Tag: Food Products

  • ಬೆಲೆ ಏರಿಕೆ ಪಟ್ಟಿ ನೋಡಿದ್ರೆ ಎದೆ ನಡುಗುತ್ತೆ – ಹೆಚ್‌.ಡಿ ಕುಮಾರಸ್ವಾಮಿ

    ಬೆಲೆ ಏರಿಕೆ ಪಟ್ಟಿ ನೋಡಿದ್ರೆ ಎದೆ ನಡುಗುತ್ತೆ – ಹೆಚ್‌.ಡಿ ಕುಮಾರಸ್ವಾಮಿ

    – ಅಕ್ಕಿಭಾಗ್ಯ ಹಗಲು ಕನಸು, ಬೆಲೆ ಏರಿಕೆ ಕನಸು ನನಸು
    – ಇವೇ ಕಾಂಗ್ರೆಸ್‌ ಪಕ್ಷದ ಹೊಸ ಗ್ಯಾರಂಟಿ ಅಂತಾ ಹೆಚ್‌ಡಿಕೆ ಟಾಂಗ್‌

    ಬೆಂಗಳೂರು: ಬೆಲೆ ಏರಿಕೆ (Price Hike) ಪಟ್ಟಿ ನೋಡಿದ್ರೆ ಎದೆ ನಡುಗುತ್ತದೆ. ಅಕ್ಕಿ ಬೆಲೆ ಕೆಜಿಗೆ ಸರಾಸರಿ 20 ರೂ. ಹೆಚ್ಚಿದರೆ, ಟೊಮ್ಯಾಟೋ ಬೆಲೆ 100 ರೂ. ತಲುಪಿದೆ. ಈ ಬೆಲೆ ಏರಿಕೆಯಿಂದಾಗಿ ಅತ್ತ ರೈತನಿಗೂ ಲಾಭ ಇಲ್ಲ, ಇತ್ತ ಗ್ರಾಹಕನಿಗೂ ಲಾಭವಿಲ್ಲ. ಜನ ಬೆಲೆ ಬೆಂಕಿಯಲ್ಲಿ ಬೇಯುತ್ತಿದ್ದರೆ ಈ ಸರ್ಕಾರ ಆ ಬೇಗೆಯಲ್ಲಿ ಚಳಿ ಕಾಯಿಸಿಕೊಳ್ಳುತ್ತಿದೆ. ಹೊಸ ಹುಂಡಿಗಳಿಗೆ ಜಾಗ ಹುಡುಕುತ್ತಿದೆ ಎಂದು ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ (HD Kumaraswamy) ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

    ಸೊಪ್ಪು ತರಕಾರಿ ಸೇರಿದಂತೆ ಆಹಾರ ಪದಾರ್ಥಗಳ ವಸ್ತುಗಳ ಮೇಲಿನ ಬೆಲೆ ಏರಿಕೆಯು ಜನ ಸಾಮ್ಯಾನರಿಗೆ ಶಾಕ್‌ ಕೊಟ್ಟಂತಾಗಿದೆ. ಈ ಕುರಿತು ಮಾಜಿ ಸಿಎಂ ಹೆಚ್‌ಡಿಕೆ ಸರಣಿ ಟ್ವೀಟ್‌ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಹೆಚ್‌ಡಿಕೆ ಟ್ವೀಟ್‌ನಲ್ಲಿ ಏನಿದೆ?
    5 ಗ್ಯಾರಂಟಿಗಳಿಂದ ಜನೋದ್ಧಾರ ಗ್ಯಾರಂಟಿ ಎಂದು ಹಸಿಸುಳ್ಳು ಹೇಳಿದ್ದ ರಾಜ್ಯ ಕಾಂಗ್ರೆಸ್‌ ಸರ್ಕಾರ (Congress Government) ಬರಗೆಟ್ಟ ಈ ಹೊತ್ತಿನಲ್ಲಿ ಅಂಬರದ ಮೇಲೆ ಕೂತು ಸ್ವಯಂವರ ಮಾಡಿಕೊಳ್ಳುತ್ತಿರುವ ಮತಗೆಟ್ಟ ವರನಂತೆ ವರ್ತಿಸುತ್ತಿದೆ. ಬೆಲೆ ಏರಿಕೆ ಹೊಡೆತಕ್ಕೆ ಜನ ತತ್ತರಿಸುತ್ತಿರುವುದು ಅದರ ಕಣ್ಣಿಗೆ ಕಾಣುತ್ತಿಲ್ಲ.

    ನನಗೂ ಫ್ರೀ, ನಿನಗೂ ಫ್ರೀ ಎಂದು ಗ್ಯಾರಂಟಿ ಜಾಗಟೆ ಹೊಡೆದ ಈ ಸರ್ಕಾರಕ್ಕೆ ಮಾರುಕಟ್ಟೆಯಲ್ಲಿ ಗಗನಮುಖಿಯಾದ ಆಹಾರ ಪದಾರ್ಥಗಳ ಬೆಲೆ ಮೇಲೆ ನಿಯಂತ್ರಣವೇ ಇಲ್ಲ. ಆಹಾರ ಮತ್ತು ನಾಗರಿಕ ಪೂರೈಕೆ, ಕೃಷಿ ಉತ್ಪನ್ನ ಮಾರುಕಟ್ಟೆ ಇಲಾಖೆಗಳು ಜನರ ಕಣ್ಣೀರಿನಲ್ಲಿ ಗೆಣಸು ಬೇಯಿಸಿಕೊಳ್ಳುತ್ತಿವೆ. ಅವರಿಗೆ ಬೆಲೆ ಇಳಿಕೆ ಬಗ್ಗೆ ಚಿಂತನೆಯೇ ಇಲ್ಲ.

    ಇನ್ನೊಬ್ಬರ ಮೇಲೆ ಗೂಬೆ ಕೂರಿಸುವ ಈ ಸರ್ಕಾರ ಬಂದು ತಿಂಗಳ ಮೇಲಾಯಿತು. ಅಧಿಕಾರ ಸಿಕ್ಕ ಕೂಡಲೇ ವರ್ಗಾವಣೆ ದಂಧೆಯ ದಾಸ್ಯಕ್ಕೆ ಬಿದ್ದ ಸರ್ಕಾರಕ್ಕೆ ಮಾರುಕಟ್ಟೆಯಲ್ಲಿ ಹೆಚ್ಚುತ್ತಲೇ ಹೋಗುತ್ತಿರುವ ಬೆಲೆಗಳ ಬಗ್ಗೆ, ಆಹಾರ ಪದಾರ್ಥಗಳ ದುಬಾರಿ ಬಗ್ಗೆ ಗಮನ ಹೋಗಲೇ ಇಲ್ಲ. ಹಣದ ಹಪಾಹಪಿ ಭಾಗ್ಯಗಳನ್ನು ಬಲಿ ತೆಗೆದುಕೊಳ್ಳುವ ದುಸ್ಥಿತಿಗೆ ದೂಡಿದೆ. ಇದನ್ನೂ ಓದಿ: ತರಕಾರಿ, ಹಣ್ಣುಗಳ ಬೆಲೆ ಏರಿಕೆ – ಹಿಂದೆ ಎಷ್ಟಿತ್ತು? ಈಗ ಎಷ್ಟಾಗಿದೆ?

    ಬೆಲೆ ಏರಿಕೆ ಪಟ್ಟಿ ಓದಿದರೆ ಎದೆ ನಡುಗುತ್ತದೆ. ಅಕ್ಕಿ ಬೆಲೆ ಕೆಜಿಗೆ ಸರಾಸರಿ 20ರೂ. ಏರಿದ್ದರೆ,ಕೆಜಿ ಟೊಮ್ಯಾಟೋ ಬೆಲೆ 100 ರೂ. ಮುಟ್ಟಿದೆ. ಈ ಏರಿಕೆ ಲಾಭ ಅತ್ತ ರೈತನಿಗೂ ಇಲ್ಲ, ಇತ್ತ ಗ್ರಾಹಕನಿಗೂ ಇಲ್ಲ. ಜನ ಬೆಲೆ ಬೆಂಕಿಯಲ್ಲಿ ಬೇಯುತ್ತಿದ್ದರೆ ಈ ಸರ್ಕಾರ ಆ ಬೇಗೆಯಲ್ಲಿ ಚಳಿ ಕಾಯಿಸಿಕೊಳ್ಳುತ್ತಿದೆ, ಹೊಸ ಹುಂಡಿಗಳಿಗೆ ಜಾಗ ಹುಡುಕುತ್ತಿದೆ.

    ರಾಜ್ಯ ಕಾಂಗ್ರೆಸ್‌ ಸರ್ಕಾರ ತಾನು ಕೊಟ್ಟ ಭರವಸೆಗಳ ಬಗ್ಗೆ ಉತ್ತರ ಹೇಳಲಿ? ಬೆಲೆಗಳ ಇಳಿಕೆಯ ಬಗ್ಗೆ ಹೇಳಿದ್ದೆಲ್ಲ ಎಲ್ಲಿ ಹೋಯಿತು? ಮತ ಪಡೆದ ಮೇಲೆ ಎಲ್ಲಾ ಮರೆತು ಹೋಯಿತಾ? 135 ಸೀಟು ಸಿಕ್ಕಿದ ಮೇಲೆ ಪ್ರಣಾಳಿಕೆ ಪುಸ್ತಕಕ್ಕೆ ಮೂವತ್ತೇ ದಿನದಲ್ಲಿ ಗೆದ್ದಲು ಹಿಡಿಯಿತಾ?

    ನುಡಿದಂತೆ ನಡೆದಿದ್ದೇವೆ ಎಂದಿರಿ, ನುಡಿದಂತೆ ಎಲ್ಲಿ ನಡೆದಿದ್ದೀರಿ? ನುಡಿದಂತೆ ನಡೆದಿದ್ದೇವೆ ಎಂದರೆ ಲಂಗೂ ಲಗಾಮು ಇಲ್ಲದೆ ಬೆಲೆಗಳನ್ನು ಆಕಾಶಕ್ಕೆ ಜಿಗಿಸುವುದಾ? ಮಾರುಕಟ್ಟೆಯ ದಲ್ಲಾಳಿಗಳಿಗೆ ಶಕ್ತಿ ತುಂಬುವುದಾ? ಶಕ್ತಿ ಯೋಜನೆ ಮೂಲಕ ಮಹಿಳೆಯರ ಗಮನ ಬೇರೆಡೆಗೆ ಸೆಳೆದು, ಅವರ ಅಡುಗೆ ಮನೆ ಬಜೆಟ್’ಗೆ ಕೊಳ್ಳಿ ಇಡುವುದಾ?

    ಕಾಂಗ್ರೆಸ್ ಪಕ್ಷದ ಹೊಸ ಗ್ಯಾರಂಟಿಗಳು: ಅಕ್ಕಿಭಾಗ್ಯ ಹಗಲು ಕನಸು, ಬೆಲೆ ಏರಿಕೆ ಕನಸು ನನಸು, ಗೃಹಜ್ಯೋತಿ ಈಗ ಸುಡುಜ್ಯೋತಿ, ಶಕ್ತಿ ಯೋಜನೆಯಿಂದ ಸಾರಿಗೆ ವ್ಯವಸ್ಥೆಯಲ್ಲಿ ಅರಾಜಕತೆ, ಗೃಹಲಕ್ಷ್ಮಿಗೆ ಗ್ರಹಣ ಹಾಗೂ ನಿದ್ರೆಗೆ ಜಾರಿದೆ ಯುವನಿಧಿ ಇವು ಕಾಂಗ್ರೆಸ್‌ ಪಕ್ಷದ ಹೊಸ ಗ್ಯಾರಂಟಿಗಳು. ಇದನ್ನೂ ಓದಿ: ಬೆಸ್ಕಾಂ ಎಡವಟ್ಟು, ಮೀಟರ್ ರಿಡೀಂಗ್‌ಗಿಂತ ಹೆಚ್ಚು ಬಿಲ್ – ಜನರ ಜೇಬಿಗೆ ಕತ್ತರಿ

    ಕಾಂಗ್ರೆಸ್‌ ಸರ್ಕಾರ ಸುಳ್ಳು ಹೇಳಿದ್ದು ಸಾಕು, ಇನ್ನಾದರೂ ಏರಿದ ಬೆಲೆ ಕಡಿತಕ್ಕೆ ಕ್ರಮ ಕೈಗೊಳ್ಳಲಿ. ಇಲ್ಲವಾದರೆ ರಾಜ್ಯದ ನಾರಿಶಕ್ತಿ ಆಕ್ರೋಶಕ್ಕೆ ನೀವು ನಾಮಾವಶೇಷ ಇಲ್ಲದಂತೆ ಹೋಗುತ್ತೀರಿ ಎಂದು ಎಚ್ಚರಿಸಿದ್ದಾರೆ.

  • ಆಹಾರ ಪದಾರ್ಥದಲ್ಲಿ ಹುಳ ಪ್ರಕರಣ – ಶಿಕ್ಷಕರಿಗೆ ಬೆದರಿಸಿದ ಅಕ್ಷರ ದಾಸೋಹದ ನಿರ್ದೇಶಕ

    ಆಹಾರ ಪದಾರ್ಥದಲ್ಲಿ ಹುಳ ಪ್ರಕರಣ – ಶಿಕ್ಷಕರಿಗೆ ಬೆದರಿಸಿದ ಅಕ್ಷರ ದಾಸೋಹದ ನಿರ್ದೇಶಕ

    ಮೈಸೂರು: ಜಿಲ್ಲೆಯ ಎಚ್.ಡಿ. ಕೋಟೆ ಸರ್ಕಾರಿ ಶಾಲೆಗಳಿಗೆ ಬಿಸಿಯೂಟದ ಯೋಜನೆಗೆ ವಿತರಿಸಿದ ಆಹಾರ ಪದಾರ್ಥಗಳಲ್ಲಿ ಹುಳು ಪತ್ತೆ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆದಿದೆ.

    ಎಚ್.ಡಿ.ಕೋಟೆ ಅಕ್ಷರ ದಾಸೋಹ ನಿರ್ದೇಶಕ ಸಿದ್ದರಾಜುರಿಂದ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆದಿದೆ. ಆಹಾರ ಪದಾರ್ಥಗಳಲ್ಲಿ ಹುಳ ಇರುವ ಬಗ್ಗೆ ಪಬ್ಲಿಕ್ ಟಿವಿಯಲ್ಲಿ ವರದಿ ಬಂದ ನಂತರ ಶಾಲೆಗಳಿಗೆ ಭೇಟಿ ನೀಡಿದ ಅಕ್ಷರ ದಾಸೋಹ ನಿರ್ದೇಶಕ ಸಿದ್ದರಾಜು, ಶಾಲೆಯ ಶಿಕ್ಷಕರಿಗೆ ಬೆದರಿಸಿ ಇದು ಹಳೆಯ ದಾಸ್ತಾನು ಎಂದು ಸುಳ್ಳು ಹೇಳುವಂತೆ ಸೂಚಿಸಿದ್ದಾರೆ.

    ನಾನು ನಿಮ್ಮ ಮೇಲಾಧಿಕಾರಿ ನಾನು ಹೇಳಿದಂತೆ ಕೇಳಿ ಎಂದು ತಾಕೀತು ಮಾಡಿ ಹುಳು ಇರುವುದು ನವೆಂಬರ್ ತಿಂಗಳ ಬೇಳೆ ಎಂದು ಬರೆದುಕೊಡುವಂತೆ ಒತ್ತಾಯಿಸಿ ಶಿಕ್ಷಕನಿಗೆ ಬೆದರಿಸಿ ಸಹಿ ಮಾಡಿಸಿಕೊಂಡಿದ್ದಾರೆ. ನಂತರ ಇದು ಹಳೆಯ ದಾಸ್ತಾನು ಎಂದು ಹಿರಿಯ ಅಧಿಕಾರಿಗಳಿಗೆ ವರದಿ ನೀಡಿದ್ದಾರೆ.

    ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿದ್ಯಾಂತಹ ಸುಮಾರು 304 ಶಾಲೆಯ ವಿದ್ಯಾರ್ಥಿಗಳು ಈ ಪರಿಸ್ಥಿತಿಯನ್ನು ಎದುರಿಸುತ್ತಿದ್ದರು. ಈ ಶಾಲೆಗಳಿಗೆ ಉತ್ತಮವಾದ ಆಹಾರ ಪದಾರ್ಥಗಳ ಪೂರೈಕೆ ಆಗುತ್ತಿಲ್ಲ. ಕಳೆದು ಎರಡು ತಿಂಗಳಿಂದ ಶಾಲೆಗಳಿಗೆ ಪೂರೈಕೆಯಾಗಿರುವ ತೊಗರಿಬೇಳೆ ಹಾಗೂ ಅಕ್ಕಿಯಲ್ಲಿ ಓಟ್ಟೆಹುಳುಗಳು ತುಂಬಿತ್ತು. ಬಿಸಿಯೂಟದ ಸಿಬ್ಬಂದಿ ಇವುಗಳನ್ನು ಎಷ್ಟೇ ಶುಚಿ ಮಾಡಿದ್ರೂ ತೆಗೆಯಲು ಸಾಧ್ಯವಾಗುತ್ತಿರಲಿಲ್ಲ. ಯಾವುದೇ ಪೋಷಕಾಂಶ ಸಿಗದ ಈ ಆಹಾರವನ್ನು ಮಕ್ಕಳು ತಿನ್ನಲು ಸಾಧ್ಯವಾಗದೇ ಎಸೆಯುತ್ತಿದ್ದರು.

    ಈ ವಿಚಾರವನ್ನು ಅಕ್ಷರ ದಾಸೋಹದ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಆದರೆ ಅವರು, ಆಹಾರ ಇಲಾಖೆಯಿಂದ ಪೂರೈಕೆಯಾಗುತ್ತಿರುವ ಆಹಾರವೇ ಇದಾಗಿದ್ದು ನಾವೇನು ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹಾರಿಕೆಯ ಉತ್ತರ ನೀಡಿದ್ದರು. ಇತ್ತ ಸಿಬ್ಬಂದಿ ಬೇರೆ ದಾರಿಯಿಲ್ಲ ಎಂಬಂತೆ ಇದೇ ಆಹಾರವನ್ನು ಮಧ್ಯಾಹ್ನ ಅಡುಗೆ ಮಾಡಿ ಮಕ್ಕಳಿಗೆ ನೀಡುತ್ತಿದ್ದರು. ಹಸಿದು ಬಂದ ಬಡ ಮಕ್ಕಳು ಕೂಡ ತಟ್ಟೆಯಲ್ಲಿ ಹುಳ ಕಂಡರೂ ಕಣ್ಮುಚ್ಚಿಕೊಂಡು ತಿನ್ನುತ್ತಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅವಧಿ ಮುಗಿದ ಪದಾರ್ಥ ಮಾರಾಟ- ರಿಲಯನ್ಸ್ ಮಾರ್ಕೆಟ್ ಮೇಲೆ ಆರೋಗ್ಯ ಇಲಾಖೆ ಅಧಿಕಾರಿಗಳು ದಾಳಿ

    ಅವಧಿ ಮುಗಿದ ಪದಾರ್ಥ ಮಾರಾಟ- ರಿಲಯನ್ಸ್ ಮಾರ್ಕೆಟ್ ಮೇಲೆ ಆರೋಗ್ಯ ಇಲಾಖೆ ಅಧಿಕಾರಿಗಳು ದಾಳಿ

    ದಾವಣಗೆರೆ: ಅವಧಿ ಮುಗಿದ ಬೇಕರಿ ಐಟಂ ಹಾಗೂ ಆಹಾರ ಪದಾರ್ಥಗಳನ್ನು ಮಾರಾಟ ಮಾಡುತ್ತಿದ್ದ ಹಾಗೂ ಸಂಗ್ರಹಿಸಿಟ್ಟ ರಿಲಯನ್ಸ್ ಮಾರ್ಕೆಟ್ ಮೇಲೆ ಆರೋಗ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

    ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪಾಲಿಕೆಯ ಆರೋಗ್ಯ ಅಧಿಕಾರಿಗಳು, ದಾವಣಗೆರೆ ಜಿಲ್ಲೆಯಲ್ಲಿರುವ ರಿಲಯನ್ಸ್ ಮಾರ್ಕೆಟ್ ಮೇಲೆ ದಾಳಿ ನಡೆಸಿದ್ದು, ನಿಷೇಧಿತ ಪ್ಲಾಸ್ಟಿಕ್ ಕವರ್ ಹಾಗೂ ಎರಡು ಟನ್ ಗಳಷ್ಟು ಬೇಕರಿ ಐಟಂಗಳನ್ನು ವಶಕ್ಕೆ ಪಡೆದಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಅವಧಿ ಮುಗಿದ ಕೂಲ್ ಡ್ರಿಂಕ್ಸ್ ಮಾರಾಟ ಮಾಡುತ್ತಿರುವುದನ್ನು ಕಂಡು ಸಾರ್ವಜನಿಕರು ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೆ ಅಧಿಕಾರಿಗಳಿಗೆ ದೂರು ಸಹ ನೀಡಿದ್ದರು.

    ದೂರಿನ ಮೆರಿಗೆ ಸೋಮವಾರ ಆರೋಗ್ಯ ಅಧಿಕಾರಿಗಳು ದಾಳಿ ನಡೆಸಿದ್ದರು. ಇನ್ನು ರಿಲಯನ್ಸ್ ಮಾರ್ಕೆಟ್ ನ ಟ್ರೇಡ್ ಲೈಸನ್ಸ್ ಸಹ ಕಡಿಮೆ ತೆಗೆದುಕೊಂಡಿದ್ದು, ಇದರ ಬಗ್ಗೆ ತನಿಖೆ ನಡೆಸಲಾಗುವುದು ಎಂದರು. ಅಲ್ಲದೇ ಅವಧಿ ಮುಗಿದ ಆಹಾರ ಪದಾರ್ಥಗಳ ಮೇಲಿನ ಲೇಬಲ್ ಕಿತ್ತು ಹಾಕಿ ಗ್ರಾಹಕರಿಗೆ ಮಾರಾಟ ಮಾಡಲಾಗುತ್ತಿತ್ತು ಎಂಬ ಆರೋಪಗಳು ಕೇಳಿ ಬರುತ್ತಿವೆ.

    ಆಹಾರ ಪದಾರ್ಥಗಳನ್ನು ಅವೈಜ್ಞಾನಿಕ ಮಾರಾಟ ಮಾಡುತ್ತಿದ್ದು ರಿಲಯನ್ಸ್ ಮಾರ್ಕೆಟ್ ಮೇಲೆ ದೂರು ದಾಖಲು ಮಾಡಿಕೊಂಡು ಪ್ರಧಾನ ಕಚೇರಿಗೆ ನೋಟಿಸ್ ಕಳುಹಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ ಆಹಾರ ಅಧಿಕಾರಿಗಳು ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅಂಗನವಾಡಿ ಸಿಬ್ಬಂದಿ ನಿರ್ಲಕ್ಷ್ಯ- ಗರ್ಭಿಣಿಯರು, ಮಕ್ಕಳಿಗೆ ನೀಡೋ ಆಹಾರ ಪದಾರ್ಥಗಳಲ್ಲಿ ಹುಳು

    ಅಂಗನವಾಡಿ ಸಿಬ್ಬಂದಿ ನಿರ್ಲಕ್ಷ್ಯ- ಗರ್ಭಿಣಿಯರು, ಮಕ್ಕಳಿಗೆ ನೀಡೋ ಆಹಾರ ಪದಾರ್ಥಗಳಲ್ಲಿ ಹುಳು

    ಹಾವೇರಿ: ದೇವರು ವರ ಕೊಟ್ಟರೂ ಪೂಜಾರಿ ಕೊಡಲ್ಲ ಅನ್ನೋ ಗಾದೆ ಮಾತಿದೆ. ಅದಕ್ಕೆ ತಕ್ಕಂತೆ ಇದೆ ಈ ಸ್ಟೋರಿ. ಬಡ ಗರ್ಭಿಣಿಯರಿಗೆ, ಮಕ್ಕಳಿಗೆ ಎಂದು ಸರ್ಕಾರವೇನೋ ಪೌಷ್ಠಿಕ ಆಹಾರ ನೀಡುವ ಯೋಜನೆ ತಂದಿದೆ. ಆದರೆ ಆ ಆಹಾರವೆಲ್ಲಾ ಈಗ ಹುಳು ಹಿಡಿದಿದೆ.

    ಬೂಸ್ಟ್ ಹಿಡಿದಿರೋ ಶೇಂಗಾ, ಹುಳುಗಳೇ ತುಂಬಿರೋ ರವೆ, ಹಾಳಾಗಿರೋ ಬೆಲ್ಲ, ಹಾಲಿನ ಪುಡಿ. ಈ ದೃಶ್ಯ ಕಂಡು ಬಂದಿದ್ದು ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಕೂಡಲ ಸವಣೂರು ತಾಲೂಕಿನ ಮೆಳ್ಳಾಗಟ್ಟಿ ಪ್ಲಾಟ್, ಅಗಡಿ ಮರಳೀಹಳ್ಳಿ ಗ್ರಾಮಗಳಲ್ಲಿ.

    ಗರ್ಭಿಣಿಯರು ಮತ್ತು ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೂಲಕ ಈ ಸಾಮಗ್ರಿಗಳನ್ನು ನೀಡುತ್ತದೆ. ಆದರೆ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಿಬ್ಬಂದಿ ನಿರ್ಲಕ್ಷ್ಯದಿಂದ ಆಹಾರ ಪದಾರ್ಥಗಳು ಹುಳು ಹಿಡಿದು ಹೋಗುತ್ತಿದೆ. ಇತ್ತೀಚೆಗೆ ನಡೆದ ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಬಿಜೆಪಿ ಸದಸ್ಯ ಮಾಲತೇಶ ಸೊಪ್ಪಿನ ಅನ್ನೋರು ಆಹಾರ ಪದಾರ್ಥಗಳು ಕೊಳೆಯುತ್ತಿರೋದನ್ನು ಪ್ರದರ್ಶಿಸಿದರು.

    ಅಂಗನವಾಡಿಗಳಲ್ಲಿ ಆಹಾರ ಪದಾರ್ಥಗಳು ಹಾಳಾಗಿರೋದು ಮಾಧ್ಯಮಗಳ ಮೂಲಕ ಅಧಿಕಾರಿಗಳ ಗಮನಕ್ಕೆ ಬಂದಿದ್ದರೂ ಕಣ್ಮುಚ್ಚಿ ಕುಳಿತಿದ್ದಾರೆ. ಒಟ್ನಲ್ಲಿ ದೇವರು ಕೊಟ್ಟರೂ ಪೂಜಾರಿ ಕೊಡಲ್ಲ ಎನ್ನುವ ಹಾಗೆ, ಸರ್ಕಾರ ಕೊಟ್ಟರೂ ಅಧಿಕಾರಿಗಳು, ಸಿಬ್ಬಂದಿಯ ನಿರ್ಲಕ್ಷ್ಯದಿಂದ ಬಡ ಗರ್ಭಿಣಿಯರು, ಮಕ್ಕಳ ಹೊಟ್ಟೆ ಸೇರಬೇಕಾದ ಆಹಾರ ಪದಾರ್ಥ ಹುಳುಗಳ ಪಾಲಾಗಿರೋದು ದುರಂತವೇ ಸರಿ.