Tag: forest

  • ಚಿರತೆಯೊಂದಿಗೆ ಹೋರಾಡಿ ಮಗಳನ್ನು ಕಾಪಾಡಿಕೊಂಡ ತಾಯಿ

    ಚಿರತೆಯೊಂದಿಗೆ ಹೋರಾಡಿ ಮಗಳನ್ನು ಕಾಪಾಡಿಕೊಂಡ ತಾಯಿ

    ಕೊಯಂಬತ್ತೂರು: ಚಿರತೆಯೊಂದಿಗೆ ಮಹಿಳೆಯೊಬ್ಬರು ಸೆಣಸಾಡಿ ತನ್ನ 11 ವರ್ಷದ ಮಗಳನ್ನು ಕಾಪಾಡಿಕೊಂಡ ಘಟನೆ ವಾಲ್ಪಾರೈ ನಲ್ಲಿ ನಡೆದಿದೆ.

    30 ವರ್ಷ ವಯಸ್ಸಿನ ಮುತ್ತುಲಕ್ಷ್ಮೀ ಎಂಬವರು ಮಗಳನ್ನು ಕಾಪಾಡಿಕೊಂಡ ಧೈರ್ಯವಂತ ತಾಯಿ. ಮುತ್ತುಲಕ್ಷ್ಮೀ ಮಗಳು ಸತ್ಯಾ ಜೊತೆ ಕಳೆದ ರಾತ್ರಿ ಹಿತ್ತಲಿನಲ್ಲಿ ಮರದ ಕಡ್ಡಿಗಳನ್ನು ಆಯುತ್ತಿದ್ದರು. ತಕ್ಷಣ ಪ್ರತ್ಯಕ್ಷವಾದ ಚಿರತೆಯೊಂದು ಸತ್ಯಳ ಮೇಲೆ ಹಾರಿ ಕುತ್ತಿಗೆಗೆ ಬಾಯಿ ಹಾಕಿ ಹಿಡಿದು ಎಳೆದಾಡಿದೆ.

    ಇದನ್ನು ಕಂಡ ಮುತ್ತುಲಕ್ಷ್ಮಿ ಧೈರ್ಯದಿಂದ ಕೈಯ್ಯಲಿದ್ದ ಕಟ್ಟಿಗೆಯಿಂದಲೇ ಚಿರತೆಗೆ ಬಾರಿಸಿದ್ದಾರೆ. ಏಟು ತಿಂದ ಚಿರತೆ ಸ್ಥಳದಿಂದ ಓಡಿಹೋಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಗಾಯಗೊಂಡಿರುವ ಸತ್ಯಳನ್ನು ಪೊಲ್ಲಾಚಿ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ. ವಿಷಯ ತಿಳಿದ ಅರಣ್ಯಾಧಿಕಾರಿಗಳು ಚಿರತೆಯನ್ನು ಹಿಡಿಯುವಲ್ಲಿ ಮುಂದಾಗಿದ್ದಾರೆ. ಕಳೆದ 10 ದಿನಗಳಿಂದ ಅದೇ ಪ್ರದೇಶದಲ್ಲಿ ಚಿರತೆ ಸುತ್ತಾಡುತ್ತಿದೆ ಎಂದು ವರದಿಯಾಗಿದೆ.

  • ಅಭಿಮಾನಿಗಳಿಗೆ ಹೊಸ ಸಂದೇಶ ನೀಡ್ತಿದ್ದಾರೆ ಚಾಲೆಂಜಿಂಗ್ ಸ್ಟಾರ್!

    ಅಭಿಮಾನಿಗಳಿಗೆ ಹೊಸ ಸಂದೇಶ ನೀಡ್ತಿದ್ದಾರೆ ಚಾಲೆಂಜಿಂಗ್ ಸ್ಟಾರ್!

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಒಂದು ಹೊಸ ಜಾಗೃತಿ ಅಭಿಯಾನಕ್ಕೆ ಸಾಥ್ ನೀಡುವ ಮುಲಕ ತಮ್ಮ ಅಭಿಮಾನಿಗಳಿಗೆ ಜಾಗೃತಿ ಮೂಡಿಸುತ್ತಿದ್ದಾರೆ.

    ಕಾಡು ಉಳಿದರೆ ನಾಡು, ಪ್ರಾಣಿ ಪಕ್ಷಿ ಪೃಕೃತಿಯನ್ನ ಉಳಿಸೋದು ಮನುಷ್ಯನ ಜವಾಬ್ದಾರಿ. ಆದರೆ ಸರ್ಕಾರದಿಂದ ಇಂಥಹ ಎಷ್ಟೇ ಸಲಹೆ ಸೂಚನೆ ಜಾಗೃತಿ ಕಾರ್ಯಕ್ರಮ ನಡೆದರೂ ಅದ್ಯಾಕೋ ಜನರ ಕಿವಿಗೆ ಹೋಗೋದೇ ಇಲ್ಲ. ಪೃಕೃತಿ ವಿಕೋಪದಿಂದ ಮಳೆ ಸರಿಯಾದ ಪ್ರಮಾಣದಲ್ಲಿ ಆಗುತ್ತಿಲ್ಲ. ಇದರಿಂದ ಕಾಡು ಕ್ಷೀಣಿಸುತ್ತಲೇ ಇದೆ. ಆದರೆ ಈ ಬಾರಿ ಕಾಡಿನ ರಕ್ಷಣೆಗಾಗಿ ಸರ್ಕಾರ ಮಹಾನ್ ಪರಿಸರ ಪ್ರೇಮಿಯೊಬ್ಬರನ್ನ ಆಯ್ಕೆ ಮಾಡಿಕೊಂಡಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೂಲಕ ಈ ಬಾರಿ ಅರಣ್ಯ ಸಂಪತ್ತಿನ ಮಹ್ವತ್ವ ಸಾರೋಕೆ ಹೊರಟಿದೆ.

    ದಿನನಿತ್ಯದ ಜೀವನದಲ್ಲಿ ದರ್ಶನ್‍ಗೆ ಪ್ರಾಣಿ- ಪಕ್ಷಿಗಳು ಅವಿಭಾಜ್ಯ ಅಂಗ. ದರ್ಶನ್ ಲಕ್ಷಾಂತರ ಖರ್ಚು ಮಾಡಿ ಮೈಸೂರು ಮೃಗಾಲಯದಲ್ಲಿ ಹುಲಿ ಆನೆಯನ್ನ ದತ್ತು ಪಡೆದು ಸಲಹುತ್ತಿದ್ದಾರೆ. ವರ್ಷಕ್ಕೆ ಒಮ್ಮೆಯಾದ್ರೂ ಕಾಡಿಗೆ ಪ್ರವಾಸ ಬೆಳೆಸಿ ಪೃಕೃತಿ ಮಡಿಲಲ್ಲಿ ಆಶ್ರಯಿಸುತ್ತಾರೆ. ಆದ್ದರಿಂದ ಈಗ ದರ್ಶನ್ ಕೂಡ ಕಾಡು ರಕ್ಷಣಾ ಜಾಗೃತಿ ಅಭಿಯಾನಕ್ಕೆ ಮನಃಪೂರ್ತಿ ಕೈಜೋಡಿಸಿ ಎಂಡೋರ್ಸ್ ಮಾಡಲಿದ್ದಾರೆ.

    ದರ್ಶನ್ ಎಂಡೋರ್ಸ್ ಮಾಡಿದ್ರೆ ಅದು ಹೆಚ್ಚಿನ ಜನಕ್ಕೆ ತಲುಪಬಲ್ಲದು ಅನ್ನೋದು ಅಭಿಪ್ರಾಯ. ಈ ಹಿಂದೆ ಮಾರ್ಚ್ ತಿಂಗಳಲ್ಲಿ ಅರಣ್ಯ ರಕ್ಷಣಾ ಸಮಿತಿ ದರ್ಶನ್ ಸಂದೇಶ ನೀಡಿರುವ ವಿಡಿಯೋ ಒಂದನ್ನ ಬಿಡುಗಡೆ ಮಾಡಿತ್ತು. ಇದೀಗ ಜೂನ್ 5 ರಂದು ಅರಣ್ಯ ರಕ್ಷಣಾ ಸಮಿತಿ ವತಿಯಿಂದ ನೂತನ ಸಂದೇಶವಿರುವ ಹೊಚ್ಚ ಹೊಸ ವೀಡಿಯೋವೊಂದು ರಿಲೀಸ್ ಆಗಲಿದೆ. ಈ ವೀಡಿಯೋವನ್ನ ಕರ್ನಾಟಕದ ಮಲೆ ಮಹದೇಶ್ವರ ಬೆಟ್ಟ, ಬಂಡೀಪುರ, ನಾಗರಹೊಳೆ ಅಭಯಾರಣ್ಯ ಮುಂತಾದ ಜಾಗದಲ್ಲಿ ಶೂಟ್ ಮಾಡಲಾಗಿದೆ.

    ಈ ವಿಡಿಯೋದಲ್ಲಿ ದರ್ಶನ್ ಗಿಡ ನೆಡುವುದರ ಮೂಲಕ ಮಹತ್ವದ ಭೂಮಿಯ ರಕ್ಷಣೆಯ ಚುಟುಕು ಸಂದೇಶ ನೀಡುತ್ತಿದ್ದಾರೆ. ಸದ್ಯಕ್ಕೆ ಅವರು `ಯಜಮಾನ’ ಸಿನಿಮಾವನ್ನು ಮಾಡುತ್ತಿದ್ದಾರೆ. ತಮ್ಮ ಬ್ಯುಸಿ ಶೂಟಿಂಗ್ ನಲ್ಲೂ ಅರಣ್ಯ ರಕ್ಷಣೆಗೆ ಗಾಗಿ ಸಾಥ್ ನೀಡಿದ್ದಾರೆ.

  • 14 ಅಡಿ ಉದ್ದ, 6 ಕೆ.ಜಿ ತೂಕದ ಕಾಳಿಂಗ ಸರ್ಪ ರಕ್ಷಣೆ!

    14 ಅಡಿ ಉದ್ದ, 6 ಕೆ.ಜಿ ತೂಕದ ಕಾಳಿಂಗ ಸರ್ಪ ರಕ್ಷಣೆ!

    ಮಡಿಕೇರಿ: ಭಾರೀ ಗಾತ್ರದ ಕಾಳಿಂಗ ಸರ್ಪವೊಂದು ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಕೊತ್ನಳ್ಳಿ ಗ್ರಾಮದಲ್ಲಿ ಸೆರೆಯಾಗಿದೆ.

    ಗ್ರಾಮದ ಪ್ರಸಾದ್ ಮನೆಯ ಮುಂಭಾಗದಲ್ಲಿರುವ ಮರದ ಕೊಂಬೆ ಮೇಲೆ ಬಂದು ಸೇರಿಕೊಂಡಿದ್ದ 14 ಅಡಿ ಉದ್ದ, 6 ಕೆ.ಜಿ ತೂಕದ ಭಾರೀ ಗಾತ್ರದ ಹಾವನ್ನು ಉರಗ ತಜ್ಞ ರಘು ಹಾಗೂ ಜನಾರ್ಧನ್ ಕಾರ್ಯಾಚರಣೆ ಮಾಡಿ ಸಂರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ.

    ಬುಧವಾರ ಸಂಜೆ 5 ಗಂಟೆ ಸುಮಾರಿಗೆ ಹಾವು ಮನೆಯ ಮುಂಭಾಗದಲ್ಲಿರುವ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ತೆರಳಿದ ರಘು ಹಾಗು ಸ್ನೇಹಿತರ ತಂಡ ಸತತ ಒಂದು ಗಂಟೆ ಪ್ರಾಯಾಸ ಪಟ್ಟು ಹಾವನ್ನು ಸೆರೆಹಿಡಿದಿದ್ದಾರೆ. ಸೆರೆ ಹಿಡಿದ ಅಪರೂಪದ ಹಾವನ್ನು ಸಾರ್ವಜನಿಕವಾಗಿ ಪ್ರದರ್ಶನ ಮಾಡಿ ಹಾವುಗಳ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.

    ರಘು ಹಾವುಗಳ ಅಳಿವಿನ ಬಗ್ಗೆ ಜನರಿಗೆ ಹಾವುಗಳ ಬಗ್ಗೆ ಇರೋ ಕೆಲ ತಪ್ಪು ತಿಳುವಳಿಕೆಗಳ ಬಗ್ಗೆ ಜಾಗೃತಿ ಮೂಡಿಸಿ ಹಾವು ಕಂಡರೆ ಕೊಲ್ಲಬೇಡಿ. ನಮಗೆ ಮಾಹಿತಿ ನೀಡಿ, ನಾವು ಹಾವನ್ನು ರಕ್ಷಿಸಿ ತೆಗೆದುಕೊಂಡು ಹೋಗಿ ಜೀವ ಉಳಿಸುತ್ತೇವೆ ಎಂದು ಮನವಿ ಮಾಡುತ್ತಿದ್ದಾರೆ.

    ಕಳೆದ ಹಲವು ವರ್ಷಗಳಿಂದ ಹಾವುಗಳನ್ನ ರಕ್ಷಿಸೋ ಕೆಲಸ ಮಾಡುತ್ತಿರೋ ರಘು ಇದೂವರೆಗೆ 3 ಸಾವಿರಕ್ಕೂ ಹೆಚ್ಚು ಹಾವುಗಳನ್ನ ರಕ್ಷಿಸಿ ಕಾಡಿಗೆ ಮರಳಿಸಿದ್ದಾರೆ. ಇವುಗಳ ಪೈಕಿ 17 ಕಾಳಿಂಗ ಸರ್ಪಗಳು ಸೇರಿವೆ. ಸಾಮಾನ್ಯವಾಗಿ ಶೀತ ಪ್ರದೇಶಗಳಲ್ಲಿ ವಾಸ ಮಾಡೋ ಕಾಳಿಂಗ ಸರ್ಪ ಆಕಸ್ಮಿಕವಾಗಿ ಮನೆಗೆ ಬಂದು ಸೇರಿಕೊಂಡಿತ್ತು. ಹಾವನ್ನು ಸುರಕ್ಷಿತವಾಗಿ ಸೆರೆ ಹಿಡಿದ ರಘು ಸೋಮವಾರಪೇಟೆ ಸಮೀಪದ ಪುಷ್ಪಗಿರಿ ಮೀಸಲು ಅರಣ್ಯಕ್ಕೆ ಬಿಟ್ಟಿದ್ದಾರೆ.

  • ಕರಡಿ ಜೊತೆ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಪ್ರಾಣ ಕಳೆದುಕೊಂಡ – ವಿಡಿಯೋ ವೈರಲ್

    ಕರಡಿ ಜೊತೆ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಪ್ರಾಣ ಕಳೆದುಕೊಂಡ – ವಿಡಿಯೋ ವೈರಲ್

    ಭುವನೇಶ್ವರ: ವ್ಯಕ್ತಿಯೊಬ್ಬ ಗಾಯಗೊಂಡಿದ್ದ ಕರಡಿಯ ಜೊತೆಗೆ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಮೃತಪಟ್ಟಿರುವ ಘಟನೆ ಒಡಿಶಾದಲ್ಲಿ ನಡೆದಿದೆ.

    ಟ್ಯಾಕ್ಷಿ ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದ ಪ್ರಭು ಭಾತ್ರಾ ಮೃತ ದುರ್ದೈವಿ. ಬುಧವಾರ ನಬರಾಂಗ್ಪುರ ಜಿಲ್ಲೆಯ ಕೋಸಗುಮುದ ಬ್ಲಾಕ್ ನಡಿ ಬರುವ ಅರಣ್ಯದ ಬಳಿ ಈ ಘಟನೆ ಸಂಭವಿಸಿದೆ.

    ಘಟನೆ ವಿವರ?: ಪ್ರಭು ಭಾತ್ರಾ ಕೆಲವು ಪ್ರಯಾಣಿಕರೊಂದಿಗೆ ಕಾಟಪಾಡ್ ನಿಂದ ಪಾಪದಹಂಡಿಗೆ ಬೊಲೆರೋ ಕಾರಿನಲ್ಲಿ ಹೋಗುತ್ತಿದ್ದರು. ಎಲ್ಲರೂ ಮದುವೆ ಕಾರ್ಯಕ್ರಮ ಮುಗಿಸಿಕೊಂಡು ಹಿಂದಿರುಗುತ್ತಿದ್ದಾಗ ಅರಣ್ಯದ ಕೊಳದ ಬಳಿ ಒಂದು ಕರಡಿ ಇತ್ತು. ಅದನ್ನು ನೋಡಿದ ಪ್ರಭು ಭಾತ್ರಾ ಅದರ ಜೊತೆ ಸೆಲ್ಫಿ ತೆಗೆದುಕೊಳ್ಳಲು ಬಯಸಿದ್ದಾನೆ.

    ಪ್ರಭು ಭಾತ್ರಾ ಕಾರಿನಿಂದ ಇಳಿದು ಗಾಯಗೊಂಡಿದ್ದ ಕರಡಿ ಬಳಿ ಹೋಗಿದ್ದಾನೆ. ಆದರೆ ಕರಡಿ ತಕ್ಷಣ ಪ್ರಭುವನ್ನು ಹಿಡಿದು ಕಚ್ಚಲು ಆರಂಭಿಸಿದೆ. ಇದನ್ನು ಗಮನಿಸಿದ ಸಹ ಪ್ರಯಾಣಿಕರು ಆತನನ್ನ ಕಾಪಾಡಲು ಪ್ರಯತ್ನಿಸಿದ್ದಾರೆ. ಆದರೆ ಕರಡಿ ಆತನನ್ನು ಬಿಡದೆ ಕ್ರೂರವಾಗಿ ಕಚ್ಚಿ ಸಾಯಿಸಿದೆ.

    ಈ ಎಲ್ಲಾ ದೃಶ್ಯವನ್ನು ಸಹ ಪ್ರಯಾಣಿಕರೊಬ್ಬರು ತಮ್ಮ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿದ್ದಾರೆ. ನಂತರ ಅವರು ಅರಣ್ಯಾಧಿಕಾರಿಗಳ ಕಚೇರಿಗೆ ಮಾಹಿತಿ ತಿಳಿಸಿದ್ದಾರೆ. ವಿಷಯ ತಿಳಿದ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದು, ಕರಡಿಯಿಂದ ಮೃತ ದೇಹವನ್ನು ರಕ್ಷಿಸಿದ್ದಾರೆ.

  • ಟ್ರಕ್ಕಿಂಗ್ ಗೆ ಬಂದಿದ್ದ 80 ಪ್ರವಾಸಿಗರನ್ನ ವಶಕ್ಕೆ ಪಡೆದ ಅರಣ್ಯ ಹಾಗು ಪೊಲೀಸ್ ಇಲಾಖೆ ಅಧಿಕಾರಿಗಳು!

    ಟ್ರಕ್ಕಿಂಗ್ ಗೆ ಬಂದಿದ್ದ 80 ಪ್ರವಾಸಿಗರನ್ನ ವಶಕ್ಕೆ ಪಡೆದ ಅರಣ್ಯ ಹಾಗು ಪೊಲೀಸ್ ಇಲಾಖೆ ಅಧಿಕಾರಿಗಳು!

    ಕೋಲಾರ: ಜಿಲ್ಲೆಯಲ್ಲಿ ಬೃಹತ್ ಆನ್ ಲೈನ್‍ಟ್ರಿಪ್ ಚೀಟಿಂಗ್ ಪ್ರಕರಣವೊಂದನ್ನ ಬೇಧಿಸುವಲ್ಲಿ ಅರಣ್ಯ ಇಲಾಖೆ ಹಾಗು ಪೊಲೀಸ್ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

    ಕೋಲಾರ ಹೊರವಲಯದ ಅಂತರಗಂಗೆ ಬೆಟ್ಟದಲ್ಲಿ 80 ಮಂದಿ ಅತಿಕ್ರಮ ಪ್ರವೇಶ ಮಾಡಿ ಚಾರಣಕ್ಕಾಗಿ ಬಂದಿದ್ದ ಪ್ರವಾಸಿಗರನ್ನು ಕೋಲಾರ ಗ್ರಾಮಾಂತರ ಪೊಲೀಸರು ಹಾಗು ಅರಣ್ಯ ಇಲಾಖೆ ಸಿಬ್ಬಂದಿ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

    ಬೆಂಗಳೂರು ಮೂಲದ ತಿಲೋಫಿಲಿಯಾ ಎಂಬ ಆನ್‍ಲೈನ್ ಸಂಸ್ಥೆ ಬೆಂಗಳೂರಿಂದ ಪ್ರವಾಸಿಗರನ್ನ ಕರೆತಂದು ಟ್ರಕ್ಕಿಂಗ್ ಅವಕಾಶ ಕೊಡಿಸೋದಾಗಿ ಚೀಟಿಂಗ್ ಮಾಡಿದೆ. ನಂತರ ಅಂತರಗಂತೆ ಬೆಟ್ಟದ ನಿಷೇದಿತ ಅರಣ್ಯ ಪ್ರದೇಶದಲ್ಲಿ ಸಂಚರಿಸಿದ್ದಾರೆ. ಆದ್ದರಿಂದ 80 ಮಂದಿಯನ್ನ ವಶಕ್ಕೆ ಪಡೆದ ಅಧಿಕಾರಿಗಳು ಮುಚ್ಚಳಿಕೆ ಬರೆದುಕೊಂಡು ಬಿಡುಗಡೆಗೊಳಿಸಿದ್ದಾರೆ.

    ಪ್ರವಾಸಿಗರನ್ನ ಕರೆತಂದಿದ್ದ ನಾಲ್ವರು ಹಾಗೂ ಒಂದು ಬಸ್ ಮತ್ತು ಟೆಂಪೋ ಟ್ರಾವಲರ್ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ಘಟನೆ ಸಂಬಂಧ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ನಿತ್ರಾಣವಾಗಿ ಬಿದ್ದಿದ್ದ ಕಡವೆಗೆ ಚಿಕಿತ್ಸೆ ನೀಡಿದ ಅರಣ್ಯಾಧಿಕಾರಿಗಳು

    ನಿತ್ರಾಣವಾಗಿ ಬಿದ್ದಿದ್ದ ಕಡವೆಗೆ ಚಿಕಿತ್ಸೆ ನೀಡಿದ ಅರಣ್ಯಾಧಿಕಾರಿಗಳು

    ಚಿಕ್ಕಮಗಳೂರು: ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದು ನೀರು ಸಿಗದೆ ನಿತ್ರಾಣಗೊಂಡು ಬಿದ್ದಿದ್ದ ಕಡವೆಗೆ ಅರಣ್ಯಾಧಿಕಾರಿಗಳು ಚಿಕಿತ್ಸೆ ನೀಡಿ, ತಮ್ಮ ವಾಹನದಲ್ಲೇ ಕಾಡಿಗೆ ಬಿಟ್ಟಿರುವ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ನಂದಿಬಂಟ್ಲು ಗ್ರಾಮದಲ್ಲಿ ನಡೆದಿದೆ.

    ಭದ್ರಾ ಅಭಯಾರಣ್ಯದಿಂದ ಆಹಾರ ಹುಡುಕುತ್ತಾ ಗ್ರಾಮದ ಸಚಿನ್ ಎಂಬವರ ತೋಟಕ್ಕೆ ಬಂದಿದ್ದ ಕಡವೆ ಅಲ್ಲೇ ಸುಸ್ತಾಗಿ ಬಿದ್ದಿತ್ತು. ತೋಟಕ್ಕೆ ಬಂದ ಸಚಿನ್ ಕಡವೆಯನ್ನ ಕಂಡು ಅರಣ್ಯಾಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದಾರೆ.

    ಮಾಹಿತಿ ತಿಳಿದು ಸ್ಥಳಕ್ಕೆ ಬಂದ ತಣಿಗೆಬೈಲು ಅರಣ್ಯಾಧಿಕಾರಿ ಉಲ್ಲಾಸ್ ಹಾಗೂ ಸಿಬ್ಬಂದಿಗಳು ಕಡವೆಗೆ ಚಿಕಿತ್ಸೆ ನೀಡಿ, ನೀರು ಕುಡಿಸಿ ತಮ್ಮ ಕಾರಿನಲ್ಲಿ ತೆಗೆದುಕೊಂಡು ಹೋಗಿ ಕಾಡಿಗೆ ಬಿಟ್ಟಿದ್ದಾರೆ.

  • ಅಪ್ರಾಪ್ತೆಯನ್ನು ಮದ್ವೆ ಮಾಡಿಕೊಡಲ್ಲ ಎಂದಿದ್ದಕ್ಕೆ ಕುಟುಂಬದ ಐವರ ಬರ್ಬರ ಕೊಲೆ!

    ಅಪ್ರಾಪ್ತೆಯನ್ನು ಮದ್ವೆ ಮಾಡಿಕೊಡಲ್ಲ ಎಂದಿದ್ದಕ್ಕೆ ಕುಟುಂಬದ ಐವರ ಬರ್ಬರ ಕೊಲೆ!

    ಜಮ್‍ಶೆಡ್‍ಪುರ: ಅಪ್ರಾಪ್ತ ಬಾಲಕಿಯನ್ನು ಮದುವೆ ಮಾಡಿಕೊಡುವುದಿಲ್ಲ ಎಂದಿದ್ದಕ್ಕೆ ಆತನ ಕುಟುಂಬದ ಐವರು ಸದಸ್ಯರನ್ನು ಕೊಲೆ ಮಾಡಿದ ಘಟನೆ ಮಾರ್ಚ್ 14ರಂದು ಜಾರ್ಖಂಡ್‍ನ ಪಶ್ಚಿಮ ಸಿಂಗ್‍ಭೂಮ್‍ನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ರಾಮ್‍ಸಿಂಗ್ ಸಿರ್ಕಾ(42), ಪಾನೂ ಕುಯಿ(40), ರಂಭಾ(17), ಕಂದೆ(12) ಹಾಗೂ ಸೋನಿಯಾ(8) ಮೃತ ದುರ್ದೈವಿಗಳು. ದೂರಿನಲ್ಲಿ 9 ಜನರ ಹೆಸರು ದಾಖಲಾಗಿದ್ದು, ಅದರಲ್ಲಿ ನಾಲ್ವರು ಪ್ರಭಾವಶಾಲಿ ಕುಟುಂಬದವರು ಎಂದು ಎಸ್‍ಐ ತೌಕೀರ್ ಅಲಾಮ್ ತಿಳಿಸಿದ್ದಾರೆ.

    ಒಂಬತ್ತು ಆರೋಪಿಗಳಲ್ಲಿ ಒಬ್ಬಾತ ರಾಮ್‍ಸಿಂಗ್‍ನ ಮಗಳನ್ನು ನನಗೆ ಮದುವೆ ಮಾಡಿಕೊಡಿ ಅಂತಾ ಕೇಳಿಕೊಂಡಿದ್ದನು. ಆದ್ರೆ ರಾಮ್‍ಸಿಂಗ್ ಮಗಳು ಇನ್ನು ಚಿಕ್ಕವಳಿದ್ದಾಳೆ ಅಂತಾ ಹೇಳಿ ಆರೋಪಿಯ ಮನವಿಯನ್ನು ತಿರಸ್ಕರಿಸಿದ್ರು. ಇದರಿಂದ ಅವಮಾನಿತನಾದ ಆರೋಪಿ ರಾಮ್ ಸಿಂಗ್ ಮನೆಯಲ್ಲಿ ಇಲ್ಲದ ಸಮಯದಲ್ಲಿ ಆತನ ಕುಟುಂಬದ ಐವರು ಸದಸ್ಯರನ್ನು ಕೊಲೆ ಮಾಡಿದ್ದಾನೆ.

    ಐವರನ್ನು ಕೊಲೆ ಮಾಡಿದ ನಂತರ ಅವರ ಮೃತದೇಹವನ್ನು ಆರೋಪಿ ತನ್ನ ಸಹಚರರ ಸಹಾಯದಿಂದ ಅರಣ್ಯ ಪ್ರದೇಶದಲ್ಲಿ ಹೂತು ಹಾಕಿದ್ದರು. ನಂತರ ರಾಮ್ ಸಿಂಗ್ ಮನೆಗೆ ಬರುವವರೆಗೂ ಕಾದು ಆತನನ್ನು ಕೂಡ ಕೊಲೆ ಮಾಡಿದ್ದಾನೆ. ನಂತರ ಆತನ ಮೃತದೇಹವನ್ನು ಕೂಡ ಅರಣ್ಯ ಪ್ರದೇಶದಲ್ಲಿ ಹೂತು ಹಾಕಿದ್ದಾರೆ ಎಂದು ಹೇಳಲಾಗಿದೆ.

    ಐವರು ಸದಸ್ಯರನ್ನು 9 ಮಂದಿ ಕೊಲೆ ಮಾಡಿದ್ದಾರೆ. 9 ಜನ ಆರೋಪಿಗಳಲ್ಲಿ ಪೊಲೀಸರು ಒಬ್ಬನನ್ನು ಬಂಧಿಸಿದ್ದು, ಉಳಿದ ಆರೋಪಿಗಳು ರಾಜ್ಯದಿಂದ ಪರಾರಿಯಾಗಿದ್ದಾರೆ ಎಂದು ಎಸ್‍ಐ ಹೇಳಿದ್ದಾರೆ.

    ಮಾರ್ಚ್ 24ರಂದು ಗುವಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ತುಲಸೈ ಗ್ರಾಮದಿಂದ 3ಕಿ.ಮೀ ದೂರದಲ್ಲಿರುವ ಕಾಡಿನಲ್ಲಿ ರಾಮ್ ಸಿಂಗ್ ಸಿರ್ಕಾ ಅವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಕಂಡುಬಂದಿದೆ. ಇನ್ನೂ ಉಳಿದ ನಾಲ್ವರ ಮೃತದೇಹ 5 ಕಿ.ಮೀ ದೂರದಲ್ಲಿರುವ ಮತ್ತೊಂದು ಕಾಡಿನಲ್ಲಿ ದೊರೆಯಿತ್ತು ಎಂದು ಪತ್ರಿಕೆಯಲ್ಲಿ ವರದಿಯಾಗಿದೆ.

  • ಗುಡ್ಡಕ್ಕೆ ಬೆಂಕಿ ಹಚ್ಚಿ ಪರಾರಿಯಾದ ಕಿಡಿಗೇಡಿಗಳು- ಸ್ಥಳೀಯ ನಿವಾಸಿಗಳಲ್ಲಿ ಆತಂಕ

    ಗುಡ್ಡಕ್ಕೆ ಬೆಂಕಿ ಹಚ್ಚಿ ಪರಾರಿಯಾದ ಕಿಡಿಗೇಡಿಗಳು- ಸ್ಥಳೀಯ ನಿವಾಸಿಗಳಲ್ಲಿ ಆತಂಕ

    ಯಾದಗಿರಿ: ಕಿಡಿಗೇಡಿಗಳು ಗುಡ್ಡಕ್ಕೆ ಬೆಂಕಿ ಹಂಚಿದ ಪರಿಣಾಮ ಹೊತ್ತಿ ಉರಿದ ಘಟನೆ ಜಿಲ್ಲೆಯ ನಾಯ್ಕಲ್ ಗ್ರಾಮದಲ್ಲಿ ನಡೆದಿದೆ.

    ಕಿಡಿಗೇಡಿಗಳು ಗುಡ್ಡದ ಮೇಲಿರುವ ಒಣಗಿದ ಮೇವಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಪರಿಣಾಮ ಗುಡ್ಡದ ಸುತ್ತಲೂ ಬೆಂಕಿ ಆವರಿಸಿದ್ದರಿಂದ ಗುಡ್ಡದ ಕೆಳ ಭಾಗದಲ್ಲಿ ವಾಸಿಸುತ್ತಿರುವ ಜನರಿಗೆ ಬೆಂಕಿ ಬಿದ್ದಿರುವ ವಿಚಾರ ತಿಳಿದಿದೆ. ಇದರಿಂದ ಗಾಬರಿಗೊಂಡು ಅವರು ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

    ಈ ಹಿನ್ನೆಲೆಯಲ್ಲಿ ವಿಷಯ ತಿಳಿದ ತಕ್ಷಣವೇ ಸ್ಥಳಕ್ಕೆ ಅಗ್ನಿಶಾಮಕ ದಳ ಮತ್ತು ಅರಣ್ಯಾ ಇಲಾಖೆ ಸಿಬ್ಬಂದಿ ದೌಡಾಯಿಸಿ, ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೇಸಿಗೆ ಇರುವ ಹಿನ್ನೆಲೆಯಲ್ಲಿ ಗುಡ್ಡದ ಮೇಲಿರುವ ಒಣಗಿದ ಮೇವಿಗೆ ಬೆಂಕಿ ಹತ್ತಿರುವುದರಿಂದ ಬೆಂಕಿಯ ಕೆನ್ನಾಲಿಗೆ ಗುಡ್ಡದ ಸುತ್ತಲೂ ವ್ಯಾಪಿಸಿದೆ. ಇದರಿಂದ ಸ್ಥಳೀಯರಲ್ಲಿ ಕೆಲಕಾಲ ಆತಂಕ ಸೃಷ್ಟಿಯಾಗಿತ್ತು.

    ಘಟನೆ ನಡೆದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ವಡಗೇರಾ ಪಿಎಸ್‍ಐ ಮಹದೇವಪ್ಪ ದಿಡ್ಡಿಮನಿ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

  • 12 ಅಡಿಗೂ ಅಧಿಕ ಉದ್ದದ ಬೃಹತ್ ಹೆಣ್ಣು ಕಾಳಿಂಗ ಸರ್ಪದ ರಕ್ಷಣೆ

    12 ಅಡಿಗೂ ಅಧಿಕ ಉದ್ದದ ಬೃಹತ್ ಹೆಣ್ಣು ಕಾಳಿಂಗ ಸರ್ಪದ ರಕ್ಷಣೆ

    ಕಾರವಾರ: ಹಾವು ಅಂದರೆ ಎಲ್ಲರೂ ಭಯ ಪಡುತ್ತಾರೆ. ಅಂಥದ್ರಲ್ಲಿ ಕಾರ್ಕೋಟಕ ವಿಷವಿರುವ ಕಾಳಿಂಗ ಸರ್ಪವನ್ನು ನೋಡಿದರೆ ಯಾರಿಗೆ ತಾನೇ ಭಯ ಆಗಲ್ಲ.

    ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದ 12 ಅಡಿಗೂ ಹೆಚ್ಚು ಉದ್ದದ ಬೃಹತ್ ಹೆಣ್ಣು ಕಾಳಿಂಗ ಸರ್ಪವನ್ನು ರಕ್ಷಿಸಿ ಕಾಡಿಗೆ ಬಿಟ್ಟಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಗೋಬ್ರಾಳ ದಲ್ಲಿ ನಡೆದಿದೆ.

    ಜಿಲ್ಲೆಯ ದಾವುಲ್ ಶೇಖ್ ಎಂಬವರ ರೆಸಾರ್ಟ್ ಗೆ ಈ ಅಪರೂಪದ ಅಥಿತಿ ಆಗಮಿಸಿದ್ದು, ತನ್ನ ಬೃಹದಾಕಾರದ ಮೈಮಾಟದಿಂದ ಸ್ಥಳೀಯರನ್ನು ಭಯಭೀತಗೊಳಿಸಿತ್ತು. ತಕ್ಷಣ ಇಲ್ಲಿನವರು ಉರುಗ ತಜ್ಞ ರಝಾಕ್ ಶಾಹಾಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಉರುಗ ತಜ್ಞ 12 ಅಡಿಗೂ ಹೆಚ್ಚು ಉದ್ದದ 10 ವರ್ಷ ಪ್ರಾಯದ ಹೆಣ್ಣು ಕಾಳಿಂಗವನ್ನು ಹಿಡಿದು ಕಾಡಿಗೆ ಬಿಟ್ಟಿದ್ದಾರೆ.

    ಕಾಳಿಂಗಗಳು ಬಿಸಲಿನ ಬೇಗೆಗೆ ತಂಪು ಪ್ರದೇಶ ಅರಸಿ ಬರುವುದು ಸಾಮಾನ್ಯ. ಹೀಗಾಗಿ ಅಪರೂಪದ ಅಳವಿನಂಚಿನಲ್ಲಿರುವ ಈ ಕಾಳಿಂಗ ಗಳು ಮಾರ್ಚ್ ನಿಂದ ಜೂನ್ ವರಗೆ ತಂಪು ಪ್ರದೇಶ ಅರಸಿ ನಾಡಿಗೆ ಬರುತ್ತಿವೆ. ಇಲ್ಲಿ ಸುಲಭವಾಗಿ ತನ್ನ ಆಹಾರ ಅರಸಿ ಭೇಟೆಯಾಡುತ್ತವೆ. ಇದಲ್ಲದೇ ಮೊಟ್ಟೆ ಇಟ್ಟು ಸಂತಾನಾಭಿವೃದ್ಧಿಗೆ ತೊಡಗುತ್ತವೆ. ಇವುಗಳನ್ನು ಕೊಲ್ಲದೇ ರಕ್ಷಿಸಬೇಕು. ಸರಿಸುಮಾರು 20 ವರ್ಷ ಬದುಕುವ ಇವು ಗೂಡನ್ನು ಕಟ್ಟಿ 25 ರಿಂದ 30 ಮೊಟ್ಟೆ ಇಡುತ್ತವೆ. ಇವು ತನ್ನ ಮೊಟ್ಟೆ ಯನ್ನು ಕಾಯುವ ಏಕೈಕ ಹಾವಾಗಿದೆ. ಅಳವಿನಂಚಿನಲ್ಲಿ ಇರುವ ಈ ಹಾವನ್ನು ರಕ್ಷಿಸಬೇಕು ಎಂದು ಉರುಗ ತಜ್ಞ ರಝಾಕ್ ಶಾಹ ಹೇಳಿದ್ದಾರೆ.

    https://www.youtube.com/watch?v=1HFy7Gai9XM

  • ಬೇಟೆಗೆಂದು ತೆರಳಿ ನಾಪತ್ತೆಯಾಗಿದ್ದ ಇಬ್ಬರು ಶವವಾಗಿ ಪತ್ತೆ

    ಬೇಟೆಗೆಂದು ತೆರಳಿ ನಾಪತ್ತೆಯಾಗಿದ್ದ ಇಬ್ಬರು ಶವವಾಗಿ ಪತ್ತೆ

    ಮಂಗಳೂರು: ಬೇಟೆಗೆಂದು ತೆರಳಿ ನಂತರ ನಾಪತ್ತೆಯಾಗಿದ್ದ ಇಬ್ಬರು ವ್ಯಕ್ತಿಗಳು ಶವವಾಗಿ ಮೂಡಬಿದ್ರೆಯ ಕರಿಂಜೆ ಕಾಡಿನಲ್ಲಿ ಪತ್ತೆಯಾಗಿದ್ದಾರೆ.

    ಸ್ಥಳೀಯ ನಿವಾಸಿಗಳಾದ ಪ್ರವೀಣ್ ತೌರೋ(33) ಮತ್ತು ಗ್ರೇಷನ್ ಡಿಸೋಜಾ(32) ಮೃತ ದುರ್ದೈವಿಗಳು. ಇವರು ಮೂಡಬಿದ್ರೆಯಿಂದ 10 ಕಿ.ಮೀ. ದೂರದ ಕರಿಂಜೆ ಕಾಡಿಗೆ ಸೋಮವಾರ ರಾತ್ರಿ ಬೇಟೆಗೆ ತೆರಳಿದ್ದರು. ಆದರೆ ಮತ್ತೆ ಹಿಂದಿರುಗಿರಲಿಲ್ಲ.

    ಇಬ್ಬರ ಮೊಬೈಲ್ ಫೋನ್ ಗಳು ಸ್ವಿಚ್ ಆಫ್ ಆಗಿದ್ದು, ಎಲ್ಲೋ ಹೋಗಿರಬಹುದು ಎಂದು ಮನೆಯವರು ಸುಮ್ಮನಿದ್ದರು. ಆದ್ರೆ ಬೇಟೆಗೆ ತೆರಳಿದ್ದ ಜೀಪ್ ಗುರುವಾರ ಕಾಡಿನಲ್ಲಿ ಪತ್ತೆಯಾಗಿತ್ತು. ಇದರಿಂದ ಗಾಬರಿಗೊಂಡ ಮನೆಯವರು ಪೊಲೀಸರಿಗೆ ಮಾಹಿತಿ ತಿಳಿಸಿದ್ದರು.

    ವಿಷಯ ತಿಳಿದ ಮೂಡಬಿದ್ರೆ ಪೊಲೀಸರು ಮತ್ತು ಸ್ಥಳೀಯರು ಹುಡುಕಾಟ ಆರಂಭಿಸಿದ್ದರು. ಆಗ ಕಾಡು ಪ್ರಾಣಿಗಳ ಬೇಟೆಗೆ ಇಟ್ಟಿದ್ದ ವಿದ್ಯುತ್ ತಂತಿ ತಗುಲಿ ಇಬ್ಬರು ಮೃತಪಟ್ಟಿರೋದು ಗೊತ್ತಾಗಿದೆ.

    ಖಾಸಗಿ ಟೆಂಪೋ ಚಾಲಕರಾಗಿರುವ ಪ್ರವೀಣ್ ತೌರೋ ಅವಿವಾಹಿತರಾಗಿದ್ದರು. ಮೂಡಬಿದ್ರೆಯಲ್ಲಿ ಸರ್ವಿಸ್ ಸ್ಟೇಷನ್ ಮಾಲಕನಾಗಿರುವ ಗ್ರೇಷನ್ ವಿವಾಹಿತರಾಗಿದ್ದರು. ಈ ಬಗ್ಗೆ ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.