Tag: foreign affair minister

  • ಆಫ್ರಿಕಾದಲ್ಲಿ ಭಾರತೀಯನ ಮೇಲೆ ಹಲ್ಲೆ- ಸಚಿವೆ ಸುಷ್ಮಾ ಸ್ವರಾಜ್ ಸಹಾಯಹಸ್ತ

    ಆಫ್ರಿಕಾದಲ್ಲಿ ಭಾರತೀಯನ ಮೇಲೆ ಹಲ್ಲೆ- ಸಚಿವೆ ಸುಷ್ಮಾ ಸ್ವರಾಜ್ ಸಹಾಯಹಸ್ತ

    ಉಡುಪಿ: ಭಾರತೀಯನ ಮೇಲೆ ಆಫ್ರಿಕಾದ ಮೊಜಾಂಬಿಕ್ ನಲ್ಲಿ ಮಾನಸಿಕ ಕಿರುಕುಳ ನೀಡಿ ಹಲ್ಲೆ ನಡೆಸಿದ ಘಟನೆ ನಡೆದಿದೆ.

    ಉಡುಪಿಯ ಸಂತೆಕಟ್ಟೆಯ ಆನಂದ್ ಕೃಷ್ಣ ಸಿಂಗ್ ಎಂಬವರ ಮೇಲೆ ಆಫ್ರಿಕಾದ ಮೋಜಾಂಬಿಕ್‍ನಲ್ಲಿ ಹಲ್ಲೆಯಾಗಿ ಗೃಹ ಬಂಧನಕ್ಕೆ ತಳ್ಳಲಾಗಿದೆ.

    ಆನಂದ್ ಸಿಂಗ್ ಕೆಲಸ ಮಾಡ್ತಿದ್ದ ಅಂಗಡಿಯಲ್ಲಿ ಹಣ ಕಳ್ಳತನವಾಗಿದೆ ಎಂಬ ಕಾರಣಕ್ಕೆ ಆನಂದ್ ಮೇಲೆ ಅಂಗಡಿ ಮಾಲೀಕ ಕಳ್ಳತನದ ಆರೋಪ ಹೊರಿಸಿದ್ದಾರೆ. ಅಲ್ಲದೇ ಮಾಲೀಕ ಮತ್ತು ಅವರ ಮಗ ಮನಸೋ ಇಚ್ಛೆ ಥಳಿಸಿದ್ದಾರೆ. ಇವರ ಹಿಂಸೆಯಿಂದ ಬೇಸತ್ತ ಆನಂದ್ ಅವರ ಸ್ನೇಹಿತರನ್ನು ಫೇಸ್ ಬುಕ್ ಮೂಲಕ ಸಂಪರ್ಕಿಸಿದ್ದಾರೆ.

    ಆನಂದ್ ಕೃಷ್ಣ ಸಿಂಗ್ ಅವರ ಭಾರತದ ಸ್ನೇಹಿತರು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಟ್ವೀಟ್ ಮಾಡಿದ್ದಾರೆ. ಕೂಡಲೇ ಸ್ಪಂದಿಸಿದ ಸಚಿವೆ ಸುಷ್ಮಾ ಸ್ವರಾಜ್ ಆಫ್ರಿಕಾ ರಾಯಭಾರಿ ಜೊತೆ ಮಾತಾಡಿ, ಕೂಡಲೇ ಆನಂದ್ ಅವರನ್ನು ವಾಪಾಸ್ ಕರೆತರುವ ವ್ಯವಸ್ಥೆ ಮಾಡಲು ಆದೇಶಿದ್ದು, ಆನಂದ್ ಸಿಂಗ್ ಇಂದು ಭಾರತಕ್ಕೆ ಬಂದಿಳಿಯುವ ಸಾಧ್ಯತೆ ಇದೆ ಎಂದು ಆನಂದ್ ಗೆಳೆಯರು ಮಾಹಿತಿ ನೀಡಿದ್ದಾರೆ.

    ಆನಂದ್ ಈ ಹಿಂದೆ ಉಡುಪಿಯ ಕೆಲ ಕಡೆಗಳಲ್ಲಿ ಕಬಾಬ್ ಅಂಗಡಿ ನಡೆಸುತ್ತಿದ್ದರು. ಸಂತೆಕಟ್ಟೆಯ ಜಿಮ್ ಗೆ ಬರುತ್ತಿದ್ದರು ಎಂದು ಕೆಲವರು ತಿಳಿಸಿದ್ದಾರೆ. ಆದರೆ ಉಡುಪಿಯಲ್ಲಿ ಎಷ್ಟು ವರ್ಷಗಳಿಂದ ಇದ್ದರು. ಇಲ್ಲಿ ಅವರ ಸಂಬಂಧಿಗಳು ಇದ್ದಾರೆಯೇ ಎಂಬ ಮಾಹಿತಿ ಲಭ್ಯವಾಗಿಲ್ಲ.

    ಆನಂದ್ ಸಿಂಗ್ ಗೆಳೆಯರು ಆತನ ಮೇಲೆ ನಡೆದ ಹಲ್ಲೆಯ ಫೋಟೋಗಳನ್ನು ಫೇಸ್ ಬುಕ್ ಗೆ ಅಪ್‍ಲೋಡ್ ಮಾಡಿದ್ದಾರೆ.

     

  • ಕಿರುಕುಳ ನೀಡಿ, ಗನ್ ತೋರಿಸಿ ಮದುವೆ: ಪಾಕ್ ಪ್ರಜೆಯನ್ನು ವರಿಸಿದ್ದ ಭಾರತೀಯ ಮಹಿಳೆ ತವರಿಗೆ ವಾಪಾಸ್

    ಕಿರುಕುಳ ನೀಡಿ, ಗನ್ ತೋರಿಸಿ ಮದುವೆ: ಪಾಕ್ ಪ್ರಜೆಯನ್ನು ವರಿಸಿದ್ದ ಭಾರತೀಯ ಮಹಿಳೆ ತವರಿಗೆ ವಾಪಾಸ್

    ನವದೆಹಲಿ: ಬಲವಂತವಾಗಿ ಪಾಕ್ ಪ್ರಜೆಯನ್ನು ಮದುವೆಯಾಗಿದ್ದ ಭಾರತೀಯ ಯುವತಿಯೊಬ್ಬರು ಇದೀಗ ಭಾರತಕ್ಕೆ ವಾಪಾಸ್ಸಾಗಿದ್ದಾರೆ. ಉಜ್ಮಾ ಎಂಬವರೇ ಇಂದು ವಾಘಾ ಗಡಿಯ ಮೂಲಕ ಭದ್ರತೆಯೊಂದಿಗೆ ತವರಿಗೆ ಕಾಲಿಟ್ಟ ಯುವತಿಯಾಗಿದ್ದಾರೆ.

    ಏನಿದು ಪ್ರಕರಣ?: 20 ವರ್ಷದ ಉಜ್ಮಾ ಎಂಬವರು ಪಾಕಿಸ್ತಾನಕ್ಕೆ ಪ್ರಯಾಣಿಸಿದ್ದ ಸಂದರ್ಭದಲ್ಲಿ ಪಾಕ್ ಪ್ರಜೆ ತಹೀರ್ ಆಲಿ ಎಂಬಾತ ಕಿರುಕುಳ ನೀಡಿ, ಗನ್ ತೋರಿಸಿ ಬಲವಂತವಾಗಿ ಮದುವೆಯಾಗಿದ್ದನು. ಈ ಸಂಬಂಧ ಪತಿಯ ವಿರುದ್ಧ ಉಜ್ಮಾ ಇಸ್ಲಾಮಾಬಾದ್ ಹೈ ಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿದ್ದರು.

    ಪತಿ ತಾಹೀರ್ ಬಲವಂತವಾಗಿ ಮದುವೆ ಮಾಡಿಕೊಂಡಿದ್ದಾನೆ. ಅಲ್ಲದೇ ದಾಖಲೆಗಳನ್ನು ಆತ ಕಸಿದುಕೊಂಡಿದ್ದಾನೆ. ಹೀಗಾಗಿ ನನಗೆ ಭಾರತಕ್ಕೆ ತೆರಳಲು ರಕ್ಷಣೆ ಕೊಡಬೇಕು ಹಾಗೂ ತಾಯ್ನಡಿಗೆ ಹಿಂದಿರುಗಲು ನಕಲು ಪ್ರತಿಗಳನ್ನು ಒದಗಿಸಿಕೊಡಬೇಕೆಂದು ಮೇ 12ಕ್ಕೆ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.

    ಅರ್ಜಿ ಸ್ವೀಕರಿಸಿದ ಇಸ್ಲಾಮಾಬಾದ್ ಹೈಕೋರ್ಟ್ ನ್ಯಾಯಾಧೀಶ ಮೋಶಿನ್ ಅಕ್ತಾರ್ ಕಯಾನಿ ಅವರಿದ್ದ ಪೀಠ, ಪ್ರಕರಣವನ್ನು ಕೈಗೆತ್ತಿಕೊಂಡು ಬುಧವಾರ ಉಜ್ಮಾ ಅವರಿಗೆ ಭಾರತಕ್ಕೆ ಮರಳಲು ಅವಕಾಶ ನೀಡಿತ್ತು. ಅಲ್ಲದೇ ಪೊಲೀಸರು ಕೂಡ ವಾಘಾ ಗಡಿಯವರೆಗೆ ಆಕೆಯ ಜೊತೆಗಿದ್ದು ರಕ್ಷಣೆ ಕೊಡಬೇಕೆಂದು ಕೋರ್ಟ್ ಆದೇಶ ಮಾಡಿತ್ತು. ನ್ಯಾಯಾಲಯದ ಅನುಮತಿಯಂತೆ ಉಜ್ಮಾ ಇಂದು ಬಿಗಿ ಭದ್ರತೆಯೊಂದಿಗೆ ವಾಘಾ ಗಡಿ ದಾಟಿ ಭಾರತದ ಮಣ್ಣಿಗೆ ಕೈ ಮುಗಿದು ತಾಯ್ನಾಡಿನತ್ತ ಪ್ರಯಾಣ ಬೆಳೆಸಿದ್ದಾರೆ.

    ಈ ಬಗ್ಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು, ಉಜ್ಮಾ ಅವರನ್ನು ಭಾರತಕ್ಕೆ ಸ್ವಾಗತಿಸಿದ್ದಾರೆ. ಅಲ್ಲದೆ, ಭಾರತದ ಮಗಳು ಎಂದು ಕರೆದಿದ್ದಾರೆ. ಪಾಕಿಸ್ತಾನದಲ್ಲಿ ಇಷ್ಟೆಲ್ಲಾ ಸಂಕಷ್ಟಗಳನ್ನು ಅನುಭವಿಸಿದ್ದಕ್ಕೆ ಕ್ಷಮೆ ಕೇಳುತ್ತೇನೆಂದು ಅವರು ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ.

    ಈ ಕುರಿತು ಉಜ್ಮಾ ಸಹೋದರ ವಾಸಿಮ್ ಅಹಮದ್ ಮಾಧ್ಯಮಗಳೊಂದಿಗೆ ಮಾತನಾಡಿ, `ಸಹೋದರಿ ಸೇಫ್ ಆಗಿ ತಾಯ್ನಾಡಿಗೆ ಮರಳುತ್ತಿರುವುದು ಸಂತಸ ತಂದಿದೆ. ಆದ್ರೆ ವಿಮಾನ ವಿಳಂಬಗೊಂಡಿರುವುದರಿಂದ ಆಕೆ ದೆಹಲಿಗೆ ಯಾವಾಗ ಬರುತ್ತಾಳೆ ಅಂತಾ ಗೊತ್ತಿಲ್ಲ. ಇನ್ನು ಆಕೆಯ ಹಿಂದಿರುಗುವಿಕೆಗೆ ಸಹಕರಿಸಿದ ಭಾರತ ಸರ್ಕಾರ ಹಾಗೂ ಆಕೆ ಪಾಕಿಸ್ತಾನದಲ್ಲಿದ್ದ ಸಂದರ್ಭದಲ್ಲಿ ಆಕೆಯೊಂದಿಗೆ ಫೋನ್ ಮೂಲಕ ನಿರಂತರ ಸಂಪರ್ಕ ಹೊಂದಿದ್ದ ವಿದೇಶಾಂಗ ಸಚಿವರಿಗೆ ಧನ್ಯವಾದಗಳು ಎಂದು ಹೇಳಿದ್ದಾರೆ.