Tag: forest

  • ರಸ್ತೆ ನಿರ್ಮಾಣ ಹೆಸರಿನಲ್ಲಿ ಮರೆಯಾಗುತ್ತಿರುವ ಮುಳ್ಳಯ್ಯನಗಿರಿ!

    ರಸ್ತೆ ನಿರ್ಮಾಣ ಹೆಸರಿನಲ್ಲಿ ಮರೆಯಾಗುತ್ತಿರುವ ಮುಳ್ಳಯ್ಯನಗಿರಿ!

    ಚಿಕ್ಕಮಗಳೂರು: ರಸ್ತೆ ನಿರ್ಮಾಣ ಹೆಸರಿನಲ್ಲಿ ಮುಳ್ಳಯ್ಯನಗಿರಿಯೂ ಕಾಂಕ್ರೀಟ್ ನಾಡಾಗಿ ಸಿಮೆಂಟ್ ಧೂಳಲ್ಲಿ ಮರೆಯಾಗುವ ಕಾಲ ಬರುತ್ತಿದೆ ಎಂಬ ಪ್ರಶ್ನೆ ಸ್ಥಳೀಯರಲ್ಲಿ ಮನೆ ಮಾಡಿದೆ.

    ಹಿಮಾಲಯ ಪರ್ವತಕ್ಕಿಂತ ಹಳೆಯದ್ದಾದ ದಟ್ಟ ಕಾನನದ ಶೋಲಾ ಕಾಡುಗಳ ಪಶ್ಚಿಮ ಘಟ್ಟಕ್ಕೂ ಸಂಚಕಾರ ಬಂದಿದೆ. ರಸ್ತೆ ಅಗಲೀಕರಣದ ಹೆಸರಲ್ಲಿ ಮುಳ್ಳಯ್ಯನಗಿರಿ ತುದಿಯಲ್ಲಿ ಕಲ್ಲುಗಳನ್ನು ಬ್ಲಾಸ್ಟ್ ಮಾಡುತ್ತಿರುವುದು ಕಂಡರೆ ಗಿರಿ ಆಯಸ್ಸು ಮುಗಿಯಿತ್ತಾ ಎಂಬ ಅನುಮಾನ ಮೂಡಿದೆ.

    ಇಂದು ರಸ್ತೆ ನೆಪದಲ್ಲಿ ಬ್ಲಾಸ್ಟ್ ಮಾಡುತ್ತಿರುವುದು ನಾಳೆ ಅಭಿವೃದ್ಧಿ ಹೆಸರಲ್ಲಿ ಹೋಂ ಸ್ಟೇ, ರೆಸಾರ್ಟ್, ಬಿಲ್ಡಿಂಗ್ ನಿರ್ಮಿಸೋದರಲ್ಲಿ ಅನುಮಾನವಿಲ್ಲ. ಸರ್ಕಾರ ರಸ್ತೆ ಅಭಿವೃದ್ಧಿ ಬಗ್ಗೆ ಯೋಚಿಸುತ್ತಿದೆ ವಿನಃ ಅಲ್ಲಿನ ಪ್ರಾಣಿ-ಪಕ್ಷಿಗಳು, ನೀರಿನ ಮೂಲ, ಶೋಲಾ ಅರಣ್ಯ, ಹುಲ್ಲುಗಾವಲಿನ ಬಗ್ಗೆ ಕಾಳಜಿಯೇ ಇಲ್ಲವೆಂದು ಪರಿಸರವಾದಿಗಳು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ವಿಶ್ವದಲ್ಲೇ ಸೂಕ್ಷ್ಮವಾದ ಪ್ರದೇಶಗಳಲ್ಲಿ ಮುಳ್ಳಯ್ಯನಗಿರಿಯೂ ಒಂದು. ಇಲ್ಲಿ ಮಣ್ಣನ್ನು ಅಗೆಯೋದು, ಗುಂಡಿ ತೋಡೋದು, ಬ್ಲಾಸ್ಟ್ ಮಾಡೋದು ಮಾಡಿದರೆ ಮಳೆಗಾಲದಲ್ಲಿ ಅದು ಕುಸಿಯುತ್ತೆ ಅದರಿಂದ ಬಹುದೊಡ್ಡ ಅನಾಹುತ ಆಗುತ್ತದೆ. ಒಮ್ಮೆ ಈ ಗಿರಿಯನ್ನು ನಾಶ ಮಾಡಿದರೆ, ಮತ್ತೆ ನಿರ್ಮಿಸೋದು ಅಸಾಧ್ಯ. ಇಂತಹ ಅಪರೂಪದ ಪ್ರಕೃತಿ ಸಂಪತ್ತನ್ನು ಉಳಿಸಿಕೊಳ್ಳುವ ಬದಲು ಸರ್ಕಾರ ಅಳಿಸೋಕೆ ಬೇಕಾದ ಎಲ್ಲಾ ಕೆಲಸ ಮಾಡುತ್ತಿದೆ ಎಂದು ಪರಿಸರವಾದಿಗಳು ಕಿಡಿಕಾರಿದ್ದಾರೆ.

    ಈ ಅರಣ್ಯ ನಾಶವಾದರೆ ಅಂತರ್ಜಲ ಕುಸಿಯುತ್ತೆ. ಶೋಲಾ ಅರಣ್ಯ ನಾಶವಾದರೆ ನೀರಿನ ಸೆಲೆಯೂ ಬತ್ತುತ್ತೆ. ನೀರನ್ನು ವರ್ಷವಿಡಿ ಹಿಡಿದಿಟ್ಟು ಹರಿಸೋ ಹುಲ್ಲುಗಾವಲು ನಾಶವಾಗುತ್ತೆ. ಕಾಂಕ್ರೀಟ್ ಕಾಡಾದರೆ ಕಾಡು ಪ್ರಾಣಿಗಳು ಎಲ್ಲಿಗೆ ಹೋಗಬೇಕು. ಸರ್ಕಾರದ ಒಂದು ಕೆಲಸ ಪ್ರಕೃತಿ ಹಾಗೂ ಸಮಾಜವನ್ನೇ ನಾಶಮಾಡುವಂತದ್ದು. ಸರ್ಕಾರ ಇಲ್ಲಿಗೆ ಬರುವ ಜನರನ್ನಷ್ಟೆ ನೋಡುತ್ತಿದೆ ವಿನಃ ವರದಂತಿರೋ ಅರಣ್ಯದ ಬಗ್ಗೆ ಯೋಚಿಸುತ್ತಿಲ್ಲ ಎಂದು ಪರಿಸರವಾದಿಗಳು ಆರೋಪಿಸುತ್ತಿದ್ದಾರೆ.

  • ನವಿಲನ್ನ ಅರ್ಧ ನುಂಗಿ ಪರದಾಡ್ತಿದ್ದ ಹೆಬ್ಬಾವಿನ ರಕ್ಷಣೆ

    ನವಿಲನ್ನ ಅರ್ಧ ನುಂಗಿ ಪರದಾಡ್ತಿದ್ದ ಹೆಬ್ಬಾವಿನ ರಕ್ಷಣೆ

    ಚಾಮರಾಜನಗರ: ನವಿಲನ್ನು ಅರ್ಧ ನುಂಗಿ ಪರದಾಡುತ್ತಿದ್ದ ಹೆಬ್ಬಾವೊಂದನ್ನು ರಕ್ಷಣೆ ಮಾಡಿರುವ ಘಟನೆ ಚಾಮರಾಜನಗರ ತಾಲೂಕಿನ ಹೊಂಡರಬಾಳು ಗ್ರಾಮದ ಜಮೀನೊಂದರಲ್ಲಿ ನಡೆದಿದೆ.

    ಬೆಳಗ್ಗಿನ ಜಾವ ಹೆಬ್ಬಾವು ನವಿಲನ್ನು ಹಿಡಿದು ನುಂಗಲು ಮುಂದಾಗಿದೆ. ಆದರೆ ಹೆಬ್ಬಾವಿನ ಗಂಟಲಿನ ಭಾಗದಲ್ಲಿ ನವಿಲು ಸಿಕ್ಕಿ ಹಾಕಿಕೊಂಡಿದೆ. ಪರಿಣಾಮ ಹೆಬ್ಬಾವು ನವಿಲನ್ನು ನುಂಗಲು ಸಾಧ್ಯವಾಗಿಲ್ಲ. ಹೀಗಾಗಿ ಹೆಬ್ಬಾವು ನವಿಲನ್ನು ನುಂಗಲು ಆಗದೆ ಉಗುಳಲೂ ಆಗದೇ ಪರದಾಡುತ್ತಿತ್ತು.

    ಇದನ್ನು ನೋಡಿದ ಸ್ಥಳೀಯರು ತಕ್ಷಣ ಚಾಮರಾಜನಗರದ ಉರಗ ತಜ್ಞ ಸ್ನೇಕ್ ಚಾಂಪ್ ಅವರಿಗೆ ಫೋನ್ ಮಾಡಿ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಚಾಂಪ್, ಗ್ರಾಮಸ್ಥರ ಸಹಾಯದಿಂದ ಹೆಬ್ಬಾವಿನ ಬಾಯಲ್ಲಿ ಸಿಕ್ಕಿದ್ದ ನವಿಲನ್ನು ಹೊರ ತೆಗೆದಿದ್ದಾರೆ. ನಂತರ ಹೆಬ್ಬಾವನ್ನು ಅರಣ್ಯ ಭಾಗದ ಕೆರೆಯ ಬಳಿ ಬಿಟ್ಟಿದ್ದಾರೆ.

  • ಹಾವು ಸ್ಕೂಟಿಯೊಳಗೆ ಸೇರ್ಕೊಂಡ್ರೆ ಹೀಗೂ ತೆಗೆಯಬಹುದು – ವಿಡಿಯೋ ನೋಡಿ

    ಹಾವು ಸ್ಕೂಟಿಯೊಳಗೆ ಸೇರ್ಕೊಂಡ್ರೆ ಹೀಗೂ ತೆಗೆಯಬಹುದು – ವಿಡಿಯೋ ನೋಡಿ

    ಚಿಕ್ಕಮಗಳೂರು: ಹಾವು ಕಪ್ಪೆ ನುಂಗಿ ಭಯದಿಂದ ಆ್ಯಕ್ಟೀವ್ ಹೊಂಡ ಸ್ಕೂಟಿಯೊಳಗೆ ಸೇರಿಕೊಂಡು ಸುಮಾರು ಒಂದು ಗಂಟೆಗಳ ಕಾಲ ಮನೆಯವರು ಹಾಗೂ ಉರಗ ತಜ್ಞನನ್ನ ಸತಾಯಿಸಿರುವ ಘಟನೆ ಚಿಕ್ಕಮಗಳೂರಿನ ಕಲ್ಯಾಣ ನಗರದ ಪುಷ್ಪಗಿರಿ ಲೇಔಟ್‍ನಲ್ಲಿ ನಡೆದಿದೆ.

    ಸಬ್ ಇನ್ಸ್ ಪೆಕ್ಟರ್ ಕುಮಾರಸ್ವಾಮಿ ಅವರ ಪತ್ನಿ ತಮ್ಮ ಸ್ಕೂಟಿ ಮನೆ ಮುಂದೆ ನಿಲ್ಲಿಸಿದ್ದರು. ಸ್ಕೂಟಿ ನಿಲ್ಲಿಸಿದ ಪಕ್ಕದಲ್ಲಿದ್ದ ಮೂರು ಕಪ್ಪೆಗಳಲ್ಲಿ ಒಂದನ್ನ ಹಾವು ನುಂಗಿದೆ. ಹಾವು ಕಪ್ಪೆಯನ್ನ ನುಂಗುವುದನ್ನು ಮನೆಯವರು ನೋಡಿ ಕೂಗಿಕೊಂಡು ಮನೆಯೊಳಗೆ ಹೋಗಿ ಬರುವಷ್ಟರಲ್ಲಿ ಹಾವು ಸ್ಕೂಟಿಯ ಹೆಡ್‍ಲೈಟ್ ಸೇರಿದೆ.

    ತಕ್ಷಣ ಮನೆಯವರು ಉರಗ ತಜ್ಞ ನರೇಶ್ ಅವರಿಗೆ ಫೋನ್ ಮಾಡಿ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಸ್ನೇಕ್ ನರೇಶ್ ಹರಸಾಹಸ ಪಟ್ಟರು  ಹಾವನ್ನ ತೆಗೆಯಲು ಸಾಧ್ಯವಾಗಲಿಲ್ಲ. ಸ್ಕೂಟಿಯ ಡೂಮ್ ಬಿಚ್ಚಲು ಮೆಕಾನಿಕ್‍ಗೆ ಕಾಲ್ ಮಾಡಿದ್ರೆ, ಆತ ಭಯ ಆಗುತ್ತೆ ಬಿಚ್ಚಲ್ಲ ಎಂದು ಬರಲಿಲ್ಲ.

    ಕೊನೆಗೆ ಸ್ನೇಕ್ ನರೇಶ್ ಸ್ಕೂಟಿಯನ್ನ ನಿರ್ಜನ ಪ್ರದೇಶಕ್ಕೆ ತಂದು ಮೋಟರ್ ಆನ್ ಮಾಡಿಕೊಂಡು ವೇಗವಾಗಿ ನೀರನ್ನ ಬಿಟ್ಟಿದ್ದಾರೆ. ಆಗ ಒಳಗಿದ್ದ ನಾಗರಹಾವು ಹೊರ ಬಂದಿದೆ. ತದನಂತರ ಹಾವನ್ನ ಸೆರೆ ಹಿಡಿದ ನರೇಶ್ ಹಾವನ್ನು ಸ್ಥಳೀಯ ಅರಣ್ಯ ಪ್ರದೇಶದಲ್ಲಿ ಬಿಟ್ಟಿದ್ದಾರೆ.

  • ಮುಂಗಾಲು ಮುರಿದು ಕಾಡಾನೆಯ ನರಕಯಾತನೆ

    ಮುಂಗಾಲು ಮುರಿದು ಕಾಡಾನೆಯ ನರಕಯಾತನೆ

    ಮಂಗಳೂರು: ಪಶ್ಚಿಮ ಘಟ್ಟದ ತಪ್ಪಲಿನ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬಾಳುಗೋಡು ಅರಣ್ಯ ಪ್ರದೇಶದಲ್ಲಿ ಕಾಡಾನೆಯೊಂದು ಮುಂಗಾಲು ಮುರಿದು ನರಕಯಾತನೆ ಪಡುತ್ತಿರುವುದು ದೃಶ್ಯ ಬೆಳಕಿಗೆ ಬಂದಿದೆ.

    ಬಾಳುಗೋಡು ಗ್ರಾಮದ ಪದಕ ಎಂಬಲ್ಲಿ ಕಾಡಾನೆ ಇದ್ದು ಮುಂದಿನ ಎಡ ಕಾಲು ಊರಲಾಗದೇ ಯಾತನೆ ಪಡುತ್ತಿದೆ. ಎಲ್ಲಿಯೋ ಹೊಂಡಕ್ಕೆ ಬಿದ್ದು ಕಾಲು ಮುರಿದುಕೊಂಡಿರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

    ಸುಬ್ರಹ್ಮಣ್ಯ ಅರಣ್ಯ ವಿಭಾಗದ ಅಧಿಕಾರಿಗಳು ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ. ನಾಗರಹೊಳೆಯಿಂದ ನುರಿತ ವೈದ್ಯರನ್ನು ಕರೆಸಿ ಚಿಕಿತ್ಸೆ ನೀಡುವ ಬಗ್ಗೆ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ. ಆದರೆ, ಅಧಿಕಾರಿಗಳು ವಿಳಂಬ ಧೋರಣೆ ಮಾಡಿದರೆ ಕಾಡಾನೆಗೆ ತೊಂದರೆಯಾಗಲಿದೆ.

    ಇತ್ತೀಚೆಗಷ್ಟೇ ಮೈಸೂರಿನ ಅಂಬಾರಿ ಹೊರುವ ಆನೆ ದ್ರೋಣ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಸಾವನ್ನಪ್ಪಿತ್ತು. ಹೀಗಾಗಿ ಆದಷ್ಟು ಬೇಗ ಒಂಟಿ ಆನೆಗೆ ಚಿಕಿತ್ಸೆ ನೀಡಬೇಕಾಗಿದೆ.

  • ಬಂಡೀಪುರದಲ್ಲಿ ಪ್ರಕೃತಿ ಸೊಬಗು ಇಮ್ಮಡಿ – ಮೂಲೆ, ಮೂಲೆಯಿಂದ ಪ್ರವಾಸಿಗರ ದಂಡು

    ಬಂಡೀಪುರದಲ್ಲಿ ಪ್ರಕೃತಿ ಸೊಬಗು ಇಮ್ಮಡಿ – ಮೂಲೆ, ಮೂಲೆಯಿಂದ ಪ್ರವಾಸಿಗರ ದಂಡು

    ಚಾಮರಾಜನಗರ: ಬೆಂಕಿ ಬಿದ್ದು ಬಂಡೀಪುರ ಹುಲಿರಕ್ಷಿತಾರಣ್ಯ ಸುಟ್ಟು ಭಸ್ಮವಾಗಿತ್ತು. ಆದರೆ ಇತ್ತೀಚೆಗೆ ಬೀಳುತ್ತಿರುವ ಮಳೆಯಿಂದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಗಿಡ ಮರಗಳು ಚಿಗುರೊಡೆಯಲಾರಂಭಿಸಿವೆ. ಹಸಿರು ಕಾನನದ ನಡುವೆ ಹುಲಿ, ಚಿರತೆ, ಆನೆ, ಜಿಂಕೆ, ಕಡವೆ ಮೊದಲಾದ ವನ್ಯಜೀವಿಗಳು ಸ್ವಚ್ಛಂದವಾಗಿ ವಿಹರಿಸುತ್ತಿವೆ. ಈ ವನ್ಯ ಸಂಪತ್ತನ್ನು ಕಣ್ತುಂಬಿಕೊಳ್ಳಲು ರಾಜ್ಯದ ಮೂಲೆ ಮೂಲೆಗಳಿಂದ ಪ್ರವಾಸಿಗರು ಬಂಡೀಪುರಕ್ಕೆ ಬರುತ್ತಿದ್ದಾರೆ.

    ಬೆಂಕಿ ಬಿದ್ದಿದ್ದ ಜಿಲ್ಲೆಯ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ನಿಧಾನವಾಗಿ ತನ್ನ ಮೊದಲ ರೂಪ ಪಡೆದು ಕೊಳ್ಳಲಾರಂಭಿಸಿದೆ. ಕಳೆದ 20 ದಿನಗಳಿಂದ ಬೀಳುತ್ತಿರುವ ಮಳೆಯಿಂದ ಬಂಡೀಪುರ ಹುಲಿರಕ್ಷಿತಾರಣ್ಯ ಹಸಿರ ವನರಾಶಿಯಿಂದ ಕಂಗೊಳಿಸುತ್ತಿದೆ. ನಿಧಾನಗತಿಯಲ್ಲಿ ಕೆರೆಕಟ್ಟೆಗಳು ತುಂಬಲಾರಂಭಿಸಿವೆ. ಅಷ್ಟೇ ಅಲ್ಲದೆ ಎಲ್ಲೆಡೆ ಹಸಿರಿನಿಂದ ಪ್ರಕೃತಿಯ ಸೊಬಗು ಇಮ್ಮಡಿಗೊಂಡಿದೆ.

    ಸುಮಾರು 1024 ಸಾವಿರ ಚದರ ಕಿ.ಮೀ ವ್ಯಾಪ್ತಿಯಲ್ಲಿ ವಿಸ್ತರಿಸಿರುವ ಈ ಹುಲಿ ಸಂರಕ್ಷಿತ ಅರಣ್ಯ ದಕ್ಷಿಣ ಭಾರತದ ಅತಿ ದೊಡ್ಡ ಸಂರಕ್ಷಿರತ ಪ್ರದೇಶವೂ ಆಗಿದೆ. 160ಕ್ಕೂ ಹೆಚ್ಚು ಹುಲಿಗಳು, ಎರಡು ಸಾವಿರಕ್ಕೂ ಹೆಚ್ಚು ಆನೆಗಳು ಸೇರಿದಂತೆ ಚಿರತೆ ಕರಡಿ, ಜಿಂಕೆ, ಕಾಡೆಮ್ಮೆ, ಮೊದಲಾದ ವನ್ಯಜೀವಿಗಳ ಆವಾಸ ಸ್ಥಾನವಾಗಿದೆ. ವಾರ್ಷಿಕ 450 ಮಿ.ಮೀ ವಾಡಿಕೆ ಮಳೆಯಾಗುವ ಬಂಡೀಪುರದಲ್ಲಿ ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗಲಾಂಭಿಸಿದೆ. ಹಸಿರಾಗಿರುವ ಹುಲಿ ಸಂರಕ್ಷಿತ ಪ್ರದೇಶದ ಮಧ್ಯೆ ಸಫಾರಿ ಮಾಡೋದಂತೂ ಮನಸಿಗೆ ಆಹ್ಲಾದ ಉಂಟು ಮಾಡುತ್ತಿದೆ. ಹೇಳಿ ಕೇಳಿ ಈಗ ಬೇಸಿಗೆ ರಜೆ ಬೇರೆ ಇರುವುದರಿಂದ ಪ್ರವಾಸಿಗರ ದಂಡೇ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದತ್ತ ಹರಿದು ಬರುತ್ತಿದೆ ಎಂದು ಪ್ರವಾಸಿಗರಾದ ರಾಜೇಶ್ವರಿ ಹೇಳಿದ್ದಾರೆ.

    ಚಾಮರಾಜನಗರ ಜಿಲ್ಲೆಯಲ್ಲಿ ಪೂರ್ವ ಮುಂಗಾರು ಬೀಳುತ್ತಿರುವುದರಿಂದ ಮೇ ತಿಂಗಳಿನಿಂದಲೇ ಬಂಡೀಪುರ ಕಳೆಗಟ್ಟಿದೆ. ನೀರು ಹಾಗೂ ಮೇವಿನ ಚಿಂತೆ ಇಲ್ಲದೆ ವನ್ಯಜೀವಿಗಳು ಸ್ವಚ್ಛಂದವಾಗಿ ವಿಹರಿಸುವ ದೃಶ್ಯ ಸಾಮಾನ್ಯವಾಗಿ ಕಂಡು ಬರುತ್ತಿದೆ. ಕೆರೆಕಟ್ಟೆಗಳಿಗೆ ನೀರು ಕುಡಿಯಲು, ಇಲ್ಲವೇ ಹಸಿರು ಹುಲ್ಲು ಮೇಯಲು ಬರುವ ಕಾಡಮ್ಮೆ, ಜಿಂಕೆ, ಕಡವೆಯಂತಹ ಪ್ರಾಣಿಗಳನ್ನ ನೋಡಿದರೆ ಮನಸ್ಸು ಮುದಗೊಳ್ಳುತ್ತದೆ ಎಂದು ಸತೀಶ್ ತಿಳಿಸಿದ್ದಾರೆ.

    ನಿರೀಕ್ಷಿತ ಪ್ರಮಾಣದ ಮಳೆಯಿಂದ ಬಂಡೀಪುರದಲ್ಲಿ ಪ್ರಕೃತಿ ಸೊಬಗು ಇಮ್ಮಡಿಗೊಂಡಿದೆ. ನಿತ್ಯ ನೂರಾರು ಪ್ರವಾಸಿಗರು ಹಚ್ಚ ಹಸಿರಿನಿಂದ ಕಂಗೊಳಿಸುವ ಬಂಡೀಪುರ ಹಾಗೂ ಇಲ್ಲಿನ ವನ್ಯಜೀವಿಗಳ ವೀಕ್ಷಣೆಗೆಂದು ಬರತೊಡಗಿದ್ದಾರೆ.

  • ಲವ್ ಬರ್ಡ್ಸ್ ಪಂಜರದಲ್ಲಿ ನಾಗರಹಾವು

    ಲವ್ ಬರ್ಡ್ಸ್ ಪಂಜರದಲ್ಲಿ ನಾಗರಹಾವು

    ಮೈಸೂರು: ಲವ್ ಬರ್ಡ್ಸ್ ಪಂಜರದೊಳಕ್ಕೆ ನಾಗರಹಾವು ನುಗ್ಗಿ ಎರಡು ಪಕ್ಷಿಗಳನ್ನು ತಿಂದ ಘಟನೆ ಮೈಸೂರು ಹೊರವಲಯದ ರೂಪನಗರದಲ್ಲಿ ನಡೆದಿದೆ.

    ಜಯಪ್ರಕಾಶ್ ಮನೆಯಲ್ಲಿ ಪಂಜರದೊಳಗಿದ್ದ ಎರಡು ಲವ್ ಬರ್ಡ್ಸ್ ಗಳನ್ನು ತಿಂದು ತೇಗಿದ ನಾಗರಹಾವು ಉಳಿದ ಲವ್ ಪಕ್ಷಿಗಳನ್ನು ತಿನ್ನಲು ಪಂಜರದೊಳಗೆ ಅಡಗಿ ಕುಳಿತಿತ್ತು. ಈ ವೇಳೆ ಪಕ್ಷಿಗಳು ಭಯದಿಂದ ಪಂಜರದೊಳಗೆ ಚೀರಾಡಿಕೊಂಡು ಹಾರಾಡುತ್ತಿದ್ದವು.

    ಪಕ್ಷಿಗಳ ಅತಿಯಾದ ಚೀರಾಟ ಕೇಳಿ ಮನೆ ಮಂದಿ ಓಡಿ ಬಂದಿದ್ದಾರೆ. ಆಗ ಪಂಜರದಲ್ಲಿದ್ದ ನಾಗರಹಾವು ಕಂಡು ತಬ್ಬಿಬ್ಬಾಗಿದ್ದಾರೆ. ಕೂಡಲೇ ಮನೆಯವರು ಉರಗ ತಜ್ಞ ಸ್ನೇಕ್ ಶಾಮ್‍ಗೆ ಫೋನ್ ಮಾಡಿ ಮಾಹಿತಿ ತಿಳಿಸಿದ್ದಾರೆ.

    ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಸ್ನೇಕ್ ಶ್ಯಾಂ ಪಂಜರದೊಳಗಿದ್ದ ನಾಗರಹಾವನ್ನು ಹಿಡಿದು ಸುರಕ್ಷಿತ ಪ್ರದೇಶಕ್ಕೆ ಬಿಟ್ಟಿದ್ದಾರೆ. ಆದರೆ ಪಂಜರದೊಳಗೆ ಸೇರಿಕೊಂಡು ಎರಡು ಲವ್ ಬರ್ಡ್ಸ್ ತಿಂದು ಹಾಕಿರುವುದರಿಂದ ಮನೆಯವರು ಬೇಸರ ವ್ಯಕ್ತಪಡಿಸಿದ್ದಾರೆ.

  • ಬೆಂಕಿಯಿಂದ ಬೆಂದಿದ್ದ ಅರಣ್ಯದಲ್ಲಿ ಪ್ರಾಣಿಗಳ ಕಲರವ

    ಬೆಂಕಿಯಿಂದ ಬೆಂದಿದ್ದ ಅರಣ್ಯದಲ್ಲಿ ಪ್ರಾಣಿಗಳ ಕಲರವ

    ಚಾಮರಾಜನಗರ: ಕಳೆದ ಎರಡು ತಿಂಗಳ ಹಿಂದೆ ಬೆಂಕಿಗೆ ಆಹುತಿಯಾಗಿದ್ದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಇದೀಗ ವನ್ಯಜೀವಿಗಳ ಕಲರವ ಆರಂಭವಾಗಿದೆ.

    ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಅರಣ್ಯ ಪ್ರದೇಶಕ್ಕೆ ಎರಡು ತಿಂಗಳ ಹಿಂದೆ ಬೆಂಕಿ ಬಿದ್ದ ಕಾರಣ ಸಾವಿರಾರು ಹೆಕ್ಟರ್ ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿತ್ತು. ಇದರಿಂದ ಇಲ್ಲಿದ್ದ ಪ್ರಾಣಿಗಳು ಬಂಡೀಪುರ ಉದ್ಯಾನವನ್ನು ಬಿಟ್ಟು ಬೇರೆ ಅರಣ್ಯ ಪ್ರದೇಶಕ್ಕೆ ವಲಸೆ ಹೋಗಿದ್ದವು. ಹೀಗಾಗಿ ಬಂಡಿಪುರ ಅರಣ್ಯ ಪ್ರದೇಶದಲ್ಲಿ ಪ್ರಾಣಿಗಳು ಕಾಣದೇ ಅರಣ್ಯ ಪ್ರದೇಶ ಬಿಕೋ ಎನ್ನುತ್ತಿತ್ತು.

    ಕಳೆದ 15 ದಿನಗಳಿಂದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ತಣ್ಣನೆಯ ಹಾಗೂ ಚಿಗುರೊಡೆಯುತ್ತಿರುವ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ ತಮ್ಮ ಗೂಡನ್ನು ಬಿಟ್ಟು ಹೋಗಿದ್ದ ವನ್ಯಜೀವಿಗಳು ಮತ್ತೆ ತಮ್ಮ ಗೂಡನ್ನು ಸೇರಿಕೊಂಡಿವೆ. ಇದರಿಂದ ಪ್ರತಿ ನಿತ್ಯ ಪ್ರಾಣಿಗಳು ಸಫಾರಿಗೆ ಹೋದ ಪ್ರವಾಸಿಗರಿಗೆ ಕಾಣ ಸಿಗುತ್ತಿವೆ.

    ಹುಲಿ, ಚಿರತೆ, ಚಿಂಕೆ, ಆನೆ, ಕಾಡೆಮ್ಮೆ ಸೇರಿದಂತೆ ಇತರೆ ಪ್ರಾಣಿಗಳು ಪ್ರವಾಸಿಗರ ಕ್ಯಾಮರಾಗಳಿಗೆ ಫೋಸ್ ನೀಡುತ್ತಿವೆ. ಇದರಿಂದ ಪ್ರವಾಸಿಗರು ಫುಲ್ ಖುಷ್ ಆಗಿದ್ದು, ವನ್ಯಜೀವಿ ಪ್ರಿಯರಲ್ಲೊಂತು ಸಂತಸ ಮನೆ ಮಾಡಿದೆ.

  • ನಗರಕ್ಕೆ ಬಂದ್ರೆ ಸಿರಿತನ, ಕಾಡಿಗೆ ಮರಳಿದ್ರೆ ಮತ್ತೆ ಬಡತನ- ಇದು ದಸರಾ ಕ್ಯಾಪ್ಟನ್ ಅರ್ಜುನನ ಸ್ಥಿತಿ

    ನಗರಕ್ಕೆ ಬಂದ್ರೆ ಸಿರಿತನ, ಕಾಡಿಗೆ ಮರಳಿದ್ರೆ ಮತ್ತೆ ಬಡತನ- ಇದು ದಸರಾ ಕ್ಯಾಪ್ಟನ್ ಅರ್ಜುನನ ಸ್ಥಿತಿ

    ಮೈಸೂರು: ನಗರಕ್ಕೆ ಬಂದ್ರೆ ಸಿರಿತನ, ಕಾಡಿಗೆ ಮರಳಿದ್ರೆ ಮತ್ತೆ ಬಡತನ. ಇದು ಮೈಸೂರಿನ ದಸರಾ ಗಜಪಡೆಯ ಕ್ಯಾಪ್ಟನ್ ಅರ್ಜುನನ ಸ್ಥಿತಿ. ದಸರೆಯಲ್ಲಿ ಬೆಣ್ಣೆ, ಕಾಳುಗಳ ಮೃಷ್ಠಾನ್ನಾ ಭೋಜನ ಅರ್ಜುನನಿಗೆ ಸಿಗುತ್ತೆ. ಆದರೆ ವಾಪಾಸ್ ಸ್ವಸ್ಥಾನಕ್ಕೆ ಮರಳಿದಾಗ ಮೇವು, ನೀರಿಲ್ಲದೆ ಆನೆ ದಿನದೂಡ ಬೇಕಾದ ಸ್ಥಿತಿ ಇದೆ.

    ದಸರಾದಲ್ಲಿ ಚಿನ್ನದ ಅಂಬಾರಿ ಹೊರಲು ಅರ್ಜುನ ಬೇಕು. ಪುಂಡಾನೆಗಳ ಉಪಟಳ ನಿಯಂತ್ರಿಸಲು ಅರ್ಜುನ ಬೇಕು. ಹುಲಿ, ಚಿರತೆ ಹಿಡಿಯಲು ಅರ್ಜುನ ಬೇಕು. ಆದರೆ ಇಂತಹ ಅರ್ಜುನನ ಯೋಗಕ್ಷೇಮ ಮಾತ್ರ ಯಾರಿಗೂ ಬೇಡವಾಗಿದೆ. ಮೇವಿಗಾಗಿ ನೀರಿಗಾಗಿ ಗಜಪಡೆಯ ನಾಯಕ ಅರ್ಜುನ ಕಾಡಿನಲ್ಲಿ ಕಿ.ಮೀ ಗಟ್ಟಲೇ ಸುತ್ತಾಟ ನಡೆಸಬೇಕಾಗಿದೆ. ಈ ವೇಳೆ ಕಾಡಾನೆಗಳ ದಾಳಿಗೆ ಅರ್ಜುನ ಒಳಗಾಗಿದ್ದಾನೆ.

    ಅಲ್ಲದೆ ಎರಡ್ಮೂರು ಬಾರಿ ಆಹಾರ ಅರಸಿ ಕಾಡಿನೊಳಗೆ ಹೋಗಿ ಅಲ್ಲಿ ತಪ್ಪಿಸಿಕೊಂಡಿದ್ದಾನೆ. ಮೈಸೂರಿನ ಹುಣಸೂರಿನ ನಾಗರಹೊಳೆಯ ಬಳ್ಳೆ ಅರಣ್ಯದಲ್ಲಿ ಇರುವ ಅರ್ಜುನನ್ನು ಕೇಳುವವರೆ ಇಲ್ಲ. ನಾಗರಹೊಳೆಯಲ್ಲಿ ಮೇಲ್ಛಾವಣಿ ಇಲ್ಲದ ಶೆಡ್ ನಲ್ಲಿ ಅರ್ಜುನ ಇರಬೇಕು. ಅರ್ಜುನನ ಮಾವುತ ವಿನಿಗು ಮನೆ ಇಲ್ಲ. ಆತ ಗುಡಿಸಲಲ್ಲೆ ಇದ್ದಾನೆ.

    ಸರ್ಕಾರದಿಂದ ದಸರಾ ಆನೆಗಳಿಗಾಗಿ ವಿಶೇಷ ಪ್ಯಾಕೇಜ್ ಇದೆ. ಆದರೆ ಈ ಹಣ ಎಲ್ಲಿಗೆ ಹೋಗುತ್ತಿದೆ ಎಂಬುದು ನಿಗೂಢ. ಟೆಂಡರ್ ಮೂಲಕ ವರ್ಷಕ್ಕೊಮ್ಮೆ ಆನೆಗಳ ಆಹಾರ ನೀರಿನ ವ್ಯವಸ್ಥೆಗೆ ಬೆಲ್ಲ, ಭತ್ತ, ಒಣಹುಲ್ಲು, ತೆಂಗಿನಕಾಯಿ, ಅಕ್ಕಿ, ಉಪ್ಪು ನೀಡಿಕೆಗಾಗಿ ಹಣ ಬಿಡುಗಡೆ ಮಾಡಲಾಗ್ತಿದೆ. ಆದರೆ ಕ್ಯಾಂಪ್‍ನಲ್ಲಿರುವ ಆನೆಗಳಿಗೆ ಈ ಆಹಾರ ಪದಾರ್ಥ ತಲುಪುತ್ತಿಲ್ಲ.

  • ಕಾಡಿನ ಮಧ್ಯೆ ಪಾಳುಬಿದ್ದ ದೇವಸ್ಥಾನದಲ್ಲಿ ಪತ್ತೆಯಾಯ್ತು ವಿಶಿಷ್ಟ ದೇವರ ಮೂರ್ತಿಗಳು!

    ಕಾಡಿನ ಮಧ್ಯೆ ಪಾಳುಬಿದ್ದ ದೇವಸ್ಥಾನದಲ್ಲಿ ಪತ್ತೆಯಾಯ್ತು ವಿಶಿಷ್ಟ ದೇವರ ಮೂರ್ತಿಗಳು!

    ಮಂಗಳೂರು: ಕಾಡಿನ ಮಧ್ಯೆ ಪಾಳುಬಿದ್ದು ಮಣ್ಣಿನಡಿಯಲ್ಲಿ ಹೂತು ಹೋಗಿದ್ದ ದೇವಸ್ಥಾನವೊಂದರ ಉತ್ಖನನದ ವೇಳೆ ವಿಶಿಷ್ಟ ದೇವರ ಮೂರ್ತಿಗಳು ಪತ್ತೆಯಾಗಿದ್ದು ಜನರಲ್ಲಿ ಅಚ್ಚರಿ ಸೃಷ್ಟಿಸಿದೆ.

    ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪೆರ್ನೆ ಗ್ರಾಮದ ಮಾಡತ್ತಾರುವಿನಲ್ಲಿ ನಡೆದ ಉತ್ಖನನದ ವೇಳೆ ಹಲವು ಮೂರ್ತಿಗಳು ಸಿಕ್ಕಿವೆ. ಮಾಡತ್ತಾರು ಆಸುಪಾಸಿನ ಊರುಗಳಲ್ಲಿ ಇತ್ತೀಚಿಗೆ ಅನಾರೋಗ್ಯ ಹಾಗೂ ಅಕಾಲಿಕ ಸಾವುಗಳು ಸಂಭವಿಸುತ್ತಿದ್ದು ಜನರಲ್ಲಿ ಆತಂಕ ಸೃಷ್ಟಿಸಿತ್ತು. ಇದೇ ವೇಳೆ, 13ರಷ್ಟು ನಾಗರ ಹಾವುಗಳು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಬಳಿಕ ಅಷ್ಟಮಂಗಳ ಪ್ರಶ್ನೆಯಿಟ್ಟು, ಜ್ಯೋತಿಷಿಗಳ ಸಲಹೆಯನ್ನು ಪಾಲಿಸಿದಾಗ ಕಾಡಿನ ಮಧ್ಯೆ ಪಾಳುಬಿದ್ದ ದೇವಸ್ಥಾನವೊಂದು ಪತ್ತೆಯಾಗಿದೆ. ಹಾಗೆಯೇ ಪಕ್ಕದ ಊರು ಅತ್ತಜಾಲು ಗ್ರಾಮದಲ್ಲಿ ದೈವದ ಭಂಡಾರದ ಮನೆಯೂ ಪಾಳುಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಜನರಲ್ಲಿ ಅಚ್ಚರಿ ಮೂಡಿಸಿದೆ.

    ಈ ಎರಡು ಜಾಗದಲ್ಲಿ ಉತ್ಖನನ ನಡೆಸಿದಾಗ ಹಲವಾರು ಕಂಚು ಮತ್ತು ಪಂಚಲೋಹದ ದೇವರ ವಿಗ್ರಹಗಳು ಪತ್ತೆಯಾಗಿವೆ. ಇದಲ್ಲದೆ, ದೈವದ ಶಾಪದಿಂದಾಗಿ ಅಲ್ಲಿ ನೆಲೆಸಿದ್ದ ಕುಟುಂಬವೂ ಗತಿ ಗೋತ್ರವಿಲ್ಲದೆ ನಾಶವಾಗಿ ಹೋಗಿದ್ದ ವಿಚಾರವೂ ಬೆಳಕಿಗೆ ಬಂದಿದೆ. ಈ ಜಾಗದಲ್ಲಿ ಪ್ರತಿ ಬಾರಿ ಮಣ್ಣು ಅಗೆದಾಗಲೂ ದೇವರ ಮೂರ್ತಿ ಮತ್ತು ಇನ್ನಿತರ ಪರಿಕರಗಳು ಗೋಚರವಾಗಿದ್ದು ಅಲ್ಲಿದ್ದ ಜನರನ್ನು ಅಚ್ಚರಿಗಳಿಸಿದೆ. ಹೀಗಾಗಿ ಅಲ್ಲಿನ ದೇವಸ್ಥಾನ ಹಾಗೂ ನಡೆಯುತ್ತಿರುವ ವಿಲಕ್ಷಣ ಘಟನೆಗಳು ಸಾರ್ವಜನಿಕರಲ್ಲಿ ಆತಂಕದ ಜೊತೆಗೆ ಅಚ್ಚರಿ, ಕುತೂಹಲಕ್ಕೆ ಕಾರಣವಾಗಿದೆ.

  • ಕಾಡಿನಲ್ಲಿದ್ದ ರೇಪ್ ಆರೋಪಿ ಅರೆಸ್ಟ್- ಪೊಲೀಸರಿಗೆ ಸಾರ್ವಜನಿಕರ ಸಾಥ್

    ಕಾಡಿನಲ್ಲಿದ್ದ ರೇಪ್ ಆರೋಪಿ ಅರೆಸ್ಟ್- ಪೊಲೀಸರಿಗೆ ಸಾರ್ವಜನಿಕರ ಸಾಥ್

    ಉಡುಪಿ: ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ಕಣ್ಮರೆಯಾಗಿದ್ದ ಆರೋಪಿಯನ್ನು ಸಾರ್ವಜನಿಕರ ಸಹಕಾರದಿಂದ ಬಂಧಿಸುವಲ್ಲಿ ಖಾಕಿ ಪಡೆ ಯಶಸ್ವಿಯಾಗಿದೆ.

    ಬಾದಾಮಿ ತಾಲೂಕಿನ ಹನುಮಂತ ಬಸಪ್ಪಕಂಬಳಿ ಪೊಲೀಸ್ ಬಲೆಗೆ ಬಿದ್ದಿದ್ದಾನೆ. ಜಿಲ್ಲೆಯ ಮೂಡುಸಗ್ರಿ ಗ್ರಾಮದ ಬಾಲಕಿಯನ್ನು ಅತ್ಯಾಚಾರವೆಸೆಗಿ, ಕೊಲೆ ಮಾಡಿದ್ದ ಪ್ರಕರಣದಲ್ಲಿ ಈತನನ್ನು ಪೊಲೀಸರು ಬಂಧಿಸಿದ್ದರು. ಒಂದು ದಿನದ ಹಿಂದೆ ಪೊಲೀಸರು ಆರೋಪಿಯನ್ನು ಉಡುಪಿ ಜಿಲ್ಲಾ ವಿಶೇಷ ನ್ಯಾಯಾಲಯದ ನ್ಯಾಯಾಧೀಶರ ನಿವಾಸದ ಮುಂದೆ ಹಾಜರುಪಡಿಸಿದ್ದರು.

    ನ್ಯಾಯಾಂಗ ಬಂಧನ ವಿಧಿಸಿದ ಹಿನ್ನೆಲೆಯಲ್ಲಿ ಹುನುಮಂತನನ್ನು ಮಣಿಪಾಲ ಪೊಲೀಸರು ಹಿರಿಯಡ್ಕದಲ್ಲಿರುವ ಜಿಲ್ಲಾ ಕಾರಾಗೃಹಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಈ ವೇಳೆ ದಾರಿ ಮಧ್ಯೆ ಆರೋಪಿ ಪೊಲೀಸ್ ವಾಹನದಿಂದ ತಪ್ಪಿಸಿಕೊಂಡು ಕಾಡಿನಲ್ಲಿ ಕಣ್ಮರೆಯಾಗಿದ್ದನು.

    ಬಳಿಕ ಆತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾಗ ಪೆರ್ಣಂಕಿಲದ ಹೊಟೇಲೊಂದರಲ್ಲಿ ಚಾಹ ಕುಡಿದು ಹೋಗಿರುವ ಬಗ್ಗೆ ಸ್ಥಳೀಯರು ನೀಡಿದ ಮಾಹಿತಿಯ ಮೇರೆಗೆ ಅಲ್ಲಿಯೇ ಹುಡುಕಾಟ ಮುಂದುವರಿಸಿದ್ದಾರೆ. ಆಗ ಕಾಡಿನಲ್ಲಿ ಸಂಜೆ ವೇಳೆ ಹನುಮಂತ ಪತ್ತೆಯಾಗಿದ್ದು, ಮತ್ತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.