Tag: former IPS officer

  • ಎಎಪಿಗೆ ಗುಡ್‌ಬೈ; ನಿವೃತ್ತ ಐಪಿಎಸ್‌ ಅಧಿಕಾರಿ ಭಾಸ್ಕರ್‌ ರಾವ್‌ ಬಿಜೆಪಿ ಸೇರ್ಪಡೆ

    ಎಎಪಿಗೆ ಗುಡ್‌ಬೈ; ನಿವೃತ್ತ ಐಪಿಎಸ್‌ ಅಧಿಕಾರಿ ಭಾಸ್ಕರ್‌ ರಾವ್‌ ಬಿಜೆಪಿ ಸೇರ್ಪಡೆ

    ಬೆಂಗಳೂರು: ನಿವೃತ್ತ ಐಪಿಎಸ್‌ ಅಧಿಕಾರಿ ಭಾಸ್ಕರ್‌ ರಾವ್‌ (Bhaskar Rao) ಅವರು ಆಮ್‌ ಆದ್ಮಿ ಪಕ್ಷ (AAP) ತೊರೆದು ಬುಧವಾರ ಬಿಜೆಪಿ ಸೇರ್ಪಡೆಯಾಗಿದ್ದಾರೆ. ರಾಜ್ಯ ಬಿಜೆಪಿ (BJP) ಕಚೇರಿಯಲ್ಲಿ ಅಧಿಕೃತವಾಗಿ ಪಕ್ಷ ಸೇರಿದರು.

    ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel) ಸಮ್ಮುಖದಲ್ಲಿ ಪಕ್ಷ ಸೇರ್ಪಡೆಗೊಂಡರು. ಪಕ್ಷದ ಶಾಲು ಹಾಕಿ, ಧ್ವಜ ನೀಡಿ ಭಾಸ್ಕರ್ ರಾವ್ ಅವರನ್ನು ನಳಿನ್ ಕುಮಾರ್ ಕಟೀಲ್ ಸ್ವಾಗತಿಸಿದರು. ಭಾಸ್ಕರ್ ರಾವ್ ಜೊತೆ ಅವರ ಬೆಂಬಲಿಗರು ಬಿಜೆಪಿ ಸೇರಿದರು. ಇದನ್ನೂ ಓದಿ: ಲಕ್ಷ್ಮಿ ಹೆಬ್ಬಾಳ್ಕರ್ ಕ್ಷೇತ್ರದಲ್ಲಿ ರಮೇಶ್ ಜಾರಕಿಹೊಳಿ ಬಾಡೂಟ ಪಾಲಿಟಿಕ್ಸ್

    ನಂತರ ಮಾತನಾಡಿದ ಭಾಸ್ಕರ್‌ ರಾವ್‌, ಎಎಪಿ‌ ಕರ್ನಾಟಕದಲ್ಲಿ ಬೆಳೆಯುತ್ತಿಲ್ಲ. ಅವರ ಕಾರ್ಯವೈಖರಿ ಶೈಲಿಯಿಂದ ಅದು ಸಾಧ್ಯವಾಗುತ್ತಿಲ್ಲ. ಈಗ ನಾನು ಸನಾತನ ಧರ್ಮದ ಪಕ್ಷ, ರಾಷ್ಟ್ರೀಯತೆಯನ್ನ ಅಳವಾಗಿ ಮೈಗೂಡಿಸಿಕೊಂಡಿರುವ ಬಿಜೆಪಿ ಸೇರಿದ್ದೇನೆ. ಬಾಲ್ಯದಿಂದಲೂ ಸನಾತನ ಧರ್ಮ, ರಾಷ್ಟ್ರೀಯತೆಗೆ ನಾನು ಬದ್ಧವಾಗಿದ್ದೇನೆ. ಹಾಗಾಗಿ ನಾನು ಬಿಜೆಪಿ ಸೇರ್ಪಡೆ ಆಗಿದ್ದೇನೆ ಎಂದು ತಿಳಿಸಿದರು.

    ನನ್ನ ವಯಸ್ಸನ್ನು ವೇಸ್ಟ್ ಮಾಡದೇ ಬಿಜೆಪಿ ಸೇರಬೇಕೆಂದು ಪಕ್ಷಕ್ಕೆ ಬಂದಿದ್ದೇನೆ. ಎಲ್ಲೆಲ್ಲಿ ನನ್ನ ಅವಶ್ಯಕತೆ ಇದೆ, ಅಲ್ಲಿ ನಾನು ತೊಡಗಿಸಿಕೊಂಡು ಕೆಲಸ ಮಾಡುತ್ತೇನೆ. ಭಾರತ ಸಮೃದ್ಧವಾಗಿ ಗಟ್ಟಿಯಾಗಬೇಕು. ಬಿಜೆಪಿಯಿಂದ ಮಾತ್ರ ಅದು ಸಾಧ್ಯ. ಬೇರೆ ಯಾವ ಪಕ್ಷಗಳಿಂದಲೂ ಸಾಧ್ಯವಿಲ್ಲ. ಇಲ್ಲಿ ಸಿಗುವ ಅವಕಾಶ ನೋಡಿ ಖುಷಿ ಆಗುತ್ತದೆ. ರಾಜ್ಯದ ನಾಯಕರ ಮಾರ್ಗದರ್ಶನದಲ್ಲಿ ಏನೇ ಕೆಲಸ ಕೊಟ್ರು ಮಾಡಿಕೊಂಡು ಹೋಗ್ತೀನಿ. ಇಲ್ಲಿ ಅತ್ಯಂತ ಅನುಭವಿ ರಾಜಕಾರಣಿಗಳು ಇದ್ದಾರೆ. ಅವರ ಮಾರ್ಗದರ್ಶನದಲ್ಲಿ ಪಕ್ಷದಲ್ಲಿ ಕೆಲಸ ಮಾಡಿಕೊಂಡು ಹೋಗ್ತೀನಿ ಎಂದು ಹೇಳಿದರು. ಇದನ್ನೂ ಓದಿ: ಬೆಂಗ್ಳೂರಲ್ಲಿ ಯುವತಿಯ ಬರ್ಬರ ಹತ್ಯೆ- 16 ಬಾರಿ ಚುಚ್ಚಿ ಕೊಂದ ಪಾಗಲ್ ಪ್ರೇಮಿ!

    ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಭಾಸ್ಕರ್ ರಾವ್ ಅವರು ನಿವೃತ್ತಿ ನಂತರ ಆಪ್ ಸೇರಿ ರಾಜಕೀಯ ಅನುಭವ ಪಡೆದಿದ್ದಾರೆ. ಡಬಲ್ ಇಂಜಿನ್ ಸರ್ಕಾರದಿಂದ ಕಲ್ಯಾಣ ಕರ್ನಾಟಕ ಸಾಧ್ಯ ಎಂದು ಪಕ್ಷಕ್ಕೆ ಬಂದಿದ್ದಾರೆ. ಇವತ್ತು ದೇಶ ಹಾಗೂ ರಾಜ್ಯದಲ್ಲಿ ಬಿಜೆಪಿ ಪರವಾದ ಅಲೆ ಇದೆ. ಬೇರೆ ಬೇರೆ ನಾಯಕರು ಇನ್ನೂ ಬಿಜೆಪಿ ಸೇರಲು ರೆಡಿ ಆಗಿದ್ದಾರೆ. ಅವರ ಆಡಳಿತಾತ್ಮಕ ಅನುಭವಗಳನ್ನು ಪಾರ್ಟಿ ಸ್ವೀಕಾರ ಮಾಡುತ್ತದೆ. ಅವರಿಗೆ ಪಕ್ಷದಲ್ಲಿ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು.

  • ಬಿಜೆಪಿ ಸೇರಿದ ಅಣ್ಣಾಮಲೈ ವಿರುದ್ಧ ದೂರು ದಾಖಲು

    ಬಿಜೆಪಿ ಸೇರಿದ ಅಣ್ಣಾಮಲೈ ವಿರುದ್ಧ ದೂರು ದಾಖಲು

    – ನಾಲ್ವರು ಬಿಜೆಪಿ ಕಾರ್ಯಕರ್ತರ ವಿರುದ್ಧವೂ ದೂರು

    ಚೆನ್ನೈ: ಇತ್ತೀಚೆಗಷ್ಟೆ ಬಿಜೆಪಿ ಪಕ್ಷ ಸೇರ್ಪಡೆಗೊಂಡ ಮಾಜಿ ಐಪಿಎಸ್ ಅಧಿಕಾರಿ ಕೆ.ಅಣ್ಣಾಮಲೈ ವಿರುದ್ಧ ಕಾನೂನುಬಾಹಿರ ಸಭೆ ನಡೆಸಿದ ಕಾರಣ ಮತ್ತು ಸಾಂಕ್ರಾಮಿಕ ರೋಗಗಳ ಕಾಯ್ದೆ ಉಲ್ಲಂಘನೆ ಆರೋಪದ ಮೇಲೆ ಕೊಯಮತ್ತೂರು ನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ನಿಷ್ಠೆಯಿಂದ ಯೋಧನಾಗಿ ಬಿಜೆಪಿಗೆ ದುಡಿಯುತ್ತೇನೆ- ಅಣ್ಣಾಮಲೈ

    ಅಣ್ಣಾಮಲೈ ಜೊತೆಗೆ ಇತರ ನಾಲ್ಕು ಬಿಜೆಪಿ ಕಾರ್ಯಕರ್ತರ ವಿರುದ್ಧವೂ ದೂರು ದಾಖಲಾಗಿದೆ. ಜಿಜೆಪಿ ಜಿಲ್ಲಾಧ್ಯಕ್ಷ ಆರ್.ನಂದಕುಮಾರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಕೆ.ಸೆಲ್ವಕುಮಾರ್, ರಾಜ್ಯ ಖಜಾಂಚಿ ಎಸ್.ಆರ್.ಶೇಖರ್ ಮತ್ತು ರಾಜ್ಯ ಉಪಾಧ್ಯಕ್ಷ ಕನಗಸಬಪತಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಕೊಯಮತ್ತೂರು ನಗರದ ಕಟೂರ್ ಪೊಲೀಸ್ ಠಾಣೆ ಐಪಿಸಿಯ ಸೆಕ್ಷನ್ ಮತ್ತು ಕೋವಿಡ್ ರೋಗಗಳ ಕಾಯ್ದೆಯ ಸೆಕ್ಷನ್ 3ರ ಅಡಿಯಲ್ಲಿ ಐವರ ವಿರುದ್ಧ ಶುಕ್ರವಾರ ಪ್ರಕರಣ ದಾಖಲಿಸಿದೆ ಎಂದು ತಿಳಿದುಬಂದಿದೆ.

    ಐಪಿಎಸ್ ಅಧಿಕಾರಿಯಾಗಿ ಕರ್ನಾಟಕದಲ್ಲಿ ಕಾರ್ಯನಿರ್ವಹಿಸಿದ್ದ ಅಣ್ಣಾಮಲೈ, ತಮ್ಮ ಖಡಕ್ ನಿರ್ಧಾರಗಳು ಮತ್ತು ಅಡಳಿತದಿಂದ ‘ಸಿಂಗಂ’ ಎಂಬ ಹೆಸರು ಪಡೆದುಕೊಂಡಿದ್ದರು. ನಂತರ 2019ರಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ತಮ್ಮ ಸ್ವಂತ ಊರು ತಮಿಳುನಾಡಿಗೆ ಹೋಗಿದ್ದರು. ಸೋಮವಾರ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಮುರುಳೀಧರ್ ರಾವ್ ಹಾಗೂ ತಮಿಳುನಾಡು ಬಿಜೆಪಿ ಅಧ್ಯಕ್ಷ ಮುರುಗನ್ ಅವರ ನೇತೃತ್ವದಲ್ಲಿ ಅಣ್ಣಾಮಲೈ ಅವರು ಬಿಜೆಪಿ ಸೇರ್ಪಡೆಯಾಗಿದ್ದಾರೆ.

    ಗುರುವಾರ ಅಣ್ಣಾಮಲೈ ಅವರು ಕೊಯಮತ್ತೂರಿನ ವಿಕೆಕೆ ಮೆನನ್ ರಸ್ತೆಯಲ್ಲಿರುವ ಬಿಜೆಪಿ ಪಕ್ಷದ ಕಚೇರಿಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರು ಸೇರಿದಂತೆ 50ಕ್ಕೂ ಹೆಚ್ಚಿನ ಜನರು ಅವರನ್ನು ಅದ್ಧೂರಿಯಾಗಿ ಸ್ವಾಗತ ಮಾಡಿದ್ದರು. ಅಲ್ಲದೆ ಪಟಾಕಿ ಸಿಡಿಸಿ ಸಂಭ್ರಮಿಸಿದ್ದರು. ಈ ವೇಳೆ ಅಣ್ಣಾಮಲೈ ಕೂಡ ವಾಹನದಲ್ಲಿ ನಿಂತುಕೊಂಡೆ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದರು. ಈ ಮೂಲಕ ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಹೇರಿದ್ದ ಲಾಕ್‍ಡೌನ್ ನಿಯಮಗಳನ್ನು ಉಲ್ಲಂಘಿಸಿದಂತಾಗಿತ್ತು.

    ಮಾಜಿ ಐಪಿಎಸ್ ಅಧಿಕಾರಿ ಮತ್ತು ಬಿಜೆಪಿ ಕಾರ್ಯಕರ್ತರರ ವಿರುದ್ಧ ನಗರ ಪೊಲೀಸರು, ಸಾರ್ವಜನಿಕ ಸ್ಥಳದಲ್ಲಿ ಜನಸಮೂಹವನ್ನು ಒಟ್ಟುಗೂಡಿಸುವ ಮೂಲಕ ಸಮಾರಂಭವನ್ನು ನಡೆಸಿದ್ದಾರೆ ಎಂದು ಗಣನೆಗೆ ತೆಗೆದುಕೊಂಡಿದ್ದಾರೆ. ಆದರೆ ನಗರದಲ್ಲಿ ಲಾಕ್‍ಡೌನ್ ಪ್ರೋಟೋಕಾಲ್ ಜಾರಿಯಲ್ಲಿದೆ. ಆದ್ದರಿಂದ ಅಣ್ಣಾಮಲೈ, ನಂದಕುಮಾರ್, ಸೆಲ್ವಕುಮಾರ್, ಶೇಖರ್ ಮತ್ತು ಕನಗಸಬಪತಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.