Tag: Forecast

  • ರಾಜ್ಯಾದ್ಯಂತ ಇಂದಿನಿಂದ 4 ದಿನ ಭಾರೀ ಮಳೆ ಮುನ್ಸೂಚನೆ

    ರಾಜ್ಯಾದ್ಯಂತ ಇಂದಿನಿಂದ 4 ದಿನ ಭಾರೀ ಮಳೆ ಮುನ್ಸೂಚನೆ

    ಬೆಂಗಳೂರು: ರಾಜ್ಯಾದ್ಯಂತ ಇಂದಿನಿಂದ 4 ದಿನ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.

    ಇಂದಿನಿಂದ ಮೇ 4ರವರೆಗೆ ಭಾರೀ ಮಳೆಯಾಗಲಿದ್ದು, ಕರಾವಳಿ ಕರ್ನಾಟಕ ಹಾಗೂ ದಕ್ಷಿಣ ಒಳನಾಡು ಪ್ರದೇಶಗಳಲ್ಲಿ ಯೆಲ್ಲೋ ಅಲರ್ಟ್ ಹಾಗೂ ಉತ್ತರ ಒಳನಾಡು ಪ್ರದೇಶಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ಹಾಸನ, ಶಿವಮೊಗ್ಗ, ಮೈಸೂರು, ಚಿಕ್ಕಮಗಳೂರು, ಚಾಮರಾಜನಗರ, ಮಂಡ್ಯ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.ಇದನ್ನೂ ಓದಿ: ಐಎಸ್ಐ ಮುಖ್ಯಸ್ಥನನ್ನು ನೂತನ ರಾಷ್ಟ್ರೀಯ ಭದ್ರತಾ ಸಲಹೆಗಾರನಾಗಿ ನೇಮಿಸಿದ ಪಾಕ್‌

    ಬೆಳಗಾವಿ, ರಾಯಚೂರು, ವಿಜಯಪುರ, ಕೊಪ್ಪಳ, ಹುಬ್ಬಳ್ಳಿ, ಯಾದಗಿರಿ, ಬಾಗಲಕೋಟೆ, ವಿಜಯಪುರ, ಗದಗ ಸೇರಿದಂತೆ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಭಾರೀ ಮಳೆ ಮುನ್ಸೂಚನೆ ನೀಡಲಾಗಿದೆ.

    ಇನ್ನೂ ಮೇ ತಿಂಗಳಲ್ಲಿ ಉಷ್ಣ ಹವೆ ಹೆಚ್ಚಾಗಿರಲಿದ್ದು, ರಾಜ್ಯದಲ್ಲಿ ಸಾಮಾನ್ಯಕ್ಕಿಂತ ಅಧಿಕವಾಗುವ ಸಾಧ್ಯತೆಯಿದೆ. ಜೊತೆಗೆ ಉತ್ತರ ಕರ್ನಾಟಕ ಭಾಗದಲ್ಲಿ ಉಷ್ಣ ಹವೆ ಹೆಚ್ಚಳವಾಗಲಿದೆ. ಭಾರತದ ಹಲವು ರಾಜ್ಯಗಳಿಗೆ ಅಧಿಕ ತಾಪಮಾನದ ಬಿಸಿ ತಟ್ಟಲಿದ್ದು, ರಾಜಸ್ಥಾನ, ಹರಿಯಾಣ, ಪಂಜಾಬ್, ಮಧ್ಯಪ್ರದೇಶ, ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ತಾಪಮಾನ ಏರಿಕೆಯಾಗಲಿದೆ. ಉಷ್ಣ ಹವೆಯಿದ್ದರೂ ಕೂಡ ಉತ್ತಮ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ.ಇದನ್ನೂ ಓದಿ: ನೆಲಮಂಗಲ| ಗ್ಯಾಸ್‌ ಲೀಕೇಜ್‌ನಿಂದ ಹೊತ್ತಿ ಉರಿದ ಬೆಂಕಿ – ಇಬ್ಬರು ಸಾವು

  • ಜೂನ್ ಮೊದಲ ವಾರದಲ್ಲಿ ಮುಂಗಾರು ಆರಂಭ, ಮುನ್ನೆಚ್ಚರಿಕೆ ವಹಿಸಿ- ಅಧಿಕಾರಿಗಳಿಗೆ ಕೊಡಗು ಡಿಸಿ ಸೂಚನೆ

    ಜೂನ್ ಮೊದಲ ವಾರದಲ್ಲಿ ಮುಂಗಾರು ಆರಂಭ, ಮುನ್ನೆಚ್ಚರಿಕೆ ವಹಿಸಿ- ಅಧಿಕಾರಿಗಳಿಗೆ ಕೊಡಗು ಡಿಸಿ ಸೂಚನೆ

    ಮಡಿಕೇರಿ: ಜೂನ್ ಮೊದಲ ವಾರದಲ್ಲಿ ಕೊಡಗು ಜಿಲ್ಲೆಯಲ್ಲಿ ಮುಂಗಾರು ಆರಂಭವಾಗುವ ಸಾಧ್ಯತೆ ಇದ್ದು, ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಸೂಚಿಸಿದ್ದಾರೆ.

    ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮುಂಗಾರು ಸಂಬಂಧ ಕೈಗೊಳ್ಳಲಾಗಿರುವ ಕ್ರಮಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು, ಬಳಿಕ ಮಾತನಾಡಿದ ಅವರು, ಮುಂಗಾರು ಸಂದರ್ಭದಲ್ಲಿ ಸಂಭವಿಸಬಹುದಾದ ಹಾನಿ ತಡೆಯುವ ನಿಟ್ಟಿನಲ್ಲಿ ಕೈಗೊಳ್ಳಲಾಗಿರುವ ಕ್ರಮಗಳ ಬಗ್ಗೆ ತಾಲೂಕುವಾರು ಪ್ರತ್ಯೇಕವಾಗಿ ಸಭೆ ನಡೆಸಿರು.

    ಸೂಕ್ಷ್ಮ ಪ್ರದೇಶಗಳಲ್ಲಿ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು. ಮಳೆ ಹಾನಿ ತಡೆಯುವ ನಿಟ್ಟಿನಲ್ಲಿ ಮುಂಚಿತವಾಗಿ, ಲಿಖಿತವಾಗಿ ಕುಟುಂಬಗಳಿಗೆ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಸಲಹೆ ನೀಡಿದರು. ಕಂದಾಯ, ಪೊಲೀಸ್, ಪಂಚಾಯತ್ ರಾಜ್, ಅರಣ್ಯ, ಸೆಸ್ಕ್, ಲೋಕೋಪಯೋಗಿ ಹೀಗೆ ಹಲವು ಇಲಾಖೆಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕು. ಮಳೆ ಹಾನಿ ಬಗ್ಗೆ ಕಾಲಕಾಲಕ್ಕೆ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಚಾರುಲತ ಸೋಮಲ್ ಅವರು ಸೂಚಿಸಿದರು.

    ಸೂಕ್ಷ್ಮ ಪ್ರದೇಶಗಳಲ್ಲಿನ ಕುಟುಂಬಗಳನ್ನು ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸುವುದು. ಸ್ಥಳೀಯ ಮಟ್ಟದಲ್ಲಿ ಟಾಸ್ಕ್‍ಪೊರ್ಸ್ ಸಮಿತಿ ಸಭೆ ನಡೆಸಿ, ಸೂಕ್ಷ್ಮ ಪ್ರದೇಶಗಳಿಗೆ ಎನ್‍ಡಿಆರೆಫ್ ತಂಡ ಭೇಟಿ ನೀಡುವುದು, ಪರಿಹಾರ ಕೇಂದ್ರ ಅಗತ್ಯವಿದ್ದಲ್ಲಿ ತೆರೆಯುವುದು. ಹೀಗೆ ಹಲವು ಕ್ರಮಗಳನ್ನು ಕೈಗೊಳ್ಳಬೇಕಿದೆ. ರಸ್ತೆ, ಸೇತುವೆ, ಮನೆ ಹಾನಿ ಬಗ್ಗೆ ಫೋಟೋ ಸಹಿತ ತಕ್ಷಣವೇ ಮಾಹಿತಿ ನೀಡುವುದು. ಭೂ ಕುಸಿತ ಉಂಟಾದಲ್ಲಿ ಹಾಗೂ ರಸ್ತೆ ಅಥವಾ ವಿದ್ಯತ್ ತಂತಿ ಮೇಲೆ ಮರ ಬಿದ್ದಲ್ಲಿ ತಕ್ಷಣವೇ ತೆರವುಗೊಳಿಸುವ ಕಾರ್ಯ ಮಾಡಬೇಕು ಎಂದರು.

    ತಹಶೀಲ್ದಾರ್ ಗೋವಿಂದರಾಜು ಮಾಹಿತಿ ನೀಡಿ, ಮುಂಗಾರು ಸಂಬಂಧ ಸೋಮವಾರಪೇಟೆ ತಾಲೂಕಿನಲ್ಲಿ ಅಗತ್ಯ ಮುನ್ನೆಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಸೂಕ್ಷ್ಮ ಪ್ರದೇಶಗಳ 775 ಕುಟುಂಬಗಳಿಗೆ ಈಗಾಗಲೇ ಮಾಹಿತಿ ನೀಡಲಾಗಿದೆ. ಕುಶಾಲನಗರ ನೆಲ್ಯಹುದಿಕೇರಿ, ಮಾದಾಪುರ, ಗರ್ವಾಲೆ, ಸೂರ್ಲಬಿ ಮತ್ತಿತ್ತರ ಕಡೆಯಲ್ಲಿ ಪ್ರವಾಹ ಉಂಟಾಗಲಿದ್ದು, ಈ ಪ್ರದೇಶದಲ್ಲಿನ ಜನರಿಗೆ ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ತಿಳಿಸಲಾಗಿದೆ. ಪರಿಹಾರ ಕೇಂದ್ರ ತೆರೆಯಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಭಾರೀ ಮಳೆಯಿಂದಾಗಿ ವಿದ್ಯುತ್ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಇರುವುದರಿಂದ ಸೀಮೆಎಣ್ಣೆ ಪೂರೈಸಬೇಕಿದೆ ಎಂದು ತಹಶೀಲ್ದಾರ್ ಗೋವಿಂದರಾಜು ತಿಳಿಸಿದರು.

  • ಮೂರು ದಿನ ಉತ್ತರ ಕರ್ನಾಟಕದಲ್ಲಿ ಭಾರೀ ಮಳೆ ಸಾಧ್ಯತೆ

    ಮೂರು ದಿನ ಉತ್ತರ ಕರ್ನಾಟಕದಲ್ಲಿ ಭಾರೀ ಮಳೆ ಸಾಧ್ಯತೆ

    ಬೆಂಗಳೂರು: ಮುಂದಿನ ಮೂರು ದಿನಗಳ ಉತ್ತರ ಕರ್ನಾಟಕದಲ್ಲಿ ಭಾರೀ ಮಳೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.

    ಸೋಮವಾರ, ಮಂಗಳವಾರ ಮತ್ತು ಬುಧವಾರ ಮೂರು ದಿನ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಮೂರು ದಿನವೂ ಮಳೆಯಾಗಲಿದೆ ಎಂದು ಹೇಳಲಾಗಿದೆ. ಬಂಗಾಳ ಕೊಲ್ಲಿಯಲ್ಲಿ ಕಾಣಿಸಿಕೊಂಡಿರುವ ವಾಯುಭಾರ ಕುಸಿತ ಮತ್ತು ಮೇಲ್ಮೈ ಸುಳಿಗಾಳಿ ಹಿನ್ನೆಲೆ ಮಳೆಯಾಗಲಿದೆ.

    ಕರ್ನಾಟಕದಲ್ಲಿ ದಕ್ಷಿಣ ಒಳನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ. ಆದರೆ ಉತ್ತರ ಕರ್ನಾಟಕದಲ್ಲಿ ಭಾರೀ ಮಳೆ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡು ಜಿಲ್ಲೆಗಳಾದ ಬೆಳಗಾವಿ, ಧಾರವಾಡ, ರಾಯಚೂರು ದಾವಣಗೆರೆ ಕಡೆ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ಅಧಿಕಾರಿಗಳು ನೀಡಿದ್ದಾರೆ.

  • ರಾಜ್ಯಾದ್ಯಂತ ಇನ್ನೂ ಮೂರು ದಿನ ಭಾರೀ ಮಳೆ: ಹವಾಮಾನ ಇಲಾಖೆ ಎಚ್ಚರಿಕೆ

    ರಾಜ್ಯಾದ್ಯಂತ ಇನ್ನೂ ಮೂರು ದಿನ ಭಾರೀ ಮಳೆ: ಹವಾಮಾನ ಇಲಾಖೆ ಎಚ್ಚರಿಕೆ

    ಬೆಂಗಳೂರು: ಮಹಾ ಮಳೆಗೆ ಈಗಾಗಲೇ ರಾಜ್ಯದ ಬಹುತೇಕ ಭಾಗಗಳಲ್ಲಿ ನೆರೆ ಸಂಭವಿಸಿದ್ದು, ಇದೀಗ ಹವಾಮಾನ ಇಲಾಖೆ ಇನ್ನೂ ಮೂರು ದಿನ ಭಾರೀ ಮಳೆಯಾಗಲಿದೆ ಎಂಬ ಆಘಾತಕಾರಿ ಮಾಹಿತಿ ನೀಡಿದೆ.

    ಕರಾವಳಿ ಜಿಲ್ಲೆಗಳಲ್ಲಿ ಇಂದಿನಿಂದ ಆಗಸ್ಟ್ 13 ರವರೆಗೆ ಇನ್ನೂ ಮೂರು ದಿನಗಳ ಕಾಲ ಭಾರೀ ಮಳೆಯಾಗಲಿದೆ. ಅಲ್ಲದೆ ಉತ್ತರ ಒಳನಾಡಿನಲ್ಲಿ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದ್ದು, ದಕ್ಷಿಣ ಒಳನಾಡಿನಲ್ಲೂ ಆಗಸ್ಟ್ 9 ರಿಂದ 13ರವರೆಗೆ ವರುಣ ಅಬ್ಬರಿಸಲಿದ್ದಾನೆ. ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಲ್ಲಿ ಹೆಚ್ಚು ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್.ಪಾಟೀಲ್ ಎಚ್ಚರಿಕೆ ನೀಡಿದ್ದಾರೆ.

    ಇಂದು ರೆಡ್ ಅಲರ್ಟ್ ಘೋಷಿಸಲಾಗಿದ್ದು, ಆಗಸ್ಟ್ 10 ರಂದು ಮಲೆನಾಡು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರಿನಲ್ಲಿ ಸಹ ಆಗಸ್ಟ್ 9 ಹಾಗೂ 10 ರಂದು 2 ದಿನ ಭಾರೀ ಮಳೆಯಾಗಲಿದೆ ಎಂದು ಎಚ್ಚರಿಕೆ ನೀಡಲಾಗಿದೆ.