Tag: former minister

  • ಮಾಜಿ ಕೇಂದ್ರ ಸಚಿವ ಜೈಪಾಲ್ ರೆಡ್ಡಿ ಇನ್ನಿಲ್ಲ

    ಮಾಜಿ ಕೇಂದ್ರ ಸಚಿವ ಜೈಪಾಲ್ ರೆಡ್ಡಿ ಇನ್ನಿಲ್ಲ

    ಹೈದರಾಬಾದ್: ಕಾಂಗ್ರೆಸ್ ಹಿರಿಯ ಮುಖಂಡ ಮತ್ತು ಮಾಜಿ ಕೇಂದ್ರ ಸಚಿವ ಜೈಪಾಲ್ ರೆಡ್ಡಿ ಅವರು ಇಂದು ಮುಂಜಾನೆ ನಿಧನರಾಗಿದ್ದಾರೆ.

    ಇತ್ತೀಚೆಗೆ ನ್ಯೂಮೋನಿಯಾ ಎಂಬ ರೋಗದಿಂದ ಬಳಲುತ್ತಿದ್ದ ಅವರನ್ನು ಹೈದರಾಬಾದ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಮುಂಜಾನೆ 1.28ರ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೆ ತಮ್ಮ 77 ವಯಸ್ಸಿನಲ್ಲಿ ಸಾವನ್ನಪ್ಪಿದ್ದಾರೆ.

    ಜೈಪಾಲ್ ರೆಡ್ಡಿ ಅವರು 1984 ರಿಂದ ಐದು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ಇದರ ಜೊತೆಗೆ ಎರಡು ಬಾರಿ ರಾಜ್ಯಸಭೆಗೂ ಆಯ್ಕೆಯಾಗಿದ್ದರು. ಈ ಮೂಲಕ ಕಾಂಗ್ರೆಸ್ ಕೇಂದ್ರ ಸರ್ಕಾರದಲ್ಲಿ ಸಚಿವ ಸ್ಥಾನವನ್ನು ಪಡೆದಿದ್ದರು.

    ಜೈಪಾಲ್ ರೆಡ್ಡಿ ಅವರು ಐಕೆ ಗುಜ್ರಾಲ್ ಸರ್ಕಾರದಲ್ಲಿ ಮಾಹಿತಿ ಮತ್ತು ಪ್ರಸಾರ ಸಚಿವರಾಗಿದ್ದರು. ಯುಪಿಎ ಸರ್ಕಾರದ ಅವಧಿಯಲ್ಲಿ ಅವರು ನಗರ ಅಭಿವೃದ್ಧಿ ಮತ್ತು ಸಂಸ್ಕೃತಿಯಂತಹ ಖಾತೆಗಳಲ್ಲಿ ಸೇವೆ ಸಲ್ಲಿಸಿದ್ದರು.

  • ಸ್ಪೀಕರ್ ಬಳಿ ಕಾಲಾವಕಾಶ ಕೇಳಿದ ರೋಷನ್ ಬೇಗ್

    ಸ್ಪೀಕರ್ ಬಳಿ ಕಾಲಾವಕಾಶ ಕೇಳಿದ ರೋಷನ್ ಬೇಗ್

    ಬೆಂಗಳೂರು: ವಿಚಾರಣೆಗೆ ಹಾಜರಾಗಲು ಕಾಲಾವಕಾಶ ಕೇಳಿ ಮಾಜಿ ಸಚಿವ ರೋಷನ್ ಬೇಗ್, ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ.

    ರೋಷನ್ ಬೇಗ್ ಅವರು ರಾಜೀನಾಮೆ ಸಲ್ಲಿಸಿದ ಹಿನ್ನೆಲೆಯಲ್ಲಿ ಇಂದು ಸಂಜೆ 4:30 ಗಂಟೆಗೆ ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ ಕಾರಣಾಂತರಗಳಿಂದ ವಿಚಾರಣೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಮೂರು ದಿನ ಬಿಟ್ಟು ವಿಚಾರಣೆಗೆ ದಿನಾಂಕ ನಿಗದಿ ಮಾಡಿ ಎಂದು ಸ್ಪೀಕರ್ ಅವರಿಗೆ ಪತ್ರದ ಮೂಲಕ ಮನವಿ ಮಾಡಿಕೊಂಡಿದ್ದಾರೆ. ಈ ಪತ್ರವನ್ನು ತಮ್ಮ ಆಪ್ತರ ಬಳಿ ಕೊಟ್ಟು ಸ್ಪೀಕರ್ ಕಚೇರಿಗೆ ಕಳುಹಿಸಿದ್ದಾರೆ.

    ಪಕ್ಷ ವಿರೋಧಿ ಚಟುವಟಿಕೆಯಿಂದ ರೋಷನ್ ಬೇಗ್ ಅವರನ್ನು ಕಾಂಗ್ರೆಸ್ಸಿನಿಂದ ವಜಾ ಮಾಡಲಾಗಿತ್ತು. ಈ ಬೆನ್ನಲ್ಲೇ ಅತೃಪ್ತ ಶಾಸಕರ ರಾಜೀನಾಮೆ ಪರ್ವ ಆರಂಭವಾಯಿತು. ಹೀಗಾಗಿ ರೋಷನ್ ಬೇಗ್ ಅವರು ಕೂಡ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

  • ಶಾಸಕ ಸ್ಥಾನಕ್ಕೆ ಹೊರತು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿಲ್ಲ: ರಾಮಲಿಂಗಾ ರೆಡ್ಡಿ

    ಶಾಸಕ ಸ್ಥಾನಕ್ಕೆ ಹೊರತು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿಲ್ಲ: ರಾಮಲಿಂಗಾ ರೆಡ್ಡಿ

    – ನಾನ್ಯಾರಿಗೂ ರಾಜೀನಾಮೆ ನೀಡಲು ಹೇಳಿಲ್ಲ
    – ವೈಯಕ್ತಿಕ ಬೇಸರದಿಂದ ರಾಜೀನಾಮೆ

    ಬೆಂಗಳೂರು: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಹೊರತು ಕಾಂಗ್ರೆಸ್ ಪಕ್ಷಕ್ಕೆ ಅಲ್ಲ ಎಂದು ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಅವರು ತಿಳಿಸಿದ್ದಾರೆ.

    ತನ್ನ ರಾಜೀನಾಮೆಯ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನಾನು ಯಾರಿಗೂ ನಡುಕ ಹುಟ್ಟಿಸಿಲ್ಲ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಹೊರತು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿಲ್ಲ. ಕಾಂಗ್ರೆಸ್‍ನ ಹಿರಿಯ ನಾಯಕರು ಯಾವುದೇ ಕಾರಣಕ್ಕೂ ಪಕ್ಷ ಬಿಡಬಾರದು ಎಂದು ಹೇಳಿದ್ದಾರೆ. ನಾನು ಯಾವ ಕಾರಣಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಹೇಳಿದ್ದೇನೆ. ಅವರಿಗೆ ಮೊದಲೇ ಕಾರಣ ಗೊತ್ತಿತ್ತು. ನಾನು ಪುನಃ ಕಾರಣವನ್ನು ತಿಳಿಸಿದ್ದೇನೆ ಎಂದರು.

    ಹೈಕಮಾಂಡ್‍ನಿಂದ ಯಾರಿಗೆ ಕರೆ ಮಾಡಿಲ್ಲ. ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಅವರು ಮಾತ್ರ ಕರೆ ಮಾಡಿ ಮಾತನಾಡಿದ್ದಾರೆ. ಯಾವುದೇ ಕಾರಣಕ್ಕೂ ನಾನು ರಾಜೀನಾಮೆ ಪತ್ರವನ್ನು ಹಿಂಪಡೆಯಲ್ಲ. ಸ್ಪೀಕರ್ ಎಲ್ಲರನ್ನು ಕರೆದು ಮಾತನಾಡಿಸುತ್ತಾರೆ. ನನ್ನ ಒಬ್ಬನ ರಾಜೀನಾಮೆಯಿಂದ ದೋಸ್ತಿ ಸರ್ಕಾರಕ್ಕೆ ಏನೂ ಆಗುವುದಿಲ್ಲ. ನಾನು ಯಾರಿಗೂ ರಾಜೀನಾಮೆ ನೀಡಿ ಎಂದು ಹೇಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ಜಯನಗರ ಶಾಸಕಿ ಸೌಮ್ಯಾ ರೆಡ್ಡಿ ಅವರು ಮಹಿಳಾ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಗಿರುವುದರಿಂದ ದೆಹಲಿಗೆ ತೆರಳಿದ್ದರು. ಅಲ್ಲಿ ಸಭೆ ಇತ್ತು. ಹಾಗಾಗಿ ಅವರು ಅಲ್ಲಿ ಹೋಗಿದ್ದರು. ಅಲ್ಲಿ ಹೋಗಿದ್ದ ಕಾರಣ ನಾಯಕರು ಹಾಗೂ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದ್ದಾರೆ. ಆದರೆ ಸೌಮ್ಯಾ ಅಲ್ಲಿ ಏನೂ ಮಾತನಾಡಿದ್ದಾಳೆ ಎಂಬುದು ನನಗೆ ಗೊತ್ತಿಲ್ಲ ಎಂದು ತಿಳಿಸಿದ್ದಾರೆ.

    ನನಗೆ ವೈಯಕ್ತಿಕವಾಗಿ ಬೇಸರ ಇತ್ತು. ಹಾಗಾಗಿ ನಾನು ರಾಜೀನಾಮೆ ನೀಡಿದ್ದೇನೆ. ಈಗ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗೂ ನನಗೂ ಯಾವುದೇ ಸಂಬಂಧವಿಲ್ಲ. ನಾನು ಈ ಹಿಂದೆ ಸಾಕಷ್ಟು ಬಾರಿ ನನ್ನ ಬೇಸರದ ಬಗ್ಗೆ ಹೇಳಿದ್ದೇನೆ. ನಾನು ಮತ್ತೆ ಹೇಳಲು ಇಷ್ಟಪಡುವುದಿಲ್ಲ ಎಂದು ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.

  • ಭಾರತ ಪಾಕಿಸ್ತಾನಕ್ಕೆ ಕಷ್ಟದ ನೆರೆ ರಾಷ್ಟ್ರ ಆಗಲಿದೆ: ಪಾಕ್ ಮಾಜಿ ಸಚಿವೆ

    ಭಾರತ ಪಾಕಿಸ್ತಾನಕ್ಕೆ ಕಷ್ಟದ ನೆರೆ ರಾಷ್ಟ್ರ ಆಗಲಿದೆ: ಪಾಕ್ ಮಾಜಿ ಸಚಿವೆ

    ನವದೆಹಲಿ: ಲೋಕಸಭಾ ಚುನಾವಣೆ 2019ರ ಬಗ್ಗೆ ಪಾಕಿಸ್ತಾನದಲ್ಲಿ ವಿಭಿನ್ನ ಪ್ರತಿಕ್ರಿಯೆಗಳು ಹೊರಬರುತ್ತಿದೆ.

    ಪಾಕಿಸ್ತಾನದ ಮಾಜಿ ಮಾಹಿತಿ ಸಚಿವೆ ಹಾಗೂ ಪಾಕಿಸ್ತಾನ ಪೀಪಲ್ ಪಕ್ಷದ ನಾಯಕಿ ಶೆರ್ರಿ ರೆಹಮಾನ್ ಲೋಕಸಭಾ ಚುನಾವಣೆಯ ಬಗ್ಗೆ ನೆಗೆಟೀವ್ ಆಗಿ ಟ್ವೀಟ್ ಮಾಡಿದ್ದಾರೆ. “ಎಕ್ಸಿಟ್ ಪೋಲ್ ರೀತಿ ಫಲಿತಾಂಶ ಬಂದರೆ ಭಾರತ ಪಾಕಿಸ್ತಾನಕ್ಕೆ ಕಷ್ಟದ ನೆರೆ ರಾಷ್ಟ್ರ ಆಗಲಿದೆ” ಎಂದು ಟ್ವೀಟ್ ಮಾಡಿದ್ದಾರೆ.

    ಪಾಕಿಸ್ತಾನದ ಪತ್ರಕರ್ತ ವಜಾಹತ್ ಕಝ್ಮಿ, “ಪ್ರಧಾನಿ ನರೇಂದ್ರ ಮೋದಿ ಎರಡನೇ ಬಾರಿ ಪ್ರಧಾನಿಯಾಗಿ ಆಯ್ಕೆ ಆಗಿದ್ದಾರೆ. ಅವರು ಪಾಕಿಸ್ತಾನದ ಜೊತೆ ಇರುವ ಸಮಸ್ಯೆ ಬಗ್ಗೆ ಮಾತನಾಡಿ ಪರಿಹರಿಸಿಕೊಳ್ಳಿ” ಎಂದು ಟ್ವೀಟ್ ಮಾಡುವ ಮೂಲಕ ಶುಭಾಶಯ ಕೋರಿದ್ದಾರೆ.

    ಮತ್ತೊಬ್ಬರು ಪಾಕಿಸ್ತಾನಿ ಪತ್ರಕರ್ತರಾದ ಉಸ್ಮಾನ್ ತನ್ವೀರ್ ಅವರು ಕೂಡ ಟ್ವೀಟ್ ಮಾಡುವ ಮೂಲಕ ಮೋದಿಗೆ ಅಭಿನಂದಿಸಿದ್ದಾರೆ. “ಪ್ರಧಾನಿ ಇಮ್ರಾನ್ ಖಾನ್ ಅವರ ಭವಿಷ್ಯ ನಿಜವಾಗಿದೆ. ನಾನು ಅವರಿಗೂ ಅಭಿನಂದನೆ ಹೇಳಲು ಇಷ್ಟಪಡುತ್ತೇನೆ” ಎಂದು ಟ್ವೀಟ್ ಮಾಡಿದ್ದಾರೆ.

  • ಅನಾರೋಗ್ಯದ ನಡುವೆಯೂ ಬಂದು ಮತ ಹಾಕಿದ ಮಾಜಿ ಸಚಿವ

    ಅನಾರೋಗ್ಯದ ನಡುವೆಯೂ ಬಂದು ಮತ ಹಾಕಿದ ಮಾಜಿ ಸಚಿವ

    ಬೆಂಗಳೂರು: ಮಾಜಿ ಸಚಿವ ಎಚ್. ಎಂ ರೇವಣ್ಣ ಅವರು ಅನಾರೋಗ್ಯದ ನಡುವೆಯೂ ಬಂದು ಮತದಾನ ಮಾಡಿದ್ದಾರೆ.

    ಬೆನ್ನು ನೋವಿಗೆ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಸಚಿವ ಎಚ್. ಎಂ ರೇವಣ್ಣ ವಿಕ್ರಮ್ ಆಸ್ಪತ್ರೆಯಿಂದ ನೇರವಾಗಿ ಮತದಾನ ಕೇಂದ್ರಕ್ಕೆ ಆಗಮಿಸಿದ್ದಾರೆ. ರೇವಣ್ಣ ಅವರು ಮಹಾಲಕ್ಷ್ಮಿ ಲೇಔಟ್‍ನ 141 ಮತಗಟ್ಟೆ ಕೇಂದ್ರಕ್ಕೆ ಆಗಮಿಸಿ ಮತ ಚಲಾಯಿಸಿದ್ದಾರೆ.

    ಈ ವೇಳೆ ಮಾತನಾಡಿದ ಎಚ್. ಎಂ ರೇವಣ್ಣ, “ನಂಗೆ ಸ್ಪೈನಲ್ ಕಾರ್ಡ್ ತೊಂದರೆ ಇದೆ. ಎರಡು ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿದ್ದೇನೆ. ಮತದಾನ ತಪ್ಪಿಸಿಕೊಳ್ಳಬಾರದು ಎನ್ನುವ ಕಾರಣಕ್ಕೆ ಚಿಕಿತ್ಸೆ ನಡುವೆ ಮತದಾನಕ್ಕೆ ಬಂದೆ. ಯಾರು ಕೂಡ ಮತದಾನ ಮಾಡೋದನ್ನು ತಪ್ಪಿಸಿಕೊಳ್ಳಬಾರದು. ನಾನು ಒಬ್ಬ ರಾಜಕೀಯ ವ್ಯಕ್ತಿಯಾಗಿ ವೋಟ್ ಮಾಡದೇ ಇದ್ದರೆ ತಪ್ಪಾಗುತ್ತೆ” ಎಂದರು.

    ನಗರದ ಜನಕ್ಕಿಂತ ಹಳ್ಳಿ ಜನರು ಹೆಚ್ಚಾಗಿ ವೋಟ್ ಮಾಡುತ್ತಿದ್ದಾರೆ. ನಗರದ ಜನರು ಹೆಚ್ಚು ವೋಟ್ ಮಾಡಿ ದೇಶದ ಅಭಿವೃದ್ಧಿಯಲ್ಲಿ ಭಾಗಿಯಾಗುವಂತೆ ಮಾಜಿ ಸಚಿವ ಎಚ್. ಎಂ ರೇವಣ್ಣ ಅವರು ಮತದಾರರಲ್ಲಿ ಮನವಿ ಮಾಡಿಕೊಂಡರು.

  • ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ರಾಮನಗರ ಜಿಲ್ಲೆಯವರೇ ಅಭ್ಯರ್ಥಿ: ಕಟ್ಟಾ ಸುಬ್ರಹ್ಮಣ್ಯ ನಾಯ್ಡು

    ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ರಾಮನಗರ ಜಿಲ್ಲೆಯವರೇ ಅಭ್ಯರ್ಥಿ: ಕಟ್ಟಾ ಸುಬ್ರಹ್ಮಣ್ಯ ನಾಯ್ಡು

    ರಾಮನಗರ: ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಪ್ರಬಲ ಅಭ್ಯರ್ಥಿಯನ್ನೇ ಕಣಕ್ಕೆ ಇಳಿಸುತ್ತೇವೆ. ಆ ಅಭ್ಯರ್ಥಿ ರಾಮನಗರ ಜಿಲ್ಲೆಯವರೇ ಆಗಿರುತ್ತಾರೆ ಎಂದು ಬಿಜೆಪಿ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಹೇಳಿದ್ದಾರೆ.

    ನಗರದಲ್ಲಿ ನಡೆದ ರಾಮನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಬೂತ್‍ಮಟ್ಟದ ಕಾರ್ಯಕರ್ತರ, ಮುಖಂಡರ ಸಭೆಯ ಬಳಿಕ ಮಾತನಾಡಿದ ಮಾಜಿ ಸಚಿವರು, ಜೆಡಿಎಸ್‍ನಿಂದ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಬಗ್ಗೆ ಕಾಂಗ್ರೆಸ್ ನಾಯಕರಲ್ಲಿ ಅಸಮಾಧಾನವಿದೆ. ಜೆಡಿಎಸ್‍ಗೆ ಬಿಟ್ಟುಕೊಟ್ಟ 8 ಕ್ಷೇತ್ರಗಳಲ್ಲೂ ಕಾಂಗ್ರೆಸ್‍ನ ಸ್ಥಳೀಯ ಮುಖಂಡರು, ಕಾರ್ಯಕರ್ತರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಕೆಲವು ಕಡೆ ಅಭ್ಯರ್ಥಿಗಳೇ ಇಲ್ಲ. ಮತ್ತೆ ಕೆಲವು ಕಡೆ ಹೊಂದಾಣಿಕೆಯೇ ಇಲ್ಲ ಎಂದು ಲೇವಡಿ ಮಾಡಿದರು.

    ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಅಭ್ಯರ್ಥಿಯೇ ಇಲ್ಲ. ತುಮಕೂರನ್ನು ಜೆಡಿಎಸ್‍ಗೆ ಬಿಟ್ಟುಕೊಟ್ಟಿದ್ದಕ್ಕೆ ಕಾಂಗ್ರೆಸ್‍ನ ವಿರೋಧ ವ್ಯಕ್ತವಾಗಿದೆ. ರಾಜ್ಯಕ್ಕೆ ಭೇಟಿ ನೀಡಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು, ಕಾಂಗ್ರೆಸ್-ಜೆಡಿಎಸ್ ದೋಸ್ತಿಯು 13 ಸೀಟಿಗಿಂತ ಹೆಚ್ಚು ಗೆಲ್ಲಲ್ಲ ಎಂದು ಈಗಾಗಲೇ ರಾಜ್ಯದ ಕಾಂಗ್ರೆಸ್ ನಾಯಕರಿಗೆ ಎಚ್ಚರಿಕೆ ಕೊಟ್ಟಿದ್ದಾರಂತೆ. ಹೀಗಾಗಿ ರಾಜ್ಯದಲ್ಲಿ ಬಿಜೆಪಿಯೇ ಹೆಚ್ಚು ಕ್ಷೇತ್ರದಲ್ಲಿ ಜಯಗಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಪಟ್ಟಿ ಬಿಡುಗಡೆಗೂ ಮುನ್ನ ನಾನೇ ಅಭ್ಯರ್ಥಿ ಎಂದು ಘೋಷಿಸಿಕೊಳ್ಳಲು ಸಾಧ್ಯವಿಲ್ಲ. ಈ ಹಿಂದೆ ತಮಗೆ ಸಾಕಷ್ಟು ಕಹಿ ಅನುಭವವಾಗಿದೆ. ಹೀಗಾಗಿ ಪಕ್ಷದ ವರಿಷ್ಠರು ಇಂದು ಸಾಯಂಕಾಲ ಇಲ್ಲವೇ ನಾಳೆ ಅಧಿಕೃತವಾಗಿ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಿದ್ದಾರೆ ಎಂದು ತಿಳಿಸಿದರು.

    ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ಅವರು ಮಾತನಾಡಿ, ದೇಶದಲ್ಲಿ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಅಲೆ ಇದೆ. ಮೋದಿ ಅವರು ಮತ್ತೆ ಪ್ರಧಾನಿಯಾಗಬೇಕು, ದೇಶವನ್ನು ಮುನ್ನಡೆಸಲು ಅವರೇ ಸಮರ್ಥ ವ್ಯಕ್ತಿ ಎಂದು ಯುವಜನತೆ ಬಯಸುತ್ತಿದ್ದಾರೆ ಎಂದ ಅವರು, ಪಕ್ಷ ಟಿಕೆಟ್ ಯಾರಿಗೆ ಕೊಡುತ್ತದೆ ಎನ್ನುವುದು ನನಗೆ ಗೊತ್ತಿಲ್ಲ. ಪಟ್ಟಿಬಿಡುಗಡೆಯಾದ ಮೇಲೆ ಯಾರು ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎನ್ನುವುದು ತಿಳಿಯುತ್ತದೆ ಎಂದರು.

  • ರಾಜೀನಾಮೆ ನಿರ್ಧಾರ ಮುಂದೂಡಿದ ಮಾಜಿ ಸಚಿವ ಎ ಮಂಜು..!

    ರಾಜೀನಾಮೆ ನಿರ್ಧಾರ ಮುಂದೂಡಿದ ಮಾಜಿ ಸಚಿವ ಎ ಮಂಜು..!

    ಹಾಸನ: ಇಲ್ಲಿನ ಕಾಂಗ್ರೆಸ್ ಪಾಲಿಟಿಕ್ಸ್ ಕ್ಷಣ ಕ್ಷಣಕ್ಕೂ ಟ್ವಿಸ್ಟ್ ಪಡೆಯುತ್ತಿದ್ದು, ಮಾಜಿ ಸಚಿವ ಎ ಮಂಜು ಅವರು ಇಂದು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡುತ್ತಾರೆ ಎಂದು ಹೇಳಲಾಗುತ್ತಿತ್ತು. ಆದ್ರೆ ಇದೀಗ ಅವರು ದಿಢೀರ್ ಆಗಿ ತಮ್ಮ ನಿರ್ಧಾರವನ್ನು ಬದಲಿಸಿದ್ದಾರೆ.

    ಹೌದು. ಎ ಮಂಜು ಇಂದು ಕಾಂಗ್ರೆಸ್‍ಗೆ ರಾಜೀನಾಮೆ ನೀಡುವ ಕುರಿತು ಹಿಂದೆ ಸರಿದಿದ್ದಾರೆ. ಹೀಗಾಗಿ ಅವರು ಇಂದು ರಾಜೀನಾಮೆ ನೀಡುತ್ತಿಲ್ಲ. ಬದಲಾಗಿ ಸೋಮವಾರ ಅಂತಿಮ ತೀರ್ಮಾನ ಪ್ರಕಟ ಮಾಡುವುದಾಗಿ ತಿಳಿಸಿದ್ದಾರೆ.

    ನಿರ್ಧಾರ ಬದಲಿಸಿದ್ದು ಯಾಕೆ..?
    ಎ ಮಂಜು ಇಂದು ಕಾಂಗ್ರೆಸ್ ಗೆ ರಾಜೀನಾಮೆ ನೀಡುತ್ತಾರೆ ಎಂಬ ಸುದ್ದಿ ಹರಡುತ್ತಿದ್ದಂತೆಯೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ದೂರವಾಣಿ ಕರೆ ಮಾಡಿ ಮಾತುಕತೆ ನಡೆಸಿದ್ದಾರೆ. ಅಲ್ಲದೇ ಇದೇ ವೇಳೆ ರಾಜೀನಾಮೆಯ ಕುರಿತು ಮನವೊಲಿಸಲು ಮಾಜಿ ಸಿಎಂ ಮುಂದಾದ್ರು. ಈ ಹಿನ್ನೆಲೆಯಲ್ಲಿ ಎ ಮಂಜು ತಮ್ಮ ನಿರ್ಧಾರವನ್ನು ಮುಂದೂಡಿದ್ದಾರೆ ಎಂದು ಹೇಳಲಾಗುತ್ತಿದೆ.

    ಸಿದ್ದರಾಮಯ್ಯ ಏನ್ ಹೇಳಿದ್ರು..?
    “ಬಿಜೆಪಿ ಸೇರುವ ನಿರ್ಧಾರ ತಗೋಬೇಡ. ಅಲ್ಲಿ ಹೋದರೆ ನಿನ್ನ ರಾಜಕೀಯ ಭವಿಷ್ಯ ಹಾಳಾಗುತ್ತದೆ. ಬಿಜೆಪಿಗೆ ಹೋಗದೆ ಕಾಂಗ್ರೆಸ್ ನಲ್ಲೇ ಇರು. ಬಿಜೆಪಿಗೆ ಹೋದರೆ ಅಲ್ಲಿ ಕಡೆಗಣನೆಗೆ ಒಳಗಾಗ್ತೀಯ. ಆ ನಂತ್ರ ಅಲ್ಲೂ ಇಲ್ಲ, ಇಲ್ಲೂ ಇಲ್ಲ ಅನ್ನುವ ಸ್ಥಿತಿ ತಂದುಕೊಳ್ಳಬೇಡ ಎಂದು ಬುದ್ಧಿ ಮಾತು ಹೇಳಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಸಿದ್ದರಾಮಯ್ಯ ಅವರ ಮಾತಿಗೆ ಎ. ಮಂಜು, ಹಾಸನದಲ್ಲಿ ನೀವ್ಯಾರೂ ಜೆಡಿಎಸ್ ನವರ ಕಾಟ ತಡೆಯಲಿಲ್ಲ. ಪ್ರಜ್ವಲ್ ನಂಥವರ ಪರ ಕಾಂಗ್ರೆಸ್ ನವರು ಹೇಗೆ ಮತ ಕೇಳೋದು?. ಮೊಮ್ಮಗನನ್ನು ನಿಲ್ಲಿಸುವ ದೇವೇಗೌಡರ ನಿರ್ಧಾರ ಸರಿಯಲ್ಲ. ನಾವು ಆಗಿನಿಂದಲೂ ಜೆಡಿಎಸ್ ವಿರುದ್ಧವೇ ಹೋರಾಡಿಕೊಂಡು ಬಂದಿದ್ದೇವೆ. ಈಗ ಪ್ರಜ್ವಲ್ ಪರ ಮತ ಕೇಳಲು ಹೋದರೆ ಜನ ಏನನ್ನಲ್ಲ?. ಜೆಡಿಎಸ್ ನವರಿಗೆ ಬುದ್ಧಿ ಕಲಿಸೋದಿಕ್ಕೆ ಇದೇ ಒಳ್ಳೆಯ ಅವಕಾಶ ಎಂದು ಮಂಜು, ಸಿದ್ದರಾಮಯ್ಯ ಬುದ್ಧಿ ಮಾತಿಗೊಪ್ಪದೆ ತಮ್ಮ ನಿಲುವಿನ ಬಗ್ಗೆ ಸ್ಪಷ್ಟನೆ ನೀಡಿದ್ದರು ಎನ್ನಲಾಗಿತ್ತು.

    ಶುಕ್ರವಾರ ಹಾಸನದ ಅರಸೀಕೆರೆ ಯಲ್ಲಿ ಖಾಸಗಿ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಈ ಬಗ್ಗೆ ಕಾಂಗ್ರೆಸ್ ತೊರೆಯುವ ಬಗ್ಗೆ ಎ.ಮಂಜು ಅವರು ಘೋಷಿಸಿದ್ದರು. ಮಂಜು ಜೊತೆ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ವೇತಾ ದೇವರಾಜ್ ಕೂಡ ಕಾಂಗ್ರೆಸ್ಸಿಗೆ ಗುಡ್ ಬೈ ಹೇಳುವ ಸಾಧ್ಯತೆಯಿದೆ. ಹಾಗೆಯೇ ಕಾಂಗ್ರೆಸ್‍ನಿಂದ ಬಿಜೆಪಿಗೆ ಎ. ಮಂಜು ಜಿಗಿಯಲಿದ್ದಾರೆ. ಮಂಜು ಜೊತೆಗೆ ಕಾಂಗ್ರೆಸ್‍ನ ಬಹುತೇಕ ಜನಪ್ರತಿನಿಧಿಗಳು ಸಹ ಕಾಂಗ್ರೆಸ್ ಬಿಡಲು ಪ್ಲಾನ್ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಾಂಗ್ರೆಸ್ಸಿನವರಿಗೆ ಮಕ್ಳಾಗದಿದ್ದರೆ ಬಿಜೆಪಿಗೆ ಬೈತಾರೆ – ಅರವಿಂದ ಲಿಂಬಾವಳಿ

    ಕಾಂಗ್ರೆಸ್ಸಿನವರಿಗೆ ಮಕ್ಳಾಗದಿದ್ದರೆ ಬಿಜೆಪಿಗೆ ಬೈತಾರೆ – ಅರವಿಂದ ಲಿಂಬಾವಳಿ

    ಬೆಂಗಳೂರು: ಕಾಂಗ್ರೆಸ್ ಪಕ್ಷದವರಿಗೆ ಮಕ್ಕಳಗದಿದ್ದರೂ ಅವರು ಬಿಜೆಪಿಗೇ ಬೈತಾರೆ ಎಂದು ಶಾಸಕ ಅರವಿಂದ ಲಿಂಬಾವಳಿಯವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಹಾಗೂ ಜೆಡಿಎಸ್ ಪಾರ್ಟಿಯವರು ನಮ್ಮನ್ನೇ ದೂಷಿಸುತ್ತಾರೆ. ಮಕ್ಕಳಾಗದಿದ್ದರೂ ಅವರು ಬಿಜೆಪಿಯನ್ನೇ ಬೈತಾರೆ. ಹೀಗಾಗಿ ಕೆಪಿಸಿಸಿ ಅಧ್ಯಕ್ಷರಾಗಿರುವ ದಿನೇಶ್ ಗುಂಡೂರಾವ್ ಅವರು ಅರ್ಥಮಾಡಿಕೊಳ್ಳಬೇಕು. ಬಾಯಿಗೆ ಬಂದಂತೆ ಮಾತನಾಡೋದು ಅಲ್ಲ. ಅವರ ಪಕ್ಷವನ್ನು ಸರಿಯಾಗಿ ಇಟ್ಟುಕೊಳ್ಳಲ್ಲ. ಇನ್ನು ಬಿಜೆಪಿ ಮೇಲೆ ಹರಿಹಾಯ್ದರೆ ಜನ ಏನು ನಂಬಲ್ಲ ಅಂದುಕೊಂಡಿದ್ರಾ ಎಂದು ಪ್ರಶ್ನಿಸಿದ್ದಾರೆ.

    ಅವರ ಪಕ್ಷದ ಶಾಸಕರನ್ನು ಅವರು ಹೆಂಗೆ ನಡೆಸಿಕೊಂಡಿದ್ದಾರೆ ಎಂಬುದು ಗೊತ್ತಿದೆಯಾ. ಈ ಸರ್ಕಾರದಲ್ಲಿ ಅಭಿವೃದ್ಧಿ ಕಾರ್ಯಗಳು ಆಗುತ್ತಿಲ್ಲವೆಂದು ಶಾಸಕರು ಅಸಮಾಧಾನ ವ್ಯಕ್ತಪಡಿಸುತ್ತಾನೆ ಇದ್ದಾರೆ. ಶಾಸಕಾಂಗ ಪಕ್ಷದ ಸಭೆಯಲ್ಲಿಯೂ ಅಸಮಾಧಾನಗಳು ವ್ಯಕ್ತವಾಯಿತು. ಶಾಸಕ ಆನಂದ್ ಸಿಂಗ್ ಹಾಗೂ ಕಂಪ್ಲಿ ಗಣೇಶ್ ಮಧ್ಯೆ ಹೊಡೆದಾಟವೇ ನಡೆಯಿತು. ಅವುಗಳನ್ನು ನಿಭಾಯಿಸಲು ಸಾಧ್ಯವಾಗದಿದ್ದವರೂ ಅನಗತ್ಯವಾಗಿ ಬಿಜೆಪಿ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದ್ರು.

    ಒಟ್ಟಿನಲ್ಲಿ ಅವರೊಳಗೆ ಹುಳುಕನ್ನು ಮುಚ್ಚಿಕೊಳ್ಳುವ ಸಲುವಾಗಿ ಬಿಜೆಪಿ ಮೇಲೆ ಆರೋಪ ಮಾಡುವುದು ದಿನೇಶ್ ಗುಂಡೂರಾವ್ ಅವರ ಅಧ್ಯಕ್ಷಗಿರಿಗೆ ಶೋಭೆ ತರುವಂತದ್ದಲ್ಲ ಎಂದು ಗರಂ ಆದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಆಪರೇಷನ್ ಕಮಲ ಟೈಂನಲ್ಲಿ ದಿನಕ್ಕೆ ರೂಂ ಬಾಡಿಗೆ ಎರಡೂವರೆ ಲಕ್ಷ – ಮಗಳ ಮದ್ವೆಗೆ 10 ಕೋಟಿ..!

    ಆಪರೇಷನ್ ಕಮಲ ಟೈಂನಲ್ಲಿ ದಿನಕ್ಕೆ ರೂಂ ಬಾಡಿಗೆ ಎರಡೂವರೆ ಲಕ್ಷ – ಮಗಳ ಮದ್ವೆಗೆ 10 ಕೋಟಿ..!

    – ಕಬ್ಬು ಬಾಕಿ ಪಾವತಿಗೆ ಸಾಹುಕಾರನ ಬಳಿ ಕಾಸಿಲ್ವಾ..?

    ಬೆಳಗಾವಿ: ಸುಮಾರು ಒಂದೂವರೆ ತಿಂಗಳು ಕ್ಷೇತ್ರದ ಜನರನ್ನ ಮರೆತು ಮುಂಬೈನಲ್ಲಿ ಐಷಾರಾಮಿ ಹೋಟೆಲ್‍ನಲ್ಲಿ ತಂಗಿದ್ದ ಮಾಜಿ ಸಚಿವ ಹಾಗೂ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಅವರು ಶೀಘ್ರದಲ್ಲೇ ಮಗಳ ಮದುವೆ ಮಾಡಲು ಹೊರಟಿದ್ದಾರೆ. ಆದ್ರೆ ತಮ್ಮ ಒಡೆತನದ ಸಕ್ಕರೆ ಕಾರ್ಖಾನೆ ಉಳಿಸಿಕೊಂಡಿರುವ ರೈತರಿಗೆ ಕೊಡಬೇಕಾದ ಕಬ್ಬು ಬೆಳೆ ಬಾಕಿ ಕೊಡಲು ಮೀನಾಮೇಷ ಎಣಿಸುತ್ತಿದ್ದಾರೆ. ಹೀಗಾಗಿ ಶಾಸಕರ ವಿರುದ್ಧ ರೈತರು ಹೋರಾಟಕ್ಕೆ ಸಜ್ಜಾಗಿದ್ದಾರೆ.

    ಬೆಳಗಾವಿ ಪ್ರಭಾವಿ ಹಾಗೂ ಶ್ರೀಮಂತ ಶಾಸಕ ರಮೇಶ್ ಜಾರಕಿಹೊಳಿ ಅವರು ಸುಮಾರು 10ಕೋಟಿವರೆಗೆ ಖರ್ಚು ಮಾಡಿ ಶೀಘ್ರದಲ್ಲಿ ತಮ್ಮ ಮಗಳ ಮದುವೆ ಮಾಡಲು ಹೊರಟಿದ್ದಾರೆ. ಇದಕ್ಕಾಗಿ ಸಿದ್ಧತೆನೂ ಮಾಡಿಕೊಳ್ಳುತ್ತಿದ್ದಾರೆ. ಆದ್ರೆ, ತಮ್ಮ ಒಡೆತನದ ಸೌಭಾಗ್ಯ ಲಕ್ಷ್ಮಿ ಸಕ್ಕರೆ ಕಾರ್ಖಾನೆಯಿಂದ 2014-15ರಲ್ಲಿ ರೈತರಿಗೆ ನೀಡಬೇಕಾದ ಕೇವಲ 5ಕೋಟಿ ಹಣ ಕೊಡಲು ಹಿಂದೆ-ಮುಂದೆ ನೋಡುತ್ತಾರೆ. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ರೈತರು, ತಮ್ಮ ಮಗಳಿಗೆ ಕೋಟಿ ಕೋಟಿ ಖರ್ಚು ಮಾಡಲು ಹೊರಟಿರುವ ಶಾಸಕರಿಗೆ ನಮ್ಮ ಬಾಕಿ ಕೊಡಲು ಏನು ಸಮಸ್ಯೆ. ಶಾಸಕರು ಕೂಡಲೇ ನಮ್ಮ ಬಾಕಿ ಹಣ ಪಾವತಿಸಬೇಕು, ಇಲ್ಲವಾದ್ರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

    ರೈತರು ತಮ್ಮ ಹಣಕ್ಕಾಗಿ 15 ದಿನಗಳ ಕಾಲ ಅಹೋರಾತ್ರಿ ಧರಣಿ ನಡೆಸಿದ್ರು. ಈ ವೇಳೆ ಬೆಳಗಾವಿ ಜಿಲ್ಲಾಧಿಕಾರಿ ಎಸ್.ಬಿ ಬೊಮ್ಮನಹಳ್ಳಿ ರೈತರ ಪರವಾಗಿದ್ದೇವೆ ಎಂಬುದನ್ನ ತೋರಿಸಿಕೊಳ್ಳಲು ಬೈಲಹೊಂಡಲ ಎಸಿ ನೇತೃತ್ವದಲ್ಲಿ ಒಂದು ತಂಡ ರಚನೆ ಮಾಡಿ ಸೌಭಾಗ್ಯಲಕ್ಷ್ಮಿ ಸಕ್ಕರೆ ಕಾರ್ಖಾನೆ ಎಷ್ಟು ಬಾಕಿ ಹಣ ಉಳಿಸಿಕೊಂಡಿದೆ ಎಂದು ವರದಿ ನೀಡುವಂತೆ ಸೂಚಿಸಿದ್ರು. ಈ ರೀತಿ ಸೂಚನೆ ನೀಡಿ ಒಂದು ತಿಂಗಳು ಕಳೆಯುತ್ತಾ ಬಂದ್ರೂ ಇಲ್ಲಿವರೆಗೂ ವರದಿ ಮಾತ್ರ ಡಿಸಿ ಕೈಗೆ ಸೇರಿಲ್ಲ. ಈಗಾಗಲೇ ರೈತರೆಲ್ಲರೂ ಜಿಲ್ಲಾಧಿಕಾರಿ ಬಳಿ ಬಂದು ತಮಗೆ ಬರಬೇಕಾದ ಹಣ ಎಷ್ಟು ಯಾವ ವರ್ಷದ ಬಾಕಿ ಹಣ ಬರಬೇಕೆಂಬುದು ಸೇರಿದಂತೆ ಬಿಲ್ ಸಮೇತ ಎಲ್ಲಾ ದಾಖಲೆಗಳನ್ನ ಸಲ್ಲಿಸಿದ್ದಾರೆ. ಇಷ್ಟಾದ್ರೂ ಡಿಸಿ ಮಾತ್ರ ತಮಗೂ ಇದಕ್ಕೂ ಸಂಬಂಧವಿಲ್ಲದಂತೆ ಶಾಸಕರ ಬೆನ್ನಿಗೆ ನಿಂತು ಇನ್ನೂ ವರದಿ ಬಂದಿಲ್ಲ ಅಂತಾ ರೈತರ ದಿಕ್ಕು ತಪ್ಪಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

    ತಮ್ಮನ್ನ ಆಯ್ಕೆ ಮಾಡಿದ ಕ್ಷೇತ್ರದ ಜನರನ್ನ ಮರೆತು ಒಂದೂವರೆ ತಿಂಗಳು ದಿನಕ್ಕೆ ಎರಡೂವರೆ ಲಕ್ಷದಂತೆ ಸುಮಾರು ಒಂದೂವರೆ ಕೋಟಿಯಷ್ಟು ಖರ್ಚು ಮಾಡಿಕೊಂಡು ಶಾಸಕರು ಮುಂಬೈ ಐಷಾರಾಮಿ ಹೋಟೆಲ್‍ನಲ್ಲೇ ವಾಸ್ತವ್ಯ ಹೂಡಿದ್ದರು. ಇದೀಗ ಕೋಟಿ ಕೋಟಿ ಖರ್ಚು ಮಾಡಿ ಮಗಳ ಮದುವೆ ಮಾಡಲು ಹೊರಟಿರುವ ಶಾಸಕರು ರೈತರ ಬಾಕಿ ಹಣ ಪಾವತಿಸುತ್ತಾರಾ ಅನ್ನೋದನ್ನು ಕಾದು ನೋಡಬೇಕಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಾಜಿ ಸಚಿವ ಖಮರುಲ್ ಸಾವಿಗೆ ಮಲ್ಲಿಕಾರ್ಜುನ ಖರ್ಗೆ ಕಾರಣ: ಬಾಬುರಾವ್ ಚಿಂಚನಸೂರು

    ಮಾಜಿ ಸಚಿವ ಖಮರುಲ್ ಸಾವಿಗೆ ಮಲ್ಲಿಕಾರ್ಜುನ ಖರ್ಗೆ ಕಾರಣ: ಬಾಬುರಾವ್ ಚಿಂಚನಸೂರು

    ಕಲಬುರಗಿ: ಮಾಜಿ ಸಚಿವ ಖಮರುಲ್ ಇಸ್ಲಾಂ ಸಾವಿಗೆ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರೇ ಕಾರಣ ಎಂದು ಮಾಜಿ ಸಚಿವ ಬಾಬುರಾವ್ ಚಿಂಚನಸೂರು ಗಂಭೀರವಾಗಿ ಆರೋಪಿಸಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಕಲಬುರಗಿ ಉತ್ತರ ಕ್ಷೇತ್ರದ ಖಮರುಲ್ ಅವರಿಗೆ ಸಚಿವ ಸ್ಥಾನ ನೀಡಲಾಗಿತ್ತು. ಆದರೆ ಸಚಿವ ಸಂಪುಟ ವಿಸ್ತರಣೆ ವೇಳೆ ನನ್ನನ್ನು ಹಾಗೂ ಖಮರುಲ್ ಇಸ್ಲಾಂ ಅವರನ್ನು ಕೈಬಿಡುವಂತೆ ಮಲ್ಲಿಕಾರ್ಜುನ ಖರ್ಗೆ ಹೈಕಮಾಂಡ್ ಮೂಲಕ ಒತ್ತಡ ಹೇರಿದ್ದರು. ಈ ಮೂಲಕ ನಮ್ಮನ್ನು ಸಚಿವಸ್ಥಾನದಿಂದ ಕೆಳಗೆ ಇಳಿಸಿ ತಮ್ಮ ಪುತ್ರ ಪ್ರಿಯಾಂಕ್ ಖರ್ಗೆ ಅವರನ್ನು ಮಂತ್ರಿ ಮಾಡಿದರು ಎಂದು ದೂರಿದರು.

    ಸಚಿವ ಸ್ಥಾನ ಕೈತಪ್ಪಿದ್ದರಿಂದ ಖಮರುಲ್ ಅವರು ಮಾನಸಿಕವಾಗಿ ನೊಂದಿದ್ದರು. ಇದಾದ ಕೆಲವೇ ದಿನಗಳಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದರು. ಒಂದು ವೇಳೆ ಸಚಿವ ಸ್ಥಾನದಲ್ಲಿ ಖಮರುಲ್ ಅವರು ಇದ್ದಿದ್ದರೆ ಹೆಚ್ಚುಕಾಲ ಬಾಳುತ್ತಿದ್ದರು. ಹೀಗಾಗಿ ಖಮರುಲ್ ಅವರ ಸಾವಿಗೆ ಮಲ್ಲಿಕಾರ್ಜುನ ಖರ್ಗೆ ಅವರೇ ಕಾರಣ ಎಂದು ಕಿಡಿಕಾರಿದರು.

    ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯವೋ, ಅಷ್ಟೇ ಮಲ್ಲಿಕಾರ್ಜುನ ಖರ್ಗೆ ಅವರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸೋಲುವುದು ಸತ್ಯ ಎಂದು ಚಿಂಚನಸೂರ್ ವಾಗ್ದಾಳಿ ನಡೆಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv