Tag: Foreign Travel

  • ಭಾರತೀಯ ಪ್ರಯಾಣಿಕರಿಗೆ ನಿಷೇಧ ಹೇರಿದ ಚೀನಾ

    ಭಾರತೀಯ ಪ್ರಯಾಣಿಕರಿಗೆ ನಿಷೇಧ ಹೇರಿದ ಚೀನಾ

    – ತಾತ್ಕಾಲಿಕ ನಿಷೇಧ ಹೇರಿ ಪ್ರಕಟಣೆ

    ನವದೆಹಲಿ: ಕೊರೊನಾ ವೈರಸ್ ಹುಟ್ಟಿಗೆ ಕಾರಣವಾಗಿರುವ ಚೀನಾ, ಇದೀಗ ಭಾರತೀಯ ಪ್ರಯಾಣಿಕರಿಗೆ ನಿಷೇಧ ಹೇರುವ ಮೂಲಕ ಸಾಂಕ್ರಾಮಿಕ ರೋಗ ಹರಡದಂತೆ ತಡೆಯಲು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ. ಈ ಮೂಲಕ ಕೊರೊನಾ ನೆಪವೊಡ್ಡಿ ಭಾರತೀಯರ ಪ್ರವೇಶಕ್ಕೆ ನಿರ್ಬಂಧ ಹೇರಿದೆ.

    ಚೀನೀ ರಾಯಭಾರ ಕಚೇರಿ ಈ ಕುರಿತು ಸ್ಪಷ್ಟಪಡಿಸಿದ್ದು, ಭಾರತದಿಂದ ಆಗಮಿಸುವ ಪ್ರಯಾಣಿಕರಿಗೆ ತಾತ್ಕಾಲಿಕವಾಗಿ ನಿಷೇಧ ಹೇರಲು ನಿರ್ಧರಿಸಲಾಗಿದೆ ಎಂದು ತಿಳಿಸಿದೆ. ಚೀನಾದ ಅಧೀಕೃತ ವಿಸಾ ಅಥವಾ ನಿವಾಸ ಪರವಾನಗಿ ಹೊಂದಿದ್ದರು ಸಹ ಕೊರೊನಾ ಕಾರಣದಿಂದಾಗಿ ಭಾರತೀಯರ ಆಗಮನಕ್ಕೆ ನಿಷೇಧ ಹೇರಲಾಗಿದೆ ಎಂದು ಸ್ಪಷ್ಟಪಡಿಸಿದೆ.

    ಕೊರೊನಾ ವೈರಸ್ ದೃಷ್ಟಿಯಿಂದ ಭಾರತದಿಂದ ಆಗಮಿಸುವ ವಿದೇಶಿಗರಿಗೆ ಚೀನಾ ತಾತ್ಕಾಲಿಕ ನಿಷೇಧ ಹೇರಲು ನಿರ್ಧರಿಸಿದೆ. ಭಾರತದಲ್ಲಿನ ಚೀನೀ ರಾಯಭಾರಿ ಕಚೇರಿ ಅಥವಾ ದೂತಾವಾಸಗಳು ವೀಸಾ ಅಥವಾ ನಿವಾಸ ಪರವಾನಗಿ ಹೊಂದಿದ್ದರು ಸಹ ಭಾರತೀಯರ ಆರೋಗ್ಯ ದಾಖಲಾತಿಗಳಿಗೆ ಸ್ಟ್ಯಾಂಪ್ ಹಾಕಬೇಡಿ ಎಂದು ಸೂಚಿಸಲಾಗಿದೆ.

    ಚೀನಾ ರಾಯಭಾರಿ ಕಚೇರಿಯ ವೆಬ್‍ಸೈಟ್‍ನಲ್ಲಿ ಈ ಕುರಿತು ಪೋಸ್ಟ್ ಮಾಡಲಾಗಿದ್ದು, ಚೀನಾದ ರಾಜತಾಂತ್ರಿಕ, ಸೇವೆ, ಸೌಜನ್ಯ ಹಾಗೂ ಸಿ ದರ್ಜೆಯ ವೀಸಾಗಳಿಗೆ ಇದು ಅನ್ವಯಿಸುವುದಿಲ್ಲ ಎಂದು ಈ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಲಾಗಿದೆ. ತುರ್ತು ಅಥವಾ ಮಾನವೀಯ ಅಗತ್ಯವಿರುವವರು ಭಾರತದಲ್ಲಿನ ಚೀನೀ ರಾಯಭಾರಿ ಕಚೇರಿ ಅಥವಾ ದೂತಾವಾಸಗಳಲ್ಲಿ ವೀಸಾ ಅರ್ಜಿ ಸಲ್ಲಿಸಬಹುದು. ನವೆಂಬರ್ 3ರ ನಂತರ ನೀಡುವ ವೀಸಾಗಳಿಗೆ ನಿಷೇಧ ಅನ್ವಯಿಸುವುದಿಲ್ಲ ಎಂದು ತಿಳಿಸಿದೆ.

    ಈ ನಿಷೇಧ ತಾತ್ಕಾಲಿಕವಾಗಿದ್ದು, ಕೊರೊನಾ ವೈರಸ್ ಎದುರಿಸಲು ಚೀನಾ ಕೈಗೊಂಡಿರುವ ಮುನ್ನೆಚ್ಚರಿಕಾ ಕ್ರಮವಾಗಿದೆ. ಸಾಂಕ್ರಾಮಿಕ ರೋಗವನ್ನು ತಡೆಯಲು ಚೀನಾ ಮುಂದಿನ ದಿನಗಳಲ್ಲಿ ಮತ್ತಷ್ಟು ಹೊಂದಾಣಿಕೆ ಹಾಗೂ ಪ್ರಕಟಣೆಗಳನ್ನು ಹೊರಡಿಸಲಿದೆ ಎಂದು ರಾಯಭಾರಿ ಕಚೇರಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

  • ಸೋಂಕಿತನ ಹೆಸರು ಬಹಿರಂಗ- ಅಧಿಕಾರಿಗಳ ವಿರುದ್ಧ ದೂರು

    ಸೋಂಕಿತನ ಹೆಸರು ಬಹಿರಂಗ- ಅಧಿಕಾರಿಗಳ ವಿರುದ್ಧ ದೂರು

    ಮಡಿಕೇರಿ: ಕೊರೊನಾ ಮಹಾಮಾರಿ ಹೆಸರು ಕೇಳಿದರೆ ಸಾಕು ಜನರು ಬೆಚ್ಚಿ ಬೀಳುತ್ತಿದ್ದು, ಎಷ್ಟೇ ಜಾಗೃತಿ ಮೂಡಿಸಿದರೂ ಕೂಡ ಕೊರೊನಾ ಸೋಂಕಿತ ವ್ಯಕ್ತಿ ನೋಡುವ ಭಾವನೆ ಭಿನ್ನವಾಗುತ್ತಿಲ್ಲ. ಈ ಕಾರಣದಿಂದಲೇ ಸರ್ಕಾರ ಕೂಡ ಸೋಂಕಿತನ ಹೆಸರು ಬಹಿರಂಗ ಮಾಡುವುದಿಲ್ಲ. ಆದರೆ ಹೊರದೇಶದಿಂದ ಕೊಡಗಿಗೆ ಬಂದ ಸೋಂಕಿತರ ಹೆಸರನ್ನು ಅಧಿಕಾರಿಗಳೇ ಬಹಿರಂಗಗೊಳಿಸುವ ಮೂಲಕ ಎಡವಟ್ಟು ಮಾಡಿದ್ದಾರೆ.

    ಕೊರೊನಾ ಮಹಾಮಾರಿ ತನ್ನ ಕಬಂಧಬಾಹುಗಳನ್ನು ವಿಸ್ತಾರ ಮಾಡುತ್ತಲೇ ಇದ್ದು, ರೋಗ ನಿರೋಧಕ ಶಕ್ತಿ ಕಡಿಮೆ ಇರುವವರ ಪಾಲಿಗಂತೂ ಭಯಾನಕವಾಗಿ ಪರಿಣಮಿಸುತ್ತಿದೆ. ಈಗಾಗಿ ಕೊರೊನಾ ಪಾಸಿಟಿವ್ ಬಂದ ವ್ಯಕ್ತಿಯನ್ನು ಜನರು ಕಳಂಕಿತನಾಗಿ ನೋಡುತ್ತಿದ್ದಾರೆ. ಆದ್ದರಿಂದಲೇ ಸರ್ಕಾರ ಸೋಂಕಿತನ ಹೆಸರನ್ನು ಬಹಿರಂಗಗೊಳಿಸುವಂತಿಲ್ಲ ಎಂದು ಸ್ಪಷ್ಟವಾಗಿ ಸೂಚಿಸಿದೆ. ಆದರೆ ವಿದೇಶದಿಂದ ಬಂದ ವ್ಯಕ್ತಿಯೊಬ್ಬರು ಸೇವಾ ಸಿಂಧುವಿನಲ್ಲಿ ಅರ್ಜಿ ಸಲ್ಲಿಸಿ, ಮಡಿಕೇರಿ ತಾಲೂಕಿನ ನಾಪೋಕ್ಲಿಗೆ ಬಂದಿದ್ದರು. ನಾಪೋಕ್ಲಿನ ತಮ್ಮ ಮನೆಯಲ್ಲಿರಬೇಕಾದ ವ್ಯಕ್ತಿ ವಿರಾಜಪೇಟೆ ಪಟ್ಟಣದ ಮೀನುಪೇಟೆಯಲ್ಲಿದಿದ್ದರು. ವಿಷಯ ತಿಳಿದ ಆರೋಗ್ಯ ಇಲಾಖೆ ಅಧಿಕಾರಿಗಳು ಆತನ ಗಂಟಲ ದ್ರವ ಸಂಗ್ರಹಿಸಿ ಪರೀಕ್ಷಿಸಿದಾಗ ವ್ಯಕ್ತಿಗೆ ಪಾಸಿಟಿವ್ ಇರುವುದು ದೃಢವಾಗಿತ್ತು. ಇದರಿಂದ ವಿರಾಜಪೇಟೆ ಪಟ್ಟಣದ ಮೀನುಪೇಟೆಯನ್ನು ನಿಷೇಧಿತ ಪ್ರದೇಶವೆಂದು ಮಾಡಿದ್ದಾರೆ.

    ಅಲ್ಲದೇ ವಿರಾಜಪೇಟೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ವ್ಯಕ್ತಿಯ ವಿರುದ್ಧ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಅಡಿ ಅಲ್ಲಿನ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆದರೆ ದೂರು ನೀಡುವಾಗ ವ್ಯಕ್ತಿಯ ಹೆಸರನ್ನು ಬಹಿರಂಗಗೊಳಿಸಿದ್ದಾರೆ. ಇದರಿಂದ ಸೋಂಕಿತ ವ್ಯಕ್ತಿಯ ಸ್ನೇಹಿತರು, ಸಂಬಂಧಿಕರು ಪಟ್ಟಣ ಪಂಚಾಯಿತಿ ಅಧಿಕಾರಿಗಳ ವಿರುದ್ಧವೇ ವಿರಾಜಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

    ಈ ಕುರಿತು ಸ್ಪಷ್ಟನೆ ನೀಡಿರುವ ವಿರಾಜಪೇಟೆ ತಾಲೂಕು ಅಧಿಕಾರಿ, ಹೌದು ಹೆಸರು ಬಹಿರಂಗಪಡಿಸಬಾರದಿತ್ತು. ಇದು ಸ್ಥಳೀಯ ಆಡಳಿತದಿಂದ ತಪ್ಪಾಗಿದ್ದು, ಇನ್ಮುಂದೆ ಇಂತಹ ತಪ್ಪಾಗದಂತೆ ಸೂಚನೆ ನೀಡಲಾಗಿದೆ. ತಪ್ಪು ಮಾಡಿರುವುದಕ್ಕೆ ಶಿಕ್ಷೆಯೂ ಆಗಲಿದೆ ಎಂದು ತಿಳಿಸಿದರು.

    ಸೋಂಕಿತ ವ್ಯಕ್ತಿ ಸೇವಾ ಸಿಂಧುವಿನಲ್ಲಿ ಅರ್ಜಿ ಸಲ್ಲಿಸುವಾಗ ಮಡಿಕೇರಿ ತಾಲೂಕಿನ ನಾಪೋಕ್ಲಿನ ವಿಳಾಸ ನೀಡಿದ್ದು, ಬಳಿಕ ವಿರಾಜಪೇಟೆ ಪಟ್ಟಣಕ್ಕೆ ಬಂದು ನೆಲೆಸಿ ತಪ್ಪು ಮಾಡಿದ್ದಾನೆ. ಅಲ್ಲದೇ ವಿದೇಶದಿಂದ ಆಗಮಿಸಿದ್ದ ಆತ ಕೇರಳದಿಂದ ಬಂದಿರುವುದಾಗಿ ಸುಳ್ಳು ಮಾಹಿತಿ ನೀಡಿದ್ದ. ಇಂಥವರಿಂದಾಗಿ ಬೇರೆ ವ್ಯಕ್ತಿಗಳಿಗೆ ಹರಡಿದರೆ ಯಾರು ಜವಾಬ್ದಾರಿ. ಇದರಿಂದ ಬೇರೆಯವರಿಗೂ ತಕ್ಕ ಪಾಠವಾಗಬೇಕು ಎನ್ನುವ ಉದ್ದೇಶದಿಂದ ಅಧಿಕಾರಿಗಳು ದೂರು ನೀಡಿದ್ದಾರೆ ಎಂದು ವಿರಾಜಪೇಟೆ ತಹಶೀಲ್ದಾರ್ ಹೇಳಿದ್ದಾರೆ.

  • ರಾಜ್ಯದ 3 ವೈದ್ಯ ದಂಪತಿಗೆ ಕೊರೊನಾ ವೈರಸ್ ಶಂಕೆ

    ರಾಜ್ಯದ 3 ವೈದ್ಯ ದಂಪತಿಗೆ ಕೊರೊನಾ ವೈರಸ್ ಶಂಕೆ

    – ಹೋಳಿ ಹಬ್ಬಕ್ಕೆ ವಿದೇಶಕ್ಕೆ ಹೋಗಿದ್ದ ದಂಪತಿಗಳು

    ಬಾಗಲಕೋಟೆ: ಕೊರೊನಾ ವೈರಸ್ ಇರುವ ಶಂಕೆ ವ್ಯಕ್ತವಾದ ಹಿನ್ನೆಲೆ ಜಿಲ್ಲೆಯಲ್ಲಿ ಮೂವರು ವೈದ್ಯ ದಂಪತಿಯ ಆರೋಗ್ಯದ ಮೇಲೆ ನಿಗಾ ಇಡಲಾಗಿದೆ.

    ಈ ಮೂವರ ವೈದ್ಯರ ಕುಟುಂಬದ ಆರು ಜನರು ಹೋಳಿ ಹಬ್ಬದ ಪ್ರಯುಕ್ತ ವಿದೇಶಕ್ಕೆ ಪ್ರವಾಸ ಕೈಗೊಂಡಿದ್ದರು. ಈ ಕಾರಣದಿಂದ ಅವರಿಗೆ ಸೋಂಕು ತಗಲಿರುವ ಅನುಮಾನ ವ್ಯಕ್ತವಾಗಿದೆ. ಅವರ ಮನೆಯಲ್ಲೇ ಐಸೋಲೇಷನ್ ವಾರ್ಡ್ ಮಾಡಿ ಅವರನ್ನು ಅಲ್ಲಿಯೇ 14 ದಿನಗಳ ಕಾಲ ವೀಕ್ಷಣೆಗೆ ಇಡಲಾಗಿದೆ.

    ಈ ಬಗ್ಗೆ ಮಾಹಿತಿ ನೀಡಿರುವ ಬಾಗಲಕೋಟೆ ಡಿಎಚ್‍ಓ ಡಾ.ಅನಂತ ದೇಸಾಯಿ, ಈ ಮೂವರ ವೈದ್ಯರ ಕುಟುಂಬದ ಆರು ಜನರು, ಹೋಳಿ ಹಬ್ಬದ ಪ್ರಯುಕ್ತ ವಿದೇಶಕ್ಕೆ ಪ್ರವಾಸಕ್ಕೆಂದು ಹೋಗಿದ್ದರು. ಆದರೆ ಇವರಿಗೆ ರೋಗದ ಲಕ್ಷಣವಾಗಲಿ ಕೆಮ್ಮು, ಜ್ವರ ಏನೂ ಕಂಡುಬಂದಿಲ್ಲ. ಮುಂಜಾಗೃತ ಕ್ರಮವಾಗಿ ಅವರನ್ನು ಅವರ ಮನೆಯಲ್ಲೇ ಐಸೋಲೇಷನ್ ವಾರ್ಡ್ ನಲ್ಲಿ ಇಟ್ಟಿದ್ದೇವೆ. ಜೊತೆಗೆ ವಿದೇಶದಿಂದ ಬಂದಿರುವ ಇತರೆ ಐವರ ಮೇಲೂ ಆರೋಗ್ಯ ಇಲಾಖೆ ನಿಗಾ ವಹಿಸಿದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನು ಓದಿ: ಕೊರೊನಾ ಬಗ್ಗೆ ಸುಳ್ಳು ಸುದ್ದಿ ಪೋಸ್ಟ್- ಇಬ್ಬರ ಬಂಧನ

    ಮಹಾಮಾರಿ ಕೊರೊನಾ ವೈರಸ್ ದೇಶದಲ್ಲಿ ಎರಡನೇ ಬಲಿ ಪಡೆದುಕೊಂಡಿದೆ. ದೆಹಲಿಯ 69 ವರ್ಷದ ಮಹಿಳೆಗೆ ವಿದೇಶದಿಂದ ಮರಳಿದ್ದ ಪುತ್ರನಿಂದ ಕೊರೊನಾ ಸೋಂಕು ಹರಡಿತ್ತು. ಅವರನ್ನು ದೆಹಲಿಯ ರಾಮ್ ಮನೋಹರ್ ಲೋಹಿಯಾ (ಆರ್‍ಎಂಎಲ್) ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್ ನಲ್ಲಿ ಇರಿಸಿ ಚಿಕಿತ್ಸೆ ಕೊಡಲಾಗುತ್ತಿತ್ತು. ಆದರೆ ಇಂದು ವೃದ್ಧೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿಮಾಡಿವೆ. ಇದನ್ನು ಓದಿ: ಕೊರೊನಾ ವೈರಸ್‍ಗೆ ದೇಶದಲ್ಲಿ ಎರಡನೇ ಬಲಿ

    ಕಲಬುರ್ಗಿಯಲ್ಲಿ ಮಾರ್ಚ್ 11ರಂದು ಮೃತಪಟ್ಟ 76 ವರ್ಷದ ವೃದ್ಧರಿಗೆ ಕೊರೊನಾ ಸೋಂಕು ತಗಲಿದ್ದನ್ನು ಗುರುವಾರ ರಾತ್ರಿ ಆರೋಗ್ಯ ಸಚಿವ ಶ್ರೀರಾಮುಲು ಖಚಿತಪಡಿಸಿದ್ದರು. ಈ ಮೂಲಕ ಭಾರತದಲ್ಲಿ ಕೊರೊನಾ ಮೊದಲ ಬಲಿ ಪಡೆದಂತಾಗಿತ್ತು. ಹೀಗಾಗಿ ರಾಜ್ಯ ಸರ್ಕಾರ ಮುಂದಿನ ಒಂದು ವಾರ ರಾಜ್ಯದಲ್ಲಿ ಎಲ್ಲೆಡೆ ಹೆಚ್ಚು ಜನ ಸೇರುವ ಸಾರ್ವಜನಿಕ ಸ್ಥಳವನ್ನು ಬಂದ್ ಮಾಡಿದೆ.

  • ಮೋದಿ 5 ಸ್ಟಾರ್ ಹೋಟೆಲ್ ಬಳಸಲ್ಲ, ವಿಮಾನ ನಿಲ್ದಾಣದ ಟರ್ಮಿನಲ್‍ನಲ್ಲೇ ಉಳಿಯುತ್ತಾರೆ

    ಮೋದಿ 5 ಸ್ಟಾರ್ ಹೋಟೆಲ್ ಬಳಸಲ್ಲ, ವಿಮಾನ ನಿಲ್ದಾಣದ ಟರ್ಮಿನಲ್‍ನಲ್ಲೇ ಉಳಿಯುತ್ತಾರೆ

    – ಪ್ರಧಾನಿ ವಿದೇಶ ಪ್ರವಾಸದ ಬಗ್ಗೆ ಅಮಿತ್ ಶಾ ವಿವರಣೆ
    – ಟರ್ಮಿನಲ್‍ನಲ್ಲೇ ವಿಶ್ರಾಂತಿ, ಸ್ನಾನ

    ನವದೆಹಲಿ: ಗೃಹ ಸಚಿವ ಅಮಿತ್ ಶಾ ಮೋದಿಯವರ ಸರಳತೆ ಬಗ್ಗೆ ಕುತೂಹಲಕಾರಿ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.

    ಲೋಕಸಭೆಯಲ್ಲಿ ಬುಧವಾರ ಈ ಕುರಿತು ಮಾತನಾಡಿರುವ ಅವರು, ಹಣ ವ್ಯಯವಾಗುವುದನ್ನು ತಡೆಯುವುದು ಪ್ರಧಾನಿ ನರೇಂದ್ರ ಮೋದಿಯವರ ಮೊದಲ ಆದ್ಯತೆಯಾಗಿದೆ. ವಿದೇಶ ಪ್ರವಾಸಕ್ಕೆ ತೆರಳಿದ ಸಂದರ್ಭದಲ್ಲಿ ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಉಂಟಾದಾಗ ಪ್ರಧಾನಿ ನರೇಂದ್ರ ಮೋದಿಯವರು ಯಾವುದೇ ಪಂಚತಾರಾ ಹೋಟೆಲ್ ಬುಕ್ ಮಾಡುವುದಿಲ್ಲ. ಬದಲಿಗೆ ರಾತ್ರಿ ವಿಮಾನ ನಿಲ್ದಾಣದ ಟರ್ಮಿನಲ್‍ನಲ್ಲಿಯೇ ಉಳಿದುಕೊಂಡು, ವಿಶ್ರಾಂತಿ ಪಡೆದು, ಅಲ್ಲಿಯೇ ಸ್ನಾನ ಮಾಡಿ ಮುಂದಿನ ಕೆಲಸಕ್ಕೆ ತೆರಳುತ್ತಾರೆ ಎಂದು ವಿವರಿಸಿದ್ದಾರೆ.

    ತಾಂತ್ರಿಕ ಕಾರಣಗಳಿಂದ ವಿಮಾನ ಸ್ಥಗಿತಗೊಂಡ ಸಂದರ್ಭದಲ್ಲಿ ಅಥವಾ ವಿಮಾನಕ್ಕೆ ಇಂಧನ ತುಂಬಿಸುವ ಸಂದರ್ಭದಲ್ಲಿ ಮೋದಿಯವರು ಯಾವುದೇ ಹೋಟೆಲಿಗೆ ತೆರಳುವುದಿಲ್ಲ. ಬದಲಿಗೆ ವಿಮಾನ ನಿಲ್ದಾಣದ ಟರ್ಮಿನಲ್‍ನಲ್ಲಿಯೇ ಉಳಿದುಕೊಳ್ಳುತ್ತಾರೆ. ಆದರೆ ಇತರೆ ದೇಶದ ಪ್ರಧಾನಿಗಳು ಹಾಗೂ ಅವರ ನಿಯೋಗ ಪಂಚತಾರಾ ಹೋಟೆಲ್‍ನಲ್ಲಿ ತಂಗುತ್ತದೆ ಎಂದು ವಿವರಿಸಿದರು.

    ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ವಿದೇಶ ಪ್ರವಾಸದಲ್ಲಿದ್ದರು. ಆಗ ವಿಮಾನಕ್ಕೆ ಇಂಧನ ತುಂಬಿಸುವ ಸಲುವಾಗಿ ರಾತ್ರಿ ಉಳಿದುಕೊಳ್ಳಲು ಹೋಟೆಲ್ ಬುಕ್ ಮಾಡಲಾಗಿತ್ತು. ಆದರೆ ಮೋದಿಯವರು ಹೋಟೆಲ್‍ನಲ್ಲಿ ಉಳಿದುಕೊಳ್ಳಲಿಲ್ಲ, ಬದಲಿಗೆ ವಿಮಾನ ನಿಲ್ದಾಣದ ಟರ್ಮಿನಲ್‍ನಲ್ಲಿಯೇ ಉಳಿದುಕೊಂಡಿದ್ದರು. ಪ್ರಧಾನಿ ಮೋದಿ ಈ ವರೆಗೆ ವಿಮಾನದಲ್ಲಿ ತಾಂತ್ರಿಕ ದೋಷವಾದಾಗ ಹೋಟೆಲ್ ಬುಕ್ ಮಾಡಿಕೊಂಡು ಉಳಿದಿಲ್ಲ ಎಂದು ಶಾ ತಿಳಿಸಿದರು.

    ಪ್ರಧಾನಿ ಮೋದಿಯವರೊಂದಿಗೆ ಅಧಿಕಾರಿಗಳ ತಂಡ ತೆರಳಿದಾಗ 4-5 ಜನ ಅಧಿಕಾರಿಗಳಿದ್ದರೆ ಕಾರ್ ಬಳಸುತ್ತಾರೆ. ಇನ್ನೂ ಹೆಚ್ಚು ಜನ ಇದ್ದರೆ ಬಸ್ ಅಥವಾ ದೊಡ್ಡ ವಾಹನ ಬಳಸುವಂತೆ ಮೋದಿ ಸೂಚಿಸುತ್ತಾರೆ. ಮೋದಿಯವರು ವೈಯಕ್ತಿಕ ಹಾಗೂ ಸಾರ್ವಜನಿಕ ಜೀವನದಲ್ಲಿ ಕಟ್ಟುನಿಟ್ಟಿನಿಂದ ಶಿಸ್ತು ಕಾಪಾಡಿಕೊಂಡು ಬಂದಿದ್ದಾರೆ. ವಿದೇಶಕ್ಕೆ ತೆರಳುವಾಗ ತಮ್ಮ ಅಧಿಕಾರಿ ವರ್ಗದ ಪೈಕಿ ಕೇವಲ ಶೇ.20 ಜನರನ್ನು ಮಾತ್ರ ಕರೆದುಕೊಂಡು ಹೋಗುತ್ತಾರೆ. ಅಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರು ಬಳಸುವುದನ್ನು ಸಹ ಅವರು ವಿರೋಧಿಸುತ್ತಾರೆ. ಇತ್ತೀಚೆಗೆ ಅಧಿಕಾರಿಗಳು ಹೆಚ್ಚು ಕಾರುಗಳನ್ನು ಬಳಸುತ್ತಿದ್ದರು ಆದರೆ ಇದೀಗ ಬಸ್ ಅಥವಾ ದೊಡ್ಡ ವಾಹನವನ್ನು ಬಳಸುತ್ತಾರೆ ಎಂದು ವಿವರಿಸಿದರು.

  • 3 ವರ್ಷ, 27 ವಿದೇಶ ಪ್ರವಾಸ, 44 ದೇಶ: ಮೋದಿಯ ವಿದೇಶ ಪ್ರಯಾಣಕ್ಕೆ ಎಷ್ಟು ವೆಚ್ಚವಾಗಿದೆ? ಇಲ್ಲಿದೆ ಪೂರ್ಣ ಮಾಹಿತಿ

    3 ವರ್ಷ, 27 ವಿದೇಶ ಪ್ರವಾಸ, 44 ದೇಶ: ಮೋದಿಯ ವಿದೇಶ ಪ್ರಯಾಣಕ್ಕೆ ಎಷ್ಟು ವೆಚ್ಚವಾಗಿದೆ? ಇಲ್ಲಿದೆ ಪೂರ್ಣ ಮಾಹಿತಿ

    ನವದೆಹಲಿ: ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷಗಳನ್ನು ಪೂರೈಸುತ್ತಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಇದೂವರೆಗೂ 27 ಬಾರಿ ವಿದೇಶಿ ಪ್ರಯಾಣ ಕೈಗೊಂಡಿದ್ದು, ಬರೋಬ್ಬರಿ 44 ದೇಶಗಳಿಗೆ ಭೇಟಿ ನೀಡಿದ್ದಾರೆ. ಈ ವಿದೇಶ ಪ್ರಯಾಣಕ್ಕಾಗಿ ಅಂದಾಜು 275 ಕೋಟಿ ರೂ. ಖರ್ಚಾಗಿದೆ ಎಂದು pmindia.gov.in. ವೆಬ್‍ಸೈಟ್ ತಿಳಿಸಿದೆ.

    ಮೋದಿ ಅಧಿಕಾರ ಸ್ವೀಕರಿಸಿದ ಬಳಿಕ ಜೂನ್ 15, 2014ರಲ್ಲಿ ಮೊದಲ ಬಾರಿಗೆ ನೆರೆಯ ಭೂತಾನ್ ರಾಷ್ಟ್ರಕ್ಕೆ ತೆರಳಿದ್ದರು. ದಾಖಲೆಗಳ ಪ್ರಕಾರ ಮೋದಿಯವರ ಒಟ್ಟು ಪ್ರವಾಸಕ್ಕೆ 274,88,64,465 ರೂ. ಖರ್ಚಾಗಿದೆ.

    ಏಪ್ರಿಲ್ 2015ರಲ್ಲಿ ಕೈಗೊಂಡಿದ್ದ 9 ದಿನಗಳ ಫ್ರಾನ್ಸ್, ಜರ್ಮನಿ ಮತ್ತು ಕೆನಡಾ ದೇಶಗಳ ಪ್ರವಾಸಕ್ಕೆ ಅತಿ ಹೆಚ್ಚು ಹಣ ಖರ್ಚಾಗಿದ್ದು, ಒಟ್ಟು 31,25,78,000 ರೂಪಾಯಿ ವ್ಯಯವಾಗಿರುವ ಮಾಹಿತಿ ವೆಬ್‍ಸೈಟ್‍ನಲ್ಲಿದೆ. ಭೂತಾನ್ ದೇಶದ ಪ್ರವಾಸಕ್ಕೆ ಕಡಿಮೆ ಹಣ ವ್ಯಯವಾಗಿದ್ದು ಒಟ್ಟು 2,45,27,465 ರೂ. ಖರ್ಚಾಗಿದೆ.

    ಈ ಅಧಿಕಾರದ ಅವಧಿಯಲ್ಲಿ ಮೋದಿ ಅವರು ಅಮೇರಿಕ, ಜಪಾನ್, ನೇಪಾಳ, ಚೀನಾ ಈ ದೇಶಗಳಿಗೆ ಎರಡು ಬಾರಿ ಭೇಟಿ ನೀಡಿದ್ದಾರೆ. ವೆಬ್‍ಸೈಟ್ ನಲ್ಲಿ ದಾಖಲಾಗಿರುವಂತೆ ಕೊನೆಯ ಬಾರಿ ನೋಟ್ ಬ್ಯಾನ್ ನಂತರ ನವೆಂಬರ್ 2016ರಂದು ಜಪಾನ್ ದೇಶಕ್ಕೆ ಮೋದಿ ಪ್ರವಾಸ ಹೋಗಿದ್ದು, ಇದರ ವೆಚ್ಚದ ಮಾಹಿತಿ ವೆಬ್‍ಸೈಟ್‍ನಲ್ಲಿ ಅಪ್‍ಡೇಟ್ ಆಗಿಲ್ಲ.

    ಮೋದಿಯವರು ಮೇ ಮತ್ತು ಜುಲೈ ತಿಂಗಳಲ್ಲಿ ಶ್ರೀಲಂಕಾ, ಇಸ್ರೇಲ್, ರಷ್ಯಾ, ಜರ್ಮನಿ, ಸ್ಪೇನ್ ಮತ್ತು ಕಜಕಿಸ್ತಾನ ದೇಶಗಳ ಪ್ರವಾಸವನ್ನು ಕೈಗೊಳ್ಳಲಿದ್ದಾರೆ.

    ಮನಮೋಹನ್ ಸಿಂಗ್ ಪ್ರವಾಸಕ್ಕೆ ಎಷ್ಟು ಖರ್ಚಾಗಿತ್ತು?
    ಮಾಜಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ತಮ್ಮ 9 ವರ್ಷಗಳ ಅವಧಿಯಲ್ಲಿ ಒಟ್ಟು 67 ಬಾರಿ ವಿದೇಶ ಪ್ರಯಾಣ ಕೈಗೊಂಡಿದ್ದರು. 9 ವರ್ಷಗಳಲ್ಲಿ ಮನಮೋಹನ್ ಸಿಂಗ್ ವಿದೇಶ ಪ್ರವಾಸಕ್ಕೆ 642.45 ಕೋಟಿ ರೂ. ವೆಚ್ಚವಾಗಿದೆ ಎಂದು 2013ರಲ್ಲಿ ಆರ್‍ಟಿಐ ಅಡಿ ಮಾಹಿತಿ ಸಿಕ್ಕಿತ್ತು. ಈ ಮಾಹಿತಿಯಲ್ಲಿ 62 ವಿದೇಶಿ ಪ್ರಯಾಣದ ವೆಚ್ಚಗಳ ವಿವರ ಮಾತ್ರ ಸಿಕ್ಕಿದ್ದು, ಉಳಿದ 5 ವಿದೇಶಿ ಪ್ರಯಾಣದ ಖರ್ಚು ವೆಚ್ಚಗಳು ಸಿಕ್ಕಿರಲಿಲ್ಲ.

    2012ರ  ಜಿ 20 ಅಧಿವೇಶನಕ್ಕೆ ಕೈಗೊಂಡ 7 ದಿನಗಳ ಪ್ರವಾಸಕ್ಕೆ 26.94 ಕೋಟಿ ರೂ. ವೆಚ್ಚವಾಗಿದ್ದು, ಇದು ಮನಮೋಹನ್ ಸಿಂಗ್ ಪ್ರವಾಸದಲ್ಲಿನ ಅತಿ ಹೆಚ್ಚು ಹಣ ಖರ್ಚಾಗಿರುವ ಪ್ರವಾಸ ಎನ್ನುವುದು ಆರ್‍ಟಿಐ ಅಡಿ ಬಹಿರಂಗವಾಗಿತ್ತು.