Tag: Former PM Deve Gowda

  • ಒಂದೇ ವೇದಿಕೆಯಲ್ಲಿ ಮಾಧ್ಯಮಗಳ ವಿರುದ್ಧ ಗರಂ ಆದ ಗುರು ಶಿಷ್ಯರು!

    ಒಂದೇ ವೇದಿಕೆಯಲ್ಲಿ ಮಾಧ್ಯಮಗಳ ವಿರುದ್ಧ ಗರಂ ಆದ ಗುರು ಶಿಷ್ಯರು!

    ಬೆಂಗಳೂರು: ಉಪಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡು ಒಗ್ಗಟ್ಟಿನಿಂದ ಚುನಾವಣೆ ಎದುರಿಸಲು ಸಿದ್ಧವಾಗಿರುವ ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಆಯೋಜಿಸಿದ್ದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮಾಧ್ಯಮಗಳ ವಿರುದ್ಧ ಗರಂ ಆಗಿದ್ದಾರೆ.

    ನಗರದ ಅಶೋಕ ಹೋಟೆಲ್‍ನಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಎಚ್‍ಡಿಡಿ ಗರಂ ಆದರು. ಮಾಧ್ಯಮ ಮಿತ್ರರು ಹಳೆಯ ಹೇಳಿಕೆಗಳ ಬಗ್ಗೆ ಪ್ರಶ್ನೆ ಕೇಳಿ ನಮ್ಮ ಮನಸ್ಸನ್ನು ಕೆಡಸುವ ಪ್ರಯತ್ನ ಮಾಡಬೇಡಿ. ಪ್ರಚಲಿತ ವಿದ್ಯಮಾನ ಏನಿದೆಯೋ ಅದನ್ನು ಹಾಗೇ ನಡೆದುಕೊಂಡು ಹೋಗಲು ಬಿಟ್ಟು, ಹಳೆಯದನ್ನ ಕೆಣಕಬೇಡಿ ಎಂದು ಗರಂ ಆಗಿ ಹೇಳಿದರು.

    ಕೈ ಮುಗಿದು ಕೇಳುತ್ತೇನೆ ಹಿಂದಿನ ಹೇಳಿಕೆಗಳ ಬಗ್ಗೆ ಪ್ರಶ್ನೆ ಕೇಳಲೇಬೇಡಿ. ನನ್ನ ಬಗ್ಗೆ ನೀವು ಏನೆಲ್ಲಾ ಮಾಡಿದ್ದೀರಿ ಎನ್ನುವುದು ಗೊತ್ತಿದೆ. ನನಗೆ 86 ವರ್ಷ, ನಿಮ್ಮ ವಯಸ್ಸು ಎಷ್ಟು? ನನಗೆ ಪಾಠ ಮಾಡುತ್ತೀರಾ ಎಂದು ಮಾಧ್ಯಮದವರನ್ನು ಪ್ರಶ್ನಿಸಿದರು. ನಮ್ಮ ಅಜೆಂಡಾ ಕೋಮವಾದಿ ಪಕ್ಷ ಸೋಲಿಸುವುದು. ಎಲ್ಲಾ ಕಾರ್ಯಕರ್ತರಿಗೂ ಮನವಿ ಮಾಡಲಾಗಿದ್ದು, ಎಲ್ಲರೂ ಒಪ್ಪಿದ್ದಾರೆ. ನಮ್ಮ ಎರಡು ಪಕ್ಷದ ಕಾರ್ಯಕರ್ತರು ಒಟ್ಟಿಗೆ ಕೆಲಸ ಮಾಡುತ್ತಾರೆ ಎಂದರು.

    ಈ ವೇಳೆ ಮಧ್ಯಪ್ರವೇಶ ಮಾಡಿದ ಸಿದ್ದರಾಮಯ್ಯ ಅವರು, ದೇವೇಗೌಡರಿಗೆ 60 ವರ್ಷ ರಾಜಕೀಯ ಅನುಭವ ಇದೆ. ಹಿಂದೆ ಏನು? ಮಾತನಾಡಿದ್ದೇವೆ ಎಂಬುದು ಮುಖ್ಯ ಅಲ್ಲ. ಸದ್ಯದ ಸ್ಥಿತಿ ಬಗ್ಗೆ ಚರ್ಚೆ ನಡೆಯಲಿ ಎಂದು ಹೇಳಿ ವಾತಾವರಣವನ್ನು ತಿಳಿಗೊಳಿಸುವ ಪ್ರಯತ್ನ ಮಾಡಿದರು.

