅರಿವು ನನಗಿದೆ. ನಿಮಗೆ ರೈತರ ಬಗ್ಗೆ ಕಾಳಜಿ ಇದ್ದಿದ್ದರೆ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕಿತ್ತು. ರೈತರ ಸಾಲ ಮನ್ನಾ ಮಾಡಲು ಮಾತ್ರ ಒಪ್ಪುತ್ತಿಲ್ಲ. ನಾವು ಸುಳ್ಳು ಹೇಳುತ್ತೇವೆ ಅಂತಾ ಸಿಎಂ ಹೇಳುತ್ತಾರೆ. ಸಿಎಂ ಒಬ್ಬರೇ ನಾಡಿನಲ್ಲಿ ಸತ್ಯಹರಿಶ್ಚಂದ್ರ. ಸತ್ಯಹರಿಶ್ಚಂದ್ರ ಸಿಎಂ ನೀವು ಎಷ್ಟು ಸಾಲ ಮಾಡಿದ ಮಾಡಿದ್ದೀರಾ ಅಂತಾ ಜನರಿಗೆ ತಿಳಿಸಿ ಎಂದು ಕಿಡಿಕಾರಿದರು.

    ಸಿಎಂ ಸಿದ್ದರಾಮಯ್ಯ ಚಾಮಂಡೇಶ್ವರಿ ಕ್ಷೇತ್ರಕ್ಕೆ ಬರುತ್ತಾರೆ ಅಂತಾ ಈ ಸಮಾವೇಶ ಮಾಡುತ್ತಿಲ್ಲ. ಸಿಎಂ ಸ್ಥಾನಕ್ಕಾಗಿ ಜೆಡಿಎಸ್ ಹಾಳು ಮಾಡಿದವರು ಸಿದ್ದರಾಮಯ್ಯ. ತಮ್ಮನ್ನು ರಾಜಕೀಯವಾಗಿ ಬೆಳೆಸಿದ ದೇವೇಗೌಡರ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿಸಿದ ಪುಣ್ಯಾತ್ಮ. ಅದನ್ನು ನಾನು ಯಾವತ್ತೂ ಮರೆಯುವುದಿಲ್ಲ. ಮಾಜಿ ಸಂಸದ ಎಚ್. ವಿಶ್ವನಾಥ್ ನನ್ನನ್ನು ಮತ್ತು ನನ್ನ ತಂದೆ ಅವರನ್ನು ಟೀಕಿಸಿದ್ದಾರೆ. ಅವರ ಟೀಕೆ ವೈಯಕ್ತಿಕವಾಗಿರಲಿಲ್ಲ. ಜನರ ಶಕ್ತಿ ಮುಂದೆ ಸಿದ್ದರಾಮಯ್ಯರ ದರ್ಪ, ಹಣ ಬಲ ನಡೆಯಲ್ಲ. ಚಾಮುಂಡೇಶ್ವರಿ ಕ್ಷೇತ್ರದ ವಿಚಾರದಲ್ಲಿ ಸಿದ್ದರಾಮಯ್ಯ ನಮಗೆ ನಗಣ್ಯ ಎಂದರು.

    ನನ್ನ ಆರೋಗ್ಯ ಸಮಸ್ಯೆಯಿಂದ ಪೂರ್ಣ ಪ್ರಮಾಣದಲ್ಲಿ ಗುಣಮುಖನಾಗಿದ್ದು, ಮರುಜನ್ಮವನ್ನು ಪಡೆದಿದ್ದೇನೆ. ಇದನ್ನು ಜನರಿಗಾಗಿ ಮುಡಿಪಾಗಿಡುತ್ತೇನೆ. ಈ ಹಿಂದೆ ಯಡಿಯೂರಪ್ಪ ಅವರಿಗೆ ಅಧಿಕಾರ ಹಸ್ತಾಂತರ ಮಾಡುವ ವಿಚಾರದಲ್ಲಿ ನಾನು ತಪ್ಪು ಮಾಡಿರಲಿಲ್ಲ. ಆದರೂ 10 ವರ್ಷ ಶಿಕ್ಷೆ ಅನುಭವಿಸಿದ್ದೇನೆ. ವೀರಶೈವ ಸಮಾಜದ ಬಂಧುಗಳೇ ನಾನು ನಿಮ್ಮವನು. ಜಾತಿ ಹೆಸರಿನ ವ್ಯಾಮೋಹಕ್ಕೆ ನನ್ನ ದ್ವೇಷಿಸಬೇಡಿ. ಯಡಿಯೂರಪ್ಪ ಅವರಿಗೆ ಅಂದು ಅಧಿಕಾರ ಸಿಗದಿದ್ದಕ್ಕೆ ಬಿಜೆಪಿ ಅವರೇ ಕಾರಣ ಅದನ್ನು ವೀರಶೈವರು ಅರ್ಥ ಮಾಡಿಕೊಳ್ಳಬೇಕಿದೆ. ಇಪ್ಪತ್ತು ತಿಂಗಳು ನಮ್ಮ ತಂದೆಗೆ ನೋವು ಕೊಟ್ಟು ಸಿಎಂ ಆದೆ. ಅವರಿಗೆ ನೋವು ಉಂಟಾಗದಂತೆ ಈ ಬಾರಿ ಸಿಎಂ ಆಗಬೇಕು. ಅದಕ್ಕೆ ಜನರ ಆಶೀರ್ವಾದ ಬೇಕು ಎಂದು ಹೇಳಿದರು.

    ಇದೇ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ನ ಜಿ.ಟಿ ದೇವೇಗೌಡ. ಸಿದ್ದರಾಮಯ್ಯ ಅವರ ಮಗ ದಡ್ಡನೋ ಬುದ್ಧಿವಂತನೋ ಗೊತ್ತಿಲ್ಲ. ಅವರನ್ನು ಪದೇ ಪದೇ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಕಳಿಸಿ ಆಟ ನೋಡುತ್ತಿದ್ದಾರೆ. ಸೀತೆ ಮೇಲೆ ರಾವಣ ಕಣ್ಣು ಹಾಕಿದ್ದರಿಂದ ಲಂಕೆಗೆ ಬೆಂಕಿ ಬಿತ್ತು. ನೀವು ಈಗ ಚಾಮುಂಡೇಶ್ವರಿ ಕ್ಷೇತ್ರದ ಮೇಲೆ ಕಣ್ಣು ಹಾಕಿದ್ದೀರಾ ನಿಮಗೂ ಲಂಕೆಗೆ ಆದ ಕಥೆ ಬರುತ್ತೆ. ನನಗೆ ಕ್ಷೇತ್ರದಲ್ಲಿ ಬಹಳಷ್ಟು ನೋವು ಕೊಟ್ಟಿದ್ದೀರಿ. ನಾನು ಕಾಂಗ್ರೆಸ್‍ಗೆ ಹೋಗುತ್ತೇನೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತೀರಾ ಜನರು ಇದನ್ನು ಜನ ನಂಬುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಮಾಜಿ ಪ್ರಧಾನಿ ದೇವೇಗೌಡ ದಂಪತಿ ಚಾಮುಂಡಿ ಬೆಟ್ಟದಿಂದ ಮೈಸೂರಿನ ಉತ್ತನಹಳ್ಳಿ ಅಮ್ಮನ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ದೇವೇಗೌಡ ಅವರಿಗೆ ಶಾಸಕ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್, ಮೇಯರ್ ರವಿಕುಮಾರ್ ಸಾಥ್ ನೀಡಿದರು.