Tag: Forest land

  • ಹೆಚ್‌ಎಂಟಿ ಡಿನೋಟಿಫಿಕೇಷನ್ ಪ್ರಕರಣ – IFS ಅಧಿಕಾರಿ ಅಮಾನತಿಗೆ ಈಶ್ವರ್ ಖಂಡ್ರೆ ಶಿಫಾರಸು

    ಹೆಚ್‌ಎಂಟಿ ಡಿನೋಟಿಫಿಕೇಷನ್ ಪ್ರಕರಣ – IFS ಅಧಿಕಾರಿ ಅಮಾನತಿಗೆ ಈಶ್ವರ್ ಖಂಡ್ರೆ ಶಿಫಾರಸು

    ಬೆಂಗಳೂರು: 14 ಸಾವಿರ ಕೋಟಿ ರೂ. ಗೂ ಹೆಚ್ಚು ಮೌಲ್ಯದ ಹೆಚ್‌ಎಂಟಿ (Hindustan Machine Tools) ಅರಣ್ಯಭೂಮಿಯ ಡಿನೋಟಿಫಿಕೇಷನ್ ಅನುಮತಿ ಕೋರಿ ಸುಪ್ರೀಂಗೆ ಐಎ ಹಾಕಿರುವ ಪ್ರಕರಣದಲ್ಲಿ ನಿವೃತ್ತ ಐಎಎಸ್, ಐಎಫ್‌ಎಸ್ ಮತ್ತು ಇಬ್ಬರು ಹಾಲಿ ಐಎಫ್‌ಎಸ್ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಲಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ (Eshwar Khandre) ತಿಳಿಸಿದರು.

    ಬೆಂಗಳೂರಿನಲ್ಲಿ (Bengaluru) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹೆಚ್‌ಎಂಟಿ ವಶದಲ್ಲಿರುವ ಭೂಮಿ, ಅರಣ್ಯೇತರ ಉದ್ದೇಶಕ್ಕೆ ಪರಿವರ್ತನೆ ಆಗಿಲ್ಲ. ಹೀಗಾಗಿ ಸುಪ್ರೀಂಕೋರ್ಟ್ ನೀಡಿರುವ ಹಲವು ತೀರ್ಪು ಮತ್ತು ಅರಣ್ಯ ಸಂರಕ್ಷಣಾ ಕಾಯಿದೆ 1980ರ ಪ್ರಕಾರ ಇಂದಿಗೂ ಇದು ಅರಣ್ಯವೇ ಆಗಿರುತ್ತದೆ. ಈ ಭೂಮಿ ಪರಭಾರೆ ಆಗಿದೆ. ರಿಯಲ್ ಎಸ್ಟೇಟ್ ಸಂಸ್ಥೆಗಳು ನೂರಾರು ಫ್ಲಾಟ್ ಕಟ್ಟಿದ್ದಾರೆ. ಧಾರಾವಾಹಿ, ಚಲನಚಿತ್ರಗಳ ಚಿತ್ರೀಕರಣ ನಡೆಯುತ್ತಿದೆ. ವಾಣಿಜ್ಯ ಉದ್ದೇಶಕ್ಕೆ ಭೂಮಿ ಬಳಕೆ ಆಗುತ್ತಿದೆ. ಇದಕ್ಕೆ ಹೇಗೆ ಅವಕಾಶ ನೀಡಲಾಗಿದೆ ಎಂಬುದೇ ಪ್ರಶ್ನಾರ್ಥಕವಾಗಿದೆ ಎಂದರು. ಇದನ್ನೂ ಓದಿ: ಮಂಗಳೂರಿನಲ್ಲಿ ʻಮರಣ ಮಳೆʼಗೆ ಅಜ್ಜಿ, ಮೊಮ್ಮಕ್ಕಳು ಬಲಿ – 9 ಗಂಟೆಗಳ ಜೀವನ್ಮರಣ ಹೋರಾಟದ ನಂತ್ರ ಬದುಕುಳಿದ ತಾಯಿ!

    ಸಚಿವ ಸಂಪುಟದ ಅನುಮತಿ ಇಲ್ಲದೆ, ಹೆಚ್‌ಎಂಟಿ ಅರಣ್ಯ ಭೂಮಿ ಡಿನೋಟಿಫಿಕೇಷನ್‌ಗೆ ಐಎ ಹಾಕಿರುವ ಪ್ರಕರಣದಲ್ಲಿ ಅಧಿಕಾರಿಗಳಿಗೆ ನೋಟಿಸ್ ನೀಡಿ 7 ತಿಂಗಳಾದರೂ ಇನ್ನೂ ಏಕೆ ಕ್ರಮ ಆಗಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದರು. ಹೆಚ್‌ಎಂಟಿ ವಶದಲ್ಲಿರುವ ಅರಣ್ಯಭೂಮಿ 7 ಕೋಟಿ ಕನ್ನಡಿಗರ ಆಸ್ತಿ, ಇದನ್ನು ಕೆಲವೇ ಕೆಲವು ಅಧಿಕಾರಿಗಳು ಅಂದಿನ ಅರಣ್ಯ ಸಚಿವರ ಗಮನಕ್ಕೂ ತಾರದೆ, ಸಚಿವ ಸಂಪುಟದ ಪೂರ್ವಾನುಮತಿ ಪಡೆಯದೆ ಡಿನೋಟಿಫಿಕೇಷನ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಇಬ್ಬರು ನಿವೃತ್ತ ಮತ್ತು ಇಬ್ಬರು ಹಾಲಿ ಸೇರಿ 4 ಅಧಿಕಾರಿಗಳಿಗೆ ನೋಟಿಸ್ ನೀಡಿದ್ದು, ಕ್ರಮಕ್ಕೆ ತಾವು ಮುಖ್ಯಮಂತ್ರಿಗಳಿಗೆ ಶಿಫಾರಸು ಮಾಡಿರುವುದಾಗಿ ತಿಳಿಸಿದರು. ಇದನ್ನೂ ಓದಿ: ಎಲೆಕ್ಟ್ರಿಕ್‌ ಬೈಕ್ ಶೋರೂಂನಲ್ಲಿ ಅಗ್ನಿ ಅವಘಡ – 4 ಸ್ಕೂಟರ್ ಬೆಂಕಿಗಾಹುತಿ

    ಅಪರ ಮುಖ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಆರ್. ಗೋಕುಲ್ ತಾವು ಬೇಲಿಕೇರಿ ಪ್ರಕರಣದಲ್ಲಿ ಆಡಳಿತ ಪಕ್ಷದ ಶಾಸಕರಿಗೆ ಶಿಕ್ಷೆ ಆಗುವಂತೆ ಮಾಡಿದ ಕಾರಣ ತಮ್ಮನ್ನು ಬಲಿ ಪಶು ಮಾಡಲಾಗುತ್ತಿದೆ ಎಂದು ತಿಳಿಸಿ, ರಕ್ಷಣೆ ಕೋರಿ ಸಿಬಿಐಗೆ ಪತ್ರ ಬರೆದಿದ್ದಾರೆ. ಸರ್ಕಾರ ಅಧಿಕಾರಿಗಳನ್ನು ಬಲಿಪಶು ಮಾಡುತ್ತಿದೆಯೇ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಖಂಡ್ರೆ, ಇದು ಸರ್ಕಾರದ ವಿರುದ್ಧ ಮಾಡಿರುವ ಸಂಪೂರ್ಣ ಸುಳ್ಳು ಆರೋಪ ಎಂದರು. ಇದನ್ನೂ ಓದಿ: ‘ಪುಷ್ಪ’ ಸಿನಿಮಾ ಮಾಡಲು ಉಪೇಂದ್ರ ಸ್ಪೂರ್ತಿ ಎಂದ ನಿರ್ದೇಶಕ ಸುಕುಮಾರ್

    2024ರ ಸೆ. 24ರಂದು ತಾವು ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಲಿಖಿತ ಟಿಪ್ಪಣಿ ಕಳುಹಿಸಿ, ಸಚಿವ ಸಂಪುಟದ ಪೂರ್ವಾನುಮತಿ ಇಲ್ಲದೆ ಐಎ ಹಾಕಿರುವ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ನೀಡಿ ಕ್ರಮ ಜರುಗಿಸುವಂತೆ ಸೂಚಿಸಿದ್ದೇನೆ. ಸೂಚನೆ ನೀಡಿದ 1 ತಿಂಗಳ ನಂತರ ಅ. 2024ರಲ್ಲಿ ಬೇಲಿಕೇರಿ ತೀರ್ಪು ಬಂದಿದೆ. ಆರ್.ಗೋಕುಲ್ ತಮ್ಮ ತಪ್ಪು ಮುಚ್ಚಿಕೊಳ್ಳಲು ಸರ್ಕಾರದ ವಿರುದ್ಧ ಸಿಬಿಐಗೆ ಸುಳ್ಳು ಆರೋಪ ಮಾಡಿ ಪತ್ರ ಬರೆದಿದ್ದಾರೆ. ಇದು ಕೂಡ ಅಧಿಕಾರಿಯ ದುರ್ವರ್ತನೆ ಆಗುತ್ತದೆ ಅಥವಾ ಬೆದರಿಕೆಯ ತಂತ್ರ ಎಂದು ಭಾವಿಸಬಹುದಾಗಿದೆ ಎಂದು ಹೇಳಿದರು.

    ಹೆಚ್‌ಎಂಟಿ ಅರಣ್ಯ ಭೂಮಿ ಪ್ರದೇಶಕ್ಕೆ ತಾವೇ ಖುದ್ದು ಭೇಟಿ ನೀಡಿದ್ದು, ಅಲ್ಲಿ ಇಂದಿಗೂ 280 ಎಕ್ರೆಯಷ್ಟು ನೆಡುತೋಪು ಇದೆ. ಅದಾಗ್ಯೂ, ಸದರಿ ಭೂಮಿ ಅರಣ್ಯ ಸ್ವರೂಪ ಕಳೆದುಕೊಂಡಿದೆ ಎಂದು ಸುಪ್ರೀಂಕೋರ್ಟ್ಗೆ ಸುಳ್ಳು ಮಾಹಿತಿ ನೀಡಿ ಐಎ ಸಲ್ಲಿಸಲಾಗಿದೆ. ತಮ್ಮ ರಕ್ಷಣೆಗೆ ಸಿಬಿಐಗೆ ಪತ್ರ ಬರೆಯುವ ಅಧಿಕಾರಿ, ಹೆಚ್‌ಎಂಟಿ ಭೂಮಿಯಲ್ಲಿ ಅರಣ್ಯವಿದೆ. ಇದು ಅರಣ್ಯ ಸ್ವರೂಪ ಕಳೆದುಕೊಂಡಿದೆ ಎಂದು ಐಎ ಸಲ್ಲಿಸಲು ಬರುವುದಿಲ್ಲ ಎಂದು ಸಿಎಂಗೆ ಏಕೆ ಪತ್ರ ಬರೆಯಲಿಲ್ಲ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಜನರ ಸಮಸ್ಯೆಗಳಿಗೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ಡಿಸಿ, ಸಿಇಓಗಳಿಗೆ ಸಿಎಂ ಎಚ್ಚರಿಕೆ

    ಬೆಂಗಳೂರಿನಲ್ಲಿ ಇತರ ಸಂಸ್ಥೆಗಳ ವಶದಲ್ಲಿರುವ ಅರಣ್ಯಭೂಮಿ ಕುರಿತಂತೆ ಚರ್ಚಿಸಿ ಸರ್ಕಾರಕ್ಕೆ ಶಿಫಾರಸು ಮಾಡಲು 2015ರಲ್ಲೇ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಲಾಗಿತ್ತು. ಆ ಸಮಿತಿಯ ಗಮನಕ್ಕೆ ಸಹ ತಾರದೆ, ಸಚಿವ ಸಂಪುಟದ ಅನುಮತಿ ಇಲ್ಲದೆ ಸುಪ್ರೀಂ ಕೋರ್ಟ್ನಲ್ಲಿ ಡಿನೋಟಿಫಿಕೇಷನ್ ಅನುಮತಿ ಕೋರಿ 2020ರ ಜೂನ್ 20ರಂದು ಅರ್ಜಿ ಸಲ್ಲಿಸಲಾಗಿದೆ. ಕೇವಲ 25 ದಿನಗಳ ಅಂತರದಲ್ಲಿ ಅಂದರೆ 2020 ಆ. 25ರಂದು ಉನ್ನತ ಮಟ್ಟದ ಸಭೆಯಲ್ಲಿ `1980ರ ಪೂರ್ವದಲ್ಲಿ ವಿವಿಧ/ಸರ್ಕಾರಿ ಸಂಸ್ಥೆಗಳಿಗೆ ಆದ ಪ್ರದೇಶಗಳ ಮಂಜೂರಾತಿಗಳ ಬಗ್ಗೆ ಅಡ್ವೊಕೇಟ್ ಜನರಲ್ ಅವರ ಅಭಿಪ್ರಾಯ ಪಡೆದು ಅಂತಹ ಅರಣ್ಯಪ್ರದೇಶಗಳ ಡಿನೋಟಿಫಿಕೇಶನ್‌ನ ಪ್ರಸ್ತಾವನೆಯನ್ನು ಕ್ಯಾಬಿನೆಟ್ ನಿರ್ಧಾರಕ್ಕಾಗಿ ಸಲ್ಲಿಸಲು ಅಪರ ಮುಖ್ಯ ಕಾರ್ಯದರ್ಶಿ, ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆರವರಿಗೆ ಸೂಚಿಸಿದೆ’ ಎಂಬ ನಿರ್ಣಯ ಮಾಡಲಾಗಿದೆ. ಈ ಬಗ್ಗೆ ಘಟನೋತ್ತರ ಅನುಮತಿ ಪಡೆದಿಲ್ಲ. ಹೀಗಾಗಿ 4 ಅಧಿಕಾರಿಗಳಿಗೆ ನೋಟಿಸ್ ನೀಡಲಾಗಿತ್ತು ಎಂದರು. ಇದನ್ನೂ ಓದಿ: ಮರೆಯಾದ ಭಾವಗೀತೆಗಳ ಭಾವ, ಅಗಲಿದ ಕಾವ್ಯ ಚೇತನ – ಹೆಚ್‌ಎಸ್‌ವಿ ನಿಧನಕ್ಕೆ ಶಿವರಾಜ ತಂಗಡಗಿ ಶೋಕ

    ಈಗ ಗೋಕುಲ್ ಅವರನ್ನು ಅಮಾನತು ಮಾಡಿ ವಿಚಾರಣೆ ನಡೆಸಲು, ಮತ್ತೊಬ್ಬ ಅಧಿಕಾರಿ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಹಾಗೂ ನಿವೃತ್ತಿ ಐಎಎಸ್ ಅಧಿಕಾರಿ ಮತ್ತು ಐಎಫ್‌ಎಸ್ ಅಧಿಕಾರಿ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಲು ಸಿಎಂಗೆ ಕಡತ ಸಲ್ಲಿಸಿರುವುದಾಗಿ ಹೇಳಿದರು.

    ಈ ವಿಷಯ ತಮ್ಮ ಗಮನಕ್ಕೆ ಬಂದ ಕೂಡಲೇ ಐಎ ಹಿಂಪಡೆಯಲು ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಐಎ ಹಿಂಪಡೆಯಲು ಸಚಿವ ಸಂಪುಟದ ಅನುಮತಿಯನ್ನೂ ಪಡೆಯಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಮಂಡ್ಯ ಬಾಲಕಿ ಸಾವು ಕೇಸ್ | ಎಚ್ಚೆತ್ತ ಬೆಂಗಳೂರು ಪೊಲೀಸರಿಂದ ಹೊಸ ಎಸ್‌ಒಪಿ ಜಾರಿ

    ಬೃಹತ್ ಉದ್ಯಾನ ನಿರ್ಮಾಣ
    ಹೆಚ್‌ಎಂಟಿ ವಶದಲ್ಲಿರುವ ಅರಣ್ಯ ಭೂಮಿಯಲ್ಲಿ ಉತ್ತರ ಬೆಂಗಳೂರಿನಲ್ಲಿ ಮತ್ತೊಂದು ಬೃಹತ್ ಉದ್ಯಾನ ನಿರ್ಮಾಣ ಮಾಡುವುದು ಸರ್ಕಾರದ ಉದ್ದೇಶವಾಗಿದೆ. ಮುಂದಿನ ಪೀಳಿಗೆಗೆ ಶ್ವಾಸತಾಣ(ಲಂಗ್ಸ್ ಸ್ಪೇಸ್) ಉಳಿಸುವುದು ನಮ್ಮ ಗುರಿಯಾಗಿದೆ. ಈ ಅಂಶವನ್ನು ಐಎ ಹಿಂಪಡೆಯಲು ಸುಪ್ರೀಂಕೋರ್ಟ್‌ಗೆ ಅರ್ಜಿ ಹಾಕುವ ಪೂರ್ವದಲ್ಲೇ ತಾವು ಸ್ಪಷ್ಟಪಡಿಸಿರುವುದಾಗಿ ಹೇಳಿದರು.

  • ಹೆಚ್‌ಎಂಟಿ ಅಧೀನದಲ್ಲಿರುವ ಅರಣ್ಯ ಭೂಮಿ ಹಿಂಪಡೆಯುವ ಬಗ್ಗೆ ಕ್ಯಾಬಿನೆಟ್‌ನಲ್ಲಿ ಚರ್ಚೆ – ಹೆಚ್‌.ಕೆ ಪಾಟೀಲ್

    ಹೆಚ್‌ಎಂಟಿ ಅಧೀನದಲ್ಲಿರುವ ಅರಣ್ಯ ಭೂಮಿ ಹಿಂಪಡೆಯುವ ಬಗ್ಗೆ ಕ್ಯಾಬಿನೆಟ್‌ನಲ್ಲಿ ಚರ್ಚೆ – ಹೆಚ್‌.ಕೆ ಪಾಟೀಲ್

    ಬೆಂಗಳೂರು: ಹೆಚ್‌ಎಂಟಿ ಅಧೀನದಲ್ಲಿರುವ ಅರಣ್ಯ ಭೂಮಿಯನ್ನು(Forest Land) ಹಿಂಪಡೆಯುವ ಬಗ್ಗೆ ಕ್ಯಾಬಿನೆಟ್‌ನಲ್ಲಿ ಚರ್ಚೆ ಮಾಡಲಾಗಿದೆ ಎಂದು ಸಚಿವ ಹೆಚ್‌.ಕೆ ಪಾಟೀಲ್‌ (HK Patil) ತಿಳಿಸಿದ್ದಾರೆ.

    ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹೆಚ್‌ಎಂಟಿ ಅಧೀನದಲ್ಲಿ ಇರುವ ಅರಣ್ಯ ಭೂಮಿ ಹಿಂಪಡೆಯುವ ಬಗ್ಗೆ ಕ್ಯಾಬಿನೆಟ್‌ನಲ್ಲಿ ಚರ್ಚಿಸಲಾಗಿದೆ. ಹೆಚ್‌ಎಂಟಿ ಕಂಪನಿ (HMT Company) ಕೆಲವು ಅರಣ್ಯ ಭಾಗವನ್ನು ಬೇರೆ ಸಂಸ್ಥೆಗಳಿಗೆ ಮಾರಾಟ ಮಾಡಿದೆ. ಸುಮಾರು 160 ಎಕರೆ ಭೂಮಿಯನ್ನು 375 ಕೋಟಿ ರೂ.ಗೆ ಖಾಸಗಿ ಹಾಗೂ ಸರ್ಕಾರಿ ಸಂಸ್ಥೆಗಳಿಗೆ ಮಾರಾಟ ಮಾಡಿದೆ. ಮಾರಾಟ ಸಂದರ್ಭದಲ್ಲಿ ಅರಣ್ಯ ಇಲಾಖೆ, ಅರಣ್ಯ ಸಚಿವರು ಯಾರಿಂದಲೂ ಅನುಮತಿ ಪಡೆದಿಲ್ಲ ಎಂದು ಸಚಿವರು ಹೇಳಿದ್ದಾರೆ. ಇದನ್ನೂ ಓದಿ: ವಿಶ್ವದ ಪ್ರತಿ ದೇಶದಲ್ಲೂ ನನ್ನದೊಂದು ಮಗು ಇರಬೇಕು – ಅಮೆರಿಕದ ವೀರ್ಯದಾನಿಯ ಹೆಬ್ಬಯಕೆ

    180 ಎಕರೆ ಅರಣ್ಯ ಭೂಮಿಯನ್ನು ಇದೀಗ ಮಾರಾಟ ಮಾಡಲು ಹೊರಟಿದ್ದಾರೆ. ಅಲ್ಲದೇ ಮೊದಲೇ 160 ಎಕರೆ ಮಾರಾಟ ಆಗಿದ್ದು, ಅದೂ ಅರಣ್ಯ ಭೂಮಿ ಡಿನೋಟೀಫೈ ಆಗಿಲ್ಲ. ಆದಾಗ್ಯೂ ಮಾರಾಟ ಮಾಡಿರುವುದು ಕಂಡುಬಂದಿದೆ. ಈ ಪ್ರಶ್ನಾರ್ಹ ಭೂಮಿಯನ್ನು ಡಿನೋಟಿಫೈ ಮಾಡುವುದಕ್ಕೆ ಸುಪ್ರೀಂ ಕೋರ್ಟ್‌ಗೆ ಮಧ್ಯಂತರ ಅರ್ಜಿ ಸಲ್ಲಿಸಲಾಗಿತ್ತು. 2015ರಲ್ಲಿ ಸಮಸ್ಯೆ ಬಗೆಹರಿಸಲು ಉನ್ನತ ಮಟ್ಟದ ಸಮಿತಿ ಕೂಡ ರಚಿಸಲಾಗಿತ್ತು. ಅರಣ್ಯ ಭೂಮಿ ಡಿನೋಟಿಫೈ ಮಾಡಿದರೆ ರಾಜ್ಯಕ್ಕೆ ಭಾರೀ ಆರ್ಥಿಕ ನಷ್ಟ ಉಂಟಾಗುತ್ತದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಬೀದರ್ ದರೋಡೆಯ ಸುತ್ತ ಅನುಮಾನದ ಹುತ್ತ – ಇದು ಇದು ಪ್ರೀ ಪ್ಲಾನ್ ಎಂದ ಮೃತನ ಸಹೋದರಿ

    ಡಿನೋಟಿಫೈ ಮಾಡಿದ್ರೆ ಬೆಂಗಳೂರಿನ ಶ್ವಾಸಕೋಶದ ಸ್ಥಳ ಕಳೆದುಕೊಳ್ಳುತ್ತದೆ. ಗೆಚ್‌ಎಂಟಿಗೆ ಅರಣ್ಯ ಭೂಮಿ ನೀಡಿದ್ದ ಉದ್ದೇಶ ಈಡೇರಿಲ್ಲ. ಹಾಗಾಗಿ ಅರಣ್ಯ ಭೂಮಿಯನ್ನು ಹಿಂಪಡೆಯುವ ಬಗ್ಗೆ ಕ್ಯಾಬಿನೆಟ್‌ನಲ್ಲಿ ಚರ್ಚಿಸಲಾಗಿದೆ ಎಂದಿದ್ದಾರೆ. ಇದನ್ನೂ ಓದಿ: 2ನೇ ಹೆಂಡ್ತಿ ಬಿಟ್ಟು ತನ್ನ ಬಳಿಯೇ ಇರುವಂತೆ ಒತ್ತಾಯ – ಮೊದಲ ಹೆಂಡ್ತಿಯನ್ನೇ ಹತ್ಯೆಗೈದ ಗಂಡ

  • 15 ಎಕರೆ ಒತ್ತುವರಿ ಭೂಮಿ ವಶಕ್ಕೆ ಪಡೆದ ಅರಣ್ಯ ಇಲಾಖೆ: 3 ಸಾವಿರ ಅಡಿಕೆ ಮರಕ್ಕೆ ಕೊಡಲಿ

    15 ಎಕರೆ ಒತ್ತುವರಿ ಭೂಮಿ ವಶಕ್ಕೆ ಪಡೆದ ಅರಣ್ಯ ಇಲಾಖೆ: 3 ಸಾವಿರ ಅಡಿಕೆ ಮರಕ್ಕೆ ಕೊಡಲಿ

    ದಾವಣಗೆರೆ: ಚನ್ನಗಿರಿ (Channagiri) ತಾಲೂಕಿನ ಶಾಂತಿಸಾಗರದಲ್ಲಿ ಅರಣ್ಯ ಭೂಮಿ (Forest Land) ಒತ್ತುವರಿ ಮಾಡಿದವರಿಗೆ ಅರಣ್ಯ ಇಲಾಖೆ (Forest Department) ಅಧಿಕಾರಿಗಳು ಶಾಕ್ ನೀಡಿದ್ದಾರೆ. ಒತ್ತುವರಿ ಮಾಡಿದ್ದ 15 ಎಕರೆ ಅರಣ್ಯ ಪ್ರದೇಶವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

    ಶಾಂತಿಸಾಗರದ ಗುಡುಂಘಟ್ಟದ ಸರ್ವೇ ನಂ.43 ರಲ್ಲಿ 15 ಎಕರೆ ಜಾಗವನ್ನು ವಶಕ್ಕೆ ಪಡೆಯಲಾಗಿದೆ. ಈ ಭಾಗದಲ್ಲಿ ಜನರು ಅರಣ್ಯ ಪ್ರದೇಶವನ್ನು ಒತ್ತುವರಿ ಮಾಡಿಕೊಂಡು ಆ ಜಾಗದಲ್ಲಿ ಅಡಿಕೆ ಮತ್ತು ಬಾಳೆ ಬೆಳೆದಿದ್ದರು. ಅಧಿಕಾರಿಗಳು 3 ಸಾವಿರ ಅಡಿಕೆ ಮತ್ತು ಬಾಳೆ ಗಿಡಗಳನ್ನು ತೆರವು ಮಾಡಿ, ಜಾಗವನ್ನು ವಶಕ್ಕೆ ಪಡೆದಿದ್ದಾರೆ.

    ಸುಮಾರು ವರ್ಷಗಳಿಂದ ರೈತರು ಅರಣ್ಯ ಪ್ರದೇಶವನ್ನು ಒತ್ತುವರಿ ಮಾಡಿ ಸಾಗುವಳಿ ಮಾಡಿಕೊಂಡು ಬಂದಿದ್ದರು. ಬಳಿಕ ಜಾಗದಲ್ಲಿ ಅಡಿಕೆ ತೋಟ ಮಾಡಿದ್ದರು. ಅಡಿಕೆ, ಬಾಳೆಗಿಡಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಸಿಬ್ಬಂದಿ ತೆರವು ಮಾಡಿದ್ದಾರೆ.

  • ಅರಣ್ಯ ಜಾಗವನ್ನೇ ಒತ್ತುವರಿ ಮಾಡಿದ್ರಾ ಬಿಜೆಪಿ ಶಾಸಕ? – ಪ್ರಕರಣದ ವರದಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸುಪ್ರೀಂ ನೋಟಿಸ್

    ಅರಣ್ಯ ಜಾಗವನ್ನೇ ಒತ್ತುವರಿ ಮಾಡಿದ್ರಾ ಬಿಜೆಪಿ ಶಾಸಕ? – ಪ್ರಕರಣದ ವರದಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸುಪ್ರೀಂ ನೋಟಿಸ್

    ಮಡಿಕೇರಿ: ಬಹುತೇಕ ಅರಣ್ಯ ಪ್ರದೇಶದಿಂದಲೇ ಕೂಡಿರುವ ಕೊಡಗು (Kodagu) ಜಿಲೆಯಲ್ಲಿ ಸಾಕಷ್ಟು ಅರಣ್ಯ ಪ್ರದೇಶ ಒತ್ತುವರಿಯಾಗಿದೆ. ಆದರೆ ಆಳುವವರಿಂದಲೇ ಅರಣ್ಯ ಒತ್ತುವರಿಯಾಗಿದೆ ಎಂದು ವ್ಯಕ್ತಿಯೊಬ್ಬರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಹೀಗಾಗಿ ಪ್ರಕರಣ ಕುರಿತು ವರದಿ ನೀಡುವಂತೆ ಸುಪ್ರೀಂ ಕೋರ್ಟ್ (Supreme Court) ರಾಜ್ಯ ಸರ್ಕಾರಕ್ಕೆ (Karnataka Government) ನೋಟಿಸ್ ನೀಡಿದೆ.

    ಕಾಶ್ಮೀರದಂತೆ ಕಾಣುವ ಕೊಡಗು ಜಿಲ್ಲೆ ಬಹುತೇಕ ಬೆಟ್ಟಗುಡ್ಡಗಳಿಂದಲೇ ಕೂಡಿರುವ ಪ್ರದೇಶ. ಆದರೆ ನೀವು ನೋಡುತ್ತಿರುವ ಈ ಪ್ರದೇಶ ಸದ್ಯಕ್ಕೆ ಊರಾಗಿದ್ದರೂ, ಇದು ಅರಣ್ಯ ಪ್ರದೇಶ ಎನ್ನಲಾಗುತ್ತಿದೆ. ಅದನ್ನು ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ (K.G.Bopaiah) ಸೇರಿದಂತೆ 200 ಕ್ಕೂ ಹೆಚ್ಚು ಜನರು ಒತ್ತುವರಿ ಮಾಡಿಕೊಂಡು ಮನೆ ನಿರ್ಮಿಸಿಕೊಂಡಿದ್ದಾರೆ ಎಂದು ಕಾವೇರಿ ಸೇನೆಯ ಮುಖಂಡ ರವಿ ಚಂಗಪ್ಪ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಇದನ್ನೂ ಓದಿ: Top Performing Airports 2022 – ವಿಶ್ವದಲ್ಲೇ ಬೆಂಗಳೂರು ನಂ.2

    ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಕೆ.ಎಂ.ಜೋಸೆಫ್ ಮತ್ತು ಬಿ.ವಿ.ನಾಗರತ್ನ ಅವರಿದ್ದ ಪೀಠ, ಪ್ರತಿಕ್ರಿಯೆ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ನೊಟೀಸ್ ನೀಡಿದೆ. ಮಡಿಕೇರಿ ತಾಲ್ಲೂಕಿನ ಕರ್ಣಂಗೇರಿ ಗ್ರಾಮದ ಸರ್ವೇ ನಂಬರ್ 289/7 ರಲ್ಲಿ ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಸೇರಿದಂತೆ 200 ಜನರು ಅಕ್ರಮವಾಗಿ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಮನೆ ನಿರ್ಮಿಸಿಕೊಂಡಿದ್ದಾರೆ ಎಂದು ದೂರಲಾಗಿದೆ.

    ಈ ಸಂಬಂಧ 2018 ರಲ್ಲಿ ಕಾವೇರಿ ಸೇನೆಯ ರವಿಚಂಗಪ್ಪ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಆದರೆ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದ್ದ ವೇಳೆ ವಕೀಲರು ಸರಿಯಾಗಿ ಕೋರ್ಟಿಗೆ ಹಾಜರಾಗದ ಹಿನ್ನೆಲೆಯಲ್ಲಿ ಪ್ರಕರಣವನ್ನು ವಜಾ ಮಾಡಲಾಗಿತ್ತು. ಶಾಸಕ ಕೆ.ಜಿ. ಬೋಪಯ್ಯ ಅವರು 2009 ರಲ್ಲಿಯೇ ಮನೆ ನಿರ್ಮಿಸಿಕೊಂಡಿದ್ದಾರೆ. ಬಳಿಕ ರವಿಚಂಗಪ್ಪ 2018 ರಲ್ಲಿ ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಮಾಹಿತಿ ಕೇಳಿದಾಗ, ಕಚೇರಿಯಿಂದ ತಾಂತ್ರಿಕ ಅಭಿಪ್ರಾಯ ನೀಡಿಲ್ಲ ಎಂದು ವರದಿ ನೀಡಿದೆ. ಇದೇ ವರ್ಷದಲ್ಲಿಯೇ ಮನೆ ನಿರ್ಮಿಸುವುದಕ್ಕೆ ಭೂಪರಿವರ್ತನೆಗೆ ಅವಕಾಶ ನೀಡಿರುವ ಬಗ್ಗೆ ನಗರಸಭೆಯಲ್ಲಿ ಮಾಹಿತಿ ಕೇಳಿದಾಗಲೂ ಯಾವುದೇ ಮಾಹಿತಿ ಇಲ್ಲ ಎಂದು ವರದಿ ನೀಡಿದೆ. ಆದರೂ ಕೆ.ಜಿ. ಬೋಪಯ್ಯ ಅವರು ಮನೆ ನಿರ್ಮಿಸಿರುವುದು ಅಕ್ರಮ ಎಂದು ರವಿಚಂಗಪ್ಪ ಹೇಳಿದ್ದಾರೆ. ಇದನ್ನೂ ಓದಿ: ಬಿಜೆಪಿ ಹೈಕಮಾಂಡ್ ಟಾರ್ಗೆಟ್ ಸಿದ್ದರಾಮಯ್ಯ – ಒಂದೇ ಏಟಿಗೆ ಎರಡು ಹಕ್ಕಿ ಹೊಡೆಯುವ ತಂತ್ರ?

    ಈ ಕುರಿತು ಪ್ರತಿಕ್ರಿಯಿಸಿರುವ ಶಾಸಕ ಕೆ.ಜಿ. ಬೋಪಯ್ಯ, 1933 ರಲ್ಲಿಯೇ ಆ ಜಾಗ ಡೀನೋಟಿಫೈ ಆಗಿದ್ದು, ಅದಕ್ಕೆ ಕಂದಾಯ ಎಲ್ಲವನ್ನು ಕಟ್ಟಲಾಗಿದೆ. ವಿಠ್ಠಲ ಪೊನ್ನಪ್ಪ ಎಂಬವರಿಂದ ಜಾಗವನ್ನು ನಾನು ಖರೀದಿಸಿ ಇತ್ತೀಚೆಗೆ ಮನೆ ಕಟ್ಟಿಕೊಂಡಿದ್ದೇನೆ. ಆದರೆ ಚುನಾವಣೆ ಸಂದರ್ಭದಲ್ಲಿ ನನ್ನ ವರ್ಚಸ್ಸಿಗೆ ಧಕ್ಕೆ ತರುವುದಕ್ಕಾಗಿಯೇ ಹೀಗೆ ಪ್ರಕರಣ ದಾಖಲಿಸಲಾಗುತ್ತಿದೆ. 2018 ರಲ್ಲಿಯೂ ಇದೇ ರೀತಿ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಹೈಕೋರ್ಟ್ ಪ್ರಕರಣವನ್ನು ವಜಾಗೊಳಿಸಿತು. ಇದೀಗ ಮತ್ತೆ ಚುನಾವಣೆ ಹತ್ತಿರ ಬರುತ್ತಿರುವುದರಿಂದ ನನ್ನ ವಿರುದ್ಧ ಸುಪ್ರೀಂ ಕೋರ್ಟಿಗೆ ಹೋಗಿದ್ದಾರೆ. ಸುಳ್ಳು ಪ್ರಕರಣ ದಾಖಲಿಸುತ್ತಿರುವ ಇವರ ವಿರುದ್ಧ ನಾನು ಮಾನನಷ್ಟ ಕೇಸ್ ಹೂಡುತ್ತೇನೆ ಎಂದು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸಿಗಂಧೂರು ದೇವಾಲಯದ ಸುತ್ತಮುತ್ತಲಿನ ಅರಣ್ಯ ಒತ್ತುವರಿ ಭೂಮಿ ತೆರವು ಕಾರ್ಯ

    ಸಿಗಂಧೂರು ದೇವಾಲಯದ ಸುತ್ತಮುತ್ತಲಿನ ಅರಣ್ಯ ಒತ್ತುವರಿ ಭೂಮಿ ತೆರವು ಕಾರ್ಯ

    ಶಿವಮೊಗ್ಗ: ಜಿಲ್ಲೆಯ ಸಾಗರ ತಾಲೂಕಿನ ಪ್ರಸಿದ್ಧ ಯಾತ್ರಾಸ್ಥಳ ಸಿಗಂಧೂರು ದೇವಸ್ಥಾನದ ಸುತ್ತಮುತ್ತಲಿನ ಒತ್ತುವರಿ ಅರಣ್ಯ ಭೂಮಿಯ ತೆರವು ಕಾರ್ಯಾಚರಣೆ ತಹಶೀಲ್ದಾರ್ ಚಂದ್ರಶೇಖರ್ ನೇತೃತ್ವದಲ್ಲಿ ಇಂದು ನಡೆಯಿತು.

    ಸಿಗಂಧೂರು ದೇವಾಲಯದ ಟ್ರಸ್ಟ್ ದೇವಸ್ಥಾನದ ಸುತ್ತಮುತ್ತಲಿನ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಈ ಒತ್ತುವರಿ ಅರಣ್ಯ ಭೂಮಿಯನ್ನು ಸರ್ಕಾರ ತಕ್ಷಣ ವಶಪಡಿಸಿಕೊಳ್ಳಬೇಕು ಎಂದು ಸಾಗರ ಮೂಲದ ಲಕ್ಷ್ಮಿನಾರಾಯಣ ಎಂಬವರು ಹೈಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸಿದ್ದರು.

    ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳು ಈ ಬಗ್ಗೆ ಅಧಿಕಾರಿಗಳು ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಿದ್ದರು. ನಂತರ ಅಂತಿಮವಾಗಿ ತೀರ್ಪು ನೀಡಿದ ನ್ಯಾಯಾಲಯ ದೇವಸ್ಥಾನದ ಸುತ್ತಮುತ್ತ 6 ಎಕರೆ 16 ಗುಂಟೆ ಅರಣ್ಯ ಭೂಮಿ ಒತ್ತುವರಿಯಾಗಿದೆ. ಹೀಗಾಗಿ ಈ ಕೂಡಲೇ ತಹಶೀಲ್ದಾರ್ ಅವರು ತಮ್ಮ ವಶಕ್ಕೆ ಪಡೆದು ತಂತಿಬೇಲಿ ನಿರ್ಮಿಸಬೇಕು ಎಂದು ಹೈಕೋರ್ಟ್ ಸೂಚಿಸಿತ್ತು.

    ನ್ಯಾಯಾಲಯದ ಆದೇಶದಂತೆ ಇಂದು ಸ್ಥಳಕ್ಕೆ ಭೇಟಿ ನೀಡಿದ್ದ ತಹಶೀಲ್ದಾರ್ ಚಂದ್ರಶೇಖರ್ ಹಾಗೂ ಡಿವೈಎಸ್ ಪಿ ವಿನಯ್ ಶೆಟಗೇರಿ ಒತ್ತುವರಿ ಅರಣ್ಯ ಭೂಮಿ ವಶಕ್ಕೆ ಪಡೆದು ತಂತಿಬೇಲಿ ನಿರ್ಮಿಸುವ ಕಾರ್ಯ ನಡೆಸಿದರು.

  • 999 ವರ್ಷಗಳ ಕಾಲ ಅರಣ್ಯ ಭೂಮಿ ಭೋಗ್ಯಕ್ಕೆ – ನಾರಾಯಣಗೌಡ ವಿರುದ್ಧ ಭೂ ಕಬಳಿಕೆ ಆರೋಪ

    999 ವರ್ಷಗಳ ಕಾಲ ಅರಣ್ಯ ಭೂಮಿ ಭೋಗ್ಯಕ್ಕೆ – ನಾರಾಯಣಗೌಡ ವಿರುದ್ಧ ಭೂ ಕಬಳಿಕೆ ಆರೋಪ

    ಮಂಡ್ಯ: ಜಿಲ್ಲೆಯ ಕೆ.ಆರ್ ಪೇಟೆ ಕ್ಷೇತ್ರದ ಬಿಜೆಪಿ ಶಾಸಕ ನಾರಾಯಣಗೌಡ ವಿರುದ್ಧ ಈಗ ಭೂ ಕಬಳಿಕೆಯ ಆರೋಪ ಕೇಳಿ ಬಂದಿದೆ. ನಿಯಮ ಬಾಹಿರವಾಗಿ ವ್ಯಕ್ತಿಯೊಬ್ಬರಿಂದ ಅರಣ್ಯ ಭೂಮಿಯನ್ನು 999 ವರ್ಷಗಳಿಗೆ ಭೋಗ್ಯಕ್ಕಾಗಿ ತಮ್ಮ ಪತ್ನಿಯ ಹೆಸರಿನಲ್ಲಿ ಭೂಮಿ ಪಡೆದುಕೊಂಡಿದ್ದಾರೆ ಎಂದು ಆರೋಪಿಸಲಾಗುತ್ತಿದೆ.

    ಭೋಗ್ಯಕ್ಕೆ ಭೂಮಿ ಪಡೆದುಕೊಂಡಿರುವ ದಿನವೇ ಅವರ ಪತ್ನಿಯ ಹೆಸರಿನಲ್ಲಿ ನಾರಾಯಣಗೌಡ ಭೂಮಿಯನ್ನು ಕ್ರಮ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಅವ್ಯವಹಾರ ನಡೆದಿರುವಂತೆ ಕಂಡು ಬಂದಿದೆ. ಹೀಗಾಗಿ ಈ ಬಗ್ಗೆ ಸರ್ಕಾರ ತನಿಖೆ ನಡೆಸಬೇಕು ಎಂಬ ಕೂಗು ಕೇಳಿ ಬಂದಿದೆ.

    ಕೆ.ಆರ್ ಪೇಟೆ ತಾಲೂಕಿನ ಶೀಳನೆರೆ ಹೋಬಳಿ ವ್ಯಾಪ್ತಿಯ ಮಾದಿಗರ ಹೊಸಹಳ್ಳಿ ಗ್ರಾಮದ ಸರ್ವೆ ನಂ. 14 ಮತ್ತು ಅದರ ಸುತ್ತ 25 ಎಕ್ರೆ ಭೂಮಿಯನ್ನು ಎಚ್.ಟಿ ವೆಂಕಟೇಶ್ ಅವರಿಂದ 999 ವರ್ಷಗಳ ಭೋಗ್ಯಕ್ಕೆ ಕೇವಲ 5 ಲಕ್ಷ ರೂಪಾಯಿಗಳನ್ನು ಕೊಟ್ಟು, ನಾರಾಯಣಗೌಡ ತಮ್ಮ ಹಾಗೂ ಕುಟುಂಬದ ಸದಸ್ಯರ ಹೆಸರಿನಲ್ಲಿ ಅಕ್ರಮವಾಗಿ ಖರೀದಿಸಿದ್ದಾರೆ ಎನ್ನಲಾಗಿದೆ. ವಿವಿಧ ಸರ್ವೆ ನಂಬರ್ ಗಳಲ್ಲಿ ತಮ್ಮ ಹೆಸರಿನಲ್ಲಿ 24 ಎಕ್ರೆ, ಪತ್ನಿ ದೇವಕಿ ಹೆಸರಿನಲ್ಲಿ 25 ಎಕ್ರೆ ಭೂಮಿಯನ್ನು ಅಕ್ರಮವಾಗಿ ಭೋಗ್ಯ ಮಾಡಿಕೊಂಡಿದ್ದು, ಮಕ್ಕಳಾದ ಕೋಯಿಲ್, ನೇಹಾ ಹೆಸರಿನಲ್ಲಿ 6 ಎಕ್ರೆ ಭೂಮಿಯನ್ನು ಖರೀದಿಸಿದ್ದು, ಒಟ್ಟು 55 ಎಕ್ರೆ ಭೂಮಿಯನ್ನ ಅಕ್ರಮವಾಗಿ ಖರೀದಿಸಿದ್ದಾರೆ ಎನ್ನಲಾಗಿದೆ.

    ಇದರಲ್ಲಿ ಸರ್ವೆ ನಂ. 14ರಲ್ಲಿ 223 ಎಕ್ರೆ 30 ಗುಂಟೆ ಅರಣ್ಯ ಭೂಮಿಯಾಗಿರುತ್ತದೆ. 1982ರಲ್ಲಿ ಸರ್ಕಾರವು ಈ ಭೂಮಿಯನ್ನು ಅರಣ್ಯ ಇಲಾಖೆಯ ವ್ಯಾಪ್ತಿಗೆ ಬರುತ್ತದೆ ಎಂದಿತ್ತು. ಹೀಗಾಗಿ ಸದ್ಯ ಮೇಲುಕೋಟೆ ವನ್ಯಜೀವಿ ವಿಭಾಗದ ಮೀಸಲು ಅರಣ್ಯಕ್ಕೆ ಈ ಭೂಮಿ ಸೇರಿದೆ. ನಾರಾಯಣಗೌಡರು ಒಬ್ಬ ಶಾಸಕರಾಗಿ ಅರಣ್ಯವನ್ನು ರಕ್ಷಿಸಬೇಕಾದ ಜವಾಬ್ದಾರಿ ಹೊತ್ತವರು. ಆದರೆ ಈಗ ಅವರೇ ಕಾನೂನು ಬಾಹಿರವಾಗಿ ಅರಣ್ಯ ಭೂಮಿ ಖರೀದಿಸಲು ಪ್ರಯತ್ನಿಸುವುದು ಮತ್ತು ಅದನ್ನು ಭೋಗ್ಯಕ್ಕೆ ಪಡೆದುಕೊಂಡಿರುವ ಆರೋಪ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

    ಕಳೆದ ಹಲವು ವರ್ಷಗಳ ಹಿಂದೆ ಸರ್ಕಾರ ಉಳುಮೆ ಮಾಡುತ್ತಿದ್ದವರಿಗೆ ಭೂಮಿಯ ಹಕ್ಕು ನೀಡಿದ್ದು, ಎಲ್ಲರಿಗೂ ಸರ್ಕಾರದಿಂದ ಜಮೀನು ಮಂಜೂರು ಮಾಡಲಾಗಿದೆ. ಅಲ್ಲದೆ ಆರ್‍ಟಿಸಿಗಳನ್ನ ಕೈ ಬರಹದಿಂದ ಬರೆಯುತ್ತಿದ್ದ ದಿನಗಳಲ್ಲಿ ನಾರಾಯಣಗೌಡರು ಒತ್ತಡ ಹಾಕಿ ತಮಗಿಷ್ಟ ಬಂದ ಹಾಗೆ ದಾಖಲೆಗಳನ್ನ ಸೃಷ್ಟಿಸಿಕೊಂಡು ಭೂಮಿಯನ್ನ ಅಕ್ರಮವಾಗಿ ಪರಬಾರೆ ಮಾಡಿಕೊಂಡಿದ್ದಾರೆ. ಜೊತೆಗೆ ಅವರು ಇತ್ತೀಚಿನ ದಿನಗಳಲ್ಲಿ ತಮ್ಮ ಮಕ್ಕಳ ಹೆಸರಿನಲ್ಲೂ ಸಹ 6 ಎಕ್ರೆ ಭೂಮಿಯನ್ನು ಖರೀದಿಸಿದ್ದಾರೆ ಎನ್ನಲಾಗಿದೆ. ಆದರೆ ಆ ಸರ್ವೇ ನಂಬರ್‍ಗಳು ದುರಸ್ಥಿಯಾಗಿಲ್ಲ. ಆದರೂ ಉಪ ನೋಂದಣಾಧಿಕಾರಿ ಮುಖಾಂತರ ಕ್ರಯ ಪತ್ರದ ಮೂಲಕ ನಾರಾಯಣಗೌಡರು ಭೂಮಿ ಖರೀದಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

    ಯಾವುದೇ ಅರಣ್ಯ ಪ್ರದೇಶವನ್ನು ಅರಣ್ಯೇತರ ಎಂದು ಘೋಷಿಸಬೇಕಾದರೆ, ಸುಪ್ರೀಂ ಕೋರ್ಟ್ ಮತ್ತು ಕೇಂದ್ರ ಸರ್ಕಾರದ ಅನುಮತಿ ಪಡೆಯುವುದು ಕಡ್ಡಾಯ. ಆದರೆ ಪ್ರಸ್ತುತ ಮೇಲುಕೋಟೆಯ ಅರಣ್ಯ ಪ್ರದೇಶದಲ್ಲಿನ ಮಾದಿಗರ ಹೊಸಹಳ್ಳಿಯ 223.36 ಎಕ್ರೆ ಪ್ರದೇಶದಲ್ಲಿ 103 ಎಕ್ರೆಯಷ್ಟು ಭೂಮಿಯನ್ನು ಕೈಬಿಡಲಾಗಿದೆ ಎಂಬ ಆರೋಪವೂ ಕೇಳಿ ಬಂದಿದ್ದು, ಈ ಬಗ್ಗೆಯೂ ತನಿಖೆ ನಡೆಸುವಂತೆ ಆಗ್ರಹಿಸಲಾಗಿದೆ.

    ಈ ಆರೋಪಕ್ಕೆ ಸಂಬಂಧಿಸಿದಂತೆ ನಾರಾಯಣಗೌಡ ಅವರನ್ನ ಕೇಳಿದರೆ, ಎಲ್ಲವೂ ಕಾನೂನಾತ್ಮಕವಾಗಿಯೇ ನಡೆದಿದೆ. ಯಾವುದೇ ಅಕ್ರಮ, ಅವ್ಯವಹಾರ ನಡೆದಿಲ್ಲ ಎನ್ನುತ್ತಿದ್ದಾರೆ. ಆದರೆ ನಾರಾಯಣಗೌಡರ ಪತ್ನಿ ಹೆಸರಿಗೆ ಭೂಮಿಯನ್ನ ಭೋಗ್ಯ ಮತ್ತು ಕ್ರಯಕ್ಕೆ ಮಾಡಿರುವ ವ್ಯಕ್ತಿಗಳಿಗೆ ಆ ಭೂಮಿ ಹೇಗೆ ಬಂದಿತ್ತು? ಎನ್ನೋದನ್ನ ಪತ್ತೆ ಮಾಡಿದರೆ ಎಲ್ಲಾ ಆರೋಪಗಳಿಗೂ ಉತ್ತರ ಸಿಕ್ಕಂತಾಗುತ್ತದೆ. ಹೀಗಾಗಿ ಸರ್ಕಾರ ಈ ಬಗ್ಗೆ ಪರಿಶೀಲನೆ ನಡೆಸಬೇಕಿದೆ.

  • ಅರಣ್ಯ ಹಕ್ಕು ಕಾಯ್ದೆಯಡಿ ಭೂಮಿಗಾಗಿ ಆಗ್ರಹಿಸಿ ಆದಿವಾಸಿಗಳ ಅಹೋರಾತ್ರಿ ಧರಣಿ

    ಅರಣ್ಯ ಹಕ್ಕು ಕಾಯ್ದೆಯಡಿ ಭೂಮಿಗಾಗಿ ಆಗ್ರಹಿಸಿ ಆದಿವಾಸಿಗಳ ಅಹೋರಾತ್ರಿ ಧರಣಿ

    ರಾಮನಗರ: ಅರಣ್ಯ ಹಕ್ಕು ಕಾಯ್ದೆಯಡಿ ಭೂಮಿ ನೀಡುವಂತೆ ಆಗ್ರಹಿಸಿ ಕನಕಪುರ ತಾಲೂಕಿನ ಮರಳವಾಡಿಯ ಬುಡಗಯ್ಯನ ದೊಡ್ಡಿ ಗ್ರಾಮಸ್ಥರು ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ.

    ಅರಣ್ಯದಲ್ಲಿ ವಾಸವಿದ್ದ ಬಗ್ಗೆ ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ ನೀಡಲು ಬಂದಿದ್ದ ಅಧಿಕಾರಿಗಳನ್ನು ಆದಿವಾಸಿ ಇರುಳಿಗ ಸಮುದಾಯದವರು ತಡೆದು, ಜಿಲ್ಲಾ ಉಪ ವಿಭಾಗಾಧಿಕಾರಿಯೇ ಸ್ಥಳಕ್ಕೆ ಬರಬೇಕು. ಈ ಹಿಂದೆ ನಡೆಸಿದ ಸರ್ವೆ ವರದಿ ಏನಾಯ್ತು ಎಂದು ತಿಳಿಸಬೇಕು ಎಂದು ಸರ್ವೇ ಕಾರ್ಯವನ್ನ ಅಡ್ಡಿಪಡಿಸಿದ್ದಾರೆ. ಅಲ್ಲದೇ ಸಂಜೆಯಾದರೂ ಅಧಿಕಾರಿಗಳು ಸ್ಥಳಕ್ಕೆ ಬಾರದ ಹಿನ್ನೆಲೆಯಲ್ಲಿ ಅಹೋರಾತ್ರಿ ಪ್ರತಿಭಟನೆ ನಡೆಸಿದ್ದಾರೆ.

    ಮರಳವಾಡಿ ಹೋಬಳಿ ಬುಡಗಯ್ಯನ ದೊಡ್ಡಿ ಗ್ರಾಮ ಸಮೀಪದ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ಅರಣ್ಯ ಭೂಮಿಯಲ್ಲಿ ಆದಿವಾಸಿಗಳು ವಾಸವಿದ್ದಾರೆ. ಈ ಹಿಂದೆ ಕೂಡ ನಾವು ಇಲ್ಲಿಯೇ ಅರಣ್ಯವಾಸಿಗಳಾಗಿ ವಾಸವಿದ್ದೆವು. ನಮ್ಮನ್ನು ಬಲವಂತವಾಗಿ ಇಲ್ಲಿಂದ ಒಕ್ಕಲೆಬ್ಬಿಸಲಾಯಿತು. ಅರಣ್ಯವಾಸಿಗಳ ಅರಣ್ಯ ಹಕ್ಕು ಕಾಯ್ದೆಯಡಿ ನಮಗೆ ಭೂಮಿ ಕೊಡುವುದಾಗಿ 93 ಮಂದಿಯಿಂದ ಅರ್ಜಿಯನ್ನು ಪಡೆದುಕೊಳ್ಳಲಾಗಿತ್ತು. ಆದರೆ ಇಲ್ಲಿಯವರೆಗೂ ಭೂಮಿ ಕೊಟ್ಟಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

    2017ರಲ್ಲಿ ಇದೇ ರೀತಿ 93 ಮಂದಿ ಆದಿವಾಸಿಗಳು ಪ್ರತಿಭಟನೆ ನಡೆಸಿದ್ದ ಪರಿಣಾಮ ಸರ್ಕಾರವು ಸರ್ವೇ ನಡೆಸಿ ಭೂಮಿ ನೀಡುವಂತೆ ಸೂಚಿಸಿತ್ತು. ವಾಸವಿದ್ದ ಕುರುಹುಗಳನ್ನು ಆಧರಿಸಿ ಸರ್ವೇ ಮಾಡಿಸಿ ಶೀಘ್ರವೇ ಭೂಮಿ ನೀಡಿ ಹಕ್ಕುಪತ್ರ ನೀಡುವುದಾಗಿ ಭರವಸೆ ನೀಡಿತ್ತು. ಆದರೆ ಇಲ್ಲಿಯ ತನಕ ನೀಡಿಲ್ಲ ಎಂದು ಪ್ರತಿಭಟನಾಕಾರರು ಅಹೋರಾತ್ರಿ ಹಾಗೂ ಅನಿರ್ಧಿಷ್ಟಾವಧಿ ಪ್ರತಿಭಟನೆ ಮಾಡಿ ಆಕ್ರೋಶ ಹೊರಹಾಕಿದ್ದಾರೆ.

    ಈಗಾಗಲೇ ಆದಿವಾಸಿ ಇರುಳಿಗರು ಅರಣ್ಯಕ್ಕೆ ಕಾಲಿಟ್ಟು ಟೆಂಟ್‍ಗಳನ್ನು ನಿರ್ಮಿಸಿಕೊಂಡು ಇದೇ ಸ್ಥಳದಲ್ಲಿ ವಾಸ ಮಾಡುವುದಾಗಿ ಮಕ್ಕಳು, ಮನೆಯವರನ್ನ ಕರೆದುಕೊಂಡು ಹೋಗಿ ಠಿಕಾಣಿ ಹೂಡಿದ್ದಾರೆ.

  • ಬೇಟೆಗೆ ಹೋಗಿದ್ದ ಗರ್ಭಿಣಿಯನ್ನ ಕಚ್ಚಿ ಕಚ್ಚಿ ತಿಂದ ನಾಯಿಗಳು

    ಬೇಟೆಗೆ ಹೋಗಿದ್ದ ಗರ್ಭಿಣಿಯನ್ನ ಕಚ್ಚಿ ಕಚ್ಚಿ ತಿಂದ ನಾಯಿಗಳು

    ಪ್ಯಾರಿಸ್: ಬೇಟೆಗೆ ಹೋಗಿದ್ದ ಆರು ತಿಂಗಳ ಗರ್ಭಿಣಿಯನ್ನು ನಾಯಿಗಳು ಕಚ್ಚಿ ಕಚ್ಚಿ ತಿಂದ ಘಟನೆ ಫ್ರೆಂಚ್ ಅರಣ್ಯ ಪ್ರದೇಶದಲ್ಲಿ ನಡೆದಿದೆ.

    ಫ್ರಾನ್ಸ್ ನಿವಾಸಿ ಅಲಿಸಾ ಪಿಲಾಸ್ರ್ಕಿ (29) ಮೃತ ಗರ್ಭಿಣಿ. ಪ್ಯಾರಿಸ್‍ನಿಂದ ಈಶಾನ್ಯಕ್ಕೆ 90 ಕಿ.ಮೀ ದೂರದಲ್ಲಿರುವ ವಿಲ್ಲರ್ಸ್-ಕೌಚರ್ ಪಟ್ಟಣದ ಅರಣ್ಯ ಪ್ರದೇಶದಲ್ಲಿ ಘಟನೆ ನಡೆದಿದ್ದು, ಶನಿವಾರ ಮೃತದೇಹ ಪತ್ತೆಯಾಗಿದೆ. ಇದನ್ನೂ ಓದಿ: ಮಗುವನ್ನು ಕಚ್ಚಿ ಕಚ್ಚಿ ತಿಂದ ನಾಯಿಗಳು

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಪ್ರಾಸಿಕ್ಯೂಟರ್ ಫ್ರೆಡೆರಿಕ್ ಟ್ರಿನ್ಹ್, ಅನೇಕ ನಾಯಿಗಳು ಕಚ್ಚಿದ ಪರಿಣಾಮ ಮಹಿಳೆ ಅಧಿಕ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾರೆ ಎನ್ನುವುದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿದು ಬಂದಿದೆ. ಮಹಿಳೆಯನ್ನು ಕಚ್ಚಿದ ನಾಯಿಗಳ ಸಂಖ್ಯೆಯ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಸುಮಾರು 93 ನಾಯಿಗಳನ್ನು ಪರೀಕ್ಷಿಸಲಾಗಿದೆ. ಮಹಿಳೆಯ 5 ಸಾಕು ನಾಯಿಗಳನ್ನು ಸಹ ಪರೀಕ್ಷಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

    ಅರಣ್ಯ ಪ್ರದೇಶಕ್ಕೆ ಬೇಟೆಯಾಡಲು ಹೋಗಿದ್ದ ಪತ್ನಿ ಅಲಿಸಾ ಕಾಡು ನಾಯಿಗಳು ದಾಳಿಗೆ ಗಾಬರಿಗೊಂಡಿದ್ದಳು. ತಕ್ಷಣವೇ ಫೋನ್ ಮಾಡಿ ರಕ್ಷಣೆಗೆ ಬರುವಂತೆ ತಿಳಿಸಿದ್ದಳು. ಇದರಿಂದಾಗಿ ನಾನು ಮನೆಯಿಂದ ಹೊರಟಿದ್ದೆ. ಆದರೆ ಅಲ್ಲಿಗೆ ತಲುಪುವ ಹೊತ್ತಿಗೆ ಕಾಡು ನಾಯಿಗಳು ಅಲಿಸಾಳ ಮೇಲೆ ದಾಳಿ ಮಾಡಿ ಕಚ್ಚಿ ಕಚ್ಚಿ ತಿಂದಿದ್ದವು. ಜೊತೆಗೆ ಸಾಕು ನಾಯಿ ಗಾಯಗೊಂಡಿತ್ತು ಎಂದು ಅಲಿಸಾ ಪತಿ ಪೊಲೀಸ್‍ಗೆ ಮಾಹಿತಿ ನೀಡಿದ್ದಾರೆ.

  • ಒತ್ತುವರಿ ತೆರವು ಮಾಡದಂತೆ ಜೆಸಿಬಿ ಕೆಳಗೆ ಬಿದ್ದು ರೈತನ ಗೋಳಾಟ

    ಒತ್ತುವರಿ ತೆರವು ಮಾಡದಂತೆ ಜೆಸಿಬಿ ಕೆಳಗೆ ಬಿದ್ದು ರೈತನ ಗೋಳಾಟ

    ಚಿಕ್ಕಬಳ್ಳಾಪುರ: ಒತ್ತುವರಿ ಮಾಡಿಕೊಂಡಿರುವ ಅರಣ್ಯ ಭೂಮಿ ತೆರವು ಕಾರ್ಯಾಚರಣೆ ಮಾಡದಂತೆ ಜೆಸಿಬಿ ಕೆಳಗೆ ಬಿದ್ದು ರೈತರೊಬ್ಬರು ಗೋಳಾಡಿದ ಘಟನೆ ಜಿಲ್ಲೆಯ ತೌಡನಹಳ್ಳಿ ಗ್ರಾಮದಲ್ಲಿ ನಡೆಯಿತು.

    ತೌಡನಹಳ್ಳಿ ಗ್ರಾಮದ ಹಲವು ಮಂದಿ ರೈತರು ಅರಣ್ಯ ಭೂಮಿಯನ್ನ ಒತ್ತುವರಿ ಮಾಡಿ ಕೃಷಿ ಭೂಮಿಯನ್ನಾಗಿ ಪರಿವರ್ತಿಸಿಕೊಂಡು ಕೃಷಿಕಾಯಕ ಮಾಡುತ್ತಾ ಜೀವನ ಸಾಗಿಸುತ್ತಿದ್ದರು. ಆದ್ರೆ ಇಂದು ಸರಿ ಸುಮಾರು 38 ಎಕರೆ ಅರಣ್ಯ ಭೂಮಿ ಒತ್ತುವರಿ ತೆರವು ಮಾಡಲು ಬಿಗಿ ಪೊಲೀಸ್ ಬಂದೋಬಸ್ತ್‍ನೊಂದಿಗೆ ಅರಣ್ಯಾಧಿಕಾರಿಗಳು ಆಗಮಿಸಿದ್ದರು.

    ಈ ವೇಳೆ ತಮ್ಮ ಜಮೀನು ತಮಗೆ ಬಿಡಿ, ಒತ್ತುವರಿ ತೆರವು ಮಾಡಬೇಡಿ ಅಂತ ಅಂಗಲಾಚಿ ಬೇಡಿಕೊಂಡ ರೈತರು ಜೆಸಿಬಿ ಕೆಳಗೆ ಕುಳಿತು ಒತ್ತುವರಿ ತೆರವಿಗೆ ಅಡ್ಡಿಪಡಿಸಿದರು. ಆದರೆ ಇದ್ಯಾವುದನ್ನು ಲೆಕ್ಕಿಸಿದ ಅರಣ್ಯಾಧಿಕಾರಿಗಳು ಜೆಸಿಬಿ ಮೂಲಕ ಒತ್ತುವರಿ ತೆರವಿಗೆ ಮುಂದಾದರು. ಆಗ ಏಕಾಏಕಿ ಜೆಸಿಬಿ ಕೆಳಗೆ ಬಿದ್ದ ರೈತ ಮುನಿರಾಜು ಒತ್ತುವರಿ ತೆರವು ಮಾಡದಂತೆ ಗೋಳಾಡಿದ್ದಾರೆ. ಕೂಡಲೇ ರೈತನನ್ನ ಗುಂಡಿಯಿಂದ ಮೇಲೆಳೆದ ಪೊಲೀಸರು, ರೈತರ ಅಡ್ಡಿ ನಡುವೆಯೂ ಒತ್ತುವರಿ ಕಾರ್ಯಾಚರಣೆ ಮುಂದುವರಿಸಿದ್ದಾರೆ.

    ಸದ್ಯ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು ಪೊಲೀಸರ ಬಂದೋಬಸ್ತ್‍ನಲ್ಲಿ ಅರಣ್ಯಾಧಿಕಾರಿಗಳು ತೆರವು ಕಾರ್ಯಾಚರಣೆ ನಡೆಯುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv