Tag: forest

  • ಬಂಡೀಪುರದಲ್ಲಿ 6 ದಿನವಾದರೂ ಆರದ ಕಾಡ್ಗಿಚ್ಚು

    ಬಂಡೀಪುರದಲ್ಲಿ 6 ದಿನವಾದರೂ ಆರದ ಕಾಡ್ಗಿಚ್ಚು

    – ವನಸಂಪತ್ತಿನ ಜೊತೆಗೆ ಜೀವ ಸಂಕುಲವೂ ಕರಕಲು
    – ಬೆಂಕಿಯಿಟ್ಟ ಶಂಕಿತನೋರ್ವನ ಬಂಧನ

    ಚಾಮರಾಜನಗರ: ಬಂಡೀಪುರ ಹುಲಿಸಂರಕ್ಷಿತಾರಣ್ಯದಲ್ಲಿ ಬೆಂಕಿಯ ರೌದ್ರಾವತಾರಕ್ಕೆ ಸರಿಸುಮಾರು ಹತ್ತು ಸಾವಿರ ಎಕರೆ ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿದೆ. ಕಳೆದ ಐದು ದಿನಗಳ ಹಿಂದೆ ಹಬ್ಬಿದ ಕಾಡ್ಗಿಚ್ಚು ಇದೀಗ ನಿಯಂತ್ರಣಕ್ಕೆ ಬಂದಿದೆ.

    ಸದಾ ಹಸಿರಿನಿಂದ ಕಂಗೊಳಿಸುತ್ತಿದ್ದ ಬಂಡೀಪುರ ಅರಣ್ಯ ಇದೀಗ ಬೆಂದ ಕಾಡಾಗಿದೆ. ಹುಲಿ, ಕರಡಿ, ಚಿರತೆ, ಆನೆ, ಜಿಂಕೆ ಸೇರಿದಂತೆ ವನ್ಯಜೀವಿಗಳ ಆವಾಸ ಸ್ಥಾನ ಬೆಂದು ಬೋಳು-ಬೋಳಾಗಿದೆ. ಐದು ದಿನಗಳ ಹಿಂದಷ್ಟೇ ಕಾಣಿಸಿಕೊಂಡ ಕಾಡ್ಗಿಚ್ಚಿನಿಂದ ಬಂಡೀಪುರದ ಸುಮಾರು 10 ಸಾವಿರ ಎಕರೆ ಅರಣ್ಯದ ಪ್ರದೇಶ, ಅಪಾರ ಪ್ರಮಾಣದ ವನ್ಯ ಸಂಪತ್ತು ಬೆಂಕಿಗಾಹುತಿಯಾಗಿದೆ.

    ನಿನ್ನೆ ಸಂಜೆವರೆಗೆ ನಿಯಂತ್ರಣಕ್ಕೆ ಬಂದಿದ್ದ ಅರಣ್ಯ ಪ್ರದೇಶದಲ್ಲೇ ಸಂಜೆ ಮತ್ತೆ ಬೆಂಕಿ ಕಾಣಿಸಿಕೊಂಡಿದೆ. ಬಂಡೀಪುರದ ಗೋಪಾಲಸ್ವಾಮಿ ಬೆಟ್ಟ ಮತ್ತು ಕುಂದಕೆರೆ ವಲಯದ ಅಂದಾಜು ಎರಡೂವರೆ ಸಾವಿರ ಹೆಕ್ಟೇರ್ ಪ್ರದೇಶ ಬೆಂಕಿಗೆ ಆಹುತಿಯಾಗಿದೆ. ಇದೀಗ ಮತ್ತೆ ಯಾರೋ ಕಿಡಿಗೇಡಿಗಳು ಗೋಪಾಲಸ್ವಾಮಿ ಬೆಟ್ಟದ ವಲಯಕ್ಕೆ ಬೆಂಕಿ ಹಾಕಿದ್ದಾರೆ. ಇದರಿಂದಾಗಿ 20 ಸಾವಿರಕ್ಕೂ ಅಧಿಕ ಎಕರೆ ಅರಣ್ಯ ಪ್ರದೇಶವನ್ನು ಬೆಂಕಿ ನಾಶ ಮಾಡಿದೆ.

    ಬಂಡಿಪುರದ ಗೋಪಾಲಸ್ವಾಮಿ ಬೆಟ್ಟ ಹಾಗೂ ಕುಂದಕೆರೆ ವಲಯದಲ್ಲಿ ಬೆಂಕಿಯೇ ಹತೋಟಿಗೆ ಬರುತ್ತಿಲ್ಲ. ರಾತ್ರಿ ಇಡೀ ಬಂಡಿಪುರದಲ್ಲಿ ಬೆಂಕಿ ಉರಿಯುತ್ತಿದ್ದು, ಇದರಿಂದ ಲಕ್ಷಾಂತರ ಪ್ರಮಾಣದಲ್ಲಿ ಆಲದಮರ, ಬೀಟೆ, ನೀಲಗಿರಿ, ತೇಗ, ಹೊಂಗೆಮರ ಸೇರಿದಂತೆ ಇನ್ನಿತರ ಮರಗಳು ನಾಶವಾಗಿವೆ. ಬಂಡಿಪುರದಲ್ಲಿ ಆಕರ್ಷಣೆ ಅಂದ್ರೆ ಸಫಾರಿ ಝೋನ್. ನಿನ್ನೆ ರಾತ್ರಿ ಸಫಾರಿ ವಲಯಕ್ಕೂ ಬೆಂಕಿ ಆವರಿಸಿ ಇಡೀ ಸಫಾರಿ ಝೋನ್ ನಾಶವಾಗಿದ್ದು ಒಂದು ವಾರ ಕಾಲ ಸಫಾರಿ ಬಂದ್ ಮಾಡಲಾಗಿದೆ.

