Tag: Former President

  • ಅಮೆರಿಕದ ಮಾಜಿ ಅಧ್ಯಕ್ಷ ಬೈಡನ್‌ಗೆ ಪ್ರಾಸ್ಟೇಟ್ ಕ್ಯಾನ್ಸರ್ – ಗುಣಮುಖರಾಗುವಂತೆ ಮೋದಿ ಶುಭ ಹಾರೈಕೆ

    ಅಮೆರಿಕದ ಮಾಜಿ ಅಧ್ಯಕ್ಷ ಬೈಡನ್‌ಗೆ ಪ್ರಾಸ್ಟೇಟ್ ಕ್ಯಾನ್ಸರ್ – ಗುಣಮುಖರಾಗುವಂತೆ ಮೋದಿ ಶುಭ ಹಾರೈಕೆ

    ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಜೋ ಬೈಡನ್ (Joe Biden) ಪ್ರಾಸ್ಟೇಟ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಕಳವಳ ವ್ಯಕ್ತಪಡಿಸಿ, ಶೀಘ್ರವೇ ಗುಣಮುಖರಾಗುವಂತೆ ಮೋದಿ (PM Modi) ಶುಭ ಹಾರೈಸಿದ್ದಾರೆ.

    82 ವರ್ಷದ ಬೈಡನ್ ಅವರಿಗೆ ಮೂತ್ರ ವಿಸರ್ಜನೆಯಲ್ಲಿ ಸಮಸ್ಯೆ ಉಂಟಾಗಿತ್ತು. ಹೀಗಾಗಿ ವೈದ್ಯರನ್ನು ಭೇಟಿಯಾಗಿದ್ದರು. ವೈದ್ಯರು ತಪಾಸಣೆ ಮಾಡಿದ ಬಳಿಕ ಮೂಳೆಗಳಿಗೆ ಕ್ಯಾನ್ಸರ್ ಹರಡಿದ್ದು, ಪ್ರಾಸ್ಟೇಟ್ ಕ್ಯಾನ್ಸರ್ ಇರುವುದಾಗಿ ಶುಕ್ರವಾರ ತಿಳಿಸಿದ್ದಾರೆ. ಭಾನುವಾರ ಈ ಕುರಿತು ಬೈಡನ್ ಕಚೇರಿಯು ಕ್ಯಾನ್ಸರ್ ಇರುವುದು ಪತ್ತೆಯಾಗಿದೆ ಎಂದು ಪ್ರಕಟಿಸಿದೆ.ಇದನ್ನೂ ಓದಿ: UGCET: ಮೇ 28ರಿಂದ ವಿಕಲಚೇತನರ ವೈದ್ಯಕೀಯ ತಪಾಸಣೆ – ಕೆಇಎ

    ಇದೀಗ ಪ್ರಾಸ್ಟೇಟ್ ಕ್ಯಾನ್ಸರ್ ನಾಲ್ಕನೇ ಹಂತದಲ್ಲಿದ್ದು, ಚಿಕಿತ್ಸೆಗೆ ಸಂಬಂಧಿಸಿದಂತೆ ಸದ್ಯ ವೈದ್ಯರು ಅವರ ಕುಟುಂಬಸ್ಥರೊಂದಿಗೆ ಚರ್ಚೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ವಿಷಯ ತಿಳಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದುಃಖ ವ್ಯಕ್ತಪಡಿಸಿದ್ದು, ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ. ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಕಳವಳ ವ್ಯಕ್ತಪಡಿಸಿದ್ದು, ಬೈಡನ್ ಆರೋಗ್ಯ ಚೆನ್ನಾಗಿರಲಿ. ಶೀಘ್ರವೇ ಸಂಪೂರ್ಣವಾಗಿ ಗುಣಮುಖರಾಗಲಿ ಎಂದು ಆಶಿಸಿದ್ದಾರೆ.ಇದನ್ನೂ ಓದಿ: Jaffar Express Hijack – ವೀಡಿಯೋ ರಿಲೀಸ್ ಮಾಡಿದ ಬಲೂಚ್ ಲಿಬರೇಶನ್ ಆರ್ಮಿ

  • ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಆರೋಗ್ಯದ ಬಗ್ಗೆ ಕುಟುಂಬದವರು ಹೇಳೋದೇನು?

    ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಆರೋಗ್ಯದ ಬಗ್ಗೆ ಕುಟುಂಬದವರು ಹೇಳೋದೇನು?

    ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರು ಅನಾರೋಗ್ಯದ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಮೂಲಗಳು ತಿಳಿಸಿವೆ.

    ಕಳೆದ 3 ವಾರಗಳಿಂದ ಮುಷರಫ್ ಅನಾರೋಗ್ಯದ ಹಿನ್ನೆಲೆ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಅವರ ಆರೋಗ್ಯ ಹದಗೆಡುತ್ತಿದೆ ಹಾಗೂ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಎಂದು ಮೂಲಗಳು ವರದಿ ಮಾಡಿವೆ. ಇದನ್ನೂ ಓದಿ: ಪ್ರವಾದಿ ವಿರುದ್ಧ ಅವಹೇಳನ – ಕ್ರಮಕ್ಕೆ ಆಗ್ರಹಿಸಿ ದೇಶಾದ್ಯಂತ ಮುಸ್ಲಿಮರ ಪ್ರತಿಭಟನೆ, ಬುರ್ಕಾ ಧರಿಸಿ ಬೀದಿಗಿಳಿದ ಮಹಿಳೆಯರು

    ಕುಟುಂಬದವರು ಹೇಳೋದೇನು?
    ಪರ್ವೇಜ್ ಮುಷರಫ್ ವೆಂಟಿಲೇಟರ್‌ನಲ್ಲಿ ಇಲ್ಲ. ಕಳೆದ 3 ವಾರಗಳಿಂದ ಅವರು ಅನಾರೋಗ್ಯದ ಹಿನ್ನೆಲೆ(ಅಮಿಲೋಡೋಸಿನ್) ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಲ್ಲಿ ಚೇತರಿಕೆಯಾಗುವ ಲಕ್ಷಣಗಳು ಕಾಣಿಸುತ್ತಿಲ್ಲ ಹಾಗೂ ಚಿಕಿತ್ಸೆಗೂ ಸ್ಪಂದಿಸುತ್ತಿಲ್ಲ. ಅವರು ಗುಣಮುಖರಾಗಲಿ ಎಂದು ಎಲ್ಲರೂ ಪ್ರಾರ್ಥಿಸೋಣ ಎಂದು ಕುಟುಂಬದ ಮೂಲಗಳು ತಿಳಿಸಿವೆ ಎಂದು ಮುಷರಫ್ ಅಧಿಕೃತ ಟ್ವಿಟ್ಟರ್ ಖಾತೆ ಬರೆಯಲಾಗಿದೆ. ಇದನ್ನೂ ಓದಿ: ಕೆಸಿಆರ್‌ಗೆ ಅವಹೇಳನ – ತೆಲಂಗಾಣ ಬಿಜೆಪಿ ಮುಖಂಡನ ಬಂಧನ

