Tag: former minister

  • ಮಾಫಿಯಾ, ಕಳ್ಳರಿಗೆ ಹಾಗೂ ರೌಡಿಗಳಿಗೆ ಬಿಜೆಪಿ ಟಿಕೆಟ್ ಮಾರಿಕೊಂಡಿದೆ: ಮಾಜಿ ಸಚಿವ ಸೊಗಡು ಶಿವಣ್ಣ

    ಮಾಫಿಯಾ, ಕಳ್ಳರಿಗೆ ಹಾಗೂ ರೌಡಿಗಳಿಗೆ ಬಿಜೆಪಿ ಟಿಕೆಟ್ ಮಾರಿಕೊಂಡಿದೆ: ಮಾಜಿ ಸಚಿವ ಸೊಗಡು ಶಿವಣ್ಣ

    ತುಮಕೂರು: ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿಯು ಮಾಫಿಯಾದವರು, ಕಳ್ಳರು ಹಾಗೂ ರೌಡಿಗಳಿಗೆ ಟಿಕೆಟ್ ಮಾರಿಕೊಂಡಿದೆ ಎಂದು ಸ್ವಪಕ್ಷೀಯ ನಾಯಕ ಹಾಗೂ ಮಾಜಿ ಸಚಿವ ಸೊಗಡು ಶಿವಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ನಗರದ ಖಾಸಗಿ ಹೊಟೇಲ್‍ನಲ್ಲಿ ನಡೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿಯು ಸ್ಥಳೀಯ ಸಂಸ್ಥೆಯ ಚುನಾವಣೆಗಳಿಗೆ ಟಿಕೆಟ್ ನೀಡುವಾಗ ನನ್ನ ಹಾಗೂ ನಮ್ಮ ಬೆಂಬಲಿಗರನ್ನು ಕಡೆಗಣಿಸಿದೆ. ಚುನಾವಣೆಗಳಲ್ಲಿ ಸಜ್ಜನರಿಗೆ ಟಿಕೆಟ್ ನೀಡದೇ, ಮಾಫಿಯಾದವರು, ಕಳ್ಳರು ಹಾಗೂ ರೌಡಿ ಪಟ್ಟ ಹೊಂದಿರುವ ಮಂದಿಗೆ ಟಿಕೆಟನ್ನು ಮಾರಿಕೊಂಡಿದ್ದಾರೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.

    ಜಿಲ್ಲೆಯ ನಾಲ್ಕು ಜನ ಬಿಜೆಪಿ ಶಾಸಕರುಗಳು ನಿಷ್ಕ್ರಿಯರಾಗಿದ್ದಾರೆ. ಯಾರಿಗೂ ಸಹ ಸರ್ಕಾರಗಳ ಲೋಪಗಳ ವಿರುದ್ಧ ಹೋರಾಡುವ ತಾಕತ್ತಿಲ್ಲ. ಈ ಮೊದಲು ಕಾಂಗ್ರಸ್ಸಿನಲ್ಲಿದ್ದುಕೊಂಡು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹಾಗೂ ಹಿರಿಯ ಮುಖಂಡರಾದ ಎಲ್.ಕೆ.ಅಡ್ವಾಣಿಯವರು ವಿರುದ್ಧ ಲಘುವಾಗಿ ಮಾತನಾಡಿದವರು, ಇಂದು ಬಿಜೆಪಿಯಲ್ಲಿ ಹಿಡಿತ ಸಾಧಿಸಿದ್ದಾರೆ ಎನ್ನುವ ಮೂಲಕ ಶಾಸಕ ಜಿ.ಬಿ.ಜ್ಯೋತಿ ಗಣೇಶ್ ಹಾಗೂ ಮಾಜಿ ಸಂಸದ ಜಿ.ಎಸ್.ಬಸವರಾಜ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಾಜಿ ಸಚಿವ ತಿಪ್ಪೇಸ್ವಾಮಿ ನಿಧನ

    ಮಾಜಿ ಸಚಿವ ತಿಪ್ಪೇಸ್ವಾಮಿ ನಿಧನ

    ಬೆಂಗಳೂರು: ಬಹು ಅಂಗಾಂಗ ವೈಫಲ್ಯದಿಂದಾಗಿ ಬಳಲುತ್ತಿದ್ದ ಮಾಜಿ ಸಚಿವ ತಿಪ್ಪೇಸ್ವಾಮಿ ಚಿಕಿತ್ಸೆ ಫಲಕಾರಿಯಾಗದೇ ಇಂದು ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

    76 ವರ್ಷದ ತಿಪ್ಪೇಸ್ವಾಮಿಯವರು, ಬಹು ಅಂಗಾಂಗ ಸಮಸ್ಯೆಯಿಂದ ಕಳೆದೊಂದು ವಾರದಿಂದ ನಗರದ ಕೊಲಂಬಿಯಾ ಏಷ್ಯಾ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಬೆಳಗಿನ ಜಾವ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಬಾರದ ಲೋಕಕ್ಕೆ ತೆರಳಿದ್ದಾರೆ.

    ಕುಟುಂಬಸ್ಥರು ಮೃತರ ಪಾರ್ಥಿವ ಶರೀರವನ್ನು ಚಳ್ಳಕೆರೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಿದ್ದು, ಇಂದು ಸಂಜೆ ಸ್ವಗ್ರಾಮವಾದ ಕಾಳಪ್ಪನಹಟ್ಟಿಯಲ್ಲಿ ಅಂತ್ಯಕ್ರಿಯೆ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.

    ತಿಪ್ಪೇಸ್ವಾಮಿಯವರು ಮೂಲತಃ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯ ಕಾಳಪ್ಪನಹಟ್ಟಿಯ ಗ್ರಾಮದವರಾಗಿದ್ದರು. ತಮ್ಮ ರಾಜಕೀಯ ಜೀವನವನ್ನು ಜೆಡಿಎಸ್ ನೊಂದಿಗೆ ಪ್ರಾರಂಭಿಸಿದ್ದರು. ಇವರು ಮೂರು ಬಾರಿ ಚಳ್ಳಕೆರೆ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಗೊಂಡಿದ್ದರು. ಅಲ್ಲದೇ ದೇವೇಗೌಡರ ಸಚಿವ ಸಂಪುಟದಲ್ಲಿ ಅಬಕಾರಿ ಸಚಿವರಾಗಿ ಹಾಗೂ ಜೆ.ಎಚ್.ಪಟೇಲ್ ಸರ್ಕಾರದಲ್ಲಿ ಸಣ್ಣ ನೀರಾವರಿ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು.

    ಜೆಡಿಎಸ್ ತೊರೆದು ಬಿಜೆಪಿ ಸೇರಿಕೊಂಡಿದ್ದ ತಿಪ್ಪೇಸ್ವಾಮಿಯವರು ಯಡಿಯೂರಪ್ಪನವರ ವಲಯದಲ್ಲಿ ಗುರುತಿಸಿಕೊಂಡಿದ್ದರು. ವಾಲ್ಮೀಕಿ ಸಮುದಾಯದ ಹಿರಿಯ ಮುಖಂಡರಾಗಿದ್ದ ಅವರು ವಾಲ್ಮೀಕಿ ಗುರುಪೀಠ ಸ್ಥಾಪನೆಯಲ್ಲಿ ಮಹತ್ತರ ಪಾತ್ರ ವಹಿಸಿದ್ದರು. ರಾಜ್ಯ ಸರ್ಕಾರದಿಂದ ವಾಲ್ಮೀಕಿ ಪುರಸ್ಕಾರಕ್ಕೂ ಭಾಜನರಾಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಮೋದಿಯಿಂದ ದೇಶ ವಿಭಜನೆ, ಬಿಎಸ್‍ವೈಯಿಂದ ರಾಜ್ಯ ವಿಭಜನೆ: ಆನಂದ್ ಅಸ್ನೋಟಿಕರ್

    ಮೋದಿಯಿಂದ ದೇಶ ವಿಭಜನೆ, ಬಿಎಸ್‍ವೈಯಿಂದ ರಾಜ್ಯ ವಿಭಜನೆ: ಆನಂದ್ ಅಸ್ನೋಟಿಕರ್

    ಕಾರವಾರ: ಯುವಕರನ್ನು ಬಳಸಿ ಹಿಂದುತ್ವದ ಆಧಾರದ ಮೇಲೆ ಪ್ರಧಾನಿ ನರೇಂದ್ರ ಮೋದಿ ದೇಶವನ್ನು ವಿಭಜನೆ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಇಲ್ಲಿ ಯಡಿಯೂರಪ್ಪನವರು ಕರ್ನಾಟಕವನ್ನು ವಿಭಜನೆ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಕಿಡಿಕಾರಿದ್ದಾರೆ.

    ಪ್ರತ್ಯೇಕ ರಾಜ್ಯ ಕುರಿತು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು ಮುಖ್ಯಮಂತ್ರಿ ಕುಮಾರಸ್ವಾಮಿಯವರ ಪ್ರಖ್ಯಾತಿಯನ್ನು ಸಹಿಸಲಾಗದೇ ಯಡಿಯೂರಪ್ಪನವರು ಹಾಗೂ ಬಿಜೆಪಿಯವರು ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯ ಮಾಡುವ ಕುರಿತು ರೈತರನ್ನು ಬಲಿ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

    ಬಡ ರೈತರನ್ನು, ಯುವಕರನ್ನು ಬಳಸಿ ಹಿಂದುತ್ವದ ಆಧಾರದ ಮೇಲೆ ಪ್ರಧಾನಿ ನರೇಂದ್ರ ಮೋದಿ ದೇಶವನ್ನು ವಿಭಜನೆ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಇಲ್ಲಿ ಯಡಿಯೂರಪ್ಪನವರು ಕರ್ನಾಟಕವನ್ನು ವಿಭಜನೆ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅಸ್ನೋಟಿಕರ್ ದೂರಿದರು.

    ಯಡಿಯೂರಪ್ಪನವರು ಮುಖ್ಯಮಂತ್ರಿ ಆಗುವ ಸಾಧ್ಯತೆಗಳಿಲ್ಲ, ಕೇಂದ್ರದಲ್ಲಿ ಮಂತ್ರಿಯಾಗುತ್ತೇನೆ ಎನ್ನುವ ಉದ್ದೇಶವಿಟ್ಟುಕೊಂಡು ಹೀಗೆ ಮಾಡುತ್ತಿದ್ದಾರೆ. ಇವರ ಮೇಲಿರುವ ಕೇಸುಗಳನ್ನು ಮುಗಿಸಿಕೊಳ್ಳಬೇಕಿದೆ ಹೀಗಾಗಿ ಈ ರೀತಿ ಮಾಡುತ್ತಿದ್ದಾರೆ. ಇದೊಂದು ಪೊಲಿಟಿಕಲ್ ಗೇಮ್. ಮುಂಬರುವ ಲೋಕಸಭಾ ಚುನಾವಣೆಯೇ ಮುಖ್ಯ ಉದ್ದೇಶ ಎಂದು ತಿಳಿಸಿದರು.

    ಅಮಿತ್ ಶಾ ರವರಿಗೆ ಕರ್ನಾಟಕದಲ್ಲಿ ತಾನೇನೋ ಮಾಡುತ ದ್ದೇನೆ ಎಂದು ತೋರಿಸಿಕೊಳ್ಳಲು ಯಡಿಯೂರಪ್ಪನವರು ಹೀಗೆ ಮಾಡುತ್ತಿದ್ದಾರೆ. ಅವರು ಇನ್ನು ಮುಂದೆ ರಾಜ್ಯದ ಮುಖ್ಯಮಂತ್ರಿಯಾಗುವುದಿಲ್ಲ. ಕುಮಾರಸ್ವಾಮಿಯವರ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಐದು ವರ್ಷ ಪೂರೈಸುತ್ತದೆ. ತಾವು ವಿರೋಧ ಪಕ್ಷದಲ್ಲಿದ್ದು ರಾಜ್ಯಕ್ಕಾಗಿ ಒಳ್ಳೆಯ ಹೋರಾಟ ಮಾಡಿ ಎಂದು ಯಡಿಯೂರಪ್ಪನವರಿಗೆ ಸಲಹೆ ನೀಡಿದರು.

  • 2 ತಿಂಗಳು ಸುಮ್ನಿದ್ದೆ, ಆದ್ರೆ ಇನ್ಮುಂದೆ ಸುಮ್ನೆ ಕೈ ಕಟ್ಟಿ ಕೂರಲ್ಲ: ಆಂಜನೇಯ

    2 ತಿಂಗಳು ಸುಮ್ನಿದ್ದೆ, ಆದ್ರೆ ಇನ್ಮುಂದೆ ಸುಮ್ನೆ ಕೈ ಕಟ್ಟಿ ಕೂರಲ್ಲ: ಆಂಜನೇಯ

    ಚಿತ್ರದುರ್ಗ: ಮಾಜಿ ಸಮಾಜಕಲ್ಯಾಣ ಸಚಿವ ಎಚ್.ಆಂಜನೇಯ ಅವರು ಶಾಸಕ ಚಂದ್ರಪ್ಪನ ವಿರುದ್ಧ ಗರಂ ಆಗಿದ್ದು, ಎರಡು ತಿಂಗಳು ನಾನು ಸುಮ್ಮನೆ ಇದ್ದೆ. ಆದರೆ ಇನ್ನು ಮುಂದೆ ಸುಮ್ಮನೆ ಕೈ ಕಟ್ಟಿ ಕೂರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸುಳ್ಳು ಹೇಳುವುದೇ ಚಂದ್ರಪ್ಪನ ದೊಡ್ಡ ಕೆಲಸ, ಆತನ ತಲೆಯಲ್ಲಿ ಏನೂ ಇಲ್ಲ ಎಂದು ಏಕವಚನದಲ್ಲೇ ಹಾಲಿ ಶಾಸಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ನಾನು ಸೋತಿದ್ದೇನೆ ಎಂದು ಕೈ ಕಟ್ಟಿಕೊಂಡು ಕೂರುವವನಲ್ಲ, ನಾನು ಹೋರಾಟದಿಂದ ಬಂದವನು. ನಾವು ಮಾಡಿರುವ ಅಭಿವೃದ್ಧಿ ಕಾರ್ಯಗಳು ಯಾವುದೇ ಕಾರಣಕ್ಕೂ ನಿಲ್ಲಬಾರದು, ಎರಡು ತಿಂಗಳಾದರೂ ಸುಮ್ಮನೆ ಇದ್ದೆ, ಆದರೆ ಇನ್ನು ಮುಂದೆ ಸುಮ್ಮನೆ ಕೈ ಕಟ್ಟಿ ಕೂರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ನಾನು ಸಚಿವನಾಗಿದ್ದ ಸಮಯದಲ್ಲಿ ಜಾರಿಗೆ ತಂದಿರುವ ಯೋಜನೆಗಳು ಯಾವುದೇ ಕಾರಣಕ್ಕೂ ನಿಲ್ಲಬಾರದು, ಶಾಸಕ ಚಂದ್ರಪ್ಪ ನನ್ನ ಎಲ್ಲಾ ಕಾಮಗಾರಿಗಳನ್ನು ತಡೆಯುತ್ತಿದ್ದಾನೆ. ಆತನಿಗೆ ಜ್ಞಾನ, ತಿಳುವಳಿಕೆ ಇದ್ದರೆ ಯೋಜನೆಗಳನ್ನು ತಡೆಯುವ ಬದಲು, ಮುಂದವರಿಸಬೇಕೆಂದು ಆಗ್ರಹಿಸಿದ್ದಾರೆ.

    ಕೇಂದ್ರ ಸರ್ಕಾರದಿಂದ ಕೋಟಿಗಟ್ಟಲೇ ಬಂದಿದೆ ಎಂದು ಹೇಳುತ್ತಾರೆ, ಆದರೆ ಇಲ್ಲಿಯವರೆಗೂ ಒಂದು ಪೈಸೆಯೂ ಸಹ ಬಂದಿಲ್ಲ. ನಮ್ಮ ಅವಧಿಯಲ್ಲಿ ಆಗಿರುವ ಎಲ್ಲಾ ಯೋಜನೆಗಳು ಮುಂದುವರಿಯಬೇಕು. ಒಂದು ವೇಳೆ ಯಾವುದೇ ಯೋಜನೆಗಳಲ್ಲಿ ತೊಂದರೆಯಾದರೆ ಚಂದ್ರಪ್ಪನ ವಿರುದ್ಧ ಉಗ್ರವಾದ ಹೋರಾಟ ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದರು.

  • ಮಾಜಿ ಸಚಿವ ಬಿ.ಎ.ಮೊಯಿದ್ದೀನ್ ವಿಧಿವಶ

    ಮಾಜಿ ಸಚಿವ ಬಿ.ಎ.ಮೊಯಿದ್ದೀನ್ ವಿಧಿವಶ

    ಬೆಂಗಳೂರು: ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಮಾಜಿ ಸಚಿವ ಬಿ.ಎ.ಮೊಯಿದ್ದೀನ್ (80) ಇಂದು ಬೆಳಗಿನ ಜಾವ ನಿಧನರಾಗಿದ್ದಾರೆ.

    ಉಸಿರಾಟದ ತೊಂದರೆ ಸೇರಿದಂತೆ ವಯೋ ಸಹಜ ಕಾಯಿಲೆಯಿಂದ ಮೊಯಿದ್ದೀನ್ ಬಳಲುತ್ತಿದ್ದರು. ಮೂಲತಃ ಮಂಗಳೂರು ನಿವಾಸಿಗಳಾಗಿದ್ದು, ಬೆಂಗಳೂರಿನ ಎಂ.ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇತ್ತೀಚೆಗೆ ‘ನನ್ನೊಳಗಿನ ನಾನು’ ಎಂಬ ಆತ್ಮಕಥೆಯನ್ನು ಮೊಯಿದ್ದೀನ್ ಬರೆದಿದ್ದರು. ಆದರೆ ಪುಸ್ತಕ ಇನ್ನೂ ಬಿಡುಗಡೆ ಆಗಿರಲಿಲ್ಲ.

    ಕಾಂಗ್ರೆಸ್‍ನಲ್ಲಿ ಗುರುತಿಸಿಕೊಂಡಿದ್ದ ಮೊಯಿದ್ದೀನ್ ಶಿಕ್ಷಣ ಸಚಿವರಾಗಿ ಕೆಲಸ ಮಾಡಿದ್ದರು. ಸದ್ಯ ಅವರ ಪಾರ್ಥೀವ ಶರೀರವನ್ನು ರಾಮಯ್ಯ ಆಸ್ಪತ್ರೆಯಿಂದ ಸಂಜಯ್ ನಗರದಲ್ಲಿರುವ ಮೊಯಿದ್ದೀನ್ ಅವರ ನಿವಾಸಕ್ಕೆ ರವಾನಿಸಲಾಗಿದೆ. ಮೊಯಿದ್ದೀನ್ ನಿವಾಸಕ್ಕೆ ಸಚಿವ ಯು.ಟಿ.ಖಾದರ್ ಭೇಟಿ ನೀಡಿ ಅಂತಿಮ ದರ್ಶನ ಪಡೆದಿದ್ದಾರೆ.

  • ವೇದಿಕೆಯಲ್ಲಿ ಗಳಗಳನೇ ಕಣ್ಣೀರಿಟ್ಟ ಜೆಡಿಎಸ್ ಮಾಜಿ ಸಚಿವ ಚನ್ನಿಗಪ್ಪ

    ವೇದಿಕೆಯಲ್ಲಿ ಗಳಗಳನೇ ಕಣ್ಣೀರಿಟ್ಟ ಜೆಡಿಎಸ್ ಮಾಜಿ ಸಚಿವ ಚನ್ನಿಗಪ್ಪ

    ತುಮಕೂರು: ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ನಿರಿಕ್ಷೀತ ಸಾಧನೆ ಮಾಡದ ಹಿನ್ನೆಲೆಯಲ್ಲಿ ಕಾರ್ಯಕರ್ತರ ಎದುರು ಮಾಜಿ ಸಚಿವ ಹಾಗೂ ಜಿಲ್ಲಾಧ್ಯಕ್ಷ ಸಿ ಚನ್ನಿಗಪ್ಪ ಗಳಗಳನೇ ಕಣ್ಣೀರಿಟ್ಟಿದ್ದಾರೆ.

    ಇಂದು ನಗರದಲ್ಲಿ ನೂತನ ಶಾಸಕ, ಸಚಿವರಿಗಾಗಿ ಏರ್ಪಡಿಸಿದ್ದ ಅಭಿನಂದನಾ ಸಮಾವೇಶದಲ್ಲಿ ಮಾತನಾಡಿದ ಅವರು, ತುಮಕೂರು ಜೆಡಿಎಸ್ ಭದ್ರಕೋಟೆಯಾಗಿತ್ತು, ಜಿಲ್ಲೆಯಲ್ಲಿರುವ 11 ಸ್ಥಾನದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸ ಇತ್ತು. ಆದರೆ ಕೇವಲ 4 ಸ್ಥಾನ ಮಾತ್ರ ಗೆಲ್ಲುವಂತಾಯಿತು ಎಂದು ಕಾರ್ಯಕರ್ತರ ಎದುರು ಕಳಪೆ ಸಾಧನೆಗೆ ಆತ್ಮಾವಲೋಕನ ಮಾಡಿಕೊಡು ಕಣ್ಣೀರಿಟ್ಟರು.

    ಇದೇ ವೇಳೆ ಜಿಲ್ಲೆಯ ಶಾಸಕರಿಗೆ ಸಚಿವ ಸ್ಥಾನ ನೀಡುವಲ್ಲೂ ಅನ್ಯಾಯ ಆಗಿದೆ ಎಂದು ಆರೋಪಿಸಿರುವ ಅವರು, ನಾಯಕರಿಗೆ ಎರಡು ಸಚಿವ ಸ್ಥಾನ ನೀಡುವಂತೆ ಮನವಿ ಮಾಡಿದ್ದೆ. ಮೊದಲ ಆದ್ಯತೆ ಶಿರಾ ಶಾಸಕ ಬಿ.ಸತ್ಯನಾರಾಯಣ ಗೆ ನೀಡಿದ್ದೇವು. ಆದರೆ ಅವವರಿಗೆ ಸಚಿವ ಸ್ಥಾನ ಸಿಗದಿದ್ದಕ್ಕೆ ನೋವಾಗಿದೆ ಎಂದರು. ಅಲ್ಲದೇ ತಮ್ಮ ಭಾಷಣ ವೇಳೆ ಕೊರಟಗೆರೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿದ್ದ ಸುಧಾಕರ್ ಲಾಲ್ ಅವರ ಸೋಲನ್ನ ಪ್ರಸ್ತಾಪಿಸಿದ ಅವರು, ಸುಧಾಕರ ಲಾಲ್ ಸೋಲಬಾರದಿತ್ತು. ಅವರು ಕ್ಷೇತ್ರದಲ್ಲಿ ಒಳ್ಳೆ ಕೆಲಸ ಮಾಡಿದ್ದರು ಎಂದು ಬೇಸರ ವ್ಯಕ್ತಪಡಿಸಿದರು.

