Tag: former mla suresh gowda

  • ಹಾಲಿ, ಮಾಜಿ ಶಾಸಕರ ಹೈ ಡ್ರಾಮಾಕ್ಕೆ ಹೈರಾಣಾದ ಅಧಿಕಾರಿಗಳು

    ಹಾಲಿ, ಮಾಜಿ ಶಾಸಕರ ಹೈ ಡ್ರಾಮಾಕ್ಕೆ ಹೈರಾಣಾದ ಅಧಿಕಾರಿಗಳು

    ತುಮಕೂರು: ತುಮಕೂರು ಗ್ರಾಮಾಂತರ ಕ್ಷೇತ್ರದ ಜೆಡಿಎಸ್ ಶಾಸಕ ಗೌರಿಶಂಕರ್ ಹಾಗೂ ಬಿಜೆಪಿ ಮಾಜಿ ಶಾಸಕ ಸುರೇಶ್ ಗೌಡ ಅವರ ಹೈಡ್ರಾಮಾಕ್ಕೆ ಅಧಿಕಾರಿಗಳು ಇಂದು ಹೈರಾಣಾಗಿದ್ದಾರೆ.

    ಜಿಲ್ಲಾಧಿಕಾರಿ ಕಚೇರಿಯಲ್ಲಿ ಶಾಸಕ ಗೌರಿಶಂಕರ್ ಹಾಗೂ ಸುರೇಶ್ ಗೌಡ ಅವರು ಆರೋಪ ಪ್ರತ್ಯಾರೋಪ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಅಧಿಕಾರಿಗಳ ವಿರುದ್ಧವು ಗುಡುಗಿ, ದೂರು ನೀಡಿದ್ದಾರೆ.

    ಬೆಳಗುಂಬ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೂತ್‍ಗಳಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರಿಗೆ ಕಡಿಮೆ ಮತ ಬಂದಿವೆ. ಹೀಗಾಗಿ ಶಾಸಕ ಗೌರಿಶಂಕರ್ ಅವರು ಬೆಳಗುಂಬ ಬೂತ್ ವ್ಯಾಪ್ತಿಯ ಜನರ ಮೇಲೆ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಬಗರ್ ಹುಕುಂನಲ್ಲಿ ಕೆಲವರಿಗೆ ಮಂಜೂರಾದ ಜಮೀನನ್ನು ಶಾಸಕರು ರದ್ದುಪಡಿಸುವ ಹುನ್ನಾರ ನಡೆಸುತ್ತಿದ್ದಾರೆ ಎಂದು ಸುರೇಶ್ ಗೌಡ ಆರೋಪಿಸಿದ್ದಾರೆ.

    ಈ ಸಂಬಂಧ ನೂರಾರು ಸಂಖ್ಯೆಯಲ್ಲಿ ಬಗರ್ ಹುಕುಂ ಫಲಾನುಭವಿಗಳ ಜೊತೆಗೆ ಮಾಜಿ ಶಾಸಕ ಸುರೇಶ್ ಗೌಡ ಅವರು ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದರು. ಬಳಿಕ ಶಾಸಕ ಗೌರಿಶಂಕರ್ ವಿರುದ್ಧ ದೂರು ನೀಡಿದರು.

    ಸುರೇಶ್ ಗೌಡ ಅವರ ಬೆನ್ನಲ್ಲೇ ಜಿಲ್ಲಾಧಿಕಾರಿಗಳ ಕಚೇರಿಗೆ ನೂರಾರು ಜನ ಬೆಂಬಲಿಗರೊಂದಿಗೆ ಶಾಸಕ ಗೌರಿಶಂಕರ್ ಆಗಮಿಸಿದರು. ಈ ವೇಳೆ ಶಾಸಕರು, ಸುರೇಶ್ ಗೌಡರ ಅಧಿಕಾರ ಅವಧಿಯಲ್ಲಿ ಬಗರ್ ಹುಕುಂ ಜಮೀನು ಮಂಜೂರು ಮಾಡುವಲ್ಲಿ ಅಕ್ರಮ ನಡೆದಿದೆ. ಈ ಅಕ್ರಮದಲ್ಲಿ ಭಾಗಿಯಾದ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

    ಶಾಸಕ ಗೌರಿಶಂಕರ್ ಹಾಗೂ ಮಾಜಿ ಶಾಸಕ ಸುರೇಶ್ ಗೌಡ ಅವರ ಮಧ್ಯೆ ಕಳೆದ ಒಂದು ವರ್ಷದಿಂದಲೂ ಸಣ್ಣಪುಟ್ಟ ವಿಚಾರಕ್ಕೂ ಫೈಟ್ ನಡೆಯುತ್ತಿದೆ. ಇದು ದಿನದಿಂದ ದಿನಕ್ಕೆ ಅತಿರೇಕಕ್ಕೆ ಹೋಗುತ್ತಿದೆ. ಆದರೆ ಹಾಲಿ, ಮಾಜಿಗಳ ಕಿತ್ತಾಟದಿಂದ ಅಧಿಕಾರಿಗಳು ಹೈರಾಣಾಗುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

  • ಬಿಜೆಪಿ ಮಾಜಿ ಶಾಸಕನ ವಿರುದ್ಧ ಎಫ್‍ಐಆರ್ ದಾಖಲು

    ಬಿಜೆಪಿ ಮಾಜಿ ಶಾಸಕನ ವಿರುದ್ಧ ಎಫ್‍ಐಆರ್ ದಾಖಲು

    ತುಮಕೂರು: ಪ್ರಚೋದನಕಾರಿಯಾಗಿ ಭಾಷಣ ಮಾಡಿದ ಮೂಲಕ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದ ಬಿಜೆಪಿಯ ಮಾಜಿ ಶಾಸಕ ಸುರೇಶ್‍ಗೌಡ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

    ಹೊನಸಿಗೆರೆ ಗ್ರಾಮದಲ್ಲಿ ನಡೆದಿದ್ದ ಕಾರ್ಯಕರ್ತರ ಸಭೆಯಲ್ಲಿ ಸುರೇಶ್ ಗೌಡ ಅವರು, ಜೆಡಿಎಸ್ ಬಗ್ಗೆ ಜನರಲ್ಲಿ ದ್ವೇಷ ಹುಟ್ಟುವ ರೀತಿ ಪ್ರಚೋದನಕಾರಿಯಾಗಿ ಭಾಷಣ ಮಾಡಿದ್ದರು. ಈ ಸಂಬಂಧ ವಿಚಕ್ಷಣಾದಳದ ಅಧಿಕಾರಿ ಡಿ.ಜಯರಾಮಣ್ಣ ಅವರು ಮಾಜಿ ಶಾಸಕರ ವಿರುದ್ಧ ಹೆಬ್ಬೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

    ಮಾಜಿ ಶಾಸಕ ಸುರೇಶ್ ಗೌಡ ಅವರ ವಿರುದ್ಧ ಹೆಬ್ಬೂರು ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 188, 505 (ಸಾರ್ವಜನಿಕ ಕೇಡಿಗೆ ಕಾರಣವಾಗುವ ಹೇಳಿಕೆ) ಅಡಿ ಎಫ್‍ಐಆರ್ ದಾಖಲಾಗಿದೆ.

    ಸುರೇಶ್‍ಗೌಡ ಹೇಳಿದ್ದೇನು?:
    ಒಂದೊಂದು ವೋಟು ಕೂಡ ಮುಖ್ಯ. ಯಾವುದಕ್ಕೂ ಎದೆಗುಂದದೆ ದೊಣ್ಣೆ ಹಿಡಿದು ನಿಂತುಕೊಳ್ಳಿ. ಯಾವನ್ ಬರ್ತಾನೋ ಬರಲಿ, ನನ್ಮಕ್ಳು ಜೆಡಿಎಸ್‍ನವರನ್ನು ಹೆದರಿಸಬೇಕು. ಅವರು ಮೋಸ ಮಾಡ್ತಾರೆ. ಅವರು ಕೌರವ ವಂಶಸ್ಥರು. ಅವರ ಮೇಲೆ ಯುದ್ಧ ಮಾಡಬೇಕಾದರೆ ಕೃಷ್ಣನಂತೆ ನಾನು ಇರುತ್ತೀನಿ. ನಿಂತ್ಕೊಂಡು ಯುದ್ಧ ಮಾಡಿ ಅವರನ್ನು ಸಂಹಾರ ಮಾಡೋಣ. ಅವರ ಟೆಕ್ನಿಕ್ಸ್ ನಂಗೆ ಗೊತ್ತಿದೆ ಎಂದು ಹೇಳಿದ್ದರು.