Tag: Food Kit

  • ಮೇ 15ರಿಂದ ಕೇರಳದ ಪ್ರತಿ ಕುಟುಂಬಕ್ಕೆ ಉಚಿತ ಆಹಾರ ಕಿಟ್ ವಿತರಣೆ

    ಮೇ 15ರಿಂದ ಕೇರಳದ ಪ್ರತಿ ಕುಟುಂಬಕ್ಕೆ ಉಚಿತ ಆಹಾರ ಕಿಟ್ ವಿತರಣೆ

    – ಫುಡ್ ಕಿಟ್‍ನಲ್ಲಿ ಏನೆಲ್ಲ ಇರುತ್ತೆ?

    ತಿರುವನಂತಪುರ: ಕೇರಳದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ನೂತನವಾಗಿ ಅಧಿಕಾರಕ್ಕೆ ಬಂದಿರುವ ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರ ವಲಸೆ ಕಾರ್ಮಿಕರು ಸೇರಿದಂತೆ ರಾಜ್ಯದ ಪ್ರತಿಯೊಂದು ಕುಟುಂಬಕ್ಕೆ ಮೇ 15 ರಿಂದ ಉಚಿತ ಆಹಾರ ಕಿಟ್ ವಿತರಿಸಲು ಮುಂದಾಗಿದೆ.

    ಕೊರೊನಾ ಎರಡನೇ ಅಲೆಯಿಂದಾಗಿ ಇದೀಗ ಕೇರಳದಲ್ಲಿ ಲಾಕ್‍ಡೌನ್ ಘೋಷಣೆ ಮಾಡಲಾಗಿದೆ. ಈ ವೇಳೆ ಯಾವುದೇ ಒಬ್ಬ ನಾಗರಿಕನಿಗೂ ಕೂಡ ಆಹಾರಕ್ಕೆ ಸಮಸ್ಯೆ ಆಗಬಾರೆಂಬ ನಿಟ್ಟಿನಲ್ಲಿ ಅಲ್ಲಿನ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ.

    ಈ ಕುರಿತು ಟ್ವಿಟ್ಟರ್ ಮೂಲಕ ತಿಳಿಸಿರುವ ಪಿಣರಾಯಿ ವಿಜಯನ್, ಲಾಕ್‍ಡೌನ್ ಅವಧಿಯಲ್ಲಿ ಯಾರೊಬ್ಬರೂ ಕೂಡ ಹಸಿವಿನಿಂದ ಒದ್ದಾಡಬಾರದು. ಹಾಗಾಗಿ ಮುಂದಿನ ವಾರದಿಂದ ರಾಜ್ಯದಲ್ಲಿರುವ ವಲಸೆ ಕಾರ್ಮಿಕರು ಸೇರಿ ಪ್ರತಿಯೊಂದು ಕುಟುಂಬಕ್ಕೂ ಕೂಡ ಉಚಿತ ಆಹಾರ ಕಿಟ್ ವಿತರಣೆಗೆ ನಿರ್ಧರಿಸಲಾಗಿದೆ. ನಿಮ್ಮ ಸ್ಥಳೀಯ ಆಡಳಿತವು ನಿಮಗೆ ಆಹಾರ ಕಿಟ್‍ಗಳನ್ನು ತಲುಪಿಸುವ ಕಾರ್ಯ ಮಾಡಲಿದೆ ಎಂದು ಭರವಸೆ ನೀಡಿದ್ದಾರೆ.

    ಇದಲ್ಲದೆ ಸ್ಥಳೀಯ ಆಡಳಿತ ಯಾರಿಗೆ ಆಹಾರದ ಅವಶ್ಯಕತೆ ಇದೆ ಅಂತವರಿಗೆ ಕಮ್ಯೂನಿಟಿ ಕಿಚನ್ ತೆರೆದು ಆಹಾರ ಕೊಡುವಂತೆ ಸೂಚಿಸಿದ್ದಾರೆ. ಸರ್ಕಾರದಿಂದ ಬರುವ ಆಹಾರ ಕಿಟ್‍ನಲ್ಲಿ ಒಟ್ಟು 10 ಬಗೆಯ ಸಾಮಾಗ್ರಿಗಳಿರಲಿದ್ದು, ತೊಗರಿ ಬೇಳೆ 500ಗ್ರಾಂ, ಹೆಸರು ಕಾಳು 500ಗ್ರಾಂ, ಸಕ್ಕರೆ 1 ಕೆ.ಜಿ, ಚಹ ಪುಡಿ 100 ಗ್ರಾಂ, ಮೆಣಸಿನ ಪುಡಿ 100 ಗ್ರಾಂ, ಅರಶಿನ ಪುಡಿ 100 ಗ್ರಾಂ, ಉಪ್ಪು 1 ಕೆ.ಜಿ, ಅಕ್ಕಿ 5 ಕೆ.ಜಿ, ತೆಂಗಿನ ಎಣ್ಣೆ 1 ಲೀಟರ್, ಬಟಾಟೆ 1 ಕೆ.ಜಿ, ಈರುಳ್ಳಿ 1 ಕೆ.ಜಿ ಇರಲಿದೆ ಎಂದು ತಿಳಿಸಿದ್ದಾರೆ.

    ಕೇರಳದಲ್ಲಿ ಈಗಾಗಲೇ ವಲಸೆ ಕಾರ್ಮಿಕರ ಸಂಖ್ಯೆ ಹೆಚ್ಚಾಗಿದ್ದು, ಅವರಿಗೂ ಕೂಡ ಆಹಾರ ಕಿಟ್ ವಿತರಣೆ ಮಾಡಲು ಮುಂದಾಗಿರುವುದರಿಂದ ಹಲವರ ಹಸಿವನ್ನು ನೀಗಿಸುವ ಕಾರ್ಯಕ್ಕೆ ಕೇರಳ ಸರ್ಕಾರ ಮುಂದಾಗಿದೆ ಎಂದು ಸರ್ಕಾರದ ನಡೆಗೆ ಜನ ಮೆಚ್ಚುಗೆ ಸೂಚಿಸಿದ್ದಾರೆ.

  • ದಾವಣಗೆರೆ ಪೊಲೀಸರಿಂದ ರಂಜಾನ್ ಹಬ್ಬಕ್ಕೆ ಫುಡ್ ಕಿಟ್ ವಿತರಣೆ

    ದಾವಣಗೆರೆ ಪೊಲೀಸರಿಂದ ರಂಜಾನ್ ಹಬ್ಬಕ್ಕೆ ಫುಡ್ ಕಿಟ್ ವಿತರಣೆ

    ದಾವಣಗೆರೆ: ರಂಜಾನ್ ಹಬ್ಬಕ್ಕೆ ದಾವಣಗೆರೆ ಪೊಲೀಸರು 50ಕ್ಕೂ ಹೆಚ್ಚು ಕುಟುಂಬಗಳಿಗೆ ಫುಡ್ ಕಿಟ್ ವಿತರಣೆ ಮಾಡಿದ್ದಾರೆ.

    ಲಾಕ್‍ಡೌನ್ ನಿಂದ ಕೂಲಿ ಮಾಡಿ ಜೀವನ ಸಾಗಿಸುತ್ತಿರುವ ಜನರಿಗೆ ಒಂದೊತ್ತಿನ ಊಟಕ್ಕೂ ಸಹ ಕಷ್ಟವಾಗುತ್ತದೆ. ರಂಜಾನ್ ಹಬ್ಬ ಬಂದಿದ್ದು, ಕೂಲಿ ಮಾಡುವ ಜನರು ಸಾಕಷ್ಟು ತೊಂದರೆ ಪಡುವಂತಾಗಿದೆ. ಇವರ ಕಷ್ಟವನ್ನು ನೋಡಿದ ದಾವಣಗೆರೆಯ ಅಜಾದ್ ನಗರ ಪೊಲೀಸ್ ಠಾಣೆಯ ಇನ್‍ಸ್ಪೆಕ್ಟರ್ ಶೈಲಜಾ ತಮ್ಮ ಸ್ವಂತ ಖರ್ಚಿನಲ್ಲಿ 50ಕ್ಕೂ ಹೆಚ್ಚು ಕುಟುಂಬಗಳಿಗೆ ಆಹಾರದ ಕಿಟ್ ವಿತರಣೆ ಮಾಡಿದರು.

    ಅಜಾದ್ ನಗರ, ಭಾಷಾ ನಗರ ಸೇರಿದಂತೆ ಹಲವು ಕಡೆಗಳಲ್ಲಿ ಕೂಲಿ ಮಾಡಿ ಜೀವನ ನಡೆಸುವ ಜನರೇ ಜಾಸ್ತಿ. ಈಗ ರಂಜಾನ್ ಹಬ್ಬ ಬಂದಿದ್ದರಿಂದ ಕೂಲಿ ಇಲ್ಲದೆ ಹಬ್ಬವನ್ನು ಆಚರಣೆ ಮಾಡಲು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರು. ಇದನ್ನು ಮನಗಂಡ ಪಿಎಸ್‍ಐ ಶೈಲಜಾ ರಂಜಾನ್ ಹಬ್ಬಕ್ಕೆ ಬೇಕಾಗುವ ಆಹಾರ ಸಾಮಗ್ರಿಗಳ ಕಿಟ್ ವಿತರಣೆ ಮಾಡಿದರು.

    ಪೊಲೀಸ್ ಅಧಿಕಾರಿಗಳ ಮೂಲಕ ಐವತ್ತಕ್ಕೂ ಹೆಚ್ಚು ಜನರಿಗೆ ಕಿಟ್ ವಿತರಣೆ ಮಾಡಿದರು. ಅಜಾದ್ ನಗರ ಪೊಲೀಸರ ಈ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಜನರು ಪ್ರಶಂಸೆ ವ್ಯಕ್ತವಾಗಿದೆ.

  • ಕ್ಷೇತ್ರದ 25 ಸಾವಿರ ಮಂದಿಗೆ ಆಹಾರ ಕಿಟ್ ವಿತರಿಸಿದ ಶಾಸಕ ರವೀಂದ್ರ ಶ್ರೀಕಂಠಯ್ಯ

    ಕ್ಷೇತ್ರದ 25 ಸಾವಿರ ಮಂದಿಗೆ ಆಹಾರ ಕಿಟ್ ವಿತರಿಸಿದ ಶಾಸಕ ರವೀಂದ್ರ ಶ್ರೀಕಂಠಯ್ಯ

    ಮಂಡ್ಯ: ರಾಜ್ಯದಲ್ಲಿ ಕಫ್ರ್ಯೂ ಜಾರಿ ಮಾಡಿರುವ ಪರಿಣಾಮ ಬಡವರು ಸಂಕಷ್ಟಕ್ಕೆ ಗುರಿಯಾಗಬಾರದು ಎಂದು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ವ್ಯಾಪ್ತಿಯಲ್ಲಿ ಬರುವ 25 ಸಾವಿರ ಬಡ ಕುಟುಂಬಗಳಿಗೆ ಹಾಗೂ ವೈದ್ಯಕೀಯ ಸಿಬ್ಬಂದಿಗೆ ಶಾಸಕ ರವೀಂದ್ರ ಶ್ರೀಕಂಠಯ್ಯ ರೇಷನ್ ಹಾಗೂ ತರಕಾರಿ ಕಿಟ್‍ನ್ನು ವಿತರಿಸಿದರು. ಶ್ರೀರಂಗಪಟ್ಟಣದ ರಂಗನಾಥಸ್ವಾಮಿ ದೇವಸ್ಥಾನದ ಮೈದಾನದಲ್ಲಿ ಸಾಂಕೇತಿಕವಾಗಿ ನೀಡಲಾಯಿತು.

    ಇದೇ ವೇಳೆ ವೈದ್ಯಕೀಯ ಸಿಬ್ಬಂದಿಗೆ ರೇಷನ್ ಹಾಗೂ ತರಕಾರಿಗಳು ನೀಡುವುದರ ಜೊತೆಗೆ ಅವರಿಗೆ ಆತ್ಮಸ್ಥೈರ್ಯ ತುಂಬಲು 5000 ರೂ. ನಗದು ಹಣವನ್ನು ಸಹ ನೀಡಲಾಯಿತು. ಈ ವೇಳೆ ಮಾಜಿ ಸಿಎಂ ಕುಮಾರಸ್ವಾಮಿ ಸೇರಿದಂತೆ ಹಲವು ಜೆಡಿಎಸ್ ನಾಯಕರು ಹಾಜರಿದ್ದರು.

    ಜನರಿಗೆ ಈ ಸಂದರ್ಭದಲ್ಲಿ ನಾವು ಸಹಾಯ ಮಾಡಬೇಕಾಗಿರುವುದು ನಮ್ಮ ಜವಾಬ್ದಾರಿ. ಎಲ್ಲಾ ಕ್ಷೇತ್ರದ ಜನರು ಇದೇ ರೀತಿಯ ಕೆಲಸ ಮಾಡಿ ಜನರಿಗೆ ಸಹಾಯ ಹಸ್ತ ಚಾಚಬೇಕಾಗಿದೆ. ಇದಲ್ಲದೆ ವೈದ್ಯಕೀಯ ಸಿಬ್ಬಂದಿಗೆ ಧೈರ್ಯ ತುಂಬುವುದು ಹಾಗೂ ಅವರನ್ನು ಗೌರವಿಸುವುದು ನಮ್ಮ ಕರ್ತವ್ಯ ನಮ್ಮದಾಗಿದೆ. ಅದಕ್ಕಾಗಿ ಅವರನ್ನು ಗೌರವಿಸಲಾಗಿದೆ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಹೇಳಿದರು.

  • ಹುಳುಬಿದ್ದ ಆಹಾರ ಕಿಟ್ ಹಂಚಿಕೆ – ಶಾಸಕ ಶಿವನಗೌಡ ನಾಯಕ್ ಮೇಲೆ ಆರೋಪ

    ಹುಳುಬಿದ್ದ ಆಹಾರ ಕಿಟ್ ಹಂಚಿಕೆ – ಶಾಸಕ ಶಿವನಗೌಡ ನಾಯಕ್ ಮೇಲೆ ಆರೋಪ

    ರಾಯಚೂರು: ಜಿಲ್ಲೆಯ ದೇವದುರ್ಗ ತಾಲೂಕಿನ ಮದರಕಲ್ ಗ್ರಾಮದಲ್ಲಿ ಶಾಸಕ ಶಿವನಗೌಡ ನಾಯಕ್ ವಿತರಿಸಿದ ಆಹಾರ ಕಿಟ್‍ನಲ್ಲಿ ಹುಳು, ನುಸಿ ಪತ್ತೆಯಾಗಿವೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

    ಲಾಕ್ ಡೌನ್ ಸಂದರ್ಭದಲ್ಲಿ ಹಟ್ಟಿ ಚಿನ್ನದಗಣಿ ಕಂಪನಿ ಬಡವರಿಗೆ ವಿತರಿಸಲು ನೀಡಿದ್ದ ಫುಡ್ ಕಿಟ್‍ಗಳನ್ನ ಹಂಚಲಾಗಿದ್ದು ಇದರಲ್ಲಿ ಹುಳು ಪತ್ತೆಯಾಗಿವೆ.

    ತಹಶೀಲ್ದಾರರ ಮುಖಾಂತರ ಬಡವರಿಗೆ ಹಂಚಿಕೆ ಮಾಡಲು ಕೊಟ್ಡಿದ್ದ 2 ಸಾವಿರ ಫುಡ್ ಕಿಟ್‍ನನ್ನು ಲಾಕ್ ಡೌನ್ ಸಂದರ್ಭದಲ್ಲಿ ವಿತರಿಸದೇ ಶನಿವಾ ಸ್ವತಃ ದೇವದುರ್ಗ ಶಾಸಕ ಶಿವನಗೌಡ ನಾಯಕ್ ವಿತರಿಸಿದ್ದರು. ಶಾಸಕ ಶಿವನಗೌಡ ವಿತರಿಸಿದ ಫುಡ್ ಕಿಟ್‍ಗಳಲ್ಲಿ ಹುಳು, ನುಸಿ ಪತ್ತೆಯಾಗಿದ್ದು, ಧಾನ್ಯಗಳು ಉಂಡೆಯಾಗಿದ್ದು ಬಳಸಲು ಯೋಗ್ಯವಾಗಿಲ್ಲದ್ದಾಗಿದೆ.

    ಹಾಳಾಗಿರುವ ಪದಾರ್ಥಗಳನ್ನು ವಿತರಣೆ ಮಾಡಿರುವುದಾಗಿ ಗ್ರಾಮಸ್ಥರು ಆರೋಪಿಸಿದ್ದಾರೆ. ಆಹಾರ ಕಿಟ್‍ನ್ನು ಮನೆಗೆ ತಂದು ನೋಡಿದಾಗ ಹಾಳಾದ ಪದಾರ್ಥಗಳನ್ನ ಕಂಡು ಶಾಸಕರಿಗೆ ಹಾಗೂ ಅಧಿಕಾರಿಗಳಿಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಪಬ್ಲಿಕ್ ಟಿವಿ ವರದಿಗೆ ಸ್ಪಂದನೆ – ಸಂತ್ರಸ್ತರಿಗೆ ದಾನಿಗಳಿಂದ ಆಹಾರ ಕಿಟ್ ವಿತರಣೆ

    ಪಬ್ಲಿಕ್ ಟಿವಿ ವರದಿಗೆ ಸ್ಪಂದನೆ – ಸಂತ್ರಸ್ತರಿಗೆ ದಾನಿಗಳಿಂದ ಆಹಾರ ಕಿಟ್ ವಿತರಣೆ

    ರಾಯಚೂರು: ಜಿಲ್ಲೆಯಲ್ಲಿ ಸುರಿದ ಅತಿಯಾದ ಮಳೆಗೆ ರಾಯಚೂರು ತಾಲೂಕಿನ ಇಡಪನೂರು ಗ್ರಾಮದ ಜನ ಅಕ್ಷರಶಃ ಬೀದಿಗೆ ಬಂದಿದ್ದರು. ಇಲ್ಲಿನ ಜನರ ಪರಸ್ಥಿತಿ ಬಗ್ಗೆ ಪಬ್ಲಿಕ್ ಟಿವಿ ವರದಿಯನ್ನು ಪ್ರಸಾರ ಮಾಡಿತ್ತು. ವರದಿಗೆ ಸ್ಪಂದಿಸಿದ ದಾನಿಗಳು ಸಂತ್ರಸ್ತರಿಗೆ ಆಹಾರ ಕಿಟ್ ಹಾಗೂ ಮಾಸ್ಕ್ ವಿತರಣೆ ಮಾಡಿದ್ದಾರೆ.

    ಅತೀವೃಷ್ಟಿಯಿಂದ ರಾಯಚೂರು ಜಿಲ್ಲೆ ಈಗ ತತ್ತರಿಸಿ ಹೋಗಿದೆ. ಕಳೆದ ತಿಂಗಳು ಸುರಿದ ಭಾರೀ ಮಳೆಗೆ ರಾಯಚೂರು ತಾಲೂಕಿನ ಬಹುತೇಕ ಹಳ್ಳಿಗಳು ಅಲ್ಲೋಲ ಕಲ್ಲೋಲವಾಗಿವೆ. ನೂರಾರು ಮನೆಗಳು ಬಿದ್ದಿವೆ, ಸಾವಿರಾರು ಎಕ್ರೆ ಜಮೀನು ಹಾಳಾಗಿದೆ. ರೈತರ ಬದುಕು ಬೀದಿಗೆ ಬಂದಿದೆ. ಇಲ್ಲಿನ ಇಡಪನೂರು ಗ್ರಾಮದ ಪರಸ್ಥಿತಿಯಂತೂ ಹೇಳತೀರದು. ಗ್ರಾಮದಲ್ಲಿ 56 ಮನೆಗಳು ಸಂಪೂರ್ಣ ಕುಸಿದು ಬಿದ್ದಿದ್ದು 100ಕ್ಕೂ ಹೆಚ್ಚು ಮನೆಗಳು ಭಾಗಶಃ ಕುಸಿದಿವೆ. ಹೀಗಾಗಿ ಜನ ಸೂರಿಲ್ಲದೆ ಸಂತ್ರಸ್ತರಾಗಿದ್ದಾರೆ.

    ಜಿಲ್ಲಾಡಳಿತ ಒಂದೆರಡು ಬಾರಿ ದಿನಸಿ ಪದಾರ್ಥ ನೀಡಿ ಕೈ ತೊಳೆದುಕೊಂಡಿತ್ತು. ಗ್ರಾಮದ ಶಾಲೆ, ಸಮುದಾಯ ಭವನದಲ್ಲಿ ಸಂತ್ರಸ್ತರು ಒಂದು ತಿಂಗಳಿಂದ ಆಶ್ರಯ ಪಡೆದಿದ್ದಾರೆ. ಆದರೆ ಊಟಕ್ಕೆ ಕಷ್ಟಪಡುತ್ತಿದ್ದರು. ಈ ಕುರಿತು ಪಬ್ಲಿಕ್ ಟಿವಿ ವರದಿ ಪ್ರಸಾರ ಮಾಡಿತ್ತು. ವರದಿಗೆ ಸ್ಪಂದಿಸಿ ದಾನಿಗಳು ಸಂತ್ರಸ್ತರಿಗೆ ಆಹಾರ ಕಿಟ್ ವಿತರಣೆ ಮಾಡಿದ್ದಾರೆ. ರಾಯಚೂರು ರೋಟರಿ ಕ್ಲಬ್ ಹಾಗೂ ಸಾವಿತ್ರಿ ಗ್ರೂಪ್ ರಾಯಚೂರು ಸಹಯೋಗದಲ್ಲಿ ಆಹಾರ ಕಿಟ್ ವಿತರಿಸಲಾಯಿತು.

    ಪಬ್ಲಿಕ್ ಟಿವಿ ವರದಿ ಬಳಿಕ ಜಿಲ್ಲಾಡಳಿತ ಸಹ ಎಚ್ಚೆತ್ತು ಸಂತ್ರಸ್ತರು ಶೆಡ್ ನಿರ್ಮಿಸಿಕೊಳ್ಳಲು ಟಿನ್ ಹಾಗೂ ಪೊಲೀಸ್ ವಿತರಣೆ ಮಾಡಿದ್ದಾರೆ. ಆದರೆ ಸಂಪೂರ್ಣ ಮನೆಗಳು ಬಿದ್ದು ಮನೆಯಲ್ಲಿನ ದವಸ ಧಾನ್ಯವನ್ನೂ ಕಳೆದುಕೊಂಡ ಜನ ಊಟಕ್ಕೆ ಪರದಾಡುವ ಸ್ಥಿತಿಯಿದೆ. ಪ್ರತಿದಿನ ಕೂಲಿ ಕೆಲಸ ಮಾಡಿಕೊಂಡು ಊಟ ಮಾಡುತ್ತಿದ್ದಾರೆ. ಶಾಲೆ ಸಮುದಾಯ ಭವನದಲ್ಲೇ ವಾಸವಾಗಿದ್ದಾರೆ. ಆದರೆ ಈಗ ಮತ್ತೆ ಮಳೆ ಬಂದಿದ್ದರಿಂದ ಕೂಲಿ ಕೆಲಸವೂ ಇಲ್ಲದೆ ಒಂದೊತ್ತಿನ ಊಟಕ್ಕೆ ಕಷ್ಟಪಡುತ್ತಿದ್ದರು. ಸಂತ್ರಸ್ತರ ಸಂಕಷ್ಟದ ಬಗ್ಗೆ ಪಬ್ಲಿಕ್ ಟಿವಿ ಪ್ರಸಾರ ಮಾಡಿದ ವರದಿಗೆ ಸ್ಪಂದನೆ ಸಿಕ್ಕಿದ್ದರಿಂದ ನಿರಾಶ್ರಿತರಿಗೆ ಆಹಾರದ ಕಿಟ್ ಸಿಕ್ಕಿದ್ದು ಸಂತಸ ವ್ಯಕ್ತಪಡಿಸಿದ್ದಾರೆ.

  • ರೇಷನ್ ಕೊಡುವಂತೆ ಮನವಿ – ಫುಡ್ ಕಿಟ್ ನೀಡೋಕೆ ಹೋದವನನ್ನೇ ಮದ್ವೆಯಾದ್ಳು

    ರೇಷನ್ ಕೊಡುವಂತೆ ಮನವಿ – ಫುಡ್ ಕಿಟ್ ನೀಡೋಕೆ ಹೋದವನನ್ನೇ ಮದ್ವೆಯಾದ್ಳು

    – ಮೂರು ಮದ್ವೆಯಾಗಿದ್ರೂ ಯುವಕನಿಗೆ ಬ್ಲ್ಯಾಕ್‍ಮೇಲ್
    – ಲಾಕ್‍ಡೌನ್ ನಲ್ಲಿ ನಾಲ್ಕನೇ ಮದ್ವೆ

    ಭೋಪಾಲ್: ಲಾಕ್‍ಡೌನ್ ನಲ್ಲಿ ಬಡವರಿಗೆ ಪಡಿತರ ವಿತರಿಸುತ್ತಿದ್ದ ಯುವಕನನ್ನ ಮೋಸದಿಂದ ಮಹಿಳೆಯೊಬ್ಬರು ಮದುವೆಯಾಗಿರುವ ಘಟನೆ ಮಧ್ಯ ಪ್ರದೇಶದ ಭೋಪಾಲ್ ನಗರದ ಜಹಾಂಗೀರಬಾದ್ ನಲ್ಲಿ ನಡೆದಿದೆ.

    ಸಂತ್ರಸ್ತ ಯುವಕ ಲಾಕ್‍ಡೌನ್ ಸಮಯದಲ್ಲಿ ಬಡವರಿಗೆ ಆಹಾರ ವಿತರಣೆ ಮಾಡುತ್ತಿದ್ದನು. ಒಂದು ದಿನ ಯುವಕನಿಗೆ ಕರೆ ಮಾಡಿದ ಮಹಿಳೆ, ತನಗೆ ರೇಷನ್ ನೀಡುವಂತೆ ಮನವಿ ಮಾಡಿಕೊಂಡಿದ್ದಳು. ಫುಡ್ ಕಿಟ್ ತೆಗೆದುಕೊಂಡ ಯುವಕ ಮಹಿಳೆ ಮನೆಗೆ ಹೋಗಿದ್ದನು. ಈ ವೇಳೆ ಮಹಿಳೆ ಆತನ ಜೊತೆ ಕೆಲ ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದಾಳೆ.

    ಅದೇ ಫೋಟೋಗಳನ್ನು ತೋರಿಸಿ ಯುವಕನಿಗೆ ಮಹಿಳೆ ಬ್ಲ್ಯಾಕ್‍ಮೇಲ್ ಮಾಡಿ ತನ್ನನ್ನು ಮದುವೆಯಾಗುವಂತೆ ಒತ್ತಡ ಹಾಕಿದ್ದಾಳೆ. ಮದುವೆಯಾಗದಿದ್ರೆ ಪೊಲೀಸ್ ಠಾಣೆಯಲ್ಲಿ ನಿನ್ನ ವಿರುದ್ಧ ದೂರು ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಾಳೆ. ಒತ್ತಡದಲ್ಲಿ ಸಿಲುಕಿದ ಯುವಕ ಆಕೆಯನ್ನ ಮದುವೆಯಾಗಿದ್ದಾನೆ. ಕೆಲ ದಿನಗಳ ನಂತರ ಮಹಿಳೆ ಮೂರು ಮದುವೆಯಾಗಿರುವ ವಿಷಯ ಯುವಕನಿಗೆ ತಿಳಿದಿದೆ.

