Tag: Food Kit

  • ಒಂದು ಲಕ್ಷ ದಿನಸಿ ಕಿಟ್ ವಿತರಿಸಿದ ಸಚಿವ ಬೈರತಿ ಬಸವರಾಜ

    ಒಂದು ಲಕ್ಷ ದಿನಸಿ ಕಿಟ್ ವಿತರಿಸಿದ ಸಚಿವ ಬೈರತಿ ಬಸವರಾಜ

    ಬೆಂಗಳೂರು: ಕೊರೊನಾ ಸೊಂಕು ನಿಯಂತ್ರಣ ಸಾಧಿಸಲು ರಾಜ್ಯ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಂಡಿರುವ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕೆ.ಆರ್‌.ಪುರ ವಿಧಾನ ಸಭಾ ಕ್ಷೇತ್ರದ ಬಡವರು, ಶ್ರಮಿಕ ವರ್ಗದವರು, ಕೂಲಿ ಕಾರ್ಮಿಕರಿಗೆ ಶಾಸಕರು ಹಾಗೂ ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ ಅವರು ಕ್ಷೇತ್ರದ ವ್ಯಾಪ್ತಿಯಲ್ಲಿ ಒಂದು ಲಕ್ಷ ಕುಟುಂಬಗಳಿಗೆ ಆಹಾರ ಪದಾರ್ಥಗಳ ದಿನಸಿ ಕಿಟ್ ವಿತರಿಸಿದರು.

    ಕೆ.ಆರ್.ಪುರ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕೊತ್ತನೂರಿನ ನಂಜುಂಡೇಶ್ವರ ಕಲ್ಯಾಣ ಮಂಟಪದಲ್ಲಿ ದಿನಸಿ ವಿತರಿಸಿ ಮಾತನಾಡಿದ ಬಸವರಾಜ ಅವರು ಇನ್ನೂ ಅಗತ್ಯ ಬಿದ್ದಲ್ಲಿ ಮತ್ತೆ ಬಡಜನರಿಗೆ ಕಿಟ್‌ ನೀಡುವುದಾಗಿ ಭರವಸೆ ನೀಡಿದರು. ಕ್ಷೇತ್ರದ ಎಲ್ಲರಿಗೂ ಕೊರೊನಾ ನಿಯಂತ್ರಣ ಲಸಿಕೆಯನ್ನು ನೀಡಲು ಕ್ರಮ ಕೈಗೊಳ್ಳಲಾಗಿದ್ದು, ಅದನ್ನು ಹಂತ ಹಂತವಾಗಿ ನೀಡಲಾಗುತ್ತದೆ ಎಂದರು.

    ಕೃಷ್ಣರಾಜಪುರ ಸಾರ್ವಜನಿಕ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸುವ ಗುರಿ ಹೊಂದಿದೆ. 200 ಹಾಸಿಗೆಗಳ ಆಸ್ಪತ್ರೆಗೆ ಉನ್ನತೀಕರಿಸಲು 13 ಕೋಟಿ ರೂಪಾಯಿಗಳು ವೆಚ್ಚವಾಗಲಿದೆ. ಐಟಿಐ ಆಸ್ಪತ್ರೆಯಲ್ಲಿ ಕೋವಿಡ್ ಆರೈಕೆ ಕೇಂದ್ರ ತೆರೆಯಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಕೇಂದ್ರ ಸರ್ಕಾರ ಅದಕ್ಕೆ ಒಪ್ಪಿಗೆ ನೀಡಿದೆ ಎಂದು ಹೇಳಿದರು.

    ಡಿವಿಎಸ್‌ ಭಾಗಿ: ಈ ವರ್ಷದ ಡಿಸೆಂಬರ್ ಅಂತ್ಯದ ವೇಳೆಗೆ ದೇಶದ 130 ಕೋಟಿ ಜನರಿಗೂ ಕೋವಿಡ್ ನಿಯಂತ್ರಣ ಲಸಿಕೆಯನ್ನು ನೀಡಲಾಗುವುದು ಎಂದು ಕೇಂದ್ರ ‌ ರಸಾಯನಿಕ ಮತ್ತು ರಸಗೊಬ್ಬರ ಸಚಿವರಾದ ಡಿ.ವಿ ಸದಾನಂದ ಗೌಡರು ಹೇಳಿದರು. ಜೂನ್ ಅಂತ್ಯದ ವೇಳೆಗೆ ರಾಜ್ಯಕ್ಕೆ ಕೇಂದ್ರದಿಂದ 50 ಲಕ್ಷ ಲಸಿಕೆ ನೀಡಲಾಗುತ್ತದೆ, ರಾಜ್ಯ ಸರ್ಕಾರ ಕೂಡ 15 ಲಕ್ಷ ಲಸಿಕೆಯನ್ನು ಖರೀದಿಸಲು ಮುಂದಾಗಿದೆ. ಈ ತಿಂಗಳಲ್ಲಿ ಒಟ್ಟು 65 ಲಕ್ಷ ದಷ್ಟು ಲಸಿಕೆ ರಾಜ್ಯಕ್ಕೆ ಲಭ್ಯವಾಗಲಿದೆ ಎಂದರು.

    ಕೊರೊನಾ ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಿರುವ ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ ಜನರಿಗೆ ಒಂದು ಲಕ್ಷ ಆಹಾರ ಪದಾರ್ಥಗಳನ್ನು ಬೈರತಿ ಬಸವರಾಜ ಅವರು ವಿತರಣೆ ಮಾಡುತ್ತಿರುವುದು ನಿಜವಾಗಿಯೂ ಒಂದು ಪುಣ್ಯದ ಕೆಲಸ ಎಂದರು.

    ಕ್ಷೇತ್ರದ ಜನ ಮತ ಹಾಕುವ ಮೂಲಕ ಅವರಿಗೆ ಆಶೀರ್ವಾದ ಮಾಡಿದ್ದೀರಿ. ಅವರು ನಿಮಗೆ ಇಂತಹ ಸಂದರ್ಭದಲ್ಲಿ ಸಹಾಯಕ್ಕೆ ಬಂದಿದ್ದಾರೆ. ಸದಾ ಜನರ ನಡುವೆ ಇರುವ ಬಸವರಾಜ ಅಂತಹವರು ಸಮಾಜಕ್ಕೆ ಅವಶ್ಯಕತೆ ಇದೆ. ಅವರಿಗೆ ತಮ್ಮ ಬೆಂಬಲ ಸದಾ ಇರಲಿ ಎಂದು ಅಶಿಸುತ್ತೇನೆ ಎಂದರು.

    ಕೆ.ಆರ್‌.ಪುರ ವಿಧಾನಸಭಾ ಕ್ಷೇತ್ರ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಒಂದು ವಿಧಾನಸಭಾ ಕ್ಷೇತ್ರವಾಗಿದೆ. ಇದನ್ನು ಸಚಿವರಾದ ಬಸವರಾಜ ಅವರು ಮಾದರಿ ಕ್ಷೇತ್ರವನ್ನಾಗಿ ಮಾಡಿದ್ದಾರೆ. ಈ ಭಾಗದ ಲೋಕಸಭಾ ಸದಸ್ಯನಾಗಿ ಮತ್ತು ಕೇಂದ್ರ ಸಚಿವನಾಗಿ ನನ್ನ ಬೆಂಬಲ, ಸಹಕಾರ ಈ ಕ್ಷೇತ್ರಕ್ಕೆ ಯಾವಾಗಲೂ ಇರುತ್ತದೆ ಎಂದು ಹೇಳಿದರು.

    ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕೊರೊನಾ ನಿಯಂತ್ರಣ ಕುರಿತು ಸಭೆ ಕರೆದಾಗಲೆಲ್ಲ ‌ನಾನು ಕೆ.ಆರ್.ಪುರ ‌ಕ್ಷೇತ್ರದ ಬಗ್ಗೆ ಮತ್ತು ಬೈರತಿ ಬಸವರಾಜ ಅವರು ಕೈಗೊಂಡಿರುವ ಕೆಲಸ ಕಾರ್ಯಗಳ ಬಗ್ಗೆ ಮಾಹಿತಿ ನೀಡುತ್ತೇನೆ. ಹೀಗಾಗಿ ಬಸವರಾಜ ಅವರ ಕಾರ್ಯವೈಖರಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೂ ತಿಳಿದಿದೆ ಎಂದರು.

  • ಪ್ರತಿ ತಾಲೂಕಿನಲ್ಲಿ ಮುಜರಾಯಿ ಅರ್ಚಕರಿಗೆ ಪಡಿತರ ವಿತರಣೆ: ಜೆ. ಮಂಜುನಾಥ್

    ಪ್ರತಿ ತಾಲೂಕಿನಲ್ಲಿ ಮುಜರಾಯಿ ಅರ್ಚಕರಿಗೆ ಪಡಿತರ ವಿತರಣೆ: ಜೆ. ಮಂಜುನಾಥ್

    ಬೆಂಗಳೂರು: ಕೋವಿಡ್ ಲಾಕ್‍ಡೌನ್ ನಿರ್ಬಂಧಗಳಿಂದಾಗಿ ಮುಜರಾಯಿ ಇಲಾಖೆ ಸೇರಿದ ದೇವಾಲಯಗಳಿಗೆ ಪೂಜಾ ಕೈಂಕರ್ಯಗಳನ್ನು ನಡೆಸುತ್ತಿದ್ದ ಅರ್ಚಕರ ಕುಟುಂಬಗಳು ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ಆದ್ದರಿಂದ ಜಿಲ್ಲಾಡಳಿತದಿಂದ ಪ್ರತಿ ತಾಲೂಕಿನಲ್ಲಿ ಅರ್ಚಕ ಕುಟುಂಬದವರಿಗೆ ಆಹಾರ ಧಾನ್ಯಗಳ ಪಡಿತರ ಕಿಟ್ ವಿತರಣೆ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳಾದ ಜೆ.ಮಂಜುನಾಥ್ ತಿಳಿಸಿದರು

    ಬೆಂಗಳೂರು ನಗರದ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿ ಇಂದು ಕೋವಿಡ್ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟದಲ್ಲಿರುವ ಅರ್ಚಕರ ಕುಟುಂಬಗಳಿಗೆ ಜಿಲ್ಲಾಡಳಿತದ ವತಿಯಿಂದ ಪಡಿತರ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು ಅರ್ಚಕರನ್ನು ಉದ್ದೇಶಿಸಿ ಮಾತನಾಡಿದರು.

    ಮುಜರಾಯಿ ಇಲಾಖೆಗೆ ಸೇರಿದ 82 ಮಂದಿ ಅರ್ಚಕರಿಗೆ ಪಡಿತರ ಕಿಟ್ ಗಳನ್ನು ಜಿಲ್ಲಾಧಿಕಾರಿಗಳು ವಿತರಿಸಿದರು. ಕೊರೊನಾ ಸಾಂಕ್ರಾಮಿಕ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ತಮ್ಮ ಮನೆಯಲ್ಲೇ ಇದ್ದು ಸರ್ಕಾರದ ಮಾರ್ಗಸೂಚಿಯನ್ನು ಪಾಲಿಸುವುದರ ಮೂಲಕ ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕೆಂದು ಅವರು ಮನವಿ ಮಾಡಿದರು.

    ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ರಂಗನಾಥ್, ತಹಶೀಲ್ದಾರ್ ನರಸಿಂಹಮೂರ್ತಿ, ಉಪ ತಹಶೀಲ್ದಾರ್ ಆದ ಅಶೋಕ್, ನಿರೀಕ್ಷಕರಾದ ಬಾಲಮುರಳಿಕೃಷ್ಣ, ಆಡಳಿತಾಧಿಕಾರಿ ಸೇರಿದಂತೆ ಮತ್ತಿತರು ಪಾಲ್ಗೊಂಡಿದ್ದರು.

  • ಮಂಗಳೂರಿನ ಪ್ರೆಸಿಡೆನ್ಸಿ ಶಿಕ್ಷಣ ಸಂಸ್ಥೆಯಿಂದ ಕೊರೊನಾ ಸಂತ್ರಸ್ತರಿಗೆ ದಿನಸಿ ಸಾಮಾಗ್ರಿ ಕಿಟ್

    ಮಂಗಳೂರಿನ ಪ್ರೆಸಿಡೆನ್ಸಿ ಶಿಕ್ಷಣ ಸಂಸ್ಥೆಯಿಂದ ಕೊರೊನಾ ಸಂತ್ರಸ್ತರಿಗೆ ದಿನಸಿ ಸಾಮಾಗ್ರಿ ಕಿಟ್

    – ಆಶಾ ಕಾರ್ಯಕರ್ತೆಯರಿಗೆ ಕೋವಿಡ್ ಸಂರಕ್ಷಣಾ ಸಲಕರಣೆ ವಿತರಣೆ

    ಮಂಗಳೂರು: ಬೆಂಗಳೂರಿನಲ್ಲಿ 100 ಆಮ್ಲಜನಕಯುಕ್ತ ಬೆಡ್ ಗಳು (ಎಚ್‍ಡಿಯುನೊಂದಿಗೆ) ಮತ್ತು ಕೋವಿಡ್ ಆಸ್ಪತ್ರೆಯನ್ನು ಸ್ಥಾಪಿಸುವ ಮೂಲಕ ಕೊರೊನಾ ಮಹಾಮಾರಿಯ ವಿರುದ್ಧದ ಹೋರಾಟದಲ್ಲಿ ಕೈ ಜೋಡಿಸಿರುವ ಪ್ರೆಸಿಡೆನ್ಸಿ ಗ್ರೂಪ್ ಆಫ್ ಇನ್ಸ್ಟಿಟ್ಯೂಷ ನ್ ಮಂಗಳೂರಿನ ನೀರುಮಾರ್ಗದ ಕೆಲರಾಯಿ ನಲ್ಲಿರುವ ತಮ್ಮ ಅಂಗ ಸಂಸ್ಥೆ ಯಾದ ಪ್ರೆಸಿಡೆನ್ಸಿ ಶಾಲೆ ಮತ್ತು ಪದವಿ ಪೂರ್ವ ಕಾಲೇಜು ವತಿಯಿಂದ ನೀರುಮಾರ್ಗ ಪಂಚಾಯತ್ ಸಹಯೋಗ ದೊಂದಿಗೆ ನೀರುಮಾರ್ಗ ಗ್ರಾಮ ಪಂಚಾಯತ್‍ನ 100 ಕೊರೋನಾ ಸಂತ್ರಸ್ತರಿಗೆ ದಿನಸಿ ಸಾಮಾಗ್ರಿಗಳ ಕಿಟ್ ಹಾಗೂ 11ಆಶಾ ಕಾರ್ಯಕರ್ತೆಯರಿಗೆ ಪಿಪಿಇ ಕಿಟ್, ಆಕ್ಸಿಮೀಟರ್ ಗಳನ್ನು ಶಾಲಾ ವಠಾರದಲ್ಲಿಂದು ವಿತರಿಸಲಾಯಿತು.

    ಪ್ರೆಸಿಡೆನ್ಸಿ ಶಾಲೆ ಮತ್ತು ಪದವಿ ಪೂರ್ವ ಕಾಲೇಜು ಸ್ಥಳೀಯ ಗ್ರಾಮ ಪಂಚಾಯತ್ ಸಹಯೋಗ ದೊಂದಿಗೆ ಅಗತ್ಯವಿರುವವರಿಗೆ ಆಕ್ಸಿಮೀಟರ್, ರೇಷನ್ ಕಿಟ್ ಮತ್ತು ಪಿಪಿಇ ಕಿಟ್‍ಗಳನ್ನು ವಿತರಿಸುವ ಮೂಲಕ ಕೊರೋನಾ ನಿಯಂತ್ರಣ ಹೋರಾಟದಲ್ಲಿ ಬೆಂಬಲವನ್ನು ನೀಡುತ್ತಿದೆ.ಇದು ಇತರರಿಗೂ ಪ್ರೇರಣೆ ನೀಡುವಂತಾಗಲಿ ಎಂದು ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲೆ ಮಧುಲಿಕ ತಿಳಿಸಿದ್ದಾರೆ. ನೀರುಮಾರ್ಗ ಗ್ರಾಮ ಪಂಚಾಯತ್ ಅಧ್ಯಕ್ಷೆ ಧನವಂತಿ ಮತ್ತು ಸದಸ್ಯ ಶ್ರೀಧರ ಮತ್ತು ಪಂಚಾಯತ್ ಪಿಡಿಒ ಸುಧೀರ್ ಕೋವಿಡ್ ಸಂತ್ರಸ್ತರಿಗೆ ಮತ್ತು ಮುಂಚೂಣಿ ಕಾರ್ಯಕರ್ತರಿಗೆ ನೆರವು ನೀಡಲು ಮುಂದೆ ಬಂದ ಪ್ರೆಸಿಡೆನ್ಸಿ ಶಿಕ್ಷಣ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದರು.

    ಸಮಾರಂಭದಲ್ಲಿ ಬೊಂಡಂತಿಲ ಗ್ರಾಮದ ಕೊರೋನಾ ಕಾರ್ಯಪಡೆಯ ಸದಸ್ಯ ಅಬ್ದುಲ್ ಹಮೀದ್, ನೀರುಮಾರ್ಗ ಗ್ರಾಮ ಪಂಚಾಯತ್ ಕೋವಿಡ್ 19 ಟಾಸ್ಕ್ ಫೋರ್ಸ್ ನ ಸದಸ್ಯ ಭಾಸ್ಕರ ಜೆ ಉಪಸ್ಥಿತರಿದ್ದರು. ರಮಾನಾಥ ಕಾರ್ಯಕ್ರಮ ನಿರೂಪಿಸಿದರು.

  • ಕ್ಷೇತ್ರದ ಪ್ರತಿ ಮನೆಗೆ ಫುಡ್ ಕಿಟ್ ವಿತರಿಸುತ್ತಿರೋ ಶಾಸಕ ಸತೀಶ್ ರೆಡ್ಡಿ

    ಕ್ಷೇತ್ರದ ಪ್ರತಿ ಮನೆಗೆ ಫುಡ್ ಕಿಟ್ ವಿತರಿಸುತ್ತಿರೋ ಶಾಸಕ ಸತೀಶ್ ರೆಡ್ಡಿ

    ಬೊಮ್ಮನಹಳ್ಳಿ(ಆನೇಕಲ್): ಕೊರೊನಾ ಸಂದರ್ಭದಲ್ಲಿ ಸಾಕಷ್ಟು ಜನ ಬಡ ಕಾರ್ಮಿಕರು ಒಂದು ಹೊತ್ತಿನ ಊಟಕ್ಕೂ ಪರದಾಟ ನಡೆಸುವಂತಾಗಿದೆ. ಇದನ್ನು ಅರಿತ ಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಸತೀಶ್ ರೆಡ್ಡಿ ಮನೆ ಮನೆಗೆ ತೆರಳಿ ಕ್ಷೇತ್ರದ ಜನರಿಗೆ ಆಹಾರ ಸಾಮಗ್ರಿಗಳ ಕಿಟ್ ಗಳನ್ನ ವಿತರಣೆ ಮಾಡಿದ್ದಾರೆ.

    ಇಂದು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ 65 ಸಾವಿರ ಬಡ ಕುಟುಂಬಗಳಿಗೆ ಆಹಾರ ಧಾನ್ಯ ಕಿಟ್ ವಿತರಿಸುವ ಕಾರ್ಯಕ್ಕೆ ಇಂದು ಹೊಂಗಸಂದ್ರದಲ್ಲಿ ಶಾಸಕ ಸತೀಶ್ ರೆಡ್ಡಿ ಚಾಲನೆ ನೀಡಿ ಆಹಾರ ಸಾಮಗ್ರಿಗಳ ಕಿಟ್ ಗಳನ್ನ ವಿತರಣೆ ಮಾಡಿದರು. ಬಳಿಕ ಮಾತನಾಡಿದ ಅವರು, ಕ್ಷೇತ್ರದ ವಾರ್ಡುಗಳಲ್ಲಿ ತಲಾ ಏಳು ಸಾವಿರ ಬಡ ಕುಟುಂಬಗಳನ್ನು ಗುರುತಿಸಲಾಗಿದೆ. ಇಂದಿನಿಂದ ಸಂಕಷ್ಟದಲ್ಲಿರುವ ಜನರ ಮನೆ ಬಾಗಿಲಿಗೆ ಆಹಾರ ಧಾನ್ಯ ಕಿಟ್ ತಲುಪಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ.

    ಕೊರೊನಾ ನಿಯಂತ್ರಣಕ್ಕೆ ಲಾಕ್‍ಡೌನ್ ಅನಿವಾರ್ಯವಾಗಿದ್ದು, ಇದರಿಂದ ಬಡವರ ಬದುಕು ಕಷ್ಟಕ್ಕೆ ಸಿಲುಕಿದ್ದು, ಶಾಸಕನಾಗಿ ಜನರ ನೆರವಿಗೆ ನಿಲ್ಲುವುದು ನನ್ನ ಕರ್ತವ್ಯ. ಕ್ಷೇತ್ರದ ಜನ ಯಾರೂ ಹಸಿವಿನಿಂದ ಬಳಲಬಾರದು ಎಂಬ ಉದ್ದೇಶದಿಂದ ಈ ಕಾರ್ಯಕ್ಕೆ ಮುಂದಾಗಿದ್ದೇನೆ. ಒಂದು ವೇಳೆ ಸರ್ಕಾರ ಲಾಕ್‍ಡೌನ್ ಮುಂದುವರಿಸಲು ತೀರ್ಮಾನಿಸಿದ್ದಲ್ಲಿ ಸರ್ಕಾರವೂ ಜನರ ನೆರವಿಗೆ ನಿಲ್ಲುವಂತೆ ಮನವಿ ಮಾಡುತ್ತೇನೆ ಎಂದು ತಿಳಿಸಿದರು.

    ಆಹಾರ ಸಾಮಗ್ರಿಗಳ ಕಿಟ್ ಪಡೆದ ಮಹಿಳೆ ರೇಣುಕಾ ಮಾತನಾಡಿ, ನಾನು ಗಾರ್ಮೆಂಟ್ಸ್ ಕಂಪನಿಯಲ್ಲಿ ಪೀಸ್ ವರ್ಕ್ ಕೆಲಸ ಮಾಡುತ್ತಿದ್ದೆ, ಲಾಕ್ ಡೌನ್ ನಿಂದಾಗಿ ಕೆಲಸವಿಲ್ಲದೇ ಊಟಕ್ಕೂ ತುಂಬಾ ತೊಂದರೆ ಆಗಿತ್ತು. ಕಿಟ್ ಕೊಡುತ್ತಿರುವುದರಿಂದ ಒಂದಷ್ಟು ದಿನ ದೂಡಬಹುದು ಎಂದು ತಿಳಿಸಿದರು.

  • ‘ವೈದ್ಯರ ನಡೆ, ಹಳ್ಳಿ ಕಡೆ’ ಮೊಬೈಲ್ ಕ್ಲಿನಿಕ್ ವಾಹನಕ್ಕೆ ಸುಧಾಕರ್ ಹಸಿರು ನಿಶಾನೆ

    ‘ವೈದ್ಯರ ನಡೆ, ಹಳ್ಳಿ ಕಡೆ’ ಮೊಬೈಲ್ ಕ್ಲಿನಿಕ್ ವಾಹನಕ್ಕೆ ಸುಧಾಕರ್ ಹಸಿರು ನಿಶಾನೆ

    ಚಿಕ್ಕಬಳ್ಳಾಪುರ: ಹಳ್ಳಿಯಲ್ಲಿರುವ ಕೊರೊನಾ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ‘ವೈದ್ಯರ ನಡೆ, ಹಳ್ಳಿಯ ಕಡೆ’ ಎಂಬ ಮೊಬೈಲ್ ಕ್ಲಿನಿಕ್ ವಾಹನಕ್ಕೆ ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಕೆ.ಸುಧಾಕರ್ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.

    ಜಿಲ್ಲೆಯ ಗೌರಿಬಿದನೂರು ತಾಲೂಕಿನ ಮಂಚೇನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಾ.ಕೆ ಸುಧಾಕರ್, ಈ ವಿಶೇಷ ವಾಹನದಲ್ಲಿ ವೈದ್ಯರು ಹಾಗೂ ಸಹಾಯಕ ಸಿಬ್ಬಂದಿ ತಂಡ ತಮ್ಮ ವ್ಯಾಪ್ತಿಯ ಗ್ರಾಮಗಳಿಗೆ ಭೇಟಿ ಕೊಟ್ಟು ಅಲ್ಲಿನ ಸಾರ್ವಜನಿಕರಿಗೆ ರ್ಯಾಪಿಡ್ ಆಂಟಿಜನ್ ಕೊರೊನಾ ಪರೀಕ್ಷೆ ಮಾಡಲಿದ್ದಾರೆ. ಸೋಂಕು ದೃಢಪಟ್ಟವರಿಗೆ ಸೂಕ್ತ ಚಿಕಿತ್ಸೆ ನೀಡಿ ಅಗತ್ಯವಿರುವರಿಗೆ ಆರೋಗ್ಯ ಕಿಟ್ ಗಳನ್ನು ಸ್ಥಳದಲ್ಲಿಯೇ ವಿತರಿಸುವ ವ್ಯವಸ್ಥೆಯೂ ಸಹ ಇರಲಿದೆ ಎಂದರು. ಇದನ್ನೂ ಓದಿ:ಉಚಿತ ಊಟ ವಿತರಿಸುತ್ತಿರೋ ವೈದ್ಯ ದಂಪತಿ

    ವ್ಯಾಪಕವಾಗಿ ಸೋಂಕು ಹರಡುತ್ತಿರುವುದರಿಂದಾಗಿ ಹಳ್ಳಿಗಳಲ್ಲಿ ಪರೀಕ್ಷೆ ಮಾಡಿ ಸೂಕ್ತ ಮುನ್ನೆಚ್ಚರಿಕಾ ಕ್ರಮ ವಹಿಸುದು ಅನಿವಾರ್ಯವಾಗಿದೆ. ಇದರಿಂದ ಮತ್ತಷ್ಟು ಸೋಂಕು ಹರಡುವುದನ್ನು ಕೂಡಲೇ ತಪ್ಪಿಸಬಹುದು. ಕೋವಿಡ್ ಸೋಂಕಿನ ಸರಪಳಿಯನ್ನು ತುಂಡರಿಸಲು ಈ ಕಾರ್ಯಕ್ರಮ ಪರಿಣಾಮಕಾರಿಯಾಗಿ ಅನುಕೂಲವಾಗಲಿದೆ. ರೋಗ ಲಕ್ಷಣಗಳಿದ್ದು ರ್ಯಾಟ್ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದ ಪಕ್ಷದಲ್ಲಿ ಗಂಟಲು ಮತ್ತು ಮೂಗಿನ ದ್ರವ ಸಂಗ್ರಹಿಸಿ ಆರ್‍ಟಿಪಿಸಿಆರ್ ಪರೀಕ್ಷೆಗೆ ಒಳಪಡಿಸಲು ಸಹಾ ಕ್ರಮ ತೆಗೆದುಕೊಳ್ಳಲಾಗುತ್ತದೆ. ಈ ಸೌಲಭ್ಯವನ್ನು ಜನರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು. ಇದನ್ನೂ ಓದಿ:ಆರೋಗ್ಯ ಸಚಿವರ ಜೊತೆಯಲ್ಲಿ ಹೋಗಿ ಆಸ್ಪತ್ರೆಯಲ್ಲಿ ವೈದ್ಯರಿಗೆ ಬ್ಲಾಕ್‍ಮೇಲ್

    ಇದೇ ವೇಳೆ ರಾಜ್ಯದಲ್ಲಿ ಸದ್ಯ ಆಕ್ಸಿಜನ್ ಸಮಸ್ಯೆ ಏನೂ ಇಲ್ಲ. ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿರುವಂತೆ ಐಸಿಯು, ವೆಂಟಿಲೇಟರ್ ಹಾಗೂ ಆಕ್ಸಿಜನ್ ಮೇಲೆ ಬೇಡಿಕೆ ಕಡಿಮೆಯಾಗಿದೆ. ಎಲ್ಲೂ ಕೂಡ ಆಕ್ಸಿಜನ್ ಸಮಸ್ಯೆ ಕಂಡುಬರುತ್ತಿಲ್ಲ ಎಂದರು.

    ನಂತರ ತಾಲೂಕಿನ ಕುಲುಮೇನಹಳ್ಳಿ ಗ್ರಾಮದ ಮೊರಾರ್ಜಿ ವಸತಿ ಶಾಲೆಯಲ್ಲಿ ತೆರೆದಿರುವ ಕೋವಿಡ್ ಆರೈಕೆ ಕೇಂದ್ರವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ಆರ್.ಲತಾ, ಜಿಲ್ಲಾ ಪಂಚಾಯಿತಿ ಸಿಇಒ ಪಿ.ಶಿವಶಂಕರ್, ನಗರಸಭೆ ಅಧ್ಯಕ್ಷರಾದ ಆನಂದರೆಡ್ಡಿ, ಉಪವಿಭಾಗಾಧಿಕಾರಿಗಳಾದ ಎ.ಎನ್.ರಘುನಂದನ್, ತಹಶೀಲ್ದಾರ್ ಗಣಪತಿಶಾಸ್ತ್ರಿ, ತಾಲೂಕು ಪಂಚಾಯಿತಿ ಇಒ ಹರ್ಷವರ್ದನ್, ಪೌರಾಯುಕ್ತ ಲೋಹಿತ್ ಕುಮಾರ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

    ಜಿಲ್ಲೆಯಾದ್ಯಂತ 650 ಅಲೆಮಾರಿ-ಅರೆ ಅಲೆಮಾರಿ ಜನಾಂಗದವರಿಗೆ ಆಹಾರ ಕಿಟ್

    ಜಿಲ್ಲೆಯ ಆವಲಗುರ್ಕಿ ಗ್ರಾಮ ಪಂಚಾಯಿತಿಯ ಸೂಲಕುಂಟೆ ಗ್ರಾಮದಲ್ಲಿರುವ ಅಲೆಮಾರಿ ಹಾಗೂ ಅರೆ ಅಲೆಮಾರಿ ನಿವಾಸಿಗಳಿಗೆ ಜಿಲ್ಲಾಡಳಿತ ಮತ್ತು ಇಶಾ ಪ್ರತಿಷ್ಠಾನ ವತಿಯಿಂದ ಉಚಿತ ಆಹಾರ ಧಾನ್ಯಗಳ ಕಿಟ್‍ಗಳನ್ನು ಡಾ.ಕೆ.ಸುಧಾಕರ್ ವಿತರಿಸಿದರು.

    ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸುಧಾಕರ್, ಆಧ್ಯಾತ್ಮ ಚಿಂತಕರಾದ ಇಶಾ ಪ್ರತಿಷ್ಠಾನದ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ಅವರು ತಮ್ಮ ಅನುಯಾಯಿಗಳಾದ ರಾಘವೇಂದ್ರ ಶಾಸ್ತ್ರಿ ಹಾಗೂ ಪ್ರಭಾಕರ್ ಅವರ ಮೂಲಕ ಸರ್ಕಾರಿ ಆಸ್ಪತ್ರೆಗಳು ಸೇರಿದಂತೆ ರಾಜ್ಯಾದ್ಯಂತ ಹಲವು ಕಡೆ ಸೇವಾ ಕಾರ್ಯಗಳನ್ನು ಮಾಡುತ್ತಿದ್ದಾರೆ. ಅಲ್ಲದೇ ಆಸ್ಪತ್ರೆಗಳಿಗೆ ಸಾಂದ್ರಕಗಳು, ಆಕ್ಸಿಜನ್ ಸಿಲಿಂಡರ್‍ಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ವೈದ್ಯರು, ದಾದಿಯರು, ರೋಗಿಗಳಿಗೆ ಉಚಿತವಾಗಿ ಆಹಾರ ಪದಾರ್ಥಗಳು, ಮಾಸ್ಕ್ ಗಳನ್ನು, ಕೋವಿಡ್ ಸುರಕ್ಷತಾ ಸಾಮಗ್ರಿಗಳನ್ನು ಈಗಾಗಲೇ ನೀಡಿದ್ದಾರೆ ಎಂದು ಅವರ ಕಾರ್ಯವನ್ನು ಪ್ರಶಂಸಿದರು. ಇದನ್ನೂ ಓದಿ:ಕೊರೊನಾ ವಾರಿಯರ್ಸ್‍ಗೆ ಚಿಕನ್ ಬಿರಿಯಾನಿ ವಿತರಿಸಿದ ಚಿಕ್ಕಬಳ್ಳಾಪುರ ನಗರಸಭಾ ಸದಸ್ಯ

    ಜಿಲ್ಲೆಗೆ ಈಗಾಗಲೇ 100 ಆಕ್ಸಿಜನ್ ಸಿಲಿಂಡರ್ ಗಳನ್ನು ನೀಡಿದ್ದು, ಇನ್ನೂ 100 ಸಿಲಿಂಡರ್ ಗಳನ್ನು ನೀಡಲು ಒಪ್ಪಿಗೆ ನೀಡಿದ್ದಾರೆ. ಇದೀಗ ಜಿಲ್ಲೆಯಾದ್ಯಂತ 650 ಅಲೆಮಾರಿ-ಅರೆ ಅಲೆಮಾರಿ ಜನಾಂಗದವರು, ಅಶಕ್ತರು, ಬಲಹೀನ ವರ್ಗದವರಿಗೆ ಆಹಾರ ಸಾಮಾಗ್ರಿಗಳು, ರೋಗಿಗಳಿಗೆ ಹಾಲು, ಬಿಸ್ಕೇಟ್, ಔಷಧಿಗಳನ್ನು ನೀಡುತ್ತಿದ್ದಾರೆ. ಇವತ್ತಿನ ಕಷ್ಟಕಾಲದಲ್ಲಿ ಇದು ಅತ್ಯಂತ ಪುಣ್ಯದ ಕೆಲಸವಾಗಿದೆ ಎಂದು ಕೃತಜ್ಞತೆ ಸಲ್ಲಿಸಿದರು.

  • ಬೆಂಗಳೂರಿನಲ್ಲಿ ಪ್ರತಿ ನಿತ್ಯ 5 ಸಾವಿರ ಜನರಿಗೆ ಆಹಾರ ವಿತರಿಸುತ್ತಿರುವ ಸೋನು ಸೂದ್

    ಬೆಂಗಳೂರಿನಲ್ಲಿ ಪ್ರತಿ ನಿತ್ಯ 5 ಸಾವಿರ ಜನರಿಗೆ ಆಹಾರ ವಿತರಿಸುತ್ತಿರುವ ಸೋನು ಸೂದ್

    ಬೆಂಗಳೂರು: ಕೊರೊನಾ ಎರಡನೇ ಅಲೆಯಿಂದಾಗಿ ಸಂಕಷ್ಟದಲ್ಲಿರುವವರಿಗೆ ಬಾಲಿವುಡ್ ನಟ ಸೂದ್‍ರವರು ಅನೇಕ ಸಹಾಯಗಳನ್ನು ದೇಶಾದ್ಯಂತ ಜನರಿಗೆ ಮಾಡುತ್ತಿದ್ದಾರೆ. ಇದೀಗ ಬೆಂಗಳೂರಿನಲ್ಲಿ ಪ್ರತಿನಿತ್ಯ 5,000 ಜನರಿಗೆ ತಮ್ಮ ಫೌಂಡೇಷನ್ ವತಿಯಿಂದ ಆಹಾರ ವಿತರಿಸುತ್ತಿದ್ದಾರೆ.

    ಇತ್ತೀಚೆಗಷ್ಟೇ ಬೆಂಗಳೂರಿನ ಆಸ್ಪತ್ರೆಯೊಂದಕ್ಕೆ ಆಕ್ಸಿಜನ್, ವೆಂಟಿಲೇಟರ್‌ಗಳನ್ನು ಉಚಿತವಾಗಿ ಒದಗಿಸಿದ್ದ ಸೋನು ಸೂದ್ ಇದೀಗ ಜನರ ಹಸಿವನ್ನು ನೀಗಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.

    ಸೂದ್ ಚಾರಿಟಿ ಫೌಂಡೇಷನ್‍ನಿಂದ ಫುಡ್ ಫ್ರಮ್ ಸೂದ್ ಎಂಬ ಹೆಸರಿನಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಈ ಕಾರ್ಯಕ್ಕೆ ಬೀಜಿಂಗ್ ಬೈಟ್ಸ್ ರೆಸ್ಟೊರೆಂಟ್ ಮಾಲೀಕ ಇಬ್ರಾಹಿಂ ಹಾಗೂ ಕರ್ನಾಟಕದ ರಾಜ್ಯ ರೈಲ್ವೇ ಪೊಲೀಸರು ಕೂಡ ಕೈ ಜೋಡಿಸಿದ್ದಾರೆ. ಈ ಮೂಲಕ ಬೆಂಗಳೂರಿನಲ್ಲಿ ಪ್ರತಿ ದಿನ 5,000ಕ್ಕೂ ಅಧಿಕ ಮಂದಿಗೆ ಆಹಾರ ವಿತರಣೆ ಮಾಡುತ್ತಿದ್ದಾರೆ.

    ಸೋನು ಸೂದ್‍ರವರು ಮಾಡುತ್ತಿರುವ ಮಾನವೀಯ ಕಾರ್ಯಗಳಿಗೆ ಮೆಚ್ಚಿ ಅಭಿಮಾನಿಗಳು ಅವರ ಫೋಟೋಗೆ ಹಾಲಿನ ಅಭಿಷೇಕ ಮಾಡಿದ್ದರು. ಇದಕ್ಕೆ ದಯಮಾಡಿ ಎಲ್ಲರೂ ಹಾಲನ್ನು ಉಳಿಸಿ, ಅಗತ್ಯ ಇರುವವರಿಗೆ ನೀಡಿ. ಯಾರೂ ನನ್ನ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಬೇಡಿ ಎಂದು ಮನವಿ ಮಾಡುವ ಮೂಲಕ ಟ್ವೀಟ್ ಮಾಡಿದ್ದಾರೆ.

  • ಕಷ್ಟದಲ್ಲಿದ್ದವರ ಕಣ್ಣೀರು ಒರೆಸಲು ಮುಂದಾದ ನಟಿ ಹರ್ಷಿಕಾ ಪೂಣಚ್ಚ, ಭುವನ್ ಪೊನ್ನಣ್ಣ

    ಕಷ್ಟದಲ್ಲಿದ್ದವರ ಕಣ್ಣೀರು ಒರೆಸಲು ಮುಂದಾದ ನಟಿ ಹರ್ಷಿಕಾ ಪೂಣಚ್ಚ, ಭುವನ್ ಪೊನ್ನಣ್ಣ

    ಮಡಿಕೇರಿ: ಕೊರೊನಾ ಎರಡನೇ ಅಲೆಯಿಂದ ಹಲವಾರು ಮಂದಿ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಈ ಮಧ್ಯೆ ಸ್ಯಾಂಡಲ್‍ವುಡ್ ಕಲಾವಿದರಾದ ನಟ ಭುವನ್ ಪೊನ್ನಣ್ಣ ಹಾಗೂ ನಟಿ ಹರ್ಷಿಕಾ ಪೂಣಚ್ಚ ಕೊಡಗಿನ ಜನರಿಗೆ ಸಹಾಯ ಮಾಡಿದ್ದಾರೆ.

    ಕೊರೊನಾ ಕಾಲದಲ್ಲಿ ಕೆಲವರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ ಮತ್ತೊಂದೆಡೆ ಆಕ್ಸಿಜನ್, ಬೆಡ್ ಇಲ್ಲದೆ ಅನೇಕರು ನಿಧನರಾಗಿದ್ದಾರೆ. ಇಂತಹವರಿಗೆ ಕೊರೊನಾ ವಿರುದ್ಧ ಹೋರಾಡಲು ಸ್ಯಾಂಡಲ್‍ವುಡ್‍ನ ಕೆಲ ಸೆಲಿಬ್ರೆಟಿಗಳು ತಮ್ಮ ಕೈಲಾದ ಸೇವೆ ಮಾಡುತ್ತಿದ್ದಾರೆ. ಕಳೆದ ವರ್ಷ ಚಂದನವನದ ಹಲವರು ಉದ್ಯೋಗವಿಲ್ಲದವರಿಗೆ ದಿನಸಿ ಕಿಟ್ ನೀಡುವುದು ಹಾಗೂ ಇತರೆ ನೆರವು ನೀಡುವಲ್ಲಿ ಮುಂಚೂಣಿಯಲ್ಲಿದ್ದರು.

    ಹಾಗೆಯೇ ಈ ಬಾರಿ ಕೊಡಗಿನ ನಟ ಭುವನ್ ಪೊನ್ನಣ್ಣ ಹಾಗೂ ನಟಿ ಹರ್ಷಿಕಾ ಪೂಣಚ್ಚ ಕೊರೊನಾ ವಾರಿಯರ್‌ಗಳಂತೆ ಕೆಲಸ ಮಾಡುತ್ತಿದ್ದಾರೆ. ಭುವನ್ ಪೊನ್ನಣ್ಣ ಮತ್ತು ಹರ್ಷಿಕಾ ಪೂಣಚ್ಚ ‘ಭುವನಂ ಕೋವಿಡ್ ಹೆಲ್ಪ್ 24/7’ ಎಂಬ ಟ್ರಸ್ಟ್ ಆರಂಭಿಸಿ ಸೋಂಕಿತರಿಗೆ ಸಹಾಯ ಮಾಡುವ ಮೂಲಕ ಇಬ್ಬರು ಕೊಡಗಿನ ಸೇವೆಗೆ ಮುಂದಾಗಿದ್ದಾರೆ.

    ಲಾಕ್ ಡೌನ್ ಸಂದರ್ಭದಲ್ಲಿ ಭಾಂದವ ಫೌಂಡೇಷನ್ ಹೆಸರಿನ ಮೂಲಕ ಕೊಡಗಿನ ಜನರ ನೆರವಿಗೆ ನಿಂತಿದ್ದು, ಬಡವರು, ನಿರ್ಗತಿಕರಿಗೆ ಹದಿನೈದು ದಿನಗಳಿಗೆ ಆಗುವಷ್ಟು ಆಹಾರ ಪದಾರ್ಥಗಳ ಕಿಟ್‍ನನ್ನು ವಿತರಣೆ ಮಾಡುತ್ತಿದ್ದಾರೆ. ಎರಡು ವಾರಗಳ ಕಾಲ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸಲಿರುವ ‘ಭುವನಂ ಫೌಂಡೇಷನ್’ಗೆ ಮಡಿಕೇರಿಯ ಮ್ಯಾನ್ಸ್ ಕಾಂಪೌಂಡ್ ನಲ್ಲಿ ಚಾಲನೆ ನೀಡಲಾಯಿತು. ಸ್ಥಳೀಯರಿಗೆ ಮತ್ತು ಹೋಂ ಗಾರ್ಡ್‍ಗಳಿಗೆ ಆಹಾರ ಪದಾರ್ಥಗಳ ಕಿಟ್ ಮತ್ತು ಮಾಸ್ಕ್ ಅನ್ನು ನಟ ಭುವನ್ ಮತ್ತು ಹರ್ಷಿಕಾ ಪೂಣಚ್ಚ ವಿತರಣೆ ಮಾಡಿದ್ದಾರೆ.

    ಈ ಸಂದರ್ಭ ನಗರ ಸಭೆ ಆಯುಕ್ತ ರಾಮದಾಸ್ ಜೊತೆಗಿದ್ದು, ನಗರದಲ್ಲಿ ಆಹಾರ ಪದಾರ್ಥಗಳ ಕಿಟ್ ಬೇಕಾಗಿರುವ ಏರಿಯಾಗಳಿಗೆ ಕರೆದೊಯ್ದು ಕುದ್ದು ನಿಂತು ಆಹಾರ ಪದಾರ್ಥಗಳನ್ನು ವಿತರಣೆ ಮಾಡಿಸಿದರು. ಈ ಸಂದರ್ಭ ಮಾತನಾಡಿದ ಭುವನ್ ಜಿಲ್ಲೆಯು ಗುಡ್ಡಗಾಡು ಪ್ರದೇಶವಾಗಿರುವುದರಿಂದ ಔಷಧಿ ಕೊಳ್ಳಲು 15, 20 ಕಿಲೋಮೀಟರ್ ಹೋಗಬೇಕಾಗಿದೆ. ಇನ್ನು ಕೋವಿಡ್ ಎಂದ ಕೂಡಲೇ ಯಾರೂ ಆಟೋದವರು ಬರುವುದಿಲ್ಲ. ಹೀಗಾಗಿಯೇ ನಮ್ಮದೇ ತಂಡ ಇಂತಹವರ ನೆರವಿಗೆ ಧಾವಿಸಲಿದೆ. ಅಲ್ಲದೆ ಆಹಾರ ಪದಾರ್ಥಗಳು ಬೇಕಾದಲ್ಲಿ ಒದಗಿಸಲಿದೆ ಎಂದರು.

    ನಟಿ ಹರ್ಷಿಕಾ ಪೂಣಚ್ಚ, ಕೊಡಗಿನಲ್ಲಿ ನೆರೆ ಆಗುತ್ತಿದ್ದಂತೆ ಫೀಡ್ ಕರ್ನಾಟಕ ಆರಂಭಿಸಿದ್ದೇವೆ. ಕೊಡಗಿನ ಜನರಿಗೆ ಔಷಧಿ ಅಗತ್ಯ ಇರುವುದರಿಂದ ಸೇವೆಯನ್ನು ಒದಗಿಸಲಿದ್ದೇವೆ ಎಂದು ಹೇಳಿದ್ದಾರೆ.

  • ಅಜೀಂ ಪ್ರೇಮ್ ಜೀ ಫೌಂಡೇಶನ್‍ನಿಂದ 6 ಸಾವಿರ ಬಡ ಕುಟುಂಬಕ್ಕೆ ಫುಡ್ ಕಿಟ್

    ಅಜೀಂ ಪ್ರೇಮ್ ಜೀ ಫೌಂಡೇಶನ್‍ನಿಂದ 6 ಸಾವಿರ ಬಡ ಕುಟುಂಬಕ್ಕೆ ಫುಡ್ ಕಿಟ್

    – ಕಿಟ್‍ಗಳ ವಿತರಣೆಗೆ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ಚಾಲನೆ
    – ವಿಜಯಪುರದಲ್ಲಿ ಸಚಿವೆ ಶಶಿಕಲಾ ಜೊಲ್ಲೆ ಚಾಲನೆ

    ಯಾದಗಿರಿ/ವಿಜಯಪುರ: ಯಾದಗಿರಿ ಜಿಲ್ಲೆಯಲ್ಲಿ ಸುಮಾರು 6 ಸಾವಿರ ಬಡಕುಟುಂಬಗಳಿಗೆ ಆಹಾರ ಧಾನ್ಯದ ಕಿಟ್ ಗಳನ್ನು ಅಜೀಂ ಪ್ರೇಮ್ ಜೀ ಫೌಂಡೇಶನ್ ವತಿಯಿಂದ ವಿತರಿಸಲಾಗುತ್ತಿದ್ದು, ಈ ವಿತರಣೆಗೆ ಜಿಲ್ಲಾಧಿಕಾರಿ ಡಾ.ರಾಗಪ್ರಿಯ ಚಾಲನೆ ನೀಡಿದರು.

    ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಫಲಾನುಭವಿಯೊಬ್ಬರಿಗೆ ಫುಡ್‍ಕಿಟ್ ವಿತರಿಸುವ ಮೂಲಕ ಅವರು ಜಿಲ್ಲಾಧಿಕಾರಿಗಳು ಫೌಂಡೇಶನ್‍ನ ಮಹತ್ವದ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕೊರೊನಾ 2ನೇ ಅಲೆಯ ವಿಪತ್ತಿನ ಸಮಯದಲ್ಲಿ ತೊಂದರೆಗೆ ಒಳಗಾಗಿದ್ದ ಕುಟುಂಬಗಳಿಗೆ ಆಹಾರಧಾನ್ಯಗಳ ಕಿಟ್ ವಿತರಿಸುವ ಮೂಲಕ ಅಜೀಂ ಪ್ರೇಮ್ ಜೀ ಫೌಂಡೇಶನ್ ನೆರವಿನ ಹಸ್ತ ಚಾಚಿದೆ.

    ಯಾದಗಿರಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಬಡಕುಟುಂಬಗಳು ಅತೀವ ಸಂಕಷ್ಟಕ್ಕೆ ಒಳಗಾಗಿವೆ, ಇಂತಹ ಕುಟುಂಬಗಳನ್ನು ಅಜೀಂ ಪ್ರೇಮ್ ಜೀ ಫೌಂಡೇಶನ್ ಸರ್ಕಾರಿ ಶಾಲಾ ಶಿಕ್ಷಕರ ಸಹಾಯದಿಂದ ಗುರುತಿಸಿ ಅವರ ಮನೆ ಬಾಗಿಲಿಗೆ ಆಹಾರ ಧಾನ್ಯಗಳ ಕಿಟ್ ವಿತರಿಸುವ ಮೂಲಕ ಮಾನವೀಯತೆ ಮೆರೆಯುತ್ತಿದೆ.

    ವಿಜಯಪುರದಲ್ಲಿಯೂ ಆಹಾರ ಕಿಟ್ ವಿತರಣೆ:
    ವಿಜಯಪುರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಅಜೀಂ ಪ್ರೇಮ್ ಜೀ ಫೌಂಡೇಶನ್ ನೀಡಿದ ಆಹಾರ ಕಿಟ್ ವಿತರಣೆ ಮಾಡಿದರು. ಮಹಿಳೆಯರು, ಲಿಂಗತ್ವ ಅಲ್ಪಸಂಖ್ಯಾತರು ಆಹಾರ ಕಿಟ್ ವಿತರಣೆ ಮಾಡಿದರು. ನಗರದ ಪ್ರವಾಸಿ ಮಂದಿರದಲ್ಲಿ ಪುಡ್ ಕಿಟ್ ವಿತರಿಸಿದ ಸಚಿವೆ ಶಶಿಕಲಾ ಜೊಲ್ಲೆ ಒಟ್ಟು 1,752 ಜನರಿಗೆ ಆಹಾರ ಕಿಟ್ ವಿತರಿಸಿದರು.

    10 ಕೆ.ಜಿ ಅಕ್ಕಿ, 5 ಗೋಧಿ ಹಿಟ್ಟು, 1 ಕೆಜಿ ಸಕ್ಕರೆ, ಟೀ ಪುಡಿ, ಖಾರದ ಪುಡಿ, ಗರಂ ಮಸಾಲಾ, ಎಣ್ಣೆ, ಬೇಳೆ ಸೇರಿದಂತೆ 1 ಸಾವಿರ ಬೆಲೆಯ ಆಹಾರ ಕಿಟ್ ಇದಾಗಿದೆ.

  • ಸಿನಿಮಾ ಪೋಷಕ ಕಲಾವಿದರಿಗೆ ಸಬ್ಸಿಡಿ ದರದಲ್ಲಿ ಮನೆ ಹಂಚಿಕೆ: ಡಿಸಿಎಂ

    ಸಿನಿಮಾ ಪೋಷಕ ಕಲಾವಿದರಿಗೆ ಸಬ್ಸಿಡಿ ದರದಲ್ಲಿ ಮನೆ ಹಂಚಿಕೆ: ಡಿಸಿಎಂ

    – ಆದ್ಯತಾ ಗುಂಪಿನಲ್ಲಿ ಕಲಾವಿದರಿಗೂ ಲಸಿಕೆ
    – ವೈಯಕ್ತಿಕವಾಗಿ ಸಹ ಧನ ಸಹಾಯ

    ಬೆಂಗಳೂರು: ಆರ್ಥಿಕವಾಗಿ ಸಂಕಷ್ಟದಲ್ಲಿರುವ ಚಿತ್ರರಂಗದ ಪೋಷಕ ಕಲಾವಿದರಿಗೆ ಪ್ರಧಾನಮಂತ್ರಿ ಮತ್ತು ಮುಖ್ಯಮಂತ್ರಿ ಗೃಹ ನಿರ್ಮಾಣ ಯೋಜನೆಯಡಿ ಸಬ್ಸಿಡಿ ದರದಲ್ಲಿ ಮನೆ ನೀಡಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಹೇಳಿದರು.

    ಚಿತ್ರರಂಗದ ಪೋಷಕ ಕಲಾವಿದರಿಗೆ ಭರತ್‍ಗೌಡ ಚಾರಿಟಬಲ್ ಟ್ರಸ್ಟ್ ವತಿಯಿಂದ ಫುಡ್ ಕಿಟ್ ವಿತರಿಸಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮನೆ ಅಗತ್ಯ ಇರುವ ಕಲಾವಿದರು ಅರ್ಜಿ ಹಾಕಬಹುದು. ತಕ್ಷಣವೇ ಅಂಥ ಕಲಾವಿದರಿಗೆ ಕಡಿಮೆ ದರದಲ್ಲಿ ಮನೆ ಹಂಚಿಕೆ ಮಾಡಲಾಗುವುದು ಎಂದರು.

    ಇತ್ತೀಚೆಗೆ ಪ್ರಕಟಿಸಲಾದ ಪ್ಯಾಕೇಜ್‍ನಲ್ಲಿ ಕಲಾವಿದರಿಗೆ 3,000 ಕೊಡುವ ಬಗ್ಗೆ ಘೋಷಣೆ ಮಾಡಲಾಗಿದೆ. ಅದರಲ್ಲಿ ಚಿತ್ರರಂಗದ ಪೋಷಕ ಕಲಾವಿದರೂ ಸೇರಿದ್ದಾರಾ ಇಲ್ಲವಾ ಎಂಬ ಬಗ್ಗೆ ಗೊಂದಲವಿದೆ. ಚಿತ್ರರಂಗದ ಕಲಾವಿದರಿಗೂ ಆ ಹಣ ಸಿಗುವ ಬಗ್ಗೆ ಕನ್ನಡ ಮತ್ತು ಸಂಸ್ಕೃತ ಇಲಾಖೆ ಕ್ರಮ ವಹಿಸುವ ಕುರಿತು ಸಂಬಂಧಪಟ್ಟವರ ಜೊತೆ ಮಾತನಾಡುತ್ತೇನೆ ಎಂದು ಹೇಳಿದರು.

    ಪೋಷಕ ಕಲಾವಿದರನ್ನು ಆದ್ಯತೆಯ ಗುಂಪು ಎಂದು ಪರಿಗಣಿಸಿ ಅವರಿಗೂ ವ್ಯಾಕ್ಸಿನೇಷನ್ ನೀಡಲಾಗುವುದು. ಈ ಬಗ್ಗೆ ಕಲಾವಿದರ ಪಟ್ಟಿ ನೀಡುವಂತೆ ಕೇಳಲಾಗಿದೆ. ಅಲ್ಲದೆ ಈ ಫುಡ್ ಕಿಟ್ ಪಡೆಯುತ್ತಿರುವ ಎಲ್ಲ ಕಲಾವಿದರಿಗೆ ವೈಯಕ್ತಿಕವಾಗಿ ತಲಾ 1,000 ರೂ. ಚೆಕ್ ನೀಡುವುದಾಗಿ ಇದೇ ವೇಳೆ ಡಿಸಿಎಂ ಹೇಳಿದರು.

    ಸಾವಿನ ಲೆಕ್ಕ ಮುಚ್ಚಿಡುತ್ತಿಲ್ಲ
    ಸರ್ಕಾರ ಕೋವಿಡ್ ಸಾವಿನ ಲೆಕ್ಕವನ್ನು ಮುಚ್ಚಿಡುತ್ತಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾಡಿರುವ ಅರೋಪ ಅಸತ್ಯದಿಂದ ಕೂಡಿದೆ. ಪ್ರತಿ ಸೋಂಕಿತನ ಬಗ್ಗೆಯೂ ಮಾಹಿತಿ ಇದೆ. ಯಾರಾದರೂ ಸಾವನ್ನಪ್ಪಿದರೆ ಆ ಮಾಹಿತಿಯೂ ವಿವಿಧ ಹಂತಗಳಲ್ಲಿ ದಾಖಲಾಗುತ್ತಿದೆ. ಇದೆಲ್ಲವನ್ನು ಬಹಳ ವ್ಯವಸ್ಥಿತವಾಗಿ ಮಾಡಲಾಗುತ್ತಿದ್ದು, ಸಿದ್ದರಾಮಯ್ಯ ಅವರು ಮಾಡಿರುವ ಆರೋಪದಲ್ಲಿ ಹುರಳಿಲ್ಲ. ಜನರಲ್ಲಿ ಗೊಂದಲ ಉಂಟು ಮಾಡುವುದು ಬೇಡ ಎಂದು ಡಾ.ಅಶ್ವಥ್ ನಾರಾಯಣ್ ತಿಳಿಸಿದರು.

    ರಾಜ್ಯದಲ್ಲಿ ಮಾತ್ರವಲ್ಲ ದೇಶದಲ್ಲೂ ಲಸಿಕೆ ಅಭಾವ ಇದೆ ಎನ್ನುವುದು ನಿಜ. ಆದರೆ ಸರ್ಕಾರ ಉತ್ಪಾದಕರಿಂದ ಲಸಿಕೆ ಪಡೆದು ಜನರಿಗೆ ನೀಡಲು ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದೆ. ಹಂತ ಹಂತವಾಗಿ ಲಭ್ಯವಾಗುತ್ತಿರುವ ಲಸಿಕೆಯನ್ನು ಆಗಿಂದಾಗ್ಗೆ ಕೊಡಲಾಗುತ್ತಿದೆ. ಆದ್ಯತೆಯ ಮೇರೆಗೆ ಯಾರಿಗೆ ಕೋಡಬೇಕೋ ಅವರಿಗೆ ಕೊಡಲಾಗುತ್ತಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

    ಹಿರಿಯ ಕಲಾವಿದರಾದ ಹೊನ್ನವಳ್ಳಿ ಕೃಷ್ಣ, ಮೀಸೆ ಅಂಜನಪ್ಪ, ಉಮೇಶ್ ಹೆಗಡೆ, ಡಿಂಗ್ರಿ ನಾಗರಾಜ್, ಸಿತಾರಾ ಹಾಗೂ ಟ್ರಸ್ಟ್‍ನ ಭರತ್ ಗೌಡ, ನಟರಾದ ಗಣೇಶ್ ರಾವ್ ಕೆಸರ್ಕಾರ್, ಕೆಂಪೇಗೌಡ ಫುಡ್ ಕಿಟ್ ವ್ಯವಸ್ಥೆ ಮಾಡಿದ್ದರು. ಡಿಸಿಎಂ ಅವರು ಸಾಂಕೇತಿಕವಾಗಿ 30 ಕಲಾವಿದರಿಗೆ ಕಿಟ್ ವಿತರಣೆ ಮಾಡಿದ್ದು, ಉಳಿದ 200 ಕಿಟ್‍ಗಳನ್ನು ಕಲಾವಿದರ ಮನೆಗೆ ತಲುಪಿಸಲಾಗುವುದು ಎಂದು ಭರತ್ ಗೌಡ ಮಾಹಿತಿ ನೀಡಿದರು.

  • ಬಿಗ್‍ಬಾಸ್ ಮನೆಯಲ್ಲಿ ಕೊಟ್ಟ ಮಾತಿನಂತೆ ಫುಡ್ ಕಿಟ್ ವಿತರಿಸಿದ ನಟಿ ಶುಭಾ

    ಬಿಗ್‍ಬಾಸ್ ಮನೆಯಲ್ಲಿ ಕೊಟ್ಟ ಮಾತಿನಂತೆ ಫುಡ್ ಕಿಟ್ ವಿತರಿಸಿದ ನಟಿ ಶುಭಾ

    ಬೆಂಗಳೂರು: ರಾಜ್ಯದಲ್ಲಿ ಮಹಾಮಾರಿ ಕೊರೊನಾ ವೈರಸ್ ತಾಂಡವವಾಡುತ್ತಿದ್ದು, ಬೆಡ್, ಆಕ್ಸಿಜನ್ ಸಿಗದೆ ಜನ ಸಾವನ್ನಪ್ಪುತ್ತಿದ್ದಾರೆ. ಈ ಎಲ್ಲಾ ವಿಚಾರಗಳನ್ನು ಬಿಗ್‍ಬಾಸ್ ಮನೆಯಲ್ಲಿ ಪ್ರಸಾರ ಮಾಡಲಾಗಿತ್ತು. ಈ ವೇಳೆ ನಟಿ ಶುಭಾ ಪೂಂಜಾ ಅವರು ಒಂದು ಮಾತು ಕೊಟ್ಟಿದ್ದರು.

    ಹೌದು. ಕೊನೆಯ ದಿನ ಬಿಗ್ ಬಾಸ್ ಮನೆಯಲ್ಲಿ ಕೊರೊನಾದಿಂದ ರಾಜ್ಯ ಎದುರಿಸುತ್ತಿರುವ ಭೀಕರತೆಯ ಮಾಹಿತಿ ನೀಡಲಾಗಿತ್ತು. ಅಲ್ಲದೆ ರಾಜ್ಯದಲ್ಲಿ ಲಾಕ್ ಡೌನ್ ಹೇರಲಾಗಿರುವ ಮುಖ್ಯಮಂತ್ರಿಗಳ ಬೈಟ್ ಕೂಡ ಪ್ರಸಾರ ಮಾಡಲಾಗಿತ್ತು. ಈ ವಿಚಾರ ತಿಳಿಯುತ್ತಿದ್ದಂತೆಯೇ ಸ್ಪರ್ಧಿಗಳು ಆತಂಕಕ್ಕೀಡಾಗಿ ಕಣ್ಣೀರು ಹಾಕಿದ್ದರು.

    ಇಷ್ಟು ದಿನ ನಮಗೆ ರಾಜ್ಯದಲ್ಲಿ ಏನು ಆಗುತ್ತಿದೆ ಅಂತಾನೇ ಗೊತ್ತಿರಲಿಲ್ಲ. ಆದರೆ ಇದೀಗ ನಮಗೆ ಪರಿಸ್ಥಿತಿ ಅರ್ಥವಾಗಿದ್ದು, ಕೊರೊನಾ ವಾರಿಯರ್ಸ್ ಆಗಿ ಕೆಲಸ ಮಾಡಲು ನಿರ್ಧರಿಸಿರುವುದಾಗಿ ಶುಭಾ ಪೂಂಜಾ ಮಾತು ಕೊಟಿದ್ದರು.

    ಇದೀಗ ಕೊಟ್ಟ ಮಾತಿನಿಂತೆ ಶುಭಾ ನಡೆದುಕೊಂಡಿದ್ದಾರೆ. ರಸ್ತೆಗಿಳಿದು ಕೊರೊನಾದಿಂದ ಸಂಕಷ್ಟಕ್ಕೀಡಾದವರಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡಲು ಮುಂದಡಿಯಿಟ್ಟಿದ್ದಾರೆ. ಬಡವರು ಹಾಗೂ ಕೂಲಿ ಕಾರ್ಮಿಕರಿಗೆ ಆಹಾರ ಕಿಟ್ ವಿತರಿಸಿದ್ದಾರೆ. ಅಲ್ಲದೆ ಆಹಾರ ಕಿಟ್ ವಿತರಿಸುತ್ತಿರುವ ಕೆಲವೊಂದು ಫೋಟೋಗಳನ್ನು ಫೇಸ್ ಬುಕ್ ನಲ್ಲಿ ಶೇರ್ ಮಾಡಿಕೊಂಡು, ನನ್ನ ಚಿಕ್ಕ ಪ್ರಯತ್ನ ಮುಂದಿನ ದಿನದಲ್ಲಿ ಇನ್ನೂ ಒಂದಷ್ಟು ಜನಗಳಿಗೆ ತಲುಪುವ ಪ್ರಯತ್ನವನ್ನು ಮಾಡುತ್ತೇನೆ ಎಂದು ಬರೆದುಕೊಂಡಿದ್ದಾರೆ.

    ಒಟ್ಟಿನಲ್ಲಿ ಕೊರೊನಾದಿಂದ ಸಂಕಷ್ಟಕ್ಕೀಡಾದವರಿಗೆ ಈಗಾಗಲೇ ಹಲವಾರು ಮಂದಿ ಕಲಾವಿದರು ಸಹಾಯ ಹಸ್ತ ಚಾಚಿದ್ದಾರೆ. ಹಿರಿಯ ನಟಿ ಲೀಲಾವತಿ, ಪುತ್ರ ವಿನೋದ್, ನಟ ಉಪೇಂದ್ರ, ನಟಿಯರಾದ ರಾಗಿಣಿ, ಸಂಜನಾ ರಸ್ತೆಗಿಳಿದು ಬಡವರ ಬೆನ್ನಿಗೆ ನಿಂತಿದ್ದಾರೆ. ಇದೀಗ ಶುಭಾ ಪೂಂಜಾ ಕೂಡ ಬಿಗ್ ಬಾಸ್ ಮನೆಯಿಂದ ಹೊರ ಬಂದ ಬಳಿಕ ನೇರವಾಗಿ ರೇಷನ್ ಖರೀದಿಸಿ ಅದನ್ನು ಬಡವರಿಗೆ ಹಂಚುವ ಕೆಲಸ ಮಾಡಿದ್ದಾರೆ.