Tag: Foreign Service

  • ವಾಯುಸೇನೆಯಿಂದ ಇತಿಹಾಸ – ವಿದೇಶಾಂಗ ಇಲಾಖೆಯ ಉನ್ನತ ಹುದ್ದೆ ಅಲಂಕರಿಸಿದ ಮಹಿಳಾ ವಿಂಗ್ ಕಮಾಂಡರ್

    ವಾಯುಸೇನೆಯಿಂದ ಇತಿಹಾಸ – ವಿದೇಶಾಂಗ ಇಲಾಖೆಯ ಉನ್ನತ ಹುದ್ದೆ ಅಲಂಕರಿಸಿದ ಮಹಿಳಾ ವಿಂಗ್ ಕಮಾಂಡರ್

    ನವದೆಹಲಿ: ಭಾರತೀಯ ವಾಯುಪಡೆಯ ಮಹಿಳಾ ವಿಂಗ್ ಕಮಾಂಡರ್ ಅಂಜಲಿ ಸಿಂಗ್ ಅವರು ರಷ್ಯಾದ ಮಾಸ್ಕೊದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯಲ್ಲಿ ಡೆಪ್ಯೂಟಿ ಏರ್ ಅಟ್ಯಾಚೆ ಸೇವೆಗೆ ನಿಯೋಜನೆಗೊಂಡಿದ್ದಾರೆ. ಈ ಮೂಲಕ ವಿದೇಶಿ ಸೇವೆಗೆ ನೇಮಕವಾದ ಭಾರತದ ಮೊದಲ ಸೇನಾ ಮಹಿಳೆ ಎಂಬ ಕೀರ್ತಿಗೆ ಪಾತ್ರವಾಗಿದ್ದಾರೆ.

    ಡೆಪ್ಯೂಟಿ ಏರ್ ಅಟ್ಯಾಚೆ ಸೇವೆಗೆ ನೇಮಕವಾದ ಅಧಿಕಾರಿ ವಿದೇಶಗಳಲ್ಲಿರುವ ಭಾರತೀಯ ರಾಯಭಾರಿ ಕಚೇರಿಗಳಲ್ಲಿ ರಕ್ಷಣಾ ವ್ಯವಹಾರಗಳನ್ನು ನೋಡಿಕೊಳ್ಳುತ್ತಾರೆ. ಇಂತಹ ಉನ್ನತ ಹುದ್ದೆಗೆ ನೇಮಕವಾದ ಮೊದಲ ಮಹಿಳಾ ಕಮಾಂಡರ್ ಆಗಿ ಅಂಜಲಿ ಅವರು ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಇಲ್ಲಿಯವರೆಗೂ ಈ ಹುದ್ದೆಗೆ ಭಾರತದ ಮೂರೂ ಶಸಸ್ತ್ರ ಪಡೆಗಳಲ್ಲಿ ಪುರುಷ ಅಧಿಕಾರಿಗಳನ್ನೇ ನೇಮಕ ಮಾಡಲಾಗುತ್ತಿತ್ತು.

    ಈ ಬಾರಿ ಈ ಸಂಪ್ರದಾಯವನ್ನು ವಾಯುಪಡೆ ಮುರಿದು ಮೊದಲ ಬಾರಿಗೆ ಮಹಿಳಾ ಅಧಿಕಾರಿಯನ್ನು ನೇಮಿಸಿದೆ. ಈ ಮೂಲಕ ಅಂಜಲಿ ಅವರಿಗೆ ವಿದೇಶದಲ್ಲಿ ದೇಶದ ಪರವಾಗಿ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಟ್ಟಿದೆ.

    ಸೆ. 10ರಂದು ಅಂಜಲಿ ಸಿಂಗ್ ಅವರು ಮಾಸ್ಕೊದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯಲ್ಲಿ ಡೆಪ್ಯೂಟಿ ಏರ್ ಅಟ್ಯಾಚೆ ಹುದ್ದೆಗೆ ಸೇರಿದ್ದಾರೆ. ವಿದೇಶದಲ್ಲಿರುವ ಭಾರತೀಯ ಕಾರ್ಯಾಚರಣೆಗಳಲ್ಲಿ ಮಿಲಿಟರಿ ರಾಜತಾಂತ್ರಿಕರಾಗಿ ನೇಮಕಗೊಂಡ ಭಾರತದ ಮೊದಲ ಮಹಿಳಾ ಸಶಸ್ತ್ರ ಪಡೆ ಅಧಿಕಾರಿ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ ಎಂದು ಭಾರತೀಯ ರಾಯಭಾರ ಕಚೇರಿ ಟ್ವೀಟ್ ಮಾಡಿದೆ.

    ಮಿಗ್-29 ಯುದ್ಧ ವಿಮಾನ ಹಾರಾಟದ ತರಬೇತಿ ಪಡೆದಿರುವ ಅಂಜಲಿ ಅವರು, ಏರೋನಾಟಿಕಲ್ ಎಂಜಿನಿಯರ್ ಅಧಿಕಾರಿಯಾಗಿ 17 ವರ್ಷಗಳ ಸೇವಾ ಅನುಭವವನ್ನು ಹೊಂದಿದ್ದಾರೆ.