Tag: former minister

  • ಮಗನ ಸಾವಿನ ಕುರಿತು ರೆಡ್ಡಿ ಮಾತಿಗೆ ಸಿದ್ದರಾಮಯ್ಯ ತಿರುಗೇಟು

    ಮಗನ ಸಾವಿನ ಕುರಿತು ರೆಡ್ಡಿ ಮಾತಿಗೆ ಸಿದ್ದರಾಮಯ್ಯ ತಿರುಗೇಟು

    ಬೆಂಗಳೂರು: ಹಿರಿಯ ಮಗ ರಾಕೇಶ್ ಸಾವು ಸಿದ್ದರಾಮಯ್ಯಗೆ ದೇವರು ಕೊಟ್ಟ ಶಿಕ್ಷೆ ಎಂದು ಹೇಳಿಕೆ ನೀಡಿದ್ದ ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿರುಗೇಟು ನೀಡಿದ್ದಾರೆ.

    ಈ ಬಗ್ಗೆ ಟ್ವೀಟ್ ಮಾಡಿದ ಮಾಜಿ ಸಿಎಂ, ನಿಮ್ಮ ಪಾಪದ ಶಿಕ್ಷೆಯನ್ನು ಮಕ್ಕಳಿಗೆ ದೇವರು ನೀಡದಿರಲಿ ಎಂದು ಆ ದೇವರಲ್ಲಿ ಬೇಡಿಕೊಳ್ಳುವುದಾಗಿ ಹೇಳಿದ್ದಾರೆ. ಅಲ್ಲದೇ ಈ ಟ್ವೀಟ್ ಅನ್ನು ಐಎನ್‍ಸಿ ಕರ್ನಾಟಕ ಎಂಬ ಅಕೌಂಟ್ ಗೆ ಟ್ಯಾಗ್ ಮಾಡಿದ್ದಾರೆ.

    ಮಾಜಿ ಸಿಎಂ ಟ್ವೀಟ್ ನಲ್ಲೇನಿದೆ?:
    ನನ್ನ ಮಗನ ಸಾವು ನನಗೆ ದೇವರುಕೊಟ್ಟ ಶಿಕ್ಷೆ ಎಂದು ಜನಾರ್ದನ ರೆಡ್ಡಿ ಹೇಳಿದ್ದಾರೆ. ನಿಮ್ಮ ಪಾಪಗಳಿಗಾಗಿ ಶಿಕ್ಷೆಯನ್ನು ನಿಮ್ಮ ಮಕ್ಕಳಿಗೆ ದೇವರು ನೀಡದಿರಲಿ ಎಂದು ದೇವರನ್ನು ಬೇಡಿಕೊಳ್ಳುತ್ತೇನೆ ಅಂತ ಹೇಳಿದ್ದಾರೆ.

    ಜನಾರ್ದನ ರೆಡ್ಡಿ ಹೇಳಿದ್ದೇನು?:
    ಸಿದ್ದರಾಮಯ್ಯ ಅವರು 4 ವರ್ಷ ನನ್ನ ಜೈಲಿನಲ್ಲಿ ಕೊಳೆಯುವಂತೆ ಮಾಡಿದ್ದಾರೆ. ಅದಕ್ಕೆ ದೇವರು ಅವರ ಹಿರಿಯ ಮಗ ರಾಕೇಶ್ ಸಾವಿನ ಮುಖಾಂತರ ಶಿಕ್ಷೆ ಕೊಟ್ಟಿದ್ದಾರೆ ಅಂತ ಪಬ್ಲಿಕ್ ಟಿವಿಯ ಸಂದರ್ಶನದ ವೇಳೆ ಹೇಳಿದ್ದರು.

    ಕೆಟ್ಟವರಿಗೆ ಭಗವಂತ ಬುದ್ಧಿ ಕಲಿಸ್ತಾನೆ. ನನ್ನನ್ನು ನನ್ನ ಮಕ್ಕಳಿಂದ 4 ವರ್ಷ ದೂರ ಇರುವಂತೆ ಮಾಡಿದ ಸಿದ್ದರಾಮಯ್ಯಗೆ ದೇವರು ಅದೇ ರೀತಿ ಸರಿಯಾಗಿ ಬುದ್ಧಿ ಕಲಿಸಿದ್ದಾನೆ. ಶ್ರವಣ ಕುಮಾರನನ್ನು ದಶರಥ ಮಹರಾಜ ಕೊಂದಾಗ ವೃದ್ಧ ತಂದೆ-ತಾಯಿ ನಿನಗೂ ಮಗನ ಅಗಲಿಕೆ ನೋವು ಗೊತ್ತಾಗಲಿ ಅಂತ ಶಾಪ ಕೊಟ್ಟಿದ್ರು. ನಾಲ್ಕು ವರ್ಷ ನನ್ನಿಂದ ದೂರಾಗಿ ನನ್ನ ಮಕ್ಕಳು ಏನೆಲ್ಲ ಕಷ್ಟ ಅನುಭವಿಸಿದ್ರು ಅದನ್ನ ಕಾರಣವಾದ ಎಲ್ಲರು ಅನುಭವಿಸ್ತಾರೆ ಎಂದಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=KUjH3iqmpEM

  • ಪ್ರತಾಪ್ ಸಿಂಹರ ಪುಸ್ತಕ ಓದಿ – ಜನಾರ್ದನ ರೆಡ್ಡಿಗೆ ಸಿದ್ದರಾಮಯ್ಯ ಟಾಂಗ್

    ಪ್ರತಾಪ್ ಸಿಂಹರ ಪುಸ್ತಕ ಓದಿ – ಜನಾರ್ದನ ರೆಡ್ಡಿಗೆ ಸಿದ್ದರಾಮಯ್ಯ ಟಾಂಗ್

    ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಜಿ ಸಚಿವ ಗಣಿಧಣಿ ಜನಾರ್ದನ ರೆಡ್ಡಿಯವರಿಗೆ ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರು ಬರೆದ ಪುಸ್ತಕವನ್ನು ಓದಲು ಹೇಳಿದ್ದಾರೆ.

    ಈ ಬಗ್ಗೆ ಟ್ವಿಟ್ ಮಾಡಿರುವ ಮಾಜಿ ಸಿಎಂ, ನಿಮ್ಮದೇ ಪಕ್ಷದ ಸಂಸದರು ಬರೆದ ಪುಸ್ತಕ ಓದಿದರೆ ನೀವು ಜೈಲಿಗೆ ಹೋಗುವ ಪಾಪ ಏನು ಮಾಡಿದ್ದೀರಿ ಅಂತ ಗೊತ್ತಾಗುತ್ತದೆ ಅಂತ ತಿಳಿಸಿದ್ದಾರೆ.

    ಟ್ವೀಟ್ ನಲ್ಲೇನಿದೆ?
    ಸಿದ್ದರಾಮಯ್ಯನವರು ಅನ್ಯಾಯವಾಗಿ ತನ್ನನ್ನು ನಾಲ್ಕು ವರ್ಷ ಜೈಲಿಗೆ ಹಾಕಿಸಿದ್ದರು ಎಂದು ಕಣ್ಣೀರು ಹಾಕುತ್ತಿರುವ ಜನಾರ್ದನ ರೆಡ್ಡಿಯವರೇ, ದಯವಿಟ್ಟು ನಿಮ್ಮ ಪಕ್ಷದ ಸಂಸದರೇ ಬರೆದಿದ್ದ ಈ ಪುಸ್ತಕ ಓದಿ. ಜೈಲಿಗೆ ಹೋಗುವ ಪಾಪ ಏನು ಮಾಡಿದ್ದೀರಿ ಎಂದು ಗೊತ್ತಾಗುತ್ತೆ ಅಂತ ಬರೆದುಕೊಂಡಿದ್ದಾರೆ.

    ಪುಸ್ತಕ ಓದಲು ಹೇಳಿದ್ದು ಯಾಕೆ?
    ಇಂದು ಮೊಳಕಾಲ್ಮೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಚಿವ ಜನಾರ್ದನ ರೆಡ್ಡಿ, ಕಾಂಗ್ರೆಸ್ ಪಕ್ಷದವರು ಅದರಲ್ಲೂ ವಿಶೇಷವಾಗಿ ಸಿದ್ದರಾಮಯ್ಯನಂತವರು ನಮಗೆ ಏನೆಲ್ಲ ತೊಂದರೆಗಳನ್ನು ಕೊಟ್ಟಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಕಾಂಗ್ರೆಸ್ ಪಕ್ಷದ ವತಿಯಿಂದ ಸತ್ಯ ಶೋಧನಾ ಸಮಿತಿಯನ್ನು ರಚನೆ ಮಾಡಿ ಅಕ್ರಮ ಗಣಿಗಾರಿಕೆ ನಡೀತಾ ಇದೆ ಅಂತಾ ಹೇಳಿ ಸಾರ್ವಜನಿಕರಲ್ಲಿ ಗೊಂದಲವನ್ನು ಮೂಡಿಸಿದ್ದಾರೆ ಎಂದು ಆರೋಪಿಸಿದ್ದರು.

    2011 ಸೆ.5ರಂದು ಸಿಬಿಐ ಮೂಲಕ ನನ್ನನ್ನು ಬಂಧನಕ್ಕೆ ಒಳಪಡಿಸಿ 4 ವರ್ಷಗಳ ಕಾಲ ನನ್ನನ್ನು ಜೈಲಿನಲ್ಲಿ ಬಂಧಿಯಾಗಿ ಇರಿಸಿದ್ದರು. ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ, ಕೇಂದ್ರದಲ್ಲಿ ಮನಮೋಹನ್ ಸಿಂಗ್ ಅವರ ಕಾಂಗ್ರೆಸ್ ಸರ್ಕಾರ 4 ವರ್ಷ ಕಾಲ ನನ್ನನ್ನು ಬಂಧಿಸಿತ್ತು. ಬಳ್ಳಾರಿಗೆ ಪಾದಯಾತ್ರೆಗೆ ಬಂದ ಸಂದರ್ಭದಲ್ಲಿ ಇಡೀ ಕರ್ನಾಟಕ ರಾಜ್ಯ ಇಂದು ಸಂಪತ್ತನ್ನು ಬಳ್ಳಾರಿ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆಯ ಮೂಲಕ 1 ಲಕ್ಷ ಕೋಟಿ ಹಣ ಲೂಟಿ ಮಾಡಿರುವಂತಹ ರೆಡ್ಡಿಗಳಿಂದ ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ, ಆ ಲೂಟಿ ಮಾಡಿರುವಂತಹ ಹಣವನ್ನು ಅವರಿಂದ ಪಡೆದು ರಾಜ್ಯದಲ್ಲಿರುವ ಬಡವರಿಗೆ ಮನಗಳನ್ನು ಕಟ್ಟಿಕೊಡುವುದಾಗಿ ಘೋಷಣೆ ಮಾಡಿದ್ದರು. ನಿಮ್ಮಲ್ಲಿ ನಿಜವಾಗಿ ಪ್ರಾಮಾಣಿಕತೆ, ಮಾನವೀಯತೆ ಇದ್ದರೆ ಇಡೀ ಭಾರತದಲ್ಲಿ ಇಷ್ಟು ವರ್ಷಗಳ ಕಾಲ ಜೈಲಿನಲ್ಲಿದ್ದ ವ್ಯಕ್ತಿ ಅಂದ್ರೆ ಅದು ನಾನೇ. ಇಷ್ಟೆಲ್ಲ ಹಿಂಸೆ ಕೊಟ್ಟು 4 ವರ್ಷ ಒಳಗಡೆ ಇಟ್ಟು, ನೀನು ಈ ರಾಜ್ಯ ಮುಖ್ಯಮಂತ್ರಿ ಆಗಿದ್ದು, 5 ವರ್ಷಗಳ ಕಾಲ ನಿನ್ನ ಕೈಯಲ್ಲಿ ಅಧಿಕಾರ ಇತ್ತು. ಕೇಂದ್ರದಲ್ಲಿಯೂ ನಿಮ್ಮದೇ ಅಧಿಕಾರವಿತ್ತು. ಹೊರಗೆ ಬಂದರೆ ವಿಚಾರಣೆ ತಡೆಯುತ್ತೇನೆ ಎಂದು ಹೇಳಿ ನನ್ನ ಬಂಧನದಲ್ಲಿಟ್ಟು ನನ್ನಿಂದ ಎಷ್ಟು ಹಣ ರಿಕವರಿ ಮಾಡಿದ್ದೀರಿ ಅಂತ ಪ್ರಶ್ನಿಸಿದ ಅವರು, ನಾಚಿಕೆ ಇಲ್ಲದೇ ಇವತ್ತೂ ಬಳ್ಳಾರಿ ಬಂದು ಅಕ್ರಮ ಗಣಿಗಾರಿಕೆ ಅಂತ ಮಾತಾಡೋದು ಸರಿಯಲ್ಲ ಅಂತ ವಾಗ್ದಾಳಿ ನಡೆಸಿದ್ರು.

    ರಕ್ಷಣೆ ಕೊಡಲಿಲ್ಲ:
    ಕಳೆದ 7 ವರ್ಷಗಳಲ್ಲಿ ನನಗೆ ರಕ್ಷಣೆ ಕೋರಿ ಮನವಿ ಮಾಡಿದ್ದೆ. ಆದ್ರೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ನನಗೆ ರಕ್ಷಣೆ ಸಹ ಕೊಡಿಸಲಿಲ್ಲ. ಬೆಂಗಳೂರಿನ ನನ್ನ ಮನೆ ಸುತ್ತಮುತ್ತ ಆತಂಕದ ವಾತಾವರಣ ಸೃಷ್ಟಿ ಮಾಡಿದ್ದಾರೆ. ಚುನಾವಣೆ ಮುಗಿಯದರೊಳಗೆ ಇನ್ನೂ ಏನಾದ್ರೂ ಆಗಬಹುದು. ಸುತ್ತಮುತ್ತಲಿನ ಜನರು ಭಯಭೀತರಾಗಿದ್ದಾರೆ. ನಾನು ಯಾರಿಗೂ ಹೆದರಲ್ಲ. ಹೆದರೋ ಪ್ರಶ್ನೆಯೇ ಇಲ್ಲ. ಹೈದ್ರಾಬಾದ್ ವಿಮಾನ ನಿಲ್ದಾಣದಲ್ಲಿ ನನಗೆ ವೈ ಕೆಟಗೆರಿ ಭದ್ರತೆ ಇದೆ. ನಾನು ಲಿಖಿತವಾಗಿ ರಕ್ಷಣೆ ನೀಡಿ ಅಂದ್ರೂ ಇಲ್ಲಿ ಕೊಡುತ್ತಿಲ್ಲ ಅಂತ ಬೇಸರ ವ್ಯಕ್ತಪಡಿಸಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 4 ವರ್ಷ ಜೈಲಲ್ಲಿ ಕೊಳೆಸಿದ್ರು – ಸಿದ್ದರಾಮಯ್ಯಗೆ ಮಾನಮರ್ಯಾದೆ ಇಲ್ಲ ಅಂದ್ರು ರೆಡ್ಡಿ

    4 ವರ್ಷ ಜೈಲಲ್ಲಿ ಕೊಳೆಸಿದ್ರು – ಸಿದ್ದರಾಮಯ್ಯಗೆ ಮಾನಮರ್ಯಾದೆ ಇಲ್ಲ ಅಂದ್ರು ರೆಡ್ಡಿ

    – ದುಡ್ಡು ಸಿಕ್ಕಿದ್ದು ನನ್ನ ಮನೆಯಲ್ಲಿ ಅಲ್ಲ, ಡಿಕೆಶಿ ಮನೆಯಲ್ಲಿ

    ಚಿತ್ರದುರ್ಗ: ಜನರ ದಿಕ್ಕು ತಪ್ಪಿಸಿ ಬಳ್ಳಾರಿ ಅಭಿವೃದ್ಧಿ ಮಾಡಲಿಲ್ಲ. ನನ್ನ ವಿರುದ್ಧ ಸುಳ್ಳು ಆರೋಪಗಳನ್ನೇ ಮಾಡಿದ್ರು. ನನ್ನ ಜೀವಮಾನದ 4 ವರ್ಷದ ಅಮೂಲ್ಯ ವೇಳೆಯನ್ನು ಜೈಲಿನಲ್ಲಿ ಕೊಳೆಯುವಂತೆ ಮಾಡಿದ್ರು. ನನ್ನ ವಿರುದ್ಧ ಎಷ್ಟು ಸಾವಿರ ಕೋಟಿ ಚಾರ್ಜ್ ಶೀಟ್ ಹಾಕಿದ್ದಾರೆ ಅನ್ನೋದನ್ನ ಜನರಿಗೆ ಹೇಳಲಿ. ನೂರು ಕೋಟಿ ಚಾರ್ಜ್ ಶೀಟ್ ಹಾಕಿ ಜನರನ್ನ ದಿಕ್ಕು ತಪ್ಪಿಸಿದ್ರು ಅಂತ ಗಣಿ ಧಣಿ, ಮಾಜಿ ಸಚಿವ ಜನಾರ್ದನ ರೆಡ್ಡಿ ಹೇಳಿದ್ದಾರೆ.

    ಮೊಳಕಾಲ್ಮೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜನಾರ್ದನ ರೆಡ್ಡಿ, ಬಳ್ಳಾರಿಯಿಂದ 7 ವರ್ಷಗಳಿಂದ ದೂರು ಇದ್ದೇನೆ. ಬಳ್ಳಾರಿ ಜನರನ್ನ ನೋಡಿದ್ರೆ ಕಣ್ಣಲ್ಲಿ ನೀರು ಬರುತ್ತದೆ. ಶ್ರೀರಾಮುಲು ಒಂಟಿಯಾಗಿ ಹೋರಾಟ ಮಾಡುತ್ತಿದ್ದಾರೆ. ರಾಮುಲು ಒಂಟಿಯಾಗಿದ್ರೂ ಬಳ್ಳಾರಿ ಜನರು ಅವರನ್ನ ಮನೆ ಮಗನಂತೆ ಜೋಪಾನ ಮಾಡುತ್ತಿದ್ದು, ಮನೆ ಮಗನನ್ನ ಕೈಬಿಡಲ್ಲ ಅನ್ನೋ ನಂಬಿಕೆಯಿದೆ ಅಂದ್ರು.

    2008ರಿಂದ ಬಿಜೆಪಿ ಬಾವುಟವನ್ನ ಬಳ್ಳಾರಿಯಲ್ಲಿ ಹಾರಿಸುತ್ತಿದ್ದಾರೆ. ಶ್ರೀರಾಮುಲು, ಕರುಣಾಕರರೆಡ್ಡಿ, ಶಾಂತಾ ಮೂಲಕ ಬಿಜೆಪಿ ಎಂಪಿ ಸ್ಥಾನ ಗಳಿಸಿದೆ. ಬಳ್ಳಾರಿ ಜನರು ಈ ಬಾರಿಯೂ ಜನರು ಕೈಬಿಡಲ್ಲ. ಶಾಂತಾ ಬಗ್ಗೆ ಕೆಲವರು ಕೆಲವು ಮಾತನಾಡುತ್ತಿದ್ದಾರೆ. ಶ್ರೀರಾಮುಲುರಿಂದ ಉಪಚುನಾವಣೆ ಬಂದಿದೆ ಅಂತಾ ಆರೋಪ ಮಾಡುತ್ತಿದ್ದಾರೆ. ಶ್ರೀರಾಮುಲು ವಿಧಾನಸಭೆಯಲ್ಲಿ ಬಿಜೆಪಿ ಅಧಿಕಾರಕ್ಕೆ ತರಲು ವಿಧಾನಸಭೆಗೆ ಸ್ಪರ್ಧಿಸಿದ್ದಾರೆ. ಸಿದ್ದರಾಮಯ್ಯ ಅವರು ಜೆಡಿಎಸ್ ಬಿಟ್ಟು ಕಾಂಗ್ರೆಸ್ ಗೆ ಯಾಕೆ ಸೇರಿದ್ರು ಎಂದು ಅವರು ಪ್ರಶ್ನಿಸಿದ್ರು.

    ರಕ್ಷಣೆ ಕೊಡಲಿಲ್ಲ:
    ಕಳೆದ 7 ವರ್ಷಗಳಲ್ಲಿ ನನಗೆ ರಕ್ಷಣೆ ಕೋರಿ ಮನವಿ ಮಾಡಿದ್ದೆನು. ಆದ್ರೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ನನಗೆ ರಕ್ಷಣೆ ಸಹ ಕೊಡಿಸಲಿಲ್ಲ. ಬೆಂಗಳೂರಿನ ನನ್ನ ಮನೆ ಸುತ್ತಮುತ್ತ ಆತಂಕದ ವಾತಾವರಣ ಸೃಷ್ಟಿ ಮಾಡಿದ್ದಾರೆ. ಚುನಾವಣೆ ಮುಗಿಯುವುದರೊಳಗೆ ಇನ್ನೂ ಏನಾದ್ರೂ ಆಗಬಹುದು. ಸುತ್ತಮುತ್ತಲಿನ ಜನರು ಭಯಭೀತರಾಗಿದ್ದಾರೆ. ನಾನು ಯಾರಿಗೂ ಹೆದರಲ್ಲ. ಹೆದರೋ ಪ್ರಶ್ನೆಯೇ ಇಲ್ಲ. ಹೈದ್ರಾಬಾದ್ ವಿಮಾನ ನಿಲ್ದಾಣದಲ್ಲಿ ನನಗೆ ವೈ ಕೆಟಗೆರಿ ಭದ್ರತೆ ಇದೆ. ನಾನು ಲಿಖಿತವಾಗಿ ರಕ್ಷಣೆ ನೀಡಿ ಅಂದ್ರೂ ಇಲ್ಲಿ ಕೊಡುತ್ತಿಲ್ಲ ಅಂತ ಬೇಸರ ವ್ಯಕ್ತಪಡಿಸಿದ್ರು.

    ಶ್ರೀರಾಮುಲು ಅಂದ್ರೆ ಅಭಿವೃದ್ಧಿ:
    ಸಿದ್ದರಾಮಯ್ಯ ಶೋಭೆ ತರುವಂತಹ ಮಾತುಗಳನ್ನು ಆಡುತ್ತಿಲ್ಲ. ಬಳ್ಳಾರಿಯಲ್ಲಿ 3 ಭಾರಿ ಬಿಜೆಪಿ ಹ್ಯಾಟ್ರಿಕ್ ಸಾಧನೆ ಮಾಡಿದೆ. ಕಾಂಗ್ರೆಸ್‍ನ ಭದ್ರಕೋಟೆಯನ್ನ ರಾಮುಲು ಬಿಜೆಪಿಯ ಭದ್ರಕೋಟೆಯಾಗಿ ಮಾಡಿದ್ದಾರೆ. ಕರ್ನಾಟಕದ ಹೆಸರನ್ನ ವಿಶ್ವದ ಜನರೆಲ್ಲ ನೋಡುವ ಹಾಗೆ ಗೋಲ್ಡನ್ ಚಾರಿಯಟ್ ಟ್ರೈನ್ ತಂದರು. ಪ್ರವಾಸೋದ್ಯಮ ಮಂತ್ರಿಯಾಗಿ, ಆರೋಗ್ಯ ಸಚಿವರಾಗಿ 108 ಜಾರಿಗೆ ತರೋ ಮೂಲಕ ಹಳ್ಳಿಯ ಜನರಿಗೆ ಜೀವ ಉಳಿಸುವ ಕೆಲಸ ಮಾಡಿದ್ರು. ಈ ಮೂಲಕ ಶ್ರೀರಾಮುಲು ಅಂದ್ರೆ ಅಭಿವೃದ್ಧಿ ಅಂತ ಅವರು ಹೇಳಿದ್ರು.

    ಸಿದ್ದರಾಮಯ್ಯಗೆ ಮಾನವೀಯತೆ ಇಲ್ಲ:
    ಕಾಂಗ್ರೆಸ್ ನವರು ಪಾದಯಾತ್ರೆ ಮಾಡಿದ ವೇಳೆ ಲಕ್ಷ ಕೋಟಿ ಲೂಟಿ ಮಾಡಿದ್ರು ಅಂತಾ ಆರೋಪ ಮಾಡಿದ್ದರು. ಲೂಟಿ ಮಾಡಿದ ಲಕ್ಷ ಕೋಟಿ ಹಣದಲ್ಲಿ ರಾಜ್ಯದ ಜನರಿಗೆ ಮನೆ ಕಟ್ಟಿಸಿಕೊಡುತ್ತೀನಿ ಅಂದ್ರು. ಸಿದ್ದರಾಮಯ್ಯನವರಿಗೆ ಮಾನವೀಯತೆ ಇಲ್ಲದಂತೆ ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯ ಸಿಎಂ ಆಗಿ 5 ವರ್ಷ ಅಧಿಕಾರದಲ್ಲಿದ್ದಾಗ ನನ್ನಿಂದ ಎಷ್ಟು ಹಣ ವಸೂಲಿ ಮಾಡಿದ್ರು ಅಂತ ಹೇಳಬೇಕು. ನಾನು ಒಂದು ಲಕ್ಷ ಕೋಟಿ ಹಣ ಲೂಟಿ ಮಾಡಿದ್ದೀನಿ ಅಂತಾ ಹೇಳಿದ್ರು. ಇನ್ನೊಂದು ಬಾರಿ ಫೇಸ್ ಬುಕ್ ನಲ್ಲಿ 25 ಸಾವಿರ ಕೋಟಿ ಲೂಟಿ ಅಂದ್ರು. ರಾಹುಲ್ ಗಾಂಧಿ 35 ಸಾವಿರ ಕೋಟಿ ಲೂಟಿ ಅಂದ್ರು. ಸಿದ್ದರಾಮಯ್ಯ ವಿರುದ್ಧ ಮಾನನಷ್ಠ ಮೊಕದ್ದಮೆ ಹಾಕಬೇಕು ಅಂದುಕೊಂಡಿದ್ದೆ. ಆದ್ರೆ ಮಾನವೇ ಇಲ್ಲದವರ ವಿರುದ್ಧ ಮಾನನಷ್ಟ ಯಾಕೆ ಅಂತ ಸುಮ್ಮನಾಗಿದ್ದೆ ಅಂತ ಅವರು ತಿಳಿಸಿದ್ರು.

    ನನ್ನಿಂದ ಒಂದು ಲಕ್ಷ ಕೋಟಿ ಅಲ್ಲ ಒಂದು ಕೋಟಿ ಸಹ ವಸೂಲಿ ಮಾಡಲು ಆಗಲಿಲ್ಲ. ಸಿದ್ದರಾಮಯ್ಯ, ರಾಹುಲ್ ಅಯೋಗ್ಯ ಅಂತಾ ಕರಿಬೇಕಾ? ನನ್ನ ಜೊತೆ ಅಕ್ರಮ ಗಣಿಗಾರಿಕೆ ಆರೋಪ ಹೊತ್ತ ಆನಂದ್ ಸಿಂಗ್, ನಾಗೇಂದ್ರರನ್ನ ಇದೀಗ ಜೊತೆಗೆ ಇಟ್ಟುಕೊಂಡಿದ್ದಾರೆ ಅಂತ ವಾಗ್ದಾಳಿ ನಡೆಸಿದ್ರು.

    ಆರೋಪ ಮಾಡಲು ನೈತಿಕತೆಯಿಲ್ಲ:
    ರಾಮುಲು 420, 307 ಆರೋಪ ಹಿನ್ನೆಲೆ ಕುರಿತು ಮಾತನಾಡಿದ ಅವರು, ಶ್ರೀರಾಮುಲು ತನ್ನ ಜೇಬು, ಕೈನಲ್ಲಿದ್ದ ಹಣ ಬಂಗಾರವನ್ನೆಲ್ಲಾ ಕಷ್ಟದಲ್ಲಿದ್ದ ಜನರಿಗೆ ನೀಡಿದವರಾಗಿದ್ದಾರೆ. ಇನ್ನೊಬ್ಬರಿಗೆ ಸಹಾಯ ಮಾಡೋ ವ್ಯಕ್ವಿತ್ವ ಶ್ರೀರಾಮುಲು ಅವರದ್ದಾಗಿದೆ. ಅವರು ಮುಖ್ಯಮಂತ್ರಿಯಾಗದಿದ್ದರೂ 50 ಸಾವಿರ ಸಾಮೂಹಿಕ ವಿವಾಹ ಮಾಡಿದ್ರು. ನಿಮ್ಮ ಜೊತೆ ಇರೋ ಡಿಕೆ ಶಿವಕುಮಾರ್ ದೆಹಲಿ ಮನೆಯಲ್ಲಿ ಸಾಕಷ್ಟು ಹಣ ಸಿಕ್ತು. ಆದ್ರೆ ನನ್ನ ಮನೆಯಲ್ಲಿ ಹಣ ಸಿಗಲಿಲ್ಲ. ಡಿಕೆ ಶಿವಕುಮಾರ್ ಮನೆಯಲ್ಲಿ ಹಣ ಸಿಕ್ಕಾಗ ತಲೆ ತಗ್ಗಿಸಬೇಕಾಗಿತ್ತು. ನನ್ನ ವಿರುದ್ಧ ಆರೋಪ ಮಾಡೋಕೆ ನಿಮಗೆ ನೈತಿಕತೆಯಿಲ್ಲ ಅಂತ ಅವರು ಕಿಡಿಕಾರಿದ್ರು.

    ಬಹಿರಂಗ ಚರ್ಚೆಗೆ ಸಿದ್ಧ:
    ವಾಲ್ಮೀಕಿ ಸಮುದಾಯಕ್ಕೆ ಅಪಮಾನ ಮಾಡಿದ್ದಾರೆ. ಶ್ರೀರಾಮುಲು ಜೊತೆ ಬಹಿರಂಗ ಚರ್ಚೆ ಬೇಡ. ನಿಮಗೆ ತಾಕತ್ತು ಅಂತ ಇದ್ದರೆ ಅಂಕಿ ಅಂಶಗಳ ಸಮೇತ ಚರ್ಚೆಗೆ ಬರುವೆನು. ನಾನು ಬಹಿರಂಗ ಚರ್ಚೆಗೆ ಸಿದ್ಧವಾಗಿದ್ದೇನೆ. ನಾನು ನಾಳೆ ನಾಡಿದ್ದು ಇಲ್ಲೇ ಇರುತ್ತೇನೆ. 420, 307 ಅನ್ನೋ ಮೂಲಕ ಇಡಿ ವಾಲ್ಮೀಕಿ ಸಮುದಾಯಕ್ಕೆ ಅಪಮಾನ ಮಾಡಿದ್ದೀರಿ. ವಾಲ್ಮೀಕಿ ಜಯಂತಿಯಲ್ಲಿ ಸಿಎಂ ಅನಾರೋಗ್ಯ ಸರಿಯಿಲ್ಲದ ಪರಿಣಾಮ ಹಾಜರಾಗಲಿಲ್ಲ. ಆದ್ರೆ ಡಿಸಿಎಂ ಪರಮೇಶ್ವರ್ ಆರೋಗ್ಯಕ್ಕೆ ಏನು ಆಗಿತ್ತು. ದೇವೇಗೌಡರಿಗೆ ವಾಲ್ಮೀಕಿ ಸಮುದಾಯದ ಪ್ರಶಸ್ತಿ ಸ್ವೀಕಾರ ಮಾಡಲಿಲ್ಲ. ಮರ್ಹಷಿ ವಾಲ್ಮೀಕಿ ಪ್ರಶಸ್ತಿ ಸ್ವೀಕಾರ ಮಾಡದೇ ಅಪಮಾನ ಮಾಡಿದ್ರು ಅಂತ ಸಿಡಿಮಿಡಿಗೊಂಡರು.

    ಲಿಂಗಾಯತ ಧರ್ಮ ಒಡೆಯುವ ಕೆಲಸ ಮಾಡಿದ್ರು. ಅದಕ್ಕೆ ಅಧಿಕಾರ ಕಳೆದುಕೊಂಡರು. ಅವತ್ತು ಡಿಕೆ ಶಿವಕುಮಾರ್ ಮನಸಾಕ್ಷಿ ಇರಲಿಲ್ಲವೇ. ಲಿಂಗಾಯತ ಧರ್ಮ ಒಡೆಯುವ ವೇಳೆ ಸ್ವಾಮೀಜಿಗಳ ಹಗಲಿರುಳು ಹೋರಾಟ ಮಾಡಿದ್ರು. ಅವರ ಶಾಪ ನಿಮಗೆ ತಟ್ಟಿದೆ. ಇನ್ನೂ ಕಾಂಗ್ರೆಸ್ ಗೆ ಶಾಪ ತಟ್ಟುತ್ತೆ ಅಂತ ಭವಿಷ್ಯ ನುಡಿದ್ರು.

     

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕಾಂಗ್ರೆಸ್‍ನಲ್ಲಿ ಯಾವುದೇ ಅಸಮಾಧಾನ ಇಲ್ಲ: ಮಾಜಿ ಸಚಿವ ರಾಮಲಿಂಗಾರೆಡ್ಡಿ

    ಕಾಂಗ್ರೆಸ್‍ನಲ್ಲಿ ಯಾವುದೇ ಅಸಮಾಧಾನ ಇಲ್ಲ: ಮಾಜಿ ಸಚಿವ ರಾಮಲಿಂಗಾರೆಡ್ಡಿ

    ಬೆಂಗಳೂರು: ನಮ್ಮಲ್ಲಿ ಯಾವುದೇ ಅಸಮಾಧಾನವಿಲ್ಲ. ಮೇಯರ್ ಆಯ್ಕೆ ಆಗುವ ಸಂದರ್ಭದಲ್ಲಿ ಯಾರೂ ಯಾವ ಕೆಟಗೇರಿ ಎಂದು ಕೇಳುವುದು ಸಾಮಾನ್ಯ. ಆದರೆ ಇದನ್ನು ನಾವು ಅಸಮಾಧಾನ ಎಂದು ಹೇಳಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದಾರೆ.

    ಕಾಂಗ್ರೆಸ್‍ನಲ್ಲಿ ಯಾವುದೇ ಅಸಮಾಧಾನ ಇಲ್ಲ. ಮೇಯರ್ ಆಯ್ಕೆ ವೇಳೆ ಆಕಾಂಕ್ಷಿಗಳು ಇರೋದು ಸಾಮಾನ್ಯ. ಹಾಗಂತ ಇದನ್ನು ಭಿನ್ನಮತ ಎನ್ನುವುದು ಸರಿಯಲ್ಲ. ಆಶಾ ಸುರೇಶ್ ಇಲ್ಲೇ ಒಳಗೆ ಕೂತಿದ್ದಾರೆ. ಅಲ್ಲದೇ 6 ಪಕ್ಷೇತರರು ಕೂಡ ಬಂದಿದ್ದಾರೆ ಎಂದು ಹೇಳಿದ್ರು.

    ಜೆಡಿಎಸ್‍ನವರು ಯಾರೂ ವಿಪ್ ಉಲ್ಲಂಘನೆ ಮಾಡಲ್ಲ. 1993ರಿಂದ ಎಲ್ಲಾ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದೇನೆ. ಪರಮೇಶ್ವರ್, ದಿನೇಶ್ ಗುಂಡೂರಾವ್, ಹ್ಯಾರಿಸ್ ಎಲ್ಲರೂ ಒಟ್ಟಾಗಿ ಅಭ್ಯರ್ಥಿ ಆಯ್ಕೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಯಾರ ಭಯ ನನಗಿಲ್ಲ – ಬಿಜೆಪಿ ವಿರುದ್ಧವೇ ಕಿಡಿಕಾರಿದ ಸೊಗಡು ಶಿವಣ್ಣ

    ಯಾರ ಭಯ ನನಗಿಲ್ಲ – ಬಿಜೆಪಿ ವಿರುದ್ಧವೇ ಕಿಡಿಕಾರಿದ ಸೊಗಡು ಶಿವಣ್ಣ

    ತುಮಕೂರು: ಬಿಜೆಪಿ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳು ನೀತಿಗೆಟ್ಟು ರಾಜಕಾರಣ ಮಾಡಿ ಸಮಾಜವನ್ನು ಹಾಳು ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಸ್ವ-ಪಕ್ಷೀಯ ಸೇರಿದಂತೆ ಎಲ್ಲಾ ಪಕ್ಷಗಳ ವಿರುದ್ಧ ಗುಡುಗಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ನೀತಿಗೆಟ್ಟು ರಾಜಕಾರಣ ಮಾಡುತ್ತಿದ್ದಾರೆ. ಈ ಮೂರು ಕೂಟದ ಸರ್ಕಾರವನ್ನು ರಾಜ್ಯಪಾಲರು ವಜಾಗೊಳಿಸಬೇಕು. ದೇಶಕ್ಕಾಗಿ ರಾಜ್ಯಕ್ಕಾಗಿ ತ್ಯಾಗ ಬಲಿದಾನ ಇಲ್ಲದೇ ಇದ್ದವರು, ಅಧಿಕಾರಕ್ಕಾಗಿ ಹೊಡೆದಾಟ ಮಾಡಿಕೊಳ್ಳುತಿದ್ದಾರೆ. ಹೀಗಾಗಿ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವಂತೆ ರಾಜ್ಯಪಾಲರಿಗೆ ಮನವಿ ಮಾಡಿಕೊಂಡಿದ್ದಾರೆ.

    ಮಾಜಿ ಪ್ರಧಾನಿ ದೇವೇಗೌಡರು ತ್ಯಾಗ ಬಲಿದಾನ ಮಾಡಿದ್ದಾರೆ. ನಾನು ಅವರ ಬಗ್ಗೆ ಏನೂ ಹೇಳುವುದಿಲ್ಲ. ಆಪರೇಷನ್ ಕಮಲಕ್ಕೆ ನಾನು ವಿರೋಧಿ. ಆ ರೀತಿ ಮಾಡುವುದು ಒಂದು ನೀತಿಗೆಟ್ಟ ರಾಜಕಾರಣ. ಒಂದು ವೇಳೆ ಕೇಂದ್ರದಲ್ಲಿ ಮಾಜಿ ಪ್ರಧಾನಿ ಅಟಲ್ ಜೀಯವರು ಇದೇ ರೀತಿ ತಂತ್ರ ಮಾಡಿ ಅಧಿಕಾರ ಪಡೆಯಬಹುದಿತ್ತು. ಆದರೆ ಅವರು ಎಂದಿಗೂ ಆ ರೀತಿ ಮಾಡಿಲ್ಲ. ಅವರು ತಮ್ಮ ಅವಧಿಯಲ್ಲಿ ನೀತಿಗೆಟ್ಟ ರಾಜಕಾರಣ ಎಂದೆನಿಸಿಕೊಂಡಿಲ್ಲ. ಹಾಗಾಗಿಯೇ ಪಕ್ಷಾತೀತವಾಗಿ ಅವರನ್ನು ಎಲ್ಲರೂ ಗೌರವಿಸುತ್ತಿದ್ದರು ಎಂದು ಹೇಳಿದರು.

    ನಾನು ಪಕ್ಷ ವಿರೋಧಿ ಹೇಳಿಕೆ ನೀಡಿದ್ದೆದ್ದಕ್ಕೆ ಯಾರ ಕೆಂಗಣ್ಣಿಗೂ ಹೆದರಲ್ಲ. ನನ್ನನ್ನು ಶೂಟ್ ಮಾಡಿದರು ಸಹ ನಾನು ಗುಂಡಿಗೆ ಎದೆ ಕೊಟ್ಟು ನಿಲ್ಲುತ್ತೇನೆ. ಯಾರ ಭಯವು ನನಗಿಲ್ಲ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಾಳೆಯೇ ಸರ್ಕಾರ ಪತನ ಆಗ್ಬಹುದು ನಮಗೇನು ಗೊತ್ತು – ಸತೀಶ್ ಜಾರಕಿಹೊಳಿ ಹೊಸ ಬಾಂಬ್

    ನಾಳೆಯೇ ಸರ್ಕಾರ ಪತನ ಆಗ್ಬಹುದು ನಮಗೇನು ಗೊತ್ತು – ಸತೀಶ್ ಜಾರಕಿಹೊಳಿ ಹೊಸ ಬಾಂಬ್

    ಬೆಳಗಾವಿ: ಸಮ್ಮಿಶ್ರ ಸರ್ಕಾರ ಬೀಳಿಸಲು ಬಿಜೆಪಿ ಮುಖಂಡರು ಪ್ರಯತ್ನಿಸುತ್ತಿದ್ದಾರೆ ಎಂದು ಸಿಎಂ ಎಚ್‍ಡಿ ಕುಮಾರಸ್ವಾಮಿ ಆರೋಪ ಮಾಡುತ್ತಿದ್ದರೆ ಇತ್ತ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಪಕ್ಷದ ಕೆಲ ಶಾಸಕರು ಪಕ್ಷ ತೊರೆದರೆ ನಾವು ಏನು ಮಾಡಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ.

    ಬಿಜೆಪಿ ಅಪರೇಷನ್ ಕಮಲ ಕುರಿತು ನಗರದಲ್ಲಿ ಪ್ರತಿಕ್ರಿಯೆ ನೀಡಿದ ಸತೀಶ್ ಜಾರಕಿಹೊಳಿ ಅವರು, ಈ ಹಿಂದೆ ಕಾಂಗ್ರೆಸ್ ಪಕ್ಷದ ಇಬ್ಬರು ಶಾಸಕರು ಪಕ್ಷ ಬಿಟ್ಟು ಹೋಗಿ ಮತ್ತೆ ಬಂದರು. ಸದ್ಯದ ಪರಿಸ್ಥಿತಿಯಲ್ಲಿ ಅಂತಹ ಶಾಸಕರು ಯಾರು ಪಕ್ಷದಲ್ಲಿ ಇಲ್ಲ. ಆದರೆ ಒಂದೊಮ್ಮೆ ಪಕ್ಷದ ಇತರೇ ಶಾಸಕರು ಬಿಟ್ಟು ಹೋದರೆ ನಾವು ಏನು ಮಾಡಲು ಸಾಧ್ಯವಿಲ್ಲ ಎಂದು ಹೇಳಿ ಸಂಚಲನ ಮೂಡಿಸಿದ್ದಾರೆ.

    ಸಮ್ಮಿಶ್ರ ಸರ್ಕಾರಕ್ಕೆ ಜಾರಕಿಹೊಳಿ ಸಹೋದರರಿಂದ ತೊಂದರೆ ಆಗಲಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಿ, ಯಾವುದೇ ಕಾರಣಕ್ಕೂ ನಮ್ಮ ಕಾರಣದಿಂದ ಸರ್ಕಾರಕ್ಕೆ ತೊಂದರೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದರು. ನಮ್ಮಲ್ಲಿ ಯಾವುದೇ ಸಮಸ್ಯೆ ಇಲ್ಲ, ಕಾಂಗ್ರೆಸ್ ಪಕ್ಷ ತೊರೆದು ಕೆಲ ಶಾಸಕರು ಹೋದರೆ ನಾವು ಏನು ಮಾಡಲು ಸಾಧ್ಯವಿಲ್ಲ. ನಾಳೆಯೇ ಸರ್ಕಾರ ಪತನ ಆಗಬಹುದು ನಮಗೇನು ಗೊತ್ತು? ಬೇರೆಯಾದರೂ ಹೋಗಬಹುದು ನಾವು ಪಕ್ಷ ಬಿಟ್ಟು ಹೋಗಲ್ಲ ಎಂದರು.

    ಇದೇ ವೇಳೆ ಮಾಜಿ ಸಿಎಂ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರ ಮನೆಗೆ ಕಾಂಗ್ರೆಸ್ ವರಿಷ್ಠರ ಭೇಟಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದ ಸಮ್ಮಿಶ್ರ ಸರ್ಕಾರದಲ್ಲಿ ಉದ್ಭವವಾಗಿರುವ ಸಮಸ್ಯೆಗಳ ಬಗೆಹರಿಸಲು ವರಿಷ್ಠರು ಬಂದಿದ್ದಾರೆ. ಈ ರೀತಿಯ ಸಭೆಗಳು ನಡೆಯವುದು ಸಾಮಾನ್ಯ. ಮೇಲಿಂದ ಮೇಲೆ ಇಂತಹ ಸಭೆ ನಡೆಯುವುದು ರಾಜಕೀಯ ಸಹಜವಾದ ಪ್ರಕ್ರಿಯೆ. ಸಿದ್ದರಾಮಯ್ಯ ಅವರು ಸಮನ್ವಯ ಸಮಿತಿ ಅಧ್ಯಕ್ಷರಾಗಿರುವುದರಿಂದ ಸಿಎಂ ಸೇರಿದಂತೆ ಎಷ್ಟೇ ದೊಡ್ಡವರಾದರು ಚರ್ಚೆ ಮಾಡಲೇಬೇಕು. ಇದು ನಮ್ಮ ಪಕ್ಷದ ನಿಯಮವಾಗಿದೆ ಎಂದರು.

    ಜಾರಕಿಹೊಳಿ ಸಹೋದರರಿಗೆ ಸಿದ್ದರಾಮಯ್ಯ ಬ್ರೇಕ್ ಹಾಕಲಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಮಾಜಿ ಸಚಿವರು, ಸಿದ್ದರಾಮಯ್ಯ ಅವರು ನನಗೆ ಆಗಲಿ, ರಮೇಶ್ ಅವರಿಗೆ ಆಗಲಿ ಹೇಳುವ ಅವಶ್ಯಕತೆ ಇಲ್ಲ. ಅಂತಹ ಸಮಸ್ಯೆಗಳು ಉದ್ಭವವಾಗಿಲ್ಲ. ಸದ್ಯ ಇದರಲ್ಲಿ ನಮ್ಮ ಪಾತ್ರವೇನು ಇಲ್ಲ. ಪಕ್ಷದ ಕೆಲಸವನಷ್ಟೇ ನಾವು ಮಾಡುತ್ತೇವೆ ಎಂದು ತಿಳಿಸಿದರು.

  • ಕೊಪ್ಪಳ ಎಂಪಿ ಟಿಕೆಟ್‍ಗೆ ರಾಹುಲ್ ಜೊತೆ ರಾಯರೆಡ್ಡಿ ಕೈಲಾಸ ಯಾತ್ರೆ ಮಾಡಿದ್ರಾ?

    ಕೊಪ್ಪಳ ಎಂಪಿ ಟಿಕೆಟ್‍ಗೆ ರಾಹುಲ್ ಜೊತೆ ರಾಯರೆಡ್ಡಿ ಕೈಲಾಸ ಯಾತ್ರೆ ಮಾಡಿದ್ರಾ?

    ಕೊಪ್ಪಳ: ಮಾಜಿ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅವರು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಜೊತೆ ಪ್ರಯಾಣ ಮಾಡಿರುವುದು ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ.

    ಬಸವರಾಜ ರಾಯರೆಡ್ಡಿ ಅವರು ರಾಹುಲ್ ಗಾಂಧಿ ಜೊತೆಗೆ ಕೈಲಾಸನಾಥ ಪರ್ವತ ಪ್ರವಾಸ ಕೈಗೊಂಡ ಫೋಟೋ ವೈರಲ್ ಆಗಿವೆ. ಇದರಿಂದಾಗಿ ರಾಯರೆಡ್ಡಿ ಅವರು ಲೋಕಸಭೆ ಟಿಕೇಟ್ ಗಿಟ್ಟಿಸಿಕೊಳ್ಳುವ ಉದ್ದೇಶದಿಂದಲೇ ರಾಹುಲ್ ಗಾಂಧಿ ಜೊತೆ ಪ್ರವಾಸ ಮಾಡಿರಬಹುದು ಎನ್ನುವ ಮಾತನ್ನು ಜಿಲ್ಲೆಯ ಕಾಂಗ್ರೆಸ್ ನಾಯಕರು ಆಡಿಕೊಳ್ಳುತ್ತಿದ್ದಾರೆ.

    2018ರ ವಿಧಾನಸಭೆ ಚುನಾವಣೆ ಸೋಲಿನ ಕಹಿ ಅನುಭವ ಮರೆಯಲು ಕೈಲಸನಾಥ ದರ್ಶನ ಮಾಡುತ್ತಿರುವೆ ಎಂದು ರಾಯರೆಡ್ಡಿ ಹೇಳಿದ್ದರು. ಇತ್ತ ರಾಹುಲ್ ಗಾಂಧಿ ಭೇಟಿ ಆಕಸ್ಮಿಕ ಅಂತಾ ರಾಯರೆಡ್ಡಿ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಾಜಿ ಸಚಿವೆ ಮೋಟಮ್ಮ ಪತಿಯಿಂದ ಕಿರುಕುಳ- ದಯಾಮರಣಕ್ಕೆ ರೈತ ಕುಟುಂಬ ಮನವಿ

    ಮಾಜಿ ಸಚಿವೆ ಮೋಟಮ್ಮ ಪತಿಯಿಂದ ಕಿರುಕುಳ- ದಯಾಮರಣಕ್ಕೆ ರೈತ ಕುಟುಂಬ ಮನವಿ

    ಮಂಡ್ಯ: ಕಳೆದ 60 ವರ್ಷಗಳಿಂದ ಉಳುಮೆ ಮಾಡುತ್ತಿದ್ದ ಗದ್ದೆ ತಮಗೆ ಬರಬೇಕೆಂದು ಮಾಜಿ ಸಚಿವೆ ಮೋಟಮ್ಮ ಅವರ ಪತಿ ವೆಂಕಟರಾಮು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ರೈತ ಕುಟುಂಬವೊಂದು ದಯಾಮರಣ ನೀಡಿ ಎಂದು ಅಸಹಾಯಕತೆ ಹೊರಹಾಕುತ್ತಿದೆ.