    ಪರ್ವೇಜ್ ಮುಷರಫ್ 1999ರಲ್ಲಿ ಫೆಡರಲ್ ಮಿಲಿಟರಿ ಸ್ವಾಧೀನದ ಬಳಿಕ ಪಾಕಿಸ್ತಾನದ 10ನೇ ಅಧ್ಯಕ್ಷರಾದರು. 2001 ರಿಂದ 2008ರ ವರೆಗೆ ಪಾಕಿಸ್ತಾನದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ, ಬಳಿಕ ತಮ್ಮ ಮೇಲಿನ ದೋಷಾರೋಪಣೆಗಳನ್ನು ತಪ್ಪಿಸಲು ರಾಜೀನಾಮೆ ನೀಡಿದ್ದರು.

  • ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮಾಗೆ ಕೊರೊನಾ

    ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮಾಗೆ ಕೊರೊನಾ

    ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರಿಗೆ ಭಾನುವಾರ ಕೋವಿಡ್-19 ಸೋಂಕು ದೃಢಪಟ್ಟಿದೆ.

    ನನಗೆ ಒಂದೆರಡು ದಿನಗಳಿಂದ ಗಂಟಲು ಕಟ್ಟಿಕೊಂಡಿದೆ. ಅದನ್ನು ಬಿಟ್ಟರೆ ನಾನು ಕ್ಷೇಮವಾಗಿದ್ದೇನೆ. ಮಿಚೆಲ್ ಮತ್ತು ನಾನು ಲಸಿಕೆಯನ್ನು ಹಾಕಿಸಿಕೊಂಡಿದ್ದು ಒಳ್ಳೆಯದಾಯಿತು. ಇದರಿಂದ ಅವರಿಗೆ ಕೊರೊನಾ ಟೆಸ್ಟ್ ಮಾಡಿದಾಗ ನೆಗೆಟಿವ್ ಬಂದಿದೆ ಎಂದು ತಿಳಿಸಿದ್ದಾರೆ. ನೀವು ಈಗಲೂ ಲಸಿಕೆ ಹಾಕಿಸಿಕೊಳ್ಳದಿದ್ದರೆ, ಕೊರೊನಾ ಪ್ರಕರಣಗಳ ಸಂಖ್ಯೆ ಕಡಿಮೆ ಇದ್ದರೂ ಸಹ ಲಸಿಕೆ ಹಾಕಿಸಿಕೊಳ್ಳುವುದನ್ನು ನೆನಪಿನಲ್ಲಿಟ್ಟುಕೊಳ್ಳಿ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕ್ಷಿಪಣಿ ಬಗ್ಗೆ ಭಾರತಕ್ಕೆ ಪ್ರತ್ಯುತ್ತರ ನೀಡೋ ಬದಲು ಪಾಕಿಸ್ತಾನ ಸಂಯಮ ಬಯಸುತ್ತೆ: ಇಮ್ರಾನ್ ಖಾನ್

    ಒಬಾಮಾ ಅವರು 2008 ಮತ್ತು 2016ರ ನಡುವೆ ಸತತ ಎರಡು ಬಾರಿ ಅಮೆರಿಕಾ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. 2020ರ ಅಮೆರಿಕ ಸಾರ್ವಜನಿಕರು ಮತ ಚಲಾಯಿಸುವ ಮುನ್ನ 2016ರಲ್ಲಿ ಡೊನಾಲ್ಡ್ ಟ್ರಂಪ್ ಉತ್ತರಾಧಿಕಾರಿಯಾಗಿದರು. ಇದನ್ನೂ ಓದಿ: ಉಕ್ರೇನ್‍ನಲ್ಲಿ ಮೃತಪಟ್ಟ ನವೀನ್ ಮೃತದೇಹ ತರಿಸಲು ಮೋದಿ ಸೂಚನೆ


    America, Former President, Barack Obama, Corona Virus

  • ದೆಹಲಿಯಲ್ಲಿ ಪ್ರಣಬ್ ಮುಖರ್ಜಿ ಅಂತ್ಯಕ್ರಿಯೆ – ದೇಶಾದ್ಯಂತ 7 ದಿನ ಶೋಕಾಚರಣೆ

    ದೆಹಲಿಯಲ್ಲಿ ಪ್ರಣಬ್ ಮುಖರ್ಜಿ ಅಂತ್ಯಕ್ರಿಯೆ – ದೇಶಾದ್ಯಂತ 7 ದಿನ ಶೋಕಾಚರಣೆ

    ನವದೆಹಲಿ: ಮಾಜಿ ರಾಷ್ಟ್ರಪತಿ, ಭಾರತ ರತ್ನ ಪ್ರಣಬ್ ಮುಖರ್ಜಿ ಅವರು ಇಹಲೋಕ ತ್ಯಜಿಸಿ, ಬಾರದ ಲೋಕಕ್ಕೆ ತೆರಳಿದ್ದಾರೆ. ಇಂದು ದೆಹಲಿಯ ಲೋಧಿ ರಸ್ತೆಯ ಸ್ಮಶಾನದಲ್ಲಿ ಅಂತ್ಯಕ್ರಿಯೆ ನೆರವೇರಲಿದ್ದು, ಕೋವಿಡ್ ಮಾರ್ಗಸೂಚಿ ಪ್ರಕಾರ ಅಂತ್ಯಸಂಸ್ಕಾರ ನೆರವೇರಲಿದೆ. ಇದನ್ನೂ ಓದಿ: ಕೈ ತಪ್ಪಿದ ಪ್ರಧಾನಿ ಹುದ್ದೆಯಿಂದ ಪ್ರಣಬ್ ಮುಖರ್ಜಿ ರಾಷ್ಟ್ರಪತಿ ಆಗಿದ್ದು ಹೇಗೆ?

    ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅನಾರೋಗ್ಯ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸಿದೆ ಸೋಮವಾರ ನಿಧರಾಗಿದ್ದಾರೆ. ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಗಣ್ಯರು ಕಂಬನಿ ಮಿಡಿದಿದ್ದಾರೆ. ಪ್ರಧಾನಿ ಮೋದಿ, ಸಿಎಂ ಯಡಿಯೂರಪ್ಪ, ಗೃಹ ಸಚಿವ ಅಮಿತ್ ಶಾ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿದಂತೆ ವಿದೇಶಿ ಗಣ್ಯರು ಸಂತಾಪ ಸೂಚಿಸಿದ್ದಾರೆ. ಇದನ್ನೂ ಓದಿ: ಶ್ರೇಷ್ಠ ವಿದ್ವಾಂಸ ಪ್ರಣಬ್‌ ಮುಖರ್ಜಿಯವರ ಸಲಹೆಯನ್ನು ಎಂದಿಗೂ ಮರೆಯಲ್ಲ- ಮೋದಿ

    ಪ್ರಣಬ್ ಮುಖರ್ಜಿ ಅವರ ಅಂತ್ಯಕ್ರಿಯೆಯನ್ನು ಇಂದು ದೆಹಲಿಯಲ್ಲಿಯೇ ನಡೆಸಲು ಕುಟುಂಬಸ್ಥರು ತೀರ್ಮಾನಿಸಿದ್ದಾರೆ. ಮೊದಲಿಗೆ ಹುಟ್ಟೂರು ಬಂಗಾಳದಲ್ಲಿಯೇ ಅಂತ್ಯಕ್ರಿಯೆ ನಡೆಸುವ ಬಗ್ಗೆ ಚರ್ಚೆಯಾಗಿತ್ತು. ಬಳಿಕ ಕುಟುಂಬ ಸದಸ್ಯರ ತೀರ್ಮಾನದಂತೆ ದೆಹಲಿಯ ಲೋಧಿ ರಸ್ತೆಯ ನಿಗಮ್ ಬೋಧ್ ಘಾಟ್‍ನಲ್ಲಿ ಪ್ರಣಬ್ ಅವರ ಅಂತ್ಯಕ್ರಿಯೆ ನಡೆಯಲಿದೆ.

    ಪ್ರಣಬ್ ಅವರ ಪಾರ್ಥೀವ ಶರೀರ ದೆಹಲಿಯ ಸೇನಾ ಆಸ್ಪತ್ರೆಯಲ್ಲಿಯೇ ಇದ್ದು, ಇಂದು ಬೆಳಗ್ಗೆ 9 ಗಂಟೆಗೆ ರಾಜಾಜಿಮಾರ್ಗ್ ನಿವಾಸಕ್ಕೆ ರವಾನೆ ಮಾಡಲಾಗುತ್ತೆ. ಬೆಳಗ್ಗೆ 9.15ರಿಂದ 10.15ರವರೆಗೆ ಪಿಎಂ ಸೇರಿದಂತೆ ಹಲವು ಗಣ್ಯರಿಂದ ಅಂತಿಮ ನಮನ ಸಲ್ಲಿಸಲಾಗುತ್ತದೆ. ಬೆಳಗ್ಗೆ 10.15ರಿಂದ 11.15ರವರೆಗೆ ಇತರ ಪ್ರಮುಖ ಗಣ್ಯರಿಂದ ಅಂತಿಮ ನಮನ ಅಲ್ಲಿಸಲಾಗುತ್ತದೆ. ಪ್ರಣಬ್ ಮುಖರ್ಜಿ ಅವರಿಗೆ ಕೊರೊನಾ ಸೋಂಕು ಪಾಸಿಟಿವ್ ಇರುವುದರಿಂದ ಗಣ್ಯರು ಹೆಚ್ಚಿನ ಪಾರ್ಥಿವ ಶರೀರ ಅಂತಿಮ ದರ್ಶನಕ್ಕೆ ಆಗಮಿಸುವ ಸಾಧ್ಯತೆ ತೀರ ವಿರಳವಾಗಿದೆ.

    ಮಧ್ಯಾಹ್ನದ ಬಳಿಕ ಲೋಧಿ ರಸ್ತೆಯಲ್ಲಿರುವ ನಿಗಮ್ ಬೋದ್ ಘಾಟ್‍ನಲ್ಲಿ ಸುಮಾರು 2.30ಕ್ಕೆ ಅಂತಿಮ ಸಂಸ್ಕಾರ ನಡೆಯಲಿದೆ. ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ನೀಡದಿರುವ ಸಾಧ್ಯತೆ ಹೆಚ್ಚಿದೆ. ಪ್ರಣಬ್ ಮುಖರ್ಜಿ ಅವರ ಸಾವಿಗೆ ಗೌರವಾರ್ಥವಾಗಿ ಕೇಂದ್ರ ಸರ್ಕಾರ ಏಳು ದಿನಗಳ ರಾಷ್ಟ್ರೀಯ ಶೋಕಾಚರಣೆಯನ್ನು ಘೋಷಿಸಿದೆ.

    ಅಗಲಿದ ಗಣ್ಯರಿಗೆ ಗೌರವದ ಸಂಕೇತವಾಗಿ, ಆಗಸ್ಟ್ 31 ರಿಂದ ಸೆಪ್ಟೆಂಬರ್ 6 ರವರೆಗೆ ದೇಶದಾದ್ಯಂತ ಏಳು ದಿನಗಳ ಶೋಕಾಚರಣೆಯನ್ನು ಆಚರಿಸಲಾಗುತ್ತಿದೆ. ಶೋಕಾಚರಣೆಯ ಅವಧಿಯಲ್ಲಿ, ರಾಷ್ಟ್ರಧ್ವಜವು ಎಲ್ಲಾ ಕಟ್ಟಡಗಳ ಮೇಲೆ ಅರ್ಧದಷ್ಟು ಹಾರಿಸಲಾಗುತ್ತದೆ ಮತ್ತು ಯಾವುದೇ ಅಧಿಕೃತ ಕಾರ್ಯಕ್ರಮಗಳು ಇರುವುದಿಲ್ಲ ಎಂದು ಗೃಹ ವ್ಯವಹಾರಗಳ ಸಚಿವಾಲಯ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

  • ಅನಾರೋಗ್ಯಕ್ಕೂ ಮುನ್ನ ಹಳ್ಳಿಯ ಹಲಸಿನ ಹಣ್ಣು ತರಿಸಿ ತಿಂದಿದ್ರು ಪ್ರಣಬ್ ಮುಖರ್ಜಿ

    ಅನಾರೋಗ್ಯಕ್ಕೂ ಮುನ್ನ ಹಳ್ಳಿಯ ಹಲಸಿನ ಹಣ್ಣು ತರಿಸಿ ತಿಂದಿದ್ರು ಪ್ರಣಬ್ ಮುಖರ್ಜಿ

    ನವದೆಹಲಿ: ತೀವ್ರ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ಅನಾರೋಗ್ಯಕ್ಕೂ ಮುನ್ನ ಹಳ್ಳಿಯಲ್ಲಿ ಸಿಗುವ ಹಲಸಿನ ಹಣ್ಣು ತರಿಸಿಕೊಂಡು ತಿಂದಿದ್ದರು.

    ಪಶ್ಚಿಮ ಬಂಗಾಳದ ರಾಜಕಾರಣಿಯಾಗಿರುವ ಮಗ ಅಭಿಜಿತ್ ಜೊತೆ ಮಾಜಿ ರಾಷ್ಟ್ರಪತಿಯವರು ತನಗೆ ಹಲಸಿನ ಹಣ್ಣು ತಿನ್ನಬೇಕು ಎಂಬ ಆಸೆಯಾಗುತ್ತಿದೆ. ಹೀಗಾಗಿ ಅದನ್ನು ತಂದುಕೊಡುವಂತೆ ಹೇಳಿದ್ದರು. ಅಂತೆಯೇ ಅಭಿಜಿತ್ ಕೂಡ ತಮ್ಮ ತಂದೆಗೆ ಹಲಸಿನ ಹಣ್ಣು ತಂದು ಕೊಟ್ಟಿದ್ದರು.

    ತಂದೆ ಮನವಿಯಂತೆ ನಾನು ಪಶ್ಚಿಮ ಬಂಗಾಳದ ಬಿರ್‍ಭುಮ್ ಜಿಲ್ಲೆಯ ಮಿರಾತಿ ಎಂಬ ಗ್ರಾಮಕ್ಕೆ ತೆರಳಿ ಹಲಸಿನ ಹಣ್ಣು ತೆಗೆದುಕೊಂಡು ಬಂದಿದ್ದೆ. 25 ಕೆ.ಜಿಯಷ್ಟು ಹಣ್ಣು ಹಿಡಿದುಕೊಂಡು ಆಗಸ್ಟ್ 3 ರಂದು ದೆಹಲಿ ರೈಲು ಹತ್ತಿ ಅವರನ್ನು ಭೇಟಿಯಾಗಿ ಅವರ ಆಸೆಯಂತೆ ಹಣ್ಣನ್ನು ನೀಡಿದ್ದೆ. ತಂದೆ ಹಾಗೂ ನನಗೆ ರೈಲು ಪ್ರಯಾಣ ಅಂದರೆ ಅಚ್ಚುಮೆಚ್ಚು ಎಂದು ಅಭಿಜಿತ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

    ನಾನು ತಂದು ಕೊಟ್ಟ ದಿನವೇ ತಂದೆ ಹಣ್ಣು ತಿಂದಿದ್ದಾರೆ. ಅದೃಷ್ಟವಶಾತ್ ಅವರ ಶುಗರ್ ಲೆವೆಲ್ ನಲ್ಲಿ ಏನೂ ಬದಲಾವಣೆಯಾಗಿಲ್ಲ. ಹಣ್ಣನ್ನು ನೋಡುತ್ತಿದ್ದಂತೆಯೇ ತಂದೆಗೆ ತುಂಬಾನೆ ಖುಷಿಯಾಗಿತ್ತು. ಆಗ ಅವರಿಗೆ ಅನಾರೋಗ್ಯ ಇರಲಿಲ್ಲ. ಆದರೆ ವಾರದ ಬಳಿಕ ಅವರು ಹಠಾತ್ ಅನಾರೋಗ್ಯಕ್ಕೀಡಾದರು. ಅವರ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ ಪರಿಣಾಮ ಶಸ್ತ್ರ ಚಿಕಿತ್ಸೆ ಮಾಡಲಾಯಿತು. ಇದೇ ವೇಳೆ ಅವರ ಕೊರೊನಾ ಟೆಸ್ಟ್ ಮಾಡಿಸಿದಾಗ ಪಾಸಿಟಿವ್ ಎಂದು ವರದಿ ಬಂದಿದೆ.

    ಸದ್ಯ ಅವರು ದೆಹಲಿಯ ಸೇನಾ ಸಂಶೋಧನೆ ಮತ್ತು ರೆಫರಲ್ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಇದೂವರೆಗೆ ನನಗೆ 4 ಬಾರಿ ಅವರನ್ನು ನೋಡಲು ಅವಕಾಶ ಸಿಕ್ಕಿತ್ತು. ಅವರನ್ನು ನೋಡಲು ತೆರಳುವಾಗ ನಾನು ಪಿಪಿಇ ಕಿಟ್ ಧರಿಸಿ ಹಾಗೂ ಇತರ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡಿದ್ದೇನೆ. ನಾನು ನಾಲ್ಕನೇ ಬಾರಿ ನೋಡಲು ಹೋದಾಗ ಅವರು ವೆಂಟಿಲೇಟರ್ ಸಹಾಯವಿಲ್ಲದೆ ಉಸಿರಾಡುತ್ತಿದ್ದರು ಎಂದು ಅಭಿಜಿತ್ ತಿಳಿಸಿದರು.

  • ಪ್ರಣಬ್ ಮುಖರ್ಜಿ ಸ್ಥಿತಿ ಗಂಭೀರ, ವೆಂಟಿಲೇಟರ್‌ನಲ್ಲಿ ಚಿಕಿತ್ಸೆ

    ಪ್ರಣಬ್ ಮುಖರ್ಜಿ ಸ್ಥಿತಿ ಗಂಭೀರ, ವೆಂಟಿಲೇಟರ್‌ನಲ್ಲಿ ಚಿಕಿತ್ಸೆ

    ನವದೆಹಲಿ: ಕೊರೊನಾ ಸೋಂಕು ಕಾಣಿಸಿಕೊಂಡ ಬೆನ್ನಲ್ಲೇ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ವೆಂಟಿಲೇಟರ್ ಅಳವಡಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಹೌದು. ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ ಹಿನ್ನೆಲೆಯಲ್ಲಿ ಮಾಜಿ ರಾಷ್ಟ್ರಪತಿಯವರಿಗೆ ಸೋಮವಾರ ದೆಹಲಿಯ ಮಿಲಿಟರಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಆದರೂ ಇದೀಗ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

    ನಿನ್ನೆ ಮಧ್ಯಾಹ್ನದ ಬಳಿಕ ಟ್ವೀಟ್ ಮಾಡಿದ್ದ ಪ್ರಣಬ್ ಮುಖರ್ಜಿ, ಆಸ್ಪತ್ರೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಕೊರೊನಾ ಟೆಸ್ಟ್ ಮಾಡಿಸಿದ್ದು, ವರದಿ ಪಾಸಿಟಿವ್ ಎಂದು ಬಂದಿದೆ. ಈ ಹಿನ್ನೆಲೆಯಲ್ಲಿ ಕಳೆದ ಒಂದು ವಾರದಿಂದ ನನ್ನೊಂದಿಗೆ ಸಂಪರ್ಕದಲ್ಲಿದ್ದ ಎಲ್ಲರೂ ಪರೀಕ್ಷೆ ಮಾಡಿಸಿಕೊಂಡು ಐಸೋಲೇಷನ್ ಗೆ ಒಳಗಾಗಿ ಎಂದು ತಿಳಿಸಿದ್ದರು.

    ಮಾಜಿ ರಾಷ್ಟ್ರಪತಿಗಳಿಗೂ ಕೊರೊನಾ ಸೋಂಕು ಹರಡಿದೆ ಎಂಬ ಸುದ್ದಿ ತಿಳಿಯುತ್ತಿದ್ದಂತೆಯೇ ರಾಷ್ಟ್ರಪತಿ ರಮಾನಾಥ್ ಕೋವಿಂದ್, ಕೇಂದ್ರ ಸಚಿವ ರಾಜನಾಥ್ ಸಿಂಗ್, ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ, ಸಚಿವ ಸುಧಾಕರ್, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸೇರದಂತೆ ಹಲವಾರು ಶೀಘ್ರ ಗುಣಮುಖರಾಗಿ ಎಂದು ಹಾರೈಸಿದ್ದಾರೆ.

  • ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಗೆ ಕೊರೊನಾ ಪಾಸಿಟಿವ್

    ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಗೆ ಕೊರೊನಾ ಪಾಸಿಟಿವ್

    ಬೆಂಗಳೂರು: ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಗೆ ಕೊರೊನಾ ಪಾಸಿಟಿವ್ ಇರುವುದು ದೃಢವಾಗಿದೆ.

    ಈ ಸಂಬಂಧ ಟ್ವೀಟ್ ಮಾಡಿರುವ ಮುಖರ್ಜಿಯವರು ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಕೊರೊನಾ ಟೆಸ್ಟ್ ಮಾಡಿದ್ದು, ವರದಿ ಪಾಸಿಟಿವ್ ಎಂದು ಬಂದಿದೆ ಅಂತ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಳೆದ ಒಂದು ವಾರದಿಂದ ನನ್ನ ಸಂಪರ್ಕದಲ್ಲಿ ಇದ್ದವರು ಈ ಕೂಡಲೇ ಕೋವಿಡ್ 19 ಟೆಸ್ಟ್ ಮಾಡಿಕೊಂಡು ಸ್ವತಃ ಐಸೋಲೇಷನ್ ಗೆ ಒಳಗಾಗಿ ಎಂದು ಮನವಿ ಮಾಡಿಕೊಂಡಿದ್ದಾರೆ.

    ಈ ಹಿಂದೆ ಅಂದರೆ ಆಗಸ್ಟ್ 2ರಂದು ಅಮಿತ್ ಶಾ ಅವರು ಕೊರೊನಾ ದೃಢವಾಗಿರುವ ಬಗ್ಗೆ ಟ್ವೀಟ್ ಮಾಡಿ ತಿಳಿಸಿದ್ದರು. ಅಲ್ಲದೆ ಅದೇ ದಿನ ದೆಹಲಿ ಹೊರವಲಯದ ಗುರುಗ್ರಾಮದಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದರೆ ಬಿಜೆಪಿ ಸಂಸದ ಮನೋಜ್ ತಿವಾರಿ, ಅಮಿತ್ ಶಾಗೆ ಎರಡನೇ ಬಾರಿ ಕೋವಿಡ್ 19 ಟೆಸ್ಟ್ ಮಾಡಿದ್ದು, ವರದಿ ನೆಗೆಟಿವ್ ಬಂದಿದೆ ಎಂದು ಭಾನುವಾರ ಟ್ವೀಟ್ ಮಾಡಿದ್ದರು. ಈ ಸಂಬಂಧ ಗೃಹ ಸಚಿವಾಲಯ 2ನೇ ಬಾರಿ ಟೆಸ್ಟ್ ನಡೆಸಿಲ್ಲ ಎಂದು ಸ್ಪಷ್ಟಪಡಿಸಿದ ಬಳಿಕ ತಿವಾರಿ ಟ್ವೀಟ್ ಡಿಲೀಟ್ ಮಾಡಿದ್ದಾರೆ.

    ಕೊರೊನಾ ಹಿನ್ನೆಲೆಯಲ್ಲಿ ಶಾ ಅವರು ಅಯೋಧ್ಯೆ ಭೂಮಿ ಪೂಜೆ ಕಾರ್ಯಕ್ರಮಕ್ಕೆ ಆಸ್ಪತ್ರೆಯಲ್ಲಿದ್ದುಕೊಂಡೇ ಶುಭಹಾರೈಸಿದ್ದರು.

  • ಅತೃಪ್ತ ಶಾಸಕರು ಪಕ್ಷ ಬಿಡುತ್ತಾರೆ ಅನಿಸ್ತಿದೆ: ಜಿ.ಪರಮೇಶ್ವರ್

    ಅತೃಪ್ತ ಶಾಸಕರು ಪಕ್ಷ ಬಿಡುತ್ತಾರೆ ಅನಿಸ್ತಿದೆ: ಜಿ.ಪರಮೇಶ್ವರ್

    – ಜಿ.ಪರಮೇಶ್ವರ್ ನಿವಾಸಕ್ಕೆ ಭೇಟಿ ನೀಡಿದ ಶ್ರೀಲಂಕಾ ಮಾಜಿ ರಾಷ್ಟ್ರಪತಿ

    ಬೆಂಗಳೂರು: ಅತೃಪ್ತ ಶಾಸಕರು ಕಳೆದ ಮೂರು ಸಿಎಲ್‍ಪಿ ಸಭೆಗೂ ಹಾಜರಾಗಲಿಲ್ಲ. ಹೀಗಾಗಿ ಅವರು ಪಕ್ಷ ಬಿಡುತ್ತಾರೆ ಅಂತ ಅನಿಸುತ್ತಿದೆ ಎಂದು ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಹೇಳಿದ್ದಾರೆ.

    ಇಲ್ಲಿನ ಸದಾಶಿವನಗರದ ನಿವಾಸದಲ್ಲಿ ಶ್ರೀಲಂಕಾ ಮಾಜಿ ರಾಷ್ಟ್ರಪತಿ ಮಹಿಂದಾ ರಾಜಪಕ್ಸೆ ಅವರನ್ನು ಭೇಟಿಯಾಗಿ ಬಳಿಕ ಮಾತನಾಡಿದ ಅವರು, ಸಿಎಲ್‍ಪಿ ಸಭೆಗೆ ಗೈರಾದ ಶಾಸಕರ ಅನರ್ಹತೆ ಮಾಡುವ ಕುರಿತು ಈಗಾಗಲೇ ತೀರ್ಮಾನ ಮಾಡಲಾಗಿದೆ. ಅದರಲ್ಲಿ ಯಾವುದೇ ಗೊಂದಲಗಳಿಲ್ಲ. ಅವರನ್ನು ಹೊರತುಪಡಿಸಿ ಬೇರೆ ಶಾಸಕರು ಪಕ್ಷವನ್ನು ಬಿಡುವುದಿಲ್ಲ ಎಂದು ತಿಳಿಸಿದರು.

    ಅತೃಪ್ತ ಶಾಸಕರನ್ನು ಹೊರತಾಗಿ ನಮ್ಮ ಪಕ್ಷದ ಬೇರೆ ಶಾಸಕರ ಜೊತೆಗೆ ಬಿಜೆಪಿಯವರು ಮಾತನಾಡಿರಬಹುದು. ಆದರೆ ಅವರಲ್ಲಿ ಪಕ್ಷಬಿಡುವ ಲಕ್ಷಣಗಳು ಕಾಣಿಸುತ್ತಿಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ್ದು, ಅತೃಪ್ತರ ಬಗ್ಗೆ ಚರ್ಚೆ ನಡೆಸಿದ್ದಾರೆ. ಅವರು ಬೆಂಗಳೂರಿಗೆ ವಾಪಸ್ ಬಂದು ಏನು ಕ್ರಮ ಕೈಗೊಳ್ಳಬೇಕು ಅಂತ ತಿಳಿಸಲಿದ್ದಾರೆ ಎಂದರು.

    ಶ್ರೀಲಂಕಾ ಮಾಜಿ ಅಧ್ಯಕ್ಷರ ಭೇಟಿ ಕುರಿತು ಪ್ರತಿಕ್ರಿಯೆ ನೀಡಿದ ಡಿಸಿಎಂ, ಮಹಿಂದಾ ರಾಜಪಕ್ಸೆ ಅವರು ಐಟಿ ಹಾಗೂ ಸ್ಟಾರ್ಟ್ ಅಪ್‍ಗಳ ಬಗ್ಗೆ ಮಾಹಿತಿ ಪಡೆದರು. ಇದನ್ನು ಬಿಟ್ಟು ಬೇರೆ ಯಾವುದೇ ರಾಜಕೀಯ ಅಥವಾ ಒಪ್ಪಂದಗಳ ಕುರಿತು ಚರ್ಚೆ ಮಾಡಲಿಲ್ಲ. ಖಾಸಗಿ ಸಹಭಾಗಿತ್ವದಲ್ಲಿ ಕೈಗೊಳ್ಳಲಾದ ಯೋಜನೆಗಳ ಬಗ್ಗೆ ಚರ್ಚೆ ನಡೆಸಿದರು. ಭಾರತದೊಂದಿಗೆ ಶ್ರೀಲಂಕಾ ಕೂಡ ವೇಗವಾಗಿ ಬೆಳವಣಿಗೆ ಹೊಂದಬೇಕು ಎನ್ನುವ ಉದ್ದೇಶವನ್ನು ವ್ಯಕ್ತಪಡಿಸಿದ್ದಾರೆ ಎಂದರು.

    ನನ್ನ ಅಧಿಕಾರ ಅವಧಿಯಲ್ಲಿ ಹಲವು ಯೋಜನೆ ಜಾರಿಗೆ ತಂದಿದ್ದೆ. ಆದರೆ ಈಗ ದೇಶದ ಅಭಿವೃದ್ಧಿ ಕುಂಠಿತವಾಗಿದೆ ಅಂತ ಮಹಿಂದಾ ರಾಜಪಕ್ಸೆ ಬೇಸರ ವ್ಯಕ್ತಪಡಿಸಿದರು. ಅವರು ಮತ್ತೆ ಅಧಿಕಾರಕ್ಕೆ ಬರಬಹುದು ಎನ್ನುವ ವಿಶ್ವಾಸವಿದೆ ಎಂದು ಜಿ.ಪರಮೇಶ್ವರ್ ತಿಳಿಸಿದರು.

    ಹೆಬ್ಬಾಳ ಪ್ಲೈ ಓವರ್ ನಿರ್ಮಾಣ ಯೋಜನೆಯಲ್ಲಿ ಸ್ವಲ್ಪ ಬದಲಾವಣೆ ಮಾಡುತ್ತಿದ್ದೇವೆ. ಪ್ಲಾನ್ ಸಿದ್ಧವಾದ ಮೇಲೆ ಸಾರ್ವಜನಿಕರು ಹಾಗೂ ಆ ಭಾಗದ ಜನರ ಅಭಿಪ್ರಾಯ ಸಂಗ್ರಹಿಸುತ್ತೇವೆ. ಕೆಲವರು ವಿರೋಧ ಮಾಡುತ್ತಾರೆ ಅಂದ್ರೆ ಯೋಜನೆಯನ್ನು ಬಿಡುವುದಕ್ಕೆ ಆಗಲ್ಲ. ಯೋಜನೆಯಲ್ಲಿ ಲೋಪ ಇದ್ದರೆ ಹೇಳಲಿ ಸರಿಪಡಿಸುತ್ತೇವೆ. ಈ ಯೋಜನೆಯನ್ನು ಅನೇಕರು ಸ್ಟೀಲ್ ಬ್ರಿಡ್ಜ್ ಅಂತ ಕರೆಯುತ್ತಿದಾರೆ. ಆದರೆ ಅದು ಸ್ಟೀಲ್ ಬ್ರೀಡ್ಜ್ ಅಲ್ಲ. ಚಾಲುಕ್ಯ ಸರ್ಕಲ್‍ನಿಂದ ಹೆಬ್ಬಾಳ ಸಂಪರ್ಕಿಸುವ ಪ್ಲೈ ಓವರ್ ಅಷ್ಟೇ ಎಂದು ಸ್ಪಷ್ಟನೆ ನೀಡಿದರು.

    ಬಜೆಟ್ ಬಗ್ಗೆ ಬಿಸಿ ಪಾಟೀಲ್ ಅಸಮಧಾನ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಜಿ.ಪರಮೇಶ್ವರ್ ಅವರು, ನಾವು ಬಜೆಟ್‍ನಲ್ಲಿ 224 ಕ್ಷೇತ್ರಕ್ಕೂ ಯೋಜನೆ ಹಂಚುವುದಿಲ್ಲ. ಕಾರ್ಯಕ್ರಮ ಘೋಷಿಸುತ್ತೇವೆ ಅವರ ಕ್ಷೇತ್ರಕ್ಕೆ ಅನ್ವಯವಾಗುತ್ತದೆ. ರಸ್ತೆ ಕೆರೆ ಅಭಿವೃದ್ಧಿಗೆ ಹಲವು ಕಾರ್ಯಕ್ರಮ ಘೋಷಿಸಿದ್ದಾರೆ. ಅದು ಅವರ ಕ್ಷೇತ್ರಕ್ಕೂ ಅನ್ವಯವಾಗಲಿದೆ. ಎಲ್ಲನ್ನೂ ಬಜೆಟ್‍ನಲ್ಲೇ ಘೋಷಿಸಬೇಕಂತ ಏನು ಇಲ್ಲ. ಯಾವುದೇ ಶಾಸಕರಿಗೆ ಅಸಮಧಾನವಿದ್ದರೆ ನಮಗೆ ಹೇಳಲಿ. ಅವರ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚುವರಿ ಅನುದಾನ ಕೊಡುವುದಕ್ಕೆ ಸಂಪ್ಲಿಮೆಂಟರಿ ಬಜೆಟ್‍ನಲ್ಲಿ ಅವಕಾಶವಿದೆ ಎಂದು ತಿಳಿಸಿದರು.

    ಎನ್‍ಜಿಟಿ ಬಫರ್ ಜೋನ್ ವಿಚಾರವಾಗಿ ಮಾತನಾಡಿ ಅವರು, ಎನ್‍ಜಿಟಿ ಆದೇಶ ಪಾಲಿಸುವುದು ಕಷ್ಟ. ಕೆರೆ ಹಾಗೂ ರಾಜಕಾಲುವೆಯಿಂದ 75 ಮೀಟರ್ ಜಾಗ ಬಿಟ್ಟು ಮನೆ ಕಟ್ಟಿಕೋಬೇಕು. ಇಡೀ ದೇಶದಲ್ಲಿ ಬೆಂಗಳೂರಿಗೆ ಮಾತ್ರ ಎನ್‍ಜಿಟಿ ಆದೇಶ ನೀಡಲಾಗಿದ್ದು, ಇದರಿಂದಾಗಿ 36 ಸಾವಿರ ಮನೆಗಳನ್ನು ಒಡೆಯಬೇಕಾಗುತ್ತದೆ. ಆದೇಶ ಪಾಲನೆ ಮಾಡಿದರೆ ಜನರು ತೊಂದರೆ ಅನುಭವಿಸಬೇಕಾಗುತ್ತದೆ ಎಂದರು.

    ಬಫರ್ ಜೋನ್ ನಿಯಮ ಬದಲಾಯಿಸುವ ಅಗತ್ಯವಿದೆ. ಕೆರೆಗಳಿಗೆ ಹಾಗೂ ರಾಜಕಾಲುವೆಗೆ ಬೇರೆ ಬೇರೆ ನಿಯಮ ಮಾಡುವ ಅಗತ್ಯವಿದೆ. ಈ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತಿರುವೆ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಾಂತಾ ಕ್ಲಾಸ್ ಆಗಿ ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿದ್ರು ಅಮೆರಿಕಾ ಮಾಜಿ ಅಧ್ಯಕ್ಷ

    ಸಾಂತಾ ಕ್ಲಾಸ್ ಆಗಿ ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿದ್ರು ಅಮೆರಿಕಾ ಮಾಜಿ ಅಧ್ಯಕ್ಷ

    ವಾಷಿಂಗ್ಟನ್: ಅಮೆರಿಕದಲ್ಲಿ ಕ್ರಿಸ್‍ಮಸ್ ತಯಾರಿ ಜೋರಾಗಿ ನಡೆಯುತ್ತಿದ್ದು, ಮಾಜಿ ಅಧ್ಯಕ್ಷರಾದ ಬರಾಕ್ ಒಬಾಮ್ ಸಾಂತಾ ಕ್ಲಾಸ್ ವೇಷ ಧರಿಸಿ, ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿ ಎಲ್ಲರಿಗೂ ಆಶ್ಚರ್ಯ ಚಕಿತರನ್ನಾಗುವಂತೆ ಮಾಡಿದ್ದಾರೆ.

    ಬರಾಕ್ ಒಬಾಮಾ ತಮ್ಮ ಸರಳತೆಯಿಂದ ಹೆಸರಾದವರು. ಕ್ರಿಸ್‍ಮಸ್ ನಿಮಿತ್ತ ಅವರು ಸಾಂತಾ ಕ್ಲಾಸ್‍ನಂತೆ ಕೆಂಪು ಟೋಪಿ ಧರಿಸಿ, ಕೈಯಲ್ಲಿ ಉಡುಗೊರೆಗಳ ಜೋಳಿಗೆ ಹಿಡಿದು ವಾಷಿಂಗ್ಟನ್ ಡಿಸಿಯಲ್ಲಿರುವ ನ್ಯಾಷನಲ್ ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿದ್ದರು. ಆಸ್ಪತ್ರೆಯಲ್ಲಿ ಸಾಮಾನ್ಯ ವ್ಯಕ್ತಿಯಂತೆ ಓಡಾಡಿ, ಕಾಯಿಲೆಯಿಂದ ದಾಖಲಾಗಿರುವ ಮಕ್ಕಳಿಗೆ ಅಪ್ಪುಗೆ ನೀಡಿ, ಶುಭಾಶಯ ಕೋರಿ ಜೊತೆಗೆ ಉಡುಗೊರೆಗಳನ್ನು ನೀಡಿ ಸಂತಸ ಹಂಚಿಕೊಂಡಿದ್ದಾರೆ.

    ಒಬಾಮರವರ ಭೇಟಿಯಿಂದಾಗಿ ಆಸ್ಪತ್ರೆಯಲ್ಲಿದ್ದ ಮಕ್ಕಳ ಖುಷಿಯಿಂದ ಕೇಕೆ ಹಾಕುತ್ತಾ ಜೋರಾಗಿ ಕೂಗಿಕೊಂಡಿದ್ದಾರೆ. ಇವನ್ನೆಲ್ಲಾ ಅವರ ಸಹಾಯಕರು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿದ್ದರು. ವಿಡಿಯೋ ಸಾಕಷ್ಟು ವೈರಲ್ ಆಗಿದ್ದು, ಈಗಾಗಲೇ 2.6 ಮಿಲಿಯನ್ ಜನ ವೀಕ್ಷಿಸಿದ್ದಾರೆ. ಅಲ್ಲದೇ ಒಬಾಮಾರವರ ಕರುಣೆ ತುಂಬಿದ ಕಾರ್ಯಕ್ಕೆ ಮೆಚ್ಚುಗೆಯ ಸುರಿಮಳೆಯೇ ಬಂದಿದೆ.

    ನ್ಯಾಷನಲ್ ಆಸ್ಪತ್ರೆ ಕೂಡ ವಿಡಿಯೋವನ್ನು ಶೇರ್ ಮಾಡಿ, ಬರಾಕ್ ಒಬಾಮಾ ಅವರಿಗೆ ಕೃತಜ್ಞತೆ ಸಲ್ಲಿಸಿದೆ. ನಮ್ಮಲ್ಲಿನ ರೋಗಪೀಡಿತ ಮಕ್ಕಳಲ್ಲಿ ಉತ್ಸಾಹ ಮೂಡಿಸಿದ್ದೀರಿ. ನಿಮ್ಮೊಂದಿಗೆ ಕಳೆದ ಕ್ಷಣಗಳು ಅವರಿಗೆ ಸದಾ ಸ್ಮರಣೀಯ. ನಿಮ್ಮ ಉಡುಗೊರೆಗಳಿಂದ ತುಂಬ ಸಂತೋಷ ಹೊಂದಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

    ಇನ್ನು ಆಸ್ಪತ್ರೆಯಲ್ಲಿ ಮಾತನಾಡಿದ ಒಬಾಮಾ ಅವರು, ನನಗೆ ಇಲ್ಲಿನ ಮಕ್ಕಳು ಹಾಗೂ ಅವರ ಕುಟುಂಬದೊಂದಿಗೆ ಸಮಯ ಕಳೆಯಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು. ಎರಡು ಹೆಣ್ಣು ಮಕ್ಕಳ ತಂದೆಯಾಗಿ ಈ ಕಾಯಿಲೆಯಿಂದ ಬಳಲುತ್ತಿರುವ ಮಕ್ಕಳ ಪಾಲಕರ ಕಷ್ಟವನ್ನು ಅರ್ಥ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಎರಡನೇ ಮಹಾಯುದ್ಧದ ಹೀರೋ, ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್ ಎಚ್.ಡಬ್ಲ್ಯು ಬುಷ್ ವಿಧಿವಶ

    ಎರಡನೇ ಮಹಾಯುದ್ಧದ ಹೀರೋ, ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್ ಎಚ್.ಡಬ್ಲ್ಯು ಬುಷ್ ವಿಧಿವಶ

    ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್ ಎಚ್.ಡಬ್ಲ್ಯು ಬುಷ್ (94) ಶುಕ್ರವಾರ ರಾತ್ರಿ ನಿಧನರಾಗಿದ್ದಾರೆ ಎಂದು ಬುಷ್ ಕುಟುಂಬದ ವಕ್ತಾರ ಜಿಮ್‍ಮ್ಯಾಗ್ರಥ್ ಟ್ವೀಟ್ ಮೂಲಕ ತಿಳಿಸಿದ್ದಾರೆ.

    ಬುಷ್ ಅವರು ಅಮೆರಿಕದ 41ನೇ ಅಧ್ಯಕ್ಷರಾಗಿ 1989ರಿಂದ 1993ರವರೆಗೆ ಆಡಳಿತ ನಡೆಸಿದ್ದರು. ಕಳೆದ ಏಪ್ರಿಲ್‍ನಲ್ಲಿ ಬುಷ್ ಅವರ ಪತ್ನಿ ಬಾರ್ಬರಾ ಮೃತಪಟ್ಟಿದ್ದರು. ಪತ್ನಿಯನ್ನು ಪ್ರೀತಿಸುತ್ತಿದ್ದರು. ಆದರೆ ಬಾರ್ಬರಾ ನಿಧನದಿಂದ ಶಾಕ್ ಒಳಗಾಗಿ ಅನಾರೋಗ್ಯಕ್ಕೆ ತುತ್ತಾಗಿದ್ದರು. ಬುಷ್ ಅವರನ್ನು ಹೂಸ್ಟನ್ ಮೆಥೋಡಿಸ್ಟ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಮೃತಪಟ್ಟಿದ್ದಾರೆ. ಬುಷ್ ಅವರಿಗೆ ಐದು ಮಕ್ಕಳು, 17 ಮೊಮ್ಮಕ್ಕಳು ಇದ್ದಾರೆ.

    ಎರಡನೇ ಮಹಾಯುದ್ಧವನ್ನು ಸಮರ್ಥವಾಗಿ ಬುಷ್ ಅವರು ಎದುರಿಸಿದ್ದರು. ಈ ಮೂಲಕ ಅವರು ಹೀರೋ ಎಂದೇ ಕರೆಸಿಕೊಂಡಿದ್ದರು. ಬಳಿಕ ಅಮೆರಿಕ-ರಷ್ಯಾ ನಡುವಿನ ಶೀತಲ ಸಮರದ ಸಂದರ್ಭದಲ್ಲಿ ದೇಶವನ್ನು ವ್ಯವಸ್ಥಿತವಾಗಿ ಮುನ್ನಡೆಸಿದರು. 1991ರ ಗಲ್ಫ್ ಯುದ್ಧದಲ್ಲೂ ಅಮೆರಿಕ ಯಶಸ್ಸು ಕಾಣಲು ಬುಷ್ ಕಾರಣರಾಗಿದ್ದರು.

    ಜಾರ್ಜ್ ಎಚ್.ಡಬ್ಲ್ಯು ಬುಷ್ ಅವರು 1993ರ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಬಿಲ್ ಕ್ಲಿಂಟನ್ ವಿರುದ್ಧ ಸೋತಿದ್ದರು. ಆದರೆ ಕ್ಲಿಂಟನ್ ಅಧಿಕಾರದ ಬಳಿಕ ಬುಷ್ ಪುತ್ರ ಜಾರ್ಜ್ ಡಬ್ಲ್ಯು ಬುಷ್ 43ನೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.

    ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮಾಜಿ ಅಧ್ಯಕ್ಷ ಬರಾಕ್ ಒಬಮಾ ಸೇರಿದಂತೆ ಅನೇಕ ನಾಯಕರು ಬುಷ್ ಅವರ ನಿಧನಕ್ಕೆ ಸಂತಾಪ ಸೂಚಿಸಿ, ಟ್ವೀಟ್ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv