Tag: foreigner

  • ಪೊಲೀಸರೆಂದು ಯಾಮಾರಿಸಿ ವಿದೇಶಿ ಪ್ರಜೆಯ ಹಣ ದೋಚಿದ ದುಷ್ಕರ್ಮಿಗಳು

    ಪೊಲೀಸರೆಂದು ಯಾಮಾರಿಸಿ ವಿದೇಶಿ ಪ್ರಜೆಯ ಹಣ ದೋಚಿದ ದುಷ್ಕರ್ಮಿಗಳು

    ಬೆಂಗಳೂರು: ತಾವು ಪೊಲೀಸರೆಂದು (Fake Police) ಹೇಳಿ, ಯಾಮಾರಿಸಿ ವಿದೇಶಿ ಪ್ರಜೆಯ (Foreigner) 4 ಲಕ್ಷ ರೂ. ಮೌಲ್ಯದ ಹಣವನ್ನು (Money) ದುಷ್ಕರ್ಮಿಗಳು ದೋಚಿರುವ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ.

    ವೈದ್ಯಕೀಯ ಚಿಕಿತ್ಸೆಗಾಗಿ ಭಾರತಕ್ಕೆ ಬಂದಿದ್ದ ಯೆಮನ್ ದೇಶದ ಪ್ರಜೆ ಗೇದ್ ಸೈಫ್ ಮೋಕ್ಬೆಲ್ ಅವರ ಹಣವನ್ನು ದುಷ್ಕರ್ಮಿಗಳು ದೋಚಿದ್ದಾರೆ. ಮೋಕ್ಬೆಲ್ ಕಮ್ಮನಹಳ್ಳಿಯ ಎಂಪೈರ್ ಹೋಟೆಲಿಗೆ ಹೋಗುತ್ತಿದ್ದ ಸಂದರ್ಭ ಕಾರನ್ನು ತಡೆದ ಅಪರಿಚಿತರು ನಾವು ಪೊಲೀಸರು, ಕಾರನ್ನು ಪರಿಶೀಲಿಸಬೇಕೆಂದು ಹೇಳಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಅಹಮದಾಬಾದ್‌ ತಂತ್ರ – ಒಂದೇ ದಿನ ಬೆಂಗಳೂರಿನಲ್ಲಿ ಮೆಗಾ ರೋಡ್‌ ಶೋ

    ಆರೋಪಿಗಳು ಬಿಳಿ ಬಣ್ಣದ ಕಾರಿನಲ್ಲಿ ಬಂದಿದ್ದು, ವಿದೇಶಿ ವ್ಯಕ್ತಿಯ ಕಾರನ್ನು ಪರಿಶೀಲಿಸಿದ್ದಾರೆ. ಬಳಿಕ ಆತನ ಪಾಕೇಟ್‌ನಲ್ಲಿದ್ದ 5,000 ಅಮೆರಿಕನ್ ಡಾಲರ್ (ಸುಮಾರು 4 ಲಕ್ಷ ರೂ.) ಅನ್ನು ದೋಚಿ ಪರಾರಿಯಾಗಿದ್ದಾರೆ.

    ಘಟನೆಗೆ ಸಂಬಂಧಿಸಿದಂತೆ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಕಾಂಗ್ರೆಸ್‌ಗೆ ಮತ ನೀಡಿದ್ರೆ ಪಾಕಿಸ್ತಾನಕ್ಕೆ ಮತ ಹಾಕಿದಂತೆ: ಯತ್ನಾಳ್

  • ಭಾರತ ಪವಿತ್ರ ಭೂಮಿಯೆಂದು ಚಪ್ಪಲಿ ಹಾಕದೇ ಓಡಾಡ್ತಿದ್ದಾರೆ ವಿದೇಶಿ ಪ್ರಜೆ

    ಭಾರತ ಪವಿತ್ರ ಭೂಮಿಯೆಂದು ಚಪ್ಪಲಿ ಹಾಕದೇ ಓಡಾಡ್ತಿದ್ದಾರೆ ವಿದೇಶಿ ಪ್ರಜೆ

    ಬೆಂಗಳೂರು: ಶಿಸ್ತು, ಶಾಂತಿಗೆ ಇನ್ನೊಂದು ಹೆಸರೇ ಕರ್ನಾಟಕ ಪೊಲೀಸ್ ಎನ್ನುವ ಹೆಸರಿದೆ. ಆದರೂ ಜನಸಾಮಾನ್ಯರಲ್ಲಿ, ಪೊಲೀಸ್ ಬಗ್ಗೆ ಇರುವ ಅಭಿಪ್ರಾಯವೇ ಬೇರೆ. ಇದರ ನಡುವೆಯೂ ಹೆಡ್ ಕಾನ್ಸ್ ಸ್ಟೇಬಲ್ ವಿದೇಶಿಗನೊಬ್ಬನ ನೋವಿಗೆ ಸ್ಪಂದಿಸಿದ ಅಪರೂಪದ ಘಟನೆ ನಡೆದಿದೆ.

    25 ವರ್ಷದ ಇಸ್ರೇಲ್ ರೈತ ಯೀಡೋ ಕಳೆದ ನವೆಂಬರ್ 24ರಂದು ಸೌಂದರ್ಯ ಸವಿಯುವ ಉದ್ದೇಶದಿಂದ ಬೆಂಗಳೂರಿಗೆ ಬಂದಿದ್ದರು. ನಗರದ ಕಬ್ಬನ್ ಪಾರ್ಕಿನ ತಂಪಾದ ಗಾಳಿಗೆ ಮೈಮರೆತು ಮಲಗಿದ್ದಾಗ, ಅವರ ಬಳಿಯಿದ್ದ 20 ಸಾವಿರ ರೂ. ಹಣ, ಐಫೋನ್, ಶ್ರೀಲಂಕಾ ಏರ್ ಇ- ಟಿಕೆಟ್, ಬಟ್ಟೆ ಬ್ಯಾಗ್ ಗಳನ್ನು ಕಳ್ಳರು ಕದ್ದಿದ್ದಾರೆ. ನಂತರ ಹಸಿದ ಹೊಟ್ಟೆಯಲ್ಲೇ ಕಬ್ಬನ್ ಪಾರ್ಕ್ ಪೊಲೀಸ್ ಸ್ಟೇಷನ್‍ಗೆ ಬಂದು ದೂರು ನೀಡಿದ್ದಾರೆ. ಆಗ ದೂರು ಸ್ವೀಕರಿಸಿದ ಮುಖ್ಯಪೇದೆ ಅತೀಕ್ ಅಹ್ಮದ್ ನೆರವಿನ ಹಸ್ತ ಚಾಚಿದ್ದಾರೆ.

    ಅದೃಷ್ಟವಶಾತ್ ಯೀಡೋ ಬರ್ಮುಡಾದ ಜೇಬಿನಲ್ಲಿ ಪಾಸ್‍ಪೋರ್ಟ್ ಹಾಗೂ ವೀಸಾ ಮಾತ್ರ ಸೇಫ್ ಆಗಿತ್ತು. ಈ ನೋವನ್ನು ಆಲಿಸಿದ ಪೊಲೀಸರು ಸಹಾಯ ಮಾಡಲು ನಿರ್ಧರಿಸಿ, ಡೂಪ್ಲಿಕೇಟ್ ಟಿಕೆಟ್ ಕೊಡಿಸಲು ಪ್ರಯತ್ನಿಸಿದ್ದಾರೆ. ಅದು ಸಾಧ್ಯವಾಗದಿದ್ದಾಗ, ಬೆಂಗಳೂರು ವಿಮಾನ ನಿಲ್ದಾಣ ಪೊಲೀಸರ ಸಹಾಯದಿಂದ ಶ್ರೀಲಂಕಾ, ಪಾಂಡಿಚೇರಿ ತಲುಪಿಸಿದ್ದಾರೆ. ಹೋಗುವಾಗ ಮುಖ್ಯಪೇದೆ ಅತೀಕ್ 1,500 ರೂ. ಕೊಟ್ಟಿದ್ದಾರೆ. ನಂತರ ಯೀಡೋ ಇಸ್ರೇಲ್ ತಲುಪಿದ್ದು, ಗುರುವಾರ ಮತ್ತೆ ಬೆಂಗಳೂರಿಗೆ ಯೀಡೋ ವಾಪಾಸ್ ಬಂದು ಅತೀಕ್ ಗೆ ಹಣ ತಲುಪಿಸಿದ್ದಾರೆ. ಮುಖ್ಯ ಪೇದೆ ಈ ಮಾನವೀಯತೆಗೆ ಹಿರಿಯ ಪೊಲೀಸ್ ಅಧಿಕಾರಿಗಳು ಶ್ಲಾಘಿಸಿದ್ದಾರೆ.

    ಯೀಡೋ ಭಾರತವನ್ನು ಪವಿತ್ರ ಭೂಮಿಯಂತೆ ಪೂಜಿಸಿ, ಇಲ್ಲಿ ಕಾಲಿಗೆ ಚಪ್ಪಲಿ ಹಾಕದೇ ಓಡಾಡಿದ್ದಾರೆ. ಮಾಂಸಹಾರ ತ್ಯಜಿಸಿದ್ದಾರೆ.

  • ವಿದೇಶಿ ಪ್ರಜೆ ಅನುಮಾನಾಸ್ಪದ ಸಾವು- ಕೊಲೆ ಶಂಕೆ

    ವಿದೇಶಿ ಪ್ರಜೆ ಅನುಮಾನಾಸ್ಪದ ಸಾವು- ಕೊಲೆ ಶಂಕೆ

    ಮಡಿಕೇರಿ: ವಿದೇಶಿ ಪ್ರಜೆಯೊಬ್ಬರು ಅನುಮಾನಾಸ್ಪದ ರೀತಿ ಸಾವನ್ನಪ್ಪಿದ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕುಶಾಲನಗರದಲ್ಲಿ ನಡೆದಿದೆ.

    ಸ್ಪೇನ್ ದೇಶದ ಕಾರ್ಲೋಸ್(65) ಮೃತ ವಿದೇಶ ಪ್ರಜೆ. ಕಾರ್ಲೋಸ್ ಸೋಮೇಶ್ವರ ಬಡಾವಣೆಯ ಐಟಿಐ ಕಾಲೇಜು ಕಟ್ಟಡದ ಮೇಲ್ಭಾಗದಲ್ಲಿ ಕಳೆದ ಎಂಟು ತಿಂಗಳಿನಿಂದ ಬಾಡಿಗೆಗೆ ವಾಸವಿದ್ದರು. ಆದರೆ ಇಂದು ಅಡುಗೆ ಮನೆಯಲ್ಲಿ ಹಾಸಿಗೆಯ ಮೇಲೆ ಮಲಗಿದ ಸ್ಥಿತಿಯಲ್ಲಿ ಶವವಾಗಿ ಕಾಣಿಸಿಕೊಂಡಿದ್ದಾರೆ.

    ಸ್ಪೇನ್ ದೇಶದ ನೌಕಾಪಡೆಯ ನಿವೃತ್ತ ಯೋಧ ಕಾರ್ಲೋಸ್ ಅವರಿಗೆ ಇಬ್ಬರು ಮಕ್ಕಳಿದ್ದಾರೆ. 2003ರಲ್ಲಿ ಕೇರಳದಲ್ಲಿ ವಾಸವಿದ್ದ ಕಾರ್ಲೋಸ್ 2008ರಲ್ಲಿ ಕುಶಾಲನಗರಕ್ಕೆ ಬಂದು ಮಕ್ಕಳ ಜೊತೆಗೆ ಸೋಮೇಶ್ವರ ಬಡಾವಣೆಯಲ್ಲಿ ವಾಸವಾಗಿದ್ದರು. ಇಲ್ಲಿನ ಟಿಬೆಟಿಯನ್ ಕ್ಯಾಂಪ್‍ನಲ್ಲಿ ಗಿಟಾರ್ ನುಡಿಸಿ ಹಣ ಸಂಪಾದನೆ ಮಾಡುತ್ತಿದ್ದರು. ಅಷ್ಟೇ ಅಲ್ಲದೆ ಸ್ಪೇನ್ ಸರ್ಕಾರದಿಂದ ಪಿಂಚಣಿ ಹಣ ಕೂಡ ಪಡೆಯುತ್ತಿದ್ದರು ಎಂದು ಪೊಲೀಸ್ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

    ಕಳೆದ ಕೆಲ ದಿನಗಳಿಂದ ಕಾರ್ಲೋಸ್ ಮಕ್ಕಳು ಮನೆಯಲ್ಲಿ ಇರಲಿಲ್ಲ. ಆದರೆ ಮನೆಯಿಂದ ಮೃತ ದೇಹ ಕೊಳೆತ ವಾಸನೆ ಬರಲು ಆರಂಭಿಸಿತ್ತು. ಹೀಗಾಗಿ ಸ್ಥಳೀಯರು ಪೋಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಕುಶಾಲನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಕಾರ್ಲೋಸ್ ಮದ್ಯ ವ್ಯಸನಿಯಾಗಿದ್ದ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮಲಗಿದ ಹಾಸಿಗೆ ಮೇಲೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಆದರೆ ಯಾರೋ ಕೊಲೆಗೈದು ಅಪರಾರಿಯಾಗಿದ್ದಾರೆ ಎಂಬ ಶಂಕೆ ಕೂಡ ವ್ಯಕ್ತವಾಗಿದೆ. ಈ ಸಂಬಂಧ ಕುಶಾಲನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

  • ವಿದೇಶಿ ಪ್ರಜೆಯೊಂದಿಗೆ ಕರ್ನಾಟಕದಲ್ಲಿ ಸಪ್ತಪದಿ ತುಳಿದ ಆಂಧ್ರ ಯುವಕ

    ವಿದೇಶಿ ಪ್ರಜೆಯೊಂದಿಗೆ ಕರ್ನಾಟಕದಲ್ಲಿ ಸಪ್ತಪದಿ ತುಳಿದ ಆಂಧ್ರ ಯುವಕ

    ಕೋಲಾರ: ಜಿಲ್ಲೆಯ ಮುಳಬಾಗಲು ಪಟ್ಟಣದ ಸೋಮೇಶ್ವರಸ್ವಾಮಿ ದೇವಸ್ಥಾನದಲ್ಲಿ ಇಂದು ಹಿಂದೂ ಸಂಪ್ರದಾಯದಂತೆ ವಿದೇಶಿ ಪ್ರಜೆಯೊಂದಿಗೆ ಆಂಧ್ರ ಪ್ರದೇಶದ ಯುವಕ ಸಪ್ತಪದಿ ತುಳಿದಿದ್ದಾನೆ.

    ಜರ್ಮನ್ ಮೂಲದ ಆರೋಗ್ಯ ಸಹಾಯಕಿ ಸ್ವಟ್ಲೋನಾ ಹಾಗೂ ಆಂಧ್ರ ಮೂಲದ ಎಂಜಿನಿಯರ್ ಜಸ್ಸಿ ಜೀವನ್ ವಿವಾಹವಾಗಿದ್ದಾರೆ. ಕಳೆದ ಒಂದು ವರ್ಷದ ಹಿಂದೆ ಸ್ವಟ್ಲೋನಾ ಅವರು ಒಂದು ಪುಸ್ತಕ ಬರೆಯುವ ಸಲುವಾಗಿ ಕರ್ನಾಟಕಕ್ಕೆ ಬಂದಿದ್ದರು. ಈ ವೇಳೆ ಜೀವನ್ ಪರಿಚಯವಾಗಿತ್ತು. ಮೊದಲು ಇಬ್ಬರು ಸ್ನೇಹಿತರಾಗಿದ್ದರು, ಕೆಲ ದಿನಗಳ ಬಳಿಕ ಸ್ನೇಹ ಪ್ರೀತಿಗೆ ತಿರುಗಿ, ಇಬ್ಬರು ಮದುವೆಯಾಗಲು ನಿರ್ಧರಿಸಿದರು.

    ಈ ಜೋಡಿಗೆ ಹಿಂದೂ ಸಂಪ್ರದಾಯದಂತೆ ಮದುವೆ ಆಗಬೇಕೆಂದು ಆಸೆ ಇದ್ದ ಕಾರಣಕ್ಕೆ ಸೋಮೇಶ್ವರಸ್ವಾಮಿ ದೇವಸ್ಥಾನದಲ್ಲಿ ಶಾಸ್ತ್ರೋಕ್ತವಾಗಿ ಸಪ್ತಪದಿ ತುಳಿದಿದ್ದಾರೆ. ಈ ಅಪರೂಪದ ಪ್ರೀತಿಗೆ ಕರ್ನಾಟಕದಲ್ಲಿದ್ದ ಜೀವನ್ ಸ್ನೇಹಿತರು ಸಹಾಯ ಮಾಡಿದ್ದು, ಅವರೇ ಮುಂದೆ ನಿಂತು ಇಬ್ಬರ ಮದುವೆಯನ್ನು ಮಾಡಿಸಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ನವಜೋಡಿ, ಒಂದು ವರ್ಷದಿಂದ ಪ್ರೀತಿಸುತ್ತಿದ್ದೆವು. ಸ್ನೇಹಿತರ ಸಹಾಯದಿಂದ ಇಂದು ಇಬ್ಬರೂ ಒಂದಾಗಿದ್ದೇವೆ. ಮದುವೆಯಾಗಿ ಹೊಸ ಜೀವನಕ್ಕೆ ಕಾಲಿಟ್ಟಿದ್ದೇವೆ ಎಂದು ಖುಷಿಯನ್ನು ಹಂಚಿಕೊಂಡರು.

  • ಅರೆಬೆತ್ತಲೆಯಾಗಿ ನಡುರಸ್ತೆಯಲ್ಲಿ ವಿದೇಶಿ ಪ್ರಜೆಯ ಪುಂಡಾಟ

    ಅರೆಬೆತ್ತಲೆಯಾಗಿ ನಡುರಸ್ತೆಯಲ್ಲಿ ವಿದೇಶಿ ಪ್ರಜೆಯ ಪುಂಡಾಟ

    ಮೈಸೂರು: ನಗರದಲ್ಲಿ ವಿದೇಶಿ ಪ್ರಜೆಯೊಬ್ಬ ಕುಡಿದು ಮನಸೋ ಇಚ್ಚೆ ಬಂದಂತೆ ಪುಂಡಾಟ ಮಾಡಿರುವ ಘಟನೆ ಮೈಸೂರು ನಂಜನಗೂಡು ರಸ್ತೆಯ ಬಳಿಯ ಮೈದಾನದಲ್ಲಿ ನಡೆದಿದೆ.

    ಮೈದಾನದಲ್ಲಿ ಅರೆಬೆತ್ತೆಯಾಗಿ ದಾಂಧಲೆ ಮಾಡಿದ ವಿದೇಶಿಗ ಸಿಕ್ಕ ಸಿಕ್ಕ ದ್ವಿಚಕ್ರ ವಾಹನಗಳನ್ನ ಹಿಡಿದೆಳೆದು ಕೆಳಗೆ ಬೀಳಿಸಿದ್ದಾನೆ. ಕುಡಿದ ಮತ್ತಿನಲ್ಲಿ ಪುಂಡಾಟಿಕೆ ನಡೆಸುತ್ತಿದ್ದ ವಿದೇಶಿಗನ ನಿಯಂತ್ರಿಸಲು ಸ್ಥಳೀಯರು ಹರ ಸಾಹಸ ಪಟ್ಟಿದ್ದಾರೆ. ವಿದೇಶಿಗನ ಪುಂಡಾಟವನ್ನು ಸ್ಥಳದಲ್ಲಿದ್ದವರು ಮೊಬೈಲಿನಲ್ಲಿ ರೆಕಾರ್ಡ್ ಮಾಡಿದ್ದಾರೆ.

    ಸ್ಥಳೀಯರೊಬ್ಬರು ಮೈದಾನದಲ್ಲಿ ಬೈಕಿನಲ್ಲಿ ಹೋಗುತ್ತಿದ್ದಾಗ ಅಡ್ಡಗಟ್ಟಿ ಪುಂಡಾಟ ಮಾಡಿದ್ದಾನೆ. ಸವಾರನನ್ನು ಮುಂದಕ್ಕೆ ಹೋಗಲು ಬಿಡದೆ ಹಿಂಬದಿಯಿಂದ ಬೈಕ್ ಹಿಡಿದು ಎಳೆದಾಡಿದ್ದಾನೆ. ಬಳಿಕ ಅಷ್ಟು ದೂರ ಹೋದ ಬಳಿ ಬಿಡದೆ ಸವಾರನನ್ನು ಕೆಳಗೆ ಬೀಳಿಸಿದ್ದಾನೆ. ಅಷ್ಟೇ ಅಲ್ಲದೇ ಸವಾರನ ಹೆಲ್ಮೆಟ್ ಕಿತ್ತುಕೊಂಡು ಎಸೆದಾಡಿದ್ದಾನೆ. ಕೆಳಗೆ ಬಿದ್ದ ಸವಾರ ಹೇಗೋ ಎದ್ದಿದ್ದಾರೆ. ಆದರೂ ಮತ್ತೆ ಬಿಡದೇ ಹೋಗಿ ಕಾಟ ಕೊಟ್ಟಿದ್ದಾನೆ. ಈ ಎಲ್ಲ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿದೆ.

    ಕೊನೆಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ವಿದೇಶಿಗನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಘಟನೆಯಿಂದ ಕೆಲಕಾಲ ಆತಂಕದ ವಾತವರಣ ನಿರ್ಮಾಣವಾಗಿತ್ತು. ವಿದೇಶಿಗನ ವಶಕ್ಕೆ ಪಡೆದ ಪೊಲೀಸರು ಆತನ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv