Tag: forest

  • ಬಂಡೀಪುರ ಕಾಡಂಚಿನ ಗ್ರಾಮಗಳಲ್ಲಿ ದಾಂಧಲೆ ನಡೆಸಿದ್ದ ಪುಂಡಾನೆ ಕೊನೆಗೂ ಸೆರೆ

    ಬಂಡೀಪುರ ಕಾಡಂಚಿನ ಗ್ರಾಮಗಳಲ್ಲಿ ದಾಂಧಲೆ ನಡೆಸಿದ್ದ ಪುಂಡಾನೆ ಕೊನೆಗೂ ಸೆರೆ

    ಚಾಮರಾಜನಗರ: ಕಳೆದ 3 ದಿನಗಳಿಂದ ಬಂಡೀಪುರ ಕಾಡಂಚಿನ ಗ್ರಾಮಗಳಲ್ಲಿ ಆತಂಕ ಸೃಷ್ಟಿಸಿದ್ದ ಪುಂಡಾನೆಯನ್ನು ಕೊನೆಗೂ ಬನ್ನಿತಾಳಪುರ ಸಮೀಪ ಸೆರೆ ಹಿಡಿಯಲಾಗಿದೆ.

    ಗುಂಡ್ಲುಪೇಟೆ ತಾಲೂಕಿನ ಬನ್ನಿತಾಳಪುರದಲ್ಲಿ ಇಬ್ಬರು ರೈತರನ್ನು ಗಾಯಗೊಳಿಸಿದ್ದ ಈ ಆನೆ ಮೂರು ಜಾನುವಾರುಗಳನ್ನು ಕೊಂದಿತ್ತು. ತಮಿಳುನಾಡಿನ ಮಧುಮಲೈ ಕಾಡಿನಿಂದ ಓಡಿ ಬಂದಿದ್ದ ಪುಂಡಾನೆಯನ್ನು ಸಾಕಾನೆಗಳಾದ ಅಭಿಮನ್ಯು, ಕೃಷ್ಣ, ಗೋಪಾಲಸ್ವಾಮಿ, ಗಣೇಶ ಸಹಾಯದೊಂದಿಗೆ ಅರವಳಿಕೆ ಚುಚ್ಚು ಮದ್ದು ನೀಡಿ ಸೆರೆ ಹಿಡಿಯಲಾಗಿದೆ.

    ತಮಿಳುನಾಡಿನಲ್ಲಿ 8 ಜನರನ್ನು ಕೊಂದಿತ್ತು ಎನ್ನಲಾದ ಪುಂಡಾನೆಯನ್ನು ಸೆರೆ ಹಿಡಿದ ಪರಿಣಾಮ ಕಾಡಂಚಿನ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಕಾಡಂಚಿನ ಗ್ರಾಮಗಳಲ್ಲಿ ಸಾಕಷ್ಟು ತೊಂದರೆ ನೀಡುತ್ತಿದ್ದ ಕಾರಣ ಆನೆ ಚಲನವಲನ ಮೇಲೆ ನಿಗಾ ಹಿಡಲು ಅರಣ್ಯಾಧಿಕಾರಿಗಳು ಇದನ್ನು ಸೆರೆ ಹಿಡಿದು ರೇಡಿಯೋ ಕಾಲರ್ ಅಳವಡಿಸಿ ಮಧುಮಲೈ ಅರಣ್ಯಕ್ಕೆ ಬಿಟ್ಟಿದ್ದರು. ಆದರೆ ಅಲ್ಲಿಂದ ಬಂಡೀಪುರ ಅರಣ್ಯಕ್ಕೆ ಬಂದಿದ್ದ ಆನೆ ದಾಂಧಲೆ ನಡೆಸಿ ಗ್ರಾಮಸ್ಥರಲ್ಲಿ ಭಯ ಹುಟ್ಟಿಸಿತ್ತು. ಸದ್ಯ ಸೆರೆ ಹಿಡಿಯಲಾಗಿರುವ ಪುಂಡಾನೆಯನ್ನು ಶಿವಮೊಗ್ಗ ಜಿಲ್ಲೆ ಸಕ್ರೆಬೈಲು ಆನೆ ಶಿಬಿರಕ್ಕೆ ರವಾನಿಸಲಾಗಿದೆ.

  • ವಾರದ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿ ಇಂದು ಅಸ್ಥಿಪಂಜರವಾಗಿ ಪತ್ತೆ

    ವಾರದ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿ ಇಂದು ಅಸ್ಥಿಪಂಜರವಾಗಿ ಪತ್ತೆ

    ಬೀದರ್: ಹಲವು ದಿನಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿ ಕೊಲೆಯಾಗಿ ಪತ್ತೆಯಾಗಿದ್ದು, ಅಸ್ಥಿಪಂಜರ ಔರಾದ್ ತಾಲೂಕಿನ ಆಲೂರು ಬಳಿಯ ಶಿವಾರ ದಟ್ಟ ಅರಣ್ಯ ಪ್ರದೇಶದಲ್ಲಿ ವಾಗಿ ಪತ್ತೆಯಾಗಿದೆ.

    ವಾರದ ಹಿಂದಷ್ಟೇ ನಾಪತ್ತೆಯಾಗಿದ್ದ ಕಲ್ಲಪ್ಪ ವಿಠಲ (23) ಇಂದು ಅಸ್ಥಿಪಂಜರವಾಗಿ ಪತ್ತೆಯಾಗಿದ್ದಾರೆ. ವಾರದ ಹಿಂದೆ ಮನೆಯಿಂದ ಹೋದ ಕಲ್ಲಪ್ಪ ಮನೆಗೆ ವಾಪಸ್ ಬಂದ್ದಿರಲಿಲ್ಲ. ಎಲ್ಲೋ ಹೋಗಿರಬಹುದು ಎಂದು ಕುಟುಂಬದವರು ಸುಮ್ಮನೇ ಇದ್ದರು. ಆದರೆ ವಾರದ ಬಳಿಕ ಬಾರದ ಗಂಡನನ್ನು ಹುಡುಕಿ ಕೊಡುವಂತೆ ಎರಡು ದಿನಗಳ ಹಿಂದೆ ಕಲ್ಲಪ್ಪನ ಪತ್ನಿ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.

    ಪತ್ನಿಯ ದೂರಿನ ಆಧಾರದ ಮೇಲೆ ತನಿಖೆ ಆರಂಭ ಮಾಡಿದ ಪೊಲೀಸರಿಗೆ ಸ್ಥಳೀಯರು ಅರಣ್ಯದಲ್ಲಿ ಅಸ್ಥಿಪಂಜರ ಸಿಕ್ಕಿದೆ ಎಂದು ಹೇಳಿದ್ದಾರೆ. ಅದ್ದರಿಂದ ಸ್ಥಳಕ್ಕೆ ಹೋದ ಪೊಲೀಸರು ಕಲ್ಲಪ್ಪ ಅವರ ಪತ್ನಿಯನ್ನು ಕರೆಸಿದ್ದಾರೆ. ಈ ವೇಳೆ ಸ್ಥಳದಲ್ಲಿ ಸಿಕ್ಕ ಚಪ್ಪಲಿ ಮತ್ತು ಬಟ್ಟೆಯನ್ನು ನೋಡಿದ ಪತ್ನಿ ಇದು ನನ್ನ ಪತಿಯದ್ದೆ ಎಂದು ಗುರುತಿಸಿದ್ದಾರೆ

    ಕೊಲೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಈ ಸಂಬಂಧ ಸಂತಪೂರ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಜೊತೆಗಾರ ಅಪಘಾತದಲ್ಲಿ ಮೃತಪಟ್ಟಿದ್ದನ್ನು ಕಂಡು ಹೃದಯಾಘಾತದಿಂದ ಜಿಂಕೆ ಸಾವು!

    ಜೊತೆಗಾರ ಅಪಘಾತದಲ್ಲಿ ಮೃತಪಟ್ಟಿದ್ದನ್ನು ಕಂಡು ಹೃದಯಾಘಾತದಿಂದ ಜಿಂಕೆ ಸಾವು!

    ಕಾರವಾರ: ತನ್ನ ಜೊತೆಗಾರ ಅಪಘಾತದಲ್ಲಿ ಮೃತಪಟ್ಟಿದ್ದನ್ನು ಕಂಡ ಜಿಂಕೆ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ದಾಂಡೇಲಿ ರೈಲ್ವೇ ಗೇಟ್ ಸಮೀಪದ ಅಂಬೆವಾಡಿಯಲ್ಲಿ  ನಡೆದಿದೆ.

    ದಾಂಡೇಲಿಯ ಕ್ಷೇತ್ರ ಶಿಕ್ಷಣಾಧಿಕಾರಿ ಜಮೀರ್ ಮುಲ್ಲಾ ಅವರ ಕಾರು ದಾಂಡೇಲಿಯಿಂದ ಹಳಿಯಾಳ ಕಡೆ ವೇಗವಾಗಿ ಹೋಗುತ್ತಿತ್ತು. ಮಾರ್ಗಮಧ್ಯೆದ ಕಾಡಿನಲ್ಲಿ ನಾಯಿಗಳು ಎರಡು ಜಿಂಕೆಗಳನ್ನು ಅಟ್ಟಿಸಿಕೊಂಡು ಬರುತ್ತಿದ್ದವು. ಈ ವೇಳೆ ವೇಗವಾಗಿ ಬಂದ ಕಾರು ಒಂದು ಜಿಂಕೆಗೆ ಡಿಕ್ಕಿ ಹೊಡೆದ ಪರಿಣಾಮ ಅದು ಸ್ಥಳದಲ್ಲಿಯೇ ಮೃತಪಟ್ಟಿದೆ. ಕಣ್ಣೇದುರೇ ಜೊತೆಗಾರ ಸಾವನ್ನಪ್ಪಿದ್ದರಿಂದ ಆಘಾತಕ್ಕೆ ಒಳಗಾದ ಮೊತ್ತೊಂದು ಜಿಂಕೆಗೆ ಹೃದಯಾಘಾತದಿಂದ ಅದರ ಪಕ್ಕದಲ್ಲೇ ಮೃತಪಟ್ಟಿದೆ.

    ಜಿಂಕೆಗಳ ಹೃದಯ ಅತೀ ಮೃದು ಹಾಗೂ ಸೂಕ್ಷ್ಮವಾಗಿರುತ್ತದೆ. ಹೀಗಾಗಿ ಅವುಗಳಿಗೆ ಚಿಕ್ಕ ಆಘಾತವನ್ನು ತಡೆದುಕೊಳ್ಳುವ ಶಕ್ತಿ ಇರುವುದಿಲ್ಲ. ಮೊದಲೇ ನಾಯಿಗಳು ಅಟ್ಟಿಸಿಕೊಂಡು ಬಂದಿದ್ದರಿಂದ ಹೆದರಿದ ಈ ಜಿಂಕೆಗಳು ಓಡುವಾಗ ಕಾರಿಗೆ ಒಂದು ಜಿಂಕೆ ಡಿಕ್ಕಿಹೊಡೆದ್ದು, ಅಲ್ಲಿಯೇ ಪ್ರಾಣಬಿಟ್ಟಿತ್ತು. ಇನ್ನೊಂದು ಘಟನೆಯಿಂದ ಆಘಾತಕ್ಕೆ ಒಳಗಾಗಿ ಪ್ರಾಣ ಬಿಟ್ಟಿದೆ ಎಂದು ದಾಂಡೇಲಿಯ ಅರಣ್ಯಾಧಿಕಾರಿ ಅಶೋಕ್ ಮಾಹಿತಿ ನೀಡಿದ್ದಾರೆ.

    ಈ ವಲಯವು ರಕ್ಷಿತ ಅರಣ್ಯದ ವ್ಯಾಪ್ತಿಗೆ ಬರುತಿದ್ದು, ಇಂತಹ ಸ್ಥಳದಲ್ಲಿ ವೇಗದ ಮಿತಿ ಪ್ರತಿ ಗಂಟೆಗೆ 20 ರಿಂದ 40 ಕಿ.ಮೀ. ಇರಬೇಕು. ಪ್ರಾಣಿಗಳು ಓಡಾಡಿವ ಸ್ಥಳವಾದ್ದರಿಂದ ಅರಣ್ಯ ಇಲಾಖೆ ವೇಗದ ಮಿತಿಯ ಫಲಕ ಹಾಕಿದ್ದಾರೆ. ಆದರೂ ಸವಾರರು, ಚಾಲಕರು ವಾಹನವನ್ನು ಅತಿ ವೇಗದಲ್ಲಿ ಚಲಾಯಿಸುತ್ತಾರೆ. ಇದರಿಂದಾಗಿ ಪ್ರಾಣಿಗಳ ಸಾವಿನ ಸಂಖ್ಯೆ ಹೆಚ್ಚಾಗುತ್ತಿವೆ ಎಂದು ತಿಳಿಸಿದರು.

    ಘಟನೆಯ ಸಂಬಂಧ ಶಿಕ್ಷಣಾಧಿಕಾರಿ ಜಮೀರ್ ಮುಲ್ಲಾ ಅವರ ಕಾರು ಚಾಲಕ ಸಂಜೀವ್ ಕುಮಾರ್ ನನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದು, ಪ್ರಕರಣ ದಾಖಲಿಸಿದ್ದಾರೆ.

  • 51 ಕೆಜಿ ತೂಕದ 10 ಆನೆ ದಂತ ವಶ – ಮೂವರು ಅರೆಸ್ಟ್

    51 ಕೆಜಿ ತೂಕದ 10 ಆನೆ ದಂತ ವಶ – ಮೂವರು ಅರೆಸ್ಟ್

    ಬೆಂಗಳೂರು: ಆನೆ ದಂತ ಮಾರಾಟ ಮಾಡುತ್ತಿದ್ದ ಬೃಹತ್ ಜಾಲ ಪತ್ತೆಯಾಗಿದ್ದು, ಸಿಐಡಿ ಅರಣ್ಯ ಘಟಕದಿಂದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

    ಬಂಧಿತ ಆರೋಪಿಗಳನ್ನು ಉಜಿರೆಯ ಎ.ಎಂ ಆಬ್ರಾಹಂ, ಕಣ್ಣೂರಿನ ಸುರೇಶ್ ಬಾಬು ಮತ್ತು ಹಾಸನದ ರಮೇಶ್ ಎಂದು ಗುರುತಿಸಲಾಗಿದೆ. ಉಜಿರೆಯ ತೋಟದ ಮನೆ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಬಂಧಿತ ಆರೋಪಿಗಳಿಂದ 51  ಕೆಜಿ ತೂಕದ 10 ಆನೆ ದಂತಗಳನ್ನು ವಶಕ್ಕೆ ಪಡೆದು ಆರೋಪಿಗಳನ್ನು ಬಂಧಿಸಿದ್ದಾರೆ.

    ಆರೋಪಿ ಆಬ್ರಾಹಂ ಕೋವಿಯಿಂದ ಆನೆಗಳನ್ನು ಕೊಂದು ದಂತಗಳನ್ನು ಸಂಗ್ರಹಿಸುತ್ತಿದ್ದ. ಅನೆಗಳನ್ನು ಕೊಂದು ದಂತಗಳನ್ನು ಮಂಗಳೂರಿನ ಅನ್ವರ್ ಎಂಬಾತನ ಮೂಲಕ ಕರಾವಳಿ ಸೇರಿ ಹಲವೆಡೆ ಮಾರಾಟ ಮಾಡುತ್ತಿದ್ದ. ಬಂಧಿತರಿಂದ 10 ಆನೆ ದಂತ, ಒಂದು ಕೋವಿ ಮತ್ತು 8 ಜೀವಂತ ಮದ್ದುಗುಂಡು ವಶಕ್ಕೆ ಪಡೆಯಲಾಗಿದೆ.

    ಈ ಸಂಬಂಧ ಬೆಳ್ತಂಗಡಿ ವಲಯ ಅರಣ್ಯ ಕಚೇರಿಯಲ್ಲಿ ಪ್ರಕರಣ ದಾಖಲಾಗಿದೆ. ಮಂಗಳೂರಿನ ಅನ್ವರ್ ಪರಾರಿಯಾಗಿದ್ದು, ಆರೋಪಿಗಾಗಿ ಶೋಧಕಾರ್ಯ ಮುಂದುವರಿದಿದೆ.

  • ಕೊಲ್ಲೂರು ಕಾಡಲ್ಲಿ ಸಿಕ್ಕ ಟೆಂಟ್ ಭಕ್ತರದ್ದು – ಎಸ್‍ಪಿ ನಿಶಾ ಜೇಮ್ಸ್ ಸ್ಪಷ್ಟನೆ

    ಕೊಲ್ಲೂರು ಕಾಡಲ್ಲಿ ಸಿಕ್ಕ ಟೆಂಟ್ ಭಕ್ತರದ್ದು – ಎಸ್‍ಪಿ ನಿಶಾ ಜೇಮ್ಸ್ ಸ್ಪಷ್ಟನೆ

    ಉಡುಪಿ: ರಾಜ್ಯದಲ್ಲಿ ಮತ್ತೆ ನಕ್ಸಲ್ ಚಟುವಟಿಕೆ ಚಿಗುರಿತಾ? ಪಕ್ಕದ ಕೇರಳದ ಕೆಂಪು ನಕ್ಸಲರು ತಮ್ಮ ಕ್ಯಾಂಪನ್ನು ಕರಾವಳಿ, ಮಲೆನಾಡು ಕಡೆ ವಿಸ್ತರಿಸಿದ್ರಾ? ಇಂತಹದೊಂದು ಪ್ರಶ್ನೆ ಕರಾವಳಿ ಜಿಲ್ಲೆ ಉಡುಪಿಯಲ್ಲಿ ಓಡಾಡುತ್ತಿದೆ. ಬೈಂದೂರು ತಾಲೂಕು ಕೊಲ್ಲೂರಿನ ಕಾಡಿನಲ್ಲಿ ಸಿಕ್ಕ ತಾತ್ಕಾಲಿಕ ಗುಡಿಸಲು ಇಷ್ಟೆಲ್ಲಾ ಗಾಸಿಪ್ ಗಳಿಗೆ ಕಾರಣವಾಗಿದೆ.

    ಕೊಲ್ಲೂರು ಅಭಯಾರಣ್ಯದ ಗುಡಿಸಲಿನಲ್ಲಿ ಸಿಕ್ಕ ಅಕ್ಕಿ, ಎಣ್ಣೆ, ಛತ್ರಿ, ವಿಭೂತಿ, ಬಟ್ಟೆಗಳು ಪೊಲೀಸ್ ಇಲಾಖೆ, ಎಎನ್‍ಎಫ್, ಅರಣ್ಯ ಇಲಾಖೆಯ ನಿದ್ದೆಗೆಡಿಸಿತ್ತು. ದಿನಪೂರ್ತಿ ತಪಾಸಣೆ ಮಾಡಿದ ಮೂರೂ ಇಲಾಖೆಯ ಸಿಬ್ಬಂದಿಗಳು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ್ದಾರೆ. ಇದೀಗ ನಕ್ಸಲ್ ಚಟುವಟಿಕೆಯನ್ನು ಅಲ್ಲಗಳೆದಿದ್ದಾರೆ.

    ಚಾರಣಿಗರೋ, ಧಾರ್ಮಿಕ ಪ್ರವಾಸದ ಸಂದರ್ಭ ಭಕ್ತರು ತಾತ್ಕಾಲಿಕ ಟೆಂಟ್ ಮಾಡಿರಬಹುದು ಎಂದು ಪೊಲೀಸ್ ತಪಾಸಣೆಯಲ್ಲಿ ತಿಳಿದುಬಂದಿದೆ. ಪಕ್ಕದಲ್ಲೆ ಧ್ಯಾನಕೇಂದ್ರವಿದ್ದು ಭಕ್ತರು ಧ್ಯಾನ ಮಾಡಲು ತಾತ್ಕಾಲಿಕ ಟೆಂಟ್ ಹಾಕಿಕೊಂಡಿರುವ ಸಾಧ್ಯತೆಯಿದೆ ಎಂದು ಉಡುಪಿ ಎಸ್‍ಪಿ ನಿಶಾ ಜೇಮ್ಸ್ ಸ್ಪಷ್ಟನೆ ಕೊಟ್ಟಿದ್ದಾರೆ.

    ಈ ನಡುವೆ ಹೆಬ್ರಿ ತಾಲೂಕಿನ ನಾಡ್ಪಾಲ್ ಲೊಕೇಶನ್ ನಿಂದ ಕರಾಚಿಗೆ ಫೋನ್ ಕರೆಯೊಂದು ಹೋಗಿದೆ. ಹೆಬ್ರಿಗೆ ಮತ್ತು ಕೊಲ್ಲೂರಿಗೆ ಎನ್‍ಐಎ ಅಧಿಕಾರಿಗಳು ಭೇಟಿಕೊಟ್ಟು ಪರಿಶೀಲನೆ ನಡೆಸಿದ್ದಾರೆ ಎಂಬ ಸುದ್ದಿ, ರಾಜ್ಯಮಟ್ಟದ ಪತ್ರಿಕೆಯೊಂದರಲ್ಲಿ ಪ್ರಕಟವಾಗಿದೆ. ನಕ್ಸಲ್ ಸುದ್ದಿ ಮತ್ತು ಭಯೋತ್ಪಾದಕ ಚಲನವಲನದ ವರದಿ ಒಂದಕ್ಕೊಂದು ಲಿಂಕ್ ಆಗಿ, ಜನರಲ್ಲಿ ಆತಂಕ ಮೂಡಿಸಿತ್ತು. ಇದಕ್ಕೂ ಸ್ಪಷ್ಟನೆ ನೀಡಿರುವ ಎಸ್‍ಪಿ ನಿಶಾ ಜೇಮ್ಸ್ ಎನ್‍ಐಎ ಅಧಿಕಾರಿಗಳು ಜಿಲ್ಲೆಗೆ ಆಗಮಿಸಿಲ್ಲ, ಎಲ್ಲೂ ವಿಚಾರಣೆ ನಡೆಸಿಲ್ಲ. ನಕ್ಸಲ್ ಚಲನವಲನ ಕೂಡಾ ಜಿಲ್ಲೆಯಲ್ಲಿ ಇಲ್ಲ ಎಂದು ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

    ಎಸ್‍ಪಿ ನಿಶಾ ಜೇಮ್ಸ್ ಮಾತನಾಡಿ, ದಿನಾಂಕ 16ರಂದು ಅರಣ್ಯಾಧಿಕಾರಿಗಳಿಂದ ನಮಗೆ ಮಾಹಿತಿ ಬಂದಿತ್ತು. ನಮ್ಮ ಮತ್ತು ಶಿವಮೊಗ್ಗ ಜಿಲ್ಲೆಯ ಗಡಿ ಪ್ರದೇಶ ಅದು ಜಂಟಿ ಕಾರ್ಯಾಚರಣೆ ಮಾಡಿದಾಗ ವಿಭೂತಿ ಕುಂಕುಮ ಸಿಕ್ಕಿದೆ. ಧ್ಯಾನಕ್ಕೆ ಬರುವವರು ಟೆಂಟ್ ಹಾಕಿರುವ ಸಾಧ್ಯತೆಯಿದೆ. ಮೇಲ್ನೋಟಕ್ಕೆ ನಕ್ಸಲ್ ಚಟುವಟಿಕೆಯಂತೆ ಕಂಡುಬರುವುದಿಲ್ಲ. ಜಿಲ್ಲೆಗೆ ಎಎನ್‍ಐ ಅಧಿಕಾರಿಗಳು ಭೇಟಿಕೊಟ್ಟಿಲ್ಲ. ಎಎನ್‍ಐ ಅಧಿಕಾರಿಗಳು ಜಿಲ್ಲೆಗೆ ಬಂದರೆ ಸ್ಥಳೀಯ ಪೊಲೀಸರಿಗೆ ಮಾಹಿತಿ ಕೊಡದೆ ಯಾವುದೇ ಕಾರ್ಯಾಚರಣೆ ನಡೆಸುವುದಿಲ್ಲ ಎಂದರು.

  • ಬಂಡೀಪುರ ಬೆಂಕಿ ಪ್ರಕರಣ – ಫೈರ್‌ಲೈನ್‌ ನಿರ್ಮಾಣ ಕಾಮಗಾರಿಯಲ್ಲಿ ಅವ್ಯವಹಾರ

    ಬಂಡೀಪುರ ಬೆಂಕಿ ಪ್ರಕರಣ – ಫೈರ್‌ಲೈನ್‌ ನಿರ್ಮಾಣ ಕಾಮಗಾರಿಯಲ್ಲಿ ಅವ್ಯವಹಾರ

    ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತಾ ಅರಣ್ಯಕ್ಕೆ ಬೆಂಕಿ ಬಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ಒಂದು ವರದಿ ಸಲ್ಲಿಕೆಯಾಗಿದೆ. ಫೈರ್‌ಲೈನ್‌ ನಿರ್ಮಾಣ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗಿದೆ.

    ಚಾಮರಾಜನಗರ ಜಿಲ್ಲೆಯ ಬಂಡೀಪುರ ಅರಣ್ಯ ವ್ಯಾಪ್ತಿಯಲ್ಲಿ ಬೆಂಕಿ ಬಿದ್ದ ಪರಿಣಾಮ 4419.54 ಅರಣ್ಯ ಬೆಂಕಿಗೆ ಆಹುತಿಯಾಗಿತ್ತು. ಅರಣ್ಯಕ್ಕೆ ಬೆಂಕಿ ಬಿದ್ದ ಹಿನ್ನೆಲೆಯಲ್ಲಿ ಹರಿಕುಮಾರ್ ಝಾ ನೇತೃತ್ವದಲ್ಲಿ ಒಂದು ವಿಚಕ್ಷಣಾ ಸಮಿತಿ ನೇಮಿಸಲಾಗಿತ್ತು.

    ಈ ವಿಚಕ್ಷಣಾ ಸಮಿತಿ ಇದೀಗ ಸರ್ಕಾರಕ್ಕೆ ಒಂದು ವರದಿ ಸಲ್ಲಿಕೆ ಮಾಡಿದೆ. ಅಂದಿನ ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಅಂಬಾಡಿ ಮಾದವನ್, ಹುಲಿ ಯೋಜನೆ ಎಪಿಸಿಸಿಎಫ್ ಜಗತ್ ರಾಮ್ ಅವರ ಕರ್ತವ್ಯ ಲೋಪದ ಬಗ್ಗೆ ತನಿಖಾ ವರದಿ ಬೊಟ್ಟು ಮಾಡಿದೆ.

    ನಿಗದಿತ ಪ್ರಮಾಣದಲ್ಲಿ ಫೈರ್ ಲೈನ್ ಮತ್ತು ವಿವ್ ಲೈನ್ ನಿರ್ಮಿಸದೆ ಕರ್ತವ್ಯ ಲೋಪದ ಬಗ್ಗೆ ವರದಿ ಸಲ್ಲಿಕೆ ಮಾಡಿದ್ದು ನೌಕರರ ಕೊರತೆ, ಅಧಿಕಾರಿಗಳ ನಿರ್ಲಕ್ಷ್ಯತೆ, ಅಧಿಕಾರಿಗಳ ಕರ್ತವ್ಯ ಲೋಪವೇ ಬೆಂಕಿ ಹರಡಲು ಪ್ರಮುಖ ಕಾರಣ ಎನ್ನುವ ಅಂಶಗಳು ಕಂಡು ಬಂದಿದೆ.

    ಮತ್ತೆ ಕಾಮಗಾರಿ ನಡೆಸದೆ ಬಿಲ್ ಪಾಸ್ ಮಾಡಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಸರ್ಕಾರಕ್ಕೆ ನಷ್ಟವಾಗಿರುವ ಹಣವನ್ನು ಅಧಿಕಾರಿಗಳ ನಿವೃತ್ತಿ ವೇತನದಿಂದ ಭರಿಸುವಂತೆ ಶಿಫಾರಸ್ಸು ಮಾಡಿದ್ದು ಈ ವರದಿ ಆಧರಿಸಿ ಕ್ರಮ ಕೈಗೊಳ್ಳುತ್ತಾರಾ ಎನ್ನುವುದೇ ಪ್ರಶ್ನೆಯಾಗಿದೆ.

  • ಹುಲಿ ದಾಳಿಗೆ ರೈತ ಬಲಿ

    ಹುಲಿ ದಾಳಿಗೆ ರೈತ ಬಲಿ

    ಚಾಮರಾಜನಗರ: ಹುಲಿ ದಾಳಿಗೆ ರೈತನೋರ್ವ ಬಲಿಯಾಗಿರುವ ಘಟನೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದಲ್ಲಿ ನಡೆದಿದೆ.

    ಈ ಘಟನೆ ಕಳೆದ ರಾತ್ರಿ ನಡೆದಿದ್ದು, ಗುಂಡ್ಲುಪೇಟೆ ತಾಲೂಕಿನ ಚೌಡಹಳ್ಳಿ ಗ್ರಾಮದ ರೈತ ಶಿವಮಾದಯ್ಯ (55) ಹುಲಿದಾಳಿಗೆ ಬಲಿಯಾಗಿದ್ದಾರೆ. ಎತ್ತುಗಳೊಂದಿಗೆ ಕಾಡಂಚಿನಲ್ಲಿ ಬರುತ್ತಿದ್ದಾಗ ಹುಲಿ ದಾಳಿ ಮಾಡಿದೆ.

    ಎತ್ತುಗಳನ್ನು ಹೊಡೆದುಕೊಂಡು ಕಾಡಿನಲ್ಲಿ ಬರುತ್ತಿದ್ದ ಶಿವಮಾದಯ್ಯ ಮೇಲೆ ಹುಲಿ ದಾಳಿ ಮಾಡಿದೆ. ಇದರಿಂದ ಭಯಗೊಂಡ ಎತ್ತುಗಳು ಓಡಿಹೋಗಿ ಮನೆ ಸೇರಿವೆ. ಶಿವಮಾದಯ್ಯ ಇಲ್ಲದೇ ಕೇವಲ ಎತ್ತುಗಳೇ ಬಂದಿರುವುದರಿಂದ ಗಾಬರಿಗೊಂಡ ಗ್ರಾಮಸ್ಥರು ರೈತನನ್ನು ಹುಡುಕಿಕೊಂಡು ಹೋಗಿದ್ದಾರೆ. ಈ ವೇಳೆ ಕಾಡಿನಲ್ಲಿ ಮೈಮೇಲೆ ಹುಲಿ ದಾಳಿಯ ಗಾಯಗಳಿಂದ ಕೂಡಿದ ಶಿವಮಾದಯ್ಯನ ಶವ ಪತ್ತೆಯಾಗಿದೆ.

  • ಮನೆಯ ಮೊದ್ಲ ಮಹಡಿಗೆ ಬಂದು ಹೆಡೆಯೆತ್ತಿದ ನಾಗರಹಾವು

    ಮನೆಯ ಮೊದ್ಲ ಮಹಡಿಗೆ ಬಂದು ಹೆಡೆಯೆತ್ತಿದ ನಾಗರಹಾವು

    ಚಿಕ್ಕಬಳ್ಳಾಪುರ: ಮೊದಲ ಮಹಡಿಯ ಮನೆಗೆ ನಾಗರಹಾವಿನ ಮರಿವೊಂದು ಬಂದು ಹೆಡೆಯೆತ್ತಿರುವ ಘಟನೆ ನಡೆದಿದೆ.

    ನಗರದ ಟ್ಯಾಂಕ್ ಬಂಡ್ ರಸ್ತೆಯ ಆನಂದ್ ಎಂಬವರ ಮನೆಯ ಮೊದಲ ಮಹಡಿಗೆ ನಾಗರಹಾವೊಂದು ಬಂದಿತ್ತು. ನಂತರ ನಾಗರಹಾವು ಮೆಟ್ಟಿಲುಗಳ ಮುಖಾಂತರ ಎರಡನೇ ಮಹಡಿಯತ್ತ ಹೋಗಿದೆ.

    ಮೆಟ್ಟಿಲುಗಳ ಮೇಲಿದ್ದ ಮರಿನಾಗರವನ್ನು ನೋಡಿದ ಮನೆಯವರು ಭಯಗೊಂಡು ಕೂಡಲೇ ಉರಗ ರಕ್ಷಕ ಪ್ರಥ್ವಿರಾಜ್‍ಗೆ ಫೋನ್ ಮಾಡಿ ಮಾಹಿತಿ ತಿಳಿಸಿದ್ದಾರೆ. ಉರಗರಕ್ಷಕ ಮನೆಗೆ ಬರುವಷ್ಟರಲ್ಲಿ ಮನೆಯ ಮುಂಭಾಗ ಇದ್ದ ಚಪ್ಪಲಿ ಬಾಕ್ಸ್ ಕೆಳಗೆ ನಾಗರಹಾವು ಕುಳಿತಿತ್ತು.

    ಮಾಹಿತಿ ತಿಳಿದು ತಕ್ಷಣ ಮನೆಗೆ ಬಂದ ಪ್ರಥ್ವಿರಾಜ್ ನಾಗರಹಾವನ್ನು ಹಿಡಿದು ಸುರಕ್ಷಿತವಾಗಿ ಅರಣ್ಯಕ್ಕೆ ಬಿಟ್ಟಿದ್ದಾರೆ.

  • ಕಾಲೇಜಿಗೆ ಎಂಟ್ರಿ ಕೊಟ್ಟ ನಾಗರಹಾವು

    ಕಾಲೇಜಿಗೆ ಎಂಟ್ರಿ ಕೊಟ್ಟ ನಾಗರಹಾವು

    ಧಾರವಾಡ: ನಾಗರ ಪಂಚಮಿ ಮುನ್ನಾ ದಿನವೇ ನಾಗರಹಾವೊಂದು ಕಾಲೇಜಿನ ಕ್ಲಾಸ್‍ರೂಮಿಗೆ ಎಂಟ್ರಿ ಕೊಟ್ಟಿದ್ದು, ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಗಾಬರಿಗೊಂಡಿದ್ದ ಘಟನೆ ವಿದ್ಯಾಕಾಶಿ ಧಾರವಾಡದಲ್ಲಿ ನಡೆದಿದೆ.

    ನಗರದ ಹೊರವಲಯದ ರಾಯಾಪುರದ ಎಸ್‍ಜೆಎಂವಿ ಮಹಾಂತ ಕಾಲೇಜಿನಲ್ಲಿಯೇ ನಾಗರಹಾವು ಪ್ರತ್ಯಕ್ಷವಾಗಿತ್ತು. ಎಂದಿನಂತೆ ವಿದ್ಯಾರ್ಥಿಗಳು ತರಗತಿಗೆ ಕುಳಿತುಕೊಳ್ಳಲು ಒಳಗೆ ಹೋಗಿದ್ದಾರೆ. ಆದರೆ ವಿದ್ಯಾರ್ಥಿಗಳು ಹೋಗುವ ಮೊದಲೇ ತರಗತಿಯ ಬೆಂಚಿನಲ್ಲಿ ನಾಗರಹಾವು ಕುಳಿತ್ತಿತ್ತು. ಇದನ್ನು ಕಂಡ ವಿದ್ಯಾರ್ಥಿಗಳು ಹೌಹಾರಿ ಚೀರುತ್ತ ತರಗತಿಯಿಂದ ಹೊರ ಓಡಿ ಹೋಗಿದ್ದಾರೆ.

    ಉಪನ್ಯಾಸಕರು ಕೊಠಡಿಗೆ ಬಂದು ನೋಡಿದ್ದಾರೆ. ಆಗ ನಾಗರಹಾವು ಬೆಂಚಿನಡಿ ಸುತ್ತಿಕೊಂಡು ಕುಳಿತ್ತಿತ್ತು. ತಕ್ಷಣ ಉಪನ್ಯಾಸಕರು ಉರಗ ತಜ್ಞ ನಾಗರಾಜ್‍ಗೆ ಫೋನ್ ಮಾಡಿ ಮಾಹಿತಿ ತಿಳಿಸಿದ್ದಾರೆ. ವಿಚಾರ ತಿಳಿದು ಸ್ಥಳಕ್ಕೆ ಬಂದ ಉಗರ ತಜ್ಞ ನಾಗರಾಜ್ ಹಾವನ್ನು ಹಿಡಿದು ಅರಣ್ಯ ಪ್ರದೇಶಕ್ಕೆ ಬಿಟ್ಟು ಬಂದಿದ್ದಾರೆ.

  • ಕುರುಮರಡಿಕೆರೆ ಅರಣ್ಯಕ್ಕೆ ಬೆಂಕಿ – ಹೊತ್ತಿ ಉರಿದ ನೂರಾರು ಎಕರೆ ಅರಣ್ಯ

    ಕುರುಮರಡಿಕೆರೆ ಅರಣ್ಯಕ್ಕೆ ಬೆಂಕಿ – ಹೊತ್ತಿ ಉರಿದ ನೂರಾರು ಎಕರೆ ಅರಣ್ಯ

    ಚಿತ್ರದುರ್ಗ: ಜಿಲ್ಲೆಯ ಕುರುಮರಡಿಕೆರೆ ಗ್ರಾಮ ಬಳಿ ಬೆಂಕಿ ಬಿದ್ದಿದೆ. ಪರಿಣಾಮ ನೂರಾರು ಎಕರೆ ಅರಣ್ಯ ಪ್ರದೇಶ ಸುಟ್ಟು ಕರಕಲಾಗಿದೆ.

    ಶುಕ್ರವಾರ ರಾತ್ರಿ ಕಿಡಿಗೇಡಿಗಳು ಅರಣ್ಯಕ್ಕೆ ಬೆಂಕಿ ಹಚ್ಚಿದ್ದಾರೆ ಎನ್ನಲಾಗುತ್ತಿದೆ. ಕಿಡಿಗೇಡಿಗಳ ಕೃತ್ಯಕ್ಕೆ ಅರಣ್ಯ ಪ್ರದೇಶದ ನೂರಾರು ಮರಗಳು ಬೆಂಕಿಗಾಹುತಿ ಆಗಿವೆ.

    2 ದಿನದ ಹಿಂದಷ್ಡೇ ಹೊರಕೆರೆ ದೇವರಪುರ ಬಳಿ ಅರಣ್ಯಕ್ಕೆ ಬೆಂಕಿ ಬಿದ್ದಿತ್ತು. ಇದರಿಂದ ಅರಣ್ಯದಲ್ಲಿದ್ದ 300 ಕುರಿಗಳು ಸಜೀವ ದಹನ ಆಗಿದ್ದವು. ಈ ಕುರಿಗಳೆಲ್ಲ ಹೊಸದುರ್ಗ ತಾಲೂಕಿನ ಅಮೃತಾಪುರ ಗ್ರಾಮದ ತಿಮ್ಮಪ್ಪ ಎಂಬವರಿಗೆ ಸೇರಿದ್ದಾಗಿವೆ. ಒಂದು ಸಾವಿರ ಕುರಿಗಳನ್ನು ಮೇಯಿಸಲು ಹೊರಕೆರೆದೇವರಪುರ ಅರಣ್ಯ ಪ್ರದೇಶಕ್ಕೆ ತೆರಳಿದ್ದರು. ಈ ವೇಳೆ ಆಕಸ್ಮಿಕವಾಗಿ ಗಿಡಗಳಿಗೆ ಹತ್ತಿದ ಬೆಂಕಿಯಿಂದಾಗಿ 300 ಕುರಿಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಉಳಿದ 700 ಕುರಿಗಳು ಪ್ರಾಣಾಪಾಯದಿಂದ ಪಾರಾಗಿದ್ದವು.

    ಇದೀಗ ಮತ್ತೆ ಬೆಂಕಿ ಬಿದ್ದಿದ್ದು, ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ನಿರ್ಲಕ್ಷ್ಯ ಆರೋಪ ಕೇಳಿ ಬಂದಿದೆ.