Tag: football

  • ಮಾಜಿ ಫುಟ್ಬಾಲ್ ಸ್ಟಾರ್ ಜೋಸ್ ಆಂಟೋನಿಯೋ ರೆಯೆನ್ ಅಪಘಾತದಲ್ಲಿ ಸಾವು

    ಮಾಜಿ ಫುಟ್ಬಾಲ್ ಸ್ಟಾರ್ ಜೋಸ್ ಆಂಟೋನಿಯೋ ರೆಯೆನ್ ಅಪಘಾತದಲ್ಲಿ ಸಾವು

    ಮ್ಯಾಡ್ರಿಡ್: ಮಾಜಿ ಫುಟ್ಬಾಲ್ ಸ್ಟಾರ್ ಆಟಗಾರ ಜೋಸ್ ಆಂಟೋನಿಯೋ ರೆಯೆನ್ ಅವರು ಇಂದು ಸ್ಪೇನ್‍ನಲ್ಲಿ ನಡೆದ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ.

    ಇಂದು ಬೆಳಗ್ಗೆ ರೇವಿಸ್ ಸೆವೆಲ್ಲೇ ಹೊರವಲಯದಲ್ಲಿರುವ ಉಟ್ರೆರಾ ಎಂಬಲ್ಲಿ ಕಾರು ಅಪಘಾತವಾಗಿ ಸಾವನ್ನಪ್ಪಿದ್ದಾರೆ.

    35 ವರ್ಷದ ಈ ಸ್ಟಾರ್ ಆಟಗಾರ ಆರ್ಸೆನಲ್, ರಿಯಲ್ ಮ್ಯಾಡ್ರಿಡ್ ಮತ್ತು ಸೆವಿಲ್ಲಾ ಕ್ಲಬ್ ಪರವಾಗಿ ಆಡುತ್ತಿದ್ದರು. ಇವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪೇನ್ ದೇಶವನ್ನು ಪ್ರತಿನಿಧಿಸುತ್ತಿದ್ದರು. ತನ್ನ 8 ವರ್ಷದ ಸೆವಿಲ್ಲಾ ಪರವಾಗಿ ಆಡಿದ ಆಟೋನಿಯೋ 2003-2004ರಲ್ಲಿ ಪ್ರಶಸ್ತಿ ಗೆದ್ದ ತಂಡದಲ್ಲಿ ಇವರು ಇದ್ದರು.

    ಈ ವಿಚಾರದ ಬಗ್ಗೆ ಟ್ವೀಟ್ ಮಾಡಿರುವ ಸೆವಿಲ್ಲಾ ಕ್ಲಬ್ “ಈ ವಿಚಾರವನ್ನು ಹೇಳಲು ತುಂಬಾ ನೋವಾಗುತ್ತದೆ. ನಮ್ಮೆಲ್ಲಾರ ಪ್ರೀತಿ ಪಾತ್ರರಾದ ಸೆವಿಲ್ಲಾ ಸ್ಟಾರ್ ಜೋಸ್ ಆಟೋನಿಯೋ ರೆಯೆನ್ ಅವರು ಇಂದು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ದೇವರು ಅವರ ಅತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸೋಣ” ಎಂದು ಟ್ವೀಟ್ ಮಾಡಿದೆ.

  • ವಿಶ್ವದ ಅತ್ಯಂತ ದುಬಾರಿ ಕಾರು ಖರೀದಿಸಿದ ಕ್ರಿಸ್ಟಿಯಾನೊ ರೊನಾಲ್ಡೊ

    ವಿಶ್ವದ ಅತ್ಯಂತ ದುಬಾರಿ ಕಾರು ಖರೀದಿಸಿದ ಕ್ರಿಸ್ಟಿಯಾನೊ ರೊನಾಲ್ಡೊ

    ರೋಮ್: ಜಗತ್ತಿನ ಶ್ರೀಮಂತ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರು ಪ್ರಪಂಚದ ಅತ್ಯಂತ ದುಬಾರಿ ಕಾರನ್ನು ಖರೀದಿಸಿದ್ದಾರೆ.

    ಕಾರಿನ ಮೇಲೆ ಹೆಚ್ಚು ಫ್ಯಾಷನ್ ಹೊಂದಿರುವ ರೊನಾಲ್ಡೊ ಅವರು ಬುಗಾಟಿ ಸಂಸ್ಥೆ ನಿರ್ಮಿಸಲಾದ 11 ಮಿಲಿಯನ್ ಯುರೋ (85.65 ಕೋಟಿ ರೂ.) ಮೌಲ್ಯದ ಅತ್ಯಂತ ದುಬಾರಿ ಕಾರನ್ನು ಖರೀದಿ ಮಾಡಿದ್ದಾರೆ.

    2019 ರಲ್ಲಿ ವಿನ್ಯಾಸ ಮಾಡಲಾದ ಬುಗಾಟಿ ಲಾ ವೂಯಿಟ್ ನೊಯಿರ್ ಎಂಬ ಕಾರನ್ನು ಖರೀದಿ ಮಾಡಿದ್ದಾರೆ. ಈಗ ಈ ಕಾರನ್ನು ಖರೀದಿ ಮಾಡಿದರೂ ಕಾರಿನ ಕೆಲ ಭಾಗಗಳನ್ನು ವಿನ್ಯಾಸ ಮಾಡಬೇಕಾಗಿರುವುದರಿಂದ 2021ಕ್ಕೆ ಪೂರ್ಣ ಪ್ರಮಾಣದಲ್ಲಿ ವಿನ್ಯಾಸಗೊಂಡು ರೊನಾಲ್ಡೊ ಅವರಿಗೆ ಹಸ್ತಾಂತರವಾಗಲಿದೆ.

    ಬುಗಾಟಿ ಕಂಪನಿ 110ನೇ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ವಿಶೇಷವಾಗಿ ಈ ಒಂದು ಕಾರನ್ನು ಅಭಿವೃದ್ಧಿ ಪಡಿಸುತ್ತಿದೆ. 2019ರ ಜಿನಿವಾ ಮೋಟರ್ ಶೋದಲ್ಲಿ ಈ ಕಾರಿನ ಮಾದರಿಯನ್ನು ಕಂಪನಿ ಅನಾವರಣಗೊಳಿಸಿತ್ತು. ಈ ಕಾರು ಕಂಪನಿಯ 8.0 ಲೀಟರ್ ಟರ್ಬೋಚಾರ್ಜ್ ಡಬ್ಲ್ಯೂ16 ಎಂಜಿನ್ ಹೊಂದಿದ್ದು ಗಂಟೆಗೆ 260 ಕಿ.ಮೀ ವೇಗದಲ್ಲಿ ಕ್ರಮಿಸುವ ಸಾಮಥ್ರ್ಯ ಹೊಂದಿದೆ.

    ಕಾರಿನ ಮೇಲೆ ಹೆಚ್ಚು ಒಲವು ಹೊಂದಿರುವ ಕ್ರಿಸ್ಟಿಯಾನೊ ರೊನಾಲ್ಡೊ ಅವರು ಜಗತ್ತಿನ ಅತ್ಯಂತ ದುಬಾರಿ ಕಾರುಗಳ ಒಡೆಯರಾಗಿದ್ದಾರೆ. ಅವರ ಬಳಿ ಮರ್ಸಿಡಿಸ್ ಸಿ ಕ್ಲಾಸ್ ಸ್ಪೋರ್ಟ್ಸ್ ಕೂಪೆ, ರೋಲ್ಸ್ ರಾಯ್ಸ್ ಫ್ಯಾಂಥಮ್, ಫೆರಾರಿ 599 ಜಿಟಿಒ, ಲ್ಯಾಂಬೋರ್ಗಿನಿ ಅವೆಂಟಡರ್ ಎಲ್‍ಪಿ 700-4, ಆಸ್ಟನ್ ಮಾರ್ಟೀನ್ ಡಿಬಿ 9, ಮೆಕ್ಲಾರೆನ್ ಎಂಪಿ 4 12 ಸಿ ಮತ್ತು ಬೆಂಟ್ಲೆ ಕಾಂಟಿನೆಂಟಲ್ ಜಿಟಿಸಿ ಸ್ಪೀಡ್ ನಂತಹ ದುಬಾರಿ ಕಾರಗಳನ್ನು ಹೊಂದಿದ್ದಾರೆ.

  • ವಧುವಿನ ಬಳಿ 5 ನಿಮಿಷ ಕಾಲಾವಕಾಶ ಕೇಳಿದ ವರ!

    ವಧುವಿನ ಬಳಿ 5 ನಿಮಿಷ ಕಾಲಾವಕಾಶ ಕೇಳಿದ ವರ!

    – ಆಟಗಾರನ ಫುಟ್ಬಾಲ್ ಮೇಲಿನ ಪ್ರೀತಿಗೆ ಕೇಂದ್ರ ಸಚಿವರೇ ಫಿದಾ

    ತಿರುವನಂತಪುರಂ: ಭಾರತದಲ್ಲಿ ಕ್ರಿಕೆಟ್‍ಗೆ ನೀಡುವಷ್ಟು ಪ್ರಾಮುಖ್ಯತೆಯನ್ನು ಬೇರೆ ಯಾವ ಕ್ರೀಡೆಗೂ ನೀಡುವುದಿಲ್ಲ ಎನ್ನುವ ಮಾತು ಪ್ರಚಲಿತದಲ್ಲಿದೆ. ಆದರೆ ಈ ಮಾತಿಗೆ ಭಿನ್ನ ಎಂಬಂತೆ ಯುವಕನೊಬ್ಬ ತನ್ನ ಮದುವೆಯ ಸಮಾರಂಭಕ್ಕೆ ಗೈರಾಗಿ ಫುಟ್ಬಾಲ್ ಪಂದ್ಯವನ್ನು ಆಡಿರುವ ಘಟನೆ ಕೇರಳದಲ್ಲಿ ನಡೆದಿದೆ.

    ಈ ಕುರಿತು ಕೇಂದ್ರ ಕ್ರೀಡಾ ಸಚಿವ ರಾಜವರ್ಧನ್ ಸಿಂಗ್ ರಾಥೋಡ್ ಟ್ವೀಟ್ ಮಾಡಿ ಯುವಕನಿಗೆ ಪ್ರಶಂಸೆ ವ್ಯಕ್ತಪಡಿಸಿದ್ದು, ಆತನನ್ನು ಭೇಟಿ ಆಗಬೇಕು ಎಂದು ತಿಳಿಸಿದ್ದಾರೆ.

    ಏನಿದು ಘಟನೆ?
    ಕೇರಳದ ರಿದ್ವಾನ್ ಯುವಕನ ಮದುವೆ ನಿಶ್ಚಯವಾಗಿತ್ತು. ಆದರೆ ಆದೇ ದಿನ ರಿದ್ವಾನ್ ಪ್ರತಿನಿಧಿಸುತ್ತಿದ್ದ ಫಿಫಾ ಮೆಂಜೇರಿ ತಂಡ ಎ7 ಲೀಗ್ ನಲ್ಲಿ ಭಾಗವಹಿಸಬೇಕಾಗಿತ್ತು. ಪರಿಣಾಮ ಇಕ್ಕಟ್ಟಿಗೆ ಸಿಲುಕಿದ ರಿದ್ವಾನ್ ಮದುವೆಯ ದಿನ ವಧುವಿನ ಬಳಿ 5 ನಿಮಿಷ ಎಂದು ಕಾಲಾವಕಾಶ ಕೇಳಿ ಪಂದ್ಯ ಆಡಲು ತೆರಳಿದ್ದಾರೆ. ಪಂದ್ಯ ಮುಕ್ತಾಯವಾದ ಬಳಿಕ ಮದುವೆ ಕಾರ್ಯ ನಡೆಸಿದ್ದಾರೆ.

    ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ರಿದ್ವಾನ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಈ ಕುರಿತ ವರದಿಯನ್ನು ಸ್ಥಳೀಯ ಮಾಧ್ಯಮವೊಂದು ಪ್ರಕಟಿಸಿತ್ತು. ಈ ವರದಿಯನ್ನು ತಮ್ಮ ಟ್ವಿಟ್ಟರ್ ನಲ್ಲಿ ರೀ ಟ್ವೀಟ್ ಮಾಡಿರುವ ಕೇಂದ್ರ ಸಚಿವರು, ರಿದ್ವಾನ್ ಫುಟ್ಬಾಲ್ ಆಡಲು ವಧುವಿನ ಬಳಿ 5 ನಿಮಿಷ ಕಾಲಾವಕಾಶ ಕೇಳಿದ್ದಾರೆ. ಇದು ಆಟದ ಬಗ್ಗೆ ಆತನಿಗೆ ಇರುವ ಉತ್ಸಾಹವನ್ನು ತೋರುತ್ತದೆ ಎಂದು ಬರೆದುಕೊಂಡಿದ್ದಾರೆ.

    ಇತ್ತ ವರನ ಮದುವೆ ಸಮಾರಂಭದ ಕಾರ್ಯಕ್ರಮಕ್ಕಿಂತ ರಿದ್ವಾನ್ ಫುಟ್ಬಾಲ್ ಪಂದ್ಯವನ್ನು ಆಯ್ಕೆ ಮಾಡಿಕೊಂಡಿರುವ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದು, ಒಂದೊಮ್ಮೆ ಪಂದ್ಯ ಮಧ್ಯಾಹ್ನದ ವೇಳೆಗೆ ಇದ್ದಿದ್ದರೆ ಕಾರ್ಯಕ್ರಮವನ್ನೇ ರದ್ದು ಮಾಡುತ್ತಿದ್ದರಾ ಎಂದು ವರನನ್ನು ಪ್ರಶ್ನಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಷೇರು ಮಾರಾಟ ಮಾಡಿ ಕೇರಳ ಫುಟ್‍ಬಾಲ್ ತಂಡಕ್ಕೆ ಸಚಿನ್ ಗುಡ್‍ಬೈ

    ಷೇರು ಮಾರಾಟ ಮಾಡಿ ಕೇರಳ ಫುಟ್‍ಬಾಲ್ ತಂಡಕ್ಕೆ ಸಚಿನ್ ಗುಡ್‍ಬೈ

    ಮುಂಬೈ: ಟೀಂ ಇಂಡಿಯಾ ಮಾಜಿ ನಾಯಕ ಸಚಿನ್ ತೆಂಡೂಲ್ಕರ್ ಇಂಡಿಯನ್ ಸೂಪರ್ ಲೀಗ್‍ನಲ್ಲಿ ಕೇರಳ ಬ್ಲಾಸ್ಟರ್ಸ್ ಫುಟ್ಬಾಲ್ ಕ್ಲಬ್ ನಲ್ಲಿ ಹೊಂದಿದ್ದ ತಮ್ಮ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಈ ಮೂಲಕ ತಂಡದ ಸಹ ಮಾಲೀಕತ್ವಕ್ಕೆ ಗುಡ್ ಬೈ ಹೇಳಿದ್ದಾರೆ.

    ಕಳೆದ ನಾಲ್ಕು ಆವೃತ್ತಿಗಳಿಂದ ಸಚಿನ್ ಕೇರಳ ಬ್ಲಾಸ್ಟರ್ಸ್ ತಂಡದ ಸಹ ಮಾಲೀಕರಾಗಿದ್ದರು. ಈ ವರ್ಷದ ಆವೃತ್ತಿ ಆರಂಭವಾಗುವ ಮುನ್ನವೇ ಸಚಿನ್ ತಮ್ಮ ಷೇರು ಮಾರಾಟ ಮಾಡಿದ್ದಾರೆ.

    ಸದ್ಯ ಸಚಿನ್‍ರ ಈ ನಿರ್ಧಾರ ಕೇರಳ ಬ್ಲಾಸ್ಟರ್ಸ್ ತಂಡಕ್ಕೆ ಶಾಕ್ ನೀಡಿದೆ. ಏಕೆಂದರೆ ಕೇರಳ ತಂಡಕ್ಕೆ ಸಚಿನ್ ಬೆಂಬಲವಾಗಿ ನಿಂತಿದ್ದರು. ಅವರ ಅಪಾರ ಅಭಿಮಾನಿಗಳು ಕೂಡ ತಂಡವನ್ನು ಬೆಂಬಲಿಸುತ್ತಿದ್ದರು. ಇದು ಆಟಗಾರರಲ್ಲಿ ಹೆಚ್ಚಿನ ಸ್ಫೂರ್ತಿ ತುಂಬುತ್ತಿತ್ತು.

    ತಂಡದ ಮಾಲೀಕತ್ವ ತೊರೆದ ಬಳಿಕ ಮಾತನಾಡಿದ ಸಚಿನ್, ತಂಡ ಸದ್ಯ ಉತ್ತಮ ರೂಪವನ್ನು ಪಡೆದಿದ್ದು, ಸಾಧನೆಯ ದಾರಿಯಲ್ಲಿದೆ. ಈ ವೇಳೆ ಅವರಿಗೆ ಹೆಚ್ಚಿನ ಯಶಸ್ಸು ಸಿಗಲಿ. ಎಂದಿಗೂ ನಾನು ತಂಡದ ಪರ ಇರಲಿದ್ದೇನೆ ಎಂದು ಹಾರೈಸುವುದಾಗಿ ತಿಳಿಸಿದ್ದಾರೆ.

    ಆರಂಭದಲ್ಲಿ ಹೆಚ್ಚಿನ ಷೇರು ಹೊಂದಿದ್ದ ಸಚಿನ್ ನಂತರ ತನ್ನಲ್ಲಿದ್ದ ಷೇರುಗಳನ್ನು ಮಾರಾಟ ಮಾಡುತ್ತಾ ಬಂದಿದ್ದರು. ಕೊನೆಗೆ ಸಚಿನ್ ಬಳಿ 20% ಷೇರು ಇದ್ದರೆ, ಹೈದರಾಬಾದಿನ ಮೀಡಿಯಾ ಆಂಡ್ ಎಂಟರ್‍ಟೈನ್‍ಮೆಂಟಿನ ಪ್ರಸಾದ್ ಗ್ರೂಪ್ 80% ಷೇರು ಹೊಂದಿತ್ತು. ಸಚಿನ್ ಅವರ ಬಳಿಯಿದ್ದ ಷೇರನ್ನು ಅಂತಾರಾಷ್ಟ್ರೀಯ ಉದ್ಯಮಿ ಎಂ.ಎ. ಯೂಸುಫ್ ಆಲಿ ಅವರ ಲುಲು ಗ್ರೂಪ್ ಖರೀದಿಸಿದೆ ಎಂದು ಮಾಧ್ಯಮವೊಂದು ವರದಿ ಪ್ರಕಟಿಸಿದೆ. ಆದರೆ ಈ ಬಗ್ಗೆ ಲುಲು ಗ್ರೂಪ್ ಆಗಲಿ ಕೇರಳ ಬ್ಲಾಸ್ಟರ್ಸ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೊಹ್ಲಿಯ ಒಂದು ಪೋಸ್ಟ್​​ಗೆ  ಸಿಗುತ್ತೆ 82 ಲಕ್ಷ ರೂ.! – ಪೋಸ್ಟ್​​ಗೆ  ಹೇಗೆ ಹಣ ಪಡೆಯುತ್ತಾರೆ? ಮಾನದಂಡವೇನು?

    ಕೊಹ್ಲಿಯ ಒಂದು ಪೋಸ್ಟ್​​ಗೆ ಸಿಗುತ್ತೆ 82 ಲಕ್ಷ ರೂ.! – ಪೋಸ್ಟ್​​ಗೆ ಹೇಗೆ ಹಣ ಪಡೆಯುತ್ತಾರೆ? ಮಾನದಂಡವೇನು?

    ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಒಂದು ಇನ್‍ಸ್ಟಾಗ್ರಾಮ್ ಪೋಸ್ಟ್ ಗೆ 82,43,400 ರೂ. ಪಡೆಯುತ್ತಿದ್ದಾರೆ. ಈ ಮೂಲಕ ಭಾರತದ ಪರ ಅತ್ಯಧಿಕ ಮೊತ್ತ ಪಡೆಯುವ ಕ್ರೀಡಾಪಟು ಎನಿಸಿಕೊಂಡಿದ್ದಾರೆ.

    ಹಾವರ್ ಎಚ್ ಕ್ಯೂ ಡಾಟ್ ಕಾಮ್ ಎಂಬ ಜಾಗತಿಕ ಸಂಸ್ಥೆ ಸಮೀಕ್ಷೆ ನಡೆಸಿ ಈ ಪಟ್ಟಿಯನ್ನ ಬಿಡುಗಡೆಗೊಳಿಸಿದ್ದು, ಫೇಸ್‍ಬುಕ್ ಮಾಲೀಕತ್ವದ ಇನ್‍ಸ್ಟಾಗ್ರಾಮ್ ಸಿರಿವಂತ ಆಟಗಾರರ ಪಟ್ಟಿಯನ್ನು ಹೊಂದಿದೆ. ಈ ಸಮೀಕ್ಷಾ ವರದಿಯಲ್ಲಿ ವಿಶ್ವದ ವಿವಿಧ ಕ್ರೀಡಾಪಟುಗಳ ಹೆಸರು ಹೊಂದಿದ್ದು, ಕೊಹ್ಲಿ 17ನೇ ಸ್ಥಾನ ಪಡೆದಿದ್ದಾರೆ.

    ಪಟ್ಟಿಯಲ್ಲಿರುವ ಕ್ರೀಡಾಪಟುಗಳಲ್ಲಿ ಪೋರ್ಚುಗಲ್ ಫುಟ್ಬಾಲ್ ತಂಡದ ನಾಯಕ ಕ್ರಿಸ್ಟಿಯನೊ ರೊನಾಲ್ಡೊ ಒಂದು ಪೋಸ್ಟ್ ಗೆ 5 ಕೋಟಿ ರೂ. ಪಡೆಯುತ್ತಾರೆ. ಇವರನ್ನು 13.6 ಕೋಟಿ ಮಂದಿ ಹಿಂಬಾಲಿಸುತ್ತಿದ್ದಾರೆ. ಬಳಿಕ ಬ್ರೆಜಿಲ್ ಸ್ಟಾರ್ ಆಟಗಾರ ನೇಮರ್ ಹಾಗೂ ಅರ್ಜೆಂಟೆನಾ ತಂಡದ ಮೆಸ್ಸಿ ಕ್ರಮವಾಗಿ 4,12,23,000 ಕೋಟಿ ರೂ. ಹಾಗೂ 3,43,52,500 ಕೋಟಿ ರೂ. ಗಳನ್ನು ಪ್ರತಿ ಪೋಸ್ಟ್ ಒಂದಕ್ಕೆ ಪಡೆಯುತ್ತಾರೆ.

    ಹಣ ಹೇಗೆ ಲಭಿಸುತ್ತದೆ: ಯಾವುದೇ ಸ್ಟಾರ್ ಆಟಗಾರ ಅತೀ ಹೆಚ್ಚು ಹಿಂಬಾಲಕರನ್ನು ಹೊಂದಿದ್ದರೆ ಅವರಿಗೆ ವಿವಿಧ ಕಂಪೆನಿಗಳು ತಮ್ಮ ಸಂಸ್ಥೆಯ ಪರ ರಾಯಭಾರಿಯಾಗಿ ನೇಮಿಸಿಕೊಳ್ಳುತ್ತದೆ. ಇದರಂತೆ ಆ ಬ್ರಾಂಡ್ ಗೆ ಸಂಬಂಧಿಸಿದ ವಸ್ತುಗಳ ಪ್ರಚಾರ ಮಾಡಲು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಲಾಗುತ್ತದೆ. ಈ ವೇಳೆ ಸಂಸ್ಥೆಯ ಉತ್ಪನ್ನಗಳು ಬಹುಬೇಗ ಹೆಚ್ಚಿನ ಮಂದಿಯನ್ನು ತಲುಪುತ್ತದೆ. ಸದ್ಯ ಕೊಹ್ಲಿ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ 2.32 ಕೋಟಿ ಮಂದಿ ಹಿಂಬಾಲಕರನ್ನು ಹೊಂದಿದ್ದು, ಒಂದು ಪೋಸ್ಟ್ ಗೆ 82 ಲಕ್ಷ ರೂ. ಪಡೆಯುತ್ತಾರೆ.

    https://www.instagram.com/p/Bg-9XrZA54d/?hl=en&taken-by=virat.kohli

    ಸಂಭಾವನೆ ನಿರ್ಧಾರ ಹೇಗೆ?
    ಪ್ರತಿಯೊಬ್ಬ ಸ್ಟಾರ್ ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಹಿಂಬಾಲಿಸುತ್ತಾರೆ. ಇದರಂತೆ ಸ್ಟಾರ್ ಆಟಗಾರರು ಎಷ್ಟು ಹಿಂಬಾಲಕರನ್ನು ಹೊಂದಿದ್ದಾರೆ ಹಾಗೂ ಅವರು ಎಷ್ಟು ದಿನಕ್ಕೊಮ್ಮೆ ಪೋಸ್ಟ್ ಮಾಡುತ್ತಾರೆ ಎನ್ನುವುದನ್ನು ಸಂಭಾವನೆ ನಿರ್ಧಾರಿಸುವ ವೇಳೆ ಪರಿಗಣಿಸಲಾಗುತ್ತದೆ. ಅಷ್ಟೇ ಅಲ್ಲದೇ ಸ್ಟಾರ್ ಗಳು ಪೋಸ್ಟ್ ಮಾಡಿದ ಬಳಿಕ ಈ ಪೋಸ್ಟ್ ಎಷ್ಟು ಲೈಕ್, ಕಾಮೆಂಟ್ ಹಾಗೂ ಸ್ಟಾರ್ ಗಳಿಗೆ ಜನರನ್ನು ಆಕರ್ಷಿಸುವ ಸಾಮರ್ಥ್ಯ ಎಷ್ಟಿದೆ ಎಂಬುವುದನ್ನು ಸಹ ಪರಿಗಣಿಸಲಾಗುತ್ತದೆ.

    ಸದ್ಯ ಸ್ಟಾರ್ ಆಟಗಾರರನ್ನು ವಿವಿಧ ಸಂಸ್ಥೆಗಳು ತಮ್ಮ ಬ್ರಾಂಡ್ ನ ಪ್ರಚಾರ ರಾಯಭಾರಿಗಳಾಗಿ ಆಯ್ಕೆ ಮಾಡಿಕೊಳ್ಳುವ ಮೂಲಕ ಸುಲಭವಾಗಿ ಜನರನ್ನು ತಲುಪುತ್ತಾರೆ. ಜಾಗತಿಕ ಮಟ್ಟದಲ್ಲಿ ಫುಟ್ಬಾಲ್ ಆಟಗಾರರು ಹೆಚ್ಚು ಪ್ರಾಬಲ್ಯ ಹೊಂದಿದ್ದು, ಹೆಚ್ಚಿನ ಅಭಿಮಾನಿಗಳನ್ನು ತಮ್ಮ ಸಾಮಾಜಿಕ ತಾಲತಾಣದಲ್ಲಿ ಹಿಂಬಾಲಕರನ್ನಾಗಿ ಹೊಂದಿದ್ದಾರೆ.

    2012 ರಲ್ಲಿ ಫೇಸ್‍ಬುಕ್ ಸಂಸ್ಥೆ ಇನ್‍ಸ್ಟಾಗ್ರಾಮ್ ಅನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು, ಸದ್ಯ ಇನ್‍ಸ್ಟಾಗ್ರಾಮ್ 100 ಕೋಟಿ ಬಳಕೆದಾರರನ್ನು ಹೊಂದಿದೆ. ಫೇಸ್‍ಬುಕ್ ಇನ್‍ಸ್ಟಾಗ್ರಾಮ್ ಸಂಸ್ಥೆಯ ಒಡೆತನ ಪಡೆದ ಬಳಿಕ ನಿರಂತರವಾಗಿ ಇನ್‍ಸ್ಟಾಗ್ರಾಮ್ ಬಳಕೆದಾರರು ಹೆಚ್ಚಾಗಿದ್ದಾರೆ.

    https://www.instagram.com/p/BlDqNtuA6Jq/?hl=en&taken-by=virat.kohli

  • ಇಂಗ್ಲೆಂಡಿನ ಹ್ಯಾರಿ ಕೇನ್‍ಗೆ ಗೋಲ್ಡನ್ ಬೂಟ್: ಯಾವ ತಂಡಗಳಿಗೆ ಎಷ್ಟು ಕೋಟಿ ನಗದು ಬಹುಮಾನ ಸಿಕ್ಕಿದೆ?

    ಇಂಗ್ಲೆಂಡಿನ ಹ್ಯಾರಿ ಕೇನ್‍ಗೆ ಗೋಲ್ಡನ್ ಬೂಟ್: ಯಾವ ತಂಡಗಳಿಗೆ ಎಷ್ಟು ಕೋಟಿ ನಗದು ಬಹುಮಾನ ಸಿಕ್ಕಿದೆ?

    ಮಾಸ್ಕೋ: ತೀವ್ರ ಹಣಾಹಣಿ ಮೂಲಕ ಒಂದು ತಿಂಗಳ ಕಾಲ ನಡೆದ ಫಿಫಾ ವಿಶ್ವಕಪ್‍ಗೆ ತೆರೆಕಂಡಿದ್ದು, ಫೈನಲ್‍ನಲ್ಲಿ ಫ್ರಾನ್ಸ್ ತಂಡ ಪ್ರಶಸ್ತಿ ಗೆದ್ದು ಬೀಗಿದೆ. ಇತ್ತ ಟೂರ್ನಿಯಲ್ಲಿ ನೀಡಲಾಗುವ ಪ್ರತಿಷ್ಠಿತ ಗೋಲ್ಡನ್ ಬೂಟ್ ಪ್ರಶಸ್ತಿಯನ್ನು 6 ಗೋಲು ಹೊಡೆದ ಇಂಗ್ಲೆಂಡ್ ತಂಡದ ನಾಯಕ ಹ್ಯಾರಿ ಕೇನ್ ಪಡೆದಿದ್ದು, ಗೋಲ್ಡನ್ ಬಾಲ್ ಪ್ರಶಸ್ತಿಯನ್ನು ಕ್ರೊವೇಷಿಯಾದ ಲೂಕ ಮೋಡ್ರಿಚ್ ಪಡೆದಿದ್ದಾರೆ.

    ಟೂರ್ನಿಯ ಉತ್ತಮ ಆಟಗಾರರ ಪಟ್ಟಿಯಲ್ಲಿ ಬೆಲ್ಜಿಯಂ ಆಟಗಾರ ಈಡನ್ ಹರ್ಝಡ್, ಫ್ರಾನ್ಸ್ ನ ಆಂಟೊನಿ ಗ್ರಿಯೇಜ್ಮನ್ ಕ್ರಮವಾಗಿ 2ನೇ ಮತ್ತು 3ನೇ ಸ್ಥಾನವನ್ನು ಪಡೆದಿದ್ದಾರೆ. ಉಳಿದಂತೆ ಯುವ ಉದಯೋನ್ಮುಕ ಆಟಗಾರ ಪ್ರಶಸ್ತಿಗೆ ಫ್ರಾನ್ಸ್ ಆಟಗಾರ ಕೈಲ್ಯಾನ್ ಪಾತ್ರರಾಗಿದ್ದಾರೆ.

    ಟೂರ್ನಿಯ ಉತ್ತಮ ಗೋಲ್ ಕೀಪರ್ ಗೆ ನೀಡುವ ಗೋಲ್ಡನ್ ಗ್ಲೌಸ್ ಪ್ರಶಸ್ತಿಯನ್ನು ಬೆಲ್ಜಿಯಂ ಆಟಗಾರ ಥೈಬೌಟ್ ಕೋರ್ಟಿಸ್ ಪಡೆದಿದ್ದಾರೆ. ಇನ್ನು ಈ ಬಾರಿಯ ಟೂರ್ನಿಯಲ್ಲಿ ಒಟ್ಟಾರೆ 169 ಗೋಲು ದಾಖಲಾಗಿದ್ದು, ವಿಶೇಷವಾಗಿ ಪೆನಾಲ್ಟಿ ಕಿಕ್ ಮೂಲಕ 21 ಗೋಲು ಬಾರಿಸಲಾಗಿದೆ.

    ಇಂಗ್ಲೆಂಡ್ ತಂಡದ ನಾಯಕ ಹ್ಯಾರಿ ಕೇನ್ ಗೋಲ್ಡನ್ ಬೂಟ್ ಪ್ರಶಸ್ತಿ ಪಡೆದ ಎರಡನೇ ಇಂಗ್ಲೆಂಡ್ ಆಟಗಾರ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದು, ಈ ಹಿಂದೆ 1986 ರಲ್ಲಿ ಗ್ಯಾರಿ ಲೈಕರ್ 6 ಗೋಲ್ ಬಾರಿಸಿ ಮೊದಲಿಗಾರಾಗಿ ಹೊರ ಹೊಮ್ಮಿದ್ದರು. ಗೋಲ್ಡನ್ ಬೂಟ್ ಪ್ರಶಸ್ತಿಯನ್ನು 2010 ರ ವಿಶ್ವಕಪ್ ಬಳಿಕ ನೀಡಲಾಗುತ್ತಿದ್ದು, ಇದಕ್ಕೂ ಮುನ್ನ ಟೂರ್ನಿಯ ಅತೀ ಹೆಚ್ಚು ಗೋಲ್ ಗಳಿಸಿದ ಆಟಗಾರ ಎಂದು ಪ್ರಕಟಿಸಲಾಗುತ್ತಿತ್ತು. ವಿಶೇಷವಾಗಿ ಗೋಲ್ಡನ್ ಬೂಟ್ ಪ್ರಶಸ್ತಿ ಪಡೆದ ಹಲವು ಆಟಗಾರರು ಟೂರ್ನಿಯಲ್ಲಿ 6 ಗೋಲ್ ಗಳಿಸಿ ಅಚ್ಚರಿ ಮೂಡಿಸಿದ್ದಾರೆ.

    ಪ್ರಶಸ್ತಿಯ ಮೊತ್ತ:
    ಚಾಂಪಿಯನ್ ತಂಡ – 260 ಕೋಟಿ ರೂ.
    ರನ್ನರ್-ಅಪ್ ತಂಡ – 191 ಕೋಟಿ ರೂ.
    ಮೂರನೇ ರನ್ನರ್ ಅಪ್ – 164 ಕೋಟಿ ರೂ.
    ನಾಲ್ಕನೇ ರನ್ನರ್ ಅಪ್ _ 150 ಕೋಟಿ ರೂ.
    ಕ್ವಾಟರ್ ಫೈನಲ್ 01 – 109 ಕೋಟಿ ರೂ.
    ಗ್ರೂಪ್ 16 ತಂಡ – 82 ಕೋಟಿ ರೂ.
    ಆರಂಭಿಕ ಲೀಗ್ – 54 ಕೋಟಿ ರೂ.

     

  • ಸೆಹ್ವಾಗ್ ರ `ಮೆಸ್ಸಿ ಕಿ ಚಾಚಾ’ ಟ್ವೀಟ್ ವೈರಲ್: ವಿಡಿಯೋ ನೋಡಿ

    ಸೆಹ್ವಾಗ್ ರ `ಮೆಸ್ಸಿ ಕಿ ಚಾಚಾ’ ಟ್ವೀಟ್ ವೈರಲ್: ವಿಡಿಯೋ ನೋಡಿ

    ನವದೆಹಲಿ: ಭಾರತದ ಮಾಜಿ ಓಪನಿಂಗ್ ಬ್ಯಾಟ್ಸ್ ಮನ್ ವಿರೇಂದ್ರ ಸೆಹ್ವಾಗ್ ರವರು ಹಾಕಿದ್ದ `ಮೆಸ್ಸಿ ಕಿ ಚಾಚಾ’ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

    ಜಗತ್ತಿನಾದ್ಯಂತ ಫುಟ್ಬಾಲ್ ಜ್ವರದ ನಡುವೆ ವಿರೇಂದ್ರ ಸೆಹ್ವಾಗ್ ರವರು ಮಾಡಿರುವ ಟ್ವೀಟ್ ಭಾರೀ ಸದ್ದು ಮಾಡುತ್ತಿದೆ. ಟ್ವೀಟ್ ನಲ್ಲಿ ಓರ್ವ ಹಿರಿಯ ವ್ಯಕ್ತಿ ಫುಟ್ಬಾಲ್ ನ್ನು ತನ್ನ ಬರಿಗಾಲಿನಲ್ಲಿ ಒದೆಯುತ್ತಿರುವ ವಿಡಿಯೋ ಹಾಕಿ ಇವರು ಅಂತರಾಷ್ಟ್ರೀಯ ಫುಟ್ಬಾಲ್ ಆಟಗಾರ ಮೆಸ್ಸಿಯವರ ಅಜ್ಜ ಎಂದು ಫುಟ್ಬಾಲ್ ಅಭಿಮಾನಿಗಳ ಕಾಲೆಳೆದಿದ್ದಾರೆ.

    ವಿಡಿಯೋದಲ್ಲಿ ಹಿರಿಯರೊಬ್ಬರು  ಸತತವಾಗಿ ಮೂರು ಬಾರಿ ವಿಭಿನ್ನ ರೀತಿಯಲ್ಲಿ ಫುಟ್ಬಾಲನ್ನು ಒಂದೇ ಮನೆಯೊಂದರ ತೆರೆದ ಸಣ್ಣ ಕಿಟಕಿಯಲ್ಲಿ ಹಾಕುತ್ತಿದ್ದಾರೆ. ಈ ವಿಡಿಯೋಗೆ ಫ್ರಾನ್ಸ್, ಇಂಗ್ಲೆಂಡ್, ಕ್ರೋಷಿಯಾವನ್ನು ಮರೆತುಬಿಡಿ ಎಂದು ಬರೆದಿದ್ದಾರೆ, ಇನ್ ಸ್ಟಾಗ್ರಾಮ್ ನಲ್ಲಿ `ಮೆಸ್ಸಿ ಕಾ ಚಾಚಾ’ ಹ್ಯಾಶ್‍ಟ್ಯಾಗ್ ಹಾಕಿ ವಿಡಿಯೋ ಪೋಸ್ಟ್ ಮಾಡಿದ್ದಾರೆ.

    ಟ್ವೀಟ್ಟರ್ ನಲ್ಲಿ ಸೆಹ್ವಾಗ್ ಈ ವಿಡಿಯೋವನ್ನು ಪೋಸ್ಟ್ ಮಾಡುತ್ತಲೇ, ಸುಮಾರು 26 ಸಾವಿರಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದು, 4,600 ಮಂದಿ ರೀ ಟ್ವೀಟ್ ಮಾಡಿದ್ದಾರೆ. ಅಲ್ಲದೇ ಇನ್ ಸ್ಟಾಗ್ರಾಮ್‍ನಲ್ಲಿ ಈ ವಿಡಿಯೋವನ್ನು 3.76 ಲಕ್ಷ ಮಂದಿ ನೋಡಿದ್ದಾರೆ.

    ವಿರೇಂದ್ರ ಸೆಹ್ವಾಗ್ ರವರು ವೃತ್ತಿ ಜೀವನಕ್ಕೆ ವಿದಾಯ ಘೋಷಿಸಿದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಆಟಗಾರರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹಾಸ್ಯ ಶೈಲಿಯಲ್ಲಿ ಪೋಸ್ಟ್ ಮಾಡಿ ಕಾಲೆಳೆಯುತ್ತಲೇ ಇರುತ್ತಾರೆ.

    https://www.instagram.com/p/BlE40ZcnsxD/?hl=en&taken-by=virendersehwag

  • ದಿನಗೂಲಿ ಸಿಗದಿದ್ದಕ್ಕೆ ಸಿಎಂನನ್ನೇ ಫುಟ್‍ಬಾಲ್ ಮಾಡಿ ಆಕ್ರೋಶ  ಹೊರ ಹಾಕಿದ ಮಹಿಳೆಯರು!

    ದಿನಗೂಲಿ ಸಿಗದಿದ್ದಕ್ಕೆ ಸಿಎಂನನ್ನೇ ಫುಟ್‍ಬಾಲ್ ಮಾಡಿ ಆಕ್ರೋಶ ಹೊರ ಹಾಕಿದ ಮಹಿಳೆಯರು!

    ಭೋಪಾಲ್: ದಿನಗೂಲಿ ನೀಡಲಿಲ್ಲ ಎಂದು ರೈತ ಮಹಿಳೆಯರು ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರ ಭಾವಚಿತ್ರವನ್ನು ಫುಟ್‍ಬಾಲ್ ಮಾಡಿ ತಮ್ಮ ಆಕ್ರೋಶವನ್ನು ಹೊರ ಹಾಕಿದ ಘಟನೆ ಮಧ್ಯಪ್ರದೇಶದ ಖಾಂಡ್ವಾದಲ್ಲಿ ನಡೆದಿದೆ.

    ಖಾಂಡ್ವಾ ಜಿಲ್ಲೆಯಲ್ಲಿ ರೇಷ್ಮೆ ಉತ್ಪಾದಕರು ಕಳೆದ 7 ದಿನದಿಂದ ಪ್ರತಿಭಟನೆ ಮಾಡುತ್ತಿದ್ದಾರೆ. 4 ವರ್ಷಗಳ ಹಿಂದೆ ಮಹಿಳೆಯರು ಮಹಾತ್ಮಾ ಗಾಂಧೀಜಿ ರಾಷ್ಟ್ರೀಯ ಗ್ರಾಮೀಣಾ ರೋಜ್‍ಗಾರ್ ಗ್ಯಾರಂಟಿ ಯೋಜನೆ ಅಡಿಯಲ್ಲಿ ರೇಷ್ಮೆ ಉತ್ಪಾದನೆಯಲ್ಲಿ ಕೆಲಸ ಮಾಡಿದ್ದು, ಆ ಕೆಲಸಕ್ಕೆ ಇದುವರೆಗೂ ದಿನಗೂಲಿ ನೀಡಲಿಲ್ಲ ಎಂದು ಮಹಿಳಯರು ಆರೋಪಿಸಿ ಪ್ರತಿಭಟನೆ ಮಾಡುತ್ತಿದ್ದಾರೆ.

    ಜುಲೈ 9 ರಂದು ಮಹಿಳೆಯರು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಅವರ ಫೋಟೋವನ್ನು ಫುಟ್‍ಬಾಲ್‍ಗೆ ಅಂಟಿಸಿ ಆಟವಾಡಿದ್ದಾರೆ. “ಸರ್ಕಾರ ಸಾಮಾನ್ಯ ಜನರನ್ನು ಫುಟ್‍ಬಾಲ್ ಮಾಡಿ ಅವರನ್ನು ಕಾಲಿನಿಂದ ಒದ್ದಿದ್ದಾರೆ. ಅವರಂತೆಯೇ ನಾವು ಕೂಡ ಚುನಾವಣೆಯಲ್ಲಿ ಅವರನ್ನು ಫುಟ್‍ಬಾಲ್ ನಂತೆ ಒದೆಯುತ್ತೇವೆ” ಎಂದು ಮಹಿಳೆಯರು ಹೇಳಿದ್ದಾರೆ.

    ಮಹಿಳೆಯರು ಫುಟ್‍ಬಾಲ್ ಆಡಿ ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದರೆ, ಅಲ್ಲಿದ್ದ ಜನರು ಅದನ್ನು ತಮ್ಮ ಫೋನಿನಲ್ಲಿ ಫೋಟೋ ತೆಗೆದಿದ್ದಾರೆ. ಸದ್ಯ ಮಹಿಳೆಯರು ಫುಟ್‍ಬಾಲ್ ಆಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮದಲ್ಲಿ ತೋರಿಸಲಾಯಿತು. ಆಗ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಈ ರೀತಿ ಮಾಡದಂತೆ ಎಚ್ಚರ ನೀಡಿದ್ದಾರೆ.

  • ಥೈಲ್ಯಾಂಡ್ ಗುಹೆಯಲ್ಲಿ ಸಿಲುಕಿದ್ದ ಎಲ್ಲ ಮಕ್ಕಳು 17 ದಿನಗಳ ಬಳಿಕ ಹೊರಬಂದ್ರು!

    ಥೈಲ್ಯಾಂಡ್ ಗುಹೆಯಲ್ಲಿ ಸಿಲುಕಿದ್ದ ಎಲ್ಲ ಮಕ್ಕಳು 17 ದಿನಗಳ ಬಳಿಕ ಹೊರಬಂದ್ರು!

    ಚಿಯಾಂಗ್ ರಾಯ್: 17 ದಿನಗಳ ನಿರಂತರ ಕಾರ್ಯಾಚರಣೆ ಮೂಲಕ ಥೈಲ್ಯಾಂಡ್ ಥಮ್ ಲುವಾಂಗ್ ಗುಹೆಯಲ್ಲಿ ಸಿಲುಕಿದ್ದ 13 ಮಂದಿಯನ್ನು ರಕ್ಷಿಸಲಾಗಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಗುಹೆಯಲ್ಲಿ ಒಟ್ಟು 19 ಮಂದಿ ಡೈವರ್ (ಮುಳುಗು ತಜ್ಞರು) ಹೋಗಿದ್ದು, ಹಂತ ಹಂತವಾಗಿ 12 ಜನ ಮಕ್ಕಳು ಹಾಗೂ ಒಬ್ಬ ಕೋಚ್ ಅನ್ನು ಹೊರತರುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನು ಓದಿ: ಥೈಲ್ಯಾಂಡ್ ಗುಹೆಯಲ್ಲಿ ಸಿಲುಕಿದ ಮಕ್ಕಳು: ಗುಹೆಯ ವಿಶೇಷತೆ ಏನು? ಸಿಲುಕಿದ್ದು ಹೇಗೆ? ಏನಿದು ಕಾರ್ಯಾಚರಣೆ?

    ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಡೈವರ್ ಸೇರಿದಂತೆ ಅನೇಕ ನುರಿತ ತಜ್ಞರ ತಂಡಕ್ಕೆ ವಿಶ್ವದ ನಾಯಕರಿಂದ ಪ್ರಶಂಸನೆ ಕೇಳಿ ಬರುತ್ತಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಟ್ವೀಟ್ ಮಾಡುವ ಮೂಲಕ ರಕ್ಷಣಾ ಕಾರ್ಯದಲ್ಲಿ ಭಾಗವಹಿದ್ದವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. 17 ದಿನಗಳ ಕಾಲ ಹಗಲು ರಾತ್ರಿ ಎನ್ನದೇ ನಿರಂತರವಾಗಿ ಕಾರ್ಯಾಚರಣೆ ನಡೆಸಲಾಗಿತ್ತು.

    ಪಾರಾದ ಎಲ್ಲ ಮಕ್ಕಳು ಈ ಬಾರಿಯ ಫಿಫಾ ವಿಶ್ವಕಪ್ ಫೈನಲ್ ಪಂದ್ಯ ವೀಕ್ಷಣೆಯ ಟಿಕೆಟ್ ಸಿಕ್ಕಿದೆ. ಜುಲೈ 15 ರಂದು ನಡೆಯಲಿರುವ ಫೈನಲ್ ಪಂದ್ಯಕ್ಕು ಮುನ್ನ ಈ ಮಕ್ಕಳು ಗುಹೆಯಿಂದ ಪಾರಾದರೆ ಅವರಿಗೆ ಈ ಪಂದ್ಯದ ಟಿಕೆಟ್ ಗಳನ್ನು ಉಚಿತವಾಗಿ ನೀಡಲಾಗುವುದು ಎಂದು ಫಿಫಾ ಅಧ್ಯಕ್ಷರು ಈ ಹಿಂದೆ ಪ್ರಕಟಿಸಿದ್ದರು.

  • ಥಮ್ ಲುಮಾಂಗ್ ಗುಹೆಯಲ್ಲಿ ಸಿಲುಕಿದ್ದ 13 ಮಂದಿ ಪೈಕಿ 6 ಬಾಲಕರು ಬಚಾವ್

    ಥಮ್ ಲುಮಾಂಗ್ ಗುಹೆಯಲ್ಲಿ ಸಿಲುಕಿದ್ದ 13 ಮಂದಿ ಪೈಕಿ 6 ಬಾಲಕರು ಬಚಾವ್

    ಚಿಯಾಂಗ್ ರಾಯ್: ಥೈಲ್ಯಾಂಡ್ ಥಮ್ ಲುವಾಂಗ್ ಗುಹೆಯಲ್ಲಿ ಸಿಲುಕಿದ್ದ 13 ಮಂದಿ ಪೈಕಿ ಸದ್ಯ 6 ಬಾಲಕರನ್ನು ರಕ್ಷಣೆ ಮಾಡಲಾಗಿದೆ.

    ಜೂನ್ 26ರಂದು ಕೋಚ್ ಸೇರಿದಂತೆ ಫುಟ್‍ಬಾಲ್ ಜೂನಿಯರ್ ತಂಡ 12 ಬಾಲಕರು ಗುಹೆ ಸೇರಿದ್ದರು. ಕಳೆದ 14 ದಿನಗಳಿಂದ ಕೋಚ್ ಹಾಗೂ ಬಾಲಕರ ರಕ್ಷಣೆಗಾಗಿ ಕಾರ್ಯಾಚರಣೆ ನಡೆಸಲಾಗಿದ್ದು, ಸದ್ಯ 6 ಬಾಲಕರು ಜೀವಂತವಾಗಿ ಸಿಕ್ಕಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

    ನಡೆದಿದ್ದು ಏನು?
    ಕೋಚ್ ಸಮೇತ ತಂಡದ ಎಲ್ಲಾ ಆಟಗಾರರು ಕಾಡಿನಲ್ಲಿ ಸುತ್ತಾಡಲು ಹೋದಾಗ ನಾಪತ್ತೆಯಾಗಿ ಆತಂಕ ಸೃಷ್ಟಿಸಿದ್ದರು. ಪ್ರವಾಸದ ವೇಳೆ ಬೃಹತ್ ಗುಹೆಯೊಳಗೆ ಪ್ರವೇಶ ಪಡೆದಿದ್ದ ಆಟಗಾರರು ಬಳಿಕ ಉಂಟಾದ ಪ್ರವಾಹದಿಂದ ಕೊಚ್ಚಿ ಹೋಗಿದ್ದರು. ಘಟನೆ ಬೆಳಕಿಗೆ ಬಂದ ನಂತರ ಅಲ್ಲಿನ ಸರ್ಕಾರ ರಕ್ಷಣಾ ಕಾರ್ಯಾಚರಣೆ ಆರಂಭಿಸಿತ್ತು. ಸತತ 9 ದಿನಗಳ ಕಠಿಣ ಕಾರ್ಯಾಚರಣೆಯ ಬಳಿಕ ಎಲ್ಲರನ್ನು ಒಟ್ಟಾಗಿ ರಕ್ಷಣೆ ಮಾಡಿದ್ದಾರೆ. ಕಾರ್ಯಾಚರಣೆಗೆ ಬ್ರಿಟಿಷ್ ಗುಹಾ ಮುಳುಗು ತಜ್ಞರನ್ನು ಬಳಕೆ ಮಾಡಿಕೊಳ್ಳಲಾಗಿತ್ತು.

    ಕಾಣೆಯಾದ ಆಟಗಾರರು 9 ದಿನಗಳ ಆಹಾರವಿಲ್ಲದೇ ಪರದಾಟ ನಡೆಸಿದ್ದು, ಆದರೆ ಎಲ್ಲರೂ ಒಟ್ಟಿಗೆ ಪ್ರಯಾಣ ನಡೆಸಿದ್ದರು. ಆಟಗಾರರು ಪ್ರವಾಸ ತೆರಳಿದ ಬಳಿಕ ಪ್ರವಾಹವೇ ಘಟನೆಗೆ ಪ್ರಮುಖ ಕಾರಣ ಎನ್ನಲಾಗಿದೆ. ಮೊದಲು ಗುಹೆಯಲ್ಲಿ ಕಾರ್ಯಾಚರಣೆ ನಡೆಸಲು ಅಡ್ಡಿಯಾಗಿದ್ದ ನೀರನ್ನು ಹೊರಹಾಕಿದ ರಕ್ಷಣಾ ಸಿಬ್ಬಂದಿ ಬಳಿಕ ಗುಹೆಯೊಳಗೆ ಪ್ರವೇಶಿಸಿದ್ದರು.

    ಸದ್ಯ ಈ ಕುರಿತು ವಿಡಿಯೋವನ್ನು ಸಲ್ಲಿನ ಸರ್ಕಾರ ಬಿಡುಗಡೆ ಮಾಡಿದ್ದು ರಕ್ಷಣೆ ಮಾಡಿರುವ ಎಲ್ಲಾ ಆಟಗಾರಿಗೆ ಆಹಾರ ಹಾಗೂ ಆಮ್ಲಜನಕ ಪೂರೈಸಿ ಬಳಿಕ ಹೊರ ತಂದಿದೆ.

    ಆರಂಭದಲ್ಲಿ ಈ ಕಾರ್ಯಾಚರಣೆ ವಿಫಲವಾಗುತ್ತದೆ ಎಂದೇ ಹಲವರು ವಿಶ್ಲೇಷಿಸಿದ್ದರು. ಆಟಗಾರರು ನಾಪತ್ತೆಯಾದ ಬಳಿಕ ಆ ಪ್ರದೇಶದಲ್ಲಿ ಪ್ರತಿದಿನವೂ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿತ್ತು. ಸದ್ಯ ಆಟಗಾರರ ರಕ್ಷಣೆಯಿಂದ ಪೋಷಕರು ಆತಂಕದಿಂದ ದೂರವಾಗಿದ್ದು, ಸಂತಸ ವ್ಯಕ್ತಪಡಿಸಿದ್ದರು.