    ಇತ್ತ ಸುದ್ದಿಗೋಷ್ಠಿ ಮುಗಿದ ಬಳಿಕ ಮಾಧ್ಯಮಗಳು ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರವಾಗಿ ಶಿವಕುಮಾರ್ ನೀಡಿದ್ದ ಹೇಳಿಕೆ ಕುರಿತು ಪ್ರಶ್ನೆ ಕೇಳಿದ್ದಕ್ಕೆ ಸಿದ್ದರಾಮಯ್ಯ, ಈ ವೇದಿಕೆಯಲ್ಲಿ ನಾನು ಲಿಂಗಾಯತ ಹೇಳಿಕೆ ಕುರಿತು ಮಾತನಾಡಲ್ಲ. ಅದನ್ನು ಮಾತನಾಡಲು ಬೇರೆ ವೇದಿಕೆಯಲ್ಲಿ ಸಿಗುತ್ತೇನೆ. ನೀವು ಏನೇ ಕೇಳಿದರೂ ಇಲ್ಲಿ ನಾನು ಮಾತನಾಡಲ್ಲರಿ ಎಂದು ಗರಂ ಆಗಿ ಪ್ರತಿಕ್ರಿಯಿಸಿದರು. ಇದನ್ನೂ ಓದಿ: 12 ವರ್ಷಗಳ ಬಳಿಕ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಸಿದ್ದು, ಎಚ್‍ಡಿಡಿ 

    ಡಿ.ಕೆ ಶಿವಕುಮಾರ್ ಅವರ ಹೇಳಿಕೆಗೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಅದು ಅವರ ವೈಯಕ್ತಿಕ ಅಭಿಪ್ರಾಯ. ಲಿಂಗಾಯತ ಧರ್ಮದ ಬಗ್ಗೆ ಶಿಫಾರಸ್ಸು ಮಾಡುವಾಗ ಕ್ಯಾಬಿನೆಟ್ ರಲ್ಲಿ ಚರ್ಚೆ ನಡೆಸಿ ತೀರ್ಮಾನ ಮಾಡಿದ್ದೇವೆ. ಆಗ ಸಭೆಯಲ್ಲಿ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್ ಕೂಡ ಇದ್ದರು. ಆದರೆ ಈಗ ಅವರು ಯಾವ ಅರ್ಥ ದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಅವರ ಹೇಳಿಕೆಯಿಂದ ಪಕ್ಷ ಹಾಗೂ ಉಪಚುನಾವಣೆ ಮೇಲೆ ಯಾವುದೇ ಪರಿಣಾಮ ಉಂಟಾಗುವುದಿಲ್ಲ. ನನ್ನನ್ನ ಯಾರು ಟಾರ್ಗೆಟ್ ಮಾಡಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 12 ವರ್ಷಗಳ ಬಳಿಕ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಸಿದ್ದು, ಎಚ್‍ಡಿಡಿ

    12 ವರ್ಷಗಳ ಬಳಿಕ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಸಿದ್ದು, ಎಚ್‍ಡಿಡಿ

    ಬೆಂಗಳೂರು: ಬರೋಬ್ಬರಿ 12 ವರ್ಷಗಳ ಬಳಿಕ ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡ ಮತ್ತು ಕಾಂಗ್ರೆಸ್ ಪಕ್ಷದ ಮಾಜಿ ಸಿಎಂ ಸಿದ್ದರಾಮಯ್ಯ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇಂದು ನಗರದ ಅಶೋಕ ಹೋಟೆಲ್ ನಲ್ಲಿ ಉಪ ಚುನಾವಣೆಯ ಹಿನ್ನೆಲೆಯಲ್ಲಿ ನಡೆದ ಜೆಡಿಎಸ್, ಕಾಂಗ್ರೆಸ್ ಪಕ್ಷದ ಜಂಟಿ ಸುದ್ದಿಗೋಷ್ಠಿಯಲ್ಲಿ ಇಬ್ಬರು ನಾಯಕರು ಕಾಣಿಸಿಕೊಂಡರು.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೆಚ್‍ಡಿಡಿ, ರಾಜ್ಯದಲ್ಲಿ ಎರಡು ಪಕ್ಷಗಳು ಜಂಟಿ ಸರ್ಕಾರ ರಚಿಸಿದ್ದೇವೆ. 12 ವರ್ಷದ ಮೇಲೆ ನಾನು ಮತ್ತು ಸಿದ್ದರಾಮಯ್ಯನವರು ಒಂದೇ ವೇದಿಕೆಯಲ್ಲಿ ಉಪಸ್ಥಿತರಿದ್ದೇವೆ. ಯಾವುದೇ ತಪ್ಪುಮಾಡಿದ್ದರು ಕ್ಷಮಿಸಿ ಎಂದು ರಾಜ್ಯದ ಜನರ ಮುಂದೆ ಹೋಗುತ್ತೇವೆ. ನಾನು ಸಿದ್ದರಾಮಯ್ಯ ಒಳ್ಳೆಯ ಸ್ನೇಹಿತರು. ಒಟ್ಟಿಗೆ ಪ್ರಚಾರ ಹೋಗಲು ಈ ಮೊದಲೇ ತೀರ್ಮಾನ ಮಾಡಿದ್ದೇವೆ. ಸದ್ಯ ನಡೆಯುತ್ತಿರುವ ಮೂರು ಲೋಕಸಭಾ ಹಾಗೂ 2 ವಿಧಾನಸಭಾ ಉಪ ಚುನಾವಣೆಯಲ್ಲಿ ಜಾತ್ಯಾತೀತ ಶಕ್ತಿಯನ್ನು ಎದುರಿಸಲು ಕರ್ನಾಟಕದಲ್ಲಿ ಒಟ್ಟಾಗಿ ಹೋಗುತ್ತೇವೆ. 5 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಒಟ್ಟಿಗೆ ಶಕ್ತಿ ಪ್ರದರ್ಶಿಸುತ್ತೇವೆ. ಯಾವುದೇ ಸನ್ನಿವೇಶದಲ್ಲಿ ಕಿಂಚಿತ್ತು ಅನುಮಾನಕ್ಕೆ ಎಡೆಮಾಡಿಕೊಡದೇ ಹೋರಾಟ ಮಾಡಿ ಉಪಚುನಾವಣೆ ಗೆಲ್ಲುತ್ತೇವೆ ಎಂದರು.

    ಚುನಾವಣೆಯಲ್ಲಿ 5 ಕ್ಷೇತ್ರಗಳಲ್ಲಿ ಒಟ್ಟಿಗೆ ಪ್ರಚಾರಕ್ಕೆ ಹೋಗುತ್ತೇವೆ. ಎರಡು ಪಕ್ಷದ ನಾಯಕರು ಒಟ್ಟಿಗೆ ಪ್ರಚಾರ ಮಾಡುತ್ತಾರೆ. ವೈಯಕ್ತಿಕ ಪ್ರತಿಷ್ಠೆ ಬಿಟ್ಟು ರಾಜ್ಯ ಒಳಿತಿಗಾಗಿ ಕಾರ್ಯನಿರ್ವಹಿಸಬೇಕು. ಒಂದು ಕಾಲದಲ್ಲಿ ಎದುರಾಳಿಗಳಾಗಿ ಇದ್ದವರೇ ನಾವು ಒಂದಾಗಿದ್ದೇವೆ. ಆ ಮೂಲಕ ಜಾತ್ಯಾತೀತ ವ್ಯವಸ್ಥೆಯನ್ನು ಪ್ರಬಲಗೊಳಿಸುತ್ತೇವೆ. ಪಕ್ಷದ ತಳಮಟ್ಟದ ಕಾರ್ಯಕರ್ತರಲ್ಲಿ ಸ್ವಲ್ಪ ಬೇಸರವಿದೆ. ಆದರೆ ಅವರನ್ನು ನಾವು ಮನವೊಲಿಸಿದ್ದೇವೆ. ಹಳ್ಳಿಗಳಲ್ಲಿ ಎರಡು ಗುಂಪಾಗಿ ಪಕ್ಷದ ಪರ ಹೋರಾಟ ಮಾಡಿದವರು. ಆದರೆ ದೇಶದ ದೃಷ್ಟಿಯಿಂದ ಅದೆಲ್ಲವನ್ನು ಮರೆತು ಒಟ್ಟಿಗೆ ಹೋಗಬೇಕು. ಈ ಮೂಲಕ ನಾವು ಒಂದು ದೃಢವಾದ ನಿಲುವನ್ನು ತೆಗೆದುಕೊಂಡಿದ್ದೇವೆ. ಈ ಮಹತ್ವದ ಕಾರ್ಯಕ್ಕೆ ಎಲ್ಲರು ಸಹಕರಿಸಬೇಕು. ರಾಜ್ಯದ ಜನರ ಕೂಡ ಸಹಕಾರ ನೀಡಿ ಸಮ್ಮಿಶ್ರ ಸರ್ಕಾರಕ್ಕೆ ಈ ಉಪ ಚುನಾವಣೆಯಲ್ಲಿ ಆಶೀರ್ವಾದ ಮಾಡಬೇಕು. ಕೈ ಮುಗಿದು ಕೇಳಿಕೊಳ್ಳುತ್ತೇವೆ, ಹಿಂದೆ ನಾವು ವಿರುದ್ಧವಾಗಿ ನಿಂತು ಸಾಕಷ್ಟು ಮಾತನಾಡಿದ್ದೇವೆ. ಅದು ಯಾವುದನ್ನು ಜನರು ಮನಸಿನಲ್ಲಿಟ್ಟುಕೊಳ್ಳಬಾರದು. ಕಾರ್ಯಕರ್ತರು ಒಂದಾಗಿ ಶ್ರಮಿಸಬೇಕು ಎಂದು ಮನವಿ ಮಾಡಿದರು.

    ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ದೇವೇಗೌಡರು, ಕೇಂದ್ರ ಸರ್ಕಾರದಿಂದ ಹಲವು ಸಮಸ್ಯೆಗಳು ಹುಟ್ಟಿಕೊಂಡಿವೆ. ಇಡೀ ದೇಶದಲ್ಲಿ ರೈತರು ಸೇರಿದಂತೆ, ನಾನಾ ಸಮಸ್ಯೆ ಪ್ರಾರಂಭವಾಗಿವೆ. ಗುಜರಾತ್, ಕಾಶ್ಮೀರ, ಉತ್ತರ ಪ್ರದೇಶದಲ್ಲಿ ಸಮಸ್ಯೆಗಳು ಕಾಣುತ್ತಿವೆ. ಕಾಶ್ಮೀರದಲ್ಲಿ ನೆಮ್ಮದಿಯ ವಾತಾವರಣವಿಲ್ಲ. ನಾನು ಐದು ಬಾರಿ ಕಾಶ್ಮೀರಕ್ಕೆ ಭೇಟಿ ನೀಡಿದ್ದೆ. ಆದರೆ ನನ್ನ ಅವಧಿಯಲ್ಲಿ 13 ಪಕ್ಷಗಳ ಸರ್ಕಾರವಿದ್ದರೂ ಉತ್ತಮ ಆಡಳಿತ ನಡೆಸಿದ್ದೆ ಎಂದು ವಾಗ್ದಾಳಿ ನಡೆಸಿದರು.

    ಸಿದ್ದರಾಮಯ್ಯ ಮಾತನಾಡಿ, ಕೋಮವಾದಿ ಪಕ್ಷವನ್ನು ಸೋಲಿಸಲು ನಾವು ಜೊತೆಯಾಗಿರುವುದು ಅನಿವಾರ್ಯ. 2019ರ ಲೋಕಸಭೆ ಚುನಾವಣೆ ದೃಷ್ಟಿಯಲ್ಲಿ ಇಟ್ಟುಕೊಂಡು ಮೈತ್ರಿ ನಡೆಸಿದ್ದೇವೆ. ನಮ್ಮ ಉದ್ದೇಶ ಸ್ಪಷ್ಟವಾಗಿದೆ. ಕೋಮುವಾದಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಬಾರದು ಅಂತ ಸರ್ಕಾರ ರಚಿಸಿದ್ದೇವೆ. ಅಂತೆಯೇ ಇಡೀ ದೇಶದಲ್ಲಿ ಜಾತ್ಯಾತೀತ ಶಕ್ತಿಗಳು ಒಟ್ಟಾಗಬೇಕು ಎಂದು ದೇವೇಗೌಡರು ಅವಿರತವಾಗಿ ಪ್ರಯತ್ನ ಪಡುತ್ತಿದ್ದಾರೆ. ಅದ್ದರಿಂದ ಈ ಚುನಾವಣೆಯಲ್ಲಿಯೂ ಒಂದಾಗಿ ಪ್ರಚಾರ ನಡೆಸುತ್ತೇವೆ. ರಾಮನಗರದಲ್ಲೂ ಪ್ರಚಾರ ನಡೆಸುತ್ತೇನೆ. ಅಕ್ಟೋಬರ್ 30 ರಂದು ಶಿವಮೊಗ್ಗದಲ್ಲಿ ಬೃಹತ್ ಜಂಟಿ ಸಭೆ ಮಾಡುತ್ತೇವೆ ಎಂದು ತಿಳಿಸಿದರು.

    ಸುದ್ದಿಗೋಷ್ಠಿಯಲ್ಲಿ ಸಿಎಂ ಕುಮಾರಸ್ವಾಮಿ, ಡಿಸಿಎಂ ಪರಮೇಶ್ವರ್, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಸಚಿವ ಡಿಕೆ ಶಿವಕುಮಾರ್ ಸೇರಿದಂತೆ ಎರಡು ಪಕ್ಷದ ಪ್ರಮುಖ ಮುಖಂಡರು ಉಪಸ್ಥಿತರಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv