Tag: forest

  • ಮೂರು ಹಸುಗಳ ಮೇಲೆ ಗುಂಡಿನ ದಾಳಿ

    ಮೂರು ಹಸುಗಳ ಮೇಲೆ ಗುಂಡಿನ ದಾಳಿ

    ಮಡಿಕೇರಿ: ಕಾಡಿನಲ್ಲಿ ಮೇಯಲು ಬಿಟ್ಟಿದ ಮೂರು ಹಸುಗಳ ಮೇಲೆ ಗುಂಡಿನ ದಾಳಿ ನಡೆಸಿ ಕೊರಳ ಕೊಯ್ದಿರುವ ಘಟನೆ ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಹೆಬ್ಬಾಲೆ ದೇವರಪುರದ ಎಸ್ಟೇಟ್ ವೊಂದರಲ್ಲಿ ನಡೆದಿದೆ.

    ಕಾಡಿನಲ್ಲಿ ಮೂರು ಹಸುಗಳ ಮೃತದೇಹ ದೊರೆತಿದ್ದು, ಗುಂಡು ಹಾರಿಸಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಅಲ್ಲದೇ ಹಸುಗಳ ಕುತ್ತಿಗೆಯನ್ನು ಕತ್ತರಿಸಲಾಗಿದೆ. ಮಾಂಸಕ್ಕಾಗಿ ಈ ಕೃತ್ಯ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ. ಕೊಲೆಗಡುಕರು ಮೃತದೇಹಗಳನ್ನು ಸ್ಥಳದಲ್ಲೇ ಬಿಟ್ಟು ಹೋಗಿದ್ದಾರೆ. ಹಸುಗಳ ಮಾಲೀಕರದ ರಮೇಶ್ ಸಾಬು ಗಣಪತಿ ಮತ್ತು ಎರವರ ಚುಬ್ರ ಅವರಿಗೆ ಸೇರಿದ ಹಸುಗಳು ಇವಾಗಿವೆ.

    ಈ ರೀತಿಯ ಕೃತ್ಯ ಮಾಡಿರುವ ದುಷ್ಕರ್ಮಿಗಳ ಪತ್ತೆಗೆ ಒತ್ತಾಯಿಸಿದ್ದಾರೆ. ಪ್ರಕರಣ ಸಂಬಂಧ ಪೋನ್ನಂಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

  • ಕೊಡಗಿನಲ್ಲಿ ಪುಂಡಾಟ ನಡೆಸುತ್ತಿದ್ದ ಕಾಡಾನೆ ಸೆರೆ

    ಕೊಡಗಿನಲ್ಲಿ ಪುಂಡಾಟ ನಡೆಸುತ್ತಿದ್ದ ಕಾಡಾನೆ ಸೆರೆ

    ಮಡಿಕೇರಿ: ಪುಂಡಾಟ ನಡೆಸುತ್ತಿದ್ದ ಕಾಡಾನೆಯೊಂದನ್ನು ಅರಣ್ಯ ಇಲಾಖೆ ಸಿಬ್ಬಂದಿ 6 ಸಾಕಾನೆಗಳನ್ನು ಬಳಸಿ ಯಶಸ್ವಿಯಾಗಿ ಕಾಡಾನೆಯನ್ನು ಸೆರೆಹಿಡಿದಿದ್ದಾರೆ.

    ಕೊಡಗು ಜಿಲ್ಲೆಯ ಪೋನ್ನಂಪೇಟೆ ತಾಲೂಕಿನ ಗೋಣಿಕೋಪ್ಪ ಸಮೀಪದ ಕಳತ್ಮಾಡು ಹಾಗೂ ಅಮ್ಮತ್ತಿ ಸುತ್ತಮುತ್ತ ಪ್ರದೇಶದಲ್ಲಿ ಕಳೆದ ಒಂದು ವರ್ಷದಿಂದ ಕಾಡಾನೆ ಹಾವಳಿ ಹೆಚ್ಚಾಗಿತ್ತು. ಕಾಡಾನೆಯ ಉಪಟಳಕ್ಕೆ ಬೇಸತ್ತಿದ್ದ ಜನರು ಆನೆಗಳನ್ನು ಸೆರೆಹಿಡಿಯುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ದರು.

    ಕಾಡಾನೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು. ಈ ಕಾರ್ಯಾಚರಣೆಯಲ್ಲಿ 40ಕ್ಕೂ ಅಧಿಕ ಸಿಬ್ಬಂದಿ ಭಾಗಿಯಾಗಿದ್ದು, 6 ಸಾಕಾನೆಗಳ ಬಳಸಿಕೊಂಡು ಕಳತ್ಮಾಡುವಿನ ಕಾಫಿ ತೋಟದಲ್ಲಿ ಸುಮಾರು 35 ವರ್ಷದ ಗಂಡಾನೆಯನ್ನು ಅರಣ್ಯ ಇಲಾಖೆಯ ಸಿಬ್ಬಂದಿಗಳು ಪರಿಶ್ರಮ ಪಟ್ಟು ಕೊನೆಗೂ ಕಾಡಾನೆಯನ್ನು ಸೆರೆಹಿಡಿಯಲಾಗಿದೆ.

    ಪಶುವೈದ್ಯ ಡಾ.ಮುಜೀಬ್ ಮಾರ್ಗದರ್ಶನದಲ್ಲಿ ಹಾಗೂ ಮಡಿಕೇರಿ, ವಿರಾಜಪೇಟೆ ಅರಣ್ಯಾಧಿಕಾರಿಗಳ ನೇತೃತ್ವದಲ್ಲಿ, ಕಾರ್ಯಾಚರಣೆ ನಡೆಸಲಾಗಿದೆ. ಮತ್ತಿಗೋಡು ಅನೆ ಶಿಬಿರದಿಂದ ಸಾಕಾನೆ ಅಭಿಮನ್ಯು ನೇತ್ರತ್ವದಲ್ಲಿ , ಹರ್ಷ, ಅಜಯ, ಧನಂಜಯ, ವಿಕ್ರಮ, ಸಾಕಾನೆಗಳು, ಕಾಡಾನೆ ಸೆರೆಹಿಡಿಯುವ ಕಾರ್ಯಾಚರಣೆಯಲ್ಲಿ ಶ್ರಮಪಟ್ಟಿವೆ.

  • ಕಾಡ್ಗಿಚ್ಚು ನಂದಿಸುತ್ತಿರುವ ಅರಣ್ಯ ಸಚಿವರ ವೀಡಿಯೋ ವೈರಲ್

    ಕಾಡ್ಗಿಚ್ಚು ನಂದಿಸುತ್ತಿರುವ ಅರಣ್ಯ ಸಚಿವರ ವೀಡಿಯೋ ವೈರಲ್

    ಡೆಹ್ರಾಡೂನ್: ಉತ್ತರಾಖಂಡದ ಅರಣ್ಯದ ಹಲವು ಭಾಗಗಳಲ್ಲಿ ಕಾಡ್ಗಿಚ್ಚು ತೀವ್ರಗೊಂಡಿದೆ. ಅರಣ್ಯ ಸಚಿವರಾದ ಹರಾಕ್ ಸಿಂಗ್ ಬೆಂಕಿ ನಂದಿಸಲು ಪ್ರಯತ್ನಿಸುತ್ತಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

    ವೈರಲ್ ವೀಡಿಯೋದಲ್ಲಿ ಏನಿದೆ?
    ಪೌರಿ ಜಿಲ್ಲೆಯಲ್ಲಿ ಕಾಡು ಹೊತ್ತಿ ಉರಿಯುತ್ತಿರುವಾಗ ಗಿಡವೊಂದನ್ನು ಹಿಡಿದು ಅದರ ಮೂಲಕವಾಗಿ ಸಚಿವ ಸಿಂಗ್ ಅವರು ಬೆಂಕಿ ನಂದಿಸಲು ಯತ್ನಿಸಿದ್ದಾರೆ. 30 ಸಕೆಂಡ್‍ಗಳ ಈ ವೀಡಿಯೋ ವೈರಲ್ ಆಗಿದೆ. ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೆಲವರು ವ್ಯಂಗ್ಯಮಾಡಿದ್ದಾರೆ.

    ರಾಜ್ಯದ ಹಲವೆಡೆ ಕಾಡ್ಗಿಚ್ಚು ಮಿತಿ ಮೀರುತ್ತಿದ್ದು, ಬೆಂಕಿ ನಂದಿಸಲು ಭಾರತೀಯ ವಾಯುಪಡೆ ಶ್ರಮಿಸುತ್ತಿದೆ. ಕಳೆದ 6 ತಿಂಗಳಲ್ಲಿ ರಾಜ್ಯದಲ್ಲಿ ಒಂದು ಸಾವಿರದಷ್ಟು ಕಾಡ್ಗಿಚ್ಚು ಪ್ರಕರಣಗಳು ವರದಿಯಾಗಿವೆ.

  • ಕಾಡಿಗೆ ಬೆಂಕಿ ಹಚ್ಚಿ ಅರಣ್ಯಾಧಿಕಾರಿಗಳ ದಾರಿ ತಪ್ಪಿಸಿ ಗಂಧದ ಮರಗಳ ಕಳ್ಳತನ

    ಕಾಡಿಗೆ ಬೆಂಕಿ ಹಚ್ಚಿ ಅರಣ್ಯಾಧಿಕಾರಿಗಳ ದಾರಿ ತಪ್ಪಿಸಿ ಗಂಧದ ಮರಗಳ ಕಳ್ಳತನ

    ಚಿಕ್ಕಮಗಳೂರು: ಮರಗಳ್ಳರು ಕಾಡಿಗೆ ಬೆಂಕಿ ಹಚ್ಚಿ ಅರಣ್ಯ ಅಧಿಕಾರಿಗಳ ದಾರಿ ತಪ್ಪಿಸಿ ಗಂಧದ ಮರಗಳನ್ನ ಕಡಿದು ಕದ್ದು ಪರಾರಿಯಾಗಿರೋ ಘಟನೆ ತಾಲೂಕಿನ ಸಖರಾಯಪಟ್ಟಣ ಸಮೀಪದ ಚುರ್ಚೆಗುಡ್ಡದಲ್ಲಿ ನಡೆದಿದೆ.

    ತಾಲೂಕಿನ ಹಿರೇಗೌಜ ಸಮೀಪದ ಚುರ್ಚೆಗುಡ್ಡದಲ್ಲಿ ಯತೇಚ್ಛವಾಗಿ ಶ್ರೀಗಂಧದ ಮರಗಳಿವೆ. ಕಳೆದೊಂದು ವಾರದಲ್ಲೇ ಸುಮಾರು 30ಕ್ಕೂ ಹೆಚ್ಚು ಗಂಧದ ಮರಗಳು ಕಳ್ಳರ ಪಾಲಾಗಿವೆ. ಚುರ್ಚೆಗುಡ್ಡದಲ್ಲಿ ಸ್ವಾಭಾವಿಕವಾಗಿ ಬೆಳೆದ ಶ್ರೀಗಂಧದ ಮರಗಳ ಮೇಲೆ ಕಳ್ಳರ ಕಣ್ಣು ಬಿದ್ದಿದೆ. ಮರಗಳ್ಳರು ಕಳ್ಳತನ್ಕಕೆ ಇಳಿಯೋ ಮುನ್ನ ಅಷ್ಟೇ ಸಲೀಸಾಗಿ ಅರಣ್ಯ ಇಲಾಖೆಯ ದಿಕ್ಕು ತಪ್ಪಿಸುತ್ತಿದ್ದಾರೆ.

    ಚುರ್ಚೆಗುಡ್ಡ ಸುಮಾರು 10 ಸಾವಿರ ಎಕರೆ ಪ್ರದೇಶದಲ್ಲಿ ವ್ಯಾಪಿಸಿದೆ. ಹುಲುಸಾಗಿ ಬೆಳೆದಿರೋ ಇಲ್ಲಿನ ಶ್ರೀಗಂಧದ ಮರಗಳಿಗೆ ಭಾರೀ ಬೇಡಿಕೆ ಇದೆ. ಹಾಗಾಗಿ ಕಳ್ಳರ ಕಣ್ಣು ಇಲ್ಲಿನ ಮರಗಳ ಮೇಲೆ ಬಿದ್ದಿದೆ. ಮರಗಳ್ಳತನಕ್ಕೆ ಇಳಿಯೋ ಮುನ್ನ ಖದೀಮರ ಗ್ಯಾಂಗ್ ಕಾಡಿನ ಒಂದು ಭಾಗಕ್ಕೆ ಬೆಂಕಿ ಕೊಡುತ್ತಾರೆ. ಅಧಿಕಾರಿಗಳು ಆ ಭಾಗಕ್ಕೆ ದೌಡಾಯಿಸುತ್ತಿದ್ದಂತೆ ಇತ್ತ ತಮ್ಮ ಕೆಲಸ ಮುಗಿಸುತ್ತಿದ್ದಾರೆ. ಅನನ್ಯ ಅರಣ್ಯ ಸಂಪತ್ತು ಹಾಡಹಗಲೇ ಕಳ್ಳರ ಪಾಲಾಗುತ್ತಿದ್ದರು ಅರಣ್ಯ ಇಲಾಖೆ ಮೂಕ ಪ್ರೇಕ್ಷಕರಾಗುವಂತಾಗಿದೆ.

    ರಾಜ್ಯ-ದೇಶದಲ್ಲೇ ಚಿಕ್ಕಮಗಳೂರು ಪ್ರದೇಶದಲ್ಲಿ ಬೆಳೆಯುವ ಶ್ರೀಗಂಧ ಮರಗಳಿಗೆ ಭಾರೀ ಬೇಡಿಕೆ ಇದೆ. ಈ ಪ್ರದೇಶದಲ್ಲಿ ಬೆಳೆಯುವ ಶ್ರೀಗಂಧದ ಮರಗಳು ತುಂಬಾ ಉತ್ಕೃಷ್ಟ ಮಟ್ಟದ್ದು ಅನ್ನೋದು ಗೊತ್ತಾದ ಮೇಲೆ ಇಲ್ಲಿ ಅವ್ಯಾಹತವಾಗಿ ಶ್ರೀಗಂಧ ಕಳ್ಳತನ ನಡೆಯುತ್ತಿದೆ. ಹೀಗೆ ಒಂದೊಂದು ಪ್ರದೇಶವನ್ನ ಟಾರ್ಗೆಟ್ ಮಾಡಿ ಶ್ರೀಗಂಧ ಮರಗಳನ್ನ ಕಡಿಯೋ ಖತರ್ನಾಕ್ ಕಳ್ಳರು ಮರಗಳನ್ನ ಕೇರಳ, ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರದವರೆಗೆ ಸಾಗಿಸುತ್ತಾರೆಂಬ ಅನುಮಾನ ಮೂಡಿದೆ.

    ನೇರವಾಗಿ ದೊಡ್ಡ-ದೊಡ್ಡ ಕುಳಗಳ ಸಂಪರ್ಕ ಇಲ್ಲದಿದ್ದರೂ ಕೆಲ ಸ್ಥಳೀಯರ ಸಹಕಾರದಿಂದಲೇ ತಮಿಳುನಾಡು ಸೇರಿದಂತೆ ಹೊರ ರಾಜ್ಯಗಳಿಂದ ಬಂದು ಕೃತ್ಯ ಎಸಗುತ್ತಿರೋ ಶಂಕೆ ಕೂಡ ವ್ಯಕ್ತವಾಗಿದೆ. ಸದ್ಯ ಶ್ರೀಗಂಧದ ಮರಗಳ ಕಳ್ಳತನದಿಂದ ಕಂಗೆಟ್ಟಿರುವ ಅರಣ್ಯ ಇಲಾಖೆ ಕಳ್ಳರ ಹೆಡಮುರಿ ಕಟ್ಟಲು ಸಜ್ಜಾಗಿದ್ದು ಹಗಲಿರುಳು ಅರಣ್ಯ ಪ್ರದೇಶದಲ್ಲಿ ಕೂಂಬಿಂಗ್ ನಡೆಸುತ್ತಾ ಕಳ್ಳರಿಗಾಗಿ ಬಲೆ ಬೀಸಿದ್ದಾರೆ.

  • ಸಫಾರಿಗೆ ಹೋದ ಪ್ರವಾಸಿಗರಿಗೆ 2 ಆನೆಗಳಿಂದ ದಾಳಿ

    ಸಫಾರಿಗೆ ಹೋದ ಪ್ರವಾಸಿಗರಿಗೆ 2 ಆನೆಗಳಿಂದ ದಾಳಿ

    – ಮೈಜುಂ ಎನಿಸುವ ವೀಡಿಯೋ

    ಚಾಮರಾಜನಗರ: ಬಿಳಿಗಿರಿರಂಗನ ಬೆಟ್ಟದ ಹುಲಿ ಸಂರಕ್ಷಿತಾರಣ್ಯದಲ್ಲಿ ಸಫಾರಿಗೆ ತೆರಳಿದ್ದ ವೇಳೆ ಪ್ರವಾಸಿಗರ ಮೇಲೆ ಎರಡು ಆನೆ ದಾಳಿ ಮಾಡಿದ ಘಟನೆ ನಡೆದಿದೆ.

    ಸಫಾರಿ ವಾಹನದ ಹಿಂದೆ ಒಂದು, ಮುಂದೆ ಒಂದು ಕಾಡಾನೆ ದಾಳಿ ಮಾಡಿದೆ. ಸಫಾರಿ ವಾಹನ ಚಾಲಕನ ಸಮಯ ಪ್ರಜ್ಞೆಯಿಂದ ಅನಾಹುತ ತಪ್ಪಿದೆ. ಈ ಆನೆ ದಾಳಿ ಮಾಡಿದ ವೀಡಿಯೋ ಎಂಥವರನ್ನು ಒಮ್ಮೆ ಮೈಜುಂ ಎನಿಸುತ್ತದೆ.

    ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದ ಹುಲಿ ಸಂರಕ್ಷಿತಾರಣ್ಯದ ಕೆ.ಗುಡಿ ಸಫಾರಿ ಜೋನ್‍ನ ಭತ್ತದ ಗದ್ದೆ ಎಂಬಲ್ಲಿ ಸಫಾರಿಗೆ ಹೋಗಿದ್ದ ಪ್ರವಾಸಿಗರಿಗೆ ಎರಡು ಕಾಡಾನೆ ದಾಳಿ ಮಾಡಿವೆ. ಸಫಾರಿ ವಾಹನ ಚಾಲಕ ನಾಗರಾಜು ಆನೆ ದಾಳಿಗೆ ಅಂಜದೆ ನಿಧಾನವಾಗಿ ವಾಹನ ಚಲಾಯಿಸಿಕೊಂಡು ಬಂದು ಕಾಡಾನೆಗಳಿಂದ ತಪ್ಪಿಸಿಕೊಂಡಿದ್ದಾರೆ.

    ಸಫಾರಿ ವಾಹನದ ಹಿಂದೆ,ಮುಂದೆ ಆನೆ ಅಟ್ಯಾಕ್ ಮಾಡಿದ್ದು, ಹೆದರದೆ ಮುಂದೆ ಬರುತ್ತಿದ್ದ ಆನೆಯನ್ನು ಹಿಮ್ಮೆಟ್ಟಿಸಿ ವಾಹನ ಚಲಾಯಿಸಿದ ನಾಗರಾಜು ಕರ್ತವ್ಯ ನಿರ್ವಹಣೆಗೆ ಪ್ರವಾಸಿಗರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಮ್ಮನ್ನ ನಂಬಿ ಸಫಾರಿಗೆ ಪ್ರವಾಸಿಗರು ಬರುತ್ತಾರೆ. ನಮ್ಮ ಪ್ರಾಣ ಹೋದರೂ ಕೂಡ ಪ್ರವಾಸಿಗರ ರಕ್ಷಣೆ ನಮ್ಮ ಹೊಣೆ ಎಂದು ಚಾಲಕ ನಾಗರಾಜು ಹೇಳಿದ್ದಾರೆ.

  • ಕಾಡಾನೆಗಳ ಹಾವಳಿ – ಲಕ್ಷಾಂತರ ರೂ. ಮೌಲ್ಯದ ಬೆಳೆ ಹಾನಿ

    ಕಾಡಾನೆಗಳ ಹಾವಳಿ – ಲಕ್ಷಾಂತರ ರೂ. ಮೌಲ್ಯದ ಬೆಳೆ ಹಾನಿ

    ಹುಬ್ಬಳ್ಳಿ: ಕಾಡಾನೆಗಳ ಹಾವಳಿ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನಲ್ಲಿ ಮೀತಿಮೀರಿದ್ದು, ಕಾಡಾನೆಗಳ ಹಾವಳಿಯಿಂದ ಬೆಳೆ ಹಾನಿಯಾಗಿದ್ದು, ರೈತರು ಕಂಗಾಲಾಗಿದ್ದಾರೆ.

    ಕಲಘಟಗಿ ತಾಲೂಕಿನ ದೇವಿಕೊಪ್ಪ ಗ್ರಾಮದ ಸುತ್ತಮುತ್ತಲಿನ ಹೊಲಗಳಿಗೆ ಲಗ್ಗೆ ಇಟ್ಟಿರುವ 5 ಕಾಡಾನೆಗಳ ಗುಂಪು ರೈತರ ಬೆಳೆಗಳನ್ನೆಲ್ಲಾ ಹಾನಿ ಮಾಡಿದ್ದು, ರೈತರು ಭಯಭೀತರಾಗಿದ್ದಾರೆ.

    ಮುಂಡಗೋಡ್ ಅರಣ್ಯ ಪ್ರದೇಶದಿಂದ ಆಗಮಿಸಿರುವ 5 ಕಾಡಾನೆಗಳನ್ನ ಮರಳಿ ಕಾಡಿಗೆ ಅಟ್ಟಲು ಅರಣ್ಯ ಇಲಾಖೆ ಅಧಿಕಾರಿಗಳು ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಆದರೆ ಅರಣ್ಯ ಇಲಾಖೆ ಅಧಿಕಾರಿಗಳ ಕಾರ್ಯಾಚರಣೆಗೆ ಬಗ್ಗದ ಕಾಡಾನೆಗಳು ರೈತರ ಜಮೀನುಗಳಿಗೆ ನುಗ್ಗಿ ಬೆಳೆ ಹಾನಿಯುಂಟು ಮಾಡುತ್ತಿರುವುದರಿಂದ ರೈತರು ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ನಷ್ಟ ಅನುಭವಿಸುವಂತಾಗಿದೆ.

    ಕಳೆದ ಹಲವಾರು ವರ್ಷಗಳಿಂದ ಅರಣ್ಯದಿಂದ ಆಗಮಿಸುವ ಕಾಡಾನೆಗಳ ಹಿಂಡು ಬೆಳೆ ಹಾನಿ ಮಾಡಿದರೂ ಪರಿಹಾರ ಸಿಗದಿರುವುದರಿಂದ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹಾನಿಗೊಳಗಾದ ಬೆಳೆಗೆ ಪರಿಹಾರ ನೀಡಬೇಕು. ಕಾಡಾನೆಗಳ ಹಾವಳಿ ತಡೆಗಟ್ಟಲು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸುತ್ತಿದ್ದಾರೆ.

  • ಮಳೆ ಸುರಿಯುತ್ತಿದ್ದಂತೆ ಕುಣಿದು ಕುಪ್ಪಳಿಸಿದ ಮಹಿಳಾ ಅರಣ್ಯಾಧಿಕಾರಿ

    ಮಳೆ ಸುರಿಯುತ್ತಿದ್ದಂತೆ ಕುಣಿದು ಕುಪ್ಪಳಿಸಿದ ಮಹಿಳಾ ಅರಣ್ಯಾಧಿಕಾರಿ

    ಭುವನೇಶ್ವರ: ಅರಣ್ಯ ಪ್ರದೇಶದಲ್ಲಿ ಜೋರಾಗಿ ಮಳೆಸುರಿಯುತ್ತಿದ್ದಂತೆ ಅಲ್ಲಿನ ಮಹಿಳಾ ಅರಣ್ಯಾಧಿಕಾರಿಯೊಬ್ಬರು ಮಳೆಯಲ್ಲಿ ನೆನೆದುಕೊಂಡು ಕುಣಿದು ಕುಪ್ಪಳಿಸಿರುವ ವೀಡಿಯೋ ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತಿದೆ.

    ಒಡಿಶಾದ ಸಿಮಿಲಿಪಾಲ್‍ನ ರಾಷ್ಟ್ರೀಯ ಉದ್ಯಾನವನದಲ್ಲಿ ಕಳೆದ ಕೆಲದಿನಗಳಿಂದ ಉಂಟಾದ ಕಾಡ್ಗಿಚ್ಚಿನಿಂದಾಗಿ ಹಲವು ಪ್ರಾಣಿ ಪಕ್ಷಿಗಳು ಮತ್ತು ಸಸ್ಯ ಪ್ರಬೇಧಗಳು ನಾಶವಾಗಿದ್ದವು. ಇದರಿಂದ ನೊಂದಿದ್ದ ಅರಣ್ಯಧಿಕಾರಿ ಸ್ನೇಹ ಧಾಲ್, ಕಾಡ್ಗಿಚ್ಚು ಪ್ರದೇಶದಲ್ಲಿ ಮಳೆಸುರಿಯುತ್ತಿದ್ದಂತೆ ಖುಷಿಯಿಂದ ಕುಣಿದು ಕುಪ್ಪಳಿಸಿದ್ದಾರೆ.

    ಸ್ನೇಹ ಧಾಲ್ ಅರಣ್ಯವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆಯಲ್ಲಿ ಉತ್ತಮ ಕಾರ್ಯನಿರ್ವಹಿಸುತ್ತಿದ್ದು, ಮಯೂರ್ಭಂಜ್ ಜಿಲ್ಲೆಯ ಸಿಮಿಲಿಪಾಲ್‍ನಲ್ಲಿ ಸಂಭವಿಸಿದ ಕಾಡ್ಗಿಚ್ಚನ್ನು ನೋಡಿ ನೊಂದಿದ್ದರು. ಈ ಘಟನೆ ನಡೆದು ಎರಡು ವಾರಗಳಲ್ಲಿ ಸಿಮಿಲಿಪಾಲ್ ಅರಣ್ಯದಲ್ಲಿ ಮಳೆ ಸುರಿದಿದೆ. ಈ ಸಂದರ್ಭ ಅರಣ್ಯದಲ್ಲಿದ್ದ ಸ್ನೇಹ ಧಾಲ್ ತನ್ನ ಕೈಯನ್ನು ಮುಂದೆ ಚಾಚಿಕೊಂಡು ಮಳೆಗೆ ಮೈಯೊಡ್ಡಿ ನೃತ್ಯ ಮಾಡಿ ಇನ್ನು ಜೋರಾಗಿ ತುಂಬಾ ಮಳೆ ಸುರಿಯಲಿ ಎಂದು ಮಳೆರಾಯನನ್ನು ಬೇಡಿಕೊಳ್ಳುತ್ತಿರುವುದು ವೀಡಿಯೋದಲ್ಲಿ ಸೆರೆಯಾಗಿದೆ.

    ಸ್ನೇಹ ಧಾಲ್ ಅರಣ್ಯ ಪ್ರದೇಶದಲ್ಲಿ ಮಳೆಗಾಗಿ ಹಂಬಲಿಸಿದ ವೀಡಿಯೋವನ್ನು ಹಿರಿಯ ಅರಣ್ಯ ಅಧಿಕಾರಿ ರಮೇಶ್ ಪಾಂಡೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು, ದೇವರ ಕೃಪೆಯಿಂದ ಮಳೆ ಸುರಿದಿದೆ. ಕಾಡ್ಗಿಚ್ಚಿನಿಂದ ಅರಣ್ಯ ಸಂರಕ್ಷಣೆಗಾಗಿ ಹೋರಾಡಿದ ಸ್ನೇಹ ಧಾಲ್ ಮಳೆ ಬಂದ ಖುಷಿಗೆ ನೃತ್ಯ ಮಾಡಿದ್ದಾರೆ. ಸಿಮಿಲಿಪಾಲ್ ಅರಣ್ಯದಲ್ಲಿ ಮೋಡಿಸ್ ಉಪಗ್ರಹದ ಡೇಟಾ ಪ್ರಕಾರ ಕಾಡ್ಗಿಚ್ಚು ನಿಯಂತ್ರಣಕ್ಕೆ ಬಂದಿದೆ ಎಂದು ಬರೆದುಕೊಂಡಿದ್ದಾರೆ.

    ಒಡಿಶಾ ಸರ್ಕಾರ ತಿಳಿಸರುವ ಮಾಹಿತಿ ಪ್ರಕಾರ ಕಾಡ್ಗಿಚ್ಚಿನಿಂದ ಶೇ.95 ಭಾಗ ಕಾಡು ನಾಶವಾಗಿದೆ ಎಂದು ವರದಿಯಾಗಿದೆ.

  • 14 ಸಾವಿರ ಗಿಡ ನೆಡುವ ಬೃಹತ್ ಆಂದೋಲನಕ್ಕೆ ಚಾಲನೆ

    14 ಸಾವಿರ ಗಿಡ ನೆಡುವ ಬೃಹತ್ ಆಂದೋಲನಕ್ಕೆ ಚಾಲನೆ

    ಬೆಂಗಳೂರು: ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ 14 ಸಾವಿರ ಗಿಡ ನೆಡುವ ಬೃಹತ್ ಕಾರ್ಯಕ್ರಮವನ್ನು ಬೆಂಗಳೂರಿನ ಜಕ್ಕಾಸಂದ್ರದಲ್ಲಿ ಉದ್ಘಾಟಿಸಿದರು.

    ಸೇ ಟ್ರೀಸ್ (say tree) ಎನ್ವಿರಾನ್ಮೆಂಟಲ್ ಟ್ರಸ್ಟ್‌ ಈ ಕಾರ್ಯಕ್ರಮ ಆಯೋಜಿಸಿತ್ತು. ಕೆಎಸ್ಆರ್ ಪಿ ಪೊಲೀಸ್ ಕ್ವಾಟ್ರರ್ಸ್, ಜಕ್ಕಸಂದ್ರ 1ನೇ ಬ್ಲಾಕ್, ಕೋರಮಂಗಲದಲ್ಲಿ ನಡೆದ ಸಮಾರಂಭದಲ್ಲಿ ಸಚಿವ ಅರವಿಂದ ಲಿಂಬಾವಳಿ ಗಿಡ ನೆಟ್ಟು ನೀರುಣಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

    14 ಸಾವಿರ ಗಿಡ ನೆಡುವ ಉದ್ದೇಶಿತ ಯೋಜನೆಯ ಜಾಗ ಕೇಂದ್ರ ರೇಷ್ಮೆ ಮಂಡಳಿ (ಸೆಂಟ್ರಲ್ ಸಿಲ್ಕ್ ಬೋರ್ಡ್) ಜಂಕ್ಷನ್ ನಿಂದ‌ ಕೇವಲ 200 ಮೀಟರ್ ದೂರದಲ್ಲಿದೆ. ಮಿಯಾವಾಲ್ಕಿ ಅರಣ್ಯ ಎಂದು ಕರೆಯಲ್ಪಡುವ ಈ ದಟ್ಟವಾದ ಗಿಡವನ್ನು ನೆಟ್ಟ ಪ್ರದೇಶದ ಮರಗಳು ,ಸಾಮಾನ್ಯ ಮರಗಳಿಗಿಂತ ಶೇ. 30-40 ರಷ್ಟು ವೇಗವಾಗಿ ಬೆಳೆಯುತ್ತವೆ ಮತ್ತು ಕೇವಲ 2.5 ವರ್ಷಗಳಲ್ಲಿ ಕಾರ್ಬನ್ ಡೈಆಕ್ಸೈಡ್ ಹೀರಿಕೊಂಡು ಕೇಂದ್ರ ರೇಷ್ಮೆ ಮಂಡಳಿಯ ಸುತ್ತಲಿನ ಪ್ರದೇಶದ ಮಾಲಿನ್ಯವನ್ನು ಕಡಿಮೆ ಮಾಡಲಿದೆ.

    ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಚಿವ ಅರವಿಂದ ಲಿಂಬಾವಳಿ ಮಾತನಾಡಿ, ಬೆಂಗಳೂರನಲ್ಲಿ ಕಾಡು ಬೆಳಸುತ್ತಿರುವುದು ಸಂತಸದ ಸಂಗತಿ, ಬೆಂಗಳೂರಿನಲ್ಲಿ ಶೇ.9 ರಷ್ಟು ಕಾಡಿದೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇ. 80 ರಷ್ಟು ಕಾಡಿದೆ. ಕೆಎಸ್‌ಆರ್‌ಪಿ ಕ್ಯಾಂಪಸ್ ನ ನಿವಾಸಿಗಳು ಇಲ್ಲಿನ ಗಿಡಗಳ ರಕ್ಷಣೆ ಮಾಡಿ ಬೆಳೆಸಬೇಕು ಎಂದು ಅವರು ಹೇಳಿದರು.

    ಸ್ಥಳೀಯ ನಿವಾಸಿಗಳು ಒಂದೊಂದು ಗಿಡದ ರಕ್ಷಣೆ ಮಾಡಿದರೆ ಉತ್ತಮವಾಗಿ ಗಿಡಗಳು ಬೆಳೆಯುತ್ತವೆ. ಅರಣ್ಯ ಇಲಾಖೆಯಲ್ಲಿ ಉತ್ತಮ ಯೋಜನೆಯಿದ್ದು, ಯಾರಾದರು ಜಮೀನು ನೀಡಿದರೆ ಟ್ರಿ ಪಾರ್ಕ್ ಮಾಡಲಾಗುವುದು. ಸೋಶಿಯಲ್ ಫಾರೆಸ್ಟ್ ನಿರ್ಮಾಣ ನಾವೆಲ್ಲರೂ ಮಾಡಬೇಕಿದೆ, ಕಾಡು ಬೆಳೆದರೆ ನಾಡು ಉಳಿಯಲು ಸಾಧ್ಯ. ಈ ಹಿನ್ನೆಲೆಯಲ್ಲಿ ನಾವೆಲ್ಲರೂ ಕಾಡು ಬೆಳೆಸಿ, ನಾಡು ಉಳಿಸೋಣ ಎಂದು ಸಚಿವ ಅರವಿಂದ ಲಿಂಬಾವಳಿ ತಿಳಿಸಿದರು.

    ಕಾರ್ಯಕ್ರಮದಲ್ಲಿ ವಿಧಾನಪರಿಷತ್ತನ ಸದಸ್ಯರಾದ ರಘುನಾಥ ಮಲ್ಕಾಪುರ, ಕೆಎಸ್ ಆರ್ ಪಿ ಎಡಿಜಿಪಿ ಅಲೋಕ್ ಕುಮಾರ್, ಕೆಎಸ್ಆರ್ ಪಿ ಡಿಐಜಿಪಿ ವಿಕಾಶ್ ಕುಮಾರ್ ವಿಕಾಶ್, ಬಿಬಿಎಂಪಿ ಮಾಜಿ ಸದಸ್ಯರಾದ ಸರಸ್ವತಮ್ಮ, ಕ್ಲೆಮೆಂಟ್ ಜಯಕುಮಾರ, ದೇವಕಾಂತ, ದುರ್ಗೇಶ ಅಗ್ರಹಾರ, ಮದಸೂದನ ಹಾಗೂ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

  • 10 ದಿನಗಳಿಂದ ಹೊತ್ತಿ ಉರಿಯುತ್ತಿದೆ ರಾಷ್ಟ್ರೀಯ ಉದ್ಯಾನವನ

    10 ದಿನಗಳಿಂದ ಹೊತ್ತಿ ಉರಿಯುತ್ತಿದೆ ರಾಷ್ಟ್ರೀಯ ಉದ್ಯಾನವನ

    ಭುವನೇಶ್ವರ: ಏಷ್ಯಾದ ಎರಡನೇ ಅತೀ ದೊಡ್ಡ ಬಯೋಸ್ಫಿಯರ್ ರಿಸರ್ವ್ ಎನಿಸಿಕೊಂಡಿರುವ ಒಡಿಶಾದ ಸಿಮ್ಲಿಪಾಲ ರಾಷ್ಟ್ರೀಯ ಉದ್ಯಾನದಲ್ಲಿ ಸುಮಾರು 10 ದಿನಗಳಿಂದ ಹೊತ್ತಿ ಉರಿಯುತ್ತಿದೆ.

    ಕಳೆದ ವಾರ ಕಾಣಿಸಿಕೊಂಡ ದಿಢೀರ್ ಬೆಂಕಿಯಿಂದ ಅಪಾರವಾದ ವನ್ಯ ಸಂಪತ್ತು ಹಾನಿಗೊಳಗಾಗಿದೆ. ಈಗಾಗಲೇ ಕಾಡ್ಗಿಚ್ಚು ಮತ್ತಷ್ಟು ವಿಸ್ತರಿಸಿದ್ದು, ಉದ್ಯಾನವನದಲ್ಲಿ ಹೊತ್ತು ಉರಿಯುತ್ತಿರುವ ಬೆಂಕಿಯನ್ನ ನಿಯಂತ್ರಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.

    ಸ್ಥಳದಲ್ಲಿ ಅರಣ್ಯ ಇಲಾಖೆ, ಹೆಚ್ಚುವರಿ ಸಿಬ್ಬಂದಿ ಮತ್ತು ಹೆಚ್ಚಿನ ಅಗ್ನಿಶಾಮಕ ದಳವನ್ನು ನಿಯೋಜಿಸಲಾಗಿದೆ. ಸಿಮ್ಲಿಪಾಲ ರಾಷ್ಟೀಯ ಉದ್ಯಾನವನವು ಹುಲಿ ಮೀಸಲು ಪ್ರದೇಶವಾಗಿದೆ. ಇಲ್ಲಿಯವರೆಗೆ ಯಾವುದೇ ಪ್ರಾಣ ಹಾನಿ ಉಂಟಾಗಿಲ್ಲ ಎಂದು ಒಡಿಶಾ ಸರ್ಕಾರ ವರದಿ ಮಾಡಿದೆ. ಆದರೆ ಪ್ರಾಣಿಗಳಿಗೆ ಹಾನಿಯಾಗಿದೆಯಾ ಅನ್ನೋದು ತಿಳಿದುಬಂದಿಲ್ಲ.

  • 9 ದಿನದ ಹಿಂದೆ ನಾಪತ್ತೆ – ಉಜಿರೆ ಯುವತಿಯ ಶವ ಕಾಡಿನಲ್ಲಿ ಪತ್ತೆ

    9 ದಿನದ ಹಿಂದೆ ನಾಪತ್ತೆ – ಉಜಿರೆ ಯುವತಿಯ ಶವ ಕಾಡಿನಲ್ಲಿ ಪತ್ತೆ

    ಮಂಗಳೂರು: ಕಳೆದ ಒಂಬತ್ತು ದಿನದ ಹಿಂದೆ ನಾಪತ್ತೆಯಾಗಿದ್ದ ಬೆಳ್ತಂಗಡಿ ತಾಲೂಕಿನ ಉಜಿರೆ ಯುವತಿಯ ಮೃತದೇಹ ಇಂದು ಕಾಡಿನಲ್ಲಿ‌ ಪತ್ತೆಯಾಗಿದೆ.

    ಉಜಿರೆ‌ ಮನೆಯೊಂದರಲ್ಲಿ ಕೆಲಸ‌ ಮಾಡಿಕೊಂಡು ಕಂಪ್ಯೂಟರ್‌ ಶಿಕ್ಷಣ ಪಡೆಯುತ್ತಿದ್ದ 23 ವರ್ಷದ ತೇಜಸ್ವಿನಿ ಕಳೆದ ಒಂಬತ್ತು ದಿನದಿಂದ ನಾಪತ್ತೆಯಾಗಿದ್ದಳು. ತಾಯಿ‌ ಮನೆಗೆ ಹೋಗಿ ಬರುವುದಾಗಿ  ಹೇಳಿದ್ದ ತೇಜಸ್ವಿನಿ ಆ ಬಳಿಕ ನಾಪತ್ತೆಯಾಗಿದ್ದಳು.

    ಇಂದು ಬೆಳ್ತಂಗಡಿಯ ಕೊಲೋಡಿ ಕಾಡಿನಲ್ಲಿ ತೇಜಸ್ವಿನಿಯ ಮೃತದೇಹ ಪತ್ತೆಯಾಗಿದ್ದು,ಈಕೆ ರಾಸಾಯನಿಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.