Tag: foresters

  • ಕೇರಳದಲ್ಲಿ ಮತ್ತೆ ಪ್ರಾಣಿಗಳ ಮೇಲೆ ಕ್ರೌರ್ಯ – ಗರ್ಭಿಣಿ ಕಾಡು ಎಮ್ಮೆ ಬಲಿ

    ಕೇರಳದಲ್ಲಿ ಮತ್ತೆ ಪ್ರಾಣಿಗಳ ಮೇಲೆ ಕ್ರೌರ್ಯ – ಗರ್ಭಿಣಿ ಕಾಡು ಎಮ್ಮೆ ಬಲಿ

    – ಐದು ಜನರ ಬಂಧನ

    ತಿರುವನಂತಪುರಂ: ಕೇರಳದಲ್ಲಿ ಮತ್ತೆ ಪ್ರಾಣಿಗಳ ಮೇಲಿನ ಕ್ರೌರ್ಯ ಮರುಕಳಿಸಿದೆ. ಗರ್ಭಿಣಿ ಕಾಡು ಎಮ್ಮೆಯನ್ನು ಅಮಾನುಷವಾಗಿ ಬೇಟೆಯಾಡಿ ಕೊಲ್ಲಲಾಗಿದೆ.

    ಗರ್ಭಿಣಿ ಕಾಡು ಎಮ್ಮೆ ಹತ್ಯೆಗೆ ಸಂಬಂಧಿಸಿದಂತೆ ರಾಜ್ಯ ಅರಣ್ಯ ಇಲಾಖೆ ಈಗ ಐದು ಜನರನ್ನು ಬಂಧಿಸಿದೆ. ಆರೋಪಿಗಳನ್ನು ಪುಲ್ಲಾರ ಅಬು ಅಕಾ ನಾನಿಪ್ಪ (47), ಮುಹಮ್ಮದ್ ಬುಸ್ತಾನ್ (30), ಮುಹಮ್ಮದ್ ಅನ್ಸಿಫ್ (23), ಆಶಿಕ್ (27) ಮತ್ತು ಸುಹೇಲ್ (28) ಎಂದು ಗುರುತಿಸಲಾಗಿದೆ.

    ಕಳೆದ ಎರಡು ತಿಂಗಳ ಹಿಂದೆ ಇದೇ ಕೇರಳದ ಪಾಲಕ್ಕಾಡ್ ಜಿಲ್ಲೆಯ ಮನ್ನಾರ್ಕಡ್ ಅರಣ್ಯ ವ್ಯಾಪ್ತಿಯಲ್ಲಿ ಗರ್ಭಿಣಿ ಆನೆಯನ್ನು ಹಣ್ಣಿನಲ್ಲಿ ಪಟಾಕಿ ಇಟ್ಟು ಕೊಲೆ ಮಾಡಲಾಗಿತ್ತು. ಈಗ ನಿಲಾಂಬೂರ್ ದಕ್ಷಿಣ ಅರಣ್ಯ ವಿಭಾಗದ ಕಾಳಿಕಾವ್ ವ್ಯಾಪ್ತಿಯಲ್ಲಿರುವ ಚಕ್ಕಿಕುಜಿ ಅರಣ್ಯ ಕೇಂದ್ರದ ವ್ಯಾಪ್ತಿಯ ಪುಂಚ ಅರಣ್ಯದಲ್ಲಿ ಆರೋಪಿಗಳು ಕಾಡು ಎಮ್ಮೆಯನ್ನು ಬೇಟೆಯಾಡಿದ್ದಾರೆ ಎಂದು ವರದಿಯಾಗಿದೆ.

    ಆಗಸ್ಟ್ 10ರಂದು ರಾತ್ರಿ ನಡೆದ ದಾಳಿಯಲ್ಲಿ ಅರಣ್ಯ ಅಧಿಕಾರಿಗಳು ಆರೋಪಿಗಳ ಮನೆಯಿಂದ ಕಾಡು ಎಮ್ಮೆ ಮಾಂಸವನ್ನು ಪತ್ತೆ ಮಾಡಿದ್ದಾರೆ. ಅರಣ್ಯ ಅಧಿಕಾರಿಗಳು ಸುಮಾರು 25 ಕೆಜಿಗಳಷ್ಟು ಮಾಂಸವನ್ನು ವಶಪಡಿಸಿಕೊಂಡಿದ್ದಾರೆ. ಒಟ್ಟು 200 ಕೆಜಿಗಳಷ್ಟು ಮಾಂಸ ಇತ್ತು ಎಂದು ಅಂದಾಜಿಸಲಾಗಿದೆ. ಆರೋಪಿಗಳು ಎರಡು ತಲೆಬುರುಡೆ ಮತ್ತು ಇತರ ಕಾಡು ಎಮ್ಮೆಯ ಅವಶೇಷಗಳನ್ನು ಕಾಡಿನ ವಿವಿಧ ಭಾಗಗಳಲ್ಲಿ ಎಸೆದಿದ್ದಾರೆ ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಈ ಕಾಡು ಎಮ್ಮೆಯ ಹತ್ಯೆ ಪ್ರಕರಣದಲ್ಲಿ ಹೆಚ್ಚಿನ ಆರೋಪಿಗಳು ಭಾಗಿಯಾಗಿದ್ದಾರೆಯೇ ಎಂಬುದರ ಬಗ್ಗೆ ಅಧಿಕಾರಿಗಳು ತನಿಖೆಯನ್ನು ಮುಂದುವರೆಸಿದ್ದಾರೆ. ಆರೋಪಿಗಳನ್ನು ಇಂದು ಮಲಪ್ಪುರಂ ನ್ಯಾಯಾಲಯದಲ್ಲಿ ಹಾಜರುಪಡಿಸಲಾಯಿತು.

  • ಹೊನ್ನಾವರದಲ್ಲಿ ಚಿರತೆ ಉಗುರುಗಳ ವಶ-ನಾಲ್ವರು ಆರೋಪಿಗಳ ಬಂಧನ

    ಹೊನ್ನಾವರದಲ್ಲಿ ಚಿರತೆ ಉಗುರುಗಳ ವಶ-ನಾಲ್ವರು ಆರೋಪಿಗಳ ಬಂಧನ

    ಕಾರವಾರ: ವನ್ಯಜೀವಿಗಳನ್ನು ಬೇಟೆಯಾಡಿ ಚಿರತೆ ಉಗುರು ಮಾರಾಟ ಮಾಡುತಿದ್ದವರನ್ನು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

    ಮುಗ್ವಾದ ಅಂತೋಣಿ ಮಿನಿನ್ ಫರ್ನಾಂಡಿಸ್ (48), ಬೆಳ್ಳಿಮಕ್ಕಿ ರೋಶನ್ ವಿಲ್ಲೆಂಟ್ ಲೊಬೋ (45), ಸಾಲ್ಕೋಡ್ ಮಹೇಶ ರಾಮ ನಾಯ್ಕ (36), ಹೊಸಗೋಡ ಗಣಪತಿ ನಾರಾಯಣ ಗೌಡ (29) ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ 16 ಚಿರತೆ ಉಗುರುಗಳನ್ನು ವಶಕ್ಕೆ ಪಡೆಯಲಾಗಿದೆ.

    ಚಿರತೆ ಉಗುರು ಮಾರಾಟ ಮಾಡುತ್ತಿರುವ ಕುರಿತು ಖಚಿತ ಮಾಹಿತಿ ಪಡೆದ ಹೊನ್ನಾವರ ಅರಣ್ಯ ಇಲಾಖೆ ಅಧಿಕಾರಿಗಳು ಹೊನ್ನಾವರ ತಾಲೂಕಿನ ಮುಗ್ವಾ ಕ್ರಾಸ್ ಹಾಗೂ ಅರೇಅಂಗಡಿ ಸರ್ಕಲ್ ಬಳಿ ಕಾರ್ಯಾಚರಣೆ ನಡೆಸಿ ಚಿರತೆ ಉಗುರುಗಳ ಸಹಿತ ಆರೋಪಿಗಳನ್ನು ಬಂಧಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಚಿರುತೆ ಉಗುರು, 1 ಬೈಕ್ ವಶಕ್ಕೆ ಪಡೆಯಲಾಗಿದ್ದು, ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

    ಕಾರ್ಯಾಚರಣೆಯಲ್ಲಿ ವಲಯ ಅರಣ್ಯಧಿಕಾರಿಗಳಾದ ಶರತ್ ಶೆಟ್ಟಿ, ಶಿವಾನಂದ ಕೋಟ್ಯಾಳ, ಉಪ ವಲಯ ಅರಣ್ಯಾಧಿಕಾರಿ ರಾಜು ನಾಯ್ಕ, ತುಕಾರಾಂ, ಸುಬ್ರಹ್ಮಣ್ಯ ಗೌಡ, ಈಶ್ವರ ಗೌಡ, ಅರಣ್ಯ ರಕ್ಷಕರಾದ ಅಲ್ಲಾಮರ್ತುಜ ಬಾವಿಕಟ್ಟೆ, ಚಂದ್ರಪ್ಪ, ಯಲ್ಲಪ್ಪ ಪಾಲ್ಗೊಂಡಿದ್ದರು.

  • ಎರಡು ಮರಿಗಳು ಸೇರಿ ಒಂದೇ ದಿನದಲ್ಲಿ ಬೋನಿಗೆ ಬಿತ್ತು 4 ಚಿರತೆಗಳು

    ಎರಡು ಮರಿಗಳು ಸೇರಿ ಒಂದೇ ದಿನದಲ್ಲಿ ಬೋನಿಗೆ ಬಿತ್ತು 4 ಚಿರತೆಗಳು

    ನೆಲಮಂಗಲ: ಒಂದು ವಾರದಲ್ಲಿ ಇಬ್ಬರು ಮಾನವರನ್ನು ತಿಂದು ಮುಗಿಸಿದ ನರಭಕ್ಷಕ ಚಿರತೆಗಳ ಹಾವಳಿ ನೆಲಮಂಗಲದ ಹೊರವಲಯದಲ್ಲಿ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಸುಮಾರು 11 ಬೋನ್ ಇಟ್ಟಿದ್ದರು. ಇಂದು ಬೆಳ್ಳಂಬೆಳಗ್ಗೆ ಎರಡು ಚಿರತೆ ಮತ್ತು ಮರಿಗಳು ಬೋನಿಗೆ ಬಿದ್ದಿವೆ.

    ತಡರಾತ್ರಿ ಎರಡು ಮರಿ ಹಾಗೂ ಇಂದು ಬೆಳಗ್ಗೆ ಎರಡು ಚಿರತೆ ಬೋನಿಗೆ ಬಿದ್ದಿರುವ ಮಾಹಿತಿಯನ್ನು ಮಾಗಡಿ ಅರಣ್ಯಾಧಿಕಾರಿಗಳು ನೀಡಿದ್ದಾರೆ. ಬೆಂಗಳೂರು ಹೊರವಲಯ ನೆಲಮಂಗಲ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಸೋಲೂರು ಮತ್ತು ಮಾಗಡಿ ತಾಲೂಕಿನ ಗಡಿ ಗ್ರಾಮದಲ್ಲಿ ಚಿರತೆ ಬೋನಿಗೆ ಬಿದ್ದಿವೆ.

    ಒಂದು ಚಿರತೆ ಬೋಡಗನಪಾಳ್ಯ ಹಾಗೂ ಮತ್ತೊಂದು ಚಿರತೆ ಶಿರಗನಹಳ್ಳಿಯಲ್ಲಿ ಬೋನಿಗೆ ಬಿದ್ದಿದೆ. ಚಿರತೆ ಮರಿ ದಾಸೇಗೌಡನ ಪಾಳ್ಯದಲ್ಲಿ ಪ್ರತ್ಯೇಕವಾಗಿ ಕಂಡಿದೆ. ಒಂದೇ ವಾರದಲ್ಲಿ ಮೂರು ವರ್ಷದ ಮಗು, 68 ವರ್ಷದ ವೃದ್ಧೆಯನ್ನು ಬಲಿಪಡೆದ ಚಿರತೆಗಳ ಚಲನ ವಲನದ ಮೇಲೆ ಅರಣ್ಯಧಿಕಾರಿಗಳು ಕಣ್ಣಿಟ್ಟಿದ್ದರು. ದೊಡ್ಡ ಚಿರತೆ ಹಿಡಿಯಲು ಮರಿ ಚಿರತೆ ಬಳಸಿಕೊಂಡಿದ್ದಾರೆ ಎಂಬ ಮಾಹಿತಿಯೂ ಲಭ್ಯವಾಗಿದೆ.

    ಇದೀಗ ಮಾಗಡಿ ವಲಯ ಅರಣ್ಯಾಧಿಕಾರಿಗಳ ಕಾರ್ಯಚರಣೆಗೆ ಅಲ್ಪ ಯಶಸ್ಸು ಸಿಕ್ಕಿದೆ. ಸೆರೆಯಾಗಿರುವ ಚಿರತೆ ನಿನ್ನೆ ವೃದ್ಧೆಯನ್ನು ಬಲಿ ಪಡೆದ ಚಿರತೆಯೋ ಅಥವಾ ಬೇರೆ ಚಿರತೆಯೋ ಎಂಬ ಗೊಂದಲದಲ್ಲಿ ಗ್ರಾಮಸ್ಥರು ಇದ್ದಾರೆ. ಚಿರತೆಯನ್ನು ನೋಡಲು ನೂರಾರು ಜನ ಸ್ಥಳದಲ್ಲಿ ಜಮಾಯಿಸಿದ್ದರು. ಸುತ್ತಮುತ್ತ ಗ್ರಾಮಗಳಲ್ಲಿ ಚಿರತೆ ಆತಂಕ ವ್ಯಕ್ತವಾಗಿದೆ.

  • ನಂಬರ್ ಪ್ಲೇಟ್ ಬದಲಿಸಿ ರಕ್ತಚಂದನ ಸಾಗಿಸುತ್ತಿದ್ದ ಕಾರು ವಶಕ್ಕೆ

    ನಂಬರ್ ಪ್ಲೇಟ್ ಬದಲಿಸಿ ರಕ್ತಚಂದನ ಸಾಗಿಸುತ್ತಿದ್ದ ಕಾರು ವಶಕ್ಕೆ

    – ಕಾರು ಬಿಟ್ಟು ಪರಾರಿಯಾದ ಖದೀಮರು

    ಚಿಕ್ಕಬಳ್ಳಾಪುರ: ತಮಿಳುನಾಡು ನೊಂದಣಿಯ ಸ್ಕಾರ್ಪಿಯೋ ಕಾರಿಗೆ ಕರ್ನಾಟಕ ನಂಬರ್ ಪ್ಲೇಟ್ ಬಳಸಿ ಅಕ್ರಮವಾಗಿ ರಕ್ತಚಂದನವನ್ನು ಸಾಗಿಸುತ್ತಿದ್ದ ಕಾರನ್ನು ಚಿಕ್ಕಬಳ್ಳಾಪುರ ಅರಣ್ಯ ಇಲಾಖಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

    ಅಂದಹಾಗೆ ಆಯಾ ರಾಜ್ಯಗಳಲ್ಲಿ ಆ ರಾಜ್ಯದ ನಕಲಿ ನಂಬರ್ ಪ್ಲೇಟ್ ಗಳನ್ನು ಬಳಸಿ ಅಕ್ರಮವಾಗಿ ಕೋಟ್ಯಂತರ ರೂಪಾಯಿ ಮೌಲ್ಯದ ರಕ್ತ ಚಂದನ ಸಾಗಾಟ ಮಾಡುತ್ತಿದ್ದ ಕಾರನ್ನು ಬೆನ್ನಟ್ಟಿದ ಚಿಕ್ಕಬಳ್ಳಾಪುರ ಅರಣ್ಯ ಇಲಾಖೆ ಅಧಿಕಾರಿಗಳು, ಚಿಕ್ಕಬಳ್ಳಾಪುರ ತಾಲೂಕಿನ ಚದಲಪುರ ಬಳಿ ಸ್ಕಾರ್ಪಿಯೋ ಕಾರನ್ನು ತಡೆದು ಕಾರು ಸಮೇತ ರಕ್ತ ಚಂದನ ತುಂಡುಗಳನ್ನು ಜಪ್ತಿ ಮಾಡಿದ್ದಾರೆ.

    ಕಾರಿನಲ್ಲಿ 14 ರಕ್ತಚಂದನದ ತುಂಡುಗಳಿದ್ದು ಆರೋಪಿಗಳು ಅಧಿಕಾರಿಗಳನ್ನು ನೋಡುತ್ತಿದ್ದಂತೆ ಕಾರು ಬಿಟ್ಟು ಇನ್ನೊಂದು ಕಾರಿನಲ್ಲಿ ಪರಾರಿಯಾಗಿದ್ದಾರೆ. ಈ ಕಾರಿನ ನಂಬರ್ ಟಿಎನ್ 49, ಎ.ಎಫ್ 0333 ಅಸಲಿ ಆಗಿದ್ದು, ಇದಕ್ಕೆ ಕೆಎ 34 ಎಂ 6866 ನಂಬರ್ ಪ್ಲೇಟನ್ನು ಅಳವಡಿಸಿದ್ದಾರೆ. ಕಾರಿನ ಪರಿಶೀಲನೆ ವೇಳೆ ಸರಿಸುಮಾರು 500 ಕೆಜಿಯ ಲಕ್ಷಾಂತರ ರೂಪಾಯಿ ಮೌಲ್ಯದ 14 ರಕ್ತ ಚಂದನದ ತುಂಡುಗಳು, ಎರಡು ಆಸಲಿ ತಮಿಳುನಾಡಿನ ನೊಂದಣಿಯ ನಂಬರ್ ಪ್ಲೇಟುಗಳು, ಕಾರಿಗೆ ಸಂಬಂಧಿಸಿದ ದಾಖಲೆಗಳು ಸಿಕ್ಕಿವೆ.

    ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಅರಣ್ಯಾಧಿಕಾರಿಗಳು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

  • ಶಿಸ್ತುಬದ್ಧವಾಗಿ ರಸ್ತೆ ದಾಟಿದ ಆನೆಗಳು – ವಿಡಿಯೋ ನೋಡಿ

    ಶಿಸ್ತುಬದ್ಧವಾಗಿ ರಸ್ತೆ ದಾಟಿದ ಆನೆಗಳು – ವಿಡಿಯೋ ನೋಡಿ

    ರಾಯಪುರ: ಆನೆಗಳು ಬುದ್ಧಿವಂತ ಪ್ರಾಣಿಗಳು ಎಂದು ಹೇಳಲಾಗುತ್ತದೆ. ಇದೀಗ ಕೇವಲ ಒಂದು ರಸ್ತೆ ದಾಟಲು ದೊಡ್ಡ ಗುಂಪು ರಚಿಸಿಕೊಳ್ಳುವ ಮೂಲಕ ಆನೆಗಳು ಜಾಣ್ಮೆಯನ್ನು ಪ್ರದರ್ಶಿಸಿವೆ.

    ಛತ್ತಿಸ್‍ಗಢದ ಕೋಬ್ರಾ ಜಿಲ್ಲೆಯ ಹಸ್ಡಿಯೋ ಅರಾಂಡ್ ಪ್ರದೇಶದಲ್ಲಿ ಆನೆಯ ಬೃಹತ್ ಹಿಂಡು ರಸ್ತೆ ದಾಟುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅರಣ್ಯ ಇಲಾಖೆಯ ಅಧಿಕಾರಿ ಪ್ರವೀಣ್ ಕಸ್ವಾನ್ ತಮ್ಮ ಟ್ವಟ್ಟರ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದು, ಆನೆಗಳ ಬೃಹತ್ ಹಿಂಡು ಶಿಸ್ತುಬದ್ಧವಾಗಿ ಹೇಗೆ ರಸ್ತೆ ದಾಟುತ್ತಿವೆ, ಇದಕ್ಕೆ ನಾವು ಸಾಕ್ಷಿಯಾಗಿದ್ದೇವೆ ಎಂದು ಬರೆದುಕೊಂಡಿದ್ದಾರೆ.

    ಮೂಲ ಸೌಕರ್ಯಗಳನ್ನು ಬಳಸಿಕೊಂಡು ಆನೆಗಳು ಹೇಗೆ ರಸ್ತೆ ಮೂಲಕ ಹಾದು ಹೋಗುತ್ತವೆ ಎಂಬುದಕ್ಕೆ ಇದು ಉದಾಹರಣೆ. ಬಲಿಷ್ಟ ಸದಸ್ಯರನ್ನು ಹೊಂದಿದ ಆನೆಗಳು ಹೇಗೆ ಶಿಸ್ತಿನ ಗುಂಪು ರಚಿಸಿಕೊಂಡಿವೆ ನೋಡಿ. ಇದೆಲ್ಲ ಕೇವಲ ರಸ್ತೆ ದಾಟಲು ಮಾತ್ರ. ಇಂತಹ ದೃಶ್ಯಗಳಿಗೆ ನಾವು ಸಾಕ್ಷಿಯಾಗಿದ್ದೇವೆ. ಛತ್ತಿಸ್‍ಗಢದ ಕೋಬ್ರಾ ಜಿಲ್ಲೆಯ ಹಸ್ಡಿಯೋ ಅರಾಂಡ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಸ್ನೇಹಿತರೊಬ್ಬರು ಕಳುಹಿಸಿದ್ದರು ಎಂದು ಪೋಸ್ಟ್ ಮಾಡಿದ್ದಾರೆ.

    ವಿಡಿಯೋದಲ್ಲಿ ಆನೆಗಳು ದೊಡ್ಡ ಗುಂಪು ರಚಿಸಿಕೊಂಡು ರಸ್ತೆ ದಾಟುತ್ತಿದ್ದು, ಬೃಹತ್ ಆನೆಗಳು ಆ ಗುಂಪನ್ನು ಮುನ್ನಡೆಸುತ್ತಿವೆ. ಆನೆಗಳ ಒಗ್ಗಟ್ಟು ಹಾಗೂ ನಾಯಕತ್ವ ಗುಣವನ್ನು ನೆಟ್ಟಿಗರು ಕೊಂಡಾಡಿದ್ದಾರೆ. ಇನ್ನೂ ಕೆಲವರು ಅಭಿವೃದ್ಧಿಯ ಹೆಸರಿನಲ್ಲಿ ಕಾಡನ್ನು ಮಾನವರು ಹೇಗೆ ಅತಿಕ್ರಮಣ ಮಾಡಿಕೊಂಡಿದ್ದೇವೆ ನೋಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಮಾನವರು ವಿಶ್ವವನ್ನು ನರಕ ಮಾಡಿದ್ದಾರೆ. ಇದೀಗ ದೈತ್ಯರಾದ ನಾವು ಮರಳಿದ್ದೇವೆ, ಅವರ ಮನೆ ಹಾಗೂ ಅಭಿವೃದ್ಧಿಯನ್ನು ವಶಪಡಿಸಿಕೊಳ್ಳುತ್ತೇವೆ ಎಂದು ಆನೆಗಳು ಹೇಳಿದಂತಿದೆ ಎಂದು ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದಾರೆ. ಎಂತಹ ಸೌಂದರ್ಯ, ಶಿಸ್ತು, ನೋಡಲು ಕಣ್ಣಿಗೆ ಹಬ್ಬದಂತೆ ಭಾಸವಾಗುತ್ತದೆ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.