Tag: food poison

  • ವಿಷಾಹಾರ ಸೇವಿಸಿ ಶೇಷಾದ್ರಿಪುರಂನ 15 ಮಂದಿ ಅಸ್ವಸ್ಥ- ಆಸ್ಪತ್ರೆಗೆ ದಾಖಲು

    ವಿಷಾಹಾರ ಸೇವಿಸಿ ಶೇಷಾದ್ರಿಪುರಂನ 15 ಮಂದಿ ಅಸ್ವಸ್ಥ- ಆಸ್ಪತ್ರೆಗೆ ದಾಖಲು

    ಬೆಂಗಳೂರು: ವಿಷಾಹಾರ ಸೇವಿಸಿ 15 ಮಂದಿ ಅಸ್ವಸ್ಥರಾದ ಘಟನೆ ಬೆಂಗಳೂರಿನ ಶೇಷಾದ್ರಿಪುರಂನಲ್ಲಿ ನಡೆದಿದೆ.

    ಮಂಗಳವಾರ ಸಂಜೆ ಸುಮಾರು 5.30ರ ಸಮಯದಲ್ಲಿ ಮಹಿಳೆಯೊಬ್ಬರು ಶೇಷಾದ್ರಿಪುರಂನ ಸಂಜಯ್ ನಗರದಲ್ಲಿ ಕಲ್ಯಾಣ ಮಂಟಪದಲ್ಲಿ ಉಳಿದಿದ್ದ ಸ್ವೀಟ್ ಮಾರಾಟ ಮಾಡ್ತಿದ್ರು. ಇದನ್ನು ಸಂಜಯ್ ನಗರದ ನಿವಾಸಿಗಳಾದ 13 ಮಂದಿ ಚಿಕ್ಕ ಮಕ್ಕಳು ಮತ್ತು ಇಬ್ಬರು ಮಹಿಳೆಯರು ಕೊಂಡು ತಿಂದಿದ್ದಾರೆ. ತಿಂದ 1.30 ಗಂಟೆಯಲ್ಲಿ ವಾಂತಿಯಾಗಿ ಅಸ್ವಸ್ಥರಾಗಿದ್ದಾರೆ.

    ಸುಮಾರು 8.30ಕ್ಕೆ ಅಸ್ವಸ್ಥರನ್ನ ಕೆಸಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ತಪಾಸಣೆ ನಡೆಸಿದಾಗ ಫುಡ್ ಪಾಯ್ಸನ್ ಆಗಿರೋದಾಗಿ ವೈದ್ಯರು ತಿಳಿಸಿದ್ದಾರೆ. ಅಸ್ವಸ್ಥರಿಗೆ ಚಿಕಿತ್ಸೆ ನೀಡಿದ್ದು ಭಯ ಪಡುವಂತದ್ದು ಏನಿಲ್ಲ ಅಂತಾ ಆಸ್ಪತ್ರೆಯ ವೈದ್ಯರಾದ ಮೋಹನ್ ತಿಳಿಸಿದ್ದಾರೆ.

  • ಚಿತ್ರದುರ್ಗ: ಹೋಳಿಗೆ ಊಟ ಮಾಡಿ 138 ಜನ ಅಸ್ವಸ್ಥ

    ಚಿತ್ರದುರ್ಗ: ಹೋಳಿಗೆ ಊಟ ಮಾಡಿ 138 ಜನ ಅಸ್ವಸ್ಥ

    ಚಿತ್ರದುರ್ಗ: ಹೋಳಿಗೆ ಊಟ ಮಾಡಿದ 138 ಜನರು ಅಸ್ವಸ್ಥಗೊಂಡಿರುವ ಘಟನೆ ಚಿತ್ರದುರ್ಗ ತಾಲೂಕಿನ ಹಾಯ್ಕಲ್ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಬೋರಯ್ಯ ಎಂಬವರ ಮನೆಯಲ್ಲಿ ಯಲ್ಲಮ್ಮ ದೇವರ ಪೂಜೆಯ ನಂತರ ಹೋಳಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಊಟ ಸೇವಿಸಿದ ಕೆಲವೇ ಸಮಯದಲ್ಲಿ ನೂರಾರು ಜನರಲ್ಲಿ ಹೊಟ್ಟೆ ನೋವು ಕಾಣಿಸಿಕೊಂಡಿದೆ. 78 ಪುರಷರು, 40 ಜನ ಮಹಿಳೆಯರು ಮತ್ತು 20 ಜನ ಮಕ್ಕಳು ಹೋಳಿಗೆ ಊಟ ಸೇವಿಸಿದ ನಂತರ ಅಸ್ವಸ್ಥಗೊಂಡಿದ್ದಾರೆ.

    ವಿಷಯ ತಿಳಿದ ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಯ್ಕಲ್ ಗ್ರಾಮಕ್ಕೆ ತೆರಳಿದ್ದಾರೆ. ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಯ ತಂಡ ಗ್ರಾಮದಲ್ಲಿ ತಾತ್ಕಾಲಿಕ ಕ್ಯಾಂಪ್ ತೆರೆದು ಅಸ್ವಸ್ಥರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಫುಡ್ ಪಾಯ್ಸನ್ ನಿಂದ ಜನರು ಅಸ್ವಸ್ಥಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

    ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ 15 ಕ್ಕೂ ಜನರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಗ್ರಾಮದಲ್ಲಿ ಮುಂದಿನ ಮೂರು ದಿನಗಳ ಕಾಲ ಚಿಕಿತ್ಸೆ ನೀಡಲಾಗುತ್ತದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

     

  • ವಿಚಿತ್ರ ಖಾಯಿಲೆಗೆ ತುತ್ತಾಗಿರುವ ನೂರಾರು ಕೋತಿಗಳು

    ವಿಚಿತ್ರ ಖಾಯಿಲೆಗೆ ತುತ್ತಾಗಿರುವ ನೂರಾರು ಕೋತಿಗಳು

    – ಕೋತಿ ಆಟ ಬಿಟ್ಟು ಮಂಕು ಕವಿದಂತೆ ಮೂಕಾದ ಮಂಗಗಳು

    ಚಿಕ್ಕಬಳ್ಳಾಪುರ: ಸದಾ ಲವಲವಿಕೆಯಿಂದ ಕಪಿ ಚೇಷ್ಟೇ ಮಾಡ್ತಾ ಗ್ರಾಮಸ್ಥರ ಪ್ರೀತಿಗೆ ಪಾತ್ರವಾಗಿದ್ದ ನೂರಾರು ಕೋತಿಗಳು ಮಂಕು ಬಡಿದಂತೆ ವಿಚಿತ್ರ ಖಾಯಿಲೆಗೆ ಗುರಿಯಾಗಿ ನರಳಾಡುತ್ತಿರುವ ದೃಶ್ಯ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಬುಳ್ಳಹಳ್ಳಿ ಗ್ರಾಮದಲ್ಲಿ ಕಾಣುತ್ತದೆ.

    ಬುಳ್ಳಹಳ್ಳಿ ಗ್ರಾಮದಲ್ಲಿರುವ ಆಲದ ಮರದಲ್ಲಿ 200 ಕ್ಕೂ ಹೆಚ್ಚು ಕೋತಿಗಳು ಹಲವಾರು ವರ್ಷಗಳಿಂದ ನೆಲೆಯನ್ನ ಕಂಡು ಕೊಂಡು ವಾಸ ಮಾಡುತ್ತಿವೆ. ಹೀಗಾಗಿ ಗ್ರಾಮದ ಜನರೇ ಈ ಕೋತಿಗಳಿಗೆ ಬನ್, ಬಿಸ್ಕೆಟ್, ಬಾಳೆಹಣ್ಣು ಸೇರಿದಂತೆ ತಿಂಡಿ-ತಿನಿಸುಗಳನ್ನು ನೀಡಿ ಚೆನ್ನಾಗಿಯೇ ನೋಡಿಕೊಳ್ತಿದ್ರು. ಆದರೆ ಇತ್ತೀಚಿಗೆ ಕೆಲವು ದಿನಗಳಿಂದ ಕೋತಿಗಳು ವಿಚಿತ್ರ ಕಾಯಿಲೆಗೆ ತುತ್ತಾಗಿವೆ.

    ಕಳೆದ ಮೂರು ದಿನಗಳಿಂದ ಗ್ರಾಮದಲ್ಲಿರುವ ಕೋತಿಗಳು ಊಟ ತಿಂಡಿ ನೀರು ಬಿಟ್ಟು ವಿಚಿತ್ರವಾಗಿ ವರ್ತನೆ ಮಾಡುತ್ತಿವೆಯಂತೆ. ಮರದಲ್ಲಿ ಕುಳಿತ ಕೋತಿಗಳು ಮಂಕಾಗಿ ಎಲ್ಲಂದರಲ್ಲೆ ತೂಕಡಿಕೆ ಮಾಡುತ್ತಿವೆ. ಅಷ್ಟೆ ಅಲ್ಲದೆ ಮೂರು ದಿನಗಳಿಂದ ನಾಲ್ಕೈದು ಕೋತಿಗಳು ಸಾವನ್ನಪ್ಪಿರುವುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ. ಕೋತಿಗಳಿಗೆ ತಿಂಡಿಯನ್ನ ಕೊಟ್ಟರೂ ತಿನ್ನದೆ ಎಲ್ಲೆಂದರಲ್ಲಿ ಅಸ್ವಸ್ಥಗೊಂಡಂತೆ ಕಾಣುತ್ತಿವೆ. ಇದರಿಂದಾಗಿ ಕೋತಿಗಳಿಗೆ ಮಂಗನ ಕಾಯಿಲೆ ಅಥವಾ ಫುಡ್ ಪಾಯ್ಸನ್ ಆಗಿದೆಯಾ ಎಂದು ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.

    ಕಳೆದ ರಾತ್ರಿ ಕೋತಿಗಳಿಗೆ ಪಶುವೈದ್ಯರು ಚುಚ್ಚುಮದ್ದನ್ನು ನೀಡಿದ್ರು, ಆದ್ರೂ ಕೋತಿಗಳು ವಿಚಿತ್ರವಾಗಿ ವರ್ತನೆಯನ್ನ ಮಾಡುತ್ತಿವೆ. ಹೀಗಾಗಿ ಸಂಬಂಧ ಪಟ್ಟ ವೈದ್ಯರು ಆದಷ್ಟು ಬೇಗ ಕೋತಿಗಳ ಸಮಸ್ಯೆ ಬಗೆಹರಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

     

  • ತುಮಕೂರು ಶಾಲೆಯಲ್ಲಿ 3 ಮಕ್ಕಳ ಸಾವು ಪ್ರಕರಣ- ಮರಣೋತ್ತರ ಪರೀಕ್ಷೆಯಲ್ಲಿ ವಿಷದಂಶ ಪತ್ತೆ

    ತುಮಕೂರು ಶಾಲೆಯಲ್ಲಿ 3 ಮಕ್ಕಳ ಸಾವು ಪ್ರಕರಣ- ಮರಣೋತ್ತರ ಪರೀಕ್ಷೆಯಲ್ಲಿ ವಿಷದಂಶ ಪತ್ತೆ

    – ಪತ್ನಿ ಜೊತೆ ಮಾಜಿ ಶಾಸಕ ಕಿರಣ್ ಕುಮಾರ್ ನಾಪತ್ತೆ

    ತುಮಕೂರು: ಜಿಲ್ಲೆಯ ಬೋರ್ಡಿಂಗ್ ಶಾಲೆಯಲ್ಲಿ ವಿಷಾಹಾರ ಸೇವಿಸಿ ಸಾವನ್ನಪ್ಪಿದ್ದ ಮಕ್ಕಳ ಮರಣೋತ್ತರ ಪರೀಕ್ಷೆ ನಡೆದಿದ್ದು, ಮಕ್ಕಳ ದೇಹದಲ್ಲಿ ದ್ರವರೂಪದ ವಿಷಕಾರಿ ಅಂಶವಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

    ರಕ್ತದ ಮಾದರಿಯನ್ನು ಎಫ್‍ಎಸ್‍ಎಲ್‍ಗೆ ಕಳುಹಿಸಲಾಗಿದೆ. 15 ದಿನದೊಳಗೆ ಮರಣೋತ್ತರ ಪರೀಕ್ಷೆಯ ವರದಿ ಸಿಕ್ಕ ನಂತರ ಸತ್ಯಾಂಶ ಗೊತ್ತಾಗಲಿದೆ ಎಂದು ಮರಣೋತ್ತರ ಪರೀಕ್ಷೆ ನಡೆಸಿದ ಡಾ.ದಿನೇಶ್ ಹೇಳಿದ್ದಾರೆ.

                                         

    ಪ್ರಕರಣಕ್ಕೆ ಸಂಬಂಧಿಸಿಂತೆ ಪ್ರಮುಖ ಆರೋಪಿಗಳು ನಾಪತ್ತೆಯಾಗಿದ್ದು, ಅವರಿಗಾಗಿ ತೀವ್ರ ಶೋಧ ಕಾರ್ಯ ನಡೆಯುತ್ತಿದೆ. ತಿಪಟೂರು ಡಿವೈಎಸ್‍ಪಿ ವೇಣುಗೋಪಾಲ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದ್ದು, ಶಾಲಾ ಮಾಲೀಕರಾದ ಮಾಜಿ ಶಾಸಕ ಕಿರಣ್ ಕುಮಾರ್ ಹಾಗೂ ಪತ್ನಿ ಕವಿತಾಗಾಗಿ ತೀವ್ರ ಶೋಧ ನಡೆಯುತ್ತಿದೆ. ಶಾಲೆಯ ಮಾಲೀಕರು ಬೆಂಗಳೂರಿನಲ್ಲಿ ಇರುವ ಬಗ್ಗೆ ಶಂಕೆ ವ್ಯಕ್ತಪಡಿಸಿರುವ ಎಸ್‍ಪಿ ಇಶಾ ಪಂತ್ ಅಲ್ಲಿಗೂ ತಂಡ ಕಳಿಹಿಸಿರುವುದಾಗಿ ಹೇಳಿದ್ರು. ಶಾಲೆಯಲ್ಲಿದ್ದ ಸಿಸಿಟಿವಿ ಡಿವಿಆರ್ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದೇವೆ. ಎಫ್‍ಎಸ್‍ಎಲ್ ವರದಿ ಬಂದ ಬಳಿಕ ಸಂಪೂರ್ಣ ಮಾಹಿತಿ ತಿಳಿಯಲಿದೆ ಅಂದ್ರು.

    ವಿದ್ಯಾವಾರಿಧಿ ಶಾಲೆಯ ಮಾಜಿ ಪ್ರಾಂಶುಪಾಲ ರವಿ ಕೂಡ ಘಟನೆ ಬಳಿಕ ತಲೆ ಮರೆಸಿಕೊಂಡಿದ್ದಾರೆ. ವಿಷ ಬೆರಕೆಯಲ್ಲಿ ರವಿ ಕೈವಾಡವಿಡುವ ಶಂಕೆಯಿದ್ದು ರವಿ ಪತ್ತೆಗಾಗಿ ಪೊಲೀಸರಿಂದ ಶೋಧ ನಡೆಯುತ್ತಿದೆ. ಅಗತ್ಯವಿದ್ದರೆ ರವಿ ವಿಚಾರಣೆ ಕೂಡ ನಡೆಯಲಿದೆ ಅಂತಾ ಎಸ್‍ಪಿ ಹೇಳಿದ್ದಾರೆ. ಕಿರಣ್ ಅವರೊಂದಿಗಿನ ವೈಮನಸ್ಸಿನಿಂದ ರವಿ ಶಾಲೆಯಿಂದ ಹೋರಹೋಗಿದ್ದರು ಎಂದು ಹೇಳಲಾಗಿದೆ.

    ವಿಷ ಆಹಾರ ಸೇವನೆಯಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೆಕ್ಯೂರಿಟಿಗಾರ್ಡ್ ರಮೇಶ್ ಘಟನೆ ಬಗ್ಗೆ ಮಾಹಿತಿ ನೀಡಲು ಹಾತೊರೆಯುತ್ತಿದ್ದಾರೆ. ಆದ್ರೆ ವೆಂಟಿಲಟರ್‍ನಲ್ಲಿ ಉಸಿರಾಡುತ್ತಿರುವುದರಿಂದ ಅವರು ಮಾತನಾಡಲಾಗದೆ ವೇದನೆ ಅನುಭವಿಸುತ್ತಿದ್ದಾರೆ.

    ನಡೆದಿದ್ದೇನು?: ತುಮಕೂರು ಜಿಲ್ಲೆಯ ಚಿಕ್ಕನಾಯಕನ ಹಳ್ಳಿಯ ವಿದ್ಯಾವಾರಿಧಿ ಇಂಟರ್‍ನ್ಯಾಷನಲ್ ಬೋರ್ಡಿಂಗ್ ಶಾಲೆಯಲ್ಲಿ ವಿಷಯುಕ್ತ ಆಹಾರ ಸೇವಿಸಿ 15 ವರ್ಷದ ಶ್ರೇಯಸ್, ಆಕಾಂಕ್ಷ್ ಪಲ್ಲಕ್ಕಿ ಹಾಗೂ ಶಾಂತಮೂರ್ತಿ ಎಂಬ ಮೂವರು ಅಮಯಾಕ ಮಕ್ಕಳು ಸಾವನಪ್ಪಿದ್ದರು. ಈ ಶಾಲೆ ಬಿಜೆಪಿಯ ಮಾಜಿ ಶಾಸಕ ಕಿರಣ್ ಕುಮಾರ್ ಅವರಿಗೆ ಸೇರಿದ್ದಾಗಿದೆ. ಘಟನೆ ಸಂಬಂಧ ಆರು ಮಂದಿ ವಿರುದ್ದ ಎಫ್.ಐ.ಆರ್ ದಾಖಲಾಗಿತ್ತು. ಇದರಲ್ಲಿ ನಾಲ್ವರು ಆರೋಪಿಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಇದೀಗ ಕೋರ್ಟ್ ಇವರಿಗೆ ಜಾಮೀನು ನೀಡಿ ಬಿಡುಗಡೆಗೊಳಿಸಿದೆ.

  • ತುಮಕೂರು: ವಸತಿ ಶಾಲೆಯಲ್ಲಿ ಫುಡ್ ಪಾಯ್ಸನ್- 3 ವಿದ್ಯಾರ್ಥಿಗಳ ದುರ್ಮರಣ

    ತುಮಕೂರು: ವಸತಿ ಶಾಲೆಯಲ್ಲಿ ಫುಡ್ ಪಾಯ್ಸನ್- 3 ವಿದ್ಯಾರ್ಥಿಗಳ ದುರ್ಮರಣ

    ತುಮಕೂರು: ರೆಸಿಡೆನ್ಸಿಯಲ್ ಶಾಲೆಯಲ್ಲಿ ಫುಡ್ ಪಾಯ್ಸನ್ ಆಗಿ ಮೂರು ಅಮಾಯಕ ಮಕ್ಕಳು ಪ್ರಾಣವನ್ನೇ ಕಳೆದುಕೊಂಡಿರೋ ಘಟನೆ ತುಮಕೂರಿನಲ್ಲಿ ನಡೆದಿದೆ.

    ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ವಿದ್ಯಾವಾರಿಧಿ ಇಂಟರ್‍ನ್ಯಾಷನಲ್ ಬೋರ್ಡಿಂಗ್ ಶಾಲೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. 15 ವರ್ಷ ವಯಸ್ಸಿನವರಾದ ಶ್ರೇಯಸ್, ಆಕಾಂಕ್ಷ್ ಪಲ್ಲಕ್ಕಿ ಹಾಗೂ ಶಾಂತಮೂರ್ತಿ ಮೃತ ವಿದ್ಯಾರ್ಥಿಗಳು. ಫುಡ್ ಪಾಯ್ಸನ್‍ನಿಂದ ಮೂರು ಮಕ್ಕಳು ಸಾವನ್ನಪ್ಪಿದ್ರೆ ಇಬ್ಬರ ಸ್ಥಿತಿ ಗಂಭಿರವಾಗಿದೆ. ಈ ಬೋರ್ಡಿಂಗ್ ಶಾಲೆ ಬಿಜೆಪಿ ಮಾಜಿ ಶಾಸಕ ಕಿರಣ್‍ಕುಮಾರ್‍ಗೆ ಸೇರಿದ್ದು ಅಂತ ಗೊತ್ತಾಗಿದೆ.

    ಘಟನೆ ಬಗ್ಗೆ ಹುಳಿಯೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಘಟನೆ ಬಗ್ಗೆ ಬಿಜೆಪಿ ಮಾಜಿ ಶಾಸಕ ಕಿರಣ್ ಕುಮಾರ್ ಹೇಳಿಕೆ ನೀಡಿದ್ದು, ಊಟದಲ್ಲಿ ನೀಲಿ ಬಣ್ಣ ಕಾಣಿಸಿಕೊಂಡಿತ್ತು ಅಂತ ಅನುಮಾನ ವ್ಯಕ್ತಪಡಿಸಿದ್ದಾರೆ. ಮೂವರು ಮಕ್ಕಳು ಚಪಾತಿ ಪಲ್ಯಾ ಬದಲಿಗೆ ಅನ್ನ ಸಾಂಬರ್ ತಿಂದಿದ್ದಾರೆ. ಆಗ ಸಾಂಬರ್‍ನಲ್ಲಿ ವ್ಯತ್ಯಾಸ ಇದ್ದಿದ್ದು ಕಂಡು ಬಂತು. ನಂತರ ಅಲ್ಲಿದ್ದ ಉಳಿದ ಮಕ್ಕಳು ಯಾರು ಊಟ ಮಾಡಿರಲಿಲ್ಲ. ಅಸ್ವಸ್ಥರಾದ ಮಕ್ಕಳನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ, ವೈದ್ಯರಿಂದ ಪರಿಶೀಲನೆ ನಡೆಸಲಾಗುತ್ತಿದೆ. ಮಕ್ಕಳಿಗೆ ಗ್ಲೂಕೋಸ್ ನೀಡಿ, ನಂತರ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ ಅಂತ ತಿಳಿಸಿದ್ರು.

    ಹಾಸ್ಟೆಲ್‍ನಲ್ಲಿ 40 ಮಂದಿ ವಿದ್ಯಾರ್ಥಿಗಳಿದ್ದಾರೆ. 3ನೇ ತರಗತಿಯಿಂದ 10ನೇ ತರಗತಿವರೆಗೆನ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಶ್ರೇಯಸ್ ಆಕಾಂಕ್ಷ್ ಪಲ್ಲಕ್ಕಿ ಶಿರಾಂಪುರ ವಿದ್ಯಾರ್ಥಿಗಳು. ಶಾಂತಮೂರ್ತಿ ತಿಮ್ಮನಹಳ್ಳಿ ವಿದ್ಯಾರ್ಥಿ. ಹಾಸ್ಟೆಲ್‍ನಲ್ಲಿ ಸಿಸಿ ಕ್ಯಾಮರಾಗಳಿವೆ, ಅದನ್ನ ಪರಿಶೀಲಿಸುತ್ತೇನೆ ಅಂತ ಕಿರಣ್ ಕುಮಾರ್ ಹೇಳಿದ್ದಾರೆ.