Tag: foreign citizens

  • ಬಿಡುವಿನ ವೇಳೆ ಗೋಕರ್ಣದಲ್ಲಿ ತರಕಾರಿ ಬೆಳೆದ ವಿದೇಶಿ ಜೋಡಿ

    ಬಿಡುವಿನ ವೇಳೆ ಗೋಕರ್ಣದಲ್ಲಿ ತರಕಾರಿ ಬೆಳೆದ ವಿದೇಶಿ ಜೋಡಿ

    ಕಾರವಾರ: ಪ್ರವಾಸಕ್ಕೆ ಆಗಮಿಸಿದಾಗ ಲಾಕ್‍ಡೌನ್ ನಿಂದಾಗಿ ತಮ್ಮ ದೇಶಕ್ಕೆ ಮರಳಿ ತೆರಳಲಾಗದೇ ಗೋಕರ್ಣದಲ್ಲೇ ಉಳಿದುಕೊಂಡಿದ್ದ ಜೋಡಿ ಸಾವಯವ ಪದ್ಧತಿಯಿಂದ ಕೃಷಿ ಮಾಡಿ ತರಕಾರಿ ಬೆಳೆದು ಇತರರಿಗೆ ಮಾದರಿಯಾಗಿದೆ.

    ಇಟಲಿಯ ಮೌರಿಯಾ ಹಾಗೂ ಪೊಲಾಂಡ್ ದೇಶದ ಜಾಸ್ಮಿನ್ ಜೋಡಿ ಲಾಕ್‍ಡೌನ್‍ನಲ್ಲಿ ಬಿಡುವಿನ ವೇಳೆ ತಾವು ಉಳಿದುಕೊಂಡಿರುವ ಗೋಕರ್ಣದ ರುದ್ರಪಾದದ ವಸತಿ ಗೃಹದ ಪಕ್ಕದಲ್ಲಿರುವ ಖಾಲಿ ಜಾಗದಲ್ಲಿ ತರಕಾರಿ ಬೆಳೆದಿದ್ದು, ಇವರ ಆಸಕ್ತಿಗೆ ಸ್ಥಳೀಯರೇ ಬೆರಗಾಗಿದ್ದಾರೆ. ಲಾಕ್‍ಡೌನ್ ಸಂದರ್ಭದಲ್ಲಿ ಈ ಜೋಡಿ ಅವರ ದೇಶಕ್ಕೆ ತೆರಳಬೇಕಿತ್ತು. ಆದರೆ ವಿಸಾ ಸಮಸ್ಯೆಯಿಂದ ಸಾಧ್ಯವಾಗಿರಲಿಲ್ಲ. ಹೀಗಾಗಿ ಸಮಯ ವ್ಯರ್ಥ ಮಾಡದೆ ತಾವು ಉಳಿದುಕೊಂಡಿರುವ ವಸತಿ ಗೃಹದ ಬಳಿಯ ಜಾಗದಲ್ಲಿ ಮಾಲೀಕರಿಗೆ ವಿನಂತಿಸಿ ಸಾವಯವ ಪದ್ಧತಿಯಿಂದ ತರಕಾರಿ ಬೆಳೆದಿದ್ದಾರೆ.

    ಇಟಲಿಯ ಪ್ರವಾಸಿಗ ಮೌರಿಯಾ ಕಳೆದ ಆರು ವರ್ಷಗಳಿಂದ ಗೋಕರ್ಣಕ್ಕೆ ಬರುತ್ತಿದ್ದಾರೆ. ಅದೇ ರೀತಿ ಕಳೆದ ವರ್ಷ ಬಂದಿದ್ದು, ಮೂರು ತಿಂಗಳು ವಸತಿ ಹೂಡಿದ್ದರು. ಇನ್ನೇನು ತಮ್ಮ ದೇಶಕ್ಕೆ ಹೊರಡಬೇಕಿದ್ದ ಇವರನ್ನು ಲಾಕ್‍ಡೌನ ತಡೆದಿತ್ತು. ಲಾಕ್‍ಡೌನ್ ಅವಧಿಯ ನಂತರ ಹಲವು ವಿದೇಶಿ ಪ್ರವಾಸಿಗರು ಇಲ್ಲಿನ ವಿವಿಧ ಇಲಾಖೆಗಳ ಸಹಾಯದಿಂದ ಸ್ವದೇಶಕ್ಕೆ ತೆರಳಿದ್ದರು. ಆದರೆ ಇವರು ತಾಂತ್ರಿಕ ತೊಂದರೆಯಿಂದ ಗೋಕರ್ಣದಲ್ಲೇ ಉಳಿಯುವ ಪರಿಸ್ಥಿತಿ ಬಂದಿತ್ತು.

    ಇಲ್ಲಿ ಉಳಿದು ಕೇವಲ ತಿಂಡಿ, ಊಟ ಮಾಡಿದರೆ ಏನು ಪ್ರಯೋಜನ ಎಂದು ಯೋಚಿಸಿ, ಈ ಭಾಗದಲ್ಲಿ ತರಕಾರಿ ಬೆಳೆಯ ಮಾಸ ಪ್ರಾರಂಭವಾಗಿದ್ದು, ಅದರಂತೆ ತರಕಾರಿ ಬೆಳೆದರೆ ಹೇಗೆ ಎಂದು ಯೋಚಿಸಿದ್ದಾರೆ. ತಾವು ಉಳಿದುಕೊಂಡಿದ್ದ ಮನೆಯ ಪಕ್ಕದ ಚಿಕ್ಕ ಜಾಗದಲ್ಲಿ ವಿವಿಧ ಜಾತಿಯ ತರಕಾರಿ ಬೆಳಯಲು ಪ್ರಾರಂಭಿಸಿದ್ದು, ಸ್ವತಃ ಓಳಿ ಕಡಿದು ಬೀಜ ಬಿತ್ತಿ ವಿವಿಧ ರೀತಿಯ ತರಕಾರಿ ಬೆಳೆದಿದ್ದು ಇನ್ನೆರಡು ತಿಂಗಳಲ್ಲಿ ಫಸಲು ಬರಲಿದೆ.

    ಟೊಮೆಟೊ, ಪಾಲಕ್ ಸೊಪ್ಪು, ಹರಿಗೆ ಮೆಣಸು ಸೇರಿದಂತೆ ವಿವಿಧ ಜಾತಿಯ ತರಕಾರಿಗಳನ್ನು ತನ್ನ ಗೆಳತಿಯ ಸಹಾಯದಿಂದ ಬೆಳೆದಿದ್ದಾರೆ. ಈ ಕುರಿತು ಮಾತನಾಡಿರುವ ಮೌರಿಯಾ, ವೃತ್ತಿಯಲ್ಲಿ ಶಿಕ್ಷಕನಾಗಿದ್ದು, ಹವ್ಯಾಸವಾಗಿ ಕೃಷಿ ಚಟುವಟಿಕೆಯನ್ನು ನನ್ನ ದೇಶದಲ್ಲಿ ಮಾಡುತ್ತಿದ್ದೆ. ಈ ವರ್ಷ ನಿಗದಿತ ಸಮಯಕ್ಕೆ ಸ್ವದೇಶಕ್ಕೆ ತೆರಳಾಗದ ಕಾರಣ ಈ ಕಾರ್ಯದಲ್ಲಿ ನಿರತನಾಗಿದ್ದೇನೆ. ಸ್ವದೇಶಕ್ಕೆ ತೆರಳಲಾಗದ ಬಗ್ಗೆ ಬೇಸರವಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿ, ತುಂಬಾ ನೋವಿದೆ. ತಿಂಗಳಿಗೊಮ್ಮೆ ವೀಸಾ ಮುಂದುವರಿಸಬೇಕು, ಪೊಲೀಸರು ವಿಚಾರಿಸುತ್ತಾರೆ. ಆತಂಕವಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದೆಲ್ಲವನ್ನು ಮರೆಯಲು ಈ ಕೆಲಸ ಮಾಡುತ್ತಿದ್ದು, ಇಲ್ಲಿ ಬೆಳೆಯುವ ಬೆಳೆಗೆ ಸಾವಯವ ಗೊಬ್ಬರವನ್ನೇ ಬಳೆಸುತ್ತಿದ್ದೇನೆ. ನಮ್ಮ ಮನೆಯಲ್ಲಿ ಬಳಸಿದ ವಸ್ತುಗಳಿಂದ ಉಳಿದ ಹಸಿಕಸವನ್ನು ಒಂದೆಡೆ ಸೇರಿಸಿ ಗೊಬ್ಬರ ತಯಾರಿಸಿ ಗಿಡಗಳಿಗೆ ಹಾಕಿ ಬೆಳೆಸಿದ್ದೇನೆ ಎಂದು ತಿಳಿಸಿದರು.

    ಗೆಳತಿಯ ಸಾಥ್!
    ಇಟಲಿಯ ಈ ಪ್ರಜೆಯೊಂದಿಗೆ ಪೊಲೆಂಡ್ ದೇಶದ ಜಾಸ್ಮಿನ್ ಇವರ ಕಾಯಕಕ್ಕೆ ಸಾಥ್ ನೀಡಿದ್ದಾರೆ. ತಾವು ನೆಟ್ಟ ತರಕಾರಿ ಗಿಡಗಳಿಗೆ ನೀರುಣಿಸುವುದು, ಗೊಬ್ಬರ ಹಾಕುವುದು ಸೇರಿದಂತೆ ವಿವಿಧ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ಇವರು, ವೃತ್ತಿಯಲ್ಲಿ ಫೀಜೀಯೋಥೆರಿಪಿ ಮತ್ತು ಯೋಗ ಶಿಕ್ಷಕಿಯಾಗಿದ್ದಾರೆ.

    ಕೃಷಿಗಾಗಿ ಹವಾಮಾನದ ವೇಳಾಪಟ್ಟಿ!
    ಕಾಲ ಕಾಲಕ್ಕೆ ನಕ್ಷತ್ರ, ಗೃಹಗಳು, ಚಂದ್ರ ಯಾವ ರೀತಿಯಲ್ಲಿ ಬದಲಾಗುತ್ತಾನೆ ಆ ವೇಳೆಯಲ್ಲಿನ ನಮ್ಮ ಹವಾಮಾನದ ಕುರಿತು ಸಚಿತ್ರವಾಗಿ ವೇಳಾ ಪಟ್ಟಿಯನ್ನು ಈ ಜೋಡಿ ತಯಾರಿಸಿಕೊಂಡಿದೆ. ವರ್ಷದಲ್ಲಿನ ಬದಲಾವಣೆಗಳ ಸಂಪೂರ್ಣ ಮಾಹಿತಿ ಇದರಲ್ಲಿದ್ದು, ಹವಮಾನ ಬದಲಾವಣೆಗೆ ಯಾವ ತರಕಾರಿ ಬೆಳೆಯಬೇಕು ಎಂಬ ಮಾರ್ಗವನ್ನು ಅನುಸರಿಸಿ ಬೆಳೆಯುತಿದ್ದಾರೆ.

    ಭಾರತ ಅಚ್ಚುಮೆಚ್ಚಿನ ದೇಶ, ಗೋಕರ್ಣವೆಂದರೆ ಪ್ರಾಣ: ಹಲವು ವರ್ಷಗಳಿಂದ ಭಾರತದ ವಿವಿಧ ಪೌರಾಣಿಕ, ಪ್ರವಾಸಿ, ಸ್ಥಳಗಳಿಗೆ ಭೇಟಿ ನೀಡುತ್ತಿದ್ದೇನೆ. ಉತ್ತರ, ದಕ್ಷಿಣ ಭಾತದ ಹಲವೆಡೆ ಭೇಟಿ ನೀಡಿದ್ದು, ಇಲ್ಲಿನ ಆಚಾರ, ವಿಚಾರ, ಸಂಸ್ಕೃತಿ ನಮ್ಮ ಜೀವನಕ್ಕೆ ಮಾದರಿಯಾಗಿದೆ. ಇದು ನನ್ನ ನೆಚ್ಚಿನ ದೇಶ. ಪುರಾಣ ಪ್ರಸಿದ್ಧ ಕ್ಷೇತ್ರ, ಸುಂದರ ಕಡಲತೀರ ಆತ್ಮೀಯತೆ ಸ್ಥಳೀಯ ಜನ ಗೋಕರ್ಣ ನನ್ನ ಪ್ರಾಣವಿದ್ದಂತೆ ಎಂದು ಈ ಇಬ್ಬರು ಪ್ರವಾಸಿಗರು ಹೆಮ್ಮೆಯಿಂದ ನುಡಿಯುತ್ತಾರೆ.

    ವಾರಾಂತ್ಯದ ರಜೆ ಬಂತೆಂದರೆ ಗೋಕರ್ಣದ ಕಡಲತೀರಗಳಿಗೆ ಮುಗಿಬೀಳುವ ಯುವ ಸಮೂಹದ ಪ್ರವಾಸಿಗರು, ಮೋಜು ಮಸ್ತಿ ಮಾಡುತ್ತ ಕುಡಿದು ತೂರಾಡುತ್ತಾರೆ. ಪುಣ್ಯ ಕ್ಷೇತ್ರಕ್ಕೆ ವಿದೇಶಿಗರು ಬಂದು ಅವರ ಸಂಸ್ಕೃತಿಯನ್ನು ಬಿಟ್ಟು, ನಮ್ಮ ಸಂಸ್ಕೃತಿಯನ್ನು ಅದೆಷ್ಟೂ ಜನ ಅಳವಡಿಸಿಕೊಳ್ಳುತ್ತಿದ್ದು, ಇದು ಇಂದಿನ ಯುವ ಪೀಳಿಗೆಗೆ ಮಾದರಿಯಾಗಬೇಕಿದೆ.

    ಸದ್ಯ ಈ ಜೋಡಿ ಬರಡು ಭೂಮಿಯಲ್ಲಿ ಸಾವಯವ ಕೃಷಿಯ ಮೂಲಕ ತರಕಾರಿ ಬೆಳೆದು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದೆ. ಕೆಲವೇ ದಿನಗಳಲ್ಲಿ ಫಸಲು ಕೈಗೆ ಬರಲಿದೆ. ಈ ಫಸಲನ್ನು ತಮ್ಮ ಉಪಯೋಗಕ್ಕೆ ಬಳಸಿಕೊಳ್ಳುವ ಜೊತೆಗೆ ಬೆಳೆ ಬೆಳೆಯಲು ಭೂಮಿ ನೀಡಿದ ಮಾಲೀಕನ ಋಣ ತೀರಿಸುವ ಔದಾರ್ಯ ತೋರಿದ್ದಾರೆ.

  • ಸ್ಕಿಮ್ಮಿಂಗ್ ಮಷೀನ್ ಬಳಸಿ ಎಟಿಎಂ ಕಾರ್ಡ್‌ಗಳ ಮಾಹಿತಿ ಕದ್ದರು – ನಕಲಿ ಕಾರ್ಡ್ ಮೂಲಕ ಹಣ ಪೀಕಿದರು

    ಸ್ಕಿಮ್ಮಿಂಗ್ ಮಷೀನ್ ಬಳಸಿ ಎಟಿಎಂ ಕಾರ್ಡ್‌ಗಳ ಮಾಹಿತಿ ಕದ್ದರು – ನಕಲಿ ಕಾರ್ಡ್ ಮೂಲಕ ಹಣ ಪೀಕಿದರು

    ರಾಮನಗರ: ಎಟಿಂಎ ಕೇಂದ್ರಗಳಲ್ಲಿ ಸ್ಕಿಮ್ಮಿಂಗ್ ಮಷೀನ್ ಅಳವಡಿಸಿ ಎಟಿಎಂ ಕಾರ್ಡ್‌ಗಳ ಮಾಹಿತಿ ಕದ್ದು, ನಕಲಿ ಕಾರ್ಡ್ ಮೂಲಕ ಹಣ ಕದಿಯುತ್ತಿದ್ದ ಇಬ್ಬರು ವಿದೇಶಿ ಪ್ರಜೆಗಳನ್ನು ರಾಮನಗರ ಜಿಲ್ಲೆಯ ಕುದೂರು ಪೊಲೀಸರು ಬಂಧಿಸಿದ್ದಾರೆ.

    ಸಾರ್ವಜನಿಕರು ಎಟಿಎಂಗಳಲ್ಲಿ ಹಣ ಡ್ರಾ ಮಾಡುವ ವೇಳೆ ಎಟಿಎಂ ಕಾರ್ಡ್‌ಗಳ ಮಾಹಿತಿ ಕಳ್ಳತನ ಮಾಡಿ, ನಂತರ ನಕಲಿ ಎಟಿಎಂ ಕಾರ್ಡ್ ಮೂಲಕ ಹಣ ಡ್ರಾ ಮಾಡಿಕೊಳ್ಳುತ್ತಿದ್ದ ಇಬ್ಬರು ತಾಂಜೇನಿಯಾ ವಿದ್ಯಾರ್ಥಿಗಳನ್ನ ರಾಮನಗರ ಜಿಲ್ಲೆಯ ಕುದೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರನ್ನು ತಾಂಜೇನಿಯಾ ದೇಶದ ಅಲೆಕ್ಸ್ ಮೆಂಡ್ರಾಡ್ ಮ್ಸೆಕೆ(24), ಜಾರ್ಜ್ ಜೆನೆಸ್ ಅಸ್ಸೆಯ್(24) ಎಂದು ಗುರುತಿಸಲಾಗಿದೆ.

    ಕಳ್ಳತನ ಮಾಡಿದ್ದು ಹೇಗೆ?
    ಬಂಧಿತ ಆರೋಪಿಗಳು ಸೆಕ್ಯೂರಿಟಿ ಗಾರ್ಡ್‌ಗಳಿಲ್ಲದ ಎಟಿಎಂ ಕೇಂದ್ರಗಳನ್ನ ಗುರಿಯಾಗಿಸಿಕೊಂಡು, ಎಟಿಎಂನಲ್ಲಿ ಸ್ಕಿಮ್ಮಿಂಗ್ ಮಷೀನ್ ಅಳವಡಿಸುತ್ತಿದ್ದರು. ನಂತರ ಎಟಿಎಂ ಕೇಂದ್ರಗಳಿಗೆ ಬಂದ ಸಾರ್ವಜನಿಕರು ಹಣ ಡ್ರಾ ಮಾಡುವ ವೇಳೆ ಎಟಿಎಂ ಮಾಹಿತಿ ಹಾಗೂ ಸೀಕ್ರೆಟ್ ಪಿನ್ ಎಲ್ಲವೂ ಸಹ ಸ್ಕಿಮ್ಮಿಂಗ್ ಮಷೀನಿನಲ್ಲಿ ರೆಕಾರ್ಡ್ ಆಗುತ್ತಿತ್ತು. ನಂತರ ನಕಲಿ ಎಟಿಎಂಗಳಿಗೆ ಮಾಹಿತಿಯನ್ನ ತುಂಬಿ ಬೇರೆ ಎಟಿಎಂಗಳಲ್ಲಿ ನಕಲಿ ಎಟಿಎಂ ಕಾರ್ಡ್‌ಗಳನ್ನು ಬಳಸಿ ಖದೀಮರು ಹಣ ಡ್ರಾ ಮಾಡಿಕೊಳ್ಳುತ್ತಿದ್ದರು.

    ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?
    ಹೀಗೆ ಕುದೂರು ಪೊಲೀಸ್ ಠಾಣಾ ವ್ಯಾಪ್ತಿಯ ಗೊಲ್ಲಹಳಿ ಗ್ರಾಮದ ಶಿವಕುಮಾರ್ ಎಂಬವರ ಕೆನರಾ ಬ್ಯಾಂಕ್ ಎಟಿಎಂನ ಮಾಹಿತಿ ಕದ್ದು, ಆರೋಪಿಗಳು ಹಣ ಡ್ರಾ ಮಾಡುತ್ತಿದ್ದರು. ಎಟಿಎಂ ತಮ್ಮ ಬಳಿಯೇ ಇದ್ದರೂ ಹಣ ಡ್ರಾ ಆಗುತ್ತಿರುವ ಬಗ್ಗೆ ಮಾಹಿತಿ ತಿಳಿದ ಶಿವಕುಮಾರ್ ಅವರು ಕುದೂರು ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದರು. ಈ ಹಿನ್ನೆಲೆ ಪ್ರಕರಣ ದಾಖಲಿಸಿಕೊಂಡಿದ್ದ ಕುದೂರು ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ.

    ಅಲೆಕ್ಸ್ ಮೆಂಡ್ರಾಡ್ ಮ್ಸೆಕೆ ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದು, ಯಲಹಂಕದ ಫ್ಲಾಟ್‍ವೊಂದರಲ್ಲಿ ವಾಸವಿದ್ದನು. ಇತ್ತ ಮತ್ತೊಬ್ಬ ಆರೋಪಿ ಜಾರ್ಜ್ ಕುಮಾರಸ್ವಾಮಿ ಲೇಔಟ್‍ನ ರಾಜ್ಯೋತ್ಸವ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದನು.

    ಬಂಧಿತರಿಂದ 1 ಕಾರು, 2 ಬೈಕ್, 1 ಲ್ಯಾಪ್ ಟಾಪ್, 4 ಮೊಬೈಲ್ ಫೋನ್‍ಗಳು, ನಕಲಿ ಎಟಿಎಂ ಕಾರ್ಡ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಕುದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

  • ನಡು ರಸ್ತೆಯಲ್ಲೇ ಮಹಿಳೆಯ ಬಟ್ಟೆ ಬಿಚ್ಚಲು ಯತ್ನಿಸಿದ ಕಾಮುಕ

    ನಡು ರಸ್ತೆಯಲ್ಲೇ ಮಹಿಳೆಯ ಬಟ್ಟೆ ಬಿಚ್ಚಲು ಯತ್ನಿಸಿದ ಕಾಮುಕ

    ಬೆಂಗಳೂರು: ಗಾಂಜಾ ಗುಂಗಿನಲ್ಲಿದ್ದ ಕಾಮುಕನೊಬ್ಬ ಹಾಡಹಗಲೇ ನಡು ರಸ್ತೆಯಲ್ಲಿ ಮಹಿಳೆಯ ಬಟ್ಟೆ ಬಿಚ್ಚಲು ಯತ್ನಿಸಿದ ಘಟನೆ ಬೆಂಗಳೂರಿನ ಕಲ್ಯಾಣನಗರ ಸಮೀಪ ಚಲ್ಲಕೆರೆ ಬಳಿ ನಡೆದಿದೆ.

    ಇದೇ ತಿಂಗಳ 8 ರಂದು ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಮನೆಯಿಂದ ಅಂಗಡಿಗೆ ತೆರಳುತ್ತಿದ್ದ ಮಹಿಳೆಯನ್ನು ಹಿಂಬದಿಯಿಂದ ಬಂದು ಕೈ ಹಿಡಿದ ಕಾಮುಕ ಆಕೆಯ ಬಟ್ಟೆ ಬಿಚ್ಚಲು ಯತ್ನಿಸಿದ್ದಾನೆ. ಈ ವೇಳೆ ಬೀದಿ ಕಾಮುಕನಿಂದ ಬಿಡಿಸಿಕೊಳ್ಳಲು ರಸ್ತೆಯಲ್ಲಿ ಮಹಿಳೆ ಕಿರುಚಾಡಿದ್ದಾಳೆ. ಆಗ ಮಹಿಳೆಯ ಕಿರುಚಾಟ ಕೇಳಿ ಸ್ಥಳಕ್ಕೆ ಆಗಮಿಸಿದ ಸುತ್ತಮುತ್ತಲ ನಿವಾಸಿಗಳು ಕಾಮುಕನನ್ನು ಹಿಡಿದು ಸರಿಯಾಗಿ ಥಳಿಸಿದ್ದಾರೆ.

    ಡ್ರಗ್ಸ್ ಹಾಗೂ ಗಾಂಜಾ ಸೇವಿಸಿ ಬೀದಿಯಲ್ಲಿ ಓಡಾಡ್ತಿದ್ದ ಅಸಾಮಿ ಅಮಲಿನಲ್ಲಿ ಮಹಿಳೆಯನ್ನು ಎಳೆದಾಡಿದ್ದಾನೆ. ಘಟನೆ ಬಳಿಕ ಕಾಮುಕನನ್ನು ಹೆಣ್ಣೂರು ಪೊಲೀಸರಿಗೆ ಸಾರ್ವಜನಿಕರು ಒಪ್ಪಿಸಿದ್ದಾರೆ. ಪೊಲೀಸರು ವಿಚಾರಣೆ ಮಾಡುವ ವೇಳೆ ಆರೋಪಿಯು ಯಲಹಂಕ ಮೂಲದ ಅಲುಮೀನ್ ಎಂಬುದು ಪತ್ತೆಯಾಗಿದೆ. ಗಾಂಜಾ ಸೇವನೆಗಾಗಿ ಹೆಣ್ಣೂರು ಕಡೆ ಬಂದಿದ್ದ ಆರೋಪಿ ಹೆಣ್ಣೂರು ಬಳಿಯ ವಿದೇಶಿ ಪ್ರಜೆಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಎಂಬುದು ತನಿಖೆಯಿಂದ ತಿಳಿದುಬಂದಿದೆ.

    ಘಟನೆ ಕುರಿತು ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಎಣ್ಣೆ ಮತ್ತಲ್ಲಿ ವಿದೇಶಿ ಪ್ರಜೆಗಳ ಕಿರಿಕಿರಿ – ಡ್ರಂಕ್ & ಡ್ರೈವ್ ತಪಾಸಣೆ ವೇಳೆ ಅಸಭ್ಯ ವರ್ತನೆ

    ಎಣ್ಣೆ ಮತ್ತಲ್ಲಿ ವಿದೇಶಿ ಪ್ರಜೆಗಳ ಕಿರಿಕಿರಿ – ಡ್ರಂಕ್ & ಡ್ರೈವ್ ತಪಾಸಣೆ ವೇಳೆ ಅಸಭ್ಯ ವರ್ತನೆ

    ಬೆಂಗಳೂರು: ತಡ ರಾತ್ರಿ ಟ್ರಾಫಿಕ್ ಪೊಲೀಸರು ಡ್ರಂಕ್ & ಡ್ರೈವ್ ತಪಾಸಣೆ ಮಾಡುವ ವೇಳೆ ಇಬ್ಬರು ವಿದೇಶಿಯರು ಸೇರಿ ಏಳು ಜನರ ಗುಂಪು ಪಾನ ಮತ್ತರಾಗಿ 1 ಗಂಟೆಗೂ ಹೆಚ್ಚುಕಾಲ ಇನ್ನಿಲ್ಲದೆ ಸಂಚಾರಿ ಪೊಲೀಸರನ್ನ ಕಾಡಿ ಅಸಭ್ಯವಾಗಿ ವರ್ತಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ಹೈಗ್ರೌಂಡ್ಸ್ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಧ್ಯರಾತ್ರಿ 2ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಎಂ.ಜಿ ರಸ್ತೆಯಿಂದ ಪಾರ್ಟಿ ಮುಗಿಸಿ ಕುಡಿದು ತಮಿಳುನಾಡು ರಿಜಿಸ್ಟ್ರೇಷನ್ ನ ಟಾಟಾ ಸುಮೋದಲ್ಲಿ ಬಂದ ಏಳು ಜನರು ಡ್ರಂಕ್ & ಡ್ರೈವ್ ತಪಾಸಣೆ ವೇಳೆ ಸಹಕರಿಸದೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ.

    ಸತತ ಒಂದು ಗಂಟೆಗಳ ಕಾಲ ನಾಲ್ವರು ಟ್ರಾಫಿಕ್ ಸಿಬ್ಬಂದಿಗಳನ್ನು ಕಾಡಿದ ಅವರು ಅವಾಂತರ ಸೃಷ್ಟಿಸಿದ್ದಾರೆ. ತಪಾಸಣೆ ವೇಳೆ ಚಾಲಕ ಸುಂದರೇಶನ್(35) ಮದ್ಯ ಸೇವಿಸಿರುವುದು ಸಾಬೀತಾಗಿದೆ. ಇನ್ನುಳಿದಂತೆ ಆರು ಜನರು ಕುಡಿದು ರಸ್ತೆಯಲ್ಲೆಲ್ಲಾ ತೂರಾಟ ನಡೆಸಿ ಸ್ಥಳದಿಂದ ಎಸ್ಕೇಪ್ ಆಗಲು ನಾನಾ ಕಸರತ್ತು ನಡೆಸಿದರು.

    ಎಂ.ಜಿ.ರಸ್ತೆಯಿಂದ ಪಾರ್ಟಿ ಮಾಡಿ ಬಂದ ಇಬ್ಬರು ಇಟಲಿ ಮಹಿಳೆಯರು, ಮೂವರು ಗಂಡಸರು, ಒಬ್ಬ ತಮಿಳು ಯುವತಿ, ಮತ್ತೊಬ್ಬ ಮಲೆಯಾಳಿ ಯುವತಿ ಸೇರಿ 7 ಜನರ ಗುಂಪು ಪುಂಡಾಟ ನಡೆಸಿದೆ. ಇವರ ತರಲೆ ನಿಲ್ಲಿಸಲಾಗದೇ ಪರದಾಡಿದ ಪೊಲೀಸರು ತಪಾಸಣೆ ನಡೆಸುವಷ್ಟರಲ್ಲಿ ಸುಸ್ತಾಗಿದ್ದರು. ಕೊನೆಗೂ ಚಾಲಕನನ್ನ ತಪಾಸಣೆ ನಡೆಸಿ ಟಾಟಾ ಸುಮೋ ಸೀಜ್ ಮಾಡಿ ಹೈಗ್ರೌಂಡ್ಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.