Tag: Food Kit

  • ಲಾಕ್‍ಡೌನ್‍ನಿಂದ ಆರತಕ್ಷತೆ ಕ್ಯಾನ್ಸಲ್- 225 ಆಹಾರ ಕಿಟ್‍ಗಳನ್ನು ವಿತರಿಸಿದ ಜೋಡಿ

    ಲಾಕ್‍ಡೌನ್‍ನಿಂದ ಆರತಕ್ಷತೆ ಕ್ಯಾನ್ಸಲ್- 225 ಆಹಾರ ಕಿಟ್‍ಗಳನ್ನು ವಿತರಿಸಿದ ಜೋಡಿ

    – 90 ಸಾವಿರ ರೂ. ವೆಚ್ಚದಲ್ಲಿ ಬಡವರಿಗೆ ಫುಡ್ ಕಿಟ್

    ಲಕ್ನೋ: ಕೊರೊನಾ ವೈರಸ್ ಮಹಾಮಾರಿ ಭಾರತಕ್ಕೆ ಒಕ್ಕರಿಸುತ್ತಿದ್ದಂತೆಯೇ ದೇಶದಲ್ಲಿ ಲಾಕ್ ಡೌನ್ ಹೇರಲಾಗಿದೆ. ಪರಿಣಾಮ ಜನಜೀವನ ಅಸ್ತವ್ಯಸ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಬಡವರು, ನಿರ್ಗತಿಕರಿಗೆ ದಾನಿಗಳು ಸಹಾಯ ಮಾಡಿ ಮಾನೀವಯತೆ ಮೆರೆದಿದ್ದಾರೆ. ಅನೇಕ ಸಮಾರಂಭಗಳು ಕೂಡ ಲಾಕ್ ಡೌನ್ ಪರಿಣಾಮ ರದ್ದಾವು. ಹಾಗೆಯೇ ಉತ್ತರಪ್ರದೇಶದ ಬರೇಲಿಯಲ್ಲಿ ಆರತಕ್ಷತೆ ಸಮಾರಂಭವೊಂದು ಕ್ಯಾನ್ಸಲ್ ಆದ ಪರಿಣಾಮ ಜೋಡಿ ಆಹಾರ ಕಿಟ್ ಗಳನ್ನು ನೀಡುವ ಮೂಲಕ ಬಡವರಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡಿದ್ದಾರೆ.

    ಹೌದು. ಜೋಡಿ ಮಾರ್ಚ್ 30ರಂದು ಮದುವೆಯಾಗಬೇಕಿದ್ದು, ಏಪ್ರಿಲ್ 1ರಂದು ಆರತಕ್ಷತೆ ಕಾರ್ಯಕ್ರಮ ನಡೆಯಬೇಕಿತ್ತು. ಈ ಶುಭಗಳಿಗೆಗೆ ಸುಮಾರು 800 ಮಂದಿ ಸೇರುವವರಿದ್ದರು. ಆದರೆ ಲಾಕ್ ಡೌನ್ ಪರಿಣಾಮ ಆರತಕ್ಷತೆ ಕ್ಯಾನ್ಸಲ್ ಆಯಿತು.

    ಆರತಕ್ಷತೆ ಕ್ಯಾನ್ಸಲ್ ಆದ ಪರಿಣಾಮ ಅಮ್ರೀನ್ ಹಾಗೂ ಮುದಾಸಿರ್ ಜೋಡಿ ಶನಿವಾರ ವಧುವಿನ ಮನೆಯಲ್ಲಿ ಸರಳವಾಗಿ ಆರತಕ್ಷತೆ ಕಾರ್ಯಕ್ರಮ ನೆರವೇರಿಸಿಕೊಂಡರು. ಹಾಗೆಯೇ ತಮ್ಮ ಆರತಕ್ಷತೆ ಕಾರ್ಯಕ್ರಮಕ್ಕೆ ಖರ್ಚು ಮಾಡಬೇಕಿದ್ದ ಹಣದಲ್ಲಿ ಬೆವರಿಗೆ ಆಹಾರ ಕಿಟ್ ಗಳನ್ನು ನೀಡಲು ತೀರ್ಮಾನ ಮಾಡಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿರುವ ಮುದಾಸಿರ್, ನಾವು ಕಳೆದ ಎರಡು ವರ್ಷಗಳಿಂದ ಮದುವೆಯಾಗಲು ಯೋಜನೆ ಹಾಕುತ್ತಿದ್ದೆವು. ಹೇಗೋ ಈ ಬಾರಿ ಮದುವೆಯಾಗುವ ದಿನ ಕೂಡಿ ಬಂತು. ಹೀಗಾಗಿ ಸುಮಾರು 800 ಮಂದಿಯನ್ನು ಆರತಕ್ಷತೆ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದೆವು. ಆದರೆ ಕೊರೊನಾ ವೈರಸ್ ಭೀತಿಯಿಂದ ಹೇರಲಾದ ಲಾಕ್ ಡೌನ್ ನಿಂದಾಗಿ ನಮ್ಮ ಪಾಲ್ ಗಳೆಲ್ಲ ಬದಲಾವಣೆಯಾಗಲು ಕಾರಣವಾಯಿತು.

    ಇತ್ತ ಮುದಾಸಿರ್ ತಾಯಿಯ ಆರೋಗ್ಯ ಕೂಡ ಕ್ಷೀಣಿಸುತ್ತಿದ್ದು, ಹೀಗಾಗಿ ಮದುವೆಯನ್ನು ಸರಳವಾಗಿ ಮಾಡಿಕೊಳ್ಳಲು ತೀರ್ಮಾನಿಸಲಾಯಿತು. ಹಾಜಿಯಾಪುರ್ ಹಾಗೂ ಬಕರ್ ಗಂಜ್ ಪ್ರದೇಶದ ಬಡವರಿಗೆ ಧಾನ್ಯಗಳು, ಎಣ್ಣೆ, ಅಕ್ಕಿ ಹಾಗೂ ಚಹಾದ ಎಲೆಗಳನ್ನು ಆಹಾರ ಕಿಟ್ ನಲ್ಲಿ ನೀಡಲಾಯಿತು. ಒಂದು ಆಹಾರ ಕಿಟ್ ಗೆ ಮುದಾಸಿರ್ ದಂಪತಿ ಸುಮಾರು 400 ರೂ. ಖರ್ಚು ಮಾಡಿದ್ದು, ಒಟ್ಟು 90 ಸಾವಿರ ರೂ. ಬಡವರಿಗಾಗಿ ಖರ್ಚು ಮಾಡಿದ್ದಾರೆ.

  • ಗಂಗಮ್ಮನಿಗೆ ಕಲಾವಿದರ ಕಲ್ಯಾಣ ವೇದಿಕೆ ನೆರವು- ಗಾಯನ ಕಲಾವಿದರಿಗೆ ಆಹಾರ ಕಿಟ್ ವಿತರಣೆ

    ಗಂಗಮ್ಮನಿಗೆ ಕಲಾವಿದರ ಕಲ್ಯಾಣ ವೇದಿಕೆ ನೆರವು- ಗಾಯನ ಕಲಾವಿದರಿಗೆ ಆಹಾರ ಕಿಟ್ ವಿತರಣೆ

    – ವಾದ್ಯಗೋಷ್ಠಿ ನಡೆಸಲು ಅನುಮತಿ ನೀಡುವಂತೆ ಮನವಿ

    ಕೊಪ್ಪಳ: ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ಸಾವಿರಾರು ಕೂಲಿ ಕಾರ್ಮಿಕರು ಬಡವರು, ಕಲಾವಿದರು ಸೇರಿದಂತೆ ಆರ್ಥಿಕವಾಗಿ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ಗಾಯನ ವೃತ್ತಿ ಅವಲಂಬಿತರು ಪರದಾಡುತ್ತಿದ್ದಾರೆ. ಇದೀಗ ಅಂತಹರನ್ನು ಗುರುತಿಸಿ ಕಲ್ಯಾಣ ವೇದಿಕೆಯ ಕೊಪ್ಪಳ ಜಿಲ್ಲಾ ಘಟಕದಿಂದ ಆಹಾರ ಕಿಟ್ ವಿತರಣೆ ಮಾಡಲಾಗುತ್ತಿದೆ.

    ಲಾಕ್‍ಡೌನ್ ಬಳಿಕ ಸಾರ್ವಜನಿಕ ಸಭೆ, ಸಮಾರಂಭ, ಮದುವೆ, ಕಲ್ಯಾಣದಂತಹ ಕಾರ್ಯಕ್ರಮಗಳಲ್ಲಿ ಗಾಯನ ಕಛೇರಿಗೆ ಅವಕಾಶಗಳಿಲ್ಲದಂತಾಗಿದೆ. ಇದರಿಂದ ಗಾಯನ ವೃತ್ತಿ ಅವಲಂಬಿತರು ಪರದಾಡುತ್ತಿದ್ದರು. ಇದನ್ನು ಮನಗಂಡ ಜಿಲ್ಲಾ ಕಲಾವಿದರ ಕಲ್ಯಾಣ ವೇದಿಕೆ ಬಡ ಕಲಾವಿದರನ್ನು ಗುರುತಿಸಿ ಆಹಾರ ಸಾಮಗ್ರಿಗಳ ಕಿಟ್ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ.

    ಎಸ್.ಗಂಗಮ್ಮ ಅವರಿಗೆ ಆಹಾರದ ಕಿಟ್ ನೀಡುವ ಮೂಲಕ ಕಲಾವಿದರ ಕಲ್ಯಾಣ ವೇದಿಕೆ ನೆರವಾಗಿದೆ. ಅಲ್ಲದೇ ಸಂಘಟನೆಯ ಪ್ರಮುಖರು, ಜಿಲ್ಲೆಯ ಇತರ ಕಲಾವಿದರಿಗೆ ಇದನ್ನ ವಿಸ್ತರಿಸುವ ಬಗ್ಗೆ ನಿರ್ಣಯ ಕೈಗೊಂಡರು. ಈ ಸಂದರ್ಭದಲ್ಲಿ ಕಲಾವಿದರ ಕಲ್ಯಾಣ ವೇದಿಕೆಯ ಜಿಲ್ಲಾಧ್ಯಕ್ಷರು ಶ್ರೀ ವಿಜಯ್ ವಿಶ್ವ ಕರ್ಮ, ಉಪಾಧ್ಯಕ್ಷರು ಶ್ರೀ ಮಾಜಿದ್ ಖಾನ್, ಕಾರ್ಯದರ್ಶಿಗಳು ಶ್ರೀ ಅಮರೇಶ್ ಜವಳಿ, ಸಹ ಕಾರ್ಯದರ್ಶಿ ಶ್ರೀ ಪ್ರಸಾದ್ ಬನ್ನಿಗಿಡದ್ ಹಾಗೂ ಜಿಲ್ಲಾ ಖಜಾಂಚಿ ಶ್ರೀ ಮಿಮಿಕ್ರಿ ಮಾರೇಶ್ ಪಾಲ್ಗೊಂಡಿದ್ದರು.

    ಅಲ್ಲದೇ ಜಿಲ್ಲಾಧಿಕಾರಿಗಳಿಗೆ ಮದುವೆ ಸಮಾರಂಭಗಳಲ್ಲಿ ವಾದ್ಯಗೋಷ್ಠಿ ನಡೆಸಲು ಅನುಮತಿ ನೀಡುವಂತೆ ಜಿಲ್ಲಾ ಕಲಾವಿದರ ಕಲಾ ಸಾಂಸ್ಕೃತಿಕ ಸಂಸ್ಥೆ ಪತ್ರದ ಮೂಲಕ ಮನವಿ ಮಾಡಿಕೊಂಡಿದ್ದಾರೆ.

    ಪತ್ರದಲ್ಲಿ ಏನಿದೆ?
    “ದೇಶದಲ್ಲಿ ಕೊರೊನಾ ಆಕ್ರಮಣದಿಂದ ಲಾಕ್‍ಡೌನ್ ಉಂಟಾಗಿ ಎಲ್ಲರೂ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಅದರಲ್ಲೂ ಕಲೆಯನ್ನೇ ನಂಬಿ ಜೀವನ ನಡೆಸುತ್ತಿದ್ದ ಕೊಪ್ಪಳ ಜಿಲ್ಲೆಯ ವಾದ್ಯಗೋಷ್ಠಿ ಕಲಾವಿದರು ಮೂರು ತಿಂಗಳಿನಿಂದ ಯಾವುದೇ ಕಾರ್ಯಕ್ರಮಗಳಿಲ್ಲದೆ ತಮ್ಮ ಕುಟುಂಬ ನಡೆಸಲು ಕಷ್ಟಕರವಾಗಿದೆ. ಸರ್ಕಾರವೂ ಈ ವಾದ್ಯಗೋಷ್ಠಿ ಕಲಾವಿದರಿಗೆ ಯಾವುದೇ ತರಹದ ಆರ್ಥಿಕ ನೆರವು ನೀಡಿರುವುದಿಲ್ಲ. ಆದ್ದರಿಂದ ನೀವು ಕಲಾವಿದರ ಜೀವನೋಪಾಯಕ್ಕಾಗಿ ಮದುವೆ, ಸಮಾರಂಭಗಳಲ್ಲಿ ವಾದ್ಯಗೋಷ್ಠಿಯನ್ನು ಮಾಡಲು ಅನುಮತಿ ಮಾಡಿಕೊಡಬೇಕೆಂದು” ಪತ್ರದಲ್ಲಿ ಮನವಿ ಮಾಡಿಕೊಂಡಿದೆ.

  • ಮಹಾಲಕ್ಷ್ಮಿಲೇಔಟ್‍ನಿಂದ ರಾಜ್ಯಾದ್ಯಂತ ಕೆಲಸ ಮಾಡ್ತೀನಿ- ಸಚಿವ ಗೋಪಾಲಯ್ಯ

    ಮಹಾಲಕ್ಷ್ಮಿಲೇಔಟ್‍ನಿಂದ ರಾಜ್ಯಾದ್ಯಂತ ಕೆಲಸ ಮಾಡ್ತೀನಿ- ಸಚಿವ ಗೋಪಾಲಯ್ಯ

    – ಹಾಸನ ಜಿಲ್ಲೆಯ ಅಭಿವೃದ್ಧಿ ನನ್ನ ಗುರಿ

    ಬೆಂಗಳೂರು: ಮಹಾಲಕ್ಷ್ಮಿ ಲೇಔಟ್‍ನಿಂದ ಇದೀಗ ರಾಜ್ಯಾದ್ಯಂತ ಕೆಲಸ ಮಾಡುತ್ತೀನಿ. ಅಲ್ಲದೇ ಕೋವಿಡ್-19 ಹಿನ್ನೆಲೆಯಲ್ಲಿ ಪ್ರತಿಯೊಬ್ಬರಿಗೂ ಪಡಿತರ ಸಿಗುವಂತೆ ಮಾಡುವುದೇ ನಮ್ಮ ಉದ್ದೇಶ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಗೋಪಾಲಯ್ಯ ತಿಳಿಸಿದರು.

    ಸಚಿವ ಗೋಪಾಲಯ್ಯ ಬೆಂಗಳೂರು ಹೊರವಲಯ ಟಿ.ದಾಸರಹಳ್ಳಿಯಲ್ಲಿ ನಾಗರಿಕರಿಗೆ ಸುಮಾರು 3 ಸಾವಿರ ಆಹಾರ ಕಿಟ್ ವಿತರಣೆ ಮಾಡಿದರು. ದಾಸರಹಳ್ಳಿ ಕ್ಷೇತ್ರದ ಮಾಜಿ ಶಾಸಕ ಎಸ್.ಮುನಿರಾಜು ನೇತೃತ್ವದಲ್ಲಿ ಬಿಜೆಪಿ ಮುಖಂಡ ನರಸಿಂಹಮೂರ್ತಿ ಆಯೋಜನೆ ಮಾಡಿದ್ದ ಕಾರ್ಯಕ್ರಮದಲ್ಲಿ ಕಿಟ್ ವಿತರಣೆ ಮಾಡಿದರು.

    ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಗೋಪಾಲಯ್ಯ, ರಾಜ್ಯ ಸರ್ಕಾರ ಹಾಸನಕ್ಕೆ ಉಸ್ತವಾರಿಯಾಗಿ ನೇಮಕ ಮಾಡಿ ನನ್ನನ್ನು ಹಾಸನಕ್ಕೆ ಕಳುಹಿಸಿದ್ದು ಕೆಲಸ ಮಾಡಲಿಕ್ಕೆ. ಹಾಸನ ಕ್ಷೇತ್ರದಲ್ಲಿ ರೈತಾಪಿ ಕುಟುಂಬ ಎಲ್ಲರನ್ನೂ ಜೊತೆಯಲ್ಲಿ ಕರೆದುಕೊಂಡು ಕೆಲಸ ಮಾಡುತ್ತೀನಿ. ಪ್ರಾಮಾಣಿಕವಾಗಿ ನಾನು ಮಹಾಲಕ್ಷ್ಮಿ ಲೇಔಟ್‍ನಿಂದ ಇದೀಗ ರಾಜ್ಯಾದ್ಯಂತ ಕೆಲಸ ಮಾಡುತ್ತೀನಿ ಎಂದರು.

    ನನಗೆ ಗೊತ್ತಿರೋದು ಕೆಲಸ ಮಾಡೋದು ಅದನ್ನೆ ಅಲ್ಲಿಯೂ ಮಾಡುತ್ತೀನಿ. ಹಾಸನದಲ್ಲಿ ಎಲ್ಲ ಶಾಸಕರು, ಸಂಸದರನ್ನ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೀನಿ. ಆ ಶಕ್ತಿಯನ್ನ ಹಾಸನಾಂಬೆ ನನಗೆ ಕೊಡುತ್ತಾಳೆ. ಜಿಲ್ಲೆಯ ಅಭಿವೃದ್ಧಿ ಮಾಡಲು ನನ್ನನ್ನು ಕಳುಹಿಸಿದ್ದಾರೆ. ಹೀಗಾಗಿ ಅಭಿವೃದ್ಧಿಯೇ ನನ್ನ ಗುರಿ ಎಂದು ಹೇಳಿದರು.

    ಈ ವೇಳೆ ಮಾಜಿ ಶಾಸಕ ಎಸ್. ಮುನಿರಾಜು, ಬಿಜೆಪಿ ಮುಖಂಡ ನರಸಿಂಹಮೂರ್ತಿ, ಗೋಪಾಲಕೃಷ್ಣ, ನಾರಾಯಣ ಸ್ವಾಮಿ, ನರಸಿಂಹಮೂರ್ತಿ, ವಿಜಯ್ ಕುಮಾರ್, ಕೃಷ್ಣ ಮೂರ್ತಿ ಮತ್ತಿತರು ಉಪಸ್ಥಿತರಿದ್ದರು.

  • ದೇವಾಲಯಗಳು ಮುಚ್ಚಿರುವುದರಿಂದ ಬೀದಿಗೆ ಬಂದ ಅರ್ಚಕರು

    ದೇವಾಲಯಗಳು ಮುಚ್ಚಿರುವುದರಿಂದ ಬೀದಿಗೆ ಬಂದ ಅರ್ಚಕರು

    – ಆಹಾರ ಕಿಟ್‍ಗಾಗಿ ಜಿಲ್ಲಾಧಿಕಾರಿಗಳಿಗೆ ಮನವಿ

    ರಾಯಚೂರು: ಕೊರೊನಾ ಲಾಕ್‍ಡೌನ್‍ನಿಂದಾಗಿ ರಾಯಚೂರಿನ ಬಹಳಷ್ಟು ದೇವಾಲಯಗಳ ಅರ್ಚಕರು ಅಕ್ಷರಶಃ ಬೀದಿಗೆ ಬಂದಿದ್ದಾರೆ. ದೇವಾಲಯಕ್ಕೆ ಬರುವ ಭಕ್ತರ ಕಾಣಿಕೆಯಿಂದ ಬದುಕುತ್ತಿದ್ದ ಅರ್ಚಕರ ಕುಟುಂಬಗಳು ಈಗ ಕಷ್ಟವನ್ನು ಎದುರಿಸುತ್ತಿವೆ.

    ಹೀಗಾಗಿ ಮುಜರಾಯಿ ಇಲಾಖೆ ಆಯುಕ್ತರು ಸೂಚಿಸಿದಂತೆ ಆಹಾರ ಕಿಟ್‍ಗಳನ್ನು ವಿತರಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗೆ ಅರ್ಚಕರು ಮನವಿ ಸಲ್ಲಿಸಿದ್ದಾರೆ. ಏಪ್ರಿಲ್ ತಿಂಗಳಿನಲ್ಲಿ ಮುಜರಾಯಿ ಇಲಾಖೆ ಆಯುಕ್ತರು ಆಹಾರ ಕಿಟ್ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಆದೇಶಿಸಿದ್ದು ಇದುವರೆಗೂ ಕಿಟ್ ವಿತರಿಸಿಲ್ಲ ಎಂದು ಅರ್ಚಕರು ಆರೋಪಿಸಿದ್ದಾರೆ.

    ಕಾಣಿಕೆ ತಟ್ಟೆಯಲ್ಲಿ ಬೀಳುವ ಕಾಣಿಕೆಯಿಂದ ಜೀವನ ನಡೆಯುತ್ತಿತ್ತು. ಆದರೆ ಈಗ ದೇವಾಲಯಗಳಿಗೆ ಬೀಗ ಹಾಕಿರುವುದರಿಂದ ಮದುವೆಗಳಿಲ್ಲ, ವಿಶೇಷ ಪೂಜೆಗಳಿಲ್ಲ, ಭಕ್ತರಿಲ್ಲ ಹೀಗಾಗಿ ಕಾಣಿಕೆ ತಟ್ಟೆಯ ಕಾಣಿಕೆಯೂ ನಮಗೆ ಸಿಗುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಧಾರ್ಮಿಕ ದತ್ತಿ ಇಲಾಖೆಯ ಸಿ ವರ್ಗದ ದೇವಾಲಯಗಳ ಅರ್ಚಕರ ಸ್ಥಿತಿಯಂತೂ ತುಂಬಾ ಕಷ್ಟದಾಯಕವಾಗಿದೆ. ಸರ್ಕಾರ ದೇವಾಲಯಗಳನ್ನೇ ನಂಬಿ ಬದುಕುತ್ತಿರುವ ನಮಗೆ ಸಹಾಯಧನ ನೀಡಬೇಕು. ಕಿಟ್ ವಿತರಿಸಬೇಕು ಅಂತ ಅರ್ಚಕರು ಒತ್ತಾಯಿಸಿದ್ದಾರೆ.

  • 500 ಮಂದಿ ಶಾಮಿಯಾನ ಕಾರ್ಮಿಕರಿಗೆ ಆಹಾರ ಕಿಟ್ ವಿತರಣಾ ಕಾರ್ಯಕ್ರಮ ರದ್ದು

    500 ಮಂದಿ ಶಾಮಿಯಾನ ಕಾರ್ಮಿಕರಿಗೆ ಆಹಾರ ಕಿಟ್ ವಿತರಣಾ ಕಾರ್ಯಕ್ರಮ ರದ್ದು

    – ಆಕ್ರೋಶ ವ್ಯಕ್ತವಾದ ಹಿನ್ನೆಲೆ ಕಾರ್ಯಕ್ರಮ ರದ್ದು

    ಹುಬ್ಬಳ್ಳಿ: ಧಾರವಾಡ ಜಿಲ್ಲಾಡಳಿತ ಸಾರ್ವಜನಿಕ ಸಭೆ ಸಮಾರಂಭಗಳಿಗೆ ಅನುಮತಿಯ ಪಾಸ್ ನೀಡುವಲ್ಲಿ ತಾರತಮ್ಯ ಮಾಡುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆ 500 ಜನ ಶಾಮಿಯಾನ ಕಾರ್ಮಿಕರಿಗೆ ಆಹಾರ ಕಿಟ್ ವಿತರಿಸುವ ಕಾರ್ಯಕ್ರಮವನ್ನು ರದ್ದು ಮಾಡಲಾಗಿದೆ.

    ನಗರದ ಶ್ರೀನಿವಾಸ ಗಾರ್ಡನ್‍ನಲ್ಲಿ 500 ಜನ ಶಾಮಿಯಾನ ಕಾರ್ಮಿಕರಿಗೆ ಆಹಾರ ಕಿಟ್ ವಿತರಣಾ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಅನುಮತಿ ನೀಡಿತ್ತು. ಇದು ವಿವಾದಕ್ಕೆ ಕಾರಣವಾಗಿತ್ತು. ಕೋವಿಡ್-19 ಲಾಕ್‍ಡೌನ್‍ನಿಂದಾಗಿ ಸಂಕಷ್ಟದಲ್ಲಿರುವ 500 ಶಾಮಿಯಾನ ಕಾರ್ಮಿಕರನ್ನು ಒಂದೇ ಕಡೆ ಸೇರಿಸಿ, ಹುಬ್ಬಳ್ಳಿಯ ಶ್ರೀನಿವಾಸ ಗಾರ್ಡನ್‍ನಲ್ಲಿ ಆಹಾರ ಸಾಮಗ್ರಿಗಳ ಕಿಟ್‍ಗಳನ್ನು ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಚಾಲನೆ ನೀಡುತ್ತಿದ್ದರು. ಆದರೆ ಇದೀಗ ಈ ಕಾರ್ಯಕ್ರಮವನ್ನು ರದ್ದುಪಡಿಸಲಾಗಿದೆ.

    ಸೋಮವಾರ ರಂಜಾನ್ ಹಬ್ಬದ ಪ್ರಯುಕ್ತ ಈದ್ಗಾ ಮೈದಾನಗಳಲ್ಲಿ ಕೇವಲ ಐದು ಜನರಿಗೆ ಮಾತ್ರ ಈದ್-ಉಲ್-ಫಿತರ್ ನಮಾಜ್ ಮಾಡಲು ಅನುಮತಿ ನೀಡಿ ಎಂದು ಸಮುದಾಯದವರು ಮನವಿ ಮಾಡಿದ್ದರು. ಈ ವಿಷಯ ನನ್ನ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ಅನುಮತಿ ನೀಡಲು ನಿರಾಕರಿಸಿದ್ದರು ಎನ್ನಲಾಗಿದೆ.

    ಈ ಬಗ್ಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಅಲ್ತಾಫ್ ಹುಸೇನ ಹಳ್ಳೂರ ಆಕ್ಷೇಪ ವ್ಯಕ್ತಪಡಿಸಿದ್ದು, ಕೇವಲ 5 ಜನರಿಗೆ ಸೇರಲು ಅನುಮತಿ ಕೊಡದ ಜಿಲ್ಲಾಡಳಿತ ಈಗ 500ಕ್ಕೂ ಹೆಚ್ಚು ಜನರನ್ನು ಸೇರಲು ಅನುಮತಿ ನೀಡಿದೆ. ಯಾವ ಮಾನದಂಡದ ಮೇಲೆ ಅನುಮತಿ ನೀಡಿದೆ ಎಂಬುದನ್ನು ಸ್ಪಷ್ಟಪಡಿಸಬೇಕೆಂದು ಆಗ್ರಹಿಸಿದ್ದರು. ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆ ಈ ಕಾರ್ಯಕ್ರಮವನ್ನು ಇದೀಗ ರದ್ದು ಮಾಡಲಾಗಿದೆ.

  • ಆಹಾರ ಕಿಟ್‍ಗಾಗಿ ಬಿಜೆಪಿ ಶಾಸಕನ ಮನೆ ಮುಂದೆ ಜಮಾಯಿಸಿದ ಜನ

    ಆಹಾರ ಕಿಟ್‍ಗಾಗಿ ಬಿಜೆಪಿ ಶಾಸಕನ ಮನೆ ಮುಂದೆ ಜಮಾಯಿಸಿದ ಜನ

    ಹುಬ್ಬಳ್ಳಿ: ಆಹಾರ ಕಿಟ್ ನೀಡುವಂತೆ ಆಗ್ರಹಿಸಿ ಬಿಜೆಪಿ ಶಾಸಕರ ಮನೆ ಮುಂದೆ ಜನಸ್ತೋಮವೇ ನೆರೆದಿದ್ದ ಪ್ರಸಂಗ ಇಂದು ಧಾರವಾಡ ಜಿಲ್ಲೆಯ ಕಲಘಟಗಿಯಲ್ಲಿ ಕಂಡು ಬಂದಿತು.

    ಕಲಘಟಗಿ ಮತಕ್ಷೇತ್ರದ ಶಾಸಕ ಸಿ.ಎಂ.ನಿಂಬಣ್ಣವರ ಮನೆ ಮುಂದೆ ಕಲಘಟಗಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ನೂರಾರು ಜನರು ಆಹಾರ ಕಿಟ್ ನೀಡುವಂತೆ ಆಗ್ರಹಿಸಿ ಜಮಾಯಿಸಿದ್ದರು. ಈ ವೇಳೆ ಮಹಿಳೆಯರು ಯಾವುದೇ ಸಾಮಾಜಿಕ ಕಾಯ್ದುಕೊಳ್ಳಲೇ ಇಲ್ಲ.

    ಕಾರ್ಮಿಕ ಇಲಾಖೆಯಿಂದ ಕಾರ್ಮಿಕರಿಗೆ ವಿತರಣೆ ಮಾಡಲು ನೀಡಿದ ಕಿಟ್‍ಗಳನ್ನು ಶಾಸಕರು ಬಿಜೆಪಿ ಕಾರ್ಯಕರ್ತರಿಗೆ ನೀಡಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿತ್ತು. ಇದರಿಂದಾಗಿ ಸಾರ್ವಜನಿಕರು ನೂರಾರು ಸಂಖ್ಯೆಯಲ್ಲಿ ಶಾಸಕರ ಮನೆಗೆ ಮುತ್ತಿಗೆ ಹಾಕಿದರು. “ರಾಜ್ಯದ ವಿವಿಧೆಡೆ ಬಡವರಿಗೆ ಆಹಾರ ಕಿಟ್ ವಿತರಿಸುತ್ತಿದ್ದಾರೆ. ನಮಗೂ ಆಹಾರದ ಕಿಟ್‍ಗಳನ್ನು ಕೊಡಿ” ಎಂದು ಆಗ್ರಹಿಸಿದರು.

    ಪ್ರತಿಭಟನೆಗೆ ಮುಂದಾಗಿದ್ದ ಮಹಿಳೆಯರನ್ನು ಶಾಸಕರ ಸಹಾಯರು ತಡೆದು ವಾಪಸ್ ಕಳುಹಿಸಿದರು. ಇದರಿಂದಾಗಿ ಕೋಪಗೊಂಡ ಮಹಿಳೆಯರು, ಬಡವರಿಗೆ ವಿತರಿಸಲು ಸರ್ಕಾರ ಕೊಟ್ಟ ಆಹಾರದ ಕಿಟ್‍ಗಳನ್ನು ಇವರೇ ಹಂಚಿಕೊಂಡಿದ್ದಾರೆ. ಇವರಿಗೆ ಸರಿಯಾಗಿ ಪಾಠ ಕಲಿಸಬೇಕು ಎಂದು ಅಸಮಾಧಾನ ಹೊರಹಾಕಿ ತಮ್ಮ ಮನೆಗಳಿಗೆ ಹಿಂತಿರುಗಿದರು.

  • ಕೊರೊನಾ ವಾರಿಯರ್ಸ್‍ಗೆ ಶ್ರೀ ಸಾಯಿ ಫೌಂಡೇಶನ್ ನೆರವು

    ಕೊರೊನಾ ವಾರಿಯರ್ಸ್‍ಗೆ ಶ್ರೀ ಸಾಯಿ ಫೌಂಡೇಶನ್ ನೆರವು

    ಬೆಂಗಳೂರು: ಸತತ ಎರಡು ತಿಂಗಳಿನಿಂದ ಹಗಲು ಇರುಳೆನ್ನದೆ ಮನೆ, ಮಕ್ಕಳು, ಕುಟುಂಬ ಬಿಟ್ಟು ಕೊರೊನಾ ವಾರಿಯರ್ಸ್ ಆಗಿ ಸೇವೆ ಸಲ್ಲಿಸುತ್ತಿರುವ ಹೋಮ್ ಗಾರ್ಡ್ ಸಿಬ್ಬಂದಿಗೆ ಬೆಂಗಳೂರು ಹೊರವಲಯ ಟಿ.ದಾಸರಹಳ್ಳಿಯ ಶೆಟ್ಟಿಹಳ್ಳಿಯಲ್ಲಿ ಶ್ರೀ ಸಾಯಿ ಫೌಂಡೇಶನ್ ಸಂಸ್ಥಾಪಕ ಬಿ. ಸುರೇಶ್ ನೆರವು ನೀಡಿ ಮಾನವೀಯತೆ ಮೆರೆದಿದ್ದಾರೆ.

    ಪೀಣ್ಯ, ಬಾಗಲಗುಂಟೆ ಹಾಗೂ ಪೀಣ್ಯ ಸಂಚಾರಿಯ ಹೋಮ್ ಗಾರ್ಡ್ ಸಿಬ್ಬಂದಿಗೆ ಆಹಾರದ ದಿನಸಿ ಕಿಟ್ ನೀಡಿ ಶ್ರೀ ಸಾಯಿ ಫೌಂಡೇಶನ್ ನೆರವಿಗೆ ದಾವಿಸಿದ್ದಾರೆ. ಈ ವೇಳೆ ಮಾತನಾಡಿದ ಫೌಂಡೇಶನ್ ಸಂಸ್ಥಾಪಕ ಬಿ.ಸುರೇಶ್, ಈ ಕೊರೊನಾ ವೈರಸ್ ಮಹಾಮಾರಿ ಸಾಕಷ್ಟು ರೀತಿಯಲ್ಲಿ ನಮ್ಮ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಆತಂಕ ಸೃಷ್ಟಿಮಾಡುತ್ತಲೇ ಇದೆ. ಲಾಕ್‍ಡೌನ್ ವೇಳೆ ಸರ್ಕಾರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ತಮ್ಮದೇ ರೀತಿಯಲ್ಲಿ ಕೆಲಸ ನಿರ್ವಹಿಸಿ ಯಶಸ್ವಿಯಾಗಿದ್ದಾರೆ ಎಂದು ಶ್ಲಾಘಿಸಿದರು.

    ಪೊಲೀಸ್ ಇಲಾಖೆಯ ಜೊತೆಗೆ ಹೋಮ್ ಗಾರ್ಡ್ ಸಿಬ್ಬಂದಿ ಸಹ ತಮ್ಮ ಕಾರ್ಯವನ್ನ ಈ ರಾಜ್ಯದ ಜನತೆಗೆ ನೀಡಿದ್ದು, ಅವರ ಕುಟುಂಬಕ್ಕೆ ನಮ್ಮ ಫೌಂಡೇಶನ್ ವತಿಯಿಂದ ಸಣ್ಣ ಪ್ರಮಾಣದ ಸಹಾಯ ಮಾಡುವ ಉದ್ದೇಶದಿಂದ ದಿನಸಿ ಕಿಟ್ ನೀಡಿದ್ದು ಸಂತಸ ತಂದಿದೆ ಬಿ.ಸುರೇಶ್ ಎಂದರು. ಈ ವೇಳೆ ಪೀಣ್ಯ ಸಂಚಾರಿ ಪೊಲೀಸ್ ಸಿಪಿಐ ರಾಜು, ಶ್ರೀ ಸಾಯಿ ಫೌಂಡೇಶನ್‍ನ ಬಿ.ಸುರೇಶ್, ಕೃಷ್ಣ ಮತ್ತಿತರು ಉಪಸ್ಥಿತರಿದ್ದರು.

  • ರಂಜಾನ್‍ಗೆ ಸಚಿವರಿಂದ ಕೋಳಿ ಗಿಫ್ಟ್- ಸಾಮಾಜಿಕ ಅಂತರವಿಲ್ಲದೆ ಮುಗಿಬಿದ್ದ ಜನ

    ರಂಜಾನ್‍ಗೆ ಸಚಿವರಿಂದ ಕೋಳಿ ಗಿಫ್ಟ್- ಸಾಮಾಜಿಕ ಅಂತರವಿಲ್ಲದೆ ಮುಗಿಬಿದ್ದ ಜನ

    ಬೆಂಗಳೂರು: ರಂಜಾನ್ ಹಬ್ಬಕ್ಕೆಂದು ಸಚಿವರು ಕೋಳಿ ಮತ್ತು ಆಹಾರ ಕಿಟ್ ವಿತರಣೆ ಮಾಡುತ್ತಿದ್ದು, ಸಾಮಾಜಿಕ ಅಂತರವಿಲ್ಲದೇ ಜನರು ಮುಗಿಬಿದ್ದಿದ್ದಾರೆ.

    ಕೆ.ಆರ್ ಪುರದ ಬಿಜೆಪಿ ಶಾಸಕ ಮತ್ತು ನಗರಾಭಿವೃದ್ಧಿ ಸಚಿವರ ಬಿ.ಎ. ಬಸವರಾಜ್ ಅವರು ತಮ್ಮ ಕ್ಷೇತ್ರದ ಜನರಿಗೆ ರಂಜಾನ್ ಹಬ್ಬದ ಪ್ರಯುಕ್ತ ಕೋಳಿ ಮತ್ತು ಆಹಾರ ಕಿಟ್ ವಿರತೆಣೆ ಮಾಡುತ್ತಿದ್ದಾರೆ. ಈ ವೇಳೆ ಕೋಳಿ ಪಡೆಯಲು ಮುಗುಬಿದ್ದಿರುವ ಜನ ಕೊರೊನಾ ಭಯವನ್ನು ಮರೆತು ವರ್ತಿಸುತ್ತಿದ್ದಾರೆ.

    ಕೆ.ಆರ್.ಪುರ ಕ್ಷೇತ್ರದ ಬಸವನಪುರ ವಾರ್ಡ್ ಪಾಲಿಕೆ ಸದಸ್ಯ ಜಯಪ್ರಕಾಶ್ (ಜೆಪಿ) ನೇತೃತ್ವದಲ್ಲಿ ಈ ಕಾರ್ಯಕ್ರಮವನ್ನು ಹಂಚಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜು ಚಾಲನೆ ನೀಡಿದ್ದಾರೆ. ನಂತರ ಜನರನ್ನು ದನ ಕರುಗಳಂತೆ ಕ್ಯೂನಲ್ಲಿ ಕೂಡಿಹಾಕಿ ಕಿಟ್‍ಗಳ ವಿತರಣೆ ಮಾಡಲಾಗಿದೆ.

    ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಸಮಯದಲ್ಲಿ ಸಚಿವರ ಕಾರ್ಯಕ್ರಮದಲ್ಲೇ ಸಾಮಾಜಿಕ ಅಂತರವಿಲ್ಲ ಎಂದು ಸಾರ್ವಜನಿಕ ವಲಯದಲ್ಲಿ ಆಕ್ರೋಶ ಕೇಳಿ ಬಂದಿದೆ.

  • ಮನೆಯೇ ಮಂತ್ರಾಲಯ ಇಂಪ್ಯಾಕ್ಟ್- ಬಡ ಕುಟುಂಬಕ್ಕೆ ಪಡಿತರ ವಿತರಣೆ

    ಮನೆಯೇ ಮಂತ್ರಾಲಯ ಇಂಪ್ಯಾಕ್ಟ್- ಬಡ ಕುಟುಂಬಕ್ಕೆ ಪಡಿತರ ವಿತರಣೆ

    ಬೆಂಗಳೂರು: ಪಬ್ಲಿಕ್ ಟಿವಿಯ ಮನೆಯ ಮಂತ್ರಾಲಯಕ್ಕೆ ಕರೆ ಮಾಡಿ ಮಹಿಳೆಯೊಬ್ಬರು ಸಹಾಯ ಕೇಳಿದ್ದರು. ಮಹಿಳೆಯ ಸಹಾಯಕ್ಕೆ ಟಿ.ದಾಸರಹಳ್ಳಿಯ ರಾಜಗೋಪಾಲ ನಗರದ ಸಮಾಜ ಸೇವಕ ಎನ್. ನಾರಾಯಣ ಸ್ವಾಮಿ ನೆರವಿಗೆ ಧಾವಿಸಿದ್ದಾರೆ.

    ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡಿಕೊಂಡಿದ್ದ ಗೀತಾ ಲಾಕ್‍ಡೌನ್ ನಿಂದಾಗಿ ಮನೆಯಲ್ಲಿರುವಂತಾಗಿತ್ತು. ಒಂದು ಹೊತ್ತಿನ ಊಟಕ್ಕಾಗಿ ಗೀತಾ ಅವರ ಕುಟುಂಬ ಪರದಾಡುತ್ತಿತ್ತು. ಮನೆಯೇ ಮಂತ್ರಾಲಯ ಕಾರ್ಯಕ್ರಮಕ್ಕೆ ಕರೆ ಮಾಡಿದ್ದ ಗೀತಾ, ದಿನಸಿಯ ಸಹಾಯ ಮಾಡುವಂತೆ ಮನವಿ ಮಾಡಿಕೊಂಡಿದ್ದರು. ಕಾರ್ಯಕ್ರಮ ನೋಡಿದ್ದ ಎನ್. ನಾರಾಯಣ ಸ್ವಾಮಿ ಮಹಿಳೆ ನೆರವಿಗೆ ಧಾವಿಸಿ 20 ದಿನಕ್ಕೆ ಬೇಕಾಗಿವ ಎಲ್ಲಾ ತರಹದ ದಿನಸಿ ಸಾಮಾಗ್ರಿಗಳು ಸೇರಿದಂತೆ ತರಕಾರಿಗಳನ್ನ ನೀಡಿದ್ದಾರೆ.

    ಪಬ್ಲಿಕ್ ಟಿವಿಯ ಕಾರ್ಯಕ್ರಮ ಸ್ಪೂರ್ತಿಯಾಗಿ ಇದೆ ಕೆಲಸವನ್ನ ನಿರಂತರವಾಗಿ ಮಾಡುವುದಾಗಿ ನಾರಾಯಣ ಸ್ವಾಮಿ ತಿಳಿಸಿದ್ದಾರೆ. ಗೀತಾ ಅವರು ಸಹ ಪಬ್ಲಿಕ್ ಟಿವಿ ತಂಡಕ್ಕೆ ಧನ್ಯವಾದಗಳನ್ನ ತಿಳಿಸಿ ನೆರವು ನೀಡಿದ ಸೇವಕರಿಗೆ ಕೃತಜ್ಞತೆ ತಿಳಿಸಿದ್ದಾರೆ.

  • ‘ಮನೆಯೇ ಮಂತ್ರಾಲಯ’ ಇಂಪ್ಯಾಕ್ಟ್- ಪಡಿತರ ಸಿಗದೆ ಪರದಾಡುತ್ತಿದ್ದ ಸಹೋದರಿಯರಿಗೆ ಸಹಾಯ

    ‘ಮನೆಯೇ ಮಂತ್ರಾಲಯ’ ಇಂಪ್ಯಾಕ್ಟ್- ಪಡಿತರ ಸಿಗದೆ ಪರದಾಡುತ್ತಿದ್ದ ಸಹೋದರಿಯರಿಗೆ ಸಹಾಯ

    ರಾಯಚೂರು: ಪಡಿತರ ಸಿಗದೆ ಪರದಾಡುವ ಸ್ಥಿತಿ ಎದುರಿಸುತ್ತಿದ್ದ ಜಿಲ್ಲೆಯ ದೇವದುರ್ಗ ತಾಲೂಕಿನ ಬೋಮ್ಮನಹಳ್ಳಿ ಗ್ರಾಮದ ಇಬ್ಬರೂ ಸಹೋದರಿಯರಿಗೆ ಇಂದು ಗ್ರಾಮ ಪಂಚಾಯಿತಿ ವತಿಯಿಂದ ಆಹಾರ ಕಿಟ್ ವಿತರಣೆ ಮಾಡಲಾಗಿದೆ.

    ಪಬ್ಲಿಕ್ ಟಿವಿಯ ‘ಮನೆಯೇ ಮಂತ್ರಾಲಯ’ಕ್ಕೆ ಸ್ಪಂಧಿಸಿದ ಹೊಸುರು ಸಿದ್ದಾಪುರ ಪಿಡಿಒ ಶಂಕರ್, ಗ್ರಾ.ಪಂ ಸದಸ್ಯ ಶಿವರಾಜ್ ಆಹಾರ ಕಿಟ್ ವಿತರಣೆ ಮಾಡಿದ್ದಾರೆ. ಕಾರ್ಯಕ್ರಮಕ್ಕೆ ಕರೆ ಮಾಡಿದ್ದರಿಂದ ಆಹಾರ ಕಿಟ್ ಹಾಗೂ ಪಡಿತರ ಸಿಗುತ್ತಿರುವುದಕ್ಕೆ ಸಹೋದರಿಯರು ಪಬ್ಲಿಕ್ ಟಿವಿಗೆ ಧನ್ಯವಾದ ಹೇಳಿದ್ದಾರೆ.

    ತಂದೆ, ತಾಯಿ ಹಾಗೂ ಸಹೋದರ ದುಡಿಯಲು ಮುಂಬೈಗೆ ಗುಳೆ ಹೋಗಿದ್ದು, ಮನೆಯಲ್ಲಿ ಸಹೋದರಿಯರದ ದೇವಮ್ಮ, ಮಲ್ಲಮ್ಮ ಮಾತ್ರ ಇದ್ದಾರೆ. ಲಾಕ್ ಡೌನ್ ನಿಂದ ಕೆಲಸವು ಇಲ್ಲದೆ ಊಟಕ್ಕೂ ಕಷ್ಟವಾಗಿತ್ತು. ಅಲ್ಲದೆ ಪಡಿತರ ಚೀಟಿ ಯಲ್ಲಿ ಭಾವಚಿತ್ರವಿಲ್ಲದ ಕಾರಣ ಪಡಿತರವೂ ಸಿಕ್ಕಿರಲಿಲ್ಲ. ಈಗ ಸಮಸ್ಯೆ ಬಗೆಹರಿದಿದ್ದು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ನೀರಿಕ್ಷಕ ಬಸವರಾಜ್ ಸಿಂಗ್ ಸಹೊದರಿಯರಿಗೆ ಪಡಿತರ ನೀಡುವುದಾಗಿ ಭರವಸೆ ನೀಡಿದ್ದಾರೆ.