Tag: Forest Officers

  • ಬೆಂಕಿ ನಂದಿಸುವವರ ಬಾಳಿಗೇ ಬೆಂಕಿಯಿಟ್ಟ ಅರಣ್ಯ ಅಧಿಕಾರಿಗಳು

    ಬೆಂಕಿ ನಂದಿಸುವವರ ಬಾಳಿಗೇ ಬೆಂಕಿಯಿಟ್ಟ ಅರಣ್ಯ ಅಧಿಕಾರಿಗಳು

    ಬೆಳಗಾವಿ: ಕಾಡಿನಲ್ಲಿ ಬೆಂಕಿ ನಂದಿಸುವ ಕಾರ್ಮಿಕರ ಬಾಳಿಗೇ ಅರಣ್ಯ ಅಧಿಕಾರಿಗಳು ಬೆಂಕಿಯಿಟ್ಟರಾ ಎಂಬ ಪ್ರಶ್ನೆ ಕಾಡುತ್ತಿದ್ದು, ಒಂದು ಹೊತ್ತು ಊಟಕ್ಕೂ ಗತಿಯಿಲ್ಲದೆ ಬಡ ಕುಟುಂಬಗಳು ಬೀದಿಗೆ ಬಂದಿವೆ.

    ಬೆಳಗಾವಿ, ಬಾಗಲಕೋಟೆ ಹಾಗೂ ವಿಜಯಪೂರ ಜಿಲ್ಲೆಯ ದಿನಗೂಲಿ ಕಾರ್ಮಿಕರನ್ನು ಅರಣ್ಯಾಧಿಕಾರಿಗಳು ಬೀದಿಗೆ ತಳ್ಳಿದ್ದಕ್ಕೆ ಪ್ರತಿಭಟನೆ ನಡೆಸಿದರು. ನರೇಗಾ ಯೋಜನೆಯಲ್ಲಿ ಕನಿಷ್ಟ 150 ದಿನಗಳಾದರೂ ಕೆಲಸ ನೀಡಿ ಮತ್ತು ನಮಗೆ ಜಾಬ್ ಕಾರ್ಡ್ ನೀಡಿ ಎಂಬುದು ಕಾರ್ಮಿಕರ ಬೇಡಿಕೆ. ದಿನಗೂಲಿ ಅರಣ್ಯ ಕಾರ್ಮಿಕರಿಗೆ ಗುರುತಿನ ಚೀಟಿ, ಸಮವಸ್ತ್ರ ನೀಡಿ ಎಂದು ಕಾರ್ಮಿಕ ಸಂಘಟನೆಗಳು ಡಿಸೆಂಬರ್ 23 ರಂದು ಸರ್ಕಾರಕ್ಕೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರ ಬರೆದಿವೆ. ಹೀಗಾಗಿ ಕೆಲಸದಿಂದ ತೆಗೆಯುತ್ತಿದ್ದಾರೆ ಎಂದು ಕಾರ್ಮಿಕ ಮುಖಂಡರ ಆರೋಪವಾಗಿದೆ. ಇನ್ನೊಂದೆಡೆ ಕೆಲಸವಿದ್ದಾಗ ಮಾತ್ರ ನಾವು ದಿನಗೂಲಿ ನೀಡುತ್ತೇವೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

    ಕಾರ್ಮಿಕರ ತೊಂದರೆ ಏನು ಎಂಬುದು ನನ್ನ ಗಮನಕ್ಕೆ ಬಂದಿದೆ. ಅವರ ಜಾಬ್ ಕಾರ್ಡ್ ಇಲ್ಲ ಎಂಬುದು ಗೊತ್ತಾಗಿದೆ. ಈ ಕುರಿತು ಜಿಲ್ಲಾ ಅರಣ್ಯ ಅಧಿಕಾರಿಗಳನ್ನು ಕರೆದು ಮಾಹಿತಿ ಪಡೆಯುತ್ತೇನೆ. ಕಾರ್ಮಿಕರ ಸಮಸ್ಯೆ ಸುಖಾಂತ್ಯವಾಗುವ ರೀತಿ ಕ್ರಮ ಕೈಗೊಳ್ಳುತ್ತೇನೆ ಎಂದು ಸಿಸಿಎಫ್ ಬಸವರಾಜ್ ಪಾಟೀಲ್ ತಿಳಿಸಿದ್ದಾರೆ.

    ಅರಣ್ಯ ಇಲಾಖೆಯಲ್ಲಿ ತುರ್ತು ಕೆಲಸಕ್ಕಾಗಿ ನಿಯೋಜನೆಗೊಂಡ ದಿನಗೂಲಿ ನೌಕರರು ಕಾಡಿಗೆ ಬೆಂಕಿ ಬಿದ್ದಾಗ ಅಥವಾ ಕಾಡುಪ್ರಾಣಿಗಳು ನಾಡಿಗೆ ಬಂದಾಗ ತುರ್ತು ಕೆಲಸವನ್ನು ನಿರ್ವಹಿಸುವ ಕೌಶಲ ಹೊಂದಿದವರು. ಕಾಡಿಗೆ ಬೆಂಕಿ ಬಿದ್ದಾಗ ತಕ್ಷಣ ಕಾರ್ಯಪ್ರವರ್ತರಾಗುವ ಇವರ ಬಾಳಲ್ಲಿ ಈಗ ಬೆಂಕಿ ಬಿದ್ದಿದೆ. ಕೆಲಸವಿಲ್ಲ ನೀವು ಯಾರು ಎಂಬುದೇ ನಮಗೆ ಗೊತ್ತಿಲ್ಲ ಎಂದು ಅರಣ್ಯ ಅಧಿಕಾರಿಗಳು ಬೇಜವಾಬ್ದಾರಿ ಹೇಳಿಕೆ ನೀಡಿ ಇವರನ್ನು ಕೆಲಸದಿಂದ ವಜಾ ಮಾಡಿದ್ದಾರೆ. ಅಲ್ಲದೆ ಕ್ವಾಟ್ರಸ್ ಖಾಲಿ ಮಾಡಿ ಇಲ್ಲದಿದ್ದರೆ ಪಾತ್ರೆಗಳನ್ನು ಹೊರಕ್ಕೆ ಬೀಸಾಡುತ್ತೇವೆ ಎಂದು ಧಮಕಿ ಹಾಕುತ್ತಿದ್ದಾರೆ.

  • ನರಭಕ್ಷಕ ಚಿರತೆ ಸೆರೆಗೆ ಕೃತಕ ಕುರಿ ಹಟ್ಟಿ ತಯಾರಿ- ಅಧಿಕಾರಿಗಳಿಗೆ ಸವಾಲಾದ ಗುಹೆಗಳು

    ನರಭಕ್ಷಕ ಚಿರತೆ ಸೆರೆಗೆ ಕೃತಕ ಕುರಿ ಹಟ್ಟಿ ತಯಾರಿ- ಅಧಿಕಾರಿಗಳಿಗೆ ಸವಾಲಾದ ಗುಹೆಗಳು

    – ಚಿರತೆ ತಿರುಗಾಡುವ ಸೂಕ್ಷ್ಮ ಸ್ಥಳಗಳ ಪತ್ತೆ

    ಕೊಪ್ಪಳ: ಕಳೆದ ಎರಡು ತಿಂಗಳಿಂದ ಅಧಿಕಾರಿಗಳ ನಿದ್ದೆಗೆಡಿಸಿರುವ ನರಭಕ್ಷಕ ಚಿರತೆ ಸೆರೆ ಹಿಡಿಯಲು ಅಕಾರಿಗಳು ನಾನಾ ತಂತ್ರಗಳನ್ನು ರೂಪಿಸಿ, ಕಾರ್ಯಚರಣೆ ನಡೆಸಿದರೂ ಪ್ರಯೋಜನವಾಗಿಲ್ಲ. ಇದೀಗ ಕುರಿ ಸಾಕಾಣಿಕೆಯ ಕೃತಕ ಹಟ್ಟಿ ನಿರ್ಮಿಸಿ, ಚಿರತೆ ಸೆರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಸಂಚು ರೂಪಿಸಿದ್ದಾರೆ.

    ಪ್ರವಾಸಿಗರ ನೆಚ್ಚಿನ ಸ್ಥಳ ಎಂದು ಗುರುತಿಸಿಕೊಂಡಿದ್ದ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿ, ವಿರುಪಾಪೂರ ಗಡ್ಡೆ, ಸಣಾಪೂರ, ಜಂಗ್ಲಿ ಗ್ರಾಮಗಳಲ್ಲಿ ನರಭಕ್ಷಕ ಚಿರತೆ ಕಾಟ ಹೆಚ್ಚಳವಾಗಿದೆ. ಮೂರ್ನಾಲ್ಕು ತಿಂಗಳಿನಲ್ಲಿ ಈಗಾಗಲೇ ಇಬ್ಬರು ಯುವಕರನ್ನು ಬಲಿ ಪಡೆದಿರುವ ಚಿರತೆ, ಇಬ್ಬರನ್ನು ಗಂಭೀರವಾಗಿ ಗಾಯಗೊಳಿಸಿದೆ. ಇಂತಹ ನರಭಕ್ಷಕ ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಖೆಯ ಅಧಿಕಾರಿಗಳು ಎರಡು ತಿಂಗಳಿಂದ ಇಲ್ಲಿಯೇ ಬೀಡು ಬಿಟ್ಟು, ಆನೆ, ನೆಟ್‍ವರ್ಕ್ ಟ್ರ್ಯಾಪರ್, ಸೆನ್ ಸರ್ವೆ, ಟ್ರ್ಯಾಪ್ ಕ್ಯಾಮೆರಾ, ಬೋನ್ ಅಳವಡಿಕೆ ಸೇರಿದಂತೆ ನಾನಾ ಕಾರ್ಯಚರಣೆಗಳನ್ನು ನಡೆಸುತ್ತಿದ್ದಾರೆ. ಆದರೆ ಎರಡು ತಿಂಗಳಿಂದ ನರಭಕ್ಷಕ ಚಿರತೆ ಕಣ್ತಪ್ಪಿಸಿಕೊಂಡು ತಿರುಗಾಡುತ್ತಿದ್ದು, ಅಧಿಕಾರಿಗಳಿಗೆ ತಲೆ ನೋವಾಗಿ ಪರಿಣಮಿಸಿದೆ.

    ವೈಜ್ಞಾನಿಕ ಕಾರ್ಯಚರಣೆ ನಡೆಸಿ ಅರಣ್ಯ ಇಲಾಖೆ ಅಕಾರಿಗಳು ಯಶಸ್ವಿಯಾಗದಿರುವುದರಿಂದ ಬೆಸತ್ತು ಕೃತಕ ಪ್ರಯೋಗಕ್ಕೆ ಮುಂದಾಗಿದ್ದಾರೆ. ಸೆನ್ ಸರ್ವೆ ಮೂಲಕ ಚಿರತೆ ಚಲನವಲನಗಳ ಬಗ್ಗೆ ಮಾಹಿತಿ ಕಲೆ ಹಾಕಿದ ಅಧಿಕಾರಿಗಳು, ಹೆಚ್ಚು ಕಾಣಿಸಿಕೊಳ್ಳುವ ಸ್ಥಳವಾಗಿರುವ ಜಂಗ್ಲಿ ಸಮೀಪದಲ್ಲಿ ಕೃತಕ ಕುರಿ ಹಟ್ಟಿಯನ್ನು ನಿರ್ಮಿಸಲು ಮುಂದಾಗಿದ್ದಾರೆ. ಕೃತಕ ಹಟ್ಟಿಯಲ್ಲಿ ಕುರಿ ಮರಿಗಳ ಸಾಕಾಣಿಕೆ ಮಾಡಿ, ಅದಕ್ಕೆ ಹೊಂದಿಕೊಂಡಂತೆ ಬೋನ್ ಅಳವಡಿಸಲಾಗಿದೆ. ಹಟ್ಟಿಯಲ್ಲಿನ ಕುರಿಗಳ ಮೇಲೆ ದಾಳಿ ಮಾಡಲು ಚಿರತೆ ಬರುವ ವೇಳೆ ಅಧಿಕಾರಿಗಳು ಅರವಳಿಕೆ ನೀಡಲು ಕೂಡ ಸಂಚು ರೂಪಿಸಿದ್ದಾರೆ.

    ಸವಾಲಿನ ಕೆಲಸ: ಎರಡು ತಿಂಗಳಿಂದ ಕಾರ್ಯಚರಣೆ ನಡೆಸುತ್ತಿರುವ ಅಧಿಕಾರಿಗಳು, ನರಭಕ್ಷಕ ಚಿರತೆಯ ಚಲನವಲನಗಳನ್ನು ಗಂಭೀರವಾಗಿ ಪರಿಶೀಲಿಸಿದ್ದಾರೆ. ಬನ್ನೇರುಘಟ್ಟ, ಚಿತ್ರದುರ್ಗ, ಮೈಸೂರು, ದರೋಜಿಯಿಂದ ತತ್ಞರು ಭೇಟಿಯನ್ನು ನೀಡಿ, ಚಿರತೆಯ ಮೂತ್ರ, ಲದ್ದಿ, ತಿಂದು ಬಿಟ್ಟಿರುವ ಮಾಂಸದ ತುಕುಣುಗಳು, ತಿರುಗಾಡುವ ಸ್ಥಳಗಳ ಮಾಹಿತಿಯನ್ನು ಕಲೆ ಹಾಕಿದ್ದಾರೆ. ಅಧಿಕಾರಿಗಳು ಹೇಳುವ ಪ್ರಕಾರ ಸಣಾಪೂರ ಗ್ರಾಮದಿಂದ ಸಂಗಾಪೂರ ಗ್ರಾಮದವರೆಗೆ ಅಂದರೆ 32 ಚ.ಕಿ.ಮೀ ಯಲ್ಲಿ ಚಿರತೆ ಸಂಚಾರ ನಡೆಸುತ್ತಿದೆ. ಇಂತಹ ವಿಶಾಲ ಬೆಟ್ಟಗುಡ್ಡಗಳ ಸಾಲಿನಲ್ಲಿ ಗುಹೆಗಳು ಹೆಚ್ಚಾಗಿದ್ದು, ಚಿರತೆ ವಾಸಕ್ಕೆ ಯೋಗ್ಯವಾಗಿದೆ. ಸೆನ್ ಸರ್ವೆಯಲ್ಲಿ ಸಾಕಷ್ಟು ಗುಹೆಗಳು ಪತ್ತೆಯಾಗಿದ್ದು, ಗುಹೆಗಳಲ್ಲಿ ಚಿರತೆ ವಾಸವಾಗಿದ್ದರೆ ಗುರುತಿಸುವುದು ಅಧಿಕಾರಿಗಳಿಗೆ ಸವಾಲಿನ ಕೆಲಸವಾಗಿದೆ.

  • ಕಾಡು ಪ್ರಾಣಿಗಳ ಬೇಟೆಯಾಡುತ್ತಿದ್ದ 7 ಜನರ ಬಂಧನ

    ಕಾಡು ಪ್ರಾಣಿಗಳ ಬೇಟೆಯಾಡುತ್ತಿದ್ದ 7 ಜನರ ಬಂಧನ

    – ಬಂದೂಕು, ಪಿಸ್ತೂಲ್, ವಾಹನಗಳ ವಶ

    ಚಿತ್ರದುರ್ಗ: ಅಕ್ರಮವಾಗಿ ಕಾಡು ಪ್ರಾಣಿಗಳ ಬೇಟೆಯಾಡುತ್ತಿದ್ದ ಏಳು ಮಂದಿ ಬೇಟೆಗಾರರನ್ನು ಪೊಲೀಸರು ಬಂಧಿಸಿದ್ದು, ಬಂಧಿತರಿಂದ ಪಿಸ್ತೂಲು, ಬಂದೂಕು ಹಾಗೂ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

    ಜಿಲ್ಲೆಯ ಹಿರಿಯೂರು ತಾಲೂಕಿನ ಕಾಡಿನಂಚಿನಲ್ಲಿ ಘಟನೆ ನಡೆದಿದ್ದು, ಆರೋಪಿಗಳು ತಂದಿದ್ದ ಅತ್ಯಾಧುನಿಕ ನಾಲ್ಕು ಬಂದೂಕುಗಳನ್ನು, ಒಂದು ಪಿಸ್ತೂಲ್, ಬೌ ಆ್ಯಂಡ್ ಆರೋ, ಹೈ ಫ್ಲ್ಯಾಶ್ ಲೈಟ್‍ಗಳು ಹಾಗೂ ಬೇಟೆಗೆ ಉಪಯೋಗಿಸುವ ಹಲವಾರು ಉಪಕರಣಗಳು, ಬೇಟೆಗಾರರ ಎರಡು ಮಹಿಂದ್ರ ಜೀಪ್ ಹಾಗೂ ಮಹಿಂದ್ರ ಸ್ಕಾರ್ಪಿಯೋ ವಾಹನಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ.

    ಬಂಧಿತ 7 ಮಂದಿ ಆರೋಪಿಗಳು ಶಿವಮೊಗ್ಗ, ಬೆಂಗಳೂರು ಮೂಲದವರಾಗಿದ್ದು, ಪ್ರಮುಖ ನಾಲ್ಕು ಮಂದಿ ಬೇಟೆಗಾಗರರು ಮತ್ತು ಮೂರು ಮಂದಿ ವಾಹನಗಳ ಚಾಲಕರಾಗಿದ್ದಾರೆ. ಬೇಟೆಗಾರರನ್ನು ನ್ಯಾಯಾಂಗ ವಶಕ್ಕೆ ನೀಡಲಾಗಿದೆ. ಖಚಿತ ಮಾಹಿತಿ ಮೇರೆಗೆ ಅರಣ್ಯಾಧಿಕಾರಿಗಳು ಮತ್ತು ವನ್ಯಜೀವಿ ಪರಿಪಾಲಕರು ಕಾರ್ಯ ಪ್ರವೃತ್ತರಾಗಿ, ಇಡೀ ಅರಣ್ಯ ಪ್ರದೇಶವನ್ನು ಎರಡು ಬಾರಿ ಸ್ಥಳ ವೀಕ್ಷಣೆ ಮಾಡಿ ಖಚಿತಪಡಿಸಿಕೊಂಡಿದ್ದಾರೆ. ಬಳಿಕ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಚಿತ್ರದುರ್ಗ ಜಿಲ್ಲಾ ಗೌರವ ವನ್ಯಜೀವಿ ಪರಿಪಾಲಕರಾದ ರಘುರಾಮ್ ಜಿ.ಎಚ್., ಹಿರಿಯೂರು ವಲಯ ಅರಣ್ಯಾಧಿಕಾರಿ ಶ್ರಿಹರ್ಷ, ಉಪ ವಲಯ ಅರಣ್ಯಾಧಿಕಾರಿ ಪ್ರದೀಪ್ ಕೇಸರಿ ಮತ್ತು ಸಿಬ್ಬಂದಿ ನೇರವಾಗಿ ದಾಳಿ ನಡೆಸಿ ಬೇಟೆಗಾರರನ್ನು ಹಿಡಿದಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಸಿಸಿಎಫ್ ಲಿಂಗರಾಜು ಬೆನ್ನೆಲುಬಾಗಿ ನಿಂತು ಮಾರ್ಗದರ್ಶನ ನೀಡಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

  • ಮಾರುವೇಷದಲ್ಲಿ ಹೋಗಿ ಕೃಷ್ಣಮೃಗ ಬೇಟೆಗಾರರನ್ನು ಬಂಧಿಸಿದ ಅರಣ್ಯಾಧಿಕಾರಿಗಳು

    ಮಾರುವೇಷದಲ್ಲಿ ಹೋಗಿ ಕೃಷ್ಣಮೃಗ ಬೇಟೆಗಾರರನ್ನು ಬಂಧಿಸಿದ ಅರಣ್ಯಾಧಿಕಾರಿಗಳು

    – 20 ಕೃಷ್ಣಮೃಗ ಚರ್ಮ, 2 ಕೊಂಬು ವಶಕ್ಕೆ, 6 ಮಂದಿ ಅರೆಸ್ಟ್

    ಕೊಪ್ಪಳ: ಕೃಷ್ಣಮೃಗಳ ಬೇಟೆಯಾಡಿ ಚರ್ಮ, ಕೊಂಬುಗಳ ಮಾರಾಟ ಮಾಡುತ್ತಿದ್ದ ಗ್ಯಾಂಗ್‍ವೊಂದನ್ನು ಅರಣ್ಯಾಧಿಕಾರಿಗಳು ಬಂಧಿಸಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ.

    ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಹುಣಸಿಹಾಳ ಗ್ರಾಮದ ನಿವಾಸಿಗಳಾದ ತುಗ್ಲೆಪ್ಪ, ಶರಣಪ್ಪ ಚೌಹಾಣ, ಮಲ್ಲಯ್ಯ ಹಿರೇಮಠ, ಶಿವಯ್ಯ ಹಿರೇಮಠ, ಸಂಗಪ್ಪ ಕಟ್ಟಿಮನಿ, ಹನುಮಂತ ಕಟ್ಟಿಮನಿ ಬಂಧಿತರಾಗಿದ್ದಾರೆ. ಬಂಧಿತ ಆರೋಪಿಗಳು ಯಲಬುರ್ಗಾ ಭಾಗದ ಅರಣ್ಯ ಪ್ರದೇಶಗಳಲ್ಲಿ ಕೃಷ್ಣಮೃಗಗಳನ್ನು ಬೇಟೆಯಾಡಿ ಅದರ ಚರ್ಮ ಮತ್ತು ಕೊಂಬುಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದರು.

    ಬಂಧಿತರಿಂದ 20 ಕೃಷ್ಣಮೃಗ ಚರ್ಮ, 2 ಕೃಷ್ಣಮೃಗ ಟ್ರೋಫಿಯುಳ್ಳ ಕೊಂಬು, ಒಂದು ಜಿಂಕೆ ಮರಿ ಸೇರಿದಂತೆ ದಂಧೆಗೆ ಬಳಸುತ್ತಿದ್ದ ಮೂರು ಬೈಕ್ ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆಗಿಳಿದು ಕೃಷ್ಣಮೃಗ ಬೇಟೆಗಾರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಕೃಷ್ಣಮೃಗದ ಒಂದು ಚರ್ಮಕ್ಕೆ 50 ಸಾವಿರ ರೂಪಾಯಿಯಂತೆ ಮಾರಾಟ ಮಾಡುತ್ತಿದ್ದರು. ಬೆಂಗಳೂರು, ಮಂಗಳೂರು ಭಾಗದಲ್ಲಿ ಮಾರಾಟ ಮಾಡಿ ದುಡ್ಡು ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಸಿನಿಮಿಯ ರೀತಿಯಲ್ಲಿ ಅರಣ್ಯ ಅಧಿಕಾರಿಗಳು ಮಾರುವೇಶ ಧರಿಸಿಕೊಂಡು ಜಿಂಕೆ ಚರ್ಮ ಖರೀದಿಗೆ ಬಂದಿದ್ದೇವೆ ಎಂದು ಹೇಳಿ ಗ್ಯಾಂಗ್‍ನ್ನು ಸೆರೆಹಿಡಿದಿದ್ದಾರೆ. ಅರಣ್ಯ ಇಲಾಖೆಯ ಈ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.

  • ಆಹಾರ ಹುಡುಕಿ ನಾಡಿಗೆ ಬಂದ ಕಾಡಾನೆ- ವಿದ್ಯುತ್ ಸ್ಪರ್ಶಿಸಿ ದುರ್ಮರಣ

    ಆಹಾರ ಹುಡುಕಿ ನಾಡಿಗೆ ಬಂದ ಕಾಡಾನೆ- ವಿದ್ಯುತ್ ಸ್ಪರ್ಶಿಸಿ ದುರ್ಮರಣ

    ಮಂಗಳೂರು: ಆಹಾರ ಅರಸಿ ನಾಡಿಗೆ ಬಂದಿದ್ದ ಕಾಡಾನೆ ವಿದ್ಯತ್ ಸ್ಪರ್ಷಿಸಿ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.

    ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕೊಂಬಾರುನಲ್ಲಿ ವಿದ್ಯುತ್ ಲೈನ್ ಸ್ಪರ್ಶದಿಂದಾಗಿ ಕಾಡಾನೆ ಮೃತಪಟ್ಟಿದೆ. ಇಂದು ಬೆಳಗಿನ ಜಾವ ಆಹಾರ ಹುಡುಕಿ ಬಂದ ಸುಮಾರು 35 ರಿಂದ 40 ವರ್ಷದ ಗಂಡು ಕಾಡಾನೆ ಸ್ಥಳದಲ್ಲಿದ್ದ ಈಚಲು ಮರದ ಗರಿ ತಿನ್ನಲು ಯತ್ನಿಸಿದ್ದು, ಈ ಸಮಯದಲ್ಲಿ ಮರ ವಿದ್ಯುತ್ ಲೈನ್ ಗೆ ತಾಗಿ ವಿದ್ಯುತ್ ಸ್ಪರ್ಶ ಆಗಿದೆ. ಹೀಗಾಗಿ ಆನೆ ಅಸುನೀಗಿದೆ.

    ಆನೆಯನ್ನು ನೋಡಲು ನೂರಾರು ಜನ ಆಗಮಿಸಿದ್ದು, ದೇವರ ಸಮನವಾದ ಆನೆಯನ್ನು ಮುಟ್ಟಿ ನಮಸ್ಕರಿಸಿದ ದೃಶ್ಯವೂ ಕಂಡು ಬಂತು. ಸ್ಥಳಕ್ಕೆ ವಲಯ ಅರಣ್ಯಧಿಕಾರಿ ರಾಘವೇಂದ್ರ ಸೇರಿದಂತೆ ಅರಣ್ಯ ಇಲಾಖೆಯ ಇತರ ಅಧಿಕಾರಿಗಳು, ಮೆಸ್ಕಾಂ ಅಧಿಕಾರಿಗಳು, ಕಡಬ ಠಾಣೆಯ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಇಂದು ನಸುಕಿನ ಜಾವ ಘಟನೆ ನಡೆದಿರಬಹುದು ಎನ್ನಲಾಗಿದೆ. ಅರಣ್ಯಗಳ ಬದಿಯಲ್ಲಿ ಕಂದಕಗಳನ್ನು ನಿರ್ಮಿಸಿ, ಕಾಡುಪ್ರಾಣಿಗಳನ್ನು ಹಾಗೂ ಸ್ಥಳೀಯ ಕೃಷಿಕರು ಹಾಗೂ ಗ್ರಾಮಸ್ಥರಿಗೆ ರಕ್ಷಣೆ ಒದಗಿಸಬೇಕೆಂದು ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.

  • ಬಂಡೆಯಾಕಾರದ ಬೃಹತ್ ತಿಮಿಂಗಿಲದ ಮೃತದೇಹ ಬೀಚ್‍ನಲ್ಲಿ ಪತ್ತೆ

    ಬಂಡೆಯಾಕಾರದ ಬೃಹತ್ ತಿಮಿಂಗಿಲದ ಮೃತದೇಹ ಬೀಚ್‍ನಲ್ಲಿ ಪತ್ತೆ

    – ನೋಡಲು ಮುಗಿಬಿದ್ದ ಜನರು

    ಚೆನ್ನೈ: ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ ವಾಲಿನೋಕ್ಕಂ ಬೀಚ್‍ನಲ್ಲಿ ಬಂಡೆಯಾಕಾರದ ಬೃಹತ್ ತಿಮಿಂಗಿಲವೊಂದು ಪತ್ತೆಯಾಗಿದೆ.

    ವಾಲಿನೋಕ್ಕಂ ಬೀಚ್‍ನಲ್ಲಿ ಬೃಹತ್ ತಿಮಿಂಗಿಲ ನೋಡಿ ಜನರು ಅದನ್ನು ನೋಡಲು ಹತ್ತಿರ ಹೋಗಿದ್ದಾರೆ. ಆಗ ತಿಮಿಂಗಿಲ ಮೃತಪಟ್ಟಿರುವುದು ತಿಳಿದು ಬಂದಿದೆ.  ತಿಮಿಂಗಿಲಕ್ಕೆ ಸಮುದ್ರದಲ್ಲಿ ಹಡಗು ಡಿಕ್ಕಿ ಹೊಡೆದಿರಬಹುದು. ತಿಮಿಂಗಿಲದ ವಯಸ್ಸನ್ನು ಲೆಕ್ಕಹಾಕಲು ಸಾಧ್ಯವಾಗುತ್ತಿಲ್ಲ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.

    “ಇದು ಬೃಹತ್ ತಿಮಿಂಗಿಲ. ನಾವು ಇದೀಗ ತಿಮಿಂಗಿಲದ ಮರಣೋತ್ತರ ಪರೀಕ್ಷೆಯನ್ನು ಮುಗಿಸಿದ್ದೇವೆ. ತಿಮಿಂಗಿಲಕ್ಕೆ ದೊಡ್ಡ ಹಡಗು ಹೊಡೆದಿರಬಹದು ಎಂದು ಶಂಕಿಸಿದ್ದೇವೆ. ಆದರೆ ತಿಮಿಂಗಿಲ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ” ಎಂದು ಅರಣ್ಯ ಅಧಿಕಾರಿ ಸಿಕ್ಕಾಂತರ್ ಬಾಷಾ ತಿಳಿಸಿದ್ದಾರೆ.

    ಈ ಭಾಗದಲ್ಲಿ ಇಷ್ಟು ಬೃಹತ್ ತಿಮಿಂಗಿಲಗಳು ಕಾಣುವುದಿಲ್ಲ. ಆದರೆ ಜೂನ್‍ನಲ್ಲಿ ಇದೇ ಜಿಲ್ಲೆಯಲ್ಲಿ 18 ಅಡಿ ಉದ್ದದ, ಒಂದು ಕಾಲಿನ ಶಾರ್ಕ್‍ನ ಮೃತದೇಹ ತೀರಕ್ಕೆ ಬಂದಿತ್ತು. ಶವಪರೀಕ್ಷೆ ನಡೆಸಿದ ನಂತರ ಅರಣ್ಯ ಅಧಿಕಾರಿಗಳು ಅದನ್ನು ಕಡಲತೀರದಲ್ಲಿ ಸಮಾಧಿ ಮಾಡಿದ್ದರು.

    ಇಂತಹ ಅಪರೂಪದ ಜೀವಿಗಳನ್ನು ಹಿಡಿಯುವುದು 1972ರ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಪ್ರಕಾರ ಅಪರಾಧ. ಒಂದು ವೇಳೆ ಅಪರೂಪದ ತಿಮಿಂಗಿಲಗಳನ್ನು ಹಿಡಿಯುವುದಾಗಲಿ, ಕೊಲ್ಲುವುದಾಗಲಿ ಮಾಡಿದರೆ ಕಾಯ್ದೆಯಡಿಯಲ್ಲಿ 3 ವರ್ಷದಿಂದ 7 ವರ್ಷಗಳವರೆಗೆ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಬಾಷಾ ತಿಳಿಸಿದ್ದಾರೆ.

  • ಚಾಮರಾಜನಗರದಲ್ಲಿ ಹೆಚ್ಚಾಯ್ತು ಚಿರತೆ ಕಾಟ- ನಾಲ್ಕು ಜಾನುವಾರು ಬಲಿ, ಮೂವರ ಮೇಲೆ ದಾಳಿ

    ಚಾಮರಾಜನಗರದಲ್ಲಿ ಹೆಚ್ಚಾಯ್ತು ಚಿರತೆ ಕಾಟ- ನಾಲ್ಕು ಜಾನುವಾರು ಬಲಿ, ಮೂವರ ಮೇಲೆ ದಾಳಿ

    ಚಾಮರಾಜನಗರ: ಒಂದು ಊರಿನ ಬಳಿಕ ಮತ್ತೊಂದು ಊರಿನಲ್ಲಿ ಚಿರತೆ ದಾಳಿ ಮಾಡುತ್ತಿದ್ದು, ಈ ವರೆಗೆ ಎರಡು ಜಾನುವಾರುಗಳನ್ನು ಕೊಂದು ಹಾಕಿದೆ. ಅಲ್ಲದೆ ಮೂವರ ಮೇಲೆ ದಾಳಿ ಮಾಡಿದೆ. ಹೀಗಾಗಿ ಚಾಮರಾಜನಗರ ರೈತರು ಆತಂಕಗೊಂಡಿದ್ದಾರೆ.

    ಮೂರು ದಿನಗಳ ಅಂತರದಲ್ಲಿ ನಂಜದೇವನಪುರ, ಮರಿಯಾಲ, ಉಡಿಗಾಲ, ತಮ್ಮಡಹಳ್ಳಿ ಗ್ರಾಮಗಳಲ್ಲಿ ಚಿರತೆ ದಾಳಿಗೆ ಮೂರು ಹಸು ಒಂದು ಕುದುರೆ ಬಲಿಯಾಗಿದ್ದು, ಕೃಷಿ ಚಟುವಟಿಕೆಯಲ್ಲಿ ತೊಡಗಲು ರೈತರು ಭಯಪಡುತ್ತಿದ್ದಾರೆ. ಗುರುವಾರ ತಮ್ಮಡಹಳ್ಳಿಯಲ್ಲಿ ಕುದುರೆ ಬಲಿ ಪಡೆದಿದ್ದ ಚಿರತೆ, ಶುಕ್ರವಾರ ಮರಿಯಾಲದ ರಾಮಣ್ಣ ಅವರ ಹಸುವನ್ನು ಕೊಂದು ಹಾಕಿದೆ. ಇಂದು ಉಡಿಗಾಲದ ಶ್ರೀಕಂಠಪ್ಪ ಅವರ ಎತ್ತನ್ನು ಚಿರತೆ ಸಾಯಿಸಿದೆ.

    ಕೆಲವು ದಿನಗಳ ಹಿಂದಷ್ಟೇ ವೀರನಪುರದಲ್ಲಿ ಇಬ್ಬರು ಮತ್ತು ಹಳೇಪುರದ ಓರ್ವ ವ್ಯಕ್ತಿಯ ಮೇಲೂ ಚಿರತೆ ದಾಳಿ ಮಾಡಿ ಭಯಗೊಳಿಸಿತ್ತು. ನಂಜದೇವನಪುರ, ವೀರನಪುರ, ಹಳೇಪುರ, ಉಡಿಗಾಲ, ಕಲ್ಪುರ, ಕಡುವಿನಕಟ್ಟೆ ಹುಂಡಿ, ತಮ್ಮಡಹಳ್ಳಿ ಭಾಗದಲ್ಲಿ ನಿತ್ಯ ಜಾನುವಾರುಗಳ ಮೇಲೆ ದಾಳಿ ಮಾಡುತ್ತಿದ್ದು, ಅರಣ್ಯ ಇಲಾಖೆ ಸ್ಪಂದಿಸುತ್ತಿಲ್ಲ. ಇಬ್ಬರು ಬೈಕಿನಲ್ಲಿ ಬಂದು ನೋಡಿಕೊಂಡು ಹೋಗುತ್ತಾರೆ, ಚಿರತೆ ಸೆರೆ ಹಿಡಿಯುವ ಪ್ರಯತ್ನ ಮಾಡುತ್ತಿಲ್ಲ ಎಂದು ನಂಜದೇವನಪುರದ ರೈತ ಮುಖಂಡ ರಾಜಣ್ಣ ದೂರಿದ್ದಾರೆ.

    ನಂಜದೇವನಪುರ ಭಾಗದಲ್ಲಿ ಕಲ್ಲು ಗಣಿಗಾರಿಕೆಗಳ ಕ್ವಾರಿಗಳು ಚಿರತೆಗಳ ಅವಾಸಸ್ಥಾನವಾಗಿ ಮಾರ್ಪಟ್ಟಿವೆ. ತೋಟದ ಮನೆಯಲ್ಲಿರುವವರು, ದನಗಾಹಿಗಳು ಜೀವ ಕೈಯಲ್ಲಿ ಹಿಡಿದು ತೆರಳಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ಆತಂಕ ಹೊರಹಾಕಿದ್ದಾರೆ.

    ಈ ಸಂಬಂಧ ಚಾಮರಾಜನಗರ ವಲಯ ಅರಣ್ಯಾಧಿಕಾರಿ ಅಭಿಲಾಶ್ ಪ್ರತಿಕ್ರಿಯಿಸಿ, ಚಿರತೆ ಸೆರೆಗೆ ಈಗಾಗಲೇ ನಾಲ್ಕು ಬೋನುಗಳನ್ನು ಇಡಲಾಗಿದೆ. ಚಿರತೆಯ ಮೇಲೆ ನಿಗಾ ಇಡಲಾಗಿದೆ ಎಂದು ತಿಳಿಸಿದರು. ಚಿರತೆ ಗಾಯಗೊಂಡಿದೆಯೇ, ವಯಸ್ಸಾಗಿದೆಯೇ ಎಂಬ ಗೊಂದಲ ಮುಂದುವರೆದಿದ್ದು, ಅರಣ್ಯ ಇಲಾಖೆ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ನಿರಾಂತಕವಾಗಿದ್ದ ಮರಿಯಾಲದಲ್ಲೂ ಚಿರತೆ ಕಾಣಿಸಿಕೊಂಡು ನಿದ್ದೆಗೆಡಿಸದೆ.

  • ರಾತ್ರಿ ವೇಳೆ ಸಾಕು ಪ್ರಾಣಿಗಳನ್ನ ಬೇಟೆಯಾಡ್ತಿದ್ದ ಚಿರತೆ ಸೆರೆ

    ರಾತ್ರಿ ವೇಳೆ ಸಾಕು ಪ್ರಾಣಿಗಳನ್ನ ಬೇಟೆಯಾಡ್ತಿದ್ದ ಚಿರತೆ ಸೆರೆ

    ವಿಜಯಪುರ: ರಾತ್ರಿ ವೇಳೆ ಸಾಕು ಪ್ರಾಣಿಗಳನ್ನ ಬೇಟೆಯಾಡುವ ಮೂಲಕ ಜಿಲ್ಲೆಯ ಜನರ ನಿದ್ದೆ ಕೆಡಿಸಿದ್ದ ಚಿರತೆ ಕೊನೆಗೂ ಬೋನಿ ಬಿದ್ದಿದೆ.

    ಜಿಲ್ಲೆಯ ಬಬಲೇಶ್ವರ ತಾಲೂಕಿನ ದೇವರಗೆಣ್ಣೂರು ಗ್ರಾಮದ ಹೊರವಲಯದಲ್ಲಿ ಚಿರತೆ ಬಲೆಗೆ ಬಿದ್ದಿದೆ. ಕಳೆದ ಒಂದು ವಾರದಿಂದ ಬಬಲೇಶ್ವರ ತಾಲೂಕಿನ ಬಬಲಾದಿ, ದೇವರಗೆಣ್ಣೂರು, ಗುಣದಾಳ ಸೇರಿದಂತೆ ಸುತ್ತಮುತ್ತಲ ಹಳ್ಳಿಗಳಲ್ಲಿ ಈ ಚಿರತೆಯ ಹಾವಳಿ ಹೆಚ್ಚಾಗಿತ್ತು.

    ಅಷ್ಟೇ ಅಲ್ಲದೇ ರಾತ್ರಿ ಹೊತ್ತು ಎಮ್ಮೆ, ಮೇಕೆ, ಸಾಕು ಪ್ರಾಣಿಗಳ ಬೇಟೆಯಾಡುವ ಮೂಲಕ ಜನರ ನೆಮ್ಮದಿ ಹಾಗೂ ನಿದ್ದೆ ಕೆಡಿಸಿತ್ತು. ಹೀಗಾಗಿ ಅರಣ್ಯ ಇಲಾಖೆಯವರು ಕಳೆದ ನಾಲ್ಕು ದಿನಗಳಿಂದ ಕಾರ್ಯಾಚರಣೆ ನಡೆಸುತ್ತಿದ್ದರು. ಪರಿಣಾಮ ಕೊನೆಗೂ ಚಿರತೆ ಸೆರೆ ಸಿಕ್ಕಿದೆ.

    ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಚಿರಾಂಕ ವನ್ಯಜೀವಿ ಪ್ರದೇಶದಿಂದ ಚಿರತೆ ಬಂದಿರುವ ಶಂಕೆ ವ್ಯಕ್ತವಾಗಿದೆ. ಲಾಕ್‍ಡೌನ್ ವೇಳೆ ಜನ, ವಾಹನ ಸಂಚಾರ ಕಡಿಮೆಯಾಗಿದ್ದರಿಂದ ಕೃಷ್ಣಾ ನದಿ ದಾಟಿ ಬಂದಿರುವ ಶಂಕೆ ವ್ಯಕ್ತವಾಗಿದೆ.

  • ಆಹಾರ ಅರಸಿ ಗ್ರಾಮಕ್ಕೆ ಬಂದ ಗರ್ಭಿಣಿ ಆನೆ- ಪೈನಾಪಲ್‍ನಲ್ಲಿ ಪಟಾಕಿ ಇಟ್ಟು ಕೊಂದ ಪಾಪಿಗಳು

    ಆಹಾರ ಅರಸಿ ಗ್ರಾಮಕ್ಕೆ ಬಂದ ಗರ್ಭಿಣಿ ಆನೆ- ಪೈನಾಪಲ್‍ನಲ್ಲಿ ಪಟಾಕಿ ಇಟ್ಟು ಕೊಂದ ಪಾಪಿಗಳು

    – ಯಾರಿಗೂ ತೊಂದರೆ ಕೊಡದಿದ್ದರೂ ಆನೆ ಕೊಂದರು
    – ಹೊಟ್ಟೆಯಲ್ಲಿನ ಮಗು ನೆನೆದು, ಆಘಾತವಾಗಿ ಪ್ರಾಣ ಬಿಟ್ಟ ಆನೆ

    ತಿರುವನಂತರಪುರಂ: ಪಾಪಿಗಳು ಪೈನಾಪಲ್ ಹಣ್ಣಿನ ಒಳಗಡೆ ಪಟಾಕಿ ಇಟ್ಟು ಗರ್ಭಿಣಿ ಆನೆಗೆ ತಿನ್ನಿಸಿದ್ದು, ಪಟಾಕಿ ಸಿಡಿದು ಆನೆ ಮೃತಪಟ್ಟಿರುವ ಧಾರುಣ ಘಟನೆ ಕೇರಳದಲ್ಲಿ ನಡೆದಿದೆ.

    ಬುಧವಾರ ಘಟನೆ ನಡೆದಿದ್ದು, ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಸ್ಥಳೀಯರು ಪಟಾಕಿ ತುಂಬಿದ ಪೈನಾಪಲ್ ಹಣ್ಣನ್ನು ಗರ್ಭಿಣಿ ಆನೆಗೆ ತಿನ್ನಿಸಿದ್ದಾರೆ. ನಂತರ ಆನೆಯ ಬಾಯಿಯಲ್ಲಿ ಪಟಾಕಿ ಬ್ಲಾಸ್ಟ್ ಆಗಿ ಸಾವನ್ನಪ್ಪಿದೆ. ಘಟನೆ ಸಂಭವಿಸುತ್ತಿದ್ದಂತೆ ಅರಣ್ಯಾಧಿಕಾರಿಗಳು ಸ್ಥಳಕ್ಕೆ ತೆರಳಿದ್ದಾರೆ. ಆದರೆ ಆನೆ ಆಗಲೇ ಸಾವನ್ನಪ್ಪಿದೆ. ಘಟನೆ ನಡೆದ ಕುರಿತು ಮಲಪ್ಪುರಂ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುವ ಅರಣ್ಯಾಧಿಕಾರಿಯೊಬ್ಬರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‍ಲೋಡ್ ಮಾಡಿದ್ದಾರೆ.

    മാപ്പ്… സഹോദരീ .. മാപ്പ് …
    അവൾ ആ കാടിന്റെ പൊന്നോമനയായിരുന്നിരിക്കണം. അതിലുപരി അവൾ അതിസുന്ദരിയും സൽസ്വഭാവിയും…

    Posted by Mohan Krishnan on Saturday, May 30, 2020

    ಗರ್ಭಿಣಿ ಆನೆ ಆಹಾರ ಹುಡುಕಿಕೊಂಡು ಗ್ರಾಮಕ್ಕೆ ತೆರಳಿತ್ತು. ಹೀಗೆ ದಾರಿಯಲ್ಲಿ ಓಡಾಡುತ್ತಿರುವಾಗ ಕೆಲ ಗ್ರಾಮಸ್ಥರು ಪಟಾಕಿ ತುಂಬಿದ ಪೈನಾಪಲ್‍ನ್ನು ಆನೆಯ ಸೊಂಡಿಲಿಗೆ ಇಟ್ಟಿದ್ದು, ಆನೆ ಅದನ್ನು ತಿಂದಿದೆ. ಬಾಯಿಯಲ್ಲಿ ಹಾಕಿಕೊಳ್ಳುತ್ತಿದ್ದಂತೆ ಪಟಾಕಿ ಸಿಡಿದಿದೆ. ಆನೆ ಸ್ಥಳದಲ್ಲೇ ಸಾವನ್ನಪ್ಪಿದೆ.

    ಅರಣ್ಯಾಧಿಕಾರಿ ಮೋಹನ್ ಕೃಷ್ಣನ್ ಅವರು ಈ ವಿಡಿಯೋವನ್ನು ಫೇಸ್ಬುಕ್‍ನಲ್ಲಿ ಹಂಚಿಕೊಂಡಿದ್ದು, ಮನಮುಟ್ಟುವ ಸಾಲುಗಳನ್ನು ಬರೆದಿದ್ದಾರೆ. ಅವಳು ಎಲ್ಲರನ್ನೂ ನಂಬಿದ್ದಳು, ಯಾವಾಗ ತಾನು ತಿಂದ ಪೈನಾಪಲ್ ಬ್ಲಾಸ್ಟ್ ಆಯಿತೋ ಆಗ ಆಘಾತಕ್ಕೊಳಗಾಗಿದ್ದಾಳೆ. ಆದರೆ ಅವಳಿಗಾಗಿ ಅಲ್ಲ ಹೊಟ್ಟೆಯಲ್ಲಿರುವ ತನ್ನ ಮಗುವಿಗಾಗಿ. ಅವಳು ಇನ್ನು 18-20 ತಿಂಗಳಲ್ಲಿ ಮಗುವಿಗೆ ಜನ್ಮ ನೀಡುತ್ತಿದ್ದಳು ಎಂದು ಬರೆದುಕೊಂಡಿದ್ದಾರೆ.

    ಪಟಾಕಿ ಸಿಡಿದಿದ್ದರಿಂದ ಆನೆಯ ಬಾಯಿ ಹಾಗೂ ನಾಲಗೆಗೆ ಗಂಭೀರ ಗಾಯಗಳಾಗಿದ್ದವು. ಗರ್ಭಿಣಿ ಆನೆ ಯಾವೊಬ್ಬ ಗ್ರಾಮಸ್ಥರಿಗೂ ತೊಂದರೆ ನೀಡಿರಲಿಲ್ಲ. ಬಾಯಿಯಲ್ಲಿ ಪಟಾಕಿ ಸಿಡಿಯುತ್ತಿದ್ದಂತೆ ನೋವಿನಲ್ಲಿ ರಸ್ತೆ ತುಂಬಾ ಓಡಾಡಿದೆ. ಬಾಯಲ್ಲಿ ಪಟಾಕಿ ಸಿಡಿಯುತ್ತಿದ್ದಂತೆ ಆನೆ ವೆಲ್ಲಿಯಾರ್ ನದಿಯಲ್ಲಿ ಮುಳುಗಿದೆ. ಈ ಸುದ್ದಿ ತಿಳಿಯುತ್ತಿದ್ದಂತೆ ಆನೆಯನ್ನು ಮೇಲೆತ್ತಲು ಅರಣ್ಯ ಇಲಾಖೆ ಅಧಿಕಾರಿಗಳು ನೀಲಕಂಠನ್ ಹಾಗೂ ಸುರೇಂದ್ರನ್ ಎಂಬ ಎರಡು ಆನೆಗಳನ್ನು ಕರೆ ತಂದಿದ್ದು, ಅಷ್ಟೊತ್ತಿಗಾಗಲೇ ಸಂಜೆ 4ರ ಸುಮಾರಿಗೆ ಆನೆ ನದಿಯಲ್ಲೇ ಸಾವನ್ನಪ್ಪಿದೆ.

  • ಕಾರ್ಕಳದಲ್ಲಿ ಮೂರು ಕಾಡುಕೋಣ – ಜನ ಆತಂಕ

    ಕಾರ್ಕಳದಲ್ಲಿ ಮೂರು ಕಾಡುಕೋಣ – ಜನ ಆತಂಕ

    ಉಡುಪಿ: ನಾಡಿಗೆ ಬರುತ್ತಿರುವ ಕಾಡು ಪ್ರಾಣಿಗಳ ಸಂಖ್ಯೆ ದಿನೇ ದಿನೇ ಜಾಸ್ತಿಯಾಗುತ್ತಿದೆ. ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ ಮೂರು ಕಾಡು ಕೋಣ ಕಾಣಿಸಿಕೊಂಡಿವೆ.

    ಕಾರ್ಕಳದ ಪೆರ್ವಾಜೆ ವಾರ್ಡ್ ನಲ್ಲಿ ಇಂದು ಕಾಡುಕೋಣ ಕಂಡು ಸಾರ್ವಜನಿಕರು ಆತಂಕಗೊಂಡಿದ್ದಾರೆ. ಏಕಾಏಕಿ ರಸ್ತೆಯಲ್ಲಿ ಮೂರು ಕಾಡುಕೋಣಗಳು ಕಾಣಿಸಿಕೊಂಡಿದೆ. ಈ ದೃಶ್ಯಗಳು ಸ್ಥಳೀಯರು ಮೊಬೈಲ್‍ಗಳಲ್ಲಿ ಸೆರೆಯಾಗಿದೆ. ಕಳೆದ ಒಂದೆರಡು ತಿಂಗಳಿನಿಂದ ಕಾಡುಗಳಿಂದ ಕಾಡುಕೋಣಗಳು ನಗರದತ್ತ ಮುಖ ಮಾಡುತ್ತಿದೆ. ಜನ ಓಡಾಡುವ ರಸ್ತೆಗಳು, ಜನವಸತಿ ಪ್ರದೇಶಗಳತ್ತ ಬರುತ್ತಿದೆ. ಕಾರ್ಕಳ ತಾಲೂಕು ಪಶ್ಚಿಮಘಟ್ಟದ ತಪ್ಪಲಿನಲ್ಲಿ ಇರುವುದರಿಂದ ಈ ಭಾಗದಲ್ಲಿ ಚಿರತೆ, ನವಿಲು, ಜಿಂಕೆ ಸಾಮಾನ್ಯವಾಗಿತ್ತು. ಇದೀಗ ಕೆಲ ದಿನಗಳಿಂದ ಕಾಡುಕೋಣಗಳ ಹಾವಳಿ ಕೂಡ ಜಾಸ್ತಿಯಾಗಿದೆ.

    ಪೆರುವಾಜೆಯಲ್ಲಿ ಕಾಡುಕೋಣಗಳು ಕಾಣಿಸಿಕೊಳ್ಳುತ್ತಿದ್ದಂತೆ ಸ್ಥಳೀಯರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅರಣ್ಯಾಧಿಕಾರಿಗಳು ಸ್ಥಳಕ್ಕೆ ಬರುವಷ್ಟರಲ್ಲಿ ಕಾಡುಕೋಣಗಳು ಕಣ್ಮರೆಯಾಗಿದೆ. ಪಶ್ಚಿಮ ಘಟ್ಟದ ತಪ್ಪಲು ಕೃಷಿ ಭೂಮಿ, ಗದ್ದೆಗಳಿಗೂ ಕಾಡುಕೋಣಗಳು ಇತ್ತೀಚೆಗೆ ಲಗ್ಗೆ ಇಡುತ್ತಿದೆ ಎಂದು ಕೃಷಿಕರು ದೂರಿದ್ದಾರೆ.

    ಸ್ಥಳೀಯ ಅಜಯ್ ಮಾತನಾಡಿ, ಪಶ್ಚಿಮ ಘಟ್ಟಕ್ಕೆ ಹತ್ತಿರ ಇರುವುದರಿಂದ ನಮ್ಮ ಊರಿಗೆ ಹೆಚ್ಚಿನ ಕಾಡುಪ್ರಾಣಿಗಳು ಬರುತ್ತವೆ. ಬೆಳೆಯನ್ನೆಲ್ಲಾ ನಾಶ ಮಾಡುತ್ತವೆ. ಸಂಬಂಧಿಸಿದ ಶಾಸಕರು ಸಚಿವರು, ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಬೆಳೆದ ಬೆಳೆಯೆಲ್ಲ ಕಾಡುಪ್ರಾಣಿಗಳ ಪಾಲಾದ್ರೆ ನಮ್ಮ ಪಾಡೇನು ಎಂದು ಪ್ರಶ್ನಿಸಿದ್ದಾರೆ.