Tag: Former CM SM Krishna

  • ಮದುವೆಗೂ ಮುನ್ನ ಭಾವಿ ಪತ್ನಿ ಸಂದರ್ಶನ ಮಾಡಿದ್ದ ಕೃಷ್ಣ!

    ಮದುವೆಗೂ ಮುನ್ನ ಭಾವಿ ಪತ್ನಿ ಸಂದರ್ಶನ ಮಾಡಿದ್ದ ಕೃಷ್ಣ!

    ಮಂಡ್ಯದವರಾದ (Mandya) ಎಸ್‌ಎಂ ಕೃಷ್ಣ (SM Krishna) ಅವರು ಶಿವಮೊಗ್ಗ (Shivamogga) ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕೂಡುಮಲ್ಲಿಗೆ ಗ್ರಾಮದ ಪ್ರೇಮಾ ಅವರನ್ನು 1966 ಏ.29 ರಂದು ವಿವಾಹವಾದರು. ಆದರೆ ಎಸ್‌ಎಂಕೆ ಅವರು ಮದುವೆಗೂ ಮುನ್ನ ಭಾವಿ ಪತ್ನಿಯ ಸಂದರ್ಶನ ಮಾಡಿದ್ದರು.ಇದನ್ನೂ ಓದಿ: ತಿಮ್ಮಪ್ಪನ ಹುಂಡಿಗೆ ವಾಚ್ ಹಾಕಿ ಬಂದ ಮೇಲೆ ಕೇಂದ್ರಮಂತ್ರಿಯಾಗಿದ್ದ ಎಸ್‌ಎಂಕೆ!

    ಮೊದಲ ಬಾರಿಗೆ ಪ್ರೇಮಾ ಅವರನ್ನು ನೋಡಲು ಬಂದಾಗ, ಎಸ್‌ಎಂಕೆ ಕೇವಲ ಅವರನ್ನು ನೋಡಲು ಬಂದಿಲ್ಲ ನಾನು ಅವರ ಜೊತೆ ಮಾತನಾಡಬೇಕು ಎಂದು ಹೆಣ್ಣಿನ ಕುಟುಂಬಕ್ಕೆ ತಿಳಿಸಿದ್ದರು. ಅನುಮತಿ ಪಡೆದು ಬಳಿಕ ಅವರೊಟ್ಟಿಗೆ ಮಾತನಾಡಿದ್ದರು. ತಾವು ಏನು ಓದಿದ್ದೀರಿ? ಯಾವ ಪುಸ್ತಕ ಓದಿದ್ದೀರಿ? ನಾನು ಎಂಎಲ್‌ಎ ಅಂತಾ ಗೊತ್ತಾ? ಅದರಲ್ಲೂ ವಿರೋಧಪಕ್ಷದ ಎಂಎಲ್‌ಎ ಎಂಬುದು ಗೊತ್ತಾ? ಹೀಗೆ ಹಲವು ಪ್ರಶ್ನೆಗಳನ್ನು ಕೇಳಿದ್ದರು. ಆ ಸಮಯದಲ್ಲಿಯೇ ಪ್ರೇಮಾ ಅವರೂ ಕೂಡ ಅಷ್ಟೇ ಬೋಲ್ಡ್ ಆಗಿ ಉತ್ತರ ನೀಡಿದ್ದರು. ತಮ್ಮ ವಿಚಾರವನ್ನು ಪೇಪರ್‌ನಲ್ಲಿ ಓದಿದ್ದೇನೆ. ತಮ್ಮ ಭಾಷಣಗಳಿಂದ ತಮ್ಮ ಬಗ್ಗೆ ಅಭಿಮಾನ ಹೊಂದಿರುವುದಾಗಿಯೂ ಪ್ರತಿಕ್ರಿಯಿಸಿದ್ದರು.

    ಆಗ ಕೃಷ್ಣ ಅವರು ತಾವು ವಿರೋಧ ಪಕ್ಷದಲ್ಲಿರುವುದಾಗಿ ತಿಳಿಸಿ, ಹೋರಾಟವೇ ನನ್ನ ಮುಖ್ಯ ಗುರಿಯಾಗಿದೆ. ಜೀವನದಲ್ಲಿ ಸುಖ ಎನ್ನುವುದನ್ನು ನೀವು ಯಾವ ಪ್ರಮಾಣದಲ್ಲಿ ಬಯಸುವಿರೋ ಅದು ನಿಮಗೆ ಸಿಗದೇ ಹೋಗಬಹುದು. ನಾನು ಸದಾ ಹೋರಾಟದ ಗುಂಗಿನಲ್ಲೇ ಇರುತ್ತೇನೆ. ನಮ್ಮ ಸಂಸಾರದ ವಿಚಾರಗಳು ಅಪ್ರಸ್ತುತ ಆಗಬಹುದು. ಕೆಲವು ಬಾರಿ ಜೈಲಿಗೂ ಹೋಗಬಹುದು. ಇದನ್ನೆಲ್ಲಾ ಯೋಚನೆ ಮಾಡಿ ನನ್ನ ಜೊತೆ ಬಾಳ್ವೆ ನಡೆಸಬೇಕಾಗುತ್ತದೆ ಎಂದು ಹೇಳಿ, ನೀವು ಇದಕ್ಕೆಲ್ಲಾ ಸಿದ್ಧರಿದ್ದೀರಾ ಎಂದು ಪ್ರಶ್ನೆ ಮಾಡಿದ್ದರಂತೆ. ಕೃಷ್ಣ ಅವರಿಗೆ ಮನಸೋತಿದ್ದ ಪ್ರೇಮಾ ಅವರು ಎಲ್ಲಾ ಪ್ರಶ್ನೆಗಳಿಗೂ ಸಮರ್ಥವಾಗಿ ಉತ್ತರ ನೀಡಿದರು. ಮುಂದೆ ಪ್ರೇಮಾ ಕೃಷ್ಣ (Prema Krishna) ಅವರು ಕೃಷ್ಣರವರ ರಾಜಕೀಯ ಜೀವನದಲ್ಲಿ ಬೆಂಗಾವಲಾಗಿ ನಿಂತಿದ್ದು ಇತಿಹಾಸವೇ ಹೌದು.ಇದನ್ನೂ ಓದಿ: ಇಂದು ಸಂಜೆ ಹುಟ್ಟೂರಿನಲ್ಲಿ ಎಸ್‌ಎಂಕೆ ಅಂತ್ಯಕ್ರಿಯೆ – ಏನೇನು ಸಿದ್ಧತೆ ನಡೆದಿದೆ?

  • ಎಸ್‌ಎಂಕೆ ಅಂತಿಮ ದರ್ಶನ ಪಡೆದ ಸಿಎಂ

    ಎಸ್‌ಎಂಕೆ ಅಂತಿಮ ದರ್ಶನ ಪಡೆದ ಸಿಎಂ

    ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು, ಹಿರಿಯ ಮುತ್ಸದ್ಧಿ ರಾಜಕಾರಣಿ ಎಸ್.ಎಂ ಕೃಷ್ಣಾ ಅವರ ಅಂತಿಮ ದರ್ಶನ ಪಡೆದರು. ಬೆಂಗಳೂರಿನ ಸದಾಶಿವ ನಗರದ ಎಸ್‌ಎಂ ಕೃಷ್ಣ (SM Krishna) ಅವರ ನಿವಾಸಕ್ಕೆ ಆಗಮಿಸಿ, ಅಂತಿಮ ನಮನ ಸಲ್ಲಿಸಿದರು.

    ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಸ್‌ಎಂಕೆ ಅವರು ಕರ್ನಾಟಕ ಹಾಗೂ ದೇಶದ ರಾಜಕಾರಣದಲ್ಲಿ ದೀರ್ಘಕಾಲ ತೊಡಗಿಸಿಕೊಂಡಿದ್ದರು. ಆರು ದಶಕಗಳ ಕಾಲ ಸಾರ್ವಜನಿಕ ಜೀವನದಲ್ಲಿದ್ದರು. ವಿಧಾನಸಭೆ, ಪರಿಷತ್, ಲೋಕಸಭೆ, ರಾಜ್ಯಸಭೆಯಲ್ಲಿ ಸದಸ್ಯರಾಗಿದ್ದರು. ಐದು ವರ್ಷಗಳ ಕಾಲ ರಾಜ್ಯದ ಸಿಎಂ ಆಗಿದ್ದರು. ಬೆಂಗಳೂರನ್ನು ಸಿಂಗಾಪುರ ಮಾಡಬೇಕೆನ್ನುವ ಕನಸನ್ನು ಕಂಡಿದ್ದರು. ಐಟಿ ಬೆಳವಣಿಗೆ ಅಪಾರವಾದ ಕೊಡಗೆ ಕೊಟ್ಟಿದ್ದಾರೆ. ಬೆಂಗಳೂರು ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ಥಾನ ಪಡೆದುಕೊಂಡಿರುವುದರಲ್ಲಿ ಎಸ್‌ಎಂಕೆ ಪಾತ್ರ ದೊಡ್ಡದಿದೆ ಎಂದು ಸ್ಮರಿಸಿದರು.ಇದನ್ನೂ ಓದಿ: ರಾಜ್ಯದ ರಾಜಕಾರಣದಲ್ಲಿ ಬದಲಾವಣೆ ತಂದವರು ಎಸ್‌ಎಂಕೆ: ಅಭಿಷೇಕ್ ಅಂಬರೀಶ್

    ಸಿಎಂ ಆಗಿದ್ದ ಅವಧಿಯಲ್ಲಿ ಅನೇಕ ಸವಾಲುಗಳನ್ನು ಎದುರಿಸಿದ್ದರು. ಬರಗಾಲ, ಡಾ.ರಾಜ್ ಕುಮಾರ್ ಕಿಡ್ನಾಪ್, ಕಾವೇರಿ ವಿವಾದ ಹೀಗೆ ಹಲವು ಸಮಸ್ಯೆಗಳನ್ನು ಜಾಣ್ಮೆಯಿಂದ ನಿರ್ವಹಿಸಿದ್ದರು. ಮಹಾರಾಷ್ಟ್ರದ ರಾಜ್ಯಪಾಲರಾಗಿ ಕೆಲಸ ಮಾಡಿದ್ದರು ಎಂದು ಸ್ಮರಿಸಿದರು.

    ನಾನು ಕಾಂಗ್ರೆಸ್ ಸೇರುವ ಮೊದಲು ಅವರನ್ನು ಭೇಟಿ ಮಾಡಿ ಕಾಂಗ್ರೆಸ್ ಸೇರುವ ವಿಚಾರ ತಿಳಿಸಿದ್ದೆನು. ನೀವು ಕಾಂಗ್ರೆಸ್ ಸೇರುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದಿದ್ದರು. ಸಜ್ಜನ ರಾಜಕಾರಣ, ಎಸ್‌ಎಂಕೆಯಂತಹ ಒಳ್ಳೆಯ ವಾಗ್ಮಿಯನ್ನು ಕಳೆದುಕೊಂಡಿದ್ದು ರಾಜಕೀಯ ಕ್ಷೇತ್ರಕ್ಕೆ ನಷ್ಟವಾಗಿದೆ. ಅವರ ಕುಟುಂಬಕ್ಕೆ ಹಾಗೂ ಅಭಿಮಾನಿಗಳಿಗೆ ಸಾವಿನ ದು:ಖ ಭರಿಸುವ ಶಕ್ತಿ ನೀಡಲಿ ಎಂದು ಪಾರ್ಥಿಸಿಕೊಂಡರು.ಇದನ್ನೂ ಓದಿ: ಪ್ರಧಾನಿಯಾಗುವ ಅವಕಾಶವಿದೆ ಅಂದಿದ್ದಕ್ಕೆ ನಕ್ಕಿದ್ದರು – ಮಾಜಿ ಸಚಿವ ಎಂ.ಸಿ ನಾಣಯ್ಯ

  • ಸರ್ಕಾರಿ ಶಾಲಾ ಮಕ್ಕಳಿಗೆ ಬಿಸಿಯೂಟ ರಾಯಚೂರಿನಲ್ಲಿ ಉದ್ಘಾಟಿಸಿದ್ದ ಕೃಷ್ಣ

    ಸರ್ಕಾರಿ ಶಾಲಾ ಮಕ್ಕಳಿಗೆ ಬಿಸಿಯೂಟ ರಾಯಚೂರಿನಲ್ಲಿ ಉದ್ಘಾಟಿಸಿದ್ದ ಕೃಷ್ಣ

    ರಾಯಚೂರು: ಸರ್ಕಾರಿ ಶಾಲಾ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟ ಯೋಜನೆಯನ್ನು ಎಸ್‌ಎಂ ಕೃಷ್ಣ (SM Krishna) ಅವರು ರಾಯಚೂರಿನಲ್ಲಿ (Raichuru) ಮೊದಲ ಬಾರಿಗೆ ಉದ್ಘಾಟಿಸಿದರು.

    ಮಾಜಿ ಸಿಎಂ ಎಸ್.ಎಂ ಕೃಷ್ಣ (SM Krishna) ರಾಜ್ಯದಲ್ಲಿ ಸರ್ಕಾರಿ ಶಾಲೆಯ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟ ಯೋಜನೆಯನ್ನು ಜಾರಿಗೆ ತಂದರು. ಈ ಮೂಲಕ ಮೊದಲ ಬಾರಿಗೆ ರಾಯಚೂರು ಜಿಲ್ಲೆಯ ದೇವದುರ್ಗ (Devadruga) ತಾಲ್ಲೂಕಿನ ಅರಕೇರಾದಲ್ಲಿ (Arakera) ಬಿಸಿಯೂಟ ಯೋಜನೆಗೆ ಚಾಲನೆ ನೀಡಿದರು.ಇದನ್ನೂ ಓದಿ: ಒಬ್ಬ ದೂರದೃಷ್ಟಿ ನಾಯಕನನ್ನು ಕಳೆದುಕೊಂಡಿದೆ ಭಾರತ – ಪ್ರಹ್ಲಾದ್ ಜೋಶಿ ಸಂತಾಪ

    2001ರಲ್ಲಿ ಆಗಿನ ಸಿಎಂ ಆಗಿದ್ದ ಎಸ್‌ಎಂ ಕೃಷ್ಣ ಅವರು ಮೊದಲ ಹಂತದಲ್ಲಿ ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಅತ್ಯಂತ ಹಿಂದುಳಿದ ಏಳು ಜಿಲ್ಲೆಗಳಲ್ಲಿ ಈ ಯೋಜನೆಯನ್ನು ಆರಂಭಿಸಿದರು. ಸರ್ಕಾರಿ ಶಾಲೆಗಳ 1 ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ಬಿಸಿಯೂಟ ನೀಡಲು ಯೋಜನೆ ಹಾಕಿಕೊಂಡಿದ್ದರು. ಬಳಿಕ 2001ರ ನ.09 ರಂದು ಅರಕೇರಾದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉದ್ಘಾಟನೆ ಮಾಡಿದರು.

    ಸಿಎಂ ಎಸ್.ಎಂ ಕೃಷ್ಣ ಅವರಿಗೆ ಅಂದಿನ ಶಿಕ್ಷಣ ಸಚಿವ ಹೆಚ್.ವಿಶ್ವನಾಥ್, ರಾಯಚೂರು ಸಂಸದ ವೆಂಕಟೇಶ ನಾಯಕ ಅವರು ಸಾಥ್ ನೀಡಿದ್ದರು.ಇದನ್ನೂ ಓದಿ: ಡಿಗ್ನಿಫೈಡ್ ರಾಜಕಾರಣಿ, ಬೆಂಗಳೂರು ನಂ.1 ಆಗಲು ಎಸ್‌ಎಂಕೆ ಕಾರಣ: ಸುಮಲತಾ

  • ಭಾರತ ಒಬ್ಬ ದೂರದೃಷ್ಟಿ ನಾಯಕನನ್ನು ಕಳೆದುಕೊಂಡಿದೆ – ಪ್ರಹ್ಲಾದ್ ಜೋಶಿ ಸಂತಾಪ

    ಭಾರತ ಒಬ್ಬ ದೂರದೃಷ್ಟಿ ನಾಯಕನನ್ನು ಕಳೆದುಕೊಂಡಿದೆ – ಪ್ರಹ್ಲಾದ್ ಜೋಶಿ ಸಂತಾಪ

    ನವದೆಹಲಿ: ಮಾಜಿ ಸಿಎಂ, ಮಾಜಿ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ (SM Krishna) ಅವರ ನಿಧನದಿಂದ ಭಾರತ ಒಬ್ಬ ದಿಟ್ಟ ಮತ್ತು ದೂರದೃಷ್ಟಿ ನಾಯಕನನ್ನು ಕಳೆದುಕೊಂಡಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ (Prahlad Joshi) ಸಂತಾಪ ಸೂಚಿಸಿದರು.

    ನವದೆಹಲಿಯಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೃಷ್ಣ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದರು. ಎಸ್.ಎಂ.ಕೃಷ್ಣ ಅವರು ಬ್ರ‍್ಯಾಂಡ್ ಬೆಂಗಳೂರಿನ ರೂವಾರಿ. ಬೆಂಗಳೂರಿಗೆ ಜಾಗತಿಕ ಗುರುತು ನೀಡಿದವರೆ ಇವರು. ಕೃಷ್ಣ ಅವರ ನಿಧನದಿಂದ ಕರ್ನಾಟಕ ಮಾತ್ರವಲ್ಲ ಇಡೀ ರಾಷ್ಟ್ರಕ್ಕೇ ತುಂಬಲಾರದ ನಷ್ಟವಾಗಿದೆ ಎಂದು ಸ್ಮರಿಸಿದರು.ಇದನ್ನೂ ಓದಿ: ಎಸ್‌.ಎಂ ಕೃಷ್ಣ ನಿಧನಕ್ಕೆ ಆರ್‌ಎಸ್‌ಎಸ್ ಸಂತಾಪ

    ಸೌಜನ್ಯ – ಸೌಹಾರ್ದ ರಾಜಕಾರಣಿ:
    ಎಸ್.ಎಂ.ಕೃಷ್ಣ ಅವರು ಒಬ್ಬ ಅನುಭವಿ, ಸೌಮ್ಯ ಮತ್ತು ಸೇವಾ ಸಮರ್ಪಿತ ರಾಜಕಾರಣಿ. ಕೇಂದ್ರದಲ್ಲಿ ವಾಜಪೇಯಿ ಸರ್ಕಾರ ಇದ್ದಾಗ ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಸಿಎಂ ಆಗಿದ್ದರೂ ಕೇಂದ್ರದೊಂದಿಗೆ ಸೌಜನ್ಯ, ಸೌಹಾರ್ದದಿಂದ ನಡೆದುಕೊಂಡಂತಹ ಸೌಮ್ಯ ರಾಜಕಾರಣಿಯಾಗಿದ್ದವರು. ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ, ದೇಶದ ವಿದೇಶಾಂಗ ಮಂತ್ರಿ, ರಾಜ್ಯಪಾಲ ಹೀಗೆ ವಿವಿಧ ಪ್ರಮುಖ ಹುದ್ದೆಗಳನ್ನು ಅಲಂಕರಿಸಿ ದೇಶ ಮತ್ತು ರಾಜ್ಯದ ಪ್ರಗತಿಗೆ ಅನುಪಮ ಸೇವೆ ಸಲ್ಲಿಸಿದ್ದಾರೆ ಎಂದರು.

    ಎಸ್.ಎಂ.ಕೃಷ್ಣ ಅವರಂಥ ಒಬ್ಬ ಒಳ್ಳೆಯ ರಾಜಕೀಯ ಮುತ್ಸದ್ಧಿ, ದಿಗ್ಗಜರನ್ನು ಕಳೆದುಕೊಂಡಿರುವುದು ನಿಜಕ್ಕೂ ದುಃಖಕರ ಸಂಗತಿ ಎಂದು ನಮನ ಸಲ್ಲಿಸಿದರು.ಇದನ್ನೂ ಓದಿ: ಡಿಗ್ನಿಫೈಡ್ ರಾಜಕಾರಣಿ, ಬೆಂಗಳೂರು ನಂ.1 ಆಗಲು ಎಸ್‌ಎಂಕೆ ಕಾರಣ: ಸುಮಲತಾ

  • ಹಳೆ ಮೈಸೂರು ಎಸ್‌ಎಂಕೆ ಪಾಲಿಗೆ ವರವೂ ಹೌದು, ಶಾಪವೂ ಹೌದು!

    ಹಳೆ ಮೈಸೂರು ಎಸ್‌ಎಂಕೆ ಪಾಲಿಗೆ ವರವೂ ಹೌದು, ಶಾಪವೂ ಹೌದು!

    ಮೈಸೂರು: ಎಸ್‌ಎಂ ಕೃಷ್ಣ (SM Krishna) ಪಾಲಿಗೆ ಹಳೆಯ ಮೈಸೂರು (Mysuru) ಭಾಗ ಒಂದು ರೀತಿ ವರವಾದರೆ, ಮತ್ತೊಂದು ಕಡೆ ಶಾಪ ಆಗಿದ್ದು ಅಕ್ಷರಶಃ ಸತ್ಯವಾಗಿದೆ.

    ಎಸ್‌ಎಂ ಕೃಷ್ಣ ಅವರು ಹಳೆ ಮೈಸೂರು ಭಾಗದ ಜಿಲ್ಲೆಗಳಲ್ಲಿಯೇ ಹುಟ್ಟಿ, ಬೆಳೆದು, ಓದಿದ್ದು, ರಾಜಕೀಯ ನೆಲೆ ಕಂಡುಕೊಂಡರು. ಮಂಡ್ಯ, ಅವಿಭಜಿತ ಮೈಸೂರು (ಚಾಮರಾಜನಗರ ಸೇರಿ) ಎಸ್.ಎಂ.ಕೃಷ್ಣ ಅವರ ಜನ್ಮಭೂಮಿ, ವಿದ್ಯಾಭೂಮಿ, ಕರ್ಮಭೂಮಿ ಎಲ್ಲವೂ ಆಗಿದ್ದವು.ಇದನ್ನೂ ಓದಿ: ಎಸ್‌ಎಂಕೆ ಅಂತಿಮ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್‌ಕುಮಾರ್

    ಯಾವ ಊರು ಅವರನ್ನು ವಿಧಾನಸೌಧದ ಮೂರನೇ ಮಹಡಿ ಹತ್ತಿಸುವ ಮಟ್ಟಕ್ಕೆ ಬೆಳೆಸಿದವು. ಆದರೆ ಅದೇ ಊರುಗಳೇ ಅವರ ಆಡಳಿತ ಕಾಲದ ಬಹುದೊಡ್ಡ ತಲೆ ನೋವಾಗಿ, ಸಮಸ್ಯೆಗಳಿಗೆ ಕೇಂದ್ರ ಸ್ಥಾನಗಳಾಗಿ ಪರಿಣಮಿಸಿದವು. ಎಸ್.ಎಂ.ಕೃಷ್ಣ ಅವರು ಈ ರಾಜ್ಯದ ಸಿಎಂ ಆಗಿದ್ದಾಗ ಅವರನ್ನು ಕಾಡಿದ ಬಹುದೊಡ್ಡ ಚಳವಳಿ ಎಂದರೆ ಅದು ಕಾವೇರಿ ಚಳವಳಿ. ಮೈಸೂರು, ಮಂಡ್ಯ ಈ ಚಳುವಳಿಗೆ ಕೇಂದ್ರ ಸ್ಥಾನಗಳಿದ್ದವು.

    ಇನ್ನೂ ಅವರ ಅವಧಿಯಲ್ಲಿ ಡಾ.ರಾಜಕುಮಾರ್ ಅವರ ಅಪಹರಣ ಬಹುದೊಡ್ಡ ಸವಾಲಾಗಿತ್ತು. ಕಾಡುಗಳ್ಳ ವೀರಪ್ಪನ್ ಅಣ್ಣಾವ್ರನ್ನು ಅನ್ನು ಕಿಡ್ನಾಪ್ ಮಾಡಿ ಚಾಮರಾಜನಗರ ಜಿಲ್ಲೆಯ ಕಾಡಿನಲ್ಲಿ ಒತ್ತೆಯಾಳಾಗಿ ಇಟ್ಟುಕೊಂಡಿದ್ದ. ಆಗ ಇಡೀ ರಾಜ್ಯ ಹೊತ್ತಿ ಉರಿದಿತ್ತು. ಅದಾದ ಬಳಿಕ ರಾಜ್ಯದಲ್ಲಿ ಬರಗಾಲ ಶುರುವಾಯಿತು. ಅದರಲ್ಲಿ ಅತಿ ಹೆಚ್ಚಿನ ಬರಗಾಲಕ್ಕೆ ಹಳೆ ಮೈಸೂರು ಭಾಗದ ಜಿಲ್ಲೆಗಳು ತುತ್ತಾಗಿದ್ದವು. ಈ ವೇಳೆ ಹಳೆ ಮೈಸೂರು ಭಾಗದ ಅತೀ ಹೆಚ್ಚು ರೈತರ ಸಾಲು ಸಾಲು ಆತ್ಮಹತ್ಯೆಗಳು ನಡೆದವು. ಹೀಗೆ ಎಸ್.ಎಂ.ಕೃಷ್ಣ ಅವರ ಆಡಳಿತ ಕಾಲದಲ್ಲಿ ಅವರು ಹುಟ್ಟಿ ಬೆಳದ ಊರಗಳೇ ಸಮಸ್ಯೆಗಳ ಕೇಂದ್ರ ಸ್ಥಾನಗಳಾಗಿದ್ದು ವಿಪರ್ಯಾಸ ಎನ್ನಬಹುದು.ಇದನ್ನೂ ಓದಿ: ಮಂಡ್ಯವನ್ನು ಇಂಡಿಯಾದವರೆಗೆ ಕೊಂಡೊಯ್ದ ಸಕ್ಕರೆ ನಾಡಿನ ಏಕೈಕ ಸಿಎಂ ಎಸ್‌ಎಂಕೆ!

  • ಮಂಡ್ಯವನ್ನು ಇಂಡಿಯಾದವರೆಗೆ ಕೊಂಡೊಯ್ದ ಸಕ್ಕರೆ ನಾಡಿನ ಏಕೈಕ ಸಿಎಂ ಎಸ್‌ಎಂಕೆ!

    ಮಂಡ್ಯವನ್ನು ಇಂಡಿಯಾದವರೆಗೆ ಕೊಂಡೊಯ್ದ ಸಕ್ಕರೆ ನಾಡಿನ ಏಕೈಕ ಸಿಎಂ ಎಸ್‌ಎಂಕೆ!

    ಮಂಡ್ಯ: ಎಸ್.ಎಂ.ಕೃಷ್ಣ (SM Krishna) ಅವರು ಸಕ್ಕರೆ ನಾಡು ಮಂಡ್ಯ (Mandya) ಜಿಲ್ಲೆಯಿಂದ ಆಯ್ಕೆಯಾದ ರಾಜ್ಯದ ಮೊದಲ ಹಾಗೂ ಏಕೈಕ ಮುಖ್ಯಮಂತ್ರಿಯಾದವರು. ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ (Maddur) ರಾಜಕೀಯ ಜೀವನ ಆರಂಭ ಮಾಡಿ ರಾಜಕೀಯದ ಉತ್ತುಂಗ ಶಿಖರದವರೆಗೆ ಬೆಳೆದಿದ್ದಾರೆ. ಜೊತೆಗೆ ಮಂಡ್ಯವನ್ನು ಇಂಡಿಯಾದವರೆಗೆ ಕೊಂಡೊಯ್ದು, ಸಕ್ಕರೆ ನಾಡಿನ ಅಚ್ಚುಮೆಚ್ಚಿನ ಕುವರನ ಅಗಲಿಗೆ ರಾಜ್ಯ ಹಾಗೂ ರಾಷ್ಟ್ರಕ್ಕೆ ತುಂಬಲಾರದ ನಷ್ಟವಾಗಿದೆ.

    ಮಂಡ್ಯ ಎಂದರೆ ಇಂಡಿಯಾ ಎನ್ನುವ ಮಾತು ಇದೆ. ಮಂಡ್ಯವನ್ನು ಇಂಡಿಯಾ ಲೆವೆಲ್‌ಗೆ ಕೊಂಡೊಯ್ದ ಮೊದಲ ವ್ಯಕ್ತಿ ಎಂದರೆ ಅದು ಎಸ್.ಎಂ.ಕೃಷ್ಣ ಅವರು. ಕೃಷ್ಣ ತಮ್ಮ ನಡೆ, ನುಡಿ, ವ್ಯಕ್ತಿತ್ವದಿಂದ ಎಲ್ಲರಿಗೂ ಅಚ್ಚುಮೆಚ್ಚಿನ ವ್ಯಕ್ತಿ ಆಗಿದ್ದವರು. 60 ವರ್ಷಗಳ ಸುದೀರ್ಘ ರಾಜಕೀಯ ಮಾಡಿದ ಎಸ್.ಎಂ.ಕೃಷ್ಣ ಅವರು ಸಕ್ಕರೆ ನಾಡು ಮಂಡ್ಯ ಜಿಲ್ಲೆಯಿಂದ ಆಯ್ಕೆಯಾಗಿ ರಾಜ್ಯದ ಮುಖ್ಯಮಂತ್ರಿ ಆದ ಏಕೈಕ ವ್ಯಕ್ತಿ ಆಗಿದ್ದಾರೆ.ಇದನ್ನೂ ಓದಿ: ವಿದ್ಯೆ ಕೊಟ್ಟ ಊರಿನ ಋಣವನ್ನು ಬಡ್ಡಿ ಸಮೇತ ತೀರಿಸಿದ್ರು ಸೋಮನಹಳ್ಳಿ ಮಲ್ಲಯ್ಯ ಕೃಷ್ಣ!

    1999ರಲ್ಲಿ ಕೆಪಿಸಿ ಅಧ್ಯಕ್ಷರಾಗಿದ್ದ ಎಸ್.ಎಂ.ಕೃಷ್ಣ ಅಂದಿನ ಚುನಾವಣೆಯ ಮುಂದಾಳತ್ವವನ್ನು ವಹಿಸಿಕೊಂಡಿದ್ದರು. ಈ ವೇಳೆ 132 ಸೀಟುಗಳನ್ನು ಗೆದ್ದ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರ ಸ್ಥಾಪನೆ ಮಾಡಿತು. ಆಗ ಮಂಡ್ಯ ಜಿಲ್ಲೆಯ ಮದ್ದೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿ ಜಯಗಳಿಸಿದ್ದ ಎಸ್.ಎಂ.ಕೃಷ್ಣ ಅವರನ್ನು ಒಮ್ಮತದಿಂದ ಸಿಎಂ ಆಗಿ ಆಯ್ಕೆ ಮಾಡಲಾಯಿತು. ಆ ಮೂಲಕ ಮಂಡ್ಯ ಜಿಲ್ಲೆಯ ಮೊದಲ ಸಿಎಂ ಹೆಗ್ಗಳಿಗೆ ಪಾತ್ರರಾದರು.

    ಇವರು ಸಿಎಂ ಆಗಿದ್ದ ವೇಳೆ ರಾಜ್ಯದಲ್ಲಿ ಎರಡು ಘಟನೆಗಳು ದೊಡ್ಡ ಮಟ್ಟದ ಚರ್ಚೆಗೆ ಆಸ್ಪದ ನೀಡಿದ್ದವು. ಡಾ.ರಾಜ್‌ಕುಮಾರ್ ಅವರನ್ನು ವೀರಪ್ಪನ್ ಮೂರು ತಿಂಗಳ ಕಾಲ ಅಪಹರಣ ಮಾಡಿದ್ದ. ಆಗ ರಾಜ್ಯಾದ್ಯಂತ ಸರ್ಕಾರದ ವಿರುದ್ಧ ಹೋರಾಟಗಳು ನಡೆದಿದ್ದವು. ಬಳಿಕ ಕೃಷ್ಣ ಅವರು ಅಂದಿನ ತಮಿಳುನಾಡು ಸಿಎಂ ಕರುಣಾನಿಧಿ ಅವರೊಂದಿಗೆ ಮಾತುಕತೆ ನಡೆಸಿ, ಬಳಿಕ ವೀರಪ್ಪನ್ ಸಂಪರ್ಕ ಮಾಡಿ ರಾಜ್‌ಕುಮಾರ್ ಅವರನ್ನು ಕ್ಷೇಮವಾಗಿ ಕರೆತರಲಾಯಿತು. ಇನ್ನೂ ಇದೇ ವೇಳೆ ರಾಜ್ಯದಲ್ಲಿ ಬರಗಾಲವಿತ್ತು. ಜನರ ರಕ್ಷಣೆಗೆ ವೈಜ್ಞಾನಿಕವಾಗಿ ಮೋಡ ಬಿತ್ತನೆ ಮಾಡಿ ಮಳೆ ಬರಿಸಲು ಸಹ ಕೃಷ್ಣ ಅವರು ಮುಂದಾಗಿದ್ದರು. ಆದರೆ ದುರಾದೃಷ್ಟವಶಾತ್ ಈ ಯೋಜನೆ ಕೈಕೊಟ್ಟಿತು. ತಮಿಳುನಾಡು ಕಾವೇರಿ ನೀರಿಗಾಗಿ ಕ್ಯಾತೆಯನ್ನು ಸಹ ತೆಗೆದಿತ್ತು. ಮಂಡ್ಯ ಸೇರಿದಂತೆ ಹಳೆ ಮೈಸೂರು ಭಾಗದಲ್ಲಿ ತೀವ್ರ ಸ್ವರೂಪದ ಹೋರಾಗಳು ನಡೆದಿದ್ದವು.

    ಇಷ್ಟೆಲ್ಲಾ ಸಮಸ್ಯೆಗಳ ನಡುವೆ ಎಸ್.ಎಂ.ಕೃಷ್ಣ ಅವರು ಸಿಎಂ ಆಗಿದ್ದ ವೇಳೆ ಭೂ ದಾಖಲೆಗಳನ್ನು ಡಿಜಿಟಲೀಕರಣಗೊಳಿದ್ದು, ಸರ್ಕಾರಿ ಶಾಲೆ ಮಕ್ಕಳಿಗೆ ಬಿಸಿಯೂಟ, ಯಶಸ್ವಿನಿ ಯೋಜನೆ, ಬೆಂ-ಮೈ ಹೆದ್ದಾರಿ, ಬೆಂಗಳೂರನ್ನು ಸಿಲಿಕಾನ್ ಸಿಟಿಯನ್ನಾಗಿ ಮಾಡಿದರು. ಜೊತೆಗೆ ಐಟಿ ಬಿಟಿಯಲ್ಲಿ ಬಹುದೊಡ್ಡ ಕ್ರಾಂತಿ ಸೇರಿದಂತೆ ಇನ್ನೂ ಹತ್ತಾರು ಅಭಿವೃದ್ಧಿ ಕೆಲಸಗಳು ಇಂದಿಗೂ ಸ್ಮರಣೀಯವಾಗಿವೆ.ಇದನ್ನೂ ಓದಿ: ಅಣ್ಣಾವ್ರಿಗೆ ಮರು ಜೀವ ಕೊಟ್ಟಿದ್ದೇ ಎಸ್‌ಎಂ ಕೃಷ್ಣ: ಸಾರಾ ಗೋವಿಂದು

  • ಎಸ್‌ಎಂಕೆ ಅಗಲಿಕೆಯಿಂದ ಮಾರ್ಗದರ್ಶಕರನ್ನು ಕಳೆದುಕೊಂಡಂತಾಗಿದೆ: ಬಸವರಾಜ ಬೊಮ್ಮಾಯಿ

    ಎಸ್‌ಎಂಕೆ ಅಗಲಿಕೆಯಿಂದ ಮಾರ್ಗದರ್ಶಕರನ್ನು ಕಳೆದುಕೊಂಡಂತಾಗಿದೆ: ಬಸವರಾಜ ಬೊಮ್ಮಾಯಿ

    ನವದೆಹಲಿ: ಕರ್ನಾಟಕ (Karnataka) ಕಂಡಂತಹ ಅತ್ಯಂತ ಧೀಮಂತ, ಹಿರಿಯ ರಾಜಕಾರಣಿ, ಸ್ವಾತಂತ್ರ‍್ಯ ಪೂರ್ವದ ತಲೆಮಾರು. ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಆಡಳಿತಾತ್ಮಕ ಅನೇಕ ಹುದ್ದೆ ಅಲಂಕರಿಸಿದ್ದ ನಮ್ಮ ಕನ್ನಡದ ಹೆಮ್ಮೆಯ ಎಸ್.ಎಂ.ಕೃಷ್ಣ ಅವರ ನಿಧನದ ಸುದ್ದಿ ಕೇಳಿ ಅತ್ಯಂತ ದುಖ ಹಾಗೂ ದಿಗ್ಭ್ರಮೆ ಆಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ (Basavaraj Bommai) ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

    ಎಸ್.ಎಂ.ಕೃಷ್ಣ (SM Krishna) ಅವರ ಅಗಲಿಕೆಯಿಂದ ದೇಶ ಒಬ್ಬ ಹಿರಿಯರು, ಮಾರ್ಗದರ್ಶಕರನ್ನು ಕಳೆದುಕೊಂಡು ಬಡವಾಗಿದೆ. ಸಾರ್ವಜನಿಕ ಜೀವನದಲ್ಲಿ ಅತ್ಯಂತ ಪರಿಶುದ್ಧವಾದ ಬದುಕು ನಡೆಸಿ, ಆದರ್ಶಮಯ ಜೀವನ ನಡೆಸಿ, ಇಡೀ ಭಾರತಕ್ಕೆ ಪ್ರಿಯರಾಗಿರುವಂತಹವರು. ಕೃಷ್ಣ ಅವರು ವಿದೇಶದಲ್ಲಿ ವಿದ್ಯಾಭ್ಯಾಸ ಮುಗಿಸಿ ಬಂದ ನಂತರ ತಮ್ಮ ಸಮಾಜವಾದಿ ಮನೋಭಾವನೆ ಬಿಟ್ಟುಕೊಡದೇ ಪಥಮ ಬಾರಿಗೆ ಸ್ವತಂತವಾಗಿ ಸ್ಪರ್ಧೆ ಮಾಡಿ ಗೆದ್ದು ಬಂದಿದ್ದರು. ವಿಧಾನಸಭೆ, ವಿಧಾನ ಪರಿಷತ್, ಲೋಕಸಭೆ, ರಾಜ್ಯಸಭೆ ನಾಲ್ಕೂ ಸದನಗಳಲ್ಲಿ ಸೇವೆ ಮಾಡಿದ್ದಾರೆ. ರಾಜ್ಯದ ಮಂತ್ರಿಗಳಾಗಿ, ಮುಖ್ಯಮಂತ್ರಿಗಳಾಗಿ, ಮಹಾರಾಷ್ಟ್ರದ ರಾಜ್ಯಪಾಲರಾಗಿ, ಕೇಂದ್ರದ ಸಚಿವರಾಗಿ ದೇಶದ ಸೇವೆ ಹಾಗೂ ರಾಜ್ಯದ ಸೇವೆ ಮಾಡಿದ್ದಾರೆ.ಇದನ್ನೂ ಓದಿ: ರಾಜಕಾರಣದ ಮೊದಲು ಗುರು, ಮಗನ ರೀತಿ ನೋಡುತ್ತಿದ್ದರು : ಎಸ್‌ಎಂಕೆ ನೆನೆದು ಡಿಕೆಶಿ ಕಣ್ಣೀರು

    ರಾಜಕಾರಣಿಗಳಿಗೆ ಆದರ್ಶವಾಗಿರುವ, ಆಡಳಿತಗಾರರಿಗೆ ಮಾರ್ಗದರ್ಶನವಾಗಿರುವ ಅವರ ಭಾಷೆ, ಮಿತವ್ಯಯದ ಮಾತು, ಅವರ ನಡವಳಿಗೆ ನಮ್ಮ ಯುವ ರಾಜಕಾರಣಿಗಳಿಗೆ ಅತ್ಯಂತ ಅವಶ್ಯವಿದೆ. ಅವರು ಕರ್ನಾಟಕದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಬೆಂಗಳೂರಿನ ಬೆಳವಣಿಗೆ, ಐಟಿ-ಬಿಟಿ ವಿಚಾರದಲ್ಲಿ ಅವರು ನೀಡಿದ ಕೊಡುಗೆ ಅಪಾರ, ಅವರು ಜಾರಿಗೆ ತಂದಿರುವ ಮಿಡ್ ಡೆ ಮೀಲ್ ಯೋಜನೆ ಯಶಸ್ವಿಯಾಗಿದೆ. ಅವರು ರಾಜಕಾರಣದಲ್ಲಿ ಯಾವುದೇ ಹುದ್ದೆಯಲ್ಲಿದ್ದರೂ ಕೂಡ ತಮ್ಮ ವ್ಯಕ್ತಿತ್ವವನ್ನು ಬಿಟ್ಟುಕೊಡದೇ ಅತ್ಯಂತ ಸ್ವಾಭಿಮಾನದ ಬದುಕು ನಡೆಸಿದರು.

    ಅವರು ಬಿಜೆಪಿ ಸೇರಿ ನಮ್ಮ ಪಧಾನ ಮಂತ್ರಿಗಳಿಗೆ ಅತ್ಯಂತ ಹತ್ತಿರದ ನಾಯಕರಾಗಿದ್ದರು. ಹಿಂದಿನ ಪೀಳಿಗೆಯ ಮಹತ್ವದ ಘಟ್ಟ ಕಳೆದುಕೊಂಡಂತಾಗಿದೆ. ಬರುವಂತಹ ದಿನಗಳಲ್ಲಿ ಅವರ ಬದುಕು ನಮಗೆ ಆದರ್ಶವಾಗಲಿ, ಎಸ್.ಎಂ. ಕೃಷ್ಣ ಅವರು ನನಗೆ ವಯಕ್ತಿಕವಾಗಿ ಅತ್ಯಂತ ಹತ್ತಿರವಾಗಿದ್ದ ನಾಯಕರು, ನಮ್ಮ ತಂದೆಯ ಜೊತೆ ಒಳ್ಳೆಯ ಒಡನಾಟ ಇಟ್ಟುಕೊಂಡಿದ್ದ ನಾಯಕರಾಗಿದ್ದರು. ಅವರ ಅಗಲಿಗೆ ನನಗೆ ಬಹಳ ನೋವು ತಂದಿದೆ. ಅವರ ಕುಟುಂಬಕ್ಕೆ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿ ಭಗವಂತ ನೀಡಲಿ, ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ:ಪ್ರತಿ ವರ್ಷ ಸಂಗಿತೋತ್ಸವಕ್ಕೆ ದಂಪತಿ ಸಮೇತ ಬರುತ್ತಿದ್ದರು: ಶರಣ ಪ್ರಕಾಶ್ ಪಾಟೀಲ್ ಸಂತಾಪ

  • ಪ್ರತಿ ವರ್ಷ ಸಂಗಿತೋತ್ಸವಕ್ಕೆ ದಂಪತಿ ಸಮೇತ ಬರುತ್ತಿದ್ದರು: ಶರಣ ಪ್ರಕಾಶ್ ಪಾಟೀಲ್ ಸಂತಾಪ

    ಪ್ರತಿ ವರ್ಷ ಸಂಗಿತೋತ್ಸವಕ್ಕೆ ದಂಪತಿ ಸಮೇತ ಬರುತ್ತಿದ್ದರು: ಶರಣ ಪ್ರಕಾಶ್ ಪಾಟೀಲ್ ಸಂತಾಪ

    ಬೆಂಗಳೂರು: ಕರ್ನಾಟಕದ ಮುತ್ಸದ್ಧಿ ರಾಜಕಾರಣಿ, ಬೆಂಗಳೂರಿಗೆ ಸಿಲಿಕಾನ್ ವ್ಯಾಲಿ ಎಂಬ ಶ್ರೇಯಸ್ಸು ದೊರೆಯುವಂತೆ ಮಾಡಿದ ನಾಡು ಕಂಡ ಧೀಮಂತ ರಾಜಕಾರಣಿ ಎಂದು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ (Sharana Prakash Patil) ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ (SM Krishna) ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

    ಬೆಳಗಾವಿಯಲ್ಲಿ (Belagavi) ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ.ಕೃಷ್ಣ ಅವರ ನಿಧನ ಸುದ್ದಿ ತಿಳಿದು ಅತೀವ ದುಃಖವಾಯಿತು. ಸಚಿವರು, ಮುಖ್ಯಮಂತ್ರಿಯಾಗಿ, ಕೇಂದ್ರ ಸಚಿವರಾಗಿ ಹಾಗೂ ರಾಜ್ಯಪಾಲರಾಗಿ ಹಲವು ಹುದ್ದೆಗಳನ್ನು ಅತ್ಯಂತ ಜವಾಬ್ದಾರಿಯುತವಾಗಿ ಹಾಗೂ ಸಮರ್ಥವಾಗಿ ನಿಭಾಯಿಸಿದ್ದಾರೆ. ಕರ್ನಾಟಕದಲ್ಲಿ ಐಟಿ-ಬಿಟಿ ಕ್ಷೇತ್ರದ ಬೆಳವಣಿಗೆಗೆ ನೀಡಿರುವ ಕೊಡುಗೆ ಸದಾ ಸ್ಮರಣೀಯ ಎಂದು ತಮ್ಮ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಇದನ್ನೂ ಓದಿ: ಎಸ್‌ಎಂ ಕೃಷ್ಣ ಅಂತಿಮ ದರ್ಶನ ಪಡೆದ ರಮ್ಯಾ

    ಹಲವಾರು ಸಂದರ್ಭದಲ್ಲಿ ಅವರ ಮಾರ್ಗದರ್ಶನವನ್ನು ನಾನು ಪಡೆದಿದ್ದೇನೆ. ಕೃಷ್ಣ ಅವರು ಶಾಸ್ತ್ರೀಯ ಸಂಗೀತಾಸ್ತಕರಾಗಿದ್ದರು. ಪ್ರತಿ ವರ್ಷ ಚಾಮರಾಜಪೇಟೆಯಲ್ಲಿ ನಡೆಯುತ್ತಿದ್ದ ಸಂಗೀತೋತ್ಸವಕ್ಕೆ ದಂಪತಿ ಸಮೇತ ಬಂದು ಸಂಗೀತ ಆಲಿಸುತ್ತಿದ್ದರು. ಲಾನ್ ಟೆನಿಸ್ ಬಗ್ಗೆ ವಿಶೇಷ ವ್ಯಾಮೋಹ ಹೊಂದಿದ್ದ ಕೃಷ್ಣ ಅವರು ಬ್ಯಾಡ್ಮಿಂಟನ್ ಪ್ರಿಯರಾಗಿದ್ದು, ಪ್ರತಿ ದಿನವೂ ಆಡುತ್ತಿದ್ದುದು ಕಂಡಿದ್ದೇವೆ ಎಂದು ಸ್ಪರಿಸಿದರು.

    ಎಸ್.ಎಂ.ಕೃಷ್ಣ ಅವರ ನಿಧನದಿಂದ ವೈಯಕ್ತಿಕವಾಗಿ ಅಪಾರ ದುಃಖವಾಗಿದೆ. ಕೃಷ್ಣ ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬ ವರ್ಗದವರಿಗೆ, ಬಂಧು-ಬಳಗದವರಿಗೆ, ಅಭಿಮಾನಿಗಳಿಗೆ, ಹಿತೈಷಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲೆಂದು ಪ್ರಾರ್ಥಿಸುತ್ತೇನೆ.ಇದನ್ನೂ ಓದಿ: ದಣಿವರಿಯದೇ ಶ್ರಮಿಸಿದ ನಾಯಕ: ಎಸ್‌ಎಂಕೆ ನಿಧನಕ್ಕೆ ಮೋದಿ ಸಂತಾಪ