    ಹಣಕ್ಕಾಗಿ ಮಹಿಳೆ ತನ್ನನ್ನು ಮದುವೆಯಾಗಿರುವ ವಿಷಯ ಸಂತ್ರಸ್ತನಿಗೆ ತಿಳಿದಿದೆ. ಆದ್ರೂ ಯುವಕ ಮರ್ಯಾದೆಗೆ ಹೆದರಿಗೆ ಯುವಕ ಆಕೆಗೆ ಹಣ ನೀಡಿದ್ದಾನೆ. ಮಹಿಳೆ ಹಣ ನೀಡಲು ತನ್ನ ಅಂಗಡಿ ಸಹ ಒತ್ತೆ ಇಟ್ಟಿದ್ದಾನೆ. ಮಹಿಳೆ ಕಿರುಕುಳದಿಂದ ಬೇಸತ್ತ ಯುವಕ ಆಕೆಯಿಂದ ಬಿಡುಗಡೆ ಪಡೆಯಲು ಕಾನೂನು ತಜ್ಞರ ಸಲಹೆ ಪಡೆದುಕೊಂಡಿದ್ದಾನೆ.

    ಡಿಐಜಿ ಮತ್ತು ಪೊಲೀಸರ ಮುಂದೆಯೂ ಯುವಕ ನಡೆದ ಘಟನೆ ವಿವರಿಸಿದ್ದಾನೆ. ಆದ್ರೆ ಯುವಕನ ಬಳಿ ಯಾವುದೇ ದಾಖಲೆಗಳು ಇರದ ಹಿನ್ನೆಲೆ ಪ್ರಕರಣ ದಾಖಲಾಗಿರಲಿಲ್ಲ. ಇದೀಗ ಜಿಲ್ಲಾಧಿಕಾರಿಗಳ ಕಚೇರಿಯ ಸೂಚನೆ ಮೇರೆಗೆ ಮಹಿಳೆ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಬ್ಲಾಕ್‍ಮೇಲ್ ಹಣದಲ್ಲಿ ಪಡಿತರ ವಿತರಿಸಿ ಫೋಟೋಗೆ ಪೋಸ್ ಕೊಟ್ಟ ಬಿಜೆಪಿ ಸಂಸದನ ಪುತ್ರ

    ಬ್ಲಾಕ್‍ಮೇಲ್ ಹಣದಲ್ಲಿ ಪಡಿತರ ವಿತರಿಸಿ ಫೋಟೋಗೆ ಪೋಸ್ ಕೊಟ್ಟ ಬಿಜೆಪಿ ಸಂಸದನ ಪುತ್ರ

    -ಸಂಸದರ ಪುತ್ರನ ಬ್ಲಾಕ್‍ಮೇಲ್ ಆಡಿಯೋ ಔಟ್
    -ವರ್ಗಾವಣೆ ಮಾಡದೇ ಇರಲು ಲಕ್ಷ ಲಕ್ಷ ಬೇಡಿಕೆಯ ಆರೋಪ

    ಕೊಪ್ಪಳ: ಕೊರೊನಾ ಮಹಾಮಾರಿಯಿಂದ ಸಾಕಷ್ಟು ಬಡ ಕುಟುಂಬಗಳು, ಕೂಲಿ ಕಾರ್ಮಿಕರು, ನಿರ್ಗತಿಕರು ತುತ್ತು ಅನ್ನಕ್ಕಾಗಿ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಂತವರ ಸಹಾಯಕ್ಕಾಗಿ ಸಾಕಷ್ಟು ಸಂಘ ಸಂಸ್ಥೆಗಳು, ಸಾರ್ವಜನಿಕರು ಸ್ವಯಪ್ರೇರಿತರಾಗಿ ಮುಂದೆ ಬಂದು ತಮ್ಮ ತಮ್ಮ ಸ್ವಂತ ಖರ್ಚಿನಲ್ಲಿ ಸಹಾಯ ಮಾಡಿ ಬಡವರ ಮತ್ತು ನಿರ್ಗತಿಕರಿಗೆ ಹಸಿವು ನೀಗಿಸಿದ್ದಾರೆ. ಆದರೆ ಕೊಪ್ಪಳ ಸಂಸದರ ಪುತ್ರ ಬಡವರಿಗೆ ಸಹಾಯದ ಹೆಸರಿನಲ್ಲಿ ಅಧಿಕಾರಿಗಳಿಗೆ ಬ್ಲಾಕ್ ಮೇಲ್ ಮಾಡಿ, ಅವರಿಂದ ತೆಗೆದುಕೊಂಡ ಸಾಮಗ್ರಿಗಳನ್ನ ಬಡವರಿಗೆ ಹಂಚಿ ಪೋಸ್ ಗಿಟ್ಟಿಸಿಕೊಂಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

    ಕೊಪ್ಪಳ ಸಂಸದ ಕರಡಿ ಸಂಗಣ್ಣರವರ ಪುತ್ರ ಅಮರೇಶ್ ಕರಡಿ ಫೋಟೋಗೆ ಪೋಸ್ ಕೊಟ್ಟ ಲೀಡರ್. ರಾಜ್ಯದಲ್ಲಿ ಯಾವಾಗ ಬಿಜೆಪಿ ಸರ್ಕಾರ ಬಂತೋ ಅಂದಿನಿಂದ ಕೊಪ್ಪಳದಲ್ಲಿ ಸಂಸದ ಕರಡಿ ಸಂಗಣ್ಣ ಪುತ್ರ ಅಮರೇಶ್ ಕರಡಿ ಪ್ರಭಾವ ಜೋರಾಗಿಯೇ ನಡೆಯುತ್ತಿದೆ. ಜಿಲ್ಲೆಯಲ್ಲಿ ಅಮರೇಶ್ ಕರಡಿ ತಾವೇ ಜಿಲ್ಲಾ ಉಸ್ತುವಾರಿ ಮಂತ್ರಿ ಎಂಬಂತೆ ನಡೆದುಕೊಳ್ಳುತ್ತಿದ್ದಾರೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಜೋರಾಗಿ ಕೇಳಿ ಬರುತ್ತಿದೆ.

    ಲಾಕ್‍ಡೌನ್ ವೇಳೆ ಬಡವರಿಗೆ ನೀಡಿದ ಅಹಾರದ ಕಿಟ್ ವಿತರಣೆಯಲ್ಲಿ ಭಾರಿ ಗೋಲ್‍ಮಾಲ್ ಮಾಡಿದ್ದಾರೆ. ಬಡವರಿಗೆ ನೀಡಿದ ದಿನಸಿ ಕಿಟ್ ವಿತರಣೆ ಮಾಡಿದ್ದು, ಜಿಲ್ಲೆಯ ಅಧಿಕಾರಿಗಳ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳಿಂದ ವಸೂಲಿ ಮಾಡಿ ತಮ್ಮ ಫೋಟೋ ಅಂಟಿಸಿಕೊಂಡು ಫೋಸ್ ನೀಡಿದ್ದಾರೆ ಎಂಬ ಆರೋಪಕ್ಕೆ ಪೂರಕ ಎಂಬಂತೆ ಅಮರೇಶ್ ಕರಡಿ ಮಾತನಾಡಿದ ಆಡಿಯೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಕೊಪ್ಪಳ ಡಿವೈಎಸ್ಪಿ ವೆಂಕಟಪ್ಪ ನಾಯಕ

    ಗಂಗಾವತಿ ಡಿವೈಎಸ್ಪಿ ಚಂದ್ರಶೇಖರ್ ಅವರೊಂದಿಗೆ ಫೋನ್ ಮೂಲಕ ಮಾತನಾಡಿ ಲಾಕ್‍ಡೌನ್ ಇದೆ. ನಿಮ್ಮಿಂದ ಟನ್ ಗಟ್ಟಲೆ ಅಕ್ಕಿ ಪೂರೈಸಿ ಕೊಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಈಗಾಗಲೇ ಕೊಪ್ಪಳ ಡಿವೈಎಸ್ಪಿ, ಸೇರಿದಂತೆ ಪೊಲೀಸ್ ಅಧಿಕಾರಿಗಳು ಹಣ ಮತ್ತು ಸಾಮಗ್ರಿಗಳನ್ನು ನೀಡಿದ್ದಾರೆ. ನೀವು ಕೂಡ ನೀಡಬೇಕು ಎಂದು ಆಡಿಯೋದಲ್ಲಿ ಮಾತನಾಡಿದ್ದಾರೆ.

    50 ಟನ್ ಅಕ್ಕಿಯ ಹಣವನ್ನು ಗಂಗಾವತಿ ಡಿವೈಎಸ್ಪಿ ಚಂದ್ರಶೇಖರ್ ಅವರು ಅಮರೇಶ್ ಕರಡಿಗೆ ನೀಡಿದ್ದಾರೆ. ನಂತರ ಡಿವೈಎಸ್ಪಿಯಾಗಿ ಗಂಗಾವತಿಯಲ್ಲಿ ಮುಂದುವರಿಯಬೇಕು ಅಂದ್ರೆ ಹಣ ನೀಡಬೇಕು ಎನ್ನುವ ಆರೋಪ ಕೇಳಿ ಬಂದಿದೆ. ರಾಜ್ಯ ಸರ್ಕಾರ ಡಿವೈಎಸ್ಪಿ ಗಳ ಮಾಡಿದ ವರ್ಗಾವಣೆ ಯಲ್ಲಿ ಗಂಗಾವತಿ ಡಿವೈಎಸ್ಪಿ ಚಂದ್ರಶೇಖರ್ ಬಿ.ಪಿ ಹೆಸರು ಪ್ರಕಟಗೊಂಡಿದ್ದು ಇದಕ್ಕೆ ಪುಷ್ಟಿ ನೀಡುವಂತಿದೆ ಎಂಬ ಮಾತು ಈಗ ಪೊಲೀಸ್‌ ವಲಯದಿಂದ ಕೇಳಿಬಂದಿದೆ.

    ಕೊಪ್ಪಳ ಡಿವೈಎಸ್ಪಿ ವೆಂಕಟಪ್ಪ ನಾಯಕ ಕೂಡ ಅವಧಿ ಒಂದು ವರ್ಷ ಮುಗಿದಿದೆ. ಆದರೆ ಕೊಪ್ಪಳ ಸಂಸದರ ಪುತ್ರನ ಜೊತೆ ಉತ್ತಮ ಸಂಬಂಧ ಇರುವ ಕಾರಣಕ್ಕೆ ಅವರು ಕೊಪ್ಪಳ ಡಿವೈಎಸ್ಪಿಯಾಗಿ ಮುಂದುವರಿದಿದ್ದಾರೆ ಎಂದು ಜಿಲ್ಲೆಯಲ್ಲಿ ಜನರು ಮಾತನಾಡಿಕೊಳ್ಳುತ್ತಿದ್ದಾರೆ. ವರ್ಗಾವಣೆ ತಡೆಯಲು ಅಮರೇಶ್ ಕರಡಿ ಡಿವೈಎಸ್ಪಿ ಚಂದ್ರಶೇಖರ್ ಬಳಿ 50 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದರು ಎಂಬ ಗಂಭೀರ ಆರೋಪ ಕೂಡ ಕೇಳಿ ಬರುತ್ತಿದೆ.

    ಈಗ ಗಂಗಾವತಿ ಡಿವೈಎಸ್ಪಿ ವರ್ಗಾವಣೆ ಗೊಂಡಿದ್ದು, ಅವರೊಂದಿಗೆ ಲಾಕ್‍ಡೌನ್ ಅವಧಿಯಲ್ಲಿ ಅಕ್ಕಿ ಪೂರೈಸುವಂತೆ ಪೀಡಿಸಿದ ಆಡಿಯೋ ರಿವೀಲ್ ಆಗಿದ್ದು, ಎಲ್ಲರನ್ನ ಅನುಮಾನ ಮೂಡಿಸುವಂತೆ ಮಾಡಿದೆ. ಡಿವೈಎಸ್ಪಿ ಈಗಾಗಲೇ ಒಂದು ವರ್ಷ ಗಂಗಾವತಿಯಲ್ಲಿ ಮುಗಿಸಿದ್ದಾರೆ. ಸರ್ಕಾರ ಆದೇಶ ಒಂದು ವರ್ಷದ ನಂತರ ಅಧಿಕಾರಿಯನ್ನು ವರ್ಗಾವಣೆ ಮಾಡಬಹುದಾಗಿದೆ. ಅಲ್ಲಿಯೇ ಮುಂದುವರಿಯಬೇಕು ಅಂದರೆ ಜನಪ್ರತಿನಿಧಿಗಳ ಮಾತು ಕೇಳಲೇಬೇಕು. ಇಲ್ಲ ಅಂದ್ರೆ ಅವರ ತಮಗೆ ಯಾರು ಅನುಕೂಲ ಆಗುತ್ತಾರೆ ಅವರನ್ನು ವರ್ಗಾವಣೆ ಮಾಡಿಸಿಕೊಳ್ಳುತ್ತಾರೆ. ಒಟ್ಟಿನಲ್ಲಿ ಜಿಲ್ಲೆಯಲ್ಲಿ ಕೊಪ್ಪಳ ಸಂಸದನ ಪುತ್ರನ  ದರ್ಬಾರ್ ಜಾಸ್ತಿಯಾಗಿದೆ ಎನ್ನುವ ಮಾತುಗಳು ಈಗ ಹೆಚ್ಚಾಗಿ ಕೇಳಿ ಬರುತ್ತಿದೆ.

  • ನಡುಗಡ್ಡೆಯಲ್ಲಿ ಸಿಲುಕಿದವರಿಗೆ ಡ್ರೋನ್ ಮೂಲಕ ಔಷಧಿ, ಆಹಾರ

    ನಡುಗಡ್ಡೆಯಲ್ಲಿ ಸಿಲುಕಿದವರಿಗೆ ಡ್ರೋನ್ ಮೂಲಕ ಔಷಧಿ, ಆಹಾರ

    ರಾಯಚೂರು: ಜಿಲ್ಲೆಯ ಲಿಂಗಸುಗೂರಿನ ಕೃಷ್ಣಾ ನದಿಯ ನಡುಗಡ್ಡೆ ಕಡದರಗಡ್ಡಿಯಲ್ಲಿ ಸಿಲುಕಿರುವ ನಾಲ್ಕು ಜನ ಆಹಾರ, ಔಷಧಿ ಇಲ್ಲದೆ ಪರದಾಡುತ್ತಿರುವ ಹಿನ್ನಲೆ ಡ್ರೋನ್ ಬಳಸಿ ಅಗತ್ಯ ವಸ್ತುಗಳನ್ನು ರವಾನಿಸಲಾಗುತ್ತಿದೆ. ಜಿಲ್ಲಾಡಳಿತ ಸದ್ಯ ಡ್ರೋನ್ ಮೂಲಕ ಮಾತ್ರೆಗಳನ್ನು ರವಾನಿಸಿದ್ದು, ಆಹಾರ ನೀಡಲು ತಯಾರಿ ನಡೆಸಿದ್ದಾರೆ.

    ನದಿಯಲ್ಲಿ ಕಲ್ಲು ಬಂಡೆ ಹೆಚ್ಚು ಇರುವುದರಿಂದ ರಕ್ಷಣಾ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ಅಲ್ಲದೆ ನದಿಯಲ್ಲಿ ನೀರಿನ ಸೆಳೆತ ಕೂಡ ಹೆಚ್ಚಾಗಿದೆ. ಹೀಗಾಗಿ ರಕ್ಷಣಾ ಕಾರ್ಯಾಚರಣೆ ಸಾಧ್ಯವಾಗುತ್ತಿಲ್ಲ. ಜಾನುವಾರು ಹಾಗೂ ಜಮೀನಿಗಾಗಿ ನಾಲ್ಕು ಜನ ಗಡ್ಡೆಯಲ್ಲಿಯೇ ಉಳಿದಿದ್ದಾರೆ. ಈಗ ವಾಪಸ್ ಬರಲು ಸಾಧ್ಯವಾಗದೆ ಪರದಾಡುತ್ತಿದ್ದಾರೆ.

    ನಾಲ್ವರ ಪೈಕಿ ತಿಪ್ಪಣ್ಣ ಅವರಿಗೆ ಪಾರ್ಶ್ವವಾಯು ಇರುವುದರಿಂದ ತುರ್ತು ಔಷಧಿ ಅಗತ್ಯವಿದೆ. ಅಲ್ಲದೆ ಮೈ-ಕೈ ನೋವು ಎಂದು ಹೇಳಿದ ಹಿನ್ನಲೆ ಡ್ರೋನ್ ಬಳಸಿ ಹದಿನೈದು ದಿನಗಳಿಗೆ ಆಗವಷ್ಟು ಮಾತ್ರೆಯನ್ನು ತಾಲೂಕು ಆಡಳಿತ ಕಳುಹಿಸಿಕೊಟ್ಟಿದೆ.

    ಆಹಾರ ಪದಾರ್ಥಗಳನ್ನೂ ಸಹ ಡ್ರೋನ್ ಮೂಲಕ ಕಳುಹಿಸಲು ಅಧಿಕಾರಿಗಳು ಮುಂದಾಗಿದ್ದಾರೆ. ರಾಯಚೂರು ಕೃಷಿ ವಿವಿಯಲ್ಲಿರುವ ದ್ರೋನ್ ನ್ನು ನಡುಗಡ್ಡೆಯ ಜನರಿಗಾಗಿ ಬಳಕೆ ಮಾಡಲಾಗಿದೆ. ಕೃಷಿ ವಿಶ್ವವಿದ್ಯಾಲಯದ ತಂತ್ರಜ್ಞರ ಮಾರ್ಗದರ್ಶನದಲ್ಲಿ ದ್ರೋನ್ ಬಳಕೆ ಮಾಡಲಾಗುತ್ತಿದೆ. ಜಮೀನಿನಲ್ಲಿನ ಬೆಳೆಗಳಿಗೆ ಔಷಧಿ ಸಿಂಪಡಣೆ ಮಾಡಲು ತಯಾರಿಸಿದ ಡ್ರೋನ್ ಮಾದರಿಯನ್ನು ಇದೇ ಪ್ರಥಮ ಬಾರಿಗೆ ನಡುಗಡ್ಡೆಯಲ್ಲಿದ್ದವರಿಗೆ ಸಹಾಯ ಮಾಡಲು ಬಳಸಲಾಗಿದೆ. ಸುಮಾರು ಐದು ಕೆ.ಜಿ.ತೂಕದ ವಸ್ತುಗಳನ್ನು ಹೊತ್ತೊಯ್ಯುವ  ಸಾಮರ್ಥ್ಯವನ್ನು ಈ ಡ್ರೋನ್ ಹೊಂದಿದೆ.

  • ಚಿರು, ಸುಶಾಂತ್ ನೆನಪಿನಲ್ಲಿ ಮಾನವೀಯತೆ ಮೆರೆದ ಪ್ರಣಿತಾ

    ಚಿರು, ಸುಶಾಂತ್ ನೆನಪಿನಲ್ಲಿ ಮಾನವೀಯತೆ ಮೆರೆದ ಪ್ರಣಿತಾ

    ಬೆಂಗಳೂರು: ನಟ ಚಿರಂಜೀವಿ ಸರ್ಜಾ ಮತ್ತು ಬಾಲಿವುಡ್ ಸುಶಾಂತ್ ಸಿಂಗ್ ರಜಪೂತ್ ನೆನಪಿನಲ್ಲಿ ನಟಿ ಪ್ರಣಿತಾ ಬಡವರಿಗೆ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

    ನಟಿ ಪ್ರಣಿತಾ ಸುಭಾಷ್ ಕೊರೊನಾ ಲಾಕ್‍ಡೌನ್ ಸಮಯದಲ್ಲಿ ಸಂಕಷ್ಟದಲ್ಲಿರುವ ಜನರಿಗೆ ಆಹಾರ ಪದಾರ್ಥಗಳು, ರೇಷನ್ ಮುಂತಾದವುಗಳನ್ನು ವಿತರಿಸುವ ಮೂಲಕ ಸಹಾಯ ಹಸ್ತ ಚಾಚಿದ್ದರು. ಇದೀಗ ಮತ್ತೆ ನೂರಾರು ಬಡ ಮಹಿಳೆಯರಿಗೆ, ಲೈಂಗಿಕ ಕಾರ್ಯಕರ್ತೆಯರಿಗೆ ಚಿರಂಜೀವಿ ಸರ್ಜಾ ಮತ್ತು ಸುಶಾಂತ್ ಸಿಂಗ್ ರಜಪೂತ್ ಹೆಸರಿನಲ್ಲಿ ರೇಷನ್ ಕಿಟ್ ಹಂಚಿದ್ದಾರೆ.

    ಈ ಬಗ್ಗೆ ಟ್ವೀಟ್ ಮಾಡಿರುವ ನಟಿ “ದೇವರಿಗೆ ಹತ್ತಿರವಾಗಿರುವ ಚಿರಂಜೀವಿ ಸರ್ಜಾ ಮತ್ತು ಸುಶಾಂತ್ ಸಿಂಗ್ ರಜಪೂತ್ ನೆನಪಲ್ಲಿ ನಾವು ಕಷ್ಟದಲ್ಲಿರುವವರಿಗೆ, ಲೈಂಗಿಕ ಕಾರ್ಯಕರ್ತೆಯರಿಗೆ 150ಕ್ಕೂ ಹೆಚ್ಚು ರೇಷನ್ ಕಿಟ್‍ಗಳು ಮತ್ತು ಸ್ಯಾನಿಟರಿ ಪ್ಯಾಡ್‍ಗಳನ್ನು ಹಂಚಿದ್ದೇವೆ” ಎಂದು ಪ್ರಣಿತಾ ತಿಳಿಸಿದ್ದಾರೆ.

    ಅಲ್ಲದೇ ತಮಗೆ ಪ್ರೇರಣೆಯಾದ ವ್ಯಕ್ತಿಯ ಬಗ್ಗೆಯೂ ತಿಳಿಸಿದ್ದಾರೆ. ಸುಧಾ ಮೂರ್ತಿ ಅವರು ಸದಾ ಸಮಾಜದಲ್ಲಿ ಸಂಕಷ್ಟದಲ್ಲಿರುವ ಮಹಿಳೆಯರಿಗೆ ನೆರವಾಗುತ್ತಾರೆ. ಹೀಗಾಗಿ ಸುಧಾ ಮೂರ್ತಿ ಅವರೇ ನನಗೆ ಪ್ರೇರಣೆ. ಅವರ ಮಾರ್ಗದಲ್ಲೇ ಕೆಲ ಸಮಾಜಮುಖಿ ಕಾರ್ಯಗಳನ್ನು ಮಾಡಲು ಇಷ್ಟ ಪಡುತ್ತೇನೆ ಎಂದು ತಿಳಿಸಿದ್ದಾರೆ.

    ಭಾರತೀಯ ಚಿತ್ರರಂಗದ ಇಬ್ಬರು ಜನಪ್ರಿಯರು ತಾರೆಯರು ಅಗಲಿದ್ದಾರೆ. ಜೂನ್ 7 ರಂದು ನಟ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ. ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಜೂನ್ 14 ರಂದು ತಮ್ಮ ಅಪಾರ್ಟ್ ಮೆಂಟ್‍ನಲ್ಲಿ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ಫೌಂಡೇಷನ್ ಮೂಲಕ ನಟಿ ಪ್ರಣಿತಾ ನೂರಾರು ಬಡ ಮಹಿಳೆಯರಿಗೆ, ಲೈಂಗಿಕ ಕಾರ್ಯಕರ್ತೆಯರಿಗೆ ಚಿರಂಜೀವಿ ಸರ್ಜಾ ಮತ್ತು ಸುಶಾಂತ್ ಸಿಂಗ್ ರಜಪೂತ್ ಹೆಸರಿನಲ್ಲಿ ರೇಷನ್ ಕಿಟ್ ಹಂಚಿದ್ದಾರೆ.

    ನಟಿ ಪ್ರಣಿತಾ ಲಾಕ್‍ಡೌನ್ ಜಾರಿಯಾದಾಗಿನಿಂದಲೂ ಬಡವರಿಗೆ, ಕಷ್ಟದಲ್ಲಿರುವವರಿಗೆ, ಸಹಾಯ ಮಾಡುತ್ತಲೇ ಬಂದಿದ್ದಾರೆ. ಜನ ಸಾಮಾನ್ಯರಿಗೆ ಮಾತ್ರವಲ್ಲದೇ ಪೊಲೀಸ್ ಸಿಬ್ಬಂದಿಗೆ ಮಾಸ್ಕ್ ಮತ್ತು ಸ್ಯಾನಿಟೈಸರ್ ನೀಡಿದ್ದರು.

  • ‘ಮನೆಯೇ’ ಮಂತ್ರಾಲಯ ಇಂಪ್ಯಾಕ್ಟ್- ಬಾಲಕಿ ಮನವಿಗೆ ಮಹಾನಗರ ಪಾಲಿಕೆ ಸದಸ್ಯ ಸ್ಪಂದನೆ

    ‘ಮನೆಯೇ’ ಮಂತ್ರಾಲಯ ಇಂಪ್ಯಾಕ್ಟ್- ಬಾಲಕಿ ಮನವಿಗೆ ಮಹಾನಗರ ಪಾಲಿಕೆ ಸದಸ್ಯ ಸ್ಪಂದನೆ

    ಶಿವಮೊಗ್ಗ: ಕೊರೊನಾ ಲಾಕ್‍ಡೌನ್ ಪರಿಣಾಮ ತನ್ನ ತಂದೆಗೆ ಕೆಲಸವಿಲ್ಲದೆ ಊಟಕ್ಕೂ ತೊಂದರೆ ಇದೆ. ಹೀಗಾಗಿ ದಿನಸಿ ಕಿಟ್ ಕೊಡಿಸುವಂತೆ ಶಿವಮೊಗ್ಗದ ತ್ರಿಮೂರ್ತಿನಗರದ ಐಶ್ವರ್ಯ ಎಂಬ ಬಾಲಕಿ ಮನೆಯೇ ಮಂತ್ರಾಲಯ ಕಾರ್ಯಕ್ರಮಕ್ಕೆ ಫೋನ್ ಮಾಡಿ ಮನವಿ ಮಾಡಿಕೊಂಡಿದ್ದಳು.

    ಕಾರ್ಯಕ್ರಮ ವೀಕ್ಷಿಸಿದ್ದ ತ್ರಿಮೂರ್ತಿನಗರ ವಾರ್ಡಿನ ಮಹಾನಗರ ಪಾಲಿಕೆ ಸದಸ್ಯ ಧೀರರಾಜ್ ಹೊನ್ನುನವಿಲೆ ಅವರು ಬಾಲಕಿ ಐಶ್ವರ್ಯ ಮನೆಗೆ ದಿನಸಿ ಕಿಟ್ ನೊಂದಿಗೆ ಭೇಟಿ ನೀಡಿದ್ದಾರೆ. ಬಾಲಕಿಗೆ ಒಂದು ತಿಂಗಳಿಗೆ ಆಗುವಷ್ಟು ದಿನಸಿ ಪದಾರ್ಥ ವಿತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

    ಸಂಕಷ್ಟದಲ್ಲಿರುವ ಕುಟುಂಬಕ್ಕೆ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಸಹಾಯ ಮಾಡುವುದಾಗಿ ಹಾಗೂ ಬಾಲಕಿಯ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವು ನೀಡುವುದಾಗಿ ಸಹ ಪಾಲಿಕೆ ಸದಸ್ಯ ಭರವಸೆ ನೀಡಿದ್ದಾರೆ. ಅಲ್ಲದೆ ಪಬ್ಲಿಕ್ ಟಿವಿಯ ಕಾರ್ಯಕ್ಕೆ ಮೆಚ್ಚುಗೆ ಸಹ ವ್ಯಕ್ತಪಡಿಸಿದ್ದಾರೆ.