Tag: forest

  • ಹಕ್ಕು ಪತ್ರಗಳಿಗಾಗಿ ಹಗಲು, ರಾತ್ರಿ ಹೋರಾಟ – ಅರಣ್ಯದಲ್ಲೇ 10 ದಿನಗಳಿಂದ ಪ್ರತಿಭಟನೆ

    ಹಕ್ಕು ಪತ್ರಗಳಿಗಾಗಿ ಹಗಲು, ರಾತ್ರಿ ಹೋರಾಟ – ಅರಣ್ಯದಲ್ಲೇ 10 ದಿನಗಳಿಂದ ಪ್ರತಿಭಟನೆ

    ರಾಮನಗರ: 2006ರ ಅರಣ್ಯ ಹಕ್ಕು ಕಾಯ್ದೆಯಡಿ ಹಕ್ಕು ಪತ್ರಗಳಿಗಾಗಿ ಆಗ್ರಹಿಸಿ ಕನಕಪುರ ತಾಲೂಕಿನ ಮರಳವಾಡಿ ಹೋಬಳಿಯ ಬುಡಗಯ್ಯನ ದೊಡ್ಡಿ ಗ್ರಾಮದ ಇರುಳಿಗ ಸಮುದಾಯದ ಆದಿವಾಸಿಗಳು ಕಳೆದ 10 ದಿನಗಳಿಂದ ಅರಣ್ಯದಲ್ಲೇ ಹಗಲು- ರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ.

    ಕಳೆದ ಡಿಸೆಂಬರ್ 19ರಂದು 93 ಕುಟುಂಬಗಳಿಗೆ ಹಕ್ಕು ಪತ್ರಕ್ಕಾಗಿ ಆಗ್ರಹಿಸಿ ಆದಿವಾಸಿಗಳು ಪ್ರತಿಭಟನೆ ಶುರು ಮಾಡಿದರು. ಅಂದಿನಿಂದ ಇಲ್ಲಿಯ ತನಕ ಅರಣ್ಯದಲ್ಲೇ ಶೆಡ್‍ಗಳನ್ನು ಹಾಕಿಕೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ. ಯಾವಾಗ ಹಕ್ಕುಪತ್ರಗಳನ್ನು ವಿತರಣೆ ಮಾಡುತ್ತೀರೋ ಆ ಕ್ಷಣ ಪ್ರತಿಭಟನೆ ಕೈ ಬಿಡುತ್ತೇವೆ ಎಂದು ಪಟ್ಟು ಹಿಡಿದಿದ್ದಾರೆ.

    ಧರಣಿ ನಿರತ ಆದಿವಾಸಿಗಳ ಮನವೊಲಿಕೆಗೆ ಜಿಲ್ಲಾಡಳಿತದಿಂದ ಸಾಕಷ್ಟು ಪ್ರಯತ್ನ ನಡೆಸಿದರು ವಿಫಲವಾಗಿದೆ. ಪ್ರತಿಭಟನೆ ಸ್ಥಳಕ್ಕೆ ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ, ಉಪನಿರ್ದೇಶಕರು, ಸೇರಿದಂತೆ ಉಪ ವಿಭಾಗಾಧಿಕಾರಿ ದಾಕ್ಷಾಯಿಣಿ, ಅರಣ್ಯ ಇಲಾಖೆ ಅಧಿಕಾರಿಗಳು ಸಹ ಸ್ಥಳಕ್ಕೆ ಭೇಟಿ ನೀಡಿ ಮತ್ತೆ ಸರ್ವೇ ಮಾಡಿ ವರದಿ ಬಂದ ಬಳಿಕ ಜಾಗಗಳನ್ನು ಗುರುತಿಸಿ ಹಕ್ಕು ಪತ್ರಗಳನ್ನು ನೀಡುವ ಭರವಸೆ ನೀಡಿದರೂ ಪ್ರತಿಭಟನಾ ನಿರತರು ಮಾತ್ರ ಹಕ್ಕು ಪತ್ರ ನೀಡುವವರೆಗೂ ಸ್ಥಳದಿಂದ ಹೊರಗೆ ಬರಲ್ಲ ಎಂದು ಅರಣ್ಯದಲ್ಲೇ ಕುಳಿತಿದ್ದಾರೆ.

    ಅಧಿಕಾರಿಗಳ ಮನವೊಲಿಕೆಗೂ ಬಗ್ಗದ ಆದಿವಾಸಿಗಳು ಅರಣ್ಯದಲ್ಲೇ ಟೆಂಟ್ ಹಾಕಿಕೊಂಡು ವಾಸ ಮಾಡುತ್ತಿದ್ದಾರೆ. ಅರಣ್ಯದಲ್ಲೇ ಒಲೆಯೊಡ್ಡಿ ಅಡುಗೆ ಮಾಡಿ ಊಟ, ತಿಂಡಿ ಮಾಡ್ತಿದ್ದಾರೆ. ಅಲ್ಲದೇ ಎಲೆ, ತಟ್ಟೆ ಇಲ್ಲದಿದ್ದರೆ ಬಂಡೆಯ ಮೇಲೆಯೇ ನೀರು ಸುರಿದು ತೊಳೆದು ಊಟ ಮಾಡುವಂತಹ ಕೆಲಸ ಮಾಡುತ್ತಿದ್ದಾರೆ. ಟೆಂಟ್‍ಗಳನ್ನು ಹಾಕಿಕೊಂಡು ಬನ್ನೇರುಘಟ್ಟ ರಾಷ್ಟ್ರೀಯ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿಯೇ ಹಗಲು – ರಾತ್ರಿ ನೂಕ್ತಿದ್ದಾರೆ. ಇನ್ನೂ ರಾತ್ರಿ ವೇಳೆ ಚಳಿ ಜೋರಾಗಿದ್ದು ಪ್ರತಿಭಟನಾಕಾರರು ಚಳಿಗೂ ಕೂಡ ಬೆದರದೆ ಅರಣ್ಯದಲ್ಲೇ ಠಿಕಾಣಿ ಹೂಡಿದ್ದಾರೆ.

    ಸುಮಾರು 65 ಶೆಡ್ ನಿರ್ಮಾಣ ಮಾಡಿ ಇರುಳಿಗ ಜನಾಂಗ ತಮ್ಮ ಮೂಲ ಸ್ಥಳದಲ್ಲಿಯೇ ವಾಸವಿದ್ದೇವೆ. ಅರಣ್ಯ ಹಕ್ಕು ಕಾಯ್ದೆ 3(1)ಎಂ ಪ್ರಕಾರ ಅರಣ್ಯ ಭೂಮಿಯ ಹಕ್ಕು ಪತ್ರ ನೀಡುವಂತೆ ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದಾರೆ. ಅಲ್ಲದೇ ಪದೇಪದೇ ಜಿಲ್ಲಾಡಳಿತ ಆದಿವಾಸಿಗಳ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದು ಈ ಬಾರಿ ಹಕ್ಕು ಪತ್ರ ಕೊಟ್ಟರೆ ಮಾತ್ರವೇ ಪ್ರತಿಭಟನೆ ಕೈ ಬಿಡುವುದು ಎಂದು ಕುಳಿತಿದ್ದಾರೆ.

  • ಕಾಡು ಪ್ರಾಣಿ ಬೇಟೆಗಾರರ ಬಂಧನ: 2 ನಾಡ ಬಂದೂಕು ವಶ

    ಕಾಡು ಪ್ರಾಣಿ ಬೇಟೆಗಾರರ ಬಂಧನ: 2 ನಾಡ ಬಂದೂಕು ವಶ

    ಚಾಮರಾಜನಗರ: ಬೇಟೆಯಾಡಲು ಕಾಡು ಪ್ರವೇಶಿಸಿದ್ದ ಮೂವರು ಐನಾತಿಗಳನ್ನು ಕೊಳ್ಳೇಗಾಲ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

    ದೊಡ್ಡಿಂದುವಾಡಿ ಗ್ರಾಮದ ಇನಾಯತ್ ಪಾಶಾ(22), ವಿಜಯ್(23), ಮಾದೇವಶೆಟ್ಟಿ ಎಂಬವರನ್ನು ಬಂಧಿಸಿದ್ದು, ಅದೇ ಗ್ರಾಮದ ಇನ್ನೋರ್ವ ಜಾಕೀರ್ ಪಾಶಾ ಎಂಬಾತ ಪರಾರಿಯಾಗಿದ್ದಾನೆ.

    ಪ್ರಾಣಿ ಬೇಟೆಗಾಗಿ ಅಕ್ರಮವಾಗಿ ಬಂದೂಕು ಹಿಡಿದುಕೊಂಡು ಕಾಡಿನೊಳಗೆ ಸಾಗಿ, ಕಾಡಂಚಿನ ಪ್ರದೇಶದಿಂದ ಹಿಂತಿರುಗುತ್ತಿದ್ದಾರೆ. ಈ ಬಗ್ಗೆ ಖಚಿತ ಮಾಹಿತಿ ಅರಿತ ಗ್ರಾಮಾಂತರ ಠಾಣೆ ಪೊಲೀಸರು ದಾಳಿ ನಡೆಸಿ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಬಂಧಿತರಿಂದ 2 ನಾಡಬಂದೂಕು, 1 ಮಚ್ಚು, ಲೋಹದ 8 ಗುಂಡುಗಳು, ಲೋಹದ ಸಣ್ಣ ಸಣ್ಣ ಬಾಲ್ಸ್ ಗಳು, ಚಿನಕುರಳಿ ಪಟಾಕಿ ಸರ, ಗನ್ ಪೌಡರ್ ವಶಪಡಿಸಿಕೊಂಡಿದ್ದು, ಪರಾರಿಯಾದ ಅಸಾಮಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

  • ಅಕ್ರಮ ಮರ ಸಾಗಾಣೆ: ಇಬ್ಬರ ಬಂಧನ

    ಅಕ್ರಮ ಮರ ಸಾಗಾಣೆ: ಇಬ್ಬರ ಬಂಧನ

    ಕೊಡಗು: ಅನಧಿಕೃತವಾಗಿ ಹೆಬ್ಬಲಸಿನ ಮರಗಳನ್ನು ಸಾಗಾಣೆ ಮಾಡುತ್ತಿದ್ದ ನಾಲ್ವರು ಆರೋಪಿಗಳ ಪೈಕಿ ಇಬ್ಬರನ್ನು ಬಂಧಿಸುವಲ್ಲಿ ಸೋಮವಾರಪೇಟೆ ವಲಯ ಅರಣ್ಯ ಅಧಿಕಾರಿಗಳು ಯಶಸ್ವಿಯಾಗಿದ್ದು, 3 ಲಕ್ಷ ಮೌಲ್ಯದ ಮರಗಳನ್ನು ವಶಪಡಿಸಿಕೊಂಡಿದ್ದಾರೆ.

    ವಿರಾಜಪೇಟೆ ತಾಲೂಕಿನ ಸಿ.ಎಸ್.ಸುಗುಣ, ಚೆನ್ನೈ ಕೋಟೆಯ ಪಿ.ಕೆ. ಮಜೀದ್ ಇಬ್ಬರನ್ನು ಬಂಧಿಸಿದ್ದು, ಲಾರಿ ಮಾಲೀಕ ರಫೀಕ್ ಹಾಗೂ ನಾಪೋಕ್ಲು ನಿವಾಸಿ ಹಂಸ ಇಬ್ಬರು ತಲೆ ಮರೆಸಿಕೊಂಡಿದ್ದಾರೆ.

    ಮಡಿಕೇರಿಯಿಂದ ಸೋಮವಾರಪೇಟೆ ತಾಲೂಕಿಗೆ ಸಂಪರ್ಕ ಕಲ್ಪಿಸುವ ಐಗೂರು ಗ್ರಾಮದ ಕಾಜೂರು ರಸ್ತೆ ಲಾರಿ ಸಮೇತ ಆರೋಪಿಗಳನ್ನು ಬಂಧಿಸಿದ್ದಾರೆ. ಯಾರಿಗೂ ಅನುಮಾನ ಬಾರದಂತೆ ಆರೋಪಿಗಳು ಲಾರಿಯಲ್ಲಿ ಹೆಬ್ಬಲಸಿನ ಮರಗಳನ್ನು ತುಂಬಿ ಅವುಗಳ ಮೇಲೆ ಸಿಲ್ವರ್ ಮರಗಳನ್ನು ತುಂಬಿ ಸೋಮವಾರಪೇಟೆ ಕಡೆಯಿಂದ ಹಾಸನ ಮಾರ್ಗವಾಗಿ ಮಂಗಳೂರಿಗೆ ಸಾಗಿಸುತ್ತಿದ್ದರು ಎನ್ನಲಾಗಿದೆ.

    ಮಜೀದ್ ಕೆಲ ದಿನಗಳ ಹಿಂದಷ್ಟೇ ಹೆಬ್ಬಲಸು ಮರಗಳನ್ನು ಸಾಗಿಸುತ್ತಿದ್ದಾಗ ಬಂಧನಕ್ಕೆ ಒಳಗಾಗಿ ಜಾಮೀನಿನ ಮೇಲೆ ಹೊರಗೆ ಬಂದಿದ್ದನು. ಕಾರ್ಯಚರಣೆಯಲ್ಲಿ ಸೋಮವಾರಪೇಟೆ ವಲಯ ಅರಣ್ಯ ಅಧಿಕಾರಿ ಕ್ಷಮಾ, ಸತೀಶ್ ಕುಮಾರ್ ಅರಣ್ಯ ರಕ್ಷಕರಾದ ರಾಜಣ್ಣ, ಮೋಹನ್, ವಿಜಯ್ ಹಾಗೂ ವಾಹನ ಚಾಲಕ ನಂದೀಶ್ ಭಾಗವಹಿಸಿದ್ದರು.

  • ಜೀಪ್ ಮೇಲೆ ಎರಗಿದ ಒಂಟಿ ಸಲಗ

    ಜೀಪ್ ಮೇಲೆ ಎರಗಿದ ಒಂಟಿ ಸಲಗ

    ಮೈಸೂರು: ಆನೆಯೊಂದು ಜೀಪ್‍ನಲ್ಲಿ ಬರುತ್ತಿದ್ದ ಪ್ರವಾಸಿಗರ ಮೇಲೆ ಎರಗಲು ಮುಂದಾದ ಘಟನೆ ಮೈಸೂರು ಜಿಲ್ಲೆಯ ಎಚ್.ಡಿ ಕೋಟೆ ತಾಲೂಕಿನ ನಾಗರಹೊಳೆ ಸಂರಕ್ಷಿತ ಅರಣ್ಯದ ಬಳಿ ನಡೆದಿದೆ.

    ಪ್ರವಾಸಿಗರು ಜೀಪ್‍ನಲ್ಲಿ ಕಾಡಿನೊಳಗೆ ಹೋಗಿದ್ದರು. ಈ ವೇಳೆ ಕಾಡಾನೆ ಅವರನ್ನು ನೋಡಿ ಜೀಪ್ ಮೇಲೆ ಎರಗಲು ಮುಂದಾಗಿದೆ. ಆದರೆ ಅರಣ್ಯ ಪ್ರದೇಶದ ಟ್ರಂಚ್ ಪಕ್ಕ ಅಳವಡಿಸಿದ್ದ ಕಬ್ಬಿನದ ರಾಡ್‍ಗೆ ಒಂಟಿ ಸಲಗ ಡಿಕ್ಕಿ ಹೊಡೆದಿದೆ. ಕಬ್ಬಿಣದ ರಾಡ್‍ನಿಂದಾಗಿ ಜೀಪ್ ಸವಾರರು ಸೇಫ್ ಆಗಿದ್ದಾರೆ.

    ಇತ್ತೀಚೆಗೆ ರಾಜಸ್ಥಾನದ ರಣಥಂಬೋರ್ ರಾಷ್ಟ್ರೀಯ ಉದ್ಯಾನವನದಲ್ಲಿ ಸುಲ್ತಾನ ಎಂಬ ಹುಲಿ ಪ್ರವಾಸಿಗರ ವಾಹನವನ್ನು ಬೆನ್ನಟ್ಟಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಿತ್ತು. ಆದರೆ ಪ್ರಾಣಿ ಪ್ರಿಯರು ಇದಕ್ಕೆ ವಿರೋಧ ವ್ಯಕ್ತಪಡಿಸಿ, ಹುಲಿ ವಾಹನವನ್ನು ಬೆನ್ನಟ್ಟಿಲ್ಲ ಬದಲಿಗೆ ಆಟವಾಡುತ್ತಿದೆ ಎಂದು ಹೇಳಿದ್ದರು.

    ಕಾಡು ಪ್ರಾಣಿಗಳು ತಮ್ಮ ವಾಸಸ್ಥಾನವನ್ನು ಕಳೆದುಕೊಂಡಿರುವುದರಿಂದ ಈ ರೀತಿ ಮಾಡುತ್ತಿವೆ ಎಂದು ಕೆಲವರು ಹೇಳಿದ್ದರು. ಆದರೆ ವರದಿಯ ಪ್ರಕಾರ ರಾಷ್ಟ್ರೀಯ ಉದ್ಯಾನ ಹೆಚ್ಚು ಹುಲಿಗಳ ತಾಣವಾಗಿದೆ. ತನ್ನ ಸಾಮಥ್ರ್ಯಕ್ಕಿಂತಲೂ ಹೆಚ್ಚು ಹುಲಿಗಳನ್ನು ಹೊಂದಿದೆ ಎಂದು ವರದಿಯಾಗಿದೆ.

  • ಕುಂದಾಪುರದಲ್ಲಿ ಬೋನಿಗೆ ಬಿತ್ತು ದೈತ್ಯ ಗಂಡು ಚಿರತೆ

    ಕುಂದಾಪುರದಲ್ಲಿ ಬೋನಿಗೆ ಬಿತ್ತು ದೈತ್ಯ ಗಂಡು ಚಿರತೆ

    ಉಡುಪಿ: ಕುಂದಾಪುರದ ಗುಡ್ಡಟ್ಟು ಪ್ರದೇಶದಲ್ಲಿ ಚಿರತೆ ಸೆರೆಯಾಗಿದೆ. ಕೆಲವು ತಿಂಗಳುಗಳಿಂದ ನಿರಂತರವಾಗಿ ಭಯದ ವಾತಾವರಣ ಸೃಷ್ಟಿಸಿದ್ದ ಈ ಚಿರತೆ ಕೊನೆಗೂ ಕಳೆದ ರಾತ್ರಿ ಬೋನಿಗೆ ಬಿದ್ದಿದೆ.

    ಕುಂದಾಪುರ ತಾಲೂಕಿನ ಶಂಕರನಾರಾಯಣ ಅರಣ್ಯ ಇಲಾಖೆ ವ್ಯಾಪ್ತಿಯ ಯಡ್ಯಾಡಿ ಮತ್ಯಾಡಿ ಗ್ರಾಮದಲ್ಲಿ ದಿನೇ ದಿನೇ ಚಿರತೆ ಉಪಟಳ ಹೆಚ್ಚಿದ್ದು, ಸಾಕು ಪ್ರಾಣಿಗಳು ಬಲಿಯಾಗುತ್ತಿದ್ದವು. ಈ ಬಗ್ಗೆ ಸ್ಥಳೀಯರು ಅರಣ್ಯ ಇಲಾಖೆಗೆ ದೂರು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಯವರು ಕಳೆದ ತಿಂಗಳು ಚಂದ್ರಾವತಿ ಗುಡ್ಡೆಮನೆ ಎಂಬವರ ಜಾಗದಲ್ಲಿ ಬೋನು ಇಟ್ಟಿದ್ದರು. ಇದನ್ನೂ ಓದಿ: ಕೋಟದಲ್ಲಿ ಉರುಳಿಗೆ ಬಿದ್ದ ಆರು ವರ್ಷದ ಗಂಡು ಚಿರತೆ

    ಸಾಕಷ್ಟು ಉಪಟಳ ನೀಡಿದ್ದ ಚಿರತೆ ಬೋನು ಇಲ್ಲದಲ್ಲೆಲ್ಲಾ ಓಡಾಡುತ್ತಿತ್ತು. ಕೊನೆಗೂ ಇಂದು ಬೆಳಿಗ್ಗೆ ಬೋನಿಗೆ ಬಿದ್ದಿದೆ. ಸೆರೆಸಿಕ್ಕ ಚಿರತೆಯನ್ನು ಅರಣ್ಯಾಧಿಕಾರಿಗಳು ಸುರಕ್ಷಿತವಾಗಿ ರಕ್ಷಿಸಿ ಕೊಲ್ಲೂರು ಅಭಯಾರಣ್ಯಕ್ಕೆ ರವಾನಿಸಿದ್ದಾರೆ. ಸುಮಾರು 5 ವರ್ಷ ಪ್ರಾಯದ ಗಂಡು ಚಿರತೆ ಇದಾಗಿದ್ದು, ಅರಣ್ಯಾಧಿಕಾರಿ ಚಿರತೆಯನ್ನು ಪರಿಶೀಲಿಸಿ ಅಭಯಾರಣ್ಯ ಬಿಟ್ಟಿದ್ದಾರೆ. ಇದನ್ನೂ ಓದಿ: ಕರು ತಿನ್ನಲು ಬಂದಿದ್ದ ಚಿರತೆಯನ್ನು ಸೆರೆಹಿಡಿದ ರೈತರು

    ಅರಣ್ಯಾಧಿಕಾರಿಗಳು ಸೆರೆ ಹಿಡಿದ ಚಿರತೆಯನ್ನು ಕೊಲ್ಲೂರು ಅಭಯಾರಣ್ಯಕ್ಕೆ ಬಿಟ್ಟು ಬಿಡುತ್ತಾರೆ. ಆದ್ರೆ ಚಿರತೆಗಳು ವಾಪಾಸ್ ಅದೇ ಜಾಗಕ್ಕೆ ಬಂದು ಉಪಟಳ ನೀಡುವುದು ಸಾಮಾನ್ಯವಾಗಿದೆ. ಇದಕ್ಕೆ ಸೂಕ್ತ ಪರಿಹಾರ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

  • ಬೆಂಗಳೂರಿನ ಮನೆಗೆ ನುಗ್ಗಿತು ಅಪರೂಪದ ಹಾವು

    ಬೆಂಗಳೂರಿನ ಮನೆಗೆ ನುಗ್ಗಿತು ಅಪರೂಪದ ಹಾವು

    ಬೆಂಗಳೂರು: ಅರಣ್ಯ ನಾಶದಿಂದಾಗಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅಪರೂಪದ ಹಾವುಗಳು ಕಾಣಿಸಿಕೊಳ್ಳುತ್ತಿವೆ. ಸಿಲಿಕಾನ್ ಸಿಟಿ ಬೆಂಗಳೂರು ನಗರವಾಸಿಗಳ ಮನೆಯೊಳಗೆ ಅದೂ ಮಧ್ಯರಾತ್ರಿ ಬೃಹತ್ ಗಾತ್ರದ ಹಾವೊಂದು ಕಂಡ ತಕ್ಷಣ ಮನೆಯವರು ಬೆಚ್ಚಿಬಿದ್ದಿದ್ದಾರೆ.

    ಅದೂ ಸಾಮಾನ್ಯ ಹಾವಲ್ಲ ದಟ್ಟಾರಣ್ಯಗಳಲ್ಲಿ ಹೆಚ್ಚಾಗಿ ವಾಸ ಮಾಡುವ ಇಂಡಿಯನ್ ರಾಕ್ ಪೈಥಾನ್ ಜಾತಿಯ ಬೃಹತ್ ಹೆಬ್ಬಾವು. ಹೌದು ಆರ್.ಆರ್ ನಗರ ವಲಯ ವ್ಯಾಪ್ತಿಯ ವಾರ್ಡ್ ನಂ 198 ತಲಘಟ್ಟಪುರದ ಮನೆಯ ಕಂಪೌಂಡ್ ಒಳಗೆ ಈ ಬೃಹತ್ ಹೆಬ್ಬಾವು ಸೇರಿಕೊಂಡಿತ್ತು. ರಾತ್ರಿ ಹನ್ನೆರಡು ಗಂಟೆಗೆ ಹೆಬ್ಬಾವು ಕಂಡ ತಕ್ಷಣ ಭಯಬಿದ್ದು ಪಾಲಿಕೆ ಸಹಾಯವಾಣಿಗೆ ಕರೆ ಮಾಡಿದ್ದಾರೆ.

    ತಕ್ಷಣ ಬಿಬಿಎಂಪಿ ಉಪ ಅರಣ್ಯ ಸಂರಕ್ಷಕರ ಅನುಮತಿ ಪಡೆದು, ಪಾಲಿಕೆ ವನ್ಯಜೀವಿ ಸಂರಕ್ಷಕರಾದ ಪ್ರಸನ್ನ ಕುಮಾರ್ ಹೆಬ್ಬಾವನ್ನು ರಕ್ಷಿಸಿದ್ದಾರೆ. ಬಳಿಕ ಪಾಲಿಕೆ ವನ್ಯಜೀವಿ ತುರ್ತು ವಾಹನದ ಮೂಲಕ ಪುನರ್ವಸತಿ ಕೇಂದ್ರಕ್ಕೆ ನೀಡಿ, ಆರೋಗ್ಯ ತಪಾಸಣೆ ನಡೆಸಿ ಆರೋಗ್ಯವಾಗಿದ ಹಿನ್ನೆಲೆಯಲ್ಲಿ ವಾಪಸ್ ಅರಣ್ಯಕ್ಕೆ ಬಿಡಲು ಮುಂದಾಗಿದ್ದಾರೆ.

    ಒಟ್ಟಿನಲ್ಲಿ ಈ ಇಂಡಿಯನ್ ರಾಕ್ ಪೈಥಾನ್ ಬಹಳ ದಪ್ಪ ಹಾಗೂ ಉದ್ದ ಬೆಳೆಯುವ ಹೆಬ್ಬಾವು ಜಾತಿಯಾಗಿದ್ದು, ಬಹಳ ಅಪರೂಪದ ಪ್ರಭೇಧವಾಗಿದೆ. ನಗರದಲ್ಲಿ ಸಿಕ್ಕಿರುವುದು ತುಂಬಾ ಅಪರೂಪ ಮತ್ತು ವಿಶೇಷವಾಗಿದೆ.

  • ಅಂಬುಲೆನ್ಸ್ ಇಂಜಿನ್‍ನಲ್ಲಿ ಅಡಗಿದ್ದ ನಾಗಪ್ಪ

    ಅಂಬುಲೆನ್ಸ್ ಇಂಜಿನ್‍ನಲ್ಲಿ ಅಡಗಿದ್ದ ನಾಗಪ್ಪ

    ಧಾರವಾಡ: ಅಂಬುಲೆನ್ಸ್ ಇಂಜಿನ್‍ನಲ್ಲಿ ಹಾವೊಂದು ಅಡಗಿ ಕುಳಿತು ಆತಂಕ ಸೃಷ್ಟಿ ಮಾಡಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಧಾರವಾಡ ತಾಲೂಕಿನ ಯರಿಕೊಪ್ಪ ಗ್ರಾಮದ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡ ಟೋಲ್ ಗೇಟ್ ಬಳಿ ರಾತ್ರಿ ಅಂಬುಲೆನ್ಸ್ ನಿಲ್ಲಿಸಲಾಗಿತ್ತು. ಇದೇ ಸಂದರ್ಭದಲ್ಲಿ ಅಂಬುಲೆನ್ಸ್ ಇಂಜಿನ್‍ನಲ್ಲಿ ಹಾವು ಆಶ್ರಯ ಪಡೆದು ಬಿಟ್ಟಿತ್ತು.

    ಎಂದಿನಂತೆ ಬೆಳಗ್ಗೆ ಚಾಲಕ ಅಂಬುಲೆನ್ಸ್ ಹತ್ತಿದಾಗ ಹಾವು ಬುಸುಗುಡುವ ಸದ್ದು ಬಂದಿದೆ. ತಕ್ಷಣ ಅಂಬುಲೆನ್ಸ್ ಸಿಬ್ಬಂದಿ ಮತ್ತು ಸ್ಥಳೀಯರು ಉರಗ ಪ್ರೇಮಿ ಯಲ್ಲಪ್ಪ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಉರಗ ತಜ್ಞ ಯಲ್ಲಪ್ಪ ಹಾವಿಗಾಗಿ ಅಂಬುಲೆನ್ಸ್ ಇಂಜಿನ್ ಬಳಿ ಹುಡುಕಾಡಿದ್ದಾರೆ.

    ಸುಮಾರು ಸಮಯದ ನಂತರ ಐದು ಅಡಿ ಉದ್ದದ ಹಾವನ್ನು ಅಂಬುಲೆನ್ಸ್ ನಿಂದ ಸುರಕ್ಷಿತವಾಗಿ ಹೊರ ತೆಗೆದಿದ್ದು, ಅರಣ್ಯದಲ್ಲಿ ಬಿಟ್ಟು ಬಂದಿದ್ದಾರೆ.

  • ಸೌದೆ ತರಲು ಕಾಡಿಗೆ ಹೋಗಿದ್ದ ಮಹಿಳೆಗೆ ಚಾಕು ಇರಿತ

    ಸೌದೆ ತರಲು ಕಾಡಿಗೆ ಹೋಗಿದ್ದ ಮಹಿಳೆಗೆ ಚಾಕು ಇರಿತ

    ತುಮಕೂರು: ಸೌದೆ ತರಲು ಕಾಡಿಗೆ ಹೋಗಿದ್ದ ಮಹಿಳೆಯೋರ್ವಳು ನಿಗೂಢವಾಗಿ ಕೊಲೆಯಾದ ಘಟನೆ ತುಮಕೂರು ತಾಲೂಕಿನ ಊರ್ಡಿಗೆರೆ ಗ್ರಾಮದ ದೊಡ್ಡ ತಿಮ್ಮಯ್ಯನ ಪಾಳ್ಯದಲ್ಲಿ ನಡೆದಿದೆ.

    ಮೃತ ಪಟ್ಟ ಮಹಿಳೆಯನ್ನು 33 ವರ್ಷದ ಸೌಭಾಗ್ಯಮ್ಮ ಎಂದು ಗುರುತಿಸಲಾಗಿದೆ. ಶುಕ್ರವಾರ ಸಂಜೆ ಸೌದೆ ತರಲು ಕಾಡಿಗೆ ಹೋದ ಸೌಭಾಗ್ಯಮ್ಮಳ ಹೊಟ್ಟೆಗೆ ಚೂರಿಯಿಂದ ಇರಿದು ಕೊಲೆ ಮಾಡಿ ಆರೋಪಿಗಳು ಪರಾರಿಯಾಗಿದ್ದಾರೆ. ಆದರೆ ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

    ಕಾಡಿಗೆ ಹೋಗಿ ಸೌದೆ ತೆಗೆದುಕೊಂಡು ವಾಪಾಸ್ ಬರುತ್ತಿರುವಾಗ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ. ಈ ಸಂಬಂಧ ಕ್ಯಾತಸಂದ್ರ ಪೊಲೀಸರು ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲು ಮಾಡಿಕೊಂಡು ಕೊಲೆ ಯಾವ ಕಾರಣಕ್ಕೆ ಆಗಿದೆ ಮತ್ತು ಯಾರಿಂದ ನಡೆದಿದೆ ಎಂಬುದರ ಬಗ್ಗೆ ಶೋಧ ನಡೆಸುತ್ತಿದ್ದಾರೆ.

  • ಕೇರಳದಲ್ಲಿ ಮಾವೋವಾದಿಗಳ ಹತ್ಯೆ – ಚಿಕ್ಕಮಗಳೂರಿನ ಇಬ್ಬರು ಸಾವು

    ಕೇರಳದಲ್ಲಿ ಮಾವೋವಾದಿಗಳ ಹತ್ಯೆ – ಚಿಕ್ಕಮಗಳೂರಿನ ಇಬ್ಬರು ಸಾವು

    ಚಿಕ್ಕಮಗಳೂರು: ಕೇರಳದಲ್ಲಿ ಸೋಮವಾರ ನಡೆದ ಕಾರ್ಯಾಚರಣೆಯಲ್ಲಿ ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಮಹಿಳೆ ಸೇರಿ ಇಬ್ಬರು ನಕ್ಸಲರು ಮೃತಪಟ್ಟಿದ್ದಾರೆ.

    ಮೃತಪಟ್ಟವನ್ನು ಶ್ರೀಮತಿ ಮತ್ತು ಸುರೇಶ್ ಅಲಿಯಾಸ್ ಮಹೇಶ್ ಎಂದು ಗುರುತಿಸಲಾಗಿದೆ. ಸೋಮವಾರ ಕೇರಳದ ಪಾಲಕ್ಕಾಡ್‍ನ ಅರಣ್ಯ ಪ್ರದೇಶದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಪೊಲೀಸರ ಗುಂಡಿಗೆ ಮೂವರು ಮಾವೋವಾದಿಗಳು ಹತರಾಗಿದ್ದರು. ಈ ಮೂವರಲ್ಲಿ ಶ್ರೀಮತಿ ಮತ್ತು ಸುರೇಶ್ ಕೂಡ ಇದ್ದರು ಎಂಬ ಮಾಹಿತಿ ಸಿಕ್ಕಿದೆ.

    ಶೃಂಗೇರಿ ತಾಲೂಕಿನ ಬೆಳಗೋಡು ಕೂಡಿಗೆ ಗ್ರಾಮದವಳಾದ ಶ್ರೀಮತಿ 2008ರಲ್ಲಿ ನಕ್ಸಲ್ ಚಟುವಟಿಕೆಗೆ ಸೇರಿದಳು. ಈಕೆಯ ವಿರುದ್ಧ ಸುಮಾರು 10 ರಿಂದ 12 ಪ್ರಕರಣಗಳಿವೆ. ಮೂಡಿಗೆರೆ ತಾಲೂಕಿನ ಅಂಗಡಿ ಗ್ರಾಮದವನಾದ ಸುರೇಶ್ ಕೂಡ 2004ರಲ್ಲೇ ನಕ್ಸಲ್ ಗುಂಪಿಗೆ ಸೇರಿಕೊಂಡಿದ್ದು, ಇತನ ವಿರುದ್ಧ 40 ಪ್ರಕರಣಗಳಿವೆ. ಈಗ ಇಬ್ಬರೂ ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದಾರೆ.

    ಸೋಮವಾರ ಬೆಳಗ್ಗೆ ಪಾಲಕ್ಕಾಡ್‍ನ ಅರಣ್ಯ ಪ್ರದೇಶದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಪೊಲೀಸರ ಗುಂಡಿಗೆ ಮೂವರು ಮಾವೋವಾದಿಗಳು ಹತರಾಗಿದ್ದರು. ಕೇರಳದ ಥಂಡರ್ ಬೋಲ್ಟ್ ಕಮಾಂಡೋ ತಂಡವು ಈ ಕಾರ್ಯಚರಣೆ ನಡೆಸಿದ್ದು, ಯಶಸ್ವಿಯಾಗಿ ಮೂವರನ್ನು ಹತ್ಯೆ ಮಾಡಿತ್ತು.

    ಇತ್ತೀಚಿಗೆ ಮಾವೋವಾದಿಗಳ ಉಪಟಳ ಕೇರಳದಲ್ಲಿ ಜಾಸ್ತಿಯಾಗಿದ್ದು, ಇವರನ್ನು ಸದೆಬಡಿಯಲು ಕೇರಳ ಪೊಲೀಸರು ಕಾದು ಕುಳಿತಿದ್ದರು. ಅದರಂತೆ ಸೋಮವಾರ ಬೆಳಗ್ಗೆ ಮಾವೋವಾದಿಗಳು ಪಾಲಕ್ಕಾಡ್‍ನ ಅರಣ್ಯ ಪ್ರದೇಶದಲ್ಲಿ ಅಡಗಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ್ದರು. ಈ ವೇಳೆ ಪಾಲಕ್ಕಾಡ್ ಅರಣ್ಯದ ಮಂಚಕತ್ತಿ ಎಂಬ ಪ್ರದೇಶದಲ್ಲಿ ಪೊಲೀಸರು ಮತ್ತು ಮಾವೋವಾದಿಗಳ ನಡುವೆ ಗುಂಡಿನ ಚಕಮಕಿಯಾಗಿ ಮೂವರು ಮಾವೋವಾದಿಗಳು ಸಾವನ್ನಪ್ಪಿದ್ದಾರೆ.

    ಕಳೆದ ಕೆಲ ವರ್ಷಗಳಿಂದ ಕರ್ನಾಟಕ ತಮಿಳುನಾಡು ಮತ್ತು ಕೇರಳದಲ್ಲಿ ಮಾವೋವಾದಿಗಳು ತಮ್ಮ ಪ್ರಾಬಲ್ಯವನ್ನು ಸ್ಥಾಪಿಸಲು ಪ್ರಯತ್ನ ಪಡುತ್ತಿದ್ದಾರೆ ಎಂದು ಹೇಳಲಾಗಿತ್ತು. ಆದ್ದರಿಂದ ಕೆಲ ಸೂಕ್ಷ್ಮ ಪ್ರದೇಶದ ಮೇಲೆ ಪೊಲೀಸರು ಕಣ್ಣಿಟ್ಟಿದ್ದರು. ಆದರೆ ಕೇರಳದಲ್ಲಿ ಬಿಟ್ಟರೆ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಮಾವೋವಾದಿಗಳು ಕಾಣಿಸಿಕೊಂಡಿರಲಿಲ್ಲ. 2014 ರಿಂದ 2017ರವರೆಗೆ ಕೇರಳದಲ್ಲಿ ಮಾವೋವಾದಿಗಳ ವಿರುದ್ಧ 23 ವಿವಿಧ ಕೇಸ್‍ಗಳು ದಾಖಲಾಗಿದ್ದವು.

  • ಪೊಲೀಸರಿಂದ ಗುಂಡಿನ ದಾಳಿ – ಮೂವರು ಮಾವೋವಾದಿಗಳು ಹತ್ಯೆ

    ಪೊಲೀಸರಿಂದ ಗುಂಡಿನ ದಾಳಿ – ಮೂವರು ಮಾವೋವಾದಿಗಳು ಹತ್ಯೆ

    ಕೊಚ್ಚಿ: ಕೇರಳದಲ್ಲಿ ಪೊಲೀಸರು ಮತ್ತು ಮಾವೋವಾದಿಗಳ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಮೂವರು ಮಾವೋವಾದಿಗಳು ಸಾವನ್ನಪ್ಪಿದ್ದಾರೆ.

    ಇಂದು ಬೆಳಗ್ಗೆ ಪಲಕ್ಕಾಡ್‍ನ ಅರಣ್ಯ ಪ್ರದೇಶದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಪೊಲೀಸರ ಗುಂಡಿಗೆ ಮೂವರು ಮಾವೋವಾದಿಗಳು ಹತರಾಗಿದ್ದಾರೆ. ಕೇರಳದ ಥಂಡರ್ಬೋಲ್ಟ್ ಕಮಾಂಡೋ ತಂಡವು ಈ ಕಾರ್ಯಚರಣೆ ನಡೆಸಿದ್ದು, ಯಶಸ್ವಿಯಾಗಿ ಮೂವರನ್ನು ಹತ್ಯೆ ಮಾಡಿದೆ.

    ಇತ್ತೀಚಿಗೆ ಮಾವೋವಾದಿಗಳ ಉಪಟಳ ಕೇರಳದಲ್ಲಿ ಜಾಸ್ತಿಯಾಗಿದ್ದು, ಇವರನ್ನು ಸದೆಬಡಿಯಲು ಕೇರಳ ಪೊಲೀಸರು ಕಾದು ಕುಳಿತಿದ್ದರು. ಅದರಂತೆ ಇಂದು ಬೆಳಗ್ಗೆ ಮಾವೋವಾದಿಗಳು ಪಲಕ್ಕಾಡ್‍ನ ಅರಣ್ಯ ಪ್ರದೇಶದಲ್ಲಿ ಅಡಗಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ್ದಾರೆ. ಈ ವೇಳೆ ಪಲಕ್ಕಾಡ್ ಅರಣ್ಯದ ಮಂಚಕತ್ತಿ ಎಂಬ ಪ್ರದೇಶದಲ್ಲಿ ಪೊಲೀಸರು ಮತ್ತು ಮಾವೋವಾದಿಗಳ ನಡುವೆ ಗುಂಡಿನ ಚಕಮಕಿಯಾಗಿ ಮೂವರು ಸಾವನ್ನಪ್ಪಿದ್ದಾರೆ.

    ಹಿರಿಯ ಪೊಲೀಸ್ ಅಧಿಕಾರಿಗಳೆಲ್ಲ ಸ್ಥಳಕ್ಕೆ ಬಂದಿದ್ದು, ಪರೀಶಿಲನೆ ಮಾಡುತ್ತಿದ್ದಾರೆ. ಸದ್ಯ ಸಾವನ್ನಪ್ಪಿದ ಮಾವೋವಾದಿಗಳ ಗುರುತು ಪತ್ತೆಯಾಗಿಲ್ಲ. ಇನ್ನೂ ಅಪಾರ ಪ್ರಮಾಣದಲ್ಲಿ ಮಾವೋವಾದಿಗಳು ಈ ಪ್ರದೇಶದಲ್ಲಿ ಅಡಗಿರಬಹುದು ಎಂದು ಕೊಂಬಿಂಗ್ ಕಾರ್ಯ ಮುಂದುವರೆದಿದೆ. ಉಳಿದ ಮಾವೋವಾದಿಗಳಿಗಾಗಿ ಕೇರಳ ಪೊಲೀಸರು ಶೋಧ ಕಾರ್ಯ ಮಾಡುತ್ತಿದ್ದಾರೆ.

    ಕೆಳೆದ ಕೆಲ ವರ್ಷಗಳಿಂದ ಕರ್ನಾಟಕ ತಮಿಳುನಾಡು ಮತ್ತು ಕೇರಳದಲ್ಲಿ ಮಾವೋವಾದಿಗಳು ತಮ್ಮ ಪ್ರಾಬಲ್ಯವನ್ನು ಸ್ಥಾಪಿಸಲು ಪ್ರಯತ್ನ ಪಡುತ್ತಿದ್ದಾರೆ ಎಂದು ಹೇಳಲಾಗಿತ್ತು. ಅದ್ದರಿಂದ ಕೆಲ ಸೂಕ್ಷ್ಮ ಪ್ರದೇಶದ ಮೇಲೆ ಪೊಲೀಸರು ಕಣ್ಣಿಟ್ಟಿದ್ದರು. ಆದರೆ ಕೇರಳದಲ್ಲಿ ಬಿಟ್ಟರೆ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಮಾವೋವಾದಿಗಳು ಕಾಣಿಸಿಕೊಂಡಿರಲಿಲ್ಲ. 2014 ರಿಂದ 2017 ರ ವರೆಗೆ ಕೇರಳದಲ್ಲಿ ಮಾವೋವಾದಿಗಳಿಂದ 23 ವಿವಿಧ ಕೇಸ್‍ಗಳು ದಾಖಲಾಗಿದ್ದವು.