Tag: Forest office

  • ಚಿರತೆ ಚರ್ಮ ಮಾರಾಟಕ್ಕೆ ಯತ್ನ, ಮೂವರು ಅರೆಸ್ಟ್

    ಚಿರತೆ ಚರ್ಮ ಮಾರಾಟಕ್ಕೆ ಯತ್ನ, ಮೂವರು ಅರೆಸ್ಟ್

    ಚಿಕ್ಕಮಗಳೂರು: ರಸ್ತೆ ಬದಿ ನಿಂತು ಚಿರತೆ ಚರ್ಮ ಮಾರಾಟಕ್ಕೆ ಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ಅರಣ್ಯ ಇಲಾಖೆ ಸಂಚಾರಿ ಪೊಲೀಸರು ಬಂಧಿಸಿದ್ದಾರೆ.

    ತಾಲೂಕಿನ ಇಂದಾವರ ಫ್ಯಾಕ್ಟರಿ ಬಡಾವಣೆಯ ಮಲ್ನಾಡ್ ಸಮುದಾಯ ಭವನದ ಬಳಿ ಬಂಧಿಸಲಾಗಿದೆ. ಬಂಧಿತರನ್ನು ಇಂದಾವರ ಗ್ರಾಮದ ಪರ್ವತ, ಎಪಿಎಂಸಿ ಮಾರ್ಕೆಟ್‍ನಲ್ಲಿ ರೈಟರ್ ಕೆಲಸ ಮಾಡುವ ಕಾಂತರಾಜ್ ಹಾಗೂ ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಶ್ರೀನಿವಾಸ್ ಎಂದು ಗುರುತಿಸಲಾಗಿದೆ.

    ಬಂಧಿತರು ಚಿರತೆ ಚರ್ಮವನ್ನು ಕಳೆದ ವರ್ಷವೇ ಮರಣ ಹೊಂದಿದ ಓರ್ವ ವ್ಯಕ್ತಿಯಿಂದ ಖರೀದಿಸಿದ್ದರು ಎಂದು ಹೇಳಲಾಗಿದೆ. ಅಂದಿನಿಂದಲೂ ಚಿರತೆ ಚರ್ಮವನ್ನು ಮಾರಾಟ ಮಾಡಲು ಗಿರಾಕಿಗಳಿಗಾಗಿ ಹುಡುಕಾಡುತ್ತಿದ್ದರು. ಆದರೆ, ಗಿರಾಕಿಗಳೂ ಯಾರೂ ಸಿಕ್ಕಿರಲಿಲ್ಲ. ಇದೀಗ, ರಸ್ತೆಬದಿಯಲ್ಲಿ ನಿಂತು ಗಿರಾಕಿಗಳಿಗಾಗಿ ಕಾಯುವಾಗ ಖಚಿತ ಮಾಹಿತಿ ಮೇರೆಗೆ ನಗರದ ಅರಣ್ಯ ಸಂಚಾರಿ ದಳದ ಸಿಐಡಿ ಪೊಲೀಸರು ಬಂಧಿಸಿದ್ದಾರೆ.

    ಈ ಕಾರ್ಯಾಚರಣೆಗೆ ಮಡಿಕೇರಿ ಅರಣ್ಯ ಘಟಕದ ಎಸ್ಪಿ ಚಂದ್ರಕಾಂತ್ ಮಾರ್ಗದರ್ಶನದಲ್ಲಿ ನಗರದ ಪೊಲೀಸ್ ಅರಣ್ಯ ಸಂಚಾರಿ ದಳದ ಸಬ್ಇನ್ಸ್‌ಪೆಕ್ಟರ್ ಶರತ್, ಸಿಬ್ಬಂದಿಗಳಾದ ಹೆಚ್.ದೇವರಾಜ್, ಡಿ.ಎಚ್.ದಿನೇಶ್, ಎಸ್.ಕೆ.ದಿವಾಕರ್, ಕೆ.ಎಸ್.ದಿಲೀಪ್, ಹಾಲೇಶ್, ಹೇಮಾವತಿ, ತಿಮ್ಮಶೆಟ್ಟಿಯವರು ಪಾಲ್ಗೊಂಡಿದ್ದರು. ಬಂಧಿತರಿಂದ ಚಿರತೆ ಚರ್ಮವನ್ನ ವಶಪಡಿಸಿಕೊಳ್ಳಲಾಗಿದೆ.

  • ಅರಣ್ಯ ಇಲಾಖೆ ಕಚೇರಿ ಮುಂದೆಯೇ ಬರ್ಬರವಾಗಿ ಸಿಬ್ಬಂದಿ ಕೊಲೆಗೈದ ದುಷ್ಕರ್ಮಿಗಳು!

    ಅರಣ್ಯ ಇಲಾಖೆ ಕಚೇರಿ ಮುಂದೆಯೇ ಬರ್ಬರವಾಗಿ ಸಿಬ್ಬಂದಿ ಕೊಲೆಗೈದ ದುಷ್ಕರ್ಮಿಗಳು!

    ಬೀದರ್: ಅರಣ್ಯ ಇಲಾಖೆ ಕಚೇರಿ ಮುಂದೆಯೇ ರಾಡ್ ಮತ್ತು ಕಟ್ಟಿಗೆಯಿಂದ ಹೊಡೆದು ಓರ್ವ ಸಿಬ್ಬಂದಿಯನ್ನು ಬರ್ಬರವಾಗಿ ಕೊಲೆಗೈದ ಘಟನೆ ಬೀದರ್ ತಾಲೂಕಿನ ಶಾಪೂರ್ ಸಮೀಪದಲ್ಲಿ ನಡೆದಿದೆ.

    ಶಾಪೂರ್ ಸಮೀಪ ಅರಣ್ಯ ಇಲಾಖೆಯ ಪ್ರಭು (61) ಕೊಲೆಯಾದ ಸಿಬ್ಬಂದಿ. ದುಷ್ಕರ್ಮಿಗಳು ಇಂದು ಬೆಳಗ್ಗೆ ಈ ಕೃತ್ಯ ಎಸಗಿ ಪರಾರಿಯಾಗಿದ್ದಾರೆ. ಆದರೆ ಕೊಲೆಗೆ ಸೂಕ್ತ ಕಾರಣ ತಿಳಿದು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

    ಪ್ರಭು ಅವರು ಈ ಹಿಂದೆ ಪಶು ಇಲಾಖೆಯಲ್ಲಿ ಕೆಲಸ ಮಾಡಿ ನಿವೃತ್ತಿಯಾಗಿದ್ದರು. ಬಳಿಕ ಗುತ್ತಿಗೆ ಆಧಾರದ ಮೇಲೆ ಅರಣ್ಯ ಇಲಾಖೆಯ ನರ್ಸರಿಯಲ್ಲಿ ಕೆಲಸ ಮಾಡುತ್ತಿದ್ದರು. ಘಟನಾ ಸ್ಥಳದಲ್ಲಿ ಮೃತ ಪ್ರಭು ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿದೆ.

    ಈ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಮಾರ್ಕೆಟ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇತ್ತ ಎಸ್‍ಪಿ ಶ್ರೀಧರ್ ಅವರು ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv