Tag: Food Kit

  • ಲಿಫ್ಟ್ ಕೊಡ್ತೀನಿ ಬನ್ನಿ ಅಂದ- ಕಾಡಿಗೆ ಎಳೆದೊಯ್ದು ಅತ್ಯಾಚಾರಕ್ಕೆ ಯತ್ನ

    ಲಿಫ್ಟ್ ಕೊಡ್ತೀನಿ ಬನ್ನಿ ಅಂದ- ಕಾಡಿಗೆ ಎಳೆದೊಯ್ದು ಅತ್ಯಾಚಾರಕ್ಕೆ ಯತ್ನ

    – ದಿನಸಿ ಕಿಟ್ ಪಡೆಯಲು ಬಂದಿದ್ದ ಮಹಿಳೆ

    ಉಡುಪಿ: ದಿನಸಿ ಕಿಟ್ ಪಡೆಯಲು ಬಂದಿದ್ದ ಮಹಿಳೆ ಮೇಲೆ ಕಾಮುಕನೊಬ್ಬ ಅತ್ಯಾಚಾರ ಯತ್ನಿಸಿರುವ ಘಟನೆ ಜಿಲ್ಲೆಯ ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಇಂದು ಮಹಿಳೆ ದಿನಸಿ ಕಿಟ್ ಪಡೆಯಲು ಸಂತಕಟ್ಟೆಯಿಂದ ಬ್ರಹ್ಮಾವರದ ಕುಂಜಾಲಿಗೆ ಬಂದಿದ್ದರು. ದಿನಸಿ ಕಿಟ್ ಪಡೆದುಕೊಂಡು ಬ್ರಹ್ಮಾವರದ ಕುಂಜಾಲು ಜಂಕ್ಷನ್ ಬಳಿಯ ನಿರ್ಜನ ರಸ್ತೆಯಲ್ಲಿ ಸಾಗುತ್ತಿದ್ದಾಗ ಬೈಕ್ ನಲ್ಲಿ ಅಪರಿಚಿತ ವ್ಯಕ್ತಿ ಬಂದಿದ್ದಾನೆ. ಈ ವೇಳೆ ಲಿಫ್ಟ್ ಕೊಡುವದಾಗಿ ಹೇಳಿ ಮಹಿಳೆಯನ್ನ ಬೈಕಿನಲ್ಲಿ ಹತ್ತಿಸಿಕೊಂಡಿದ್ದಾನೆ.

    ಮಹಿಳೆ ಬೈಕ್ ಹತ್ತುತ್ತಿದ್ದಂತೆ ಕಾಡಿಗೆ ಎಳೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಮಹಿಳೆ ಜೋರಾಗಿ ಕಿರುಚಿದ್ದಂತೆ ಭಯಗೊಂಡ ವ್ಯಕ್ತಿ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಸಂಬಂಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ಪತ್ತೆಗಾಗಿ ವಿಶೇಷ ಬಲೆ ಬೀಸಿದ್ದಾರೆ.

  • ಮಗನ ಮದ್ವೆಗೆ ಖರ್ಚು ಮಾಡಬೇಕಿದ್ದ 5.5 ಕೋಟಿ ವೆಚ್ಚದಲ್ಲಿ 2 ಕ್ಷೇತ್ರಕ್ಕೆ ಆಹಾರ ಕಿಟ್ ವಿತರಣೆ: ಎಚ್‍ಡಿಕೆ

    ಮಗನ ಮದ್ವೆಗೆ ಖರ್ಚು ಮಾಡಬೇಕಿದ್ದ 5.5 ಕೋಟಿ ವೆಚ್ಚದಲ್ಲಿ 2 ಕ್ಷೇತ್ರಕ್ಕೆ ಆಹಾರ ಕಿಟ್ ವಿತರಣೆ: ಎಚ್‍ಡಿಕೆ

    – ನನ್ನ ಆಸೆಯಂತೆ ಮಗನ ವಿವಾಹ ನಡೆದಿಲ್ಲ
    – ನಿಖಿಲ್, ರೇವತಿಯಿಂದ ಕಿಟ್ ವಿತರಣೆಗೆ ಚಾಲನೆ

    ರಾಮನಗರ: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕುಟುಂಬಸ್ಥರು ರಾಮನಗರ ಮತ್ತು ಚನ್ನಪಟ್ಟಣ ಜನರಿಗೆ ದಿನಸಿ ಕಿಟ್ ವಿತರಣೆ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

    ರಾಮನಗರದ ಮಂಜುನಾಥ ಕನ್ವೆನ್ಷನ್ ಹಾಲ್‍ನಲ್ಲಿ ದಿನಸಿ ಕಿಟ್ ವಿತರಣೆ ಮಾಡಲು ಚಾಲನೆ ನೀಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಹೆಚ್.ಡಿ.ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ, ಪುತ್ರ ನಿಖಿಲ್ ಕುಮಾರಸ್ವಾಮಿ ಮತ್ತು ಸೊಸೆ ರೇವತಿ ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಮೊದಲ ಬಾರಿಗೆ ಕುಟುಂಬದ ಜೊತೆ ನಿಖಿಲ್ ಪತ್ನಿ ರೇವತಿ ಕೂಡ ಆಗಮಿಸಿದ್ದರು. ಸುಮಾರು 60 ಸಾವಿರ ಬಡ ಕುಟುಂಬಳಿಗೆ ಅಕ್ಕಿ, ಬೇಳೆ ಸಕ್ಕರೆ ಇರುವ ಕಿಟ್‍ಗಳನ್ನ ವಿತರಣೆ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ.

    ಈ ವೇಳೆ ಮಾಧ್ಯಮಗಳ ಜೊತೆ ಕುಮಾರಸ್ವಾಮಿ, ಸುಮಾರು 1 ಲಕ್ಷದ 4 ಸಾವಿರ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ ನಡೆಯಲಿದೆ. ಚನ್ನಪಟ್ಟಣ ಹಾಗೂ ರಾಮನಗರ ಕ್ಷೇತ್ರಗಳ ಎಲ್ಲಾ ಮನೆಗಳಿಗೂ ಈ ಆಹಾರ ಕಿಟ್ ತಲುಪಲಿದೆ. ನನ್ನ ಮಗನ ಮದುವೆಯನ್ನು ರಾಮನಗರದಲ್ಲಿ ಮಾಡಬೇಕೆಂಬ ನನ್ನ ಆಸೆ ನಡೆಯಲಿಲ್ಲ. ಈ ಹಿನ್ನೆಲೆಯಲ್ಲಿ ಮದುವೆಗೆ ನಾನು ಏನು ಹಣ ವೆಚ್ಚ ಮಾಡಬೇಕು ಎಂದುಕೊಂಡಿದ್ದೆನೋ, ಆ ವೆಚ್ಚವನ್ನ ಎರಡು ಕ್ಷೇತ್ರಗಳಿಗೆ ವಿನಿಯೋಗ ಮಾಡುತ್ತಿದ್ದೇನೆ. ಐದೂವರೆ ಕೋಟಿ ವೆಚ್ಚದ ಸಾಮಗ್ರಿಗಳನ್ನು ವಿತರಣೆ ಮಾಡಲಾಗುತ್ತಿದೆ. ಹೀಗಾಗಿ ಮಗ ಮತ್ತು ಸೊಸೆಯನ್ನು ಕರೆದುಕೊಂಡು ಆಹಾರ ಕಿಟ್ ವಿತರಣೆ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ಕೊಡಿಸಿದ್ದೇನೆ. ಕ್ಷೇತ್ರದ ಶಾಸಕರು ಅವರವರ ಮನೆಗೆ ತಲುಪಿಸುವ ಕೆಲಸವನ್ನು ಈಗಾಗಲೇ ಶುರು ಮಾಡಿದ್ದಾರೆ ಎಂದು ತಿಳಿಸಿದರು.

    ಕೊರೊನಾದಿಂದ ಬಡವರ ಆರ್ಥಿಕ ಸ್ಥಿತಿ ಕೆಳಗೆ ಇಳಿದಿದೆ. ಬಡವರಿಗೆ ಇಂತಹ ಸಮಯದಲ್ಲಿ ಹಣ ಖರ್ಚು ಮಾಡುವುದು ಸರ್ಕಾರದ ಕರ್ತವ್ಯ. ಚಿತ್ರದುರ್ಗದ ಓರ್ವ ಮಹಿಳೆ ಈರುಳ್ಳಿ ಚೀಲದ ಮುಂದೆ ನಿಂತು ತಮ್ಮ ಕಷ್ಟ ಹೇಳಿಕೊಂಡಿದ್ದಾರೆ. ಯಡಿಯೂರಪ್ಪ ಅವರ ಮನವಿಗೆ ಸ್ಪಂದಿಸಿವುದಾಗಿ ಹೇಳಿದ್ದಾರೆ. ರಾಜ್ಯದ ಹಲವು ರೈತರ ಸಮಸ್ಯೆಗಳು ಕೂಡ ಇದೆ ರೀತಿ ಇದೆ. ಮುಖ್ಯಮಂತ್ರಿಗಳು ರಾಜ್ಯದ ಎಲ್ಲಾ ರೈತರ ಸಮಸ್ಯೆಗಳಿಗೆ ಸ್ಪಂದನೆ ಮಾಡಬೇಕು. ರೈತರ ನೆರವಿಗೆ ಅಂತ ಸರ್ಕಾರದ ಅಧಿಕಾರಿಗಳು 450 ಕೋಟಿ ಪರಿಹಾರ ನೀಡಲು ಸರ್ಕಾರಕ್ಕೆ ವರದಿ ನೀಡಿದ್ದಾರೆ. ಈ ಪರಿಹಾರವನ್ನಾದರೂ ಸರ್ಕಾರ ಬಿಡುಗಡೆ ಮಾಡಲಿ ಎಂದು ಕುಮಾರಸ್ವಾಮಿ ಸಿಎಂಗೆ ಮನವಿ ಮಾಡಿದರು.

    ರಾಜ್ಯದಲ್ಲಿ ಇನ್ನೂ 15 ದಿನಗಳ ಕಾಲ ಲಾಕ್‍ಡೌನ್ ಮುಂದುವರಿಸುವ ಬಗ್ಗೆ ಮಾಹಿತಿ ಇದೆ. ರಾಜ್ಯದ ಜನರಿಗೆ ಮನೆ ಬಾಡಿಗೆ, ವಿದ್ಯುತ್ ಬಿಲ್ ಹಾಗೂ ಶಾಲೆಯ ಶುಲ್ಕ ಕಟ್ಟಲು ವಿನಾಯಿತಿ ನೀಡಬೇಕು. ಸರ್ಕಾರ ತಗೆದುಕೊಳ್ಳುವ ನಿರ್ಣಯಗಳು ಬಡವರ ಪರವಾಗಿ ಇರಬೇಕು. ಕೇಂದ್ರ ಸರ್ಕಾರ 50 ಸಾವಿರ ಕೋಟಿ ಮ್ಯೂಚುಯಲ್ ಫಂಡ್ ತೆಗೆದುಕೊಂಡಿದೆ. ಇದು ಕೇವಲ ಉದ್ಯಮಿಗಳಿಗೆ ಮಾತ್ರ ಅನುಕೂಲವಾಗುತ್ತದೆ. ಅಂಬಾನಿ ಹಾಗೂ ಟಾಟಾ ಅಂತವರಿಗೆ ಮಾತ್ರ ಈ ಮ್ಯೂಚುಯಲ್ ಫಂಡ್ ಉಪಯೋಗವಾಗುತ್ತೆ. ಸಣ್ಣ ಕಾರ್ಖಾನೆ ನಡೆಸುವವರಿಗೆ ಇದು ನೆರವಾಗುವುದಿಲ್ಲ. ಸರ್ಕಾರ ಬಡವರಿಗೆ ಅನುಕೂಲವಾಗುವಂತೆ ನಿರ್ಧಾರ ತೆಗೆದುಕೊಳ್ಳಬೇಕು ಎಂದರು.

  • ತಂದೆಯ ಪುಣ್ಯ ತಿಥಿಯ ಬದಲಿಗೆ ಬಡವರಿಗೆ ಆಹಾರ ಕಿಟ್ ವಿತರಿಸಿದ ಮಗ

    ತಂದೆಯ ಪುಣ್ಯ ತಿಥಿಯ ಬದಲಿಗೆ ಬಡವರಿಗೆ ಆಹಾರ ಕಿಟ್ ವಿತರಿಸಿದ ಮಗ

    ಕೋಲಾರ: ತಂದೆಯ ಪುಣ್ಯ ತಿಥಿಗಾಗಿ ಕೂಡಿಟ್ಟ ಹಣದಲ್ಲಿ ಪೋಸ್ಟ್ ಮಾಸ್ಟರ್ ಕೊರೊನಾ ಲಾಕ್‍ಡೌನ್‍ನಿಂದ ಕಂಗಾಲಾಗಿರುವ ಬಡವರು, ನಿರ್ಗತಿಕರಿಗೆ ದಿನಸಿ ಆಹಾರ ಪದಾರ್ಥಗಳ ಕಿಟ್ ವಿತರಣೆ ಮಾಡಿ ಮಾದರಿಯಾಗಿದ್ದಾರೆ.

    ಕೋಲಾರ ನಗರದ ಗಲ್‍ಪೇಟೆ ನಿವಾಸಿ ಪೋಸ್ಟ್ ಮಾಸ್ಟರ್ ನಾರಾಯಣಸ್ವಾಮಿ ತನ್ನ ತಂದೆ ಬಂಗವಾದಿ ಮುನಿಸ್ವಾಮಿ ಅವರ 13ನೇ ವರ್ಷದ ಪುಣ್ಯ ತಿಥಿ ದಿನ ಆಹಾರ ಪದಾರ್ಥಗಳನ್ನ ವಿತರಣೆ ಮಾಡಿದರು. ಮೂಲತಃ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಬಂಗವಾದಿ ಗ್ರಾಮದವರಾದ ಮುನಿಸ್ವಾಮಿ ಅವರು ಕಾಲಾಧೀನರಾಗಿ 13 ವರ್ಷಗಳು ಮುಗಿದಿದೆ.

    ಹಾಗಾಗಿ ಭಾನುವಾರ ಮುನಿಸ್ವಾಮಿ ಅವರ ಪುಣ್ಯ ತಿಥಿ ಇತ್ತು. ಆದರೆ ಮಗ ನಾರಾಯಣಸ್ವಾಮಿ ಪುಣ್ಯ ತಿಥಿ ಮಾಡಿ ದುಂದು ವೆಚ್ಚ ಮಾಡುವ ಬದಲಿಗೆ ಆಹಾರ ಪದಾರ್ಥಗಳ ಕಿಟ್ ವಿತರಣೆ ಮಾಡುವ ಮೂಲಕ ವಿಭಿನ್ನವಾಗಿ ತಂದೆಯ ಸ್ಮರಣೆ ಮಾಡಿದರು.

    ಕೋಲಾರ ನಗರದ ಗಲ್‍ಪೇಟೆಯ ತಮ್ಮ ನಿವಾಸದಲ್ಲಿ 80ಕ್ಕೂ ಹೆಚ್ಚು ಬಡವರು ಹಾಗೂ ನಿರ್ಗತಿಕರಿಗೆ ಆಹಾರ ಪದಾರ್ಥಗಳ ಕಿಟ್‍ಗಳನ್ನ ವಿತರಣೆ ಮಾಡಿದ್ದಾರೆ. ಈ ಮೂಲಕ ಕೊರೊನಾ ಸಂಕಷ್ಟಕ್ಕೀಡಾದವರಿಗೆ ತಮ್ಮ ಕೈಲಾದ ಸಹಾಯ ಮಾಡಿದ್ದಾರೆ. ಈಗಾಗಲೇ ಒಂದೂವರೆ ತಿಂಗಳಿನಿಂದ ಕೊರೊನಾ ಲಾಕ್‍ಡೌನ್‍ನಿಂದಾಗಿ ಜನ ಕಂಗಾಲಾಗಿರುವುದನ್ನ ಅರಿತು ಈ ನಿರ್ಧಾರ ಮಾಡಿರುವುದಾಗಿ ಪೋಸ್ಟ್ ಮಾಸ್ಟರ್ ನಾರಾಯಣಸ್ವಾಮಿ ಹೇಳಿದ್ದಾರೆ.

  • ದಾನಿಗಳು ಕೊಟ್ಟ ಪಡಿತರವನ್ನು ತಮ್ಮ ಹೆಸರಲ್ಲಿ ಹಂಚಿದ್ರಾ ಶಾಸಕ? ಬಿಜೆಪಿ ಆರೋಪ

    ದಾನಿಗಳು ಕೊಟ್ಟ ಪಡಿತರವನ್ನು ತಮ್ಮ ಹೆಸರಲ್ಲಿ ಹಂಚಿದ್ರಾ ಶಾಸಕ? ಬಿಜೆಪಿ ಆರೋಪ

    ಮೈಸೂರು: ದಾನಿಗಳು ನೀಡಿದ ಆಹಾರ ಕಿಟ್ ಮೇಲೆ ಜೆಡಿಎಸ್ ಶಾಸಕರ ಹೆಸರು ಬಳಕೆಯಾಗಿದೆ ಎಂದು ಬಿಜೆಪಿ ಆರೋಪಿಸಿದೆ.

    ಬಡವರಿಗಾಗಿ ದಾನಿಗಳು ನೀಡಿದ ಆಹಾರ ಸಾಮಗ್ರಿಗೆ ತಮ್ಮ ಕೊಡುಗೆ ಎಂದು ಪಿರಿಯಾಪಟ್ಟಣ ಜೆಡಿಎಸ್ ಶಾಸಕ ಕೆ.ಮಹದೇವ್ ನೀಡಿದ್ದಾರೆ ಅಂತ ತಾಲೂಕು ಬಿಜೆಪಿ ಅಧ್ಯಕ್ಷ ಪ್ರಕಾಶ್ ಬಾಬುರಾವ್ ಆರೋಪಿಸಿದ್ದಾರೆ.

    ಲಾಕ್‍ಡೌನ್ ಅವಧಿಯಲ್ಲಿ ಬಡ ಕುಟುಂಬಗಳಿಗೆ ನೆರವು ನೀಡುವಂತೆ ತಾಲೂಕು ಆಡಳಿತ ಮನವಿ ಮಾಡಿತ್ತು. ಈ ಮನವಿಗೆ ಸ್ಪಂದಿಸಿ ಹಲವರು ತಾಲೂಕು ಆಡಳಿತಕ್ಕೆ ಅಗತ್ಯ ವಸ್ತುಗಳ ಪೂರೈಕೆ ಮಾಡಿದ್ದರು. ತಾಲೂಕು ಆಡಳಿತಕ್ಕೆ ದಾನಿಗಳು ನೀಡಿದ ವಸ್ತುಗಳನ್ನು ಪಡೆದ ಶಾಸಕ ಮಹದೇವ್, ದಾನಿಗಳು ಕೊಟ್ಟ ಆಹಾರ ಪದಾರ್ಥಗಳನ್ನು ತಮ್ಮ ಬೆಂಬಲಿಗರ ಮೂಲಕ ತಮಗೆ ಬೇಕಾದವರಿಗೆ ಹಂಚಿಕೆ ಮಾಡುತ್ತಿದ್ದಾರೆಂದು ಪ್ರಕಾಶ್ ಬಾಬುರಾವ್ ಆರೋಪ ಮಾಡುತ್ತಿದ್ದಾರೆ.

  • ಉಚಿತ ದಿನಸಿಗಾಗಿ ಕ್ಯೂ- ಸಾಮಾಜಿಕ ಅಂತರಕ್ಕೆ ಹಾಕಿದ್ದ ಬಾಕ್ಸ್ ನಲ್ಲಿ ಇಬ್ಬರು

    ಉಚಿತ ದಿನಸಿಗಾಗಿ ಕ್ಯೂ- ಸಾಮಾಜಿಕ ಅಂತರಕ್ಕೆ ಹಾಕಿದ್ದ ಬಾಕ್ಸ್ ನಲ್ಲಿ ಇಬ್ಬರು

    -ನಾ ಮುಂದು ತಾ ಮುಂದು ಅಂತ ಮುಗಿಬಿದ್ದ ಜನ

    ಬೆಂಗಳೂರು: ಉಚಿತ ಆಹಾರ ಕಿಟ್ ಪಡೆಯಲು ಜನರು ಮುಗಿಬಿದ್ದಿರುವ ಘಟನೆ ಬೆಂಗಳೂರಿನ ಓಕುಳಿಪುರಂನಲ್ಲಿ ನಡೆದಿದೆ.

    ಓಕುಳಿಪುರಂನಲ್ಲಿ ಜೆಡಿಎಸ್ ಮುಖಂಡ ಹಿರಿಗೌಡರು ಸ್ಥಳೀಯ ನಿವಾಸಿಗಳಿಗೆ ಆಹಾರದ ಕಿಟ್ ವಿತರಣೆ ಮಾಡುತ್ತಿದ್ದರು. ಅಕ್ಕಿ, ಬೇಳೆ ಸಿಗುವ ವಿಚಾರ ತಿಳಿದು ಜನರು ಸಾಮಾಜಿಕ ಅಂತರ ಸಹ ಕಾಯ್ದುಕೊಳ್ಳುವುದನ್ನು ಮರೆತು ಮುಗಿಬಿದ್ದಿದ್ದರು. ದಿನಸಿ ವಿತರಣೆ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಬಾಕ್ಸ್ ಹಾಕಲಾಗಿತ್ತು. ಆದ್ರೆ ಈ ಒಂದು ಬಾಕ್ಸ್ ನಲ್ಲಿ ಇಬ್ಬಿಬ್ರು ನಿಂತಿರುವ ದೃಶ್ಯಗಳು ಕಂಡು ಬಂದವು.

    ಸ್ಥಳದಲ್ಲಿ ನೂರಾರು ಜನರು ಸೇರಿರುವ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಸ್ಥಳೀಯರನ್ನು ಕಳುಹಿಸುವಲ್ಲಿ ಸುಸ್ತಾದರು.

  • ಬಡವರಿಗೆ 3 ಸಾವಿರ ದಿನಸಿ, ತರಕಾರಿ ಕಿಟ್ ವಿತರಿಸಿದ ಗ್ರಾ.ಪಂ.ಸದಸ್ಯ

    ಬಡವರಿಗೆ 3 ಸಾವಿರ ದಿನಸಿ, ತರಕಾರಿ ಕಿಟ್ ವಿತರಿಸಿದ ಗ್ರಾ.ಪಂ.ಸದಸ್ಯ

    ಬೆಂಗಳೂರು: ಕೊರೊನಾ ಲಾಕ್‍ಡೌನ್‍ನಿಂದಾಗಿ ಸಂಕಷ್ಟದಲ್ಲಿವರಿಗೆ ಗ್ರಾಮ ಪಂಚಾಯತಿ ಸದಸ್ಯರೊಬ್ಬರು ಸುಮಾರು 3000 ದಿನಸಿ ಹಾಗೂ ತರಕಾರಿ ಇರುವ ಕಿಟ್‍ಗಳನ್ನ ಪ್ರತಿ ಮನೆ ಮನೆಗೂ ನೀಡಿದ್ದಾರೆ.

    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ವಾಜರಹಳ್ಳಿ ಗ್ರಾಮ ಪಂಚಾಯತಿ ಸದಸ್ಯ ವಿ.ಕೆ.ಎಸ್.ಕೆಂಪರಾಜು ಬಡವರಿಗೆ ಕಿಟ್‍ಗಳನ್ನ ವಿತರಿಸಿದ್ದಾರೆ. ರಾಜ್ಯದಲ್ಲಿ ಕೊರೊನಾ ಮಹಾಮಾರಿ ದಿನದಿಂದ ದಿನಕ್ಕೆ ತಾಂಡವವಾಡುತ್ತಿದೆ. ಈ ಅಪಾಯಕಾರಿ ವೈರಸ್ ತಡೆಗಟ್ಟಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಾಕಷ್ಟು ಮುಂಜಾಗ್ರತೆಯನ್ನ ವಹಿಸಿ ಲಾಕ್‍ಡೌನ್ ಜಾರಿಗೆ ತಂದಿದೆ. ಹೀಗಾಗಿ ಕಳೆದ ಒಂದು ತಿಂಗಳಿನಿಂದ ಬಡ ಜನರು ಹಾಗೂ ಕೂಲಿ ಕಾರ್ಮಿಕರು ಸಾಕಷ್ಟು ಸಮಸ್ಯೆಯನ್ನ ಅನುಭವಿಸುತಿದ್ದಾರೆ.

    ಕೆಂಪರಾಜು ನೇತೃತ್ವದಲ್ಲಿ ಸುಮಾರು 3000 ದಿನಸಿ ಹಾಗೂ ತರಕಾರಿ ಇರುವ ಕಿಟ್‍ಗಳನ್ನ ಪ್ರತಿ ಮನೆಮನೆಗೂ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ತಮ್ಮ ಕುಟುಂಬ ಹಾಗೂ ಸ್ನೇಹಿತರ ನೆರವಿನೊಂದಿಗೆ ತಮ್ಮ ಮನೆಯಲ್ಲಿ ದಿನಸಿ ಪದಾರ್ಥಗಳನ್ನ ಪ್ಯಾಕ್ ಮಾಡಿದ್ದಾರೆ. ನಂತರ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಬಡವರ ಮನೆಗಳಿಗೆ ನೇರವಾಗಿ ದಿನಸಿ ಕಿಟ್‍ಗಳನ್ನು ತಲುಪಿಸುತಿದ್ದಾರೆ.

    ನೀವು ಮನೆಯಿಂದ ಹೊರಗೆಬರದೆ ಈ ಕೊರೊನಾ ವೈರಸ್ ತಡೆಯಲು ಸಹಕರಿಸಬೇಕು. ಅಲ್ಲದೇ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ಜಾಗೃತಿ ಮೂಡಿಸಿದರು. ಇವರ ಕಾರ್ಯಕ್ಕೆ ಜನರು ಸಹ ಅಭಿನಂದನೆ ಸಲ್ಲಿಸಿದ್ದಾರೆ.

  • ಕೂಲಿಗೆ ಹೋಗಿಲ್ಲ, ಆಹಾರ ಕಿಟ್ ಸಿಕ್ಕಿಲ್ಲ- ಹಕ್ಕಿಪಿಕ್ಕಿ ಜನಾಂಗದವರ ಅಳಲು

    ಕೂಲಿಗೆ ಹೋಗಿಲ್ಲ, ಆಹಾರ ಕಿಟ್ ಸಿಕ್ಕಿಲ್ಲ- ಹಕ್ಕಿಪಿಕ್ಕಿ ಜನಾಂಗದವರ ಅಳಲು

    ಚಿಕ್ಕಮಗಳೂರು: ದೇಶದಲ್ಲಿ ಲಾಕ್‍ಡೌನ್ ಆದಾಗಿನಿಂದ ನಗರದ ಇಂದಿರಾಗಾಂಧಿ ಬಡಾವಣೆಯ ಹಕ್ಕಿಪಿಕ್ಕಿ ಕಾಲೋನಿಯ ಮಹಿಳೆಯರು ಕೂಲಿ ಕೆಲಸಕ್ಕೆ ಹೋಗುತ್ತಿಲ್ಲ. ನಮಗೆ ಆಹಾರ ಸಾಮಾಗ್ರಿಗಳ ಕಿಟ್ ಕೂಡ ಸಿಕ್ಕಿಲ್ಲ, ಆಹಾರ ಧಾನ್ಯಗಳೇ ಇಲ್ಲದಂತಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ಆಕ್ರೋಶ ವ್ಯಕ್ತಪಡಿಸಿ, ಜಿಲ್ಲಾಧಿಕಾರಿ ಬಗಾದಿ ಗೌತಮ್ ಅವರಿಗೆ ಮನವಿ ಸಲ್ಲಿಸಿದ್ದಾರೆ.

    ತಕ್ಷಣವೇ ಸ್ಪಂದಿಸಿದ ಜಿಲ್ಲಾಧಿಕಾರಿ ಈ ಕುರಿತು ಅಧಿಕಾರಿಗಳಿಗೆ ಸೂಚಿಸಿದ್ದು, ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಉಪನಿರ್ದೇಶಕರು ಹಕ್ಕಿಪಿಕ್ಕಿ ಜನಾಂಗಕ್ಕೆ ಸಮರ್ಪಕವಾದ ಆಹಾರ ಸಾಮಾಗ್ರಿಗಳನ್ನು ವಿತರಿಸಿದ್ದಾರೆ. ತಹಶೀಲ್ದಾರ್, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಹಾಗೂ ನಗರ ಸಭೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಸ್ಥಳದಲ್ಲಿ 28 ಹಕ್ಕಿಪಿಕ್ಕಿ ಅಲೆಮಾರಿ ಜನಾಂಗದವರು ವಾಸವಿರುವುದು ಕಂಡುಬಂದಿದ್ದು, 25 ಕುಟುಂಬಗಳಿಗೆ ಪಡಿತರ ಚೀಡಿ ಇದ್ದು ಪ್ರತಿ ವ್ಯಕ್ತಿಗೆ 10 ಕೆ.ಜಿ ಅಕ್ಕಿಯಂತೆ ಕಲ್ದೊಡ್ಡಿ ಸೊಸೈಟಿಯಲ್ಲಿ ಪಡಿತರ ವಿತರಿಸಲಾಗಿದೆ.

    ಕಾರ್ಡ್ ಹೊಂದಿರುವವರ ಪೈಕಿ 4 ಕುಟುಂಬಗಳಲ್ಲಿ ಕೆಲ ಸದಸ್ಯರ ಹೆಸರು ಸೇರ್ಪಡೆಯಾಗಿಲ್ಲ. 2 ಕುಟುಂಬ ಕಾರ್ಡ್ ಪಡೆಯದ ಹಿನ್ನೆಲೆ ರದ್ದಾಗಿದ್ದು, 1 ಕುಟುಂಬಕ್ಕೆ ಪಡಿತರ ಚೀಟಿ ಸಿಕ್ಕಿಲ್ಲ. ಕಡುಬಡತನ ಕುಟುಂಬಗಳಿಗೆ ಸ್ವಯಂ ಸೇವಾ ಸಂಘ-ಸಂಸ್ಥೆಗಳ ನೆರವಿನೊಂದಿಗೆ ತಾಲೂಕು ಆಡಳಿತದ ವತಿಯಿಂದ ಆಹಾರ ಸಾಮಾಗ್ರಿಗಳ ಕಿಟ್ ವಿತರಿಸಲಾಗಿದೆ. ಸದ್ಯಕ್ಕೆ ಇಲ್ಲಿನ ಕುಟುಂಬಗಳಿಗೆ ಆಹಾರದ ಕೊರತೆ ಇಲ್ಲ. ಮುಂದಿನ ದಿನಗಳಲ್ಲೂ ಯಾವುದೇ ರೀತಿಯ ಆಹಾರ ಪದಾರ್ಥಗಳ ಕೊರತೆಯಾಗದಂತೆ ಕ್ರಮ ವಹಿಸಲಾಗುವುದು ಎಂದು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.

  • ಹಳೆ ವಿದ್ಯಾರ್ಥಿಗಳಿಂದ 1 ಸಾವಿರ ಕುಟುಂಬಕ್ಕೆ ಆಹಾರ ಕಿಟ್ ವಿತರಣೆ

    ಹಳೆ ವಿದ್ಯಾರ್ಥಿಗಳಿಂದ 1 ಸಾವಿರ ಕುಟುಂಬಕ್ಕೆ ಆಹಾರ ಕಿಟ್ ವಿತರಣೆ

    – ವಿದ್ಯಾರ್ಥಿಗಳ ಕಾರ್ಯಕ್ಕೆ ಗ್ರಾಮಸ್ಥರಿಂದ ಶ್ಲಾಘನೆ

    ನೆಲಮಂಗಲ: ಮಹಾಮಾರಿ ಕೊರೊನಾ ರೋಗದ ಹಿನ್ನೆಲೆ, ಹಲವೆಡೆ ಹಲವಾರು ರೀತಿ ಸಂಘ ಸಂಸ್ಥೆಗಳು ನೆರವನ್ನು ನೀಡುತ್ತಿದೆ. ಇದೇ ಹಾದಿಯಲ್ಲಿ ಗ್ರಾಮದ ಶಾಲೆಯ ಹಳೆ ವಿದ್ಯಾರ್ಥಿಗಳು ಆಹಾರ ಕಿಟ್ ವಿತರಣೆ ಮಾಡಿ ಸಾರ್ಥಕತೆ ಮೆರೆದಿದ್ದಾರೆ.

    ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಯಂಟಗಾನಹಳ್ಳಿ ಶಾಲೆಯ ಹಳೆ ವಿದ್ಯಾರ್ಥಿಗಳಿಂದ ವಿಶೇಷ ಪ್ರಯತ್ನ ಮಾಡಿ ಯಶಸ್ವಿಯಾಗಿ ಒಂದು ಸಾವಿರ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ ಮಾಡಿದ್ದಾರೆ.

    ಹಳೆ ವಿದ್ಯಾರ್ಥಿಗಳ ಜೊತೆ ಕೈಜೋಡಿಸಿದ ಎಸ್.ಎಮ್ ಟ್ರೇಡರ್ಸ್ ಹಾಗೂ ಕುಮುದ್ವತಿ ವಿಷನ್ ಪ್ರೈ.ಲಿ ಸಹಕಾರ ಹೆಚ್ಚಿನದಾಗಿ ನೀಡಿದೆ. ಸಕ್ಕರೆ, ಸಾಂಬರ್ ಪದಾರ್ಥ, ದಿನಬಳಕೆ ವಸ್ತುಗಳ ವಿತರಣೆ ಮಾಡಿದ್ದು, ನೆಲಮಂಗಲ ತಾಲೂಕಿನ ಯಂಟಗಾನಹಳ್ಳಿ, ಭಟ್ಟರಹಳ್ಳಿ, ವನ್ನಸಂದ್ರ, ಗಾಂಧಿ ಗ್ರಾಮ, ದೊಡ್ಡಕರೇನಹಳ್ಳಿ ಸೇರಿದಂತೆ ಹಲವು ಗ್ರಾಮಗಳಿಗೆ ವಿತರಣೆ ಮಾಡಿದ ಹಳೆ ವಿದ್ಯಾರ್ಥಿಗಳ ಪ್ರಯತ್ನಕ್ಕೆ ಗ್ರಾಮಸ್ಥರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

    ಈ ವೇಳೆ ಮಾತನಾಡಿದ ಹಳೆಯ ವಿಧ್ಯಾರ್ಥಿ ಮುನಿರಾಜು, ನಾವು ನಮ್ಮ ಗ್ರಾಮ ನಮ್ಮ ಜನರ ಕ್ಷೇಮ ಎಂಬ ನಿಟ್ಟಿನಲ್ಲಿ ಪ್ರತಿ ಮನೆ ಮನೆ ಬಾಗಿಲಿಗೆ ಯಾವುದೇ ಸಮಸ್ಯೆಯಾಗದ ರೀತಿಯಲ್ಲಿ ಕೊರೊನಾ ವೈರಸ್ ತಡೆಗಟ್ಟಲು ಹಾಗೂ ಹಳ್ಳಿಯ ಜನರಲ್ಲಿ ಅರಿವು ಮೂಡಿಸುವ ಹೊಸ ಪ್ರಯತ್ನ ಯಶಸ್ವಿಯಾಗಿದೆ. ಜೀವನದಲ್ಲಿ ಮನುಷ್ಯ-ಮನುಷ್ಯನ ಸ್ನೇಹ ಮುಖ್ಯವಾದ ಜೀವನ ಅವಶ್ಯಕತೆ ಎಂದು ಈ ಕಾರ್ಯಕ್ಕೆ ನಮ್ಮ ತಂಡ ಸಿದ್ಧವಾಗಿದೆ ಎಂದರು. ಈ ವೇಳೆ ಚಿಕ್ಕಹನುಮೇಗೌಡ, ಹನುಮಂತರಾಜು, ಮಹೇಶ್, ಹನುಮಯ್ಯ, ನಾಗರಾಜು, ರುದ್ರೇಶ್, ಮತ್ತಿತರ ಹಳೆಯ ವಿದ್ಯಾರ್ಥಿಗಳು ಹಾಜರಿದ್ದರು.

  • ಲಕ್ಷಾಂತರ ಮೌಲ್ಯದ ತರಕಾರಿಯನ್ನ ಉಚಿತವಾಗಿ ಹಂಚಿದ ರೈತ

    ಲಕ್ಷಾಂತರ ಮೌಲ್ಯದ ತರಕಾರಿಯನ್ನ ಉಚಿತವಾಗಿ ಹಂಚಿದ ರೈತ

    – ಶಾಸಕರಿಂದ 4,300 ಕುಟುಂಬಕ್ಕೆ ಆಹಾರ ಕಿಟ್ ವಿತರಣೆ

    ಚಾಮರಾಜನಗರ: ಕೊರೊನಾ ಲಾಕ್‍ಡೌನ್ ಪರಿಣಾಮದಿಂದಾಗಿ ಗಡಿ ಜಿಲ್ಲೆಯ ಜನರು ಪರದಾಡುತ್ತಿದ್ದಾರೆ. ರೈತರು ಕೂಡ ತಾವು ಬೆಳೆದ ಬೆಳೆಗಳನ್ನು ಮಾರಾಟ ಮಾಡಲಾಗದೇ ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ. ಆದರೆ ಇಲ್ಲೊಬ್ಬ ರೈತ ಲಕ್ಷಾಂತರ ರೂಪಾಯಿ ಮೌಲ್ಯದ ತರಕಾರಿಯನ್ನು ಕಾಡಂಚಿನ ಜನರಿಗೆ ಹಂಚುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

    ಜಿಲ್ಲೆಯ ಹನೂರು ತಾಲೂಕಿನ ಪಿ.ಜಿ.ಪಾಳ್ಯ ಬಸವನಗುಡಿ ಗ್ರಾಮದ ಬೆಳ್ಳುಳ್ಳಿ ಮಾದೇಶ ತಮ್ಮ ಐದು ಎಕರೆ ಜಮೀನಿನಲ್ಲಿ, ಎಲೆಕೋಸು, ಮೆಣಸಿನಕಾಯಿ, ಬದನೆಕಾಯಿ, ಕರಿಬೇವಿನಸೊಪ್ಪು ಬೆಳೆದಿದ್ದರು. ಆದರೆ ಈ ತರಕಾರಿಗಳನ್ನು ತೆಗೆದುಕೊಂಡು ಹೋಗಿ ಮಾರಾಟ ಮಾಡಲು ಸಾಧ್ಯವಾಗಲಿಲ್ಲ. ಹೀಗಾಗಿ ತರಕಾರಿ ಹೊಲದಲ್ಲೇ ಹಾಳಾಗುವ ಬದಲು ಸಂಕಷ್ಟದಲ್ಲಿರುವ ಕುಟುಂಬಗಳಿಗಾದರೂ ಅನುಕೂಲವಾಗಿಲಿ ಎಂದು ಉಚಿತವಾಗಿ ವಿತರಣೆ ಮಾಡಿದ್ದಾರೆ.

    ಮಾದೇಶ್ ತಾವು ಬೆಳೆದ ತರಕಾರಿಯ ಜೊತೆ ಬೇರೆ ರೈತರಿಂದ ಈರುಳ್ಳಿ, ಟೊಮೆಟೊ, ಬೆಳ್ಳುಳ್ಳಿಯನ್ನು ಖರೀದಿಸಿದ್ದು, ಅವುಗಳನ್ನು ಪ್ಯಾಕ್ ಮಾಡಿದ್ದಾರೆ. ನಂತರ ಪಾಳ್ಯ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಹಾವಿನಮೂಲೆ, ಯರಗಬಾಳು, ನಲ್ಲಿಕತ್ರಿ, ಉದ್ದಟ್ಟಿ, ಜೀರಿಗೆಗದ್ದೆ, ಮಾವತ್ತೂರು ಮೊದಲಾದ ಗ್ರಾಮಗಳಿಗೆ ಹೋಗಿ, ಮನೆಮನೆಗೆ ಉಚಿತವಾಗಿ ವಿತರಿಸಿದ್ದಾರೆ.

    ಜೊತೆಗೆ ಲಾಕ್‍ಡೌನ್ ಸಂದರ್ಭದಲ್ಲಿ ಹಗಲಿರುಳು ಕರ್ತವ್ಯ ನಿರ್ವಹಿಸುತ್ತಿರುವ ಹನೂರು ಠಾಣೆಯ ಪೊಲೀಸ್ ಕುಟುಂಬಗಳಿಗೂ ತರಕಾರಿ ವಿತರಿಸಿದ್ದು, ಜನರ ರಕ್ಷಣೆಗೆ ಶ್ರಮಿಸುತ್ತಿರುವ ಪೊಲೀಸರಿಗೆ ತಮ್ಮ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.

    ಆಹಾರ ಕಿಟ್ ವಿತರಣೆ:
    ಶಾಸಕ ನರೇಂದ್ರ ಗಿರಿ ಜನರಿಗೆ ಆಹಾರ ಕಿಟ್ ವಿತರಿಸುವ ಮೂಲಕ ಜನರ ಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಿದ್ದಾರೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ರಾಮಾಪುರ ವ್ಯಾಪ್ತಿಯಲ್ಲಿ ಆಹಾರ ಕಿಟ್ ವಿತರಿಸಿದ್ದಾರೆ.

    ಮೀಣ್ಯಂ, ಜಲ್ಲಿಪಾಳ್ಯ ಸೇರಿದಂತೆ 40ಕ್ಕೂ ಹೆಚ್ಚು ಗ್ರಾಮದ ಗಿರಿಜನ ಕುಟುಂಬಕ್ಕೆ ಅಕ್ಕಿ, ಬೆಳೆ, ಎಣ್ಣೆ, ಕಾಳುಗಳನ್ನು ಒಳಗೊಂಡ ಆಹಾರ ಕಿಟ್ ವಿತರಿಸಿದ್ದಾರೆ. ಸುಮಾರು 4,300ಕ್ಕೂ ಹೆಚ್ಚು ಗಿರಿಜನ ಕುಟುಂಬಕ್ಕೆ ಆಹಾರ ಕಿಟ್ ವಿತರಿಸಿದ್ದು, ಶಾಸಕರ ಕಾರ್ಯಕ್ಕೆ ಗಿರಿ ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ.

  • ಜಿಲ್ಲಾಸ್ಪತ್ರೆಯ ಗುತ್ತಿಗೆ ಸಿಬ್ಬಂದಿಗೆ 105 ಆಹಾರ ಕಿಟ್ ವಿತರಣೆ

    ಜಿಲ್ಲಾಸ್ಪತ್ರೆಯ ಗುತ್ತಿಗೆ ಸಿಬ್ಬಂದಿಗೆ 105 ಆಹಾರ ಕಿಟ್ ವಿತರಣೆ

    – ಪಬ್ಲಿಕ್ ಹೀರೋ ವಿಶು ಶೆಟ್ಟಿ ತಂಡದ ಸಹಾಯ

    ಉಡುಪಿ: ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಚ್ಛತಾ ಸಿಬ್ಬಂದಿ, ಡಿ ಗ್ರೂಪ್ ಸಿಬ್ಬಂದಿ ಹಾಗೂ ಇತರ ವಿಭಾಗಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ 105 ಆಹಾರ ವಸ್ತುಗಳ ಕಿಟ್ ವಿತರಿಸಲಾಯಿತು.

    ಸರಕಾರಿ ಆಸ್ಪತ್ರೆಯ ಕೆಲಸವಾದರೂ ಇವರು ಗುತ್ತಿಗೆ ಆಧಾರದಲ್ಲಿ ನೇಮಕವಾಗಿರುವುದರಿಂದ ಇವರ ವೇತನ ಬಹಳ ಕಡಿಮೆ. ಕೆಲವು ಸಿಬ್ಬಂದಿಯ ಜೀವನ ನಿರ್ವಹಣೆ ಕೊರೊನಾ ಸಮಸ್ಯೆಯಿಂದ ಇನ್ನಷ್ಟು ಬಿಗಡಾಯಿಸಿದೆ. ಈ ಬಗ್ಗೆ ಸಮಾಜ ಸೇವಕ, ಪಬ್ಲಿಕ್ ಹೀರೋ ವಿಶು ಶೆಟ್ಟಿಯವರಿಗೆ ಮಾಹಿತಿ ಸಿಕ್ಕಿದೆ.

    ವಿಶು ಶೆಟ್ಟಿಯವರಿಗೆ ತಿಳಿದ ಕೂಡಲೇ ತಮ್ಮ ಮಿತ್ರರಾದ ಡೊನಾಲ್ಡ್ ಸಾಲ್ದಾನರ ಗಮನಕ್ಕೆ ತಂದಿದ್ದಾರೆ. ತುರ್ತಾಗಿ ಸ್ಪಂದಿಸಿದ ಡೊನಾಲ್ಡ್ ಸಾಲ್ದಾನರವರು ನಾಗರಿಕ ಆರೋಗ್ಯ ವೇದಿಕೆ ಮತ್ತು ಎಸ್‍ವಿಪಿ ಫೌಂಡೇಶನ್ ಮುಖಾಂತರ 55 ಆಹಾರದ ಕಿಟ್ ನೀಡಿದ್ದಾರೆ. ಉಳಿದ 50 ಆಹಾರದ ಕಿಟ್ ವಿಶು ಶೆಟ್ಟಿಯವರು ನೀಡಿ ಸಹಕರಿಸಿದರು.

    ಕೊರೊನಾ ಸಂಕಷ್ಟದ ಪರಿಸ್ಥಿತಿಯಲ್ಲಿ ಸ್ವಚ್ಛತಾ ಸಿಬ್ಬಂದಿ ಸೇವೆಯಲ್ಲಿ ನಿರತರಾಗಿದ್ದಾರೆ. ಅವರ ಸೇವೆ ಅಮೂಲ್ಯದ್ದಾಗಿದೆ. ಅವರು ಅಸಹಾಯಕ ಪರಿಸ್ಥಿತಿಯಲ್ಲಿ ಇರುವುದಕ್ಕೆ ವಿಶು ಶೆಟ್ಟಿ ಬೇಸರ ವ್ಯಕ್ತಪಡಿಸಿದ್ದಾರೆ. ಕೊರೊನಾ ತುರ್ತು ಪರಿಸ್ಥಿತಿಯಲ್ಲಿ ಶ್ರಮಿಸುವ ವ್ಯಕ್ತಿಗೆ ಅಸಹಾಯಕತೆ ಬರಬಾರದು. ಸರ್ಕಾರ ಅವರ ಆರ್ಥಿಕ ಮತ್ತು ಮನೆಯ ಸ್ಥಿತಿಯನ್ನು ನಿಭಾಯಿಸಲು ಸಹಾಯ ಮಾಡಬೇಕು ಎಂದು ವಿಶು ಶೆಟ್ಟಿ ಪಬ್ಲಿಕ್ ಟಿವಿ ಮೂಲಕ ಒತ್ತಾಯಿಸಿದ್ದಾರೆ.