Tag: Forestry

  • ರಸ್ತೆ ಮಧ್ಯೆ ಹಿಂಡು ಹಿಂಡಾಗಿ ಕಾಡುಕೋಣಗಳು ಪ್ರತ್ಯಕ್ಷ – ವಿಡಿಯೋ ನೋಡಿ

    ರಸ್ತೆ ಮಧ್ಯೆ ಹಿಂಡು ಹಿಂಡಾಗಿ ಕಾಡುಕೋಣಗಳು ಪ್ರತ್ಯಕ್ಷ – ವಿಡಿಯೋ ನೋಡಿ

    ಚಿಕ್ಕಮಗಳೂರು: ಜಿಲ್ಲೆಯ ತಿಪ್ಪೇನಹಳ್ಳಿ ಎಸ್ಟೇಟ್ ಬಳಿ ರಸ್ತೆ ಮಧ್ಯೆ ಹಿಂಡು ಹಿಂಡಾಗಿ ಕಾಡುಕೋಣಗಳು ಪ್ರತ್ಯಕ್ಷವಾಗಿವೆ.

    ಚಿಕ್ಕಮಗಳೂರಿನಿಂದ ಮುಳ್ಳಯ್ಯನಗಿರಿ ಮಾರ್ಗದ ತೋಟಗಳ ಬಳಿ ಕೋಣಗಳು ಹಿಂಡು ಹಿಂಡಾಗಿ ಪ್ರತ್ಯಕ್ಷವಾಗಿದ್ದು, ಪ್ರವಾಸಿಗರು ಫುಲ್ ಖುಷಿಯಾಗಿದ್ದಾರೆ. ಸುಮಾರು 20ಕ್ಕೂ ಹೆಚ್ಚು ಕೋಣಗಳ ಹಿಂಡು ಕಂಡು ಪ್ರವಾಸಿಗರು ಆಶ್ಚರ್ಯ ಪಟ್ಟಿದ್ದು, ಪ್ರವಾಸಿಗರೊಬ್ಬರು ಕಾಡು ಕೋಣಗಳು ಹೋಗುತ್ತಿದ್ದ ದೃಶ್ಯವನ್ನು ತಮ್ಮ ಮೊಬೈಲಿನಲ್ಲಿ ಸೆರೆ ಹಿಡಿದಿದ್ದಾರೆ.

    ಮುಳ್ಳಯ್ಯನ ಗಿರಿ, ದತ್ತಪೀಠ, ಸೀತಾಳಯ್ಯನಗಿರಿ ಮಾರ್ಗದಲ್ಲಿ ಈ ಕೋಣಗಳು ಕಂಡು ಬಂದಿವೆ. ಕಾಡು ಕೋಣಗಳು ಸಾಲಾಗಿ ಒಂದರಂತೆ ಒಂದು ರಸ್ತೆ ದಾಟಿ ಕಾಫಿ ತೋಟಕ್ಕೆ ಹೋಗಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

    ಅಪರೂಪ ಎಂಬಂತೆ ಕಾಡುಕೋಣಗಳ ಹಿಂಡನ್ನು ನೋಡಿ ಪ್ರವಾಸಿಗರು ಸಂತಸದಿಂದ ಕಣ್ತುಂಬಿಕೊಂಡಿದ್ದಾರೆ. ಆದರೆ ಕೋಣಗಳನ್ನ ಕಂಡು ಸುತ್ತಮುತ್ತಲಿನ ಗ್ರಾಮಸ್ಥರು ಆತಂಕಗೊಂಡಿದ್ದಾರೆ.

    https://www.youtube.com/watch?v=pZJj7J9QNiQ

  • ಕಾಡು ಪ್ರಾಣಿಗಳಿಗೆ ಬೇಸತ್ತು ಬಂಡೀಪುರಕ್ಕೆ ಬೆಂಕಿ

    ಕಾಡು ಪ್ರಾಣಿಗಳಿಗೆ ಬೇಸತ್ತು ಬಂಡೀಪುರಕ್ಕೆ ಬೆಂಕಿ

    ಚಾಮರಾಜನಗರ: ಕಾಡು ಪ್ರಾಣಿಗಳಿಗೆ ಬೇಸತ್ತು ಬಂಡೀಪುರ ಅರಣ್ಯಕ್ಕೆ ಬೆಂಕಿ ಹಾಕಿರೋದಾಗಿ ಬಂಧಿತ ಆರೋಪಿಗಳು ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಕಳ್ಳೀಪುರದ ಅರುಣ್, ಚೌಡಹಳ್ಳಿಯ ಹನುಮಂತಯ್ಯ ಮತ್ತು ಗೋಪಾಲಯ್ಯ ಬಂಧಿತರು. ಅರಣ್ಯಾಧಿಕಾರಿಗಳ ವಿಚಾರಣೆ ವೇಳೆ ಬಂಧಿತರು ತಪ್ಪೊಪ್ಪಿಕೊಂಡಿದ್ದಾರೆ. ಇತ್ತೀಚೆಗೆ ಬಂಡೀಪುರ ಅರಣ್ಯದಂಚಿನ ಚೌಡಹಳ್ಳಿ, ಕಲೀಗೌಡನಹಳ್ಳಿ, ಹಂಗಳ ಮೊದಲಾದ ಕಡೆ ಹುಲಿ, ಚಿರತೆ, ಆನೆ ಗ್ರಾಮದತ್ತ ಮುಖ ಮಾಡಿದ್ದವು. ಸತತ ನಾಲ್ಕೈದು ದಿನ ಕಾರ್ಯಚರಣೆ ನಡೆಸಿದ್ರೂ ಆತಂಕ ಮೂಡಿಸಿದ್ದ ಹುಲಿಯನ್ನು ಸೆರೆಹಿಡಿಯುವಲ್ಲಿ ಅರಣ್ಯಾಧಿಕಾರಿಗಳು ವಿಫಲವಾಗಿದ್ದರು. ಹುಲಿಗೆ ಹೆದರಿದ ಕಾಡಂಚಿನ ಗ್ರಾಮಸ್ಥರು ಅರಣ್ಯಕ್ಕೆ ಬೆಂಕಿ ಹಾಕಿದ್ದಾರೆ.

    ಬೆಂಕಿ ಬಿದ್ದ ಜಾಗದ ಸ್ಯಾಟಲೈಟ್ ಚಿತ್ರಗಳಲ್ಲಿ ಇದು ಮಾನವ ನಿರ್ಮಿತ ಎನ್ನುವುದು ಬೆಳಕಿಗೆ ಬಂದಿತ್ತು. ಅಷ್ಟೇ ಅಲ್ಲದೇ ಗುಂಪು ಗುಂಪುಗಳಾಗಿ ಬೆಂಕಿ ಬಿದ್ದಿರೋದ್ರಿಂದ ಅನುಮಾನಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಅರಣ್ಯಾಧಿಕಾರಿಗಳು ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.

    2,500 ಎಕರೆ ಅರಣ್ಯ ಪ್ರದೇಶ ಮಾತ್ರ ಕಾಡ್ಗಿಚ್ಚಿನಿಂದ ಭಸ್ಮವಾಗಿದೆ ಎಂಬ ಸುಳ್ಳು ಮಾಹಿತಿಯನ್ನು ಅರಣ್ಯ ಇಲಾಖೆ ಸರ್ಕಾರಕ್ಕೆ ನೀಡಿದೆ. ಅರಣ್ಯ ನಾಶದ ಬಗ್ಗೆ ಸಮೀಕ್ಷೆ ನಡೆಸಿರುವ ಇಸ್ರೋ ಬೆಂಕಿಗೆ ಭಸ್ಮವಾದ ಒಟ್ಟು ಪ್ರದೇಶ 10,920 ಎಕರೆ (4,420 ಹೆಕ್ಟೇರ್) ಎಂದು ತಿಳಿಸಿದೆ. ಬೆಂಕಿ ನಂದಿಸಲು ವಿಫಲವಾದ ಅರಣ್ಯಾಧಿಕಾರಿಗಳು ಸುಳ್ಳು ಮಾಹಿತಿ ನೀಡಿದ್ದಾರೆ ಎನ್ನಲಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಂಡೀಪುರ ಉಳಿಸಿ – ಅಭಿಮಾನಿಗಳಲ್ಲಿ ‘ದಚ್ಚು’ ಮನವಿ

    ಬಂಡೀಪುರ ಉಳಿಸಿ – ಅಭಿಮಾನಿಗಳಲ್ಲಿ ‘ದಚ್ಚು’ ಮನವಿ

    ಬೆಂಗಳೂರು/ಚಾಮರಾಜನಗರ: ಬಂಡೀಪುರ ಹುಲಿರಕ್ಷಿತಾರಣ್ಯ ಉಂಟಾಗಿರುವ ಕಾಡ್ಗಿಚ್ಚಿನಿಂದ ಸಾಕಷ್ಟು ವನ್ಯಜೀವಿ ಸಂಕುಲಕ್ಕೆ ತೊಂದರೆಯಾಗಿದ್ದು, ಬೆಂಕಿ ನಂದಿಸಲು ಸ್ವಯಂ ಸೇವಕರು ಸರ್ಕಾರದ ಇಲಾಖೆಯೊಂದಿಗೆ ಕೈಜೋಡಿಸಬೇಕು ಎಂದು ನಟ ದರ್ಶನ್ ಅಭಿಮಾನಿಗಳಲ್ಲಿ ವಿನಂತಿ ಮಾಡಿದ್ದಾರೆ.

    ಕಳೆದ 5 ದಿನಗಳಿಂದ ಬಂಡೀಪುರ ಅಭಯಾರಣ್ಯದಲ್ಲಿ ಪದೇ ಪದೇ ಕಾಡ್ಗಿಚ್ಚು ಕಾಣಿಸಿಕೊಳ್ಳುತ್ತಿದ್ದು, ಅಗ್ನಿಶಾಮಕ ಇಲಾಖೆ ಸೇರಿದಂತೆ ಹಲವು ಸ್ವಯಂ ಸೇವಕರು ಈಗಾಗಲೇ ಬೆಂಕಿ ನಂದಿಸುವ ಕಾರ್ಯ ಮಾಡುತ್ತಿದ್ದಾರೆ. ಸತತ ಪ್ರಯತ್ನ ನಡುವೆಯೂ ಬೆಂಕಿ ನರ್ತನ ಮುಂದುವರಿದಿದ್ದು, ಅನೇಕ ಪ್ರಾಣಿಗಳು ಬೆಂಕಿಯಲ್ಲಿ ಸಿಕ್ಕಿ ಭಸ್ಮವಾಗಿದೆ. ಈ ಕುರಿತಂತೆ ದರ್ಶನ ಅವರು ಕೂಡ ಫೋಟೋ ಟ್ವೀಟ್ ಮಾಡಿದ್ದು, ಮೊಲವೊಂದು ಸುಟ್ಟು ಕರಕಲಾಗಿರುವ ದೃಶ್ಯವನ್ನು ಕಾಣಬಹುದಾಗಿದೆ.

    ಸಫಾರಿ ಬಂದ್:
    ಇಂದು ಬೆಳಗಿನ ವೇಳೆ ನಿಯಂತ್ರಣಕ್ಕೆ ಬಂದಿದ್ದ ಬೆಂಕಿ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತಿದೆ. ಕಳೆದ ಐದು ದಿನಗಳಿಂದ ಬಂಡೀಪುರದ ಗೋಪಾಲಸ್ವಾಮಿ ಬೆಟ್ಟ ಮತ್ತು ಕುಂದಕೆರೆ ವಲಯದ ಸಾವಿರಾರು ಎಕರೆ ಅರಣ್ಯ ಪ್ರದೇಶ ನಾಶವಾಗಿದೆ. ಇದೀಗ ಮತ್ತೆ ಗೋಪಾಲಸ್ವಾಮಿ ಬೆಟ್ಟದ ವಲಯದಲ್ಲಿ ಬೆಂಕಿ ಕಾಣಿಸಿಕೊಂಡು ಭಾರೀ ಅನಾಹುತವನ್ನೇ ಸೃಷ್ಟಿಸಿದೆ. ಪರಿಣಾಮ ಅರಣ್ಯದಲ್ಲಿ ಒಂದು ವಾರದ ಕಾಲ ಸಫಾರಿಯನ್ನು ಸ್ಥಗಿತಗೊಳಿಸಲಾಗಿದೆ.

    ಹಸಿರಿನಿಂದ ಕಂಗೊಳಿಸುತ್ತಿದ್ದ ಬಂಡೀಪುರ ಹುಲಿರಕ್ಷಿತಾರಣ್ಯ ಇದೀಗ ಬೆಂದ ಕಾಡಾಗಿದ್ದು, ಹುಲಿ, ಕರಡಿ, ಚಿರತೆ, ಆನೆ, ಜಿಂಕೆ ಮೊದಲಾದ ವನ್ಯಪ್ರಾಣಿಗಳ ಆವಾಸ ಸ್ಥಾನವಾದ ಬಂಡೀಪುರ ಇದೀಗ ಅಕ್ಷರಶ: ಸ್ಮಶಾನದಂತೆ ಗೋಚರಿಸುತ್ತಿದೆ. ಸ್ಥಳೀಯರ ಪ್ರಕಾರ ಸುಮಾರು ಹತ್ತು ಸಾವಿರ ಎಕರೆ ಅರಣ್ಯ ಪ್ರದೇಶ ಸುಟ್ಟು ಕರಕಲಾಗಿದ್ದಾರೆ, ಅಪರೂಪದ ಸರಿಸೃಪಗಳು ಕೂಡ ಬೆಂಕಿಯ ಕೆನ್ನಾಲಿಗೆ ಭಸ್ಮವಾಗಿದೆ.

    ಕಳೆದ ಐದು ದಿನಗಳಿಂದ ನೂರಾರು ಅರಣ್ಯ ಸಿಬ್ಬಂದಿ, ಅಗ್ನಿಶಾಮಕದಳ ಹಾಗು ಸ್ವಯಂ ಸೇವಕರ ಸತತ ಕಾರ್ಯಾಚರಣೆ ಫಲವಾಗಿ ಬೆಂಕಿ ಹತೋಟಿ ಪ್ರಯತ್ನಿಸುತ್ತಿದ್ದಾರೆ. ಆದರೆ ಗಾಳಿಯ ರಭಸಕ್ಕೆ ವ್ಯಾಪಕವಾಗಿ ಹರಡುತ್ತಿದೆ.

    ಅಧಿಕ ನಷ್ಟ: ಬೆಂಕಿಯ ನರ್ತನಕ್ಕೆ ಆಪಾರ ಪ್ರಮಾಣದ ವನ್ಯ ಸಂಪತ್ತು ನಾಶವಾಗಿ ನಷ್ಟ ಅನುಭವಿಸಿದೆ. ಇದರೊಂದಿಗೆ ಸಫಾರಿಗೆ ಆಗಮಿಸುತ್ತ ಸಾವಿರಾರು ಪ್ರವಾಸಿಗರಿಗೂ ನಿರಾಸೆಯಾಗಿದ್ದು, ಸಫಾರಿ ನಿಷೇಧ ಮಾಡಿರುವುದರಿಂದ ಅರಣ್ಯ ಇಲಾಖೆಗೆ ಲಕ್ಷಾಂತರ ರೂಪಾಯಿ ಆದಾಯ ಕೂಡ ನಷ್ಟವಾಗಿದೆ.

    ಕಳೆದ ವರ್ಷ ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಯಾವುದೇ ಬೆಂಕಿ ಅವಘಡ ಸಂಭವಿಸಿರಲಿಲ್ಲ. ಆದರೆ ಈ ವರ್ಷದ ಬೇಸಿಗೆ ಆರಂಭದಲ್ಲೇ ಕಾಡ್ಗಿಚ್ಚಿಗೆ ಸಾವಿರಾರು ಎಕರೆ ಅರಣ್ಯ ಪ್ರದೇಶ ಸುಟ್ಟು ಕರಕಲಾಗಿರುವುದು ಆತಂಕ ಮೂಡಿಸಿದೆ.

     

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗರ್ಭಿಣಿಯನ್ನ ಹೊತ್ತು ಆಸ್ಪತ್ರೆಗೆ ಸಾಗಿಸ್ತಿದ್ದಾಗ ಅರಣ್ಯದಲ್ಲೇ ಹೆರಿಗೆ: ತಾಯಿ, ಮಗು ಆರೋಗ್ಯ

    ಗರ್ಭಿಣಿಯನ್ನ ಹೊತ್ತು ಆಸ್ಪತ್ರೆಗೆ ಸಾಗಿಸ್ತಿದ್ದಾಗ ಅರಣ್ಯದಲ್ಲೇ ಹೆರಿಗೆ: ತಾಯಿ, ಮಗು ಆರೋಗ್ಯ

    ಹೈದರಾಬಾದ್: ರಸ್ತೆ ಸಂಪರ್ಕವಿಲ್ಲದ ಗ್ರಾಮದಿಂದ ಕಾಲ್ನಡಿಗೆ ಮೂಲಕ ಆಸ್ಪತ್ರೆಗೆ ಸಾಗಿಸುವ ವೇಳೆ ಗರ್ಭಿಣಿಗೆ ಹೆರಿಗೆಯಾಗಿದ್ದು, ತಾಯಿ-ಮಗು ಆರೋಗ್ಯವಾಗಿದ್ದಾರೆ.

    ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಧಿಕಾರಿಗಳ ಹಾಗೂ ಸ್ಥಳೀಯ ಜನಪ್ರತಿನಿಧಿಗಳ ನಿಷ್ಕಾಳಜಿಯಿಂದ ಇಂತಹ ಘಟನೆ ಸಂಭವಿಸುತ್ತಿವೆ ಎಂದು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.

    ವಿಡಿಯೋದಲ್ಲಿ ಏನಿದೆ?
    ಆಂಧ್ರ ಪ್ರದೇಶದ ವಿಜಯನಗರಂ ಜಿಲ್ಲೆಯ ಮಾಸಿಕ ವಾಲಾಸ ಚಿಂತಾಲಾ ಸಾಲುರ್ ಗ್ರಾಮದ ಮುತ್ತಮ್ಮ ಎಂಬವರಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಅವರ ಪತಿ ಹಾಗೂ ಸಂಬಂಧಿಕರು, ಬಿದಿರಿನ ಕಟ್ಟಿಗೆಗೆ ಸೀರೆಯನ್ನು ಕಟ್ಟಿ, ಜೋಳಿಗೆ ಮಾಡಿ ಮುತ್ತಮ್ಮ ಅವರನ್ನು ಕೂರಿಸಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು. ಗರ್ಭಿಣಿಗೆ ಏನು ಸಮಸ್ಯೆ ಆಗದಂತೆ ಎಚ್ಚರಿಕೆ ವಹಿಸಲು ಗ್ರಾಮದ ಕೆಲವು ಪುರುಷರು ಹಾಗೂ ಮಹಿಳೆಯರು ಆಸ್ಪತ್ರೆಗೆ ಹೊರಟಿದ್ದರು. ಇದನ್ನು ಓದಿ: ಅಂಬುಲೆನ್ಸ್ ಸೇವೆಗೆ ಗರ್ಭಿಣಿಯನ್ನ 12 ಕಿ.ಮೀ. ಹೊತ್ತು ನಡೆದ ಗ್ರಾಮಸ್ಥರು: ಮಗು ಸಾವು

    ಅರಣ್ಯ ಪ್ರದೇಶದ ಕಲ್ಲು ಮಣ್ಣು ಮಿಶ್ರಿತ ಗುಡ್ಡ ಬೆಟ್ಟದ ದಾರಿಯಲ್ಲಿಯೇ ಅವರು ನಡೆಯಬೇಕಾಗಿತ್ತು. ಬಳಿಕ ಅವರು ಮುಖ್ಯರಸ್ತೆ ಸೇರಿ ವಾಹನದ ಮೂಲಕ ಮುತ್ತಮ್ಮ ಅವರನ್ನು ಆಸ್ಪತ್ರೆಗೆ ಸಾಗಿಸಲು ಮುಂದಾಗಿದ್ದರು. ಆದರೆ ಗ್ರಾಮದಿಂದ 6 ರಿಂದ 7 ಕಿ.ಮೀ. ನಡೆಯುತ್ತಿದ್ದಂತೆ ದಾರಿಯ ಮಧ್ಯದಲ್ಲಿ ಮುತ್ತಮ್ಮಗೆ ಹೆರಿಗೆ ನೋವು ಹೆಚ್ಚಾಗಿದ್ದರಿಂದ ಅವರನ್ನು ಅಲ್ಲಿಯೇ ಕೆಳಗೆ ಇಳಿಸಿ, ಇಬ್ಬರು ಮಹಿಳೆಯರ ಸಹಾಯದಿಂದ ಹೆರಿಗೆ ಮಾಡಿಸಲಾಗಿದೆ.

    ಈ ದೃಶ್ಯವನ್ನು ಸ್ಥಳೀಯ ಯುವಕನೊಬ್ಬ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ಅನಾರೋಗ್ಯಕ್ಕೆ ತುತ್ತಾದವರನ್ನು ಹಾಗೂ ಗರ್ಭಿಣಿಯರನ್ನು ಹೀಗೆ ಹೊತ್ತುಕೊಂಡು ಮುಖ್ಯರಸ್ತೆ ಸೇರಬೇಕಾಗಿದೆ. ನಮ್ಮ ಸಮಸ್ಯೆಗೆ ಯಾವುದೇ ಅಧಿಕಾರಿ ಹಾಗೂ ಜನಪ್ರತಿನಿಧಿ ಸ್ಪಂಧಿಸುತ್ತಿಲ್ಲ ಎಂದು ವಿಡಿಯೋ ಮಾಡಿದ್ದ ಬುಡಕಟ್ಟು ಯುವಕ ಆರೋಪಿಸಿದ್ದಾನೆ.

    2017ರಲ್ಲಿ ಬುಡಕಟ್ಟು ಜನಾಂಗದ 15 ಪ್ರದೇಶಗಳಿಗೆ ರಸ್ತೆ ಸಂಪರ್ಕ ಕಲ್ಪಿಸಲು 5.5 ಕೋಟಿ ರೂ. ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದೆ. ಆದರೆ ಗುಡ್ಡಗಾಡು ಪ್ರದೇಶದಲ್ಲಿ ರಸ್ತೆ ನಿರ್ಮಾಣಕ್ಕೆ ಯಾವುದೇ ಗುತ್ತಿಗೆದಾರರು ಮುಂದಾಗುತ್ತಿಲ್ಲ ಎಂದು ಬುಡಕಟ್ಟು ಪ್ರದೇಶಗಳ ಅಧಿವೃದ್ಧಿ ಯೋಜನಾ ಅಧಿಕಾರಿ ಲಕ್ಷ್ಮಿಶ್ ತಿಳಿಸಿದ್ದಾರೆ.

    ಇಂತಹದ್ದೇ ಘಟನೆಯೊಂದು ಜೂನ್ ತಿಂಗಳಿನಲ್ಲಿ ನಡೆದಿತ್ತು. ಅರಣ್ಯ ಪ್ರದೇಶ ವಾಸಿಯಾಗಿರುವ 8 ತಿಂಗಳ ಗರ್ಭಿಣಿ ಜಿದಮ್ಮ (22) ಹೆರಿಗೆ ನೋವಿನಿಂದ ಬಳಲುತ್ತಿದ್ದರು. ಹೀಗಾಗಿ ಆಕೆಯನ್ನು ಆಸ್ಪತ್ರೆಗೆ ಸೇರಿಸಲು, ಪತಿ ಹಾಗೂ ಗ್ರಾಮಸ್ಥರು ಪಟ್ಟ ಕಷ್ಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅರಣ್ಯ ಪ್ರದೇಶದ ಜಾಗಕ್ಕೆ ಖಾಸಗಿ ಕಾವಲುಗಾರ-ಅಳಿವಿನಂಚಿಗೆ ಸೇರಲಿದ್ಯಾ ಹೆಸರಘಟ್ಟ ಗ್ರಾಸ್‍ಲ್ಯಾಂಡ್?

    ಅರಣ್ಯ ಪ್ರದೇಶದ ಜಾಗಕ್ಕೆ ಖಾಸಗಿ ಕಾವಲುಗಾರ-ಅಳಿವಿನಂಚಿಗೆ ಸೇರಲಿದ್ಯಾ ಹೆಸರಘಟ್ಟ ಗ್ರಾಸ್‍ಲ್ಯಾಂಡ್?

    ಬೆಂಗಳೂರು: ಹೆಸರಘಟ್ಟದ ಸಂರಕ್ಷಿತ ಹುಲ್ಲುಗಾವಲು ರಾಜ್ಯದಲ್ಲಿರುವ ಬೆರಳೆಣಿಕೆಯ ಅಳಿವಿನಂಚಿನಲ್ಲಿರುವ ಹುಲ್ಲುಗಾವಲು ಪ್ರದೇಶವಾಗಿದೆ. ಅರಣ್ಯ ಇಲಾಖೆ ಹೆಸರಘಟ್ಟ ಹುಲ್ಲಗಾವಲನ್ನು ರಕ್ಷಿತ ಪ್ರದೇಶವೆಂದು ಘೋಷಿಸಿದೆ. ಅರಣ್ಯ ಇಲಾಖೆಗೆ ಸೇರಿದ ಈ ಪ್ರದೇಶಕ್ಕೆ ಖಾಸಗಿ ಸೆಕ್ಯೂರಿಟಿ ಗಾರ್ಡ್ ಇರೋದು ದುರಂತ.

    ಹುಲ್ಲುಗಾವಲು ಪ್ರದೇಶದ ಹೊರಗೆ ‘ಅವರ್ ನೇಟಿವ್ ವಿಲೇಜ್’ ಅನ್ನೋ ರೆಸಾರ್ಟ್ ಇದೆ. ಆ ರೆಸಾರ್ಟ್ ನ ಸೆಕ್ಯೂರಿಟಿ ಇದೇ ಹುಲ್ಲುಗಾವಲು ಪ್ರದೇಶದಲ್ಲಿ ಕಾರು, ಬೈಕು ತೆಗೆದುಕೊಂಡು ಹೋಗೋಕೆ ಬಿಡುತ್ತಿದ್ದಾನೆ. ಅಷ್ಟೇ ಅಲ್ಲ ಈ ಸೆಕ್ಯೂರಿಟಿ ಗಾರ್ಡ್ ಗೆ ದುಡ್ಡು ಕೊಟ್ಟು ಒಳಗೆ ಬರುವ ಯುವಕರು ಫೋಟೋಗ್ರಾಫಿ ಮಾಡ್ತಾರೆ. ಬೈಕ್ ಸ್ಟಂಟ್ ಮಾಡಿ ಮಜಾ ಮಾಡಿ ಹಿಂದಿರುಗುತ್ತಾರೆ. ಯಾರನ್ನೂ ಒಳಗೆ ಬಿಡದೆ ಹುಲ್ಲುಗಾವಲ್ಲನ್ನ ರಕ್ಷಿಸಬೇಕಾದ ಅರಣ್ಯ ಇಲಾಖೆ ತನಗೆ ಏನು ಗೊತ್ತಿಲ್ಲದಂತೆ ಕುಳಿತಿದೆ ಎಂದು ಪರಿಸರ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಹುಲ್ಲುಗಾವಲಿನ ಪ್ರದೇಶದಲ್ಲಿ ನೆಲದಲ್ಲಿ ಗೂಡು ಮಾಡುವ ಪಕ್ಷಿಗಳು ವಾಸಿಸುತ್ತವೆ. ಅಪರೂಪದ ಬೆರಳೆಣಿಕೆಯಷ್ಟೇ ಮಾತ್ರ ಇರುವ ಗ್ರೇಟ್ ಇಂಡಿಯನ್ ಬಸ್ಟರ್ಟ್ ಪಕ್ಷಿಗಳ ವಾಸಸ್ಥಾನ ಇದೇ ಹುಲ್ಲುಗಾವಲು. ಆದ್ರೆ ಇಲ್ಲಿ ಯಾರೂ ಕೇಳೋರು ಇಲ್ಲ ಹೇಳೋರು ಇಲ್ಲ. ಪಶುಪಾಲನ ಇಲಾಖೆ ನಿರ್ಭಂಧಿತ ಪ್ರದೇಶ ಅಂತ ಬೋರ್ಡ್ ಹಾಕಿರೋದು ಬಿಟ್ರೆ ಒಳಗೆ ಎಂಟ್ರಿಯಾಗುವುದನ್ನ ತಡೆಯೋಕೆ ಯಾರೂ ಇಲ್ಲ ಎಂದು ಸ್ಥಳೀಯ ನಿವಾಸಿ ಕಾರ್ತಿಕ್ ಹೇಳುತ್ತಾರೆ.

    ಮೊದಲು ಸಿನಿಮಾ ಶೂಟಿಂಗ್‍ಗೆ ಅವಕಾಶ ನೀಡಲಾಗ್ತಿತ್ತು. ಈಗ ಅದಕ್ಕೂ ಅವಕಾಶ ನೀಡ್ತಿಲ್ಲ. ಆದ್ರೆ ಹೀಗೆ ಕಳ್ಳದಾರಿಯ ಮೂಲಕ ಬಂದು ಹುಲ್ಲುಗಾವಲನ್ನ ಹಾಳುಗೆಡವಲಾಗ್ತಿದೆ, ಬೆಂಗಳೂರಿಗೆ ಅಂತ ಇರುವ ಒಂದೇ ಒಂದು ಹುಲ್ಲುಗಾವಲು ಪ್ರದೇಶವನ್ನ ಕಾಪಾಡಿಕೊಳ್ಳುವ ಜವಬ್ದಾರಿ ಅರಣ್ಯ ಇಲಾಖೆಯ ಮೇಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅಂಬುಲೆನ್ಸ್ ಸೇವೆಗೆ ಗರ್ಭಿಣಿಯನ್ನ 12 ಕಿ.ಮೀ. ಹೊತ್ತು ನಡೆದ ಗ್ರಾಮಸ್ಥರು: ಮಗು ಸಾವು

    ಅಂಬುಲೆನ್ಸ್ ಸೇವೆಗೆ ಗರ್ಭಿಣಿಯನ್ನ 12 ಕಿ.ಮೀ. ಹೊತ್ತು ನಡೆದ ಗ್ರಾಮಸ್ಥರು: ಮಗು ಸಾವು

    ಹೈದರಾಬಾದ್: ಗರ್ಭಿಣಿಯೊಬ್ಬರನ್ನು ಆಸ್ಪತ್ರೆಗೆ ಸೇರಿಸಲು ಪತಿ ಹಾಗೂ ಕೆಲ ಗ್ರಾಮಸ್ಥರು 12 ಕಿ.ಮೀ. ಕ್ರಮಿಸಿ ಅಂಬುಲೆನ್ಸ್ ಸೇವೆ ಪಡೆದಿದ್ದರೂ, ತಾಯಿ ಮಾತ್ರ ಬದುಕುಳಿದು ಮಗು ಸಾವನ್ನಪ್ಪಿದ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

    ಅರಣ್ಯ ಪ್ರದೇಶ ವಾಸಿಯಾಗಿರುವ 8 ತಿಂಗಳ ಗರ್ಭಿಣಿ ಜಿದಮ್ಮ (22) ಹೆರಿಗೆ ನೋವಿನಿಂದ ಬಳಲುತ್ತಿದ್ದರು. ಹೀಗಾಗಿ ಆಕೆಯನ್ನು ಆಸ್ಪತ್ರೆಗೆ ಸೇರಿಸಲು, ಪತಿ ಹಾಗೂ ಗ್ರಾಮಸ್ಥರು ಪಟ್ಟ ಕಷ್ಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಜಿದಮ್ಮ ಅವರ ಗ್ರಾಮದ ಸುತ್ತಮತ್ತಲು ಯಾವುದೇ ಆಸ್ಪತ್ರೆಗಳಿಲ್ಲ. ಗ್ರಾಮದವರೆಗೆ ರಸ್ತೆ ನಿರ್ಮಾಣವಾಗಿಲಿಲ್ಲ. ಹೀಗಾಗಿ ಅಂಬುಲೆನ್ಸ್ ಸೌಲಭ್ಯ ಪಡೆಯಲು ಗ್ರಾಮಸ್ಥರು ಅರಣ್ಯ ಭಾಗದಲ್ಲಿರು ಕಿರಿದಾದ 12 ಕಿ.ಮೀ. ಕ್ರಮಿಸುವುದು ಅನಿವಾರ್ಯ. ಹೆರಿಗೆ ನೋವಿಗೆ ಒಳಗಾಗಿದ್ದ ಜಿದಮ್ಮ ಅವರನ್ನು ಉಳಿಸಿಕೊಳ್ಳಲು ಪತಿ ಆಕೆಯನ್ನು ಸೀರೆಯಿಂದ ಮರೆ ಮಾಡಿ, ಒಂದು ಬಿದಿರಿನ ಬುಟ್ಟಿಯಲ್ಲಿ ಕುಳ್ಳಿರಿಸಿ, ಬುಟ್ಟಿಯ ನಾಲ್ಕು ಬದಿಗೆ ಹಗ್ಗ ಹಾಕಿ ಅದನ್ನು ಬಿದಿರಿನ ಬೊಂಬಿಗೆ ಕಟ್ಟಿ ಇಬ್ಬರು ಹೊತ್ತುಕೊಂಡು ಸಾಗಿದ್ದರು.

    ವಿಜಯನಗರಂನಲ್ಲಿ ಇದು ವಿಶೇಷ ಪ್ರಕರಣವಲ್ಲ. ರಸ್ತೆಗಳಿಲ್ಲದ ಗ್ರಾಮಗಳಲ್ಲಿ ಈ ಹಿಂದೆಯೂ ಇಂತಹ ಘಟನೆಗಳು ನಡೆದಿವೆ ಎಂದು ವರದಿಯಾಗಿದೆ.

    ಬುಡಕಟ್ಟು ಜನಾಂಗ ಎದುರಿಸುತ್ತಿರುವ ರಸ್ತೆ ಹಾಗೂ ಆರೋಗ್ಯ ಸಮಸ್ಯೆ ಕುರಿತು ನಟ ಹಾಗೂ ಜನ ಸೇನಾ ಪಕ್ಷದ ನಾಯಕ ಪವನ್ ಕಲ್ಯಾಣ್ ಪ್ರಸ್ತಾಪ ಮಾಡಿದ್ದರು. ಸದ್ಯ ಜಿದಮ್ಮ ಪ್ರಕರಣದ ಕುರಿತು ಆಡಳಿತ ಪಕ್ಷವನ್ನು ತರಾಟೆಗೆ ತಗೆದುಕೊಂಡಿದ್ದಾರೆ.

  • ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ ಕೋಟೆ ನಾಡಿನ ಜೋಗಿಮಟ್ಟಿ ನಿಸರ್ಗಧಾಮ!

    ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ ಕೋಟೆ ನಾಡಿನ ಜೋಗಿಮಟ್ಟಿ ನಿಸರ್ಗಧಾಮ!

    ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗ ಅಂದಾಕ್ಷಣ ಕೋಟೆ ಕೊತ್ತಲುಗಳು ಮಾತ್ರ ನಾವು ಕಾಣುತ್ತೇವೆ. ಆದರೆ ಮಲೆನಾಡನಲ್ಲಿರುವಂತೆ ಇರುವ ನಿಸರ್ಗಧಾಮವೊಂದು ಕೋಟೆನಾಡಲ್ಲಿದೆ. ಕಳೆದ ಒಂದು ವಾರದಿಂದ ಸುರಿಯುತ್ತಿರೋ ತುಂತುರು ಮಳೆಯಿಂದಾಗಿ ಜೋಗಿಮಟ್ಟಿ ನಿಸರ್ಗಧಾಮ ಹಸಿರು ಸೀರೆ ಹೊದ್ದ ನಾರಿಯಂತೆ ಕಂಗೊಳಿಸುತ್ತಾ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ.

    ಐತಿಹಾಸಿಕ ಹಿನ್ನಲೆಯ ಪ್ರವಾಸಿ ತಾಣವೆನಿಸಿರೋ ಕೋಟೆನಾಡು ಚಿತ್ರದುರ್ಗ ಕೇವಲ ಬಂಡೆಗಳಿಂದ ಕೂಡಿರೋ ಬಯಲುಸೀಮೆಯೆಂದು ಭಾವಸಿದ್ದಾರೆ. ಆದರೆ ಚಿತ್ರದುರ್ಗ ನಗರದಿಂದ ಕೇವಲ 10 ಕಿ.ಮೀಟರ್ ದೂರದಲ್ಲಿರುವ ಜೋಗಿಮಟ್ಟಿ ಗಿರಿಧಾಮ ಅವರ ಭಾವನೆಯನ್ನ ಅಲ್ಲೆಗೆಳೆಯುವಂತಿದೆ. ಸುಮಾರು 10 ಸಾವಿರ ಹೆಕ್ಟೇರ್ ಪ್ರದೇಶದಷ್ಟು ವಿಶಾಲವಾಗಿರುವ ಈ ಕಾಯ್ದಿಟ್ಟ ಅರಣ್ಯ ಪ್ರದೇಶ ಏಷ್ಯಾದಲ್ಲೇ ಅತಿ ಹೆಚ್ಚು ಗಾಳಿ ಬೀಸುವ ಪ್ರದೇಶಗಳ ಪೈಕಿ ಒಂದಾಗಿದೆ.

    ಇಂಥ ಅಪರೂಪದ ಗಿರಿಧಾಮ ಮಳೆಗಾಲ ಹಾಗೂ ಚಳಿಗಾಲದಲ್ಲಂತೂ ಮಂಜಿನ ಮಡಿಕೇರಿ, ಸೊಬಗಿನ ಮಲೆನಾಡನ್ನೇ ನಾಚಿಸುವಂತೆ ರೂಪುಗೊಳ್ಳುತ್ತದೆ. ಕಳೆದ ಒಂದು ವಾರದಿಂದ ಜಿನುಗುತ್ತಿರುವ ಮಳೆಯಿಂದಾಗಿ ಜೋಗಿಮಟ್ಟಿ ಮತ್ತಷ್ಟು ಹಚ್ಚಹಸಿರಾಗಿ ಕಂಗೊಳಿಸುತ್ತಿದೆ. ಮೋಡದ ಅಲೆಗಳು ಜೋಗಿಮಟ್ಟಿಯ ಗಿರಿಧಾಮಗಳಿಗೆ ಮುತ್ತಿಟ್ಟು ನಲಿಯುತ್ತಿವೆ. ಜೋಗಿಮಟ್ಟಿ ಮೇಲ್ಭಾಗದಲ್ಲಿರುವ ವೀವ್ ಪಾಯಿಂಟ್ ಹಾಗೂ ಅತಿಥಿಗೃಹದ ಬಳಿಯ ಪ್ರಕೃತಿಕ ಸೊಬಗಂತೂ ಮೈಮರೆಸುತ್ತದೆ. ಹೀಗಾಗಿ ಕಳೆದ ವಾರದಿಂದ ಜೋಗಿಮಟ್ಟಿಗೆ ತೆರಳಿ ಸೌಂದರ್ಯದ ಸವಿ ಸವಿಯುವವರ ಸಂಖ್ಯೆ ಹೆಚ್ಚಾಗಿದೆ. ಜೋಗಿಮಟ್ಟಿಯ ನಿಸರ್ಗದಲ್ಲಿ ಪರಿಸರ ಪ್ರಿಯರು ಸೆಲ್ಫಿ ತೆಗೆದುಕೊಳ್ಳುವುದು, ಗ್ರೂಪ್ ಪೋಟೋ ಕ್ಲಿಕ್ಕಿಸಿಕೊಳ್ಳುವ ದೃಶ್ಯಗಳು ಸಾಮಾನ್ಯವಾಗಿದೆ.

    ಇನ್ನು ಕೊರೆಯುವ ಚಳಿ, ಬಿರುಗಾಳಿ ಮತ್ತು ಕೈಗೆ ಸಿಗುವ ಮೋಡಗಳ ನಡುವೆ ತೇಲುವ ಜನ ಸಖತ್ ಏಂಜಾಯ್ ಮಾಡುತ್ತಿದ್ದಾರೆ. ಕೆಲವರು ಕೇಕೆ ಹಾಕಿ ಖುಷಿಪಡುತ್ತಾರೆ, ಹಾಡು ಗುನುಗುತ್ತ ಹೆಜ್ಜೆ ಹಾಕುತ್ತಾರೆ. ಕೋಟೆನಾಡಿನ ಪಾಲಿಗಂತೂ ಈ ನಿಸರ್ಗದ ಮಡಿಲು ಧರೆಯ ಮೇಲಿನ ಸ್ವರ್ಗವೇ ಆಗಿದೆ ಎಂದು ನಿಸರ್ಗ ಪ್ರಿಯರು ಕರೆಯುತ್ತಾರೆ.

    ಜೋಗಿಮಟ್ಟಿ ಕಾಯ್ದಿಟ್ಟ ಅರಣ್ಯ ಪ್ರದೇಶ ಇತ್ತೀಚೆಗೆ ವನ್ಯಜೀವಗಳ ಧಾಮವಾಗಿಯೂ ಘೋಷಿಸಲ್ಪಟ್ಟಿದೆ. ಇಲ್ಲಿ ಕರಡಿ, ಜಿಂಕೆ, ಚಿರತೆಯಂಥ ಪ್ರಾಣಿಗಳಿವೆ. ನವಿಲು ಮತ್ತಿತರೆ ಪಕ್ಷಿಗಳಂತೂ ಲೆಕ್ಕವಿಲ್ಲದಷ್ಟಿವೆ. ನಿತ್ಯ ನೂರಾರು ಜನ ಈ ನಿಸರ್ಗ ಸೌಂದರ್ಯ ಸವಿಯಲು ಜೋಗಿಮಟ್ಟಿಗೆ ಭೇಟಿ ನೀಡುತ್ತಾರೆ. ಆದ್ದರಿಂದ ಅರಣ್ಯ ಇಲಾಖೆ ಈ ಜೋಗಿಮಟ್ಟಿಗೆ ಇನ್ನಷ್ಟು ಮೂಲ ಸೌಕರ್ಯಗಳನ್ನು ಕಲ್ಪಿಸಿ ಅರಣ್ಯವನ್ನು ಮತ್ತಷ್ಟು ಅಭಿವೃದ್ಧಿಪಡಿಸಬೇಕು ಎಂದು ಭೇಟಿ ನೀಡುವ ಪ್ರವಾಸಿಗರು ಮನವಿ ಮಾಡಿಕೊಂಡಿದ್ದಾರೆ.

  • ಸ್ನಾನದ ಕೋಣೆಯಲ್ಲಿ ಅಡಗಿದ್ದ ಚಿರತೆ ಸೆರೆ

    ಸ್ನಾನದ ಕೋಣೆಯಲ್ಲಿ ಅಡಗಿದ್ದ ಚಿರತೆ ಸೆರೆ

    ತುಮಕೂರು: ಜಿಲ್ಲೆಯ ಗುಬ್ಬಿ ತಾಲೂಕಿನ ನಾಗಸಂದ್ರ ಗ್ರಾಮದ ಅಶೋಕ್ ಎಂಬವರ ಮನೆಯಲ್ಲಿ ಬೆಳ್ಳಂ ಬೆಳಗ್ಗೆ ಚಿರತೆ ಕಾಣಿಸಿಕೊಂಡಿದೆ.

    ಮನೆಯ ಹಿಂಭಾಗದ ಸ್ನಾನದ ಕೋಣೆಯಲ್ಲಿ ಚಿರತೆ ಪ್ರತ್ಯಕ್ಷವಾಗಿದೆ. ಬೆಳಗಿನ ಜಾವ ಸುಮಾರು 5 ಗಂಟೆಗೆ ಮನೆಯವರು ಸ್ನಾನದ ಕೋಣೆಗೆ ಹೋಗಿದ್ದಾಗ ಚಿರತೆ ಕಾಣಿಸಿಕೊಂಡಿದೆ.

    ಅಲ್ಲಿಯ ಗ್ರಾಮಸ್ಥರು ಆ ಚಿರತೆಯನ್ನು ಸ್ನಾನದ ಕೋಣೆಯಲ್ಲಿ ಕೂಡಿ ಹಾಕಿದ್ದಾರೆ. ಸ್ಥಳಕ್ಕೆ ಗುಬ್ಬಿ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದಾರೆ. ಸದ್ಯ ಅದಕ್ಕೆ ಅರವಳಿಕೆ ಚುಚ್ಚು ಮದ್ದು ನೀಡಿ ಸೆರೆ ಹಿಡಿಯುವಲ್ಲಿ ಅರಣ್ಯ ಸಿಬ್ಬಂದಿ ಕಾರ್ಯನಿರತರಾಗಿದ್ದಾರೆ.

  • ಅತ್ಯಾಚಾರವೆಸಗಿ ಕೊಲೆಗೈದು, ಮಹಿಳೆಯ ಶವವನ್ನು ಸುಟ್ಟ ದುಷ್ಕರ್ಮಿಗಳು!

    ಅತ್ಯಾಚಾರವೆಸಗಿ ಕೊಲೆಗೈದು, ಮಹಿಳೆಯ ಶವವನ್ನು ಸುಟ್ಟ ದುಷ್ಕರ್ಮಿಗಳು!

    ಬಳ್ಳಾರಿ: ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿ ನಂತರ ದೇಹವನ್ನು ದುಷ್ಕರ್ಮಿಗಳು ಸುಟ್ಟು ಹಾಕಿರುವ ಘಟನೆ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಬಂಡ್ರಿ ಅರಣ್ಯ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ.

    ಸುಮಾರು 25 ವರ್ಷದ ಮಹಿಳೆಯ ಸುಟ್ಟ ದೇಹವೊಂದು ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದೆ. ಮಹಿಳೆಯನ್ನು ಅತ್ಯಾಚಾರಗೈದ ದುಷ್ಕರ್ಮಿಗಳು ಗುರುತು ಸಿಗದಂತೆ ಶವವನ್ನು ಸುಟ್ಟು ಹಾಕಿದ್ದಾರೆ. ಆದ್ರೆ ಕೊಲೆಯಾದ ಮಹಿಳೆ ಯಾರು, ಅರಣ್ಯ ಪ್ರದೇಶದಕ್ಕೆ ಮಹಿಳೆಯನ್ನು ಕರೆತಂದಿದ್ದು ಯಾರು ಅನ್ನೋದು ಇನ್ನೂ ಪತ್ತೆಯಾಗಿಲ್ಲ.

    ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಕೂಡ್ಲಿಗಿ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.