Tag: forest

  • ಮನೆಯಲ್ಲಿ ಅಡಗಿ ಕುಳ್ತಿದ್ದ ಕರಿನಾಗರ ರಕ್ಷಣೆ

    ಮನೆಯಲ್ಲಿ ಅಡಗಿ ಕುಳ್ತಿದ್ದ ಕರಿನಾಗರ ರಕ್ಷಣೆ

    ಹಾವೇರಿ: ಜಿಲ್ಲೆಯ ಹಾನಗಲ್ ಪಟ್ಟಣದಲ್ಲಿ ಮನೆಯೊಂದರಲ್ಲಿ ಅಡಗಿ ಕುಳಿತ ಕರಿನಾಗರ ಹಾವನ್ನ ರಕ್ಷಣೆ ಮಾಡಲಾಗಿದೆ.

    ಯಮನಪ್ಪ ಮಾದರ ಮನೆಯಲ್ಲಿ ಹಾವು ಅಡಗಿ ಕುಳಿತಿತ್ತು. ಇವರ ಹಾನಗಲ್ ಡಿಪೋದ ಚಾಲಕನಾಗಿದ್ದು, ಮನೆಯಲ್ಲಿ ಹಾವು ಕಂಡ ತಕ್ಷಣ ಗಾಬರಿಯಾಗಿದ್ದಾರೆ. ಅದೇ ಡಿಪೋದಲ್ಲಿ ಕೆಲಸ ಮಾಡುವ ಚಾಲಕ ಕಂ ಸ್ನೇಕ್ ಕೃಷ್ಣರೆಡ್ಡಿಗೆ ಫೋನ್ ಮಾಡಿ ಮಾಹಿತಿ ತಿಳಿಸಿದ್ದಾರೆ.

    ಮಾಹಿತಿ ತಿಳಿದು ಮನೆಗೆ ಬಂದ ಕೃಷ್ಣರೆಡ್ಡಿ ಮನೆಯಲ್ಲಿ ಅಡಗಿ ಕುಳಿತಿದ್ದ ಕರಿನಾಗರವನ್ನು ಹಿಡಿದಿದ್ದಾರೆ. ಈ ಕರಿನಾಗರ ಹಾವನ್ನು ನೋಡಲು ಅಪಾರ ಜನರು ಬಂದಿದ್ದರು. ನಂತರ ಕೃಷ್ಣರೆಡ್ಡಿ ಸುರಕ್ಷಿತವಾಗಿ ಹಾವನ್ನು ಅರಣ್ಯಕ್ಕೆ ಬಿಟ್ಟಿದ್ದಾರೆ.

    ಈಗಾಗಲೇ ಸ್ನೇಕ್ ಕೃಷ್ಣರೆಡ್ಡಿ ಚಾಲಕ ಕೆಲಸ ಮಾಡುತ್ತಾ, ಬಿಡುವಿನ ವೇಳೆಯಲ್ಲಿ ಹಾವುಗಳನ್ನ ಹಿಡಿದು ಕಾಡಿಗೆ ಬಿಡುವ ಕಾರ್ಯ ಮಾಡುತ್ತಿದ್ದಾರೆ. ಇದುವರೆಗೂ ಸುಮಾರು 2000ಕ್ಕೂ ಅಧಿಕ ಹಾವುಗಳನ್ನ ಹಿಡಿದು ಕಾಡಿಗೆ ಬಿಟ್ಟಿದ್ದಾರೆ. ಈ ಕಾರ್ಯಕ್ಕೆ ಹಾನಗಲ್ ಪಟ್ಟಣ ಸೇರಿದಂತೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದರು.

  • ಮ್ಯಾನ್ ವರ್ಸಸ್ ವೈಲ್ಡ್ ನಲ್ಲಿ ಅಕ್ಕಿಯಿಂದ ಇಂದು ಜಲ ಸಾಹಸ – ಕಾಡಿದ್ದರಷ್ಟೇ ಮನುಷ್ಯರು ಎಂಬ ಸಂದೇಶ

    ಮ್ಯಾನ್ ವರ್ಸಸ್ ವೈಲ್ಡ್ ನಲ್ಲಿ ಅಕ್ಕಿಯಿಂದ ಇಂದು ಜಲ ಸಾಹಸ – ಕಾಡಿದ್ದರಷ್ಟೇ ಮನುಷ್ಯರು ಎಂಬ ಸಂದೇಶ

    ಚಾಮರಾಜನಗರ: ಸೂಪರ್ ಸ್ಟಾರ್ ರಜಿನಿ ಬಳಿಕ ಬಾಲಿವುಡ್ ಹೀರೋ ಅಕ್ಷಯ್ ಕುಮಾರ್ ಸಾಹಸಿಗ ಬೇರ್ ಗ್ರಿಲ್ಸ್ ಜೊತೆಯಲ್ಲಿ ಇಂದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಚಿತ್ರೀಕರಣದಲ್ಲಿ ಪಾಲ್ಗೊಂಡು ಜಲ ಸಾಹಸ ನಡೆಸಿದ್ದಾರೆ.

    ಕಲ್ಕರೆ ಅರಣ್ಯ ವಲಯದ ರಾಂಪುರ ಆನೆ ಶಿಬಿರದ ಸಮೀಪ ಎದೆಮಟ್ಟದ ನೀರಿನಲ್ಲಿ ಹಗ್ಗದ ಸಹಾಯದಿಂದ ಈಜಿ ಮೈನವಿರೇಳಿಸುವ ಸಾಹಸ ಮಾಡಿದ್ದು, ಬಳಿಕ ಸಾಹಸಿ ಬೇರ್ ಗ್ರಿಲ್ಸ್ ಜೊತೆಗೂಡಿ ಸಂವಾದ ನಡೆಸಿದ್ದಾರೆ.

    ಬಂಡೀಪುರ ಕಾಡನ್ನು ಉಲ್ಲಾಸಿತಗೊಂಡು ಸುತ್ತಾಡಿದ ಅವರು ‘ಇಫ್ ಫಾರೆಸ್ಟ್ ಆರ್ ಅಲೈವ್- ಹ್ಯೂಮನ್ ಬೀಯಿಂಗ್ಸ್ ಆರ್ ಅಲೈವ್, ಮ್ಯಾನ್ ವಿಲ್ ಬಿ ದೇರ್’ ಎಂಬ ಸಂದೇಶ ನೀಡಿದ್ದಾರೆ. ಎರಡು ಎಪಿಸೋಡ್‍ಗಳನ್ನು ಡಿಸ್ಕವರಿ ಚಾನೆಲ್ ಚಿತ್ರೀಕರಿಸಿಕೊಂಡಿದ್ದು, ಇಬ್ಬರು ದೈತ್ಯ ನಟರ ಸಾಕಷ್ಟು ರೋಚಕ ಅನುಭವಗಳನ್ನು ಸೆರೆ ಹಿಡಿಯಲಾಗಿದೆ ಎಂದು ಪಬ್ಲಿಕ್ ಟಿವಿಗೆ ಅರಣ್ಯ ಸಂರಕ್ಷಣಾಧಿಕಾರಿ ಬಾಲಚಂದ್ರ ಮಾಹಿತಿ ನೀಡಿದ್ದಾರೆ.

  • ಬೆಂಗಳೂರಿನಲ್ಲಿ ಅಪರೂಪದ ಬಿಳಿ ನಾಗರಹಾವು ಪತ್ತೆ

    ಬೆಂಗಳೂರಿನಲ್ಲಿ ಅಪರೂಪದ ಬಿಳಿ ನಾಗರಹಾವು ಪತ್ತೆ

    ಬೆಂಗಳೂರು: ಸಿಲಿಕಾನ್ ಸಿಟಿ ಪ್ರದೇಶದಲ್ಲಿ ನಾಗರಹಾವು ಕಂಡಾಗ ಹೆಚ್ಚು ಮಂದಿ ಬೆಚ್ಚಿ ಬೀಳುತ್ತಾರೆ. ಆದರೆ ಇಂದು ಅತೀ ಅಪರೂಪದ ಶ್ವೇತ ನಾಗನ ಕಂಡು ಜನರು ಭಯದ ಜೊತೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.

    ಇಂದು ಬಿಬಿಎಂಪಿ ಅರಣ್ಯ ಘಟಕಕ್ಕೆ ಎಂದಿನಂತೆ ಹಾವು ರಕ್ಷಣೆಗಾಗಿ ಕರೆ ಬಂದಿತು. ಯಲಹಂಕ ಬಾಗಲೂರು ಕ್ರಾಸ್‍ನಲ್ಲಿ ಕಂಪೌಂಡ್ ಒಳಗಿನ ಖಾಲಿ ಜಾಗದಲ್ಲಿ ಶ್ವೇತ ನಾಗ ಓಡಾಡುತ್ತಿತ್ತು. ಸ್ಥಳೀಯರು ಕರೆ ಮಾಡಿದಾಗ ಪಾಲಿಕೆ ಅರಣ್ಯ ಘಟಕದ ಸಿಬ್ಬಂದಿ ಹೋಗಿ ಹಾವನ್ನು ರಕ್ಷಿಸಿದರು.

    ಈ ಬಗ್ಗೆ ಮಾತನಾಡಿದ ವನ್ಯಜೀವಿ ಸಂರಕ್ಷಕ ರಾಜೇಶ್, ಶ್ವೇತ ನಾಗ ಅಥವಾ ವೈಟ್ ಕೋಬ್ರಾ ತುಂಬಾ ವಿಭಿನ್ನವಾದ ಹಾವು. ಮೂರು ವರ್ಷದಲ್ಲಿ ಈ ರೀತಿಯ ಮೂರು ಹಾವು ಬೆಂಗಳೂರಲ್ಲಿ ರಕ್ಷಣೆ ಮಾಡಲಾಗಿದೆ. ಈ ಹಾವು ಐದು ಅಡಿ ಇದ್ದು, ಹದ್ದುಗಳಿಗೆ ಆಹಾರವಾಗದೆ ಇಷ್ಟು ಸಮಯ ಬದುಕಿರುವುದು ಬಹಳ ಅಪರೂಪ. ಹಾವಿನ ಚರ್ಮದ ಸಮಸ್ಯೆಯಿಂದ ಬಿಳಿ ಬಣ್ಣದಲ್ಲಿದೆ. ಬಿಬಿಎಂಪಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಲಹೆ, ಗೈಡ್ ಲೈನ್ ಪ್ರಕಾರ ಅದನ್ನು ಸುರಕ್ಷಿತ ಜಾಗಕ್ಕೆ ಬಿಡುಗಡೆ ಮಾಡಲಾಗುವುದು ಎಂದರು.

    ಇದೇ ವೇಳೆ ಉರಗ ತಜ್ಞ ನಾಗಭೂಷಣ್ ಮಾತನಾಡಿ, ಝೂ ನಲ್ಲಿ ಈ ಹಾವು ಇಡಬೇಕು ಎಂದು ಅಧಿಕಾರಿಗಳ ಸಲಹೆ ಪಡೆಯಲಾಗುತ್ತದೆ. ಈ ಹಾವು ತುಂಬಾ ಸೂಕ್ಷ್ಮವಾಗಿದೆ. ಬಿಸಿಲಿಗೆ ಚರ್ಮ, ಕಣ್ಣುಗಳ ರಕ್ಷಣೆ ಮಾಡಲು ಸುರಕ್ಷಿತ ಜಾಗದ ಅಗತ್ಯವಿದೆ ಎಂದರು.

  • ಉತ್ತರಾಖಂಡ್ ಅರಣ್ಯದಲ್ಲಿ ಸಾರಥಿ ಸವಾರಿ

    ಉತ್ತರಾಖಂಡ್ ಅರಣ್ಯದಲ್ಲಿ ಸಾರಥಿ ಸವಾರಿ

    ಡೆಹ್ರಾಡೂನ್: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮತ್ತೆ ಕಾಡಿನತ್ತ ಮುಖಮಾಡಿದ್ದಾರೆ. ಕಳೆದೆರಡು ತಿಂಗಳ ಹಿಂದಷ್ಟೇ ಕೀನ್ಯಾ ಕಾಡಿನಲ್ಲಿ ದಚ್ಚು ಆಂಡ್ ಟೀಂ ಸಫಾರಿ ಮಾಡಿದ್ದರು. ಅಲ್ಲಿನ ಮಕ್ಕಳೊಂದಿಗೆ ಕುಣಿದು ಖುಷಿಪಟ್ಟು, ಏರ್ ಬಲೂನ್‍ನಲ್ಲಿ ಆಗಸದಲ್ಲಿ ಹಾರಾಡುತ್ತಾ ಪ್ರಾಣಿಗಳ ಫೋಟೋವನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದರು. ಈಗ ಡಿ ಬಾಸ್ ಉತ್ತರಾಖಂಡ್‍ನತ್ತ ಸಾಗಿದ್ದಾರೆ.

    ಹೌದು, ವನ್ಯಜೀವಿ ಮತ್ತು ಪ್ರಾಣಿಪಕ್ಷಿಗಳನ್ನು ಅತಿಯಾಗಿ ಪ್ರೀತಿಸುವ ದರ್ಶನ್ ಇತ್ತೀಚೆಗೆ ಉತ್ತರಾಖಂಡ್ ಅರಣ್ಯ ಪ್ರದೇಶದಲ್ಲಿ ವನ್ಯಜೀವಿ ಛಾಯಾಗ್ರಹಣ ಮಾಡಿದ್ದಾರೆ. ದೊಡ್ಡ ಕ್ಯಾಮೆರಾ ಹೆಗಲಿಗೆ ಹಾಕೊಂಡು ವೈಲ್ಡ್‌ಲೈಫ್‌ ಫೋಟೋಗ್ರಾಫರ್ ಟೀಂ ಜೊತೆ ಕಲ್ಲು, ಬಂಡೆಯ ನಡುವೆ ಸಾಗಿ ಕಾಡು ಸುತ್ತಿದ್ದಾರೆ. ಆ ದಟ್ಟಕಾಡಿನಲ್ಲಿ ದಾಸ ಮಾಡಿರುವ ಸಾಹಸಮಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಲಾಗಿದೆ. ಇದನ್ನೂ ಓದಿ: ಪುತ್ರನಿಗೆ ಕುದುರೆ ಸವಾರಿ ಹೇಳಿಕೊಟ್ಟ ದರ್ಶನ್- ವಿಡಿಯೋ ನೋಡಿ

    ಕರ್ನಾಟಕ ಅರಣ್ಯ ಇಲಾಖೆಯ ರಾಯಭಾರಿಯಾಗಿರುವ ದರ್ಶನ್ ಸಿನಿಮಾ ಕೆಲಸದ ಜೊತೆಗೆ ವೈಲ್ಡ್‌ಲೈಫ್‌ ಫೋಟೋಗ್ರಾಫಿಯನ್ನು ಇಷ್ಟಪಡುತ್ತಾರೆ. ಹೀಗಾಗಿ ಬಿಡುವು ಸಿಕ್ಕಾಗಲೆಲ್ಲಾ ಹೆಗಲಿಗೆ ಕ್ಯಾಮರಾ ಏರಿಸಿಕೊಂಡು ಬಂಡಿಪುರದ ಕಾಡಿನ ಕಡೆಗೆ ಸಾರಥಿ ಹೋಗುತ್ತಾರೆ. ಇದನ್ನೂ ಓದಿ: ಕೀನ್ಯಾದಿಂದ ಹಿಂತಿರುಗಿದ ದರ್ಶನ್‍ ನೋಡಲು ಮುಗಿಬಿದ್ದ ಅಭಿಮಾನಿಗಳು

    ಅಷ್ಟೇ ಅಲ್ಲದೆ ಈ ಬಾರಿ ಕೂಡ ದರ್ಶನ್ ತೆಗೆದ ಫೋಟೋಗಳು ಪ್ರದರ್ಶನಗೊಳ್ಳಲಿದೆ. ಚಾಲೆಂಜಿಂಗ್ ಸ್ಟಾರ್ ನ ಕೈಚಳಕದಲ್ಲಿ ಮೂಡಿ ಬಂದ ಫೋಟೋ ಖರೀದಿಸಲು ಕಲಾವಿದರು ಸೇರಿದಂತೆ ಡಿ ಬಾಸ್ ಫ್ಯಾನ್ಸ್ ಕಾದು ಕುಳಿತಿದ್ದಾರೆ.

  • ಭಾರೀ ಗಾತ್ರದ ಕಾಳಿಂಗ ಸರ್ಪ ಸೆರೆ

    ಭಾರೀ ಗಾತ್ರದ ಕಾಳಿಂಗ ಸರ್ಪ ಸೆರೆ

    ಮಡಿಕೇರಿ: ಭಾರೀ ಗಾತ್ರದ ಕಾಳಿಂಗ ಸರ್ಪವೊಂದು ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಬಾಳೆಲೆ ಸಮೀಪದ ಸುಳುಗೋಡು ಗ್ರಾಮದಲ್ಲಿ ಸೆರೆಯಾಗಿದೆ.

    ಗ್ರಾಮದ ಜಯ ಎಂಬವರ ತೋಟದ ತಾಳೆ ಮರದಲ್ಲಿ ಬಂದು 12 ಅಡಿ ಉದ್ದ 17 ಕೆ.ಜಿ ತೂಕದ ಭಾರೀ ಗಾತ್ರದ ಕಾಳಿಂಗ ಸರ್ಪ ಸೇರಿಕೊಂಡಿತ್ತು. ಈ ಬಗ್ಗೆ ಮಾಹಿತಿ ತಿಳಿದು ಉರಗ ತಜ್ಞ ಶರತ್ ಹಾಗೂ ಅವರ ತಂಡದವರು ಕಾರ್ಯಾಚರಣೆ ಮಾಡಿ ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿದ್ದಾರೆ.

    ಭಾನುವಾರ ಸಂಜೆ ಕಾಳಿಂಗ ಸರ್ಪ ಮರದಲ್ಲಿರುವ ಬಗ್ಗೆ ಮಾಹಿತಿ ತಿಳಿದು ಶರತ್ ಮತ್ತು ಅವರ ತಂಡ ಸ್ಥಳಕ್ಕೆ ಹೋಗಿದ್ದಾರೆ. ನಂತರ ಸತತ ಒಂದು ಗಂಟೆ ಪ್ರಯತ್ನಪಟ್ಟು ಹಾವನ್ನು ಸೆರೆಹಿಡಿದಿದ್ದಾರೆ. ಸೆರೆ ಹಿಡಿದ ಅಪರೂಪದ ಕಾಳಿಂಗ ಸರ್ಪವನ್ನು ಇಂದು ಮಡಿಕೇರಿಯ ಗಾಂಧಿಮೈದಾನಕ್ಕೆ ತಂದು ಸಾರ್ವಜನಿಕವಾಗಿ ಪ್ರದರ್ಶನ ಮಾಡಲಾಗಿದೆ. ಶರತ್ ಹಾವುಗಳ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.

    ಹಾವು, ಅವುಗಳ ಅಳಿವಿನ ಬಗ್ಗೆ ಜನರಿಗೆ ಇರುವ ಕೆಲ ತಪ್ಪು ತಿಳುವಳಿಕೆಗಳ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಅಲ್ಲದೇ ಹಾವು ಕಂಡರೆ ಕೊಲ್ಲಬೇಡಿ, ನಮಗೆ ಮಾಹಿತಿ ನೀಡಿ. ನಾವು ಹಾವನ್ನು ರಕ್ಷಿಸಿ ತೆಗೆದುಕೊಂಡು ಹೋಗಿ ಜೀವ ಉಳಿಸುತ್ತೇವೆ ಎಂದು ಮನವಿ ಮಾಡಿಕೊಂಡಿದ್ದಾರೆ. ಕಳೆದ ಹಲವು ವರ್ಷಗಳಿಂದ ಹಾವುಗಳನ್ನ ರಕ್ಷಣೆಯ ಕೆಲಸಮಾಡುತ್ತಿರೋ ಶರತ್ ಈವರೆಗೆ 3 ಸಾವಿರಕ್ಕೂ ಹೆಚ್ಚು ಹಾವುಗಳನ್ನ ರಕ್ಷಿಸಿ ಕಾಡಿಗೆ ಮರಳಿಸಿದ್ದಾರೆ. ಇವುಗಳ ಪೈಕಿ 23ಕ್ಕೂ ಹೆಚ್ಚು ಕಾಳಿಂಗ ಸರ್ಪಗಳು ಸೇರಿವೆ.

    ಸಾಮಾನ್ಯವಾಗಿ ಶೀತ ಪ್ರದೇಶಗಳಲ್ಲಿ ವಾಸಮಾಡುವ ಕಾಳಿಂಗ ಸರ್ಪ ಆಕಶ್ಮಿಕವಾಗಿ ನೀರಿನ ಸಮೀಪ ಇರುವ ತಾಳೆ ಮರಕ್ಕೆ ಬಂದು ಸೇರಿಕೊಂಡಿತ್ತು. ಹಾವನ್ನು ಸುರಕ್ಷಿತವಾಗಿ ಸೆರೆಹಿಡಿದ ಶರತ್ ವಿರಾಜಪೇಟೆ ಸಮೀಪದ ಮಾಕುಟ್ಟ ಮೀಸಲು ಅರಣ್ಯಕ್ಕೆ ಬಿಟ್ಟಿದ್ದಾರೆ.

  • ಬಂಡೀಪುರದಲ್ಲಿ ಮೊದಲ ಬಾರಿ ಚಿಪ್ಪುಹಂದಿ ಪತ್ತೆ

    ಬಂಡೀಪುರದಲ್ಲಿ ಮೊದಲ ಬಾರಿ ಚಿಪ್ಪುಹಂದಿ ಪತ್ತೆ

    ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಇದೇ ಮೊದಲ ಬಾರಿಗೆ ಅಳಿವಿನ ಅಂಚಿನಲ್ಲಿರುವ ಚಿಪ್ಪುಹಂದಿ ಕಾಣಿಸಿಕೊಂಡಿದೆ.

    ಗುಂಡ್ಲುಪೇಟೆ ತಾಲೂಕಿನ ಹಂಗಳಪುರದ ಜಮೀನಿನಲ್ಲಿ ಚಿಪ್ಪುಹಂದಿ ಪತ್ತೆಯಾಗಿದೆ. ಹಂಗಳಪುರ ಗ್ರಾಮದ ಜಮೀನೊಂದರ ಟೊಮೆಟೊ ಬೆಳೆಗೆ ಹಾಕಲಾಗಿದ್ದ ಬಲೆಗೆ ಅಳಿವಿನಂಚಿನಲ್ಲಿರುವ ಚಿಪ್ಪುಹಂದಿ ಸಿಲುಕಿಕೊಂಡು ನರಳಾಡುತ್ತಿತ್ತು.

    ಈ ವೇಳೆ ಅರಣ್ಯ ಇಲಾಖೆ ಮಾಹಿತಿ ಪಡೆದು ಸ್ಥಳಕ್ಕೆ ಬಂದು ಚಿಪ್ಪುಹಂದಿಯನ್ನು ರಕ್ಷಿಸಿ ಓಂಕಾರ್ ಅರಣ್ಯ ವಲಯಕ್ಕೆ ಬಿಟ್ಟಿದ್ದಾರೆ. ಪ್ರಾಣಿಗಳನ್ನು ಪತ್ತೆಹಚ್ಚಲು ಕ್ಯಾಮೆರಾ ಟ್ರಾಪ್ ಸೇರಿದಂತೆ ಇನ್ನಿತರ ಸಮೀಕ್ಷೆ ನಡೆಸಿದಾಗಲೂ ಚಿಪ್ಪುಹಂದಿ ಇರುವುದು ಪತ್ತೆಯಾಗಿರಲಿಲ್ಲ ಎಂದು ಉನ್ನತ ಮೂಲಗಳು ಸ್ಪಷ್ಟಪಡಿಸಿವೆ.

    ಬಲೆಗೆ ಚಿಪ್ಪುಹಂದಿ ಸಿಲುಕಿಕೊಂಡು ನರಳಾಡುತ್ತಿತ್ತು. ನಾವು ಅದನ್ನು ರಕ್ಷಿಸಿ ಅರಣ್ಯಕ್ಕೆ ಬಿಟ್ಟಿದ್ದೇವೆ. ಹುಳ-ಹುಪ್ಪಟೆ, ಕೀಟಗಳನ್ನು ತಿಂದು ಬದುಕುವ ಈ ನಿಶಾಚಾರಿ ಪ್ರಾಣಿ ಬೇಟೆಗಾರರ ಕೆಂಗಣ್ಣಿಗೆ ಗುರಿಯಾಗಿ ಅಳಿವಿನಂಚಿನಲ್ಲಿದೆ ಎಂದು ಅರಣ್ಯಾಧಿಕಾರಿ ಹೇಳಿದರು.

  • ಇಬ್ಬರು ಬೇಟೆಗಾರರ ಬಂಧನ- ನಾಲ್ವರು ಪರಾರಿ

    ಇಬ್ಬರು ಬೇಟೆಗಾರರ ಬಂಧನ- ನಾಲ್ವರು ಪರಾರಿ

    ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ತಂಬೂರ-ಬೆಂಡಲಗಟ್ಟಿ ಮೀಸಲು ಅರಣ್ಯ ಪ್ರದೇಶದಲ್ಲಿ ಬೇಟೆಯಾಡಲು ಬಂದ ಇಬ್ಬರನ್ನ ಬಂಧಿಸುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

    ಶಿಗ್ಲೊಯ ಸೈಯದ್ ಮತ್ತು ಮುಂಡಗೋಡದ ಕರೇಪ್ಪ ಕೊರವರ ಬಂಧಿತ ಆರೋಪಿಗಳು. ಬೇಟೆಗಾರರ ತಂಡದಲ್ಲಿದ್ದ ಇನ್ನೂ ನಾಲ್ವರು ಪರಾರಿಯಾಗಿದ್ದಾರೆ. ಬಂಧಿತರಿಂದ 2 ದ್ವಿಚಕ್ರ ವಾಹನ ಮತ್ತು ತಂತಿ ಉರುಳು ಬಲೆಗಳನ್ನ ವಶಪಡಿಸಿಕೊಳ್ಳಲಾಗಿದೆ.

    ಬಂಧಿತ ಆರೋಪಿಗಳ ತಂಡದವರು ಮೀಸಲು ಅರಣ್ಯ ಪ್ರದೇಶದಲ್ಲಿ ಕಾಡುಹಂದಿಯನ್ನು ಬೇಟೆಯಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಅರಣ್ಯಾಧಿಕಾರಿ ಶ್ರೀಕಾಂತ್ ಪಾಟೀಲ್ ನೇತೃತ್ವದ ತಂಡ ದಾಳಿ ನಡೆಸಿ ಆರೋಪಿಗಳನ್ನ ಬಂಧಿಸುವಲ್ಲಿ ಯಶ್ವಸಿಯಾಗಿದ್ದಾರೆ. ಪರಾರಿಯಾಗಿರುವ ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕಿದ್ದು, ಉಳಿದ ಆರೋಪಿಗಳಿಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಹುಡುಕಾಟ ನಡೆಸುತ್ತಿದ್ದಾರೆ.

  • ತಾಯಿ ತನ್ನ ಮಗನನ್ನು ಕೆಳಗಿಳಿಸಿದ್ದು ತಪ್ಪಾಯ್ತು – ಪೋಷಕರ ಕಣ್ಣೆದುರೇ ಚಿರತೆಗೆ ಆಹಾರ

    ತಾಯಿ ತನ್ನ ಮಗನನ್ನು ಕೆಳಗಿಳಿಸಿದ್ದು ತಪ್ಪಾಯ್ತು – ಪೋಷಕರ ಕಣ್ಣೆದುರೇ ಚಿರತೆಗೆ ಆಹಾರ

    – ಮೂರು ತಿಂಗಳಿನಲ್ಲಿ ಮೂರನೇ ಬಲಿ
    – ಅರಣ್ಯ ಇಲಾಖೆ ವಿರುದ್ಧ ಜನಾಕ್ರೋಶ

    ತುಮಕೂರು: ನರಭಕ್ಷಕ ಚಿರತೆ 5 ವರ್ಷದ ಬಾಲಕನನ್ನು ಬಲಿ ತಗೆದುಕೊಂಡಿರುವ ಘಟನೆ ಗುಬ್ಬಿ ತಾಲೂಕು ಮಣಿಕುಪ್ಪೆಯಲ್ಲಿ ಇಂದು ಸಂಜೆ ನಡೆದಿದೆ.

    ದನ ಮೇಯಿಸಲು ಹೊಲಕ್ಕೆ ತೆರಳಿದ್ದ ತಂದೆ ಶಿವಕುಮಾರ್, ತಾಯಿ ಪುಷ್ಪಲತಾ ಜತೆ ಹಠವಿಡಿದು ಬಾಲಕ ಸಮರ್ಥ ಗೌಡ(5) ಕೂಡ ತೆರಳಿದ್ದ. ಅಲ್ಲೇ ಪಕ್ಕದಲ್ಲಿ ಆಟವಾಡುವಾಗ ಕಿರಾತಕ ಚಿರತೆ ಏಕಾಏಕಿ ದಾಳಿ ನಡೆಸಿ ಬಾಲಕನ ರಕ್ತಹೀರಿದೆ.

    ಘಟನೆಯಿಂದ ಸ್ಥಳೀಯರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಚಿರತೆ ಸಮರ್ಥ್ ಗೌಡನ ಕುತ್ತಿಗೆಗೆ ಬಾಯಿಹಾಕಿ ರಕ್ತ ಹೀರುವ ಸಂದರ್ಭದಲ್ಲಿ ಅಪ್ಪ, ಅಮ್ಮ ಎಂದು ಕಣ್ಣೀರಿಟ್ಟಿದ್ದಾನೆ. ತಮ್ಮ ಕಣ್ಣೆದುರೇ ಇದ್ದ ಒಬ್ಬನೇ ಮಗ ಚಿರತೆಗೆ ಆಹಾರವಾಗುತ್ತಿದ್ದನ್ನು ಕಂಡು ಚೀರಾಡಿ ಸಹಾಯಕ್ಕೆ ಧಾವಿಸುವಷ್ಟರಲ್ಲಿ ಚಿರತೆ ಅರಣ್ಯದೊಳಗೆ ಜಿಗಿದು ಕಣ್ಮರೆಯಾಗಿದೆ.

    ಸಾಂದರ್ಭಿಕ ಚಿತ್ರ
    ಸಾಂದರ್ಭಿಕ ಚಿತ್ರ

    ರಕ್ತದ ಮಡುವಿನಲ್ಲಿ ಬಿದ್ದಿದ್ದ ಬಾಲಕ ಸ್ಥಳದಲ್ಲಿಯೇ ಮೃತಪಟ್ಟಿದ್ದು ಪಾಲಕರ ಆಕ್ರಂದನ ಮುಗಿಲು ಮುಟ್ಟಿತ್ತು. ಪುಟಾಣಿ ಬಾಲಕನ ಶವ ಕಂಡು ಸ್ಥಳೀಯರು ಮರುಗಿದರು. ಚಿರತೆ ಹಿಡಿಯಲಾಗದ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ಹೊರಹಾಕಿದರು.

    ಇದೇ ಚಿರತೆ ಹೆಬ್ಬೂರು ಹೋಬಳಿ ಬನ್ನಿಕುಪ್ಪೆ ಲಕ್ಷ್ಮಮ್ಮ, ಕುಣಿಗಲ್ ತಾಲೂಕು ದೊಡ್ಡಮರಳವಾಡಿ ಆನಂದಯ್ಯ ಎಂಬುವವರನ್ನು ತಿಂದು ಮುಗಿಸಿದ ಘಟನೆ ಹಸಿರಾಗಿರುವಾಗಲೇ ಈಗ ಮತ್ತೊಂದು ಭಯಾನಕ ಘಟನೆ ನಡೆದಿದೆ.

    ದನ ಕಾಯಲು ತೆರಳುವಾಗ ನಾನು ಬರುತ್ತೇನೆ ಎಂದು ಹಠವಿಡಿದು ಬಂದ ಮುದ್ದು ಕಂದ ಸಮರ್ಥ್ ಗೌಡನನ್ನು ಆತನ ತಾಯಿ ಪುಷ್ಪಲತಾ ಎಚ್ಚರಿಕೆಯಿಂದಲೇ ಎತ್ತಿಕೊಂಡು ಜೋಪಾನ ಮಾಡಿದ್ದರು. ಪೊದೆಯಲ್ಲಿ ಚಿರತೆಯಿರುವುದನ್ನು ಗ್ರಹಿಸಿ ಬೆಚ್ಚಿ ಓಡಿಹೋದ ಹಸುಗಳನ್ನು ನೋಡಲು ಮಗು ಕೆಳಗಿಳಿಸಿ ಸ್ವಲ್ಪ ದೂರ ಹೋಗಿದ್ದೇ ತಡ ನರ ಭಕ್ಷಕ ಚಿರತೆ ಪುಟಾಣಿ ಕಂದನ ರಕ್ತ ಹೀರಿದೆ. ಅಪಾಯ ಅರಿತು ಕೆಲವೇ ನಿಮಿಷದಲ್ಲಿ ತಾಯಿ ವಾಪಸಾದರೂ ಕಾಲ ಮಿಂಚಿ ಹೋಗಿತ್ತು.

  • ಶಾಲೆಗೆ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ – ವಿದ್ಯಾರ್ಥಿ‍ನಿ ಗಂಭೀರ

    ಶಾಲೆಗೆ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ – ವಿದ್ಯಾರ್ಥಿ‍ನಿ ಗಂಭೀರ

    ಮಡಿಕೇರಿ: ಶಾಲೆಗೆ ತೆರಳುತ್ತಿದ್ದ ವಿದ್ಯಾರ್ಥಿನಿ ಮೇಲೆ ಕಾಡಾನೆಯೊಂದು ಏಕಾಏಕಿ ದಾಳಿ ನಡೆಸಿರುವ ಘಟನೆ ಸಿದ್ದಾಪುರ ಸಮೀಪದ ಇಂಜಲಗೆರೆಯಲ್ಲಿ ನಡೆದಿದೆ.

    ಘಟನೆಯಲ್ಲಿ ವಿದ್ಯಾರ್ಥಿನಿ ಗಂಭೀರವಾಗಿ ಗಾಯಗೊಂಡಿದ್ದು, ಯುವಶ್ರೀ ಆನೆ ದಾಳಿಯಲ್ಲಿ ಗಾಯಗೊಂಡ ವಿದ್ಯಾರ್ಥಿನಿ. ಸದ್ಯ ಯುವಶ್ರೀ ಅಮ್ಮತ್ತಿ ಆರ್.ಐ.ಹೆಚ್.ಪಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

    ಘಟನೆಯಲ್ಲಿ ಮತ್ತೊಬ್ಬ ವಿದ್ಯಾರ್ಥಿನಿ ಕಾಲಿಗೆ ಗಾಯಗಳಾಗಿವೆ. ಹೆಚ್ಚಿನ ಚಿಕಿತ್ಸೆಗೆಗಾಗಿ ವಿದ್ಯಾರ್ಥಿನಿಯನ್ನು ಮಡಿಕೇರಿಗೆ ಕರೆತರಲಾಗಿದೆ. ಇಂದು ಬೆಳಗ್ಗೆ ಶಾಲೆಗೆ ತೆರಳುತ್ತಿದ್ದ ವೇಳೆ ಘಟನೆ ನಡೆದಿದ್ದು, ಈ ಭಾಗದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ಘಟನೆ ನಡೆದ ಬಳಿಕವೂ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿಲ್ಲ. ಹಲವು ದಿನಗಳಿಂದ ಈ ಸಮಸ್ಯೆ ಎದುರಿಸುತ್ತಿದ್ದು, ಅರಣ್ಯ ಇಲಾಖೆ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ವನ್ಯಜೀವಿ ಪ್ರಿಯರ ನಾಡಲ್ಲೂ ವರ್ಷಾಚರಣೆಗೆ ಬ್ರೇಕ್

    ವನ್ಯಜೀವಿ ಪ್ರಿಯರ ನಾಡಲ್ಲೂ ವರ್ಷಾಚರಣೆಗೆ ಬ್ರೇಕ್

    ಚಾಮರಾಜನಗರ: ವನ್ಯಜೀವಿ ಪ್ರಿಯರ ಸ್ವರ್ಗ ಚಾಮರಾಜನಗರದಲ್ಲಿ ಹೊಸ ವರ್ಷ ಆಚರಣೆಗೆ ಬ್ರೇಕ್ ಹಾಕಲಾಗಿದೆ.

    ಚಾಮರಾಜನಗರ ಜಿಲ್ಲೆಯಲ್ಲಿ ಮೂರು ಹುಲಿ ಸಂರಕ್ಷಿತಾರಣ್ಯ ಪ್ರದೇಶವಿದೆ. ಬಂಡೀಪುರ ಹುಲಿ ಸಂರಕ್ಷಿತಾರಣ್ಯ, ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತಾರಣ್ಯ, ಮಲೆ ಮಹದೇಶ್ವರ ಸಂರಕ್ಷಿತಾರಣ್ಯವನ್ನು ಒಳಗೊಂಡಿದೆ. ಈ ಮೂರು ಕೂಡ ಹುಲಿ ಸಂರಕ್ಷಿತಾರಣ್ಯವಾಗಿದ್ದು, ವನ್ಯಜೀವಿಗಳನ್ನು ನೋಡಿ ಎಂಜಾಯ್ ಮಾಡಲೂ ಸಾಕಷ್ಟು ಜನ ಕಾಡಿಗೆ ಬರುತ್ತಿದ್ದಾರೆ.

    ಹೊಸ ವರ್ಷದ ಸಂಭ್ರಮದಲ್ಲಿ ಪ್ರವಾಸಿಗರು ಮೈ ಮರೆಯದಂತೆ ಅರಣ್ಯ ಇಲಾಖೆ, ಪೊಲೀಸ್ ಇಲಾಖೆ ಬ್ರೇಕ್ ಹಾಕಿದ್ದು, ಕಟ್ಟುನಿಟ್ಟಿನ ಕ್ರಮಕೈಗೊಳ್ಳುವ ಎಚ್ಚರಿಕೆ ನೀಡಿದೆ. ಗುಂಪು ಗುಂಪಾಗಿ ಸೇರುವುದು, ಪಾರ್ಟಿಯಲ್ಲಿ ಡಿಜೆ ಬಳಸಲು ನಿಷೇಧ ಹೇರಲಾಗಿದೆ.

    ಪಟಾಕಿ ಸಿಡಿಸಿ ಫೈರ್ ಕ್ಯಾಂಪ್ ಮಾಡಿ ವನ್ಯ ಜೀವಿಗಳಿಗೆ ತೊಂದರೆ ಕೊಟ್ಟರೆ ಹುಷಾರ್ ಅವರ ವಿರುದ್ಧ ಕ್ರಮ ಗ್ಯಾರಂಟಿ. ಹೊಸ ವರ್ಷಾಚರಣೆ ಮಾಡುವ ಹೋಟೆಲ್, ರೆಸಾರ್ಟ್ ಗಳು ಕಡ್ಡಾಯವಾಗಿ ಪೊಲೀಸರ ಅನುಮತಿ ಪಡೆಯಬೇಕು. ಇದರ ಜೊತೆಗೆ ಕಾರ್ಯಕ್ರಮದ ವೇಳೆ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕೆಂದು ತಾಕೀತು ಮಾಡಲಾಗಿದೆ.