    ಕೊರಟಗೆರೆ ಕ್ಷೇತ್ರದಲ್ಲಿ ಪಕ್ಷದ ಸೋಲಿಗೆ ಚನ್ನಿಗಪ್ಪ ಅವರೇ ಕಾರಣ ಎಂಬ ಆರೋಪವಿದ್ದು, ಅಂದು ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಿಸಿಎಂ ಜಿ ಪರಮೇಶ್ವರ್ ಅವರೊಂದಿಗೆ ಸೇರಿ ಸುಧಾಕರ್ ಲಾಲ್ ರನ್ನು ಸೋಲಿಸಿದ್ದಾರೆ ಎಂಬ ಆರೋಪ ಅಂದು ಕೇಳಿ ಬಂದಿತ್ತು.

  • ಮಾಜಿ ಸಚಿವ ಬಿ.ಎಸ್.ಪಾಟೀಲ್ ಸಾಸನೂರ ವಿಧಿವಶ

    ಮಾಜಿ ಸಚಿವ ಬಿ.ಎಸ್.ಪಾಟೀಲ್ ಸಾಸನೂರ ವಿಧಿವಶ

    ವಿಜಯಪುರ: ಅನಾರೋಗ್ಯದ ಹಿನ್ನೆಲೆಯಲ್ಲಿ ನಗರದ ಬಿಎಲ್‍ಡಿಇ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಸಚಿವರು ಬಿಎಸ್ ಪಾಟೀಲ್ ಸಾಸನೂರ(87) ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ

    ಮೃತರ ಅಂತ್ಯಕ್ರಿಯೆ ಸೋಮವಾರ ಹಿರೂರಿನಲ್ಲಿ ನಡೆಯಲಿದ್ದು ಸಾಸನೂರಿನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.

    ಬಸನಗೌಡ ಸಂಗನಗೌಡ ಪಾಟೀಲ್ ಸಾಸನೂರ ಅವರು ಹೂವಿನ ಹಿಪ್ಪರಗಿ ಕ್ಷೇತ್ರದಿಂದ ಒಟ್ಟು 5 ಬಾರಿ ಕಾಂಗ್ರೆಸ್ ಶಾಸಕರಾಗಿ, 2 ಬಾರಿ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಕಾಂಗ್ರೆಸ್‍ನ ಶಿಸ್ತಿನ ಸಿಪಾಯಿ ಆಗಿದ್ದರು. ಬಿ.ಎಸ್.ಪಾಟೀಲ್ ಅವರ ತಂದೆ ಸೋಮನಗೌಡ ಪಾಟೀಲ್ ಸಾಸನೂರ ಬಿಜೆಪಿ ಶಾಸಕರಾಗಿದ್ದರು.

  • ಮಕ್ಕಳನ್ನು ಹುಟ್ಟಿಸೋದ್ರಲ್ಲಿ ಭಾರತ ನಂ.1, ಇದಕ್ಕೆ ಪ್ರಶಸ್ತಿ ಕೊಡಬೇಕು : ಆಂಜನೇಯ

    ಮಕ್ಕಳನ್ನು ಹುಟ್ಟಿಸೋದ್ರಲ್ಲಿ ಭಾರತ ನಂ.1, ಇದಕ್ಕೆ ಪ್ರಶಸ್ತಿ ಕೊಡಬೇಕು : ಆಂಜನೇಯ

    ಕೊಪ್ಪಳ: ಪ್ರಪಂಚದಲ್ಲಿ ಭಾರತಕ್ಕೆ ಬಹುಮಾನ ಸಿಗಬೇಕಾದರೆ ಅದು ಮಕ್ಕಳು ಹುಟ್ಟಿಸುವುದಲ್ಲಿ ಮಾತ್ರ. ಮಕ್ಕಳನ್ನು ಹುಟ್ಟಿಸುವುದರಲ್ಲಿ ಭಾರತವು ನಂಬರ್ ಒನ್ ಆಗಿದೆ ಎಂದು ಮಾಜಿ ಸಮಾಜ ಕಲ್ಯಾಣ ಸಚಿವ ಆಂಜನೇಯ ಹೇಳಿದ್ದಾರೆ.

    ಜಿಲ್ಲೆಯ ಕುಷ್ಟಗಿ ಪಟ್ಟಣದ ದೇವದಾಸಿ ತಾಯಂದಿರ ಮಕ್ಕಳ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಮಾತನಾಡಿದ ಅವರು ದೇಶದಲ್ಲಿ ಸಮಾನತೆ ಇಲ್ಲ, ಜಾತಿ ವ್ಯವಸ್ಥೆ ಹೋಗಿಲ್ಲ. ಬಡವ ಶ್ರೀಮಂತ ಎಂಬ ಬೇದ ಹೋಗಿಲ್ಲ. ಆದರೆ ನಾವು ಮಕ್ಕಳನ್ನು ಹುಟ್ಟಿಸುವುದರಲ್ಲಿ ಮಾತ್ರ ನಂಬರ್ ಎಂದು ಹೇಳಿದರು.

    ನಾನು ಸಹ ಇದಕ್ಕಾಗಿಯೇ ಎರಡು ಮಕ್ಕಳನ್ನು ಮಾತ್ರ ಪಡೆದಿದ್ದೇನೆ. ನೀವು ಕೂಡ ಮಕ್ಕಳನ್ನು ಹುಟ್ಟಿಸುವುದರಲ್ಲಿ ಬ್ರೇಕ್ ಹಾಕಿ ಎಂದು ನವ ವಧು-ವರರಿಗೆ ಕಿವಿ ಮಾತು ಹೇಳಿದರು.

    ದೇವರನ್ನು ಪೂಜಿಸ ಬೇಡಿ: ಇದೇ ವೇಳೆ ಸಮಾರಂಭದಲ್ಲಿದವರಿಗೆ ದೇವರಿಗೆ ಹೆಚ್ಚು ಪೂಜೆ ಮಾಡಬೇಡಿ. ಪೂಜೆ ಮಾಡಿಯೇ ನಾವು ಅರ್ಧ ಹಾಳಾಗಿದ್ದೇವೆ. ದೇವರು ಎಲ್ಲಾ ನಿಮಗೇ ಕೊಟ್ಟಿದ್ದಾರೆ. ನೀವು ಬಸವಣ್ಣ ನವರ ಕಾಯಕವೇ ಕೈಲಾಸ ಎಂಬ ಮಾತಿಗೆ ಕಟ್ಟು ಬಿದ್ದು ದುಡಿಯಿರಿ. ಕಾಯಕದಲ್ಲಿ ದೇವರನ್ನು ಕಾಣಿರಿ ಎಂದು ಹೇಳಿದರು.

    ಜಾತ್ರೆ ಮಾಡಿ ಹಾಳು: ನಮ್ಮ ಜನಾಂಗದವರು 8 ರಿಂದ 10 ದಿನ ಕೋಣ, ಕುರಿ ಬಲಿ ಕೊಟ್ಟು, ಸಾಲ ಮಾಡಿ ಹಲವು ದೇವರ ಹೆಸರುಗಳಲ್ಲಿ ಜಾತ್ರೆ ಮಾಡಿ ಹಾಳಾಗಿ ಹೋಗುತ್ತಿದ್ದೀರಾ. ಸದ್ಯ ಅದಕ್ಕೆಲ್ಲಾ ಬ್ರೇಕ್ ಹಾಕಿ ಎಂದರು.

  • ಅಸಮಾಧಾನಗೊಂಡ ಎಂಬಿ ಪಾಟೀಲ್‍ಗೆ ಹೈಕಮಾಂಡ್ ಖಡಕ್ ಸೂಚನೆ

    ಅಸಮಾಧಾನಗೊಂಡ ಎಂಬಿ ಪಾಟೀಲ್‍ಗೆ ಹೈಕಮಾಂಡ್ ಖಡಕ್ ಸೂಚನೆ

    ನವದೆಹಲಿ: ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗದೇ ಅಸಮಾಧಾನಗೊಂಡಿದ್ದ ಎಂಬಿ ಪಾಟೀಲ್ ಅವರಿಗೆ ಹೈಕಮಾಂಡ್ ಖಡಕ್ ಸೂಚನೆ ನೀಡಿದೆ.

    ಎಂಬಿ ಪಾಟೀಲ್ ಇಂದು ದೆಹಲಿಗೆ ತೆರಳಿ ಹೈಕಮಾಂಡ್ ಮುಂದೇ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಆದರೆ ಪಾಟೀಲ್ ಅವರ ಮಾತು ಆಲಿಸಿದ ಹೈಕಮಾಂಡ್ ಸಧ್ಯ ಪಕ್ಷ ಸಂಕಷ್ಟದಲ್ಲಿರುವ ಕಾರಣ ಸಮ್ಮಿಶ್ರ ಸರ್ಕಾರಕ್ಕೆ ಬೆಂಬಲ ನೀಡಿ. ಡಿಸಿಎಂ ಸ್ಥಾನ ನೀಡಲು ಸಾಧ್ಯವಿಲ್ಲ. ಆದರೆ ಮುಂದೆ ಸೂಕ್ತ ಸ್ಥಾನಮಾನ ನೀಡುತ್ತೇವೆ ಎಂದು ಹೇಳಿದ್ದಾಗಿ ಖಚಿತ ಮೂಲಗಳು ತಿಳಿಸಿವೆ.

    ಹೈಕಮಾಂಡ್ ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಎಂಬಿ ಪಾಟೀಲ್ ತಾನು ಹೈಕಮಾಂಡ್ ಗೆ ನೀಡಬೇಕಾದ ಎಲ್ಲಾ ಮಾಹಿತಿಯನ್ನು ನೀಡಿದ್ದೇನೆ. ಅವರು ನನ್ನ ಮಾತನ್ನು ಆಲಿಸಿದ್ದಾರೆ. ಆದರೆ ತಾನು ಯಾವುದೇ ಸ್ಥಾನ ಬೇಡಿಕೆ ಇಟ್ಟಿಲ್ಲ ಎಂದು ತಿಳಿಸಿದರು.

    ಇದೇ ವೇಳೆ ಬಿಜೆಪಿ ಪಕ್ಷದ ಯಾವುದೇ ನಾಯಕರು ತಮ್ಮನ್ನು ಸಂಪರ್ಕ ಮಾಡಿಲ್ಲ. ತಾನು ಯಾರ ನಾಯಕರನ್ನು ಸಂಪರ್ಕ ಮಾಡಿಲ್ಲ. ಪಕ್ಷದ ಯಾವುದೇ ವಿಚಾರವಾದರೂ ನಾಲ್ಕು ಗೋಡೆಗಳ ಮಧ್ಯೆ ಚರ್ಚೆ ನಡೆಸಲಾಗುತ್ತದೆ ಎಂದರು. ದೆಹಲಿಯಲ್ಲೂ ತಾವು ಸದ್ಯ ಒಬ್ಬೊಂಟಿ ಅಲ್ಲ ಎಂದು ಪುನರುಚ್ಚರಿಸಿದ ಎಂಬಿ ಪಾಟೀಲ್ ಅವರು, ತಮ್ಮ ಕಡೇ 20 ಶಾಸಕರು ಇದ್ದಾರೆ ಎಂದು ಹೇಳಿದರು.

    ದೆಹಲಿಯಲ್ಲಿ ನಡೆದ ಬೆಳವಣಿಗೆ ಕುರಿತು ತಮ್ಮ ಶಾಸಕರೊಂದಿಗೆ ಚರ್ಚೆ ನಡೆಸಬೇಕಿದೆ. ಆ ಬಳಿಕ ಮುಂದಿನ ನಡೆಯ ಕುರಿತು ಯಾವ ನಿರ್ಧಾರ ಮಾಡಲಾಗಿದೆ ಎನ್ನುವುದನ್ನು ತಿಳಿಸುತ್ತೇನೆ. ನಮ್ಮದು ಬೇಡಿಕೆ ಏನು ಇರಲಿಲ್ಲ. ಸಮುದಾಯಗಳಿಗೆ ಸ್ಥಾನ ಮಾನ ಕೊಡುವ ಬಗ್ಗೆ ಚರ್ಚೆ ಮಾಡಲಾಯಿತು. ಆದರೆ ಚರ್ಚೆಯಾದ ಎಲ್ಲವೂ ಮಾಧ್ಯಮಗಳ ಮುಂದೆ ವಿವರಿಸಲು ಸಾಧ್ಯ ಇಲ್ಲ. ಮಲ್ಲಿಕಾರ್ಜುನ ಖರ್ಗೆಯಿಂದ ನನ್ನ ಸ್ಥಾನ ತಪ್ಪಿಲ್ಲ. ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರವೂ ಕಾರಣವಲ್ಲ. ಸುಮ್ಮನೇ ಅಪ ಪ್ರಚಾರ ಮಾಡುವ ಕೆಲಸ ಮಾಡುತ್ತಿದ್ದಾರೆ. ಹೈಕಮಾಂಡ್ ನಮ್ಮ ಮಾತಿಗೆ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದೆ ಎಂದರು.

    ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಭೇಟಿಗೂ ಮುನ್ನ ಅಹ್ಮದ್ ಪಟೇಲ್ ಭೇಟಿ ಮಾಡಿದ ಪಾಟೀಲ್ ಅವರು ಸಚಿವ ಸಂಪುಟದಲ್ಲಿ ಕಡೆಗಣಿಸಿರುವ ಕುರಿತು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಬಳಿಕ ಅಹ್ಮದ್ ಪಟೇಲ್ ಜೊತೆಯಲ್ಲಿ ರಾಹುಲ್ ನಿವಾಸಕ್ಕೆ ಆಗಮಿಸಿದ ಎಂಬಿ ಪಾಟೀಲ್ ಜೊತೆಗೆ ದಿನೇಶ್ ಗುಂಡೂರಾವ್ ಮತ್ತು ಕೃಷ್ಣ ಬೈರೇಗೌಡ ಕೂಡಾ ರಾಹುಲ್ ಗಾಂಧಿ ನಿವಾಸಕ್ಕೆ ಭೇಟಿ ನೀಡಿದರು. ಆದರೆ ಪಾಟೀಲ್ ಅವರು ಮಾಧ್ಯಮದೊಂದಿಗೆ ಮಾತನಾಡುವ ವೇಳೆ ಈ ಕುರಿತು ತಮಗೇ ಏನು ಸಂಬಂಧವಿಲ್ಲ ಎಂದು ಉತ್ತರಿಸಿದರು. ಸದ್ಯ ಹೈಕಮಾಂಡ್ ಉತ್ತರದಿಂದ ತೃಪ್ತಿಯಾದ ಎಂಬಿ ಪಾಟೀಲ್ ಅವರು ಮತ್ತೆ ಬೆಂಗಳೂರಿಗೆ ಹಿಂದಿರುಗಿದ್ದು, ಪಾಟೀಲ್ ಅವರ ಮುಂದಿನ ನಡೆ ಕುತೂಹಲ ಮೂಡಿಸಿದೆ.

    https://www.youtube.com/watch?v=Q1BS4IKCQVo

  • ಮುಜರಾಯಿ ಖಾತೆ ಕೊಡಿ, ದೇವಸ್ಥಾನ ಸುತ್ಕೊಂಡು ಇರ್ತೀನಿ – ಡಿಕೆಶಿ

    ಮುಜರಾಯಿ ಖಾತೆ ಕೊಡಿ, ದೇವಸ್ಥಾನ ಸುತ್ಕೊಂಡು ಇರ್ತೀನಿ – ಡಿಕೆಶಿ

    ಬೆಂಗಳೂರು: ಸಮ್ಮಿಶ್ರ ಸರ್ಕಾರದ ರಚನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಮಾಜಿ ಇಂಧನ ಸಚಿವ ಡಿಕೆ ಶಿವಕುಮಾರ್ ಅವರು ಕಾಂಗ್ರೆಸ್‍ನ ಪ್ರಮುಖ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದು, ಆದರೆ ಇಂಧನ ಖಾತೆ ಕೈ ತಪ್ಪುತ್ತಿದಂತೆ ಪಕ್ಷದ ನಾಯಕರ ವಿರುದ್ಧ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.

    ಈ ಕುರಿತು ಪಕ್ಷದ ಸಭೆಯಲ್ಲಿ ಹಿರಿಯ ನಾಯಕರೊಂದಿಗೆ ತಮ್ಮ ಅಸಮಾಧಾನ ಹೊರ ಹಾಕಿರುವ ಅವರು, ಪಕ್ಷಕ್ಕಾಗಿ ದುಡಿದ ತಮಗೇ ಪ್ರಮುಖ ಸಚಿವ ಸ್ಥಾನ ನೀಡದ್ದಿದ್ದರೆ ಸಾರ್ವಜನಿಕ ವಲಯದಲ್ಲಿ ನನ್ನ ಶಕ್ತಿ ಕಡಿಮೆಯಾಗುತ್ತದೆ ಎಂದು ತಿಳಿಸಿರುವುದಾಗಿ ಪಕ್ಷದ ಮೂಲಗಳು ತಿಳಿಸಿದೆ.

    ಸತತವಾಗಿ ಏಳು ಬಾರಿ ವಿಧಾನಸಭೆಗೆ ಆಯ್ಕೆಯಾಗಿ ಬಂದ ನನಗೆ ಪ್ರಮುಖ ಖಾತೆ ಸಿಗದಿದ್ದರೆ ಸಹಜವಾಗಿ ಸಾರ್ವಜನಿಕ ವಲಯಗಳಲ್ಲಿ ನನ್ನ ಶಕ್ತಿಯೂ ಕಡಿಮೆಯಾಗುತ್ತದೆ. ಅತ್ತ ಕೇಂದ್ರ ಸರ್ಕಾರವೂ ನಮ್ಮ ಮೇಲೆ ಕೆಂಗಣ್ಣು ಬೀರುತ್ತಿದೆ. ಇತ್ತ ಮೈತ್ರಿಕೂಟ ಸರ್ಕಾರದಲ್ಲಿ ಅಶಕ್ತನನ್ನಾಗಿ ಮಾಡಿ ಕೂರಿಸಲು ಪಕ್ಷವೇ ಸಿದ್ಧವಾಗಿದೆ. ಹೀಗಾಗಿ ಒಂದು ಕೆಲಸ ಮಾಡಿ, ನನಗೆ ಪ್ರಮುಖ ಖಾತೆಗಳನ್ನು ನೀಡುವ ಬದಲು ಮುಜುರಾಯಿ ಖಾತೆಯನ್ನು ನೀಡಿ. ಸುಮ್ಮನೆ ದೇವಾಲಯಗಳನ್ನಾದರೂ ಸುತ್ತುತ್ತಾ ಕಾಲ ಕಳೆಯುತ್ತೇನೆ ಎಂದು ಡಿಕೆಶಿ ತನ್ನ ಅಸಮಾಧಾನವನ್ನು ಹೊರ ಹಾಕಿದ್ದಾರೆ ಎನ್ನಲಾಗಿದೆ.

    ಇತ್ತ ಸರ್ಕಾರ ರಚಿಸಲು ಕಾಂಗ್ರೆಸ್ ಪಕ್ಷ ಬೇಷರತ್ ಬೆಂಬಲ ನೀಡಿದ್ದು, ಐದು ವರ್ಷಗಳ ಕಾಲ ಕುಮಾರಸ್ವಾಮಿಯವರೇ ಸಿಎಂ ಆಗಿರಲಿ. ಅದೇ ರೀತಿ ನಿಮಗೆ ಬೇಕಾದ ಖಾತೆಗಳನ್ನು ನೀವು ಇಟ್ಟುಕೊಳ್ಳಿ ಎಂದು ಹೇಳಿದ್ದೇವೆ. ಹೀಗಾಗಿ ಖಾತೆಗಾಗಿ ಯಾರೂ ತಕರಾರು ಮಾಡಬೇಡಿ ಎಂದು ಕೈ ಪಾಳಯದ ವರಿಷ್ಠರು ರಾಜ್ಯದ ಪ್ರಮುಖ ನಾಯಕರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

    ಸರ್ಕಾರದಲ್ಲಿ ಇಂಧನ ಖಾತೆ ನೀಡಬೇಕು ಎಂದು ಪಟ್ಟು ಹಿಡಿದಿದ್ದ ಡಿಕೆ ಶಿವಕುಮಾರ್ ಪಕ್ಷದ ವರಿಷ್ಠರು ನಿರಾಸೆ ಮೂಡಿಸಿದ್ದರು. ಪಕ್ಷದ ಧೋರಣೆಯಿಂದ ಸದ್ಯ ಡಿಕೆ ಶಿವಕುಮಾರ್ ಅವರಿಗೆ ಕಸಿವಿಸಿಯಾಗಿದೆ. ಸದ್ಯ ಜೆಡಿಎಸ್ ನಾಯಕರದ ಶಾಸಕ ರೇವಣ್ಣ ಅವರು ಸಹ ಇಂಧನ ಖಾತೆಗೆ ಒತ್ತಾಯ ಮಾಡಿದ್ದಾರೆ ಎನ್ನಲಾಗಿದೆ. ಇದರಿಂದ ಶಿವಕುಮಾರ್ ಅವರು ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

    ಪಕ್ಷದ ಸಭೆಯಲ್ಲಿ ಭಾವಹಿಸುವ ಮುನ್ನ ಮತನಾಡಿದ ಅವರು, ಉತ್ತರ ಕರ್ನಾಟಕ ಹಿರಿಯ ನಾಯಕರಾದ ಎಸ್‍ಆರ್ ಪಾಟೀಲ್ ರಾಜೀನಾಮೆ ಕುರಿತು ನನಗೆ ಮಾಹಿತಿ ಇಲ್ಲ. ಆದರೆ ಆ ಭಾಗದಿಂದ ನಮಗೇ ಹೆಚ್ಚಿನ ಸ್ಥಾನ ಲಭಿಸಿಲ್ಲ. ಪಕ್ಷ ಹಿರಿಯ ನಾಯಕರಾಗಿ ಅವರಿಗೆ ನೋವಾಗಿರುತ್ತದೆ. ಸದ್ಯ ಸಂಪುಟ ಖಾತೆ ಬಗ್ಗೆ ಯಾವುದೇ ಹೇಳಿಕೆ ನೀಡುವುದಿಲ್ಲ. ಆದರೆ ಹೈಕಮಾಂಡ್ ನೀಡಿದ ಜವಾಬ್ದಾರಿಯನ್ನು ನಿಭಾಯಿಸುವುದಾಗಿ ಹೇಳಿದರು.