Tag: forest

  • ಕಾಡು ಪ್ರಾಣಿ ಬೇಟೆ ವೇಳೆ ರಿವರ್ಸ್ ಫೈರಿಂಗ್- ವ್ಯಕ್ತಿ ಸಾವು

    ಕಾಡು ಪ್ರಾಣಿ ಬೇಟೆ ವೇಳೆ ರಿವರ್ಸ್ ಫೈರಿಂಗ್- ವ್ಯಕ್ತಿ ಸಾವು

    ರಾಮನಗರ: ಅರಣ್ಯದಲ್ಲಿ ಕಾಡು ಪ್ರಾಣಿ ಬೇಟೆಯಾಡುವ ವೇಳೆ ನಾಡಬಂದೂಕಿನಿಂದ ರಿವರ್ಸ್ ಫೈರಿಂಗ್ ಆದ ಪರಿಣಾಮ ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ಕನಕಪುರ ತಾಲೂಕಿನ ಸಾತನೂರು ಅರಣ್ಯ ಪ್ರದೇಶದಲ್ಲಿ ನಡೆದಿದೆ.

    ಕನಕಪುರ ತಾಲೂಕಿನ ಟಿ.ಬೇಕುಪ್ಪೆ ನಿವಾಸಿ ರವೀಶ್ ಮೃತ ದುರ್ದೈವಿ. ಕನಕಪುರ ತಾಲೂಕಿನ ಸಾತನೂರು ಅರಣ್ಯ ಪ್ರದೇಶದಲ್ಲಿ ರವೀಶ್ ಹಾಗೂ ಕೆಲವು ಬೇಟೆಗಾರರು ರಾತ್ರಿ ಬೇಟೆಯಾಡಲು ತೆರಳಿದ್ದರು. ಬೇಟೆಯ ವೇಳೆ ನಾಡಬಂದೂಕಿನಲ್ಲಿ ರಿವರ್ಸ್ ಫೈರಿಂಗ್ ಆಗಿದ್ದು ರವೀಶ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.

    ರವೀಶ್ ಮೃತದೇಹವನ್ನು ಚನ್ನಪಟ್ಟಣ ತಾಲೂಕಿನ ಬುಕ್ಕಸಾಗರ ಗ್ರಾಮದ ರಸ್ತೆ ಬಳಿ ಇಟ್ಟು ಅಪಘಾತ ಎಂದು ಬಿಂಬಿಸಲು ಸಂಗಡಿಗರು ಮುಂದಾಗಿದ್ದರು. ಆದರೆ ಸಮೀಪದಲ್ಲೇ ಶನೀಶ್ವರ ದೇವಾಲಯದಲ್ಲಿ ಕಾರ್ಯಕ್ರಮವೊಂದು ನಡೆಯುತ್ತಿತ್ತು. ರಸ್ತೆಯಲ್ಲಿ ಜನರು ಇರುವುದನ್ನು ಕಂಡ ಸಾರ್ವಜನಿಕರು ಸ್ಥಳಕ್ಕೆ ಬಂದಿದ್ದಾರೆ. ಸಾರ್ವಜನಿಕರನ್ನು ಕಂಡು ಬೇಟೆಗಾರರು ಮೃತದೇಹ ಬಿಟ್ಟು ಓಡಿ ಹೋಗಿದ್ದಾರೆ.

    ಈ ಸಂಬಂಧ ಚನ್ನಪಟ್ಟಣದ ಅಕ್ಕೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೇ ಕನಕಪುರ ಗ್ರಾಮಾಂತರ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದು ಮೃತ ರವೀಶ್ ಜೊತೆಗಿದ್ದ ಬೇಟೆಗಾರರ ಬಂಧನಕ್ಕೆ ಕಾರ್ಯಾಚರಣೆ ನಡೆಸಲಾಗಿದೆ.

  • ರೈತನನ್ನು ಅಟ್ಟಾಡಿಸಿ ಬೈಕ್ ಎಸೆದ ಒಂಟಿ ಸಲಗ – 2 ಹಸು, 1 ಎಮ್ಮೆ ಬಲಿ

    ರೈತನನ್ನು ಅಟ್ಟಾಡಿಸಿ ಬೈಕ್ ಎಸೆದ ಒಂಟಿ ಸಲಗ – 2 ಹಸು, 1 ಎಮ್ಮೆ ಬಲಿ

    ಮಂಡ್ಯ: ಕಾಡಿನಿಂದ ಬಂದ ಒಂಟಿ ಸಲಗದ ದಾಳಿಗೆ ಎರಡು ಹಸುಗಳು ಹಾಗೂ ಒಂದು ಎಮ್ಮೆ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದೇವಿರಹಳ್ಳಿ ಗ್ರಾಮದಲ್ಲಿ ಜರುಗಿದೆ.

    ಭೀಮನಕಿಂಡಿ ಬೆಟ್ಟದ ಕಾಡಿನಿಂದ ಇಂದು ಬೆಳಗ್ಗೆ ಒಂಟಿ ಸಲಗವೊಂದು ನೀರು ಕುಡಿಯಲೆಂದು ಭಿಮನಕೆರೆಗೆ ಬಂದಿದೆ. ಈ ವೇಳೆ ಇದ್ದಕ್ಕಿದ್ದ ಹಾಗೆ ಒಂಟಿ ಸಲಗ ಗಾಬರಿಗೊಂಡಿದೆ. ಅಲ್ಲೆ ಪಕ್ಕದಲ್ಲಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ರೈತರ ಕೃಷ್ಣ ಅವರನ್ನು ಅಟ್ಟಾಡಿಸಿದೆ. ನಂತರ ಕೃಷ್ಣ ಅವರ ಬೈಕ್‍ನ್ನು ಸೊಂಡಿಲಿನಿಂದ ಬಿಸಾಡಿದೆ. ಬಳಿಕ ಅಲ್ಲೇ ಇದ್ದ ಎತ್ತಿನಗಾಡಿಯನ್ನು ಸಂಪೂರ್ಣವಾಗಿ ಜಖಂಗೊಳಿಸಿದೆ.

    ನಂತರ ಮುಂದೆ ಗದ್ದೆಯಲ್ಲಿ ಮೆಯುತ್ತಿದ್ದ ಎರಡು ಹಸುಗಳು ಹಾಗೂ ಒಂದು ಎಮ್ಮೆಯ ಮೇಲೆ ಒಂಟಿ ಸಲಗ ದಾಳಿ ನಡೆಸಿದೆ. ಈ ವೇಳೆ ಗ್ರಾಮಸ್ಥರು ಬಂದು ಕಿರುಚಿದ ಪರಿಣಾಮ ಒಂಟಿ ಸಲಗ ಹೆದರಿ ಓಡಿ ಹೋಗಿದೆ. ಆನೆ ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ ಹಸು ಹಾಗೂ ಎಮ್ಮೆಗಳು ಸಾವನ್ನಪ್ಪಿವೆ. ಹಲಗೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದೆ.

  • ಕಾಡ್ಗಿಚ್ಚು ನಂದಿಸಲು ವಾಯುಸೇನೆ ಸಿದ್ಧ- ರಾಜ್ಯ ಮುಖ್ಯ ಕಾರ್ಯದರ್ಶಿಗೆ ಏರ್ ಮಾರ್ಷಲ್ ಪತ್ರ

    ಕಾಡ್ಗಿಚ್ಚು ನಂದಿಸಲು ವಾಯುಸೇನೆ ಸಿದ್ಧ- ರಾಜ್ಯ ಮುಖ್ಯ ಕಾರ್ಯದರ್ಶಿಗೆ ಏರ್ ಮಾರ್ಷಲ್ ಪತ್ರ

    ಚಾಮರಾಜನಗರ: ರಾಜ್ಯದ ಅರಣ್ಯ ಪ್ರದೇಶಗಳಿಗೆ ಬೆಂಕಿ ಬಿದ್ದರೆ ಅದನ್ನು ನಂದಿಸುವ ಕಾರ್ಯಾಚರಣೆಗೆ ಸಹಕರಿಸಲು ವಾಯುಸೇನೆ ಸಿದ್ಧವಾಗಿದೆ. ಈ ಕುರಿತು ವಾಯುಸೇನೆಯ ಸೀನಿಯರ್ ಏರ್ ಸ್ಟಾಫ್ ಆಫೀಸರ್ ಏರ್ ಮಾರ್ಷಲ್ ಟಿ.ಡಿ. ಜೋಸೆಫ್ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ವಿಜಯಭಾಸ್ಕರ್ ಗೆ ಪತ್ರ ಬರೆದಿದ್ದಾರೆ.

    ದುರ್ಗಮ ಅರಣ್ಯ ಸೇರಿದಂತೆ ಕ್ಲಿಷ್ಟಕರ ಅರಣ್ಯ ಪ್ರದೇಶಗಳಲ್ಲಿ ಬೆಂಕಿ ಬಿದ್ದರೆ ಅಲ್ಲಿಗೆ ಅರಣ್ಯ ಸಿಬ್ಬಂದಿ ತೆರಳಿ ಬೆಂಕಿ ನಂದಿಸುವುದು ಕಷ್ಟವಾಗಲಿದೆ. ಅಂತಹ ಸಂದರ್ಭದಲ್ಲಿ ವಾಯುಸೇನೆಯ ಹೆಲಿಕಾಪ್ಟರ್ ಗಳನ್ನು ಕಳುಹಿಸಿಕೊಡುವಂತೆ ಹಾಗೂ ಸದಾ ಸನ್ನದ್ಧವಾಗಿ ಇರಿಸುವಂತೆ ಕ್ರಮ ಕೈಗೊಳ್ಳಲು ಮುಖ್ಯಕಾರ್ಯದರ್ಶಿಗಳಿಗೆ ಅರಣ್ಯ ಇಲಾಖೆ ವಿನಂತಿಸಿತ್ತು.

    ಈ ಹಿನ್ನೆಲೆಯಲ್ಲಿ ಬೆಂಕಿ ನಂದಿಸುವುದಕ್ಕೆ ಸಹಕಾರ ಕೋರಿ ಮುಖ್ಯಕಾರ್ಯದರ್ಶಿಗಳು ವಾಯುಸೇನೆಗೆ ಪತ್ರ ಬರೆದಿದ್ದರು. ಇದಕ್ಕೆ ಉತ್ತರಿಸಿರುವ ವಾಯುಸೇನೆ ಅಧಿಕಾರಿಗಳು ಬೆಂಕಿ ನಂದಿಸುವ ಕಾರ್ಯಾಚರಣೆಗೆ ಸದಾ ಸಿದ್ಧವಿರುವುದಾಗಿ ತಿಳಿಸಿದ್ದಾರೆ.

    ಕಳೆದ ವರ್ಷ ಬೇಸಿಗೆ ಸಂದರ್ಭದಲ್ಲಿ ಕಿಡಿಗೇಡಿಗಳು ಹಚ್ಚಿದ ಬೆಂಕಿಗೆ ಬಂಡೀಪುರ ಹೊತ್ತಿ ಉರಿದಿತ್ತು. ನಾಲ್ಕು ಸಾವಿರ ಹೆಕ್ಟೆರ್‍ಕ್ಕೂ ಹೆಚ್ಚು ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿತ್ತು. ದೊಡ್ಡ ಪ್ರಾಣಿಗಳು ಬೆಂಕಿಯಿಂದ ಬಚಾವಾದರೂ ಅಪರೂಪದ ಸರಿಸೃಪಗಳು ಸುಟ್ಟು ಭಸ್ಮವಾಗಿದ್ದವು. ಬೆಂಕಿ ನಂದಿಸಲು ಅರಣ್ಯ ಸಿಬ್ಬಂದಿ ಹರಸಾಹಸ ನಡೆಸಿದ್ದರು. ಕೊನೆಗೆ ವಾಯುಪಡೆಯ ಹೆಲಿಕಾಪ್ಟರ್ ಮೂಲಕ ಬೆಂಕಿಗೆ ನಂದಿಸುವ ಕಾರ್ಯಾಚರಣೆ ನಡೆಸಲಾಗಿತ್ತು.

    ಈ ಹಿನ್ನೆಲೆಯಲ್ಲಿ ಬಂಡೀಪುರದದಲ್ಲಿ ಈ ಬಾರಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಆಕಸ್ಮಿಕ ಬೆಂಕಿ ಬಿದ್ದರೂ ಹರಡದಂತೆ ಬೆಂಕಿ ರೇಖೆ ನಿರ್ಮಾಣ, ಬೆಂಕಿ ಬೀಳದಂತೆ ರಸ್ತೆಯ ಇಕ್ಕೆಲಗಳಲ್ಲಿ ವಾಟರ್ ಸ್ಪ್ರೇ ಮಾಡಿ ಹಸಿರು ಚಿಗುರುವಂತೆ ಮಾಡುವುದು, ಬೆಂಕಿ ಬಿದ್ದ ತಕ್ಷಣ ಅಧಿಕಾರಿಗಳ ಮೊಬೈಲ್‍ಗಳಿಗೆ ಎಚ್ಚರಿಕಾ ಸಂದೇಶ ರವಾನೆ, ಅರಣ್ಯ ಸಿಬ್ಬಂದಿಯ ನಿರಂತರ ಗಸ್ತು ಹೀಗೆ ಹತ್ತು ಹಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

  • ಬೆಂಗ್ಳೂರಿನಲ್ಲಿ ಓಡಾಡಿದ ಅಪರೂಪದ ಕೃಷ್ಣಮೃಗ

    ಬೆಂಗ್ಳೂರಿನಲ್ಲಿ ಓಡಾಡಿದ ಅಪರೂಪದ ಕೃಷ್ಣಮೃಗ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಅಪರೂಪದ ಕೃಷ್ಣಮೃಗ ರಸ್ತೆಯಲ್ಲಿ ಓಡಾಡಿ ಜನರನ್ನು ಅಚ್ಚರಿಗೊಳಿಸಿದೆ.

    ಎಂ.ಎಸ್ ಪಾಳ್ಯದ ರಸ್ತೆಯಲ್ಲಿ ಇಂದು ಮಧ್ಯಾಹ್ನ ಒಂದು ಕಾಲಲ್ಲಿ ಕೃಷ್ಣಮೃಗ ಕುಂಟುತ್ತಾ ಓಡಾಡಿದೆ. ಅಪರೂಪದ ಕೃಷ್ಣಮೃಗವನ್ನು ನೋಡಿದ ಜನ ಅದನ್ನು ಹಿಡಿದು ಶೆಡ್‍ನಲ್ಲಿಟ್ಟು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಪೊಲೀಸರ ಮಾಹಿತಿಯ ಮೇರೆಗೆ ಸ್ಥಳಕ್ಕೆ ಬಂದ ವನ್ಯಜೀವಿ ಸಂರಕ್ಷಕ ರಾಜೇಶ್ ಕೃಷ್ಣಮೃಗವನ್ನು ರಕ್ಷಿಸಿದ್ದಾರೆ. ಕಾಲಿಗೆ ಏಟಾಗಿದ್ದ ಕೃಷ್ಣಮೃಗವನ್ನು ಯಾರೋ ಭೇಟೆಯಾಡಿ ಬೆಂಗಳೂರಿಗೆ ತಂದಿರುವ ಶಂಕೆ ವ್ಯಕ್ತವಾಗಿದೆ. ಅದು ತಪ್ಪಿಸಿಕೊಂಡು ಬಂದಿದೆ ಎಂದು ವನ್ಯಜೀವಿ ಸಂರಕ್ಷಕ ಅಭಿಪ್ರಾಯ ಪಟ್ಟಿದ್ದಾರೆ. ಕೂಡಲೇ ಕೃಷ್ಣಮೃಗಾದ ಕಾಲಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಬನ್ನೇರುಘಟ್ಟಕ್ಕೆ ಶಿಫ್ಟ್ ಮಾಡಲಾಗಿದೆ.

  • ಬೃಹತ್ ಕಾಳಿಂಗ ಸರ್ಪ ಸೆರೆ – ನಿಟ್ಟುಸಿರು ಬಿಟ್ಟ ಕೂಲಿ ಕಾರ್ಮಿಕರು

    ಬೃಹತ್ ಕಾಳಿಂಗ ಸರ್ಪ ಸೆರೆ – ನಿಟ್ಟುಸಿರು ಬಿಟ್ಟ ಕೂಲಿ ಕಾರ್ಮಿಕರು

    ಚಿಕ್ಕಮಗಳೂರು: ಹದಿನೈದು ದಿನಗಳಿಂದ ನಿರಂತರವಾಗಿ ಕೂಲಿ ಕಾರ್ಮಿಕರಿಗೆ ಕಾಣಿಸಿಕೊಳ್ಳುವ ಮೂಲಕ ಭಯ ಹುಟ್ಟಿಸಿದ್ದ ಕಾಳಿಂಗ ಸರ್ಪವನ್ನು ಕೊನೆಗೂ ಕಾಫಿನಾಡಿನಲ್ಲಿ ಸೆರೆ ಹಿಡಿಯಲಾಗಿದೆ.

    ಜಿಲ್ಲೆಯ ಶೃಂಗೇರಿ ತಾಲೂಕಿನ ತೆಕ್ಕೂರು ಗ್ರಾಮದ ಮಹೇಶ್ ಕಾಫಿ ತೋಟದಲ್ಲಿ ಕಾಳಿಂಗ ಸರ್ಪವೊಂದು ಹದಿನೈದು ದಿನಗಳಿಂದ ನಿರಂತರವಾಗಿ ಕಾಣಿಸಿಕೊಳ್ಳುತಿತ್ತು. ಕಾಳಿಂಗನನ್ನ ಕಂಡ ಕೂಲಿ ಕಾರ್ಮಿಕರು ಕೆಲಸ ಮಾಡುವುದಕ್ಕೂ ಹಿಂದೇಟು ಹಾಕುತ್ತಿದ್ದರು. ಹೀಗಾಗಿ ತೋಟದ ಮಾಲೀಕ ಮಹೇಶ್ ಸ್ನೇಕ್ ಅರ್ಜುನ್ ಅವರಿಗೆ ಫೋನ್ ಮಾಡಿ ವಿಚಾರ ತಿಳಿಸಿದ್ದಾರೆ.

    ವಿಷಯ ತಿಳಿದು ಸ್ಥಳಕ್ಕೆ ಬಂದ ಅರ್ಜುನ್ ಸುಮಾರು ಒಂದು ಗಂಟೆಯ ಕಾರ್ಯಚರಣೆ ನಡೆಸಿ ಕಾಳಿಂಗನನ್ನ ಸೆರೆ ಹಿಡಿದಿದ್ದಾರೆ. ಜೊತೆಗೆ ಸೆರೆಯಾದ ಕಾಳಿಂಗನನ್ನ ಕಂಡು ಕೂಲಿ ಕಾರ್ಮಿಕರು ನಿಟ್ಟುಸಿರು ಬಿಟ್ಟಿದ್ದಾರೆ. ಕಾಳಿಂಗನನ್ನ ಸೆರೆ ಹಿಡಿದ ಅರ್ಜುನ್ ಕಾಳಿಂಗನ ಪಕ್ಕದಲ್ಲೇ ಕೂತು ನೀರು ಕುಡಿಸಿದ್ದಾರೆ.

    ಕಾಳಿಂಗ ಸರ್ಪ ಬಾಯಿ ಬಿಡುವುದನ್ನು ನೋಡಿ ಕೂಲಿ ಕಾರ್ಮಿಕರು ಭಯಪಟ್ಟಿದ್ದಾರೆ. ಆದರೆ ಅರ್ಜುನ್ ಧೈರ್ಯಕ್ಕೆ ಕಾರ್ಮಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಂತರ ಸೆರೆ ಹಿಡಿದಿದ್ದ ಕಾಳಿಂಗನನ್ನ ಅರ್ಜುನ್ ಸ್ಥಳಿಯ ಅರಣ್ಯಕ್ಕೆ ಬಿಟ್ಟಿದ್ದಾರೆ.

  • ನೈತಿಕತೆ ಗೆರೆ ಕಂಡರೂ ಕಾಣದಂತೆ ಯಡಿಯೂರಪ್ಪ ಜಾಣ ಕುರುಡು..!

    ನೈತಿಕತೆ ಗೆರೆ ಕಂಡರೂ ಕಾಣದಂತೆ ಯಡಿಯೂರಪ್ಪ ಜಾಣ ಕುರುಡು..!

    ರವೀಶ್ ಎಚ್‍ಎಸ್
    ರಾಜಕಾರಣದ ಪ್ರತಿ ಪದರದಲ್ಲೂ ಅಧಿಕಾರದ ರುಚಿ ಹತ್ತಿದೆ. ಅಧಿಕಾರ ಇಲ್ಲದಿದ್ದಾಗ ನೀರಿನಿಂದ ಹೊರ ಬಿದ್ದ ಮೀನಿನಂತೆ ವಿಲವಿಲ ಎಂದವರು ನೈತಿಕತೆ, ಮೌಲ್ಯಗಳ ಬಗ್ಗೆ ಮಾತನಾಡಿದ್ದು ಇದೆ. ಅದೇ ಅಧಿಕಾರ ಕುರ್ಚಿ ಸಿಕ್ಕ ಬಳಿಕ ಮೌಲ್ಯಗಳ ವರಸೆಯನ್ನೇ ಬದಲಿಸಿದ ರಾಜಕಾರಣಿಗಳ ಪಟ್ಟಿಯೂ ಉದ್ದವಿದೆ. ನೈತಿಕತೆ ಬಗ್ಗೆ ಮಾತನಾಡುವ ಹಕ್ಕು ಶೇಕಡಾ 5ರಷ್ಟು ರಾಜಕಾರಣಿಗಳ ಮಾತ್ರ ಇದೆ. ಆದರೆ ಉಳಿದವರು ಲಜ್ಜೆಗೆಟ್ಟ ಬಣ್ಣ ಬದಲಿಸುವ ಊಸರವಳ್ಳಿ ಜಾತಿಗೆ ಸೇರಿದವರು. ಮೂರು ದಶಕಗಳ ಹಿಂದೆ ರಾಜಕಾರಣದಲ್ಲಿ ಸ್ವಲ್ಪವಾದರೂ ನೈತಿಕ ಗೆರೆ ಇತ್ತು ಎನ್ನುವುದನ್ನು ಕೇಳಿದ್ದೇನೆ. ಈಗ ರೇಖೆ ಇದ್ದರೂ ತುಳಿದು, ಅಳಿಸಿ ಹಾಕಿ ಮುಂದೆ ಸಾಗುವ ಬಣ್ಣಗೇಡು ರಾಜಕಾರಣ. ಸದ್ಯ ನೈತಿಕತೆಯನ್ನು ಒತ್ತಿ ಹೇಳಿದ್ದಕ್ಕೆ ಕಾರಣ ಇದೆ. ಆರೋಪ ಮಾಡಿದ ಇಲಾಖೆಯನ್ನೇ ತಾಂಬೂಲ ಸಮೇತ ಒಬ್ಬ ಆರೋಪಿ ಕೈಗೆ ಕೊಟ್ಟರೆ ಏನಾಗಬಹುದು ಅನ್ನುವುದನ್ನು ಊಹಿಸುವುದು ಕಷ್ಟವೇನಲ್ಲ. ಆ ಆರೋಪ ಮಾಡಿರುವ ಇಲಾಖೆ ಅರಣ್ಯ ಇಲಾಖೆ. ಆ ಆರೋಪಿ ಸ್ಥಾನದಲ್ಲಿ ಇರುವವರು ಸಚಿವ ಆನಂದ್ ಸಿಂಗ್.

    ಅಕ್ರಮ ಗಣಿ ಬಿರುಗಾಳಿಯ ಧೂಳಿನಿಂದಲೇ ಯಡಿಯೂರಪ್ಪ ಸರ್ಕಾರ ಮಕಾಡೆ ಮಲಗಿ ಬಿಟ್ಟಿತ್ತು. ಅದಿರಿನ ಅಂದರ್ ಬಾಹರ್‌ಗೆ ಅದುರಿಹೋಗಿದ್ದರು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ. ಅಂತಹ ಆರದ ಗಾಯ ಮಾಡಿಕೊಂಡ ಯಡಿಯೂರಪ್ಪಗೆ ಸ್ವಲ್ಪಮಟ್ಟಿಗಾದರೂ ನೈತಿಕ ಗೆರೆ ಕಾಣಲಿಲ್ಲವಾ..? ಕಾಣುತ್ತಿಲ್ಲವಾ..? ಎಂಬ ಪ್ರಶ್ನೆ. ಬಹಳಷ್ಟು ರಾಜಕಾರಣಿಗಳ ಮೇಲೆ ಆರೋಪಗಳು ಬಂದಿವೆ. ಅದರಲ್ಲಿ ಎಲ್ಲವೂ ಸಾಬೀತಾಗಿಲ್ಲ. ಅದೇ ರೀತಿ ಎಲ್ಲವೂ ಖುಲಾಸೆಯೂ ಆಗಿಲ್ಲ. 15ಕ್ಕೂ ಹೆಚ್ಚು ಕೇಸ್‍ಗಳೂ ಇದ್ದರೂ ಸಚಿವ ಸ್ಥಾನ ನೀಡುವಾಗ, ಪ್ರಮಾಣವಚನ ತೆಗೆದುಕೊಂಡಾಗ ಆನಂದ್ ಸಿಂಗ್‍ರನ್ನ ಯಾರೂ ವಿರೋಧಿಸಿಲ್ಲ. ಅದನ್ನು ವಿರೋಧಿಸುವಷ್ಟು ನೈತಿಕತೆಯನ್ನ ಯಾವ ರಾಜಕಾರಣಿಯೂ, ಯಾವ ಪಕ್ಷವೂ ಉಳಿಸಿಕೊಂಡಿಲ್ಲ. ಆದರೆ ಒಂದು ವ್ಯಾಪ್ತಿಯೊಳಗೆ ಆರೋಪಕ್ಕೆ ಒಳಗಾದವರು ಅದೇ ವ್ಯಾಪ್ತಿಯನ್ನ ಅಧಿಕಾರದ ತೆಕ್ಕೆಗೆ ತೆಗೆದುಕೊಳ್ಳುವುದು ನೈತಿಕತೆಯೇ ಅನ್ನೋ ಪ್ರಶ್ನೆ. ಇದಕ್ಕಾದರೂ ಮುಖ್ಯಮಂತ್ರಿಗಳು ಉತ್ತರಿಸಬೇಕು. ಮುಖ್ಯಮಂತ್ರಿ ಅಷ್ಟೇ ಅಲ್ಲ ಆರೋಪಿ ಸ್ಥಾನದಲ್ಲಿ ನಿಂತವರಿಗೂ ಸ್ವಲ್ಪವಾದರೂ ಅನ್ನಿಸಿಬಿಡಬೇಕು.

    ಅಂದಹಾಗೆ ಈಗಿನ ರಾಜಕಾರಣಿಗಳಿಗೆ ನಮ್ಮ ರಾಜ್ಯದ ರಾಜಕಾರಣದ ಇತಿಹಾಸ ಪೂರ್ಣವಾಗಿ ಗೊತ್ತಾ ಎಂಬ ಪ್ರಶ್ನೆಗೆ ಗೊತ್ತಿರಲ್ಲ ಅಂತಾ ದೊಡ್ಡ ಧ್ವನಿಯಲ್ಲಿ ಹೇಳಬಹುದು. ಈ ಹಿಂದೆ ನಡೆದಿರುವ ಎರಡ್ಮೂರು ಪ್ರಕರಣಗಳನ್ನಾದರೂ ಅವರು ತಿಳಿದುಕೊಳ್ಳಬೇಕು. ತಿಳಿದವರು ನೆನಪಿಸಿಕೊಳ್ಳಬೇಕು. ಅದು 1952ರಲ್ಲಿ ಮೈಸೂರು ರಾಜ್ಯದ ಅಧಿಕಾರ ಸೂತ್ರ ಹಿಡಿದಿದ್ದ ಪ್ರಪ್ರಥಮ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ. ಕೆಂಗಲ್ ಹನುಮಂತಯ್ಯ ಅವರ ಸಂಪುಟದಲ್ಲಿ ಸ್ವಾತಂತ್ರ ಹೋರಾಟಗಾರ ಟಿ.ಸಿದ್ದಲಿಂಗಯ್ಯ ಕೈಗಾರಿಕಾ ಮತ್ತು ವಿದ್ಯುತ್ ಖಾತೆ ಸಚಿವರಾಗಿದ್ದರು. ಆಗ ಸಿದ್ದಲಿಂಗಯ್ಯ ಅವರ ಮೇಲೆ ತಾಮ್ರದ ತಂತಿ ಸಾಗಾಣಿಕೆ ಗುತ್ತಿಗೆಯನ್ನ ಅವರ ಸಹೋದರನ ಕಂಪನಿಗೆ ಕೊಟ್ಟಿದ್ದು, ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಪ್ರತಿಧ್ವನಿಸಿತ್ತು. ನನ್ನ ಸಹೋದರ ಆರಂಭದಲ್ಲಿ ಕಂಪನಿಯ ಪಾಲುದಾರನಾಗಿದ್ದ, ಗುತ್ತಿಗೆ ನೀಡುವಾಗ ಹೊರ ಬಂದಿದ್ದಾನೆ. ಆದರೂ ನನ್ನ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆಂದು ಸಿದ್ದಲಿಂಗಯ್ಯ ಘೋಷಣೆ ಮಾಡಿದ್ರು. ಆದರೆ ರಾಜೀನಾಮೆ ಕೊಟ್ಟ ಬಳಿಕವೂ ಮತ್ತೆ ಸಂಪುಟಕ್ಕೆ ಕೆಂಗಲ್ ಹನುಮಂತಯ್ಯ ಆಹ್ವಾನಿಸಿದರೂ ಸಿದ್ದಲಿಂಗಯ್ಯ ಸಂಪುಟ ಸೇರಲು ನಿರಾಕರಿಸಿದ್ದರು.

    ಇದರ ಜೊತೆಗೆ ಕೆಂಗಲ್ ಹನುಮಂತಯ್ಯ ಅವರ ರಾಜೀನಾಮೆ ಘಟನೆಯನ್ನು ಈಗಿನ ರಾಜಕಾರಣಿಗಳು ನೆನಪಿಸಿಕೊಳ್ಳಬೇಕು. ವಿಧಾನಸೌಧದ ನಿರ್ಮಾಣ ವೆಚ್ಚ ಹೆಚ್ಚಳ ಆಗಿದ್ದಕ್ಕೆ ಕೆಂಗಲ್ ಹನುಂತಯ್ಯ ಅವರ ಮೇಲೆ ಭ್ರಷ್ಟಾಚಾರ ಆರೋಪ ಕೇಳಿಬಂದಿತ್ತು. ನಾಗಪುರದ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಯಿತು. ತನಿಖಾ ಸಂಸ್ಥೆ ತಪ್ಪಿತಸ್ಥರು ಎಂದು ಹೇಳಿತ್ತು. ವಿಧಾನಸಭೆಯಲ್ಲಿ ಕೆಂಗಲ್ ಹನುಮಂತಯ್ಯ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಆಯಿತು. ಆರೋಪದಿಂದ ಬೇಸತ್ತ ಕೆಂಗಲ್ ಹನುಮಂತಯ್ಯ ರಾಜೀನಾಮೆ ನೀಡಿದ್ರು. ತಾವೇ ಕಟ್ಟಿಸಿದ ವಿಧಾನಸೌಧದಲ್ಲಿ ಕೂರಲು ಆಗಲಿಲ್ಲ ಅಂದರೆ, ಆಗಿನ ರಾಜಕಾರಣದಲ್ಲಿ ನೈತಿಕತೆ ಎಷ್ಟಿತ್ತು ಅನ್ನುವುದನ್ನ ಊಹಿಸಿಕೊಳ್ಳಿ. ಮಧುಗಿರಿ ಪೊಲೀಸ್ ದೌರ್ಜನ್ಯ ಪ್ರಕರಣದಲ್ಲಿ ನಿಜಲಿಂಗಪ್ಪ ಸಂಪುಟದಲ್ಲಿ ಗೃಹ ಸಚಿವರಾಗಿದ್ದ ರಾಮರಾವ್ ರಾಜೀನಾಮೆ ಪ್ರಕರಣ, ಟೆಲಿಫೋನ್ ಕದ್ದಾಲಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಮಕೃಷ್ಣ ಹೆಗಡೆ ರಾಜೀನಾಮೆ ಪ್ರಕರಣಗಳು ನಮ್ಮ ರಾಜ್ಯದಲ್ಲಿ ನಡೆದು ಹೋಗಿವೆ. ಈ ಎಲ್ಲ ವಿಚಾರಗಳು ಮಾಗಿದ ರಾಜಕಾರಣಿ ಯಡಿಯೂರಪ್ಪ ಅವರಿಗೆ ತಿಳಿದಿದೆ. ಆದರೆ ಆರೋಪ ಮಾಡಿರುವ ಅರಣ್ಯ ಇಲಾಖೆಯ ಖಾತೆಯನ್ನು ಸ್ವೀಕರಿಸಿ ಅಧಿಕಾರವಹಿಸಿಕೊಂಡ ಸಂಪುಟ ದರ್ಜೆ ಸಚಿವ ಆನಂದ ಸಿಂಗ್‍ಗೆ ಗೊತ್ತಿದೆ ಅಂತಾ ನಾನಂತೂ ಭಾವಿಸಿಲ್ಲ.

    ಇಷ್ಟೆಲ್ಲ ರಾಜಕಾರಣವನ್ನ ಅರೆದು ಕುಡಿದಿರುವ ಯಡಿಯೂರಪ್ಪ ನೈತಿಕತೆಯ ಗೆರೆಯನ್ನ ಕಂಡರೂ ಕಾಣದಂತೆ ಜಾಣ ಕುರುಡು ಪ್ರದರ್ಶಿಸಿದ್ದಾರೆ. ಆ ಸಂಪುಟ ವಿಸ್ತರಣೆ ಬಳಿಕ ಖಾತೆ ಹಂಚಿಕೆಗೆ ಸಾಕಷ್ಟು ಸಮಯವನ್ನ ತೆಗೆದುಕೊಂಡ್ರು. ಹೈಕಮಾಂಡ್ ಮುದ್ರೆಯೊಂದಿಗೆ ಖಾತೆ ಹಂಚಿಕೆ ಆಗುತ್ತೆ ಎಂಬೆಲ್ಲ ಕುತೂಹಲಕ್ಕೆ ಯಡಿಯೂರಪ್ಪ ಅಚ್ಚರಿ ತೆರೆ ಎಳೆದರು. ಖಾತೆ ಹಂಚಿಕೆಯನ್ನ ನಾನೇ ಮಾಡಿದ್ದೇನೆ ಅಂತಾ ಸಾರುವ ಕೆಲಸವೂ ನಡೆಯಿತು. ಆಗ ಯಾವುದೇ ವಿವಾದವಿಲ್ಲದೆ ಖಾತೆ ಹಂಚಿಕೆ ಮಾಡಿ ಜಾಣತನ ಪ್ರದರ್ಶಿಸಿದ ಯಡಿಯೂರಪ್ಪ ಅಂತಾ ಹೊಗಳಿಸಿಕೊಂಡರು. ಆದ್ರೆ ಬಿ.ಸಿ.ಪಾಟೀಲ್‍ಗೆ ಕೃಷಿ ಖಾತೆಯನ್ನ ಬದಲಾಯಿಸಲು ಹೋಗಿ ಆನಂದ ಸಿಂಗ್‍ಗೆ ಅರಣ್ಯ ಕೊಟ್ಟು ಯಡಿಯೂರಪ್ಪ ಕೋಲು ಕೊಟ್ಟು ಹೊಡೆಸಿಕೊಂಡಿದ್ದಾರೆ. ರಾಷ್ಟ್ರಮಟ್ಟದಲ್ಲಿ ವಿವಾದ ಸದ್ದು ಮಾಡುತ್ತಿದೆ. ಕಳ್ಳನ ಕೈಗೆ ಕೀಲಿಕೈ ಕೊಟ್ಟಿದ್ದಾರೆ ಅಂತಾ ಕಾಂಗ್ರೆಸ್ ಟೀಕಿಸುತ್ತಿದೆ. ಆನಂದ ಸಿಂಗ್ ಅವರಂತೂ ನೇರ ಆರೋಪ-ಗುಂಪು ಆರೋಪಗಳೆಂದು ತಕ್ಕಡಿಯಲ್ಲಿ ಹಾಕಿ ನಿಂತಿದ್ದಾರೆ. ವಿವಾದ ಪೆಟ್ಟು ತಿಂದ ಮೇಲಾದರೂ ಬದಲಾಗುತ್ತಾರಾ ಯಡಿಯೂರಪ್ಪ..? ಆರೋಪ ಮಾಡಿದವರ ಮೇಲೆ ಅಧಿಕಾರ ನಡೆಸುವುದು ಸಲ್ಲದು ಎಂದು ಆನಂದ ಸಿಂಗ್ ಖಾತೆ ಬಿಟ್ಟು ಹೊರಬರುತ್ತಾರಾ..? ಈ ಪ್ರಶ್ನೆಗಳಿಗೆ ಕಾಲವೇ ಉತ್ತರಿಸಲಿದೆ.

    ಹೂಚೆಂಡು: ವಿಧಾನಸೌಧದಲ್ಲಿ ಆಗಾಗ್ಗೆ ಗಾಳಿಪಟಗಳು ಹಾರಾಡುತ್ತಿರುತ್ತವೆ. ಖಾತೆ ಹಂಚಿಕೆ ಕುತೂಹಲದ ದಿನಗಳಲ್ಲಿ ವಿಧಾನಸೌಧದಲ್ಲಿ ಒಂದಷ್ಟು ಗಾಳಿಪಟಗಳು ಹಾರಾಡುತ್ತಿದ್ದವು. ಒಂದು ಗಾಳಿಪಟ ಹಾರಾಟ ಮಾತ್ರ ಅಚ್ಚರಿ ಮೂಡಿಸಿತ್ತು. ಆನಂದ ಸಿಂಗ್‍ಗೆ ಗಣಿ ಮತ್ತು ಭೂ ವಿಜ್ಞಾನ ಖಾತೆ ಕೊಡುತ್ತಾರೆ ಅನ್ನೋದು ಆ ಗಾಳಿಪಟದ ವಿಶೇಷ ಆಗಿತ್ತು. ಆ ಹಾರಾಟ ನೋಡಿದವರು ಮುಂದೇನು ಕೇಡುಗಾಲ ಬರುತ್ತೋ ಅಂತಾ ಮುಸಿಮುಸಿ ನಗುತ್ತಿದ್ದರು.

  • ದೇವರಾಯನದುರ್ಗ ಅರಣ್ಯ ಪ್ರದೇಶದಲ್ಲಿ ಅತಿ ಅಪರೂಪದ ಪಕ್ಷಿ ಪತ್ತೆ

    ದೇವರಾಯನದುರ್ಗ ಅರಣ್ಯ ಪ್ರದೇಶದಲ್ಲಿ ಅತಿ ಅಪರೂಪದ ಪಕ್ಷಿ ಪತ್ತೆ

    ತುಮಕೂರು: ಜಿಲ್ಲೆಯ ದೇವರಾಯನದುರ್ಗ ಅರಣ್ಯ ಪ್ರದೇಶದಲ್ಲಿ ಅತಿ ಅಪರೂಪದ ‘ಏಷ್ಯನ್ ಪ್ಯಾರಡೈಸ್ ಫ್ಲೈ ಕ್ಯಾಚರ್’ ಪಕ್ಷಿ ಪತ್ತೆಯಾಗಿದ್ದು, ಅಚ್ಚರಿ ಮೂಡಿಸಿದೆ.

    ಏಷ್ಯನ್ ಪ್ಯಾರಡೈಸ್ ಫ್ಲೈ ಕ್ಯಾಚರ್ ಇದು ತನ್ನ ಉದ್ದನೆಯ ಬಾಲದಿಂದಲೇ ಗಮನ ಸೆಳೆಯುವ ಸುಂದರ ಹಕ್ಕಿ Asian Paradise Flycatcher (ಬಾಲದಂಡೆ). ಇದು ಏಷ್ಯಾಖಂಡದ ಪಕ್ಷಿ. ಇದಕ್ಕೆ ಇಂಗ್ಲಿಷ್‍ನಲ್ಲಿ ಏಷ್ಯನ್ ಪ್ಯಾರಡೈಸ್ ಫ್ಲೈಕ್ಯಾಚರ್ ಎಂದು, ಸಂಸ್ಕೃತದಲ್ಲಿ ಅರ್ಜುನಕ ಎಂದು ಕರೆಯುತ್ತಾರೆ. ಉದ್ದನೆಯ ಬಾಲವೇ ಈ ಹಕ್ಕಿಯ ಪ್ರಮುಖ ಆಕರ್ಷಣೆ. ಹೀಗಾಗಿಯೇ ಇವುಗಳಿಗೆ ಬಾಲದಂಡೆ ಎನ್ನುತ್ತಾರೆ.

    ಗಂಡು ಹಕ್ಕಿ ಹೆಣ್ಣಿಗಿಂತ ಬಹಳ ಸುಂದರ. ಗಂಡು ಹಕ್ಕಿಯ ಬಾಲವು ಸುಮಾರು 24 ರಿಂದ 40 ಸೆ.ಮೀ ನಷ್ಟು ಉದ್ದವಾಗಿರುತ್ತದೆ. ಆದರೆ ಹೆಣ್ಣು ಹಕ್ಕಿ ಸರ್ವೇ ಸಾಧಾರಣವಾದ ಚಿಕ್ಕ ಬಾಲ ಹೊಂದಿರುತ್ತದೆ. ಹಾರಾಡುವಾಗ ಉದ್ದನೆಯ ಬಿಳಿಗರಿಗಳು ಗಾಳಿಪಟದ ಬಾಲಂಗೋಚಿಯಂತೆ ಕಾಣುತ್ತವೆ. ಇದರ ಬಾಲ ಉದ್ದವಿದ್ದರೂ ದೇಹ ಗುಬ್ಬಿಯಷ್ಟೇ ಚಿಕ್ಕದಿರುತ್ತದೆ. ಇವುಗಳ ದೇಹ ಕೇವಲ 18ರಿಂದ 21 ಸೆ.ಮೀ ನಷ್ಟು ಉದ್ದವಿರುತ್ತದೆ. ಗಂಡು ಹಕ್ಕಿಯ ಬಾಲ ಹೆಚ್ಚು ಉದ್ದವಿದ್ದಷ್ಟೂ ಹೆಣ್ಣಿಗೆ ಇಷ್ಟ. ಗಂಡಿನ ಉದ್ದನೆಯ ಬಾಲವನ್ನು ನೋಡಿಯೇ ಹೆಣ್ಣು ಹಕ್ಕಿ ಮೋಹಗೊಳ್ಳುತ್ತದೆ.

    ಬಾಲದಂಡೆ ಹಕ್ಕಿಗಳಲ್ಲಿ ಪ್ರಮುಖವಾಗಿ 2 ಜಾತಿಗಳಿವೆ. ಒಂದು ಕಡು ನೀಲಿ ತಲೆಯ ನಸುಗೆಂಪು ಬಣ್ಣದ ಹಕ್ಕಿ. ಇನ್ನೊಂದು ಕಪ್ಪು ತಲೆಯ ಸಂಪೂರ್ಣ ಬಿಳಿ ಮೈ ಹೊಂದಿರುವ ಹಕ್ಕಿ. ಬಾಲದಂಡೆಯಲ್ಲಿನ ನೀಲಿ ಬಣ್ಣದ ಇನ್ನೊಂದು ಪ್ರಭೇದ ಫಿಲಿಫೈನ್ಸ್ ನಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಭಾರತದಲ್ಲಿ ಈ ಹಕ್ಕಿ ‘ರಾಜ ಹಕ್ಕಿ’ ಎಂದು ಕರೆಸಿಕೊಂಡಿದೆ. ಬಾಲದಂಡೆಗಳಲ್ಲಿ ನಸುಗೆಂಪು ಬಣ್ಣದ ಹಕ್ಕಿ ವಲಸೆ ಹೋಗುವುದಿಲ್ಲ. ಆದರೆ ಬಿಳಿ ಬಣ್ಣದ ಪಕ್ಷಿ ಚಳಿಗಾಲದ ಪ್ರಾರಂಭದಲ್ಲಿ ಶ್ರೀಲಂಕಾದಿಂದ ಭಾರತಕ್ಕೆ ವಲಸೆ ಬರುತ್ತದೆ. ಮಳೆಗಾಲ ಆರಂಭವಾಗುತ್ತಿದ್ದಂತೆ ಹಿಂದಿರುಗುತ್ತವೆ.

  • ಜಿಂಕೆ ಪ್ರಾಣ ಉಳಿಸಲು ಹೋಗಿ ಪ್ರಾಣ ತೆತ್ತ ಶಿಕ್ಷಕ

    ಜಿಂಕೆ ಪ್ರಾಣ ಉಳಿಸಲು ಹೋಗಿ ಪ್ರಾಣ ತೆತ್ತ ಶಿಕ್ಷಕ

    ತುಮಕೂರು: ಚಲಿಸುತ್ತಿದ್ದ ಬೈಕ್‍ಗೆ ಅಡ್ಡ ಬರುತ್ತಿದ್ದ ಜಿಂಕೆಯನ್ನು ರಕ್ಷಿಸಲು ಹೋಗಿ ಶಿಕ್ಷಕರೊಬ್ಬರು ಮೃತಪಟ್ಟ ಘಟನೆ ಶಿರಾ ತಾಲೂಕಿನ ಕ್ಯಾದಿಗುಂಟೆ ಗ್ರಾಮದಲ್ಲಿ ನಡೆದಿದೆ.

    ಬರಗೂರು ರಂಗಾಪುರ ಗ್ರಾಮದ ಶಿಕ್ಷಕ ರಾಜಣ್ಣ (54) ಮೃತ ದುರ್ದೈವಿ. ರಾಜಣ್ಣ ಅವರು ಭಾನುವಾರ ತಡರಾತ್ರಿ ಶಿರಾ ಪಟ್ಟಣದಿಂದ ಊರಿಗೆ ಹೋಗುತ್ತಿದ್ದಾಗ ದಾರಿ ಮಧ್ಯೆ ದುರ್ಘಟನೆ ಸಂಭವಿಸಿದೆ. ರಾಜಣ್ಣ ಅವರು ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದರು. ಅವರ ಸಾವಿನ ಸುದ್ದಿ ಕೇಳಿ ಹಿತೈಷಿಗಳು, ವಿದ್ಯಾರ್ಥಿಗಳು ಕಂಬನಿ ಮಿಡಿದಿದ್ದಾರೆ.

    ಘಟನೆ ಸಂಬಂಧ ಪಟ್ಟನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕ್ಯಾದಿಗುಂಟೆ ಗ್ರಾಮದ ಅರಣ್ಯ ಪ್ರದೇಶದಲ್ಲಿ ಜಿಂಕೆಗಳು ಹೆಚ್ಚಾಗಿದ್ದು, ರಾತ್ರಿ ವೇಳೆ ರಸ್ತೆ ಗಿಳಿಯುತ್ತವೆ. ಹಾಗಾಗಿ ಇಂಥಹ ಅಪಘಾತಗಳು ನಡೆಯುತ್ತಿವೆ. ಅರಣ್ಯ ಇಲಾಖೆಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

  • ಸ್ವಿಮ್ಮಿಂಗ್ ಪೂಲ್‍ನಲ್ಲಿ ನಾಗರಹಾವು ಪ್ರತ್ಯಕ್ಷ

    ಸ್ವಿಮ್ಮಿಂಗ್ ಪೂಲ್‍ನಲ್ಲಿ ನಾಗರಹಾವು ಪ್ರತ್ಯಕ್ಷ

    ಚಿಕ್ಕಬಳ್ಳಾಪುರ: ನಗರದ ಸರ್.ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿನ ಅಂತರಾಷ್ಟ್ರೀಯ ಮಟ್ಟದ ಈಜುಕೊಳದಲ್ಲಿ ನಾಗರಹಾವು ಪ್ರತ್ಯಕ್ಷವಾಗಿದೆ.

    ಜಿಲ್ಲಾ ಕೇಂದ್ರದ ಸರ್.ಎಂ.ವಿ. ಕ್ರೀಡಾಂಗಣದಲ್ಲಿ ಅಂತರಾಷ್ಟ್ರೀಯ ಸ್ವಿಮ್ಮಿಂಗ್ ಪೂಲ್‍ನಲ್ಲಿ ನಾಗರಹಾವು ಪ್ರತ್ಯಕ್ಷವಾಗಿದೆ. ಅದನ್ನು ನೋಡಿದ ಅಧಿಕಾರಿಗಳು ತಕ್ಷಣ ಉರಗರಕ್ಷಕ ಸ್ನೇಕ್ ಪೃಥ್ವಿರಾಜ್ ಗೆ ಫೋನ್ ಮಾಡಿ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ನಾಗರಹಾವನ್ನು ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿದ್ದಾರೆ.

    ಅಂತರಾಷ್ಟ್ರೀಯ ಸ್ವಿಮ್ಮಿಂಗ್ ಸ್ಪರ್ಧೆಗಳ ಆಯೋಜನೆಗಾಗಿ ರಾಜ್ಯ ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡಿ 2012 ರಲ್ಲಿ ಈ ಸ್ವಿಮ್ಮಿಂಗ್ ಪೂಲ್ ನಿರ್ಮಾಣ ಮಾಡಿದೆ. ಅಂದಹಾಗೆ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಅಧಿಕಾರಿಗಳು ಈಜುಕೊಳದ ನಿರ್ವಹಣೆ ಮಾಡುತ್ತಿದ್ದಾರೆ. ಆದರೆ ಬರದನಾಡು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನೀರಿನ ಅಭಾವವಿದೆ. ಹೀಗಾಗಿ ಇರೋ ಏಕೈಕ ಬೋರ್ ವೆಲ್‍ನಿಂದ ವಸತಿ ನಿಲಯ ಹಾಗೂ ಕಚೇರಿಗಳ ಬಳಕೆಗೆ ನೀರು ಬಳಸಿಕೊಳ್ಳುತ್ತಿದ್ದು, ಈಜುಕೊಳಕ್ಕೆ ನೀರಿನ ಅಭಾವ ಕಾಡುತ್ತಿದೆ.

    ಕೇವಲ ಬೇಸಿಗೆಯಲ್ಲಿ ಅಷ್ಟೇ ಸಾರ್ವಜನಿಕರ ಒತ್ತಯದಿಂದ ಈಜುಕೊಳ ಕಾರ್ಯನಿರ್ವಹಿಸುತ್ತಿದೆ. ಹೀಗಾಗಿ ಬೇಸಿಗೆಯಲ್ಲಿ ಮಾತ್ರ ಆರಂಭವಾಗುವ ಈ ಈಜುಕೊಳ ಉಳಿದ ದಿನಗಳಲ್ಲಿ ಸಮರ್ಪಕ ನಿರ್ವಹಣೆ ಇಲ್ಲದೆ ಸೊರಗಿ ಹೋಗುತ್ತಿದೆ. ಈಜುಕೊಳದ ಸುತ್ತಮುತ್ತಲೂ ಗಿಡ ಗಂಟೆಗಳು ಬೆಳೆದು ಹಾವುಗಳ ಆವಾಸ ಸ್ಥಾನವಾಗುತ್ತಿವೆ. ಈ ಹಿಂದೆಯೇ ಪೃಥ್ವಿರಾಜ್ ಎರಡು ಮೂರು ಬಾರಿ ಹಾವುಗಳನ್ನ ಸೆರೆಹಿಡಿದಿದ್ದರು.

    ಕ್ರೀಡಾಂಗಣದ ಸುತ್ತಲೂ ಮೊದಲು ಯಾವುದೇ ಮನೆ-ಕಟ್ಟಡಗಳಿರಲಿಲ್ಲ. ಈಗ ಸುತ್ತಲೂ ಕಟ್ಟಡಗಳಾಗಿವೆ. ಹೀಗಾಗಿ ಕ್ರೀಡಾಂಗಣದಲ್ಲಿ ಜನ ಓಡಾಟ ಇರುವ ಕಾರಣ ಹಾವುಗಳು ಜನ ಓಡಾಡದಂತಹ ಹಾಗೂ ಇಲಿ ಸೇರಿದಂತೆ ಆಹಾರ ಸಿಗುವ ಜಾಗಗಳನ್ನ ಹುಡುಕಿಕೊಂಡು ಇಲ್ಲಿ ಸೇರಿಕೊಂಡಿರಬಹದು. ಸದ್ಯ ಮರಳಿ ಈಜುಕೊಳ ಆರಂಭ ಮಾಡಲು ಮುಂದಾಗಿರುವ ಇಲಾಖೆ ಈಗ ಈಜುಕೊಳಕ್ಕೆ ನೀರು ತುಂಬುವ ಕಾಯಕ ಮಾಡುತ್ತಿದೆ. ಕೆಲವು ದಿನಗಳಲ್ಲಿ ಸಾರ್ವಜನಿಕರಿಗೆ ಈಜಾಡಲು ಅವಕಾಶ ಸಿಗಲಿದೆ ಎಂದು ಅಧಿಕಾರಿಗಳು ತಿಳಿಸಿದರು.

  • ವಿಷ ಸರ್ಪಗಳ ರಕ್ಷಣೆ ಮಾಡುತ್ತಿದ್ದಾಳೆ 12 ವರ್ಷದ ಪೋರಿ

    ವಿಷ ಸರ್ಪಗಳ ರಕ್ಷಣೆ ಮಾಡುತ್ತಿದ್ದಾಳೆ 12 ವರ್ಷದ ಪೋರಿ

    – ಈಕೆ ಹಿಡಿಯುವ ಹಾವು ನೋಡಿದ್ರೆ ಮೈ ಝಲ್ ಎನ್ನುತ್ತೆ

    ಕಾರವಾರ: ಹಾವು ಎಂದ್ರೆ ಎಂಥವರಿಗೂ ಭಯ. ಆದರೆ ಇಲ್ಲೊಬ್ಬ ಪುಟ್ಟ ಬಾಲಕಿಗೆ ಹಾವು ಅಂದ್ರೆ ಪಂಚಪ್ರಾಣ. ಕಾರ್ಕೋಟಕ ವಿಷದ ಹಾವನ್ನು ಸಹ ಮುದ್ದಿಸುವ ಈ ಬಾಲಕಿ ಹಾವುಗಳ ರಕ್ಷಣೆಗೆ ನಿಂತಿದ್ದಾಳೆ. ಅಷ್ಟಕ್ಕೂ ಈ ಬಾಲಕಿ ಯಾರು ಅವಳ ಕೆಲಸವೇನು ಎಂದು ಕೇಳಿದ್ರೆ ಎಲ್ಲರೂ ಬೆಚ್ಚಿ ಬೀಳೋದು ಗ್ಯಾರಂಟಿ.

    ಯಾರದ್ದೇ ಮನೆಗೆ ಹಾವು ನುಗ್ಗಲಿ, ಇಲ್ಲವೇ ಹಾವೇ ತೊಂದರೆಯಲ್ಲಿರಲಿ ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಆವರ್ಸಾ ಗ್ರಾಮದ 12 ವರ್ಷದ ಪುಟ್ಟ ಬಾಲಕಿ ಭೂಮಿಕಾ, ಕೈಯಲ್ಲಿ ಸ್ಟಿಕ್ ಹಿಡಿದು ವಿಷ ಸರ್ಪವನ್ನು ತನ್ನ ಕೈಯಲ್ಲಿ ಹಿಡಿದು ರಕ್ಷಿಸುತ್ತಾಳೆ.

    ಈ ಊರಿನ ಸುತ್ತಮುತ್ತ ಯಾರ ಮನೆಗೆ ಹಾವು ಬರಲಿ ಮೊದಲು ಫೋನು ಹೋಗುವುದು ಇವರ ಮನೆಗೆ. ತಂದೆ ಮಹೇಶ್ ನಾಯ್ಕ ಉರುಗತಜ್ಞರಾಗಿದ್ದು, ಹಾವಿಗಳ ರಕ್ಷಣೆ ಮಾಡುತ್ತಾರೆ. ತಂದೆಯನ್ನು ನೋಡಿ ಹಾವುಗಳನ್ನು ಹಿಡಿಯುವುದನ್ನು ಕಲಿತ ಈ ಪುಟ್ಟ ಬಾಲಕಿ ಈಗ ತಮ್ಮ ಊರಿನ ಸುತ್ತಮುತ್ತ ಯಾವುದೇ ಹಾವು ಬರಲಿ ಅವುಗಳನ್ನು ರಕ್ಷಿಸಿ ಕಾಡಿಗೆ ಬಿಡುವ ಕೆಲಸ ಮಾಡುತ್ತಿದ್ದಾಳೆ. ಹಾವುಗಳ ಜೊತೆ ಪ್ರೀತಿ ಬೆಳಸಿಕೊಂಡಿರುವ ಈ ಪುಟ್ಟ ಬಾಲಕಿ 50 ಕ್ಕೂ ಹೆಚ್ಚು ವಿಷಸರ್ಪ, ಹೆಬ್ಬಾವುಗಳನ್ನು ರಕ್ಷಣೆ ಮಾಡಿ ತಾನೇ ಸ್ವತಃ ಕಾಡಿಗೆ ಬಿಟ್ಟು ಬಂದಿದ್ದಾಳೆ.

    ಮನೆಯಲ್ಲಿ ನೀನು ಹುಡಗಿ ಹಾಗೆಲ್ಲ ಹಾವು ಹಿಡಿಯಬಾರದು ಎಂದು ಈಕೆಗೆ ತಿಳಿಹೇಳಿ ವಿಷ ಸರ್ಪಗಳನ್ನು ಹಿಡಿಯಬೇಡ ಎನ್ನುತ್ತಾರೆ. ಆದರೂ ಈಕೆ ಮನೆಗೆ ನುಗ್ಗಿ ಬರುವ ಹಾವುಗಳನ್ನು ತಾನೇ ಹಿಡಿದು ರಕ್ಷಣೆ ಮಾಡಿ ಕಾಡಿಗೆ ಬಿಟ್ಟುಬರುತ್ತಾಳೆ. ಹಾವು ಅಂದರೆ ನನಗೆ ಇಷ್ಟ. ಅಪ್ಪ ಹಾವನ್ನು ಹಿಡಿದು ರಕ್ಷಣೆ ಮಾಡುವುದನ್ನು ನೋಡಿ ಹಾವು ಹಿಡಿಯುವುದನ್ನು ಕಲಿತಿದ್ದೇನೆ. ಎಲ್ಲಾತರದ ಹಾವು ಹಿಡಿಯುತ್ತೇನೆ ಎಂದು ಭೂಮಿಕ ಹೇಳಿದ್ದಾಳೆ.

    ಆವರ್ಸಾದ ಸುತ್ತಮುತ್ತಲೂ ದಟ್ಟ ಕಾಡುಗಳಿವೆ. ಹೀಗಾಗಿ ಈ ಕಾಡಿನಿಂದ ಆಹಾರ ಅರಸಿ ನಾಡಿಗೆ ವಿಷಸರ್ಪಗಳು ಲಗ್ಗೆ ಇಡುತ್ತವೆ. ಇಂತಹ ಸಂದರ್ಭದಲ್ಲಿ ಜನರು ಭಯ ಪಟ್ಟು ಹಾವನ್ನು ಕೊಲ್ಲುತಿದ್ದರು. ಆದರೆ ಈಗ ಈ ಬಾಲಕಿ ಹಾವನ್ನು ಹಿಡಿಯುವುದನ್ನು ನೋಡಿ ಜನರಲ್ಲೂ ಭಯ ಮಾಯವಾಗಿದೆ. ತಮ್ಮ ಮನೆಗಳಿಗೆ ಹಾವು ಬಂದರೆ ಸುತ್ತಮುತ್ತಲ ಊರಿನ ಜನ ಈ ಬಾಲಕಿಗೆ ಫೋನ್ ಮಾಡುತ್ತಾರೆ. ಕೈಯಲ್ಲಿ ಸ್ಟಿಕ್ ಹಾಗೂ ಚೀಲ ಹಿಡಿದು ಹೊರಡುವ ಈ ಪೋರಿ ಎಂಥ ಗಟ ಸರ್ಪವನ್ನೂ ಅಳಕಿಲ್ಲದೇ ಕ್ಷಣಮಾತ್ರದಲ್ಲಿ ಹಿಡಿದು ಹಾವುಗಳನ್ನು ಕಾಡಿಗೆ ಬಿಟ್ಟು ಬರುತ್ತಾಳೆ. ಜೊತೆಗೆ ಜನರಿಗೂ ಹಾವನ್ನು ಕೊಲ್ಲಬೇಡಿ ಎಂದು ತಿಳಿಹೇಳಿ ಬರುವುದು ಈಕೆಯ ಹಾವಿನ ಮೇಲಿರುವ ಪ್ರೀತಿಯನ್ನು ತೋರಿಸುತ್ತದೆ. ಹೀಗಾಗಿ ನಮಗೂ ಖುಷಿ ಆಗುತ್ತೆ ನಾವೂ ಏನೇ ಇದ್ರು ಈ ಹುಡುಗಿಯನ್ನು ಕರೆಯುತ್ತೇವೆ ಎಂದು ಸ್ಥಳೀಯರು ಹೇಳುತ್ತಾರೆ.