Tag: foreign

  • ವಿದೇಶದಿಂದ ಬಂದವರ ಕೈ ಮೇಲೆ ಸೀಲ್

    ವಿದೇಶದಿಂದ ಬಂದವರ ಕೈ ಮೇಲೆ ಸೀಲ್

    ಬೆಂಗಳೂರು: ವಿದೇಶದಿಂದ ಬಂದವರ ಮೇಲೆ ಮೊದಲೇ ಈ ಕ್ರಮ ಕೈಗೊಂಡಿದ್ದರೆ ಇಷ್ಟೊಂದು ವೈರಸ್ ಎಫೆಕ್ಟ್ ಆಗುತ್ತಿರಲಿಲ್ಲವೇನೋ ಎಂಬ ಮಾತು ಕೇಳಿ ಬರುತ್ತಿದೆ. ಯಾಕೆಂದರೆ ಇದೀಗ ಕರ್ನಾಟಕ ಆರೋಗ್ಯ ಇಲಾಖೆ ವಿದೇಶದಿಂದ ಬಂದವರ ಕೈ ಮೇಲೆ ಸೀಲ್ ಹಾಕುತ್ತಿದೆ.

    ಕರ್ನಾಟಕ ಆರೋಗ್ಯ ಇಲಾಖೆಯಿಂದ ಸೀಲ್ ಹಾಕಲಾಗುತ್ತಿದೆ. ವಿದೇಶದಿಂದ ಬಂದ ಪ್ರತಿಯೊಬ್ಬರ ಮೇಲೂ 15 ದಿನಗಳ ಕಾಲ ಹೋಮ್ ಕ್ವಾರೆಂಟೈಲ್ ಆದೇಶವಿರುವ ಸೀಲ್ ಹಾಕಲಾಗುತ್ತಿದೆ. ಗುರುವಾರ ಏರ್‌ಪೋರ್ಟ್‌ಗೆ ಬಂದವರ ಕೈಗಳ ಮೇಲೆ ಸೀಲ್ ಹಾಕಲಾಗಿದೆ.

    https://twitter.com/DHFWKA/status/1240525028703125504

    ಸೀಲ್ ಹಾಕಿಸಿಕೊಂಡವರು ಏಪ್ರಿಲ್ 3 ವರೆಗೆ ಹೋಮ್ ಕ್ವಾರೆಂಟೈನ್‍ನಲ್ಲಿರಬೇಕು. ಅಂದರೆ ನಿಗಾದಲ್ಲಿರಬೇಕು. ಈ ವೇಳೆ ಹೊರಗೆ ಸುತ್ತುವುದು ಯಾವುದನ್ನೂ ಮಾಡುವಂತಿಲ್ಲ. ವಿಮಾನದಿಂದ ಬಂದಿಳಿದ ಎಲ್ಲರ ಎಡಗೈಗೆ ಸೀಲ್ ಹಾಕಲಾಗಿದೆ. ಹೋಮ್ ಕ್ವಾರೆಂಟೈನ್‍ನಲ್ಲಿದ್ದ ದಿನದಲ್ಲಿ ಕೊರೊನಾ ವೈರಸ್ ಲಕ್ಷಣಗಳೇನೂ ಕಂಡುಬರದಿದ್ದರೆ ಮನೆಗೆ ಕಳಿಸಲಾಗುತ್ತದೆ.

  • ವಿದೇಶದಿಂದ ಬಂದ ಕೇರಳಿಗರು ಖಾಸಗಿ ವಾಹನ ಬಳಸುವಂತಿಲ್ಲ – ದ.ಕ ಜಿಲ್ಲಾಡಳಿತ ಕಟ್ಟೆಚ್ಚರ

    ವಿದೇಶದಿಂದ ಬಂದ ಕೇರಳಿಗರು ಖಾಸಗಿ ವಾಹನ ಬಳಸುವಂತಿಲ್ಲ – ದ.ಕ ಜಿಲ್ಲಾಡಳಿತ ಕಟ್ಟೆಚ್ಚರ

    ಮಂಗಳೂರು: ದೇಶದಿಂದ ಬಂದ ಕೇರಳಿಗರಿಗೆ ಖಾಸಗಿ ವಾಹನ ಬಳಸುವಿಕೆಯನ್ನು ಮಂಗಳೂರು ವಿಮಾನ ನಿಲ್ದಾನದಲ್ಲಿ ಜಿಲ್ಲಾಡಳಿತ ನಿಷೇಧಿಸಿದೆ.

    ಕೇರಳದಿಂದ ಬಂದ ಪ್ರಯಾಣಿಕರಿಗೆ ಜಿಲ್ಲಾಡಳಿತ ಸರ್ಕಾರಿ ಬಸ್ ಸೇವೆ ಕಲ್ಪಿಸಿದೆ. ಕರ್ನಾಟಕದ ಸರ್ಕಾರಿ ಬಸ್ ನಲ್ಲಿ ಕೇರಳದ ಗಡಿವರೆಗೂ ಡ್ರಾಪ್ ಮಾಡಲಾಗುತ್ತಿದೆ. ಇಂದು ದುಬೈನಿಂದ ಬಂದ ಪ್ರಯಾಣಿಕರನ್ನು 3 ಬಸ್ ನಲ್ಲಿ ತಲಪಾಡಿಯವರೆಗೂ ಬಿಡಲಾಗಿದೆ.

    ವಿಮಾನದಲ್ಲಿ ಬಂದ ಪ್ರಯಾಣಿಕರು ತಲಪಾಡಿಯಿಂದ ತಮ್ಮ ಖಾಸಗಿ ವಾಹನಗಳಲ್ಲಿ ಕೇರಳಕ್ಕೆ ಪ್ರಯಾಣ ಬೆಳಸಬೇಕಿದ್ದು, ವಿದೇಶದಿಂದ ಬಂದವರಿಗೆ ಮಂಗಳೂರಿನಲ್ಲಿ ಸುತ್ತಾಡಲು ನಿರ್ಬಂಧ ಹೇರಲಾಗಿದೆ. ವಿದೇಶದಿಂದ ಬಂದವರು ವಿಮಾನ ನಿಲ್ದಾಣದಿಂದ ಸೀದಾ ಬಸ್ ಹತ್ತಬೇಕು ಎಂದು ಕಟ್ಟಪ್ಪಣೆ ಮಾಡಲಾಗಿದೆ.

  • ವಿದೇಶದಿಂದ ವಾಪಸ್ಸಾದವರ ಪ್ರತ್ಯೇಕಿಕರಣದ ಗುರುತಾಗಿ ಕೈ ಮೇಲೆ ಸ್ಟ್ಯಾಂಪಿಂಗ್

    ವಿದೇಶದಿಂದ ವಾಪಸ್ಸಾದವರ ಪ್ರತ್ಯೇಕಿಕರಣದ ಗುರುತಾಗಿ ಕೈ ಮೇಲೆ ಸ್ಟ್ಯಾಂಪಿಂಗ್

    – ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕ್ರಮ

    ಬೆಂಗಳೂರು: ರಾಜ್ಯದಲ್ಲಿ ಹರಡುತ್ತಿರುವ ಕೊರೊನಾ ವೈರಸ್ ಸೋಂಕಿನ ಹಿನ್ನೆಲೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿದೇಶದಿಂದ ಬಂದ ಪ್ರಯಾಣಿಕರ ಕೈಗಳ ಮೇಲೆ ಸ್ಟ್ಯಾಂಪಿಂಗ್ ಮಾಡಲಾಗುತ್ತಿದೆ.

    ವಿದೇಶದಿಂದ ಭಾರತಕ್ಕೆ ಬಂದ ಪ್ರಜೆಗಳಿಂದ ಕೊರೊನಾ ಸೋಂಕು ದೇಶದಲ್ಲಿ ಹರಡಿದೆ. ರಾಜ್ಯದಲ್ಲೂ ಹೀಗೆ ವಿದೇಶಕ್ಕೆ ಭೇಟಿ ಕೊಟ್ಟು ವಾಪಸ್ಸಾಗಿರುವ ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 15ಕ್ಕೆ ಏರಿದ್ದು, ಸೋಂಕು ಹರಡುವುದನ್ನು ತಡೆಗಟ್ಟಲು ವಿದೇಶದಿಂದ ರಾಜ್ಯಕ್ಕೆ ಹಿಂದಿರುಗುತ್ತಿರುವ ಪ್ರಯಾಣಿಕರ ಮೇಲೆ ನಿಗಾ ವಹಿಸಲು ರಾಜ್ಯ ಸರ್ಕಾರ ಕ್ರಮ ತೆಗೆದುಕೊಂಡಿದೆ. ವಿಮಾನ ನಿಲ್ದಾಣದಲ್ಲೇ ಪ್ರಯಾಣಿಕರಿಗೆ 14 ದಿನಗಳ ಪ್ರತ್ಯೇಕಿಕರಣದ ಗುರುತಾಗಿ ಕೈ ಮೇಲೆ ಸ್ಟ್ಯಾಂಪಿಂಗ್ ಮಾಡಲು ಸಿಬ್ಬಂದಿಗೆ ಸರ್ಕಾರ ಸೂಚಿಸಿದೆ. ಆದ್ದರಿಂದ ವಿಮಾನ ನಿಲ್ದಾಣದ ಸಿಬ್ಬಂದಿ ವಿದೇಶದಿಂದ ಬಂದ ಪ್ರಯಾಣಿಕರ ಕೈ ಮೇಲೆ ಸ್ಟ್ಯಾಂಪಿಂಗ್ ಮಾಡಿ ಗುರುತಿಸುತ್ತಿದ್ದಾರೆ.

    ಕಳೆದ ರಾತ್ರಿಯಿಂದ ವಿದೇಶದಿಂದ ಆಗಮಿಸುತ್ತಿರುವ ಪ್ರಯಾಣಿಕರಿಗೆ ಸ್ಟ್ಯಾಂಪಿಂಗ್ ಮಾಡಲಾಗುತ್ತಿದೆ. ಮತ್ತೊಂದೆಡೆ ದೇವನಹಳ್ಳಿಯ ಆಕಾಶ್ ಆಸ್ವತ್ರೆಯಲ್ಲಿ ಎಂದಿನಂತೆ ಸ್ಕ್ರೀನಿಂಗ್ ಮಾಡಲಾಗುತ್ತಿದ್ದು ಅಲ್ಲೂ ಸಹ ಸ್ಟ್ಯಾಂಪಿಂಗ್ ಮಾಡಲಾಗುತ್ತಿದೆ. ದುಬೈ ಸೇರಿದಂತೆ ಹಲವು ದೇಶಗಳಿಂದ ಬಂದಿದ್ದ 230 ಪ್ರಯಾಣಿಕರಿಗೆ ಸ್ಕ್ರೀನಿಂಗ್ ಮಾಡಲಾಗಿದೆ. ಈ ವೇಳೆ ಒರ್ವನಿಗೆ ಎ ಗ್ರೇಡ್, ಮೂವರಿಗೆ ಬಿ ಗ್ರೇಡ್ ಮತ್ತು 226 ಜನರಿಗೆ ಸಿ ಗ್ರೇಡ್ ಬಂದಿದೆ. ಹೀಗಾಗಿ ಸಿ ಗ್ರೇಡ್ ಬಂದವರಿಗೆ ಸ್ಟ್ಯಾಂಪಿಂಗ್ ಮಾಡಿ ಹೋಂ ಕ್ವಾರಂಟೈನ್‍ಗೆ ಕಳಿಸಲಾಗಿದೆ. ಸ್ಟ್ಯಾಂಪಿಂಗ್‍ನಲ್ಲಿ ದಿನಾಂಕ ಸಮೇತ ಪ್ರಯಾಣಿಕರ ಎಡಗೈಗೆ ಹೊಂ ಕ್ವಾರಂಟೈನ್ ಅಂತ ಗುರುತು ಹಾಕಲಾಗುತ್ತಿದೆ.

    https://twitter.com/sriramulubjp/status/1240500845092823040

    ಈ ಬಗ್ಗೆ ಆರೋಗ್ಯ ಸಚಿವ ಶ್ರೀರಾಮುಲು ಅವರು ಟ್ವೀಟ್ ಮಾಡಿ ಮಾಹಿತಿ ತಿಳಿಸಿದ್ದಾರೆ. ಕೊರೊನಾ ಸೋಂಕು ಹರಡುವುದನ್ನು ತಡೆಯಲು ಮುಂಜಾಗೃತ ಕ್ರಮವಾಗಿ ವಿದೇಶದಿಂದ ಬೆಂಗಳೂರಿಗೆ ಬರುತ್ತಿರುವ ಪ್ರಯಾಣಿಕರಿಗೆ 14 ದಿನಗಳ ಪ್ರತ್ಯೇಕಿಕರಣದ ಗುರುತಾಗಿ, ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಕೈಗಳ ಮೇಲೆ ಸ್ಟ್ಯಾಂಪಿಂಗ್ ಮಾಡಲಾಗುತ್ತಿದೆ ಎಂದು ಬರೆದು #IndiaFightsCorona ಅಂತ ಹ್ಯಾಷ್‍ಟ್ಯಾಗ್ ಜೊತೆ ಟ್ವೀಟ್ ಮಾಡಿದ್ದಾರೆ.

    ಇಂದು ಕೊಡಗಿನಲ್ಲಿ ಮೊದಲ ಕೊರೊನಾ ಸೋಂಕು ದೃಢಪಟ್ಟಿದೆ. ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ. ಈ ಕುರಿತು ಟ್ವೀಟ್ ಮಾಡಿರುವ ಆರೋಗ್ಯ ಸಚಿವ ಶ್ರೀರಾಮುಲು, ಇಂದು ಕೊಡಗಿನಲ್ಲಿ ಮೊದಲ #COVID19 ಸೋಂಕು ದೃಢಪಟ್ಟಿದ್ದು, ಈ ವ್ಯಕ್ತಿಯು ಸೌದಿ ಅರೇಬಿಯಾ ಪ್ರವಾಸದಿಂದ ಹಿಂದಿರುಗಿದ್ದರು. ಇವರನ್ನು ಪ್ರತ್ಯೇಕಿಸಲ್ಪಟ್ಟ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡಿಸಿ ನಿಗಾವಹಿಸಲಾಗಿದೆ. ಇದು ಕರ್ನಾಟಕದ 15ನೇ #COVID19 ಪ್ರಕರಣವಾಗಿದೆ ಎಂದು ತಿಳಿಸಿದ್ದಾರೆ.

    ಇಂದು ಕೊಡಗಿನಲ್ಲಿ ಮೊದಲ #COVID19 ಸೋಂಕು ದೃಢಪಟ್ಟಿದ್ದು, ಈ ವ್ಯಕ್ತಿಯು ಸೌದಿ ಅರೇಬಿಯಾ ಪ್ರವಾಸದಿಂದ ಹಿಂದಿರುಗಿದ್ದರು. ಇವರನ್ನು ಪ್ರತ್ಯೇಕಿಸಲ್ಪಟ್ಟ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡಿಸಿ ನಿಗಾವಹಿಸಲಾಗಿದೆ. ಇದು ಕರ್ನಾಟಕದ 15ನೇ #COVID19 ಪ್ರಕರಣವಾಗಿದೆ.

    ಬುಧವಾರ ಒಟ್ಟು 37 ಮಂದಿ ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ. ಈ ಪೈಕಿ ಬೆಂಗಳೂರಿನಲ್ಲಿ 25, ಉತ್ತರ ಕನ್ನಡ ಮತ್ತು ಕಲಬುರಗಿಯಲ್ಲಿ 3, ದಕ್ಷಿಣ ಕನ್ನಡ ಮತ್ತು ಕೊಡಗಿನಲ್ಲಿ 2, ಬಳ್ಳಾರಿ, ಚಿಕ್ಕಮಗಳೂರಿನಲ್ಲಿ ತಲಾ ಒಬ್ಬೊಬ್ಬರು ದಾಖಲಾಗಿದ್ದಾರೆ. ಒಟ್ಟು ರಾಜ್ಯದಲ್ಲಿ 80 ಮಂದಿ ಆಸ್ಪತ್ರೆಯ ನಿಗಾದಲ್ಲಿದ್ದಾರೆ.

  • ವಿದೇಶದಿಂದ ಮಾಲೀಕನ ಕಂಡು ಮನೆಗೆ ಬೀಗ ಹಾಕ್ಕೊಂಡೋದ ಬಾಡಿಗೆದಾರ

    ವಿದೇಶದಿಂದ ಮಾಲೀಕನ ಕಂಡು ಮನೆಗೆ ಬೀಗ ಹಾಕ್ಕೊಂಡೋದ ಬಾಡಿಗೆದಾರ

    ಚಿಕ್ಕಮಗಳೂರು: ವಿದೇಶದಲ್ಲಿ ಇದ್ದಾರೆ ಅಂದ್ರೆ ಹೆಮ್ಮೆ ಪಡುವ ಕಾಲವೊಂದಿತ್ತು. ಆದರೆ ಈಗ ಫಾರಿನ್, ಅಬ್ರಾಡು ಅಂದ್ರೆ ಭಯದಿಂದ ಊರು ಬೀಡೋ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಫಿನಾಡಲ್ಲೂ ಅಂತಹದ್ದೊಂದು ಹಾಸ್ಯ ಪ್ರಸಂಗ ನಡೆದಿದೆ.

    ವಿದೇಶದಿಂದ ಚಿಕ್ಕಮಗಳೂರಿಗೆ ವಾಪಸ್ಸಾದವರನ್ನ ಕಂಡು ಬಾಡಿಗೆದಾರ ಮನೆಗೆ ಬೀಗ ಹಾಕಿಕೊಂಡು ಮನೆ ಬಿಟ್ಟು ಹೋಗಿರೋ ಘಟನೆ ನಗರದಲ್ಲಿ ನಡೆದಿದೆ.

    ನಗರದ ಬೈಪಾಸ್ ರಸ್ತೆಯಲ್ಲಿ ಜಿಲ್ಲೆಯ ಕಾಲೇಜೊಂದರಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದೋರು ಬಾಡಿಗೆ ಮನೆಯಲ್ಲಿ ವಾಸವಿದ್ರು. ದುಬೈಗೆ ಹೋಗಿದ್ದ ಮನೆ ಮಾಲೀಕ ಇತ್ತೀಚೆಗೆ ಚಿಕ್ಕಮಗಳೂರಿಗೆ ವಾಪಸ್ಸಾಗಿದ್ದರು. ವಿದೇಶಕ್ಕೆ ಹೋಗಿದ್ದ ಮನೆ ಮಾಲೀಕ ವಾಪಸ್ ಬಂದು, “ಏನ್ರಿ ಮೇಷ್ಟ್ರೇ ಏನ್ ಸಾಮಾಚಾರ, ಬಾಡಿಗೆ ಕೊಡ್ತೀರಾ ಎಂದು ಕೇಳಿದ್ದಾರೆ ಅಷ್ಟೆ”. ಮನೆಯಲ್ಲಿ ಬಾಡಿಗೆ ಇದ್ದ ಮೇಷ್ಟ್ರು ಕೊರೊನಾ ಆತಂಕದಿಂದ ಬಾಡಿಗೆಯನ್ನೂ ನೀಡದೆ, ಮಾಲೀಕರಿಗೂ ಹೇಳದೆ, ಮನೆಗೆ ಬೀಗ ಹಾಕಿಕೊಂಡು ಹೋಗಿದ್ದಾರೆ.

    ಜಿಲ್ಲೆಯಲ್ಲಿ ಈವರೆಗೂ ಒಂದೇ ಒಂದು ಕೊರೊನಾ ಪಾಸಿಟಿವ್ ಕೇಸಿಲ್ಲ. ಹಾಗಾಗಿ ಕಾಫಿನಾಡಿನ ಜನ ವಿದೇಶದಿಂದ ಬಂದವರು ಅಂದ್ರೆ ಮಾತನಾಡೋದಕ್ಕಿರಲಿ, ನೋಡೋದಕ್ಕೂ ಹೆದರುವ ಸ್ಥಿತಿ ನಿರ್ಮಾಣವಾಗಿದೆ.

  • ವಿದೇಶದಿಂದ ಬಂದವರಿಗೆ ಸ್ಟಾಂಪ್, 15 ದಿನ ಕಡ್ಡಾಯ ಗೃಹಬಂಧನ: ಸುಧಾಕರ್

    ವಿದೇಶದಿಂದ ಬಂದವರಿಗೆ ಸ್ಟಾಂಪ್, 15 ದಿನ ಕಡ್ಡಾಯ ಗೃಹಬಂಧನ: ಸುಧಾಕರ್

    – ಜನರ ಬೆಂಬಲ ಸಿಕ್ಕರೆ ನಿಯಂತ್ರಣ ಆಗುತ್ತೆ
    – ಎಲ್ಲ ಜಿಲ್ಲೆಗಳಲ್ಲಿ ಲ್ಯಾಬ್ ತೆರೆಯುತ್ತೇವೆ

    ಬೆಂಗಳೂರು: ವಿದೇಶದಿಂದ ಬಂದವರ ಬಲಗೈಗೆ ಸ್ಟಾಂಪ್ ಹಾಕುತ್ತೇವೆ ಹಾಗೂ 15 ದಿನ ಕಡ್ಡಾಯವಾಗಿ ಪ್ರತ್ಯೇಕಗೊಳಿಸಲು ತೀರ್ಮಾನ ಮಾಡಿದ್ದೇವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಕೆ.ಸುಧಾಕರ್ ಅವರು ಹೇಳಿದ್ದಾರೆ.

    ವಿಧಾನಸಭೆಯಲ್ಲಿ ಮಾತನಡಿದ ಅವರು, ಕೊರೊನಾ ವೈರಸ್ ಸಾಂಕ್ರಾಮಿಕ ರೋಗ ಎಂದು ವಿಶ್ವಸಂಸ್ಥೆ ಘೋಷಣೆ ಮಾಡಿದೆ. ವೈದ್ಯಕೀಯ ಶಿಕ್ಷಣ, ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು ಸಿಎಂ ಸೂಚನೆ ಕೊಟ್ಟಿದ್ದರು. ಇವತ್ತು ಎರಡು ತಿಂಗಳನಿಂದ ವಿಮಾನ ನಿಲ್ದಾಣ, ಬಂದರುಗಳಲ್ಲಿ ತಪಾಸಣೆ ಮಾಡುತ್ತಿದ್ದೇವೆ. ಎ,ಬಿ,ಸಿ ಗ್ರೂಪ್‍ಗಳನ್ನು ಮಾಡಿ ಪ್ರತ್ಯೇಕಗೊಳಿಸಿ ತಪಾಸಣೆ ಮಾಡಿದ್ದೇವೆ ಎಂದರು.

    ಕೊರೊನಾ ತಡೆಗಟ್ಟಲು 200 ಕೋಟಿ ಹಣವನ್ನು ರಾಜ್ಯ ಸರ್ಕಾರ ತೆಗೆದು ಇಟ್ಟಿದೆ. ದೇಶದಲ್ಲಿ ಮೊದಲ ಬಾರಿಗೆ ಕರ್ನಾಟಕ ಹಣವನ್ನ ಇಟ್ಟಿದೆ. ವಿದೇಶಗಳಿಂದ ಬರುವವರನ್ನು 15 ದಿನ ಕಡ್ಡಾಯವಾಗಿ ಪ್ರತ್ಯೇಕಗೊಳಿಸಲಾಗುವುದು. ಖಾಸಗಿ ರೆಸಾರ್ಟ್ಸ್, ಹೋಟೆಲ್ಸ್, ಆಸ್ಪತ್ರೆಗಳಲ್ಲಿ 15 ದಿನ ಗೃಹ ಬಂಧನದಲ್ಲಿ ಇಡುತ್ತೇವೆ. ಮದುವೆ ಸಮಾರಂಭಗಳಲ್ಲಿ 150 ಜನರಿಗೆ ಮಾತ್ರ ಅಡುಗೆ ಮಾಡಬೇಕು. ವಿಧಾನಸೌಧ, ವಿಕಾಸಸೌಧಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದರು. ಇದನ್ನು ಓದಿ: ಮಾರ್ಚ್ 31ರವರೆಗೆ ಬಂದ್ ವಿಸ್ತರಣೆ – 4 ಮಂದಿ ಸಚಿವರ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್

    ಅಮೆರಿಕ, ಇಟಲಿ, ಸ್ಪೇನ್ ದೇಶಗಳು ಎಚ್ಚರ ತಪ್ಪಿದ್ದವು. ಹಾಗಾಗಿ ಆ ದೇಶಗಳಲ್ಲಿ ಕೊರೊನಾ ಕೇಸ್‍ಗಳು ತುಂಬಾ ಇವೆ. ಆ ದೇಶಗಳಲ್ಲಿ ಫಸ್ಟ್ ಸ್ಟೇಜ್ ಬಂದ ಬಳಿಕ ರಜೆ ಘೋಷಣೆಯಾಗಿತ್ತು. ರಜೆ ಘೋಷಣೆಯಿಂದ ಸೋಂಕಿತ ಮಂದಿ ಮಾಲ್‍ಗಳಿಗೆಲ್ಲ ಓಡಾಡಿದರು. ನಂತರ ದಿಢೀರನೇ ಆ ದೇಶಗಳಲ್ಲಿ ಕೊರೊನಾ ಹಬ್ಬಿತ್ತು. ಆ ದೇಶಗಳು ಮಾಡಿದ ತಪ್ಪು ನಾವು ಮಾಡಿಲ್ಲ. ನಮ್ಮಲ್ಲಿ ಇನ್ನು ಎರಡು ಮೂರು ವಾರ ಕೊರೊನಾ ನಿಗ್ರಹಕ್ಕೆ ಮುಂದಾಗಬೇಕು. ಜನರ ಬೆಂಬಲ ಸಿಕ್ಕಿದರೆ ಕೊರೊನಾ ತಡೆಗಟ್ಟುವುದು ಯಶಸ್ವಿ ಆಗಲಿದೆ ಎಂದು ಸುಧಾಕರ್ ಹೇಳಿದರು.

    ನಾಲ್ವರು ಸಚಿವರ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ರಚನೆ ಮಾಡಲಾಗಿದೆ. ಹೊರದೇಶದಿಂದ ಬರುವ ಜನರಿಗೆ ಬಲಗೈಗೆ ಸ್ಟಾಂಪ್ ಹಾಕುತ್ತೇವೆ. 15 ದಿನ ಅವರು ಯಾರನ್ನೂ ಸಂಪರ್ಕ ಮಾಡಬಾರದು ಎಂಬ ಆದೇಶ ಮಾಡಿದ್ದೇವೆ. ಇದುವರೆಗೆ 1,17,306 ಪ್ರಯಾಣಿಕರನ್ನು ರಾಜ್ಯದಲ್ಲಿ ತಪಾಸಣೆ ಮಾಡಿದ್ದೇವೆ. ಬೆಂಗಳೂರಲ್ಲಿ 82,276 ಪ್ರಯಾಣಿಕರು, ಮಂಗಳೂರಲ್ಲಿ 29,477 ಪ್ರಯಾಣಿಕರನ್ನು ತಪಾಸಣೆ ಮಾಡಿದ್ದೇವೆ. ಪ್ರಪಂಚದಲ್ಲಿ ಒಟ್ಟು 88,881 ಪಾಸಿಟಿವ್ ಕೊರೊನಾ ಪ್ರಕರಣಗಳು ಇದ್ದವು. ಇದರಲ್ಲಿ 68,798 ಕೊರೊನಾ ಪೀಡಿತರು ಗುಣಮುಖರಾಗಿದ್ದಾರೆ. ಹಾಗಾಗಿ ಕೊರೊನಾ ಸೋಂಕು ಬಂದ ತಕ್ಷಣ ಸತ್ತು ಹೋಗುತ್ತಾರೆ ಎಂದು ಭಯ ಬೀಳುವುದು ಬೇಡ ಎಂದು ಸ್ಪಷ್ಟಪಡಿಸಿದರು.

    ದೇಶದಲ್ಲಿ 54 ಲ್ಯಾಬ್ ಇವೆ. ಕರ್ನಾಟಕದಲ್ಲಿ 5 ಲ್ಯಾಬ್, ಬೇರೆ ರಾಜ್ಯಗಳಿಗೆ ಹೋಲಿಸಿದಾಗ ಕರ್ನಾಟಕದಲ್ಲಿಯೇ ಹೆಚ್ಚು ಲ್ಯಾಬ್ ಇವೆ. ಪ್ರಾದೇಶಿಕ ವಿಭಾಗವಾರು ಲ್ಯಾಬ್‍ಗಳನ್ನು ಹೆಚ್ಚಳ ಮಾಡುತ್ತೇವೆ. ಲ್ಯಾಬ್‍ಗಳನ್ನು ಜಿಲ್ಲೆಗಳಿಗೂ ವಿಸ್ತರಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ. ಇವತ್ತು ತುರ್ತು ಸಂಪುಟ ಸಭೆ ಕರೆದು ಸಿಎಂ ಚರ್ಚೆ ಮಾಡಿ ನಿರ್ಣಯಗಳನ್ನು ತೆಗೆದುಕೊಂಡಿದ್ದಾರೆ ಎಂದರು.

    ವೈದ್ಯರು, ವೈದ್ಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರಿಗೆ ಮತ್ತು ಎನ್‍ಜಿಒಗಳಿಗೆ ಇನ್‍ಸೆಂಟಿವ್ ಕೊಡಲು ಸಂಪುಟ ಸಭೆಯಲ್ಲಿ ನಿರ್ಧಾರ ಮಾಡಿದ್ದೇವೆ ಎಂದು ತಿಳಿಸಿದರು.

  • ಕೊರೊನಾ ಭೀತಿ – 90 ಎನ್‌ಆರ್‌ಐಗಳಿಗೆ ಉಡುಪಿಯಲ್ಲಿ ಗೃಹ ಬಂಧನ

    ಕೊರೊನಾ ಭೀತಿ – 90 ಎನ್‌ಆರ್‌ಐಗಳಿಗೆ ಉಡುಪಿಯಲ್ಲಿ ಗೃಹ ಬಂಧನ

    ಉಡುಪಿ: ರಾಜ್ಯಾದ್ಯಂತ ಕೊರೊನಾ ಭೀತಿ ಇದೆ. ಕರಾವಳಿ ಜಿಲ್ಲೆಯಲ್ಲಿ 10 ಪ್ರಕರಣ ನೆಗೆಟಿವ್ ಬಂದಿದ್ದು, 90 ಜನ ಎನ್‌ಆರ್‌ಐಗಳನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ.

    ಎಲ್ಲೆಡೆ ಕೊರೊನಾ ಭೀತಿ ಇರುವುದರಿಂದ ಉಡುಪಿ ಜಿಲ್ಲೆಯಲ್ಲಿ 90 ಮಂದಿಗೆ ಗೃಹ ಬಂಧನ ಹಾಕಲಾಗಿದೆ. ಕಳೆದ ಫೆಬ್ರವರಿ 29 ರಿಂದ ಈಚೆಗೆ ವಿದೇಶದಿಂದ ಉಡುಪಿಗೆ 90 ಜನ ಎನ್‌ಆರ್‌ಐಗಳು ಬಂದಿದ್ದಾರೆ. ಅವರೆಲ್ಲರ ಮೇಲೆ ಆರೋಗ್ಯ ಇಲಾಖೆ ನಿಗಾ ಇರಿಸಿದೆ.

    ಫೆಬ್ರವರಿ 29 ರಿಂದ ಕೊರೊನಾ ಬಗ್ಗೆ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಸಂಪೂರ್ಣ ನಿಗಾ ವಹಿಸಲಾಗಿದೆ. ಕುವೈಟ್, ಜರ್ಮನಿ, ಇಸ್ರೇಲ್. ಇಟಲಿಯಿಂದ ಬಂದವರೇ ನಮ್ಮಲ್ಲಿ ಜಾಸ್ತಿ ಜನ ಇದ್ದಾರೆ. ಅವರವರ ಮನೆಯಲ್ಲೇ ಎನ್‍ಆರ್‍ಐ ಗಳ ಮೇಲೆ ನಿಗಾ ಇಟ್ಟಿದ್ದು, ಪ್ರತಿದಿನ ಕರೆ ಮಾಡಿ ವಿಚಾರಣೆ ಮಾಡುತ್ತೇವೆ ಎಂದು ಡಿಎಚ್‍ಒ ಮಾಹಿತಿ ನೀಡಿದ್ದಾರೆ.

    ವಿದೇಶದಿಂದ ಉಡುಪಿಗೆ ಬಂದವರನ್ನು 14 ದಿನ ಮನೆಯಿಂದ ಹೊರಗೆ ಬಾರದಂತೆ ನೋಡಿಕೊಳ್ಳುತ್ತಿದ್ದೇವೆ. ಅವರ ಕುಟುಂಬಸ್ಥರ ಮೇಲೂ ನಿಗಾ ಇದೆ ಎಂದು ಉಡುಪಿ ಡಿಎಚ್‍ಒ ಡಾ.ಸುಧೀರ್ ಚಂದ್ರಸೂಡ ಮಾಹಿತಿ ನೀಡಿದ್ದಾರೆ.

  • ವಿದೇಶದಿಂದ ಬಂದವರ ಮೇಲೆ ನಿಗಾ: ಉಡುಪಿ ಡಿಎಚ್‍ಒ

    ವಿದೇಶದಿಂದ ಬಂದವರ ಮೇಲೆ ನಿಗಾ: ಉಡುಪಿ ಡಿಎಚ್‍ಒ

    ಉಡುಪಿ: ಜಿಲ್ಲೆಗೆ ವಿದೇಶದಿಂದ ಬಂದ ವ್ಯಕ್ತಿಗಳು, ಆರೋಗ್ಯ ಇಲಾಖೆಯ ಸ್ಥಳೀಯ ಆಶಾ ಮತ್ತು ಆರೋಗ್ಯ ಕಾರ್ಯಕರ್ತೆಯರ ಬಳಿ ತಾವು ವಿದೇಶದಿಂದ ಬಂದಿರುವ ಬಗ್ಗೆ ಸ್ವಯಂ ಘೋಷಣೆ ಮಾಡಿಕೊಳ್ಳುವ ಮೂಲಕ ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣ ಕುರಿತ ಕಾರ್ಯದಲ್ಲಿ ಸಹಕರಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್ ಚಂದ್ರ ಸೂಡ ವಿನಂತಿಸಿದ್ದಾರೆ.

    ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿಯಲ್ಲಿ ನಡೆದ ಕೊರೊನಾ ಮುನ್ನೆಚ್ಚರಿಕೆ ಸಭೆಯಲ್ಲಿ ಮಾತನಾಡಿದರು. ಜಿಲ್ಲೆಯಲ್ಲಿ ಫೆಬ್ರವರಿ 25ರ ಬಳಿಕ ವಿದೇಶಗಳಿಂದ ಆಗಮಿಸಿರುವ ಸಾರ್ವಜನಿಕರು ಸ್ವಯಂ ಘೋಷಣೆ ಮಾಡಿಕೊಳ್ಳುವಂತೆ ಹಾಗೂ ಸಾರ್ವಜನಿಕರು ವಿದೇಶಗಳಿಂದ ಬಂದ ವ್ಯಕ್ತಿಗಳ ಬಗ್ಗೆ ಮಾಹಿತಿಯಿದ್ದಲ್ಲಿ ಆರೋಗ್ಯ ಇಲಾಖೆಗೆ ತಿಳಿಸುವ ಮೂಲಕ ಕೊರೊನಾ ನಿಯಂತ್ರಿಸಲು ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ವಿನಂತಿಸಿದರು. ಶಂಕಿತ ವ್ಯಕ್ತಿಯ ಗುರುತನ್ನು ಗೌಪ್ಯವಾಗಿಡಲಾಗುವುದು ಎಂದರು.

    ವಿದೇಶಗಳಿಗೆ ಭೇಟಿ ನೀಡಿ ವಾಪಸಾದವರು 14 ದಿನಗಳವರೆಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳದೆ ಮನೆಯಲ್ಲಿಯೆ ಪ್ರತ್ಯೇಕವಾಗಿದ್ದು, ರೋಗದ ಹರಡುವಿಕೆಯನ್ನು ತಡೆಗಟ್ಟುವಲ್ಲಿ ಸಹಕರಿಸಬೇಕು. ಕೊರೊನಾ ಸೋಂಕಿನ ಸ್ಯಾಂಪಲ್ ಪರೀಕ್ಷೆಗಾಗಿ ಈಗಾಗಲೇ ಬೆಂಗಳೂರಿನಲ್ಲಿರುವ 2 ಲ್ಯಾಬ್‍ಗಳ ಜೊತೆಗೆ ಹೊಸದಾಗಿ ಶಿವಮೊಗ್ಗ, ಮೈಸೂರು ಮತ್ತು ಹಾಸನದಲ್ಲಿ ತಲಾ ಒಂದು ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಅವರು ತಿಳಿಸಿದರು. ಸಾಮಾಜಿಕ ಜಾಲತಾಣಗಳಲ್ಲಿ ಕೊರೊನಾ ಬಗ್ಗೆ ಸುಳ್ಳು ಸುದ್ದಿ ಅಥವಾ ವದಂತಿಗಳನ್ನು ಹರಡಬಾರದು. ಇಂತಹ ಸುದ್ದಿಗಳನ್ನು ಹರಡುವವರ ಮೇಲೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

    ಕೊರೊನಾ ಶಂಕಿತ ವ್ಯಕ್ತಿಯ ಗುರುತು, ವಿಳಾಸ ಅಥವಾ ಇನ್ನಿತರ ವೈಯಕ್ತಿಕ ಮಾಹಿತಿಯನ್ನು ಸಹ ಮಾಧ್ಯಮದಲ್ಲಿ ಬಹಿರಂಗಪಡಿಸದಂತೆ ಡಿಹೆಚ್‍ಓ ತಿಳಿಸಿದರು. ವಿದೇಶದಿಂದ ಬಂದ ವ್ಯಕ್ತಿಗಳಲ್ಲಿ ತೀವ್ರ ಜ್ವರ, ನೆಗಡಿ, ಕೆಮ್ಮು, ಉಸಿರಾಟದ ಸಮಸ್ಯೆಯಿದ್ದಲ್ಲಿ ಜಿಲ್ಲಾ ಸವೇಕ್ಷಣಾ ಘಟಕದ ದೂ.ಸಂ 0820-2525561ಗೆ ಮಾಹಿತಿ ನೀಡಬೇಕು. ಈ ಕುರಿತು ವೈದ್ಯಕೀಯ ಪರೀಕ್ಷೆಗೆ ಆಗಮಿಸುವಾಗ ಖಾಸಗಿ ವಾಹನ ಅಥವಾ ಬಸ್ ಮುಂತಾದ ಸಾರ್ವಜನಿಕ ವಾಹನ ಬಳಸಬಾರದು. ಆರೋಗ್ಯ ಇಲಾಖೆಯಲ್ಲಿ ಇದಕ್ಕಾಗಿಯೇ ಪ್ರತ್ಯೇಕ ಸುಸಜ್ಜಿತ ವಾಹನವಿದ್ದು, ಆ ವಾಹನವನ್ನು ಶಂಕಿತರ ಮನೆಗೆ ಕಳುಹಿಸಿ ಅದೇ ವಾಹನದಲ್ಲಿ ಕರೆ ತಂದು ಅಗತ್ಯ ಪರೀಕ್ಷೆ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.

  • ಯುವತಿಯ ಖಾಸಗಿ ಫೋಟೋ ಇಟ್ಕೊಂಡು ಬ್ಲ್ಯಾಕ್‍ಮೇಲ್- ಸಿನಿಮಾ ವಿತರಕ ಅರೆಸ್ಟ್

    ಯುವತಿಯ ಖಾಸಗಿ ಫೋಟೋ ಇಟ್ಕೊಂಡು ಬ್ಲ್ಯಾಕ್‍ಮೇಲ್- ಸಿನಿಮಾ ವಿತರಕ ಅರೆಸ್ಟ್

    ಬೆಂಗಳೂರು: ವಿದೇಶದಲ್ಲಿ ಪರಿಚಿತಳಾದ ಯುವತಿಯ ಖಾಸಗಿ ಫೋಟೋ ಇಟ್ಟುಕೊಂಡು ಬ್ಲ್ಯಾಕ್‍ಮೇಲ್ ಮಾಡಿ ಲಕ್ಷ ಲಕ್ಷ ಹಣ ಪೀಕಿದ್ದ ಸಿನಿಮಾ ವಿತರಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

    ಯಶವಂತಪುರದ ನಿವಾಸಿ ರೂಪೇಶ್ (33) ಬಂಧಿತ ಆರೋಪಿ. ರೂಪೇಶ್ ವಿದೇಶದಲ್ಲಿ ಸ್ಯಾಂಡಲ್‍ವುಡ್ ಸಿನಿಮಾಗಳ ಪ್ರಮೋಷನ್ ಮಾಡುವ ಈವೇಂಟ್ ಮ್ಯಾನೇಜರ್ ಆಗಿದ್ದ. ಹೀಗಾಗಿ ಖ್ಯಾತ ನಟ ನಟಿಯರ ಜೊತೆ ಫೋಟೋ ತೆಗೆಸಿಕೊಂಡು ಹೊರ ದೇಶಗಳಲ್ಲಿ ಕನ್ನಡಿಗರ ಬಳಿ ಪೋಸ್ ಕೊಡುತ್ತಿದ್ದ.

    ರೂಪೇಶ್ ಓದಿದ್ದು ಡಿಪ್ಲೋಮೊ, ಮಾಡ್ತಿದ್ದದ್ದು ಈವೆಂಟ್ ಮ್ಯಾನೇಜ್ಮೆಂಟ್ ಕೆಲಸ. ರೂಪೇಶ್ ಮಾತು ಕೇಳಿಯೇ ಕೆಲವರು ಫೀದಾ ಆಗಿಬಿಡುತ್ತಿದ್ದರು. ಹೀಗೆ ಮದುವೆ ಆಗಬೇಕಾದರೂ ದಂತ ವೈದ್ಯೆಯಾಗಿದ್ದ ಯುವತಿಯನ್ನೇ ಪುಸಲಾಯಿಸಿ ವಿದೇಶದಲ್ಲಿ ಕೆಲಸ ಅಂತ ಹೇಳಿ ಮದುವೆಯಾಗಿದ್ದ. ವಿದೇಶದಲ್ಲಿ ಕೆಲಸ ಅಂತ ವರದಕ್ಷಿಣೆ ಜೋರಾಗಿಯೇ ತೆಗೆದುಕೊಂಡಿದ್ದ. ಪತ್ನಿಗೆ ಸ್ಯಾಂಡಲ್‍ವುಡ್ ನಟ ನಟಿಯರ ಜೊತೆಗಿರುವ ಫೋಟೋ ತೋರಿಸಿ ನಂಬಿಸಿದ್ದ.

    ಹೊರ ದೇಶದಲ್ಲಿ ಸಿನಿಮಾಗಳನ್ನು ರೂಪೇಶ್ ಪ್ರಮೋಷನ್ ಮಾಡುತ್ತಿದ್ದ. ಇತ್ತೀಚೆಗೆ ಬಿಡುಗಡೆಯಾದ ಅವನೇ ಶ್ರೀಮನ್ನಾರಾಯಣ ಮತ್ತು ಕಿರಿಕ್ ಪಾರ್ಟಿ ಸಿನಿಮಾಗಳನ್ನು ಹೊರ ದೇಶದಲ್ಲಿ ಬಿಡುಗಡೆ ಮಾಡಿಸಿದ್ದ. ಇದೇ ಸಮಯದಲ್ಲಿ ಆಸ್ಟ್ರೇಯಾದಲ್ಲಿ ಬೆಂಗಳೂರು ಮೂಲದ ಯುವತಿ ಪರಿಚಯವಾಗಿದ್ದಳು. ಇದೇ ಸಲುಗೆಯನ್ನ ಬಳಸಿ ಯುವತಿಗೆ ಮತ್ತು ಬರುವ ಪಾನೀಯ ನೀಡಿ ಅಶ್ಲೀಲ ಫೋಟೋಗಳನ್ನು ತನ್ನ ಮೊಬೈಲ್‍ನಲ್ಲಿ ಕ್ಲಿಕ್ಕಿಸಿಕೊಂಡಿದ್ದ. ಬಳಿಕ ಯುವತಿಗೆ ಫೋಟೊಗಳನ್ನು ತೋರಿಸಿ 6 ಲಕ್ಷ ರೂ. ಪೀಕಿದ್ದ.

    ಹಣ ಪಡೆದಿದ್ದು ಅಷ್ಟೇ ಅಲ್ಲದೆ ತನ್ನ ಜೊತೆ ಸಹಕರಿಸುವಂತೆ ಯುವತಿಗೆ ಬ್ಲ್ಯಾಕ್‍ಮೇಲ್ ಮಾಡುತ್ತಿದ್ದ. ಇದರಿಂದ ಬೇಸತ್ತ ಯುವತಿ ಬೆಂಗಳೂರಿನ ತನ್ನ ಪೋಷಕರ ಮನೆಗೆ ಬಂದಿದ್ದಳು. ಇತ್ತೀಚೆಗೆ ಮತ್ತೆ ರೂಪೇಶ್ ಮನೆ ಬಳಿ ಬಂದು ಹಣ ಕೊಡದಿದ್ದರೂ ಪರವಾಗಿಲ್ಲ ಲೈಂಗಿಕ ಕ್ರಿಯೆಗೆ ಸಹಕರಿಸು ಅಂತ ಟಾರ್ಚರ್ ಕೊಟ್ಟಿದ್ದ. ಆರೋಪಿಯ ವರ್ತನೆಯಿಂದ ಮನನೊಂದ ಯುವತಿ ನಂದಿನಿ ಲೇಔಟ್ ಠಾಣೆಯಲ್ಲಿ ದೂರು ನೀಡಿದ್ದಳು.

    ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು, ಪೊಲೀಸರು ಆರೋಪಿಗೆ ಬಲೆ ಬೀಸಿದ್ದರು. ರೂಪೇಶ್ ವಿರುದ್ಧ ಪತ್ನಿಯೂ ದೂರು ಕೊಟ್ಟಿದ್ದಳು. ನನಗೆ ನಂಬಿಸಿ ದ್ರೋಹ ಮಾಡಿ ಮದುವೆಯಾಗಿದ್ದಾನೆ. ಇದೇ ರೀತಿ ಸಾಕಷ್ಟು ಯುವತಿಯರಿಗೆ ತೊಂದರೆ ಕೊಟ್ಟಿದ್ದಾನೆ ಎಂದು ದೂರು ನೀಡಿದ್ದಾಳೆ. ಸದ್ಯ ನಂದಿನಿ ಲೇಔಟ್ ಪೊಲೀಸರು ಆರೋಪಿ ರೂಪೇಶ್‍ನನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.

  • ಹನಿಮೂನ್‍ಗೆ ವಿದೇಶಕ್ಕೆ ಹಾರಿದ ಬಿಗ್‍ಬಾಸ್ ಜೋಡಿ

    ಹನಿಮೂನ್‍ಗೆ ವಿದೇಶಕ್ಕೆ ಹಾರಿದ ಬಿಗ್‍ಬಾಸ್ ಜೋಡಿ

    ಬೆಂಗಳೂರು: ಬಿಗ್‍ಬಾಸ್ ಜೋಡಿ ರ‍್ಯಾಪರ್ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಕಳೆದವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಈ ಜೋಡಿ ಹನಿಮೂನ್‍ಗಾಗಿ ವಿದೇಶಕ್ಕೆ ಹಾರಿದ್ದಾರೆ.

    ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಫೆಬ್ರವರಿ 25, 26 ರಂದು ಮೈಸೂರಿನಲ್ಲಿ ಸಪ್ತಪದಿ ತುಳಿದಿದ್ದರು. ಈಗ ಚಂದನ್ ತನ್ನ ಪತ್ನಿಯೊಂದಿಗೆ ಹನಿಮೂನ್‍ಗೆ ವಿದೇಶಕ್ಕೆ ಹೋಗಿದ್ದಾರೆ. ಹನಿಮೂನ್‍ಗೆ ಹೋಗುವ ಮುನ್ನ ಏರ್‌ಪೋರ್ಟ್‌ನಲ್ಲಿ ಇಬ್ಬರು ಒಟ್ಟಿಗೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ನಂತರ ಆ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡುವ ಮೂಲಕ ತಾವೂ ಹನಿಮೂನ್‍ಗೆ ಹೋಗುತ್ತಿರುವ ವಿಚಾರವನ್ನು ತಿಳಿಸಿದ್ದಾರೆ. ಇದನ್ನೂ ಓದಿ: ಇಷ್ಟು ದಿನ ಮನೆಯಲ್ಲಿ ಒಬ್ಬನೇ ಇರ್ತಿದ್ದೆ, ಇನ್ಮುಂದೆ ಹೆಂಡ್ತಿ ಇರ್ತಾಳೆ: ಚಂದನ್

    ಕಳೆದ ದಿನ ನಿವೇದಿತಾ ಇಬ್ಬರ ಪಾಸ್‍ಪೋರ್ಟ್ ಹಿಡಿದುಕೊಂಡು ಫೋಟೋ ಕ್ಲಿಕ್ಕಿಸಿಕೊಂಡಿದ್ದು, ಆ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದರು. ಜೊತೆಗೆ ಹನಿಮೂನ್‍ಗೆ ಯಾವ ವಿದೇಶಕ್ಕೆ ಹೋಗಲಿದ್ದೇವೆ ಎಂಬುದನ್ನು ತಿಳಿಸಿದ್ದರು. ಚಂದನ್ ಮತ್ತು ನಿವೇದಿತಾ ಜೋಡಿ ನೆದರ್‌ಲ್ಯಾಂಡ್‌ನ ಆಂಸ್ಟರ್ಡ್ಯಾಮ್ ಹೋಗಿದ್ದು, ಅಲ್ಲಿನ ಸುತ್ತಮುತ್ತಲ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ. ಇದನ್ನೂ ಓದಿ: ಚಂದನ್ ಶೆಟ್ಟಿ, ನಿವೇದಿತಾ ಗೌಡಾಗೆ ಜಾಗ್ವಾರ್ ಕಾರು ಗಿಫ್ಟ್

    ಮದುವೆಯ ನಂತರ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದ ಚಂದನ್ ಶೆಟ್ಟಿ, ನಿವೇದಿತಾಗೆ ಹನಿಮೂನ್‍ಗಾಗಿ ಪ್ಯಾರಿಸ್‍ಗೆ ಹೋಗಬೇಕು ಎಂಬ ಆಸೆ ಇದೆ. ಹೀಗಾಗಿ ಅಲ್ಲಿಗೆ ಹೋಗುವುದಾಗಿ ತಿಳಿಸಿದ್ದರು. ಈಗ ಬಿಗ್‍ಬಾಸ್ ಜೋಡಿ  ಹನಿಮೂನ್‍ಗೆ ಆಂಸ್ಟರ್ಡ್ಯಾಮ್ ಗೆ ಹೋಗಿದ್ದಾರೆ.

    https://www.instagram.com/p/B9L8peMJMIM/

    ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಮದುವೆ ಮೈಸೂರಿನ ಹಿನಕಲ್‍ನಲ್ಲಿರುವ ಸ್ಪೆಕ್ಟ್ರಾ ಕನ್ವೆನ್ಷನ್ ಹಾಲ್‍ನಲ್ಲಿ ನಡೆದಿದೆ. ಇವರಿಬ್ಬರ ಮದುವೆ ಗೌಡ ಹಾಗೂ ಶೆಟ್ಟಿ ಸಂಪ್ರದಾಯಗಳೆರಡರಲ್ಲೂ ನಡೆದಿತ್ತು. ಮದುವೆಯ ಉಡುಗೊರೆಯಾಗಿ ಚಂದನ್ ಪೋಷಕರು ದುಬಾರಿ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.

  • ಇಂಗು ಗುಂಡಿ ಪ್ರಯೋಗ- ವಿದೇಶಿಗರ ಮನಗೆದ್ದ ಕುನ್ನೂರು ಯುವ ಕೃಷಿಕ

    ಇಂಗು ಗುಂಡಿ ಪ್ರಯೋಗ- ವಿದೇಶಿಗರ ಮನಗೆದ್ದ ಕುನ್ನೂರು ಯುವ ಕೃಷಿಕ

    ಹಾವೇರಿ: ಮಳೆಯ ಜೂಜಾಟಕ್ಕೆ ಸೆಡ್ಡು ಹೊಡೆದ ಕುನ್ನೂರಿನ ಯುವರೈತ ಶಂಕರ್, ಸ್ವಪ್ರಯತ್ನದಿಂದ ಕೊಳವೆ ಬಾವಿಗೆ ನೀರು ಇಂಗಿಸುವ ಪದ್ಧತಿ ಅಳವಡಿಸಿಕೊಂಡು ಯಶಸ್ವಿ ರೈತನಾಗಿ ದೇಶ-ವಿದೇಶಿಗರ ಗಮನ ಸೆಳೆದಿದ್ದಾರೆ.

    ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಕುನ್ನೂರು ಗ್ರಾಮದ ನಿವಾಸಿಯಾದ ಐ.ಟಿ.ಐ ಪದವೀಧರ ಶಂಕರ್ ಸೋಗಲಿ ಅವರು ತಮ್ಮ ಹೊಲದಲ್ಲಿ ಕೊರೆಸಿದಂತಹ ಬೋರ್ ವೆಲ್ ನೀರಿನ ಇಳುವರಿಯನ್ನು ದ್ವಿಗುಣಗೊಳಿಸುವ ಪ್ರಯತ್ನದಲ್ಲಿ ಯಶಸ್ಸು ಕಂಡು ಅಲ್ಪ ಜಮೀನಿನಲ್ಲಿ ಲಾಭದಾಯಕ ಕೃಷಿಯಲ್ಲಿ ತೊಡಗಿದ್ದಾರೆ.

    ಆರಂಭದಲ್ಲಿ ಕೇವಲ ಎರಡು ಇಂಚಿನಷ್ಟು ಮಾತ್ರ ನೀರು ಬಿದ್ದಿದ್ದು ತನ್ನ 1.29ಗುಂಟೆ ಜಮೀನಿಗೆ ನೀರು ಉಣಿಸಲು ಪರದಾಡುತಿದ್ದರು ಮಳೆಯೂ ಇಲ್ಲದೆ ಕೊಳವೆ ಬಾವಿಯಲ್ಲಿ ನೀರಿನ ಪ್ರಮಾಣವು ಕುಸಿತ ಕಂಡಿತು. ಹೀಗಾಗಿ ಕೃಷಿಯನ್ನೆ ನಂಬಿದ್ದ ಶಂಕರ್ ಬದುಕು ಕೈಕೊಡುವ ಆತಂಕದಲ್ಲಿದ್ದರು. ಈ ಸಂದರ್ಭದಲ್ಲಿ ಕೃಷಿ ಇಲಾಖಾ ಅಧಿಕಾರಿಗಳ ಸಲಹೆ ಇವರ ಬದುಕನ್ನು ಬದಲಾಯಿಸಿತು ಎಂದು ಅವರು ಹೇಳುತ್ತಾರೆ.

    ಜಮೀನಲ್ಲಿ ತೋಡಿದ ಕೊಳವೆಬಾವಿ ಸಮಿಪದಲ್ಲಿಯೇ ಎರಡು ಇಂಗು ಗುಂಡಿಗಳನ್ನು ನಿರ್ಮಿಸಿದ್ದಾರೆ. ಎರಡು ಮೀಟರ್ ಉದ್ದ, ಒಂದು ಮೀಟರ್ ಅಗಲ, ಎರಡು ಮೀಟರ್ ಆಳವಾದ ಗುಂಡಿಯನ್ನು ತೆಗೆದು, ಗುಂಡಿಯಲ್ಲಿ ಎರಡು ಪೀಟ್ ಮರಳು, ಇದ್ದಿಲು, ದಪ್ಪದಾದ ಜಲ್ಲಿ ಕಲ್ಲು ತುಂಬಿಸಿದ್ದಾರೆ. ಇದರ ಪ್ರತಿಫಲವಾಗಿ ಗುಂಡಿಯಲ್ಲಿ ಮಳೆಗಾಲದಲ್ಲಿ ವ್ಯರ್ಥವಾಗಿ ಹರಿದು ಹೋಗುವ ನೀರನ್ನು ಭೂಮಿಗೆ ಇಂಗಿಸಿದ್ದಾರೆ. ಪರಿಣಾಮ ಕೇವಲ ಎರಡು ಇಂಚು ನೀರಿನ ಇಳುವರಿಯ ಕೊಳವೆಬಾವಿ ಇದೀಗ ದ್ವಿಗುಣಗೊಂಡು ನಾಲ್ಕು ಇಂಚು ನೀರು ಹೊರಹೊಮ್ಮುತ್ತಿದೆ.

    ಇದಲ್ಲದೆ ಹೊಲದ ಸುತ್ತಲೂ ತಿರುವು ಕಾಲುವೆಯಿಂದ ಮಳೆಗಾಲದಲ್ಲಿ ನೀರನ್ನು ಸಂಗ್ರಹಿಸಿ ಅದನ್ನು ಇಂಗುಗುಂಡಿಗೆ ಸೇರಿಸಲಾಗಿದೆ. ಇಂತಹ ಪ್ರಯೋಗದಿಂದ ತಮ್ಮ ಹೊಲದಲ್ಲಿನ ಮಣ್ಣಿನ ಸಂರಕ್ಷಣೆ ಮತ್ತು ಮಣ್ಣಿನ ಸವಕಳಿಯನ್ನು ತಡೆಯಬಹುದು. ಹೀಗೆ ಮಾಡುವುದರಿಂದ ಇಂಗು ಗುಂಡಿಯಲ್ಲಿ ವರ್ಷಕ್ಕೆ ಸುಮಾರು 90 ಲಕ್ಷ ಲೀಟರಿಗೂ ಅಧಿಕ ಮಳೆ ನೀರನ್ನು ಇಂಗಿಸಲಾಗುತ್ತದೆ. ಇದರ ಪರಿಣಾಮ ಒಂದು ಬೆಳೆ ಬೆಳೆಯಲು ಪರದಾಡುತ್ತಿದ್ದ ನನಗೆ ಮೂರು ಬೆಳೆಯನ್ನು ಬೆಳೆಯುವಷ್ಟು ತೇವಾಂಶ ಭೂಮಿಯಲ್ಲಿರುತ್ತದೆ, ಸಮೃದ್ಧ ಬೆಳೆ ಬರುತ್ತದೆ ಎಂದು ಶಂಕರ್ ಹೇಳುತ್ತಾರೆ.

    ಈ ಪ್ರಯೋಗದಲ್ಲಿ ಮತ್ತಷ್ಟು ಸುಧಾರಣೆಕಂಡುಕೊಂಡ ಶಂಕರ್ ಅವರು ಇಂಗುಗುಂಡಿಯನ್ನ ಕೇವಲ ಮಣ್ಣು, ಕಲ್ಲುಗಳನ್ನು ಬಳಸಿ ನಿರ್ಮಿಸುವ ವಿಧಾನವನ್ನು ಬದಲಿಸಿ, ಹೊಸದಾಗಿ ಸಿಮೆಂಟ್ ರಿಂಗು, ಜಲ್ಲಿ, ಮರಳನ್ನು ಬಳಸಿಕೊಂಡು ಸುಲಭವಾದ ರೀತಿಯಲ್ಲಿ ನೀರನ್ನು ಇಂಗಿಸುವ ಪ್ರಯತ್ನ ಮಾಡಿದ್ದಾರೆ. ಹೀಗಾಗಿ ಮಳೆಗಾಲದಲ್ಲಿ ಇಂಗುಗುಂಡಿಗಳು ಮುಚ್ಚಿಹೋಗುವುದು ತಪ್ಪಿದೆ ಎನ್ನುತ್ತಾರೆ.

    ಯುವ ರೈತನ ಈ ಹೊಸ ಪ್ರಯೋಗವನ್ನು ಧಾರವಾಡ ಕೃಷಿ ವಿಶ್ವ ವಿದ್ಯಾಲಯ ವಿದೇಶಿಯರಿಗೆ ಪರಿಚಯಿಸಿದೆ. ಆಸ್ಟ್ರೇಲಿಯಾ, ಇಸ್ರೇಲ್, ಕೆನಡಾ, ಸೇರಿದಂತೆ ಏಳು ರಾಷ್ಟ್ರದ ರೈತ ಪ್ರತಿನಿಧಿಗಳು ಕುನ್ನೂರ ಗ್ರಾಮದ ಶಂಕರ್ ಅವರ ಜಮೀನಿಗೆ ಬಂದು ವೀಕ್ಷಣೆ ಮಾಡಿ ಮಾಹಿತಿ ಪಡೆದುಕೊಂಡಿದ್ದಾರೆ.

    ಇವರ ಈ ಪ್ರಯೋಗಕ್ಕೆ ಧಾರವಾಡ ಕೃಷಿ ವಿಶ್ವವಿದ್ಯಾಲಯವು 2017ರ ಶ್ರೇಷ್ಠ ಯುವ ಕೃಷಿಕ ಪ್ರಶಸ್ತಿ, ದೇಶಪಾಂಡೆ ಫೌಂಡೇಶನ್ ಕೊಡಮಾಡುವ ಕೃಷಿ ಸಿಂಚನ ಪ್ರಶಸ್ತಿ, 2019-20ನೇ ಸಾಲಿನ ಹಾವೇರಿ ಜಿಲ್ಲಾಮಟ್ಟದ ಶ್ರೇಷ್ಟ ಕೃಷಿ ಪ್ರಶಸ್ತಿ ಪ್ರದಾನ ಮಾಡಿ ಪ್ರೋತ್ಸಾಹಿಸಿದೆ.

    ತುಂಡು ಭೂಮಿಯಲ್ಲಿ ಹಿಂಡು ಬೇಸಾಯ:
    1.29 ಗುಂಟೆ ಜಮೀನು ಮಾತ್ರ ಹೊಂದಿರುವ ಶಂಕರ್ ನೈಸರ್ಗಿಕ ಕೃಷಿ ಪದ್ಧತಿಯಲ್ಲಿ ಬಹು ಬೆಳೆಗಳ ಪದ್ಧತಿಯನ್ನು ಅನುಸರಿಸಿದ್ದಾರೆ. ಈ ಜಮೀನಿನಲ್ಲಿ 303 ಅಡಿಕೆ ಸಸಿ, 1200 ಅಂಗಾಂಶ ಬಾಳೆ, 300 ಶ್ರೀಗಂಧದ ಗಿಡಗಳು, 10 ತೆಂಗಿನ ಗಿಡ, 100 ಲಿಂಬು, ಐದು ಪೇರಲೆ, ಹೊಲದ ಸುತ್ತಲೂ 1120 ಗಾಳಿಮರಗಳು ಹಾಗೂ ಔಷಧೀಯ ಸಸ್ಯಗಳಾದ ಲಿಂಬೆಹುಲ್ಲು (ನೆಗಡಿ), ಮಾಗಣಿ ಬೇರು (ಉಪ್ಪಿನ ಕಾಯಿ ತಯಾರಿಸಲು), ಬಿಳಿ ಗಲಗುಂಜಿ (ಧ್ವನಿ ಸರಿಪಡಿಸಲು), ಪತ್ರಿ ಪಟ-ಪಟ (ಕಿಡ್ನಿ ಹರಳು), ಒಂದೇಲಗಾ (ನೆನಪಿನ ಶಕ್ತಿ ಹೆಚ್ಚಿಸುವುದು ), ಮಧುನಾಸಿನಿ ( ಸಕ್ಕರೆ ಕಾಯಿಲೆ)ಯಂತಹ ಆಯುರ್ವೆದದ ಔಷಧಿಯ ಸಸ್ಯಗಳನ್ನು ಬೆಳೆಸಿರುವುದು ವಿಶೇಷವಾಗಿದೆ.

    ತೋಟಗಾರಿಕೆ ಇಲಾಖೆಯ ಸಹಾಯ ಪಡೆದು ಹತ್ತು ಗುಂಟೆಯಲ್ಲಿ ನೆರಳು ಪರದೆ ನಿರ್ಮಿಸಿಕೊಂಡು ತರಕಾರಿ ಬೆಳೆಯನ್ನು ಬೆಳೆಯುತ್ತಾರೆ. ಜಮೀನಿಗೆ ಬೇಕಾಗುವ ಸಾವಯವ ಗೊಬ್ಬರ ತಯಾರಿಸಲು ಎರೆಹುಳ ತೊಟ್ಟಿಯನ್ನು ನಿರ್ಮಿಸಿಕೊಂಡಿದ್ದಾರೆ. ದೇಶಿ ಆಕಳು ಸಾಕಾಣಿಕೆಯಿಂದ ಹೈನುಗಾರಿಕೆಯಲ್ಲಿಯೂ ತೊಡಗಿಸಿಕೊಂಡಿದ್ದಾರೆ. ದೇಶಿ ಹಸುವಿನಿಂದ ಬಿಜಾಮೃತ, ಜೀವಾಮೃತ, ಹೋದಿಕೆ, ವಾಪಾಸಾ ಹಂತಗಳನ್ನು ಅನುಸರಿಸುತ್ತಿದ್ದಾರೆ. ಈ ಎಲ್ಲ ಪದ್ಧತಿಯ ಅನುಸರಣೆಗೆ ಮಹಾರಾಷ್ಟ್ರದ ಸಹಜ ಕೃಷಿ ಪದ್ಧತಿಯ ಸುಭಾಷ್ ಪಾಳೆಕೆರ ಅವರನ್ನು ಭೇಟಿಯಾಗಿ ಮಾರ್ಗದರ್ಶನ ಪಡೆದಿರುವುದಾಗಿ ತಿಳಿಸುತ್ತಾರೆ. ಇಡೀ ಜಗತ್ತೇ ಇಸ್ರೇಲ್ ಮಾದರಿಯ ಕೃಷಿಪದ್ಧತಿ ಅನುಸರಿಸುವ ತವಕದಲ್ಲಿದ್ದರೆ ನಮ್ಮಲ್ಲಿಯೇ ಸದ್ದಿಲ್ಲದೆ ನೈಸರ್ಗಿಕ ಕೃಷಿ ಪದ್ಧತಿ ಮತ್ತು ಇಂಗುಗುಂಡಿಗಳ ಕ್ರಮದಿಂದ ಲಾಭದಾಯಕ ಕೃಷಿಯಲ್ಲಿ ತೊಡಗಿರುವ ಕುನ್ನೂರ ಶಂಕರ್ ಯುವ ರೈತರಿಗೆ ಮಾದರಿಯಾಗಿದ್ದಾರೆ.