Tag: Former High Commissioner

  • ಕಾಶ್ಮೀರದಲ್ಲಿ ಸಂತ್ರಸ್ತನಾದ ಪೋರ್ನ್ ಸ್ಟಾರ್ – ಪಾಕ್ ರಾಯಭಾರಿಗೆ ಭಾರತೀಯರಿಂದ ಛೀಮಾರಿ

    ಕಾಶ್ಮೀರದಲ್ಲಿ ಸಂತ್ರಸ್ತನಾದ ಪೋರ್ನ್ ಸ್ಟಾರ್ – ಪಾಕ್ ರಾಯಭಾರಿಗೆ ಭಾರತೀಯರಿಂದ ಛೀಮಾರಿ

    ಇಸ್ಲಾಮಾಬಾದ್: ಜಮ್ಮು ಕಾಶ್ಮೀರದ ವಿಚಾರದಲ್ಲಿ ವಿಶ್ವಮಟ್ಟದಲ್ಲಿ ಮುಖಭಂಗ ಅನುಭವಿಸಿದರೂ ಬುದ್ದಿ ಕಲಿಯದ ಪಾಕಿಸ್ತಾನ ಈಗ ಸುಳ್ಳು ಸುದ್ದಿಗಳನ್ನು ಪ್ರಕಟಿಸಲು ಆರಂಭಿಸಿದೆ. ಎಷ್ಟು ಸುಳ್ಳು ಸುದ್ದಿ ಎಂದರೆ ಪೋರ್ನ್ ಸ್ಟಾರ್ ಫೋಟೋ ಪ್ರಕಟಿಸಿ ಕಾಶ್ಮೀರದಲ್ಲಿ ಸಂತ್ರಸ್ತನಾಗಿದ್ದಾನೆ ಎಂದು ಪಾಕಿಸ್ತಾನದ ಮಾಜಿ ರಾಯಭಾರಿ ಟ್ವೀಟ್ ಮಾಡಿ ಮುಖಭಂಗ ಅನುಭವಿಸಿದ್ದಾರೆ.

    ಕಾಶ್ಮೀರದಲ್ಲಿ ಪೆಲೆಟ್ ಗನ್ ದಾಳಿಯಿಂದಾಗಿ ವ್ಯಕ್ತಿ ದೃಷ್ಟಿ ಕಳೆದುಕೊಂಡಿದ್ದಾನೆ ಎಂದು ಪೋರ್ನ್ ನಟನ ಫೋಟೋವನ್ನು ರೀಟ್ವೀಟ್ ಮಾಡುವ ಮೂಲಕ ಭಾರತದಲ್ಲಿದ್ದ ಮಾಜಿ ಹೈ ಕಮಿಷನರ್ ಅಬ್ದುಲ್ ಬಸಿತ್ ತೀವ್ರ ಮುಜುಗರಕ್ಕೊಳಗಾಗಿದ್ದಾರೆ.

    ಪಾಕಿಸ್ತಾನ ಮೂಲದ ಪತ್ರಕರ್ತೆ ನೈಲಾ ಇನಾಯತ್, ಅಬ್ದುಲ್ ರೀಟ್ವೀಟ್ ಮಾಡಿರುವುದನ್ನು ಸ್ಕ್ರೀನ್ ಶಾಟ್ ತೆಗೆದು ಟ್ವೀಟ್ ಮಾಡಿ ಕಿಡಿಕಾರಿದ್ದಾರೆ. ಪಾಕಿಸ್ತಾನದ ಮಾಜಿ ಹೈ ಕಮಿಷನರ್ ಅಬ್ದುಲ್ ಬಸಿತ್ ಎಡವಟ್ಟು ಮಾಡಿದ್ದು, ಕಾಶ್ಮೀರದಲ್ಲಿ ಪೆಲೆಟ್ ಗನ್‍ನಿಂದ ದಾಳಿಗೊಳಗಾದ ವ್ಯಕ್ತಿ ಎಂದು ಜಾನಿ ಸಿನ್ಸ್ ಫೋಟೋವನ್ನು ತಪ್ಪಾಗಿ ರೀಟ್ವೀಟ್ ಮಾಡಿದ್ದಾರೆ ಎಂದು ಸ್ಕ್ರೀನ್ ಶಾಟ್‍ಗಳನ್ನು ಹಂಚಿಕೊಂಡಿದ್ದಾರೆ.

    ನೈಲಾ ಇನಾಯತ್ ಅವರ ಟ್ವಿಟ್ಟರ್ ಸ್ಕ್ರೀನ್ ಶಾಟ್‍ಗಳಲ್ಲಿ, ಅಬ್ದುಲ್ ಬಸಿತ್ ಚಿತ್ರ ಹಾಗೂ ಸಂದೇಶದೊಂದಿಗೆ ರೀಟ್ವೀಟ್ ಮಾಡಿರುವುದು ಸ್ಪಷ್ಟವಾಗಿ ಕಾಣುತ್ತದೆ. ಅಲ್ಲದೆ, ಈ ಟ್ವೀಟ್‍ನಲ್ಲಿ ಅನಂತ್‍ನಾಗ್‍ನ ಯೂಸುಫ್ ಪೆಲೆಟ್ ಗನ್ ದಾಳಿಯಿಂದ ತನ್ನ ದೃಷ್ಟಿ ಕಳೆದುಕೊಂಡಿದ್ದಾನೆ. ಈ ಕುರಿತು ದಯವಿಟ್ಟು ಧ್ವನಿ ಎತ್ತಿ ಎಂದು ಟ್ವಿಟ್ಟರ್ ಸಂದೇಶದಲ್ಲಿ ಬರೆಯಲಾಗಿದೆ.

    ತನ್ನ ಎಡವಟ್ಟು ತಿಳಿಯುತ್ತಿದ್ದಂತೆ ಅಬ್ದುಲ್ ಬಸಿತ್ ಈ ಟ್ವೀಟ್‍ನ್ನು ಡಿಲೀಟ್ ಮಾಡಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ನೆಟ್ಟಿಗರು ಬಸೀತ್‍ಗೆ ಚೆನ್ನಾಗಿ ಕ್ಲಾಸ್ ತೆಗೆದುಕೊಂಡು ಛೀಮಾರಿ ಹಾಕುತ್ತಿದ್ದಾರೆ.