Tag: forest

  • ಕಾಡಾನೆ ಓಡಿಸುವಾಗ ಬಂದೂಕಿನಿಂದ ಹಾರಿದ ಗುಂಡು ತಗುಲಿ ಫಾರೆಸ್ಟ್ ವಾಚರ್ ಸಾವು

    ಕಾಡಾನೆ ಓಡಿಸುವಾಗ ಬಂದೂಕಿನಿಂದ ಹಾರಿದ ಗುಂಡು ತಗುಲಿ ಫಾರೆಸ್ಟ್ ವಾಚರ್ ಸಾವು

    ಮಂಡ್ಯ: ಕಾಡಾನೆ ಓಡಿಸುವ ವೇಳೆ ಬಂದೂಕಿನಿಂದ ಹಾರಿದ ಗುಂಡು ತಗುಲಿ ಫಾರೆಸ್ಟ್ ವಾಚರ್ ಮೃತಪಟ್ಟಿರುವ ಘಟನೆ ಜಿಲ್ಲೆಯ ಮಳವಳ್ಳಿ ತಾಲೂಕಿನ ಕೂನನಕೊಪ್ಪಲು ಗ್ರಾಮದಲ್ಲಿ ನಡೆದಿದೆ.

    ಶಿವನಂಜಯ್ಯ (30) ಮೃತ ಫಾರೆಸ್ಟ್ ವಾಚರ್. ಕೂನನಕೊಪ್ಪಲು ಗ್ರಾಮದಲ್ಲಿ ಬೀಡು ಬಿಟ್ಟಿದ್ದ ಕಾಡಾನೆಗಳ ಹಿಂಡನ್ನು ಓಡಿಸುವ ವೇಳೆ ಈ ಘಟನೆ ನಡೆದಿದೆ. ಫಾರೆಸ್ಟ್ ಗಾರ್ಡ್ ಪ್ರಕಾಶ್ ಅಡಚದ ಎಂಬುವರ ಬಂದೂಕಿನಿಂದ ಆಕಸ್ಮಿಕವಾಗಿ ಹಾರಿದ ಗುಂಡು ತಗುಲಿ ಶಿವನಂಜಯ್ಯ ಸಾವನ್ನಪ್ಪಿದ್ದಾರೆ.

    ಮೃತ ಶಿವನಂಜಯ್ಯ ಗುತ್ತಿಗೆ ಅಧಾರದ ಮೇಲೆ ಫಾರೆಸ್ಟ್ ವಾಚರ್ ಆಗಿ ಕೆಲಸ ಮಾಡುತ್ತಿದ್ದರು. ಶಿಂಷಾ ಅರಣ್ಯಪ್ರದೇಶದಿಂದ ಬಂದಿದ್ದ ಹತ್ತು ಕಾಡಾನೆಗಳು ಗ್ರಾಮದ ತೋಪೊಂದರಲ್ಲಿ ಬೀಡುಬಿಟ್ಟಿದ್ದವು. ಹೀಗಾಗಿ ಅರಣ್ಯ ಸಿಬ್ಬಂದಿ ಆನೆಗಳನ್ನು ಬಂದೂಕು ಶಬ್ದದಿಂದ ಬೆದರಿಸಿ ವಾಪಸ್ ಕಾಡಿಗಟ್ಟಲು ಮುಂದಾಗಿದ್ದರು.

    ಆದರೆ ಆನೆಗಳು ಜನರ ಕಿರುಚಾಟಕ್ಕೆ ಹೆದರಿ ಸಿಬ್ಬಂದಿ ಮೇಲೆ ದಾಳಿಗೆ ಮುಂದಾಗಿದ್ದವು. ಈ ವೇಳೆ ಭಯದಿಂದ ಓಡುವ ವೇಳೆ ಫಾರೆಸ್ಟ್ ಗಾರ್ಡ್ ಬಂದೂಕಿನಿಂದ ಆಕಸ್ಮಿಕವಾಗಿ ಗುಂಡು ಹಾರಿದೆ. ಪರಿಣಾಮ ಶಿವನಂಜಯ್ಯ ಬೆನ್ನಿಗೆ ಗುಂಡು ತಗುಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

    ಈ ಕುರಿತು ಮಳವಳ್ಳಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಗಿಡ ಉಳಿಸಲು ಹೋಗಿ ಪ್ರಾಣಿಗಳ ಜೀವಕ್ಕೆ ಕುತ್ತು ತಂದ ಅರಣ್ಯ ಇಲಾಖೆ – ನಾಲ್ಕು ಹಸು ಸಾವು

    ಗಿಡ ಉಳಿಸಲು ಹೋಗಿ ಪ್ರಾಣಿಗಳ ಜೀವಕ್ಕೆ ಕುತ್ತು ತಂದ ಅರಣ್ಯ ಇಲಾಖೆ – ನಾಲ್ಕು ಹಸು ಸಾವು

    ಶಿವಮೊಗ್ಗ: ಅರಣ್ಯ ಇಲಾಖೆಯ ಎಡವಟ್ಟಿನಿಂದ ವನ್ಯ ಜೀವಿಗಳ ಪ್ರಾಣಕ್ಕೆ ಸಂಚಕಾರ ಉಂಟಾಗಿರುವ ಘಟನೆ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಅರಣ್ಯ ಪ್ರದೇಶದಲ್ಲಿ ನಡೆದಿದೆ.

    ಆಗುಂಬೆ ಸಮೀಪದ ಕಾರೀ ಕುಂಬ್ರಿ ಅರಣ್ಯದಲ್ಲಿ ಅರಣ್ಯ ಇಲಾಖೆ ಹೊಸದಾಗಿ ನೆಡುತೋಪು ನಿರ್ಮಿಸಿದ್ದು, ಇಲ್ಲಿ ಹಲವು ಜಾತಿಯ ವಿವಿಧ ಗಿಡಗಳನ್ನು ನೆಡಲಾಗಿದೆ. ಈ ಗಿಡಗಳನ್ನು ವನ್ಯಜೀವಿಗಳು ತಿನ್ನುತ್ತವೆ. ಇದರಿಂದ ಗಿಡಗಳು ಹಾಳಾಗಿ ಹೋಗುತ್ತವೆ ಎಂಬ ಉದ್ದೇಶದಿಂದ ಅರಣ್ಯ ಇಲಾಖೆ ಅಧಿಕಾರಿಗಳು ಗಿಡಗಳ ಬುಡದಲ್ಲಿ ವಿಷಪೂರಿತ ಔಷಧಿಯನ್ನು ಪ್ಲಾಸ್ಟಿಕ್ ಕವರ್‌ನಲ್ಲಿ ಕಟ್ಟಿ ಪ್ರತಿಯೊಂದು ಗಿಡಕ್ಕೂ ಕಟ್ಟಿದ್ದಾರೆ.

    ಈ ಮೂಲಕ ವನ್ಯ ಜೀವಿಗಳ ಸಂರಕ್ಷಿಸಬೇಕಾದ ಅರಣ್ಯ ಇಲಾಖೆಯೇ ವನ್ಯಜೀವಿಗಳ ಪ್ರಾಣಕ್ಕೆ ಸಂಚಕಾರ ತಂದೊಡ್ಡಿದೆ. ಅಲ್ಲದೇ ಅರಣ್ಯ ಪ್ರದೇಶದಲ್ಲಿ ಮೇವು ಅರಸಿ ಹೋಗುವ ಜಾನುವಾರುಗಳಿಗೂ ಕುತ್ತು ಉಂಟಾಗಿದೆ. ಈ ವಿಷಪೂರಿತ ಔಷಧಿ ಸೇವನೆಯಿಂದ ಆಗುಂಬೆ ಸುತ್ತಮುತ್ತಲಿನ ಗ್ರಾಮದಲ್ಲಿ ಇಂದು ನಾಲ್ಕು ಹಸುಗಳು ಸಹ ಪ್ರಾಣ ಕಳೆದುಕೊಂಡಿವೆ.

    ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ಜಾನುವಾರುಗಳ ಸಾವಿಗೆ ಕಾರಣವಾಗಿರುವ ಅರಣ್ಯ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

  • ಮಲೆಮಹದೇಶ್ವರ ಅರಣ್ಯದಲ್ಲಿ ನಟ ದರ್ಶನ್-ಚಾಲೆಂಜಿಂಗ್ ಸ್ಟಾರ್‌ಗೆ ಸಾಥ್ ಕೊಟ್ಟ ಚಿಕ್ಕಣ್ಣ

    ಮಲೆಮಹದೇಶ್ವರ ಅರಣ್ಯದಲ್ಲಿ ನಟ ದರ್ಶನ್-ಚಾಲೆಂಜಿಂಗ್ ಸ್ಟಾರ್‌ಗೆ ಸಾಥ್ ಕೊಟ್ಟ ಚಿಕ್ಕಣ್ಣ

    ಚಾಮರಾಜನಗರ: ಸ್ಯಾಂಡಲ್‍ವುಡ್ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಅವರಿಗೆ ಪ್ರಾಣಿ, ಪಕ್ಷಿಗಳೆಂದರೇ ಅಚ್ಚುಮೆಚ್ಚು. ವಿರಾಮ ಸಿಕ್ಕ ಸಮಯದಲ್ಲೆಲ್ಲಾ ಅವರು ಕಾಡು ಸುತ್ತಾಟ ನಡೆಸುತ್ತಾರೆ. ಸದ್ಯ ಚಾಮರಾಜನಗರ ಮಲೆಮಹದೇಶ್ವರ ಅರಣ್ಯದಲ್ಲಿ ದರ್ಶನ್ ಸುತ್ತಾಡಿದ್ದಾರೆ.

    ಕೊರೊನಾ ಕಾರಣದಿಂದ ಸಾಕಷ್ಟು ಸಿನಿಮಾ ಶೂಟಿಂಗ್‍ನಿಂದ ದೂರು ಉಳಿದಿರುವ ದರ್ಶನ್, ವಿರಾಮದ ಸಮಯವನ್ನು ತಮ್ಮ ಫಾರ್ಮ್ ಹೌಸ್‍ನಲ್ಲಿ ಕಳೆಯುತ್ತಿದ್ದರು. ನಿನ್ನೆಯ ಲಾಕ್‍ಡೌನ್ ನಡೆಯೂ ಮಲೆಮಹದೇಶ್ವರ ವನ್ಯಧಾಮದ ದೊಡ್ಡಮಾಕಳಗಿ ವ್ಯಾಪ್ತಿಯ ಅರಣ್ಯದಲ್ಲಿ ಸಂಚಾರಿ ಪ್ರಕೃತಿಯ ಸೌಂದರ್ಯವನ್ನು ಸವಿದಿದ್ದಾರೆ.

    ಕೊಳ್ಳೇಗಾಲದ ಬಫರ್ ವಲಯದಲ್ಲಿ ದೊಡ್ಡಮಾಕಳಗಿ ಅರಣ್ಯ ಪ್ರದೇಶ ಬರುತ್ತದೆ. ಕರ್ನಾಟಕ ಅರಣ್ಯ ಇಲಾಖೆಯ ರಾಯಭಾರಿ ಆಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಲ್ಲಿನ ಸ್ಥಳ ಹಾಗೂ ಪರಿಸರ ವೈವಿದೈತೆಯ ಕುರಿತು ಡಿಎಫ್‍ಒ ಅವರಿಂದ ಮಾಹಿತಿ ಪಡೆದಿದ್ದಾರೆ. ಈ ವೇಳೆ ನಟ ಚಿಕ್ಕಣ್ಣ ಅವರು ದರ್ಶನ್ ಅವರಿಗೆ ಸಾಥ್ ನೀಡಿದ್ದಾರೆ. ಅರಣ್ಯ ಭೇಟಿ ಬಳಿಕ ಮಲೆಮಹದೇಶ್ವರ ವನ್ಯಧಾಮದ ಡಿಎಫ್‍ಒ ಕಚೇರಿ ಸಮೀಪ ಎರಡು ಗಿಡ ನೆಟ್ಟಿದ್ದಾರೆ. ಈ ಕುರಿತು ಡಿಎಫ್‍ಒ ಎಡುಕೂಂಡಲ ಮಾಹಿತಿ ನೀಡಿದ್ದಾರೆ.

    ರಾಬರ್ಟ್ ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ಸಿಕ್ಕ ವಿರಾಮದ ಸಮಯದಲ್ಲಿ ನಟ ದರ್ಶನ್ ಉತ್ತರಾಖಂಡದ ಕಾಡಿಗೆ ಭೇಟಿ ನೀಡಿ, ಸ್ವತಃ ವ್ಯನ್ಯ ಜೀವಿಗಳ ಫೋಟೋ ಕ್ಲಿಕ್ಕಿಸಿದ್ದರು. ಇದಕ್ಕೂ ಮುನ್ನ ಕೀನ್ಯಾ ಸೆರೆಂಗೆಟ್ಟಿ ಕಾಡಿಗೆ ಭೇಟಿ ನೀಡಿದ್ದರು. ಆ ವೇಳೆ ಅವರು ಕ್ಲಿಕ್ಕಿಸಿದ್ದ ಫೋಟೋಗಳನ್ನು ಮಾರಾಟ ಮಾಡಿ ಅರಣ್ಯವಾಸಿಗಳ ಕಲ್ಯಾಣಕ್ಕೆ ನೀಡಿದ್ದರು.

  • ಆನ್‍ಲೈನ್ ಕ್ಲಾಸ್‍ಗಾಗಿ ದಟ್ಟಾರಣ್ಯದಲ್ಲಿ ಟೆಂಟ್ ಹಾಕಿ ಕುಳಿತ ವಿದ್ಯಾರ್ಥಿಗಳು

    ಆನ್‍ಲೈನ್ ಕ್ಲಾಸ್‍ಗಾಗಿ ದಟ್ಟಾರಣ್ಯದಲ್ಲಿ ಟೆಂಟ್ ಹಾಕಿ ಕುಳಿತ ವಿದ್ಯಾರ್ಥಿಗಳು

    ಮಂಗಳೂರು: ಆನ್‍ಲೈನ್ ಕ್ಲಾಸ್ ಗಾಗಿ ವಿದ್ಯಾರ್ಥಿಗಳು ದಿನವಿಡೀ ದಟ್ಟ ಅರಣ್ಯದಲ್ಲಿ ಟೆಂಟ್ ಹಾಕಿ ಕುಳಿತು ಶಿಕ್ಷಣ ಕಲಿಯಬೇಕಾದ ಅನಿವಾರ್ಯ ಘಟನೆ ದಕ್ಷಿಣ ಕನ್ನಡದಲ್ಲಿ ನಡೆದಿದೆ.

    ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ಆನ್‍ಲೈನ್ ಕ್ಲಾಸ್ ಆರಂಭಿಸಲು ಸೂಚಿಸಿದೆ. ನೆಟ್ ವರ್ಕ್ ಇಲ್ಲದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶಿಬಾಜೆ ಗ್ರಾಮದ ವಿದ್ಯಾರ್ಥಿಗಳು ಆನ್ ಲೈನ್ ಕ್ಲಾಸ್ ಗಾಗಿ ಸಮೀಪದ ಪೆರ್ಲ ಬೈಕರ ಗುಡ್ಡದಲ್ಲಿ ಟೆಂಟ್ ಹಾಕಿದ್ದಾರೆ. ಅರಣ್ಯದ ತುತ್ತ ತುದಿಯಲ್ಲಿ ಮಾತ್ರ ನೆಟ್‍ವರ್ಕ್ ಸಿಗೋದ್ರಿಂದ ಅಲ್ಲಿ ಬಟ್ಟೆಗಳಿಂದಲೇ ನಿರ್ಮಿಸಿದ ಟೆಂಟ್ ನಲ್ಲಿ ಬೆಳಗ್ಗೆ 9 ಗಂಟೆಯಿಂದ ಸಂಜೆ ನಾಲ್ಕು ಗಂಟೆಯವರೆಗೂ ವಿದ್ಯಾರ್ಥಿಗಳು ಆನ್‍ಲೈನ್ ಕ್ಲಾಸ್ ಗೆ ಹಾಜರಾಗುತ್ತಿದ್ದಾರೆ.

    ದಟ್ಟ ಅರಣ್ಯದಲ್ಲಿ ಕಾಡಾನೆ ಉಪಟಳದ ಜೊತೆಗೆ ಕಾಡು ಮೃಗಗಳ ದಾಳಿಯ ಭೀತಿಯ ಜೀವ ಭಯದಿಂದ, ಸೊಳ್ಳೆಗಳ ಕಾಟದೊಂದಿಗೆ ವಿದ್ಯಾರ್ಥಿಗಳು ಅನಿವಾರ್ಯವಾಗಿ ತರಗತಿಗಳಿಗೆ ಹಾಜರಾಗುತ್ತಿದ್ದಾರೆ. ಪೋಷಕರು ಆತಂಕದಿಂದಲೇ ಮಕ್ಕಳನ್ನು ಅರಣ್ಯಕ್ಕೆ ಕಳಿಸುತ್ತಿದ್ದು ಊಟ, ತಿಂಡಿಯೊಂದಿಗೆ ಪೋಷಕರೂ ಕಾಡಿಗೆ ಹೋಗುತ್ತಿದ್ದಾರೆ. ಸ್ಥಳೀಯ ಶಾಸಕ ಹರೀಶ್ ಪೂಂಜಾರ ಗಮನಕ್ಕೆ ತಂದರೂ ಸಮಸ್ಯೆ ಬಗೆಹರಿಯದೇ ಕಳೆದ ಕೆಲ ದಿನಗಳಿಂದ ಇದೇ ಪರಿಸ್ಥಿತಿ ಇದೆ.

  • ಅಂತ್ಯಸಂಸ್ಕಾರಕ್ಕೆ ಬಿಡದ ಗ್ರಾಮಸ್ಥರು- ಗರ್ಭಿಣಿ ಶವವನ್ನ ಕಾಡಿನಲ್ಲಿ ಮರಕ್ಕೆ ಕಟ್ಟಿ ಹೋದ ಕುಟುಂಬಸ್ಥರು

    ಅಂತ್ಯಸಂಸ್ಕಾರಕ್ಕೆ ಬಿಡದ ಗ್ರಾಮಸ್ಥರು- ಗರ್ಭಿಣಿ ಶವವನ್ನ ಕಾಡಿನಲ್ಲಿ ಮರಕ್ಕೆ ಕಟ್ಟಿ ಹೋದ ಕುಟುಂಬಸ್ಥರು

    – ಪೊಲೀಸರಿಂದಲೇ ಗರ್ಭಿಣಿಯ ಅಂತ್ಯಕ್ರಿಯೆ

    ಹೈದರಾಬಾದ್: ಒಂಬತ್ತು ತಿಂಗಳ ಗರ್ಭಿಣಿ ಮೃತದೇಹವನ್ನು ಕುಟುಂಬದವರೇ ಅರಣ್ಯದಲ್ಲಿ ಮರವೊಂದಕ್ಕೆ ಕಟ್ಟಿ ಬಿಟ್ಟು ಹೋಗಿದ್ದ ಅಮಾನವೀಯ ಘಟನೆ ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ನಡೆದಿದೆ.

    ಲಾವಣ್ಯ ಮೃತ ಗರ್ಭಿಣಿ. ಸ್ಥಳೀಯರು ಗ್ರಾಮದ ಮಹಿಳೆಯ ಅಂತಿಮ ವಿಧಿ-ವಿಧಾನಗಳನ್ನು ಮಾಡಲು ತಡೆದಿದ್ದಾರೆ. ನಂತರ ಕುಟುಂಬದರು ರುದ್ರವರಂನ ಅರಣ್ಯ ಪ್ರದೇಶದಲ್ಲಿ ಆಕೆಯ ಶವವನ್ನು ಮರಕ್ಕೆ ಕಟ್ಟಿ ಬಿಟ್ಟು ಹೋಗಿದ್ದರು.

    ಏನಿದು ಪ್ರಕರಣ?
    ಮೃತ ಲಾವಣ್ಯ ಜಿಲ್ಲೆಯ ಬಿ.ನಾಗಿರೆಡ್ಡಿಪಲ್ಲೆ ಗ್ರಾಮದ ಧರ್ಮೇಂದ್ರನ ಜೊತೆ ಮದುವೆಯಾಗಿದ್ದಳು. ಈಕೆಯ ಪತಿ ದೈನಂದಿನ ಕೂಲಿ ಕಾರ್ಮಿಕನಾಗಿದ್ದು, ಲಾವಣ್ಯ ತುಂಬು ಗರ್ಣಿಣಿಯಾಗಿದ್ದು, ಹೆರಿಗೆಗಾಗಿ ಪಕ್ಕದ ಸಿರಿವೆಲ್ಲಾ ಮಂಡಲದಲ್ಲಿರುವ ತನ್ನ ತವರು ಮನೆಗೆ ಹೋಗಿದ್ದಳು. ಪೋಷಕರು ಶುಕ್ರವಾರ ಗರ್ಭಿಣಿಯನ್ನು ನಂದ್ಯಾಲ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಹೆರಿಗೆಯ ಸಮಯದಲ್ಲಿ ತೊಂದರೆಯಾಗಿ ಶನಿವಾರ ಲಾವಣ್ಯ ಮೃತಪಟ್ಟಿದ್ದಾಳೆ.

    ಆಕೆಯ ಅಂತ್ಯ ಸಂಸ್ಕಾರಕ್ಕಾಗಿ ಕುಟುಂಬದವರು ಮೃತದೇಹವನ್ನು ನಾಗಿರೆಡ್ಡಿಪಲ್ಲೆಗೆ ತೆಗೆದುಕೊಂಡು ಬಂದಿದ್ದಾರೆ. ಅಲ್ಲಿ ಆಚರಣೆಗಳ ಪ್ರಕಾರ ಮೃತದೇಹವನ್ನು ಸಮಾಧಿ ಮಾಡಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಇದೇ ವೇಳೆ ಗ್ರಾಮಸ್ಥರು ಬಂದು ಗರ್ಭಿಣಿಯ ಅಂತಿಮ ವಿಧಿ-ವಿಧಾನಗಳನ್ನು ಗ್ರಾಮದಲ್ಲಿ ನೆರವೇರಿಸುವುದರಿಂದ ಗ್ರಾಮಕ್ಕೆ ಒಳಿತಾಗುವುದಿಲ್ಲ. ಅಲ್ಲದೇ ಶವಸಂಸ್ಕಾರ ಮಾಡಿದರೆ ಗ್ರಾಮಕ್ಕೆ ಮಳೆ ಬರುವುದಿಲ್ಲ ಎಂದು ಅಂತ್ಯಸಂಸ್ಕಾರ ಮಾಡಲು ಅವಕಾಶ ಮಾಡಿಕೊಡಲಿಲ್ಲ.

    ಕುಟುಂವದರು ಮನವಿ ಮಾಡಿಕೊಂಡು ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದರು. ಕೊನೆಗೆ ಬೇರೆ ದಾರಿಯಿಲ್ಲದೆ ಕುಟುಂಬದವರು ಮೃತದೇಹವನ್ನು ಹತ್ತಿರದ ಅರಣ್ಯ ಪ್ರದೇಶಕ್ಕೆ ತೆಗೆದುಕೊಂಡು ಹೋಗಿ ಮರಕ್ಕೆ ಕಟ್ಟಿ ವಾಪಸ್ಸಾಗಿದ್ದಾರೆ. ಮರುದಿನ ಕಾಡಿನಲ್ಲಿ ಕಟ್ಟಿಗೆ ಸಂಗ್ರಹಿಸಲು ಹೋದಾಗ ನೆರೆಹೊರೆಯ ಗ್ರಾಮಸ್ಥರು ನೋಡಿ ರುದ್ರವರಂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದಾರೆ.

    ವಿಚಾರಣೆಯ ನಂತರ ನಾವು ಮೃತ ಮಹಿಳೆಯ ಕುಟುಂಬದವರನ್ನು ಪತ್ತೆ ಹಚ್ಚಿದ್ದೇವೆ. ಗ್ರಾಮದಲ್ಲಿ ಮಹಿಳೆಯ ಅಂತ್ಯಕ್ರಿಯೆ ಮಾಡಲು ಗ್ರಾಮಸ್ಥರು ಅವಕಾಶ ನೀಡಲಿಲ್ಲ. ಹೀಗಾಗಿ ಕುಟುಂಬದರು ಕಾಡಿನಲ್ಲಿ ಮೃತದೇಹವನ್ನು ಮರಕ್ಕೆ ಕಟ್ಟಿ ಬಿಟ್ಟು ಹೋಗಿದ್ದಾರೆ. ನಾವು ಗ್ರಾಮಸ್ಥರ ಮನವೊಲಿಸಲು ಪ್ರಯತ್ನ ಮಾಡಿದೆವು ಎಂದು ಸಬ್ ಇನ್ಸ್ ಪೆಕ್ಟರ್ ರಾಮಮೋಹನ್ ರೆಡ್ಡಿ ತಿಳಿಸಿದರು.

    ಗ್ರಾಮಸ್ಥರು ಗ್ರಾಮದಲ್ಲಿ ಮಹಿಳೆಯ ಅಂತ್ಯಕ್ರಿಯೆ ಮಾಡಲು ಆಕ್ಷೇಪ ವ್ಯಕ್ತಪಡಿಸಿದರು. ಕೊನೆಗೆ ಪೊಲೀಸರೇ ಲಾವಣ್ಯ ಅಂತಿಮ ವಿಧಿ-ವಿಧಾನಗಳನ್ನು ಮಾಡಿದ್ದಾರೆ. ನಂತರ ಈ ಕುರಿತು 15 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಕಾಡಿನ ಮಧ್ಯೆ ನಿಗೂಢ ಕ್ಯಾಮೆರಾ ಪತ್ತೆ

    ಕಾಡಿನ ಮಧ್ಯೆ ನಿಗೂಢ ಕ್ಯಾಮೆರಾ ಪತ್ತೆ

    ಚಿಕ್ಕಮಗಳೂರು: ಮೀಸಲು ಅರಣ್ಯದಲ್ಲಿ ಎನ್‍ಜಿಓ ಹೆಸರಲ್ಲಿ ಖಾಸಗಿ ವ್ಯಕ್ತಿಗಳು ಅರಣ್ಯ ಇಲಾಖೆಯ ಅನುಮತಿ ಪಡೆಯದೇ ಕಾಡಿನ ಮಧ್ಯೆ ಟ್ರ್ಯಾಪಿಂಗ್ ಕ್ಯಾಮೆರಾ ಅಳವಡಿಸಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಚಿಕ್ಕಮಗಳೂರು ತಾಲೂಕಿನ ಹಿರೇಗೌಜ ವ್ಯಾಪ್ತಿಯ ಚುರ್ಚೆಗುಡ್ಡ ಮೀಸಲು ಅರಣ್ಯದಲ್ಲಿ ಈ ಕ್ಯಾಮರಾಗಳು ಪತ್ತೆಯಾಗಿದ್ದು, ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಕಳೆದೊಂದು ವಾರದಿಂದ ಚುರ್ಚೆಗುಡ್ಡದ ಶ್ರೀಗಂಧದ ರಸ್ತೆ ಮಾರ್ಗದ ಒಂದೆರಡು ಕಿ.ಮೀ. ದೂರದಲ್ಲಿ ಕಾಡು ಪ್ರಾಣಿಗಳು ಬಾಯಾರಿಕೆ ನೀಗಿಸಿಕೊಳ್ಳಲು ಬರುವ ನೀರುಗುಂಡಿಯ ಬಳಿಯ ಮರಕ್ಕೆ ಕ್ಯಾಮರಾಗಳನ್ನು ಅಳವಡಿಸಲಾಗಿದೆ.

    ಕ್ಯಾಮೆರಾವನ್ನು ಯಾರೂ ತೆಗೆದುಕೊಂಡು ಹೋಗದಂತೆ ಕಬ್ಬಿಣದ ಸರಪಳಿಯಿಂದ ಲಾಕ್ ಮಾಡಲಾಗಿದೆ. ಅರಣ್ಯದಲ್ಲಿ ಕ್ಯಾಮೆರಾಗಳನ್ನು ಗಮನಿಸಿದ ಸ್ಥಳೀಯರು, ಅರಣ್ಯ ಅಧಿಕಾರಿಗಳು ಇಟ್ಟಿರಬೇಕೆಂದು ಸುಮ್ಮನಿದ್ದರು. ಆದರೆ ಸ್ಥಳೀಯ ಎನ್‍ಜಿಓಗಳಲ್ಲಿ ಕೆಲಸ ಮಾಡುವವರು ಈ ಟ್ರ್ಯಾಪಿಂಗ್ ಕ್ಯಾಮೆರಾ ಗಮನಿಸಿದ್ದಾರೆ. ಈ ಬಗ್ಗೆ ಅರಣ್ಯ ಅಧಿಕಾರಿಗಳನ್ನು ವಿಚಾರಿಸಿದಾಗ ಇಲಾಖೆಯಿಂದ ಯಾವುದೇ ಕ್ಯಾಮೆರಾ ಅಳವಡಿಸದಿರುವುದು ತಿಳಿದಿದೆ.

    ಸಾವಿರಾರು ಎಕರೆಯ ಚುರ್ಚೆಗುಡ್ಡ ಅರಣ್ಯದಲ್ಲಿ ಚಿರತೆ, ಹುಲಿ, ನರಿ, ಆನೆ, ಕರಡಿ ಸೇರಿದಂತೆ ಅಮೂಲ್ಯವಾದ ಶ್ರೀಗಂಧದ ಮರಗಳಿವೆ. ಈ ಪ್ರದೇಶವನ್ನು ಕಾಡುಗಳ್ಳರಿಂದ ರಕ್ಷಿಸಲು ಅರಣ್ಯ ರಕ್ಷಕರು ಹದ್ದಿನ ಕಣ್ಣಿದ್ದಾರೆ. ಆದರೂ ಇಲ್ಲಿ ಕ್ಯಾಮೆರಾ ಅಳವಡಿಸಿ ಹಲವು ದಿನ ಕಳೆದರೂ ಇಲಾಖೆ ಸಿಬ್ಬಂದಿಗೆ ಗೊತ್ತಾಗದಿರುವುದು ಅನುಮಾನ ಮೂಡಿಸಿದೆ. ಅಕ್ರಮವಾಗಿ ಮೀಸಲು ಅರಣ್ಯದಲ್ಲಿ ಕ್ಯಾಮೆರಾ ಅಳವಡಿಸಿರುವ ಬಗ್ಗೆ ಮಾಧ್ಯಮಗಳಿಗೆ ತಿಳಿಯುತ್ತಿದ್ದಂತೆ ಸ್ಥಳದಿಂದ ಕ್ಯಾಮೆರಾ ನಾಪತ್ತೆಯಾಗಿದೆ.

  • ತನ್ನ ಪ್ರೀತಿ ಸಾಬೀತುಪಡಿಸಲು ಮಾಜಿ ಗೆಳತಿಯ ಕೊಂದ- ಪೊದೆಯಲ್ಲಿ ಅವಿತುಕೊಂಡ್ರೂ ಬಿಡ್ಲಿಲ್ಲ

    ತನ್ನ ಪ್ರೀತಿ ಸಾಬೀತುಪಡಿಸಲು ಮಾಜಿ ಗೆಳತಿಯ ಕೊಂದ- ಪೊದೆಯಲ್ಲಿ ಅವಿತುಕೊಂಡ್ರೂ ಬಿಡ್ಲಿಲ್ಲ

    – ಸ್ನೇಹಿತನಿಗೆ ಫೋನ್ ಮಾಡಿ ಸಹಾಯಕ್ಕಾಗಿ ಅಂಗಲಾಚಿದ್ಳು
    – ಕುಡಿದ ಮತ್ತಿನಲ್ಲಿ ತಮಾಷೆ ಮಾಡಿದ್ದಾಳೆ ಅಂದ್ಕೊಂಡ

    ಮಾಸ್ಕೋ: ಯುವಕನೊಬ್ಬ ಪ್ರಿಯತಮೆಗೆ ತನ್ನ ಪ್ರೀತಿಯನ್ನು ಸಾಬೀತುಪಡಿಸುವ ಸಲುವಾಗಿ ಮಾಜಿ ಗೆಳತಿಯನ್ನು ಕ್ರೂರವಾಗಿ ಕೊಲೆ ಮಾಡಿರುವ ಘಟನೆ ರಷ್ಯಾದಲ್ಲಿ ನಡೆದಿದೆ.

    ನೋವೊಸಿಬಿರ್ಸ್ಕ್ ಪ್ರದೇಶದ ಸುಜುನ್ ಗ್ರಾಮದ ಬಳಿ ಈ ಹತ್ಯೆ ನಡೆದಿದೆ. ಅನಸ್ತಾಸಿಯಾ ಪೊಸ್ಪೆಲೋವಾ ಕೊಲೆಯಾದ ಮಾಜಿ ಗೆಳತಿ. ಆರೋಪಿ ಅಲೆಕ್ಸೆ ಪೆಟ್ರೋವ್ (20) ತನ್ನ ಪ್ರೀತಿಯನ್ನು ಪ್ರಿಯತಮೆಯ ಮುಂದೆ ಸಾಬೀತು ಪಡಿಸಲು ಕಾಡಿನಲ್ಲಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಏನಿದು ಪ್ರಕರಣ?
    ಆರೋಪಿ ಪೆಟ್ರೋವ್ ಮತ್ತು ಮೃತ ಅನಸ್ತಾಸಿಯಾ ಪರಸ್ಪರ ಪ್ರೀತಿಸುತ್ತಿದ್ದರು. ನಂತರ ಇಬ್ಬರು ಬ್ರೇಕಪ್ ಮಾಡಿಕೊಂಡಿದ್ದರು. ಇದಾದ ಬಳಿಕ ಆರೋಪಿ ಕಾರ್ಪೋವಾಳನ್ನು ಪ್ರೀತಿಸುತ್ತಿದ್ದನು. ಜೂನ್ 14 ರಂದು ಈ ಜೋಡಿ ಅನಸ್ತಾಸಿಯಾಳನ್ನು ಪಾರ್ಟಿಗೆ ಬರುವಂತೆ ಕರೆದಿದ್ದಾರೆ. ಅದಕ್ಕೆ ಅನಸ್ತಾಸಿಯಾ ಕೂಡ ಒಪ್ಪಿದ್ದು, ಆಕೆಯನ್ನು ಕಾಡಿಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಎಲ್ಲರೂ ಮದ್ಯಪಾನ ಮಾಡಲು ಪ್ರಾರಂಭಿಸಿದರು.

    ಇದೇ ವೇಳೆ ಆರೋಪಿ ಪೆಟ್ರೋವ್ ತನ್ನ ಜೇಬಿನಿಂದ ಚಾಕುವನ್ನು ತೆಗೆದು ಅನಸ್ತಾಸಿಯಾಳ ಕುತ್ತಿಗೆಗೆ ಹಲವಾರು ಬಾರಿ ಇರಿದಿದ್ದಾನೆ. ಇದರಿಂದ ಭಯಭೀತಳಾದ ಅನಸ್ತಾಸಿಯಾ ಆರೋಪಿ ಪೆಟ್ರೋವ್‍ನನ್ನು ತಳ್ಳಿ ಅಲ್ಲಿಂದ ತಪ್ಪಿಸಿಕೊಂಡಿದ್ದಾಳೆ. ಆದರೆ ಚಾಕುವಿನಿಂದ ಇರಿದಿದ್ದರಿಂದ ಗಾಯಗಳಾಗಿ ರಕ್ತಸ್ರಾವವಾಗುತ್ತಿತ್ತು. ಹೀಗಾಗಿ ಆಕೆ ಕಾಡಿನಲ್ಲಿ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಆಗ ಅನಸ್ತಾಸಿಯಾ ಸಹಾಯಕ್ಕಾಗಿ ತನ್ನ ಸ್ನೇಹಿತನಿಗೆ ಫೋನ್ ಮಾಡಿದ್ದು, ನನಗೆ ಸಹಾಯ ಮಾಡು, ನಾನು ಕಾಡಿನಲ್ಲಿದ್ದೇನೆ. ನನ್ನ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾರೆ. ಇವರು ನನ್ನನ್ನು ಕೊಲೆ ಮಾಡುತ್ತಾರೆ. ದಯವಿಟ್ಟು ನನಗೆ ಸಹಾಯ ಮಾಡು ಎಂದು ಅಂಗಲಾಚಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

    ಕುಡಿದ ಮತ್ತಿನಲ್ಲಿ ತಮಾಷೆ ಮಾಡುತ್ತಿದ್ದಾಳೆ ಎಂದು ಸ್ನೇಹಿತ ನಂಬಲಿಲ್ಲ. ಕೊನೆಗೆ ಅನಸ್ತಾಸಿಯಾ ಕಾಡಿನಲ್ಲಿ ಪೊದೆಯೊಳಗೆ ಅಡಗಿಕೊಂಡಳು. ಆದರೆ ಆರೋಪಿ ಪೆಟ್ರೋವ್ ಆಕೆಯನ್ನ ಪತ್ತೆ ಮಾಡಿ ಅವಳ ಕುತ್ತಿಗೆಯ ಮೇಲೆ ಕಾಲಿಟ್ಟು, ಚಾಕುವಿನಿಂದ ಎದೆಗೆ ಚುಚ್ಚಿ, ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ಆರೋಪಿ ಮತ್ತು ಆಕೆಯ ಗೆಳತಿ ಕಾರ್ಪೋವಾ ಶವವನ್ನು ಪೊದೆಗಳಲ್ಲಿ ಅಡಗಿಸಿ ವಾಪಸ್ ಆಗಿದ್ದಾರೆ. ನಂತರ ಅವರೇ ಅನಸ್ತಾಸಿಯಾ ಕಾಣೆಯಾಗಿದ್ದಾಳೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ

    ತಮ್ಮ ಮೇಲೆ ಅನುಮಾನ ಬರಬಾರದೆಂದು ಪೊಲೀಸರ ಜೊತೆ ಅನಸ್ತಾಸಿಯಾಗಾಗಿ ಹುಡುಕಾಡಿದ್ದಾರೆ. ಇತ್ತೀಚೆಗೆ ನಂತರ ಗಾಯಗೊಂಡ ಮೃತಪಟ್ಟಿರುವ ಯುವತಿಯ ಶವ ಕಾಡಿನ ಪೊದೆಯಲ್ಲಿ ಪತ್ತೆಯಾಗಿದೆ. ಪೊಲೀಸರು ಅನುಮಾನದ ಮೇರೆಗೆ ಇಬ್ಬರನ್ನು ವಶಪಡಿಸಿಕೊಂಡು ವಿಚಾರಣೆ ಮಾಡಿದ್ದಾರೆ. ಆಗ ಇಬ್ಬರು ಈ ಕೊಲೆಯನ್ನು ತಾವೇ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.

    ಆರೋಪಿ ಕಾರ್ಪೋವಾ, ಅನಸ್ತಾಸಿಯಾ ಮತ್ತು ಪೆಟ್ರೋವ್ ಸಂಬಂಧದ ಬಗ್ಗೆ ಅಸೂಯೆ ಪಟ್ಟಿದ್ದಳು. ಇದೇ ವಿಚಾರಕ್ಕೆ ಪೆಟ್ರೋವ್ ಜೊತೆ ಜಗಳ ಮಾಡುತ್ತಿದ್ದಳು. ಅಲ್ಲದೇ ಪೆಟ್ರೋವ್‍ಗೆ ತನ್ನ ಪ್ರೀತಿಯನ್ನು ಸಾಬೀತುಪಡಿಸಲು ಮತ್ತು ಈ ಜಗಳವನ್ನು ನಿಲ್ಲಿಸಲು ಅನಸ್ತಾಸಿಯಾಳನ್ನು ಕೊಲೆ ಮಾಡಬೇಕು ಎಂದು ಹೇಳಿದ್ದಾಳೆ. ಆಗ ಆರೋಪಿ ತನ್ನ ಪ್ರೀತಿಯನ್ನು ಸಾಬೀತು ಮಾಡಲು ಮಾಜಿ ಗೆಳತಿಯನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಸದ್ಯಕ್ಕೆ ಆರೋಪಿ ಪೆಟ್ರೋವ್ ಮತ್ತು ಕಾರ್ಪೋವಾ ವಿರುದ್ಧ ಕ್ರಿಮಿನಲ್ ಕ್ರೇಸ್ ದಾಖಲಿಸಿದ್ದು, ಇಬ್ಬರನ್ನು ಬಂಧಿಸಲಾಗಿದೆ.

  • ಕಲ್ಲಿನಿಂದ ಜಜ್ಜಿ ಮಗಳ ಮಾಜಿ ಪ್ರಿಯಕರನನ್ನು ಕೊಲೆಗೈದ

    ಕಲ್ಲಿನಿಂದ ಜಜ್ಜಿ ಮಗಳ ಮಾಜಿ ಪ್ರಿಯಕರನನ್ನು ಕೊಲೆಗೈದ

    – ಮಗಳ ಸಾವಿಗೆ ತಂದೆ ಪ್ರತಿಕಾರ

    ರಾಂಚಿ: ತಂದೆಯೊಬ್ಬ ತನ್ನ ಮಗಳ ಮಾಜಿ ಪ್ರಿಯಕರನನ್ನು ಕಲ್ಲಿನಿಂದ ಜಜ್ಜಿ ಕೊಲೆಗೈದ ಘಟನೆ ಜಾರ್ಖಂಡ್‍ನಲ್ಲಿ ನಡೆದಿದೆ.

    ಜಾರ್ಖಂಡ್‍ನ ಪಾಲಮು ಜಿಲ್ಲೆಯ ವೀರೇಂದ್ರ ಭೂಯಾ (23) ಕೊಲೆಯಾದ ಮಾಜಿ ಪ್ರಿಯಕರ. ಯುವಕನನ್ನು ಕಲ್ಲಿನಿಂದ ಕೊಲೆಗೈದ ವ್ಯಕ್ತಿಯನ್ನು ಆತನ ಮಾಜಿ ಗೆಳತಿಯ ತಂದೆ ಮಂಗರ್ ಯಾದವ್ ಎಂದು ಗುರುತಿಸಲಾಗಿದೆ. ಪಾಲಮು ಜಿಲ್ಲೆಯ ಪಂಕಿ ಪೊಲೀಸರು ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

    ಏನಿದು ಪ್ರಕರಣ?:
    ವೀರೇಂದ್ರ ಭೂಯಾ ಮಾಜಿ ಗೆಳತಿ ಈಗಾಗಲೇ ಮೃತಪಟ್ಟಿದ್ದಾಳೆ. ಹೀಗಾಗಿ ವೀರೇಂದ್ರ ವಿರುದ್ಧ ಪ್ರತಿಕಾರ ತೀರಿಸಿಕೊಳ್ಳಲು ಯುವತಿಯ ತಂದೆ ಮಂಗರ್ ಯಾದವ್ ಮುಂದಾಗಿದ್ದ. ಶುಕ್ರವಾರ ರಾತ್ರಿ ನಡೆದ ವಿವಾಹ ಸಮಾರಂಭದಲ್ಲಿ ವೀರೇಂದ್ರ ತನ್ನ ಗ್ರಾಮದವನೇ ಆಗಿದ್ದ ಮಂಗರ್ ಯಾದವ್ ಅವರೊಂದಿಗೆ ಮಾತುಕತೆ ನಡೆಸಿದ್ದ. ಅದಾದ ಸ್ವಲ್ಪ ಹೊತ್ತಿನಲ್ಲಿ ವೀರೇಂದ್ರ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದ. ಕುಟುಂಬವು ಸಾಕಷ್ಟು ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ.

    ವೀರೇಂದ್ರ ಕುಟುಂಬಸ್ಥರು ಶನಿವಾರ ಪಂಕಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರಿಗೆ ವೀರೇಂದ್ರ ಕೊನೆಯದಾಗಿ ಮಂಗರ್ ಯಾದವ್ ಜೊತೆಗೆ ಜಗಳ ಮಾಡಿಕೊಂಡಿದ್ದ ಬಗ್ಗೆ ಮಾಹಿತಿ ಸಿಕ್ಕಿತ್ತು. ಹೀಗಾಗಿ ಆತನನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದರು. ಆರೋಪಿ, ‘ವೀರೇಂದ್ರ ನನ್ನ ಮಗಳ ಸಾವಿಗೆ ಕಾರಣನಾಗಿದ್ದ. ಹೀಗಾಗಿ ಆತನನ್ನು ಹತ್ಯೆ ಮಾಡಿದ್ದೇನೆ’ ಎಂದು ಕೃತ್ಯ ಒಪ್ಪಿಕೊಂಡಿದ್ದಾನೆ.

  • ಬೇಟೆಗೆ ಹೋದ ಐವರು ಗೆಳೆಯರು- ಕಾಡುಪ್ರಾಣಿ ಎಂದು ಗೆಳಯನಿಗೇ ಗುಂಡು

    ಬೇಟೆಗೆ ಹೋದ ಐವರು ಗೆಳೆಯರು- ಕಾಡುಪ್ರಾಣಿ ಎಂದು ಗೆಳಯನಿಗೇ ಗುಂಡು

    ಕಾರವಾರ: ರಾತ್ರಿ ವೇಳೆ ಪ್ರಾಣಿ ಬೇಟೆಗೆಂದು ಐವರು ಗೆಳೆಯರು ಕಾಡಿಗೆ ಹೋಗಿದ್ದಾರೆ. ಈ ವೇಳೆ ಕಾಡು ಪ್ರಾಣಿ ಎಂದು ತಮ್ಮ ತಂಡದಲ್ಲಿದ್ದ ಗೆಳೆಯನಿಗೇ ಗುಂಡುಹಾರಿಸಿದ ಘಟನೆ ನಡೆದಿದೆ.

    ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನಲ್ಲಿ ಘಟನೆ ನಡೆದಿದ್ದು, ಬೇಟೆಗಾಗಿ ಹೋಗಿದ್ದ ಸುಲೇಮಾನ್, ಇಸ್ಮಾಯಿಲ್, ಮುಕಮುಲ್, ಅಹ್ಮದ್ ಹಾಗೂ ಬೇಟೆಗೆ ಬಳಸಿದ ಬಂದೂಕನ್ನು ವಶಕ್ಕೆ ಪಡೆದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಭಾನುವಾರ ರಾತ್ರಿ ಮಳಗಿ ಅರಣ್ಯ ಪ್ರದೇಶಕ್ಕೆ ಬೇಟೆಗೆಂದು ಐವರು ತೆರಳಿದ್ದರು. ಈ ವೇಳೆ ಪ್ರಾಣಿಗಳನ್ನು ಬೇಟೆಯಾಡಲು ಗುಂಪಿನಲ್ಲಿದ್ದವರು ಚದುರಿ ಹೋಗಿದ್ದರು. ಆಗ ಮುಸ್ತಾಕ್ ಎಂಬಾತ ತಂಡದಿಂದ ಬೇರ್ಪಟ್ಟು ಪ್ರಾಣಿಗಳನ್ನು ಹುಡುಕುತಿದ್ದ. ಈ ವೇಳೆ ಈತನೇ ಕಾಡುಪ್ರಾಣಿ ಎಂದು ಗುಂಡು ಹಾರಿಸಿದ್ದಾರೆ. ಮುಸ್ತಾಕ್‍ಗೆ ಎದೆಯ ಮೇಲ್ಭಾಗ ಗಂಭೀರ ಗಾಯವಾಗಿದ್ದು, ತಕ್ಷಣ ಹುಬ್ಬಳ್ಳಿಯ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆ ಸಂಬಂಧ ಮುಂಡಗೋಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಗ್ರಾಮದ ಜನರಲ್ಲಿ ಆತಂಕ ಮೂಡಿಸಿದ್ದ 8 ವರ್ಷದ ಚಿರತೆ ಸೆರೆ

    ಗ್ರಾಮದ ಜನರಲ್ಲಿ ಆತಂಕ ಮೂಡಿಸಿದ್ದ 8 ವರ್ಷದ ಚಿರತೆ ಸೆರೆ

    ಬೆಂಗಳೂರು: ಕಳೆದ ಕೆಲವು ದಿನಗಳಿಂದ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದ ಚಿರತೆಯೊಂದು ಇಂದು ಬೋನಿಗೆ ಬಿದ್ದಿದೆ.

    ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಶಿವಗಂಗೆ ಬೆಟ್ಟದ ಬಳಿಯ ಸೀಗೆಪಾಳ್ಯ ಗ್ರಾಮ ಹಾಗೂ ಸುತ್ತಮುತ್ತಲಿನ ಗ್ರಾಮದಲ್ಲಿ ಅನೇಕ ದಿನಗಳಿಂದ ಉಪಟಳ ನೀಡುತ್ತಿದ್ದ ಸುಮಾರು 8 ವರ್ಷದ ಗಂಡು ಚಿರತೆಯನ್ನು ಅರಣ್ಯ ಅಧಿಕಾರಿಗಳು ಬೋನ್ ಇಟ್ಟು ಯಶಸ್ವಿಯಾಗಿ ಸೆರೆಹಿಡಿದಿದ್ದಾರೆ. ಈ ಚಿರತೆ ಸೆರೆಯಿಂದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

    ಚಿರತೆ ಸೆರೆಯಾದ ಸ್ಥಳಕ್ಕೆ ನೆಲಮಂಗಲ ವಲಯ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಬನ್ನೇರುಘಟ್ಟ ಅರಣ್ಯ ಪ್ರದೇಶಕ್ಕೆ ಚಿರತೆಯನ್ನು ಬಿಡುವ ಕಾರ್ಯಕ್ಕೆ ಮುಂದಾಗಿದ್ದಾರೆ.

    ಈ ವೇಳೆ ಸ್ಥಳೀಯ ಸಿದ್ಧರಾಜು ಮಾತನಾಡಿ, ಶಿವಗಂಗೆ ಅರಣ್ಯ ಪ್ರದೇಶದಲ್ಲಿ ಸಾಕಷ್ಟು ಕಾಡುಪ್ರಾಣಿಗಳು ಗ್ರಾಮದತ್ತ ಬರುತ್ತಿವೆ. ಅರಣ್ಯ ಅಧಿಕಾರಿಗಳು ಕಾಡು ಪ್ರಾಣಿಗಳ ಸಂತತಿ ಉಳಿಸುವ ನಿಟ್ಟಿನಲ್ಲಿ ನಾಡಿನತ್ತ ಬರುತ್ತಿರುವ ಪ್ರಾಣಿಗಳನ್ನು ರಕ್ಷಣೆ ಮಾಡುತ್ತಿದ್ದಾರೆ. ಅಲ್ಲದೆ ಈ ಚಿರತೆ ಕಳೆದ ಒಂದು ತಿಂಗಳಿನಿಂದ ಗ್ರಾಮದ ಸುತ್ತಮುತ್ತ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಗ್ರಾಮಸ್ಥರಲ್ಲಿ ಭಯದ ವಾತಾವರಣ ಉಂಟುಮಾಡಿತ್ತು. ಸದ್ಯ ಕಳೆದ ರಾತ್ರಿ ಆಹಾರ ಹರಸಿ ಬಂದ ಚಿರತೆ ಅರಣ್ಯಾಧಿಕಾರಿಗಳು ಅಳವಡಿಸಿದ್ದ ಬೋನಿನಲ್ಲಿ ಸೆರೆಯಾಗಿದೆ ಎಂದು ಅರಣ್ಯಾಧಿಕಾರಿಗಳ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.