ಮೈಸೂರು: ಅರಣ್ಯ ಇಲಾಖೆ ಸಿಬ್ಬಂದಿಗೆ ಪ್ರಶಸ್ತಿ ಕೊಡಲು ಸಿಎಂ ಯಡಿಯೂರಪ್ಪ ಅವರಿಗೆ ಸಮಯ ಸಿಗುತ್ತಿಲ್ಲ. ಹಾಗಾಗಿ ಪ್ರಶಸ್ತಿ ಸ್ವೀಕರಿಸಲು ಎರಡು ವರ್ಷದಿಂದ ಸಿಬ್ಬಂದಿ ಕಾಯುತ್ತಿದ್ದಾರೆ.
ಪೊಲೀಸ್ ಇಲಾಖೆ ಮಾದರಿಯಲ್ಲಿ ಅರಣ್ಯ ಸಿಬ್ಬಂದಿಗೆ ಸಿಎಂ ಚಿನ್ನದ ಪದಕ ನೀಡಲಾಗುತ್ತದೆ. ಇದಕ್ಕಾಗಿ ಪ್ರಶಸ್ತಿ ಪಟ್ಟಿ ಕೂಡ ಪ್ರಕಟವಾಗಿದೆ. 2017ರಲ್ಲಿ ಸರ್ಕಾರದಿಂದ ಅರಣ್ಯ ಸಿಬ್ಬಂದಿಗೆ ಸಿಎಂ ಚಿನ್ನದ ಪದಕ ಕೊಡಲು ನಿರ್ಧಾರ ಮಾಡಲಾಗಿತ್ತು.
2018ರಲ್ಲಿ 25 ಸಿಬ್ಬಂದಿಗೆ ಪ್ರಶಸ್ತಿ ನೀಡುವುದಾಗಿ ಪಟ್ಟಿ ಬಿಡುಗಡೆ ಮಾಡಲಾಗಿತ್ತು. ಪ್ರತಿ ವರ್ಷ ಮಾರ್ಚ್ 21 ವಿಶ್ವ ಅರಣ್ಯ ದಿನದಂದು ಪದಕ ವಿತರಿಸುವುದಾಗಿ ನಿರ್ಧರಿಸಲಾಗಿತ್ತು. ಆದರೆ 2018ರಲ್ಲಿ ಮಾರ್ಚ್ ನಿಂದ ಸೆಪ್ಟೆಂಬರ್ ಗೆ ಈ ಕಾರ್ಯಕ್ರಮ ಮುಂದೂಡಲಾಗಿತ್ತು. ಮತ್ತೆ ಸೆಪ್ಟೆಂಬರ್ ನಿಂದ ಮುಂದೂಡಲಾಗಿತ್ತು.
ಇದೀಗ 2019ರ ಪಟ್ಟಿ ಕೂಡ ಪ್ರಕಟವಾಗಿ ನವೆಂಬರ್ ಬಂದರು ಪದಕ ಮಾತ್ರ ವಿತರಣೆ ಆಗಿಲ್ಲ. ಅರಣ್ಯ ಇಲಾಖೆಗೆ ಪ್ರಶಸ್ತಿ ಕೊಡಲು ಸಿಎಂಗೆ ಇಷ್ಟೊಂದು ನಿರುತ್ಸಾಹವೆ ಅಥವಾ ಸಮಯವೇ ಸಿಗುತ್ತಿಲ್ಲವೇ ಎಂಬ ಪ್ರಶ್ನೆ ಮೂಡಿದೆ.
ಬೆಂಗಳೂರು: ದೀಪಾವಳಿ ಹಬ್ಬದ ಸಂಭ್ರಮದಲ್ಲಿದ್ದ ಜನರು 10 ಅಡಿ ಹೆಬ್ಬಾವು ಕಂಡು ಶಾಕ್ ಆದ ಘಟನೆ ಕೃಷ್ಣಗಿರಿ ಜಿಲ್ಲೆಯ ಸುಲಗಿರಿಯಲ್ಲಿ ನಡೆದಿದೆ.
ಕರ್ನಾಟಕ ಗಡಿಗೆ ಹೊಂದಿಕೊಂಡಿರುವ ತಮಿಳುನಾಡಿನ ಸುಲಗಿರಿಯಲ್ಲಿ ಇರುವ ಕಿರಾಣಿ ಅಂಗಡಿಯ ಗೋಡೌನ್ ನಲ್ಲಿ ಹೆಬ್ಬಾವು ಅವಿತು ಕುಳಿತಿತ್ತು. ಸಿಬ್ಬಂದಿ ಅಂಗಡಿಯಲ್ಲಿ ಮೂಟೆ ತೆಗೆದುಕೊಳ್ಳಲು ಹೋದಾಗ ಹೆಬ್ಬಾವು ಪ್ರತ್ಯಕ್ಷವಾಗಿದೆ.
ಸುಮಾರು 10 ಅಡಿ ಉದ್ದದ ಬೃಹತ್ ಗಾತ್ರದ ಹೆಬ್ಬಾವನ್ನು ಕಂಡು ಸ್ಥಳೀಯರು ಗಾಬರಿಗೊಂಡರು. ಬಳಿಕ ಅರಣ್ಯ ಇಲಾಖೆಗೆ ಕರೆ ಮಾಡಿ ಮಾಹಿತಿ ನೀಡಿದರು. ವಿಷಯ ತಿಳಿದು ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಹೆಬ್ಬಾವನ್ನು ರಕ್ಷಿಸಿದ್ದಾರೆ.
ಅರಣ್ಯ ಇಲಾಖೆ ಸಿಬ್ಬಂದಿ ಸಾರ್ವಜನಿಕರ ಸಹಾಯದಿಂದ ಹೆಬ್ಬಾವು ರಕ್ಷಿಸಿದ್ದಾರೆ. ಹೆಬ್ಬಾವನ್ನು ರಕ್ಷಿಸಿದ ಬಳಿಕ ಅರಣ್ಯ ಇಲಾಖೆಯ ಸಿಬ್ಬಂದಿ ಅದನ್ನು ಕಾಡಿಗೆ ಬಿಟ್ಟಿದ್ದಾರೆ. ಹೆಬ್ಬಾವನ್ನು ರಕ್ಷಿಸುವಾಗ ಸ್ಥಳೀಯರು ಅದನ್ನು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.
ಮುಂಬೈ: ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಚರಂಡಿಯಲ್ಲಿ 8 ಅಡಿ ಉದ್ದದ ಮೊಸಳೆಯೊಂದು ಪತ್ತೆಯಾಗಿದೆ.
ರತ್ನಗಿರಿಯ ಚಿಪ್ಲುನ್‍ನ ಪ್ರವಾಸಿ ರೆಸಾರ್ಟಿನ ಚರಂಡಿಯಲ್ಲಿ 8 ಅಡಿ ಮೊಸಳೆಯನ್ನು ಕಂಡು ಜನರು ದಂಗಾಗಿ ಹೋಗಿದ್ದಾರೆ. ಚರಂಡಿಯಲ್ಲಿ ಸಿಲುಕಿದ್ದ ಮೊಸಳೆಯ ವೈರಲ್ ಆಗುತ್ತಿದೆ. ಈ ಘಟನೆ ಚಿಪ್ಲುನ್‍ನ ದಾದರ್ ನಲ್ಲಿ ನಡೆದಿದ್ದು, ಜನರು ಮೊದಲು ಇದು ಮುಂಬೈನ ಸಬ್ ಅರ್ಬನ್ ದೃಶ್ಯ ಎಂದು ಅನುಮಾನ ವ್ಯಕ್ತಪಡಿಸಿದ್ದರು.
ರತ್ನಗಿರಿಯಲ್ಲಿ ಜೋರಾಗಿ ಮಳೆ ಆಗಿತ್ತು. ಮಳೆಯಿಂದಾಗಿ ವಶಿಷ್ಠಿ ನದಿಯಿಂದ ಇಲ್ಲಿಗೆ ಬಂದಿರಬಹುದು ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
ವಿಚಿತ್ರ ಧ್ವನಿ ಬಂದಾಗ ಅಲ್ಲಿ ಓಡಾಡುತ್ತಿದ್ದ ಜನ ಬಗ್ಗಿ ಚರಂಡಿಯನ್ನು ನೋಡಿದಾಗ ಮೊಸಳೆ ಇರುವುದನ್ನು ಗಮನಿಸಿದ್ದಾರೆ. ಮೊಸಳೆ ಇರುವುದನ್ನು ಕಂಡು ಅರಣ್ಯಾಧಿಕಾರಿ ಹಾಗೂ ಅಗ್ನಿಶಾಮಕ ದಳಕ್ಕೆ ಕೂಡಲೇ ಮಾಹಿತಿ ನೀಡಿದ್ದಾರೆ. ಬಳಿಕ ಅಗ್ನಿಶಾಮಕ ದಳ ಹಾಗೂ ಅರಣ್ಯ ಅಧಿಕಾರಿಗಳು ಮೊಸಳೆಯನ್ನು ರಕ್ಷಿಸಿದ್ದಾರೆ.
ಹವಮಾನದ ಕಾರಣದಿಂದಾಗಿ ಈ ಕ್ಷೇತ್ರದಲ್ಲಿ ಈ ರೀತಿ ಆಗುವುದು ಸಾಮಾನ್ಯ. ಸದ್ಯ ನಾವು ಮೊಸಳೆಯನ್ನು ಸುರಕ್ಷಿತವಾಗಿ ಚರಂಡಿಯಿಂದ ಹೊರ ತೆಗೆದು ನದಿಗೆ ಬಿಟ್ಟಿದ್ದೇವೆ ಎಂದು ಅರಣ್ಯ ಅಧಿಕಾರಿ ವಿ.ಕೆ ಸುರ್ವೆ ತಿಳಿಸಿದ್ದಾರೆ.
ಹಾಸನ: ಇಂದು ಬೆಳ್ಳಂಬೆಳಗ್ಗೆ ಹಾಸನ ನಗರಕ್ಕೆ ಬಂದಿದ್ದ ಕಾಡಾನೆ ಈಗ ಕಾಡಿಗೆ ಮರಳಿದೆ.
ಇಂದು ಮುಂಜಾನೆ ನಗರದ ಪಿಎನ್‍ಟಿ ಕಾಲೋನಿಗೆ ಕಾಡಾನೆ ಬಂದಿತ್ತು. ಈ ವಿಷಯ ತಿಳಿದು ಸ್ಥಳಕ್ಕೆ ಡಿಎಫ್‍ಓ, ಆರ್‍ಎಫ್‍ಓ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿದ್ದರು. ಅರಣ್ಯಾಧಿಕಾರಿಗಳ ತಂಡ ಕಾಡಾನೆ ಆನೆ ಬೆನ್ನಟ್ಟಿ ಯಶಸ್ವಿಯಾಗಿ ಕಾಡಿಗೆ ಓಡಿಸಿದ್ದಾರೆ.
ಡಿಸಿಎಫ್ ಸಿವರಾಂಬಾಬು, ಎಸಿಎಫ್ ಹರೀಶ್, ಆರ್‍ಎಫ್‍ಓ ಜಗದೀಶ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಕಾಡಾನೆ ಉದ್ದೂರು, ಶಂಖ, ಅತ್ತಿಹಳ್ಳಿ, ಜಿನ್ನೇನಹಳ್ಳಿ, ಇಬ್ದಾಣೆ ಗ್ರಾಮಗಳ ಮೂಲಕ ಕಾಡು ಸೇರಿದೆ.
ಬೆಳಗ್ಗೆಯೇ ನಗರಕ್ಕೆ ಆನೆ ನುಗ್ಗಿ ಆತಂಕ ಸೃಷ್ಟಿಯಾಗಿತ್ತು. ಹದಿನೈದು ದಿನಗಳ ಅಂತರದಲ್ಲಿ ಎರಡನೇ ಬಾರಿಗೆ ಕಾಡಾನೆ ನಗರಕ್ಕೆ ಎಂಟ್ರಿ ಕೊಟ್ಟಿದೆ.ಕಾಡಾನೆಯನ್ನು ಸೆರೆ ಹಿಡಿಯುವಂತೆ ಜನರು ಒತ್ತಾಯಿಸಿದರು.
ಬೆಂಗಳೂರು: ಉಪಾಯ ಇದ್ದರೆ ಯಾವುದು ವ್ಯರ್ಥವಾಗುವುದಿಲ್ಲ ಎಂಬುದಕ್ಕೆ ಉಡುಪಿಯ ನಿವಾಸಿಯೊಬ್ಬರು ತಾಜಾ ಉದಾಹರಣೆಯಾಗಿದ್ದಾರೆ.
ಯಾವುದೇ ಕುಟುಂಬದಲ್ಲಿ ಸಾವು ಸಂಭವಿಸುವ ಸಂದರ್ಭದಲ್ಲಿ ತಿಥಿ ಕಾರ್ಯಗಳು ಸಾಂಪ್ರದಾಯಿಕವಾಗಿ ನಡೆಯುತ್ತದೆ. ಈ ಸಂದರ್ಭದಲ್ಲಿ ಮೃತರಿಗೆ ಪ್ರಿಯವಾದ ಆಹಾರಗಳನ್ನು ಅರ್ಪಿಸುತ್ತೇವೆ. ಆದರೆ ಈ ವೇಳೆ ಕಾಗೆ ಅನ್ನ ತಿನ್ನದಿದ್ದರೆ ಮೃತರ ಕುಟುಂಬಸ್ಥರು ನೊಂದುಕೊಳ್ಳುತ್ತಾರೆ. ಇದನ್ನೇ ಮನಗಂಡ ಯುವಕರೊಬ್ಬರು ಬ್ಯುಸಿನೆಸ್ ಮಾಡಿಕೊಂಡಿದ್ದಾರೆ.
ಉಡುಪಿ ಜಿಲ್ಲೆಯ ಪ್ರಶಾಂತ್ ಪೂಜಾರಿ ಎಂಬವರು ಈ ಕಾರ್ಯದಲ್ಲಿ ತೊಡಗಿದ್ದು, ಶ್ರಾದ್ಧ, ತಿಥಿ ಕಾರ್ಯಕ್ರಮಗಳಿಗೆ ಕಾಗೆ ಬೇಕಾದರೆ ಬಾಡಿಗೆಗೆ ದೊರೆಯುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸ್ಟೇಟಸ್ ಹಾಕಿದ್ದಾರೆ. ಈ ಪೋಸ್ಟ್ ಸದ್ಯ ರಾಷ್ಟ್ರಮಟ್ಟದಲ್ಲಿ ವೈರಲ್ ಆಗುತ್ತಿದ್ದು, ಯುವಕನ ಚಿಂತನೆಗೆ ಸಾಕಷ್ಟು ಭಿನ್ನ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ.
ಸಾಂದರ್ಭಿಕ ಚಿತ್ರ
ಕಾಗೆ ಸಿಕ್ಕಿದ್ದು ಹೇಗೆ?
ಪ್ರಶಾಂತ್ ಪೂಜಾರಿ ಅವರಿಗೆ ಪ್ರಾಣಿ, ಪಕ್ಷಿಗಳು ಎಂದರೆ ತುಂಬಾ ಇಷ್ಟ. ಒಂದು ದಿನ ಇವರ ಮನೆಯ ಸಮೀಪ ಮೂರು ಕಾಗೆ ಮರಿಗಳು ಅನಾಥವಾಗಿ ಬಿದ್ದಿದ್ದವು. ಇದನ್ನು ಗಮನಿಸಿದ್ದ ಪ್ರಶಾಂತ್, ಅವುಗಳ ಆರೈಕೆ ಮಾಡಲು ಮುಂದಾಗಿದ್ದರು. ಆದರೆ 3ರಲ್ಲಿ 2 ಮರಿಗಳು ಸಾವನ್ನಪ್ಪಿದ್ದು, ಒಂದು ಮಾತ್ರ ಬದುಕುಳಿದಿತ್ತು.
ಈ ಸಂದರ್ಭದಲ್ಲಿ ಅವರಿಗೆ ಶ್ರಾದ್ಧಾ ಕಾರ್ಯಕ್ರಮಗಳಲ್ಲಿ ಕಾಗೆ ಆಹಾರ ತಿನ್ನದೆ ಮೃತರ ಕುಟುಂಬಸ್ಥರು ನೊಂದುಕೊಳ್ಳುತ್ತಿದ್ದರ ಬಗ್ಗೆ ಮಾಹಿತಿ ಲಭಿಸಿತ್ತು. ತಮ್ಮ ಬಳಿ ಕಾಗೆ ಇರುವುದಿರಿಂದ ಇದನ್ನೇ ಉಪಾಯ ಮಾಡಿದ್ದ ಪ್ರಶಾಂತ್, ಕಾಗೆ ಸೇವೆ ನೀಡಲು ನಿರ್ಧರಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಫೇಸ್‍ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು.
ಸಾಂದರ್ಭಿಕ ಚಿತ್ರ
ಅರಣ್ಯ ಅಧಿಕಾರಿಗಳಿಂದ ಕ್ರಮ:
ಸಾಮಾಜಿಕ ಜಾಲತಾಣದಲ್ಲಿ ಪ್ರಶಾಂತ್ ಅವರ ಪೋಸ್ಟ್ ವೈರಲ್ ಆಗುತ್ತಿದಂತೆ ಎಚ್ಚೆತ್ತ ಸ್ಥಳೀಯ ಅರಣ್ಯ ಅಧಿಕಾರಿಗಳು ಪ್ರಶಾಂತ್ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಅವರಿಗೆ ಮನವರಿಕೆ ಮಾಡಿ ಕಾಗೆಯನ್ನು ಮತ್ತೆ ಕಾಡಿಗೆ ಬಿಟ್ಟಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಯುವಕ ಪ್ರಶಾಂತ್, ನನಗೆ ಕಾಗೆಯನ್ನು ಇಟ್ಟುಕೊಂಡು ಬ್ಯುಸಿನೆಸ್ ಮಾಡುವ ಯೋಚನೆ ಇರಲಿಲ್ಲ. ತಾನು ಸಾಕಿರುವ ಕಾಗೆಗೆ ರೆಕ್ಕೆ ಸರಿ ಇರಲಿಲ್ಲ. ಆದ್ದರಿಂದ ಅದು ಚೇತರಿಕೆ ಕಂಡ ಮೇಲೂ ಆಹಾರ ನೀಡಿ ಆರೈಕೆ ಮಾಡುತ್ತಿದ್ದೆ. ಈಗ ಕಾಗೆಯನ್ನ ಅರಣ್ಯಕ್ಕೆ ಬಿಟ್ಟಿದ್ದೇವೆ ಎಂದಿದ್ದಾರೆ. ಅಲ್ಲದೆ ಈ ಹಿಂದೆ ಗಾಯಗೊಂಡಿದ್ದ ಉಡವನ್ನು ಕೂಡ ರಕ್ಷಣೆ ಮಾಡಿದ್ದೆ ಎಂದು ಹೇಳಿದ್ದಾರೆ.
ಕೊಪ್ಪಳ: ಕಾಡಿನಲ್ಲಿ ಇರಬೇಕಾದ ಕರಡಿ ಇಂದು ಕೊಪ್ಪಳದ ಕೃಷಿ ಮಾರುಕಟ್ಟೆಗೆ ಎಂಟ್ರಿಕೊಟ್ಟಿದ್ದು, ಕರಡಿ ನೋಡಿದ ಜನ ಭಯದಿಂದ ದಿಕ್ಕಾಪಾಲಾಗಿ ಓಡಿದ್ದಾರೆ.
ಕರಡಿ ಕೃಷಿ ಮಾರುಕಟ್ಟೆಯಲ್ಲೆಲ್ಲ ಓಡಾಡಿದೆ. ಮಾರುಕಟ್ಟೆಯನ್ನೆಲ್ಲ ಸುತ್ತಿ ಇದೀಗ ದೇವರಾಜು ಅರಸು ಕಾಲೋನಿಯ ಪೂರ್ತಿ ಜಾಲಿ ಗಿಡ ಬೆಳೆದಿರುವ ಪ್ರದೇಶದಲ್ಲಿ ಅಡಗಿ ಕುಳಿತಿದೆ.
ನಗರದ ಹೃದಯ ಭಾಗದಲ್ಲಿರುವ ಮಾರುಕಟ್ಟೆಗೆ ಕರಡಿ ಎಂಟ್ರಿ ಕೊಟ್ಟಿರುವುದರಿಂದ ಜನ ಆತಂಕಗೊಂಡಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು, ಕರಡಿ ಹಿಡಿಯಲು ಸಿದ್ಧತೆ ನಡೆಸುತ್ತಿದ್ದಾರೆ.
ಜಾಲಿ ಗಿಡ ಬೆಳೆದಿರುವ ಪ್ರದೇಶದಲ್ಲಿ ಕರಡಿ ಅಡಗಿ ಕುಳಿತಿರುವ ಪರಿಣಾಮ ಸೆರೆ ಹಿಡಿಯುವುದು ಸವಾಲಾಗಿ ಪರಿಣಮಿಸಿದೆ.
ಚಿಕ್ಕಮಗಳೂರು: ಅಧಿಕಾರಿಗಳ ಮೇಲೆ ಮೂಡಿಗೆರೆ ಬಿಜೆಪಿ ಶಾಸಕ ಎಂ.ಪಿ ಕುಮಾರಸ್ವಾಮಿ ಗೂಂಡಾವರ್ತನೆ ತೋರಿಸಿದ್ದು, ಈ ಮೂಲಕ ಹುಲಿ ಉಗುರು ಮಾರಾಟಗಾರರ ಬೆಂಬಲಕ್ಕೆ ಬಿಜೆಪಿ ಶಾಸಕರು ನಿಂತಿದ್ದಾರಾ ಎನ್ನುವ ಪ್ರಶ್ನೆ ಎದ್ದಿದೆ.
ಅರಣ್ಯ ಅಧಿಕಾರಿಗಳು ಹುಲಿ ಉಗುರು ಮಾರುತ್ತಿದ್ದ ವೆಂಕಟೇಶ್, ರಂಜಿತ್ ಹಾಗೂ ಶಿವಕುಮಾರ್ ಅವರನ್ನು ಬಂಧಿಸಿದ್ದರು. ಇದರಿಂದ ಕೋಪಗೊಂಡು ತನ್ನ ಹಿಂಬಾಲಕರನ್ನ ಬಂಧಿಸಿದಕ್ಕೆ ಶಾಸಕ ಎಂ.ಪಿ ಕುಮಾರಸ್ವಾಮಿ ಫುಲ್ ಗರಂ ಆಗಿ ಅರಣ್ಯಾಧಿಕಾರಿಗಳ ಜೊತೆ ಜಗಳ ಮಾಡಿ ಅವರಿಗೆ ಅವಾಜ್ ಹಾಕಿದ್ದಾರೆ.
ರಂಪಾಟ ಮಾಡಿಬಿಡುತ್ತೇನೆ. ನನಗೆ ಏನು ಸಮಸ್ಯೆ ಆಗಲ್ಲ. ನನ್ನ ಫೋನ್ ರಿಸೀವ್ ಮಾಡದೇ ಇದ್ದರೆ ಆಫೀಸ್ ಬಾಗಿಲು ಹಾಕಿಸುತ್ತೇನೆ ಎಂದು ಮೂಡಿಗೆರೆ ಅರಣ್ಯ ಇಲಾಖೆ ಕಚೇರಿಯಲ್ಲಿ ಕುಮಾರಸ್ವಾಮಿ ರಂಪಾಟ ಮಾಡಿ ಕಿರುಚಾಟ ಮಾಡಿದ್ದಾರೆ. ಸೋಮವಾರ ತಡರಾತ್ರಿ ಈ ಘಟನೆ ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಈಗ ಹರಿದಾಡುತ್ತಿದ್ದು, ಎಂ.ಪಿ.ಕುಮಾರಸ್ವಾಮಿ ವಿರುದ್ಧ ಸಾರ್ವಜನಿಕರಿಂದ ಆಕ್ರೋಶ ಕೇಳಿ ಬರುತ್ತಿದೆ.
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಹಿತ್ಲತೋಟ ಗ್ರಾಮದಲ್ಲಿ ಬಾವಿಗೆ ಬಿದ್ದ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.
ಗ್ರಾಮದ ವೆಂಕಟರಮಣ ಹೆಗಡೆ ಎಂಬವರ ಮನೆಯ ಎದುರಿದ್ದ ಬಾವಿಗೆ ಚಿರತೆ ಬಿದ್ದಿತ್ತು. ಚಿರತೆ ರಾತ್ರಿ ವೇಳೆ ನಾಯಿಯನ್ನು ಹಿಡಿಯಲು ಬಂದಿತ್ತು. ಈ ವೇಳೆ ಕತ್ತಲೆಯಲ್ಲಿ ಏನೂ ಕಾಣದೆ ಮನೆಯ ಬಾವಿಗೆ ಬಿದ್ದಿದೆ.
ಬಾವಿಗೆ ಬಿದ್ದ ಶಬ್ಧ ಕೇಳಿ ನೋಡಿದಾಗ ಚಿರತೆ ಬಿದ್ದಿರುವ ದೃಶ್ಯ ಮನೆಯವರಿಗೆ ಕಂಡು ಬಂದಿತ್ತು. ಚಿರತೆಯನ್ನು ನೋಡಿದ ಮನೆಯವರು ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ರೋಪ್ ಮೂಲಕ ಚಿರತೆಯನ್ನು ಮೇಲಕ್ಕೆ ಎತ್ತಿದ್ದಾರೆ.
ಬಾವಿಯಿಂದ ಮೇಲೆ ಬಂದ ತಕ್ಷಣ ಚಿರತೆ ಅರಣ್ಯದ ಕಡೆ ಪಲಾಯನ ಮಾಡಿದೆ.
ದಾವಣಗೆರೆ: ಪುಂಡನನ್ನು ಹಿಡಿಯಲು ಅರಣ್ಯ ಅಧಿಕಾರಿಗಳು ಹನಿಟ್ರ್ಯಾಪ್ ಅಸ್ತ್ರವನ್ನು ಪ್ರಯೋಗಿಸಿ ಸೆರೆ ಹಿಡಿದ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಮಾವಿನಹೊಳೆ ಅರಣ್ಯ ಪ್ರದೇಶದಲ್ಲಿ ನಡೆದಿದೆ.
ಕಳೆದ ಒಂದು ವರ್ಷದಿಂದ ಮಾವಿನ ಹೊಳೆ ಅರಣ್ಯ ಪ್ರದೇಶದಲ್ಲಿ ಪುಂಡಾನೆಯೊಂದು ರೈತರ ಬೆಳೆ, ಆಸ್ತಿ ನಷ್ಟ ಮಾಡುತ್ತಿತ್ತು. ಅಂತಹ ಪುಂಡಾನೆಯನ್ನು ಮಂಗಳವಾರ ಸಂಜೆ ಸೆರೆ ಹಿಡಿಯಲು ಅರಣ್ಯ ಅಧಿಕಾರಿಗಳು ಹಾಗೂ ತಜ್ಞ ವೈದ್ಯರು ಯಶಸ್ವಿಯಾಗಿದ್ದಾರೆ. ಕಳೆದ ಎರಡು ದಿನಗಳಿಂದ ಪುಂಡಾನೆಯನ್ನು ಹಿಡಿಯಲು ಕಾರ್ಯಾಚರಣೆ ನಡೆಸಿದ್ದು, ಸಕ್ರೇಬೈಲ್ ನಿಂದ ಅಭಿಮನ್ಯು ನೇತೃತ್ವದಲ್ಲಿ ಕೃಷ್ಣಾ, ಧನಂಜಯ, ಹರ್ಷ, ಹಾಗೂ ಅಜೇಯ ಎಂಬ ಸಾಕಾನೆಗಳು ಕಾಡಾನೆಯನ್ನು ಸೆರೆ ಹಿಡಿಯಲು ಆಗಮಿಸಿದ್ದವು.
ಮಂಗಳವಾರ ಬೆಳಗ್ಗೆ ಪುಂಡಾನೆಯನ್ನು ಹನಿಟ್ರ್ಯಾಪ್ ಮೂಲಕ ಸೆರೆ ಹಿಡಿಯಲು ಗೀತಾ ಹಾಗೂ ಗಂಗೆ ಎನ್ನುವ ಎರಡು ಹೆಣ್ಣಾನೆಯನ್ನು ಕಾರ್ಯಾಚರಣೆಗೆ ಬಳಸಿ ಚಿಕ್ಕಸಂದಿ ಗ್ರಾಮದ ಹಳೇಬೀಳು ಕಾಡಿನ ಗುಡ್ಡದ ಮಧ್ಯೆ ಸೆರೆ ಹಿಡಿಯುವಲ್ಲಿ ಯಶಸ್ವಿಯಾದರು. ಕಳೆದ 2017ರ ಡಿಸೆಂಬರ್ 21ರಂದು ಕಾಡಿನಲ್ಲಿದ್ದ ಒಂದು ಪುಂಡಾನೆಯನ್ನು ನುರಿತ ತಜ್ಞ ವೈದ್ಯರ ತಂಡ ಹಾಗೂ ಅರಣ್ಯ ಅಧಿಕಾರಿಗಳು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದರು.
ಕಾಡಿನಲ್ಲೇ ಇದ್ದ ಮತ್ತೊಂದು ಪುಂಡಾನೆಯನ್ನು ಹಿಡಿಯಲು ಸರ್ಕಾರದಿಂದ ಅನುಮತಿ ಸಿಕ್ಕಿರಲಿಲ್ಲ. ಈಗ ಆನುಮತಿಯನ್ನು ಪಡೆದು ತಜ್ಞ ವೈದ್ಯರು, ನುರಿತ ಮಾವುತರು ಸೇರಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಚರಣೆ ನಡೆಸಿ ಸೆರೆ ಹಿಡಿದಿದ್ದು, ಸೆರೆ ಹಿಡಿದ ಕಾಡಾನೆಯನ್ನು ಸಕ್ರೇಬೈಲು ಆನೆ ಬಿಡಾರಕ್ಕೆ ರವಾನಿಸಲಾಗಿದೆ ಎನ್ನಲಾಗುತ್ತಿದೆ. ಅರಣ್ಯ ಪ್ರದೇಶದ ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ರೈತರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಹಾಸನ: ಸಕಲೇಶಪುರ ತಾಲೂಕಿನ ನಿಡನೂರು ಗ್ರಾಮದಲ್ಲಿ ಕಾಡಾನೆಗಳ ಹಿಂಡೊಂದು ಪ್ರತ್ಯಕ್ಷವಾಗಿ ಅಪಾರ ಪ್ರಮಾಣದ ಬೆಳೆ ನಾಶ ಮಾಡಿರುವ ಘಟನೆ ನಡೆದಿದೆ.
ಆಲೂರು ಸಕಲೇಶಪುರ ತಾಲೂಕಿನ ಗಡಿಭಾಗವಾದ ನಿಡನೂರು ಸಮೀಪ ಬೆಳ್ಳಂಬೆಳಿಗ್ಗೆ ಈ ಕಾಡಾನೆಗಳ ಹಿಂಡು ಕಾಣಿಸಿಕೊಂಡಿದ್ದು, ಮಲ್ಲಿಕ್ ಎಂಬವರ ಕಾಫಿ ತೋಟ ಹಾಗೂ ಗದ್ದೆಯಲ್ಲಿ ದಾಂಧಲೆ ನಡೆಸಿ ಅಪಾರ ಪ್ರಮಾಣದ ಬೆಳೆ ನಾಶ ಮಾಡಿವೆ.
ಮಲೆನಾಡು ಭಾಗದಲ್ಲಿ ಆನೆ ಮತ್ತು ಮಾನವನ ನಡುವಿನ ಸಂಘರ್ಷ ಮುಂದುವರಿದಿದ್ದು, ರೈತರು ಭಯದ ವಾತಾವರಣದಲ್ಲಿ ಜೀವಿಸುವಂತಾಗಿದೆ. ಕಾಡಾನೆಗಳ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಆಗ್ರಹಿಸಿ ಹಲವಾರು ಪ್ರತಿಭಟನೆಗಳು ಮಾಡಿದ್ದರೂ ಸಹ ಪ್ರಯೋಜನವಾಗಿಲ್ಲ.
ಮೂರು ತಿಂಗಳ ಹಿಂದೆ ಹೊಸಗದ್ದೆ ಸಮೀಪ ತಾಯಮ್ಮ ಎಂಬ ಮಹಿಳೆ ಆನೆ ದಾಳಿಯಿಂದ ಮೃತಪಟ್ಟ ಹಿನ್ನೆಲೆಯಲ್ಲಿ ಸಾರ್ವಜನಿಕರ ಪ್ರತಿಭಟನೆಗೆ ಮಣಿದ ಸರ್ಕಾರ ಎರಡು ಕಾಡಾನೆಗಳನ್ನು ಹಿಡಿಯಲು ಅನುಮತಿ ನೀಡಿತ್ತು. ಮಳೆಗಾಲವಾಗಿದ್ದರಿಂದ ಕಾಡಾನೆ ಹಿಡಿಯುವ ಕಾರ್ಯಾಚರಣೆಯನ್ನು ಮುಂದೂಡಲಾಗಿತ್ತು.
ದಸರಾ ಮುಗಿದ ನಂತರ ಸಾಕಾನೆಗಳಿಗೆ ವಿಶ್ರಾಂತಿ ನೀಡಲಾಗಿದ್ದು, ಸೋಮವಾರದಿಂದ ಕಾಡಾನೆ ಹಿಡಿಯುವ ಕಾರ್ಯಚರಣೆ ಆರಂಭಿಸಲು ಸಿದ್ಧತೆ ನಡೆದಿತ್ತು. ಆದರೆ ದುಬಾರೆಯಿಂದ ಸಾಕಾನೆಗಳು ಆಗಮಿಸುವುದು ತಡವಾಗಿದ್ದರಿಂದ ನಾಳೆಯಿಂದ ಕಾಡಾನೆ ಹಿಡಿಯುವ ಕಾರ್ಯಾಚರಣೆ ಆರಂಭವಾಗಲಿದೆ ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.