Tag: forest

  • ಕೊನೆಗೂ ಬಲಿಯಾಯ್ತು 14 ಮಂದಿಯನ್ನು ತಿಂದು ಹಾಕಿದ್ದ ಅವನಿ!

    ಕೊನೆಗೂ ಬಲಿಯಾಯ್ತು 14 ಮಂದಿಯನ್ನು ತಿಂದು ಹಾಕಿದ್ದ ಅವನಿ!

    ನವದೆಹಲಿ: ಕಳೆದ ಎರಡು ವರ್ಷಗಳಿಂದ 14 ಮಂದಿಯನ್ನು ತಿಂದು ಹಾಕಿದ್ದ ಹೆಣ್ಣು ಹುಲಿ ಅವನಿಯನ್ನು ಶುಕ್ರವಾರ ರಾತ್ರಿ ಮಹಾರಾಷ್ಟ್ರದ ಯಾವತ್ಮಲ್ ನಲ್ಲಿ ಹತ್ಯೆ ಮಾಡಲಾಗಿದೆ.

    ಸೆಪ್ಟಂಬರ್ ತಿಂಗಳಲ್ಲಿ ಸುಪ್ರಿಂಕೋರ್ಟ್ ಅವನಿ ಹೆಣ್ಣು ಹುಲಿಯನ್ನು ಕಂಡಲ್ಲಿ ಗುಂಡು ಹಾರಿಸುವಂತೆ ಅನುಮತಿ ನೀಡಿತ್ತು, ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಅವನಿಯ ಜೊತೆಗಿದ್ದ ಎರಡು ಹುಲಿ ಮರಿಗಳನ್ನು ರಕ್ಷಿಸಲಾಗಿದೆ.

    ಮೂರು ತಿಂಗಳಿಂದ ತಂತ್ರಜ್ಞಾನದ ಸಾಧನಗಳೊಂದಿಗೆ 150 ಸಿಬ್ಬಂದಿ, ಆನೆಗಳು ಮತ್ತು ಪರಿಣಿತ ಟ್ರ್ಯಾಕರ್‍ಗಳು ಮತ್ತು ಶೂಟರ್‍ಗಳನ್ನು ಅವನಿಯನ್ನು ಹುಡುಕಲು ಸಜ್ಜು ಮಾಡಲಾಗಿತ್ತು. ಅಷ್ಟೇ ಅಲ್ಲದೇ ಟೈಗರ್ ಅಭಯಾರಣ್ಯದ ಸುತ್ತಮುತ್ತಲಿರುವ ಅರಣ್ಯ ಇಲಾಖೆಯ ಅಧಿಕಾರಿಗಳ ತಂಡದೊಂದಿಗೆ ಟ್ರ್ಯಾಪ್ ಕ್ಯಾಮೆರಾಗಳು, ಡ್ರೋನ್, ತರಬೇತಿ ಪಡೆದ ಸ್ನಿಫರ್ ನಾಯಿಗಳ ಪ್ಯಾಕ್ ಮತ್ತು ಹ್ಯಾಂಗ್-ಗ್ಲೈಡರ್‍ಗಳ ಸಹಾಯದಿಂದ ಹುಲಿಯ ಹುಡುಕಾಟವು ನಡೆದಿತ್ತು.

    2012 ರಲ್ಲಿ ಯವತ್ಮಾಲ್ ಕಾಡಿನಲ್ಲಿ ಅವನಿ ಹೆಣ್ಣು ಹುಲಿ ಮೊದಲಿಗೆ ಕಾಣಿಸಿಕೊಂಡಿತ್ತು. 14 ಮಂದಿಯನ್ನು ಕೊಂದಿದ್ದ ದೇಹಗಳು ಕೂಡ ಕಾಡಿನಲ್ಲಿ ಪತ್ತೆಯಾಗಿತ್ತು. ಅದರಲ್ಲಿ 5 ಮಂದಿಯ ಸಾವಿಗೆ ಈ ಹುಲಿಯೇ ಕಾರಣ ಎಂಬುದು ಸಾಕ್ಷ್ಯಾಧಾರಗಳಿಂದ ತಿಳಿದು ಬಂದಿದೆ. ಸಮೀಕ್ಷೆಗಳ ಪ್ರಕಾರ ಕೆಲ ವರ್ಷಗಳಿಂದ ಆ ಅರಣ್ಯ ಪ್ರದೇಶದಲ್ಲಿ ಅವನಿ ಬಿಟ್ಟರೆ ಗಂಡು ಹುಲಿಯೊಂದು ವಾಸವಾಗಿರುವುದು ತಿಳಿದುಬಂದಿದೆ. ಮೃತಪಟ್ಟವರಲ್ಲಿ ಒಬ್ಬರ ದೇಹದಲ್ಲಿ ಮಾತ್ರ ಆ ಹುಲಿಯ ಡಿಎನ್‍ಎ ಪತ್ತೆಯಾಗಿದೆ ಎಂದು ವರದಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಜನರ ನಿದ್ದೆಗೆಡಿಸಿದ್ದ ಕಾಳಿಂಗ ಸರ್ಪ ಕೊನೆಗೂ ಸೆರೆ

    ಜನರ ನಿದ್ದೆಗೆಡಿಸಿದ್ದ ಕಾಳಿಂಗ ಸರ್ಪ ಕೊನೆಗೂ ಸೆರೆ

    ಉಡುಪಿ: ಹಲವು ದಿನಗಳಿಂದ ಗ್ರಾಮಸ್ಥರಿಗೆ ಭಯ ಹುಟ್ಟಿಸಿದ್ದ ಕಾಳಿಂಗ ಸರ್ಪ ಕೊನೆಗೂ ಸೆರೆಯಾಗಿದೆ.

    ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬೈಲೂರು ಪರಿಸರದಲ್ಲಿ ಈ ಕಾಳಿಂಗ ಸರ್ಪ ಕಾಣಿಸಿಕೊಂಡಿತ್ತು. ಈ ಹಿಂದೆಯೂ ಇದೇ ಹಾವನ್ನು ಕಂಡ ಗ್ರಾಮಸ್ಥರು ಬೆಚ್ಚಿಬಿದ್ದಿದ್ದರು. ಈ ಬಾರಿ ಉರಗತಜ್ಞರ ಸಹಾಯದಿಂದ ಹಾವನ್ನು ಸೆರೆಹಿಡಿಯುವಲ್ಲಿ ಯಶಸ್ಸಿಯಾಗಿದ್ದಾರೆ.

    ಎರಡು ತಿಂಗಳ ಹಿಂದೆಯೂ ಕಾರ್ಕಳ ತಾಲೂಕಿನ ಜಾರ್ಕಳ, ಅರ್ಜೆಡ್ಡು ಗ್ರಾಮದಲ್ಲಿ ಈ ಕಾಳಿಂಗ ಹಾವು ಮರವೇರಿ ಕುಳಿತು ಗ್ರಾಮಸ್ಥರ ನಿದ್ದೆಗೆಡಿಸಿತ್ತು. ಗ್ರಾಮಸ್ಥರು ಕಾಳಿಂಗ ಸರ್ಪವನ್ನು ಸೆರೆ ಹಿಡಿಯಲು ಕಾದು ಕುಳಿತರೂ ಮರದಿಂದ ಕೆಳಕ್ಕೆ ಇಳಿಯಲೇ ಇಲ್ಲ. ಅದು ಮರದಲ್ಲೇ ಗೆಲ್ಲಿನಿಂದ ಗೆಲ್ಲಿಗೆ ಸರಿದಾಡುತ್ತಿತ್ತು. ಬೆಳಗ್ಗಿನ ಜಾವ ಅಲ್ಲಿಂದ ಕಣ್ಮರೆಯಾಗಿತ್ತು. ಬೈಲೂರು ಪೇಟೆಯಲ್ಲಿ ಗುರುವಾರ ರಾತ್ರಿ ಮತ್ತೆ ಈ ಕಾಳಿಂಗ ಸರ್ಪ ಕಾಣಿಸಿ ಕೊಂಡಿದೆ.

    ಕೊಡಲೇ ಉರಗ ತಜ್ಞ ಅನಿಲ್ ಪ್ರಭು ಅವರಿಗೆ ಸ್ಥಳಿಯರು ಮಾಹಿತಿ ನೀಡಿದ್ದಾರೆ. ಅನಿಲ್ ಪ್ರಭು ಸ್ಥಳಕ್ಕೆ ಆಗಮಿಸಿ ಹಾವನ್ನು ಸರೆ ಹಿಡಿದಿದ್ದಾರೆ. 13 ಅಡಿಗಳಷ್ಟು ಉದ್ದ ಇರುವ ಈ ಕಾಳಿಂಗ ಸರ್ಪವನ್ನು ಗೋಣಿಗೆ ತುಂಬಿಸಲು ಯತ್ನಿಸಿದರೂ ಅದು ಹೊರಕ್ಕೆ ಬಂದು ಜನರಲ್ಲಿ ಆತಂಕ ಸೃಷ್ಟಿ ಮಾಡಿತ್ತು. ಮತ್ತೆ ಹಾವನ್ನು ಗೋಣಿಯಲ್ಲಿ ಭದ್ರಗೊಳಿಸಲಾಯಿತು. ವಲಯ ಅರಣ್ಯಾಧಿಕಾರಿಗಳ ನೆರವಿನೊಂದಿಗೆ ಕಾಳಿಂಗ ಸರ್ಪವನ್ನು ಅಭಯಾರಣ್ಯಕ್ಕೆ ಬಿಡಲಾಗಿದೆ. ಸದ್ಯಕ್ಕೆ ಕಾಳಿಂಗ ಸರ್ಪ ಸೆರೆಯಿಂದ ಸ್ಥಳೀಯರಲ್ಲಿ ಆತಂಕ ದೂರವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹಾವಿನ ಮೊಟ್ಟೆಗಳಿಗೆ ಕಾವು ಕೊಟ್ಟು 21 ಮರಿಗಳನ್ನು ಹೊರತೆಗೆದ್ರು ಧಾರವಾಡದ ಸ್ನೇಕ್ ಎಲ್ಲಪ್ಪ

    ಹಾವಿನ ಮೊಟ್ಟೆಗಳಿಗೆ ಕಾವು ಕೊಟ್ಟು 21 ಮರಿಗಳನ್ನು ಹೊರತೆಗೆದ್ರು ಧಾರವಾಡದ ಸ್ನೇಕ್ ಎಲ್ಲಪ್ಪ

    ಧಾರವಾಡ: ಜಿಲ್ಲೆಯಲ್ಲಿ ಸ್ನೇಕ್ ಎಲ್ಲಪ್ಪ ಎಂಬವರು ಹಾವಿನ ಮೊಟ್ಟೆಗಳಿಗೆ ಕಾವು ಕೊಟ್ಟು 21 ಹಾವಿನ ಮರಿಗಳನ್ನ ತೆಗೆದಿದ್ದಾರೆ.

    ಧಾರವಾಡ ನಗರದ ನೇಕಾರ ಓಣಿಯಲ್ಲಿ ವಾಸವಿರುವ ಸ್ನೇಕ್ ಎಲ್ಲಪ್ಪ, ಹಾವಿನ ಮೊಟ್ಟೆಗಳಿಗೆ ಕಾವು ಕೊಟ್ಟು ಮರಿಗಳನ್ನ ಹೊರ ತೆಗೆದಿದ್ದಾರೆ. ಕಳೆದ ತಿಂಗಳು ಎಲ್ಲಪ್ಪ ಜಿಲ್ಲೆಯ ಮರೇವಾಡ ಎಂಬ ಗ್ರಾಮದ ಮನೆಯೊಂದಕ್ಕೆ ಬಂದಿದ್ದ ಕೇರೆ ಹಾವನ್ನ ಹಿಡಿದು ತಂದಿದ್ದರು. ಆ ಹಾವಿನ ಹೊಟ್ಟೆಯಲ್ಲಿ 12 ಮೊಟ್ಟೆ ಇರುವುದನ್ನು ಅರಿತ ಅವರು, ಹಾವು ಮೊಟ್ಟೆ ಹಾಕಿದ ಮೇಲೆ ಆ ಹಾವನ್ನ ಕಾಡಿಗೆ ಬಿಟ್ಟು ಬಂದಿದ್ದರು.

    ಇದೇ ರೀತಿ ಇನ್ನೊಂದು ಮನೆಯಲ್ಲಿ ಟ್ರಿನ್ ಕ್ಯಾಟ್ ಹಾವು ಸಿಕ್ಕಿದೆ. ಆ ಹಾವಿನ ಹೊಟ್ಟೆಯಲ್ಲಿ ಕೂಡಾ 9 ಮೊಟ್ಟೆಗಳು ಇದ್ದವು. ಆ ಎರಡು ಹಾವಿನ ಮೊಟ್ಟೆಯನ್ನ 30 ಡಿಗ್ರಿ ಉಷ್ಣಾಂಶ ಮೀರದಂತೆ ಟೆಂಪರೇಚರ್ ಮೈಂಟೇನ್ ಮಾಡಿದ ಎಲ್ಲಪ್ಪ, 21 ಹಾವಿನ ಮರಿಗಳನ್ನ ಮೊಟ್ಟೆಯಿಂದ ಹೊರ ತೆಗೆದಿದ್ದಾರೆ.

    ಈ ಮರಿಗಳನ್ನ ಮತ್ತೆ ಕೆರೆಗೆ ಬಿಟ್ಟಿರುವ ಇವರು, ಇದೇ ರೀತಿ ಹಲವು ಬಾರಿ ಹಾವುಗಳನ್ನ ಹೊಡೆಯದಂತೆ ಜಾಗೃತಿ ಮೂಡಿಸುತ್ತಾರೆ. ಇನ್ನು ಯಾರಾದರೂ ಹಾವು ಇದೆ ಎಂದು ಕರೆದರೆ, ತಕ್ಷಣ ಅವರ ಮನೆಗೆ ಹೋಗಿ ಆ ಹಾವನ್ನ ರಕ್ಷಣೆ ಮಾಡುತ್ತಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 2 ದಿನದಿಂದ ಮನೆಯಲ್ಲಿ ಅವಿತು ಕುಳ್ತಿದ್ದ 12 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ

    2 ದಿನದಿಂದ ಮನೆಯಲ್ಲಿ ಅವಿತು ಕುಳ್ತಿದ್ದ 12 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ

    ಚಿಕ್ಕಮಗಳೂರು: ಎರಡು ದಿನಗಳಿಂದ ಮನೆಯೊಳಗೆ ಅವಿತು ಕುಳಿತಿದ್ದ 12 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪವನ್ನ ಸೆರೆ ಹಿಡಿದಿರುವ ಘಟನೆ ಜಿಲ್ಲೆಯ ಕೊಪ್ಪ ಪಟ್ಟಣದಲ್ಲಿ ನಡೆದಿದೆ.

    ಪಟ್ಟಣದ ಪ್ರಶಾಂತ್ ಎಂಬವರ ಮನೆಯ ಆವರಣದಲ್ಲಿ ಎರಡು ದಿನಗಳಿಂದ ಕಾಳಿಂಗ ಬೀಡುಬಿಟ್ಟಿತ್ತು. ಸರ್ಪಗಳು ಒಂದೇ ಜಾಗದಲ್ಲಿ ಇರೋದಿಲ್ಲ ಹೋಗುತ್ತದೆ ಎಂದು ಪ್ರಶಾಂತ್ ಮನೆಯವರು ಕೂಡ ಸುಮ್ಮನಾಗಿದ್ದರು. ಆದರೆ ಎರಡು ದಿನವಾದರೂ ಕಾಳಿಂಗ ಸರ್ಪ ಜಾಗ ಖಾಲಿ ಮಾಡಿರಲಿಲ್ಲ.

    ಈ ಹಿನ್ನೆಲೆಯಲ್ಲಿ ಪ್ರಶಾಂತ್ ಉರಗ ತಜ್ಞ ಹರೀಂದ್ರಾಗಿ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಹರೀಂದ್ರ ಅರಣ್ಯ ಅಧಿಕಾರಿಗಳ ನೇತೃತ್ವದಲ್ಲಿ, ಗಿಡಗಂಟೆ ಹಾಗೂ ಪೈಪ್ ಒಳಗೆ ಹೋಗಲು ಯತ್ನಿಸುತ್ತಿದ್ದ ಕಾಳಿಂಗನನ್ನ ಒಂದು ಗಂಟೆಗಳ ನಿರಂತರ ಕಾರ್ಯಾಚರಣೆಯ ಮೂಲಕ ಸೆರೆ ಹಿಡಿದಿದ್ದಾರೆ.

    ಸೆರೆ ಹಿಡಿದಿದ್ದ ಕಾಳಿಂಗ ಸರ್ಪವನ್ನು ಸ್ಥಳೀಯ ಅರಣ್ಯಕ್ಕೆ ಬಿಟ್ಟಿದ್ದಾರೆ. ಇತ್ತ ಎರಡು ದಿನಗಳಿಂದ ಮನೆಯೊಳಗೆ ಅವಿತು ಕುಳಿತಿದ್ದ ಬೃಹತ್ ಕಾಳಿಂಗನನ್ನ ಕಂಡು ಸ್ಥಳೀಯರು ಬೆಚ್ಚಿ ಬಿದ್ದಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬಾವಿಗೆ ಬಿದ್ದ ಕಾಳಿಂಗ ಸರ್ಪದ ರಕ್ಷಣೆ ಬಹಳ ರೋಚಕ!

    ಬಾವಿಗೆ ಬಿದ್ದ ಕಾಳಿಂಗ ಸರ್ಪದ ರಕ್ಷಣೆ ಬಹಳ ರೋಚಕ!

    ಉಡುಪಿ: ಕಾಡುಪ್ರಾಣಿಗಳು ನಾಡಿಗೆ ಬಂದು ಬಾವಿಗೆ ಬೀಳುವ ಘಟನೆಗಳು ಅಲ್ಲಲ್ಲಿ ನಡೆಯುತ್ತಿರುತ್ತದೆ. ಅದರಲ್ಲೂ ಪಶ್ಚಿಮ ಘಟ್ಟದ ತಪ್ಪಲಿನ ಉಡುಪಿ ಜಿಲ್ಲೆಯಲ್ಲಿ ಚಿರತೆ ಬಾವಿಗೆ ಬೀಳುವ ಪ್ರಕರಣ ಜಾಸ್ತಿಯಾಗಿದೆ. ಈ ನಡುವೆ ಭಾರೀ ಗಾತ್ರದ ಕಾಳಿಂಗ ಸರ್ಪ ಬಾವಿಗೆ ಬಿದ್ದಿದೆ.

    ಕುಂದಾಪುರ ತಾಲೂಕಿನ ಸಿದ್ದಾಪುರದ ಅತ್ಮಿಜೆಡ್ಡು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಜಿಲ್ಲೆಯ ಕುಂದಾಪುರದಲ್ಲಿ ಕಾಳಿಂಗ ಸರ್ಪವೊಂದು ಬಾವಿಗೆ ಬಿದ್ದಿತ್ತು. ಆಯ ತಪ್ಪಿ ಬಾವಿಗೆ ಜಾರಿ ಬಿದ್ದಿದ್ದ ಭಾರೀ ಗಾತ್ರದ ಕಾಳಿಂಗ ಸರ್ಪವನ್ನ ಇದೀಗ ರಕ್ಷಣೆ ಮಾಡಲಾಗಿದೆ.

    ಚಂದ್ರ ಕೊಠಾರಿ ಅವರ ಬಾವಿಗೆ ಬಿದ್ದಿದ್ದ ಕಾಳಿಂಗ ಸರ್ಪವನ್ನ ಮೇಲೆ ಬರುವಂತೆ ಮಾಡಲು ಸ್ಥಳೀಯರು ಪ್ರಯತ್ನಪಟ್ಟಿದ್ದಾರೆ. ಸಾಧ್ಯವಾಗದ ಕಾರಣ ಶಂಕರನಾರಾಯಣ ವ್ಯಾಪ್ತಿಯ ಅರಣ್ಯ ಇಲಾಖೆ ಸಿಬ್ಬಂದಿ ಕೃಷ್ಣಮೂರ್ತಿ ಅವರನ್ನು ಕರೆಸಲಾಗಿದೆ. ಸ್ಥಳಕ್ಕಾಗಮಿಸಿದ ಅವರು 13 ಅಡಿ ಉದ್ದದ 15 ಕೆ.ಜಿ ತೂಕದ ಬೃಹತ್ ಕಾಳಿಂಗ ಸರ್ಪವನ್ನು ರಕ್ಷಿಸಿದರು. ಕಾಳಿಂಗ ಸರ್ಪ ನೀರು ತುಂಬಿದ ಬಾವಿಯಲ್ಲಿ ಇದ್ದ ಕಾರಣ ಮೇಲಕ್ಕೆತ್ತಲು ಸ್ವಲ್ಪ ಪರಿಶ್ರಮ ಪಡಬೇಕಾಯಿತು. ಕಾಳಿಂಗವನ್ನು ಸುರಕ್ಷಿತವಾಗಿ ಪಶ್ಚಿಮಘಟ್ಟದ ಕಾಡಿಗೆ ಬಿಡಲಾಗಿದೆ.

    ಮಾಧ್ಯಮಗಳ ಜೊತೆ ಮಾತನಾಡಿದ ಕೃಷ್ಣಮೂರ್ತಿ, ನೀರಿನಲ್ಲಿ ಇರುವ ಹಾವುಗಳು ಸುಲಭದಲ್ಲಿ ಸೆರೆಯಾಗುವುದಿಲ್ಲ. ಬಾವಿಗೆ ಇಳಿಯಲು ಸಾಧ್ಯವಾಗದೆ ಮೇಲಿನಿಂದ ಎತ್ತಲೂ ಆಗದ ಸ್ಥಿತಿ ಕುಂದಾಪುರದಲ್ಲಿ ನಿರ್ಮಾಣವಾಗಿತ್ತು. ರಕ್ಷಣೆ ಮಾಡಿದ ಕಾಳಿಂಗ ಸರ್ಪವನ್ನು ಸುರಕ್ಷಿತ ಸ್ಥಳಕ್ಕೆ ಬಿಡಲಾಗುವುದು ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಏಕಾಏಕಿ 11 ಸಿಂಹಗಳ ಸಾವು: ತನಿಖೆಗೆ ಆದೇಶಿಸಿದ ಗುಜರಾತ್ ಸರ್ಕಾರ

    ಏಕಾಏಕಿ 11 ಸಿಂಹಗಳ ಸಾವು: ತನಿಖೆಗೆ ಆದೇಶಿಸಿದ ಗುಜರಾತ್ ಸರ್ಕಾರ

    ಅಹಮದಾಬಾದ್: ಗುಜರಾತಿನ ಗಿರ್ ಅರಣ್ಯ ಪ್ರದೇಶದಲ್ಲಿ ಏಕಾಏಕಿ 11 ಸಿಂಹಗಳು ಸಾವನ್ನಪ್ಪಿದ್ದ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ತನಿಖೆಗೆ ಆದೇಶ ನೀಡಿದೆ.

    ಸಿಂಹಗಳ ರಾಜ್ಯವೆಂದೆ ಹೆಸರು ಪಡೆದುಕೊಂಡಿರುವ ಗುಜರಾತ್‍ನಲ್ಲಿ ಏಕಾಏಕಿ 11 ಸಿಂಹಗಳು ಸಾವನ್ನಪ್ಪಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಗಿರ್ ಅರಣ್ಯ ಪ್ರದೇಶದ ದಾಲ್ಕನೀಯಾ ವ್ಯಾಪ್ತಿಯಲ್ಲಿ ಸಿಂಹಗಳ ಮೃತದೇಹಗಳು ಪತ್ತೆಯಾಗಿದೆ.

    ಈ ಕುರಿತು ಪ್ರತಿಕ್ರಿಯಿಸಿರುವ ಅರಣ್ಯಾಧಿಕಾರಿ ಪಿ ಪುರುಷೋತ್ತಮ್, ಕಳೆದ ಬುಧವಾರ ಗಿರ್ ಅರಣ್ಯ ಪ್ರದೇಶದ ದಾಲ್ಕನಿಯಾ ರೇಂಜ್ ನಲ್ಲಿ ಕಳೆದ ಎರಡು ದಿನಗಳ ಹಿಂದಷ್ಟೇ 7 ಸಿಂಹಗಳ ಶವ ಪತ್ತೆಯಾಗಿತ್ತು. ಮತ್ತೆ ಇದೀಗ ಇದೇ ಪ್ರದೇಶದಲ್ಲಿ 4 ಸಿಂಹಗಳ ಶವ ಪತ್ತೆಯಾಗಿದೆ. ಈ ಮೂಲಕ ಸಿಂಹಗಳ ಸಾವಿನ ಸಂಖ್ಯೆ 11 ಕ್ಕೆ ಏರಿಕೆಯಾಗಿದೆ. ಸಿಂಹಗಳ ಸಾವಿನಲ್ಲಿ ಯಾವುದೇ ರೀತಿಯ ಷಡ್ಯಂತ್ರ ಕಾಣುತ್ತಿಲ್ಲ. ಆಹಾರ ಮತ್ತು ಸಂತಾನೋತ್ಪತ್ತಿ ಸಂದರ್ಭಗಳಲ್ಲಿ ವನ್ಯಮೃಗಗಳ ಕಾದಾಟ ಸಾಮಾನ್ಯ. ಬಹುಶಃ ಇದೇ ಸಿಂಹಗಳ ಸಾವಿಗೆ ಕಾರಣವಾಗಿರಬಹುದು ಎಂದು ತಿಳಿಸಿದ್ದಾರೆ.

    ಅರಣ್ಯ ಮತ್ತು ಪರಿಸರ ಇಲಾಖೆಯ ಅಧಿಕಾರಿಯಾದ ಡಾ. ರಾಜೀವ್ ಕುಮಾರ್ ಗುಪ್ತಾ ಮಾತನಾಡಿ, ಪ್ರಸ್ತುತ ದೊರೆತ ಸಿಂಹಗಳ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು. ಈ ಹಿಂದೆ ಸತ್ತ ಸಿಂಹಗಳ ಮರಣೋತ್ತರ ಪರೀಕ್ಷೆಯಲ್ಲಿ ಸಿಂಹಗಳ ಸಾವಿಗೆ ಕಾದಾಟದಿಂದ ಆದ ಗಾಯಗಳೇ ಕಾರಣ ಎಂದು ವೈದ್ಯರು ತಿಳಿಸಿದ್ದಾರೆ. ಪ್ರಸ್ತುತ ದೊರೆತಿರುವ ಶವಗಳನ್ನೂ ಜುನಾಘಡ್ ನಲ್ಲಿರುವ ಪಶು ವೈದ್ಯಕೀಯ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಮೇಲ್ನೋಟಕ್ಕೆ ಇದೂ ಕೂಡ ಕಾದಾಟದಿಂದ ಸಂಭವಿಸಿದ ಸಾವು ಎಂದು ಹೇಳಿದ್ದಾರೆ.

    ಅಲ್ಲದೇ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಈ ಕುರಿತು ತನಿಖೆ ನಡೆಸುವಂತೆ ಆದೇಶ ನೀಡಿದ್ದಾರೆ ಎಂದಿದ್ದಾರೆ. 2015ರ ಸಿಂಹಗಳ ಗಣತಿಯ ಪ್ರಕಾರ ಗಿರ್ ಅರಣ್ಯ ಪ್ರದೇಶದಲ್ಲಿ ಒಟ್ಟು 520 ಸಿಂಹಗಳಿದ್ದವು ಎಂದು ತಿಳಿದು ಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 10 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ

    10 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ

    ಮಡಿಕೇರಿ: ಸುಮಾರು 10 ಅಡಿ ಉದ್ದದ ಕಾಳಿಂಗ ಸರ್ಪವನ್ನು ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಕಿರುಮಕ್ಕಿ ಗ್ರಾಮದ ತೋಟದಲ್ಲಿ ಸೆರೆಯಾಗಿದೆ.

    ಗ್ರಾಮದ ತೋಟದಲ್ಲಿ ಸುಮಾರು 10 ಆಡಿ ಉದ್ದದ ಕಾಳಿಂಗ ಸರ್ಪ ಪತ್ತೆಯಾಗಿದೆ. ಬಳಿಕ ಭಾರೀ ಗಾತ್ರದ ಹಾವನ್ನು ಕಂಡು ಗಾಬರಿಗೊಂಡಿದ್ದು, ತಕ್ಷಣ ಉರಗ ತಜ್ಞ ವಸಂತ ಕಟ್ಟಿ ಅವರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ.

    ಮಾಹಿತಿ ತಿಳಿದ ವಸಂತ ಕಟ್ಡಿ ಅವರು, ಅವರ ತಂಡ ಕಾಳಿಂಗ ಸರ್ಪವನ್ನು ಹಿಡಿಯಲು ಸ್ಥಳಕ್ಕೆ ಆಗಮಿಸಿದ್ದು, ನಂತರ ಸುರಕ್ಷಿತವಾಗಿ ಕಾಳಿಂಗ ಸರ್ಪವನ್ನು ಸರೆ ಹಿಡಿದಿದ್ದಾರೆ. ಸ್ನೇಕ್ ವಸಂತ ಕಟ್ಟಿ ಅವರು ಈವರೆಗೆ ಅನೇಕ ಕಾಳಿಂಗದಂತಹ  ಸಾಕಷ್ಟು ವಿಷಕಾರಿ ಹಾವುಗಳನ್ನು ಸೆರೆಹಿಡಿದಿದ್ದಾರೆ.

    ಕಾಳಿಂಗ ಸರ್ಪವನ್ನು ಸೆರೆ ಹಿಡಿದ ಬಳಿಕ ಸಾರ್ವಜನಿಕರಿಗೆ ಪ್ರದರ್ಶನ ಮಾಡಿದ್ದಾರೆ. ಬಳಿಕ ಅಲ್ಲಿದ್ದವರಿಗೆ ಹಾವುಗಳ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಿ ನಂತರ ಪೆರಂಬಡಿ ಅರಣ್ಯಕ್ಕೆ ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ಬಿಡಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಭೂ ಕುಸಿತದಿಂದ ಕಾಡಿನಲ್ಲಿ ಸಿಲುಕಿದ್ದ 50 ಪ್ರಯಾಣಿಕರ ರಕ್ಷಣೆ

    ಭೂ ಕುಸಿತದಿಂದ ಕಾಡಿನಲ್ಲಿ ಸಿಲುಕಿದ್ದ 50 ಪ್ರಯಾಣಿಕರ ರಕ್ಷಣೆ

    ಹಾಸನ: ಭೂ ಕುಸಿತದಿಂದ ಕಾಡಿನಲ್ಲಿ ಸಿಲುಕಿದ್ದ 50 ಮಂದಿ ಪ್ರಯಾಣಿಕರನ್ನು ರಕ್ಷಿಸಲಾಗಿದೆ.

    ಹಾಸನದ ಸಕಲೇಶಪುರ ತಾಲೂಕಿನ ಬಿಸಿಲೆಘಾಟ್ ನ ಹಡ್ಲಗದ್ದೆ ಬಳಿ ಭೂ ಕುಸಿತ ಸಂಭವಿಸಿತ್ತು. ಈ ಅವಘಡದಿಂದಾಗಿ ಮಂಗಳವಾರ ರಾತ್ರಿ ಸಾರಿಗೆ ಇಲಾಖೆ ಬಸ್ ಪ್ರಯಾಣಿಕರು ಕಾಡಿನಲ್ಲಿ ಸಿಲುಕಿದ್ದು, ರಾತ್ರಿಯೆಲ್ಲ ಕುಡಿಯಲು ನೀರಿಲ್ಲದೆ ಪರದಾಡಿದ್ದರು. ಮರುದಿನ ಸ್ಥಳೀಯರ ನೆರವಿನಿಂದ ಬೆಟ್ಟವನ್ನೇರಿ ರಸ್ತೆಯ ಮತ್ತೊಂದು ಬದಿಗೆ ಬಂದು ಸೇರಿದ್ದಾರೆ. ಈ ವೇಳೆ ಸ್ಥಳೀಯರೇ ವಯೋವೃದ್ಧರನ್ನ ಬೆನ್ನಮೇಲೆ ಹೊತ್ತು ತಂದು ರಕ್ಷಿಸಿದ್ದಾರೆ.

    ಜನರ ನೋವಿಗೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಸದ್ಯ ಮಡಿಕೇರಿ ಡಿಪೋ ಬಸ್ ಮೂಲಕ ತೆರಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಗ್ರಾಮಸ್ಥರಿಗೆ ಭಯ ಹುಟ್ಟಿಸುತ್ತಿದ್ದ ದೊಡ್ಡ ಚಿರತೆ ಕೊನೆಗೂ ಬೋನಿಗೆ ಬಿತ್ತು!

    ಗ್ರಾಮಸ್ಥರಿಗೆ ಭಯ ಹುಟ್ಟಿಸುತ್ತಿದ್ದ ದೊಡ್ಡ ಚಿರತೆ ಕೊನೆಗೂ ಬೋನಿಗೆ ಬಿತ್ತು!

    ಉಡುಪಿ: ಕಳೆದ ಒಂದು ವರ್ಷದಿಂದ ಉಡುಪಿಯ ಕಾಪು ತಾಲೂಕಿನ ಗ್ರಾಮಸ್ಥರಿಗೆ ಜೀವಭಯ ಹುಟ್ಟಿಸಿದ್ದ ಚಿರತೆಯನ್ನು ಅರಣ್ಯಾಧಿಕಾರಿಗಳು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

    ಕಾಪು ತಾಲೂಕಿನ ಪಾಂಬೂರು ವ್ಯಾಪ್ತಿಯಲ್ಲಿ ಅರಣ್ಯಾಧಿಕಾರಿಗಳು ಮತ್ತು ಗ್ರಾಮಸ್ಥರು ಜಂಟಿ ಕಾರ್ಯಾಚರಣೆ ಮಾಡಿ ಚಿರತೆಯನ್ನು ಸೆರೆ ಹಿಡಿದಿದ್ದಾರೆ. 8 ವರ್ಷದ ದೊಡ್ಡ ಗಂಡು ಚಿರತೆ ಶಿರ್ವ, ಪಾಂಬೂರು ಮತ್ತು ಕಾಪು ವ್ಯಾಪ್ತಿಯಲ್ಲಿ ಜನರಿಗೆ ನಡುಕ ಹುಟ್ಟಿಸಿತ್ತು. ಮನೆಯ ಅಂಗಳಕ್ಕೆ ಬಂದು ನಾಯಿಯನ್ನು ಹೊತ್ತೊಯ್ಯುತ್ತಿತ್ತು. ಹಟ್ಟಿಯಲ್ಲಿದ್ದ ಹಸುವಿನ ಮೇಲೆ ಕೂಡಾ ದಾಳಿ ಮಾಡಿತ್ತು. ಈಗ ಹಲವಾರು ತಿಂಗಳಿಂದ ಸ್ಥಳೀಯ ಜನರಲ್ಲಿ ಭಯ ಹುಟ್ಟಿಸಿದ್ದ ಚಿರತೆಯನ್ನು ಬೋನಿನೊಳಗೆ ಹಾಕುವಲ್ಲಿ ಈಗ ಅರಣ್ಯಾಧಿಕಾರಿಗಳು ಯಶಸ್ವಿಯಾಗಿದ್ದಾರೆ.

    ಅರಣ್ಯ ಇಲಾಖೆಗೆ ಸ್ಥಳೀಯರಿಂದ ನೂರಾರು ದೂರು ಬಂದಿತ್ತು. ಆದ್ದರಿಂದ ಅರಣ್ಯಾಧಿಕಾರಿಗಳು ಬೋನುಗಳನ್ನು ಇಟ್ಟಿದ್ದರು. ಹಲವೆಡೆ ಬೋನು ಇಟ್ಟರೂ ಚಿರತೆ ಬಿದ್ದಿರಲಿಲ್ಲ. ಪಾಂಬೂರಿನಲ್ಲಿ ಎರಡು ದಿನದ ಹಿಂದೆ ಇಟ್ಟ ಬೋನಿನೊಳಗೆ ನಾಯಿಯನ್ನು ತಿನ್ನಲು ಚಿರತೆ ಬಂದಿದೆ. ಆಗ ಬೋನ್ ಲಾಕ್ ಆಗಿದೆ. ಬೆಳಗ್ಗೆ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದ ತಕ್ಷಣ ಅಧಿಕಾರಿಗಳು ಸ್ಥಳಕ್ಕೆ ಬಂದಿದ್ದಾರೆ. ಅಷ್ಟರಲ್ಲಿ ಸೆರೆ ಸಿಕ್ಕ ಸುದ್ದಿ ತಿಳಿದು ಜನರು, ಮಕ್ಕಳು ಚಿರತೆಯನ್ನು ನೋಡಲು ಮುಗಿಬಿದ್ದಿದ್ದರು.

    ಆಹಾರ ಅರಸುತ್ತಾ ನಾಡಿಗೆ ಬರುವ ಚಿರತೆಗಳ ಸಂಖ್ಯೆ ಜಾಸ್ತಿಯಾಗಿದೆ. ಜನರ ನೆಮ್ಮದಿ ಕಾಪಾಡುವ ಜೊತೆಗೆ ಕಾಡು ಪ್ರಾಣಿಗಳ ರಕ್ಷಣೆ ಕೂಡಾ ನಮ್ಮ ಜವಾಬ್ದಾರಿ. ಇತ್ತೀಚಿನ ವರ್ಷಗಳಲ್ಲಿ ಇಷ್ಟು ದೊಡ್ಡ ಗಾತ್ರದ ಚಿರತೆ ಸೆರೆ ಸಿಕ್ಕಿಲ್ಲ. ಚಿರತೆಯನ್ನು ಪಶ್ಚಿಮ ಘಟ್ಟಕ್ಕೆ ಬಿಡಲಾಗುತ್ತದೆ ಎಂದು ಅರಣ್ಯಾಧಿಕಾರಿ ಕ್ಲಿಫರ್ಡ್ ತಿಳಿಸಿದ್ದಾರೆ.

    ವಲಯ ಅರಣ್ಯಾಧಿಕಾರಿ ಗಣಪತಿ ನಾಯ್ಕ ನೇತೃತ್ವದಲ್ಲಿ ಕಾರ್ಯಚರಣೆ ನಡೆದಿದ್ದು, ಸ್ಥಳೀಯರು ಸಹಕಾರ ನೀಡಿದ್ದಾರೆ.

  • ಕೊಂಗಳ್ಳಿ ಮಲ್ಲಪ್ಪನ ಬೆಟ್ಟಕ್ಕೆ ರಾತ್ರಿ ಪ್ರವೇಶ ನಿಷೇಧ

    ಕೊಂಗಳ್ಳಿ ಮಲ್ಲಪ್ಪನ ಬೆಟ್ಟಕ್ಕೆ ರಾತ್ರಿ ಪ್ರವೇಶ ನಿಷೇಧ

    ಚಾಮರಾಜನಗರ: ಜಿಲ್ಲೆಯ ಗಡಿಭಾಗದಲ್ಲಿರುವ ಕನ್ನಡಿಗರೇ ಆರಾಧಿಸುವ ಕೊಂಗಳ್ಳಿ ಮಲ್ಲಪ್ಪನ ಬೆಟ್ಟಕ್ಕೆ ರಾತ್ರಿ ವೇಳೆ ಪ್ರವೇಶ ನಿಷೇಧಿಸಲಾಗಿದೆ.

    ಕೊಂಗಳ್ಳಿ ಮಲ್ಲಪ್ಪನ ಬೆಟ್ಟ ತಮಿಳುನಾಡಿನ ಸತ್ಯಮಂಗಲ ಹುಲಿ ಸಂರಕ್ಷಿತ ಅರಣ್ಯ ವ್ಯಾಪ್ತಿಯಲ್ಲಿದೆ. ಹೀಗಾಗಿ ತಮಿಳುನಾಡು ಸರ್ಕಾರ ವನ್ಯ ಪ್ರಾಣಿಗಳ ಸಂರಕ್ಷಣೆ ದೃಷ್ಟಿಯಿಂದ ಇಂದಿನಿಂದ ಕೊಂಗಳ್ಳಿ ಬೆಟ್ಟಕ್ಕೆ ಸಂಜೆ 6ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಪ್ರವೇಶ ನಿರ್ಬಂಧಿಸಿದೆ.

    ಸತ್ಯಮಂಗಲ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿ ಬರುವ 10 ಕಿಲೋಮೀಟರ್ ರಾತ್ರಿ ವೇಳೆ ಸಂಚಾರ ನಿಷೇಧ ಮಾಡಲಾಗಿದೆ. ಹೇಳಿ ಕೇಳಿ ಕೊಂಗಳ್ಳಿ ಮಲ್ಲಿಕಾರ್ಜುನ ಸ್ವಾಮಿ ದೇವಾಲಯ ಕನ್ನಡಿಗರೇ ಆರಾಧಿಸುವ ದೇವಾಲಯವಾಗಿದ್ದು, ಚಾಮರಾಜನಗರ, ಮೈಸೂರು, ಮಂಡ್ಯ, ರಾಮನಗರ ಸೇರಿದಂತೆ ಹಲವಾರು ಜಿಲ್ಲೆಗಳಿಂದ ಲಕ್ಷಾಂತರ ಮಂದಿ ಭಕ್ತರಿದ್ದಾರೆ.

    ಪ್ರತಿನಿತ್ಯ ಇಲ್ಲಿಗೆ ನೂರಾರು ಮಂದಿ ಭೇಟಿ ನೀಡುತ್ತಾರೆ. ಅಮಾವಾಸ್ಯೆ, ಕಾರ್ತಿಕಮಾಸ, ದೀಪಾವಳಿ, ಯುಗಾದಿ ಹೀಗೆ ವಿಶೇಷ ಸಂದರ್ಭಗಳಲ್ಲಂತು ಕರ್ನಾಟಕದಿಂದ ಸಾವಿರಾರು ಮಂದಿ ಇಲ್ಲಿ ರಾತ್ರಿ ವೇಳೆ ವಾಸ್ತವ್ಯ ಮಾಡಿ ದೇವರ ದರ್ಶನ ಪಡೆಯುವುದು ಸಾಮಾನ್ಯವಾಗಿತ್ತು. ಅಲ್ಲದೆ ಸಾಮೂಹಿಕವಾಗಿ ಅಡುಗೆ ತಯಾರಿಸಿ ಪ್ರಸಾದ ಸ್ವೀಕರಿಸುವುದು ಸಂಪ್ರದಾಯವಾಗಿತ್ತು. ರಾತ್ರಿ ವೇಳೆ ಪ್ರವೇಶ ನಿಷೇಧಿಸಿರುವುದರಿಂದ ಇದಕ್ಕೆಲ್ಲ ಕಡಿವಾಣ ಬಿದ್ದಂತಾಗಿದೆ.

    https://www.youtube.com/watch?v=pSKFyfZ4kAY