Tag: Foot Path

  • ಫುಟ್‍ ಪಾತಲ್ಲೇ ನಂದಿನಿ ಪಾರ್ಲರ್ ಇಟ್ಟ ಶಾಸಕರ ಪಿಎ

    ಫುಟ್‍ ಪಾತಲ್ಲೇ ನಂದಿನಿ ಪಾರ್ಲರ್ ಇಟ್ಟ ಶಾಸಕರ ಪಿಎ

    ಬೆಂಗಳೂರು: ಬಿಜೆಪಿ ಶಾಸಕ ಎಸ್.ಆರ್ ವಿಶ್ವನಾಥ್ ಪ್ರತಿನಿಧಿಸುವ ಬೆಂಗಳೂರಿನ ಯಲಹಂಕದಲ್ಲಿ ಫುಟ್‍ ಪಾತ್‍ ನಲ್ಲೇ ಅಂಗಡಿಗಳು ಉದ್ಭವವಾಗಿದೆ.

    ಡೈರಿ ಸರ್ಕಲ್ ಬಳಿಯಿರುವ ಪಾದಾಚಾರಿ ಮಾರ್ಗದಲ್ಲಿ ಶಾಸಕರ ಪಿಎ ಮಲ್ಲಿಕಾರ್ಜುನ್ ನಂದಿನಿ ಮಿಲ್ಕ್ ಪಾರ್ಲರ್ ತೆರೆದಿದ್ದಾರೆ. ಅದೇ ಫುಟ್ ಪಾತ್‍ನಲ್ಲಿ ಶುದ್ಧ ನೀರಿನ ಘಟಕ ಕೂಡ ಸ್ಥಾಪಿಸಿದ್ದಾರೆ. ನಿಯಮಗಳಿಗೆ ವಿರುದ್ಧವಾಗಿಯೇ ಸ್ವತಃ ಶಾಸಕರು ಮತ್ತು ಅಟ್ಟೂರು ವಾರ್ಡ್‍ನ ಕಾರ್ಪೋರೇಟರ್ ನೇತ್ರಾ ಪಲ್ಲವಿ ಅನುಮತಿ ದಯಪಾಲಿಸಿದ್ದಾರೆ.

    ಇವರ ಈ ಆಟದಿಂದಾಗಿ ರಸ್ತೆಯ ಪಕ್ಕದಲ್ಲಿ ಹೋಗೋಕೆ ಜಾಗವಿಲ್ಲದೇ ಜನಸಾಮಾನ್ಯರು ಒದ್ದಾಡುತ್ತಿದ್ದಾರೆ. ಆದರೆ ಘನವೆತ್ತ ಬಿಜೆಪಿ ಕಾರ್ಪೊರೇಟರ್ ಯಾಕ್ ಮೇಡಂ ಈ ರೀತಿ ಅಂದರೆ ಉತ್ತರಿಸೋಕೆ ಸಿದ್ಧರಿಲ್ಲ. ರಸ್ತೆಯಲ್ಲಿ ಓಡಾಡಲು ತುಂಬಾ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

  • ನಿವೃತ್ತಿ ಸಮಯದಲ್ಲಿ ಬಂದ 20 ಲಕ್ಷ ಹಣ ಕಿತ್ಕೊಂಡು ಅಪ್ಪನನ್ನೇ ಬೀದಿಗೆ ತಳ್ಳಿದ ನಿರ್ದಯಿ ಮಕ್ಕಳು

    ನಿವೃತ್ತಿ ಸಮಯದಲ್ಲಿ ಬಂದ 20 ಲಕ್ಷ ಹಣ ಕಿತ್ಕೊಂಡು ಅಪ್ಪನನ್ನೇ ಬೀದಿಗೆ ತಳ್ಳಿದ ನಿರ್ದಯಿ ಮಕ್ಕಳು

    ತುಮಕೂರು: ನಿವೃತ್ತಿ ಸಂದರ್ಭದಲ್ಲಿ ಬಂದ ಹಣ ಕಿತ್ತುಕೊಂಡು ವೃದ್ಧ ತಂದೆಯನ್ನು ಮಕ್ಕಳು ಬೀದಿಗೆ ತಳ್ಳಿರೋ ಅಮಾನವೀಯ ಘಟನೆ ತುಮಕೂರಿನಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

    ಕೆಎಸ್‍ಆರ್‍ಟಿಸಿ ನಿವೃತ್ತ ನೌಕರರೊಬ್ಬರು ಮಕ್ಕಳಿಂದ ಮನೆ ಮಠ, ಪಿಂಚಣಿ ಹಣ ಎಲ್ಲವನ್ನೂ ಕಳೆದುಕೊಂಡು ಫುಟ್ ಪಾತ್ ನಲ್ಲೇ ಜೀವನ ಕಳೆಯುತ್ತಿದ್ದಾರೆ. ರಾಮಚಂದ್ರಪ್ಪ ಮಕ್ಕಳಿಂದ ದೌರ್ಜನ್ಯಕ್ಕೊಳಗಾಗಿ ಬೀದಿ ಪಾಲಾದವರು.

    ಕಳೆದ ಒಂದು ವಾರದಿಂದ ತುಮಕೂರಿನ ರೇಲ್ವೆ ನಿಲ್ದಾಣದ ಬಳಿಯ ಫುಟ್‍ಪಾತ್ ನಲ್ಲಿ ಮಲಗುತ್ತಿದ್ದಾರೆ. ದಾರಿ ಹೋಕರು, ತರಕಾರಿ ಮಾರುವವರು ಕೊಟ್ಟ ಹಣದಿಂದ ಊಟ ತಿಂಡಿ ಸೇವಿಸುತಿದ್ದಾರೆ. ಮೈಸೂರಿನ ಡಿಪೋ ನಂಬರ್ 2 ರಲ್ಲಿ ನಿರ್ವಾಹಕರಾಗಿ ಕೆಲಸ ಮಾಡಿದ್ದ ಇವರು ಐದು ವರ್ಷದ ಹಿಂದೆ ನಿವೃತ್ತಿ ಹೊಂದಿದ್ದಾರೆ. ಕೆಎಸ್‍ಆರ್‍ಟಿಸಿಯಲ್ಲಿ ಇವರ ದಾಖಲಾತಿ ಸಂಖ್ಯೆ-1926 ಆಗಿರುತ್ತದೆ.

    ನಿವೃತ್ತಿ ಸಂದರ್ಭದಲ್ಲಿ ಬಂದಂತಹ 20 ಲಕ್ಷ ರೂಪಾಯಿ ಹಾಗೂ ಪಿಂಚಣಿ ಹಣ ಬರುವ ದಾಖಲೆ ಎಲ್ಲವನ್ನೂ ಮಕ್ಕಳು ಕಿತ್ತುಕೊಂಡಿದ್ದಾರೆ ಎಂದು ರಾಮಚಂದ್ರಪ್ಪ ಹೇಳುತ್ತಾರೆ. ಮೈಸೂರಿನ ನಜರಾಬಾದ್ ನಿವಾಸಿಯಾದ ರಾಮಚಂದ್ರಪ್ಪ ಇದೀಗ ಕೆಲಸ ಹುಡುಕಿಕೊಂಡು ತುಮಕೂರಿಗೆ ಬಂದಿದ್ದಾರೆ.

    ಇವರು ಮೂಲತಃ ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಸಾತನೂರು ಹೋಬಳಿಯ ಕಲ್ಲಳ್ಳಿ ಗ್ರಾಮದವರಾಗಿದ್ದು, ಕೆಲಸದ ನಿಮಿತ್ತ ಮೈಸೂರಿಗೆ ಹೋದಾಗ ಮೈಸೂರಿನಲ್ಲೇ ಮನೆ ಕಟ್ಟಿಕೊಂಡು ನೆಲೆಸಿದ್ದರು ಎಂದು ಮಾಹಿತಿ ನೀಡಿದ್ದಾರೆ. ಇವರಿಗೆ ಇಬ್ಬರು ಗಂಡು ಮಕ್ಕಳಿದ್ದು, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದಾರೆ. ಆದರೂ ನಾನು ಬೀದಿಗೆ ಬಂದಿದ್ದೇನೆ ಎಂದು ರಾಮಚಂದ್ರಪ್ಪ ತುಂಬಾ ನೋವಿನಿಂದ ಹೇಳಿಕೊಳ್ಳುತ್ತಾರೆ.