    ಬಂಡೀಪುರ ಹುಲಿ ರಕ್ಷಿತಾರಣ್ಯದಲ್ಲಿ ಬೆಂಕಿ ಬಿದ್ದ ಘಟನೆಗೆ ಸಂಬಂಧಿಸಿದಂತೆ ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಸ್ಥಳಕ್ಕೆ ಭೇಟಿ ನೀಡಿದರು. ಅರಣ್ಯಕ್ಕೆ ಕಿಡಿಗೇಡಿಯೊಬ್ಬ ಬೆಂಕಿ ಹಾಕಿರುವ ಶಂಕೆ ವ್ಯಕ್ತವಾಗಿದ್ದು ಓರ್ವನನ್ನು ಬಂಧಿಸಲಾಗಿದೆ. ಬೆಂಕಿ ಹರಡದಂತೆ ಸರ್ವ ರೀತಿಯ ಪ್ರಯತ್ನ ಮಾಡಲಾಗುವುದು ಎಂದರು.

    ಈ ಮಧ್ಯೆ, ಅರಣ್ಯ ಸಂರಕ್ಷಣಾ ರಾಯಭಾರಿಯಾಗಿರೋ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಂಡೀಪುರ ಅಭಯಾರಣ್ಯದಲ್ಲಿ ಉಂಟಾಗಿರುವ ಕಾಡ್ಗಿಚ್ಚಿನಿಂದಾಗಿ ನೊಂದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಕಾಡು ಸುಟ್ಟಿರುವ ಫೋಟೋ ಹಾಕಿ ಆಸಕ್ತಿಯುಳ್ಳ ಸ್ವಯಂಸೇವಕರು ಅಭಿಯಾನದಲ್ಲಿ ಪಾಲ್ಗೊಳ್ಳಿ ಎಂದು ಕರೆಕೊಟ್ಟಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಚಿಕ್ಕಮಗಳೂರಿನ ಉದುಸೆಯಲ್ಲಿ ಕಾಡ್ಗಿಚ್ಚು – ಬೆಲೆ ಬಾಳುವ ಮರಗಳು ಸುಟ್ಟು ಕರಕಲು

    ಚಿಕ್ಕಮಗಳೂರಿನ ಉದುಸೆಯಲ್ಲಿ ಕಾಡ್ಗಿಚ್ಚು – ಬೆಲೆ ಬಾಳುವ ಮರಗಳು ಸುಟ್ಟು ಕರಕಲು

    ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಉದುಸೆ ಗ್ರಾಮದ ಅರಣ್ಯ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬೆಲೆ ಬಾಳುವ ಮರಗಳು ಸುಟ್ಟು ಕರಕಲಾಗಿವೆ.

    ಸುಮಾರು 30 ಎಕರೆಗೂ ಹೆಚ್ಚು ಅರಣ್ಯ ಪ್ರದೇಶ ಬೆಂಕಿಗಾಹುತಿಯಾಗಿದ್ದು, ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಒಂದು ಕಡೆ ನಂದಿಸಿದರೆ ಮತ್ತೊಂದು ಕಡೆಗೆ ಬೆಂಕಿ ಆವರಿಸಿಕೊಳ್ಳುತ್ತಿದ್ದರಿಂದ ಕಾಡು ಧಗಧಗನೆ ಹೊತ್ತು ಉರಿಯುತ್ತಿದೆ. ಉದುಸೆ ಗ್ರಾಮದ ಸುತ್ತ-ಮುತ್ತ ಬೆಂಕಿ ಕಾಣಿಸಿಕೊಂಡಿದ್ದರಿಂದ ಗ್ರಾಮಸ್ಥರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

    ಶನಿವಾರ ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ನಂದಿಗಿರಿಧಾಮದಲ್ಲಿಯೂ ಕಾಡ್ಗಿಚ್ಚು ಕಾಣಿಸಿಕೊಂಡಿತ್ತು. ಇತ್ತ ಚಾಮರಾಜನಗರದ ಬಂಡೀಪುರ ರಕ್ಷಿತಾರಣ್ಯದಲ್ಲಿಯೂ ಕಳೆದ ನಾಲ್ಕು ದಿನಗಳಿಂದ ಬೆಂಕಿ ಕಾಣಿಸಿಕೊಂಡಿದ್ದರಿಂದ ಸಫಾರಿಯನ್ನು ಬಂದ್ ಮಾಡಲಾಗಿದೆ. ಅಗ್ನಿಶಾಮಕದಳದ ಸಿಬ್ಬಂದಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಆರು ಅಡಿ ಉದ್ದದ ಮೊಸಳೆ ಸೆರೆ

    ಆರು ಅಡಿ ಉದ್ದದ ಮೊಸಳೆ ಸೆರೆ

    ಬಾಗಲಕೋಟೆ: ನದಿ ಒಡಲು ಬತ್ತಿದ್ದರಿಂದ ಆಗಾಗ ನದಿ ಆಚೆ ಬಂದು ಭೀತಿ ಸೃಷ್ಟಿಸಿದ್ದ ಮೊಸಳೆಯನ್ನು ಗ್ರಾಮಸ್ಥರೇ ಸೆರೆ ಹಿಡಿದಿರುವ ಘಟನೆ ಜಿಲ್ಲೆಯ ಮುಧೋಳ ತಾಲೂಕು ಮಾಚಕನೂರುದಲ್ಲಿ ನಡೆದಿದೆ.

    ಘಟಪ್ರಭಾ ನದಿಯಲ್ಲಿ ಸೋಮವಾರ ನಸುಕಿನ ಜಾವ ಮಾಚಕನೂರು ಗ್ರಾಮದ ಯುವಕರು ಸೇರಿ ಸುಮಾರು ಆರು ಅಡಿ ಉದ್ದದ ಮೊಸಳೆಯನ್ನು ಸೆರೆ ಹಿಡಿದಿದ್ದಾರೆ. ಮೊಸಳೆ ನೀರು, ಆಹಾರ ಹುಡುಕಿಕೊಂಡು ಬಂದಿದೆ. ಈ ವೇಳೆ ಯುವಕರು ಹಗ್ಗದ ಸಹಾಯದಿಂದ ಅದನ್ನು ಸೆರೆ ಹಿಡಿದು ಬಳಿಕ ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.

    ಬೇಸಿಗೆ ಬಂತೆಂದರೆ ಘಟಪ್ರಭಾ ನದಿ ಬತ್ತುತ್ತದೆ. ಹೀಗಾಗಿ ನೀರು, ಆಹಾರ ಅರಸಿಕೊಂಡು ನದಿಯಿಂದ ಮೊಸಳೆಗಳು ಹೊರ ಬರುತ್ತವೆ. ಅನೇಕ ಸಂದರ್ಭದಲ್ಲಿ ಮೊಸಳೆ ದಾಳಿಗೆ ಜನ-ಜಾನುವಾರುಗಳ ಪ್ರಾಣ ಹಾನಿಯೂ ಆಗಿದೆ. ಈಗ ಬೇಸಿಗೆ ಆರಂಭವಾಗುತ್ತಿದ್ದಂತೆಯೇ ನದಿಯಾಚೆ ಮೊಸಳೆಗಳು ಬರುತ್ತಿದ್ದು, ಇದರಿಂದ ಮೊಸಳೆ ಕಂಡು ನದಿ ತೀರದ ಜನರು ಆತಂಕಗೊಂಡಿದ್ದಾರೆ ಎಂದು ಅರಣ್ಯ ಸಿಬ್ಬಂದಿ ಹೇಳಿದ್ದಾರೆ.

    ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದಿದ್ದ ಮೊಸಳೆಯನ್ನ ಆಲಮಟ್ಟಿ ಜಲಾಶಯ ಹಿನ್ನೀರಿಗೆ ಬಿಟ್ಟಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಲು ಅಪರೂಪದ ಕರಿ ಚಿರತೆ ಪತ್ತೆ

    ಬಲು ಅಪರೂಪದ ಕರಿ ಚಿರತೆ ಪತ್ತೆ

    ಕಾರವಾರ: ಬಲು ಅಪರೂಪದ ಕರಿ ಚಿರತೆಯೊಂದು ಉತ್ತರ ಕನ್ನಡ ಜಿಲ್ಲೆ ಜೋಯಿಡಾದ ಡಿಗ್ಗಿಯ ರಸ್ತೆ ಬಳಿ ಪ್ರತ್ಯಕ್ಷವಾಗಿದೆ.

    ಜೋಯಿಡಾದ ಕಾಳಿ ರಕ್ಷಿತ ಪ್ರದೇಶದಲ್ಲಿ ಕರಿ ಚಿರತೆ ಹೆಚ್ಚಾಗಿದ್ದು, ಈವರೆಗೂ ಸಾರ್ವಜನಿಕರಿಗೆ ಪ್ರತ್ಯಕ್ಷವಾಗಿರಲಿಲ್ಲ. ಆದರೆ ಇದೇ ಮೊದಲ ಬಾರಿಗೆ ರಸ್ತೆ ಬಳಿ ರಾತ್ರಿ ವೇಳೆ ಪ್ರತ್ಷಕ್ಷವಾಗಿದ್ದು, ಅಲ್ಲಿನ ಜನರನ್ನು ನಿಬ್ಬೆರಗುಗೊಳಿಸಿದೆ.

    ಪ್ರಯಾಣಿಕರು ರಕ್ಷಿತ ಪ್ರದೇಶದ ದಾರಿಯಲ್ಲಿ ಹೋಗುತ್ತಿದ್ದಾಗ ಚಿರತೆ ಕಾಡಿನಿಂದ ಬಂದು ರಸ್ತೆ ಬದಿ ಕುಳಿತಿದೆ. ಇದನ್ನು ನೋಡಿದ ತಕ್ಷಣ ಪ್ರಯಾಣಿಕರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಪ್ರಯಾಣಿಕರು ದೂರದಿಂದಲೇ ಕರಿ ಚಿರತೆಯ ವಿಡಿಯೋ ಮಾಡಿದ್ದಾರೆ.

    ಅದು ಕೂಡ ಕ್ಯಾಮೆರಾಗೆ ಪೋಸ್ ಕೊಡುವ ರೀತಿ ಏನು ತೊಂದರೆ ಮಾಡದೆ ಸುಮ್ಮನೆ ಕುಳಿತ್ತಿತ್ತು. ಬಳಿಕ ಸ್ವಲ್ಪ ಹತ್ತಿರ ಹೋಗುತ್ತಿದ್ದಂತೆ ಭಯಗೊಂಡು ಕರಿ ಚಿರತೆ ಕಾಡಿನೊಳಗೆ ಓಡಿ ಹೋಗಿ ಅವಿತು ಕುಳಿತುಕೊಂಡಿದೆ. ಇದೆಲ್ಲವನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಸದ್ಯಕ್ಕೆ ಚಿರತೆ ಪ್ರಯಾಣಿಕರಿಗೆ ಯಾವುದೇ ತೊಂದರೆಯನ್ನು ಮಾಡಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಿಷೇಧಿತ ಪ್ರದೇಶಗಳಲ್ಲಿ ಡೇ-ನೈಟ್ ಟ್ರಕ್ಕಿಂಗ್

    ನಿಷೇಧಿತ ಪ್ರದೇಶಗಳಲ್ಲಿ ಡೇ-ನೈಟ್ ಟ್ರಕ್ಕಿಂಗ್

    ರಾಮನಗರ: ಸಿಲಿಕಾನ್ ಸಿಟಿ ಕೂಗಳತೆ ದೂರದಲ್ಲಿನ ರಾಮನಗರ ಅಂದರೆ ಟೆಕ್ಕಿಗಳಿಗೆ ತುಂಬಾನೆ ಇಷ್ಟ. ವೀಕೆಂಡ್ ಬಂತು ಅಂದರೆ ಸಾಕು ಟ್ರಕ್ಕಿಂಗ್, ವೀಕೆಂಡ್ ಟ್ರಿಪ್ ಅಂತ ಹೋಗುತ್ತಿರುತ್ತಾರೆ. ಆದರೆ ಡೇ ಆ್ಯಂಡ್ ನೈಟ್ ಹಲವೆಡೆ ಅನಧಿಕೃತವಾಗಿ ಟ್ರಕ್ಕಿಂಗ್ ಮಾಡುತ್ತಿದ್ದಾರೆ.

    ಹೌದು. ರೇಷ್ಮೆನಗರಿ ರಾಮನಗರ ಜಿಲ್ಲೆಯಾದ್ಯಂತ ಹಲವಾರು ಪ್ರವಾಸಿ ತಾಣಗಳಿವೆ. ಪ್ರವಾಸಿ ತಾಣಗಳ ಜೊತೆಗೆ ಬೆಟ್ಟಗುಡ್ಡಗಳು ಸಹ ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತಾ ಇದೆ. ಆದರೆ ಇದೀಗ ಈ ಬೆಟ್ಟಗುಡ್ಡಗಳಿಗೆ ಅನುಮತಿಯಿಲ್ಲದೇ ಡೇ ಆ್ಯಂಡ್ ನೈಟ್ ಟ್ರಕ್ಕಿಂಗ್ ಕೂಡಾ ನಡೆಯುತ್ತಿರುವ ಘಟನೆ ಸಾಮಾನ್ಯವಾಗಿ ಹೋಗಿದೆ. ಮಾಗಡಿ ತಾಲೂಕಿನ ಸಾವನದುರ್ಗದಲ್ಲಿ ಟ್ರಕ್ಕಿಂಗ್ ನಿಷೇಧಿಸಿದ್ದರೂ ಕೂಡಾ ಟ್ರಕ್ಕಿಂಗ್‍ನ್ನು ಅನಧಿಕೃತವಾಗಿ ನಡೆಸಲಾಗುತ್ತಿದೆ.

    ಅಡ್ವೆಂಚರ್ ನೇಷನ್ ಎಂಬ ವೆಬ್‍ಸೈಟ್‍ ನಲ್ಲಿ ಚಾರಣಿಗರು ಅದರಲ್ಲೂ ಟೆಕ್ಕಿಗಳೇ ಹೆಚ್ಚಿನದಾಗಿ ಬುಕ್ಕಿಂಗ್ ಮಾಡಲಾಗುತ್ತಿದೆ. ಅಲ್ಲದೇ ರಾತ್ರಿಯಿಡೀ ಟ್ರಕ್ಕಿಂಗ್, ಬೋನ್‍ಫೈರ್ ಕ್ಯಾಂಪ್ ಜೊತೆಗೆ ಬೆಳಗ್ಗಿನ ವೇಳೆ ರಾಕ್ ಕ್ಲೈಂಬಿಂಗ್ ನಡೆಸುತ್ತಾ ಅರಣ್ಯದಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಇನ್ನೂ ಜಲಾಶಯದ ಹಿನ್ನೀರಿನಲ್ಲಿ ಬೋಟಿಂಗ್, ಸ್ವಿಮ್ಮಿಂಗ್ ಸಹ ನಡೆಸುತ್ತಾ ಇದ್ದಾರೆ. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳದೇ ಇರುವುದು ಆಕ್ರೋಶಕ್ಕೆ ಕಾರಣವಾಗಿದೆ ಎಂದು ಪರಿಸರ ಪ್ರಿಯ ಕೊತ್ತಿಪುರ ಶಿವಣ್ಣ ಹೇಳಿದ್ದಾರೆ.

    ಅಂದಹಾಗೆ ಸಾವನದುರ್ಗ ಮತ್ತು ಮಂಚನಬೆಲೆ ಹಿನ್ನೀರಿನ ಬಳಿ ಪ್ರವೀಣ್ ಕೃಷ್ಣ ಎಂಬವರು 2.5 ಎಕರೆ ವಿಸ್ತೀರ್ಣದಲ್ಲಿ ಅಡ್ವೆಂಚರ್ ನೇಷನ್ ರೆಸಾರ್ಟ್ ನ್ನು ನಿರ್ಮಿಸಿದ್ದಾರೆ. ಈ ರೆಸಾರ್ಟ್ ಗೆ ಆನ್‍ಲೈನ್‍ನಲ್ಲಿ ಟ್ರಕ್ಕಿಂಗ್‍ಗೆ ಬುಕ್ ಮಾಡಿದ ಚಾರಣಿಗರನ್ನ ಸಾವನದುರ್ಗದ ದಬ್ಬಗುಳಿ ತನಕ ಕರೆತರಲಾಗುತ್ತದೆ. ಬಳಿಕ ಈ ರೆಸಾರ್ಟ್ ನಲ್ಲಿ ತಂಗಲು ವ್ಯವಸ್ಥೆ ಮಾಡಿ ರಾತ್ರಿ ವೇಳೆ ಫೈರ್ ಕ್ಯಾಂಪ್ ಅಲ್ಲದೇ ರಾಕ್ ಕ್ಲೈಂಬಿಂಗ್‍ ಗೆ ಚಾರಣಿಗರು ಹೋಗುತ್ತಿದ್ದಾರೆ. ಆನ್‍ಲೈನ್‍ ನಲ್ಲಿ ಟ್ರಕ್ಕಿಂಗ್ ಬುಕ್ಕಿಂಗ್ ಆಗುತ್ತಿದ್ದಂತೆ ಮಾಹಿತಿಗಾಗಿ ಅಡ್ವೆಂಚರ್ ಪ್ರತಿನಿಧಿ ಕರೆ ಮಾಡಿ ಮಾಹಿತಿಯನ್ನ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ.

    ಸಾವನದುರ್ಗ ಟ್ರಕ್ಕಿಂಗ್‍ಗೆ ದಿನವೊಂದಕ್ಕೆ 1250 ರೂಪಾಯಿಯನ್ನು ಓರ್ವ ಚಾರಣಿಗನಿಗೆ ನಿಗದಿ ಮಾಡಲಾಗಿದೆ. 3 ದಿನ 5 ದಿನದ ಟ್ರಕ್ಕಿಂಗ್ ಕೂಡಾ ನಡೆಸಲಾಗುತ್ತಿದೆ. ಇದಲ್ಲದೇ ಹಂದಿಗುಂದಿ ಅರಣ್ಯಪ್ರದೇಶ ಹಾಗೂ ಶೋಲೆ ಖ್ಯಾತಿಯ ರಾಮದೇವರ ಬೆಟ್ಟದಲ್ಲೂ ಸಹ ರಾಕ್ ಕ್ಲೈಂಬಿಂಗ್, ಟ್ರಕ್ಕಿಂಗ್ ನಡೆಸಲಾಗುತ್ತಿದೆ. ಆದರೂ ಕೂಡಾ ಅರಣ್ಯ ಇಲಾಖೆಗೆ ಸರಿಯಾದ ಮಾಹಿತಿ ಇಲ್ಲವಾಗಿದೆ ಎಂದು ಅಡ್ವೆಂಚರ್ ನೇಷನ್ ರೆಸಾರ್ಟ್ ಮ್ಯಾನೇಜರ್ ಮಹಾದೇವ್ ತಿಳಿಸಿದ್ದಾರೆ.

    ಒಂದೆಡೆ ರಾಜಾರೋಷವಾಗಿ ಅರಣ್ಯದಲ್ಲಿ ರೆಸಾರ್ಟ್ ನಡೆಯುತ್ತಾ ಇದೆ. ಇನ್ನೊಂದೆಡೆ ಜಿಲ್ಲೆಯ ಹಲವು ಅರಣ್ಯ ಪ್ರದೇಶಗಳಲ್ಲಿ ಡೇ ಆ್ಯಂಡ್ ನೈಟ್ ಟ್ರಕ್ಕಿಂಗ್ ಕೂಡಾ ನಡೆಸಲಾಗುತ್ತಿದೆ. ಇನ್ನಾದರೂ ಅರಣ್ಯ ಇಲಾಖೆ ಎಚ್ಚೆತ್ತು ಟ್ರಕ್ಕಿಂಗ್ ನಡೆಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ ಎಂದು ಪರಿಸರ ಪ್ರೇಮಿಗಳು ಮನವಿ ಮಾಡಿಕೊಳ್ಳುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ದಿಢೀರನೇ ಸೊಂಟದೆತ್ತರಕ್ಕೆ ಹಾರಿದ ಕಾಳಿಂಗ ಸರ್ಪ – ವಿಡಿಯೋ ನೋಡಿ

    ದಿಢೀರನೇ ಸೊಂಟದೆತ್ತರಕ್ಕೆ ಹಾರಿದ ಕಾಳಿಂಗ ಸರ್ಪ – ವಿಡಿಯೋ ನೋಡಿ

    ಚಿಕ್ಕಮಗಳೂರು: 13 ಅಡಿಯ ಬೃಹತ್ ಕಾಳಿಂಗ ಸರ್ಪವನ್ನ ಸೆರೆ ಹಿಡಿಯುವಾಗ ಮೂರು-ನಾಲ್ಕು ಬಾರಿ ಉರಗತಜ್ಞರ ಮೇಲೆಯೇ ದಾಳಿ ಮಾಡಲು ಯತ್ನಿಸಿದ ಘಟನೆ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ದ್ವಾರಮಕ್ಕಿ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಶ್ರೀಧರಗೌಡ ಎಂಬವರ ಮನೆ ಅಂಗಳಕ್ಕೆ ಕಾಳಿಂಗ ಸರ್ಪ ಆಗಮಿಸಿದೆ. ತಕ್ಷಣ ಅದನ್ನು ಸೆರೆ ಹಿಡಿಯಲು ಉರಗತಜ್ಞ ಹರೀಂದ್ರ ಅವರಿಗೆ ಕರೆ ಮಾಡಿ ತಿಳಿಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಹರೀಂದ್ರ ಸೆರೆಹಿಡಿಯಲು ಎಳೆದಾಡುತ್ತಿದ್ದಾಗ ಆಕ್ರೋಶಗೊಂಡ ಕಾಳಿಂಗ ಹರೀಂದ್ರ ಅವರ ಮೇಲೆಯೇ ದಾಳಿಗೆ ಯತ್ನಿಸಿದೆ.

    ಕಾಳಿಂಗ ಆಕ್ರೋಶ ಕಂಡ ಹರೀಂದ್ರ ಕೂಡ ಒಂದು ಕ್ಷಣ ವಿಚಲಿತಗೊಂಡಿದ್ದಾರೆ. ಕಾಳಿಂಗನ ಅಬ್ಬರ ಕಂಡು ಸ್ಥಳಿಯರು ಕೂಡ ಶಾಕ್ ಆಗಿದ್ದಾರೆ. ಅಂತಿಮವಾಗಿ ಒಂದು ಗಂಟೆಗಳ ಕಾಲ ನಿರಂತರ ಕಾರ್ಯಚರಣೆಯ ಬಳಿಕ ಕಾಳಿಂಗ ಸರ್ಪವನ್ನು ಹರೀಂದ್ರ ಅವರು ಸೆರೆ ಹಿಡಿದು ಅರಣ್ಯ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ಸ್ಥಳೀಯ ಅರಣ್ಯಕ್ಕೆ ಬಿಟ್ಟಿದ್ದಾರೆ.

    https://www.youtube.com/watch?v=lUEnsjtbahw

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಾಫಿನಾಡಲ್ಲಿ ಸಂಸಾರ ಸಮೇತ ಕಾಣಿಸಿಕೊಂಡ ಗಜಪಡೆ- ವಿಡಿಯೋ ನೋಡಿ

    ಕಾಫಿನಾಡಲ್ಲಿ ಸಂಸಾರ ಸಮೇತ ಕಾಣಿಸಿಕೊಂಡ ಗಜಪಡೆ- ವಿಡಿಯೋ ನೋಡಿ

    ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಗಜಪಡೆ ತನ್ನ ಸಂಸಾರ ಸಮೇತ ಕಾಣಿಸಿಕೊಂಡಿದೆ.

    ಚಿಕ್ಕಮಗಳೂರಿನ ಭದ್ರಾ ಅರಣ್ಯ ವ್ಯಾಪ್ತಿಯ ಮುತ್ತೋಡಿ ಅರಣ್ಯದಲ್ಲಿ ಆನೆಗಳ ಹಿಂಡು ಕಾಣಿಸಿಕೊಂಡಿದೆ. ಒಂದೇ ಜಾಗದಲ್ಲಿ ಸಲಗ, ಹೆಣ್ಣಾನೆ ಹಾಗೂ ಮರಿಗಳು ಗೋಚರವಾಗಿದೆ. ಪ್ರವಾಸಿಗರು ಸಫಾರಿಗೆ ಹೋದ ವೇಳೆ 10ಕ್ಕೂ ಹೆಚ್ಚು ಆನೆಗಳು ಕಾಣಿಸಿಕೊಂಡಿದೆ.

    ಆನೆಗಳ ಹಿಂಡು ಕಾಣಿಸುತ್ತಿದ್ದಂತೆ ಸ್ಥಳೀಯರೊಬ್ಬರು ತಮ್ಮ ಕ್ಯಾಮೆರಾದಲ್ಲಿ ಸಂಸಾರ ಸಮೇತ ಬಂದ ಗಜಪಡೆಯನ್ನು ಸೆರೆ ಹಿಡಿದಿದ್ದಾರೆ. ಈ ವೇಳೆ ಕಾಡೆಮ್ಮೆಯೂ ಆನೆಗಳ ಹಿಂಡಿನಲ್ಲಿ ಪ್ರತ್ಯಕ್ಷವಾಗಿದೆ.

    ಗಜಪಡೆಯ ಗಾಂಭೀರ್ಯ ಕಂಡು ಪ್ರವಾಸಿಗರು ಖುಷಿಯಾಗಿದ್ದಾರೆ. ಮುತ್ತೋಡಿ ಅರಣ್ಯದಲ್ಲಿ ಇತ್ತೀಚೆಗೆ ಆನೆಗಳ ಸಂಖ್ಯೆಯಲ್ಲಿ ಹೆಚ್ಚಳ ಹೆಚ್ಚಾಗುತ್ತಿದೆ. ಆನೆಗಳ ಹಿಂಡು ಕಾಣಿಸಿಕೊಂಡ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    https://www.youtube.com/watch?v=TlPr-RWDBDI

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸೆರೆ ಹಿಡಿಯಲು ಬಂದವರನ್ನೇ ಹೆದರಿಸ್ತು ಕಾಳಿಂಗ ಸರ್ಪ! – ವಿಡಿಯೋ ನೋಡಿ

    ಸೆರೆ ಹಿಡಿಯಲು ಬಂದವರನ್ನೇ ಹೆದರಿಸ್ತು ಕಾಳಿಂಗ ಸರ್ಪ! – ವಿಡಿಯೋ ನೋಡಿ

    ಚಿಕ್ಕಮಗಳೂರು: ಸೆರೆ ಹಿಡಿಯಲು ಪ್ರಯತ್ನಿಸುತ್ತಿದ್ದ ವೇಳೆ ಉರಗ ತಜ್ಞರನ್ನು ಹೆದರಿಸಿ ಬೃಹತ್ ಕಾಳಿಂಗ ಸರ್ಪ ದಾಳಿ ಮಾಡಲು ಮುಂದಾದ ಘಟನೆ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಕೆರೆಗದ್ದೆ ಗ್ರಾಮದಲ್ಲಿ ನಡೆದಿದೆ.

    ಬರೋಬ್ಬರಿ 12 ಅಡಿ ಉದ್ದದ ಕಾಳಿಂಗ ಸರ್ಪವೊಂದು ಶನಿವಾರ ಮಧ್ಯಾಹ್ನ ಕೆರೆಗದ್ದೆ ನಿವಾಸಿ ರಾಘವೇಂದ್ರ ಎಂಬವರ ಮನೆಯ ಆವರಣದ ಬಳಿ ಕಾಣಿಸಿಕೊಂಡಿತ್ತು. ಕಾಳಿಂಗ ಸರ್ಪವನ್ನು ಕಂಡು ಆತಂಕಗೊಂಡ ರಾಘವೇಂದ್ರ ಅವರು ಉರಗ ತಜ್ಞ ಹರೀಂದ್ರ ಅವರಿಗೆ ವಿಷಯ ತಿಳಿಸಿ ಸ್ಥಳಕ್ಕೆ ಕರೆಸಿಕೊಂಡಿದ್ದಾರೆ.

    ಕೇರೆ ಹಾವನ್ನ ನುಂಗಿದ್ದರಿಂದ ವೇಗವಾಗಿ ಸಂಚರಿಸಲು ಸಾಧ್ಯವಾಗದೇ ಮಂದಗತಿಯಲ್ಲಿ ಕಾಳಿಂಗ ಸರ್ಪ ಸಾಗುತ್ತಿತ್ತು. ಸೆರೆಹಿಡಿಯಲು ಮುಂದಾದಾಗ ಎರಡು ಬಾರಿ ಉರಗ ತಜ್ಞರ ಮೇಲೆ ದಾಳಿ ಮಾಡಲು ಕಾಳಿಂಗ ಸೊಂಟದ ಮಟ್ಟಕ್ಕೆ ನಿಂತಿತ್ತು. ಈ ಸನ್ನಿವೇಶವನ್ನ ಕಣ್ಣಾರೆ ಕಂಡು ಸ್ಥಳೀಯರು ಕಾಳಿಂಗನ ಆಕ್ರೋಶ ಹಾಗೂ ಹರೀಂದ್ರರವರ ಧೈರ್ಯ ಎರಡನ್ನೂ ನೋಡಿ ನಿಟ್ಟುಸಿರು ಬಿಟ್ಟಿದ್ದಾರೆ.

    ಸುಮಾರು ಒಂದು ಗಂಟೆಗೂ ಹೆಚ್ಚು ಹೊತ್ತು ಕಾರ್ಯಾಚರಣೆ ನಡೆಸಿದ ಹರೀಂದ್ರ ಅವರು ಯಶಸ್ವಿಯಾಗಿ ಕಾಳಿಂಗ ಸರ್ಪವನ್ನು ಸೆರೆ ಹಿಡಿದು ಸ್ಥಳೀಯ ಅರಣ್ಯಕ್ಕೆ ಬಿಟ್ಟಿದ್ದಾರೆ.

    https://www.youtube.com/watch?v=6K4M6aKoN2o

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಾಲಕನನ್ನ ಬಲಿ ಪಡೆದಿದ್ದ ನರಭಕ್ಷಕ ಚಿರತೆ ಕೊನೆಗೂ ಬೋನಿಗೆ ಬಿತ್ತು

    ಬಾಲಕನನ್ನ ಬಲಿ ಪಡೆದಿದ್ದ ನರಭಕ್ಷಕ ಚಿರತೆ ಕೊನೆಗೂ ಬೋನಿಗೆ ಬಿತ್ತು

    ಬಳ್ಳಾರಿ: ಕಳೆದ ಒಂದು ವಾರದ ಹಿಂದೆ ಸಂಡೂರು ತಾಲೂಕಿನ ಸೋಮಲಾಪುರ ಗ್ರಾಮದಲ್ಲಿ ಮೂರು ವರ್ಷದ ಮಗುವನ್ನ ಹೊತ್ತೊಯ್ದಿದ್ದ ಚಿರತೆ ಬೋನಿಗೆ ಬಿದ್ದಿದ್ದೆ.

    ಕಳೆದ ಒಂದು ವಾರದಿಂದ ಚಿರತೆ ಸೆರೆಗೆ ಮುಂದಾಗಿದ್ದ ಅರಣ್ಯ ಇಲಾಖೆ ಅಧಿಕಾರಿಗಳ ಕಾರ್ಯಾಚರಣೆ ಯಶ್ವಸಿಯಾಗಿದೆ. ಚಿರತೆ ಸೆರೆ ಹಿಡಿಯುವಂತೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದ ನಂತರ ಎಚ್ಚೆತ್ತುಕೊಂಡ ಅಧಿಕಾರಿಗಳು ಚಿರತೆಯನ್ನು ಸೆರೆಹಿಡಿದು ಇದೀಗ ಬೇರೆಡೆ ಸಾಗಿಸಿದ್ದಾರೆ. ಹೀಗಾಗಿ ಪ್ರತಿನಿತ್ಯ ಕೈಯಲ್ಲೇ ಜೀವ ಹಿಡಿದು ಓಡಾಡುತ್ತಿದ್ದ ಸಂಡೂರು ತಾಲೂಕಿನ ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

    ಏನಿದು ಪ್ರಕರಣ?
    ಡಿಸೆಂಬರ್ 12 ರಂದು ಸಂಜೆ ಆಟವಾಡುವಾಗ ಮನೆಯವರು ನೋಡ ನೋಡುತ್ತಿದ್ದಂತೆಯೇ ಚಿರತೆ ಬಾಲಕನನ್ನು ಎಳೆದೊಯ್ದಿದೆ. ಬಳಿಕ ಆತನ ಪೋಷಕರು ಹಾಗೂ ಗ್ರಾಮಸ್ಥರು ಬಾಲಕನನ್ನ ಹುಡುಕಾಡಿದ್ದಾರೆ. ಗ್ರಾಮದ ಹೊರವಲಯದಲ್ಲಿ ಬಾಲಕ ಶವವಾಗಿ ಪತ್ತೆಯಾಗಿದ್ದನು. ಬೆಳೆದು ನಿಂತ ಕುಡಿಯನ್ನು ಶವವಾಗಿ ನೋಡಿದ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.

    ಚಿರತೆಯನ್ನು ಹಿಡಿಯುವಂತೆ ಹಲವು ಬಾರಿ ಅರಣ್ಯ ಇಲಾಖೆಗೆ ಮನವಿ ಮಾಡಿದರೂ ಇಲಾಖೆ ಈ ಬಗ್ಗೆ ನಿರ್ಲಕ್ಷ್ಯ ವಹಿಸಿದೆ ಅಂತ ಸೋಮಲಾಪುರ ಗ್ರಾಮಸ್ಥರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶಿತರಾಗಿದ್ದರು. ಚಿರತೆ ಮಗುವನ್ನು ಹೊತ್ತೊಯ್ದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದರು. ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳದಲ್ಲೇ ಬೀಡು ಬಿಟ್ಟು ಚಿರತೆ ಸೆರೆ ಹಿಡಿಯಲು ಕಾರ್ಯಾಚರಣೆಗೆ ಮುಂದಾಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹಿಂಡುಹಿಂಡಾಗಿ ನಾಡಿನತ್ತ ಲಗ್ಗೆಯಿಟ್ಟ ಆನೆಗಳು.!

    ಹಿಂಡುಹಿಂಡಾಗಿ ನಾಡಿನತ್ತ ಲಗ್ಗೆಯಿಟ್ಟ ಆನೆಗಳು.!

    ಬೆಂಗಳೂರು: ಕರ್ನಾಟಕ-ತಮಿಳುನಾಡು ಗಡಿ ಭಾಗದಲ್ಲಿ ಆನೆಗಳ ಹಾವಳಿ ಮಿತಿಮೀರಿದ್ದು, ಅವುಗಳನ್ನು ನಾಡಿನತ್ತ ಬರದಂತೆ ತಡೆಯಲು ಅರಣ್ಯ ಇಲಾಖೆ ವಿಫಲವಾಗಿದೆ. ಪರಿಣಾಮ ರೈತರು ಕಷ್ಟಪಟ್ಟು ಬೆಳೆದಿದ್ದ ಬೆಳೆಗಳು ಆನೆಗಳ ಪಾಲಾಗುತ್ತಿದೆ.

    ತಮಿಳುನಾಡಿನ ಕೆಲಮಂಗಲಂ, ಕರ್ನಾಟಕದ ವಣಕನಹಳ್ಳಿ ಸೋಲುರು ಚೂಡಹಳ್ಳಿ ಗ್ರಾಮದಲ್ಲಿ ತಮಿಳುನಾಡಿನ ಅರಣ್ಯದಿಂದ ಸುಮಾರು 30ಕ್ಕೂ ಹೆಚ್ಚಿನ ಆನೆಗಳ ಹಿಂಡು ರಾಜ್ಯ ಪ್ರವೇಶಿಸಿದೆ. ಅಲ್ಲಿಯೇ ತೋಟದಲ್ಲಿ ಕೆಲಸ ಮಾಡುತ್ತಿದ್ದ ರೈತರೊಬ್ಬರು ಆನೆಗಳು ಬರುವುದನ್ನು ಕಂಡು ಪಕ್ಕದಲ್ಲೇ ಇದ್ದ ಹೈ ಟೆನ್ಷನ್ ವಿದ್ಯುತ್ ಗೋಪುರ ಏರಿ ಪ್ರಾಣ ಉಳಿಸಿಕೊಂಡಿದ್ದಾರೆ. ಬಳಿಕ ತನ್ನ ಮೊಬೈಲ್ ನಲ್ಲಿ ಆನೆಗಳು ಹಾದು ಹೋಗುವ ದೃಶ್ಯಗಳನ್ನು ಸೆರೆಹಿಡಿದ್ದಾರೆ.

    ನವೆಂಬರ್ ನಿಂದ ಮಾರ್ಚ್ ವರೆಗೂ ಆನೆಗಳು ಆಹಾರ ಅರಸಿ ತಮಿಳುನಾಡು-ಕರ್ನಾಟಕ ಅರಣ್ಯ ಪ್ರದೇಶದಲ್ಲಿ ಬೀಡುಬಿಡುತ್ತವೆ. ಅರಣ್ಯದಂಚಿನ ಗ್ರಾಮಗಳತ್ತ ನುಗ್ಗುವ ಆನೆಗಳು ರೈತರು ಬೆಳೆದ ಬೆಳೆಗಳನ್ನು ತಿಂದು ತುಳಿದು ಹಾಳು ಮಾಡುತ್ತವೆ. ಈ ಬಾರಿ ಬರಗಾಲವಿದ್ದು, ಮಳೆಯಿಲ್ಲದೆ ಬೇಳೆ ನಾಶವಾಗಿದೆ. ಉಳಿದ ಬೆಳೆಯನ್ನು ಉಳಿಸಿಕೊಳ್ಳಲು ರೈತರು ಕಷ್ಟಪಡಬೇಕಾದ ಪರಿಸ್ಥಿತಿ ಎದುರಾಗಿದೆ. ಇನ್ನು ಆನೆಗಳನ್ನು ಕಾಡಿನತ್ತ ಓಡಿಸಬೇಕಾದ ಅರಣ್ಯ ಇಲಾಖೆ ಸಿಬ್ಬಂದಿ ಅದೇಕೋ ನಿರ್ಲಕ್ಷ್ಯಕ್ಕೆ ಒಳಗಾಗಿದ್ದಾರೆ ಎಂದು ಕಾಡಂಚಿನ ರೈತ ಮಂಜಪ್ಪ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಬರಗಾಲದಿಂದ ನೊಂದಿದ್ದ ರೈತರಿಗೆ ಇದೀಗ ಆನೆಗಳು ಮತ್ತಷ್ಟು ಸಂಕಷ್ಟ ನೀಡುತ್ತಿದ್ದು, ಇನ್ನಾದರೂ ಅರಣ್ಯ ಇಲಾಖೆ ಆನೆಗಳು ಗ್ರಾಮಗಳಿಗೆ ನುಗ್ಗದಂತೆ ತಡೆಯುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv