Tag: former

  • ರೈತರು ಬಲಿಷ್ಠರಾದಷ್ಟು ನವ ಭಾರತವು ಹೆಚ್ಚು ಸಮೃದ್ಧವಾಗುತ್ತೆ: ಮೋದಿ

    ರೈತರು ಬಲಿಷ್ಠರಾದಷ್ಟು ನವ ಭಾರತವು ಹೆಚ್ಚು ಸಮೃದ್ಧವಾಗುತ್ತೆ: ಮೋದಿ

    ನವದೆಹಲಿ: ರೈತರು ಎಷ್ಟು ಬಲಿಷ್ಠರಾಗುತ್ತಾ ಹೋಗುತ್ತಾರೋ, ಹಾಗೇ ನವ ಭಾರತವು ಹೆಚ್ಚು ಸಮೃದ್ಧವಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.

    ಪಿಎಂ ಕಿಸಾನ್ ಸಮ್ಮಾನ್ ನಿಧಿ ಮತ್ತು ಇತರೆ ಕೃಷಿ ಸಂಬಂಧಿತ ಯೋಜನೆಗಳ ಕುರಿತು ಟ್ವೀಟ್ ಮಾಡಿದ್ದಾರೆ. ಪಿಎಂ ಕಿಸಾನ್ ಸಮ್ಮಾನ್ ನಿಧಿ ಮತ್ತು ಇತರ ಕೃಷಿ ಸಂಬಂಧಿತ ಯೋಜನೆಗಳು ಕೋಟಿಗಟ್ಟಲೆ ಉಳುಮೆದಾರರಿಗೆ ಹೊಸ ಶಕ್ತಿಯನ್ನು ನೀಡುತ್ತಿವೆ ಎಂದು ಟ್ವೀಟ್‌ನಲ್ಲಿ ಮಾಹಿತಿ ನೀಡಿದರು.

    ಟ್ವೀಟ್‍ನಲ್ಲಿ ಏನಿದೆ?: ನಮ್ಮ ರೈತ ಸಹೋದರ ಸಹೋದರಿಯರ ಬಗ್ಗೆ ದೇಶ ಹೆಮ್ಮೆಪಡುತ್ತದೆ. ಅವರು ಬಲಿಷ್ಠರಾಗಿದಷ್ಟು, ನವ ಭಾರತವು ಹೆಚ್ಚು ಸಮೃದ್ಧವಾಗಿರುತ್ತದೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಮತ್ತು ಕೃಷಿಗೆ ಸಂಬಂಧಿಸಿದ ಇತರ ಯೋಜನೆಗಳು ದೇಶದ ಕೋಟ್ಯಂತರ ರೈತರಿಗೆ ಹೊಸ ಶಕ್ತಿಯನ್ನು ನೀಡುತ್ತಿರುವುದು ನನಗೆ ಖುಷಿ ತಂದಿದೆ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ದೇಶದ ಸಂವಿಧಾನ ಪಾಲನೆ ಮಾಡದವರಿಗೆ ಭಾರತದಲ್ಲಿ ಇರಲು ಹಕ್ಕಿಲ್ಲ: ಅಭಯ್ ಪಾಟೀಲ್

    11.3 ಕೋಟಿ ರೈತರ ಬ್ಯಾಂಕ್ ಖಾತೆಗಳಿಗೆ 1.82 ಲಕ್ಷ ಕೋಟಿ ರೂ.ವನ್ನು ನೇರವಾಗಿ ವರ್ಗಾಯಿಸಲಾಗಿದೆ ಎಂದು ಹೇಳುವ ಗ್ರಾಫಿಕ್ ಅನ್ನು ಪ್ರಧಾನಿ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ದೇಶದ ವೈವಿಧ್ಯತೆಯನ್ನು ಗುರುತಿಸುವುದು ಸಂಘ ಪರಿವಾರದ ಅಜೆಂಡಾವಲ್ಲ : ಪಿಣರಾಯಿ

  • ಅಕಾಲಿಕ ಮಳೆಗೆ ತುತ್ತಾದ ಬೆಳೆಗೆ ಇನ್ನೂ ಸಿಗದ ಪರಿಹಾರ- ಸರ್ವೆ ಕಾರ್ಯದಲ್ಲೇ ಎಡವಟ್ಟು

    ಅಕಾಲಿಕ ಮಳೆಗೆ ತುತ್ತಾದ ಬೆಳೆಗೆ ಇನ್ನೂ ಸಿಗದ ಪರಿಹಾರ- ಸರ್ವೆ ಕಾರ್ಯದಲ್ಲೇ ಎಡವಟ್ಟು

    ರಾಯಚೂರು: ಬೆಳೆ ಹಾನಿ ಸರ್ವೆ ವೇಳೆ ಮಾಡಿದ ಎಡವಟ್ಟಿನಿಂದ ನಿಜವಾದ ಫಲನುಭವಿಗಳ ಖಾತೆಗೆ ಪರಿಹಾರ ಬರದೇ ಬೇರೆಯವರು ಬೆಳೆದ ಬೆಳೆಗಳಿಗೆ ಪರಿಹಾರ ಬಂದಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.

    ಈ ಬಾರಿ ವಾಡಿಕೆಗಿಂತಲೂ ಹೆಚ್ಚು ಸಮಯ ಮುಂಗಾರು ಮಳೆ ಸುರಿದಿದ್ದರಿಂದ ಲಕ್ಷಾಂತರ ಎಕರೆಯಲ್ಲಿ ಬೆಳೆದಿದ್ದ ವಿವಿಧ ಬೆಳೆಗಳು ಹಾನಿಗೊಳಗಾಗಿದ್ದವು. ತೊಗರಿ, ಹತ್ತಿ, ಮೆಣಸಿನಕಾಯಿ, ಭತ್ತ, ಟೊಮೆಟೋ ಸೇರಿ ಲಕ್ಷಾಂತರ ಎಕರೆಯಲ್ಲಿ ಬೆಳೆದ ಹಲವಾರು ಬೆಳೆಗಳು ಹಾಳಾಗಿ ರೈತ ಕಂಗಾಲಾಗಿದ್ದ. ಇದರ ಪರಿಹಾರವಾಗಿ ಸಮರ್ಪಕ ಹಣ ನೀಡುವಲ್ಲಿ ಸರ್ಕಾರ ವಿಫಲವಾಗಿದೆ. ಸರ್ವೆ ಕಾರ್ಯ ಸರಿಯಾಗಿ ಮಾಡದೆ, ಹತ್ತಿ ಬೆಳೆದವರಿಗೆ ಭತ್ತ, ಭತ್ತ ಬೆಳೆದವರಿಗೆ ಹತ್ತಿ ಎಂದು ಸರ್ವೆ ಮಾಡಿ ಪರಿಹಾರ ನೀಡಲಾಗಿದೆ. ಅದರಲ್ಲೂ ಕೆಲವರಿಗೆ ಮಾತ್ರ 5 ರಿಂದ 10 ಸಾವಿರ ಪರಿಹಾರ ಹಾಕಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

    ಕನಿಷ್ಠ ಕೃಷಿ ವೆಚ್ಚವನ್ನು ಆಧರಿಸಿ ಸರ್ಕಾರ ಪರಿಹಾರ ನೀಡಬೇಕು. ಆದರೆ ಈಗ ಯಾವ ಮಾನದಂಡದ ಮೇಲೆ ಪರಿಹಾರ ನೀಡಲಾಗಿದೆ ಎನ್ನುವುದೇ ತಿಳಿಯದಂತಾಗಿದೆ. ಸರ್ಕಾರ ಇದೇ ರೀತಿ ರೈತರ ಬಗ್ಗೆ ನಿಷ್ಕಾಳಜಿ ಮುಂದುವರಿಸಿದರೆ, ರೈತರು ಯಾವ ರೀತಿ ಕೃಷಿ ಮುಂದುವರಿಸಬೇಕು ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ರಾಜ್ಯಕ್ಕೆ ಮೂರನೇ ಅಲೆ ಬಂದಿದೆ: ಡಾ.ಕೆ.ಸುಧಾಕರ್

    ಒಂದೆಡೆ ಮುಕ್ತ ಮಾರುಕಟ್ಟೆಯಲ್ಲಿ ರೈತ ಬೆಳೆದ ಬೆಳೆಗೆ ಬೆಲೆಯಿಲ್ಲ, ಇನ್ನೊಂದೆಡೆ ಬೆಳೆ ಪರಿಹಾರವನ್ನು ಸರಿಯಾಗಿ ನೀಡುತ್ತಿಲ್ಲ ಎಂದು ರಾಜ್ಯ ರೈತ ಸಂಘ ಗೌರವಾಧ್ಯಕ್ಷ ಚಾಮರಸ ಮಾಲೀಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ ನಾಯಕ ಮನೋಜ್ ತಿವಾರಿಗೆ ಕೊರೊನಾ ಪಾಸಿಟಿವ್

    ಕಳೆದ ಮುಂಗಾರು ವೇಳೆ ಸಿಂಧನೂರು, ಮಸ್ಕಿ, ಮಾನ್ವಿ, ಸಿರವಾರ, ಲಿಂಗಸುಗೂರು ತಾಲೂಕುಗಳಲ್ಲಿ ಹೆಚ್ಚು ಮಳೆ ಹಾನಿ ಸಂಭವಿಸಿದ್ದು, ಸುಮಾರು 1 ಲಕ್ಷ ಹೆಕ್ಟೇರ್‍ಗೂ ಅಧಿಕ ಪ್ರಮಾಣದ ಬೆಳೆ ಹಾನಿಯಾಗಿದೆ. ಈಗಾಗಲೇ ಕೆಲವು ಬೆಳೆಗಳಿಗೆ ಎನ್‍ಡಿಆರ್‍ಎಫ್ ನಿಯಮಗಳ ಪ್ರಕಾರ ಬೆಳೆ ಹಾನಿ ಪರಿಹಾರ ನೀಡಲಾಗಿದೆ. ಜೊತೆಗೆ ಡಬಲ್ ಪರಿಹಾರವನ್ನೂ ಸರ್ಕಾರ ನೀಡಲು ಮುಂದಾಗಿದೆ. ಪರಿಹಾರ ಎಲ್ಲಾ ರೈತರಿಗೆ ಜಮಾ ಆಗಿದೆ. ಆದರೆ ಸರ್ವೆಯಲ್ಲಿ ಬೆಳೆ ಬದಲಾವಣೆ ಆಗಿರುವುದು ಗಮನಕ್ಕೆ ಬಂದಿಲ್ಲ. ಅಂತಹ ಪ್ರಕರಣ ಕಂಡುಬಂದರೆ ಸರಿ ಪಡಿಸುತ್ತೇವೆ ಎಂದು ರಾಯಚೂರು ಸಹಾಯಕ ಆಯುಕ್ತ ಸಂತೋಷ್ ಕಾಮೇಗೌಡ ತಿಳಿಸಿದರು.

  • ರೈತ, ಸರ್ಕಾರ, ಮಾಧ್ಯಮಗಳ ನಡುವಿನ ಸೌಹಾರ್ದ ಮಾತುಕತೆ ನಿಂತು ಹೋಗಿದೆ: ಎಚ್.ಆರ್ ರಂಗನಾಥ್ ಬೇಸರ

    ರೈತ, ಸರ್ಕಾರ, ಮಾಧ್ಯಮಗಳ ನಡುವಿನ ಸೌಹಾರ್ದ ಮಾತುಕತೆ ನಿಂತು ಹೋಗಿದೆ: ಎಚ್.ಆರ್ ರಂಗನಾಥ್ ಬೇಸರ

    ಮೈಸೂರು: ದೇಶ ಅಭಿವೃದ್ಧಿಯಲ್ಲಿ ಬಹುಮುಖ್ಯ ಪಾತ್ರ ವಹಿಸುವ ಕೃಷಿ ವಿಚಾರದ ಬಗ್ಗೆ ರೈತರು, ಸರ್ಕಾರ ಹಾಗೂ ಮಾಧ್ಯಮಗಳು ನಡೆಸುವ ಸೌಹಾರ್ದ ಮಾತುಕತೆ ನಿಂತು ಹೋಗಿದೆ ಎಂದು ಪಬ್ಲಿಕ್ ಟಿವಿಯ ಮುಖ್ಯಸ್ಥ ಎಚ್.ಆರ್. ರಂಗನಾಥ್ ಬೇಸರ ವ್ಯಕ್ತಪಡಿಸಿದರು.

    ರಾಜ್ಯ ಮಟ್ಟದ ರೈತ ಸಮಾವೇಶದಲ್ಲಿ ಮಾತನಾಡಿದ ಅವರು, ಸೌಹಾರ್ದ ಮಾತುಕತೆ ನಿಂತು ರೈತ ಸಮಸ್ಯೆಗಳಿಗೆ ಸ್ಪಷ್ಟ ಉತ್ತರ ಸಿಗುತ್ತಿಲ್ಲ. ಸಮಗ್ರ ರೈತ ಚಳವಳಿ ಕಲ್ಪನೆ ಎಲ್ಲಿ ಹೋಯಿತು ಎಂದು ಪ್ರಶ್ನಿಸಿದ ಅವರು, ರೈತ ಈ ದೇಶದಲ್ಲಿ ಮತ ಅಲ್ಲ. ಸಮರ್ಥ ರೈತ ಹೋರಾಟ ಮತ್ತೆ ಶುರುವಾಗಬೇಕು. ರೈತ ಸಂಘಟನೆ ಹೇಳುತ್ತವೆ ಎಂದರೆ ಸರ್ಕಾರ ಆ ಮಾತು ಕೇಳಬೇಕು. ಹಿಂದಿನ ಚಳವಳಿಯ ಶಕ್ತಿ ರೈತ ಹೋರಾಟಕ್ಕೆ ಬರಬೇಕಿದೆ ಎಂದು ಹೇಳಿದರು.

    ಸರ್ಕಾರ ನೂತನ ಕಾನೂನುಗಳನ್ನು ತರುವಾಗ ರೈತರನ್ನು ಕೂರಿಸಿಕೊಂಡು ಚರ್ಚೆ ನಡೆಸಬೇಕು. ಈ ರೀತಿಯ ಸೌಜನ್ಯವನ್ನು ಸರ್ಕಾರ ಇಂದು ಕಳೆದುಕೊಂಡಿದೆ. ಇದರಿಂದಾಗಿ ಕೆಲವೊಮ್ಮೆ ಸರ್ಕಾರ ರೈತರಿಗೆ ಒಳ್ಳೆಯದಾಗುವ ಕಾನೂನನ್ನು ತಂದರೂ ಅದನ್ನು ಒಪ್ಪಿಕೊಳ್ಳದಂತ ಪರಿಸ್ಥಿತಿ ರೈತರಲಿಲ್ಲದ ಪರಿಸ್ಥಿತಿ ಬಂದಿದೆ ಎಂದು ಹೇಳಿದರು.

    ಕಬ್ಬು ಬೆಳೆಯುವುದು ಸುಲಭ ಎನ್ನುತ್ತಾರೆ. ಆದರೆ ರೈತನಿಗೆ ಅದರ ಕಷ್ಟ ಗೊತ್ತಿದೆ. ಕಬ್ಬಿಗೆ ಸರ್ಕಾರಗಳು ನಿಗದಿ ಪಡಿಸುವ ಬೆಲೆ ಬೇರೆ ಆಗಿರುತ್ತದೆ. ಕಾರ್ಖಾನೆಗಳು ನಿಗದಿಗೊಳಿಸುವ ಬೆಲೆಯೇ ಬೇರೆಯಾಗಿದೆ. ಇದರಿಂದಾಗಿ ರೈತ ತೊಂದರೆಗೀಡಾಗುತ್ತಾನೆ ಎಂದು ನುಡಿದರು.

    ಇತ್ತೀಚಿನ ದಿನಗಳಲ್ಲಿ ಯಾರು ರೈತರು, ಯಾರು ರೈತರಲ್ಲ ಎನ್ನುವುದೇ ತಿಳಿಯದಂತ ಪರಿಸ್ಥಿತಿ ಇದೆ. ಕೃಷಿಕರಲ್ಲದವರೂ ಕೃಷಿಕರಂತೆಯೂ, ಕೃಷಿಕರು ಕೃಷಿಕರಲ್ಲದವರಂತೆ ನಟಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

    ಕೃಷಿಯೇ ಆಧಾರವಾಗಿಸಿ ಸಂತೋಷದ ಜೀವನ ನಡೆಸಬಹುದು. ಆದರೆ ಏಕ ಧಾನ್ಯ ಪದ್ಧತಿಯಲ್ಲಿ ಸಿಲುಕಿಕೊಂಡಿರುವವರು, ಇದನ್ನೆ ನಾವು ಮಾಡಬೇಕು ಎಂದು ಹಠಕ್ಕೆ ಬಿದ್ದವರು ತೊಂದರೆಗೀಡಾಗುತ್ತಿದ್ದಾರೆ. ಕೃಷಿಕನಿಗೆ ಶ್ರಮದ ಜೊತೆಗೆ ಬುದ್ಧಿವಂತಿಕೆಯು ಇದ್ದರೆ ಸುಖಕರ ಜೀವನ ನಡೆಸಬಹುದು ಎಂದು ಸಲಹೆ ನೀಡಿದರು.

    ಒಂದು ನೋಟಿಸ್ ಅಥವಾ ಬೆಳೆ ನಷ್ಟಕ್ಕೆ ಹೆದರಿ ಇಂದು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಸಾವಿರಾರು ರೂಪಾಯಿ ದೋಚಿಕೊಂಡು ವಿದೇಶಕ್ಕೆ ಓಡಿ ಹೋದವರೇ ರಾಜಾರೋಷವಾಗಿ ಬದುಕುತ್ತಿದ್ದಾರೆ. ಅಂತವರೇ ಬದುಕಿದ್ದಾಗ ನಾವು ಈ ಚಿಕ್ಕಪುಟ್ಟ ಸಮಸ್ಯೆಗೆ ಹೆದರಬಾರದು ಎಂದು ಧೈರ್ಯ ತುಂಬಿದರು. ಇದನ್ನೂ ಓದಿ: ರಸ್ತೆ, ರಸ್ತೆಯಲ್ಲಿ ಕುಣಿಯುವುದಕ್ಕೆ ಬ್ರೇಕ್ ಹಾಕಿ ಬಾರ್, ರೆಸ್ಟೋರೆಂಟ್ ನಿಯಮ ಸಡಿಲಿಸಿ: ಗೋವಿಂದರಾಜ್ ಹೆಗ್ಡೆ

    ಜಾಗತಿಕ ತಾಪಮಾನದ ಏರಿಳಿತಗಳು ನಮ್ಮನ್ನು ಎಲ್ಲಿಗೆ ತೆಗದುಕೊಂಡು ಹೋಗುತ್ತಿದೆ ಎನ್ನುವುದಕ್ಕೆ ಈ ವರ್ಷ ಮಾದರಿಯಾಗಿದೆ. ವಿಚಿತ್ರವಾದ ಹವಾಮಾನ ಏರು ಪೇರಾಗುತ್ತಿದೆ. ಇದು ಬೆಳೆಗಳ ಮೇಲೂ, ನಮ್ಮ ಜೀವನದ ಮೇಲೂ ಪರಿಣಾಮ ಬೀರುತ್ತದೆ ಎಂದು ಬೇಸರಿಸಿದರು.

    ಸಮಸ್ಯೆ ನಿವಾರಣೆಯಾಗುತ್ತಿಲ್ಲ:  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಎಲ್ಲಾ ರಾಜಕೀಯ ಪಕ್ಷಗಳು ರೈತನಿಗೆ ಸೇರಿದ್ದು. ಈ ಸತ್ಯ ರಾಜಕೀಯ ಪಕ್ಷಗಳಿಗೆ ಅರ್ಥವಾಗಬೇಕು. ಈ ಮನೋಭಾವ ಬಂದರೆ ರೈತರ ಕಲ್ಯಾಣ ಸಾಧ್ಯ. ಚಳವಳಿ, ರಾಜಕಾರಣದ ನಡುವೆ ಸಂಬಂಧ ಇರಬೇಕಿತ್ತು. ಆದರೆ ಈ ಸಂಬಂಧ ಇಲ್ಲದ ಕಾರಣ ರೈತರ ಕಲ್ಯಾಣ ಆಗುತ್ತಿಲ್ಲ. ಆಹಾರ ಉತ್ಪಾದನೆ ಹೆಚ್ಚಾದರೂ ರೈತನ ಸಮಸ್ಯೆ ನಿವಾರಣೆ ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಹಾಸ್ಟೆಲ್‍ನಲ್ಲಿರುವ ಬ್ಯಾಗ್ ತರುತ್ತೇನೆಂದು ಹೇಳಿ ಹೋದ ಯುವತಿ ನಾಪತ್ತೆ

    ಮೈಷುಗರ್ ಬಗ್ಗೆ ಮಾತನಾಡಿ, ಮೈಷುಗರ್‌ನಲ್ಲಿ ಕಬ್ಬು ಅರೆಯುವ ವ್ಯವಸ್ಥೆ ಬೇಗ ಪುನಾರಂಭವಾಗುತ್ತದೆ. ಶ್ರೀರಾಮ ಸಕ್ಕರೆ ಕಾರ್ಖಾನೆ ಖಾಸಗಿ ಅವರು ತೆಗೆದು ಕೊಂಡಿದ್ದಾರೆ. ಇದಕ್ಕೆ ಕೆಲವು ತಾಂತ್ರಿಕ ಸಮಸ್ಯೆಗಳಿವೆ. ಅದನ್ನು ನಿವಾರಿಸಿ ಬೇಗ ಕಾರ್ಖಾನೆ ಆರಂಭಿಸುತ್ತೇವೆ ಎಂದು ಭರವಸೆ ನೀಡಿದರು.

    ಗಂಭೀರವಾಗಿ ಪರಿಗಣಿಸಿ: ಕುರುಬೂರು ಶಾಂತಕುಮಾರ್ ಮಾತನಾಡಿ, ಆಹಾರ ಉತ್ಪಾದನೆ ಹೆಚ್ಚಾಗಿದ್ದರೂ ರೈತರ ಬಾಳು ಹಸನಾಗಿಲ್ಲ. ಸರಕಾರ ರೈತರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು. ಇದನ್ನೂ ಓದಿ: ಸೋಮವಾರ ಯಾದಗಿರಿಯಲ್ಲಿ ಚುನಾವಣೆ – ಪೊಲೀಸ್ ಇಲಾಖೆ ಸಜ್ಜು

    ರೈತನದು ಅನಿಶ್ಚಿತತೆಯ ಬದುಕು. ರೈತನ ಬದುಕು ನಿಶ್ಚಿತತೆಗೆ ತರುವ ಕೆಲಸ ಆಗಬೇಕಿದೆ. ಕೃಷಿಯ ಉಪ ಚಟುವಟಿಕೆಗಳನ್ನು ರೂಪಿಸುವ ಕೆಲಸ ತುರ್ತಾಗಿ ಆಗಬೇಕಿದೆ. ಈ ನಿಟ್ಟಿನಲ್ಲಿ ನಮ್ಮ ಸರಕಾರ ಬದ್ಧತೆಯಿಂದ ಚಿಂತನೆ ನಡೆಸಿದೆ. ರೈತನ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಖಾಸಗಿ ಮಾರುಕಟ್ಟೆ ಎಪಿಎಂಸಿ ಕಾಯ್ದೆಗಿಂತಾ ಮುಂಚೆಯೇ ಬಂದಿದೆ. ಅಂತಾರಾಷ್ಟ್ರೀಯ ಮಟ್ಟದ ಕಂಪನಿಗಳು ಖಾಸಗಿ ಮಾರುಕಟ್ಟೆ ಆರಂಭಿಸಿ ಬಹಳ ವರ್ಷ ಆಗಿದೆ. ಖಾಸಗಿ ಮಾರುಕಟ್ಟೆ ಈಗ ಬಂದಿದಲ್ಲ ಎಂದರು. ಇದನ್ನೂ ಓದಿ: ಹಿಂದೂ ಹಿಂದೂಗಳ ಮಧ್ಯೆ, ಭಾಷೆಗಳ ಮಧ್ಯೆ ಜಗಳ ಹಚ್ಚಲು ಷಡ್ಯಂತ್ರ: ರಾಜಾಸಿಂಗ್ ಠಾಕೂರ್

    ಈ ಕಾರ್ಯಕ್ರಮದಲ್ಲಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್‌ಗೆ ರೈತ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸುತ್ತೂರು ಶ್ರೀಗಳು, ಹಿರಿಯ ಪತ್ರಕರ್ತರಾದ ರವಿ ಹೆಗಡೆ ಭಾಗಿಯಾಗಿದ್ದರು.

  • ಕೊಬ್ಬರಿ ಹೋರಿ ಹಬ್ಬಕ್ಕೆ ಅವಕಾಶ ನೀಡಿ – ಸ್ವಾಮೀಜಿಯಿಂದ 10 ಕಿಮೀ ಪಾದಯಾತ್ರೆ

    ಕೊಬ್ಬರಿ ಹೋರಿ ಹಬ್ಬಕ್ಕೆ ಅವಕಾಶ ನೀಡಿ – ಸ್ವಾಮೀಜಿಯಿಂದ 10 ಕಿಮೀ ಪಾದಯಾತ್ರೆ

    ಹಾವೇರಿ: ಜಾನಪದ ಕ್ರೀಡೆ ಹೋರಿ ಬೆದರಿಸುವ ಹಬ್ಬಕ್ಕೆ ಜಿಲ್ಲಾಡಳಿತ ಅವಕಾಶ ನೀಡಬೇಕೆಂದು ಒತ್ತಾಯಿಸಿ ಜಿಲ್ಲೆಯ ಅಕ್ಕಿಆಲೂರು ಗ್ರಾಮದಿಂದ ಹಾನಗಲ್ ಪಟ್ಟಣದವರೆಗೆ ಹೋರಿಗಳ ಜೊತೆಗೆ ಪಾದಯಾತ್ರೆ ಮಾಡಲಾಗಿದೆ.

    ಪ್ರತಿವರ್ಷ ದೀಪಾವಳಿ ಹಬ್ಬದ ನಂತರ ಜಿಲ್ಲೆಯಲ್ಲಿ ಹೋರಿ ಬೆದರಿಸುವ ಸ್ಪರ್ಧೆಗಳನ್ನು ನಡೆಸಲಾಗುತ್ತಿತ್ತು. ಕೊಬ್ಬರಿ, ಬಲೂನ್, ಜೂಲಾ ಹಾಕಿ ಭರ್ಜರಿ ಅಲಂಕಾರ ಮಾಡಿದ್ದ ಹೋರಿಗಳನ್ನು ಅಖಾಡದಲ್ಲಿ ಓಡಿಸಿ ರೈತರು ಹೋರಿ ಹಬ್ಬದ ಸಂಭ್ರಮ ಆಚರಿಸುತ್ತಿದರು. ಆದರೆ ಕಳೆದೊಂದು ತಿಂಗಳ ಹಿಂದೆ ಹಾವೇರಿ ತಾಲೂಕಿನ ಬಸಾಪುರದಲ್ಲಿ ನಡೆದ ಹೋರಿ ಹಬ್ಬದಲ್ಲಿ ಹತ್ತಕ್ಕೂ ಅಧಿಕ ಜನರು ಗಾಯಗೊಂಡಿದ್ದರು.

    ಈ ಘಟನೆಯ ಬಳಿಕ ಜಿಲ್ಲಾಡಳಿತ ಹೋರಿ ಬೆದರಿಸುವ ಹಬ್ಬಕ್ಕೆ ನಿರ್ಬಂಧ ಹೇರಿದೆ. ಹೋರಿ ಹಬ್ಬಗಳನ್ನು ನಡೆಸದಂತೆ ತಾಕೀತು ಮಾಡಿದೆ. ಈ ವಿಷಯ ಹೋರಿ ಹಬ್ಬದ ಅಭಿಮಾನಿಗಳು ಮತ್ತು ಹೋರಿ ಮಾಲೀಕರನ್ನು ಕೆರಳಿಸಿದೆ. ಹೀಗಾಗಿ ಹೋರಿ ಹಬ್ಬಕ್ಕೆ ಅನುಮತಿ ನೀಡುವಂತೆ ಅಕ್ಕಿಆಲೂರು ಗ್ರಾಮದಿಂದ ಹಾನಗಲ್ ಪಟ್ಟಣದವರೆಗೆ ಸುಮಾರು ಹತ್ತು ಕಿಮೀ ವರೆಗೆ ವಿರಕ್ತ ಮಠದ ಶಿವಬಸವ ಸ್ವಾಮೀಜಿಗಳ ನೇತೃತ್ವದಲ್ಲಿ ಹೋರಿ ಹಬ್ಬದ ಅಭಿಮಾನಿಗಳು ಪಾದಯಾತ್ರೆ ನಡೆಸಿದರು. ಇದನ್ನೂ ಓದಿ: ಶಾಂತಿ ಕದಡುವುದೇ ನಾಡದ್ರೋಹಿ ಕಾಂಗ್ರೆಸ್ ಉದ್ದೇಶ – ಕೈ ವಿರುದ್ಧ ಬಿಜೆಪಿ ಟ್ವೀಟ್ ದಾಳಿ

    ಈ ಸಂದರ್ಭದಲ್ಲಿ ಅಕ್ಕಿಆಲೂರಿನ ವಿರಕ್ತ ಮಠದ ಶಿವಬಸವ ಸ್ವಾಮೀಜಿ ಮಾತನಾಡಿ, ರೈತರಿಗೆ ಖುಷಿ ಕೊಡುವ ಹೋರಿ ಹಬ್ಬಕ್ಕೆ ಅನುಮತಿ ನೀಡುವ ಮೂಲಕ ಸಾಂಪ್ರದಾಯಿಕವಾಗಿ ಬಂದಿರುವ ಜಾನಪದ ಹಬ್ಬವನ್ನು ಉಳಿಸಬೇಕು. ಜಿಲ್ಲಾಡಳಿತ ಹೋರಿ ಹಬ್ಬಕ್ಕೆ ಅನುಮತಿ ನೀಡಿ ರೈತರ ಸಂತಸ, ಸಂಭ್ರಮಕ್ಕೆ ಕಾರಣವಾಗಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಬೊಮ್ಮಾಯಿ ಭಾವನಾತ್ಮಕ ಹೇಳಿಕೆ ಹೃದಯ ಇದ್ದವರಿಗೆ ಮಾತ್ರ ಅರ್ಥವಾಗುತ್ತದೆ: ಎಚ್‍ಡಿಕೆ

    ಹಾನಗಲ್ ತಹಸೀಲ್ದಾರರ ಕಚೇರಿಗೆ ಕೊಬ್ಬರಿ ಹೋರಿಯ ಸಮೇತ ಹೋಗಿ ಮನವಿ ಸಲ್ಲಿಸಿದರು. ಜಿಲ್ಲಾಡಳಿತ ಕೆಲವು ನಿಯಮ ಹಾಗೂ ನಿರ್ಬಂಧಗಳನ್ನು ಹಾಕಿ ಹೋರಿ ಹಬ್ಬಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

  • ಕಂಗನಾ ಕಾರನ್ನು ತಡೆ ಹಿಡಿದು ಕ್ಷಮೆಗೆ ಆಗ್ರಹಿಸಿದ ರೈತರು

    ಕಂಗನಾ ಕಾರನ್ನು ತಡೆ ಹಿಡಿದು ಕ್ಷಮೆಗೆ ಆಗ್ರಹಿಸಿದ ರೈತರು

    ಚಂಡೀಗಢ: ರೈತರನ್ನು ಭಯೋತ್ಪಾದಕರೆಂದು ಕರೆದಿದ್ದ ಬಾಲಿವುಡ್ ನಟಿ ಕಂಗನಾ ರಣಾವತ್ ಅವರು ಕ್ಷಮೆ ಯಾಚಿಸಬೇಕೆಂದು ಒತ್ತಾಯಿಸಿ ಕಂಗನಾ ಅವರ ಕಾರನ್ನು ತಡೆ ಹಿಡಿದ ಘಟನೆ ಪಂಜಾಬ್‍ನ ಕಿರಾತ್‍ಪುರ ಸಾಹಿಬ್‍ನಲ್ಲಿ ನಡೆದಿದೆ.

    ಇತ್ತೀಚೆಗೆ ರದ್ದುಪಡಿಸಿದ ವಿವಾದಾತ್ಮಕ ಕೃಷಿ ಕಾಯ್ದೆಯ ವಿರುದ್ಧ ಸುಮಾರು ಒಂದು ವರ್ಷದಿಂದ ಪ್ರತಿಭಟನೆ ನಡೆಸುತ್ತಿದ್ದರು. ಬಿಜೆಪಿ ಬೆಂಬಲಿಗರಾದ ಕಂಗನಾ ಅವರು ರೈತರ ವಿರುದ್ಧ ಕಿಡಿಕಾರಿದ್ದರು. ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಭಯೋತ್ಪಾದಕರು, ಖಲಿಸ್ಥಾನಿಗಳು ಮತ್ತು ಸಮಾಜ ವಿರೋಧಿಗಳು ಎಂದು ಟೀಕಿಸಿದ್ದರು.

    ಈ ಹಿನ್ನೆಲೆಯಲ್ಲಿ ಕಂಗನಾ ಅವರು ತಮ್ಮ ಭದ್ರತಾ ಸಿಬ್ಬಂದಿಯೊಂದಿಗೆ ಪಂಜಾಬ್‍ನಲ್ಲಿ ಹಾದು ಹೋಗುತ್ತಿದ್ದಾಗ ಪ್ರತಿಭಟನಾಕಾರರು ಧ್ವಜಗಳನ್ನು ಬೀಸುತ್ತಾ ಮತ್ತು ಘೋಷಣೆಗಳನ್ನು ಕೂಗುತ್ತಾ ಅವರ ಕಾರನ್ನು ತಡೆದರು. ಇದನ್ನೂ ಓದಿ: ಐ ಡೋಂಟ್ ಕೇರ್, ಐ ಡೋಂಟ್ ಲೈಕ್ – ಲಸಿಕೆ ಬೇಡವೆಂದು ಹಠ ಹಿಡಿದ ವೃದ್ಧ

    ಘಟನೆ ಕುರಿತು ಕಂಗನಾ ತಮ್ಮ ಇನ್‍ಸ್ಟಾಗ್ರಾಂ ಖಾತೆಯಲ್ಲಿ ಹಾಕಿಕೊಂಡಿದ್ದಾರೆ. ನನ್ನನ್ನು ಇಲ್ಲಿಯ ಗುಂಪೊಂದು ಸುತ್ತುವರಿದಿದ್ದು, ನನ್ನನ್ನು ನಿಂದಿಸಿ, ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಬರೆದುಕೊಂಡಿದ್ದಾರೆ. ನಟಿಯು ಕೆಲವು ಮಹಿಳಾ ಪ್ರತಿಭಟನಾಕಾರರೊಂದಿಗೆ ಮಾತನಾಡಿದ ನಂತರ ಅಂತಿಮವಾಗಿ ಆ ಸ್ಥಳವನ್ನು ತೊರೆಯುವಲ್ಲಿ ಯಶಸ್ವಿಯಾದರು. ಇದನ್ನೂ ಓದಿ: ಓಮಿಕ್ರಾನ್ ಬಗ್ಗೆ ಆತಂಕ ಬೇಡ- ಸೋಂಕಿತನ ಅಭಯ

  • ತುಮಕೂರಿನಲ್ಲಿ ವಿಚಿತ್ರ ರೋಗಕ್ಕೆ ನೂರಾರು ಕುರಿಗಳು ಬಲಿ

    ತುಮಕೂರಿನಲ್ಲಿ ವಿಚಿತ್ರ ರೋಗಕ್ಕೆ ನೂರಾರು ಕುರಿಗಳು ಬಲಿ

    ತುಮಕೂರು: ವಿಚಿತ್ರ ರೋಗಕ್ಕೆ ನೂರಾರು ಕುರಿಗಳು ಬಲಿಯಾಗಿರುವ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ನಿರುವಗಲ್ ಗೊಲ್ಲರಹಟ್ಟಿಯಲ್ಲಿ ಕಳೆದ ಒಂದು ತಿಂಗಳಿನಿಂದ ಕುರಿಗಳು ವಿಚಿತ್ರ ಕಾಯಿಲೆಯಿಂದ ಸಾವನ್ನಪ್ಪುತ್ತಿದೆ. ಇದರಿಂದಾಗಿ ರೈತರು ಆತಂಕಕ್ಕೊಳಗಾಗಿದ್ದಾರೆ. ಕೃಷ್ಣಮೂರ್ತಿ, ನಿಂಗಯ್ಯ, ಪರಮೇಶ್, ರಾಘವೇಂದ್ರ, ಬಾಲಯ್ಯ, ದೊಡ್ಡ ಈರಯ್ಯ ಎನ್ನುವವರಿಗೆ ಸೇರಿದ ನೂರಾರು ಕುರಿಗಳು ಸಾವನ್ನಪ್ಪಿದೆ.

    ನೂರಾರು ಕುರಿಗಳು ಸಾವನ್ನಪ್ಪಿದರೂ ರೈತರ ಕಷ್ಟಕ್ಕೆ ಪಶುಸಂಗೋಪನಾ ಇಲಾಖೆ ಸ್ಪಂದಿಸದೇ ನಿರ್ಲಕ್ಷ್ಯವಹಿಸಿದೆ. ಅಷ್ಟೇ ಅಲ್ಲದೆ ಕುರಿಗಳಿಗೆ ಚಿಕಿತ್ಸೆ ನೀಡಲು ಬಂದಿಲ್ಲ. ವೈದ್ಯರೂ ಹಳ್ಳಿಗೆ ಬರುವುದಿಲ್ಲ ಎಂದು ಸತಾಯಿಸುತ್ತಿದ್ದಾರೆ. ಜೊತೆಗೆ ಕುರಿಯನ್ನೆ ಪಟ್ಟಣಕ್ಕೆ ಕರೆದುಕೊಂಡು ಬರುವಂತೆ ತಿಳಿಸುತ್ತಾರೆ ಎಂದು ಪಶು ವೈದ್ಯರ ವಿರುದ್ಧ ರೈತರು ಆಕ್ರೋಶ ವ್ಯಕ್ತಡಿಸಿದರು. ಜೊತೆಗೆ ಕುರಿಗಳ ಸಾವಿನಿಂದಾಗಿ ಉಂಟಾದ ನಷ್ಟವನ್ನು ಭರಿಸಲು ಪರಿಹಾರ ನೀಡಲು ಒತ್ತಾಯಿಸಿದರು. ಇದನ್ನೂ ಓದಿ: ಪುತ್ರನ ಮದುವೆ ಕಾರ್ಡ್ ಹಂಚಲು ಹೋದ ದಂಪತಿ ಮಸಣಕ್ಕೆ

  • ಗೊಬ್ಬರದ ಕೃತಕ ಅಭಾವ ಸೃಷ್ಟಿಸಿದರೆ ಅಂತವರ ಮೇಲೆ ನಿರ್ದಾಕ್ಷಿಣ್ಯ ಕ್ರಮ-ಬಿ.ಸಿ ಪಾಟೀಲ್

    ಗೊಬ್ಬರದ ಕೃತಕ ಅಭಾವ ಸೃಷ್ಟಿಸಿದರೆ ಅಂತವರ ಮೇಲೆ ನಿರ್ದಾಕ್ಷಿಣ್ಯ ಕ್ರಮ-ಬಿ.ಸಿ ಪಾಟೀಲ್

    ಹಾವೇರಿ: ರಾಜ್ಯದಲ್ಲಿ ಗೊಬ್ಬರದ ಕೃತಕ ಅಭಾವ ಸೃಷ್ಟಿಸಿದರೆ ಅಂತವರ ಮೇಲೆ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲಾಗುವುದು. ಕಳೆದ ವರ್ಷ ರಾಜ್ಯದ ಹಲವೆಡೆ ಕಳಪೆ ಬಿತ್ತನೆ ಬೀಜ ಮತ್ತು ಗೊಬ್ಬರ ಮಾರುತ್ತಿದ್ದವರ ಮೇಲೆ ಕ್ರಮ ಕೈಗೊಂಡಿದ್ದೇವೆ. ಈ ಬಾರಿ ಈ ರೀತಿ ಕಂಡು ಬಂದಲ್ಲಿ ಅಂತವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಎಚ್ಚರಿಕೆ ನೀಡಿದ್ದಾರೆ.

    ಹಾವೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬಿ.ಸಿ ಪಾಟೀಲ್, ಕಳಪೆ ಬಿತ್ತನೆ ಬೀಜ ಮತ್ತು ಗೊಬ್ಬರದ ಮಾರಾಟಕ್ಕೆ ಅವಕಾಶ ನೀಡದಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈಗಾಗಲೇ ರಾಜ್ಯದ ಬೀದರ್, ಕೊಪ್ಪಳ, ರಾಣೆಬೆನ್ನೂರು ಸೇರಿದಂತೆ ಹಲವೆಡೆ ದಾಳಿ ಮಾಡಿ ಕಳಪೆ ಬೀಜ ಮತ್ತು ಗೊಬ್ಬರ ವಶಪಡಿಸಿಕೊಳ್ಳಲಾಗಿದೆ. ಕಳ್ಳರನ್ನು ನಾವು ಹಿಡಿತಾನೆ ಇರುತ್ತೇವೆ, ಆದರೂ ಕಳ್ಳರು ಇರುತ್ತಾರೆ. ಕಳ್ಳತನವನ್ನು ಕಂಟ್ರೋಲ್ ಮಾಡುವ ಕೆಲಸ ಮಾಡುತ್ತೇವೆ ಎಂದರು. ಇದನ್ನೂ ಓದಿ:ಬರುತ್ತಿದೆ ರಹಸ್ಯ ಬಿತ್ತನೆ ಬೀಜಗಳು – ರೈತರೇ ಚೀನಾದ ಕುತಂತ್ರಕ್ಕೆ ಬಲಿಯಾಗಬೇಡಿ

    ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕಳಪೆ ಬೀಜದ ಮಾರಾಟ ಅಷ್ಟಾಗಿ ನಡಿತಿಲ್ಲ. ರೈತ ಸಂಪರ್ಕ ಕೇಂದ್ರ ಮತ್ತು ಅಧಿಕೃತ ಅಂಗಡಿಗಳಲ್ಲಿ ರೈತರು ಬಿತ್ತನೆ ಬೀಜ ಖರೀದಿ ಮಾಡಬೇಕು. ಐವತ್ತು, ನೂರು ರೂಪಾಯಿ ಉಳಿಯುತ್ತದೆ ಎಂದು ರೈತರು ಎಲ್ಲೆಲ್ಲೋ ಬಿತ್ತನೆ ಬೀಜ ತಗೆದುಕೊಂಡರೆ ಅದಕ್ಕೆ ಸರ್ಕಾರ ಜವಾಬ್ದಾರಿ ಆಗುವುದಿಲ್ಲ. ಚೀನಾದಿಂದ ಯಾವುದೇ ರೀತಿಯ ಬಿತ್ತನೆ ಬೀಜದ ಪ್ಯಾಕೇಟ್‍ಗಳು ರೈತರ ಮನೆಗೆ ಬಂದರೆ ಅವುಗಳನ್ನು ಬಿತ್ತನೆ ಮಾಡಬಾರದು. ಕಳೆದ ವರ್ಷ ಈ ರೀತಿ ಕಂಡು ಬಂದಿತ್ತು. ಈ ವರ್ಷ ಚೀನಾ ಬೀಜಗಳು ಬಂದ ಉದಾಹರಣೆಗಳು ನಡೆದಿಲ್ಲ ಎಂದು ತಿಳಿಸಿದರು.

  • ಕೊರೊನಾ ಎಫೆಕ್ಟ್ – ಕೋಲಾರದ ಆಲೂಗೆಡ್ಡೆಗೆ ಈಗ ಬಂಗಾರದ ಬೆಲೆ

    ಕೊರೊನಾ ಎಫೆಕ್ಟ್ – ಕೋಲಾರದ ಆಲೂಗೆಡ್ಡೆಗೆ ಈಗ ಬಂಗಾರದ ಬೆಲೆ

    – ಬಿತ್ತನೆ ಬೀಜಕ್ಕೂ ಭಾರೀ ಬೇಡಿಕೆ
    – 15 ವರ್ಷಗಳಲ್ಲಿ ಬೆಲೆ ದುಬಾರಿ

    ಕೋಲಾರ : ಜಿಲ್ಲೆಯ ಪಾಲಿಗೆ ಆಲೂಗೆಡ್ಡೆ ವಿಶಿಷ್ಟ ಬೆಳೆಯಾಗಿದೆ. ಈ ಅಪರೂಪದ ಬೆಳೆಗೆ ಬಂಗಾರದ ಬೆಲೆ ಬಂದಿದೆ. ಬೆಲೆ ಗಗನಕ್ಕೇರಿದ್ದು ಪೊಟಾಟೋ ಬೆಳೆ ಬೆಳೆದ ರೈತರು ಪುಲ್ ಖುಷಿಯಾಗಿದ್ದಾರೆ. ಮತ್ತೊಂದೆಡೆ ಬಿತ್ತನೆ ಬೀಜಕ್ಕೂ ಸಿಕ್ಕಾಪಟ್ಟೆ ಡಿಮ್ಯಾಂಡ್ ಸೃಷ್ಟಿಯಾಗಿದೆ. ಈಗ ಆಲೂಗಡ್ಡೆ ಬಿತ್ತನೆ ಮಾಡುತ್ತಿರುವ ರೈತರಿಗೆ ಬಿಸಿ ತುಪ್ಪ ಬಾಯಿಗೆ ಬಿದ್ದಂತಾಗಿದೆ.

    ಕೋಲಾರ ಬಂಗಾರಪೇಟೆ ಎಪಿಎಂಸಿ ಮಾರುಕಟ್ಟೆಯಲ್ಲಿ ಅಪರೂಪಕ್ಕೆ ಅಪರೂಪ ಎನ್ನುವಂತೆ ಅಲೂಗಡ್ಡೆ ಬೆಲೆ ಗಗನಕ್ಕೇರಿದೆ. ಐವತ್ತು ಕೆಜಿ ಬಿತ್ತನೆ ಆಲೂಗಡ್ಡೆಗೆ ಮಾರುಕಟ್ಟೆಯಲ್ಲಿ 5000 ದಿಂದ 6000 ರೂಪಾಯಿಗೆ ಮಾರಾಟವಾಗುತ್ತಿದೆ. ಇದು ಹದಿನೈದು ವರ್ಷಗಳಲ್ಲೇ ಅತಿ ಹೆಚ್ಚಿನ ಐತಿಹಾಸಿಕ ಬೆಲೆ ಎನ್ನಲಾಗುತ್ತಿದೆ. ಅಷ್ಟಕ್ಕೂ ಆಲೂಗಡ್ಡೆಗೆ ಇಂಥಾದೊಂದು ಬೇಡಿಕೆ ಸೃಷ್ಟಿಯಾಗೋದಕ್ಕೆ ಕಾರಣ ಕೊರೊನಾ.

    ರೈತರು ಕೊರೊನಾ ಕಾಲದಲ್ಲಿ ಹೆಚ್ಚಾಗಿ ಆಲೂಗಡ್ಡೆ ಬೆಳೆದಿಲ್ಲ, ಕಾರಣ ಪಂಜಾಬ್‍ನ ಜಲಂಧರ್‍ನಿಂದ ಬಿತ್ತನೆ ಆಲೂಗಡ್ಡೆ ತರಿಸೋದಕ್ಕೆ ಸರಿಯಾದ ವ್ಯವಸ್ಥೆಗಳಿಲ್ಲದೆ ವ್ಯಾಪಾರಸ್ಥರು ಕೂಡಾ ಸುಮ್ಮನಾಗಿದ್ದರು. ಐದಾರು ತಿಂಗಳ ಕಾಲ ಎಲ್ಲೂ ಕೂಡಾ ಆಲೂಗಡ್ಡೆ ಬಿತ್ತನೆಯಾಗಿಲ್ಲ. ಆದ್ದರಿಂದ ಈಗ ದೇಶದ ವಿವಿಧೆಡೆ ಆಲೂಗಡ್ಡೆ ಬಿತ್ತನೆ ಮಾಡಲು ಶುರುಮಾಡಿದ್ದರಿಂದ ಬಿತ್ತನೆ ಆಲೂಗಡ್ಡೆಗೆ ಸಹಜವಾಗಿಯೇ ಬೇಡಿಕೆ ಶುರುವಾಗಿದೆ. ಅದರ ಜೊತೆಗೆ ಮಾರುಕಟ್ಟೆಯಲ್ಲಿ ಆಲೂಗಡ್ಡೆಗೂ ಸಿಕ್ಕಾಪಟ್ಟೆ ಡಿಮ್ಯಾಂಡ್ ಶುರುವಾಗಿದ್ದು 50 ಕೆಜಿ ಮೂಟೆ ಆಲೂಗಡ್ಡೆ 3000 ಸಾವಿರ ರೂಪಾಯಿಗೆ ಏರಿಕೆಯಾಗಿದೆ. ಇದೆ ಮೊದಲು ಆಲೂಗಡ್ಡೆಗೆ ದಾಖಲೆ ಬೆಲೆ ಬಂದಿರುವುದು ಎನ್ನುತ್ತಾರೆ ರೈತ ಮುಖಂಡರು.

    ಬಂಗಾರಪೇಟೆ ಎಪಿಎಂಸಿ ಮಾರುಕಟ್ಟೆಯಲ್ಲಿ ಬಿತ್ತನೆ ಆಲೂಗಡ್ಡೆ ಮಾರಾಟಕ್ಕೆ ಯಾರೊಬ್ಬರೂ ಅನುಮತಿ ಪಡೆದಿಲ್ಲ, ಎಲ್ಲರೂ ಜಲಂಧರ್ ಆಲೂಗಡ್ಡೆ ಎಂಬ ಹೆಸರಲ್ಲಿ ಬಿತ್ತನೆ ಆಲೂಗಡ್ಡೆ ಮಾರಾಟ ಮಾಡುತ್ತಾರೆ. ಮೊದಲು ಎರಡೂವರೆ ಸಾವಿರದಿಂದ ಮೂರು ಸಾವಿರಕ್ಕೆ ಒಂದು ಮೂಟೆ ಬಿತ್ತನೆ ಆಲೂಗಡ್ಡೆ ಸಿಗುತ್ತಿತ್ತು, ಆದರೆ ಕೊರೊನಾ ಎಫೆಕ್ಟ್‍ನಿಂದ ಈಗ ಏಕಾಏಕಿ ಜಲಂಧರ್ ಆಲೂಗಡ್ಡೆಗೆ ಐದಾರು ಸಾವಿರ ರೂಪಾಯಿ ಬೆಲೆ ಏರಿಕೆಯಾಗಿ, ಕೆಲವು ರೈತರು ಹಾಗೂ ಕೆಲವು ಸಂಘಟನೆಗಳು ಜಿಲ್ಲಾಡಳಿತಕ್ಕೆ ದೂರು ನೀಡಿದ್ದಾರೆ. ವ್ಯಾಪಾರಸ್ಥರೇ ಉದ್ದೇಶಪೂರ್ವಕವಾಗಿ ಹೆಚ್ಚಿನ ಬೆಲೆಗೆ ಬಿತ್ತನೆ ಆಲೂಗಡ್ಡೆ ಮಾರಾಟ ಮಾಡುತ್ತಿದ್ದಾರೆ ಎಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.

    1 ಮೂಟೆ ಬಿತ್ತನೆ ಆಲೂಗಡ್ಡೆಗೆ 3925 ರೂ ಬೆಲೆ ನಿಗದಿ ಮಾಡಿ, ಯಾರೂ ಹೆಚ್ಚಿನ ಬೆಲೆಗೆ ಬಿತ್ತನೆ ಆಲೂಗಡ್ಡೆ ಮಾರಾಟ ಮಾಡದಂತೆ ಸೂಚನೆ ನೀಡಿದ್ದಾರೆ. ಹೆಚ್ಚಿನ ಬೆಲೆಗೆ ಮಾರಾಟ ಮಾಡಿದ್ದೆ ಆದಲ್ಲಿ ರಶೀದಿ ಸಮೇತ ದೂರು ನೀಡುವಂತೆ ಮಾರುಕಟ್ಟೆಯಲ್ಲಿ ಬ್ಯಾನರ್ ಹಾಕಿದ್ದಾರೆ. ಆದರೆ ಈವರೆಗೂ ಯಾರೂ ದೂರು ನೀಡಲು ಮುಂದೆ ಬಂದಿಲ್ಲ. ಕಾರಣ ಮಾರುಕಟ್ಟೆಯಲ್ಲಿ ಬಿತ್ತನೆ ಆಲೂಗಡ್ಡೆಗೆ ಇರುವ ಡಿಮ್ಯಾಂಡ್ ರೀತಿಯಲ್ಲೇ ರೈತರು ಬೆಳೆದ ಆಲೂಗಡ್ಡೆ ಬೆಲೆ ಕೂಡಾ ಸರ್ವಕಾಲಿಕ ಏರಿಕೆ ಕಂಡಿದೆ. ಹಾಗಾಗಿ ದೂರು ಬಂದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಆಲೂಗಡ್ಡೆ ಹಾಗೂ ಬಿತ್ತನೆ ಆಲೂಗಡ್ಡೆ ಎರಡಕ್ಕೂ ಮಾರುಟಕ್ಟೆಯಲ್ಲಿ ಬೆಲೆ ಏರಿಕೆಯಾಗಿದೆ. ಸದ್ಯ ಬಿತ್ತನೆ ಆಲೂಗಡ್ಡೆ ಮಾರುವ ವ್ಯಾಪಾರಸ್ಥರು, ಬೆಳೆದ ರೈತರಿಗೂ ಬಂಪರ್ ಆಗಿದ್ದು ಇದು ಹೀಗೆ ಮುಂದುವರೆದರೆ ಜಿಲ್ಲೆಯ ರೈತರಷ್ಟೆ ಅಲ್ಲ ವ್ಯಾಪಾರಸ್ಥರಿಗೂ ಲಾಟರಿ ಹೊಡೆದಂತಾಗಿದೆ.

  • ನದಿ ನೀರುಪಾಲಾಗಿದ್ದ ರೈತನ ಮೃತದೇಹ 17 ದಿನಗಳ ಬಳಿಕ ಪತ್ತೆ

    ನದಿ ನೀರುಪಾಲಾಗಿದ್ದ ರೈತನ ಮೃತದೇಹ 17 ದಿನಗಳ ಬಳಿಕ ಪತ್ತೆ

    ಹಾವೇರಿ: ಧರ್ಮಾ ನದಿಯ ನೀರಿನಲ್ಲಿ ಕಾಲು ಜಾರಿ ಬಿದ್ದಿದ್ದ ರೈತನ ಮೃತದೇಹವು 17 ದಿನದ ಬಳಿಕ ಪತ್ತೆಯಾದ ಘಟನೆ ಹಾನಗಲ್ ತಾಲೂಕು ಶೃಂಗೇರಿ ಗ್ರಾಮದಲ್ಲಿ ನಡೆದಿದೆ.

    ಶೃಂಗೇರಿ ಗ್ರಾಮದ ಶಿವಪ್ಪ ಸೊಟ್ಟಕ್ಕನವರ (50) ನೀರುಪಾಲಾಗಿದ್ದ ರೈತ. ಧರ್ಮಾ ನದಿ ಪ್ರವಾಹಕ್ಕೆ ಸಿಲುಕಿದ್ದ ಶಿವಪ್ಪ ಅವರು ಆಗಸ್ಟ್ 6ರಂದು ನೀರುಪಾಲಾಗಿದ್ದರು. ಆದರೆ ಶುಕ್ರವಾರ ಮಧ್ಯಾಹ್ನ ಅವರ ಮೃತ ದೇಹವು ಪತ್ತೆಯಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

    ಶಿವಪ್ಪ ಅವರು ಆಗಸ್ಟ್ 6ರಂದು ಜಮೀನಿಗೆ ತೆರಳುತ್ತಿದ್ದರು. ಈ ವೇಳೆ ಧರ್ಮಾ ನದಿಯ ನೀರಿನ ಪ್ರಮಾಣ ಹೆಚ್ಚಾಗಿದ್ದರಿಂದ ಶಿವಪ್ಪ ಏಕಾಏಕಿ ಕಾಲು ಜಾರಿ ನದಿಗೆ ಬಿದ್ದಿದ್ದರು. ಅವರ ಮೃತದೇಹ ಪತ್ತೆಗಾಗಿ ಜಿಲ್ಲಾಡಳಿತ ಹಾಗೂ ಕುಟುಂಬಸ್ಥರು ಎಲ್ಲ ರೀತಿಯ ಪ್ರಯತ್ನ ಮಾಡಿದ್ದರೂ ಸಿಕ್ಕಿರಲಿಲ್ಲ.

    ನದಿಯ ನೀರಿನ ಮಟ್ಟವು ಕಡಿಮೆಯಾಗಿದ್ದರಿಂದ ಶುಕ್ರವಾರ ಶಿವಪ್ಪ ಅವರ ಮೃತದೇಹವು ನದಿಯಲ್ಲಿ ಪತ್ತೆಯಾಗಿತ್ತು. ಇದನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ತಹಶೀಲ್ದಾರ್ ಮತ್ತು ಹಾನಗಲ್ ಪೊಲೀಸರು, ಮೃತ ದೇಹವು ಶಿವಪ್ಪ ಅವರದ್ದೇ ಎಂದು ಖಚಿತ ಪಡಿಸಿದ್ದಾರೆ.

    ಈ ಸಂಬಂಧ ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಶಿವಪ್ಪ ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ತಹಶೀಲ್ದಾರ್ ಅವರು, ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ.

  • ಸುಪ್ರೀಂ ತೀರ್ಪಿನ ಬಳಿಕ ರಾಮಮಂದಿರ ನಿರ್ಮಾಣಕ್ಕೆ ಸುಗ್ರೀವಾಜ್ಞೆ ನಿರ್ಧಾರ: ಮೋದಿ

    ಸುಪ್ರೀಂ ತೀರ್ಪಿನ ಬಳಿಕ ರಾಮಮಂದಿರ ನಿರ್ಮಾಣಕ್ಕೆ ಸುಗ್ರೀವಾಜ್ಞೆ ನಿರ್ಧಾರ: ಮೋದಿ

    – ಕಾಂಗ್ರೆಸ್ ಚಿಂತನೆಯೇ ಒಂದು, ಸಂಸ್ಕೃತಿಯೇ ಒಂದು
    – ವರ್ಷದ ಮೊದಲ ದಿನವೇ ಮಾಧ್ಯಮಕ್ಕೆ ಸಂದರ್ಶನ
    – ಸಾಲಮನ್ನಾ ರಾಜಕೀಯ ನಾಟಕ
    – ಉರ್ಜಿತ್ ಪಟೇಲ್ 7-8 ತಿಂಗಳ ಮೊದಲೇ ರಾಜೀನಾಮೆ ನೀಡಿದ್ರು

    ನವದೆಹಲಿ: ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುವುದಿಲ್ಲ, ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂದು ಟೀಕೆಗೆ ಗುರಿಯಾಗುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಹೊಸ ವರ್ಷದ ಮೊದಲ ದಿನವೇ ಸಂದರ್ಶನ ನೀಡಿ ಸುದ್ದಿಯಾಗಿದ್ದಾರೆ. ತಮ್ಮ ಸಂದರ್ಶನಲ್ಲಿ ಕಾಂಗ್ರೆಸ್ ಸೇರಿದಂತೆ ಮಿತ್ರಪಕ್ಷಗಳ ಧೋರಣೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಹೊಸ ವರ್ಷದಂದೆ ಎಎನ್‍ಐ ಸುದ್ದಿಸಂಸ್ಥೆಗೆ ಸಂದರ್ಶನ ನೀಡುವ ಮೂಲಕ ಲೋಕಸಭಾ ಚುನಾವಣೆಗೆ ವೇದಿಕೆಯನ್ನು ಸಿದ್ಧಪಡಿಸಿಕೊಂಡಿದ್ದಾರೆ.

    95 ನಿಮಿಷದ ಸಂದರ್ಶನದಲ್ಲಿ ಮೋದಿ ಹೇಳಿದ ಪ್ರಮುಖ ವಿಚಾರಗಳು ಇಲ್ಲಿದೆ

    1. ಕಾಂಗ್ರೆಸ್ ವಿರುದ್ಧ ಟೀಕೆ:
    ದೇಶದ ಮೊದಲ ಕುಟುಂಬ ಎಂದು ಕರೆದುಕೊಂಡಿದ್ದ ಕುಟುಂಬ ಸದಸ್ಯರು ಇಂದು ಜಾಮೀನಿನ ಮೇಲೆ ಹೊರಗಿದ್ದಾರೆ. ಅವರ ಮೇಲೆ ಆರ್ಥಿಕ ಅಪರಾಧದ ಪ್ರಕರಣಗಳು ದಾಖಲಾಗಿದೆ. ಆದರೆ ಅವರಿಗೆ ಬೆಂಬಲವಾಗಿರುವ ಕೆಲವರು ಅದನ್ನು ಮರೆಮಾಚಲು ಪ್ರಯತ್ನಿಸುತ್ತಿದ್ದಾರೆ. ಕಾಂಗ್ರೆಸ್ ಸಂಸ್ಕೃತಿಯನ್ನು ತೊಲಗಿಸುವುದು ನಮ್ಮ ಗುರಿಯಾಗಿದ್ದು, ಇದಕ್ಕಾಗಿಯೇ ಕಾರ್ಯನಿರ್ವಸುತ್ತಿದ್ದೇವೆ. ದೇಶದಲ್ಲಿ ಕಾಂಗ್ರೆಸ್ ಸಂಸ್ಕೃತಿ ಇಲ್ಲವಾಗಿಸುವುದೇ ನಮ್ಮ ಉದ್ದೇಶ. ಕಾಂಗ್ರೆಸ್ ಚಿಂತನೆಯೇ ಒಂದು, ಸಂಸ್ಕೃತಿಯೇ ಒಂದು ಎಂದು ಹೇಳುವ ಮೂಲಕ ಕಾಂಗ್ರೆಸ್ ಮುಕ್ತ ಭಾರತ ಎಂಬುವುದಕ್ಕೆ ಹೊಸ ಅರ್ಥ ನೀಡಿದರು.

    2. ಅಯೋಧ್ಯೆ ರಾಮಮಂದಿರ:
    ಸುಪ್ರೀಂ ಕೋರ್ಟ್ ಅಯೋಧ್ಯೆ ಕುರಿತು ತೀರ್ಪು ನೀಡಿದ ಬಳಿಕ ಸರ್ಕಾರ ಮುಂದಿನ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ. ನ್ಯಾಯಾಲಯದಲ್ಲಿ ರಾಮಮಂದಿರಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ವಿಳಂಬವಾಗಲು ಕಾಂಗ್ರೆಸ್ ವಕೀಲರು ಕಾರಣ. ರಾಮಮಂದಿರ ಬಿಜೆಪಿ ಭಾವಾತ್ಮಕ ವಿಚಾರವಾಗಿದ್ದು ಅದನ್ನು ನಾವು ನಿರ್ಲಕ್ಷ್ಯ ವಹಿಸಿಲ್ಲ. ರಾಮಮಂದಿರವನ್ನು ಸಂವಿಧಾನದ ವ್ಯಾಪ್ತಿಯಲ್ಲಿ ಇತ್ಯರ್ಥ ಪಡಿಸುವುದಾಗಿ ಬಿಜೆಪಿ ಪ್ರಾಣಾಳಿಕೆಯಲ್ಲಿ ತಿಳಿಸಿದೆ. ಹೀಗಾಗಿ ನಾವು ನ್ಯಾಯಾಂಗದಲ್ಲಿ ನಂಬಿಕೆ ಇಟ್ಟಿದ್ದೇವೆ. ಸುಪ್ರೀಂ ಕೋರ್ಟ್ ತೀರ್ಪಿನ ನಂತರವಷ್ಟೇ ರಾಮಮಂದಿರ ನಿರ್ಮಾಣಕ್ಕೆ ಸುಗ್ರೀವಾಜ್ಞೆಯನ್ನು ಹೊರಡಿಸುವ ನಿರ್ಧಾರವನ್ನು ಕೈಗೊಳ್ಳಲಾಗುವುದು.

    3. ಪಂಚರಾಜ್ಯಗಳ ಚುನಾವಣೆ:
    ಪಂಚರಾಜ್ಯ ಚುನಾವಣೆಗಳು ಇಬ್ಬರ ಮೇಲೆ ಮಾತ್ರ ನಡೆದಿಲ್ಲ. ಬಿಜೆಪಿ ವಿಶ್ವದ ಅತೀ ದೊಡ್ಡ ಪಕ್ಷವಾಗಿದ್ದು, ಕಾರ್ಯಕರ್ತರ ಪಕ್ಷವಾಗಿದೆ. ಛತ್ತೀಸ್‍ಗಢದಲ್ಲಿ ಆಡಳಿತ ವಿರೋಧ ಅಲೆ ಸ್ಪಷ್ಟವಾಗಿ ಕಾಣಿಸಿಕೊಂಡಿದೆ. 15 ವರ್ಷಗಳ ಆಡಳಿತ ವಿರೋಧಿ ಅಲೆಯೇ ನಮ್ಮ ಸೋಲಿಗೆ ಕಾರಣವಾಗಿದೆ. ಆದ್ದರಿಂದ ನಾವು ಆಡಳಿತ ವಿರೋಧಿ ಅಲೆ ವಿರುದ್ಧ ಹೋರಾಟ ನಡೆಸಿದ್ದೇವೆ. ಇನ್ನುಳಿದ ಎರಡು ರಾಜ್ಯಗಳಲ್ಲಿ ಸಮ್ಮಿಶ್ರ ಸರ್ಕಾರ ರಚನೆ ಆಗಿದೆ. 2019 ಲೋಕಸಭಾ ಚುನಾವಣೆ ಜನತಾ ಹಾಗೂ ಮಹಾಘಟಬಂಧನ್ ನಡುವೆ ನಡೆಯುತ್ತದೆ.

    4. ಸಾಲಮನ್ನಾ ರಾಜಕೀಯ ನಾಟಕ:
    ಸಾಲಮನ್ನಾ ರಾಜಕೀಯ ನಾಟಕವಾಗಿದ್ದು, ರೈತರು ಹೆಚ್ಚು ಖಾಸಗಿ ಸಾಲ ಪಡೆಯುತ್ತಾರೆ. ಕಾಂಗ್ರೆಸ್ ಪಕ್ಷ ಎಲ್ಲಾ ರೈತರ ಸಾಲಮನ್ನಾ ಮಾಡಿಲ್ಲ. ಕೇವಲ ಸುಳ್ಳನ್ನೇ ಪ್ರಚಾರ ಮಾಡುತ್ತಿದ್ದಾರೆ. ರೈತರಿಗೆ ನೀರು, ಉತ್ತಮ ಮಾರುಕಟ್ಟೆ, ಉತ್ಪನ್ನಗಳಿಗೆ ಸರಿಯಾದ ಬೆಲೆ ಸಿಗುವಂತೆ ಮಾಡಿ ಸಮಗ್ರ ಅಭಿವೃದ್ಧಿ ಆಗುವಂತೆ ಮಾಡುವತ್ತ ನಮ್ಮ ಕಾರ್ಯ ಮುಂದುವರಿದಿದೆ. ದೇಶದ ಸಂಚಾರ ವ್ಯವಸ್ಥೆಯಲ್ಲಿ ಹೊಸ ನಾಂದಿ ಹಾಡಿದ್ದೇವೆ. ಇದರಿಂದ ಉತ್ಪನ್ನಗಳ ಲಭ್ಯತೆಯ ವೇಗ ಹೆಚ್ಚಾಗುತ್ತದೆ. ರೈತರು ಸಾಲವೇ ಪಡೆಯದಂತೆ ಮಾಡುವುದು ನಮ್ಮ ಕಾರ್ಯದ ಉದ್ದೇಶ ಎಂದರು.

    5. ಆರ್ಥಿಕ ಅಪರಾಧಿಗಳು ಭಾರತಕ್ಕೆ ವಾಪಸ್:
    ದೇಶ ಬಿಟ್ಟು ತೆರಳಿದ ಎಲ್ಲಾ ಆರ್ಥಿಕ ಅಪರಾಧಿಗಳನ್ನು ವಾಪಸ್ ಕರೆತರಲಾಗುವುದು. ಈ ಸಂಬಂಧ ಕಾನೂನು ಪ್ರಕ್ರಿಯೆ ಮತ್ತು ರಾಜತಾಂತ್ರಿಕ ಪ್ರಕ್ರಿಯೆಗಳು ನಡೆಯುತ್ತಿದೆ. ಈಗಾಗಲೇ ತನಿಖಾ ಸಂಸ್ಥೆಗಳು ಅಕ್ರಮ ಎಸಗಿದವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿವೆ. ಇಂದು ಬಾರದೇ ಇದ್ದರೂ ನಾಳೆ ಎಲ್ಲ ಆರ್ಥಿಕ ಅಪರಾಧಿಗಳನ್ನು ಕರೆತರಲಾಗುವುದು.

    ಭ್ರಷ್ಟಚಾರದ ವಿರುದ್ಧ ಬಿಜೆಪಿಯ ಹೋರಾಟ ಮುಂದುವರೆಯುತ್ತದೆ. ಜಿಎಸ್‍ಟಿ ತೆರಿಗೆ ವ್ಯವಸ್ಥೆಯನ್ನು ಸರಳಿಕೃತಗೊಳಿಸಿದೆ. ತೆರಿಗೆ ವ್ಯವಸ್ಥೆಯನ್ನು ಕ್ರಮಬದ್ಧಗೊಳಿಸಿದೆ. ದೇಶದ ಮಧ್ಯಮ ವರ್ಗದ ಆಕಾಂಕ್ಷೆಗಳಿಗೆ ನಾವು ಈ ಮೂಲಕ ರೆಕ್ಕೆಗಳನ್ನು ನೀಡಿದ್ದೇವೆ. ಸರ್ಕಾರದ ಹೆಚ್ಚಿನ ಯೋಜನೆಗಳು ಮಧ್ಯಮ ವರ್ಗದ ಜನಕ್ಕೆ ಹೆಚ್ಚು ಲಾಭ ನೀಡಿದೆ.

    6. ತ್ರಿವಳಿ ತಲಾಖ್:
    ಹಲವು ಮುಸ್ಲಿಮ್ ರಾಷ್ಟ್ರಗಳು ತ್ರಿವಳಿ ತಲಾಖ್ ನಿಷೇಧಿಸಿವೆ. ಪಾಕಿಸ್ತಾನದಲ್ಲೂ ತಲಾಖ್ ನಿಷೇಧಗೊಂಡಿದೆ. ಇಲ್ಲಿ ಪ್ರಮುಖವಾಗಿ ಇರುವಂತಹದ್ದು ಲಿಂಗ ಸಮಾನತೆ ಮತ್ತು ಸಾಮಾಜಿಕ ನ್ಯಾಯ. ಇದರಲ್ಲಿ ಧಾರ್ಮಿಕ ನಂಬಿಕೆ ವಿಚಾರ ಬರುವುದಿಲ್ಲ. ಹೀಗಾಗಿ ಈ ವಿಚಾರವನ್ನು ಪ್ರತ್ಯೇಕವಾಗಿ ನೋಡಬೇಕು.

    7. ಶಬರಿಮಲೆ ವಿವಾದ:
    ಕೆಲವೊಂದು ದೇವಾಲಯಗಳು ತನ್ನದೇ ಸಂಪ್ರದಾಯವನ್ನು ಪಾಲಿಸಿಕೊಂಡು ಬಂದಿದೆ. ಕೆಲವು ದೇವಾಲಯಗಳಲ್ಲಿ ಪುರುಷರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ಶಬರಿಮಲೆ ಪ್ರಕರಣ ಬಂದಾಗ ಮಹಿಳಾ ನ್ಯಾಯಾಧೀಶರು ಕೆಲವು ಅಭಿಪ್ರಾಯವನ್ನು ವ್ಯಕ್ತಪಡಿಸಿ ಸಲಹೆಯನ್ನು ನೀಡಿದ್ದಾರೆ. ಹೀಗಾಗಿ ಈ ವಿಚಾರ ಚರ್ಚೆಯಾಗಬೇಕು.

    8. ನೋಟು ನಿಷೇಧ:
    2016ರಲ್ಲಿ ನಮ್ಮ ಸರ್ಕಾರ ನೀಡಿದ ಶಾಕ್ ಎನ್ನುವ ಆರೋಪವನ್ನು ತಿರಸ್ಕರಿಸಿದ ಅವರು, ಇದು ಪೂರ್ವನಿರ್ಧಾರದಂತೆ ಹೇಳುವ ಜಾತಕವಲ್ಲ. ನಾವು ಎರಡು ವರ್ಷದ ಹಿಂದೆ ಜನರಿಗೆ ಎಚ್ಚರಿಕೆ ನೀಡುತ್ತಾ ಬಂದಿದ್ದೇವೆ. ಕಪ್ಪು ಹಣ ಇರುವ ಮಂದಿಗೆ ದಂಡವನ್ನು ಪಾವತಿಸಿ ಠೇವಣಿ ಇಡುವಂತೆ ಹೇಳಿದ್ದೇವು. ಹೀಗಾಗಿ ಹಲವು ಮಂದಿ ಸ್ವಯಂಪ್ರೇರಿತವಾಗಿ ದಂಡವನ್ನು ಪಾವತಿಸಿದ್ದಾರೆ.

    9. ಉರ್ಜಿತ್ ಪಟೇಲ್ ರಾಜೀನಾಮೆ:
    ಆರ್‌ಬಿಐ ಗವರ್ನರ್ ಅಗಿದ್ದ ಉರ್ಜಿತ್ ಪಟೇಲ್ ತನ್ನ ವೈಯಕ್ತಿಕ ಕಾರಣಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಮೊದಲೇ ಹೇಳಿದ್ದರು. ಮೊದಲ ಬಾರಿಗೆ ಈ ವಿಚಾರವನ್ನು ನಾನು ಈಗ ಹೇಳುತ್ತಿದ್ದು, 7 -8 ತಿಂಗಳ ಹಿಂದೆಯೇ ಅವರು ರಾಜೀನಾಮೆ ನೀಡುತ್ತೇನೆ ಎಂದು ಹೇಳುತ್ತಾ ಬಂದಿದ್ದರು. ಅಷ್ಟೇ ಅಲ್ಲದೇ ಬರಹದಲ್ಲೇ ರಾಜೀನಾಮೆಯನ್ನು ನೀಡಿದ್ದರು. ಇದರಲ್ಲಿ ಯಾವುದೇ ರಾಜಕೀಯ ಒತ್ತಡ ಇಲ್ಲ. ಆರ್‌ಬಿಐ ಗವರ್ನರ್ ಆಗಿ ಉರ್ಜಿತ್ ಪಟೇಲ್ ಉತ್ತಮ ನಿರ್ವಹಣೆ ಮಾಡಿದ್ದಾರೆ.

    10. ಸರ್ಜಿಕಲ್ ಸ್ಟ್ರೈಕ್:
    ಪಾಕಿಸ್ತಾನದ ವಿರುದ್ಧ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಉರಿ ದಾಳಿಗೆ ತಿರುಗೇಟು ನೀಡಲು ನಡೆಸಿದ್ದು, ಈ ವೇಳೆ ಭಾರತೀಯ ಯೋಧರಿಗೆ ಬೆಳಗಾಗುವ ಮುನ್ನ ವಾಪಸ್ ಬನ್ನಿ ಎಂದು ಮಾತ್ರ ತಿಳಿಸಿದ್ದೆ. ಕಾರ್ಯಾಚರಣೆ ಯಶಸ್ವಿಯಾದರೂ, ವಿಫಲವಾದರೂ ದೇಶದ ಸೈನಿಕರಿಗೆ ಆಪಾಯ ಆಗಬಾರದು ಎಂಬುದು ನನ್ನ ಉದ್ದೇಶವಾಗಿತ್ತು. ಅಂದು ನಾನು ಇಡೀ ರಾತ್ರಿ ಪ್ರತಿ ಕ್ಷಣ ಕ್ಷಣದ ಮಾಹಿತಿ ಪಡೆಯುತ್ತಿದ್ದೆ. ಬೆಳಗಾಗಿ 1 ಗಂಟೆಯಾದ ಬಳಿಕ ಸೈನ್ಯದಿಂದ ಸಂದೇಶ ಬಂತು. ಆ ವೇಳೆಗೆ ಎಲ್ಲಾ ಸೈನಿಕರು ಕ್ಯಾಪ್ ಸೇರಿದ್ದರು. ಬಳಿಕವೇ ನನಗೆ ಸಮಾಧಾನ ಆಗಿತ್ತು. ಸರ್ಜಿಕಲ್ ಸ್ಟ್ರೈಕ್ ಬಗ್ಗೆ ದೇಶದ ಜನತೆಗೆ ತಿಳಿಸುವ ಮೊದಲೇ ಪಾಕಿಸ್ತಾನಕ್ಕೆ ತಿಳಿಸಿದ್ದೇವು. ಆದರೆ ಈ ಬಗ್ಗೆ ದೇಶದ ಕೆಲ ಜನ ಸಂದೇಹ ವ್ಯಕ್ತಪಡಿಸಿದ್ದು ದುರಾದೃಷ್ಟಕರ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv