Tag: forest

  • ಕೊಡಗಿಗೆ ದಸರಾ ಆನೆಗಳು ವಾಪಸ್ – ಇಳಿಯಲು ಒಲ್ಲೆನೆಂದು ಸೊಂಡಿಲಿನಿಂದ ಲಾರಿ ಹಿಡಿದ ವಿಕ್ರಮ

    ಕೊಡಗಿಗೆ ದಸರಾ ಆನೆಗಳು ವಾಪಸ್ – ಇಳಿಯಲು ಒಲ್ಲೆನೆಂದು ಸೊಂಡಿಲಿನಿಂದ ಲಾರಿ ಹಿಡಿದ ವಿಕ್ರಮ

    ಮಡಿಕೇರಿ: ಮೈಸೂರು ದಸರಾಗೆ ಆಗಮಿಸಿದ ಆನೆಗಳು ಈ ಬಾರಿಯೂ ಕಾಡಿಗೆ ಹೋಗಲು ಹಿಂಜರಿದಿದ್ದು, ವಿಕ್ರಮ ಆನೆ ಇಳಿಯಲು ಒಲ್ಲೆ ಎಂದು ಮತ್ತೆ ಲಾರಿಯೆಡೆಗೆ ತಿರುಗಿ ನಿಂತಿದ್ದ. ಬಳಿಕ ಮಾವುತನ ಸೂಚನೆ ನೀಡಿ ಲಾರಿಯಿಂದ ಇಳಿಯುವಂತೆ ಮಾಡಿದೆ.

    ವಿಶ್ವವಿಖ್ಯಾತ ಮೈಸೂರು ದಸರಾದ ಜಂಬೂ ಸವಾರಿಯಲ್ಲಿ ಭಾಗವಹಿಸಲು ಕೊಡಗಿನಿಂದ ನಾಲ್ಕು ಆನೆಗಳು ತೆರಳಿದ್ದವು. ಇದೀಗ ಮತ್ತೆ ಕಾಡಿಗೆ ಮರಳಿವೆ. ದಸರಾದಲ್ಲಿ ಭಾಗವಹಿಸಲು 15 ದಿನಗಳ ಹಿಂದೆ ಕೊಡಗಿನ ಆನೆಕಾಡು ಮತ್ತು ದುಬಾರೆ ಸಾಕಾನೆ ಶಿಬಿರದಿಂದ ನಾಲ್ಕು ಆನೆಗಳನ್ನು ಮೈಸೂರಿಗೆ ಕರೆದೊಯ್ಯಲಾಗಿತ್ತು. ದಸರಾ ಮುಗಿದ ಹಿನ್ನೆಲೆ ಆನೆಗಳು ಇಂದು ಕೊಡಗಿಗೆ ಮರಳಿದವು.

    ಮೈಸೂರಿನಿಂದ ನೇರವಾಗಿ ಕೊಡಗಿನ ದುಬಾರೆ ಸಾಕಾನೆ ಶಿಬಿರ ಮತ್ತು ಕುಶಾಲನಗರ ಸಮೀಪದ ಆನೆ ಕಾಡಿಗೆ ಆನೆಗಳನ್ನು ಲಾರಿಯಲ್ಲಿ ಸಾಗಿಸಲಾಯಿತು. ವಿಕ್ರಮ ಮತ್ತು ಕಾವೇರಿ ಆನೆಯನ್ನು ಆನೆಕಾಡಿನಲ್ಲಿ ಇಳಿಸಲಾಯಿತು. ಆನೆ ರಕ್ಷಣಾ ಲಾರಿಯಲ್ಲಿ ವಿಕ್ರಮ ಆನೆಯನ್ನು ಕರೆತಂದು ಇಳಿಸಲು ಪ್ರಯತ್ನಿಸಿದರೆ, ನಾನು ಇಳಿಯಲು ಒಲ್ಲೇ ಎಂದು ಹಠ ಹಿಡಿದ. ಇಳಿಯುತಿದ್ದ ವಿಕ್ರಮ ಮತ್ತೆ ಲಾರಿಯೆಡೆಗೆ ತಿರುಗಿ ನಿಂತ. ಕೊನೆಗೆ ಮಾವುತ ಸೂಚನೆ ನೀಡಿದ ಬಳಿಕ ಲಾರಿಯಿಂದ ವಿಕ್ರಮ ಇಳಿದಿದ್ದಾನೆ.

    ಲಾರಿಯಿಂದ ಇಳಿಯುತ್ತಿದ್ದಂತೆ ವಿಕ್ರಮ ಆನೆ ಮೊದಲು ಮಜಾಬರೋವರೆಗೆ ಮರವೊಂದಕ್ಕೆ ತನ್ನ ಮೈಯನ್ನು ತೀಡಿದ. ಆನೆ ಹಾಗೆ ಮೈ ಉಜ್ಜಿಕೊಳ್ಳುತ್ತಿದ್ದ ರೀತಿಯನ್ನು ನೋಡಿ ನೆರದಿದ್ದ ಜನರು ನಕ್ಕು ಸುಸ್ತಾದರು. ಕೊನೆಗೆ ಮಾವುತ ಚಿಕ್ಕದೊಂದು ಕೋಲಿನಿಂದ ಎರಡು ಪೆಟ್ಟು ಕೊಟ್ಟು ಆನೆಯನ್ನು ಅಲ್ಲಿಂದ ಮುಂದೆ ಕಳುಹಿಸಬೇಕಾಯಿತು.

  • ವಾಹನ ತರಲು ಹೋದ ಪತಿ – ಕಾಡಿನಲ್ಲೇ ಮಗುವಿಗೆ ಜನ್ಮ ನೀಡಿದ ಮಹಾತಾಯಿ

    ವಾಹನ ತರಲು ಹೋದ ಪತಿ – ಕಾಡಿನಲ್ಲೇ ಮಗುವಿಗೆ ಜನ್ಮ ನೀಡಿದ ಮಹಾತಾಯಿ

    – ಮಗುವಿನ ಜತೆ ಕಾಡಿನಲ್ಲೇ ಕಾಲ ಕಳೆದ ಗಟ್ಟಿಗಿತ್ತಿ

    ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರದ ಮಲೆ ಮಹದೇಶ್ವರ ವನ್ಯಜೀವಿ ಧಾಮ ವ್ಯಾಪ್ತಿಯ ಕಾಡಿನ ದುರ್ಗಮ ಹಾದಿಯಲ್ಲಿ ಪ್ರಸವ ವೇದನೆ ತಾಳಲಾರದೆ ಪತಿಯೊಂದಿಗೆ ಆಸ್ಪತ್ರೆಗೆ ನಡೆದು ಹೋಗುತ್ತಿದ್ದ ಗರ್ಭಿಣಿಗೆ ರಸ್ತೆಯಲ್ಲೇ ಚೊಚ್ಚಲ ಹೆರಿಗೆಯಾಗಿರುವ ಘಟನೆ ತಡರಾತ್ರಿ ನಡೆದಿದೆ.

    ಹೆಣ್ಣು ಮಗುವಿಗೆ ಜನ್ಮ ನೀಡಿದ ತಾಯಿ ಪತಿ ವಾಹನ ಕರೆ ತರಲು ಹೋದಾಗ ಕಾಡಿನಲ್ಲಿ ಹಸುಗೂಸಿನ ಜತೆ ಜೀವ ಹಿಡಿದು ಕಾಡಲ್ಲೇ ಕುಳಿತಿದ್ದಾಳೆ. ಈ ಗಟ್ಟಿಗಿತ್ತಿ ತಾಯಿಯನ್ನು ಮಲೆ ಮಹದೇಶ್ವರ ಬೆಟ್ಟದ ತಪ್ಪಲಿನ ಅಣ್ಣೇಹೊಲ ಗ್ರಾಮದ ವೀರಣ್ಣ ಪತ್ನಿ ಕಮಲ (22) ಎಂದು ಗುರುತಿಸಲಾಗಿದೆ.

    ಗುರುವಾರ ರಾತ್ರಿ ಕಮಲ ಅವರಿಗೆ ಹೆರಿಗೆ ನೋವು ಕಾಣಿಕೊಂಡಿತ್ತು. ಕಾಡಂಚಿನ ಗ್ರಾಮವಾಗಿರುವುದರಿಂದ ವಾಹನ ಸಿಗದೆ ಪತಿ ವೀರಣ್ಣ ಪತ್ನಿಯನ್ನು ನಡೆಸಿಕೊಂಡೆ ಸುಮಾರು 5 ಕಿ.ಮೀ ದೂರದಲ್ಲಿರುವ ಮಹದೇಶ್ವರ ಬೆಟ್ಟದ ಸಾರ್ವಜನಿಕ ಆಸ್ಪತ್ರೆಗೆ ಹೊರಟ್ಟಿದ್ದಾರೆ. ಹೊಟ್ಟೆ ನೋವಿನೊಂದಿಗೆ ಭಾರದ ಹೆಜ್ಜೆ ಇಡುತ್ತಿದ್ದ ಗರ್ಭಿಣಿಗೆ ಕಾಡಿನ ರಸ್ತೆಯಲ್ಲೇ ಹೆರಿಗೆಯಾಗಿ ಹೆಣ್ಣು ಮಗು ಜನಿಸಿದೆ.

    ತಾಯಿ ಮತ್ತು ಮಗುವನ್ನು ತಕ್ಷಣ ಆಸ್ಪತ್ರೆಗೆ ಸೇರಿಸಲು ವಾಹನ ಕರೆತರಲು ವೀರಣ್ಣ ಗ್ರಾಮದತ್ತ ತೆರಳಿದಾಗ ಕಗ್ಗತ್ತಲಲ್ಲಿ, ಕಾಡು ಪ್ರಾಣಿಗಳ ಭಯದ ನಡುವೆ ಮಗುವಿನೊಂದಿಗೆ ತಾಯಿ ಕಾಲ ದೂಡಿದ್ದಾಳೆ. ಬಳಿಕ ಪತಿ ವೀರಣ್ಣ ನೆರೆ ಹೊರೆಯವರೊಂದಿಗೆ ಸರಕು ಸಾಗಣೆ ವಾಹನವನ್ನು ಕರೆತಂದು ತಾಯಿ ಮತ್ತು ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದಾನೆ. ಚಿಕಿತ್ಸೆ ನೀಡಿದ ಡಾ.ಮುಕುಂದ ಮಗು 3 ಕೆ.ಜಿ ಇದ್ದು, ತಾಯಿ ಮತ್ತು ಮಗು ಆರೋಗ್ಯವಾಗಿರುವುದಾಗಿ ತಿಳಿಸಿದ್ದಾರೆ.

  • ಅಡವಿಗೆ ಕರ್ಕೊಂಡು ಹೋಗಿ ಅಪ್ರಾಪ್ತೆ ಮೇಲೆ ಸಂಬಂಧಿಕನಿಂದ್ಲೇ ಅತ್ಯಾಚಾರ

    ಅಡವಿಗೆ ಕರ್ಕೊಂಡು ಹೋಗಿ ಅಪ್ರಾಪ್ತೆ ಮೇಲೆ ಸಂಬಂಧಿಕನಿಂದ್ಲೇ ಅತ್ಯಾಚಾರ

    ದಾವಣಗೆರೆ: ಸಂಬಂಧಿ ಯುವಕನೊಬ್ಬ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಜಿಲ್ಲೆಯ ಜಗಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    23 ವರ್ಷದ ಆರೋಪಿ ತನ್ನ ಸಂಬಂಧಿ ಅಪ್ರಾಪ್ತೆಯನ್ನು ಹುಲ್ಲು ತರಲು ಕಾಡಿಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಯಾರು ಇಲ್ಲದ ಸ್ಥಳದಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಅಷ್ಟೇ ಅಲ್ಲದೇ ಈ ವಿಚಾರವನ್ನು ಮನೆಯಲ್ಲಿ ಯಾರಿಗೂ ಹೇಳದಂತೆ ಜೀವ ಬೆದರಿಕೆ ಹಾಕಿದ್ದಾನೆ.

    ಈ ಘಟನೆ ಕೆಲ ದಿನಗಳ ಹಿಂದೆ ನಡೆದಿದ್ದು, ಅಪ್ರಾಪ್ತೆ ಆರೋಪಿಯ ಭಯದಿಂದ ಯಾರಿಗೂ ಹೇಳಿರಲಿಲ್ಲ. ಆದರೆ ಅಪ್ರಾಪ್ತೆ ಅನಾರೋಗ್ಯದಿಂದ ಬಳಲಿದ ಹಿನ್ನೆಲೆಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯಕ್ಕೆ ಅಪ್ರಾಪ್ತೆಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಅಪ್ರಾಪ್ತೆ ನೀಡಿದ ಮಾಹಿತಿ ಆಧಾರದ ಮೇರೆಗೆ ಜಗಳೂರು ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯನ್ನ ವಶಕ್ಕೆ ಪಡೆದಿದ್ದಾರೆ.

  • ಒಂದೇ ಜಾಗದಲ್ಲಿ ಎರಡು ಬಾರಿ ಕರಡಿ ಪ್ರತ್ಯಕ್ಷ – ಜನರಲ್ಲಿ ಆತಂಕ

    ಒಂದೇ ಜಾಗದಲ್ಲಿ ಎರಡು ಬಾರಿ ಕರಡಿ ಪ್ರತ್ಯಕ್ಷ – ಜನರಲ್ಲಿ ಆತಂಕ

    ತುಮಕೂರು: ನಗರದ ಹೊರವಲಯದಲ್ಲಿರುವ ದೇವರಾಯನದುರ್ಗ ರಸ್ತೆಯ ಬಳಿ ಕರಡಿಯೊಂದು ಕಾಣಿಸಿಕೊಂಡಿದ್ದು, ಸಾರ್ವಜನಿಕರಲ್ಲಿ ಆತಂಕ ಉಂಟುಮಾಡಿದೆ.

    ದೇವರಾಯನದುರ್ಗ ರಸ್ತೆಯ ಕೆಂಪೇಗೌಡ ಕಾಲೇಜಿನ ಸಮೀಪ ಕರಡಿ ಕಂಡುಬಂದಿದೆ. ಶುಕ್ರವಾರ ಸಂಜೆ ಸುಮಾರು 5 ಗಂಟೆ ಮತ್ತು ಇವತ್ತು ಬೆಳಗಿನ ಜಾವ ಒಂದೇ ಜಾಗದಲ್ಲಿ ಎರಡು ಬಾರಿ ಕರಡಿ ಪ್ರತ್ಯಕ್ಷಗೊಂಡಿದೆ. ಕಾಲೇಜಿನ ಸಮೀಪ ಬೆಟ್ಟದ ತಪ್ಪಲಿನಲ್ಲಿ ಎರಡು ಕರಡಿಗಳು ಒಟ್ಟಿಗೆ ವಿಹರಿಸುತಿದ್ದವು.

    ತುಮಕೂರಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿರತೆ ಕಾಣಿಸಿಕೊಂಡು ಸಾರ್ವಜನಿಕರಲ್ಲಿ ಆತಂಕವನ್ನು ಉಂಟು ಮಾಡುತ್ತಿತ್ತು. ಇದೀಗ ಕರಡಿ ಕಾಲೇಜಿನ ಸಮೀಪವೇ ಕಾಣಿಸಿಕೊಂಡಿದ್ದು, ಜನರಲ್ಲಿ ಮತ್ತಷ್ಟು ಭಯವನ್ನು ಹೆಚ್ಚು ಮಾಡಿದೆ.

    ಈ ನಡುವೆ ಕರಡಿ ಯಾರ ಮೇಲೆಯೂ ದಾಳಿ ಮಾಡಿದ್ದ ಬಗ್ಗೆ ವರದಿ ಆಗಿಲ್ಲ. ಆದರೆ ಅರಣ್ಯ ಪ್ರದೇಶ ಸಮೀಪವಿರುವುದರಿಂದ ಗುಡ್ಡಗಾಡು ಆಯಕಟ್ಟಿನ ಸ್ಥಳವಾಗಿರುವುದರಿಂದ ಆಗಾಗ ಕಾಡು ಪ್ರಾಣಿಗಳು ಕಾಣಿಸಿಕೊಳ್ಳುತ್ತವೆ. ಹೀಗಾಗಿ ಸಾರ್ವಜನಿಕರು ಎಚ್ಚರದಿಂದ ಇರುವಂತೆ ಅರಣ್ಯ ಇಲಾಖೆ ಸೂಚಿಸಿದೆ.

  • ಹುತಾತ್ಮರ ಬಲಿದಾನ ನಮಗೆಲ್ಲರಿಗೂ ಸ್ಪೂರ್ತಿ: ಕೆ.ಬಿ ಶಿವಕುಮಾರ್

    ಹುತಾತ್ಮರ ಬಲಿದಾನ ನಮಗೆಲ್ಲರಿಗೂ ಸ್ಪೂರ್ತಿ: ಕೆ.ಬಿ ಶಿವಕುಮಾರ್

    ಶಿವಮೊಗ್ಗ: ವನ್ಯಸಂಪತ್ತಿನ ರಕ್ಷಣೆ ಕಾರ್ಯದಲ್ಲಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ಅರಣ್ಯ ಇಲಾಖೆ ಹುತಾತ್ಮರ ಬಲಿದಾನ ಇನ್ನಷ್ಟು ಆತ್ಮ ಸಮರ್ಪಣೆಯಿಂದ ಕರ್ತವ್ಯ ನಿರ್ವಹಿಸಲು ನಮಗೆಲ್ಲರಿಗೂ ಸ್ಫೂರ್ತಿಯಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್ ತಿಳಿಸಿದರು.

    ನಗರದ ಶ್ರೀಗಂಧ ಕೋಠಿ ಆವರಣದಲ್ಲಿ ವಿಶ್ವ ಹುತಾತ್ಮ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಹುತಾತ್ಮ ಸ್ಮಾರಕಕ್ಕೆ ಪುಷ್ಪಗುಚ್ಛವಿರಿಸಿ ಗೌರವ ಸಮರ್ಪಿಸಿ ಮಾತನಾಡಿದರು.

    ವನ್ಯಜೀವಿ, ಮರಗಳು ಹಾಗೂ ಅರಣ್ಯ ಸಂರಕ್ಷಣೆ ಕಾರ್ಯದಲ್ಲಿ ತೊಡಗುವ ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ ಅತ್ಯಂತ ಕಷ್ಟಕರವಾದ ಪರಿಸ್ಥಿತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ. ಇವರ ಪರಿಶ್ರಮದಿಂದಾಗಿಯೇ ಕಾಡು ಇಂದಿಗೂ ಈ ಸ್ವರೂಪದಲ್ಲಿ ಉಳಿದಿದೆ. ಅರಣ್ಯ ಸಂರಕ್ಷಣೆ ಕಾರ್ಯದಲ್ಲಿ ಅರಣ್ಯ ಇಲಾಖೆಯೊಂದಿಗೆ ಎಲ್ಲರೂ ಸಹಕರಿಸುವ ಅಗತ್ಯವಿದೆ ಎಂದರು.

    ಕರ್ತವ್ಯದ ವೇಳೆ ಮೃತಪಟ್ಟ ಹುತಾತ್ಮರ ಕುಟುಂಬದ ಜತೆ ನಾವೆಲ್ಲರೂ ಇದ್ದೇವೆ. ಅವರ ಕಷ್ಟ ಸುಖದಲ್ಲಿ ಸರ್ಕಾರ ಕೈ ಜೋಡಿಸಿ ಸ್ಪಂದಿಸುತ್ತದೆ. ಹುತಾತ್ಮರಾದವರ ನೆನಪು ಸದಾ ಜೀವಂತವಾಗಿರುವುದು. ಸರ್ಕಾರಿ ನೌಕರರು ಶೇ. 100ರಷ್ಟು ಅರ್ಪಣಾ ಮನೋಭಾವದಿಂದ ಕರ್ತವ್ಯ ನಿರ್ವಹಿಸುವುದೇ, ಸೇವೆಯಲ್ಲಿರುವಾಗ ಹುತಾತ್ಮರಾಗುವವರಿಗೆ ನೀಡುವ ನಿಜವಾದ ಗೌರವ ಎಂದರು.

    ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕೆ.ಎಂ.ಶಾಂತರಾಜು ಅವರು ಮಾತನಾಡಿ, ಅರಣ್ಯ ಇಲಾಖೆಯವರು ಕೇವಲ ಅರಣ್ಯ ಸಂರಕ್ಷಣೆ ಮಾತ್ರವಲ್ಲದೆ ಅರಣ್ಯವನ್ನು ಬೆಳೆಸುವ ಕಾರ್ಯವನ್ನು ಸಹ ಮಾಡುತ್ತಿದ್ದಾರೆ. ಕರ್ತವ್ಯದಲ್ಲಿರುವಾಗ ಹುತಾತ್ಮರಾಗುವವರ ಬಲಿದಾನ ಎಂದಿಗೂ ವ್ಯರ್ಥವಾಗುವುದಿಲ್ಲ. ಅವರು ನಮಗೆಲ್ಲರಿಗೂ ಸ್ಫೂರ್ತಿಯಾಗಿದ್ದಾರೆ ಎಂದರು.

    ಜಿಲ್ಲಾ ಪೊಲೀಸ್ ಬ್ಯಾಂಡ್ ತಂಡದಿಂದ ಹುತಾತ್ಮರಿಗೆ ಗೌರವ ಸಮರ್ಪಣೆ ಹಾಗೂ ಪೊಲೀಸ್ ತಂಡದಿಂದ ಕುಶಾಲು ತೋಪು ಹಾರಿಸಿ ಗೌರವ ಸಲ್ಲಿಸಲಾಯಿತು.

  • ನಾಡಿನೊಳಗೆ ಕಾಡು ಬೆಳೆಸಲು ಹೊರಟ ಸಂವೇದನಾ ಯುವಕರು

    ನಾಡಿನೊಳಗೆ ಕಾಡು ಬೆಳೆಸಲು ಹೊರಟ ಸಂವೇದನಾ ಯುವಕರು

    ಉಡುಪಿ: ಕಾಡು ನಾಶ ಆಗುತ್ತಿದ್ದು, ಕಾಡಿರುವ ಜಾಗದಲ್ಲಿ ನಾಡು ನಿರ್ಮಾಣ ಆಗಿದೆ ಎಂಬ ಒಂದು ದೊಡ್ಡ ಕೂಗು ಪರಿಸರವಾದಿಗಳಿಂದ ಕೇಳಿ ಬರುತ್ತಿದೆ. ಹೀಗಾಗಿಯೇ ನಾಡಿನೊಳಗೆ ಕಾಡು ನಿರ್ಮಾಣ ಮಾಡಲು ಉಡುಪಿಯ ಸಂಸ್ಥೆಯೊಂದು ಮುಂದಾಗಿದೆ. ಪೇಟೆಯೊಳಗೆ ಒಂದು ಚಿಕ್ಕ ಜಾಗ ಸಿಕ್ಕರೂ ಸಾಕು ಅಲ್ಲಿ ದೊಡ್ಡ ಕಾಡು ನಿರ್ಮಾಣ ಮಾಡಬೇಕು ಎಂಬ ಕನಸು ಈ ಸಂಸ್ಥೆಯದ್ದಾಗಿದೆ.

    ಉಡುಪಿಯ ಸಂವೇದನಾ ಸಂಸ್ಥೆ ಸದ್ದಿಲ್ಲದೆ ಇಂತಹದೊಂದು ಕೆಲಸವನ್ನು ಮಾಡುತ್ತಿದೆ. ತನ್ನ ವನ ಸಂವೇದನಾ ಯೋಜನೆಯ ಅಂಗವಾಗಿ ಉಡುಪಿಯ ಮಲ್ಪೆ ಸಮೀಪದ ಕಂಗಣಬೆಟ್ಟು ಅಣ್ಣಪ್ಪ ಸ್ವಾಮಿ ದೇವಸ್ಥಾನದ ಪಕ್ಕದಲ್ಲಿ ಅರ್ಧ ಎಕರೆ ಜಮೀನಿನಲ್ಲಿ ಸಿರಿವನವನ್ನು ನಿರ್ಮಿಸಿದೆ. ಇದು ಸಂಸ್ಥೆಯ ಎರಡನೇ ವನ. ಇಲ್ಲಿ 23 ಜಾತಿಯ 600 ಗಿಡಗಳನ್ನು ತಿಂಗಳ ಹಿಂದೆ ನೆಟ್ಟಾಗಿದೆ.

    ಬಿಲ್ವ ಪತ್ರೆ, ಮುತ್ತುಗ, ಶಿವಾನಿ, ಬಾಗೆ ಮರೆ, ಸಿಲ್ವರ್ ಓಕ್, ಬೀಟೆ, ರಕ್ತ ಚಂದನ ಹೀಗೆ 15 ಜಾತಿ ಆಯುರ್ವೇದ ಗಿಡ ನೆಡಲಾಗಿದೆ. ಅದರ ಪಾಲನೆ ಪೋಷಣೆಗೆ ಸ್ವಯಂ ಸೇವಕರ ತಂಡಕ್ಕೆ ಜವಾಬ್ದಾರಿ ಕೊಡಲಾಗಿದೆ.

    ಸಿರಿವನದಲ್ಲಿ ಹಕ್ಕಿಗಳನ್ನು ಸೆಳೆಯುವ ಶಕ್ತಿಯಿರುವ ಮರಗಳನ್ನು ಬೆಳೆಸಲಾಗುತ್ತಿದೆ. ಈ ಪೈಕಿ ಮುತ್ತುಗ ಸಂಪೂರ್ಣ ಆಯುರ್ವೇದಿಕ್ ಸಸ್ಯ. ಎಲ್ಲಾ ಹಕ್ಕಿಗಳನ್ನು ಮುತ್ತುಗದ ಹೂವು ಆಕರ್ಷಿಸುತ್ತದೆ. ಮುತ್ತುಗಕ್ಕೆ ಆ ಶಕ್ತಿಯಿದೆ. ಸುಮಾರು 20ಕ್ಕೂ ಹಕ್ಕಿಗಳನ್ನು ಸೆಳೆಯುವ ಗಿಡಗಳನ್ನು ನೆಡಲಾಗಿದೆ. ಕಾಗೆಯನ್ನು ಯಾವ ಹೂವುಗಳೂ ಆಕರ್ಷಿಸುವುದಿಲ್ಲ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸಂವೇದನಾ ಸಂಸ್ಥೆಯ ಸಂಸ್ಥಾಪಕ ಪ್ರಕಾಶ್, ಸಮಾನ ಮನಸ್ಕರ ತಂಡ ಪರಿಸರದ ಬಗ್ಗೆ ಚಿಂತನೆ ಮಾಡಿದಾಗ ಯೋಜನೆ ಚರ್ಚೆಗೆ ಬಂತು. ನಾಡಿನೊಳಗೊಂದು ಕಾಡು ನಿರ್ಮಾಣ ಆಗಬೇಕು. ಅದು ಮನುಷ್ಯನಿಗೂ ಪ್ರಾಣಿ ಪಕ್ಷಿಗಳಿಗೂ ಉಪಯೋಗ ಆಗಬೇಕು ಎಂಬುದು ನಮ್ಮ ಉದ್ದೇಶ. ನಮ್ಮ ಊರಿನ, ರಾಜ್ಯದ ಅಲ್ಲಲ್ಲಿ ಪುಟ್ಟ ಪುಟ್ಟ ಕಾಡುಗಳನ್ನು ನಾವು ನಿರ್ಮಾಣ ಮಾಡುವ ಸಂಕಲ್ಪ ಹೊಂದಿದ್ದೇವೆ. ಇದರ ಜೊತೆ ಪರಿಸರ ಕಾಳಜಿಯ ಹತ್ತು ಹಲವು ಕೆಲಸಗಳನ್ನು ಮಾಡುತ್ತಿದ್ದೇವೆ. ನಮಗೆ ಖಾಲಿ ಜಮೀನು ಮತ್ತು ಊರಿನ ಆಸಕ್ತ ಯುವಕ ತಂಡ ಸಿಕ್ಕರೆ ನಿಮ್ಮೂರಲ್ಲೂ ಇಂತಹ ವನ ಕಟ್ಟುತ್ತೇವೆ ಎಂದು ಹೇಳಿದರು.

  • ಕಪ್ಪೆಯನ್ನೇ ಕಪ್ಪೆ ನುಂಗಿತ್ತಾ – ಕುತೂಹಲಕ್ಕೆ ಕಾರಣವಾಯ್ತು ಘಟನೆ

    ಕಪ್ಪೆಯನ್ನೇ ಕಪ್ಪೆ ನುಂಗಿತ್ತಾ – ಕುತೂಹಲಕ್ಕೆ ಕಾರಣವಾಯ್ತು ಘಟನೆ

    – ಜಂಪಿಂಗ್ ಚಿಕನ್‍ಗೆ ಗೋವಾದಲ್ಲಿದೆ ಬಹು ಬೇಡಿಕೆ
    – ಕಾರವಾರದಲ್ಲೊಂದು ಅಪರೂಪದ ಘಟನೆ

    ಕಾರವಾರ: ಕಪ್ಪೆಗಳನ್ನು ಹಾವು ನುಂಗುವುದು ಸಾಮಾನ್ಯ. ಹಾಗೆಯೇ ಅಪರೂಪಕ್ಕೆ ಕಪ್ಪೆಗಳೇ ಹಾವನ್ನು ನುಂಗಿದ ಘಟನೆ ಕೂಡ ನಡೆದಿದೆ. ಆದರೆ ಕಪ್ಪೆಯೊಂದು ತನ್ನದೇ ಜಾತಿಯ ಮತ್ತೊಂದು ಕಪ್ಪೆಯನ್ನು ನುಂಗಿದ ಅಪರೂಪದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕಡವಾಡ ಗ್ರಾಮದಲ್ಲಿ ನಡೆದಿದೆ.

    ಈ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದ್ದು, ಕಾರವಾರದ ಅಜಯ್ ಎಂಬುವವರು ಈ ದೃಶ್ಯವನ್ನು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ. ನೀರಿನಲ್ಲಿ ಮತ್ತು ನೆಲದ ಮೇಲೆ ವಾಸಿಸುವ ಕಪ್ಪೆ ಮಾಂಸಾಹಾರಿ ವರ್ಗಕ್ಕೆ ಸೇರಿವೆ. ಬುಲ್ ಫ್ರಾಗ್ ಎಂದು ವೈಜ್ಞಾನಿಕ ಹೆಸರಿನ ಸ್ಥಳೀಯ ಭಾಷೆಯಲ್ಲಿ ಗೋಂಕರ ಕಪ್ಪೆಯೆನ್ನುವ ಈ ಕಪ್ಪೆ ಟ್ರೀ ಫ್ರಾಗ್ (ಮರಗಪ್ಪೆ)ಯನ್ನು ನುಂಗಿದೆ.

    ಗೋಂಕರು ಕಪ್ಪೆ ಸಂಶೋಧಕರು ಹೇಳುವಂತೆ ಸುಮಾರು ಏಳು ಕೆಜಿ ತೂಕದ ವರೆಗೆ ದೂಡ್ಡ ಗಾತ್ರದಲ್ಲಿ ಬೆಳೆಯುತ್ತವೆ. ಈ ಕಪ್ಪೆಗಳು ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಹೆಚ್ಚು ಕಾಣಸಿಗುತ್ತವೆ. ಇವು ತನ್ನ ಗಾತ್ರಕ್ಕಿಂತ ಚಿಕ್ಕದಿರುವ ಯಾವುದೇ ಪ್ರಾಣಿ, ಪಕ್ಷಿಗಳಿರಬಹುದು ಅವುಗಳನ್ನು ಭಕ್ಷಿಸುತ್ತವೆ. ಆಹಾರಕ್ಕಾಗಿ ತನ್ನದೇ ವಂಶದ ಕಪ್ಪೆಗಳನ್ನು ಸಹ ತನ್ನ ಗಾತ್ರಕ್ಕಿಂತ ಚಿಕ್ಕದಾಗಿದ್ದಲ್ಲಿ ಇವು ತಿನ್ನುತ್ತವೆ. ಇದಲ್ಲದೇ ಚಿಕ್ಕ ಹಾವುಗಳನ್ನು ಕೂಡ ತಿನ್ನುತ್ತವೆ ಎನ್ನುತ್ತಾರೆ ತಜ್ಞರು. ಇವು ಈ ರೀತಿ ತಿನ್ನುವುದು ಸರ್ವೇ ಸಾಮಾನ್ಯ, ಕಾಳಿಂಗ ಸರ್ಪಗಳು ಹೇಗೆ ಕೇರೆ ಹಾವನ್ನು ತಿನ್ನುತ್ತವೆಯೋ ಅದೇ ಮಾದರಿಯಲ್ಲಿ ಇವು ತಿನ್ನುತ್ತವೆ ಎನ್ನುವುದು ತಜ್ಞರ ಮಾತು.

    ಗೋವಾಕ್ಕೆ ಮಾರಾಟ
    ಬುಲ್ ಪ್ರಾಗ್ ಕಪ್ಪೆಯು ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಅಂಕೋಲ, ಜೋಯಿಡಾ ಭಾಗಗಳಲ್ಲಿ ಅತೀ ಹೆಚ್ಚು ಕಾಣಸಿಗುತ್ತವೆ. ಮಳೆಗಾಲ ಪ್ರಾರಂಭದಲ್ಲಿ ಇವು ಸಂತಾನೋತ್ಪತ್ತಿಗಾಗಿ ಹೊರಬರುತ್ತವೆ. ಈ ಕಪ್ಪೆಗಳು ಗಾತ್ರದಲ್ಲಿ ದೊಡ್ಡದಿದ್ದು ಗೋವಾ ರಾಜ್ಯದಲ್ಲಿ ಬರುವ ವಿದೇಶಿಗರಿಗೆ ಈ ಕಪ್ಪೆ ಅಚ್ಚುಮೆಚ್ಚು. ಗೋವಾದಲ್ಲಿ ಜಂಪಿಂಗ್ ಚಿಕನ್ ಎಂದು ಪ್ರಸಿದ್ಧಿ ಪಡೆದಿದ್ದು, ಕಾರವಾರದ ಮೂಲಕ ಈ ಕಪ್ಪೆಗಳು ಅನಧಿಕೃತವಾಗಿ ಗೋವಾಕ್ಕೆ ಸಾಗಿಸಲಾಗುತ್ತದೆ. ಕರ್ನಾಟಕದಲ್ಲಿ ಈ ಕಪ್ಪೆಗಳ ಬೇಟೆಗೆ ನಿಷೇಧವಿದೆ. ಆದರೂ ಗೋವಾ ರಾಜ್ಯದಲ್ಲಿ ಮಾಂಸಕ್ಕಾಗಿ ಇದರ ಬೇಡಿಕೆ ಹೆಚ್ಚಿದ್ದರಿಂದ ಇವುಗಳ ಬೇಟೆ ಹೆಚ್ಚು ನಡೆಯುತ್ತಿದ್ದು ಅಳವಿನ ಅಂಚಿನಲ್ಲಿದೆ.

    ಉತ್ತರ ಕನ್ನಡ ಜಿಲ್ಲೆ ಅತ್ಯಂತ ಹೆಚ್ಚು ಅರಣ್ಯ ಪ್ರದೇಶ ಹೊಂದಿದ್ದು, ಇಲ್ಲಿ ಅಪರೂಪದ ಪ್ರಾಣಿಗಳು ಪಕ್ಷಿಗಳು, ಜಲಚರಗಳ ತವರಾಗಿದೆ. ಈ ಹಿಂದೆ ಗೋಕರ್ಣದಲ್ಲಿ ಕರಾವಳಿ ಸ್ಕೀಟರಿಂಗ್ ಎಂಬ ಅಪರೂಪದ ಸಂಗೀತ ಧ್ವನಿ ಹೊರಡಿಸುವ ಕಪ್ಪೆಯನ್ನು ಅರಣ್ಯಾಧಿಕಾರಿ ಸಿ.ಆರ್ ನಾಯ್ಕ ರವರು ಪತ್ತೆಮಾಡಿದ್ದರು. ಮೊಟ್ಟೆ ಬದಲು ನೇರವಾಗಿ ಮರಿ ಹಾಕುವ ಕಪ್ಪೆಗಳು, ಬಿದಿರಿನಲ್ಲಿ ಮಾತ್ರ ಬದುಕುವ ಹಾರುವ ಕಪ್ಪೆಗಳು, ದೇಹದ ಮೇಲ್ಭಾಗದಲ್ಲಿ ವಿಷವನ್ನು ಹೊಂದಿದ ಕಪ್ಪೆಗಳು ಜಿಲ್ಲೆಯಲ್ಲಿ ಪತ್ತೆಯಾಗಿವೆ.

  • ಕಳ್ಳಸಾಗಣೆ ಬಗ್ಗೆ ಪೊಲೀಸರಿಗೆ ಮಾಹಿತಿ – ಸೋದರಿಯ ಮಗನಿಂದ್ಲೇ ಗುಂಡಿಕ್ಕಿ ಮಹಿಳೆ ಹತ್ಯೆ

    ಕಳ್ಳಸಾಗಣೆ ಬಗ್ಗೆ ಪೊಲೀಸರಿಗೆ ಮಾಹಿತಿ – ಸೋದರಿಯ ಮಗನಿಂದ್ಲೇ ಗುಂಡಿಕ್ಕಿ ಮಹಿಳೆ ಹತ್ಯೆ

    ತಿರುವನಂತಪುರಂ: 34 ವರ್ಷದ ಮಹಿಳೆಯೊಬ್ಬಳನ್ನು ಗುಂಡಿಕ್ಕಿ ಕೊಲೆ ಮಾಡಿರುವ ಘಟನೆ ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ  ಪಾಲಪ್ಪೆಟ್ಟಿ ನಿವಾಸಿ ಚಂದ್ರಿಕಾಳನ್ನು ಶುಕ್ರವಾರ ರಾತ್ರಿ ಹತ್ಯೆ ಮಾಡಲಾಗಿದೆ. ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪ್ರಾಪ್ತ ಹುಡುಗ ಸೇರಿದಂತೆ ಮೂವರನ್ನು ಪೊಲೀಸ್ ವಶಕ್ಕೆ ಪಡೆದುಕೊಂಡಿದ್ದಾರೆ. ಚಂದ್ರಿಕಾಳ ಸಹೋದರಿಯ ಮಗನಾದ 20 ವರ್ಷದ ಕಲಿಯಪ್ಪನ್ ಪಾಲಪ್ಪೆಟ್ಟಿಯಲ್ಲಿರುವ ತನ್ನ ಜಮೀನಿನಲ್ಲಿ ಬಂದೂಕಿನಿಂದ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

    ಶ್ರೀಗಂಧ ಮರಗಳ ಕಳ್ಳಸಾಗಣೆ ಮಾಡುತ್ತಿದ್ದ ಕಲಿಯಪ್ಪನನ್ನು ಇತ್ತೀಚೆಗೆ ಅರಣ್ಯ ಇಲಾಖೆ ಬಂಧಿಸಿತ್ತು. ಈ ಮಾಹಿತಿಯನ್ನು ಚಂದ್ರಿಕಾ ಅರಣ್ಯ ಅಧಿಕಾರಿಗಳಿಗೆ ತಿಳಿಸಿದ್ದರು ಎನ್ನಲಾಗಿದೆ. ಕಳೆದ ವಾರ ಕಲಿಯಪ್ಪನ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದನು. ಹೀಗಾಗಿ ಈ ದ್ವೇಷದಿಂದಾಗಿ ಕಲಿಯಪ್ಪನ್, ಚಂದ್ರಿಕಾಳನ್ನು ಕೊಲೆ ಮಾಡಿದನೆಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

    ವಶಕ್ಕೆ ಪಡೆದ ಇತರ ಆರೋಪಿ 19 ವರ್ಷದ ಮಣಿ. ಅಪ್ರಾಪ್ತ ಹುಡುಗ ಅಪರಾಧದ ಸಮಯದಲ್ಲಿ ಕಲಿಯಪ್ಪನ್ ಜೊತೆಯಿದ್ದನು. ಘಟನೆಯ ನಂತರ ಚಂದ್ರಿಕಾ ಅವರ ನೆರೆಹೊರೆಯವರು ಆರೋಪಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಪ್ರದೇಶವು ಅರಣ್ಯ ಪ್ರದೇಶದ ಸಮೀಪದಲ್ಲಿದೆ ಮತ್ತು ರಸ್ತೆ ಮುಗಿದ ನಂತರ ಅಲ್ಲಿಗೆ ತಲುಪಲು ಒಂದು ಗಂಟೆಯ ಸಮಯ ಬೇಕಾಗುತ್ತದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದರು.

    ಕಲಿಯಪ್ಪನ್ ಈ ಪ್ರದೇಶದ ಇನ್ನೊಬ್ಬ ವ್ಯಕ್ತಿಗೆ ಸೇರಿದ ಬಂದೂಕಿನಿಂದ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಆ ಪ್ರದೇಶದಲ್ಲಿ ವಾಸಿಸುವ ವ್ಯಕ್ತಿಯು ಬಂದೂಕನ್ನು ಇಟ್ಟುಕೊಂಡಿದ್ದನು. ಅದನ್ನು ಬೇಟೆಯಾಡಲು ಬಳಸಲಾಗುತ್ತಿತ್ತು. ಇದು ಕಾನೂನು ಬಾಹಿರವಾದ್ದರಿಂದ ವ್ಯಕ್ತಿಯು ಬಂದೂಕನ್ನು ಕಾಡಿನಲ್ಲಿ ಅಡಗಿಸಿಟ್ಟಿದ್ದನು. ಕಲಿಯಪ್ಪನ್‍ಗೆ ಆ ಸ್ಥಳದ ಬಗ್ಗೆ ತಿಳಿದಿತ್ತು. ಹೀಗಾಗಿ ಅಲ್ಲಿಂದ ಬಂದೂಕನ್ನು ತೆಗೆದುಕೊಂಡು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

    ಈ ಘಟನೆ ನಡೆದಾಗ ಆರೋಪಿಗಳು ಮದ್ಯಪಾನ ಮಾಡಿದ್ದರು. ಸದ್ಯಕ್ಕೆ ನಾವು ಅವರಿಂದ ಹೆಚ್ಚಿನ ವಿವರಗಳನ್ನು ಸಂಗ್ರಹಿಸುತ್ತಿದ್ದೇವೆ. ಆದರೆ ಅವರು ನಮ್ಮ ಪ್ರಶ್ನೆಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಅಧಿಕಾರಿ ಹೇಳಿದರು.

  • ವೀರಪ್ಪನ್‍ನ ಮೀಣ್ಯಂ ದಾಳಿಗೆ 28 ವರ್ಷ

    ವೀರಪ್ಪನ್‍ನ ಮೀಣ್ಯಂ ದಾಳಿಗೆ 28 ವರ್ಷ

    ಚಾಮರಾಜನಗರ: ಕಾಡುಗಳ್ಳ ವೀರಪ್ಪನ್ ನ ರಕ್ತಸಿಕ್ತ ಅಧ್ಯಾಯದಲ್ಲಿ ಒಂದಾದ ಮೀಣ್ಯಂ ದಾಳಿಗೆ ಬರೋಬ್ಬರಿ ಇಂದಿಗೆ 28 ವರ್ಷವಾಗಿದ್ದು, ಸ್ವಾತಂತ್ರ್ಯ ದಿನಾಚರಣೆ ಸಂಭ್ರಮಾಚರಣೆಯ ಮುನ್ನ ಪೊಲೀಸರಿಗೆ ಈ ಮರಣದ ಕಥೆ ಈಗಲೂ ಕಣ್ಣೀರು ತರಿಸುತ್ತದೆ.

    ದಂತಚೋರ ಎಲ್ಲೆಮೀರಿದ್ದ 1990ರ ದಶಕದಲ್ಲಿ ಎಸ್‍ಟಿಎಫ್ ಕರ್ತವ್ಯ ಮಾಡಲು ಹಿಂಜರಿಯುತ್ತಿದ್ದ ವೇಳೆ ಆತನನ್ನು ಹಿಡಿದೇ ಹಿಡಿಯುತ್ತೇವೆ ಎಂದು ಸಾಹಸತನ ತೋರಿದ್ದ ಎಸ್.ಪಿ. ಹರಿಕೃಷ್ಣ ಹಾಗೂ ಎಸ್‍ಐ ಶಕೀಲ್ ಅಹ್ಮದ್ ಮೋಸದಿಂದ ಬಲಿಯಾಗಿದ್ದನ್ನು ಪೊಲೀಸರು ಈಗಲೂ ನೆನೆಯುತ್ತಾರೆ.

    ಏನದು ಮೀಣ್ಯಂ ದಾಳಿ?: ಎಸ್‍ಟಿಎಫ್ ಪಡೆಯ ನಿರಂತರ ಕಾರ್ಯಾಚರಣೆ ವೇಳೆ ವೀರಪ್ಪನ್ ಬಂಟನಾದ ಗುರುನಾಥನ್ ಎಂಬಾತನನ್ನು ಹಿಡಿಯುವ ಅವಕಾಶ ಒದಗಿ ಬಂದು ಕೊನೆಗೆ ಆತ ಪೊಲೀಸರ ಗುಂಡಿಗೆ ಬಲಿಯಾಗುತ್ತಾನೆ. ಬಂಟನನ್ನು ಹೊಡೆದುರುಳಿಸಿದ ಹರಿಕೃಷ್ಣ ಮತ್ತು ಶಕೀಲ್ ವಿರುದ್ಧ ಪ್ರತಿಕಾರ ತೀರಿಸಿಕೊಳ್ಳಬೇಕೆಂದು ಹಠಕ್ಕೆ ಬಿದ್ದು ಕಮಲನಾಯ್ಕ್ ಎಂಬವನ ಮೂಲಕ ವೀರಪ್ಪನ್ ದಾಳಿ ನಡೆಸಲು ಯೋಜನೆ ರೂಪಿಸುತ್ತಾನೆ.

    ಕಮಲನಾಯ್ಕ್ ನು ವೀರಪ್ಪನ್ ಮತ್ತು ಪೊಲೀಸರಿಗೆ ಮಾಹಿತಿದಾರನಂತೆ ಕೆಲಸ ಮಾಡುತ್ತಿದ್ದನು. ವ್ಯಾಪಾರಿಗಳ ಸೋಗಿನಲ್ಲಿ ಕಾಡುಗಳ್ಳನನ್ನು ಹಿಡಿಯಲು ಹೊರಟ ಹರಿಕೃಷ್ಣ ಮತ್ತು ಶಕೀಲ್ ಅಹ್ಮದ್ ಅವರನ್ನು ಮೀಣ್ಯಂ ಬಳಿ ವೀರಪ್ಪನ್ ಹೊಂಚುಹಾಕಿ ಕಾದು ಗುಂಡಿನ ಮಳೆಯನ್ನೇ ಸುರಿಸಿ ಬಲಿ ಪಡೆಯುತ್ತಾನೆ. ಘಟನೆಯಲ್ಲಿ ಅಪ್ಪಚ್ಚು, ಸುಂದರ್, ಕಾಳಪ್ಪ ಸೇರಿದಂತೆ ಕಮಲನಾಯ್ಕನೂ ಮೃತಪಡುತ್ತಾನೆ. ಈ ವೇಳೆ ಕೆಲ ಪೊಲೀಸರು ಗಾಯಗೊಳ್ಳುತ್ತಾರೆ. ಈ ಮೂವರು ಈಗಲೂ ಅಂದು ಹಾರಿದ ಬುಲೆಟ್ ಗಳ ಜೊತೆ ಬದುಕು ನಡೆಸುತ್ತಿದ್ದಾರೆ.

    ಅಂದಿನ ಘಟನೆಯಲ್ಲಿ ಗಾಯಗೊಂಡ ಚಾಮರಾಜನಗರ ಪಿಎಸ್ ಐ ಸಿದ್ದರಾಜನಾಯ್ಕ್ ಈ ಕುರಿತು ಮಾತನಾಡಿ, ಪೊಲೀಸರಿಗೆ ಸ್ವಾತಂತ್ರ್ಯದ ಸಂಭ್ರಮಾಚರಣೆಯ ಹಿಂದಿನ ದಿನ ಬರುವ ಕರಾಳ ದಿನ ಮೀಣ್ಯಂ ದಾಳಿಯಾಗಿದೆ. ದಕ್ಷ, ಸಾಹಸಿ ಪೊಲೀಸ್ ಅಧಿಕಾರಿಗಳನ್ನು ನಾವು ಕಳೆದುಕೊಂಡೆವು. ಇಂದಿಗೂ ಅಂದು ನಡೆದ ಘಟನೆ ಕಣ್ಣಿಗೆ ಕಟ್ಟಿದಂತಿದೆ ಎಂದು ಭಾವುಕರಾದರು. ಇನ್ನು ಇಂದು ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಸ್ಮಾರಕ ಸ್ಥಳಕ್ಕೆ ತೆರಳಿ ಗೌರವ ನಮನ ಸಲ್ಲಿಸಿದ್ದಾರೆ.

  • ತೀರಾ ಅಪರೂಪದ ಕೆಂಪು ಹವಳದ ಹಾವು ಪತ್ತೆ

    ತೀರಾ ಅಪರೂಪದ ಕೆಂಪು ಹವಳದ ಹಾವು ಪತ್ತೆ

    ಡೆಹ್ರಾಡೂನ್: ತೀರಾ ಅಪರೂಪದ ಕೆಂಪು ಹವಳದ ಕುಕ್ರಿ ಹಾವು ಉತ್ತರಾಖಂಡದ ನೈನಿತಾಲ್ ಜಿಲ್ಲೆಯ ಮನೆಯೊಂದರಲ್ಲಿ ಪತ್ತೆಯಾಗಿದೆ.

    ನೈನಿತಾಲ್‍ನ ಬಿಂದುಖಟ್ಟಾ ಪ್ರದೇಶದ ಬಳಿ ಈ ಅಪರೂಪದ ಹಾವು ಪತ್ತೆಯಾಗಿದ್ದು, ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ರಕ್ಷಣೆ ಮಾಡಿದ್ದಾರೆ. ಅರಣ್ಯ ಅಧಿಕಾರಿಗಳು ಬರುವ ಮುನ್ನ ಗ್ರಾಮಸ್ಥರು ಹಾವನ್ನು ಹಿಡಿದು ಪ್ಲಾಸ್ಟಿಕ್ ಚೀಲದೊಳಗೆ ರಕ್ಷಿಸಿದ್ದರು ಎಂದು ತಿಳಿದು ಬಂದಿದೆ.

    ಬಿಂದುಖಟ್ಟಾ ಪ್ರದೇಶದ ಕುರಿಯಾ ಖಟ್ಟಾ ಗ್ರಾಮದ ನಿವಾಸಿ ಕವೀಂದ್ರ ಕೊರಂಗಾ ಅವರಿಂದ ಗೌಲಾ ಅರಣ್ಯ ವಲಯಕ್ಕೆ ದೂರವಾಣಿ ಮೂಲಕ ಕರೆ ಬಂದಿತ್ತು. ಅವರು ಮನೆಯೊಳಗೆ ಹಾವು ಬಂದಿದ್ದು, ರಕ್ಷಣೆ ಮಾಡುವಂತೆ ಮನವಿ ಮಾಡಿದ್ದರು. ನಾವು ಹೋಗುವಷ್ಟರಲ್ಲಿ ಗ್ರಾಮಸ್ಥರು ಹಿಡಿದು ಪ್ಲಾಸ್ಟಿಕ್ ಚೀಲದಲ್ಲಿ ರಕ್ಷಿಸಿದ್ದರು ಎಂದು ಅರಣ್ಯ ಅಧಿಕಾರಿ ನಿತೀಶ್ ಮಣಿ ತ್ರಿಪಾಠಿ ತಿಳಿಸಿದ್ದಾರೆ.

    ನಾವು ಅದನ್ನು ನೋಡಿದ ತಕ್ಷಣ ನಮಗೆ ಆಶ್ಚರ್ಯವಾಯಿತು. ಇದನ್ನು ಕೆಂಪು ಹವಳದ ಕುಕ್ರಿ ಹಾವು ಎಂದು ಕರೆಯಲಾಗುತ್ತದೆ. ಇದು ತೀರ ಅಪರೂಪದ ಹಾವಾಗಿದೆ. ನಂತರ ನಾವು ಅದನ್ನು ರಕ್ಷಿಸಿ ಅರಣ್ಯಕ್ಕೆ ಬಿಟ್ಟಿದ್ದೇವೆ ಎಂದರು.

    ಈ ಹಿಂದೆ ಅಂದರೆ 1936 ರಲ್ಲಿ ಉತ್ತರ ಪ್ರದೇಶದ ಲಖಿಂಪುರ ಪ್ರದೇಶದಲ್ಲಿ ಮೊದಲ ಬಾರಿಗೆ ಕೆಂಪು ಹವಳದ ಕುಕ್ರಿ ಹಾವು ಪತ್ತೆಯಾಗಿತ್ತು. ಆಗ ಈ ಹಾವಿಗೆ ವೈಜ್ಞಾನಿಕ ಹೆಸರು ‘ಒಲಿಗೊಡಾನ್ ಖೇರಿಯೆನ್ಸಿಸ್’ ಎಂದು ತಜ್ಞರು ಹೇಳಿದ್ದರು. ನಂತರ 2015ರಲ್ಲಿ ಉತ್ತರಾಖಂಡದ ಸುರೈ ಅರಣ್ಯ ವಲಯದಲ್ಲಿ ಇದೇ ರೀತಿ ಹಾವು ಪತ್ತೆಯಾಗಿತ್ತು.

    ಈ ಹಾವಿನ ಬಣ್ಣ ಕೆಂಪು ಮತ್ತು ಕಿತ್ತಳೆ ಬಣ್ಣಗಳಿಂದ ಕೂಡಿದೆ. ಕೆಲವು ವಾರಗಳ ಹಿಂದೆ ಉತ್ತರ ಪ್ರದೇಶದ ದುಧ್ವಾ ರಾಷ್ಟ್ರೀಯ ಉದ್ಯಾನದಲ್ಲಿ ಕೆಂಪು ಹವಳದ ಕುಕ್ರಿ ಹಾವು ಪತ್ತೆಯಾಗಿತ್ತು. ಇದೀಗ ನೈನಿತಾಲ್ ಜಿಲ್ಲೆಯಲ್ಲಿ ಮತ್ತೆ ಈ ಹಾವು ಪತ್ತೆಯಾಗಿದೆ.