    ಈ ಘಟನೆ ಮಂಡ್ಯದ ಕೀಲಾರ ಗ್ರಾಮದಲ್ಲಿ ನಡೆದಿದೆ. ನಾಗರಾಜು ಮತ್ತು ಮೂರ್ತಿ ಎಂಬವರಿಗೆ ಸೇರಿದ 20 ಗುಂಟೆ ಗದ್ದೆಯ ಪಕ್ಕದಲ್ಲೇ ಮಾಜಿ ಸಚಿವೆ ಮೋಟಮ್ಮ ಅವರ ಪತಿ ವೆಂಕಟರಾಮು ಅವರ ಗದ್ದೆಯಿದೆ. ಇದೀಗ ಮೋಟಮ್ಮ ಅವರ ಪತಿ ವೆಂಕಟರಾಮು ಅವರು, ಅವರ ಗದ್ದೆಯ ಪಕ್ಕದಲ್ಲಿರುವ ನಮ್ಮ ಗದ್ದೆಯ ಮೇಲೆ ಕಣ್ಣು ಹಾಕಿ, ಗದ್ದೆಯನ್ನು ಊಳಲು ಬಿಡುತ್ತಿಲ್ಲ ಅಂತ ರೈತ ಆರೋಪಿಸುತ್ತಿದ್ದಾರೆ.

    ಕೀಲಾರ ಗ್ರಾಮದ ಸರ್ವೆ ನಂಬರ್ 357 ಮತ್ತು 358 ಸರ್ವೆ ನಂಬರ್ ವ್ಯಾಪ್ತಿಯಲ್ಲಿ ಬರುವ 20 ಗುಂಟೆ ಗದ್ದೆಯನ್ನು ಕಳೆದ 60 ವರ್ಷಗಳಿಂದ ನಾವೇ ಊಳುತ್ತಿದ್ದೇವೆ. ಈ ಜಮೀನು ಸರ್ಕಾರದಿಂದ ನಮಗೆ ಕೊಡುಗೆಯಾಗಿ ಬಂದಿದೆ. ಆದ್ರೆ ಈಗ ಏಕಾಏಕಿ ಮೋಟಮ್ಮ ಪತಿ ವೆಂಕಟರಾಮು ಮತ್ತು ಜೊತೆಯವರು ಸೇರಿಕೊಂಡು ಗದ್ದೆಯಲ್ಲಿ ನಾಟಿ ಮಾಡಲು ಬಿಡುತ್ತಿಲ್ಲ. ಸುತ್ತಮುತ್ತ ಎಲ್ಲರ ಗದ್ದೆಯೂ ನಾಟಿ ಮಾಡಿಯಾಗಿದೆ. ಆದ್ರೆ ನಮ್ಮ ಗದ್ದೆ ಮಾತ್ರ ನಾಟಿ ಕೆಲಸ ಆಗದೇ ಹಾಗೇ ಉಳಿದಿದೆ ಎಂದು ನಾಗರಾಜು ಮತ್ತು ಮೂರ್ತಿ ಕುಟುಂಬದವರು ಆರೋಪ ಮಾಡುತ್ತಿದ್ದಾರೆ.

    ನಾಗರಾಜು, ಮೂರ್ತಿ ಹಾಗೂ ಮೋಟಮ್ಮ ಪತಿ ವೆಂಕಟರಾಮು ಎಲ್ಲರೂ ಸಂಬಂಧಿಕರೇ ಆಗಿದ್ದು ಹಳೇ ವೈಷಮ್ಯದಿಂದ ಗಲಾಟೆ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಘಟನೆ ಸಂಬಂಧ ಕೆರಗೋಡು ಪೊಲೀಸ್ ಠಾಣೆಗೆ ದೂರು ನೀಡಿರುವ ನಾಗರಾಜು, ನಾನು ನಿವೃತ್ತ ಎಸ್‍ಐ ಆಗಿದ್ರು ಮಾಜಿ ಸಚಿವರ ಕುಟುಂಬದ ದೌರ್ಜನ್ಯ ಎದುರಿಸಲು ಆಗುತ್ತಿಲ್ಲ ಎಂದು ಅಸಹಾಯಕತೆ ಹೊರಹಾಕುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಚುನಾವಣೆಯನ್ನು ಸವಾಲಾಗಿ ತೆಗೆದುಕೊಳ್ಳಲು ನಾನು ಯಾರು: ಪ್ರಮೋದ್ ಮಧ್ವರಾಜ್

    ಚುನಾವಣೆಯನ್ನು ಸವಾಲಾಗಿ ತೆಗೆದುಕೊಳ್ಳಲು ನಾನು ಯಾರು: ಪ್ರಮೋದ್ ಮಧ್ವರಾಜ್

    ಉಡುಪಿ: ಸ್ಥಳೀಯ ಸಂಸ್ಥೆ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಲು ನಾನು ಯಾರು ಎಂದು ಕಾಂಗ್ರೆಸ್ಸಿನ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಬೇಸರದ ಹೇಳಿಕೆಯನ್ನು ನೀಡಿದ್ದಾರೆ.

    ಪ್ರಮೋದ್ ಮಧ್ವರಾಜ್ ರವರು ಶುಕ್ರವಾರ ಮಲ್ಪೆಯ ಕೊಳ ನಗರಸಭೆ ವಾರ್ಡಿನ ಮತಗಟ್ಟೆಯಲ್ಲಿ ತಮ್ಮ ತಾಯಿಯೊಂದಿಗೆ ಬಂದು ತಮ್ಮ ಹಕ್ಕನ್ನು ಚಲಾಯಿಸಿದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಪಪ್ರಚಾರ ಮಾಡಿ ಗೆದ್ದಿದೆ. ಶಾಸಕ ರಘುಪತಿ ಭಟ್ ಬಗ್ಗೆ ಜನ ಭ್ರಮನಿರಸಗೊಂಡಿದ್ದಾರೆ. ಸ್ಥಳೀಯ ಚುನಾವಣೆಯನ್ನು ನಾನು ಚಾಲೆಂಜ್ ಆಗಿ ತೆಗೆದುಕೊಂಡಿಲ್ಲ. ನಾವು ಸೇವಕರು ಹೀಗಾಗಿ ಸವಾಲು, ಪ್ರತಿಷ್ಠೆ ಅಗತ್ಯವಿಲ್ಲ. ಮತದಾರರು ತಮಗೆ ಯಾರು ಬೇಕೋ ಅವರನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ ಎಂದು ತಿಳಿಸಿದರು.

    ಕಳೆದ ಚುನಾವಣೆಯಲ್ಲಿ ನನ್ನನ್ನು ತಿರಸ್ಕಾರ ಮಾಡಿರುವುದಕ್ಕೆ ನನಗೆ ಕಿಂಚಿತ್ತು ನೋವಿಲ್ಲ. ಜನಾದೇಶಕ್ಕೆ ಎಲ್ಲರೂ ತಲೆಬಾಗಲೇಬೇಕು. ನನ್ನ ಒಬ್ಬನ ವೋಟು ಆಗಿದ್ದರೆ, ಆಗ ಸವಾಲು ಹಾಕಬಹುದಾಗಿತ್ತು. ಆದರೆ ಲಕ್ಷಾಂತರ ಮಂದಿ ಜನರ ಪರವಾಗಿ ನಾನು ಸವಾಲು ಹಾಕಲು ಆಗುವುದಿಲ್ಲ. ಹಾಗೇನಾದರೂ ಸವಾಲು ಹಾಕಿದರೆ, ಅದು ಸರ್ವಾಧಿಕಾರಿ ಧೋರಣೆಯಾಗುತ್ತದೆ. ಒಬ್ಬ ವ್ಯಕ್ತಿ ಅಥವಾ ನಾಯಕನಿಂದ ಎಲ್ಲರನ್ನೂ ಗೆಲ್ಲಿಸಬಲ್ಲೇ ಎಂಬ ಅಹಂ ಒಳ್ಳೆಯದಲ್ಲ ಎಂದು ಹೇಳಿದರು.

    ಜನರ ಮನಸ್ಸನ್ನು ಅರ್ಥಮಾಡಿಕೊಳ್ಳುವುದು ಸವಾಲಿನ ಸಂಗತಿಯಾಗಿದೆ. ಜನರ ತೀರ್ಮಾನವೇ ಅಂತಿಮವಾಗಿರುತ್ತದೆ. ಜನ ಚುವಾವಣೆಯಲ್ಲಿ ಅಭಿವೃದ್ಧಿ ಮಾತ್ರ ನೋಡುವುದಿಲ್ಲ. ಜನರ ಆಲೋಚನೆಗಳೇ ಬೇರೆಯಾಗಿರುತ್ತದೆ ಎಂದು ವಿಷಾದ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನನ್ನನ್ನು ಸೋಲಿಸಿದ್ದು ಕಾಂಗ್ರೆಸ್: ಬಿಜೆಪಿಗೆ ಮಾಜಿ ಸಚಿವ ಚಿಂಚನಸೂರು ಸೇರ್ಪಡೆ

    ನನ್ನನ್ನು ಸೋಲಿಸಿದ್ದು ಕಾಂಗ್ರೆಸ್: ಬಿಜೆಪಿಗೆ ಮಾಜಿ ಸಚಿವ ಚಿಂಚನಸೂರು ಸೇರ್ಪಡೆ

    ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ, ವಿರೋಧ ಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪನವರ ಸಮ್ಮುಖದಲ್ಲಿ ಕಾಂಗ್ರೆಸ್ಸಿನ ಮಾಜಿ ಸಚಿವ ಬಾಬುರಾವ್ ಚಿಂಚನಸೂರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

    ಬುಧವಾರ ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಾಬುರಾವ್ ಚಿಂಚನಸೂರುರವರು ಬಿಜೆಪಿಗೆ ಸೇರ್ಪಡೆಯಾದರು. ಈ ವೇಳೆ ಮಾತನಾಡಿದ ಅವರು, ಕಳೆದ ಬಾರಿ ನಡೆದ ಚುನಾವಣೆಯಲ್ಲಿ ನನ್ನ ಸೋಲಿಗೆ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಕಾರಣವಲ್ಲ. ನನ್ನ ಸೋಲಿಗೆ ಕಾಂಗ್ರೆಸ್‍ನವರೇ ಮೂಲ ಕಾರಣ. ನನ್ನ ಏಳಿಗೆಯನ್ನು ಸಹಿಸದೇ, ಕುತಂತ್ರದಿಂದ ನನ್ನನ್ನು ಸೋಲಿಸಿದ್ದಾರೆ. ಕಾಂಗ್ರೆಸ್ ಕೋಲಿ ಸಮಾಜವನ್ನು ನಿರ್ಲಕ್ಷ್ಯ ಮಾಡಿದೆ. ಆದರೆ ಬಿಜೆಪಿಯು ಕೋಲಿ ಸಮುದಾಯದ ರಾಮನಾಥ್ ಕೋವಿಂದ್ ರವರನ್ನು ರಾಷ್ಟ್ರಪತಿಯನ್ನಾಗಿ ಮಾಡಿದೆ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.

    ಯಡಿಯೂರಪ್ಪನವರ ಮೇಲೆ ನನಗೆ ಬಹಳ ವರ್ಷಗಳಿಂದಲೂ ಅಪಾರ ಗೌರವವಿದೆ. ಹೈದರಾಬಾದ್ ಕರ್ನಾಟಕದಲ್ಲಿ 46% ರಷ್ಟು ಕೋಲಿ ಸಮಾಜವೇ ಇದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಾನು ಹಾಗೂ ಮಾಲೀಕಯ್ಯ ಗುತ್ತೇದಾರ್ ಜೊತೆಗೂಡಿ ಕೆಲಸ ಮಾಡುತ್ತೇವೆ. ಮುಂದಿನ ಲೋಕಸಭಾ ಚುನಾವಣೆಯ ಫಲಿತಾಂಶವನ್ನು ನೀವೇ ನೋಡುತ್ತಿರಿ, ನಾನು ಮಲ್ಲಿಕಾರ್ಜುನ ಖರ್ಗೆಯವರ ಬಗ್ಗೆ ಮಾತನಾಡುವುದಿಲ್ಲ ಎಂದು ಹೇಳಿದರು.

    ಈ ವೇಳೆ ಮಾತನಾಡಿದ ಯಡಿಯೂರಪ್ಪನವರು, ಬಾಬುರಾವ್ ಚಿಂಚನಸೂರು ಸೇರ್ಪಡೆಯಿಂದಾಗಿ ಬಿಜೆಪಿಗೆ ಆನೆ ಬಲ ಬಂದಿದ್ದು, ಕಲಬುರಗಿ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ನಮಗೆ ಬಲ ಸಿಕ್ಕಿದೆ. ಇದು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮಹತ್ವದ ಬದಲಾವಣೆಗೆ ನಾಂದಿಯಾಗುತ್ತದೆ. ನಾವು ಬಹಳ ವರ್ಷಗಳಿಂದ ಬಿಜೆಪಿಗೆ ಸೇರುವಂತೆ ಪ್ರಯತ್ನಿಸುತ್ತಿದ್ದೇವು. ಆದರೆ  ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ರಮಗಳನ್ನು ಮೆಚ್ಚಿ ಅವರೇ ಪಕ್ಷಕ್ಕೆ ಬಂದಿದ್ದಾರೆ. ಕೋರ್ ಕಮಿಟಿ ಸಭೆಯಲ್ಲಿ ಚರ್ಚೆ ಮಾಡಿ, ರಾಜ್ಯ ಮಟ್ಟದಲ್ಲಿ ಅವರಿಗೆ ದೊಡ್ಡ ಜವಾಬ್ದಾರಿ ಕೊಡುತ್ತೇವೆ ಎಂದು ತಿಳಿಸಿದರು.

    ಸಮ್ಮಿಶ್ರ ಸರ್ಕಾರ ವಿರುದ್ಧ ಹರಿಹಾಯ್ದ ಅವರು, ಸರ್ಕಾರ ಇದೇ ಎಂದೇ ಅನ್ನಿಸುತ್ತಿಲ್ಲ. ವಿಧಾನಸೌಧದಲ್ಲಿ ಯಾವ ಸಚಿವರು ಸಹ ಕೈಗೇ ಸಿಗುತ್ತಿಲ್ಲ. ಜಿಲ್ಲೆಗಳಿಗೂ ಹೋಗಿ ಜನರ ಕಷ್ಟ ಕೂಡ ಕೇಳುತ್ತಿಲ್ಲ. ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿಯವರ ಗುದ್ದಾಟದಿಂದ ಅಭಿವೃದ್ಧಿ ಕೆಲಸಗಳು ಕುಂಠಿತವಾಗಿವೆ. ನಾವು ಯಾರೂ ಸಹ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ಮಾಡಬಾರದು. ಸಮ್ಮಿಶ್ರ ಸರ್ಕಾರದ ವಿರುದ್ಧ ಯಾವುದೇ ಹೇಳಿಕೆ ನೀಡಬಾರದು. ಅವರೇ ಬಡಿದಾಕೊಂಡು ಕುಸಿದರೆ, ಅದಕ್ಕೆ ನಾವು ಜವಾಬ್ದಾರರಲ್ಲ ಎಂದು ಹೇಳಿದರು.

    ಸೇರ್ಪಡೆ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವೆ ಸಾದ್ವಿ ನಿರಂಜನ್ ಜ್ಯೋತಿ, ಮಾಜಿ ಶಾಸಕ ಮಾಲೀಕಯ್ಯ ಗುತ್ತೇದಾರ್, ಚಿಂಚನಸೂರ್ ಪತ್ನಿ ಅಮರೇಶ್ವರಿಯವರು ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೂ ಮುನ್ನ ನಂದಮೂರಿ ಹರಿಕೃಷ್ಣ ನಿಧನಕ್ಕೆ ಮೌನ ಆಚರಣೆ ಮಾಡುವ ಮೂಲಕ ಸಂತಾಪ ಸೂಚಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv