Tag: forest

  • ಕಾಡಾನೆ ಸವಾರಿಗೆ ಗ್ರಾಮಸ್ಥರಿಂದಲೇ ಎಸ್ಕಾರ್ಟ್- ಸುಳ್ಯದಲ್ಲೊಂದು ಅಪರೂಪದ ವಿದ್ಯಮಾನ

    ಕಾಡಾನೆ ಸವಾರಿಗೆ ಗ್ರಾಮಸ್ಥರಿಂದಲೇ ಎಸ್ಕಾರ್ಟ್- ಸುಳ್ಯದಲ್ಲೊಂದು ಅಪರೂಪದ ವಿದ್ಯಮಾನ

    ಮಂಗಳೂರು: ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಸಂಘರ್ಷ ಬಹಳಷ್ಟು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಈ ಪೈಕಿ ಮನುಷ್ಯನಿಂದ ಹೆಚ್ಚು ತೊಂದರೆಗೊಳಗಾಗುವ ಮುಗ್ಧ, ಅಮಾಯಕ ಜೀವಿ ಎಂದರೆ ಅದು ಆನೆಗಳು. ಹೀಗಾಗಿ ಆನೆಗಳಿಗೂ, ಮನುಷ್ಯನಿಗೂ ನಡುವೆ ಇರುವ ಸಂಬಂಧ ಅಷ್ಟಕಷ್ಟೇ. ಎಷ್ಟೇ ಸಾಕಿ ಬೆಳೆಸಿದ ಆನೆಯೂ ಕೆಲವು ಸಂದರ್ಭಗಳಲ್ಲಿ ತನ್ನನ್ನು ಸಾಕಿದ ಮಾವುತನನ್ನೇ ಬಲಿ ಪಡೆದ ಉದಾಹರಣೆಗಳು ನಮ್ಮ ಮುಂದಿದೆ. ಸಾಕಾನೆಗಳೇ ಇಷ್ಟು ಅಪಾಯಕಾರಿಯಾಗಿರುವಾಗ ಇನ್ನು ಕಾಡಾನೆಗಳ ಸ್ವಭಾವವನ್ನು ಅರಿತುಕೊಳ್ಳುವುದು ಸಾಧ್ಯವೇ? ಖಂಡಿತಾ ಇಲ್ಲ ಎಂದು ನಾವೆಲ್ಲ ಅಂದುಕೊಳ್ಳಬಹುದು. ಆದರೆ ಅದಕ್ಕೆ ಅಪವಾದ ಎನ್ನುವಂತೆ ಅಪರೂಪದ ಆನೆ-ಮನುಷ್ಯನ ಬಾಂಧವ್ಯದ ಕಥೆ ಇಲ್ಲಿದೆ.

    ಕಾಡಾನೆಗಳು ನಾಡಿಗೆ ಆಹಾರ ಅರಸಿಕೊಂಡು ಲಗ್ಗೆಯಿಟ್ಟರೆ ಎಲ್ಲವನ್ನೂ ಪುಡಿಗೈಯುತ್ತವೆ ಎನ್ನುವುದು ಸಾಮಾನ್ಯ ನಂಬಿಕೆ. ಹೀಗಾಗಿ ಕಾಡಾನೆಗಳ ಸ್ವಭಾವವನ್ನು ಕಣ್ಣಾರೆ ಕಂಡ ಕಾಡಿನಂಚಿನಲ್ಲಿ ಬದುಕುವ ಕುಟುಂಬಗಳು ಸಾಧ್ಯವಾದಷ್ಟೂ ಕಾಡಾನೆಗಳ ಸಹವಾಸದಿಂದ ದೂರವೇ ಉಳಿಯುತ್ತಾರೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಪಂಜದ ಕಾಡಿನಿಂದ ಕೊಡಗಿನ ಭಾಗಮಂಡಲ ಕಾಡಿಗೆ ಪ್ರತೀ ವರ್ಷವೂ ಸವಾರಿ ಹೋಗುವ ಆನೆಯೊಂದು ಇತರ ಕಾಡಾನೆಗಳಿಗಿಂತ ಕೊಂಚ ಭಿನ್ನ. ಪ್ರತಿ ಡಿಸೆಂಬರ್ ಕೊನೆ ವಾರದಲ್ಲಿ ಪಂಜ ಕಾಡಿನಿಂದ ಸವಾರಿ ಹೊರಡುವ ಈ ಕಾಡಾನೆ, ಕಾಡು-ನಾಡು, ನದಿ-ತೊರೆಗಳನ್ನು ದಾಟಿ ಕೊಡಗಿನ ಭಾಗಮಂಡಲ ಅರಣ್ಯವನ್ನು ಸೇರುತ್ತದೆ. ಆದರೆ ಈ ಬಾರಿ ಜನವರಿ ಕೊನೆಯ ವಾರದಲ್ಲಿ ಈ ಆನೆ ತನ್ನ ಸವಾರಿಯನ್ನು ಆರಂಭಿಸಿದ್ದು, ದಾರಿ ಮಧ್ಯೆ ಕೆಲವು ಮನೆಗಳ ಮುಂದೆಯೂ ಈ ಆನೆ ಹಾದು ಹೋಗುತ್ತದೆ.

    ಸುಳ್ಯ ತಾಲೂಕಿನ ಅರಂತೋಡು ಗ್ರಾಮದ ಪೆರಾಜೆ ನಿವಾಸಿ ಸುಧಾಕರ್ ರೈ ಮನೆಯ ಮುಂದೆ ಕಳೆದ ಹತ್ತು ವರ್ಷಗಳಿಂದ ಈ ಆನೆ ಹಾದು ಹೋಗುತ್ತಿದ್ದು, ಈವರೆಗೂ ಜನರಿಗೆ ಯಾವ ತೊಂದರೆಯನ್ನೂ ಮಾಡಿಲ್ಲ. ಕಾಡಿನ ದಾರಿಯಾಗಿ ಬರುವ ಈ ಆನೆ ಕಾಡಿನ ದಾರಿ ಮುಗಿದಾಗ ನಾಡಿನ ದಾರಿ ಮೂಲಕ ಮತ್ತೊಂದು ಕಾಡು ಸೇರುತ್ತದೆ. ಹೀಗೆ ಸಾಗುವ ಸಂದರ್ಭದಲ್ಲಿ ಹಸಿವಿನ ಅನುಭವವಾದಾಗ ದಾರಿ ಮಧ್ಯೆ ಸಿಗುವ ಬಾಳೆ ಗಿಡ, ಹೂವಿನ ಗಿಡಗಳನ್ನು ತಿಂದು ಸಾಗುವ ಈ ಆನೆ ಇದೀಗ ಈ ಗ್ರಾಮದಾದ್ಯಂತ ಚಿರ ಪರಿಚಿತವಾಗಿದೆ ಎಂದು ಇಲ್ಲಿನ ಸ್ಥಳೀಯರು ಹೇಳುತ್ತಾರೆ.

    ಸಾಮಾನ್ಯವಾಗಿ ಅರಣ್ಯ ಇಲಾಖೆಯು ಆನೆಗಳ ಚಲನವಲನಗಳನ್ನು ಗಮನಿಸಬೇಕಾಗಿದ್ದು, ಈ ಆನೆಯ ವಿಚಾರದಲ್ಲಿ ಮಾತ್ರ ಸಂಬಂಧಪಟ್ಟ ಗ್ರಾಮಸ್ಥರೇ ನೋಡಿಕೊಳ್ಳುತ್ತಿದ್ದಾರೆ. ಪಂಜ ಕಾಡಿನಿಂದ ಆನೆ ಸವಾರಿ ಹೊರಟಿದೆ ಎನ್ನುವುದನ್ನು ತಿಳಿದ ತಕ್ಷಣವೇ ಅಲರ್ಟ್ ಆಗುವ ಆ ಗ್ರಾಮದ ಜನ ಆನೆ ಸಾಗುವ ಗ್ರಾಮದ ಜನರಿಗೆ ಆನೆ ಸವಾರಿಯ ಸುದ್ದಿ ತಲುಪಿಸುತ್ತಾರೆ.

    ಸುಮಾರು 30 ರಿಂದ 35 ವರ್ಷ ಪ್ರಾಯದ ಈ ಆನೆ ಪಂಜ, ಉಬರಡ್ಕ, ದೇರಾಜೆ ಮಾರ್ಗವಾಗಿ ಪೆರಾಜೆ ಮೂಲಕ ಭಾಗಮಂಡಲ ಕಾಡನ್ನು ಸೇರುತ್ತದೆ. ಈ ಮಧ್ಯೆ ಮಾಣಿ-ಮೈಸೂರು ರಾಜ್ಯ ಹೆದ್ದಾರಿಯನ್ನೂ ದಾಟುವ ಈ ಆನೆ ಪಯಸ್ವಿನಿ ನದಿಯನ್ನು ಈಜಾಡಿಯೇ ಭಾಗಮಂಡಲ ಅರಣ್ಯಕ್ಕೆ ಸೇರುತ್ತದೆ. ಹೀಗೆ ಹೊರಟ ಈ ಕಾಡಾನೆ ಫೆಬ್ರವರಿ ಕೊನೆಯ ವಾರಕ್ಕೆ ಮತ್ತೆ ಇದೇ ಮಾರ್ಗವಾಗಿ ಪಂಜ ಅರಣ್ಯವನ್ನು ಸೇರುತ್ತಿದ್ದು, ದಾರಿ ಮಧ್ಯೆ ಕಾಡಾನೆಗೆ ಯಾವುದೇ ರೀತಿಯ ತೊಂದರೆಯಾಗದಂತೆಯೂ ಗ್ರಾಮಸ್ಥರು ನೋಡಿಕೊಂಡಿದ್ದಾರೆ. ಹೀಗೆ ಒಂದು ಅಪರೂಪದ ಬಾಂಧವ್ಯ ಈ ಆನೆ ಮತ್ತು ಗ್ರಾಮಸ್ಥರ ನಡುವೆ ಬೆಳೆದಿದ್ದು ಈ ಬಾಂಧವ್ಯ ಹೀಗೆಯೇ ಉಳಿಯಲಿ ಎನ್ನುವುದು ಹಾರೈಕೆಯಾಗಿದೆ.

  • ಕೋಣನೂರು, ಚುಂಚನಹಳ್ಳಿ ಅರಣ್ಯ ಪ್ರದೇಶಕ್ಕೆ ಬೆಂಕಿ – ದಿಕ್ಕಾ ಪಾಲಾಗಿ ಓಡಿದ ಪ್ರಾಣಿ ಪಕ್ಷಿಗಳು

    ಕೋಣನೂರು, ಚುಂಚನಹಳ್ಳಿ ಅರಣ್ಯ ಪ್ರದೇಶಕ್ಕೆ ಬೆಂಕಿ – ದಿಕ್ಕಾ ಪಾಲಾಗಿ ಓಡಿದ ಪ್ರಾಣಿ ಪಕ್ಷಿಗಳು

    ಮೈಸೂರು: ಕೋಣನೂರು ಮತ್ತು ಚುಂಚನಹಳ್ಳಿ ಗ್ರಾಮದಲ್ಲಿನ ಕಿರು ಅರಣ್ಯ ಪ್ರದೇಶಕ್ಕೆ ಬೆಂಕಿ ಬಿದ್ದಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನಲ್ಲಿ ನಡೆದಿದೆ.

    ಕುರುಚಲು ಅರಣ್ಯ ಪ್ರದೇಶದ ಬೆಟ್ಟಕ್ಕೆ ಕಿಡಿಗೇಡಿಗಳು ಬೆಂಕಿ ಇಟ್ಟಿದ್ದು, ಮಧ್ಯಾಹ್ನ ಕೃಷ್ಣರಾಜಪುರ ಗ್ರಾಮದ ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಘಟನೆಯಲ್ಲಿ ಬೆಟ್ಟದಲ್ಲಿದ್ದ ಮರ, ಗಿಡಗಳು ಭಸ್ಮವಾಗಿದೆ. ಅಲ್ಲದೆ ಬೆಟ್ಟದ ಸುತ್ತಮುತ್ತ ಹತ್ತಾರು ಎಕರೆ ಅರಣ್ಯ ಪ್ರದೇಶ ಬೆಂಕಿಯಿಂದ ನಾಶವಾಗಿದೆ.

    ಬೆಂಕಿ ಸಂಭವಿಸಿದ್ದರಿಂದ ಅರಣ್ಯದಲ್ಲಿದ್ದ ಪ್ರಾಣಿ ಪಕ್ಷಿಗಳು ದಿಕ್ಕಾ ಪಾಲಾಗಿ ಓಡಿಹೋಗಿದೆ. ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆ ಅಧಿಕಾರಿಗಳು ಬೆಂಕಿ ನಂದಿಸಲು ಹರಸಾಹಸವನ್ನೇ ಪಡಬೇಕಾಗಿತ್ತು. ಬೇಸಿಗೆ ಕಾಲ ಬರುವ ಮುನ್ನವೇ ಅರಣ್ಯ ಭಸ್ಮವಾಗಿರುವುದು ಬೇಸರದ ಸಂಗತಿಯಾಗಿದೆ.

    ಅಲ್ಲದೆ ಈ ಅರಣ್ಯ ಪ್ರದೇಶದಲ್ಲಿ ಜಿಂಕೆ, ನವಿಲು, ಚಿರತೆ, ಮೊಲ, ಕಾಡು ಹಂದಿ, ಕಿರುಬ ಸೇರಿ ಹಲವು ಪ್ರಾಣಿ ಪಕ್ಷಿಗಳು ವಾಸಿಸುತ್ತಿದ್ದವು.

  • ಪುಂಡಾನೆ ಸೆರೆ – ಕ್ರೇನ್ ಮೂಲಕ ಲಾರಿಗೆ ಹತ್ತಿದ ಗಜರಾಜ

    ಪುಂಡಾನೆ ಸೆರೆ – ಕ್ರೇನ್ ಮೂಲಕ ಲಾರಿಗೆ ಹತ್ತಿದ ಗಜರಾಜ

    ಹಾಸನ: ಸಕಲೇಶಪುರ ಸುತ್ತಮುತ್ತ ಹಾವಳಿ ಮಾಡುತ್ತಿದ್ದ ಪುಂಡಾನೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಮತ್ತೂರು ಮೀಸಲು ಅರಣ್ಯದಲ್ಲಿ ಪುಂಡಾನೆ ಸೆರೆಸಿಕ್ಕಿದೆ.

    ಕಳೆದ ಒಂದು ವಾರದಿಂದ ಸಕಲೇಶಪುರ ಭಾಗದಲ್ಲಿ ಮೂರು ಆನೆಗಳಿಗೆ ರೇಡಿಯೋ ಕಾಲರ್ ಅಳವಡಿಸುವುದು ಮತ್ತು ಒಂದು ಪುಂಡಾನೆ ಸೆರೆಹಿಡಿಯುವ ಕಾರ್ಯ ಹಮ್ಮಿಕೊಳ್ಳಲಾಗಿತ್ತು. ಈಗಾಗಲೇ ಎರಡು ಆನೆಗಳಿಗೆ ರೇಡಿಯೋ ಕಾಲರ್ ಅಳವಡಿಸಲಾಗಿದ್ದು, ಒಂದು ಪುಂಡಾನೆ ಸೆರೆಹಿಡಿಯಲಾಗಿದೆ. ಸೆರೆಹಿಡಿದ ಪುಂಡಾನೆಯನ್ನು ಜಿಲ್ಲೆಯಿಂದ ಹೊರಭಾಗದ ಪೂರಕ ಅರಣ್ಯ ಪ್ರದೇಶಕ್ಕೆ ಬಿಡಲಾಗುವುದು.

    ಪುಂಡಾನೆಯ ಚಲನವಲನ ಗಮನಿಸಲು ರೇಡಿಯೋ ಕಾಲರ್ ಅಳವಡಿಸಲಾಗುತ್ತದೆ. ಪುಂಡಾನೆಯನ್ನು ಲಾರಿಗೆ ಹತ್ತಿಸುವಾಗ ಅದಕ್ಕೆ ಯಾವುದೇ ಗಾಯ ಆಗದಂತೆ ಈ ಬಾರಿ ಕ್ರೇನ್ ಬಳಸಿ ಆನೆಯನ್ನು ಲಾರಿಯಲ್ಲಿ ಕರೆತರಲಾಗಿದೆ. ಆನೆ ಸೆರೆಹಿಡಿದ ನಂತರ ಅದನ್ನು ಕಾಡಿನಿಂದ ಕರೆತರುವಾಗ ಪ್ರತಿರೋಧ ತೋರಿದ್ದು, ಅಂತಿಮವಾಗಿ ಆನೆಯನ್ನು ಲಾರಿಗೆ ತುಂಬಲು ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

  • ಬೆಂಕಿ ನಂದಿಸುವವರ ಬಾಳಿಗೇ ಬೆಂಕಿಯಿಟ್ಟ ಅರಣ್ಯ ಅಧಿಕಾರಿಗಳು

    ಬೆಂಕಿ ನಂದಿಸುವವರ ಬಾಳಿಗೇ ಬೆಂಕಿಯಿಟ್ಟ ಅರಣ್ಯ ಅಧಿಕಾರಿಗಳು

    ಬೆಳಗಾವಿ: ಕಾಡಿನಲ್ಲಿ ಬೆಂಕಿ ನಂದಿಸುವ ಕಾರ್ಮಿಕರ ಬಾಳಿಗೇ ಅರಣ್ಯ ಅಧಿಕಾರಿಗಳು ಬೆಂಕಿಯಿಟ್ಟರಾ ಎಂಬ ಪ್ರಶ್ನೆ ಕಾಡುತ್ತಿದ್ದು, ಒಂದು ಹೊತ್ತು ಊಟಕ್ಕೂ ಗತಿಯಿಲ್ಲದೆ ಬಡ ಕುಟುಂಬಗಳು ಬೀದಿಗೆ ಬಂದಿವೆ.

    ಬೆಳಗಾವಿ, ಬಾಗಲಕೋಟೆ ಹಾಗೂ ವಿಜಯಪೂರ ಜಿಲ್ಲೆಯ ದಿನಗೂಲಿ ಕಾರ್ಮಿಕರನ್ನು ಅರಣ್ಯಾಧಿಕಾರಿಗಳು ಬೀದಿಗೆ ತಳ್ಳಿದ್ದಕ್ಕೆ ಪ್ರತಿಭಟನೆ ನಡೆಸಿದರು. ನರೇಗಾ ಯೋಜನೆಯಲ್ಲಿ ಕನಿಷ್ಟ 150 ದಿನಗಳಾದರೂ ಕೆಲಸ ನೀಡಿ ಮತ್ತು ನಮಗೆ ಜಾಬ್ ಕಾರ್ಡ್ ನೀಡಿ ಎಂಬುದು ಕಾರ್ಮಿಕರ ಬೇಡಿಕೆ. ದಿನಗೂಲಿ ಅರಣ್ಯ ಕಾರ್ಮಿಕರಿಗೆ ಗುರುತಿನ ಚೀಟಿ, ಸಮವಸ್ತ್ರ ನೀಡಿ ಎಂದು ಕಾರ್ಮಿಕ ಸಂಘಟನೆಗಳು ಡಿಸೆಂಬರ್ 23 ರಂದು ಸರ್ಕಾರಕ್ಕೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರ ಬರೆದಿವೆ. ಹೀಗಾಗಿ ಕೆಲಸದಿಂದ ತೆಗೆಯುತ್ತಿದ್ದಾರೆ ಎಂದು ಕಾರ್ಮಿಕ ಮುಖಂಡರ ಆರೋಪವಾಗಿದೆ. ಇನ್ನೊಂದೆಡೆ ಕೆಲಸವಿದ್ದಾಗ ಮಾತ್ರ ನಾವು ದಿನಗೂಲಿ ನೀಡುತ್ತೇವೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

    ಕಾರ್ಮಿಕರ ತೊಂದರೆ ಏನು ಎಂಬುದು ನನ್ನ ಗಮನಕ್ಕೆ ಬಂದಿದೆ. ಅವರ ಜಾಬ್ ಕಾರ್ಡ್ ಇಲ್ಲ ಎಂಬುದು ಗೊತ್ತಾಗಿದೆ. ಈ ಕುರಿತು ಜಿಲ್ಲಾ ಅರಣ್ಯ ಅಧಿಕಾರಿಗಳನ್ನು ಕರೆದು ಮಾಹಿತಿ ಪಡೆಯುತ್ತೇನೆ. ಕಾರ್ಮಿಕರ ಸಮಸ್ಯೆ ಸುಖಾಂತ್ಯವಾಗುವ ರೀತಿ ಕ್ರಮ ಕೈಗೊಳ್ಳುತ್ತೇನೆ ಎಂದು ಸಿಸಿಎಫ್ ಬಸವರಾಜ್ ಪಾಟೀಲ್ ತಿಳಿಸಿದ್ದಾರೆ.

    ಅರಣ್ಯ ಇಲಾಖೆಯಲ್ಲಿ ತುರ್ತು ಕೆಲಸಕ್ಕಾಗಿ ನಿಯೋಜನೆಗೊಂಡ ದಿನಗೂಲಿ ನೌಕರರು ಕಾಡಿಗೆ ಬೆಂಕಿ ಬಿದ್ದಾಗ ಅಥವಾ ಕಾಡುಪ್ರಾಣಿಗಳು ನಾಡಿಗೆ ಬಂದಾಗ ತುರ್ತು ಕೆಲಸವನ್ನು ನಿರ್ವಹಿಸುವ ಕೌಶಲ ಹೊಂದಿದವರು. ಕಾಡಿಗೆ ಬೆಂಕಿ ಬಿದ್ದಾಗ ತಕ್ಷಣ ಕಾರ್ಯಪ್ರವರ್ತರಾಗುವ ಇವರ ಬಾಳಲ್ಲಿ ಈಗ ಬೆಂಕಿ ಬಿದ್ದಿದೆ. ಕೆಲಸವಿಲ್ಲ ನೀವು ಯಾರು ಎಂಬುದೇ ನಮಗೆ ಗೊತ್ತಿಲ್ಲ ಎಂದು ಅರಣ್ಯ ಅಧಿಕಾರಿಗಳು ಬೇಜವಾಬ್ದಾರಿ ಹೇಳಿಕೆ ನೀಡಿ ಇವರನ್ನು ಕೆಲಸದಿಂದ ವಜಾ ಮಾಡಿದ್ದಾರೆ. ಅಲ್ಲದೆ ಕ್ವಾಟ್ರಸ್ ಖಾಲಿ ಮಾಡಿ ಇಲ್ಲದಿದ್ದರೆ ಪಾತ್ರೆಗಳನ್ನು ಹೊರಕ್ಕೆ ಬೀಸಾಡುತ್ತೇವೆ ಎಂದು ಧಮಕಿ ಹಾಕುತ್ತಿದ್ದಾರೆ.

  • ಮನೆಗೆ ನುಗ್ಗಿ ಚಿರತೆ ಕಿತಾಪತಿ – ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ

    ಮನೆಗೆ ನುಗ್ಗಿ ಚಿರತೆ ಕಿತಾಪತಿ – ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ

    – ಚಿರತೆ ನೋಡಿ ಭಯ ಬಿದ್ದ ಹಳ್ಳಿಗರು

    ಕಾರವಾರ: ಮನೆಯೊಂದಕ್ಕೆ ಚಿರತೆ ನುಗ್ಗಿ ಕಿತಾಪತಿ ಮಾಡಿ ಹೋಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ನಡೆದಿದೆ.

    ಉತ್ತರ ಕನ್ನಡ ಜಿಲ್ಲೆಯಲ್ಲಿ ಚಿರತೆಗಳಿಗೇನೂ ಕಮ್ಮಿ ಇಲ್ಲ. ಆಹಾರದ ಕೊರತೆಯಿಂದ ಚಿರತೆಗಳು ನಾಡಿಗೆ ನುಗ್ಗುವುದು ಸಾಮಾನ್ಯವಾಗಿದೆ. ಹೀಗಾಗಿ ರಾತ್ರಿ ವೇಳೆ ಚಿರತೆಗಳು ಊರಿನತ್ತ ಮುಖ ಮಾಡುತ್ತಿವೆ. ಆಹಾರ ಅರಸಿ ಕಾಡಿನಿಂದ ಅಂಕೋಲ ತಾಲೂಕಿನ ಕೊಂಡಳ್ಳಿ ಗ್ರಾಮದ ರಮಾನಂದ ಎಂಬವರ ಮನೆಗೆ ಇಂದು ಬೆಳಗಿನ ಜಾವ ನುಗ್ಗಿದ್ದ ಚಿರಿತೆ ಮನೆಯ ಬಳಿ ಇದ್ದ ನಾಯಿ ಹಿಡಿಯುವ ಪ್ರಯತ್ನ ಮಾಡಿದೆ.

    ಆದರೆ ನಾಯಿ ಚಿರತೆ ಬಾಯಿಯಿಂದ ತಪ್ಪಿಸಿಕೊಂಡು ಓಡಿಹೋಗಿದೆ. ಇನ್ನೇನು ಆಹಾರ ಮಿಸ್ ಆಯ್ತು ಅನ್ನುವಷ್ಟರಲ್ಲಿ, ಮನೆಯಲ್ಲಿ ಕೋಳಿಗಳಿದ್ದ ಗೂಡು ಕಾಣಿಸಿದ್ದು ಗೂಡಿನ ಒಳಕ್ಕೆ ಬಾಯಿ ಹಾಕಿ ಕೋಳಿ ಹಿಡಿದು ಚಿರತೆ ಕಾಡಿಗೆ ಮರಳಿದೆ.

    ಇತ್ತ ಮನೆಯವರು ಬೆಳಗ್ಗೆ ಗೂಡಿನಲ್ಲಿ ಕೋಳಿ ಇಲ್ಲದ್ದನ್ನು ಗಮನಿಸಿ ಯಾರೋ ಕಳ್ಳರು ಕದ್ದು ಹೋಗಿರಬೇಕು ಎಂದು ಮನೆಯಲ್ಲಿ ಅಳವಡಿಸಿದ್ದ ಸಿಸಿ ಟಿವಿ ಗಮನಿಸಿದ್ದಾರೆ. ಆಗ ಕೋಳಿ ಕಳ್ಳತನ ಮಾಡಿದ್ದು ಯಾರು ಎಂದು ನೋಡಿ ಹೌಹಾರಿದ್ದಾರೆ. ಸಿ.ಸಿ ಟಿವಿಯಲ್ಲಿ ಸೆರೆಯಾದ ಈ ವೀಡಿಯೋ ಊರಿನ ಜನರಲ್ಲಿ ಭಯ ಮೂಡಿಸಿದ್ದು ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ. ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಅರಣ್ಯದಲ್ಲಿ ಸಿಕ್ತು ಬರೋಬ್ಬರಿ 6 ಲಕ್ಷಕ್ಕೂ ಹೆಚ್ಚು ಮೌಲ್ಯದ ಮದ್ಯ

    ಅರಣ್ಯದಲ್ಲಿ ಸಿಕ್ತು ಬರೋಬ್ಬರಿ 6 ಲಕ್ಷಕ್ಕೂ ಹೆಚ್ಚು ಮೌಲ್ಯದ ಮದ್ಯ

    ಕಾರವಾರ: ಅರಣ್ಯದಲ್ಲಿ ಹುದುಗಿಸಿಟ್ಟಿದ್ದ ಗೋವಾ ಮದ್ಯವನ್ನು ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ ವಶಪಡಿಸಿಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದಿದೆ.

    ಅಬಕಾರಿ ಅಧಿಕಾರಿಗಳು ಮಾಜಾಳಿ ಬಳಿಯ ಸೈಲ್ ಎಂಜಿನಿಯರಿಂಗ್ ಕಾಲೇಜು ಬಳಿ ಇರುವ ಅರಣ್ಯ ಪ್ರದೇಶದಲ್ಲಿ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ. ದಾಳಿಯಲ್ಲಿ 6,70,800 ರೂಪಾಯಿ ಮೌಲ್ಯದ 1,422 ಲೀಟರ್ ಗೋವಾ ಮದ್ಯ, 228 ಲೀಟರ್ ಬಿಯರ್ ವಶಪಡಿಸಿಕೊಳ್ಳಲಾಗಿದೆ. ಈ ಕುರಿತಾಗಿ ಕಾರವಾರ ಅಬಕಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ದಾಳಿಯಲ್ಲಿ ಅಬಕಾರಿ ಉಪ ಆಯುಕ್ತರಾದ ಶಿವನಗೌಡ ಪಾಟೀಲ್ ಇವರ ಮಾರ್ಗ ದರ್ಶನದಲ್ಲಿ ಅಬಕಾರಿ ಉಪ ನಿರೀಕ್ಷಕರಾದ ಸುವರ್ಣ ಬಾಯಿ, ಕಾರವಾರ ವಲಯ ನಿರೀಕ್ಷಕರಾದ ದಯಾನಂದ್, ಜಿಲ್ಲಾ ತಂಡದ ಅಬಕಾರಿ ನಿರೀಕ್ಷಕರಾದ ಬಸವರಾಜ್ ಕರವಿನ ಕೊಪ್ಪ, ಸಿಬ್ಬಂದಿ ಶಿವಾನಂದ ಕೊರಡಿ, ಚಂದ್ರಶೇಖರ್ ಪಾಟೀಲ್ ,ಪ್ರವೀಣ್ ,ವೀರೇಶ್ ನಾಗರಾಜ್ ,ಶ್ರೀನಿವಾಸ್,ರವಿ ನಾಯ್ಕ, ಇಮ್ತಿಯಾಜ್ ಇದ್ದರು.

  • ಗೋಪಾಲಸ್ವಾಮಿ ದರ್ಶನಕ್ಕೆ ಬಂದ ಗಜರಾಜ – ಪೊಂಗಲ್ ತಿನ್ನಿಸಿ ಟೀಕೆಗೆ ಒಳಗಾದ ಅಧಿಕಾರಿ

    ಗೋಪಾಲಸ್ವಾಮಿ ದರ್ಶನಕ್ಕೆ ಬಂದ ಗಜರಾಜ – ಪೊಂಗಲ್ ತಿನ್ನಿಸಿ ಟೀಕೆಗೆ ಒಳಗಾದ ಅಧಿಕಾರಿ

    ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಮೂರು ವರ್ಷಗಳ ಬಳಿಕ ಗೋಪಾಲಸ್ವಾಮಿ ದರ್ಶನಕ್ಕೆ ಗಜರಾಜ ಬಂದಿದ್ದಾನೆ.

    ಈ ಹಿಂದೆಯೂ ದೇವಸ್ಥಾನದ ಸಿಬ್ಬಂದಿ ನೀಡುತ್ತಿದ್ದ ಪ್ರಸಾದದ ಆಸೆಗೆ ಕಾಡಾನೆ ಬರುತ್ತಿತ್ತು. ಪೌರಾಡಳಿತ ಇಲಾಖೆ ನಿರ್ದೇಶಕಿ ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಬಿ.ಬಿ ಕಾವೇರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದ ವೇಳೆ ಕಾಡಾನೆ ಬಂದಿದೆ. ಈ ವೇಳೆ ಕಾವೇರಿ ಅವರು ಕಾಡಾನೆಗೆ ದೇವಸ್ಥಾನದ ಪ್ರಸಾದ ಸಿಹಿಪೊಂಗಲ್, ಬೆಲ್ಲ ತಿನಿಸಿದ್ದಾರೆ.

    ಕಾವೇರಿ ಅವರು ಆನೆಗೆ ಆಹಾರ ನೀಡಿದ ಬೆನ್ನಲ್ಲೇ ಅವರ ವಿರುದ್ಧ ವನ್ಯಜೀವಿ ನಿಯಮಗಳ ಉಲ್ಲಂಘನೆ ಆರೋಪ ಕೇಳಿಬಂದಿದೆ. ಪ್ರಸಾದದ ಆಮಿಷಕ್ಕೆ ಒಳಗಾಗಿ ಕಾಡಾನೆ ಅಲ್ಲಿಗೆ ಮತ್ತೆ ಮತ್ತೆ ಬರಬಹುದು. ಅರಣ್ಯದಂಚಿನ ಗ್ರಾಮಗಳಿಗೆ ದಾಳಿ ಮಾಡಬಹುದು. ಮಾನವ ವನ್ಯಜೀವಿ ಸಂಘರ್ಷಕ್ಕೆ ಕಾರಣವಾಗಬಹುದು. ಐಎಎಸ್ ಅಧಿಕಾರಿ ವಿವೇಕಯುತವಾಗಿ ವರ್ತಿಸಬೇಕಿತ್ತು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪರಿಸರವಾದಿಗಳಿಂದ ಟೀಕೆ ವ್ಯಕ್ತವಾಗುತ್ತಿದೆ.

  • ಮಹದೇಶ್ವರ ವನ್ಯಜೀವಿಧಾಮದಲ್ಲಿ 2ನೇ ಬಾರಿ ಕಾಣಿಸಿಕೊಂಡ ಕರಿಚಿರತೆ

    ಮಹದೇಶ್ವರ ವನ್ಯಜೀವಿಧಾಮದಲ್ಲಿ 2ನೇ ಬಾರಿ ಕಾಣಿಸಿಕೊಂಡ ಕರಿಚಿರತೆ

    – ಚಿರತೆ ಚಲನವಲನ ಕ್ಯಾಮೆರಾದಲ್ಲಿ ಸೆರೆ

    ಚಾಮರಾಜನಗರ: ಜಿಲ್ಲೆಯ ಮಹದೇಶ್ವರ ವನ್ಯಜೀವಿಧಾಮದಲ್ಲಿ ಅಪರೂಪದ ಕಪ್ಪು ಚಿರತೆ 2ನೇ ಬಾರಿ ಕಾಣಿಸಿಕೊಂಡಿದೆ. ಅರಣ್ಯ ಇಲಾಖೆಯಿಂದ ಹುಲಿ ಗಣತಿಗಾಗಿ ಅಳವಡಿಸಿರುವ ಕ್ಯಾಮೆರಾ ಟ್ರ್ಯಾಪಿಂಗ್‍ನಲ್ಲಿ ಕರಿ ಚಿರತೆಯ ಛಾಯಾಚಿತ್ರಗಳು ಸೆರೆಯಾಗಿದೆ.

    ಮಲೈ ಮಹದೇಶ್ವರ ವನ್ಯಜೀವಿಧಾಮದ ಪಿ.ಜಿ.ಪಾಳ್ಯ ವಲಯದಲ್ಲಿ ಈ ಕಪ್ಪು ಚಿರತೆ ಕಂಡುಬಂದಿದೆ. ಇದು ಗಂಡು ಚಿರತೆಯಾಗಿದ್ದು, ಸುಮಾರು ಆರು ವರ್ಷ ವಯಸ್ಸಿರಬಹುದೆಂದು ಅಂದಾಜಿಸಲಾಗಿದೆ. ವನ್ಯಜೀವಿಧಾಮದಲ್ಲಿ ಈ ಹಿಂದೆಯು ಕೂಡಾ ಕಪ್ಪು ಚಿರತೆ ಪತ್ತೆಯಾಗಿತ್ತು. ಇದೀಗ ಮತ್ತೆ ಕಾಣಿಸಿಕೊಂಡಿದೆ.

    ಬಹುಶಃ ಬೇರೆ ಅರಣ್ಯಗಳಿಂದ ಈ ಕರಿಚಿರತೆ ಇಲ್ಲಿಗೆ ವಲಸೆ ಬಂದಿರಬಹುದು. ಇಲ್ಲಿ ಪ್ರಾಣಿಗಳು ಸಾಕಷ್ಟು ಸಂಖ್ಯೆಯಲ್ಲಿದ್ದು, ಚಿರತೆಗೆ ಆಹಾರಕ್ಕೆ ಬೇಕಾದ ಪ್ರಾಣಿಗಳಿಗೇನು ಕೊರತೆಯಿಲ್ಲ. ಅಲ್ಲದೆ ಕಾಡಿನ ರಕ್ಷಣಾ ಕ್ರಮಗಳು ಹೆಚ್ಚಾಗಿದ್ದು, ಸುರಕ್ಷತೆಯ ಜೊತೆಗೆ ಅದಕ್ಕೆ ಬೇಕಾದ ವಾತಾವರಣ ಇಲ್ಲಿರುವುದರಿಂದ ಚಿರತೆ ಇಲ್ಲಿಯೆ ನೆಲೆಯೂರಿರುವ ಸಾಧ್ಯತೆಗಳಿವೆ ಎಂದು ಮಲೈಮಹದೇಶ್ವರ ವನ್ಯಜೀವಿಧಾಮ ಉಪಅರಣ್ಯ ಸಂರಕ್ಷಣಾಧಿಕಾರಿ ಏಡುಕುಂಡಲು ಅವರು ಮಾಹಿತಿ ನೀಡಿದ್ದಾರೆ.

  • ದಟ್ಟಾರಣ್ಯದಲ್ಲಿ 14 ದಿನ ಬಂಧನದಲ್ಲಿರಿಸಿ ಅತ್ಯಾಚಾರ

    ದಟ್ಟಾರಣ್ಯದಲ್ಲಿ 14 ದಿನ ಬಂಧನದಲ್ಲಿರಿಸಿ ಅತ್ಯಾಚಾರ

    – ಮಾವನ ಮದ್ವೆಗೆ ಹೋದಾಗ ಕಿಡ್ನ್ಯಾಪ್

    ಜೈಪುರ: ದಟ್ಟ ಅರಣ್ಯದಲ್ಲಿ ಯುವತಿಯನ್ನ 14 ದಿನ ಬಂಧನದಲ್ಲಿರಿಸಿ ಆಕೆಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ರಾಜಸ್ಥಾನ ಬಾರನ್ ಜಿಲ್ಲೆಯಲ್ಲಿ ನಡೆದಿದೆ.

    20 ವರ್ಷದ ಯುವತಿ ಮಾವನ ಮದುವೆಗೆ ಹೋದಾಗ ಆಕೆಯ ಅಪಹರಣ ನಡೆದಿತ್ತು. ಅಪಹರಣದ ಬಳಿಕ ಯುವತಿಯನ್ನ ಕಾಡಿನಲ್ಲಿರಿಸಿದ್ದ ನೀಚ ಸಂತ್ರಸ್ತೆಯ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ. 14 ದಿನದ ಬಳಿಕ ಉಪಾಯವಾಗಿ ಅರಣ್ಯದಿಂದ ಹೊರ ಬಂದ ಯುವತಿ ಸ್ಥಳೀಯರೊಬ್ಬರ ಮೊಬೈಲ್ ಪಡೆದು ತಂದೆಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾಳೆ. ಸದ್ಯ ಯುವತಿಗೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇದನ್ನೂ ಓದಿ: ಸೆಕ್ಸ್ ಸಿನ್ಮಾ ನೋಡಿ ಗೆಳೆಯನ 60 ವರ್ಷದ ತಾಯಿಯ ಮೇಲೆ ರೇಪ್

    ನವೆಂಬರ್ 9ರಂದು ನನ್ನನ್ನು ಅಡ್ಡಗಟ್ಟಿದ್ದ ಓರ್ವ ಬಲವಂತವಾಗಿ ಬೈಕ್ ಮೇಲೆ ಕೂರಿಸಿಕೊಂಡನು. ನಂತರ ಅರಣ್ಯ ಪ್ರದೇಶದಲ್ಲಿ ಇರಿಸಿ ಅತ್ಯಾಚಾರ ಎಸಗಿದನು. ನವೆಂಬರ್ 22ರಂದು ತಂದೆಗೆ ಫೋನ್ ಮಾಡಿದಾಗ ಅವರು ನನ್ನನ್ನು ರಕ್ಷಿಸಿದರು ಎಂದು ಸಂತ್ರಸ್ತೆ ಹೇಳಿಕೆ ದಾಖಲಿಸಿದ್ದಾಳೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಅತ್ಯಾಚಾರಿಗಳ ಪುರುಷತ್ವ ಹರಣ – ಪಾಕಿಸ್ತಾನದಲ್ಲಿ ಕಠಿಣ ಕಾನೂನು ಜಾರಿ

  • ಅರಣ್ಯದಲ್ಲಿ ನವಜಾತ ಶಿಶು ಪತ್ತೆ- ಗ್ರಾಮಸ್ಥರಿಂದ ರಕ್ಷಣೆ

    ಅರಣ್ಯದಲ್ಲಿ ನವಜಾತ ಶಿಶು ಪತ್ತೆ- ಗ್ರಾಮಸ್ಥರಿಂದ ರಕ್ಷಣೆ

    – ರಾತ್ರಿಯಿಡೀ ಹಸಿವಿನಿಂದ ಕಣ್ಣೀರಿಟ್ಟ ಕಂದಮ್ಮ

    ಡೆಹಾರಡೂನ: ಅರಣ್ಯದಲ್ಲಿ ಪತ್ತೆಯಾದ ನವಜಾತ ಶಿಶುವನ್ನು ಗ್ರಾಮಸ್ಥರು ರಕ್ಷಿಸಿರುವ ಘಟನೆ ಹೃಷಿಕೇಶ್ ವ್ಯಾಪ್ತಿಯ ಲಕ್ಷ್ಮಣ ಝೂಲಾ ಯಮಕೇಶ್ವರ ಪ್ರಖಂಡ ನಲ್ಲಿ ನಡೆದಿದೆ.

    ಇಂದು ಬೆಳಗ್ಗೆ ಗ್ರಾಮಸ್ಥರು ಅರಣ್ಯ ಮಾರ್ಗವಾಗಿ ತೆರಳುತ್ತಿರುವ ಮಗು ಅಳುತ್ತಿರುವ ಧ್ವನಿ ಕೇಳಿದೆ. ಅರಣ್ಯದೊಳಗೆ ಹೋಗಿ ನೋಡಿದಾಗ ಬಟ್ಟೆಯಲ್ಲು ಸುತ್ತಿದ್ದ ನವಜಾತ ಹೆಣ್ಣು ಕಂದಮ್ಮ ಸಿಕ್ಕಿದೆ. ಮಗುವನ್ನ ಅರಣ್ಯದಿಂದ ಗ್ರಾಮಸ್ಥರು ಅದಕ್ಕೆ ಆರೈಕೆ ಮಾಡಿದ್ದಾರೆ. ನಂತರ ಸ್ಥಳೀಯ ಪೊಲೀಸರಿಗೆ ಮಾಹಿತಿ ಸಹ ನೀಡಿದ್ದಾರೆ.

    ಸ್ಥಳಕ್ಕಾಗಮಿಸಿದ ಲಕ್ಷ್ಮಣ ಝೂಲಾ ಠಾಣೆಯ ಹಿರಿಯ ಅಧಿಕಾರಿ ಯಶವಂತ್ ಬಿಷ್ಠ, ಮಗುವನ್ನ ತಮ್ಮ ವಶಕ್ಕೆ ಪಡೆದುಕೊಂಡು ಗ್ರಾಮಸ್ಥರ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಪತ್ತೆಯಾದ ಕಂದಮ್ಮ ಎರಡು ದಿನದ ಕೂಸು ಎಂದು ತಿಳಿದಿದ್ದು, ಹಸಿವಿನಿಂದ ರಾತ್ರಿಯಿಡೀ ಅತ್ತಿದ್ದರಿಂದ ಅದರ ಆರೋಗ್ಯದಲ್ಲಿ ಏರುಪೇರಾಗಿತ್ತು. ಪೊಲೀಸರು ಮಗುವನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ.