ದಾವಣಗೆರೆ: ಸಚಿವ ಸಂಪುಟ ವಿಸ್ತರಣೆಯಲ್ಲಿ ವೀರಶೈವ ಲಿಂಗಾಯತ ಸಮುದಾಯವನ್ನು ಕಡೆಗಣಿಸಿದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಕಾಂಗ್ರೆಸ್ ಹೈಕಮಾಂಡ್‍ಗೆ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಸಚಿವ ಸ್ಥಾನ ಕೊಡಿ ಅಂತ ನಾನು ಹೈಕಮಾಂಡ್ ಮುಂದೆ ಭಿಕ್ಷೆ ಬೇಡಲ್ಲ. ಕೊಟ್ಟರೆ ಕೊಡಲಿ. ಬಿಟ್ರೆ ಬಿಡಲಿ. ನಾನು ಹೋಗಿ ಕೇಳಿಲ್ಲ ಅದರ ಬಗ್ಗೆ ಆಸೆಯನ್ನು ಇಟ್ಟುಕೊಂಡಿಲ್ಲ. ಸಚಿವ ಸ್ಥಾನದ ಬಗ್ಗೆ ನನಗೆ ಯಾರಿಂದನೂ ಫೋನ್ ಬಂದಿಲ್ಲ. ನನಗೆ ಸಚಿವ ಸ್ಥಾನ ಕೊಡಿ ಅಂತ ಯಾವ ಲೀಡರ್ ಗಳಿಗೂ ಕೇಳಿಲ್ಲ ಎಂದರು.
ಮಾಜಿ ಸಚಿವ ಎಂ.ಬಿ.ಪಾಟೀಲ್ ಅವರಿಗಾದರೂ ಕೊಡಲಿ, ಮತ್ತೊಬ್ಬರಿಗಾದರೂ ಮಂತ್ರಿಗಿರಿ ಕೊಡಲಿ. ನಾನು ಯಾರೊಬ್ಬರ ಜೊತೆಗೂ ಈ ವಿಚಾರವಾಗಿ ಚರ್ಚೆ ಮಾಡಿಲ್ಲ. ಅದರ ಅವಶ್ಯಕತೆಯೂ ನನಗಿಲ್ಲ. ರಮೇಶ್ ಜಾರಕಿಹೊಳಿ ಸ್ಥಾನವನ್ನು ಕಿತ್ತುಕೊಂಡು ಅವರ ಸಹೋದರ ಸತೀಶ್ ಜಾರಕಿಹೊಳಿ ಅವರಿಗೆ ಮಂತ್ರಿ ಸ್ಥಾನ ಕೊಡುತ್ತಿದ್ದಾರೆ. ಕಳೆದ ಬಾರಿಯೂ ನನ್ನ ಕೈಬಿಟ್ಟು ನನ್ನ ಮಗನಿಗೆ ಮಂತ್ರಿಗಿರಿ ನೀಡಿದ್ದರು ಎಂದು ಅಸಮಾಧಾನ ಹೊರಹಾಕಿದರು.
ನಾನು ಹೈಕಮಾಂಡ್ ಮಟ್ಟದಲ್ಲಿ ಸಚಿವ ಸ್ಥಾನಕ್ಕೆ ಲಾಬಿ ನಡೆಸಲಿಲ್ಲ ಎಂದು ಪುರುಚ್ಚರಿಸಿದ ಮಾಜಿ ಸಚಿವರು, ನನ್ನ ಮಾತು ಕಾಂಗ್ರೆಸ್‍ನವರು ಕೇಳುತ್ತಾರಾ ಎಂದು ಪ್ರಶ್ನಿಸಿ, ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ನನಗೆ ಅಸಮಾಧಾನವಿಲ್ಲ ಎಂದರು.
ಬಾಗಲಕೋಟೆ: ಮಾಜಿ ಸಚಿವ ಸತೀಶ್ ಜಾರಕಿಹೊಳಿ ಅವರು ಸಿಎಂ ಆಗಬೇಕು. ಅವರು ಸಿಎಂ ಆದರೆ ತಪ್ಪೇನಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಜಿಲ್ಲೆಯ ಬಾದಾಮಿ ಪಟ್ಟಣದಲ್ಲಿ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಸತೀಶ ಜಾರಕಿಹೊಳಿ ಎದುರಲ್ಲೇ ಹೇಳಿಕೆ ನೀಡಿದ ಸಿದ್ದರಾಮಯ್ಯ, ಎಲ್ಲಾ ಜನಾಂಗದವರು ಸಿಎಂ ಆಗಬೇಕು. ಎಲ್ಲರಿಗೂ ಅವಕಾಶ ಸಿಗಬೇಕು ಎಂದು ಹೇಳಿದರು.
ರಾಮಾಯಣ ನಮ್ಮ ಬದುಕಿಗೆ ಮಾರ್ಗದರ್ಶನ. ಅಂತಹ ಮಹಾನ್ ಕಾವ್ಯ ಬರೆದವರು ವಾಲ್ಮೀಕಿ. ಇದು ಇಡೀ ದೇಶವೇ ಹೆಮ್ಮೆ ಪಡುವ ಕೆಲಸ. ಬಲಾಡ್ಯರು ಸಮಾಜದಲ್ಲಿ ಅಸಮಾನತೆ ಕಾಯ್ದುಕೊಂಡು ಬರುತ್ತಿದ್ದು, ಸಮಾಜದಲ್ಲಿ ಸಮಾನತೆ ಬಂದರೆ ಶೋಷಣೆ ಸಾಧ್ಯವಿಲ್ಲ ಎಂಬುದು ಅವರ ಲೆಕ್ಕಾಚಾರ ಎಂದು ಹೇಳಿದರು. ಕೇವಲ ಮತದಾನದ ಹಕ್ಕು ಸಿಕ್ಕರೆ ಅದು ಸ್ವಾತಂತ್ರ್ಯ ಅಲ್ಲ. ಆರ್ಥಿಕ, ಸಾಮಾಜಿಕ ನ್ಯಾಯ ಸಿಕ್ಕಾಗ ಮಾತ್ರ ಸ್ವಾತಂತ್ರ್ಯ ಸಿಕ್ಕಂತೆ. ಈ ಹೀಗೆ ಹೇಳಿದವರು ಡಾ. ಬಿ.ಆರ್. ಅಂಬೇಡ್ಕರ್ ಅವರು. ಅಭಿವೃದ್ಧಿಗಾಗಿ ಮಾಡುವ ಹಣದಲ್ಲಿ ಎಸ್‍ಸಿ, ಎಸ್‍ಟಿ ಸಮುದಾಯಕ್ಕೆ ಜನಸಂಖ್ಯೆಯ ಅನುಗುಣವಾಗಿ ಹಣ ಹಂಚಬೇಕು ಎಂದು ತಿಳಿಸಿದರು.
ಸಿದ್ದರಾಮಯ್ಯ ವೇಗಕ್ಕೆ ಕಳಚಿ ಬಿದ್ದ ಮೈಕ್:
ಎಸ್‍ಟಿ, ಎಸ್‍ಸಿ ಜನರಿಗಾಗಿ ಉತ್ತಮ ಯೋಜನೆ ಜಾರಿಗೆ ತಂದಿದ್ದು ನಮ್ಮ ಸರ್ಕಾರ ಎಂದು ಇದೇ ವೇಳೆ ಭುಜತಟ್ಟಿಕೊಂಡ ಸಿಎಂ ಸಿದ್ದರಾಮಯ್ಯ ಅವರ ರಭಸಕ್ಕೆ ವೇದಿಕೆ ಮೇಲೆ ಅಳವಡಿಸಿದ್ದ ಮೈಕ್ ಕಳಚಿ ಬಿದ್ದಿತು. ಇವನಾರವ ಇವನಾರವ ಎಂದಿನಿಸದಿರಯ್ಯ. ಇವ ನಮ್ಮವ, ಇವ ನಮ್ಮವ ಎಂದಿನಿಸರಯ್ಯ ಎಂದು ಬಸವಣ್ಣ ಹೇಳಿದ್ದಾರೆ. ಆದರೆ ಅದು ಅಲ್ಲಿಗೇ ನಿಂತೋಯ್ತು ಈಗೇನಿದ್ರು ಅವರಲ್ಲೇ, ನಾವಿಲ್ಲೆ ಅನ್ನುವ ಹಾಗಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಅವರು, ಎಲ್ಲ ಸಮಾಜದವರಿಗೂ ಅವಕಾಶ ಬರುತ್ತದೆ. ಆದರೆ ಅದಕ್ಕಾಗಿ ತಾಳ್ಮೆ ವಹಿಸಿ ಕಾಯಬೇಕು. ನಾವು ಅಷ್ಟೇ ಕಾಯೋಣ ಎಂದು ಹೇಳಿದ್ದರು.
ಬೆಂಗಳೂರು: ಭಾರೀ ಸುದ್ದಿಯಾಗಿದ್ದ ಆಂಬಿಡೆಂಟ್ ಪ್ರಕರಣದ ಅಸಲಿಯತ್ತು ಗೊತ್ತಿದ್ದರೂ ಸಿಸಿಬಿ ಮಾಜಿ ಸಚಿವ, ಗಣಿಧಣಿ ಜನಾರ್ದನ ರೆಡ್ಡಿಯವರ ತಲೆಗೆ ಕಟ್ಟಿದ್ಯಾಕೆ ಅನ್ನೋ ಪ್ರಶ್ನೆಯೊಂದು ಇದೀಗ ಮೂಡಿದೆ.
ಇಡೀ ಪ್ರಕರಣದ ವಿವರಣೆಯನ್ನು ಆರೋಪಿ ಶಾರೀಖ್ ಸಿಸಿಬಿ ಮುಂದೆ ಹೇಳಿದ್ದಾನೆ. ಹೀಗಾಗಿ ಆಂಬಿಡೆಂಟ್ ಪ್ರಕರಣದಲ್ಲಿ ಇಡಿ ಅಧಿಕಾರಿಗೆ ಡೀಲ್ ಮಾಡಿದ್ರಾ ಎಂಬ ಅನುಮಾನ ಕಾಡುತ್ತಿದೆ.
ಶಾರೀಖ್ ಹೇಳಿದ್ದೇನು..?
ಜನಾರ್ದನ ರೆಡ್ಡಿ ಡೀಲ್ ಮಾಡ್ತೀನಿ ಅಂತ ಹೋಟೆಲ್ ಅಲ್ಲಿ ಹಣ ಪಡೆದು ಕೈಕಟ್ಟಿ ಕುಳಿತು ಬಿಟ್ಟರು. ಆದ್ರೆ, ಆಂಬಿಡೆಂಟ್ ಮಾಲೀಕ ಫರೀದ್, ಜನಾರ್ದನ ರೆಡ್ಡಿಯನ್ನು ಬೆದರಿಸಿ ಕೇಳೋಕೆ ಆಗ್ತಾ ಇರ್ಲಿಲ್ಲ. ಆದ್ದರಿಂದ ಡೀಲ್‍ನ ಮತ್ತೊಂದು ಸುಪಾರಿಯನ್ನು ಅಶ್ರಫ್ ಆಲಿ ಪಡೆದಿದ್ದನು ಎಂದಿದ್ದಾನೆ.
ಬೆಂಗಳೂರಿನ ಅಶ್ರಫ್ ಆಲಿ ಡೀಲ್ ಪಡೆದು ಇಡಿ ಅಧಿಕಾರಿಗಳೊಂದಿಗೆ ವ್ಯವಹಾರ ಕುದುರಿಸಿದ್ದರು. ವುಡ್ ಲ್ಯಾಂಡ್ಸ್ ಹೋಟೆಲ್‍ನಲ್ಲಿ ಅಶ್ರಫ್ ಅಲಿ ಮತ್ತು ಶಾರೀಖ್, ನಿವೃತ್ತ ಇಡಿ ಅಧಿಕಾರಿ ಗಂಗಾಧರಯ್ಯ ಅವರನ್ನು ಭೇಟಿ ಮಾಡಿ ಡೀಲ್ ಮಾಡಿದ್ದರು. ಹೀಗಾಗಿ ನಿವೃತ್ತ ಅಧಿಕಾರಿಯು ಬೆಂಗಳೂರಲ್ಲಿ ಕೆಲಸ ಮಾಡುತ್ತಿದ್ದ ಇಡಿ ಅಧಿಕಾರಿ ನೀರಜ್ ಜೊತೆ ಸಂಪರ್ಕ ಹೊಂದಿದ್ದರು. ಹಾಗೆಯೇ ನೀರಜ್ ನ ಭೇಟಿ ಮಾಡಿ ಫರೀದ್ ಕೇಸ್ ನಲ್ಲಿ ಸಹಾಯ ಮಾಡುವಂತೆ ಮನವಿ ಮಾಡಿಕೊಂಡು ಒಂದೂವರೆ ಕೋಟಿ ಬೇಡಿಕೆಯಿಟ್ಟಿದ್ದರು.
ಈ ಹಿನ್ನೆಲೆಯಲ್ಲಿ ಅಶ್ರಫ್ ಅಲಿ ಮತ್ತು ಶಾರೀಖ್ 75 ಲಕ್ಷ ಹಣದೊಂದಿಗೆ ನೀರಜ್ ನ ಭೇಟಿ ಮಾಡಿದ್ದರು. ಈ ವೇಳೆ ಒಂದೂವರೆ ಕೋಟಿ ಡೀಲ್ ಅಲ್ಲಿ 75 ಲಕ್ಷ ಮಾತ್ರ ತಂದಿದ್ದಕ್ಕೆ ನೀರಜ್ ಕುಮಾರ್ ಗರಂ ಆಗಿದ್ದರು. ಹಣ ಪೂರ್ತಿ ಕೊಡದೆ ಯಾವುದೇ ಕೆಲಸ ಮಾಡಿ ಕೊಡೋದಿಲ್ಲ ಎಂದು ಬೆದರಿಕೆ ಹಾಕಿದ್ದರು. ಇಡಿ ಅಧಿಕಾರಿ ಮಾತಿಗೆ ಬೆದರಿದ ಅಶ್ರಫ್ ಅಲಿ ಮತ್ತು ಶಾರೀಖ್ ಮತ್ತೆ ಮಲ್ಲೇಶ್ವರಂನ ನಟರಾಜ್ ಎಂಬವರಿಂದ 75 ಲಕ್ಷ ಹಣ ಪಡೆದಿದ್ದರು.
ಬಳಿಕ ಸನ್ಮಾನ್ ಹೋಟೆಲ್ ಬಳಿ ನೀರಜ್ ಕುಮಾರ್ ಅವರಿಗೆ ಒಂದೂವರೆ ಕೋಟಿ ಹಣ ಸಂದಾಯ ಮಾಡಿದ್ದರು ಅಂತ ಶಾರೀಖ್ ಸಿಸಿಬಿ ಪೊಲೀಸರ ಮುಂದೆ ಇಡಿ ಡೀಲ್ ಬಾಯಿಬಿಟ್ಟಿದ್ದಾನೆ. ಹಣ ಪಡೆದ ನೀರಜ್ ಕುಮಾರ್ ಪ್ರಸ್ತುತ ಗೌಹಾಟಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಅಂತ ಶಾರೀಖ್ ತಿಳಿಸಿರುವುದಾಗಿ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.
ಹಾಸನ: ಸಾಮಾಜಿಕ ಜಾಲತಾಣದಲ್ಲಿ ಚುನಾವಣಾ ಪ್ರಚಾರ ಮಾಡಿದ್ದ ಶಿಕ್ಷಕನನ್ನು ಅರಕಲಗೂಡು ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಬಿದರೂರು ಸರ್ಕಾರಿ ಪ್ರಾಥಮಿಕ ಶಾಲೆಯ ಕೆ.ಟಿ.ಮೋಹನ್ ಕುಮಾರ್ ಅಮಾನತಾಗಿರುವ ಶಿಕ್ಷಕ. ಮೋಹನ್ ಚುನಾವಣೆ ಪ್ರಚಾರ ಮಾಡಿರುವ ಕುರಿತು ಬಿಇಒ ಕೆ.ಎನ್.ಶಿವನಂಜೇಗೌಡ ಅವರಿಗೆ ಮಾಹಿತಿ ಸಿಕ್ಕಿತ್ತು. ಹೀಗಾಗಿ ಶಿಕ್ಷಕನನ್ನು ಪ್ರಾಥಮಿಕ ತನಿಖೆ ನಡೆಸಿ ಅಮಾನತು ಮಾಡಿದ್ದಾರೆ.
ಏನಿದು ಪ್ರಕರಣ?:
ಶಿಕ್ಷಕ ಮೋಹನ್ ಕಳೆದ ವಿಧಾನಸಭಾ ಚುನಾವಣಾ ಸಮಯದಲ್ಲಿ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಎ.ಮಂಜು ಪರ ಪ್ರಚಾರ ಮಾಡಿದ್ದರು. ವಾಟ್ಸಾಪ್ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಎ.ಮಂಜು ಪರ ಮತಯಾಚನೆ ಮಾಡುತ್ತಿದ್ದ ವಿಡಿಯೋವನ್ನು ಕಳುಹಿಸಿದ್ದರು. ಅಷ್ಟೇ ಅಲ್ಲದೆ ಚುನಾವಣಾ ಸಂದರ್ಭದಲ್ಲಿ ಅರಕಲಗೂಡು ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷರಾಗಿದ್ದ ಮೋಹನ್ ಕಾಂಗ್ರೆಸ್‍ಗೆ ಮತ ಹಾಕುವಂತೆ ಶಿಕ್ಷಕರಿಗೆ ಒತ್ತಾಯ ಹೇರಿದ್ದರು ಎನ್ನಲಾಗಿತ್ತು.
ಈ ಕುರಿತು ಮಾಹಿತಿ ಲಭ್ಯವಾಗುತ್ತಿದ್ದಂತೆ ಮೋಹನ್ ವಿರುದ್ಧ ಬಿಇಒ ಕೆ.ಎನ್.ಶಿವನಂಜೇಗೌಡ ಅವರು ತನಿಖೆ ಆರಂಭಿಸಿದ್ದರು. ಈ ವೇಳೆ ಪ್ರಾಥಮಿಕ ಮಾಹಿತಿ ಲಭ್ಯವಾಗಿದ್ದು, ಮೋಹನ್ ಪ್ರಚಾರದಲ್ಲಿ ತೊಡಗಿದ್ದು ತಿಳಿದು ಬಂದಿತ್ತು. ಹೀಗಾಗಿ ಸದ್ಯ ಮೋಹನ್ ಗೆ ಅಮಾನತು ಆದೇಶ ಪತ್ರ ಹೊರಡಿಸಿದ್ದಾರೆ.
ಬೆಂಗಳೂರು: ಬರದ ಕಾರಣದಿಂದ ಬಳ್ಳಾರಿಯಲ್ಲಿ ಹಂಪಿ ಉತ್ಸವ ಕೈಬಿಟ್ಟ ದೋಸ್ತಿ ಸರ್ಕಾರಕ್ಕೆ ಮಾಜಿ ಸಚಿವ ಗಣಿಧಣಿ ಜನಾರ್ದನ ರೆಡ್ಡಿ ನೇರ ಸವಾಲು ಎಸೆದ ಬೆನ್ನಲ್ಲೇ ಸಚಿವ ಡಿಕೆ ಶಿವಕುಮಾರ್ ಟಾಂಗ್ ನೀಡಿದ್ದಾರೆ.
ಜನರಿಂದ ಯಾಕೆ ದುಡ್ಡು ವಸೂಲಿ ಮಾಡ್ತೀರಿ..? ಬಿಜೆಪಿಯವರು ಶಾಸಕರ ನಿಧಿಯಿಂದ ದುಡ್ಡು ತೆಗೆದು ಕೊಡಲಿ ಅಂತ ಹೇಳುವ ಮೂಲಕ ರೆಡ್ಡಿ ಫೇಸ್ ಬುಕ್ ಪೋಸ್ಟ್ ಬೆನ್ನಲ್ಲೇ ಸಚಿವ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ ಅನ್ನೋ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಬರಗಾಲದ ಹಿನ್ನೆಲೆಯಲ್ಲಿ ಈ ಬಾರಿ ಹಂಪಿ ಉತ್ಸವ ನಡೆಯಲ್ಲ ಅಂತ ಸಚಿವ ಡಿಕೆ ಶಿವಕುಮಾರ್ ಹೇಳಿದ್ದರು. ಆ ನಂತರ ಬಿಜೆಪಿ ನಾಯಕರು ಸಮ್ಮಿಶ್ರ ಸಕಾರದ ವಿರುದ್ಧ ಕಿಡಿಕಾರುತ್ತಿದ್ದಾರೆ.
ಟಿಪ್ಪು ಜಯಂತಿಯಂತಹ ಬೇರೆ ಬೇರೆ ಜಯಂತಿಗಳನ್ನು ಮಾಡಲು ಸರ್ಕಾರದ ಬಳಿ ಹಣ ಇತ್ತು. ಆದ್ರೆ ಹಂಪಿ ಉತ್ಸವ ಮಾಡಲು ಸರ್ಕಾರದ ಬಳಿ ಹಣವಿಲ್ಲ. ಹೀಗಾಗಿ ಭಿಕ್ಷೆ ಎತ್ತಿಯಾದ್ರೂ ಉತ್ಸವ ಮಾಡೇ ಮಾಡ್ತೀವಿ ಅಂತ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಇದನ್ನೂ ಓದಿ: ಹಂಪಿ ಉತ್ಸವ ಕೈಬಿಟ್ಟ ದೋಸ್ತಿ ಸರ್ಕಾರಕ್ಕೆ ಜನಾರ್ದನ ರೆಡ್ಡಿ ನೇರ ಸವಾಲು
ಸೋಮಶೇಖರ್ ರೆಡ್ಡಿಯವರು ಈ ಹಿಂದೆ ಜೋಳಿಗೆ ಮೂಲಕ ಹಣ ಸಂಗ್ರಹ ಮಾಡಿ ಹಂಪಿ ಉತ್ಸವ ಮಾಡಿದ್ರು. ಹೀಗಾಗಿ ಬಿಜೆಪಿಯವರು ಜೋಳಿಗೆಯೆತ್ತಿಕೊಂಡು ಹೋಗಿ ಹಣ ವಸೂಲಿ ಮಾಡೋದು ಬೇಡ. ಈ ಮೂಲಕ ಜನರಿಗೆ ಹಿಂಸೆ ಕೊಡೋದು ಬೇಡ. ಬದಲಾಗಿ ಅವರು ಶಾಸಕರ ನಿಧಿಗೆ ಕೊಡಲಿ ಅಥವಾ ಹೇಗೆ ಮಾಡಬೇಕು ಅಂತ ಸಲಹೆ ನೀಡಲಿ. ಒಟ್ಟಿನಲ್ಲಿ ವಿಜಯನಗರ ಸಂಸ್ಕøತಿ ಹಾಗೂ ಇತಿಹಾಸಕ್ಕೆ ಯಾವುದೇ ರೀತಿ ಧಕ್ಕೆ ಬರದ ರೀತಿಯಲ್ಲಿ ನಾವು ಹಂಪಿ ಉತ್ಸವ ಮಾಡಬೇಕು ಅಂತ ಇದ್ದೀವಿ. ಹೀಗಾಗಿ ಸದ್ಯ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತಾ ಇದ್ದೀವಿ.
ಒಂದು ದಿನ ಉತ್ಸವ ಮಾಡಲು ಸಾಧ್ಯನಾ ಅಂತ ನೋಡಲು ಅಧಿಕಾರಿಗಳಿಗೆ ಹೇಳಿದ್ದೀವಿ. ಬರಗಾಲ ಇದ್ದಿದ್ದರಿಂದ ಸದ್ಯದ ಪರಿಸ್ಥಿತಿಯಲ್ಲಿ ಉತ್ಸವ ಮಾಡಲು ಸಾಧ್ಯವಿಲ್ಲ. ಯಾಕಂದ್ರೆ ಅದರ ಗೌರವಕ್ಕೆ ಧಕ್ಕೆಯಾಗುತ್ತದೆ ಅಂತ ಅವರು ಹೇಳಿದ್ದಾರೆ.
ಬೆಂಗಳೂರು: ಜೆಡಿಎಸ್ ಹಾಗೂ ಕಾಂಗ್ರೆಸ್ ನೇತೃತ್ವದ ಸರ್ಕಾರಕ್ಕೆ ಮಾಜಿ ಸಚಿವ, ಗಣಿಧಣಿ ಜನಾರ್ದನ ರೆಡ್ಡಿ ಸವಾಲು ಹಾಕಿದ್ದಾರೆ. ಹಂಪಿ ಉತ್ಸವ ಕೈಬಿಡುವ ನಿಲುವಿಗೆ ಜನಾರ್ದನ ರೆಡ್ಡಿ ಫೇಸ್‍ಬುಕ್‍ನಲ್ಲಿ ಕಿಡಿಕಾರಿದ್ದಾರೆ.
ಕೋಟಿ ಕೋಟಿ ಖರ್ಚು ಮಾಡಿ ಕೃತಜ್ಞತಾ ಸಮಾವೇಶ ಮಾಡ್ತೀರಿ. ಉಪ ಚುನಾವಣೆ ಗೆಲ್ಲೋದಕ್ಕೆ ನೀರಿನಂತೆ ಹಣ ಖರ್ಚು ಮಾಡ್ತೀರಿ. ಅವೆಲ್ಲದಕ್ಕೂ ಇರದ ಬರ, ಹಂಪಿ ಉತ್ಸವದ ವಿಚಾರಕ್ಕೆ ಏಕೆ ಬರುತ್ತೆ ಅಂತ ಪ್ರಶ್ನಿಸಿದ್ದಾರೆ. ಅಲ್ಲದೇ ಹಂಪಿ ಉತ್ಸವ ಮಾಡಲು ನಿಮ್ಮ ಕೈಲಿ ಆಗಲಿಲ್ಲ ಅಂದ್ರೆ ಹೇಳಿ. ನಾನು ದುಡ್ಡು ಕೊಡ್ತೇನೆ. ಹಂಪಿ ಉತ್ಸವ ನಡೆಸಿ ಅಂತ ದೋಸ್ತಿ ಸರ್ಕಾರಕ್ಕೆ ನೇರ ಸವಾಲು ಹಾಕಿದ್ದಾರೆ.
ಬಳ್ಳಾರಿಗೆ ನಾನು ಬರಲು ಸಾಧ್ಯವಾಗದಿದ್ದರೂ ಕೂಡ ಜಿಲ್ಲೆಯ ಜನರಿಗೋಸ್ಕರ ಆರ್ಥಿಕ ನೆರವು ನೀಡುವುದಾಗಿ ಹೇಳಿದ್ದಾರೆ.
ರೆಡ್ಡಿ ಪೋಸ್ಟ್ ನಲ್ಲೇನಿದೆ?:
ಹಂಪಿ ಉತ್ಸವ 3 ದಿನ ಅದ್ಧೂರಿಯಾಗಿಯೇ ನಡೆಯಲಿ. ನಾಡಿನಲ್ಲಿ ವಿವಿಧೆಡೆ ಉತ್ಸವಗಳನ್ನು ಆಚರಿಸಲು ಉತ್ಸುಕತೆ ತೋರುತ್ತಿರುವ ರಾಜ್ಯ ಸರ್ಕಾರ, ಕೇವಲ 3 ದಿನ ನಡೆಯುವ ಹಂಪಿ ಉತ್ಸವ ವಿಷಯದಲ್ಲಿ ಏನಾದರೂ ಒಂದು ಕುಂಟು ನೆಪ ಹೇಳುತ್ತಿರುವುದು ದುರಾದೃಷ್ಟಕರ. ನಾಡಿನ ವಿವಿಧ ಉತ್ಸವಗಳನ್ನು ನಡೆಸುವ ಸರ್ಕಾರ ಹಂಪಿ ಉತ್ಸವ ಆಚರಿಸಲು ಏನಾದರೊಂದು ನೆಪ ಹೇಳುತ್ತಲೇ ಬರುತ್ತಿದೆ. ಇಡೀ ರಾಷ್ಟ್ರದ ಹೆಮ್ಮೆಯ ಪ್ರತೀಕವಾಗಿರುವ ಹಂಪಿ ಉತ್ಸವ ರಾಜ್ಯದ ಜನತೆಗೆ ಅದರಲ್ಲೂ ಉತ್ತರ ಕರ್ನಾಟಕದ ಜನತೆಗೆ ಭಾವನಾತ್ಮಕವಾದ ಬೆಸುಗೆಯನ್ನು ಬೆಸೆಯುವಂಥದ್ದಾಗಿದೆ.
ಇದು ವ್ಯವಸ್ಥಿತವಾಗಿ ಸರ್ಕಾರದಿಂದ ಮತ್ತು ಕೆಲ ಸಚಿವರಿಂದ ಬಳ್ಳಾರಿಗರನ್ನು ಅದರಲ್ಲೂ ಉತ್ತರ ಕರ್ನಾಟಕದ ಜನರನ್ನು ಕಡೆಗಣಿಸುವ ಪ್ರಯತ್ನವಾಗಿದೆ. ನವೆಂಬರ್ 3 ರಂದು ನಡೆದ ಲೋಕಸಭಾ ಉಪಚುನಾವಣೆಯಲ್ಲಿ ಅಕ್ರಮವಾಗಿ ಸಾಕಷ್ಟು ದುಡ್ಡು ಖರ್ಚು ಮಾಡಿರುವವರಿಗೆ ಮತ್ತು ಕೃತಜ್ಞತಾ ಸಮಾವೇಶ ನಡೆಸಿರುವವರಿಗೆ ಬರಗಾಲ ಕಾಣಿಸಲಿಲ್ಲವೇ?. ಬಿಜೆಪಿಯ ಹಿರಿಯ ನಾಯಕ, ಮೊಳಕಾಲ್ಮೂರು ಶಾಸಕ ಬಿ.ಶ್ರೀರಾಮುಲು ಅವರು ಕೃತಜ್ಞತಾ ಸಮಾವೇಶದ ಬದಲು ರೈತರಿಗೆ ನೆರವು ನೀಡಿ ಎಂದು ಭಿನ್ನವಿಸಿಕೊಂಡರೂ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಕೃತಜ್ಞತಾ ಸಮಾವೇಶ ನಡೆಸುವುದು ಅಗತ್ಯವಿತ್ತೇ?
ಉಪಚುನಾವಣೆಗೆ ನೀರಿನಂತೆ ಹಣ ಖರ್ಚು ಮಾಡಲು ಮತ್ತು ಕೃತಜ್ಞತಾ ಸಮಾವೇಶ ನಡೆಸುವಲ್ಲಿ ಆಸಕ್ತಿ ತೋರುವವರು ಹಂಪಿ ಉತ್ಸವ ಆಚರಣೆಗೆ ಅಸಡ್ಡೆ ತೋರುವುದೇಕೆ?. ಹಂಪಿ ಉತ್ಸವಕ್ಕೆ ತನ್ನದೇ ಆದ ಇತಿಹಾಸವಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿದ್ದ ಎಂ.ಪಿ. ಪ್ರಕಾಶ್ ಅವರು ಹಂಪಿ ಉತ್ಸವವನ್ನು ಮೊಟ್ಟ ಮೊದಲ ಬಾರಿಗೆ 1988ರಲ್ಲಿ ಆಚರಿಸಲು ಅವಕಾಶ ನೀಡಿದ್ದರು. ಇದಕ್ಕೂ ಮುನ್ನ ದಾಸಶ್ರೇಷ್ಠರೂ, ಮನುಕುಲದ ಸಾಮಾಜಿಕ ಚಿಕಿತ್ಸಕರೂ ಆದ ಕನಕ-ಪುರಂದರರ ಉತ್ಸವ ನಡೆಯುತ್ತಿತ್ತು. ಹಂಪಿ ಉತ್ಸವದ ವ್ಯಾಪ್ತಿಯನ್ನು ದೇಶದುದ್ದಕ್ಕೂ ಪಸರಿಸುವಂತೆ ಮಾಡಿದ ಕೀರ್ತಿ ಎಂ.ಪಿ.ಪ್ರಕಾಶ್ ಅವರಿಗೆ ಸಲ್ಲುತ್ತದೆ.
ಜನರ ಭಾವನೆಗಳನ್ನು ಪರಸ್ಪರ ಪ್ರೀತಿ, ಪ್ರೇಮ, ಸಾಮರಸ್ಯದೊಂದಿಗೆ ಸಮೀಕರಿಸುವ ಈ ಸಾಂಸ್ಕೃತಿಕ ಹಬ್ಬವನ್ನು ಕಡೆಗಣಿಸುವ ಮೂಲಕ ಸರ್ಕಾರ ಜನರ, ಕಲಾವಿದರ, ರೈತರ ಭಾವನೆಗಳ ಜೊತೆ ಚೆಲ್ಲಾಟವಾಡುತ್ತಿದೆ. ಸರ್ಕಾರದ ಈ ಕ್ರಮದಿಂದ ಬೇಸತ್ತಿರುವ ಮಠಾಧೀಶರೇ ಇಂದು ಬೀದಿಗೆ ಇಳಿದು ಕನ್ನಡ ನಾಡಿನ ಸಾಂಸ್ಕೃತಿಕ ಪರಂಪರೆಯ ದ್ಯೋತಕವಾದ ಹಂಪಿ ಉತ್ಸವ ಆಚರಿಸಲು ಭಿಕ್ಷೆ ಯಾಚಿಸುತ್ತಿದ್ದಾರೆ. ಮಾಗಳ ಗ್ರಾಮದ ಶ್ರೀ ಮಳೆಯೋಗೀಶ್ವರ ಸ್ವಾಮಿಗಳು ಭಿಕ್ಷೆ ಬೇಡುವ ಮೂಲಕ ಕಲಾವಿದರ ಬೆನ್ನಿಗೆ ನಿಂತಿದ್ದಾರೆ. ಹಂಪಿ ಉತ್ಸವ ಆಚರಿಸಲು ಸ್ವಾಮೀಜಿಗಳು ಭಿಕ್ಷೆ ಬೇಡುತ್ತಿದ್ದಾರೆಂದರೆ ಏನು ಅರ್ಥ?
ಸರ್ಕಾರ ನಡೆಸುವವರು ಇಲ್ಲಿನ ಜನರನ್ನು, ಇಲ್ಲಿನ ಕಲೆ, ಸಂಸ್ಕೃತಿ, ಪರಂಪರೆ ಮತ್ತು ಗತಕಾಲದ ಇತಿಹಾಸವನ್ನು ಕಡೆಗಣಿಸುತ್ತಿದ್ದಾರೆಂದೇ ಅರ್ಥವಲ್ಲವೇ? ಬಿಎಸ್ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಹಂಪಿ ಉತ್ಸವವನ್ನು ಇಡೀ ಜಗತ್ತೇ ಕರ್ನಾಟಕದ ಕಡೆಗೆ ತಿರುಗಿ ನೋಡುವಂತೆ ಉತ್ಸವ ಆಚರಿಸಿದ್ದೆವು. ನಾನಾಗ ಬಳ್ಳಾರಿ ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿದ್ದೆ. ತದನಂತರ ಉತ್ಸವ ಅದ್ಧೂರಿಯಾಗಿ ನಡೆಯಲೇ ಇಲ್ಲ. ಈಗ ಬರಗಾಲದ ನೆಪ ಹೇಳಿ ಉತ್ಸವ ರದ್ದುಗೊಳಿಸುವುದು ಸರಿಯೇ? ಎಂ.ಪಿ.ಪ್ರಕಾಶರು 3 ದಿನ ನಡೆಸಿದ್ದ ಹಂಪಿ ಉತ್ಸವವನ್ನು ಎರಡು ದಿನ ಆಚರಿಸುವುದು ಸರಿಯೇ? ಕಾಟಾಚಾರಕ್ಕೆ ಹಂಪಿ ಉತ್ಸವ ನಡೆಸದೇ ಅದ್ಧೂರಿಯಾಗಿ ಉತ್ಸವ ನಡೆಸಲಿ. ಅದಕ್ಕೆ ಬೇಕಾದ ಎಲ್ಲ ರೀತಿಯ ಸಹಕಾರ ನಾನು ನೀಡುತ್ತೇನೆ.
ಹಂಪಿ ಉತ್ಸವ ನಮ್ಮ ಹೆಮ್ಮೆಯ ಹಬ್ಬ. ಈ ಉತ್ಸವ ಜನರಲ್ಲಿ ಪ್ರೀತಿ, ಬಾಂಧವ್ಯ, ಉಲ್ಲಾಸಗಳ ಜೊತೆ ಸಾಮರಸ್ಯಗಳನ್ನು ಹೆಚ್ಚಿಸುತ್ತಿದೆ. ಅಷ್ಟೇ ಅಲ್ಲ ಗತವೈಭವದ ಮೆರಗು, ನೆನಪು, ಸ್ಮರಣೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಒಂದು ಪ್ರತೀಕವಾಗಿದೆ. ಹಂಪಿ ಉತ್ಸವ ಯಾವುದೇ ಕಾರಣಕ್ಕೂ ಕಾಟಾಚಾರಕ್ಕೆ ನಡೆಯಬಾರದು. 3 ದಿನವೂ ಅದ್ಧೂರಿಯಾಗಿಯೇ ನಡೆಯಬೇಕು. ಬಳ್ಳಾರಿಗೆ ನಾನು ಬರಲು ಸಾಧ್ಯವಾಗದೇ ಇರುವುದರಿಂದ ನನ್ನ ಸಹಪಾಠಿಗಳ ಜಿಲ್ಲೆಯ ಜನತೆಯ ಕಲಾರಾಧನೆಯ ಉತ್ಸವಕ್ಕೆ ಆರ್ಥಿಕ ನೆರವು ಸೇರಿದಂತೆ ಎಲ್ಲ ರೀತಿಯ ನೆರವು ಮತ್ತು ಸಹಕಾರ ನೀಡಲು ಬದ್ಧನಾಗಿದ್ದೇನೆ.
ಬಳ್ಳಾರಿ ಜಿಲ್ಲೆಯ ಜನರೂ ಸೇರಿದಂತೆ ನೆರೆಯ ವಿವಿಧ ಜಿಲ್ಲೆಗಳ ಜನರು ವರ್ಷದಿಂದ ವರ್ಷಕ್ಕೆ ಕಣ್ಣಲ್ಲಿ ಕಣ್ಣಿಟ್ಟು ಹಂಪಿ ಉತ್ಸವ ಸಡಗರಕ್ಕೆ ಕಾದು ಕುಳಿತಿರುತ್ತಾರೆ. ಅವರಿಗೆಲ್ಲ ನಿರಾಶೆಯಾಗಬಾರದು. ಒಟ್ಟಿನಲ್ಲಿ, ಹಂಪಿ ಉತ್ಸವ 3 ದಿನಗಳ ಕಾಲ ಸಡಗರ, ಸಂಭ್ರಮಗಳಿಂದ ಜರುಗಬೇಕೆನ್ನುವುದೇ ನನ್ನ ಇಚ್ಛೆಯಾಗಿದೆ ಅಂತ ರೆಡ್ಡಿ ಬರೆದುಕೊಂಡಿದ್ದಾರೆ.
ಬೆಂಗಳೂರು: ಸ್ಯಾಂಡಲ್‍ವುಡ್‍ನ ರೆಬೆಲ್ ಸ್ಟಾರ್ ಅಂಬರೀಶ್ ಅವರ ಅಂತ್ಯಕ್ರಿಯೆಯನ್ನು ಶಾಂತವಾಗಿ ಯಾವುದೇ ಹಿಂಸಾಚಾರಕ್ಕೆ ಆಸ್ಪದ ಇಲ್ಲದಂತೆ ಮುಗಿಸಿದ ಶ್ರೇಯಸ್ಸು ಸರ್ಕಾರಕ್ಕೆ ಸಂದಿದೆ. ಅದರಲ್ಲೂ ಕುಮಾರಸ್ವಾಮಿ ಅವರ ಮುತುವರ್ಜಿಯಿಂದಾಗಿ ಈ ಘನಕಾರ್ಯ ನಡೆದಿದೆ. ಈ ಮೂಲಕ ಮುಖ್ಯಮಂತ್ರಿಯವರು ರಿಯಲ್ ಹೀರೋ ಆಗಿದ್ದಾರೆ.
ಡಾ. ರಾಜಕುಮಾರ್ ನಿಧನದ ವೇಳೆ ನಡೆದಿದ್ದ ಘಟನೆಗಳಿಂದ ಪಾಠ ಕಲಿತಿದ್ದ ಕುಮಾರಸ್ವಾಮಿ ಅವರು ಅಂಬಿ ಅವರ ಎಲ್ಲಾ ವಿಧಿವಿಧಾನಗಳನ್ನು ಶಾಂತಿಭಂಗವಾಗದಂತೆ ಸಮರ್ಥವಾಗಿ, ದಕ್ಷವಾಗಿ ನಿಭಾಯಿಸಿದ್ದಾರೆ.
ಸಿಎಂ ರಿಯಲ್ ಹೀರೋ ಅನಿಸಿದ್ದು ಹೇಗೆ?:
ನಟ ಅಂಬರೀಶ್ ಅವರ ಸಾವಿನ ಸುದ್ದಿ ಹೊರಬೀಳುತ್ತಿದ್ದಂತೆಯೇ ಕುಮಾರಸ್ವಾಮಿಯವರು ತಕ್ಷಣವೇ ಆಸ್ಪತ್ರೆಯತ್ತ ದೌಡಾಯಿಸಿದ್ದರು. ಅಲ್ಲದೇ ಆಸ್ಪತ್ರೆಯ ಮುಂದೆ ಅದಾಗಲೇ ನೆರೆದಿದ್ದ ಅಭಿಮಾನಿಗಳಲ್ಲಿ ಶಾಂತಿ ಕಾಪಾಡುವಂತೆ ಮನವಿ ಮಾಡಿಕೊಂಡಿದ್ದರು.
ಅಂಬಿ ಪಾರ್ಥಿವ ಶರೀರ ಕಂಠೀರವ ಸ್ಟೇಡಿಯಂನಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡುವುದಾಗಿ ಘೋಷಣೆ ಮಾಡಿದ್ದರು. ಮರುದಿನ ಅಂದರೆ ಭಾನುವಾರ ಮಂಡ್ಯದಲ್ಲಿ ಸಾರ್ವಜನಿಕ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಿದ್ರು. ಅಲ್ಲದೇ ಈ ಕುರಿತಾಗಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಜೊತೆ ಮಾತುಕತೆ ನಡೆಸಿ, ಸೇನಾ ಹೆಲಿಕಾಪ್ಟರ್ ನೀಡುವಂತೆ ರಕ್ಷಣಾ ಸಚಿವೆಯಲ್ಲಿ ಮನವಿ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಸೇನಾ ಹೆಲಿಕಾಪ್ಟರ್ ಮೂಲಕ ಅಂಬಿ ಪಾರ್ಥಿವ ಶರೀರವನ್ನು ಮಂಡ್ಯಕ್ಕೆ ಶಿಫ್ಟ್ ಮಾಡುವಲ್ಲಿ ಯಶಸ್ವಿಯಾದ್ರು.
ಇಷ್ಟು ಮಾತ್ರವಲ್ಲದೇ ಅಂಬಿ ಪಾರ್ಥಿವ ಶರೀರದ ಜೊತೆ ಸೇನಾ ಹೆಲಿಕಾಪ್ಟರ್‍ನಲ್ಲಿ ಸಿಎಂ ಕೂಡ ತೆರಳಿದ್ದರು. ಅಲ್ಲಿಯೂ ಖುದ್ದು ನಿಂತು ವ್ಯವಸ್ಥೆ ಪರಿಶೀಲನೆ ನಡೆಸಿದ್ದರು. ಸಚಿವ ಪುಟ್ಟರಾಜು ಸೇರಿದಂತೆ ಹಲವರ ಉಸ್ತುವಾರಿಯ ಮುಖಾಂತರ ಮಂಡ್ಯದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿತ್ತು.
ಅಲ್ಲಿಂದ ಮತ್ತೆ ಅಂಬಿ ಪಾರ್ಥಿವ ಶರೀರವನ್ನು ಸೇನಾ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ಕರೆತಂದಿದ್ದು, ಬಳಿಕ ಕಂಠೀರವ ಸ್ಟೇಡಿಯಂನಿಂದ ಸ್ಟುಡಿಯೋವರೆಗೆ ಅಂತಿಮ ಯಾನ ನಡೆಸಲಾಯಿತು. ಈ ವೇಳೆಯೂ ಕುಮಾರಸ್ವಾಮಿಯವರು ಅಂಬಿ ಪಾರ್ಥಿವ ಶರೀರದೊಂದಿಗೆ ಸಾಗಿದ್ದರು.
ಬಳಿಕ ಖುದ್ದು ಸಿಎಂ ಕುಮಾರಸ್ವಾಮಿಯೇ ಮುತುವರ್ಜಿ ವಹಿಸಿ ಅಂತ್ಯಕ್ರಿಯೆ ನೆರವೇರಿಸಿದ್ದರು. ಒಟ್ಟಿನಲ್ಲಿ ಶಾಂತವಾಗಿ ಯಾವುದೇ ಹಿಂಸಾಚಾರಕ್ಕೆ ಆಸ್ಪದ ಇಲ್ಲದಂತೆ ಅಂಬರೀಶ್ ಅಂತ್ಯಸಂಸ್ಕಾರವನ್ನು ಅಚ್ಚುಕಟ್ಟಾಗಿ ನೆರವೇರಿಸಿದ ಹೆಗ್ಗಳಿಕೆ ಸಿಎಂ ಕುಮಾರಸ್ವಾಮಿ ಪಾತ್ರರಾಗಿದ್ದಾರೆ.
ಬೆಂಗಳೂರು: ಜಲೀಲಲಾಗಿ ಸಿನಿಮಾರಂಗಕ್ಕೆ ಎಂಟ್ರಿಯಾದ ಎಚ್. ಅಮರನಾಥ್ ಆಮೇಲೆ ಅಂಬರೀಶನಾಗಿದ್ದು ಇತಿಹಾಸ. ತನ್ನ ತಾತ ಖ್ಯಾತ ಪಿಟೀಲು ವಾದಕರಾದ ಚೌಡಯ್ಯ ಅವರಾಗಿದ್ದರೂ ಎಂದೂ ಅದನ್ನ ಸಿನಿಮಾಗಾಗಿ ಬಳಸಿಕೊಂಡವರಲ್ಲ. 1972-73ರಲ್ಲಿ ತೆರೆಕಂಡ ಪುಟ್ಟಣ ಕಣಗಾಲ್ ಅವರ ‘ನಾಗರಹಾವು’ ಚಿತ್ರದಿಂದ ಹಿಡಿದು, ಮೊನ್ನೆ ಮೊನ್ನೆಯಷ್ಟೇ ತೆರೆಕಂಡ ‘ಅಂಬಿ ನಿಂಗೆ ವಯಸ್ಸಾಯ್ತೋ’ ಚಿತ್ರದವರೆಗೆ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿಮಾನಿಗಳನ್ನ ರಂಜಿಸಿದ್ದಾರೆ.
ಈ ಮೂಲಕ ತನ್ನದೇ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿದ್ದವರು ಅಂಬರೀಶ್. ಇವತ್ತು ಆ ಅಭಿಮಾನಿ ಸಾಗರ ಗೋಚರಿಸ್ತು. ವಿಕ್ರಂ ಆಸ್ಪತ್ರೆ, ಜಯನಗರದ ನಿವಾಸ, ಕಂಠೀರವ ಕ್ರೀಡಾಂಗಣದಲ್ಲಿ ಅಂಬರೀಶ್ ಅಂತಿಮ ದರ್ಶನಕ್ಕಾಗಿ ಅಬಾಲವೃದ್ಧರಾಗಿ ಅಭಿಮಾನಿಗಳು ಆಗಮಿಸಿದ್ದರು.
ಬೆಳಗ್ಗಿನ ಚಳಿಯನ್ನೂ ಲೆಕ್ಕಿಸದೆ ಸೂರ್ಯ ಹುಟ್ಟೋಕೆ ಮುನ್ನವೇ ಅಭಿಮಾನಿಗಳು, ರೆಬೆಲ್‍ಸ್ಟಾರ್ ಅವರನ್ನ ಕೊನೆಯ ಬಾರಿಗಾದರೂ ಕಣ್ತುಂಬಿಕೊಳ್ಳಬೇಕು ಅಂತ ಕಂಠೀರವ ಕ್ರೀಡಾಂಗಣದಲ್ಲಿ ಕಿಕ್ಕಿರಿದು ಸೇರಿದ್ದರು. ಕಣ್ಣೀರು ಸುರಿಸಿದ್ರು. ಆಕಂದ್ರನ ಮುಗಿಲು ಮುಟ್ಟಿತ್ತು. ಬಿಸಿಲೇರುತ್ತಿದ್ದಂತೆಯೇ ಅಭಿಮಾನಿಗಳ ಸಂಖ್ಯೆಯೂ ಹೆಚ್ಚಾಯ್ತು. ಮಧ್ಯಾಹ್ನದ ಹೊತ್ತಿಗೆ ಅದು ನೂರ್ಮಡಿ ಆಯ್ತು. 3 ಗಂಟೆ ಹೊತ್ತಿಗೆ ಅಂಬರೀಶ್ ಅವರನ್ನು ಮಂಡ್ಯದತ್ತ ಸಾಗಿಸಲು ಟೈಮ್ ಆಯ್ತು ಅಂತ ಹೇಳುತ್ತಿದ್ದಂತೆಯೇ ನೂಕು ನುಗ್ಗಲು ಜಾಸ್ತಿ ಆಯ್ತು. ನಮಗೊಮ್ಮೆ ಅವಕಾಶ ಕೊಡಿ ಅಂತ ಅಂಗಲಾಚಿದರು. ಕರ್ಣನ ದರ್ಶನ ಸಿಗದಿದ್ದಾಗ ಹತಾಶೆಯಿಂದ ಜೋರಾಗಿ ಘೋಷಣೆ ಕೂಗಿದರು.
ಕಬ್ಬಿಣದ ಸರಳುಗಳೇ ಬಿದ್ದೋಗುವಷ್ಟು ತಳ್ಳಾಟ ಇತ್ತು. ಪೊಲೀಸರಂತು ಅಕ್ಷರಶಃ ಅಭಿಮಾನಿಗಳನ್ನು ನಿಯಂತ್ರಿಸಲು ಹರಸಾಹಸಪಟ್ಟರು. ಅಭಿಮಾನಿ ಸಾಗರ ಅಂತ ಲಾಠಿ ಬೀಸಲು ಹೋಗಲಿಲ್ಲ. ಅಷ್ಟರ ಮಟ್ಟಿಗೆ ಎಲ್ಲವನ್ನು ಪೊಲೀಸರು ಸಹಿಸಿಕೊಂಡರು. ಎಚ್‍ಎಎಲ್ ಏರ್ ಪೋರ್ಟ್ ಗೆ ರವಾನಿಸುವಾಗ ಕಂಠೀರವ ಸ್ಟೇಡಿಯಿಂನಿಂದ ಎಚ್‍ಎಎಲ್ ಏರ್ ಪೋರ್ಟ್ ವರೆಗೆ ರಸ್ತೆಯ ಇಕ್ಕೆಲಗಳಲ್ಲಿ ಜನಸಾಗರ ನಿಂತು ಅಭಿಮಾನ ಮೆರೆಯಿತು.
– ವ್ಯಕ್ತಿ ಸತ್ತಾಗ ನೋಡದನ್ನ, ಬದುಕಿದ್ದಾಗ ನೋಡಿದವ ನಾನು ಪುಣ್ಯವಂತ
ಬೆಂಗಳೂರು: “ನಾನು ಎಂದು ಪತ್ನಿ ಸುಮಾಗೆ ಕಂಡಿಷನ್ ಹಾಕಲ್ಲ. ಹಾಕೋದು ಇಲ್ಲ” ಹೀಗಂತ ಹೇಳಿದ್ದು ರೆಬೆಲ್ ಸ್ಟಾರ್ ಅಂಬರೀಶ್.
ಈ ಹಿಂದೆ ಪಬ್ಲಿಕ್ ಟಿವಿಗೆ ಆಗಮಿಸಿದ್ದ ವೇಳೆ ಅಂಬಿಗೆ, ನೀವು ಪತ್ನಿ ಸುಮಲತಾರಿಗೆ ಕಂಡೀಷನ್ ಹಾಕ್ತೀರಾ ಎಂಬ ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ನಾನೆಂದು ಕಂಡೀಷನ್ ಹಾಕಿಲ್ಲ, ಹಾಕೋದಿಲ್ಲ. ನೋ ಚಾನ್ಸ್. ಆಕೆಯೊಂದಿಗೆ 25 ವರ್ಷ ಸಂಸಾರ ಮಾಡಿದ್ದೇನೆ. ನಾನು ಪಬ್ಲಿಕ್ ಟಿವಿ ಸ್ಟುಡಿಯೋದಲ್ಲಿ ಕುಳಿತಿದ್ದೇನೆ. ಆಕೆ ಹೈದರಾಬಾದ್ ನಲ್ಲಿ ನಡೆಯುತ್ತಿರುವ ಶೂಟಿಂಗ್ ನಲ್ಲಿ ಬ್ಯೂಸಿ ಆಗಿದ್ದಾಳೆ. ಒಬ್ಬರ ಮೇಲೆ ನಂಬಿಕೆ ಇದ್ದರೆ ಅವರಿಗೆ ಗಂಡ-ಹೆಂಡ್ತಿ ಅಂತಾರೆ ಎಂದು ಉತ್ತರಿಸಿದ್ದರು.
ನಮ್ಮ ಕಾಲದಲ್ಲಿ ಪ್ರೇಮಿಗಳ ದಿನ ಅಂತಾ ಇರಲಿಲ್ಲ. ಇವಾಗಿನವರು ವಾಲೆಂಟೈನ್ ಡೇ ಅಂತಾ ಆಚರಣೆ ಮಾಡಿಕೊಳ್ಳುತ್ತಿದ್ದಾರೆ. ನಾವು ಒಂದು ದಿನ ಪ್ರೇಮಿಗಳ ದಿನ ಅಂತಾ ಆಚರಣೆ ಮಾಡಿಲ್ಲ. ಪ್ರತಿದಿನ ನಾವು ಒಬ್ಬರನ್ನೊಬ್ಬರು ಪ್ರೀತಿಸುತ್ತೇವೆ. ಒಂದು ದಿನ ಲವ್ ಮಾಡಿದ್ರೆ ಗಂಡ-ಹೆಂಡತಿ ಆಗಲ್ಲ, ಪ್ರತಿದಿನ ಅವರಲ್ಲಿ ಪ್ರೀತಿ ಇರಬೇಕು. ಆದರೆ ಪ್ರೇಮಿಗಳ ದಿನದಂದು ಹೂಗಳು ತುಂಬಾ ಖರ್ಚು ಆಗುತ್ತೆ ಎಂಬುವುದು ನನಗೆ ಗೊತ್ತಿದೆ ಎಂದು ಹೇಳಿ ನಗೆ ಚಟಾಕಿ ಹಾರಿಸಿದ್ದರು.
ಮದುವೆಯ 25ನೇ ವಾರ್ಷಿಕೋತ್ಸವದಲ್ಲಿ ಯಾರೋ ಒಂದು ಹೂ ತಂದುಕೊಟ್ಟಿದ್ದಕ್ಕೆ, ಕೆಳಗೆ ಕುಳಿತು ಕೊಟ್ಟಿದ್ದೇನೆ. ಇದೇ ಬಣ್ಣ ಅಂತೇನಿಲ್ಲ. ನಮ್ಮ ಜೀವನದ ಪ್ರತಿ ದಿನವೂ ನಾವು ಚೆನ್ನಾಗಿಯೇ ಇದ್ದೇವೆ. ಸ್ವೀಟ್ ಮೆಮೊರಿ ಅಂತಾ ಸಿಕ್ಕಾಪಟ್ಟೆ ಇವೆ ಅಂತ ಹೇಳಿದ್ದಾರೆ.
ವ್ಯಕ್ತಿ ಸಾವನ್ನಪ್ಪಿದಾಗ ಆತನ ಅಂತ್ಯಸಂಸ್ಕಾರ ಎಷ್ಟು ಜನರು ಸೇರ್ತಾರೆ ಎಂಬ ಲೆಕ್ಕಾಚಾರದಲ್ಲಿ ವ್ಯಕ್ತಿತ್ವವನ್ನು ಲೆಕ್ಕ ಹಾಕಲಾಗುತ್ತದೆ. ಬದುಕಿರುವಾಗ ವ್ಯಕ್ತಿಗೆ ತಾನು ಮಾಡಿದ ಆಸ್ತಿ, ಹಣ, ಕಟ್ಟಡ ಕಾಣುತ್ತೆ, ಪ್ರೀತಿ ಕಾಣಲ್ಲ ಅಂತಾ ಹೇಳುವುದುಂಟು. ನನ್ನ ಜೀವನ ತುಂಬಾ ವಿಭಿನ್ನವಾಗಿದ್ದು, ಸಿಂಗಾಪುರದಿಂದ ಚಿಕಿತ್ಸೆ ಪಡೆದು ಬಂದಾಗ ನಾನೇ ಮಂಡ್ಯಕ್ಕೆ ಬರ್ತೀನಿ ಅಂತಾ ಮೊದಲೇ ಹೇಳಿದೆ. ನನ್ನ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದ ನನ್ನ ಹಿಂದೆ ಸುಮಲತಾ ನಿಂತಿದ್ದಳು. ಇನ್ನು ಕೆಂಗೇರಿಯಿಂದ ಮಂಡ್ಯ ಹೋಗುವ ಮಾರ್ಗದ ಉದ್ದಕ್ಕೂ ಅಭಿಮಾನಿಗಳು ನನ್ನನ್ನು ನೋಡಲು ನಿಂತಿದ್ದರು. ಅಂದು ಜೀವನದಲ್ಲಿ ನಾನು ಸಂಪಾದಿಸಿದ್ದು ಏನು ಅಂತಾ ಗೊತ್ತಾಯಿತು. ನನ್ನ ಆರೋಗ್ಯ ಸುಧಾರಿಸಲಿ ಎಂದು ಇಡೀ ರಾಜ್ಯಾದ್ಯಂತ ದೇವಸ್ಥಾನ, ಮಸೀದಿ, ಚರ್ಚ್ ಗಳಲ್ಲಿ ಪ್ರಾರ್ಥನೆ ಮಾಡಿದ್ದಾರೆ. ವ್ಯಕ್ತಿ ಸತ್ತ ಮೇಲೆ ನೋಡುವುದನ್ನು ನಾನು ಬದುಕಿದಾಗ ನೋಡಿದ್ದೇನೆ ಎಂದು ಹೇಳಿ ಒಂದು ಕ್ಷಣ ಅಂಬರೀಶ್ ಭಾವುಕರಾದರು.
– ಪ್ರಧಾನಿ ಮೋದಿಗೆ ಏನೂ ಗೊತ್ತಿಲ್ಲ, ಆದ್ರೂ ದೇಶ ಆಳುತ್ತಿದ್ದಾರೆ
ಕೊಪ್ಪಳ: ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟಿದರೇ ದೇಶ ಉದ್ಧಾರ ಆಗಲ್ಲ. ಶಾಲೆ ಕಟ್ಟಿದರೆ ಉದ್ಧಾರವಾಗುತ್ತದೆ ಎಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.
ನಗರದ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಮಾಜಿ ಸಚಿವರು, ಮಂದಿರ, ಮಸೀದಿ ಹಾಗೂ ಚರ್ಚ್ ಕಟ್ಟುವುದು ರಾಜಕೀಯ ಪಕ್ಷದ ಕೆಲಸವಲ್ಲ. ದೇಶ ಕಟ್ಟುವುದು ಸರ್ಕಾರದ ಮುಖ್ಯ ಗುರಿಯಾಗಿರಬೇಕು. ಹೀಗಿದ್ದರೂ ರಾಮ ಮಂದಿರ ನಿರ್ಮಾಣದಲ್ಲಿ ಪಕ್ಷಗಳು ಭಾಗವಹಿಸುತ್ತಿರುವುದು ದೊಡ್ಡ ದುರ್ದೈವ ಎಂದು ಕಿಡಿಕಾರಿದರು. ಇದನ್ನು ಓದಿ: ಕೇಂದ್ರ ಸರ್ಕಾರ ಬಿದ್ದರೂ ಪರವಾಗಿಲ್ಲ, ಮಂದಿರ ಕಟ್ಟಿ: ಪೇಜಾವರಶ್ರೀ
ಧರ್ಮದ ಹೆಸರಲ್ಲಿ ರಾಜಕೀಯ ಮಾಡುತ್ತಿರುವುದು ದುರ್ದೈವ. ಈ ರೀತಿಯ ಬೆಳವಣಿಗೆಯಿಂದ ಮುಂದಿನ ದಿನಮಾನಗಳಲ್ಲಿ ದೇಶಕ್ಕೆ ದೊಡ್ಡ ದುರಂತ ಕಾದಿದೆ ಎಂದ ಸಚಿವರು, ಬಿಜೆಪಿ ವಾಮಮಾರ್ಗದಿಂದ ಅಧಿಕಾರಕ್ಕೆ ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಮೇಲೆ ಯಾವುದೇ ಅಭಿವೃದ್ಧಿ ಕೆಲಸಗಳಾಗಿಲ್ಲ. ಅವರು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಜಾರಿಗೆ ತಂದ ಯೋಜನೆಗಳನ್ನೇ ಮುಂದುವರಿಸಿದ್ದಾರೆ ಎಂದು ಆರೋಪಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಏನೂ ಗೊತ್ತಿಲ್ಲ. ಆದರೂ ದೇಶ ಆಳುತ್ತಿರುವುದು ದೊಡ್ಡ ದುರಂತ. ಬಿಜೆಪಿಯವರು ಧರ್ಮ, ಜಾತಿ ಹೆಸರಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಇದರಿಂದಾಗಿ ರಾಜಕೀಯ ತೀರ ಕೆಳಮಟ್ಟಕ್ಕೆ ಹೋಗಿದೆ ಎಂದು ವಾಗ್ದಾಳಿ ನಡೆಸಿದರು.